ಶ್ರೀಬ್ರಹ್ಮಾಂಡಮಹಾಪುರಾಣ ಅಧ್ಯಾಯ 5: ಲೋಕಕಲ್ಪನಂ
ಸೂತ ಉವಾಚ । ಆಪೋಽಗ್ರೇ ಸರ್ವಗಾ ಆಸನ್ನೇತನ್ನಸ್ಮಿನ್ಪೃಥಿವೀತಲೇ । ಶಾಂತವಾತೈಃ ಪ್ರಲೀನೇಽಸ್ಮಿನ್ನ ಪ್ರಾಜ್ಞಾಯತ ಕಿಂಚನ ।। 1 ।। ಏಕಾರ್ಣವೇ ತದಾ ತಸ್ಮಿನ್ನಷ್ಟೇ ಸ್ಥಾವರಜಂಗಮೇ । ವಿಭುರ್ಭವತಿ ಸ ಬ್ರಹ್ಮಾ ಸಹಸ್ರಾಕ್ಷಃ ಸಹಸ್ರಪಾತ್ ।। 2 ।। ಸಹಸ್ರಶೀರ್ಷಾ ಪುರುಷೋ ರುಕ್ಮವರ್ಣೋ ಹ್ಯತೀಂದ್ರಿಯಃ । ಬ್ರಹ್ಮ ನಾರಾಯಣಾಖ್ಯಸ್ತು ಸುಷ್ವಾಪ ಸಲಿಲೇ ತದಾ ।। 3 ।। ಸತ್ತ್ವೋದ್ರೇಕಾನ್ನಿಷಿದ್ಧಸ್ತು ಶೂನ್ಯಂ ಲೋಕಮವೈಕ್ಷತ । ಇಮಂ ಚೋದಾಹರಂತ್ಯತ್ರ ಶ್ಲೋಕಂ ನಾರಾಯಣಂ ಪ್ರತಿ ।। 4 ।। ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ । ಅಯನಂ ತಸ್ಯ ತಾಃ ಪ್ರೋಕ್ತಾಸ್ತೇನ ನಾರಾಯಣಃ ಸ್ಮೃತಃ ।। 5 ।।
ಸೂತನು ಹೇಳಿದನು: “ಸೃಷ್ಟಿಯ ಆದಿಯಲ್ಲಿ ಈ ಭೂಮಂಡಲದ ಸರ್ವ ಪ್ರದೇಶಗಳನ್ನೂ ಜಲತತ್ತ್ವವೊಂದೇ ವ್ಯಾಪಿಸಿತ್ತು. ಪ್ರಳಯಕಾಲದ ಶಾಂತವಾಯುಗಳಿಂದ ನಿರ್ವಿಕಾರವಾದ ಜಲತತ್ತ್ವದ ಮುಂದೆ ಬೇರೆ ಯಾವತತ್ತ್ವವೂ ಕಾಣುತ್ತಿರಲಿಲ್ಲ. ಸಮುದ್ರಗಳೆಲ್ಲಾ ಒಂದಾಗಿ ಸ್ಥಾವರಜಂಗಮಗಳೆಲ್ಲವೂ ನಷ್ಟವಾಗಿದ್ದ ಆ ಅವಸ್ಥೆಯಲ್ಲಿ ಸಹಸ್ರನೇತ್ರ, ಸಹಸ್ರಪಾದಗಳಿಂದ ಕೂಡಿದ ಸರ್ವಾತ್ಮಕನಾದ ಭಗವಂತನಿರುತ್ತಾನೆ. ಸಹಸ್ರಶಿರಸ್ಸು, ಪುರುಷಾಕಾರ, ಸುವರ್ಣದಂತೆ ಉಜ್ವಲ ವರ್ಣಗಳಿಂದ ಕೂಡಿದ, ಅತೀಂದ್ರಿಯನಾದ, ಮತ್ತು ನಾರಾಯಣನೆಂಬ ಸಂಜ್ಞಾಂಕಿತನಾದ ಬ್ರಹ್ಮನು ಆ ನೀರಿನಲ್ಲಿ ನಿದ್ರಿಸುತ್ತಿದ್ದನು. ಆ ಪರಮಾತ್ಮನು ಸತ್ತ್ವಗುಣದ ಉದ್ರೇಕದಿಂದ ಕೂಡಿ ಲೋಕವೆಲ್ಲವೂ ಪ್ರಶಾಂತವಾಗಿ ಶೂನ್ಯವಾಗಿರುವುದನ್ನು ನೋಡಿದನು. ಇವನಿಗೆ ನಾರಾಯಣನೆಂಬ ಸಂಜ್ಞೆಯು ಬಂದಿರುವದಕ್ಕೆ ಒಂದು ಶ್ಲೋಕವನ್ನೇ ಉದಾಹರಿಸುತ್ತಾರೆ: ನರಾಕಾರನಾದ ಬ್ರಹ್ಮನ ಸೃಷ್ಟಿಯಲ್ಲಿ ಜಲವು ಮೊದಲನೆಯ ಕಾರ್ಯವಾದ್ದರಿಂದ ಜಲಕ್ಕೆ “ನಾರಾ” ಎಂದು ಕರೆಯುತ್ತಾರೆ. ಆ ಜಲವು ಪರಮಾತ್ಮನ ಹಾಸಿಗೆಯಾದ್ದರಿಂದ ನಾರಾ+ಅಯನ ಇವೆರಡು ಶಬ್ದಗಳು ಸಮಾಸಹೊಂದಿ ನಾರಾಯಣ ಎಂಬ ಸಂಜ್ಞೆಯು ಬಂದಿತು.
ತುಲ್ಯ ಯುಗಸಹಸ್ರಸ್ಯ ವಸನ್ಕಾಲಮುಪಾಸ್ಯತಃ । ಸ್ವರ್ಣಪತ್ರೇ ಪ್ರಕುರುತೇ ಬ್ರಹ್ಮತ್ವಾದರ್ಶ ಕಾರಣಾತ್ ।। 6 ।। ಬ್ರಹ್ಮಾ ತು ಸಲಿಲೇ ತಸ್ಮಿನ್ನವಾಗ್ಭೂತ್ವಾ ತದಾ ಚರನ್ । ನಿಶಾಯಾಮಿವ ಖದ್ಯೋತಃ ಪ್ರಾವೃಟ್ಕಾಲೇ ತತಸ್ತತಃ ।। 7 ।। ತತಸ್ತು ಸಲಿಲೇ ತಸ್ಮಿನ್ ವಿಜ್ಞಾಯಾಂತರ್ಗತೇ ಮಹತ್ । ಅನುಮಾನಾದಸಂಮೂಢೋ ಭೂಮೇರುದ್ಧರಣಂ ಪ್ರತಿ ।। 8 ।। ಓಂಕಾರಾಷ್ಟತನುಂ ತ್ವನ್ಯಾಂ ಕಲ್ಪಾದಿಷು ಯಥಾ ಪುರಾ । ತತೋ ಮಹಾತ್ಮಾ ಮನಸಾ ದಿವ್ಯರೂಪಮಚಿಂತಯತ್ ।। 9 ।। ಸಲಿಲೇಽವಪ್ಲುತಾಂ ಭೂಮಿಂ ದೃಷ್ಟ್ವಾ ಸ ಸಮಚಿಂತಯತ್ । ಕಿಂ ತು ರೂಪಮಹಂ ಕೃತ್ವಾ ಸಲಿಲಾದುದ್ಧರೇ ಮಹೀಮ್ ।। 10 ।। ಜಲಕ್ರೀಡಾಸಮುಚಿತಂ ವಾರಾಹಂ ರೂಪಮಸ್ಮರತ್ ।
ಸಹಸ್ರಯುಗತುಲ್ಯವಾದ ಕಾಲದವರೆಗೆ[1] ಆ ನೀರಿನಲ್ಲಿ ಚಿನ್ನದ ಎಲೆಯಮೇಲೆ ನಿದ್ರಿಸುತ್ತಿದ್ದ ಆ ಭಗವಂತ ಬ್ರಹ್ಮನು ಭೂಮಿಯನ್ನು ಹುಡುಕಲು ಪ್ರಯತ್ನಿಸಿದನು. ಅವನು ಪೂರ್ಣವೂ ವಿಸ್ತಾರವೂ ಆದ ನೀರಿನಲ್ಲಿ ಅಧೋಮುಖನಾಗಿ ಸಂಚರಿಸಿದನು. ಪ್ರಕಾಶರೂಪನಾದ ಪರಮಾತ್ಮನು ಆ ಜಲಗರ್ಭದಲ್ಲಿ ಸಂಚರಿಸುತ್ತಿದ್ದಾಗ ಮಳೆಗಾಲದ ರಾತ್ರಿವೇಳೆಯಲ್ಲಿ ದೀಪದ ಹುಳುಗಳು ಮಿಂಚುವಂತೆ ಕಾಣುತ್ತಿತ್ತು. ಮೋಹಾವರಣವಿಲ್ಲದ ಭಗವಂತನು ನೀರಿನ ಒಳಗಡೆ ಮಹಾ ಭೂಮಿಯು ಮುಳುಗಿರುವುದನ್ನು ನೋಡಿ ಅದನ್ನು ಮೇಲೆತ್ತಲು ಆಲೋಚಿಸಿದನು. ಹಿಂದೆ ಅನ್ಯ ಕಲ್ಪಗಳ ಆದಿಯಲ್ಲಿ ಹೇಗೆ ಮಾಡಿದ್ದನೋ ಹಾಗೆಯೇ ಅವನು ತನ್ನ ತನುವನ್ನು ಉಬ್ಬಿದಂತೆ ಮಾಡಿಕೊಂಡು ಮನಸ್ಸಿನಲ್ಲಿ ದಿವ್ಯರೂಪವುಳ್ಳ ಒಂದು ಆಕಾರವನ್ನು ಯೋಚಿಸಿದನು. ಅಗಾಧವಾದ ನೀರಿನಲ್ಲಿ ಮುಳುಗಿಹೋಗಿದ್ದ ಭೂಮಿಯನ್ನು ಕಂಡು ಯಾವ ರೂಪವನ್ನು ಧರಿಸಿ ಈ ಭೂಮಿಯನ್ನು ಮೇಲಕ್ಕೆತ್ತಲಿ ಎಂದು ಆಲೋಚಿಸಿದನು. ನೀರಿನಲ್ಲಿ ಮುಳುಗಿದ ಭೂಮಿಯನ್ನು ಮೇಲೆತ್ತಲು ಜಲಕ್ರೀಡೆಗೆ ಯೋಗ್ಯವಾದ ವರಾಹ ರೂಪವು ಸಾಧನವೆಂದು ಸ್ಮರಿಸಿಕೊಂಡನು.
ಅದೃಶ್ಯಂ ಸರ್ವಭೂತಾನಾಂ ವಾಙ್ಮಯಂ ಬ್ರಹ್ಮಸಂಜ್ಞಿತಮ್ ।। 11 ।। ದಶಯೋಜನವಿಸ್ತೀರ್ಣಮಾಯತಂ ಶತಯೋಜನಮ್ । ನೀಲಮೇಘಪ್ರತೀಕಾಶಂ ಮೇಘಸ್ತನಿತನಿಃಸ್ವನಮ್ ।। 12 ।। ಮಹಾಪರ್ವತವರ್ಷ್ಮಾಣಂ ಶ್ವೇತತೀಕ್ಷ್ಣೋಗ್ರದಂಷ್ಟ್ರಿಣಮ್ । ವಿದ್ಯುದಗ್ನಿಪ್ರತಿಕಾಶಮಾದಿತ್ಯಸಮತೇಜಸಮ್ ।। 13 ।। ಪೀನವೃತ್ತಾಯತಸ್ಕಂಧಂ ವಿಷ್ಣುವಿಕ್ರಮಗಾಮಿ ಚ । ಪೀನೋನ್ನತ ಕಟೀದೇಶಂ ವೃಷಲಕ್ಷಣಪೂಜಿತಮ್ ।। 14 ।। ಆಸ್ಥಾಯ ರೂಪಮತುಲಂ ವಾರಾಹಮಮಿತಂ ಹರಿಃ । ಪೃಥಿವ್ಯುದ್ಧರಣಾರ್ಥಾಯ ಪ್ರವಿವೇಶ ರಸಾತಲಮ್ ।। 15 ।।
ಆ ದಿವ್ಯ ವರಾಹರೂಪವು ಸರ್ವಪ್ರಾಣಿಗಳಿಗೆ ಅದೃಶ್ಯವೂ, ಅನಾದಿ ವಾಙ್ಮಯವೇದ್ಯವೂ, ಬ್ರಹ್ಮಸಂಜ್ಞೆಯುಳ್ಳದ್ದೂ ಆಗಿತ್ತು. ಹತ್ತು ಯೋಜನ ವಿಸ್ತೀರ್ಣವೂ ನೂರು ಯೋಜನ ಉದ್ದವೂ ಕಾರ್ಮೋಡದಂತೆ ಕಪ್ಪು ಬಣ್ಣದ್ದೂ, ಮೇಘದಂತಹ ಗರ್ಜನೆಯುಳ್ಳದ್ದೂ ಆಗಿತ್ತು. ಅದರ ದೇಹವು ಮಹಾ ಪರ್ವತದಂತೆ ಭಾರಿಪ್ರಮಾಣದ್ದಾಗಿತ್ತು. ಅದರ ಬಿಳಿಯ ಕೋರೆದಾಡೆಗಳು ತೀಕ್ಷ್ಣವಾಗಿಯೂ ಕ್ರೂರವಾಗಿಯೂ ಇದ್ದವು. ಆ ರೂಪದಲ್ಲಿ ಮಿಂಚಿನಂಥಹ ಜ್ವಾಲೆಯೂ ಆದಿತ್ಯನಂತೆ ಥಳಥಳಿಸುವ ತೇಜಃಪುಂಜವೂ ಅಡಗಿತ್ತು. ಅದು ಸ್ಥೂಲ-ವರ್ತುಲ-ದೀರ್ಘ ಸ್ಕಂಧದಿಂದಲೂ, ವಾಮನಾವತಾರದ ವಿಕ್ರಮದಿಂದಲೂ, ಸ್ಥೂಲ-ಉನ್ನತ ಕಟಿದೇಶದಿಂದಲೂ, ವೃಷಭ[2] ಲಕ್ಷಣಗಳಿಂದಲೂ ಕೂಡಿತ್ತು. ಹರಿಯು ಅಂತಹ ನಿರುಪಮವಾದ ವರಾಹರೂಪವನ್ನು ಧರಿಸಿ ಪೃಥ್ವಿಯನ್ನು ಮೇಲಕ್ಕೆತ್ತಲು ರಸಾತಲವನ್ನು ಪ್ರವೇಶಿಸಿದನು.
ದೀಕ್ಷಾಸಮಾಪ್ತೀಷ್ವಿದಂಷ್ಟ್ರಃ ಕ್ರತುದಂತೋ ಜುಹೂಸುಖಃ । ಅಗ್ನಿಜಿಹ್ವೋ ದರ್ಭರೋಮಾ ಬ್ರಹ್ಮಶೀರ್ಷೋ ಮಹಾತಪಾಃ ।। 16 ।। ವೇದಸ್ಕಂಧೋ ಹವಿರ್ಗಂಧಿರ್ಹವ್ಯಕವ್ಯಾದಿವೇಗವಾನ್ । ಪ್ರಾಗ್ವಂಶಕಾಯೋ ದ್ಯುತಿಮಾನ್ ನಾನಾದೀಕ್ಷಾಭಿರನ್ವಿತಃ ।। 17 ।। ದಕ್ಷಿಣಾಹೃದಯೋ ಯೋಗೀ ಶ್ರದ್ಧಾಸತ್ತ್ವಮಯೋ ವಿಭುಃ । ಉಪಾಕರ್ಮರುಚಿಶ್ಚೈವ ಪ್ರವರ್ಗ್ಯಾವರ್ತಭೂಷಣಃ ।। 18 ।। ನಾನಾಛಂದೋಗತಿಪಥೋ ಗುಹ್ಯೋಪನಿಷದಾಸನಃ । ಮಾಯಾಪತ್ನೀಸಹಾಯೋ ವೈ ಗಿರಿಶೃಂಗಮಿವೋಚ್ಛ್ರಯಃ ।। 19 ।।
ಆ ವರಾಹದ ದಂಷ್ಟ್ರಗಳು ದೀಕ್ಷಾಸಮಾಪ್ತಿಯಲ್ಲಿ ಮಾಡುವ ಇಷ್ಟಿಗಳಂತಿದ್ದವು[3]. ಹಲ್ಲುಗಳು ಕ್ರತುಗಳಂತೆಯೂ, ಮುಖವು ಜುಹೂ ಎಂಬ ಯಜ್ಞಪಾತ್ರೆಯಂತೆಯೂ, ನಾಲಿಗೆಯು ಅಗ್ನಿಯಾಗಿಯೂ, ರೋಮಗಳು ದರ್ಭೆಗಳಾಗಿಯೂ, ತಲೆಯು ಬ್ರಹ್ಮದಂತೆಯೂ ತೋರುತ್ತಿದ್ದು ಅದು ಒಂದು ಮಹಾ ತಪಸ್ವಿಯಂತೆ ಕಾಣುತ್ತಿತ್ತು. ವೇದಗಳೆಂಬ ಸ್ಕಂಧ, ಆಜ್ಯಾದಿ ಹವಿಸ್ಸುಗಳ ಗಂಧ, ಹವ್ಯಕವ್ಯಗಳಿಗಾಗುವ ರೂಪಾಂತರವೆಂಬ ವೇಗ, ಪ್ರಾಗ್ವಂಶವೆಂಬ ಯಜ್ಞಶಾಲಾ ಭೂಮಿ ಸ್ವರೂಪವಾದ ದೇಹ[4], ಉತ್ತಮವಾದ ಕಾಂತಿ, ವಿವಿಧ ದೀಕ್ಷಾವಿಧಿ – ಇವುಗಳಿಂದ ಕೂಡಿಕೊಂಡಿತ್ತು. ಯೋಗಿಯೂ ವಿಭುವೂ ಆದ ಆ ರೂಪಕ್ಕೆ ಯಜ್ಞಾಂಗ ದಕ್ಷಿಣೆಯು ಹೃದಯವಾಗಿತ್ತು. ಶ್ರದ್ಧೆಯು ಸತ್ತ್ವವಾಗಿತ್ತು. ಪಶೂಪಾಕರಣ[5]ವು ರುಚಿಯಾಗಿತ್ತು. ಮತ್ತು ಪ್ರವರ್ಗ್ಯಕರ್ಮದ ಆವೃತ್ತಿಯು ಭೂಷಣವಾಗಿತ್ತು. ನಾನಾ ಛಂದಸ್ಸುಗಳು ಸಂಚಾರಮಾರ್ಗವಾಗಿದ್ದವು, ರಹಸ್ಯೋಪನಿಷತ್ತುಗಳು ಪೀಠವಾಗಿತ್ತು. ಮಾಯೆಯು ಸಹಾಯಕ ಪತ್ನಿಯಾಗಿದ್ದಳು. ಆ ರೂಪವು ಪರ್ವತಶಿಖರದಂತೆ ಅತಿಶಯವಾಗಿ ಉನ್ನತವಾಗಿತ್ತು.
ಅಹೋರಾತ್ರೇಕ್ಷಣಧರೋ ವೇದಾಂಗಶ್ರುತಿಭೂಷಣಃ । ಆಜ್ಯಗಂಧಃ ಸ್ರುವಸ್ತುಂಡಃ ಸಾಮಘೋಷಸ್ವನೋ ಮಹಾನ್ ।। 20 ।। ಸತ್ಯಧರ್ಮಮಯಃ ಶ್ರೀಮಾನ್ ಕರ್ಮವಿಕ್ರಮಸತ್ಕೃತಃ । ಪ್ರಾಯಶ್ಚಿತ್ತನಖೋ ಘೋರಃ ಪಶುಜಾನುರ್ಮಹಾಮಖಃ ।। 21 ।। ಉದ್ಗಾತಾಂತ್ರೋ ಹೋಮಲಿಂಗಃ ಫಲಬೀಜಮಹೋಷಧೀಃ । ವಾದ್ಯಂತರಾತ್ಮಸತ್ರಸ್ಯ ನಾಸ್ಮಿಕಸೋಮಶೋಣಿತಃ ।। 22 ।। ಭಕ್ತಾ ಯಜ್ಞವರಾಹಾಂತಾ ಚಾಪಃ ಸಂಪ್ರಾವಿಶತ್ಪುನಃ । ಅಗ್ನಿಸಂಛಾದಿತಾಂ ಭೂಮಿಂ ಸಮಾಮಿಚ್ಛನ್ಪ್ರಜಾಪತಿಮ್ ।। 23 ।।
ಹಗಲು-ರಾತ್ರಿಗಳು ಅದರ ಕಣ್ಣುಗಳಾಗಿದ್ದವು. ವೇದಾಂಗಗಳು ಕರ್ಣಭೂಷಣಗಳಾಗಿದ್ದವು. ಅದರ ಗಂಧವು ಆಜ್ಯದ ಗಂಧದಂತಿತ್ತು. ಮುಖವು ಸ್ರುವವೆಂಬ ಯಜ್ಞಪಾತ್ರೆಯಂತಿತ್ತು. ಅದರ ಉಚ್ಛಧ್ವನಿಯು ಸಾಮಘೋಷದಂತೆ ಗಂಭೀರವಾಗಿತ್ತು. ಸತ್ಯವೇ ಅದರ ಅಸಾಧಾರಣ ಧರ್ಮವಾಗಿತ್ತು. ಸತ್ಕರ್ಮವು ಅದರ ವಿಕ್ರಮವಾಗಿತ್ತು. ಪ್ರಾಯಶ್ಚಿತ್ತಗಳು ನಖಗಳಾಗಿದ್ದವು. ಯಜ್ಞದ್ರವ್ಯವಾದ ಪಶುವು ಮೊಣಕಾಲಾಗಿತ್ತು. ಹೀಗೆ ಆ ಉತ್ಕೃಷ್ಟ ವರಾಹರೂಪವು ಮಹಾಯಜ್ಞರೂಪವಾಗಿತ್ತು. ಉದ್ಗಾತ ಎಂಬ ಋತ್ವಿಜನು ಅದರ ಮೂಳೆ, ಹೋಮವು ಅದರ ಲಿಂಗಸ್ಥಾನ, ಫಲವೇ ಬೀಜಗಳಾಗಿದ್ದವು. ಓಷಧಿಗಳು ಅದರ ಆಹಾರವಾಗಿದ್ದವು, ಮತ್ತು ಸೋಮರಸವು ಅದರ ರಕ್ತವಾಗಿತ್ತು. ಭಕ್ತರೇ! ಆ ಯಜ್ಞಸ್ವರೂಪೀ ವರಾಹರೂಪತಾಳಿದ ಆ ಪ್ರಜಾಪತಿ ಭಗವಂತನು ನೀರಿನಿಂದ ಮುಚ್ಚಿಹೋಗಿದ್ದ ಭೂಮಿಯನ್ನು ಎತ್ತಿ ಸಮಮಾಡಲು ಇಚ್ಛಿಸಿ ನೀರಿನೊಳಗೆ ಪ್ರವೇಶಿಸಿದನು.
ಉಪಗಮ್ಯಾ ಜುಹಾವೈತಾ ಮದ್ಯಶ್ಚಾದ್ಯಸಮನ್ಯಸತ್ । ಸಾಮುದ್ರಾಶ್ಚ ಸಮುದ್ರೇಷು ನಾದೇಯಾಶ್ಚ ನದೀಷು ಚ । ಪೃಥಕ್ತಾಸ್ತು ಸಮೀಕೃತ್ಯ ಪೃಥಿವ್ಯಾಂ ಸೋಽಚಿನೋದ್ಗಿರೀನ್ ।। 24 ।। ಪ್ರಾಕ್ಸರ್ಗೇ ದಹ್ಯಮಾನಾಸ್ತು ತದಾ ಸಂವರ್ತಕಾಗ್ನಿನಾ । ತೇನಾಗ್ನಿನಾ ವಿಲೀನಾಸ್ತೇ ಪರ್ವತಾ ಭುವಿ ಸರ್ವಶಃ ।। 25 ।। ಸತ್ಯಾದೇಕಾರ್ಣವೇ ತಸ್ಮಿನ್ ವಾಯುನಾ ಯತ್ತು ಸಂಹಿತಾಃ । ನಿಷಿಕ್ತಾ ಯತ್ರ ಯತ್ರಾಸಂಸ್ತತ್ರ ತತ್ರಾಚಲೋಽಭವತ್ ।। 26 ।। ತತಸ್ತೇಷು ಪ್ರಕೀರ್ಣೇಷು ಲೋಕೋದಧಿಗಿರೀಂಸ್ತಥಾ । ವಿಶ್ವಕರ್ಮಾ ವಿಭಜತೇ ಕಲ್ಪಾದಿಷು ಪುನಃ ಪುನಃ ।। 27 ।। ಸಸಮುದ್ರಾಮಿಮಾಂ ಪೃಥ್ವೀಂ ಸಪ್ತದ್ವೀಪಾಂ ಸಪರ್ವತಾಮ್ । ಭೂರಾದ್ಯಾಂಶ್ಚತುರೋ ಲೋಕಾನ್ಪುನಃ ಪುನರಕಲ್ಪಯತ್ ।। 28 ।।
ಹಾಗೆ ಪ್ರವೇಶಿಸಿ ಭೂಮಿಯ ಬಳಿಹೋಗಿ ಆಹ್ವಾನಿಸಿ ಮೇಲಕ್ಕೆತ್ತಿದನು. ಆಗ ಸಮುದ್ರ-ನದಿಗಳಲ್ಲಿ ಇರಬೇಕಾದ ನೀರನ್ನು ಅಲ್ಲಿಯೇ ಇರಿಸಿ, ಸೃಷ್ಟಿಯ ಸಮಯದಲ್ಲಿ ಇರಬೇಕಾದ ಕ್ರಮದಂತೆ ಸರಿಪಡಿಸಿ, ದೃಢವಾಗಿ ಇರಿಸಲು ಪರ್ವತಗಳನ್ನು ಹುಡುಕಿದನು. ಹಿಂದಿನ ಸೃಷ್ಟಿಯಲ್ಲಿದ್ದ ಪರ್ವತಗಳು ಪ್ರಲಯದ ಸಂವರ್ತಕಾಗ್ನಿಯಿಂದ ಸುಡಲ್ಪಟ್ಟು ಕರಗಿ ನೀರಾಗಿ ಹೋಗಿದ್ದವು. ಪ್ರಳಯಕಾಲದಲ್ಲಿ ಏಕಾರ್ಣವವಾಗಿದ್ದ ಆ ಪರ್ವತದ್ರವವು ವಾಯುವಿನಿಂದ ಒಂದು ಕಡೆ ಸೇರಿಸಲ್ಪಟ್ಟು ಅಲ್ಲಲ್ಲಿ ಪರ್ವತಗಳಾದವು. ಹೀಗೆ ಅಲ್ಲಲ್ಲಿ ಚದುರಿಹೋಗಿದ್ದ ಸ್ಥಳ, ಜಲ ಮತ್ತು ಪರ್ವತಗಳನ್ನು ಆ ವಿಶ್ವಕರ್ಮಿ ವರಾಹರೂಪನು ಪ್ರತಿಯೊಂದು ಕಲ್ಪದ ಆದಿಯಲ್ಲಿಯೂ ಪುನಃ ಪುನಃ ಮೊದಲಿನಂತೆಯೇ ವಿಭಾಗ ಮಾಡುತ್ತಾನೆ. ಪರ್ವತಗಳೊಂದಿಗೆ ಸಪ್ತದ್ವೀಪಗಳನ್ನೂ[6], ಸಪ್ತಸಮುದ್ರಗಳನ್ನೂ[7], ಭೂಮಿಯೇ ಮೊದಲಾದ ಚತುರ್ಲೋಕಗಳನ್ನೂ ಪುನಃ ಪುನಃ ರಚಿಸುತ್ತಾನೆ.
ಲೋಕಾನ್ಪ್ರಕಲ್ಪಯಿತ್ವಾ ಚ ಪ್ರಜಾಸರ್ಗಂ ಸಸರ್ಜ ಹ । ಬ್ರಹ್ಮಾ ಸ್ವಯಂಭೂರ್ಭಗವಾನ್ ಸಿಸೃಕ್ಷುರ್ವಿವಿಧಾಃ ಪ್ರಜಾಃ ।। 29 ।। ಸಸರ್ಜ ಸೃಷ್ಟಂ ತದ್ರೂಪಂ ಕಲ್ಪಾದಿಷು ಯಥಾ ಪುರಾ ।। 30 ।। ತಸ್ಯಾಭಿಧ್ಯಾಯತಃ ಸರ್ಗಂ ತದಾ ವೈ ಬುದ್ಧಿಪೂರ್ವಕಮ್ । ಪ್ರಧಾನಸಮಕಾಲೇ ಚ ಪ್ರಾದುರ್ಭೂತಸ್ತಮೋಮಯಃ ।। 31 ।। ತಮೋಮೋಹೋ ಮಹಾಮೋಹಸ್ತಾಮಿಸ್ರೋಽಹ್ಯಂಧಸಂಜ್ಞಿತಃ । ಅವಿದ್ಯಾ ಪಂಚಪರ್ವೈಷಾ ಪ್ರಾದುರ್ಭೂತಾ ಮಹಾತ್ಮನಃ ।। 32 ।। ಪಂಚಧಾವಸ್ಥಿತಃ ಸರ್ಗೋ ಧ್ಯಾಯತಃ ಸಾಭಿಮಾನಿನಃ । ಸರ್ವತಸ್ತಮಸಾ ಚೈವ ಬೀಜಕುಂಭಲತಾವೃತಾಃ ।। 33 ।। ಬಹಿರಂತಶ್ಚಾಪ್ರಕಾಶಸ್ತಥಾ ನಿಃಸಂಜ್ಞ ಏವ ಚ । ಯಸ್ಮಾತ್ತೇಷಾಂ ಕೃತಾ ಬುದ್ಧಿಃ ದುಃಖಾನಿ ಕರಣಾನಿ ಚ ।। 34 ।। ತಸ್ಮಾಚ್ಚ ಸಂವೃತಾತ್ಮಾನೋ ನಗಾ ಮುಖ್ಯಾಃ ಪ್ರಕೀರ್ತಿತಾಃ । ಮುಖ್ಯಸರ್ಗೇ ತದೋದ್ಭೂತಂ ದೃಷ್ಟ್ವಾ ಬ್ರಹ್ಮಾತ್ಮಸಂಭವಃ ।। 35 ।। ಅಪ್ರತೀಸಮನಾಃ ಸೋಽಥ ತದೋತ್ಪತ್ತಿಮಮನ್ಯತ ।
ಹೀಗೆ ಲೋಕಗಳನ್ನು ನಿರ್ಮಿಸಿ ಪ್ರಜೆಗಳನ್ನು ಸೃಷ್ಟಿಸಿದನು. ಅನಾದಿಯಾದ ಭಗವಂತ ಬ್ರಹ್ಮದೇವನು ವಿವಿಧ ಪ್ರಜೆಗಳನ್ನು ಸೃಷ್ಟಿಸಲು ಬಯಸಿ ಹಿಂದಿನ ಕಲ್ಪದಲ್ಲಿ ಯಾವ ಜಾತಿಯ ಪ್ರಜೆಗಳಿಗೆ ಯಾವ ರೂಪಗಳಿದ್ದವೋ ಅವುಗಳನ್ನು ನೆನಪಿಸಿಕೊಂಡು ಅದರಂತೆಯೇ ಸೃಷ್ಟಿಕಾರ್ಯವನ್ನು ಅನುಸರಿಸಿದನು. ಸೃಷ್ಟಿಸುವ ಸಂಕಲ್ಪದಿಂದ ಕೂಡಿದ ಬ್ರಹ್ಮದೇವನಿಗೆ ಅಬುದ್ಧಿಪೂರ್ವಕವಾಗಿ ಪ್ರಧಾನ ತಾದಾತ್ಮ್ಯದಿಂದ ತಮೋಮಯರೂಪವು ಪ್ರಾಪ್ತವಾಯಿತು. ಅವಿದ್ಯೆಯ ಒಂದು ಮುಖ್ಯ ಆಕಾರವಾದ ತಮಸ್ಸಿಗೆ ಐದು ಮುಖ್ಯ ರೂಪಗಳಿವೆ – ತಮಸ್ಸು, ಮೋಹ, ಮಹಾಮೋಹ, ತಾಮಿಸ್ರ ಮತ್ತು ಅಂಧತಾಮಿಸ್ರ. ಸೃಷ್ಟಿಕರ್ಮದ ಕರ್ತೃತ್ವ ಅಭಿಮಾನದಿಂದ ಕೂಡಿದ ಬ್ರಹ್ಮದೇವನಿಂದಾದ ಪ್ರಪಂಚ ಸೃಷ್ಟಿಯು ಬೀಜ, ಕುಂಭ, ಲತೆಗಳು, ಮೇಲಿನ ಸಿಪ್ಪೆ ಮೊದಲಾದ ಮೇಲ್ಭಾಗದ ಆವರಣಗಳಿಂದ ಮುಚ್ಚಿಹೋದಂತೆ ಸರ್ವಾಂಶದಲ್ಲಿಯೂ ತಮಸ್ಸಿನಿಂದ ಮುಚ್ಚಿಹೋಗಿದೆ. ಆದ್ದರಿಂದ ಈ ಬ್ರಹ್ಮನ ತಮೋರೂಪದಿಂದ ಸೃಷ್ಟಿಸಲ್ಪಟ್ಟ ವಸ್ತುಗಳೆಲ್ಲವೂ ಒಳ-ಹೊರಭಾಗಗಳಲ್ಲಿ ಸ್ವಲ್ಪವೂ ಪ್ರಕಾಶವಿಲ್ಲದೇ ಕೊನೆಗೆ ಚೈತನ್ಯವೂ ಇಲ್ಲದಂತೆ ಆಗಿವೆ. ಈ ಸೃಷ್ಟಿಯಲ್ಲಿ ದುಃಖಮಯ ಕರಣಗಳೂ ದುಃಖಾನುಭವವೂ ಸೇರಿಕೊಂಡಿದ್ದರಿಂದ ಅತ್ಮಸ್ವರೂಪವು ಸಂಪೂರ್ಣವಾಗಿ ಮುಚ್ಚಿಹೋಗಿ “ನಗ” ಗಳೆಂದು ಕರೆಯಲ್ಪಟ್ಟಿವೆ. ಇಂಥಹ “ಮುಖ್ಯಸೃಷ್ಟಿ”ಯನ್ನು ಕಂಡು ಸ್ವಯಂಭು ಬ್ರಹ್ಮನು ತೃಪ್ತನಾಗದೇ ಪುನಃ ಸೃಷ್ಟಿಧ್ಯಾನದಲ್ಲಿ ನಿರತನಾದನು.
ತಸ್ಯಾಭಿಧ್ಯಾಯತಶ್ಚಾನ್ಯಸ್ತಿರ್ಯಕ್ಸ್ರೋತೋಽಭ್ಯವರ್ತತ । ಯಸ್ಮಾತ್ತಿರ್ಯಗ್ವಿವರ್ತ್ತೇತ ತಿರ್ಯಕ್ಸ್ರೋತಸ್ತತಃ ಸ್ಮೃತಃ ।। 36 ।। ತಮೋಬಹುತ್ವಾತ್ತೇ ಸರ್ವೇ ಹ್ಯಜ್ಞಾನಬಹುಲಾಃ ಸ್ಮೃತಾಃ । ಉತ್ಪಾದ್ಯಗ್ರಾಹಿಣಶ್ಚೈವ ತೇಽಜ್ಞಾನೇ ಜ್ಞಾನಮಾನಿನಃ ।। 37 ।। ಅಹಂಕೃತಾ ಅಹಂಮಾನಾ ಅಷ್ಟಾವಿಂಶದ್ದ್ವಿಧಾತ್ಮಿಕಾಃ । ಏಕಾದಶಂದ್ರಿಯವಿಧಾ ನವಧಾತ್ಮಾದಯಸ್ತಥಾ ।। 38 ।। ಅಷ್ಟೌ ತು ತಾರಕಾದ್ಯಾಶ್ಚ ತೇಷಾಂ ಶಕ್ತಿವಧಾಃ ಸ್ಮೃತಾಃ । ಅಂತಃ ಪ್ರಕಾಶಾಸ್ತೇ ಸರ್ವೇ ಆವೃತಾಶ್ಚ ಬಹಿಃ ಪುನಃ ।। 39 ।। ತಿರ್ಯಕ್ಸ್ರೋತಸ ಉಚ್ಯಂತೇ ವಶ್ಯಾತ್ಮಾನಸ್ತ್ರಿಸಂಜ್ಞಕಾಃ ।। 40 ।। ತಿರ್ಯಕ್ಸ್ರೋತಸ್ತು ಸೃಷ್ಟ್ವಾ ವೈ ದ್ವಿತೀಯಂ ವಿಶ್ವಮೀಶ್ವರಃ ।
ಹೀಗೆ ಧ್ಯಾನಿಸುತ್ತಿದ್ದ ಬ್ರಹ್ಮದೇವನಿಂದ ತಿರ್ಯಕ್ (ಅಡ್ಡವಾದ) ಸೃಷ್ಟಿಪ್ರವಾಹವು ಹರಿಯಿತು. ಆ ಸೃಷ್ಟಿಗೆ ಸೇರಿದ ಎಲ್ಲವೂ ಅಡ್ಡಲಾಗಿ ಹರಿಯುವ ಸ್ವಭಾವವುಳ್ಳದ್ದಾದ್ದರಿಂದ ಹಾಗೆ ಆದ ಸೃಷ್ಟಿರ್ಯನ್ನು ತಿರ್ಯಕ್ ಸ್ರೋತವೆಂದು ಕರೆಯುತ್ತಾರೆ. ಅವೆಲ್ಲವೂ ತಮೋಗುಣದ ಬಹುತ್ವದಿಂದ ಅಜ್ಞಾನ ಪರಿಪೂರ್ಣಗಳೆಂದೂ, ಬಿಸಿಲು-ಮಳೆ ಮೊದಲಾದವುಗಳನ್ನು ಸಹಿಸಿಕೊಳ್ಳುವ ಪ್ರಾಣಿಗಳೆಂದೂ, ಅಜ್ಞಾನಾವಸ್ಥೆಯಲ್ಲಿಯೂ ಜ್ಞಾನ-ಅಭಿಮಾನವುಳ್ಳವುಗಳೆಂದು ವರ್ಣಿತವಾಗಿವೆ. ಅಹಂಕಾರ-ಅಭಿಮಾನಗಳಿಂದ ಕೂಡಿದ ಸೃಷ್ಟಿಯು ಇಪ್ಪತ್ತೆಂಟು ವಿಧಗಳಾಗಿ ವಿಭಜಿತಗೊಂಡಿವೆ: ಹನ್ನೊಂದು ಇಂದ್ರಿಯಗಳು,[8] ಅತ್ಮಾದಿ ಒಂಬತ್ತು[9] ಮತ್ತು ತಾರಕಾದಿ ಎಂಟು ಶಕ್ತಿವಧೆಗಳು. ಅಂತಃಪ್ರಕಾಶವುಳ್ಳವುಗಳಾದರೂ ಸಂಪೂರ್ಣ ಬಾಹ್ಯಾವರಣಗಳಿರುವುದರಿಂದ ಇವುಗಳೆಲ್ಲವೂ ಅಸ್ವತಂತ್ರವಾದ ಮೂಕಪ್ರಾಣಿಗಳೆಂಬ ಸಂಜ್ಞೆಯಿರುವ ತಿರ್ಯಕ್ ಸ್ರೋತಗಳೆಂದು ಕರೆಯಲ್ಪಟ್ಟಿವೆ. ತಿರ್ಯಕ್ಸ್ತ್ರೋತಸ್ಸೆಂಬ ಈ ಎರಡನೆಯ ಸೃಷ್ಟಿಯಾದ ನಂತರ ಈಶ್ವರನು ಮತ್ತೊಂದು ಸೃಷ್ಟಿಮಾಡಬೇಕೆಂಬ ಮನಸ್ಸುಮಾಡಿದನು.
ಅಭಿಪ್ರಾಯಮಥೋದ್ಭೂತಂ ದೃಷ್ಟ್ವಾ ಸರ್ಗಂ ತಥಾವಿಧಮ್ ।। 41 ।। ತಸ್ಯಾಭಿಧ್ಯಾಯತೋ ಯೋಂತ್ಯಃ ಸಾತ್ತ್ವಿಕಃ ಸಮಜಾಯತ । ಊರ್ದ್ಧಸ್ರೋತಸ್ತೃತೀಯಸ್ತು ತದ್ವೈ ಚೋರ್ಧ್ವಂ ವ್ಯವಸ್ಥಿತಮ್ ।। 42 ।। ಯಸ್ಮಾದೂರ್ಧ್ವಂ ನ್ಯವರ್ತಂತ ತದೂರ್ಧ್ವಸ್ರೋತಸಂಜ್ಞಕಮ್ । ತಾಃ ಸುಖಂ ಪ್ರೀತಿ ಬಹುಲಾ ಬಹಿರಂತಶ್ಚ ವಾವೃತಾಃ ।। 43 ।। ಪ್ರಕಾಶಾ ಬಹಿರಂತಶ್ಚ ಊರ್ಧ್ವಸ್ರೋತಃಪ್ರಜಾಃ ಸ್ಮೃತಾಃ । ನವಧಾತಾದಯಸ್ತೇ ವೈ ತುಷ್ಟಾತ್ಮಾನೋ ಬುಧಾಃ ಸ್ಮೃತಾಃ ।। 44 ।। ಊರ್ಧ್ವಸ್ರೋತಸ್ತೃತೀಯೋ ಯಃ ಸ್ಮೃತಃ ಸರ್ವಃ ಸ ದೈವಿಕಃ । ಊರ್ಧ್ವಸ್ರೋತಸ್ಸು ಸೃಷ್ಟೇಷು ದೇವೇಷು ಸ ತದಾ ಪ್ರಭುಃ । ಪ್ರೀತಿಮಾನಭವದ್ಬ್ರಹ್ಮಾ ತತೋಽನ್ಯಂ ನಾಭಿಮನ್ಯತ ।। 45 ।।
ಹೀಗೆ ಧಾನಿಸಲು ಅವನಿಂದ ಮೂರನೆಯ ಸತ್ತ್ವಗುಣ ಪರಿಪೂರ್ಣವಾದ ಸೃಷ್ಟಿಯು ಪ್ರಾದುರ್ಭವಿಸಿತು. ಆ ಸೃಷ್ಟಿಯು ಎಲ್ಲ ಸೃಷ್ಟಿಗಳಿಗಿಂತಲೂ ಊರ್ಧ್ವಸ್ಥಾನದಲ್ಲಿ ಇರುವುದರಿಂದ ಅದಕ್ಕೆ ಊರ್ಧ್ವಸ್ರೋತವೆಂಬ ಹೆಸರಾಯಿತು. ಈ ಸೃಷ್ಟಿಯಲ್ಲಿ ಆದವರು ಸುಖ-ಸಂತೋಷಗಳಿಂದ ಪರಿಪೂರ್ಣರೂ, ಅಂತರಂಗ-ಬಹಿರಂಗಗಳಲ್ಲಿ ಆವರಣಗಳಿಲ್ಲದವರೂ ಆದರು. ಊರ್ಧ್ವಸ್ತ್ರೋತ ಪ್ರಜೆಗಳು ಅಂತರಂಗ-ಬಹಿರಂಗಗಳೆರಡರಲ್ಲೂ ಪ್ರಕಾಶಮಯರಾದರು. ಅವರು ನವಬ್ರಹ್ಮರೇ ಮೊದಲಾದ ಸತತವೂ ಸಂತುಷ್ಟಚಿತ್ತರಾದ ಬುಧರೆಂದು ಕರೆಯಲ್ಪಟ್ಟರು. ಈ ರೀತಿಯ ಮೂರನೆಯದಾದ ದೇವಗಣ ಸೃಷ್ಟಿಯೆಂಬ ಊರ್ಧ್ವಸ್ರೋತ ಸೃಷ್ಟಿಯು ಮುಗಿದ ನಂತರ ಬ್ರಹ್ಮದೇವನು ಸೃಷ್ಟಿಯ ವಿಷಯದಲ್ಲಿ ತೃಪ್ತನಾಗಿ ಬೇರೆ ಸೃಷ್ಟಿಯನ್ನು ಮಾಡಬಯಸಲಿಲ್ಲ.
ಸರ್ಗಮನ್ಯಂ ಸಿಸೃಕ್ಷುಸ್ತಂ ಸಾಧಕಂ ಪುನರೀಶ್ವರಃ ।। 46 ।। ತಸ್ಯಾಭಿಧ್ಯಾಯತಃ ಸರ್ಗಂ ಸತ್ಯಾಭಿಧ್ಯಾಯಿನಸ್ತದಾ । ಪ್ರಾದುರ್ಬಭೌ ಭೌತಸರ್ಗಃ ಸೋಽರ್ವಾಕ್ಸ್ರೋತಸ್ತು ಸಾಧಕಃ ।। 47 ।। ಯಸ್ಮಾತ್ತೇರ್ವಾಕ್ಪ್ರವರ್ತಂತೇ ತತೋಽರ್ವಾಕ್ಸ್ರೋತಸಸ್ತು ತೇ । ತೇ ಚ ಪ್ರಕಾಶಬಹುಲಾಸ್ತಮಸ್ಪೃಷ್ಟರಜೋಽಧಿಕಾಃ ।। 48 ।। ತಸ್ಮಾತ್ತೇ ದುಃಖಬಹುಲಂ ಭೂಯೋ ಭೂಯಶ್ಚ ಕಾರಿಣಃ । ಪ್ರಕಾಶಾ ಬಹಿರಂತಶ್ಚ ಮನುಷ್ಯಾಃ ಸಾಧಕಾಶ್ಚ ತೇ ।। 49 ।। ಲಕ್ಷಣೈರ್ನಾರಕಾದ್ಯೈಸ್ತೈರಷ್ಟಧಾ ಚ ವ್ಯವಸ್ಥಿತಾಃ । ಸಿದ್ಧಾತ್ಮಾನೋ ಮನುಷ್ಯಾಸ್ತೇ ಗಂಧರ್ವೈಃ ಸಹಧರ್ಮಿಣಃ ।। 50 ।।
ಪುನಃ ಅನ್ಯ ಸಾಧಕ ಸೃಷ್ಟಿಯನ್ನು ಮಾಡಬಯಸಿದ ಈಶ್ವರನು ಸೃಜ್ಯಪ್ರಾಣಿಗಳ ಪೂರ್ವಕರ್ಮವನ್ನು ಸ್ಮರಿಸಿ ಸೃಷ್ಟಿಯನ್ನು ಧ್ಯಾನಿಸಲು ಅವನಿಂದ ಭೌತಸರ್ಗವೆಂಬ ಅರ್ವಾಕ್ ಸ್ರೋತಗಳ ಸಾಧಕ ಸೃಷ್ಟಿಯಾಯಿತು. ಆ ಸೃಷ್ಟಿಯಲ್ಲಿ ಜನಿಸಿದವರು ಅರ್ವಾಕ್ ಗತಿಯುಳ್ಳವರಾಗಿದ್ದರಿಂದ ಈ ಸೃಷ್ಟಿಗೆ ಅರ್ವಾಕ್ಸ್ರೋತವೆಂಬ ಹೆಸರುಂಟಾಯಿತು. ತಮೋ ಮತ್ತು ರಜೋಗುಣಗಳ ಪ್ರಾಧಾನ್ಯತೆಯಿಂದ ಹುಟ್ಟಿದ ಆ ಜೀವಿಗಳು ದುಃಖಾನುಭವಿಗಳೂ, ಪ್ರಕೃತಿಗನುಗುಣವಾಗಿ ಪುನಃ ಪುನಃ ಕರ್ತವ್ಯ ಕರ್ಮಗಳಲ್ಲಿ ಆಸಕ್ತಿ ಹೊಂದಿದವುಗಳಾಗಿಯೂ, ಬಾಹ್ಯಾಂತರಗಳಲ್ಲಿ ಜ್ಞಾನವೆಂಬ ಪ್ರಕಾಶವನ್ನು ಸಾಧಿಸಬಲ್ಲವರಾಗಿರೂ ಇರುವ ಮನುಷ್ಯರೆಂದು ಕರೆಯಲ್ಪಟ್ಟಿದ್ದಾರೆ. ನರಕದ ಪ್ರಾಣಿಗಳ ಲಕ್ಷಣಗಳಿಂದ ಕೂಡಿದ ಈ ಜೀವಿಗಳು ಎಂಟು ವಿಧಗಳಲ್ಲಿವೆ. ಸಿದ್ಧಿಗಳನ್ನು ಸಂಪಾದಿಸಿದ ಮನುಷ್ಯರು ಮಾತ್ರ ಗಂಧರ್ವರಿಗೆ ಸಮನಾದ ಭೋಗಸಂಪತ್ತೆಂಬ ಧರ್ಮವುಳ್ಳವರಾಗಿರುತ್ತಾರೆ.
ಪಂಚಮೋಽನುಗ್ರಹಃ ಸರ್ಗಶ್ಚತುರ್ಧಾ ಸ ವ್ಯವಸ್ಥಿತಃ । ವಿಪರ್ಯಯೇಣ ಶಕ್ತ್ಯಾ ಚ ಸಿದ್ಧಮುಖ್ಯಾಸ್ತಥೈವ ಚ ।। 51 ।। ನಿವೃತ್ತಾ ವರ್ತಮಾನಾಶ್ಚ ಪ್ರಜಾಯಂತೇ ಪುನಃ ಪುನಃ । ಭೂತಾದಿಕಾನಾಂ ಸತ್ತ್ವಾನಾಂ ಷಷ್ಠಃ ಸರ್ಗಃ ಸ ಉಚ್ಯತೇ ।। 52 ।। ಸ್ವಾದನಾಶ್ಚಾಪ್ಯಶೀಲಾಶ್ಚ ಜ್ಞೇಯಾ ಭೂತಾದಿಕಾಶ್ಚ ತೇ ।
ಐದನೆಯ ಅನುಗ್ರಹಸೃಷ್ಟಿಯು ನಾಲ್ಕು ವಿಧದಲ್ಲಾಯಿತು. ಜ್ಞಾನ-ಶಕ್ತಿಗಳ ತಾರತಮ್ಯದಿಂದ ಕೂಡಿ ಸಿದ್ಧರೇ ಮೊದಲಾದವರು ಈ ಸೃಷ್ಟಿಯಲ್ಲಿ ಸೇರಿದ್ದಾರೆ. ಸೃಷ್ಟಿಪ್ರವಾಹದಲ್ಲಿ ಹಿಂದೆಯೇ ಆಗಿಹೋಗಿದ್ದ ಇವರು ಮತ್ತೆ ವರ್ತಮಾನ ಕಾಲದಲ್ಲಿಯೂ ಮತ್ತೆ ಮತ್ತೆ ಜನ್ಮವೆತ್ತುವ ಅವಶ್ಯಂಭಾವವನ್ನು ಹೊಂದಿರುತ್ತಾರೆ. ಭೂತಾದಿ ಸತ್ತ್ವಗಳ ಸೃಷ್ಟಿಯು ಆರನೆಯದೆಂದು ಪರಿಗಣಿಸಲ್ಪಟ್ಟಿದೆ. ಈ ಭೂತಾದಿ ಪ್ರಾಣಿಗಳು ಅನ್ನೋದಕಗಳಿಂದ ಹಸಿವು-ಬಾಯಾರಿಕೆಗಳನ್ನು ಹೋಗಲಾಡಿಸಿಕೊಳ್ಳುವ ಸ್ವಭಾವವಿರುವವು.
ಪ್ರಥಮೋ ಮಹತಃ ಸರ್ಗೋ ವಿಜ್ಞೇಯೋ ಬ್ರಹ್ಮಣಸ್ತು ಸಃ ।। 53 ।। ತನ್ಮಾತ್ರಾಣಾಂ ದ್ವಿತೀಯಸ್ತು ಭೂತಸರ್ಗಃ ಸ ಉಚ್ಯತೇ । ವೈಕಾರಿಕಸ್ತೃತೀಯಸ್ತು ಚೈಂದ್ರಿಯಃ ಸರ್ಗ ಉಚ್ಯತೇ ।। 54 ।। ಇತ್ಯೇತೇ ಪ್ರಾಕೃತಾಃ ಸರ್ಗಾ ಉತ್ಪನ್ನಾ ಬುದ್ಧಿಪೂರ್ವಕಾಃ ।। 55 ।।
ಬ್ರಹ್ಮದೇವನಿಂದ ಆದ ಸೃಷ್ಟಿಪರಂಪರೆಯಲ್ಲಿ ಮಹತ್ತತ್ತ್ವದ ಸೃಷ್ಟಿಯು ಮೊದಲನೆಯದು. ನಂತರ ಆದ ತನ್ಮಾತ್ರಗಳೆಂಬ ಸೂಕ್ಷ್ಮಭೂತಸೃಷ್ಟಿಯು ಎರಡನೆಯದು. ವೈಕಾರಿಕವೆಂಬ ವಿಶಿಷ್ಟ ಸಂಜ್ಞೆಯನ್ನು ಹೊಂದಿ ಇಂದ್ರಿಯಗಳಿಗೆ ಸಂಬಂಧಿಸಿರುವ ಸೃಷ್ಟಿಯು ಮೂರನೆಯದು. ಇವೆಲ್ಲವೂ ಪ್ರಕೃತಿ ಸಂಬಂಧವಾಗಿರುವುದರಿಂದ ಪ್ರಾಕೃತಗಳೆಂದೂ, ಬ್ರಹ್ಮನ ಬುದ್ಧಿಪೂರ್ವಕವಾಗಿ ಹುಟ್ಟಿದವುಗಳೆಂದೂ ಹೇಳಲ್ಪಟ್ಟಿವೆ.
ಮುಖ್ಯಸರ್ಗಶ್ಚತುರ್ಥಸ್ತು ಮುಖ್ಯಾ ವೈ ಸ್ಥಾವರಾಃ ಸ್ಮೃತಾಃ । ತಿರ್ಯಕ್ಸ್ರೋತಸಸರ್ಗಸ್ತು ತೈರ್ಯಗ್ಯೋನ್ಯಸ್ತು ಪಂಚಮಃ ।। 56 ।। ತಥೋರ್ಧ್ವಸ್ರೋತಸಾಂ ಸರ್ಗಃ ಷಷ್ಠೋ ದೈವತ ಉಚ್ಯತೇ । ತತ್ರೋರ್ಧ್ವಸ್ರೋತಸಾಂ ಸರ್ಗಃ ಸಪ್ತಮಃ ಸ ತು ಮಾನುಷಃ ।। 57 ।। ಅಷ್ಟಮೋಽನುಗ್ರಹಃ ಸರ್ಗಃ ಸಾತ್ತ್ವಿಕಸ್ತಾಮಸಶ್ಚ ಸಃ । ಪಂಚೈತೇ ವೈಕೃತಾಃ ಸರ್ಗಾಃ ಪ್ರಾಕೃತಾದ್ಯಾಸ್ತ್ರಯಃ ಸ್ಮೃತಾಃ ।। 58 ।। ಪ್ರಾಕೃತೋ ವೈಕೃತಶ್ಚೈವ ಕೌಮಾರೋ ನವಮಃ ಸ್ಮೃತಃ । ಪ್ರಾಕೃತಾ ಬುದ್ಧಿಪೂರ್ವಾಸ್ತು ತ್ರಯಃ ಸರ್ಗಾಸ್ತು ವೈಕೃತಾಃ ।। 59 ।। ಬುದ್ಧಿಪೂರ್ವಾಃ ಪ್ರವರ್ತೇಯುಸ್ತದ್ವರ್ಗಾ ಬ್ರಾಹ್ಮಣಾಸ್ತು ವೈ । ವಿಸ್ತರಾಚ್ಚ ಯಥಾ ಸರ್ವೇ ಕೀರ್ತ್ಯಮಾನಂ ನಿಬೋಧತ ।। 60 ।।
ಭೂಮಂಡಲದಲ್ಲಿ ಎಲ್ಲೆಲ್ಲೂ ವಿಸ್ತಾರವಾಗಿದ್ದುದರಿಂದ ಮುಖ್ಯವೆಂದೆನಿಸಿಕೊಂಡಿರುವ ಸ್ಥಾವರಗಳ ಸೃಷ್ಟಿಯು ನಾಲ್ಕನೆಯದು. ತಿರ್ಯಗ್ಯೋನಿಯಿಂದ ಜನಿಸಿದ ತ್ರಿರ್ಯಕ್ ಸ್ರೋತಸ್ಸೆಂಬ ಸೃಷ್ಟಿಯು ಐದನೆಯದು. ಊರ್ಧ್ವಸ್ರೋತಸ್ ಎಂಬ ದೇವತೆಗಳ ಸೃಷ್ಟಿಯು ಆರನೆಯದು. ಮನುಷ್ಯರ ಸೃಷ್ಟಿಯು ಏಳನೆಯದು. ಅನುಗ್ರಹವೆಂಬ ಎಂಟನೆಯ ಸೃಷ್ಟಿಯು ಸತ್ತ್ವ-ತಮೋಗುಣಗಳ ಆಧಿಕ್ಯದಿಂದ ಕೂಡಿದೆ. ಹೀಗೆ ನಾಲ್ಕನೆಯ ಸೃಷ್ಟಿಯಿಂದ ಎಣಿಸಬಹುದಾದ ಈ ಐದು ಬಗೆಯ ಸೃಷ್ಟಿಗಳು ವೈಕೃತಸೃಷ್ಟಿಗಳೆಂದೂ, ಅದಕ್ಕೆ ಮೊದಲಾದ ಮೂರು ಬಗೆಯ ಸೃಷ್ಟಿಗಳು ಪ್ರಾಕೃತಸೃಷ್ಟಿಯೆಂದೂ ವ್ಯವಹರಿಸಲ್ಪಟ್ಟಿವೆ. ಈ ಪ್ರಾಕೃತ-ವೈಕೃತ ಸೃಷ್ಟಿಗಳಲ್ಲದೇ ಕೌಮಾರವೆಂಬ ಒಂಬತ್ತನೆಯ ಸೃಷ್ಟಿಯೂ ಇದೆ. ಬ್ರಹ್ಮದೇವನ ಸೃಷ್ಟಿಶ್ರೇಣಿಯಲ್ಲಿ ಅಬುದ್ಧಿಪೂರ್ವಕವಾದ ಮೂರು ಬಗೆಯ ಪ್ರಾಕೃತಸೃಷ್ಟಿಯೂ ಬುದ್ಧಿಪೂರ್ವಕವಾದ ಇತರ ವೈಕೃತ ಸೃಷ್ಟಿಯೂ ಪ್ರವಾಹರೂಪವಾಗಿ ನಡೆದು ಬಂದಿವೆ. ಬ್ರಾಹ್ಮಣರೇ! ಈ ಸೃಷ್ಟಿಕ್ರಮದ ವಿಚಾರದಲ್ಲಿ ವಿಸ್ತಾರವಾಗಿರುವ ನನ್ನ ಮಾತನ್ನು ಕೇಳಿ.
ಚತುರ್ಧಾ ಚ ಸ್ಥಿತಸ್ಸೋಽಪಿ ಸರ್ವಭೂತೇಷು ಕೃತ್ಸ್ನಶಃ । ವಿಪರ್ಯಯೇಣ ಶಕ್ತ್ಯಾ ಚ ಬುದ್ಧ್ಯಾ ಸಿದ್ಧ್ಯಾ ತಥೈವ ಚ ।। 61 ।। ಸ್ಥಾವರೇಷು ವಿಪರ್ಯಾಸಸ್ತಿರ್ಯಗ್ಯೋನಿಷು ಶಕ್ತಿತಃ । ಸಿದ್ಧಾತ್ಮಾನೋ ಮನುಷ್ಯಾಸ್ತು ಪುಷ್ಟಿರ್ದೇವೇಷು ಕೃತ್ಸ್ನಶಃ ।। 62 ।।
ಹೀಗೆ ಸರ್ವಭೂತಗಳನ್ನೂ ಸೃಷ್ಟಿಸಿ ಪರಮಾತ್ಮನು ಪ್ರತಿಯೊಂದರಲ್ಲಿಯೂ ವಿಪರ್ಯಯ, ಶಕ್ತಿ, ಬುದ್ಧಿ ಮತ್ತು ಸಿದ್ಧಿಗಳೆಂಬ ನಾಲ್ಕು ಅಂಶಗಳಿಂದ ವಾಸಮಾಡಿರುತ್ತಾನೆ. ಸ್ಥಾವರಗಳಲ್ಲಿ ವಿಪರ್ಯಯವೂ, ತಿರ್ಯಕ್ ಜೀವಿಗಳಲ್ಲಿ ಶಕ್ತಿಯೂ, ಮನುಷ್ಯರಲ್ಲಿ ಬುದ್ಧಿಯೂ, ದೇವತೆಗಳಲ್ಲಿ ಸಿದ್ಧಿಯೂ ಪರಮಾತ್ಮನ ಅಂಶಗಳಾಗಿ ಪ್ರಕಾಶಿಸುತ್ತವೆ.
ಅಥೋ ಸಸರ್ಜ ವೈ ಬ್ರಹ್ಮಾ ಮಾನಸಾನಾತ್ಮನಃ ಸಮಾನ್ । ವೈವರ್ತ್ಯೇನ ತು ಜ್ಞಾನೇನ ನಿವೃತ್ತಾಸ್ತೇ ಮಹೌಜಸಃ ।। 63 ।। ಸಂಬುದ್ಧ್ಯ ಚೈವ ನಾಮಾಥೋ ಅಪವೃತ್ತಾಸ್ತ್ರಯಸ್ತು ತೇ । ಅಸೃಷ್ಟ್ವೈವ ಪ್ರಜಾಸರ್ಗಂ ಪ್ರತಿಸರ್ಗಂ ತತಸ್ತತಃ ।। 64 ।। ಬ್ರಹ್ಮಾ ತೇಷು ವ್ಯರಕ್ತೇಷು ತತೋಽನ್ಯಾನ್ಸಾಧಕಾನ್ಸೃಜನ್ । ಸ್ಥಾನಾಭಿಮಾನಿನೋ ದೇವಾಃ ಪುನರ್ಬ್ರಹ್ಮಾನುಶಾಸನಮ್ । ಅಭೂತಸೃಷ್ಟ್ಯವಸ್ಥಾ ಯೇ ಸ್ಥಾನಿನಸ್ತಾನ್ನಿಬೋಧ ಮೇ ।। 65 ।।
ನಂತರ ಬ್ರಹ್ಮನು ತನಗೆ ಸಮಾನರಾದ ಮಾನಸಪುತ್ರರನ್ನು ಸೃಷ್ಟಿಸಿದನು. ಆದರೆ ಜ್ಞಾನಿಗಳಾಗಿದ್ದ ಆ ಮಹೌಜಸರು ನಿವೃತ್ತಿಮಾರ್ಗಾವಲಂಬಿಗಳಾಗಿ ಸೃಷ್ಟಿಯ ವಿಷಯದಲ್ಲಿ ಪರಾಙ್ಮುಖರಾದರು. ಇವರು ಪ್ರಜಾಸೃಷ್ಟಿಯನ್ನು ಮುಂದುವರಿಸದೇ ಇದ್ದುದನ್ನು ಕಂಡು ಬ್ರಹ್ಮನು ಪುನಃ ಪ್ರಜಾ ಸೃಷ್ಟಿಯ ಕುರಿತು ಆಲೋಚಿಸಿದನು. ತನ್ನ ಮಾನಸಪುತ್ರರೆಲ್ಲರೂ ವೈರಾಗ್ಯವುಳ್ಳವರಾಗಿ ಸೃಷ್ಟಿಗೆ ಅನುಕೂಲರಾಗದೇ ಇದ್ದುದರಿಂದ ಸೃಷ್ಟಿಗೆ ಸಾಧಕರಾದ ಇನ್ನು ಇತರರನ್ನು ಸೃಷ್ಟಿಸಿ ಸೃಷ್ಟಿಯ ಅಧಿಕಾರಸ್ಥಾನವಾದ ಬ್ರಹ್ಮಪದವಿಯಲ್ಲಿಯೇ ಅಭಿಮಾನವನ್ನಿಟ್ಟಿರುವ ದೇವತೆಗಳನ್ನು ನಿರ್ಮಿಸಿದನು. ಅವರು ಆ ಅಧಿಕಾರವನ್ನು ಬ್ರಹ್ಮಶಾಸನವೆಂದೂ ತಮ್ಮ ಕರ್ತವ್ಯವೆಂದೂ ಭಾವಿಸಿ ಆಯಾ ಸ್ಥಾನಗಳ ಅಭಿಮಾನಿಗಳಾದರು. ಸೃಷ್ಟಿಯ ಅವಸ್ಥೆಯ ಅಧಿಕಾರವನ್ನು ಹೊಂದಿದ ಮತ್ತು ಸ್ಥಾನಾಭಿಮಾನಿಗಳಾದ ದೇವತೆಗಳು ಯಾರೆಂದು ಕೇಳಿ.
ಆಪೋಽಗ್ನಿಃ ಪೃಥಿವೀ ವಾಯುರಂತರಿಕ್ಷೋ ದಿವಂ ತಥಾ । ಸ್ವರ್ಗೋ ದಿಶಃ ಸಮುದ್ರಾಶ್ಚ ನದ್ಯಶ್ಚೈವ ವನಸ್ಪತೀನ್ ।। 66 ।। ಔಷಧೀನಾಂ ತಥಾತ್ಮಾನೋ ಹ್ಯಾತ್ಮನೋ ವೃಕ್ಷವೀರುಧಾಮ್ । ಲತಾಃ ಕಾಷ್ಠಾಃ ಕಲಾಶ್ಚೈವ ಮುಹೂರ್ತಾಃ ಸಂಧಿರಾತ್ರ್ಯಹಾಃ ।। 67 ।। ಅರ್ಧಮಾಸಾಶ್ಚ ಮಾಸಾಶ್ಚ ಅಯನಾಬ್ದಯುಗಾನಿ ಚ । ಸ್ಥಾನೇ ಸ್ರೋತಃಸ್ವಭೀಮಾನಾಃ ಸ್ಥಾನಾಖ್ಯಾಶ್ಚೈವ ತೇ ಸ್ಮೃತಾಃ ।। 68 ।।
ಜಲ, ಅಗ್ನಿ, ಪೃಥ್ವಿ, ವಾಯು, ಆಕಾಶ, ದ್ಯುಲೋಕ, ಸ್ವರ್ಗಲೋಕ, ದಿಕ್ಕು, ಸಮುದ್ರ, ನದೀ, ವನಸ್ಪತಿ, ಓಷಧಿ, ವೃಕ್ಷ, ಲತೆ, ಕಾಷ್ಠಾ, ಕಲಾ, ಮುಹೂರ್ತ, ರಾತ್ರಿ, ದಿನ, ಅಹೋರಾತ್ರಿಸಂಧಿ, ಅರ್ಧಮಾಸ, ಮಾಸ, ಅಯನ, ಸಂವತ್ಸರ, ಯುಗ – ಇವುಗಳೆಲ್ಲವೂ ಸೃಷ್ಟಿಯನ್ನು ನಿರ್ವಹಿಸುವ ದೇವತೆಗಳಿಗೆ ಅಭಿಮಾನಾಸ್ಪದವಾದ ಸ್ಥಾನಗಳ ಸ್ರೋತಸ್ಸು – ಈ ಸ್ಥಾನಗಳಲ್ಲಿದ್ದು ಸೃಷ್ಟಿಯನ್ನು ಮುಂದುವರಿಸುತ್ತಾರೆ.
ಸ್ಥಾನಾತ್ಮನಃ ಸ ದೃಷ್ಟ್ವಾತು ತತೋಽನ್ಯಾನ್ಸ ತದಾಽಸೃಜತ್ । ದೇವಾಂಶ್ಚೈವ ಪಿತೄಂಶ್ಚೈವ ಯೈರಿಮಾ ವರ್ಧಿತಾಃ ಪ್ರಜಾಃ ।। 69 ।। ಭೃಗ್ವಂಗಿರಾ ಮರೀಚಿಶ್ಚ ಪುಲಸ್ತ್ಯಃ ಪುಲಹಃ ಕ್ರತುಃ । ದಕ್ಷೋಽತ್ರಿಶ್ಚ ವಸಿಷ್ಠಶ್ಚ ಸೋಽಸೃಜನ್ನವ ಮಾನಸಾನ್ ।। 70 ।। ನವ ಬ್ರಹ್ಮಾಣ ಇತ್ಯೇತೇ ಪುರಾಣೇ ನಿಶ್ಚಯಂ ಗತಾಃ । ಬ್ರಹ್ಮಾ ಯಥಾತ್ಮಕಾನಾಂ ತು ಸರ್ವೇಷಾಂ ಬ್ರಹ್ಮಯೋಗಿನಾಮ್ ।। 71 ।।
ಬ್ರಹ್ಮನು ಹೀಗೆ ಸ್ಥಾನಾಭಿಮಾನಿಗಳನ್ನು ಸೃಷ್ಟಿಸಿ, ಯಥೇಚ್ಛವಾಗಿ ಪ್ರಜೆಗಳನ್ನು ಸೃಷ್ಟಿಸಿ, ಸೃಷ್ಟಿಯನ್ನು ವೃದ್ಧಿಸುವ ದೇವ-ಪಿತೃಗಳೆಂಬ ಗಣಗಳನ್ನು ಸೃಷ್ಟಿಸಿದನು. ಹೀಗೆ ಹುಟ್ಟಿದವರು: ಭೃಗು, ಅಂಗಿರ, ಮರೀಚಿ, ಪುಲಸ್ತ್ಯ, ಪುಲಹ, ಕ್ರತು, ದಕ್ಷ, ಅತ್ರಿ ಮತ್ತು ವಸಿಷ್ಠರು. ಇವರೆಲ್ಲರೂ ಬ್ರಹ್ಮನ ಮಾನಸಪುತ್ರರು. ಈ ಒಂಬತ್ತು ಮಂದಿ ಬ್ರಹ್ಮಮಾನಸಪುತ್ರರೆಂದು ಪುರಾಣಗಳಲ್ಲಿ ಪ್ರಸಿದ್ಧರಾಗಿರುವರು. ಇವರೆಲ್ಲರೂ ಬ್ರಹ್ಮನಲ್ಲಿ ಅವನ ಶಾಸನದಂತಿರುವ ಯೋಗಾಭ್ಯಾಸವುಳ್ಳವರೂ, ಬ್ರಹ್ಮನೇ ಆತ್ಮಭೂತನೆಂದು ಅರಿತವರೂ ಆಗಿದ್ದಾರೆ.
ತತೋಽಸೃಜತ್ಪುನರ್ಬ್ರಹ್ಮಾ ರುದ್ರಂ ರೋಷಾತ್ಮಸಂಭವಮ್ । ಸಂಕಲ್ಪಂ ಚೈವ ಧರ್ಮಂ ಚ ಸರ್ವೇಷಾಮೇವ ಪರ್ವತೌ ।। 72 ।। ಸೋಽಸೃಜದ್ವ್ಯವಸಾಯಂ ತು ಬ್ರಹ್ಮಾ ಭೂತಸುಖಾತ್ಮಕಮ್ । ಸಂಕಲ್ಪಾಚ್ಚೈವ ಸಂಕಲ್ಪೋ ಜಜ್ಞೇ ಸೋಽವ್ಯಕ್ತಯೋನಿನಃ ।। 73 ।।
ನಂತರ ಬ್ರಹ್ಮನು ತನ್ನ ರೋಷದಿಂದ ಹುಟ್ಟಿದ ರುದ್ರನನ್ನು ಸೃಷ್ಟಿಸಿದನು. ಹಾಗೂ ಸರ್ವರಿಗೂ ಮುಖ್ಯವಾದ ಸಂಕಲ್ಪ ಮತ್ತು ಧರ್ಮಗಳನ್ನು ಸೃಷ್ಟಿಸಿದನು. ನಂತರ ಸರ್ವಭೂತಗಳಿಗೂ ಸುಖಾತ್ಮಕವಾದ ವ್ಯವಸಾಯವನ್ನು ತನ್ನ ಸಂಕಲ್ಪಮಾತ್ರದಿಂದಲೇ ಸೃಷ್ಟಿಸಿದನು. ಈ ಸಂಕಲ್ಪವು ಬ್ರಹ್ಮದೇವನಿಗೆ ಅವ್ಯಕ್ತತತ್ತ್ವದ ಸಂಪರ್ಕದ ಕಾರಣದಿಂದ ಹುಟ್ಟಿತು.
ಪ್ರಾಣಾದ್ದಕ್ಷೋಽಸೃಜದ್ವಾಚಂ ಚಕ್ಷುರ್ಭ್ಯಾಂ ಚ ಮರೀಚಿನಮ್ । ಭೃಗುಶ್ಚ ಹೃದಯಾಜ್ಜಜ್ಞೇ ಋಷಿಃ ಸಲಿಲಯೋನಿನಃ ।। 74 ।। ಶಿರಸಶ್ಚಾಂಗಿರಾಶ್ಚೈವ ಶ್ರೋತ್ರಾದತ್ರಿಸ್ತಥೈವ ಚ । ಪುಲಸ್ತ್ಯಶ್ಚ ತಥೋದಾನಾದ್ವ್ಯಾನಾತ್ತು ಪುಲಹಸ್ತಥಾ ।। 75 ।। ಸಮಾನತೋ ವಸಿಷ್ಠಶ್ಚ ಹ್ಯಪಾನಾನ್ನಿರ್ಮಮೇ ಕ್ರತುಮ್ । ಇತ್ಯೇತೇ ಬ್ರಹ್ಮಣಃ ಶ್ರೇಷ್ಠಾ ಪುತ್ರಾ ವೈ ದ್ವಾದಶ ಸ್ಮೃತಾಃ ।। 76 ।। ಧರ್ಮಾದಯಃ ಪ್ರಥಮಜಾ ವಿಜ್ಞೇಯಾ ಬ್ರಹ್ಮಣಃ ಸುತಾಃ । ಭೃಗ್ವಾದಯಸ್ತು ಯೇ ಸೃಷ್ಟಾ ನ ಚ ತೇ ಬ್ರಹ್ಮವಾದಿನಃ ।। 77 ।। ಗೃಹಮೇಧಿಪುರಾಣಾಸ್ತೇ ವಿಜ್ಞೇಯಾ ಬ್ರಹ್ಮಣಃ ಸುತಾಃ । ದ್ವಾದಶೈತೇ ಪ್ರಸೂಯಂತೇ ಸಹ ರುದ್ರೇಣ ಚ ದ್ವಿಜಾಃ ।। 78 ।।
ಬ್ರಹ್ಮನು ಪ್ರಾಣವಾಯುವಿನಿಂದ ದಕ್ಷಬ್ರಹ್ಮನನ್ನೂ, ಚಕ್ಷುರಿಂದ್ರಿಯಗಳಿಂದ ಮರೀಚಿಬ್ರಹ್ಮಯನ್ನೂ, ಜ್ಞಾನಮಯ ಹೃದಯದಿಂದ ಭೃಗುಋಷಿಯನ್ನೂ, ಶಿರಸ್ಸಿನಿಂದ ಅಂಗಿರಮುನಿಯನ್ನೂ, ಶ್ರೋತ್ರೇಂದ್ರಿಯದಿಂದ ಅತ್ರಿಯನ್ನೂ, ಉದಾನವಾಯುವಿನಿಂದ ಪುಲಸ್ತ್ಯಬ್ರಹ್ಮನನ್ನೂ, ವ್ಯಾನವಾಯುವಿನಿಂದ ಪುಲಹಬ್ರಹ್ಮನನ್ನೂ, ಸಾಮನವಾಯುವಿನಿಂದ ವಸಿಷ್ಠಮುನಿಯನ್ನೂ, ಅಪಾನದಿಂದ ಕ್ರತುಬ್ರಹ್ಮನನ್ನೂ ಸೃಷ್ಟಿಸಿದನು. ಹೀಗೆ ಧರ್ಮ, ಸಂಕಲ್ಪ ಮತ್ತು ವ್ಯವಸಾಯಗಳು ಹಾಗೂ ದಕ್ಷನೇ ಮೊದಲಾದ ನವಬ್ರಹ್ಮರೂ ಸೇರಿ ಹನ್ನೆರಡು ಮಂದಿ ಶ್ರೇಷ್ಠ ಪ್ರಜೆಗಳು ಪ್ರಪಂಚಕಾರಣರಾಗಿ ಜನಿಸಿದರು. ಧರ್ಮ ಮೊದಲಾದ ತತ್ತ್ವಗಳು ಬ್ರಹ್ಮಪುತ್ರರಾಗಿ ಮೊದಲು ಹುಟ್ಟಿದವು. ಭೃಗು ಮೊದಲಾದ ನವಬ್ರಹ್ಮರು ಬ್ರಹ್ಮವಾದಿಗಳಾದ ಮಹಾತ್ಮರಾಗಿ ನಂತರ ಹುಟ್ಟಿದರು. ದ್ವಿಜರೇ! ಇವರೆಲ್ಲರೂ ಗೃಹಸ್ಥಧರ್ಮವನ್ನು ಮೊದಲು ಕೈಗೊಂಡ ಪ್ರಾಚೀನ ಗೃಹಸ್ಥರಾದ ಬ್ರಹ್ಮಮಾನಸಪುತ್ರರು. ಈ ಹನ್ನೆರಡು ಮಂದಿ ರುದ್ರನೊಡನೆ ಜನ್ಮವೆತ್ತಿದವರು.
ಕ್ರತುಃ ಸನತ್ಕುಮಾರಶ್ಚ ದ್ವಾವೇತಾವೂರ್ದ್ಧರೇತಸೌ । ಪೂರ್ವೋತ್ಪತ್ತೌ ಪುರಾ ಹ್ಯೇತೌ ಸರ್ವೇಷಾಮಪಿ ಪೂರ್ವಜೌ ।। 79 ।। ವ್ಯತೀತೌ ಸಪ್ತಮೇ ಕಲ್ಪೇ ಪುರಾಣೌ ಲೋಕಸಾಧಕೌ । ವಿರಜೇತೇಽತ್ರ ವೈ ಲೋಕೇ ತೇಜಸಾಕ್ಷಿಪ್ಯ ಚಾತ್ಮನಃ ।। 80 ।। ತಾವುಭೌ ಯೋಗಧರ್ಮಾಣಾವಾರೋಪ್ಯಾತ್ಮಾನಮಾತ್ಮನಾ । ಪ್ರಜಾಧರ್ಮಂ ಚ ಕಾಮಂ ಚ ವರ್ತಯೇತೇ ಮಹೌಜಸೌ ।। 81 ।। ಯಥೋತ್ಪನ್ನಸ್ತಥೈವೇಹ ಕುಮಾರ ಇತಿ ಚೋಚ್ಯತೇ । ತತಃ ಸನತ್ಕುಮಾರೇತಿ ನಾಮ ತಸ್ಯ ಪ್ರತಿಷ್ಠಿತಮ್ ।। 82 ।। ತೇಷಾಂ ದ್ವಾದಶ ತೇ ವಂಶಾ ದಿವ್ಯಾ ದೇವಗಣಾನ್ವಿತಾಃ । ಕ್ರಿಯಾವಂತಃ ಪ್ರಜಾವಂತೋ ಮಹರ್ಷಿಭಿರಲಂಕೃತಾಃ ।। 83 ।। ಪ್ರಾಣಜಾಂಸ್ತು ಸ ದೃಷ್ಟ್ವಾ ವೈ ಬ್ರಹ್ಮಾ ದ್ವಾದಶ ಸಾತ್ತ್ವಿಕಾನ್ । ತತೋಽಸುರಾನ್ಪಿತೄಂದೇವಾನ್ಮನುಷ್ಯಾಂಶ್ಚಾಸೃಜತ್ಪ್ರಭುಃ ।। 84 ।।
ಕ್ರತು ಮತ್ತು ಸನತ್ಕುಮಾರ ಇವರಿಬ್ಬರೂ ಊರ್ಧ್ವರೇತಸರಾಗಿ ಎಲ್ಲರಿಗೂ ಪೂರ್ವಜರಾಗಿ ಸೃಷ್ಟಿಯ ಆದಿಯಲ್ಲಿ ಹುಟ್ಟಿದವರು. ಅವರಿಬ್ಬರೂ ಬ್ರಹ್ಮನ ಏಳನೆಯ ಕಲ್ಪದ ಸೃಷ್ಟಿಕಾಲವು ನಡೆದಾಗ ಲೋಕಕ್ಕೆ ಸಾಧಕರೂ ಪುರಾಣಪುಣ್ಯಾತ್ಮರೂ ಆಗಿ ಅತೀತರಾದರು. ಅವರು ತೇಜೋಮಯರಾಗಿ ಈ ಲೋಕದಲ್ಲಿ ಪ್ರಕಾಶಿಸುತ್ತಾರೆ. ಆ ಇಬ್ಬರು ಮಹೌಜಸರೂ ಸತತವೂ ಯೋಗತತ್ಪರರಾಗಿ, ಆತ್ಮನಲ್ಲಿಯೇ ಚಿತ್ತವನ್ನು ಅಚಲವಾಗಿರಿಸಿ, ಮಹಾಮಹಿಮೆಯಿಂದ ಕೂಡೀ ಪ್ರಜಾಧರ್ಮವನ್ನೂ ಕಾಮವನ್ನೂ ನಡೆಸುತ್ತಿದ್ದರು. ಅವರಲ್ಲಿ ಹುಟ್ಟಿದವನು ಯಾವ ವಿವಿಧ ರೂಪ ಆಕಾರಗಳಿಂದ ಹುಟ್ಟಿದ್ದನೋ ಅದೇ ಶಾಶ್ವತ ರೂಪ-ಆಕಾರಗಳನ್ನು ಪಡೆದವನಾದ್ದರಿಂದ ಕುಮಾರನೆಂದು ಕರೆಯುತ್ತಾರೆ. ಅವರ ಹನ್ನೆರಡು ವಂಶಗಳು ದಿವ್ಯಾಂಶಗಳು, ದೇವಗಣಾನ್ವಯ, ಸತ್ಕರ್ಮಾಚರಣೆ, ಅವಿಚ್ಛಿನ್ನ ಪ್ರಜೆಗಳಿರುವ ಮಹರ್ಷಿಗಳಿಂದ ಶೋಭಿಸಿವೆ. ಸರ್ವಪ್ರಭುವಾದ ಬ್ರಹ್ಮನು ತನ್ನ ಕಾರ್ಯಕರಣಗಳಿಂದ ಸಾತ್ವಿಕರಾದ ಈ ಹನ್ನೆರಡು ಮಂದಿಯನ್ನು ಸೃಷ್ಟಿಸಿದ ನಂತರ ಅಸುರ-ಪಿತೃ-ದೇವ-ಮನುಷ್ಯ ಮೊದಲಾದ ಗಣಗಣನ್ನು ಸೃಷ್ಟಿಸಿದನು.
ಮುಖಾದ್ದೇವಾನಜನಯತ್ ಪಿತೄಂಶ್ಚೈವಾಥ ವಕ್ಷಸಃ । ಪ್ರಜನನಾನ್ಮನುಷ್ಯಾನ್ವೈ ಜಘನಾನ್ನಿರ್ಮಮೇಽಸುರಾನ್ ।। 85 ।। ನಕ್ತಂ ಸೃಜನ್ಪುನರ್ಬ್ರಹ್ಮಾ ಜ್ಯೋತ್ಸ್ನಾಯಾ ಮಾನುಷಾತ್ಮನಃ । ಸುಧಾಯಾಶ್ಚ ಪಿತೄಂಶ್ಚೈವ ದೇವದೇವಃ ಸಸರ್ಜ ಹ ।। 86 ।। ಮುಖ್ಯಾಮುಖ್ಯಾನ್ ಸೃಜನ್ ದೇವಾನಸುರಾಂಶ್ಚ ತತಃ ಪುನಃ । ಮನಸಶ್ಚ ಮನುಷ್ಯಾಂಶ್ಚ ಪಿತೃವನ್ಮಹತಃ ಪಿತೄನ್ ।। 87 ।। ವಿದ್ಯುತೋಽಶನಿ ಮೇಘಾಂಶ್ಚ ಲೋಹಿತೇಂದ್ರ ಧನೂಂಷಿ ಚ । ಋಚೋ ಯಜೂಂಷಿ ಸಾಮಾನಿ ನಿರ್ಮಮೇ ಯಜ್ಞಸಿದ್ಧಯೇ ।। 88 ।। ಉಚ್ಚಾವಚಾನಿ ಭೂತಾನಿ ಮಹಸಸ್ತಸ್ಯ ಜಜ್ಞಿರೇ । ಬ್ರಹ್ಮಣಸ್ತು ಪ್ರಜಾಸರ್ಗಂ ದೇವಾರ್ಷಿಪಿತೃಮಾನವಮ್ ।। 89 ।।
ಬ್ರಹ್ಮನ ಮುಖದಿಂದ ದೇವತೆಗಳೂ, ಎದೆಯಿಂದ ಪಿತೃಗಳೂ, ಜನನೇಂದ್ರಿಯದಿಂದ ಮನುಷ್ಯರೂ, ಜಘನದಿಂದ ಅಸುರರೂ ಜನಿಸಿದರು. ಪುನಃ ದೇವದೇವ ಬ್ರಹ್ಮನು ಅಸುರರನ್ನು ರಾತ್ರಿಂಚರರನ್ನಾಗಿಯೂ, ಮನುಷ್ಯರನ್ನು ಬೆಳದಿಂಗಳೇ ಮೊದಲಾದ ಪ್ರಕಾಶದಲ್ಲಿ ಅಭಿರುಚಿಯಿರುವವರನ್ನಾಗಿಯೂ, ಪಿತೃಗಳನ್ನು ಅಮೃತಾಹಾರಿಗಳನ್ನಾಗಿಯೂ ಒಂದೊಂದು ವಿಶೇಷ ಲಕ್ಷಣಗಳಿಂದ ಸೃಷ್ಟಿಮಾಡಿದನು. ದೇವಾಸುರರೆಂಬ ಮುಖ್ಯ-ಅಮುಖ್ಯರಾದವರನ್ನೂ, ಮನೋನಿಯಾಮಕ ಶಕ್ತಿಯಿರುವ ಮನುಷ್ಯರನ್ನೂ, ಪಿತೃಗಳಲ್ಲಿ ಶ್ರೇಷ್ಠರಾದ ಪಿತೃಗಳನ್ನೂ ಸೃಷ್ಟಿಸಿದನು. ಮಿಂಚು, ಸಿಡಿಲು, ಮೋಡ, ವರ್ಣರಂಜಿತ ಕಾಮನಬಿಲ್ಲು ಮೊದಲಾದವುಗಳನ್ನು ಸೃಷ್ಟಿಸಿ, ಯಜ್ಞಕರ್ಮಗಳು, ಮತ್ತು ಅವುಗಳ ಸಿದ್ಧಿಗೆ ಸಾಧನಗಳಾದ ಋಗ್ವೇದ-ಯಜುರ್ವೇದ-ಸಾಮವೇದಗಳನ್ನು ಸೃಷ್ಟಿಸಿದನು.
ಪುನಃ ಸೃಜತಿ ಭೂತಾನಿ ಚರಾಣಿ ಸ್ಥಾವರಾಣಿ ಚ । ಯಕ್ಷಾನ್ಪಿಶಾಚಾನ್ ಗಂಧರ್ವಾನ್ಸರ್ವಶೋಽಪ್ಸರಸಸ್ತಥಾ ।। 90 ।। ನರಕಿನ್ನರರಕ್ಷಾಂಸಿ ವಯಃ ಪಶುಮೃಗೋರಗಾನ್ । ಅವ್ಯಯಂ ವಾ ವ್ಯಯಶ್ಚೈವ ದ್ವಯಂ ಸ್ಥಾವರಜಂಗಮಮ್ ।। 91 ।। ತೇಷಾಂ ತು ಯಾನಿ ಕರ್ಮಾಣಿ ಪ್ರಾಕ್ ಸೃಷ್ಟಾನಿ ಸ್ವಯಂಭುವಾ । ತಾನ್ಯೇವ ಪ್ರತಿಪದ್ಯಂತೇ ಸೃಜ್ಯಮಾನಾಃ ಪುನಃ ಪುನಃ ।। 92 ।। ಹಿಂಸ್ರಾಹಿಂಸ್ರೇ ಮೃದುಕ್ರೂರೇ ಧರ್ಮಾಧರ್ಮೌ ಕೃತಾಕೃತೇ । ತೇಷಾಮೇವ ಪೃಥಕ್ ಸೂತಮವಿಭಕ್ತಂ ತ್ರಯಂ ವಿದುಃ ।। 93 ।।
ಪುನಃ ಅವನು ಸ್ಥಾವರ-ಚರ ಭೂತಗಳನ್ನು ಸೃಷ್ಟಿಸಿದನು. ಹಾಗೆಯೇ ಯಕ್ಷ-ಪಿಶಾಚ-ಗಂಧರ್ವ-ಅಪ್ಸರ-ನರ-ಕಿನ್ನರ-ರಾಕ್ಷಸ-ಪಕ್ಷಿ-ಪಶು-ಸರ್ಪ ಮೊದಲಾದ ಗಣನಾತೀತವಾದ ಪ್ರಾಣಿಸೃಷ್ಟಿಯನ್ನೂ ಮಾಡಿದನು. ಕೆಲವು ಪರಿಣಾಮದಿಂದ ನಿತ್ಯವೂ, ಕೆಲವು ಅಲ್ಪಕಾಲವಿದ್ದು ನಶಿಸುವ ಅನಿತ್ಯವೂ ಆದ ವಿವಿಧ ವ್ಯಕ್ತಿಗರ್ಭಿತ ಪ್ರಪಂಚದ ಸೃಷ್ಟಿಚಕ್ರವನ್ನು ವ್ಯಯವಿಲ್ಲದೇ ಮುಂದುವರಿಸಿದನು. ಹೀಗೆ ಹುಟ್ಟಿದ ಪ್ರಾಣಿಗಳಲ್ಲಿ ಪೂರ್ವಕಲ್ಪದ ಸೃಷ್ಟಿಯಲ್ಲಿ ಯಾವಪ್ರಾಣಿಯು ತನ್ನ ಜಾತಿಗೆ ಅನುಸಾರವಾಗಿ ಯಾವ ಕರ್ಮವನ್ನು ಅವಲಂಬಿಸಿತ್ತೋ ಆ ಪ್ರಾಣಿಯು ಮತ್ತೊಂದು ಕಲ್ಪದಲ್ಲಿ ಸೃಷ್ಟವಾದಾಗ ಅದೇ ಕರ್ಮಾಚರಣೆಯ ಸ್ವಭಾವಕ್ಕೆ ಬದ್ಧವಾಗಿ ಹುಟ್ಟಿತು. ಹೀಗೆ ಮತ್ತೆ ಮತ್ತೆ ಆಯಾಯಾ ಜಾತಿಯ ಪ್ರಾಣಿಗಳಿಗೆ ಆಯಾಯಾ ಕರ್ಮವೇ ನಿಯತವು. ಹಿಂಸಕ-ಶಾಂತ, ಮೃದು-ಕ್ರೂರ, ಧರ್ಮ-ಅಧರ್ಮ, ಕರ್ಮಲಂಪಟ-ಆಲಸ್ಯ ಮೊದಲಾದ ಪರಸ್ಪರ ವಿರೋಧಾಭಾವದಿಂದ ಕೂಡಿದ ವಿವಿಧ ಪ್ರಾಣಿಗಳು ಕಲ್ಪಾಂತರಗಳಲ್ಲಿಯೂ ಅದೇ ಸ್ವಭಾವ ವಿಭಾಗಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಹುಟ್ಟುತ್ತವೆ.
ಏತದೇವಂ ಚ ನೈವಂ ಚ ನ ಚೋಭೇ ನಾನುಭೇ ತಥಾ । ಕರ್ಮಸ್ವವಿಷಯಂ ಪ್ರಾಹುಃ ಸತ್ತ್ವಸ್ಥಾಃ ಸಮದರ್ಶಿನಃ ।। 94 ।। ನಾಮಾತ್ಮಪಂಚಭೂತಾನಾಂ ಭೂತಾನಾಂ ಚ ಪ್ರಪಂಚನಾಮ್ । ವೇದಶಬ್ದೇನ ಪಂಚೈತೇ ನಿರ್ಮಮೇ ಸ ಮಹೇಶ್ವರಃ ।। 95 ।। ಆರ್ಷಾಣಿ ಚೈವ ನಾಮಾನಿ ಯಾಶ್ಚ ದೇವೇಷು ಸೃಷ್ಟಯಃ । ಶರ್ವರ್ಯಾಂ ನ ಪ್ರಸೂಯಂತೇ ಪುನಸ್ತೇಭ್ಯೋಽದಧಾತ್ಪ್ರಜಾಃ ।। 96 ।। ಇತ್ಯೇವಂ ಕಾರಣಾದ್ಭೂತೋ ಲೋಕಸರ್ಗಃ ಸ್ವಯಂಭುವಃ । ಮಹದಾದ್ಯೋ ವಿಶೇಷಾಂತೋ ವಿಕಾರಃ ಪ್ರಾಕೃತಃ ಸ್ವಯಮ್ ।। 97 ।।
ಸತ್ತ್ವಗುಣದ ಆವಿರ್ಭಾವದಿಂದ ಸಾಮ್ಯಬುದ್ಧಿಯನ್ನು ಆರ್ಜಿಸಿದ ವಿವೇಕಿಗಳು ಮೂಲಭೂತವಾದ ಕರ್ಮವೆಂಬ ತತ್ತ್ವದ ವಿಷಯದಲ್ಲಿ ಇದು ಹೀಗೆಂದಾಗಲೀ, ಹೀಗಲ್ಲವೆಂದಾಗಲೀ, ವಿರುದ್ಧವಾದ ಅಂಶದ್ವಯದಿಂದ ಕೂಡಿದೆಯೆಂದಾಗಲೀ, ಎರಡರಿಂದಲೂ ಶೂನ್ಯವೆಂದಾಗಲೀ ಖಚಿತವಾಗಿ ಹೇಳಲಾಗದ ಅನಿರ್ವಚನೀಯತತ್ತ್ವವೆಂದು ಅಭಿಪ್ರಾಯವುಳ್ಳವರಾಗಿರುತ್ತಾರೆ. ಪೃಥಿವ್ಯಾದಿ ಪಂಚಭೂತಗಳ ವಿಸ್ತಾರವಾಗಿರುವ ಸನ್ನಿವೇಶದಿಂದ ಕೂಡಿದ ಪಾಂಚಭೌತಿಕವಾದ ನಾಮ-ರೂಪಗಳನ್ನು ಮಹೇಶ್ವರನಾದ ಪರಮಾತ್ಮನೇ ವೇದಶಬ್ದಗಳಿಂದ ಸೃಷ್ಟಿಸಿದನು. ಮತ್ತು ದೈವಿಕವಾದ ಸೃಷ್ಟಿ, ಆಯಾ ಸಂಜ್ಞೆಗಳು, ಎಲ್ಲವನ್ನೂ ಸೃಷ್ಟಿಶೂನ್ಯವಾದ ಪ್ರಲಯಕಾಲವು ಅಂತ್ಯವಾದಾಗ ವೇದಶಬ್ದಗಳಿಂದಲೇ ಸೃಷ್ಟಿಸಿ ಅವರವರಿಗೆ ಆಯಾಯಾ ನಾಮ-ರೂಪಗಳನ್ನು ವಿಂಗಡಿಸಿಕೊಟ್ಟನು. ಹೀಗೆ ಸ್ವಯಂಭು ಬ್ರಹ್ಮನೆಂಬ ಕಾರಣದಿಂದ ಲೋಕಗಳೆಲ್ಲ ಸೃಷ್ಟಿಯಾಗಿ ಮಹತ್ತತ್ತ್ವ ಮೊದಲಾದ ಸಕಲ ವಿಕಾರಾಂತವಾದ ಪ್ರಾಕೃತಸೃಷ್ಟಿಯು ನಡೆಯಿತು.
ಚಂದ್ರಸೂರ್ಯಪ್ರಭೋ ಲೋಕೋ ಗ್ರಹನಕ್ಷತ್ರಮಂಡಿತಃ । ನದೀಭಿಶ್ಚ ಸಮುದ್ರೈಶ್ಚ ಪರ್ವತೈಶ್ಚ ಸಹಸ್ರಶಃ ।। 98 ।। ಪುರೈಶ್ಚ ವಿವಿಧೈ ರಮ್ಯೈಃ ಸ್ಫೀತೈರ್ಜನಪದೈಸ್ತಥಾ । ಅಸ್ಮಿನ್ ಬ್ರಹ್ಮವನೇಽವ್ಯಕ್ತೋ ಬ್ರಹ್ಮಾ ಚರತಿ ಸರ್ವವಿತ್ ।। 99 ।। ಅವ್ಯಕ್ತಬೀಜಪ್ರಭವಸ್ತಸ್ಯೈವಾನುಗ್ರಹೇ ಸ್ಥಿತಃ । ಬುದ್ಧಿಸ್ಕಂಧಮಯಶ್ಚೈವ ಇಂದ್ರಿಯಾಂತರಕೋಟರಃ ।। 100 ।। ಮಹಾಭೂತಪ್ರಕಾಶಶ್ಚ ವಿಶೇಷೈಃ ಪತ್ರವಾಂಸ್ತು ಸಃ । ಧರ್ಮಾಧರ್ಮಸುಪುಷ್ಪಸ್ತು ಸುಖದುಃಖಫಲೋದಯಃ ।। 101 ।। ಆಜೀವಃ ಸರ್ವಭೂತಾನಾಂ ಬ್ರಹ್ಮವೃಕ್ಷಃ ಸನಾತನಃ । ಏತದ್ಬ್ರಹ್ಮವನಂ ಚೈವ ಬ್ರಹ್ಮವೃಕ್ಷಸ್ಯ ತಸ್ಯ ತತ್ ।। 102 ।। ಅವ್ಯಕ್ತಂ ಕಾರಣಂ ಯತ್ತನ್ನಿತ್ಯಂ ಸದಸದಾತ್ಮಕಮ್ । ಪ್ರಧಾನಂ ಪ್ರಕೃತಿಂ ಮಾಯಾಂ ಚೈವಾಹುಸ್ತತ್ತ್ವಚಿಂತಕಾಃ ।। 103 ।। ಇತ್ಯೇಷೋಽನುಗ್ರಹಃ ಸರ್ಗಾ ಬ್ರಹ್ಮನೈಮಿತ್ತಿಕಃ ಸ್ಮೃತಃ । ಅಬುದ್ಧಿಪೂರ್ವಕಾಃ ಸರ್ಗಾ ಬ್ರಹ್ಮಣಃ ಪ್ರಾಕೃತಾಸ್ತ್ರಯಃ ।। 104 ।। ಮುಖ್ಯಾದಯಸ್ತು ಷಟ್ಸರ್ಗಾ ವೈಕೃತಾ ಬುದ್ಧಿಪೂರ್ವಕಾಃ । ವೈಕಲ್ಪಾತ್ಸಂಪ್ರವರ್ತಂತೇ ಬ್ರಹ್ಮಣಸ್ತೇಭಿಮನ್ಯವಃ ।। 105 ।। ಇತ್ಯೇತೇ ಪ್ರಾಕೃತಾಶ್ಚೈವ ವೈಕೃತಾಶ್ಚ ನವ ಸ್ಮೃತಾಃ । ಸರ್ಗಾಃ ಪರಸ್ಪರೋತ್ಪನ್ನಾಃ ಕಾರಣಂ ತು ಬುಧೈಃ ಸ್ಮೃತಮ್ ।। 106 ।।
ಸೃಷ್ಟವಾದ ಪ್ರಪಂಚವು ಚಂದ್ರ-ಸೂರ್ಯರ ಪ್ರಭೆಯಿಂದ ವ್ಯಾಪ್ತವಾಗಿಯೂ, ಗ್ರಹ-ನಕ್ಷತ್ರಮಾಲೆಗಳಿಂದ ಅಲಂಕೃತವಾಗಿಯೂ, ಸಾವಿರಾರು ನದಿ-ಸಮುದ್ರ-ಪರ್ವತಗಳಿಂದ ಕೂಡಿ ವಿಶಾಲವಾಗಿಯೂ ಇದೆ. ವಿವಿಧ ರಮ್ಯ ಪುರಗಳಿಂದಲೂ, ಸಮೃದ್ಧ ಜನಪದಗಳಿಂದಲೂ ತುಂಬಿರುವ ಈ ಬ್ರಹ್ಮವನದಲ್ಲಿ ಸರ್ವಜ್ಞ ಬ್ರಹ್ಮನು ಅವ್ಯಕ್ತರೂಪದಿಂದ ಸಂಚರಿಸುತ್ತಿರುತ್ತಾನೆ. ಕಾರ್ಯ-ಕಾರಣಗಳು ಅಭಿನ್ನ ತತ್ತ್ವಗಳಾದ್ದರಿಂದ ಸೃಷ್ಟಿವನದಲ್ಲಿ ಹುಟ್ಟಿದ ಬ್ರಹ್ಮವೃಕ್ಷವು ಅವ್ಯಕ್ತವೆಂದ ಬೀಜದಿಂದ ಹುಟ್ಟಿ ಅದರ ಅನುಗ್ರಹಾಧೀನವಾಗಿಯೇ ಇದೆ. ಈ ವೃಕ್ಷಕ್ಕೆ ಬುದ್ಧಿ ಎಂಬ ರೆಂಬೆಗಳೂ, ಇಂದ್ರಿಯಗಳೆಂಬ ಪೊಟರೆಗಳೂ ಇವೆ. ಇದಕ್ಕೆ ಆಕಾಶಾದಿ ಮಹಾಭೂತಗಳು ಪ್ರಕಾಶವೂ, ಭೂತವಿಶೇಷಗಳಾದ ಶಬ್ದಾದಿಗಳು ಎಲೆಗಳೂ, ಧರ್ಮ-ಅಧರ್ಮಗಳೆಂಬ ಪುಷ್ಪಗಳೂ, ಸುಖ-ದುಃಖಗಳೆಂಬ ಫಲಗಳೂ ಇವೆ. ಸರ್ವಭೂತಗಳ ಆಧಾರವಾಗಿರುವ ಈ ಬ್ರಹ್ಮವೃಕ್ಷವು ಆಜೀವವೂ ಸನಾತನವೂ ಆಗಿದೆ. ಬ್ರಹ್ಮವನದ ಈ ಬ್ರಹ್ಮವೃಕ್ಷಕ್ಕೆ ಸದಸದಾತ್ಮಕ ರೂಪಗಳಿರುವ ಅವ್ಯಕ್ತವೇ ಕಾರಣವು. ತತ್ವವಿಮರ್ಶಕರು ಈ ಅವ್ಯಕ್ತತ್ತತ್ವವನ್ನು ಪ್ರಧಾನ, ಪ್ರಕೃತಿ, ಅಥವಾ ಮಾಯೆ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಎಲ್ಲ ಸೃಷ್ಟಿಗಳೂ ಬಹ್ಮನಿಂದ ನಿಮಿತ್ತಪೂರ್ವಕವಾಗಿ ಆದ ಅನುಗ್ರಹಸೃಷ್ಟಿಗಳೆಂದು ಹೇಳಲ್ಪಟ್ಟಿವೆ. ಬ್ರಹ್ಮನಿಂದ ಹುಟ್ಟಿದ ಅಬುದ್ಧಿಪೂರ್ವಕವಾದ ಮೂರು ಸೃಷ್ಟಿಗಳು ಪ್ರಾಕೃತಸೃಷ್ಟಿಗಳು. ಮುಖ್ಯಸೃಷ್ಟಿ ಮೊದಲಾದ ಆರು ಸೃಷ್ಟಿಗಳು ಬುದ್ಧಿಪೂರ್ವಕ ಸೃಷ್ಟಿಗಳು. ಇವು ಪ್ರತಿಕಲ್ಪದಲ್ಲಿಯೂ ಬ್ರಹ್ಮನ ಅಭಿದ್ಯಾನದಿಂದ ನಡೆಯುತ್ತಾ ಬರುತ್ತವೆ. ಹೀಗೆ ಪ್ರಾಕೃತ-ವೈಕೃತಗಳೆಂಬ ಒಂಬತ್ತು ಸೃಷ್ಟಿಗಳು ಒಂದರಿಂದೊಂದು ಹುಟ್ಟುವುದರಿಂದ ಪ್ರವಾಹರೂಪವಾಗ ಪರಸ್ಪರರ ಉತ್ಪತ್ತಿಗೆ ಕಾರಣಗಳಾಗಿವೆ ಎಂದು ವಿದ್ವಾಂಸರು ಹೇಳುತ್ತಾರೆ.
ದ್ಯಾಂ ಮೂರ್ಧಾನಂ ಯಸ್ಯ ವೇದಾ ವದಂತಿ ವಿಯನ್ನಾಭಿಂ ಚಂದ್ರಸೂರ್ಯೌಂ ಚ ನೇತ್ರೇ । ದಿಶಃ ಶ್ರೋತ್ರೇ ವಿದ್ಧಿ ಪಾದೌ ಕ್ಷಿತಿಂ ಚ ಸೋಽಚಿಂತ್ಯಾತ್ಮಾ ಸರ್ವಭೂತ ಪ್ರಣೇತಾ ।। 107 ।। ವಕ್ತ್ರಾದ್ಯಸ್ಯ ಬ್ರಾಹ್ಮಣಾಃ ಸಂಪ್ರಸೂತಾ ವಕ್ಷಸಶ್ಚೈವ ಕ್ಷತ್ರಿಯಾಃ ಪೂರ್ವಭಾಗೇ । ವೈಶ್ಯಾ ಊರುಭ್ಯಾಂ ಯಸ್ಯ ಪದ್ಭ್ಯಾಂ ಚ ಶೂದ್ರಾಃ ಸರ್ವೇವರ್ಣಾ ಗಾತ್ರತಃ ಸಂಪ್ರಸೂತಾಃ ।। 108 ।। ನಾರಾಯಣಃ ಪರೋಽವ್ಯಕ್ತಾದಂಡಮವ್ಯಕ್ತಸಂಜ್ಞಿತಮ್ । ಅಂಡಜಸ್ತು ಸ್ವಯಂ ಬ್ರಹ್ಮಾ ಲೋಕಾಸ್ತೇನ ಕೃತಾಃ ಸ್ವಯಮ್ ।। 109 ।। ತತ್ರ ಕಲ್ಪಾನ್ ದಶ ಸ್ಥಿತ್ವಾ ಸತ್ಯಂ ಗಚ್ಛಂತಿ ತೇ ಪುನಃ । ತೇ ಲೋಕಾ ಬ್ರಹ್ಮಲೋಕಂ ವೈ ಅಪರಾವರ್ತಿನೀಂ ಗತಿಮ್ ।। 110 ।। ಆಧಿಪತ್ಯಂ ವಿನಾ ತೇ ವೈ ಐಶ್ವರ್ಯೇಣ ತು ತತ್ಸಮಾಃ । ಭವಂತಿ ಬ್ರಹ್ಮಣಾ ತುಲ್ಯಾ ರೂಪೇಣ ವಿಷಯೇಣ ಚ ।। 111 ।। ತತ್ರ ತೇಽಹ್ಯವತಿಷ್ಠಂತೇ ಪ್ರೀತಿಯುಕ್ತಾಃ ಸ್ವಸಂಯಮಾನ್ । ಅವಶ್ಯಭಾವಿನಾರ್ಥೇನ ಪ್ರಾಕೃತಂ ತನುತೇ ಸ್ವಯಮ್ ।। 112 ।। ನಾನಾತ್ವೇನಾಭಿಸಂಬಂಧಾಸ್ತದಾ ತತ್ಕಾಲಭಾವಿತಾಃ । ಸ್ವಪತೋಽಬುದ್ಧಿಪೂರ್ವ ಹಿ ಬೋಧೋ ಭವತಿ ವೈ ಯಥಾ ।। 113 ।। ತತ್ಕಾಲಭಾವಿತೇ ತೇಷಾಂ ತಥಾ ಜ್ಞಾನಂ ಪ್ರವರ್ತತೇ । ಪ್ರತ್ಯಾಹಾರೈಸ್ತು ಭೇದಾನಾಂ ತೇಷಾಂ ಹಿ ನನು ಶುಷ್ಮಿಣಾಮ್ ।। 114 ।। ತೈಶ್ಚ ಸಾರ್ಧಂ ಪ್ರವರ್ತಂತೇ ಕಾರ್ಯಾಣಿ ಕರಣಾನಿ ಚ । ನಾನಾತ್ವದರ್ಶಿನಾಂ ತೇಷಾಂ ಬ್ರಹ್ಮಲೋಕನಿವಾಸಿನಾಮ್ ।। 115 ।। ವಿನಿವೃತ್ತವಿಕಾರಾಣಾಂ ಸ್ವೇನ ಧರ್ಮೇಣ ತಿಷ್ಠತಾಮ್ ।। 116 ।। ತುಲ್ಯಲಕ್ಷಣಸಿದ್ಧಾಸ್ತು ಶುಭಾತ್ಮಾನೋ ನಿರಂಜನಾಃ । ಪ್ರಾಕೃತೈಃ ಕರಣೋಪೇತಾಃ ಸ್ವಾತ್ಮನ್ಯೇವ ವ್ಯವಸ್ಥಿತಾಃ ।। 117 ।।
ಯಾರ ಕುರಿತು ವೇದಗಳು ತಿಳಿಸುತ್ತವೆಯೋ ಆ ಸರ್ವಭೂತ ಪ್ರಣೇತ ಅಚಿಂತ್ಯನಿಗೆ ದ್ಯುಲೋಕವು ನೆತ್ತಿಯು. ಆಕಾಶವು ನಾಭಿಯು. ಚಂದ್ರ-ಸೂರ್ಯರು ಕಣ್ಣುಗಳು. ದಿಕ್ಕುಗಳು ಕಿವಿಗಳು. ಭೂಮಿಯು ಪಾದದ್ವಯಗಳು. ಅವನ ಮುಖದಿಂದ ಬ್ರಾಹ್ಮಣರೂ, ಎದೆಯಿಂದ ಕ್ಷತ್ರಿಯರೂ. ತೊಡೆಗಳಿಂದ ವೈಶ್ಯರೂ, ಕಾಲುಗಳೂ ಹುಟ್ಟಿದರು. ಹೀಗೆ ಸರ್ವವರ್ಣದವರೂ ಅವನ ಶರೀರದಿಂದಲೇ ಹುಟ್ಟಿದರು. ನಾರಾಯಣನು ಅವ್ಯಕ್ತವೆಂಬ ಸಂಜ್ಞೆಯಿರುವ ಅಂಡಕ್ಕಿಂತಲೂ ಪರನು. ಆ ಅಂಡದಿಂದ ಜನಿಸಿದ ಸ್ವಯಂ ಬ್ರಹ್ಮನು ಲೋಕಗಳನ್ನು ಸೃಷ್ಟಿಸಿದನು. ಈ ಲೋಕಗಳಲ್ಲಿ ಹತ್ತು ಕಲ್ಪಗಳ ಪರ್ಯಂತ ನೆಲೆಸಿ ಅವರು ಪುನಃ ಹಿಂದಿರುಗುವಿಕೆಯು ಇಲ್ಲದ ಬ್ರಹ್ಮಲೋಕ ಅಥವಾ ಸತ್ಯಲೋಕಕ್ಕೆ ಹೋಗುತ್ತಾರೆ. ಅಲ್ಲಿ ಆಧಿಪತ್ಯವಿಲ್ಲದೇ ಐಶ್ವರ್ಯ, ರೂಪ, ವಿಷಯಗಳಲ್ಲಿ ಬ್ರಹ್ಮನ ಸಮಾನರೇ ಆಗುತ್ತಾರೆ. ಅಲ್ಲಿ ಎಲ್ಲರೂ ಸ್ವಸ್ವರೂಪ ಚಿಂತನದಲ್ಲಿ ಆಸಕ್ತರಾಗಿ ಪ್ರೀತಿಯುಕ್ತರಾಗಿರುತ್ತಾರೆ. ಅವರಿಗೆ ಬೇಕಾದುದೆಲ್ಲವನ್ನೂ ಸ್ವಯಂ ಪ್ರಧಾನವು ಒದಗಿಸುತ್ತದೆ. ನಿದ್ರಿಸುತ್ತಿರುವವನಿಗೆ ಅಬುದ್ಧಿಪೂರ್ವಕವಾಗಿಯೇ ಅಂದರೆ ತಾನಾಗಿಯೇ ಎಚ್ಚರವಾಗುವಂತೆ ತತ್ಕಾಲದಲ್ಲಿ ಭಾವಿಸಿಕೊಂಡಿದ್ದ ನಾನಾತ್ವ ಸಂಬಂಧಗಳು ಹೊರಟುಹೋಗುತ್ತವೆ. ಬ್ರಹ್ಮಜ್ಞಾನ ತೇಜಸ್ಸಿನಿಂದ ಜ್ವಲಿಸುವ ಆ ಮುಮುಕ್ಷುಗಳಿಗೆ ಭೇದವಸ್ತುಗಳೆಲ್ಲವೂ ಉಪಸಂಹಾರ ಹೊಂದುತ್ತವೆ. ಪ್ರಪಂಚದಲ್ಲಿ ನಾನಾತ್ವಗಳನ್ನು ಕಾಣುತ್ತಿದ್ದ ಅವರಿಗೆ ಬ್ರಹ್ಮಲೋಕದಲ್ಲಿ ವಾಸಿಸುವಾಗ ಕಾರ್ಯ-ಕರಣಗಳು ಒಂದೇ ಆಗಿ ಕಾಣುತ್ತವೆ ಮತ್ತು ಅವರು ಸ್ವರೂಪ ಧರ್ಮದಲ್ಲಿ ಇದ್ದುಕೊಂಡು ಪ್ರವೃತ್ತಿಶೂನ್ಯರಾಗುತ್ತಾರೆ. ಆ ಶುಭಾತ್ಮರು ಅಲ್ಲಿ ಬ್ರಹ್ಮನಿಗೆ ಸಮಾನ ಲಕ್ಷಣ-ಸಿದ್ಧಿಯುಳ್ಳವರೂ, ನಿರ್ದೋಷರೂ, ಸಾಕ್ಷಾತ್ ಪ್ರಕೃತಿಯಿಂದ ಹುಟ್ಟಿದ ಕರಣಗಳಿಂದ ಕೂಡಿ ಸ್ವಾತ್ಮಸ್ವರೂಪದಲ್ಲಿಯೇ ವ್ಯವಸ್ಥಿತರಾಗಿರುತ್ತಾರೆ.
ಪ್ರಖ್ಯಾಪಯಿತ್ವಾ ಚಾತ್ಮಾನಂ ಪ್ರಕೃತಿಸ್ತ್ವೇಷು ತತ್ತ್ವತಃ । ಪುರುಷಾನ್ಯಬಹುತ್ವೇನ ಪ್ರತೀತಾತ್ರಪ್ರವರ್ತತೇ ।। 118 ।। ಪ್ರವರ್ತತೇ ಪುನಃ ಸರ್ಗಸ್ತೇಷಾಂ ಸಾ ಕಾರಣಾತ್ಮನಾಮ್ । ಸಂಯೋಗೇ ಪ್ರಕೃತಿರ್ಜ್ಞೇಯಾ ಮುಕ್ತಾನಾಂ ತತ್ತ್ವದರ್ಶಿನಾಮ್ ।। 119 ।। ತತ್ರಾಪವರ್ಗಿಣಾಂ ತೇಷಾಮಪುನರ್ಭಾರಗಾಮಿನಾಮ್ । ಅಭಾವತಃ ಪುನಃ ಸತ್ಯಂ ಶಾಂತಾನಾಮರ್ಚಿಷಾಮಿವ ।। 120 ।।
ಪ್ರಕೃತಿಯು ತನ್ನ ನಿಜಸ್ವರೂಪವನ್ನು ಪ್ರಕಟಿಸಿಕೊಂಡು, ತತ್ತ್ವಗಳಲ್ಲಿ ವ್ಯಾಪಿಸಿಕೊಂಡು, ಪುರುಷನ ಅನೇಕತ್ವದಂತೆ ಕಾಣಿಸಿಕೊಂಡು ಈ ಜಗತ್ತಿನಲ್ಲಿ ಕಾರ್ಯನಿರ್ವಹಿಸುತ್ತದೆ. ಕಾರಣಸ್ವರೂಪನಾದ ಪುರುಷನ ಸಂಯೋಗದಿಂದ ಪ್ರಕೃತಿಯು ಪುನಃ ಸೃಷ್ಟಿಯನ್ನು ಪ್ರಾರಂಭಿಸುತ್ತದೆ. ಆದರೆ ತತ್ತ್ವವನ್ನು ಅರಿತ ಮುಕ್ತರಿಗೆ ಆ ಸಂಯೋಗವೇ ಪ್ರಕೃತಿ ಎಂದು ತಿಳಿಯಲ್ಪಡುತ್ತದೆ. ಅಲ್ಲಿ ಬ್ರಹ್ಮಲೋಕದಲ್ಲಿ ಅಪವರ್ಗವನ್ನು ಅರ್ಥಾತ್ ಮೋಕ್ಷವನ್ನು ಪಡೆದವರು ಕಾರಣಗಳ ಅಭಾವದಿಂದ ಮತ್ತೆ ಸೃಷ್ಟಿಯಾಗುವುದಿಲ್ಲ, ಪುನರ್ಜನ್ಮಕ್ಕೆ ಒಳಗಾಗುವುದಿಲ್ಲ. ಪ್ರಕೃತಿ-ಪುರುಷರ ಭೇದಜ್ಞಾನವು ಲಯವಾದಾಗ ಶಾಂತವಾದ ಅಗ್ನಿಯು ಅಗ್ನಿತತ್ತ್ವದಲ್ಲಿ ಐಕ್ಯವನ್ನು ಹೊಂದುವಂತೆ ಸ್ವರೂಪದಲ್ಲಿಯೇ ಇರುತ್ತಾರೆ.
ತತಸ್ತೇಷು ಗತೇಷೂರ್ಧ್ವಂ ತ್ರೈಲೋಕ್ಯಾತ್ತು ಮುದಾತ್ಮಸು । ತೇ ಸಾರ್ಧಂ ಯೈರ್ಮಹರ್ಲೋಕಸ್ತದಾನಾಸಾದಿತಸ್ತು ವೈ । ತಚ್ಛಿಷ್ಯಾ ಯೇಹ ತಿಷ್ಠಂತಿ ಕಲ್ಪದಾಹ ಉಪಸ್ಥಿತೇ ।। 121 ।। ಗಂಧರ್ವಾದ್ಯಾಃ ಪಿಶಾಚಾಶ್ಚ ಮಾನುಷಾ ಬ್ರಾಹ್ಮಣಾದಯಃ । ಪಶವಃ ಪಕ್ಷಿಣಶ್ಚೈವ ಸ್ಥಾವರಾಃ ಸಸರೀಸೃಪಾಃ ।। 122 ।। ತಿಷ್ಠತ್ಸು ತೇಷು ತತ್ಕಾಲಂ ಪೃಥಿವೀತಲವಾಸಿಷು । ಸಹಸ್ರಂ ಯತ್ತು ರಶ್ಮೀನಾಂ ಸೂರ್ಯಸ್ಯೇಹ ವಿನಶ್ಯತಿ ।। 123 ।। ತೇ ಸಪ್ತರಶ್ಮಯೋ ಭೂತ್ವಾ ಏಕೈಕೋ ಜಾಯತೇ ರವಿಃ । ಕ್ರಮೇಣ ಶತಮಾನಾಸ್ತೇ ತ್ರೀಂಲ್ಲೋಕಾನ್ಪ್ರದಹಂತ್ಯುತ ।। 124 ।। ಜಂಗಮಾನ್ಸ್ಥಾವರಾಂಶ್ಚೈವ ನದೀಃ ಸರ್ವಾಂಶ್ಚ ಪರ್ವತಾನ್ । ಶುಷ್ಕೇ ಪೂರ್ವಮನಾವೃಷ್ಟ್ಯಾ ಯೈಸ್ತೈಶ್ಚೈವ ಪ್ರತಾಪಿತಾಃ ।। 125 ।। ತದಾ ತೇ ವಿವಶಾಃ ಸರ್ವೇ ನಿರ್ದಗ್ಧಾಃ ಸೂರ್ಯರಶ್ಮಿಭಿಃ । ಜಂಗಮಾಃ ಸ್ಥಾವರಾಶ್ಚೈವ ಧರ್ಮಾಧರ್ಮಾದಿಕಾಸ್ತು ವೈ ।। 126 ।। ದಗ್ಧದೇಹಾಸ್ತದಾ ತೇ ತು ಧೂತಪಾಪಾ ಯುಗಾತ್ಯಯೇ । ಖ್ಯಾತಾತಪಾ ವಿನಿರ್ಮುಕ್ತಾಃ ಶುಭಯಾ ಚಾತಿಬಂಧಯಾ ।। 127 ।।
ಭೂಃ, ಭುವಃ, ಮತ್ತು ಸ್ವಃ ಲೋಕಗಳ ನಿವಾಸಿಗಳು ಮುದಾತ್ಮರಾಗಿ ಮಹರ್ಲೋಕವನ್ನು ಸೇರದೇ ಇರುವ ಅವರ ಶಿಷ್ಯರು ಇಲ್ಲಿ ವಾಸವಾಗಿರುತ್ತಾರೆ. ಆಗ ಪ್ರಳಯದ ಕಲ್ಪದಾಹವು ಪ್ರಾಪ್ತವಾಗುತ್ತದೆ. ಹೀಗೆ ಪ್ರಳಯಕಾಲವು ಬಂದಾಗ ಗಂಧರ್ವಾದಿಗಳು, ಪಿಶಾಚ, ಮನುಷ್ಯ, ಬ್ರಾಹ್ಮಣಾದಿಗಳು, ಪಶು-ಪಕ್ಷಿಗಳು, ಸ್ಥಾವರ-ಸರ್ಪಗಳು ಮೊದಲಾದ ಪೃಥ್ವೀತಲವಾಸಿಗಳು ಎಲ್ಲವೂ ಸೂರ್ಯನ ಸಹಸ್ರಕಿರಣಗಳಿಂದ ನಾಶಹೊಂದುತ್ತವೆ. ಅವುಗಳಲ್ಲಿ ಸಾರರೂಪವಾದ ಏಳು ಕಿರಣಗಳು ಮಾತ್ರ ಒಂದೊಂದೂ ಸೂರ್ಯರೂಪವಾಗಿ ಹುಟ್ಟುತ್ತವೆ. ಆ ಸೂರ್ಯರು ಒಂದು ನೂರು ವರ್ಷಗಳ ಕಾಲ ಕ್ರಮವಾಗಿ ಮೂರೂ ಲೋಕಗಳನ್ನು ಸುಡುತ್ತವೆ. ಜಂಗಮ-ಸ್ಥಾವರ, ನದೀ, ಸರ್ವ ಪರ್ವತಗಳು ಮೊದಲೇ ಅನಾವೃಷ್ಟಿಯಿಂದ ಸುಟ್ಟು ಒಣಗಿ ಹೋಗುತ್ತವೆ. ಆಗ ಸ್ಥಾವರ-ಜಂಗಮಗಳೆಲ್ಲವೂ, ಅವುಗಳ ಧರ್ಮ-ಅಧರ್ಮಾದಿಗಳೂ ಸೂರ್ಯನ ಕಿರಣಗಳಿಂದ ಸುಟ್ಟುಹೋಗುತ್ತವೆ. ಆ ಧರ್ಮಾದಿಗಳು ಸುಟ್ಟುಹೋದ ದೇಹವನ್ನು ತ್ಯಜಿಸಿ ಯುಗಾವಸಾನಕಾಲದಲ್ಲಿ ಪಾಪಸಂಪರ್ಕವಿಲ್ಲದವರಾಗಿ, ಬಂಧಮುಕ್ತರಾಗಿ, ಶುಭಕರ ತಪೋಲೋಕದಲ್ಲಿ ನೆಲೆಸುತ್ತಾರೆ.
ತತಸ್ತೇ ಹ್ಯುಪಪದ್ಯಂತೇ ತುಲ್ಯರೂಪೈರ್ಜನೈರ್ಜನಾಃ । ಉಷಿತ್ವಾ ರಜನೀಂ ತೇ ಚ ಬ್ರಹ್ಮಣೋಽವ್ಯಕ್ತ ಜನ್ಮನಃ ।। 128 ।। ಪುನಃ ಸರ್ಗೇ ಭವಂತೀಹ ಮಾನಸ್ಯೋ ಬ್ರಹ್ಮಣಃ ಪ್ರಜಾಃ । ತತಸ್ತೇಷು ಪ್ರಪನ್ನೇಷು ಜನೈಸ್ತ್ರೈಲೋಕ್ಯವಾಸಿಷು ।। 129 ।। ನಿರ್ದಗ್ಧೇಷು ಚ ಲೋಕೇಷು ತದಾ ಸೂರ್ಯೈಸ್ತು ಸಪ್ತಭಿಃ । ವೃಷ್ಟ್ಯಾಕ್ಷಿತೌ ಪ್ಲಾವಿತಾಯಾಂ ವಿಜನೇಷ್ವರ್ಣವೇಷು ವಾ ।। 130 ।। ಸಮುದ್ರಾಶ್ಚೈವ ಮೇಘಾಶ್ಚ ಆಪಶ್ಚೈವಾಥ ಪಾರ್ಥಿವಾಃ । ಶೀರ್ಯಮಾಣಾ ವ್ರಜಂತ್ಯೇವ ಸಲಿಲಾಖ್ಯಾಸ್ತಥಾಚಲಾಃ ।। 131 ।। ಆಗತಾಗತಿಕಂ ಚೈವ ಯದಾ ತು ಸಲಿಲಂ ಬಹು । ಸಂಛಾದ್ಯೇಮಾಂ ಸ್ಥಿತಾಂ ಭೂಮಿಮರ್ಣವಾಖ್ಯಂ ತದಾಭವತ್ ।। 132 ।।
ನಂತರ ಅವ್ಯಕ್ತದಿಂದ ಆವಿರ್ಭೂತನಾದ ಸತ್ಯಲೋಕವಾಸಿಯಾದ ಬ್ರಹ್ಮನೊಡನೆ ಪ್ರಲಯಕಾಲವೆಂಬ ಒಂದು ರಾತ್ರಿಯಲ್ಲಿ ಉಳಿದು ಪುನಃ ಜನರ ರೂಪವನ್ನು ಅನುಕರಿಸುವ ಆಕಾರವನ್ನು ಧರಿಸಿದ ಜನರಾಗಿ ಪರಿಣಮಿಸುತ್ತಾರೆ. ಮತ್ತೆ ಪುನಃ ಸೃಷ್ಟಿಯಲ್ಲಿ ಬ್ರಹ್ಮನ ಮಾನಸಪುತ್ರರಾಗಿ ಜನಿಸುತ್ತಾರೆ. ಬ್ರಹ್ಮನ ಮಾನಸಪುತ್ರರು ಹುಟ್ಟಿದ್ದಾಗ ತ್ರಿಲೋಕಗಳಲ್ಲಿ ವಾಸಿಸುವ ಸಮಸ್ತ ಪ್ರಜೆಗಳೂ, ಲೋಕಗಳೂ, ಏಳು ಸೂರ್ಯರಿಂದ ಸುಟ್ಟುಹೋಗಿರುತ್ತವೆ. ಆಗ ಜಗತ್ಪ್ರಳಯವನ್ನುಂಟು ಮಾಡುವ ವೃಷ್ಟಿಯು ಸುರಿಯಲು ಪ್ರಾರಂಭಿಸಿ, ಭೂಮಿಯೆಲ್ಲವೂ ನೀರಿನಲ್ಲಿ ತೇಲಿಹೋಗಿ, ಜನಶೂನ್ಯವಾದ ಜಗತ್ತೆಲ್ಲವೂ ಏಕಾರ್ಣವವಾಗುತ್ತದೆ. ಆಗ ಸಮುದ್ರಗಳು, ಮೇಘಗಳು, ಜಲ, ಪಾರ್ಥಿವಾಂಶ, ಪರ್ವತ ಎಲ್ಲವೂ ನೀರಿನ ಭರಕ್ಕೆ ಸಿಲುಕಿ ಜಲಮಯವಾಗಿ ಜೀರ್ಣವಾಗಿ ಬಿಡುತ್ತವೆ. ಸಂಪೂರ್ಣ ಜಲಮಯವಾಗಿರುವ ಆ ಅವಸ್ಥೆಯಲ್ಲಿ ಎಲ್ಲೆಡೆಯಲ್ಲೂ ವಿಸ್ತಾರವಾಗಿ ಹರಡಿದ ನೀರು ಗತಿ-ಅಗತಿಗಳಿಂದ ಚಲಿಸುತ್ತಾ, ಈ ಸಮಸ್ತ ಭೂಮಿಯನ್ನೂ ಮುಳುಗಿಸಿ, ಅಚ್ಛಾದನೆ ಮಾಡಿ ಅರ್ಣವವೆಂಬ ಸಂಜ್ಞೆಯನ್ನು ಪಡೆಯುತ್ತದೆ.
ಆಭಾತಿ ಯಸ್ಮಾಚ್ಚಾಭಾಸಾದ್ಭಾಶಬ್ದಃ ಕಾಂತಿದೀಪ್ತಿಷು । ಸ ಸರ್ವಃ ಸಮನುಪ್ರಾಪ್ತಾಮಾಸಾಂ ಭಾಭ್ಯೋ ವಿಭಾವ್ಯತೇ ।। 133 ।। ತದಂತಸ್ತನುತೇ ಯಸ್ಮಾತ್ಸರ್ವಾಂ ಪೃಥ್ವೀಂ ಸಮಂತತಃ । ಧಾತುಸ್ತನೋತಿ ವಿಸ್ತಾರಂ ತತೋಽಪತನವಃ ಸ್ಮೃತಾಃ ।। 134 ।। ಶಾರ ಇತ್ಯೇವ ಶೀರ್ಣೇ ತು ನಾನಾರ್ಥೋ ಧಾತುರುಚ್ಯತೇ । ಏಕಾರ್ಣವೇ ಭವಂತ್ಯಾಪೋ ನ ಶೀರ್ಣಾಸ್ತೇನ ತಾ ನರಾಃ ।। 135 ।।
“ಭಾ” ಎಂಬ ಧಾತುವು ಕಾಂತಿ ಅಥವಾ ದೀಪ್ತಿ ಎಂಬ ಅರ್ಥದ್ಲಲಿ ಧಾತುಪಾಠದಲ್ಲಿ ಪಠಿತವಾಗಿದೆ. ಆ ಅರ್ಥವನ್ನು ಅನುಸರಿಸಿ, “ಆಭಾತಿ ಯಸ್ಮಾತ್” – ಯಾವುದರಿಂದ ಸಕಲವೂ ಪ್ರಕಾಶಿತಗೊಳ್ಳುತ್ತದೆಯೋ ಎಂಬ ವ್ಯುತ್ಪತ್ತಿಯಿಂದ ಮತ್ತೊಂದನ್ನು ಪ್ರಕಾಶಗೊಳಿಸುವ ಶಕ್ತಿಯಿಂದ ಆಭಾಸ ಎಂದಾಗುತ್ತದೆ. ಪ್ರಳಯಕಾಲದ ಜಲದ ಕಾಂತಿಗಳಿಂದ ಜಲದಲ್ಲಿ ಅಡಗಿದ ಪ್ರತಿಯೊಂದು ವಸ್ತುವೂ ಪ್ರಕಾಶಿತಗೊಂಡು ತೋರುತ್ತಿರುತ್ತದೆ. ಅಂತಹ ಜಲದೊಳಗೆ, ಸುತ್ತಮುತ್ತಲೂ ಸಮಸ್ತ ಪೃಥ್ವಿಯನ್ನೂ ವಿಸ್ತಾರವಾಗಿಟ್ಟುಕೊಂಡಿರುವುದರಿಂದ ವಿಸ್ತಾರವೆಂಬ ಅರ್ಥದಲ್ಲಿ “ತನು” ಎಂಬ ಧಾತು ಸಂಬಂಧದಿಂದ “ಅಪತನ” ಎಂಬ ಸಂಜ್ಞೆಯಿಂದ ಜಲಗಳು ಕರೆಯಲ್ಪಡುತ್ತವೆ. ಹೀಗೆಯೇ ಜಲಗಳಿಗೆ ನರಾ ಎಂಬ ಇನ್ನೊಂದು ಹೆಸರಿದೆ. ಆ ಸಂಜ್ಞೆಯಲ್ಲಿ ಸೇರಿದ “ರ” ಎನ್ನುವುದು “ಶಾರ” ಧಾತುವಿಗೆ ಸಂಬಂಧಿಸಿದೆ. ಶಾರಧಾತುವು ಶೀರ್ಣ=ಶಿಥಿಲವಾದುದು ಎಂಬ ಅರ್ಥದಿಂದ ಕೂಡಿದೆ. ಏಕಾರ್ಣವ ರೂಪವಾದ ಜಲರಾಶಿಯಲ್ಲಿ ಜಲಗಳು ಶಿಥಿಲವಾಗಿಲ್ಲದೇ ಇರುವುದರಿಂದ ನ+ಶೀರ್ಣಾಃ ಸೇರಿ ನರಾ ಎಂದು ಕರೆಯಲ್ಪಡುತ್ತವೆ.
ತಸ್ಮಿನ್ ಯುಗಸಹಸ್ರಾಂತೇ ಸಂಸ್ಥಿತೇ ಬ್ರಹ್ಮಣೋಽಹನಿ । ತಾವತ್ಕಾಲಂ ರಜನ್ಯಾಂ ಚ ವರ್ತಂತ್ಯಾಂ ಸಲಿಲಾತ್ಮನಃ ।। 136 ।। ತತಸ್ತೇ ಸಲಿಲೇ ತಸ್ಮಿನ್ನಷ್ಟಾಗ್ನೌ ಪೃಥಿವೀತಲೇ । ಪ್ರಶಾಂತವಾತೇಽಂಧಕಾರೇ ನಿರಾಲೋಕೇ ಸಮಂತತಃ ।। 137 ।। ಯೇನೈವಾಧಿಷ್ಠಿತಂ ಹೀದಂ ಬ್ರಹ್ಮಣಃ ಪುರುಷಃ ಪ್ರಭುಃ । ವಿಭಾಗಮಸ್ಯ ಲೋಕಸ್ಯ ಪ್ರಕರ್ತುಂ ಪುನರೈಚ್ಛತ ।। 138 ।। ಏಕರ್ಣವೇ ತತಸ್ತಸ್ಮಿನ್ನಷ್ಟೇ ಸ್ಥಾವರಜಂಗಮೇ । ತದಾ ಭವತಿ ಸ ಬ್ರಹ್ಮಾ ಸಹಸ್ರಾಕ್ಷಃ ಸಹಸ್ರಪಾತ್ ।। 139 ।। ಸಹಸ್ರಶೀರ್ಷಾ ಪುರುಷೋ ರುಕ್ಮವರ್ಣೋಽಹ್ಯತೀಂದ್ರಿಯಃ । ಬ್ರಹ್ಮಾ ನಾರಾಯಣಾಖ್ಯಸ್ತು ಸುಷ್ವಾಪ ಸಲಿಲೇ ತದಾ ।। 140 ।। ಸತ್ತ್ವೋದ್ರೇಕಾತ್ಪ್ರಬುದ್ಧಸ್ತು ಸ ಶೂನ್ಯಂ ಲೋಕಮಮೈಕ್ಷತ । ಅನೇನಾದ್ಯೇನ ಪಾದೇನ ಪುರಾಣಂ ಪರಿಕೀರ್ತಿತಮ್ ।। 141 ।।
ಸಹಸ್ರ ಯುಗಗಳ ಬ್ರಹ್ಮನ ಒಂದು ಹಗಲು ಕಳೆದಾಗ ಅಷ್ಟೇ ಮರಿಮಾಣದ ರಾತ್ರಿಯಲ್ಲಿ ಎಲ್ಲವೂ ಪೂರ್ಣವಾದ ಜಲಾತ್ಮಕವಾಗಿರುತ್ತದೆ. ಸಲಿಲ ರೂಪದಿಂದ ಅಷ್ಟು ರಾತ್ರಿ ಸಮಯವು ಕಳೆಯುವ ವೇಳೆಯಲ್ಲಿ, ಪೃಥ್ವಿ, ಅಗ್ನಿ, ಎಲ್ಲವೂ ಜಲದಲ್ಲಿ ನಷ್ಟವಾಗಿ, ವಾಯುವು ಶಾಂತನಾಗಿ, ಸ್ವಲ್ಪವೂ ತೇಜಸ್ಸಿಲ್ಲದೇ, ಮಹಾಂಧಕಾರವು ಎಲ್ಲೆಲ್ಲಿಯೂ ವ್ಯಾಪ್ತವಾಗಿರುತ್ತದೆ. ಹೀಗಿರುವಾಗ ಪ್ರಭು ಪರಮಾತ್ಮನು ಪರಿಗ್ರಹಿಸಿದ ಪುರುಷಾಕಾರದ ಬ್ರಹ್ಮನು ಹಿಂದೆ ಎಲ್ಲವನ್ನೂ ನಡೆಸಿಕೊಂಡು ಬಂದಂತೆ ಮತ್ತೆ ಈ ಲೋಕಗಳನ್ನು ವಿಭಜಿಸಲು ಬಯಸುತ್ತಾನೆ. ಸ್ಥಾವರ-ಜಂಗಮ ಪ್ರಾಣಿಗಳೆಲ್ಲವೂ ನಾಶಹೊಂದಿ ಎಲ್ಲೆಲ್ಲಿಯೂ ವ್ಯಾಪಿಸಿರುವ ಈ ಏಕಾರ್ಣವದಲ್ಲಿ ಸಹಸ್ರನೇತ್ರ, ಪಾದ, ಶಿರಸ್ಸುಗಳಿಂದ ಕೂಡಿದ, ಚಿನ್ನದ ಬಣ್ಣದ, ಇಂದ್ರಿಯಗಳಿಗೆ ಗೋಚರನಾಗದ, ಪುರುಷರೂಪೀ ಬ್ರಹ್ಮನು ಇರುತ್ತಾನೆ. ಅವನೇ ಪುನಃ ಸೃಷ್ಟಿಯ ಇಚ್ಛೆಯು ಉಂಟಾಗುವ ವರೆಗೆ ನಾರಾಯಣ ರೂಪನಾಗಿ ನೀರಿನಲ್ಲಿ ನಿದ್ದೆಯನ್ನು ಅನುಭವಿಸುತ್ತಾನೆ. ಸತ್ತ್ವಗುಣದ ಉದ್ರೇಕದಿಂದ ಪ್ರಬೋಧವೆಂಬ ವೃತ್ತಿಯನ್ನು ಹೊಂದಿ ಲೋಕವೆಲ್ಲವೂ ಶೂನ್ಯವಾಗಿರುವುದನ್ನು ನೋಡುತ್ತಾನೆ. ಇಲ್ಲಿಯವರೆಗೆ ಪುರಾಣದ ಪ್ರಥಮ ಪಾದವು ಹೇಳಿಯಾಯಿತು.”
ಇತಿ ಶ್ರೀಬ್ರಹ್ಮಾಂಡೇ ಮಹಾಪುರಾಣೇ ವಾಯುಪ್ರೋಕ್ತೇ ಪೂರ್ವಭಾಗೇ ಪ್ರಥಮೇ ಪ್ರಕ್ರಿಯಾಪಾದೇ ಲೋಕಕಲ್ಪನಂ ನಾಮ ಪಂಚಮೋಽಧ್ಯಾಯಃ ।। ಇತಿ ಪ್ರಕ್ರಿಯಾಪಾದಃ ಪ್ರಥಮಃ ।।
ಇದು ಶ್ರೀಬ್ರಹ್ಮಾಂಡಮಹಾಪುರಾಣದಲ್ಲಿ ವಾಯುವು ಹೇಳಿದ ಪೂರ್ವಭಾಗದ ಪ್ರಥಮ ಪ್ರಕ್ರಿಯಾಪಾದದಲ್ಲಿ ಲೋಕಕಲ್ಪನೆ ಎನ್ನುವ ಐದನೇ ಅಧ್ಯಾಯವು. ಇದು ಮೊದಲನೆಯ ಪ್ರಕ್ರಿಯಾಪಾದವು.
[1] ಸಹಸ್ರಯುಗಗಳು ಅಂದರೆ ಸಹಸ್ರ ಮಹಾಯುಗಗಳು – ಒಂದು ಸಾವಿರಬಾರಿ ಕೃತ-ತ್ರೇತಾ-ದ್ವಾಪರ-ಕಲಿಗಳೆಂಬ ಚತುರ್ಯುಗಗಳು ಆಗಿಹೋಗುವ ಕಾಲ – ಅಂದರೆ ಹದಿನಾಲ್ಕು ಮನ್ವಂತರಗಳ ಕಾಲ - ಅಂದರೆ ಒಂದು ಕಲ್ಪ.
[2] “ವೃಷಭ” ಎಂದರೆ ಧರ್ಮದ ಸಂಕೇತವೂ ಆಗಿದೆ. ಪುರಾಣಗಳಲ್ಲಿ ಧರ್ಮವನ್ನು “ವೃಷಭರೂಪದಲ್ಲಿ” ನಿರೂಪಿಸಿದ್ದಾರೆ. ಧರ್ಮೋ ವೃಷಭರೂಪೇಣ ಸ್ಥಿತೋ ಲೋಕಹಿತಾಯ ಚ । ಅರ್ಥಾತ್: ಧರ್ಮನು ಲೋಕಹಿತಕ್ಕಾಗಿ ವೃಷಭ (ಎತ್ತು) ರೂಪದಲ್ಲಿ ನಿಂತಿದ್ದಾನೆ. (ವಿಷ್ಣುಪುರಾಣ) ಇಲ್ಲಿ ವೃಷಭಲಕ್ಷಣಗಳು ಎಂದರೆ ಧರ್ಮದ ಸ್ವಭಾವಗಳಾದ ಸತ್ಯ (ನೈಜತೆ ಮತ್ತು ನಿಷ್ಠೆ), ಶೌಚ (ಶುದ್ಧತೆ, ಪವಿತ್ರ ಚಿಂತನ), ದಯಾ (ಕರುಣೆ ಮತ್ತು ಸಹಾನುಭೂತಿ), ಮತ್ತು ತಪಸ್ಸು (ನಿಯಮ, ಶಿಸ್ತಿನ ಅನುಸರಣೆ). ಕಲಿಯುಗದಲ್ಲಿ ಧರ್ಮವು ಈ ನಾಲ್ಕು ಕಾಲುಗಳಲ್ಲಿ ಮೂರು ಕುಸಿದು, ಒಂದೇ ಕಾಲು (ಸತ್ಯ) ಉಳಿದಿದೆ ಎಂದು ಪುರಾಣಗಳು ಹೇಳುತ್ತವೆ. ಕಲಿಯುಗದ ಧರ್ಮದ ಕುರಿತು ಅನುಬಂಧ 10ನ್ನು ನೋಡಿ. ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವಿನ ವರಾಹಾವತಾರದಲ್ಲಿ ಭೂದೇವಿಯನ್ನು ಪಾತಾಳದಿಂದ ಎತ್ತಿ ಧರ್ಮವನ್ನು ಪುನಃ ಸ್ಥಾಪಿಸುತ್ತಾನೆ. ಅಲ್ಲಿ ಅವನ ರೂಪವನ್ನು ವೃಷಭಸಮಾನ ಎಂದು ಎತ್ತು ಅಥವ ಗೂಳಿಯ ಲಕ್ಷಣಗಳೊಂದಿಗೆ ವರ್ಣಿಸುತ್ತಾರೆ. ಉದಾಹರಣೆಗೆ ಬಲಿಷ್ಠ, ದೃತಮಾನಸ, ಶಾಂತಸ್ವಭಾವ, ಸಹನಶೀಲ, ಸ್ಥಿರ, ಧೈರ್ಯಶಾಲಿ, ಇತ್ಯಾದಿ. ಪುರಾಣಗಳಲ್ಲಿ ವೃಷಭ ಎಂಬ ಶಬ್ದವು ಕೇವಲ ಪ್ರಾಣಿ “ಎತ್ತು” ಅಂಬ ಅರ್ಥದಲ್ಲೇ ಅಲ್ಲ. ಅದನ್ನು ಧರ್ಮದ ಸಂಕೇತದಲ್ಲಿಯೂ, ಸ್ಥೈರ್ಯ-ಧೃತಶಕ್ತಿ, ವೀರ್ಯ/ಶಕ್ತಿ, ಧೈರ್ಯ ಮತ್ತು ಸಹಿಷ್ಣುತೆ ಎಂದೂ ಬಳಸಿದ್ದಾರೆ. ಅಂದರೆ ವರಾಹನ ರೂಪದ ವೃಷಭಲಕ್ಷಣಗಳು ದೇಹಾತ್ಮಕವೂ ಅಲ್ಲದೇ ತತ್ತ್ವಾತ್ಮಕ ಧರ್ಮಲಕ್ಷಣಗಳು.
[3] ದೀಕ್ಷಾ ಎಂದರೆ ಯಜಮಾನನು ಯಜ್ಞಕ್ಕಾಗಿ ಸ್ವತಃ ಶುದ್ಧಿಗೊಳಿಸಿಕೊಂಡು ಯಜ್ಞಕ್ಕೆ ಅರ್ಹನಾಗುವ ಪ್ರಾರಂಭಿಕ ಸಂಸ್ಕಾರ. ಅದರ ಅಂತ್ಯದಲ್ಲಿ ದೀಕ್ಷಾಸಮಾಪ್ತಿ ಎಂಬ ಸಂಕ್ರಮಣ ಸಂಸ್ಕಾರವು ನಡೆಯುತ್ತದೆ. ದೀಕ್ಷೆಯು ಪ್ರಾರಂಭವಾದಾಗ ಯಜಮಾನನು ಕೆಲವು ನಿಯಮಗಳನ್ನು ಅನುಸರಿಸುತ್ತಾನೆ — ಅಹಿಂಸಾ, ಬ್ರಹ್ಮಚರ್ಯ, ಉಪವಾಸ, ನಿಯಮಿತ ಆಹಾರ, ಶುದ್ಧವಾಸ ಇತ್ಯಾದಿ. ದರ್ಶನ, ಉಪಸತ್, ಅಹೀನಾ ಇತ್ಯಾದಿ ಯಜ್ಞದ ಮುಖ್ಯಕರ್ಮಗಳು ಪೂರ್ಣವಾದ ನಂತರ ಈ ದೀಕ್ಷಾವ್ರತವನ್ನು ಸಮಾಪ್ತಗೊಳಿಸುವ ವಿಧಿ ನಡೆಯುತ್ತದೆ — ಅದೇ ದೀಕ್ಷಾಸಮಾಪ್ತಿ. ಶ್ರೌತಪ್ರಕಾರ (ಋಗ್ವೇದ–ಶುಕ್ಲಯಜುರ್ವೇದಾನುಸಾರ) ದೀಕ್ಷಾಸಮಾಪ್ತಿಯಲ್ಲಿ ಕೆಳಗಿನ ಇಷ್ಟಿಗಳು (ಹೋಮಗಳು) ನಡೆಯುತ್ತವೆ: (1) ದೀಕ್ಷಾಸಮಾಪ್ತಿ ಇಷ್ಟಿ - ದೀಕ್ಷಾವ್ರತವನ್ನು ಸಮಾಪ್ತಗೊಳಿಸುವ ಮುಖ್ಯ ಯಾಗ (2) ಅಗ್ನಿಪ್ರಯೋಜನ ಇಷ್ಟಿ - ಅಗ್ನಿಯ ಶಾಂತಿ ಮತ್ತು ಯಜ್ಞಾವಸಾನದಲ್ಲಿ ಪುನಃ ಸ್ಥಾಪನೆ (3) ಇಂದ್ರ-ಅಗ್ನಿ ಇಷ್ಟಿ - ದೀಕ್ಷಾವ್ರತದಿಂದ ಪ್ರಾಪ್ತ ಶಕ್ತಿಯ ಸಮ್ಮಾನಕ್ಕಾಗಿ (4) ಸೋಮಾಭಿಷವ ಇಷ್ಟಿ (ಸೋಮಯಾಗದಲ್ಲಿ ಮಾತ್ರ) - ಸೋಮಯಾಗದ ಪೂರ್ಣಾವಧಿಯ ಸೂಚಕ (5) ಅವಭೃಥ ಸ್ನಾನಾನಂತರ ಇಷ್ಟಿ - ಸಮಾಪ್ತಿಯ ನಂತರ ಶುದ್ಧೀಕರಣಾರ್ಥ ಹೋಮ. ದೀಕ್ಷಾಸಮಾಪ್ತಿಯಲ್ಲಿ ಸಾಮಾನ್ಯವಾಗಿ ಈ ದೇವತೆಗಳನ್ನು ಹೋಮ ಮಾಡಲಾಗುತ್ತದೆ: ಅಗ್ನಿ (ಯಜ್ಞದ ಆಧ್ಯಾತ್ಮಿಕ ಶಕ್ತಿಯ ಸ್ಥಾಪನೆ), ಸೋಮ (ಯಜ್ಞಫಲದ ಪ್ರಾಪ್ತಿ), ಇಂದ್ರ (ಯಜ್ಞದ ಯಶಸ್ಸು), ಮಿತ್ರ–ವರುಣ (ದೀಕ್ಷಾವ್ರತದ ಶುದ್ಧತೆಯ ಸ್ಮರಣೆ) ಮತ್ತು ಪ್ರಜಾಪತಿ (ಸೃಷ್ಟಿತತ್ತ್ವದ ಪುನರ್ನವೀಕರಣ).
[4] ಪ್ರಾಗ್ವಂಶ ಎಂಬ ಯಜ್ಞಶಾಲಾ ಭೂಮಿ ಸ್ವರೂಪ ಎಂದರೇನು ಎಂಬುದನ್ನು ತಿಳಿಯಲು, ನಾವು ಮೊದಲು ಯಜ್ಞಶಾಲೆಯ ನಿರ್ಮಾಣದ ಕ್ರಮವನ್ನು ಮತ್ತು ಅದರ ಭಾಗಗಳ ಶಬ್ದಾರ್ಥ–ತತ್ತ್ವವನ್ನು ತಿಳಿದುಕೊಳ್ಳಬೇಕು. “ಪ್ರಾಗ್ವಂಶ” ಎಂಬ ಪದವು ಎರಡು ಭಾಗಗಳಿಂದ ಕೂಡಿದೆ: ಪ್ರಾಗ್= ಪೂರ್ವದಿಕ್ಕು, ಮುಂದೆ ವಂಶ = ಶ್ರೇಣಿ, ಸಾಲು, ಅಥವಾ ದಿಕ್ಕಿನಲ್ಲಿ ಉದ್ದವಾದ ಪ್ರದೇಶ. ಆದ್ದರಿಂದ ಪ್ರಾಗ್ವಂಶ = ಪೂರ್ವದಿಕ್ಕಿಗೆ ವಿಸ್ತರಿಸಿರುವ ಉದ್ದವಾದ ಪ್ರದೇಶ. ಇದು ಯಜ್ಞಶಾಲೆಯ ಒಂದು ನಿಯತ ಪ್ರತ್ಯೇಕ ವಿಭಾಗ, ಪೂರ್ವಾಭಿಮುಖವಾಗಿ ವಿಸ್ತರಿಸಿದ ಭಾಗ. ಶ್ರೌತಯಾಗದಲ್ಲಿ (ಉದಾ: ಅಗ್ನಿಹೋತ್ರ, ದರ್ಶನ, ಸೋಮಯಾಗ) ಯಜ್ಞಶಾಲೆ (ಯಾಗಮಂಟಪ) ಯು ಹಲವು ವಿಭಾಗಗಳಿಂದ ನಿರ್ಮಿತವಾಗಿರುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳು ನಾಲ್ಕು. (1) ಹವಿರ್ಮಂಡಪ (ಹವಿರಾಗಾರ), ಮಧ್ಯಭಾಗ, ಅಹವನೀಯ, ಗಾರ್ಹಪತ್ಯ ಅಗ್ನಿಗಳಿರುವ ಕೇಂದ್ರಭಾಗ (2) ಪ್ರಾಕ್ಪ್ರಚಾರಿಣೀ, ಪೂರ್ವದಿಕ್ಕು, ಪೂರ್ವದಿಕ್ಕಿಗೆ ತೆರಳುವ ಮಾರ್ಗ (3) ಪ್ರಾಗ್ವಂಶ, ಪೂರ್ವಾಭಿಮುಖವಾಗಿ ಹೊರಗೆ, ಯಜಮಾನನ ಸಭಾಸ್ಥಾನ, ದೇವಯಾನಮಾರ್ಗದ ಆರಂಭ (4) ದಕ್ಷಿಣ / ಉತ್ತರ ಭಾಗಗಳು, ಸಹಾಯಕ ವೇದಿಗಳು , ಆಧ್ವರ್ಯು, ಹೋತೃ ಇತ್ಯಾದಿಗಳ ಸ್ಥಾನ. ಹೀಗಾಗಿ “ಪ್ರಾಗ್ವಂಶ” ಎಂಬುದು ಯಜ್ಞಶಾಲೆಯ ಪೂರ್ವಾಭಿಮುಖ ಉದ್ದವಾದ ಭಾಗ. ಅಲ್ಲಿ ಕೆಲವು ವಿಶೇಷ ಹೋಮಗಳು ಹಾಗೂ ಪ್ರಾರ್ಥನೆಗಳು ನಡೆಯುತ್ತವೆ. ಪ್ರಾಗ್ವಂಶದಲ್ಲಿ ನಡೆಯುವ ಕ್ರಿಯೆಗಳು ನಾಲ್ಕು. (1) ದೀಕ್ಷಾ: ಯಜಮಾನನ ದೀಕ್ಷಾಸಂಸ್ಕಾರ, ಶುದ್ಧೀಕರಣ (2) ಪಶುಬಂಧ: ಪಶುವಿನ ಸ್ಥಾಪನೆ ಅಥವಾ ಬಂಧನ (3) ಪೂರ್ಣಾಹುತಿ / ಪ್ರಾಯಶ್ಚಿತ್ತ: ಯಜ್ಞಾನಂತರ ಶುದ್ಧೀಕರಣಾರ್ಥ ಹೋಮಗಳು (4) ಉಪಸತ್–ಇಷ್ಟಿಗಳು: ಕೆಲವು ಪ್ರಾರಂಭಿಕ ಇಷ್ಟಿಗಳು ಇಲ್ಲಿ ನಡೆಯುತ್ತವೆ. ಅಂದರೆ ಪ್ರಾಗ್ವಂಶವು — ದೀಕ್ಷೆಯಿಂದ ಆರಂಭಿಸಿ ಸಮಾಪ್ತಿ ತನಕ ಪ್ರಮುಖ ವಿಧಿಗಳ ಸ್ಥಳ. ಪ್ರಾಗ್ವಂಶದ ತತ್ತ್ವಾರ್ಥವನ್ನು ಶ್ರೌತಶಾಸ್ತ್ರದಲ್ಲಿ ಹೀಗೆ ವ್ಯಾಖ್ಯಾನಿಸಲಾಗಿದೆ: ಯಜ್ಞಮಂಡಲದ ಪೂರ್ವದಿಕ್ಕು — ದೇವಯಾನಮಾರ್ಗ (ದೇವತೆಗಳ ಮಾರ್ಗ) ಎಂದು ಪರಿಗಣಿತ. ಯಜಮಾನನ ದೀಕ್ಷೆ, ಶುದ್ಧೀಕರಣ, ದೇವಪೂಜೆಗಳು — ದೇವಯಾನದ ಪ್ರವೇಶದ ಸಂಕೇತ. ಹೀಗಾಗಿ, ಯಜ್ಞಶಾಲೆಯ ಪ್ರಾಗ್ವಂಶ = ದೇವಲೋಕಾಭಿಮುಖ ಮಾರ್ಗದ ಕ್ಷೇತ್ರ. ಇದು ಯಜಮಾನನ ಆಧ್ಯಾತ್ಮಿಕ ಪ್ರಯಾಣದ ಆರಂಭಸ್ಥಾನ ಎಂದು ತಾತ್ಪರ್ಯ. ಶ್ರೌತಸೂತ್ರಗಳು ಪ್ರಕಾರ ಪ್ರಾಗ್ವಂಶದ ಆಯಾಮಗಳು ನಿಯತವಾಗಿವೆ. ಉದಾಹರಣೆಗೆ: ಅಗ್ನಿಯ (ಅಹವನೀಯ) ಪೂರ್ವದಲ್ಲಿ ನಿರ್ಮಿತವಾಗಿರುತ್ತದೆ. ಉದ್ದ = ಸುಮಾರು ಯಜಮಾನನ ಹೆಜ್ಜೆಗಳಿಗನುಗುಣ (ದೇಶಾನುಸಾರ). ಅಗಲ = ಮುಖ್ಯ ವೇದಿಗೆ ಸಮಾನ. ಮೃದು ಮಣ್ಣಿನಿಂದ, ಶುದ್ಧವಾಗಿರಬೇಕು. ಹೀಗಾಗಿ ಅದು ಒಂದು ಅಡ್ಡಲಾಗಿ ಉದ್ದವಾದ, ಪೂರ್ವಾಭಿಮುಖವಾದ ವೇದಿಸಮಾನ ಪ್ರದೇಶ. ಪ್ರಾಗ್ವಂಶವೆಂಬ ಯಜ್ಞಶಾಲಾ ಭೂಮಿ ಎಂಬುದು ಯಜ್ಞಮಂಟಪದ ಪೂರ್ವದಿಕ್ಕಿನಲ್ಲಿ ವಿಸ್ತರಿಸಿರುವ, ದೀಕ್ಷೆ ಮತ್ತು ದೇವಪೂಜೆಯ ಶುದ್ಧ ಕ್ಷೇತ್ರ, ಇದು ಯಜಮಾನನ ದೇವಯಾನಯಾತ್ರೆಯ ಆರಂಭವನ್ನು ಸೂಚಿಸುವ ಪವಿತ್ರ ಭಾಗ ಎಂದು ಶಾಸ್ತ್ರಗಳು ನಿರ್ದಿಷ್ಟಪಡಿಸುತ್ತವೆ.
[5] “ಪಶೂಪಾಕರಣ” ಎಂಬುದು ಶ್ರೌತಯಾಗದ (ಸೋಮಯಾಗ ಅಥವಾ ಇತರ ಯಾಗಗಳ) ಬಹುಮುಖ್ಯ ಮತ್ತು ಸೂಕ್ಷ್ಮವಾದ ವಿಧಿ. ಇದನ್ನು ತಿಳಿಯಲು ಮೊದಲು “ಪಶುಯಾಗ”ದ ತಾತ್ಪರ್ಯವನ್ನು ತಿಳಿದುಕೊಳ್ಳೋಣ. ಸೋಮಯಾಗ, ಅಹೀನ, ಸತ್ರ ಇತ್ಯಾದಿ ಶ್ರೌತಯಾಗಗಳಲ್ಲಿ “ಪಶುಯಾಗ” ಎನ್ನುವುದು ಒಂದು ಉಪಯಾಗ. ಇಲ್ಲಿ “ಪಶು” ಎಂದರೆ, ಪ್ರತಿ ಸಂದರ್ಭದಲ್ಲೂ ಜೀವಂತ ಪ್ರಾಣಿಯಷ್ಟೇ ಅಲ್ಲ, ಒಂದು ಸಾಂಪ್ರದಾಯಿಕ ಪ್ರಾತಿನಿಧ್ಯ (symbolic entity) ಆಗಿರುತ್ತದೆ. ಅದು ಯಜಮಾನನ ಅಹಂಕಾರ ಮತ್ತು ಪಾಪ, ದೋಷಗಳ ಪ್ರತಿನಿಧಿ. ಆದ್ದರಿಂದ “ಪಶೂಪಾಕರಣ” ಎಂಬುದು ಆ ಪಶುವನ್ನು ಯಜ್ಞಕ್ಕೆ ಸಿದ್ಧಗೊಳಿಸುವ ಶುದ್ಧೀಕರಣ ವಿಧಾನ. ಪಶು + ಉಪಾಕರಣ=ಪಶೂಪಕರಣಮ್. ಪಶು=ಯಜ್ಞಕ್ಕಾಗಿ ನೇಮಿಸಲ್ಪಟ್ಟ ಜೀವಿ (ಅಥವಾ ದೋಷರಹಿತ ಪ್ರತೀಕ). ಉಪಾಕರಣ = ಸಿದ್ಧಪಡಿಸುವುದು, ಪೂರ್ವಸಂಸ್ಕಾರ ಮಾಡುವುದು. ಪಶೂಪಾಕರಣ = ಪಶುವನ್ನು ಯಜ್ಞದ ಅರ್ಹನಾಗುವಂತೆ ಸಿದ್ಧಪಡಿಸುವ ಸಂಸ್ಕಾರ. ಪಶೂಪಾಕರಣವು ಸಾಮಾನ್ಯವಾಗಿ ಈ ಕ್ರಮದಲ್ಲಿ ನಡೆಯುತ್ತದೆ: (1) ಪಶುಪರೀಕ್ಷಾ - ಪಶು ಶಾರೀರಿಕವಾಗಿ ನಿರ್ದೋಷಿಯಾಗಿದೆಯೆ ಎಂಬುದರ ಪರಿಶೀಲನೆ (ಉದಾ: ಕಣ್ಣು, ಕಿವಿ, ನಖ, ಶೃಂಗ, ಚರ್ಮ) (2) ಪಶುಸಂಕಲ್ಪ - ಯಜಮಾನನು ದೇವತೆಗಳ ನಾಮಸ್ಮರಣೆಯೊಂದಿಗೆ “ಈ ಪಶು ನನ್ನ ಪಾಪಪ್ರತಿನಿಧಿ” ಎಂದು ನಿಶ್ಚಯಮಾಡುತ್ತಾನೆ (3) ಸ್ನಾನ–ಶುದ್ಧೀಕರಣ - ಪಶುವಿಗೆ ನೀರಿನ ಸ್ನಾನ, ದುರ್ವಾದಿ ಮಂಜನ — ಶುದ್ಧತೆಯ ಸಂಕೇತ (4) ಅಲಂಕಾರ / ಬಂಧನ - ಪಶುವಿಗೆ ಹುಲ್ಲುಮಾಲೆ, ಹಸುರು ತಂತು, ಶ್ರದ್ಧಾ–ಧರ್ಮದ ಬಾಂಧವ್ಯ (5) ಮಂತ್ರೋಚ್ಚಾರಣೆ - “ಮಾ ಹಿಂಸಿ ಪಶುಂ ಪತಯೇ ಸ್ವಾಹಾ” ಇತ್ಯಾದಿ ಮಂತ್ರಗಳ ಪಠಣ — ಹಿಂಸಾಭಾವ ತ್ಯಾಗ (6) ಪಶುಸ್ಥಾಪನೆ - ಪಶುವನ್ನು ಯಜ್ಞವೇದಿಯ ಪೂರ್ವಭಾಗದಲ್ಲಿ ಸ್ಥಾಪಿಸುವುದು (ಪ್ರಾಗ್ವಂಶ ಅಥವಾ ಯೂಪದ ಪಶ್ಚಾತ್). ಈ ವಿಧಿಯನ್ನು ಅಧ್ವರ್ಯು, ಪ್ರಸ್ತೋತೃ, ಹೋತೃ ಮುಂತಾದವರು ಶಾಸ್ತ್ರೋಕ್ತವಾಗಿ ನಿರ್ವಹಿಸುತ್ತಾರೆ.
[6] ಭೂಮಂಡಲದ ಸಪ್ತದ್ವೀಪಗಳು: ಜಂಬು, ಶಾಕ, ಶಾಲ್ಮಲಿ, ಕುಶ, ಕ್ರೌಂಚ, ಪ್ಲಕ್ಷ, ಮತ್ತು ಪುಷ್ಕರ. ಹೆಚ್ಚಿನ ಮಾಹಿತಿಗಾಗಿ ಅನುಬಂಧ 8ನ್ನು ನೋಡಿ.
[7] ಭೂಮಂಡಲದ ಸಪ್ತ ದ್ವೀಪಗಳನ್ನು ಬೇರ್ಪಡಿಸುವ ಸಪ್ತ ಸಮುದ್ರಗಳಿವೆ: (1) ಜಂಬೂದ್ವೀಪ ಮತ್ತು ಪ್ಲಕ್ಷದ್ವೀಪಗಳ ನಡುವೆ ಲವಣೋದ ಸಮುದ್ರ (2) ಪ್ಲಕ್ಷ ಮತ್ತು ಶಾಲ್ಮಲೀ ದ್ವೀಪಗಳ ನಡುವೆ ಇಕ್ಷುರಸೋದ ಸಮುದ್ರ (3) ಶಾಲ್ಮಲೀ ಮತ್ತು ಕುಶ ದ್ವೀಪಗಳ ನಡುವೆ ಸುರೋದ ಸಮುದ್ರ (4) ಕುಶ ಮತ್ತು ಕ್ರೌಂಚದ್ವೀಪಗಳ ನಡುವೆ ಘೃತೋದ ಸಮುದ್ರ (5) ಕ್ರೌಂಚ ಮತ್ತು ಶಾಕದ್ವೀಪಗಳ ನಡುವೆ ಕ್ಷೀರೋದಸಮುದ್ರ (6) ಶಾಕ ಮತ್ತು ಪುಷ್ಕರದ್ವೀಪಗಳ ನಡುವೆ ದಧಿಮಂದೋದ ಸಮುದ್ರ ಮತ್ತು (7) ಪುಷ್ಕರ ದ್ವೀಪ ಮತ್ತು ಲೋಕಾಲೋಕ ಪರ್ವತಗಳ ಮಧ್ಯೆ ಸ್ವಾದೂದಕಸಮುದ್ರ. ಹೆಚ್ಚಿನ ಮಾಹಿತಿಗಾಗಿ ಅನುಬಂಧ 8ನ್ನು ನೋಡಿ.
[8] ಐದು ಜ್ಞಾನೇಂದ್ರಿಯಗಳು (ತ್ವಕ್, ಚಕ್ಷು, ಶ್ರೋತ್ರ, ಜಿಹ್ವಾ, ಘ್ರಾಣ), ಐದು ಕರ್ಮೇಂದ್ರಿಯಗಳು (ವಾಕ್, ಪಾಣಿ, ಪಾದ, ಪಾಯು, ಉಪಸ್ಥ) ಮತ್ತು ಮನಸ್ಸು – ಒಟ್ಟು ಹನ್ನೊಂದು ಇಂದ್ರಿಯಗಳು.
[9] ನವಧಾ ಆತ್ಮಾದಯಃ – ಆ ಎಂಬ ಪದಬಂಧವು ವೇದಾಂತ ಅಥವಾ ಉಪನಿಷತ್ಗಳಲ್ಲಿ ಮಾನವದೇಹದ ಅಂಶಗಳು ಅಥವಾ ಆತ್ಮನೊಂದಿಗೆ ಸಂಬಂಧಪಟ್ಟ ಒಂಬತ್ತು ತತ್ತ್ವಗಳು (ನವ ವಿಧಗಳು) ಎಂಬ ಅರ್ಥದಲ್ಲಿ ಬರುತ್ತದೆ. ಈ ಸಂಧರ್ಭದಲ್ಲಿ “ಆತ್ಮಾದಯಃ” ಎಂದರೆ — ಆತ್ಮದಿಂದ ಪ್ರಾರಂಭವಾಗುವ ತತ್ತ್ವಗಳು, ಅಂದರೆ ಆತ್ಮ ಹಾಗೂ ಅದರ ಉಪಾಧಿಗಳು. (1) ಆತ್ಮ - ಜೀವಚೈತನ್ಯಸ್ವರೂಪ; ಜ್ಞಾನಪ್ರಕಾಶಕ (2) ಬುದ್ಧಿ - ನಿರ್ಣಯಕಾರಿ ಅಂಶ; ತಿಳಿವಳಿಕೆಯ ಕೇಂದ್ರ (3) ಅಹಂಕಾರ - “ನಾನು” ಎನ್ನುವ ಭಾವ; ಅಹಂ ಪ್ರತ್ಯಯ (4) ಮನಸ್ಸು - ಸಂಶಯ, ಚಿಂತನೆ, ಸಂಕಲ್ಪಾದಿಗಳ ಕೇಂದ್ರ (5) ಶ್ರೋತ್ರ – ಕರ್ಣೇಂದ್ರಿಯ, ಶಬ್ದಗ್ರಹಣ (6) ತ್ವಕ್ - ಚರ್ಮ; ಸ್ಪರ್ಶಗ್ರಹಣ (7) ಚಕ್ಷುಸ್ - ದೃಷ್ಟಿ; ರೂಪಗ್ರಹಣ (8) ರಸನಾ - ಜಿಹ್ವೆ; ರುಚಿಗ್ರಹಣ (9) ಘ್ರಾಣ - ನಾಸಿಕಾ; ವಾಸನಾಗ್ರಹಣ