ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 8: ಆಧಿಪತ್ಯಾಭಿಷೇಚನಂ
ಋಷಯ ಊಚುಃ । ಆದಿಸರ್ಗಶ್ಚ ಯಃ ಸೂತ ಕಥಿತೋ ವಿಸ್ತರೇಣ ತು । ಪ್ರತಿಸರ್ಗಶ್ಚ ಯೇ ಯೇಷಾಮಧಿಪಾಸ್ತಾನ್ವದಸ್ವ ನಃ ।। 1 ।।
ಋಷಿಗಳು ಹೇಳಿದರು: “ಸೂತ! ಆದಿಸರ್ಗದ ಕುರಿತು ವಿಸ್ತಾರವಾಗಿ ಹೇಳಿದ್ದೀಯೆ. ಇನ್ನುಮುಂದೆ ಪ್ರತಿಸರ್ಗ[1]ವನ್ನೂ, ಯಾವ್ಯಾವ ವರ್ಗಕ್ಕೆ ಯಾರ್ಯಾರು ಅಧಿಪತಿಗಳು ಎನ್ನುವುದನ್ನೂ ನಮಗೆ ಹೇಳು.”
ಸೂತ ಉವಾಚ । ಯದಾಭಿಷಿಕ್ತಃ ಸಕಲಾಧಿರಾಜ್ಯೇ ಪೃಥುರ್ಧರಿತ್ರ್ಯಾಮಧಿಪೋ ಬಭೂವ । ತದೌಷಧೀನಾಮಧಿಪಂ ಚಕಾರ ಯಜ್ಞವ್ರತಾನಾಂ ತಪಸಾಂ ಚ ಚಂದ್ರಮ್ ।। 2 ।। ನಕ್ಷತ್ರತಾರಾದ್ವಿಜವೃಕ್ಷಗುಲ್ಮಲತಾವಿತಾನಸ್ಯ ಚ ರುಕ್ಮಗರ್ಭಃ । ಅಪಾಮಧೀಶಂ ವರುಣಂ ಧನಾನಾಂ ರಾಜ್ಞಾಂ ಪ್ರಭುಂ ವೈಶ್ರವಣಂ ಚ ತದ್ವತ್ ।। 3 ।। ವಿಷ್ಣುಂ ರವೀಣಾಮಧಿಪಂ ವಸೂನಾಮಗ್ನಿಂ ಚ ಲೋಕಾಧಿಪತಿಶ್ಚಕಾರ । ಪ್ರಜಾಪತೀನಾಮಧಿಪಂ ಚ ದಕ್ಷಂ ಚಕಾರ ಶಕ್ರಂ ಮರುತಾಮಧೀಶಮ್ ।। 4 ।। ದೈತ್ಯಾಧಿಪಾನಾಮಥ ದಾನವಾನಾಂ ಪ್ರಹ್ಲಾದಮೀಶಂ ಚ ಯಮಂ ಪಿತೄಣಾಮ್ । ಪಿಶಾಚರಕ್ಷಃಪಶುಭೂತಯಕ್ಷ ವೇತಾಲರಾಜಂ ತ್ವಥ ಶೂಲಪಾಣಿಮ್ ।। 5 ।।
ಸೂತನು ಹೇಳಿದನು: “ಭೂಮಿಯಲ್ಲಿ ಪೃಥುವಿಗೆ ಪಟ್ಟಾಭಿಷೇಕ ಮಾಡಿ ಸಕಲಾಧಿರಾಜ್ಯವನ್ನೂ ಅವನಿಗೆ ವಹಿಸಿಕೊಟ್ಟಾಗ, ಬ್ರಹ್ಮನು ಓಷಧಿಗಳು, ಯಜ್ಞ-ವ್ರತಗಳು ಮತ್ತು ತಪಸ್ಸುಗಳಿಗೆ ಚಂದ್ರನನ್ನು ಅಧಿಪನನ್ನಾಗಿ ಮಾಡಿದನು. ನಕ್ಷತ್ರ-ತಾರೆಗಳು, ಬ್ರಾಹ್ಮಣರು, ವೃಕ್ಷ-ಗುಲ್ಮ-ಲತೆ-ಪೊದೆಗಳಿಗೆಲ್ಲಾ ಚಂದ್ರನೇ ಒಡೆಯನು. ಹಿರಣ್ಯಗರ್ಭನು ವರುಣನನ್ನು ಜಲಕ್ಕೂ, ರಾಜಾಧಿರಾಜ ವೈಶ್ರವಣ ಕುಬೇರನನ್ನು ಸಂಪತ್ತಿಗೂ ಅಧಿಪತಿಯನ್ನಾಗಿ ಮಾಡಿದನು. ದ್ವಾದಶಾದಿತ್ಯರಿಗೆ ವಿಷ್ಣುವನ್ನು ಅಧಿಪತಿಯನ್ನಾಗಿ ಮಾಡಿದನು. ಅಗ್ನಿಯನ್ನು ವಸುಗಳಿಗೂ, ಪ್ರಜಾಪತಿಗಳಿಗೆ ದಕ್ಷನನ್ನೂ, ಮತ್ತು ಮರುತ್ತರಿಗೆ ಶಕ್ರ ಇಂದ್ರನನ್ನು ಅಧೀಶರನ್ನಾಗಿ ಮಾಡಿದನು. ದೈತ್ಯಾಧಿಪರಿಗೂ ದಾನವರಿಗೂ ಪ್ರಹ್ಲಾದನನ್ನು ಅಧಿಪತಿಯನ್ನಾಗಿಯೂ, ಯಮನನ್ನು ಪಿತೃಗಳ ಅಧಿಪತಿಯನ್ನಾಗಿಯೂ, ಶೂಲಪಾಣಿ ಈಶ್ವರನನ್ನು ಪಿಶಾಚಿ-ರಾಕ್ಷಸ-ಪಶು-ಭೂತ-ಯಕ್ಷ-ಬೇತಾಳರಿಗೆ ರಾಜನನ್ನಾಗಿಯೂ ಮಾಡಿದನು.
ಪ್ರಾಲೇಯಶೈಲಂ ಚ ಪತಿಂ ಗಿರೀಣಾಮೀಶಂ ಸಮುದ್ರಂ ಸಸರಿನ್ನದಾನಾಮ್ । ಗಂಧರ್ವವಿದ್ಯಾಧರಕಿನ್ನರಾಣಾಮೀಶಂ ಪುನಶ್ಚಿತ್ರರಥಂ ಚಕಾರ ।। 6 ।। ನಾಗಾಧಿಪಂ ವಾಸುಕಿಮುಗ್ರವೀರ್ಯಂ ಸರ್ಪಾಧಿಪಂ ತಕ್ಷಕಮಾದಿದೇಶ । ದಿಶಾಂ ಗಜಾನಾಮಧಿಪಂ ಚಕಾರ ಗಜೇಂದ್ರಮೈರಾವತನಾಮಧೇಯಮ್ ।। 7 ।। ಸುಪರ್ಣಮೀಶಂ ಪತತಾಮಥಾಶ್ವರಾಜಾನಮುಚ್ಚೈಃಶ್ರವಸಂ ಚಕಾರ । ಸಿಂಹಂ ಮೃಗಾಣಾಂ ವೃಷಭಂ ಗವಾಂ ಚ ವೃಕ್ಷಂ ಪುನಃ ಸರ್ವವನಸ್ಪತೀನಾಮ್ ।। 8 ।। ಪಿತಾಮಹಃ ಪೂರ್ವಮಥಾಭ್ಯಷಿಂಚಚ್ಚೈತಾನ್ಪುನಃ ಸರ್ವದಿಶಾಧಿನಾಥಾನ್ । ಪೂರ್ವೇಣ ದಿಕ್ಪಾಲಮಥಾಭ್ಯಷಿಂಚನ್ನಾಮ್ನಾ ಸುಧರ್ಮಾಣಮರಾತಿಕೇತುಮ್ ।। 9 ।।
ಹಿಮಾಚಲವನ್ನು ಪರ್ವತಗಳ ರಾಜನನ್ನಾಗಿಯೂ, ಸಮುದ್ರನನ್ನು ನದಿಗಳ ಪತಿಯನ್ನಾಗಿಯೂ, ಮತ್ತು ಚಿತ್ರರಥನನ್ನು ಗಂಧರ್ವ-ವಿದ್ಯಾಧರ-ಕಿನ್ನರರ ಒಡೆಯನನ್ನಾಗಿಯೂ ಮಾಡಿದನು. ಉಗ್ರವೀರ್ಯ ವಾಸುಕಿಯನ್ನು ನಾಗಾಧಿಪನನ್ನಾಗಿಯೂ, ತಕ್ಷಕನನ್ನು ಸರ್ಪಾಧಿಪನನ್ನಾಗಿಯೂ ಮಾಡಿದನು. ಐರಾವತವೆಂಬ ಹೆಸರಿನ ಗಜರಾಜನನ್ನು ದಿಗ್ಗಜಗಳ ಯಜಮಾನನ್ನಾಗಿ ನಿಯೋಜಿಸಿದನು. ಗರುಡನನ್ನು ಪಕ್ಷಿಗಳ ರಾಜನನ್ನಾಗಿಯೂ, ಉಚ್ಛೈಶ್ರವವನ್ನು ಕುದುರೆಗಳ ರಾಜನನ್ನಾಗಿಯೂ, ಸಿಂಹವನ್ನು ಮೃಗಗಳ ಮತ್ತು ವೃಷಭವನ್ನು ಗೋವುಗಳ, ಮತ್ತು ವೃಕ್ಷವನ್ನು ಸರ್ವವನಸ್ಪತಿಗಳ ರಾಜರನ್ನಾಗಿ ಮಾಡಿದನು. ಮೊದಲು ಹೇಳಿದ ಇವರನ್ನು ಹೀಗೆ ಅಧಿಪತ್ಯಸ್ಥಾನಗಳಲ್ಲಿ ಅಭಿಷೇಕಿಸಿ, ಪುನಃ ಎಲ್ಲ ದಿಕ್ಕುಗಳಿಗೂ ಅಧೀಶ್ವರರನ್ನು ನಿಯಮಿಸಿದನು. ಶತ್ರುನಾಶಕನಾದ ಸುಧರ್ಮ ಎನ್ನುವವನು ಪೂರ್ವ ದಿಕ್ಪಾಲಕನಾಗಿ ಅಭಿಷಿಕ್ತನಾದನು.
ತತೋಽಧಿಪಂ ದಕ್ಷಿಣತಶ್ಚಕಾರ ಸರ್ವೇಶ್ವರಂ ಶಂಖಪದಾಭಿಧಾನಮ್ । ಸ ಕೇತುಮಂತಂ ಚ ದಿಗೀಶಮೀಶಶ್ಚಕಾರ ಪಶ್ಚಾದ್ಭುವನಾಂಡಗರ್ಭಃ ।। 10 ।। ಹಿರಣ್ಯರೋಮಾಣಮುದಗ್ದಿಗೀಶಂ ಪ್ರಜಾಪತಿರ್ದೇವಸುತಂ ಚಕಾರ । ಅದ್ಯಾಪಿ ಕುರ್ವಂತಿ ದಿಶಾಮಧೀಶಾಃ ಶತ್ರೂನ್ ದಹಂತಸ್ತು ಭುವೋಽಭಿರಕ್ಷಾಮ್ ।। 11 ।। ಚತುರ್ಭಿರೇಭಿಃ ಪೃಥುನಾಮಧೇಯೋ ನೃಪೋಽಭಿಷಿಕ್ತಃ ಪ್ರಥಮಂ ಪೃಥಿವ್ಯಾಮ್ । ಗತೇಽಂತರೇ ಚಾಕ್ಷುಷನಾಮಧೇಯೇ ವೈವಸ್ವತಾಖ್ಯೇ ಚ ಪುನಃ ಪ್ರವೃತ್ತೇ । ಪ್ರಜಾಪತಿಃ ಸೋಽಸ್ಯ ಚರಾಚರಸ್ಯ ಬಭೂವ ಸೂರ್ಯಾನ್ವಯವಂಶಚಿಹ್ನಃ ।। 12 ।।
ನಂತರ ಭುವನಾಂಡಗರ್ಭ ಬ್ರಹ್ಮನು ಸರ್ವೇಶ್ವರ ಶಂಖಪದ ಎನ್ನುವವನನ್ನು ದಕ್ಷಿಣ ದಿಕ್ಕಿಗೂ, ಕೇತುಮಂತನನ್ನು ಪಶ್ಚಿಮ ದಿಕ್ಕಿಗೂ ಅಧಿಪತಿಯನ್ನಾಗಿ ಮಾಡಿದನು. ಪ್ರಜಾಪತಿಯ ಅಪ್ಪಣೆಯಂತೆ ದೇವಸುತ ಹಿರಣ್ಯರೋಮನು ಉತ್ತರ ದಿಕ್ಪತಿಯಾದನು. ಈ ದಿಕ್ಪತಿಗಳು ಶತ್ರುಗಳನ್ನು ದಹಿಸುತ್ತಾ ಈಗಲೂ ಭೂಮಿಯನ್ನು ರಕ್ಷಿಸುತ್ತಿದ್ದಾರೆ. ಪೃಥುವೆಂಬ ರಾಜನು ಈ ನಾಲ್ವರು ದಿಕ್ಪಾಲಕರೊಂದಿಗೆ ಮೊದಲು ಮಹೀಮಂಡಲದಲ್ಲಿ ಅಭಿಷಿಕ್ತನಾದನು. ಚಾಕ್ಷುಷ ಮನ್ವಂತರವು ಕಳೆದು ವೈವಸ್ವತ ಮನ್ವಂತರವು ಪ್ರಾರಂಭವಾದಾಗ, ಸೂರ್ಯವಂಶದಲ್ಲಿ ಜನಿಸಿದ ಆ ವೈವಸ್ವತ ಮನುವು ಚರಚರಾತ್ಮಕವಾದ ಈ ಜಗತ್ತಿಗೆ ಅಧಿಪತಿಯಾದನು.”
ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ಆಧಿಪತ್ಯಾಭಿಷೇಚನಂ ನಾಮಾಷ್ಟಮೋಽಧ್ಯಾಯಃ ।।
ಇದು ಶ್ರೀಮತ್ಸ್ಯಮಹಾಪುರಾಣದಲ್ಲಿ ಆದಿಸರ್ಗದಲ್ಲಿ ಆಧಿಪತ್ಯಾಭಿಷೇಚನ ಎಂಬ ಎಂಟನೇ ಅಧ್ಯಾಯವು.
[1] ಆದಿಸರ್ಗ ಎನಿಸಿದ ಬ್ರಹ್ಮನ ಸಾಕ್ಷಾತ್ ಸೃಷ್ಟಿಯ ನಂತರ ಅವನ ಮಾನಸಪುತ್ರರಾದ ಮರೀಚಿ ಮೊದಲಾದವರು ನಡೆಸುವ ವಿವಿಧ ಜೀವರಾಶಿಯ ಸೃಷ್ಟಿಯನ್ನು ಪ್ರತಿಸರ್ಗ ಎಂದು ಕರೆಯುತ್ತಾರೆ.