ಶಲ್ಯಪರ್ವ: ಸಾರಸ್ವತಪರ್ವ
Contents
Toggle೩೦
ದ್ವೈಪಾಯನ ಸರೋವರದ ಬಳಿ ಯುಧಿಷ್ಠಿರ-ಕೃಷ್ಣರ ಸಂವಾದ (೧-೧೪). ಸುಯೋಧನ-ಯುಧಿಷ್ಠಿರರ ಸಂವಾದ (೧೫-೬೮).
09030001 ಸಂಜಯ ಉವಾಚ
09030001a ತತಸ್ತೇಷ್ವಪಯಾತೇಷು ರಥೇಷು ತ್ರಿಷು ಪಾಂಡವಾಃ|
09030001c ತಂ ಹ್ರದಂ ಪ್ರತ್ಯಪದ್ಯಂತ ಯತ್ರ ದುರ್ಯೋಧನೋಽಭವತ್||
ಸಂಜಯನು ಹೇಳಿದನು: “ಆ ಮೂವರು ಮಹಾರಥರೂ ಹೊರಟುಹೋದನಂತರ ದುರ್ಯೋಧನನಿದ್ದ ಆ ಸರೋವರಕ್ಕೆ ಪಾಂಡವರು ತಲುಪಿದರು.
09030002a ಆಸಾದ್ಯ ಚ ಕುರುಶ್ರೇಷ್ಠ ತದಾ ದ್ವೈಪಾಯನಹ್ರದಂ|
09030002c ಸ್ತಂಭಿತಂ ಧಾರ್ತರಾಷ್ಟ್ರೇಣ ದೃಷ್ಟ್ವಾ ತಂ ಸಲಿಲಾಶಯಂ||
09030002e ವಾಸುದೇವಮಿದಂ ವಾಕ್ಯಮಬ್ರವೀತ್ಕುರುನಂದನಃ||
ಕುರುಶ್ರೇಷ್ಠ! ದ್ವೈಪಾಯನ ಸರೋವರವನ್ನು ತಲುಪಿ ಧಾರ್ತರಾಷ್ಟ್ರನು ಆ ಜಲಾರಾಶಿಯನ್ನು ಸ್ತಂಭನಗೊಳಿಸಿರುವುದನ್ನು ಕಂಡು ಕುರುನಂದನ ಯುಧಿಷ್ಠಿರನು ವಾಸುದೇವನಿಗೆ ಈ ಮಾತನ್ನಾಡಿದನು:
09030003a ಪಶ್ಯೇಮಾಂ ಧಾರ್ತರಾಷ್ಟ್ರೇಣ ಮಾಯಾಮಪ್ಸು ಪ್ರಯೋಜಿತಾಂ|
09030003c ವಿಷ್ಟಭ್ಯ ಸಲಿಲಂ ಶೇತೇ ನಾಸ್ಯ ಮಾನುಷತೋ ಭಯಂ||
“ಧಾರ್ತರಾಷ್ಟ್ರನು ನೀರಿನ ಮೇಲೆ ತನ್ನ ಮಾಯೆಯನ್ನು ಪ್ರಯೋಗಿಸಿದುದನ್ನು ನೋಡು! ನೀರನ್ನು ಗಟ್ಟಿಯಾಗಿಸಿ ಮನುಷ್ಯರ ಭಯವಿಲ್ಲದೇ ಇಲ್ಲಿ ಮಲಗಿದ್ದಾನೆ!
09030004a ದೈವೀಂ ಮಾಯಾಮಿಮಾಂ ಕೃತ್ವಾ ಸಲಿಲಾಂತರ್ಗತೋ ಹ್ಯಯಂ|
09030004c ನಿಕೃತ್ಯಾ ನಿಕೃತಿಪ್ರಜ್ಞೋ ನ ಮೇ ಜೀವನ್ವಿಮೋಕ್ಷ್ಯತೇ||
ದೈವೀ ಮಾಯೆಯನ್ನುಪಯೋಗಿಸಿ ನೀರಿನೊಳಗಿದ್ದಾನೆ. ಮೋಸಗಳನ್ನು ಚೆನ್ನಾಗಿ ತಿಳಿದುಕೊಂಡಿರುವ ಇವನು ಮೋಸವನ್ನು ಬಳಸಿದರೂ ನನ್ನಿಂದ ಜೀವಂತವಾಗಿ ಉಳಿಯುವುದಿಲ್ಲ!
09030005a ಯದ್ಯಸ್ಯ ಸಮರೇ ಸಾಹ್ಯಂ ಕುರುತೇ ವಜ್ರಭೃತ್ಸ್ವಯಂ|
09030005c ತಥಾಪ್ಯೇನಂ ಹತಂ ಯುದ್ಧೇ ಲೋಕೋ ದ್ರಕ್ಷ್ಯತಿ ಮಾಧವ||
ಮಾಧವ! ಒಂದುವೇಳೆ ಸಮರದಲ್ಲಿ ಸ್ವಯಂ ವಜ್ರಧಾರಿ ಇಂದ್ರನೇ ಇವನ ಸಹಾಯಕ್ಕೆ ಬಂದರೂ ಯುದ್ಧದಲ್ಲಿ ಇವನು ಹತನಾಗುವುದನ್ನು ಲೋಕವು ನೋಡುತ್ತದೆ!”
09030006 ಶ್ರೀವಾಸುದೇವ ಉವಾಚ
09030006a ಮಾಯಾವಿನ ಇಮಾಂ ಮಾಯಾಂ ಮಾಯಯಾ ಜಹಿ ಭಾರತ|
09030006c ಮಾಯಾವೀ ಮಾಯಯಾ ವಧ್ಯಃ ಸತ್ಯಮೇತದ್ಯುಧಿಷ್ಠಿರ||
ಶ್ರೀ ವಾಸುದೇವನು ಹೇಳಿದನು: “ಭಾರತ! ಮಾಯಾವಿಯಾದ ಇವನ ಮಾಯೆಯನ್ನು ಮಾಯೆಯಿಂದಲೇ ನಾಶಗೊಳಿಸು. ಯುಧಿಷ್ಠಿರ! ಮಾಯಾವಿಯನ್ನು ಮಾಯೆಯಿಂದಲೇ ವಧಿಸಬೇಕು. ಇದು ಸತ್ಯ!
09030007a ಕ್ರಿಯಾಭ್ಯುಪಾಯೈರ್ಬಹುಲೈರ್ಮಾಯಾಮಪ್ಸು ಪ್ರಯೋಜ್ಯ ಹ|
09030007c ಜಹಿ ತ್ವಂ ಭರತಶ್ರೇಷ್ಠ ಪಾಪಾತ್ಮಾನಂ ಸುಯೋಧನಂ||
ಭರತಶ್ರೇಷ್ಠ! ಉಪಾಯಗಳಿಂದ ಮತ್ತು ಕ್ರಿಯೆಗಳಿಂದ ಪಾಪಾತ್ಮ ಸುಯೋಧನನನ್ನು ಸಂಹರಿಸು! ಮಾಯೆಯನ್ನು ಪ್ರಯೋಗಿಸಿರುವ ನಿದರ್ಶನಗಳು ಅನೇಕವಿವೆ.
09030008a ಕ್ರಿಯಾಭ್ಯುಪಾಯೈರಿಂದ್ರೇಣ ನಿಹತಾ ದೈತ್ಯದಾನವಾಃ|
09030008c ಕ್ರಿಯಾಭ್ಯುಪಾಯೈರ್ಬಹುಭಿರ್ಬಲಿರ್ಬದ್ಧೋ ಮಹಾತ್ಮನಾ||
ಉಪಾಯಯುಕ್ತ ಕ್ರಿಯೆಗಳಿಂದಲೇ ಇಂದ್ರನು ದೈತ್ಯ-ದಾನವರನ್ನು ಸಂಹರಿಸಿದನು. ಅನೇಕ ಉಪಾಯಯುಕ್ತ ಕ್ರಿಯೆಗಳಿಂದಲೇ ಮಹಾತ್ಮ ವಾಮನನು ಬಲಿಯನ್ನು ಬಂಧಿಸಿದನು.
09030009a ಕ್ರಿಯಾಭ್ಯುಪಾಯೈಃ ಪೂರ್ವಂ ಹಿ ಹಿರಣ್ಯಾಕ್ಷೋ ಮಹಾಸುರಃ|
09030009c ಹಿರಣ್ಯಕಶಿಪುಶ್ಚೈವ ಕ್ರಿಯಯೈವ ನಿಷೂದಿತೌ||
09030009e ವೃತ್ರಶ್ಚ ನಿಹತೋ ರಾಜನ್ಕ್ರಿಯಯೈವ ನ ಸಂಶಯಃ||
ಉಪಾಯಯುಕ್ತ ಕ್ರಿಯೆಗಳಿಂದಲೇ ಹಿಂದೆ ಮಹಾಸುರ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುಗಳು ವಧಿಸಲ್ಪಟ್ಟರು. ರಾಜನ್! ಇಂತಹ ಕ್ರಿಯೆಗಳಿಂದಲೇ ವೃತ್ರನೂ ಹತನಾದನು ಎನ್ನುವುದರಲ್ಲಿ ಸಂಶಯವೇ ಇಲ್ಲ.
09030010a ತಥಾ ಪೌಲಸ್ತ್ಯತನಯೋ ರಾವಣೋ ನಾಮ ರಾಕ್ಷಸಃ|
09030010c ರಾಮೇಣ ನಿಹತೋ ರಾಜನ್ಸಾನುಬಂಧಃ ಸಹಾನುಗಃ||
09030010e ಕ್ರಿಯಯಾ ಯೋಗಮಾಸ್ಥಾಯ ತಥಾ ತ್ವಮಪಿ ವಿಕ್ರಮ||
ರಾಜನ್! ಪೌಲಸ್ತ್ಯ ತನಯ ರಾವಣನೆಂಬ ಹೆಸರಿನ ರಾಕ್ಷಸನೂ ಕೂಡ ಬಾಂಧವ-ಅನುಯಾಯಿಗಳೊಂದಿಗೆ ರಾಮನಿಂದ ಹತನಾದನು. ಹಾಗೆಯೇ ನೀನೂ ಕೂಡ ಯೋಗ ಮತ್ತು ಕ್ರಿಯೆಗಳನ್ನು ಉಪಯೋಗಿಸಿ ನಿನ್ನ ವಿಕ್ರಮವನ್ನು ತೋರಿಸು!
09030011a ಕ್ರಿಯಾಭ್ಯುಪಾಯೈರ್ನಿಹತೋ ಮಯಾ ರಾಜನ್ಪುರಾತನೇ|
09030011c ತಾರಕಶ್ಚ ಮಹಾದೈತ್ಯೋ ವಿಪ್ರಚಿತ್ತಿಶ್ಚ ವೀರ್ಯವಾನ್||
ರಾಜನ್! ಉಪಾಯಯುಕ್ತ ಕ್ರಿಯೆಗಳಿಂದಲೇ ನಾನು ಹಿಂದೆ ಮಹಾದೈತ್ಯ ತಾರಕನನ್ನೂ ವೀರ್ಯವಾನ್ ವಿಪ್ರಚಿತ್ತಿಯನ್ನೂ ಸಂಹರಿಸಿದ್ದೆ.
09030012a ವಾತಾಪಿರಿಲ್ವಲಶ್ಚೈವ ತ್ರಿಶಿರಾಶ್ಚ ತಥಾ ವಿಭೋ|
09030012c ಸುಂದೋಪಸುಂದಾವಸುರೌ ಕ್ರಿಯಯೈವ ನಿಷೂದಿತೌ||
ವಿಭೋ! ಹಾಗೆಯೇ ವಾತಾಪಿ-ಇಲ್ವಲರೂ, ತ್ರಿಶಿರನೂ ಮತ್ತು ಅಸುರ ಸುಂದೋಪಸುಂದರೂ ಕ್ರಿಯೆಯಿಂದಲೇ ವಧಿಸಲ್ಪಟ್ಟರು.
09030013a ಕ್ರಿಯಾಭ್ಯುಪಾಯೈರಿಂದ್ರೇಣ ತ್ರಿದಿವಂ ಭುಜ್ಯತೇ ವಿಭೋ|
09030013c ಕ್ರಿಯಾ ಬಲವತೀ ರಾಜನ್ನಾನ್ಯತ್ಕಿಂ ಚಿದ್ಯುಧಿಷ್ಠಿರ||
ವಿಭೋ! ಉಪಾಯಯುಕ್ತ ಕ್ರಿಯೆಗಳಿಂದಲೇ ಇಂದ್ರನು ತ್ರಿದಿವವನ್ನು ಭೋಗಿಸುತ್ತಿದ್ದಾನೆ. ರಾಜನ್! ಯುಧಿಷ್ಠಿರ! ಕ್ರಿಯೆಗಿಂತಲೂ ಬಲವಾದುದು ಬೇರೆ ಯಾವುದೂ ಇಲ್ಲ.
09030014a ದೈತ್ಯಾಶ್ಚ ದಾನವಾಶ್ಚೈವ ರಾಕ್ಷಸಾಃ ಪಾರ್ಥಿವಾಸ್ತಥಾ|
09030014c ಕ್ರಿಯಾಭ್ಯುಪಾಯೈರ್ನಿಹತಾಃ ಕ್ರಿಯಾಂ ತಸ್ಮಾತ್ಸಮಾಚರ||
ದೈತ್ಯ-ದಾನವ-ರಾಕ್ಷಸರೂ ಮತ್ತು ಪಾರ್ಥಿವರೂ ಉಪಾಯಯುಕ್ತಕ್ರಿಯೆಗಳಿಂದಲೇ ಹತರಾದರು. ಆದುದರಿಂದ ನೀನೂ ಕೂಡ ಅಂತಹ ಕ್ರಿಯೆಗಳನ್ನು ಬಳಸು!””
09030015 ಸಂಜಯ ಉವಾಚ
09030015a ಇತ್ಯುಕ್ತೋ ವಾಸುದೇವೇನ ಪಾಂಡವಃ ಸಂಶಿತವ್ರತಃ|
09030015c ಜಲಸ್ಥಂ ತಂ ಮಹಾರಾಜ ತವ ಪುತ್ರಂ ಮಹಾಬಲಂ||
09030015e ಅಭ್ಯಭಾಷತ ಕೌಂತೇಯಃ ಪ್ರಹಸನ್ನಿವ ಭಾರತ|
ಸಂಜಯನು ಹೇಳಿದನು: “ಭಾರತ! ಮಹಾರಾಜ! ವಾಸುದೇವನು ಹೀಗೆ ಹೇಳಲು ಸಂಶಿತವ್ರತ ಪಾಂಡವ ಕೌಂತೇಯನು ನಗುತ್ತಾ ಜಲಸ್ಥನಾಗಿದ್ದ ನಿನ್ನ ಮಹಾಬಲ ಪುತ್ರನನ್ನು ಉದ್ದೇಶಿಸಿ ಹೇಳಿದನು:
09030016a ಸುಯೋಧನ ಕಿಮರ್ಥೋಽಯಮಾರಂಭೋಽಪ್ಸು ಕೃತಸ್ತ್ವಯಾ|
09030016c ಸರ್ವಂ ಕ್ಷತ್ರಂ ಘಾತಯಿತ್ವಾ ಸ್ವಕುಲಂ ಚ ವಿಶಾಂ ಪತೇ||
“ವಿಶಾಂಪತೇ! ಸುಯೋಧನ! ಎಲ್ಲ ಕ್ಷತ್ರಿಯರನ್ನೂ, ನಿನ್ನ ಕುಲವನ್ನೂ ನಾಶಗೊಳಿಸಿ ಈಗ ಯಾವ ಕಾರಣಕ್ಕಾಗಿ ನೀರಿನಲ್ಲಿ ಈ ಅನುಷ್ಟಾನವನ್ನು ಪ್ರಾರಂಭಿಸಿರುವೆ?
09030017a ಜಲಾಶಯಂ ಪ್ರವಿಷ್ಟೋಽದ್ಯ ವಾಂಚನ್ಜೀವಿತಮಾತ್ಮನಃ|
09030017c ಉತ್ತಿಷ್ಠ ರಾಜನ್ಯುಧ್ಯಸ್ವ ಸಹಾಸ್ಮಾಭಿಃ ಸುಯೋಧನ||
ರಾಜನ್! ಸುಯೋಧನ! ಜಲಾಶಯವನ್ನು ಪ್ರವೇಶಿಸಿ ನಿನ್ನ ಜೀವವನ್ನುಳಿಸಿಕೊಳ್ಳಲು ಇಚ್ಛಿಸಿರುವೆಯಾ? ಮೇಲೇಳು! ನಮ್ಮೊಡನೆ ಯುದ್ಧಮಾಡು!
09030018a ಸ ಚ ದರ್ಪೋ ನರಶ್ರೇಷ್ಠ ಸ ಚ ಮಾನಃ ಕ್ವ ತೇ ಗತಃ|
09030018c ಯಸ್ತ್ವಂ ಸಂಸ್ತಭ್ಯ ಸಲಿಲಂ ಭೀತೋ ರಾಜನ್ವ್ಯವಸ್ಥಿತಃ||
ರಾಜನ್! ನರಶ್ರೇಷ್ಠ! ಭೀತನಾಗಿ ಜಲವನ್ನು ಸ್ತಂಭನಗೊಳಿಸಿ ಕುಳಿತುಕೊಂಡಿರುವೆಯಲ್ಲಾ! ನಿನ್ನ ಆ ದರ್ಪ-ಅಭಿಮಾನಗಳು ಎಲ್ಲಿ ಹೋದವು?
09030019a ಸರ್ವೇ ತ್ವಾಂ ಶೂರ ಇತ್ಯೇವ ಜನಾ ಜಲ್ಪಂತಿ ಸಂಸದಿ|
09030019c ವ್ಯರ್ಥಂ ತದ್ಭವತೋ ಮನ್ಯೇ ಶೌರ್ಯಂ ಸಲಿಲಶಾಯಿನಃ||
ಸಭೆಗಳಲ್ಲಿ ಜನರೆಲ್ಲರೂ ನಿನ್ನನ್ನು ಶೂರನೆಂದು ಹೊಗಳುತ್ತಿದ್ದರು. ನೀರಿನಲ್ಲಿ ಮಲಗಿ ನಿನ್ನ ಆ ಶೌರ್ಯವು ವ್ಯರ್ಥವಾಯಿತೆಂದೇ ಭಾವಿಸುತ್ತೇನೆ.
09030020a ಉತ್ತಿಷ್ಠ ರಾಜನ್ಯುಧ್ಯಸ್ವ ಕ್ಷತ್ರಿಯೋಽಸಿ ಕುಲೋದ್ಭವಃ|
09030020c ಕೌರವೇಯೋ ವಿಶೇಷೇಣ ಕುಲೇ ಜನ್ಮ ಚ ಸಂಸ್ಮರ||
ರಾಜನ್! ಎದ್ದೇಳು! ಯುದ್ಧಮಾಡು! ಕ್ಷತ್ರಿಯನಾಗಿರುವೆ. ಕುಲೋದ್ಭವನಾಗಿರುವೆ! ವಿಶೇಷವಾಗಿ ಕೌರವೇಯನಾಗಿರುವೆ. ಉತ್ತಮ ಕುಲದಲ್ಲಿ ಜನಿಸಿರುವುದನ್ನು ಸ್ಮರಿಸಿಕೋ!
09030021a ಸ ಕಥಂ ಕೌರವೇ ವಂಶೇ ಪ್ರಶಂಸನ್ಜನ್ಮ ಚಾತ್ಮನಃ|
09030021c ಯುದ್ಧಾದ್ಭೀತಸ್ತತಸ್ತೋಯಂ ಪ್ರವಿಶ್ಯ ಪ್ರತಿತಿಷ್ಠಸಿ||
ಕೌರವ ವಂಶದಲ್ಲಿ ಜನ್ಮತಾಳಿದುದಕ್ಕೆ ಪ್ರಶಂಸೆಮಾಡಿಸಿ ಕೊಳ್ಳುತ್ತಿದ್ದ ನೀನು ಹೇಗೆ ತಾನೇ ಈಗ ಯುದ್ಧಕ್ಕೆ ಹೆದರಿ ನೀರನ್ನು ಪ್ರವೇಶಿಸಿ ಕುಳಿತುಕೊಂಡಿರುವೆ?
09030022a ಅಯುದ್ಧಮವ್ಯವಸ್ಥಾನಂ ನೈಷ ಧರ್ಮಃ ಸನಾತನಃ|
09030022c ಅನಾರ್ಯಜುಷ್ಟಮಸ್ವರ್ಗ್ಯಂ ರಣೇ ರಾಜನ್ಪಲಾಯನಂ||
ಯುದ್ಧಮಾಡದಿರುವುದೂ, ಯುದ್ಧದಲ್ಲಿ ನಿಲ್ಲದೇ ಓಡಿಹೋಗುವುದೂ ಸನಾತನ ಧರ್ಮವಲ್ಲ. ರಾಜನ್! ರಣದಿಂದ ಪಲಾಯನಗೈಯುವ ಅನಾರ್ಯ ಕಾರ್ಯವು ಸ್ವರ್ಗವನ್ನು ನೀಡಲಾರದು!
09030023a ಕಥಂ ಪಾರಮಗತ್ವಾ ಹಿ ಯುದ್ಧೇ ತ್ವಂ ವೈ ಜಿಜೀವಿಷುಃ|
09030023c ಇಮಾನ್ನಿಪತಿತಾನ್ದೃಷ್ಟ್ವಾ ಪುತ್ರಾನ್ಭ್ರಾತೄನ್ಪಿತೄನ್ತಥಾ||
09030024a ಸಂಬಂಧಿನೋ ವಯಸ್ಯಾಂಶ್ಚ ಮಾತುಲಾನ್ಬಾಂಧವಾಂಸ್ತಥಾ|
09030024c ಘಾತಯಿತ್ವಾ ಕಥಂ ತಾತ ಹ್ರದೇ ತಿಷ್ಠಸಿ ಸಾಂಪ್ರತಂ||
ಯುದ್ಧವು ಇನ್ನೂ ಮುಗಿಯುವುದರೊಳಗೇ ನೀನು ಹೇಗೆ ತಾನೇ ಜೀವಿಸಲು ಇಚ್ಛಿಸುವೆ? ಅಯ್ಯಾ! ಪುತ್ರರು-ಸಹೋದರರು-ಪಿತೃಗಳು- ಹಾಗೆಯೇ ಸಂಬಂಧಿಗಳು-ಸ್ನೇಹಿತರು-ಸೋದರ ಮಾವಂದಿರು ಮತ್ತು ಬಾಂಧವರು ಹೀಗೆ ವಧಿಸಲ್ಪಟ್ಟು ಕೆಳಗುರುಳಿರುವಾಗ ನೀನು ಹೇಗೆ ತಾನೇ ಸರೋವರದಲ್ಲಿ ಅಡಗಿಕೊಂಡಿರುವೆ?
09030025a ಶೂರಮಾನೀ ನ ಶೂರಸ್ತ್ವಂ ಮಿಥ್ಯಾ ವದಸಿ ಭಾರತ|
09030025c ಶೂರೋಽಹಮಿತಿ ದುರ್ಬುದ್ಧೇ ಸರ್ವಲೋಕಸ್ಯ ಶೃಣ್ವತಃ||
ಭಾರತ! ಶೂರನೆಂದು ತಿಳಿದುಕೊಂಡಿರುವ ನೀನು ಶೂರನಲ್ಲ! ದುರ್ಬುದ್ಧೇ! ನಾನು ಶೂರನೆಂದು ಸರ್ವಲೋಕಕ್ಕೆ ಸುಳ್ಳುಹೇಳಿಕೊಂಡು ಬಂದಿರುವೆ.
09030026a ನ ಹಿ ಶೂರಾಃ ಪಲಾಯಂತೇ ಶತ್ರೂನ್ದೃಷ್ಟ್ವಾ ಕಥಂ ಚನ|
09030026c ಬ್ರೂಹಿ ವಾ ತ್ವಂ ಯಯಾ ಧೃತ್ಯಾ ಶೂರ ತ್ಯಜಸಿ ಸಂಗರಂ||
ಶೂರರು ಎಂದೂ ಶತ್ರುಗಳನ್ನು ನೋಡಿ ಪಲಾಯನಮಾಡುವುದಿಲ್ಲ. ಶೂರ! ನಿಜವಾಗಿ ಹೇಳು. ನೀನು ಏಕೆ ಯುದ್ಧವನ್ನು ತ್ಯಜಿಸಿ ಇಲ್ಲಿಗೆ ಬಂದಿರುವೆ?
09030027a ಸ ತ್ವಮುತ್ತಿಷ್ಠ ಯುಧ್ಯಸ್ವ ವಿನೀಯ ಭಯಮಾತ್ಮನಃ|
09030027c ಘಾತಯಿತ್ವಾ ಸರ್ವಸೈನ್ಯಂ ಭ್ರಾತೄನ್ ಚೈವ ಸುಯೋಧನ||
09030028a ನೇದಾನೀಂ ಜೀವಿತೇ ಬುದ್ಧಿಃ ಕಾರ್ಯಾ ಧರ್ಮಚಿಕೀರ್ಷಯಾ|
09030028c ಕ್ಷತ್ರಧರ್ಮಮಪಾಶ್ರಿತ್ಯ ತ್ವದ್ವಿಧೇನ ಸುಯೋಧನ||
ಸುಯೋಧನ! ನಿನ್ನಲ್ಲಿರುವ ಭಯವನ್ನು ತೊರೆದು ಎದ್ದೇಳು! ಯುದ್ಧಮಾಡು! ಸುಯೋಧನ! ಸರ್ವ ಸೈನ್ಯವನ್ನೂ, ಸೋದರರನ್ನೂ ಸಾಯಗೊಟ್ಟು ಧರ್ಮಾಚರಣೆಯನ್ನು ಬಯಸಿ ಜೀವವನ್ನುಳಿಸಿಕೊಳ್ಳುವ ಬುದ್ಧಿ-ಕಾರ್ಯಗಳನ್ನೆಸಗುವುದು ಕ್ಷತ್ರಧರ್ಮವನ್ನುಸರಿಸಿದ ನಿನ್ನಂಥವನಿಗೆ ಸರಿಯಲ್ಲ!
09030029a ಯತ್ತತ್ಕರ್ಣಮುಪಾಶ್ರಿತ್ಯ ಶಕುನಿಂ ಚಾಪಿ ಸೌಬಲಂ|
09030029c ಅಮರ್ತ್ಯ ಇವ ಸಮ್ಮೋಹಾತ್ತ್ವಮಾತ್ಮಾನಂ ನ ಬುದ್ಧವಾನ್||
ಕರ್ಣ ಮತ್ತು ಸೌಬಲ ಶಕುನಿಯರನ್ನು ಆಶ್ರಯಿಸಿ ಮೋಹಪರವಶನಾಗಿ ನಾನೂ ಕೂಡ ಮರಣಧರ್ಮವಿರುವವನು ಎಂದು ನೀನು ತಿಳಿದುಕೊಂಡಿರಲೇ ಇಲ್ಲ.
09030030a ತತ್ಪಾಪಂ ಸುಮಹತ್ಕೃತ್ವಾ ಪ್ರತಿಯುಧ್ಯಸ್ವ ಭಾರತ|
09030030c ಕಥಂ ಹಿ ತ್ವದ್ವಿಧೋ ಮೋಹಾದ್ರೋಚಯೇತ ಪಲಾಯನಂ||
ಭಾರತ! ಮಹಾಪಾಪವನ್ನು ಮಾಡಿರುವ ನೀನು ಪ್ರತಿಯಾಗಿ ಯುದ್ಧಮಾಡು! ಮೋಹದಿಂದ ಪಲಾಯನಮಾಡುವುದನ್ನು ನಿನ್ನಂಥವನು ಹೇಗೆ ತಾನೇ ಬಯಸುತ್ತಾನೆ?
09030031a ಕ್ವ ತೇ ತತ್ಪೌರುಷಂ ಯಾತಂ ಕ್ವ ಚ ಮಾನಃ ಸುಯೋಧನ|
09030031c ಕ್ವ ಚ ವಿಕ್ರಾಂತತಾ ಯಾತಾ ಕ್ವ ಚ ವಿಸ್ಫೂರ್ಜಿತಂ ಮಹತ್||
ಸುಯೋಧನ! ನಿನ್ನ ಆ ಪೌರುಷವೆಲ್ಲಿ ಹೋಯಿತು? ಮಾನವೆಲ್ಲಿ ಹೋಯಿತು? ಆ ನಿನ್ನ ವಿಕ್ರಾಂತವೆಲ್ಲಿ ಹೋಯಿತು? ನಿನ್ನ ಆ ಮಹಾ ಗರ್ಜನೆಯು ಎಲ್ಲಿ ಅಡಗಿತು?
09030032a ಕ್ವ ತೇ ಕೃತಾಸ್ತ್ರತಾ ಯಾತಾ ಕಿಂ ಚ ಶೇಷೇ ಜಲಾಶಯೇ|
09030032c ಸ ತ್ವಮುತ್ತಿಷ್ಠ ಯುಧ್ಯಸ್ವ ಕ್ಷತ್ರಧರ್ಮೇಣ ಭಾರತ||
ನಿನ್ನ ಅಸ್ತ್ರವಿದ್ಯೆಯು ಎಲ್ಲಿ ಹೋಯಿತು? ಜಲಾಶಯದಲ್ಲೇಕೆ ಮಲಗಿರುವೆ? ಭಾರತ! ಮೇಲೆದ್ದು ಕ್ಷತ್ರಧರ್ಮದಂತೆ ಯುದ್ಧಮಾಡು!
09030033a ಅಸ್ಮಾನ್ವಾ ತ್ವಂ ಪರಾಜಿತ್ಯ ಪ್ರಶಾಧಿ ಪೃಥಿವೀಮಿಮಾಂ|
09030033c ಅಥ ವಾ ನಿಹತೋಽಸ್ಮಾಭಿರ್ಭೂಮೌ ಸ್ವಪ್ಸ್ಯಸಿ ಭಾರತ||
ಭಾರತ! ನೀನು ನಮ್ಮನ್ನು ಪರಾಜಯಗೊಳಿಸಿ ಈ ಪೃಥ್ವಿಯನ್ನು ಆಳು. ಅಥವಾ ನಮ್ಮಿಂದ ಹತನಾಗಿ ನೆಲದ ಮೇಲೆ ಮಲಗು!
09030034a ಏಷ ತೇ ಪ್ರಥಮೋ ಧರ್ಮಃ ಸೃಷ್ಟೋ ಧಾತ್ರಾ ಮಹಾತ್ಮನಾ|
09030034c ತಂ ಕುರುಷ್ವ ಯಥಾತಥ್ಯಂ ರಾಜಾ ಭವ ಮಹಾರಥ||
ಮಹಾರಥ! ಇದೇ ಮಹಾತ್ಮ ಧಾತ್ರನು ಸೃಷ್ಟಿಸಿರುವ ನಿನ್ನ ಪ್ರಥಮ ಧರ್ಮ! ಅದನ್ನು ಹಾಗೆಯೇ ಮಾಡಿ ರಾಜನಾಗು!”
09030035 ದುರ್ಯೋಧನ ಉವಾಚ
09030035a ನೈತಚ್ಚಿತ್ರಂ ಮಹಾರಾಜ ಯದ್ಭೀಃ ಪ್ರಾಣಿನಮಾವಿಶೇತ್|
09030035c ನ ಚ ಪ್ರಾಣಭಯಾದ್ಭೀತೋ ವ್ಯಪಯಾತೋಽಸ್ಮಿ ಭಾರತ||
ದುರ್ಯೋಧನನು ಹೇಳಿದನು: “ಮಹಾರಾಜ! ಪ್ರಾಣಿಗಳನ್ನು ಭಯವು ಆವರಿಸುತ್ತದೆ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಭಾರತ! ನಾನು ಮಾತ್ರ ಪ್ರಾಣಭಯದಿಂದ ಭೀತನಾಗಿ ಇಲ್ಲಿಗೆ ಬಂದಿಲ್ಲ!
09030036a ಅರಥಶ್ಚಾನಿಷಂಗೀ ಚ ನಿಹತಃ ಪಾರ್ಷ್ಣಿಸಾರಥಿಃ|
09030036c ಏಕಶ್ಚಾಪ್ಯಗಣಃ ಸಂಖ್ಯೇ ಪ್ರತ್ಯಾಶ್ವಾಸಮರೋಚಯಂ||
ರಥಹೀನನಾಗಿದ್ದೆ. ಬತ್ತಳಿಕೆಯೂ ಇರಲಿಲ್ಲ. ಪಾರ್ಷ್ಣಿಸಾರಥಿಗಳು ಹತರಾಗಿದ್ದರು. ಸೇನೆಗಳಿಲ್ಲದೇ ಏಕಾಂಗಿಯಾಗಿದ್ದೆನು. ಆಗ ಸ್ವಲ್ಪಹೊತ್ತು ವಿಶ್ರಾಂತಿ ಪಡೆಯಲು ರಣದಿಂದ ಇಲ್ಲಿಗೆ ಬಂದಿದ್ದೇನೆ.
09030037a ನ ಪ್ರಾಣಹೇತೋರ್ನ ಭಯಾನ್ನ ವಿಷಾದಾದ್ವಿಶಾಂ ಪತೇ|
09030037c ಇದಮಂಭಃ ಪ್ರವಿಷ್ಟೋಽಸ್ಮಿ ಶ್ರಮಾತ್ತ್ವಿದಮನುಷ್ಠಿತಂ||
ವಿಶಾಂಪತೇ! ಪ್ರಾಣಕ್ಕಾಗಿಯಾಗಲೀ, ಭಯದಿಂದಾಗಲೀ, ವಿಷಾದದಿಂದಾಗಲೀ ನಾನು ಈ ನೀರನ್ನು ಪ್ರವೇಶಿಸಿಲ್ಲ! ಆಯಾಸಪರಿಹಾರಮಾಡಿಕೊಳ್ಳಲು ಇಲ್ಲಿ ಕುಳಿತಿದ್ದೇನೆ.
09030038a ತ್ವಂ ಚಾಶ್ವಸಿಹಿ ಕೌಂತೇಯ ಯೇ ಚಾಪ್ಯನುಗತಾಸ್ತವ|
09030038c ಅಹಮುತ್ಥಾಯ ವಃ ಸರ್ವಾನ್ಪ್ರತಿಯೋತ್ಸ್ಯಾಮಿ ಸಂಯುಗೇ||
ಕೌಂತೇಯ! ನೀನು ಕೂಡ ಬಳಲಿರುವೆ ಮತ್ತು ನಿನ್ನ ಅನುಯಾಯಿಗಳೂ ಬಳಲಿದ್ದಾರೆ. ನಾಳೆ ನಾನು ಮೇಲೆ ಎದ್ದು ರಣದಲ್ಲಿ ನಿಮ್ಮೆಲ್ಲರನ್ನೂ ಎದುರಿಸಿ ಯುದ್ಧಮಾಡುತ್ತೇನೆ.”
09030039 ಯುಧಿಷ್ಠಿರ ಉವಾಚ
09030039a ಆಶ್ವಸ್ತಾ ಏವ ಸರ್ವೇ ಸ್ಮ ಚಿರಂ ತ್ವಾಂ ಮೃಗಯಾಮಹೇ|
09030039c ತದಿದಾನೀಂ ಸಮುತ್ತಿಷ್ಠ ಯುಧ್ಯಸ್ವೇಹ ಸುಯೋಧನ||
ಯುಧಿಷ್ಠಿರನು ಹೇಳಿದನು: “ನಾವೆಲ್ಲಾ ವಿಶ್ರಮಿಸಿಕೊಂಡಿದ್ದೇವೆ. ನಿನ್ನನ್ನು ನಾವು ಬಹಳ ಸಮಯದಿಂದ ಹುಡುಕುತ್ತಿದ್ದೇವೆ. ಆದುದರಿಂದ ಸುಯೋಧನ! ಈಗಲೇ ಮೇಲೆದ್ದು ಯುದ್ಧಮಾಡು.
09030040a ಹತ್ವಾ ವಾ ಸಮರೇ ಪಾರ್ಥಾನ್ ಸ್ಫೀತಂ ರಾಜ್ಯಮವಾಪ್ನುಹಿ|
09030040c ನಿಹತೋ ವಾ ರಣೇಽಸ್ಮಾಭಿರ್ವೀರಲೋಕಮವಾಪ್ಸ್ಯಸಿ||
ಸಮರದಲ್ಲಿ ಪಾರ್ಥರನ್ನು ಸಂಹರಿಸಿ ಸಮೃದ್ಧ ರಾಜ್ಯವನ್ನು ಹೊಂದು. ಅಥವಾ ರಣದಲ್ಲಿ ನಮ್ಮಿಂದ ವಧಿಸಲ್ಪಟ್ಟು ವೀರಲೋಕವನ್ನು ಪಡೆ!”
09030041 ದುರ್ಯೋಧನ ಉವಾಚ
09030041a ಯದರ್ಥಂ ರಾಜ್ಯಮಿಚ್ಚಾಮಿ ಕುರೂಣಾಂ ಕುರುನಂದನ|
09030041c ತ ಇಮೇ ನಿಹತಾಃ ಸರ್ವೇ ಭ್ರಾತರೋ ಮೇ ಜನೇಶ್ವರ||
ದುರ್ಯೋಧನನು ಹೇಳಿದನು: “ಕುರುನಂದನ! ಜನೇಶ್ವರ! ಯಾರಿಗಾಗಿ ರಾಜ್ಯವನ್ನು ಇಚ್ಛಿಸಿದ್ದೆನೋ ಆ ಕುರುಭ್ರಾತರರೆಲ್ಲರೂ ಹತರಾಗಿದ್ದಾರೆ!
09030042a ಕ್ಷೀಣರತ್ನಾಂ ಚ ಪೃಥಿವೀಂ ಹತಕ್ಷತ್ರಿಯಪುಂಗವಾಂ|
09030042c ನಾಭ್ಯುತ್ಸಹಾಮ್ಯಹಂ ಭೋಕ್ತುಂ ವಿಧವಾಮಿವ ಯೋಷಿತಂ||
ಸಂಪತ್ತನ್ನು ಕಳೆದುಕೊಂಡು ಮತ್ತು ಕ್ಷತ್ರಿಯ ಪುಂಗವರು ಹತರಾಗಿ ವಿಧವೆಯಂತೆ ಹೀನವಾಗಿರುವ ಈ ಪೃಥ್ವಿಯನ್ನು ಭೋಗಿಸುವಲ್ಲಿ ನನಗೆ ಉತ್ಸಾಹವಿಲ್ಲ!
09030043a ಅದ್ಯಾಪಿ ತ್ವಹಮಾಶಂಸೇ ತ್ವಾಂ ವಿಜೇತುಂ ಯುಧಿಷ್ಠಿರ|
09030043c ಭಂಕ್ತ್ವಾ ಪಾಂಚಾಲಪಾಂಡೂನಾಮುತ್ಸಾಹಂ ಭರತರ್ಷಭ||
ಯುಧಿಷ್ಠಿರ! ಭರತರ್ಷಭ! ಆದರೆ ಇಂದು ಕೂಡ ಪಾಂಚಾಲ-ಪಾಂಡವರ ಉತ್ಸಾಹವನ್ನು ಭಗ್ನಗೊಳಿಸಿ ನಿನ್ನನ್ನು ಜಯಿಸುವ ಆಸೆಯನ್ನಿಟ್ಟುಕೊಂಡಿದ್ದೇನೆ!
09030044a ನ ತ್ವಿದಾನೀಮಹಂ ಮನ್ಯೇ ಕಾರ್ಯಂ ಯುದ್ಧೇನ ಕರ್ಹಿ ಚಿತ್|
09030044c ದ್ರೋಣೇ ಕರ್ಣೇ ಚ ಸಂಶಾಂತೇ ನಿಹತೇ ಚ ಪಿತಾಮಹೇ||
ಆದರೆ ದ್ರೋಣ, ಕರ್ಣ ಮತ್ತು ಪಿತಾಮಹರು ಹತರಾಗಿ ಮಲಗಿರುವ ನಂತರ ಈ ಯುದ್ಧದಿಂದ ಏನಾದರೂ ಪ್ರಯೋಜನವಾಗುತ್ತದೆಯೆಂದು ನನಗನ್ನಿಸುವುದಿಲ್ಲ.
09030045a ಅಸ್ತ್ವಿದಾನೀಮಿಯಂ ರಾಜನ್ಕೇವಲಾ ಪೃಥಿವೀ ತವ|
09030045c ಅಸಹಾಯೋ ಹಿ ಕೋ ರಾಜಾ ರಾಜ್ಯಮಿಚ್ಚೇತ್ಪ್ರಶಾಸಿತುಂ||
ರಾಜನ್! ಕೇವಲ ಈ ಪೃಥ್ವಿಯು ಮಾತ್ರ ನಿನ್ನದಾಗುತ್ತದೆ. ಆದರೆ ಯಾವುದೂ ಮತ್ತು ಯಾರೂ ಇಲ್ಲದ ರಾಜ್ಯವನ್ನು ಯಾವ ರಾಜನು ತಾನೇ ಆಳಲು ಬಯಸುತ್ತಾನೆ?
09030046a ಸುಹೃದಸ್ತಾದೃಶಾನ್ ಹಿತ್ವಾ ಪುತ್ರಾನ್ಭ್ರಾತೄನ್ಪಿತೄನಪಿ|
09030046c ಭವದ್ಭಿಶ್ಚ ಹೃತೇ ರಾಜ್ಯೇ ಕೋ ನು ಜೀವೇತ ಮಾದೃಶಃ||
ಅಂತಹ ಸುಹೃದರನ್ನೂ, ಪುತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ ವಧೆಗೀಡುಮಾಡಿ, ನಿನ್ನಿಂದ ರಾಜ್ಯವೂ ಅಪಹೃತವಾದನಂತರ ನನ್ನಂಥವನು ಹೇಗೆ ತಾನೇ ಜೀವಿಸಿರುವನು?
09030047a ಅಹಂ ವನಂ ಗಮಿಷ್ಯಾಮಿ ಹ್ಯಜಿನೈಃ ಪ್ರತಿವಾಸಿತಃ|
09030047c ರತಿರ್ಹಿ ನಾಸ್ತಿ ಮೇ ರಾಜ್ಯೇ ಹತಪಕ್ಷಸ್ಯ ಭಾರತ||
ನಾನು ಮೃಗಚರ್ಮವನ್ನು ಹೊದ್ದು ವನಕ್ಕೆ ಹೊರಟುಹೋಗುತ್ತೇನೆ. ಭಾರತ! ನನ್ನ ಕಡೆಯವರನ್ನು ಕಳೆದುಕೊಂಡ ನನಗೆ ರಾಜ್ಯದ ಮೇಲಿನ ಪ್ರೀತಿಯೇ ಇಲ್ಲವಾಗಿದೆ.
09030048a ಹತಬಾಂಧವಭೂಯಿಷ್ಠಾ ಹತಾಶ್ವಾ ಹತಕುಂಜರಾ|
09030048c ಏಷಾ ತೇ ಪೃಥಿವೀ ರಾಜನ್ಭುಂಕ್ತ್ವೈನಾಂ ವಿಗತಜ್ವರಃ||
ರಾಜನ್! ಅನೇಕ ರಾಜಬಾಂಧವರನ್ನು ಕಳೆದುಕೊಂಡ, ಹತಾಶ್ವ-ಹತಕುಂಜರವಾಗಿರುವ ಈ ಪೃಥ್ವಿಯನ್ನು ಆತಂಕವಿಲ್ಲದೇ ಭೋಗಿಸು!
09030049a ವನಮೇವ ಗಮಿಷ್ಯಾಮಿ ವಸಾನೋ ಮೃಗಚರ್ಮಣೀ|
09030049c ನ ಹಿ ಮೇ ನಿರ್ಜಿತಸ್ಯಾಸ್ತಿ ಜೀವಿತೇಽದ್ಯ ಸ್ಪೃಹಾ ವಿಭೋ||
ಮೃಗಚರ್ಮವನ್ನು ಧರಿಸಿ ವನಕ್ಕೇ ಹೋಗುತ್ತೇನೆ. ವಿಭೋ! ಸ್ವಜನರಿಂದ ವಿಹೀನರಾಗಿರುವ ನನಗೆ ಇಂದು ಜೀವಿಸಿರುವುದರಲ್ಲಿ ಆಸಕ್ತಿಯೇ ಇಲ್ಲವಾಗಿದೆ.
09030050a ಗಚ್ಚ ತ್ವಂ ಭುಂಕ್ತ್ವ ರಾಜೇಂದ್ರ ಪೃಥಿವೀಂ ನಿಹತೇಶ್ವರಾಂ|
09030050c ಹತಯೋಧಾಂ ನಷ್ಟರತ್ನಾಂ ಕ್ಷೀಣವಪ್ರಾಂ ಯಥಾಸುಖಂ||
ರಾಜೇಂದ್ರ! ಹೋಗು! ಈಶ್ವರರನ್ನು ಕಳೆದುಕೊಂಡಿರುವ, ಯೋಧರು ಹತರಾಗಿರುವ, ಸಂಪತ್ತುಗಳು ನಷ್ಟವಾಗಿರುವ, ಕ್ಷೀಣ ಕಾಂತಿಯುಳ್ಳ ಈ ಪೃಥ್ವಿಯನ್ನು ಯಥಾಸುಖವಾಗಿ ಭೋಗಿಸು!”
09030051 ಯುಧಿಷ್ಠಿರ ಉವಾಚ
09030051a ಆರ್ತಪ್ರಲಾಪಾನ್ಮಾ ತಾತ ಸಲಿಲಸ್ಥಃ ಪ್ರಭಾಷಥಾಃ|
09030051c ನೈತನ್ಮನಸಿ ಮೇ ರಾಜನ್ವಾಶಿತಂ ಶಕುನೇರಿವ||
ಯುಧಿಷ್ಠಿರನು ಹೇಳಿದನು: “ಅಯ್ಯಾ! ನೀರಿನಲ್ಲೇ ಕುಳಿತುಕೊಂಡು ಆರ್ತಪ್ರಲಾಪಮಾಡುತ್ತಾ ಮಾತನಾಡಬೇಡ! ರಾಜನ್! ಪಕ್ಷಿಯಂತೆ ಚಿಲಿಪಿಲಿಗುಡುತ್ತಿರುವ ನಿನ್ನ ಈ ಮಾತುಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿಲ್ಲ!
09030052a ಯದಿ ಚಾಪಿ ಸಮರ್ಥಃ ಸ್ಯಾಸ್ತ್ವಂ ದಾನಾಯ ಸುಯೋಧನ|
09030052c ನಾಹಮಿಚ್ಚೇಯಮವನಿಂ ತ್ವಯಾ ದತ್ತಾಂ ಪ್ರಶಾಸಿತುಂ||
ಸುಯೋಧನ! ಒಂದುವೇಳೆ ನೀನು ದಾನಮಾಡಲು ಸಮರ್ಥನಾಗಿರುವೆಯಾದರೂ ನೀನು ದಾನವಾಗಿ ಕೊಡುವ ಈ ಅವನಿಯನ್ನು ಆಳಲು ನನಗೆ ಇಚ್ಛೆಯಿಲ್ಲ.
09030053a ಅಧರ್ಮೇಣ ನ ಗೃಹ್ಣೀಯಾಂ ತ್ವಯಾ ದತ್ತಾಂ ಮಹೀಮಿಮಾಂ|
09030053c ನ ಹಿ ಧರ್ಮಃ ಸ್ಮೃತೋ ರಾಜನ್ ಕ್ಷತ್ರಿಯಸ್ಯ ಪ್ರತಿಗ್ರಹಃ||
ಅಧರ್ಮದಿಂದ ನೀಡುತ್ತಿರುವ ಈ ಮಹಿಯನ್ನು ನಾನು ಸ್ವೀಕರಿಸುವುದಿಲ್ಲ. ರಾಜನ್! ಕ್ಷತ್ರಿಯನು ದಾನವನ್ನು ಸ್ವೀಕರಿಸಬಹುದೆಂದು ಯಾವ ಸ್ಮೃತಿಯಲ್ಲಿಯೂ ಹೇಳಿಲ್ಲ.
09030054a ತ್ವಯಾ ದತ್ತಾಂ ನ ಚೇಚ್ಚೇಯಂ ಪೃಥಿವೀಮಖಿಲಾಮಹಂ|
09030054c ತ್ವಾಂ ತು ಯುದ್ಧೇ ವಿನಿರ್ಜಿತ್ಯ ಭೋಕ್ತಾಸ್ಮಿ ವಸುಧಾಮಿಮಾಂ||
ನೀನು ದಾನವನ್ನಾಗಿ ನೀಡುವ ಈ ಅಖಿಲ ಪೃಥ್ವಿಯನ್ನೂ ನಾನು ಬಯಸುವುದಿಲ್ಲ. ಆದರೆ ಯುದ್ಧದಲ್ಲಿ ನಿನ್ನನ್ನು ಸೋಲಿಸಿ ಈ ವಸುಧೆಯನ್ನು ಭೋಗಿಸುತ್ತೇನೆ.
09030055a ಅನೀಶ್ವರಶ್ಚ ಪೃಥಿವೀಂ ಕಥಂ ತ್ವಂ ದಾತುಮಿಚ್ಚಸಿ|
09030055c ತ್ವಯೇಯಂ ಪೃಥಿವೀ ರಾಜನ್ಕಿಂ ನ ದತ್ತಾ ತದೈವ ಹಿ||
ಈಶ್ವರನಿಲ್ಲದಿರುವ ಈ ಪೃಥ್ವಿಯನ್ನು ನೀನು ಹೇಗೆ ದಾನವಾಗಿ ಕೊಡಲಿಚ್ಛಿಸುವೆ? ರಾಜನ್! ನಿನ್ನದಲ್ಲದಾಗಿರುವ ಈ ಭೂಮಿಯನ್ನು ನೀನು ಹೇಗೆ ದಾನವಾಗಿ ಕೊಡಬಲ್ಲೆ?
09030056a ಧರ್ಮತೋ ಯಾಚಮಾನಾನಾಂ ಶಮಾರ್ಥಂ ಚ ಕುಲಸ್ಯ ನಃ|
09030056c ವಾರ್ಷ್ಣೇಯಂ ಪ್ರಥಮಂ ರಾಜನ್ಪ್ರತ್ಯಾಖ್ಯಾಯ ಮಹಾಬಲಂ||
ರಾಜನ್! ಕುಲದಲ್ಲಿ ಶಾಂತಿಯನ್ನಿರಿಸಲೋಸುಗ ಧರ್ಮದಿಂದ ಮಹಾಬಲ ವಾರ್ಷ್ಣೇಯನು ಮೊದಲು ಬಂದು ಕೇಳಿದಾಗ ನೀನೇನು ಪ್ರತ್ಯುತ್ತರವನ್ನಿತ್ತಿದ್ದೆ?
09030057a ಕಿಮಿದಾನೀಂ ದದಾಸಿ ತ್ವಂ ಕೋ ಹಿ ತೇ ಚಿತ್ತವಿಭ್ರಮಃ|
09030057c ಅಭಿಯುಕ್ತಸ್ತು ಕೋ ರಾಜಾ ದಾತುಮಿಚ್ಚೇದ್ಧಿ ಮೇದಿನೀಂ||
ಈಗ ನೀನು ದಾನವಾಗಿ ಕೊಡುತ್ತೇನೆ ಎಂದು ಹೇಳುತ್ತಿರುವೆಯಲ್ಲ! ನಿನಗೇನಾದರೂ ಚಿತ್ತಭ್ರಮೆಯುಂಟಾಗಿದೆಯೇ? ಶತ್ರುಗಳ ಆಕ್ರಮಣಕ್ಕೊಳಗಾಗಿರುವ ರಾಜ್ಯವನ್ನು ಯಾವ ರಾಜನು ತಾನೇ ದಾನವಾಗಿ ಕೊಡಲು ಬಯಸುತ್ತಾನೆ?
09030058a ನ ತ್ವಮದ್ಯ ಮಹೀಂ ದಾತುಮೀಶಃ ಕೌರವನಂದನ|
09030058c ಆಚ್ಚೇತ್ತುಂ ವಾ ಬಲಾದ್ರಾಜನ್ಸ ಕಥಂ ದಾತುಮಿಚ್ಚಸಿ||
ಕೌರವನಂದನ! ಇಂದು ನೀನು ಭೂಮಿಯನ್ನು ದಾನವನ್ನಾಗಿಕೊಡಲು ಈಶನೂ ಆಗಿಲ್ಲ ಅಥವಾ ಬಲವಾಗಿ ಕಸಿದುಕೊಳ್ಳಲೂ ಸಮರ್ಥನಾಗಿಲ್ಲ! ಹೀಗಿರುವಾಗ ಹೇಗೆ ತಾನೇ ದಾನವನ್ನು ಕೊಡಲು ಬಯಸುತ್ತಿರುವೆ?
09030058e ಮಾಂ ತು ನಿರ್ಜಿತ್ಯ ಸಂಗ್ರಾಮೇ ಪಾಲಯೇಮಾಂ ವಸುಂಧರಾಂ||
09030059a ಸೂಚ್ಯಗ್ರೇಣಾಪಿ ಯದ್ಭೂಮೇರಪಿ ಧ್ರೀಯೇತ ಭಾರತ|
09030059c ತನ್ಮಾತ್ರಮಪಿ ನೋ ಮಹ್ಯಂ ನ ದದಾತಿ ಪುರಾ ಭವಾನ್||
“ನನ್ನನ್ನು ಸಂಗ್ರಾಮದಲ್ಲಿ ಸೋಲಿಸಿಯೇ ನೀನು ಈ ವಸುಂಧರೆಯನ್ನು ಪಾಲಿಸು! ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲ” ಎಂದು ಹೇಳಿದ್ದೆ. ಭಾರತ! ಆಗ ನೀನು ನನಗೆ ಅಷ್ಟು ಭೂಮಿಯನ್ನೂ ಕೊಡಲು ಇಷ್ಟಪಟ್ಟಿರಲಿಲ್ಲ!
09030060a ಸ ಕಥಂ ಪೃಥಿವೀಮೇತಾಂ ಪ್ರದದಾಸಿ ವಿಶಾಂ ಪತೇ|
09030060c ಸೂಚ್ಯಗ್ರಂ ನಾತ್ಯಜಃ ಪೂರ್ವಂ ಸ ಕಥಂ ತ್ಯಜಸಿ ಕ್ಷಿತಿಂ||
ವಿಶಾಂಪತೇ! ಹಾಗಿರುವಾಗ ಈಗ ಹೇಗೆ ಈ ಪೃಥ್ವಿಯನ್ನು ನನಗೆ ಕೊಡುತ್ತಿರುವೆ? ಹಿಂದೆ ಸೂಜಿಯ ಮೊನೆಯಷ್ಟು ಭೂಮಿಯನ್ನು ಬಿಟ್ಟುಕೊಟ್ಟಿರದವನು ಈಗ ಇಡೀ ಭೂಮಿಯನ್ನೇ ಹೇಗೆ ತ್ಯಜಿಸುತ್ತಿದ್ದೀಯೆ?
09030061a ಏವಮೈಶ್ವರ್ಯಮಾಸಾದ್ಯ ಪ್ರಶಾಸ್ಯ ಪೃಥಿವೀಮಿಮಾಂ|
09030061c ಕೋ ಹಿ ಮೂಢೋ ವ್ಯವಸ್ಯೇತ ಶತ್ರೋರ್ದಾತುಂ ವಸುಂಧರಾಂ||
ಈ ರೀತಿ ಐಶ್ವರ್ಯವನ್ನು ಒಟ್ಟುಗೂಡಿಸಿಕೊಂಡು ಈ ಭೂಮಿಯನ್ನಾಳಿದ ಯಾವ ಮೂಢನು ತಾನೇ ವಸುಂಧರೆಯನ್ನು ಶತ್ರುವಿಗೆ ಕೊಡಲು ಬಯಸುತ್ತಾನೆ?
09030062a ತ್ವಂ ತು ಕೇವಲಮೌರ್ಖ್ಯೇಣ ವಿಮೂಢೋ ನಾವಬುಧ್ಯಸೇ|
09030062c ಪೃಥಿವೀಂ ದಾತುಕಾಮೋಽಪಿ ಜೀವಿತೇನಾದ್ಯ ಮೋಕ್ಷ್ಯಸೇ||
ನಿನಾದರೋ ಕೇವಲ ಮೂರ್ಖತನದಿಂದ ವಿಮೂಢನಾಗಿರುವೆ! ಪೃಥ್ವಿಯನ್ನು ಕೊಡಲು ಬಯಸಿದರೂ ಇಂದು ಜೀವವನ್ನು ತೊರೆಯಬೇಕಾಗುತ್ತದೆ ಎನ್ನುವುದನ್ನು ನೀನು ಅರಿತಿಲ್ಲ!
09030063a ಅಸ್ಮಾನ್ವಾ ತ್ವಂ ಪರಾಜಿತ್ಯ ಪ್ರಶಾಧಿ ಪೃಥಿವೀಮಿಮಾಂ|
09030063c ಅಥ ವಾ ನಿಹತೋಽಸ್ಮಾಭಿರ್ವ್ರಜ ಲೋಕಾನನುತ್ತಮಾನ್||
ನಮ್ಮನ್ನು ನೀನು ಪರಾಜಯಗೊಳಿಸಿ ಈ ಪೃಥ್ವಿಯನ್ನು ಆಳು. ಅಥವಾ ನಮ್ಮಿಂದ ಹತನಾಗಿ ಉತ್ತಮ ಲೋಕಗಳಿಗೆ ತೆರಳು!
09030064a ಆವಯೋರ್ಜೀವತೋ ರಾಜನ್ಮಯಿ ಚ ತ್ವಯಿ ಚ ಧ್ರುವಂ|
09030064c ಸಂಶಯಃ ಸರ್ವಭೂತಾನಾಂ ವಿಜಯೇ ನೋ ಭವಿಷ್ಯತಿ||
ರಾಜನ್! ನಾನು ಮತ್ತು ನೀನು ಇಬ್ಬರೂ ಜೀವಂತವಾಗಿದ್ದರೆ ನಮ್ಮಿಬ್ಬರಲ್ಲಿ ವಿಜಯಿಯಾರೆಂದು ಸರ್ವಭೂತಗಳಲ್ಲಿಯೂ ಸಂಶಯವುಂಟಾಗುತ್ತದೆ.
09030065a ಜೀವಿತಂ ತವ ದುಷ್ಪ್ರಜ್ಞ ಮಯಿ ಸಂಪ್ರತಿ ವರ್ತತೇ|
09030065c ಜೀವಯೇಯಂ ತ್ವಹಂ ಕಾಮಂ ನ ತು ತ್ವಂ ಜೀವಿತುಂ ಕ್ಷಮಃ||
ದುಷ್ಪ್ರಜ್ಞ! ನಿನ್ನ ಜೀವನವು ನನ್ನ ಕೈಯಲ್ಲಿದೆ! ನಾನು ಬಯಸಿದರೆ ಮಾತ್ರ ನೀನು ಜೀವಂತನಾಗಿರಬಲ್ಲೆ! ನಿನ್ನ ಇಚ್ಚೆಯಿಂದ ಜೀವಿಸಲು ನೀನು ಶಕ್ಯನಿಲ್ಲ!
09030066a ದಹನೇ ಹಿ ಕೃತೋ ಯತ್ನಸ್ತ್ವಯಾಸ್ಮಾಸು ವಿಶೇಷತಃ|
09030066c ಆಶೀವಿಷೈರ್ವಿಷೈಶ್ಚಾಪಿ ಜಲೇ ಚಾಪಿ ಪ್ರವೇಶನೈಃ||
09030066e ತ್ವಯಾ ವಿನಿಕೃತಾ ರಾಜನ್ರಾಜ್ಯಸ್ಯ ಹರಣೇನ ಚ||
ವಿಶೇಷವಾಗಿ ನೀನು ನಮ್ಮನ್ನು ಮೋಸದಿಂದ ಸುಡಲು ಪ್ರಯತ್ನಿಸಿದೆ. ಹಾವಿನ ವಿಷವನ್ನುಣ್ಣಿಸಿದೆ. ನೀರಿಗೆ ಕೂಡ ತಳ್ಳಿದೆ!
09030067a ಏತಸ್ಮಾತ್ಕಾರಣಾತ್ಪಾಪ ಜೀವಿತಂ ತೇ ನ ವಿದ್ಯತೇ|
09030067c ಉತ್ತಿಷ್ಠೋತ್ತಿಷ್ಠ ಯುಧ್ಯಸ್ವ ತತ್ತೇ ಶ್ರೇಯೋ ಭವಿಷ್ಯತಿ||
ಪಾಪಿಯೇ! ಈ ಎಲ್ಲ ಕಾರಣಗಳಿಂದ ನೀನು ಜೀವದಿಂದುಳಿಯಲು ಸಾಧ್ಯವಿಲ್ಲ. ಮೇಲೇಳು! ಎದ್ದೇಳು! ಯುದ್ಧಮಾಡು! ಅದರಿಂದಲೇ ನಿನಗೆ ಶ್ರೇಯಸ್ಸುಂಟಾಗುತ್ತದೆ!””
09030068 ಸಂಜಯ ಉವಾಚ
09030068a ಏವಂ ತು ವಿವಿಧಾ ವಾಚೋ ಜಯಯುಕ್ತಾಃ ಪುನಃ ಪುನಃ|
09030068c ಕೀರ್ತಯಂತಿ ಸ್ಮ ತೇ ವೀರಾಸ್ತತ್ರ ತತ್ರ ಜನಾಧಿಪ||
ಸಂಜಯನು ಹೇಳಿದನು: “ಜನಾಧಿಪ! ಜಯಯುಕ್ತ ಆ ವೀರರು ಅಲ್ಲಿ ಪುನಃ ಪುನಃ ಈ ರೀತಿಯ ಮಾತುಗಳನ್ನು ಹೇಳುತ್ತಲೇ ಇದ್ದರು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಸುಯೋಧನಯುಧಿಷ್ಠಿರಸಂವಾದೇ ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಸುಯೋಧನಯುಧಿಷ್ಠಿರಸಂವಾದ ಎನ್ನುವ ಮೂವತ್ತನೇ ಅಧ್ಯಾಯವು.
