Adi Parva: Chapter 44

ಆದಿ ಪರ್ವ: ಆಸ್ತೀಕ ಪರ್ವ

೪೪

ಅಣ್ಣ ವಾಸುಕಿಗೆ ಜರತ್ಕಾರುವು ನಡೆದುದನ್ನು ವರದಿಮಾಡಿದುದು (೧-೧೦). ಆಸ್ತೀಕನ ಜನನ, ವಿದ್ಯಾಭ್ಯಾಸ (೧೧-೨೦).

01044001 ಸೂತ ಉವಾಚ

01044001a ಗತಮಾತ್ರಂ ತು ಭರ್ತಾರಂ ಜರತ್ಕಾರುರವೇದಯತ್|

01044001c ಭ್ರಾತುಸ್ತ್ವರಿತಮಾಗಮ್ಯ ಯಥಾತಥ್ಯಂ ತಪೋಧನ||

ಸೂತನು ಹೇಳಿದನು: “ತಪೋಧನ! ಪತಿಯು ಹೊರಟುಹೋದ ನಂತರ ಜರತ್ಕಾರುವು ತಕ್ಷಣವೇ ತನ್ನ ಅಣ್ಣನಲ್ಲಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದಳು.

01044002a ತತಃ ಸ ಭುಜಗಶ್ರೇಷ್ಠಃ ಶ್ರುತ್ವಾ ಸುಮಹದಪ್ರಿಯಂ|

01044002c ಉವಾಚ ಭಗಿನೀಂ ದೀನಾಂ ತದಾ ದೀನತರಃ ಸ್ವಯಂ||

ಈ ಮಹದಪ್ರಿಯ ಮಾತುಗಳನ್ನು ಕೇಳಿದ ಭುಜಗಶ್ರೇಷ್ಠನು ಸ್ವಯಂ ದೀನತರನಾಗಿ ದೀನಳಾಗಿದ್ದ ತಂಗಿಗೆ ಹೇಳಿದನು:

01044003a ಜಾನಾಸಿ ಭದ್ರೇ ಯತ್ಕಾರ್ಯಂ ಪ್ರದಾನೇ ಕಾರಣಂ ಚ ಯತ್|

01044003c ಪನ್ನಗಾನಾಂ ಹಿತಾರ್ಥಾಯ ಪುತ್ರಸ್ತೇ ಸ್ಯಾತ್ತತೋ ಯದಿ||

“ಭದ್ರೇ! ನಿನ್ನನ್ನು ಅವನಿಗೆ ಯಾವ ಕಾರಣಕ್ಕಾಗಿ ಕೊಟ್ಟಿದ್ದೆವೆಂದು ನಿನಗೆ ತಿಳಿದಿದೆ. ನಾಗಗಳ ಹಿತಕ್ಕೋಸ್ಕರವಾಗಿ ಅವನಿಂದ ನಿನ್ನಲ್ಲಿ ಪುತ್ರನಾಗಬೇಕಿತ್ತು.

01044004a ಸ ಸರ್ಪಸತ್ರಾತ್ಕಿಲ ನೋ ಮೋಕ್ಷಯಿಷ್ಯತಿ ವೀರ್ಯವಾನ್|

01044004c ಏವಂ ಪಿತಾಮಹಃ ಪೂರ್ವಮುಕ್ತವಾನ್ಮಾಂ ಸುರೈಃ ಸಹ||

ಆ ವೀರ್ಯವಂತನು ಸರ್ಪಸತ್ರದಿಂದ ನಮ್ಮನ್ನೆಲ್ಲ ಮೋಕ್ಷಗೊಳಿಸುವನು ಎಂದು ಹಿಂದೆ ನಾನು ಸುರರೊಂದಿಗಿದ್ದಾಗ ಪಿತಾಮಹನು ಹೇಳಿದ್ದನು.

01044005a ಅಪ್ಯಸ್ತಿ ಗರ್ಭಃ ಸುಭಗೇ ತಸ್ಮಾತ್ತೇ ಮುನಿಸತ್ತಮಾತ್|

01044005c ನ ಚೇಚ್ಛಾಮ್ಯಫಲಂ ತಸ್ಯ ದಾರಕರ್ಮ ಮನೀಷಿಣಃ||

ಸುಭಗೇ! ಆ ಮುನಿಸತ್ತಮನಿಂದ ನೀನು ಗರ್ಭವನ್ನು ಧರಿಸಿದ್ದೀಯಾ? ನಿನ್ನ ಈ ಮದುವೆಯು ನಿಷ್ಫಲವಾಗಬಾರದು ಎನ್ನುವುದೇ ನನ್ನ ಇಚ್ಛೆ.

01044006a ಕಾಮಂ ಚ ಮಮ ನ ನ್ಯಾಯ್ಯಂ ಪ್ರಷ್ಟುಂ ತ್ವಾಂ ಕಾರ್ಯಮೀದೃಶಂ|

01044006c ಕಿಂ ತು ಕಾರ್ಯಗರೀಯಸ್ತ್ವಾತ್ತತಸ್ತ್ವಾಹಮಚೂಚುದಂ||

ಈ ವಿಷಯದ ಕುರಿತು ಈ ರೀತಿ ನಿನ್ನನ್ನು ಪ್ರಶ್ನಿಸುವುದು ನಿಜವಾಗಿಯೂ ಸರಿಯಲ್ಲ. ಆದರೂ ವಿಷಯವು ಮಹತ್ತರವಾದುದರಿಂದ ನಿನ್ನಲ್ಲಿ ಈ ರೀತಿ ಕೇಳಬೇಕಾಗಿದೆ.

01044007a ದುರ್ವಾಸತಾಂ ವಿದಿತ್ವಾ ಚ ಭರ್ತುಸ್ತೇಽತಿತಪಸ್ವಿನಃ|

01044007c ನೈನಮನ್ವಾಗಮಿಷ್ಯಾಮಿ ಕದಾಚಿದ್ಧಿ ಶಪೇತ್ಸ ಮಾಂ||

ನಿನ್ನ ಅತಿತಪಸ್ವಿ ಪತಿಯು ಬೇಗ ಸಿಟ್ಟಿಗೇಳುತ್ತಾನೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಆದುದರಿಂದ ಅವನ ಹಿಂದೆ ಹೋಗಲು ಆಗುವುದಿಲ್ಲ. ಅವನು ನನಗೆ ಶಾಪವನ್ನೂ ಕೊಡಬಲ್ಲ.

01044008a ಆಚಕ್ಷ್ವ ಭದ್ರೇ ಭರ್ತುಸ್ತ್ವಂ ಸರ್ವಮೇವ ವಿಚೇಷ್ಟಿತಂ|

01044008c ಶಲ್ಯಮುದ್ಧರ ಮೇ ಘೋರಂ ಭದ್ರೇ ಹೃದಿ ಚಿರಸ್ಥಿತಂ||

ಭದ್ರೇ! ನಿನ್ನ ಮತ್ತು ನಿನ್ನ ಪತಿಯ ನಡುವೆ ನಡೆದುದೆಲ್ಲವನ್ನೂ ಹೇಳಿ ನನ್ನ ಹೃದಯದಲ್ಲಿ ಬಹಳ ಕಾಲದಿಂದ ಹುದುಗಿರುವ ಘೋರ ಶೂಲವನ್ನು ಕಿತ್ತೊಗೆ.”

01044009a ಜರತ್ಕಾರುಸ್ತತೋ ವಾಕ್ಯಮಿತ್ಯುಕ್ತಾ ಪ್ರತ್ಯಭಾಷತ|

01044009c ಆಶ್ವಾಸಯಂತೀ ಸಂತಪ್ತಂ ವಾಸುಕಿಂ ಪನ್ನಗೇಶ್ವರಂ||

ಈ ಮಾತುಗಳನ್ನು ಕೇಳಿದ ಜರತ್ಕಾರುವು ಸಂತಪ್ತ ಪನ್ನಗೇಶ್ವರ ವಾಸುಕಿಯನ್ನು ಸಂತವಿಸುತ್ತಾ ಉತ್ತರಿಸಿದಳು:

01044010a ಪೃಷ್ಟೋ ಮಯಾಪತ್ಯಹೇತೋಃ ಸ ಮಹಾತ್ಮಾ ಮಹಾತಪಾಃ|

01044010c ಅಸ್ತೀತ್ಯುದರಮುದ್ದಿಶ್ಯ ಮಮೇದಂ ಗತವಾಂಶ್ಚ ಸಃ||

“ಮಗುವಿನ ಕುರಿತು ನಾನು ಕೇಳಿದಾಗ ಆ ಮಹಾತಪಸ್ವಿ ಮಹಾತ್ಮನು ನನ್ನ ಉದರವನ್ನು ತೋರಿಸಿ, “ಅಲ್ಲಿ ಇದೆ!” ಎಂದು ಹೇಳಿ ಹೊರಟು ಹೋದನು.

01044011a ಸ್ವೈರೇಷ್ವಪಿ ನ ತೇನಾಹಂ ಸ್ಮರಾಮಿ ವಿತಥಂ ಕ್ವಚಿತ್|

01044011c ಉಕ್ತಪೂರ್ವಂ ಕುತೋ ರಾಜನ್ಸಾಂಪರಾಯೇ ಸ ವಕ್ಷ್ಯತಿ||

ತಮಾಷೆಯಲ್ಲಿಯೂ ಅವನು ಹುಸಿಮಾತನ್ನಾಡಿದ್ದುದು ನೆನಪಿಲ್ಲ. ಹಾಗಿದ್ದಾಗ ರಾಜನ್! ಈ ಮಹತ್ತರ ವಿಷಯದ ಕುರಿತು ಅವನು ಏಕೆ ಸುಳ್ಳಾಡುತ್ತಾನೆ?

01044012a ನ ಸಂತಾಪಸ್ತ್ವಯಾ ಕಾರ್ಯಃ ಕಾರ್ಯಂ ಪ್ರತಿ ಭುಜಂಗಮೇ|

01044012c ಉತ್ಪತ್ಸ್ಯತಿ ಹಿ ತೇ ಪುತ್ರೋ ಜ್ವಲನಾರ್ಕಸಮದ್ಯುತಿಃ||

ಅವನು “ಭುಜಂಗಮೇ! ನಿನ್ನ ಕಾರ್ಯದ ಕುರಿತು ಸಂತಾಪಪಡಬೇಡ. ಅಗ್ನಿ-ಸೂರ್ಯರ ಸಮಾನ ಪ್ರಭೆಯನ್ನುಳ್ಳ ಪುತ್ರನೋರ್ವನು ನಿನ್ನಲ್ಲಿ ಜನಿಸುತ್ತಾನೆ” ಎಂದನು.

01044013a ಇತ್ಯುಕ್ತ್ವಾ ಹಿ ಸ ಮಾಂ ಭ್ರಾತರ್ಗತೋ ಭರ್ತಾ ತಪೋವನಂ|

01044013c ತಸ್ಮಾದ್ವ್ಯೇತು ಪರಂ ದುಃಖಂ ತವೇದಂ ಮನಸಿ ಸ್ಥಿತಂ||

ಅಣ್ಣ! ಹೀಗೆ ಹೇಳಿ ನನ್ನ ಪತಿಯು ತಪೋವನಕ್ಕೆ ಹೊರಟುಹೋದನು. ಆದುದರಿಂದ ನಿನ್ನ ಮನಸ್ಸಿನಲ್ಲಿರುವ ಪರಮ ದುಃಖ ವೇದನೆಯನ್ನು ತೆಗೆದುಹಾಕು.”

01044014a ಏತಚ್ಛ್ರುತ್ವಾ ಸ ನಾಗೇಂದ್ರೋ ವಾಸುಕಿಃ ಪರಯಾ ಮುದಾ|

01044014c ಏವಮಸ್ತ್ವಿತಿ ತದ್ವಾಕ್ಯಂ ಭಗಿನ್ಯಾಃ ಪ್ರತ್ಯಗೃಹ್ಣತ||

ಇದನ್ನು ಕೇಳಿದ ನಾಗೇಂದ್ರ ವಾಸುಕಿಯು ಪರಮ ಹರ್ಷಿತನಾಗಿ “ಹಾಗೆಯೇ ಆಗಲಿ” ಎಂದು ತಂಗಿಯ ಮಾತುಗಳನ್ನು ಸ್ವೀಕರಿಸಿದನು.

01044015a ಸಾಂತ್ವಮಾನಾರ್ಥದಾನೈಶ್ಚ ಪೂಜಯಾ ಚಾನುರೂಪಯಾ|

01044015c ಸೋದರ್ಯಾಂ ಪೂಜಯಾಮಾಸ ಸ್ವಸಾರಂ ಪನ್ನಗೋತ್ತಮಃ||

ಆ ಪನ್ನಗೋತ್ತಮನು ತನ್ನ ಸೋದರಿಯನ್ನು ಸಂತವಿಸಿ, ಗೌರವಿಸಿ, ಉಡುಗೊರೆ, ಮತ್ತು ಇನ್ನೂ ಇತರ ಪೂಜಾ ವಸ್ತುಗಳಿಂದ ಸತ್ಕರಿಸಿದನು.

01044016a ತತಃ ಸ ವವೃಧೇ ಗರ್ಭೋ ಮಹಾತೇಜಾ ರವಿಪ್ರಭಃ|

01044016c ಯಥಾ ಸೋಮೋ ದ್ವಿಜಶ್ರೇಷ್ಠ  ಶುಕ್ಲಪಕ್ಷೋದಿತೋ ದಿವಿ||

ಅವಳಲ್ಲಿರುವ ರವಿಪ್ರಭ ಮಹಾತೇಜಸ್ವಿ ದ್ವಿಜಶ್ರೇಷ್ಠನು ಆಕಾಶದಲ್ಲಿ ಶುಕ್ಲಪಕ್ಷದ ಚಂದ್ರನಂತೆ ಬೆಳೆಯತೊಡಗಿದನು.

01044017a ಯಥಾಕಾಲಂ ತು ಸಾ ಬ್ರಹ್ಮನ್ ಪ್ರಜಜ್ಞೇ ಭುಜಗಸ್ವಸಾ|

01044017c ಕುಮಾರಂ ದೇವಗರ್ಭಾಭಂ ಪಿತೃಮಾತೃಭಯಾಪಹಂ||

ಸಮಯ ಪ್ರಾಪ್ತಿಯಾದಾಗ ನಾಗನ ಸಹೋದರಿಯು ದೇವಗರ್ಭದಂತೆ ಹೊಳೆಯುತ್ತಿದ್ದ ಪಿತೃ ಮತ್ತು ಮಾತೃ ಭಯಾಪಹ ಬ್ರಾಹ್ಮಣ ಕುಮಾರನಿಗೆ ಜನ್ಮವಿತ್ತಳು.

01044018a ವವೃಧೇ ಸ ಚ ತತ್ರೈವ ನಾಗರಾಜನಿವೇಶನೇ|

01044018c ವೇದಾಂಶ್ಚಾಧಿಜಗೇ ಸಾಂಗಾನ್ಭಾರ್ಗವಾಚ್ಚ್ಯವನಾತ್ಮಜಾತ್||

ನಾಗರಾಜನ ಮನೆಯಲ್ಲಿಯೇ ಅವನು ಬೆಳೆದನು ಮತ್ತು ಚ್ಯವನಾತ್ಮಜ ಭಾರ್ಗವನಿಂದ ವೇದ-ವೇದಾಂಗಗಳನ್ನು ಕಲಿತನು.

01044019a ಚರಿತವ್ರತೋ ಬಾಲ ಏವ ಬುದ್ಧಿಸತ್ತ್ವಗುಣಾನ್ವಿತಃ|

01044019c ನಾಮ ಚಾಸ್ಯಾಭವತ್ಖ್ಯಾತಂ ಲೋಕೇಷ್ವಾಸ್ತೀಕ ಇತ್ಯುತ||

ಬಾಲಕನಾಗಿದ್ದರೂ ವ್ರತಗಳನ್ನು ಅನುಸರಿಸುತ್ತಿದ್ದ ಆ ಬುದ್ಧಿವಂತ ಸತ್ವಗುಣಾನ್ವಿತನು ಆಸ್ತೀಕ ಎನ್ನುವ ಹೆಸರಿನಿಂದ ಲೋಕಗಳಲ್ಲೆಲ್ಲಾ ಖ್ಯಾತನಾದನು.

01044020a ಅಸ್ತೀತ್ಯುಕ್ತ್ವಾ ಗತೋ ಯಸ್ಮಾತ್ಪಿತಾ ಗರ್ಭಸ್ಥಮೇವ ತಂ|

01044020c ವನಂ ತಸ್ಮಾದಿದಂ ತಸ್ಯ ನಾಮಾಸ್ತೀಕೇತಿ ವಿಶ್ರುತಂ||

ಅವನು ಇನ್ನೂ ಗರ್ಭದಲ್ಲಿರುವಾಗ ಅವನ ತಂದೆಯು “ಅಸ್ತಿ” ಎಂದು ಹೇಳಿ ಹೊರಟು ಹೋಗಿದ್ದನು. ಆದುದರಿಂದಲೇ ಅವನು ಆಸ್ತೀಕ ಎಂಬ ಹೆಸರಿನಿಂದ ಕರೆಯಲ್ಪಟ್ಟನು.

01044021a ಸ ಬಾಲ ಏವ ತತ್ರಸ್ಥಶ್ಚರನ್ನಮಿತಬುದ್ಧಿಮಾನ್|

01044021c ಗೃಹೇ ಪನ್ನಗರಾಜಸ್ಯ ಪ್ರಯತ್ನಾತ್ಪರ್ಯರಕ್ಷ್ಯತ||

ಬಾಲಕನಾಗಿದ್ದರೂ ಧೃಢನಾಗಿ ಅತಿ ಬುದ್ಧಿವಂತನಾಗಿದ್ದ ಅವನು ಪನ್ನಗರಾಜನ ಮನೆಯಲ್ಲಿ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ಪಡೆದಿದ್ದನು.

01044022a ಭಗವಾನಿವ ದೇವೇಶಃ ಶೂಲಪಾಣಿರ್ಹಿರಣ್ಯದಃ|

01044022c ವಿವರ್ಧಮಾನಃ ಸರ್ವಾಂಸ್ತಾನ್ಪನ್ನಗಾನಭ್ಯಹರ್ಷಯತ್||

ಅವನು ಶೂಲಪಾಣಿ ಹಿರಣ್ಯ ದೇವೇಶ ಭಗವಂತನಂತೆ ತೋರುತ್ತಿದ್ದು ಆ ನಾಗಗಳಿಗೆಲ್ಲ ಸಂತಸವನ್ನು ನೀಡುತ್ತಾ ಬೆಳೆದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಆಸ್ತೀಕೋತ್ಪತ್ತೌ ಚತುಶ್ಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಅಸ್ತೀಕೋತ್ಪತ್ತೌ ಎನ್ನುವ ನಲ್ವತ್ನಾಲ್ಕನೆಯ ಅಧ್ಯಾಯವು.

Comments are closed.