ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 3: ಮುಖೋತ್ಪತ್ತಿಃ

 

ಮನುರುವಾಚ । ಚತುರ್ಮುಖತ್ವಮಗಮತ್ಕಸ್ಮಾಲ್ಲೋಕಪಿತಾಮಹಃ । ಕಥಂ ತು ಲೋಕಾನಸೃಜದ್ಬ್ರಹ್ಮಾ ಬ್ರಹ್ಮವಿದಾಂ ವರಃ ।। 1 ।।

ಮನುವು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ ಲೋಕಪಿತಾಮಹ ಬ್ರಹ್ಮನು ಚತುರ್ಮುಖತ್ವವನ್ನು ಹೇಗೆ ಪಡೆದನು ಮತ್ತು ಅವನು ಲೋಕಗಳನ್ನು ಹೇಗೆ ಸೃಷ್ಟಿಸಿದನು?”

ಮತ್ಸ್ಯ ಉವಾಚ । ತಪಶ್ಚಚಾರ ಪ್ರಥಮಮಮರಾಣಾಂ ಪಿತಾಮಹಃ । ಆವಿರ್ಭೂತಾಸ್ತತೋ ವೇದಾಃ ಸಾಂಗೋಪಾಂಗಪದಕ್ರಮಾಃ ।। 2 ।। ಪುರಾಣಂ ಸರ್ವಶಾಸ್ತ್ರಾಣಾಂ ಪ್ರಥಮಂ ಬ್ರಹ್ಮಣಾ ಸ್ಮೃತಮ್ । ನಿತ್ಯಂ ಶಬ್ದಮಯಂ ಪುಣ್ಯಂ ಶತಕೋಟಿಪ್ರವಿಸ್ತರಮ್ ।। 3 ।। ಅನಂತರಂ ಚ ವಕ್ತ್ರೇಭ್ಯೋ ವೇದಾಸ್ತಸ್ಯ ವಿನಿಃಸೃತಾಃ । ಮೀಮಾಂಸಾ ನ್ಯಾಯವಿದ್ಯಾಶ್ಚ ಪ್ರಮಾಣಾಷ್ಟಕಸಂಯುತಾಃ ।। 4 ।। ವೇದಾಭ್ಯಾಸರತಸ್ಯಾಸ್ಯ ಪ್ರಜಾಕಾಮಸ್ಯ ಮಾನಸಾಃ । ಮನಸಃ ಪೂರ್ವಸೃಷ್ಟಾ ವೈ ಜಾತಾ ಯತ್ತೇನ ಮಾನಸಾಃ ।। 5 ।। ಮರೀಚಿರಭವತ್ಪೂರ್ವಂ ತತೋಽತ್ರಿರ್ಭಗವಾನ್ ಋಷಿಃ । ಅಂಗಿರಶ್ಚಾಭವತ್ಪಶ್ಚಾತ್ಪುಲಸ್ತ್ಯಸ್ತದನಂತರಮ್ ।। 6 ।। ತತಃ ಪುಲಹನಾಮಾ ವೈ ತತಃ ಕ್ರತುರಜಾಯತ । ಪ್ರಚೇತಾಶ್ಚ ತತಃ ಪುತ್ರೋ ವಸಿಷ್ಠಶ್ಚಾಭವತ್ಪುನಃ ।। 7 ।। ಪುತ್ರೋ ಭೃಗುರಭೂತ್ತದ್ವನ್ನಾರದೋಽಪ್ಯಚಿರಾದಭೂತ್ । ದಶೇಮಾನ್ಮಾನಸಾನ್ಬ್ರಹ್ಮಾ ಮುನೀನ್ ಪುತ್ರಾನಜೀಜನತ್ ।। 8 ।।

ಮತ್ಸ್ಯವು ಹೇಳಿತು: “ಅಮರರ ಪಿತಾಮಹನು ಮೊದಲು ತಪಸ್ಸನ್ನು ಮಾಡಿದನು. ಆಗ ಅಂಗ[1], ಉಪಾಂಗ[2], ಪದ[3] ಮತ್ತು ಕ್ರಮ[4]ಗಳಿಂದ ಕೂಡಿದ ವೇದಗಳು ಅವಿರ್ಭವಿಸಿದವು. ಬ್ರಹ್ಮನು ಮೊದಲು ಸರ್ವಶಾಸ್ತ್ರಗಳ ಮೂಲ, ಅನಾದಿ, ಶಬ್ದಮಯ, ಪುಣ್ಯ, ನೂರುಕೋಟಿ ವಿಸ್ತಾರವಾದ ಪುರಾಣವನ್ನು ಸ್ಮರಿಸಿದನು. ನಂತರ ಅವನ ಮುಖಗಳಿಂದ ವೇದಗಳೂ, ಮೀಮಾಂಸ ಶಾಸ್ತ್ರಗಳೂ[5], ಅಷ್ಟಪ್ರಮಾಣಗಳಿಂದ[6] ಕೂಡಿದ ನ್ಯಾಯಶಾಸ್ತ್ರಗಳೂ ಹೊರಬಿದ್ದವು. ಮನಸಾರೆ ಪ್ರಜೆಗಳನ್ನು ಬಯಸಿ ಆ ವೇದಾಭ್ಯಾಸ ನಿರತ ಬ್ರಹ್ಮನು ಮಾನಸ ಪುತ್ರರನ್ನು ಮೊದಲು ಸೃಷ್ಟಿಸಿದನು. ಮನಸ್ಸಿನಿಂದ ಹುಟ್ಟಿದ ಕಾರಣ ಅವರು ಮಾನಸರೆಂದಾದರು. ಮೊದಲು ಮರೀಚಿಯು ಹುಟ್ಟಿದನು, ನಂತರ ಭಗವಾನ್ ಅತ್ರಿ ಋಷಿ. ನಂತರ ಅಂಗಿರನಾದನು. ಅವನ ನಂತರ ಪುಲಸ್ತ್ಯ, ನಂತರ ಪುಲಹ ಎನ್ನುವವನು ಹಾಗೂ ನಂತರ ಕ್ರತುವು ಹುಟ್ಟಿದರು. ನಂತರ ಪುತ್ರ ವಸಿಷ್ಠನು ಹುಟ್ಟಿದನು. ಪುನಃ ಪುತ್ರ ಭೃಗುವಾದನು, ಸ್ವಲ್ಪವೇ ಸಮಯದಲ್ಲಿ ನಾರದನೂ ಹುಟ್ಟಿದನು. ಹೀಗೆ ಬ್ರಹ್ಮನು ಈ ಹತ್ತು ಮುನಿಗಳನ್ನು ಮಾನಸ ಪುತ್ರರನ್ನಾಗಿ ಪಡೆದನು.

ಶಾರೀರಾನಥ ವಕ್ಷ್ಯಾಮಿ ಮಾತೃಹೀನಾನ್ ಪ್ರಜಾಪತೇಃ । ಅಂಗುಷ್ಠಾದ್ದಕ್ಷಿಣಾದ್ದಕ್ಷಃ ಪ್ರಜಾಪತಿರಜಾಯತ ।। 9 ।। ಧರ್ಮಃ ಸ್ತನಾಂತಾದಭವದ್ಧೃದಯಾತ್ಕುಸುಮಾಯುಧಃ । ಭ್ರೂಮಧ್ಯಾದಭವತ್ಕ್ರೋಧೋ ಲೋಭಶ್ಚಾಧರಸಂಭವಃ ।। 10 ।। ಬುದ್ಧೇರ್ಮೋಹಃ ಸಮಭವದಹಂಕಾರಾದಭೂನ್ಮದಃ ಪ್ರಮೋದಶ್ಚಾಭವತ್ಕಂಠಾನ್ಮೃತ್ಯುರ್ಲೋಚನತೋ ನೃಪ । ಭರತಃ ಕರಮಧ್ಯಾತ್ತು ಬ್ರಹ್ಮಸೂನುರಭೂತ್ತತಃ ।। 11 ।। ಏತೇ ನವ ಸುತಾ ರಾಜನ್ಕನ್ಯಾ ಚ ದಶಮೀ ಪುನಃ । ಅಂಗಜಾ ಇತಿ ವಿಖ್ಯಾತಾ ದಶಮೀ ಬ್ರಹ್ಮಣಃ ಸುತಾ ।। 12 ।।

ಇನ್ನು ಮುಂದೆ ತಾಯಿಯಿಲ್ಲದೇ ಪ್ರಜಾಪತಿಯ ಶರೀರದಿಂದಲೇ ಹುಟ್ಟಿದವರ ಕುರಿತು ಹೇಳುತ್ತೇನೆ. ಬಲಗೈಯ ಹೆಬ್ಬೆರಳಿನಿಂದ ದಕ್ಷ ಪ್ರಜಾಪತಿಯು ಹುಟ್ಟಿದನು. ಸ್ತನಗಳಿಂದ ಧರ್ಮನು ಹುಟ್ಟಿದನು. ಹೃದಯದಿಂದ ಕುಸುಮಾಯುಧ ಮನ್ಮಥನು ಹುಟ್ಟಿದನು. ಭ್ರೂಮಧ್ಯದಿಂದ ಕ್ರೋಧ, ತುಟಿಯಿಂದ ಲೋಭ, ಬುದ್ಧಿಯಿಂದ ಮೋಹ, ಅಹಂಕಾರದಿಂದ ಮನ – ಇವರು ಉದ್ಭವಿಸಿದರು. ನೃಪ! ಕಂಠದಿಂದ ಸಂತೋಷ, ಕಣ್ಣಿನಿಂದ ಮೃತ್ಯು, ಮತ್ತು ಅಂಗೈ ಮಧ್ಯದಿಂದ ಬ್ರಹ್ಮಪುತ್ರ ಭರತನು ಸಂಭವಿಸಿದನು. ರಾಜನ್! ಈ ಒಂಬತ್ತು ಜನರು ಗಂಡುಮಕ್ಕಳು. ಹತ್ತನೆಯವಳಾದರೋ ಮಗಳು. ಅವಳು ಅಂಗಜೆಯೆಂದು ವಿಖ್ಯಾತಳಾದಳು.”

ಮನುರುವಾಚ । ಬುದ್ಧೇರ್ಮೋಹೋ ಹ್ಯಹಂಕಾರಾನ್ಮನೋಽಭೂದಿತಿ ಕೀರ್ತಿತಮ್ । ಅಹಂಕಾರಸುತಃ ಕೋ ವಾ ಬುದ್ಧಿರ್ನಾಮ ಕಿಮುಚ್ಯತೇ ।। 13 ।।

ಮನುವು ಹೇಳಿದನು: “ಬುದ್ಧಿಯಿಂದ ಮೋಹವೂ, ಅಹಂಕಾರದಿಂದ ಮನಸ್ಸೂ ಹುಟ್ಟಿದವೆಂದು ಹೇಳಿದೆಯಲ್ಲ. ಅಹಂಕಾರಕ್ಕೆ ಪುತ್ರನೆಂದರೇನು? ಯಾವುದಕ್ಕೆ ಬುದ್ಧಿ ಎಂದು ಕರೆಯುತ್ತಾರೆ?”

ಮತ್ಸ್ಯ ಉವಾಚ । ಸತ್ತ್ವಂ ರಜಸ್ತಮಶ್ಚೈವ ಗುಣತ್ರಯಮುದಾಹೃತಮ್ । ಸಾಮ್ಯಾವಸ್ಥಿತಿರೇತೇಷಾಂ ಪ್ರಕೃತಿಃ ಪರಿಕೀರ್ತಿತಾ ।। 14 ।। ಕೇಚಿತ್ಪ್ರಧಾನಮಿತ್ಯಾಹುರವ್ಯಕ್ತಮಪರೇ ಜಗುಃ । ಏತದೇವ ಪ್ರಜಾಸೃಷ್ಟಿಂ ಕರೋತಿ ವಿಕರೋತಿ ಚ ।। 15 ।। ಗುಣೇಭ್ಯಃ ಕ್ಷುಭ್ಯಮಾಣೇಭ್ಯಸ್ತ್ರಯೋ ದೇವಾ ವಿಜಜ್ಞಿರೇ । ಏಕಾ ಮೂರ್ತಿಸ್ತ್ರಯೋ ಭಾಗಾ ಬ್ರಹ್ಮವಿಷ್ಣುಮಹೇಶ್ವರಾಃ ।। 16 ।।

ಮತ್ಸ್ಯನು ಹೇಳಿದನು: “ಸತ್ತ್ವ, ರಜಸ್ ಮತ್ತು ತಮ ಎಂಬ ಮೂರು ಗುಣಗಳನ್ನು ಹೇಳಿದ್ದಾರೆ. ಇವುಗಳ ಸಾಮ್ಯಾವಸ್ಥೆಯನ್ನೇ ಪ್ರಕೃತಿ ಎಂದು ಕರೆಯುತ್ತಾರೆ. ಕೆಲವರು ಇದು ಪ್ರಧಾನ ಎಂದು ಹೇಳುತ್ತಾರೆ. ಇನ್ನು ಕೆಲವರು ಇದನ್ನು ಅವ್ಯಕ್ತವೆಂದು ಕರೆಯುತ್ತಾರೆ. ಇದೇ ಪ್ರಜಾಸೃಷ್ಟಿಯನ್ನು ಮಾಡುತ್ತದೆ ಮತ್ತು ಅದರಲ್ಲಿ ವ್ಯತ್ಯಾಸವನ್ನು ಹುಟ್ಟಿಸುವುದೂ ಇದೇ. ಗುಣಗಳಲ್ಲಿ ಕ್ಷೋಭೆಯುಂಟಾದಾಗ[7] ಅವುಗಳಿಂದ ಮೂವರು ದೇವತೆಗಳು ಹುಟ್ಟಿದರು. ಒಂದೇ ಶರೀರವು ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ಮೂರು ಭಾಗಗಳಾಯಿತು.

ಸವಿಕಾರಾತ್ಪ್ರಧಾನಾತ್ತು ಮಹತ್ತತ್ತ್ವಂ ಪ್ರಜಾಯತೇ । ಮಹಾನಿತಿ ಯತಃ ಖ್ಯಾತಿರ್ಲೋಕಾನಾಂ ಜಾಯತೇ ಸದಾ ।। 17 ।। ಅಹಂಕಾರಶ್ಚ ಮಹತೋ ಜಾಯತೇ ಮಾನವರ್ಧನಃ । ಇಂದ್ರಿಯಾಣಿ ತತಃ ಪಂಚ ವಕ್ಷ್ಯೇ ಬುದ್ಧಿವಶಾನಿ ತು । ಪ್ರಾದುರ್ಭವಂತಿ ಚಾನ್ಯಾನಿ ತಥಾ ಕರ್ಮವಶಾನಿ ತು ।। 18 ।। ಶ್ರೋತ್ರಂ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚ ಯಥಾಕ್ರಮಮ್ । ಪಾಯೂಪಸ್ಥಂ ಹಸ್ತಪಾದಂ ವಾಕ್ಚೇತೀಂದ್ರಿಯಸಂಗ್ರಹಃ ।। 19 ।।

ಪ್ರಧಾನ ತತ್ತ್ವದಲ್ಲಿ ವಿಕಾರವುಂಟಾದಾಗ ಮಹತ್ತತ್ತ್ವವು ಹುಟ್ಟುತ್ತದೆ. ಇದೇ ಲೋಕದಲ್ಲಿ ಸದಾ ಮಹಾನ್ ಎಂದು ಖ್ಯಾತಿಯನ್ನು ಪಡೆದಿದೆ. ಈ ಮಹತ್ತತ್ತ್ವದಿಂದ ಮಾನವನ್ನು ಹೆಚ್ಚಿಸುವ ಅಹಂಕಾರವು ಹುಟ್ಟಿಕೊಳ್ಳುತ್ತದೆ. ಇದರಿಂದ ಬುದ್ಧಿಯ ವಶದಲ್ಲಿರುವ ಐದು ಜ್ಞಾನೇಂದ್ರಿಯಗಳೂ, ಐದು ಕರ್ಮೇಂದ್ರಿಯಗಳೂ ಉತ್ಪನ್ನವಾಗುತ್ತವೆ. ಅವುಗಳನ್ನು ಹೇಳುತ್ತೇನೆ. ಕೇಳು. ಯಥಾಕ್ರಮವಾಗಿ ಕಿವಿ, ಚರ್ಮ, ಕಣ್ಣು, ನಾಲಗೆ, ಮತ್ತು ಮೂಗು. ಇವು ಜ್ಞಾನೇಂದ್ರಿಯಗಳು. ಗುದ, ಗುಹ್ಯ, ಕೈ, ಕಾಲು, ಮಾತು ಈ ಐದೂ ಕರ್ಮೇಂದ್ರಿಯಗಳು.

ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಪಂಚಮಃ । ಉತ್ಸರ್ಗಾನಂದನಾದಾನಗತ್ಯಾಲಾಪಾಶ್ಚ ತತ್ಕ್ರಿಯಾಃ ।। 20 ।। ಮನ ಏಕಾದಶಂ ತೇಷಾಂ ಕರ್ಮಬುದ್ಧಿಗುಣಾನ್ವಿತಮ್ । ಇಂದ್ರಿಯಾವಯವಾಸ್ಸೂಕ್ಷ್ಮಾನ್ಯುಂಛಂತಿ ಮನೀಷಿಣಃ ।। 21 ।। ಶ್ರಯಂತಿ ಯಸ್ಮಾತ್ತನ್ಮಾತ್ರಾಃ ಶರೀರಂ ತೇನ ಸಂಸ್ಮೃತಮ್ । ಶರೀರಯೋಗಾಜ್ಜೀವೋಽಪಿ ಶರೀರೀ ಗದ್ಯತೇ ಬುಧೈಃ ।। 22 ।।

ಜ್ಞಾನೇಂದ್ರಿಯಗಳು ಐದೂ ಕ್ರಮವಾಗಿ ಶಬ್ದ, ಸ್ಪರ್ಶ, ರೂಪ, ರುಚಿ ಮತ್ತು ವಾಸನೆ – ಇವುಗಳನ್ನು ತಿಳಿಸುತ್ತವೆ. ದೇಹದ ಕಶ್ಮಲವನ್ನು ಹೊರಹಾಕುವುದು, ಆನಂದಪಡುವುದು, ತೆಗೆದುಕೊಳ್ಳುವುದು, ನಡೆಯುವುದು, ಮತ್ತು ನುಡಿಯುವುದು – ಇವು ಐದು ಕರ್ಮೇಂದ್ರಿಯಗಳಿಂದ ನಡೆಯುವ ಕೆಲಸಗಳು. ಮನಸ್ಸು ಈ ಕರ್ಮೇಂದ್ರಿಯ-ಜ್ಞಾನೇಂದ್ರಿಯಗಳ ಗುಣದಿಂದ ಕೂಡಿದ ಹನ್ನೊಂದನೆಯ ಇಂದ್ರಿಯವು. ಇಂದ್ರಿಯಗಳ ಅವಯವಗಳು ಅತಿ ಸೂಕ್ಷ್ಮವಾದವು. ಜ್ಞಾನಿಗಳು ಅವುಗಳನ್ನು ನಿಗ್ರಹಿಸಿ ಕೊಂಡಿರುತ್ತಾರೆ. ಇಂದ್ರಿಯಗಳು ಮತ್ತು ಅವುಗಳ ತನ್ಮಾತ್ರಗಳು ಆಶ್ರಯಿಸಿರುವ ಕಾರಣದಿಂದ ದೇಹಕ್ಕೆ ಶರೀರವೆಂಬ ಹೆಸರಾಯಿತು. ಶರೀರದ ಸಂಬಂಧದಿಂದಾಗಿ ವಿದ್ವಾಂಸರು ಜೀವಿಯನ್ನೂ ಶರೀರೀ ಎಂದು ಕರೆಯುತ್ತಾರೆ.

ಮನಃ ಸೃಷ್ಟಿಂ ವಿಕುರುತೇ ಚೋದ್ಯಮಾನಂ ಸಿಸೃಕ್ಷಯಾ । ಆಕಾಶಂ ಶಬ್ದತನ್ಮಾತ್ರಾದಭೂಚ್ಛಬ್ದಗುಣಾತ್ಮಕಮ್ ।। 23 ।। ಆಕಾಶವಿಕೃತೇರ್ವಾಯುಃ ಶಬ್ದಸ್ಪರ್ಶಗುಣೋಽಭವತ್ । ವಾಯೋಶ್ಚ ಸ್ಪರ್ಶತನ್ಮಾತ್ರಾತ್ತೇಜಶ್ಚಾವಿರಭೂತ್ತತಃ ।। 24 ।। ತ್ರಿಗುಣಂ ತದ್ವಿಕಾರೇಣ ತಚ್ಛಬ್ದಸ್ಪರ್ಶರೂಪವತ್ । ತೇಜೋವಿಕಾರಾದಭವದ್ವಾರಿ ರಾಜಂಶ್ಚತುರ್ಗುಣಮ್ ।। 25 ।। ರಸತನ್ಮಾತ್ರಸಂಭೂತಂ ಪ್ರಾಯೋ ರಸಗುಣಾತ್ಮಕಮ್ । ಭೂಮಿಸ್ತು ಗಂಧತನ್ಮಾತ್ರಾದಭೂತ್ಪಂಚಗುಣಾನ್ವಿತಾ ।। 26 ।। ಪ್ರಾಯೋ ಗಂಧಗುಣಾ ಸಾ ತು ಬುದ್ಧಿರೇಷಾ ಗರೀಯಸೀ

ಸಾತ್ವಿಕಾಹಂಕಾರದಿಂದ ಮನಸ್ಸು ಹುಟ್ಟಿದ ನಂತರ, ಸೃಷ್ಟಿಕಾರ್ಯವನ್ನು ಮುಂದುವರಿಸಲು ಇಚ್ಛಿಸಿದ ತಾಮಸಾಹಂಕಾರದಿಂದ ಶಬ್ದತನ್ಮಾತ್ರೆಯು ಹುಟ್ಟಿತು. ಶಬ್ದತನ್ಮಾತ್ರದಿಂದ ಆಕಾಶವು ಹುಟ್ಟಿತು. ಇದರ ಗುಣ ಶಬ್ದ. ಆಕಾಶವು ವಿಕಾರಹೊಂದಿ ವಾಯುವು ಜನಿಸಿತು. ಇದರಲ್ಲಿ ಶಬ್ದ ಮತ್ತು ಸ್ಪರ್ಶಗಳೆಂಬ ಎರಡು ಗುಣಗಳಿವೆ. ಸ್ಪರ್ಶತನ್ಮಾತ್ರವಿರುವ ವಾಯುವಿನಿಂದ ತೇಜಸ್ಸು ಉದ್ಭವಿಸಿತು. ಇದಕ್ಕೆ ಶಬ್ದ-ಸ್ಪರ್ಶ-ರೂಪವೆಂಬ ಮೂರು ಗುಣಗಳಿವೆ. ರಾಜನ್! ಈ ತ್ರಿಗುಣಗಳ ಮತ್ತು ತೇಜಸ್ಸಿನ ವಿಕಾರದಿಂದ ಶಬ್ದ-ಸ್ಪರ್ಶ-ರೂಪ-ರಸಗಳೆಂಬ ಚತುರ್ಗುಣಗಳಿರುವ ರಸತನ್ಮಾತ್ರಕವಾದ ಜಲವು ಜನಿಸಿತು. ಇದರಿಂದ ಗಂಧ ತನ್ಮಾತ್ರವೂ, ಅದರಿಂದ ಶಬ್ದಾದಿ ಪಂಚಗುಣಾತ್ಮಕವಾದ ಭೂಮಿಯೂ ಉತ್ಪನ್ನವಾದವು. ಇದರ ಮುಖ್ಯ ಗುಣವು ಗಂಧ. ಹೀಗೆ ಜಗತ್ಸೃಷ್ಟಿಗೆ ಕಾರಣವಾದ ಆ ಬುದ್ಧಿ ಅಥವಾ ಮಹತ್ತತ್ತ್ವವೇ ಶ್ರೇಷ್ಠವಾದುದು.

ಏಭಿಃ ಸಂಪಾದಿತಂ ಭುಂಕ್ತೇ ಪುರುಷಃ ಪಂಚವಿಂಶಕಃ ।। 27 ।। ಈಶ್ವರೇಚ್ಛಾವಶಃ ಸೋಽಪಿ ಜೀವಾತ್ಮಾ ಕಥ್ಯತೇ ಬುಧೈಃ । ಏವಂ ಷಡ್ವಿಂಶಕಂ ಪ್ರೋಕ್ತಂ ಶರೀರಮಿಹ ಮಾನವಮ್ ।। 28 ।। ಸಾಂಖ್ಯಂ ಸಂಖ್ಯಾತ್ಮಕತ್ವಾಚ್ಚ ಕಪಿಲಾದಿಭಿರುಚ್ಯತೇ । ಏತತ್ತತ್ತ್ವಾತ್ಮಕಂ ಕೃತ್ವಾ ಜಗದ್ವೇಧಾ ಅಜೀಜನತ್ ।। 29 ।।

ಮೇಲೆ ಹೇಳಿದ 24 ತತ್ತ್ವಗಳಿಗಿಂತ ಬೇರೆಯವನಾಗಿ, ಎಂದರೆ, 25ನೆಯವನಾಗಿರುವ ಜೀವನು ಈ ಇಂದ್ರಿಯಾದಿಗಳಿಂದ ಲಬ್ಧವಾದ ಸುಖ-ದುಃಖಗಳನ್ನು ಅನುಭವಿಸುತ್ತಾನೆ. ಆ ಜೀವಾತ್ಮನೂ ಕೂಡ ಈಶ್ವರನ ಇಚ್ಛಾಧೀನನೆಂದು ಜ್ಞಾನಿಗಳು ಹೇಳುತ್ತಾರೆ. ಹೀಗೆ ಮನುಷ್ಯ ಶರೀರವು 26 ತತ್ತ್ವಗಳ ನೆಲೆಯೆಂದು ಶಾಸ್ತ್ರಗಳಲ್ಲಿ ಪ್ರಸಿದ್ಧವಾಗಿದೆ. ಸಂಖ್ಯಾರೂಪಗಳಾದ್ದರಿಂದ ಕಪಿಲಾದಿ ಮಹರ್ಷಿಗಳು ಈ ತತ್ತ್ವಗಳನ್ನು ಸಾಂಖ್ಯ ಎನ್ನುತ್ತಾರೆ. ಬ್ರಹ್ಮನು ಈ ಜಗತ್ತನ್ನು ಈ ತತ್ತ್ವಗಳ ರೂಪದಲ್ಲಿಯೇ ನಿರ್ಮಿಸಿದನು.

ಸಾವಿತ್ರೀಂ ಲೋಕಸೃಷ್ಟ್ಯರ್ಥಂ ಹೃದಿ ಕೃತ್ವಾ ಸಮಾಸ್ಥಿತಃ । ತತಃ ಸಂಜಪತಸ್ತಸ್ಯ ಭಿತ್ವಾ ದೇಹಮಕಲ್ಮಷಮ್ ।। 30 ।। ಸ್ತ್ರೀರೂಪಮರ್ಧಮಕರೋದರ್ಧಂ ಪುರುಷರೂಪವತ್ । ಶತರೂಪಾ ಚ ಸಾ ಖ್ಯಾತಾ ಸಾವಿತ್ರೀ ಚ ನಿಗದ್ಯತೇ ।। 31 ।। ಸರಸ್ವತ್ಯಥ ಗಾಯತ್ರೀ ಬ್ರಹ್ಮಾಣೀ ಚ ಪರಂತಪ । ತತಃ ಸ್ವದೇಹಸಂಭೂತಾಮಾತ್ಮಜಾಮಿತ್ಯಕಲ್ಪಯತ್ ।। 32 ।। ದೃಷ್ಟ್ವಾ ತಾಂ ವ್ಯಥಿತಸ್ತಾವತ್ಕಾಮಬಾಣಾರ್ದಿತೋ ವಿಭುಃ । ಅಹೋ ರೂಪಮಹೋ ರೂಪಮಿತಿ ಚಾಹ ಪ್ರಜಾಪತಿಃ ।। 33 ।।

ನಂತರ ಲೋಕಸೃಷ್ಟಿಗಾಗಿ ಬ್ರಹ್ಮನು ಏಕಾಗ್ರನಾಗಿ ಹೃದಯದಲ್ಲಿ ಸಾವಿತ್ರಿಯನ್ನು ಧ್ಯಾನಿಸಿದನು. ಆಗ ಅವನ ಅಕಲ್ಮಷ ದೇಹವನ್ನು ಸೀಳಿಕೊಂಡು ಅರ್ಧ ಸ್ತ್ರೀರೂಪವೂ, ಅರ್ಧ ಪುರುಷರೂಪವೂ ಆದ ಕನ್ಯೆಯೋರ್ವಳು ಹುಟ್ಟಿದಳು. ಅವಳು ಶತರೂಪಾ ಎಂದು ಪ್ರಸಿದ್ಧಳಾದಳು. ಪರಂತಪ! ಅವಳಿಗೆ ಸಾವಿತ್ರಿ, ಸರಸ್ವತಿ, ಗಾಯತ್ರಿ ಮತ್ತು ಬ್ರಹ್ಮಾಣಿ ಎಂಬ ಹೆಸರುಗಳೂ ಇವೆ. ತನ್ನ ದೇಹದಿಂದ ಹುಟ್ಟಿದ ಅವಳನ್ನು ಬ್ರಹ್ಮನು ತನ್ನ ಮಗಳೆಂದೇ ಕಲ್ಪಿಸಿಕೊಂಡನು. ಕಾಮಬಾಣ ಪೀಡಿತನಾದ ವಿಭು ಪ್ರಜಾಪತಿ ಬ್ರಹ್ಮನು ಅವಳನ್ನು ನೋಡಿ ತಳಮಳಗೊಂಡು “ಅಹೋ! ಎಂತಹ ರೂಪವು! ಅಹೋ! ಇದೆಂತಹ ರೂಪವು!” ಎಂದು ಹೇಳಿದನು.

ತತೋ ವಸಿಷ್ಠಪ್ರಮುಖಾ ಭಗಿನೀಮಿತಿ ಚುಕ್ರುಶುಃ । ಬ್ರಹ್ಮಾ ನ ಕಿಂಚಿದ್ದದೃಶೇ ತನ್ಮುಖಾಲೋಕನಾದೃತೇ ।। 34 ।। ಅಹೋ ರೂಪಮಹೋ ರೂಪಮಿತಿ ಪ್ರಾಹ ಪುನಃ ಪುನಃ । ತತಃ ಪ್ರಣಾಮನಮ್ರಾಂ ತಾಂ ಪುನರೇವಾಭ್ಯಲೋಕಯತ್ ।। 35 ।। ಅಥ ಪ್ರದಕ್ಷಿಣಂ ಚಕ್ರೇ ಸಾ ಪಿತುರ್ವರವರ್ಣಿನೀ । ಪುತ್ರೇಭ್ಯೋ ಲಜ್ಜಿತಸ್ಯಾಸ್ಯ ತದ್ರೂಪಾಲೋಕನೇಚ್ಛಯಾ ।। 36 ।। ಆವಿರ್ಭೂತಂ ತತ್ರೋ ವಕ್ತ್ರಂ ದಕ್ಷಿಣಂ ಪಾಂಡುಗಂಡವತ್ । ವಿಸ್ಮಯಸ್ಫುರದೋಷ್ಠಂ ಚ ಪಾಶ್ಚಾತ್ಯಮುದಗಾತ್ತತಃ ।। 37 ।। ಚತುರ್ಥಮಭವತ್ಪಶ್ಚಾದ್ವಾಮಂ ಕಾಮಶರಾತುರಮ್ । ತತೋಽನ್ಯದಭವತ್ತಸ್ಯ ಕಾಮಾತುರತಯಾ ತಥಾ ।। 38 ।। ಉತ್ಪತಂತ್ಯಾಸ್ತದಾಕಾಶ ಆಲೋಕನಕುತೂಹಲಾತ್

ಆಗ ವಸಿಷ್ಠಾದಿ ಮುನಿಗಳು “ಇವಳು ನಮ್ಮ ತಂಗಿ!” ಎಂದು ಕೂಗಿಕೊಂಡರು. ಆದರೆ ಲೋಕವನ್ನು ಅನಾದರಿಸಿದ ಬ್ರಹ್ಮನಿಗಾದರೂ ಅವಳ ಮುಖವನ್ನು ನೋಡುವುದರ ಹೊರತಾಗಿ ಮತ್ತೇನೂ ತೋರಲಿಲ್ಲ. “ಎಂತಹ ಅದ್ಭುತ ರೂಪವು! ಎಂತಹ ಅದ್ಭುತ ರೂಪವು!” ಎಂದು ಪುನಃ  ಪುನಃ ಹೇಳಿದನು. ನಂತರ ನಮಸ್ಕರಿಸಲು ಬಗ್ಗಿದ ಅವಳನ್ನು ಪುನಃ ನೋಡಿದನು. ಆ ವರವರ್ಣಿನಿಯು ತಂದೆಗೆ ಪ್ರದಕ್ಷಿಣೆ ಮಾಡಿದಳು. ಅವಳ ಸೌಂದರ್ಯವನ್ನು ನೋಡಬಯಸಿ, ಆದರೆ ಮಕ್ಕಳ ಎದಿರು ಹಾಗೆ ಮಾಡಲು ನಾಚಿಕೊಳ್ಳುತ್ತಿದ್ದ ಆ ಬ್ರಹ್ಮನಿಗೆ ಬಲಗಡೆ ಬಿಳಿಯ ಇನ್ನೊಂದು ಮುಖವು ಹುಟ್ಟಿಕೊಂಡಿತು. ಆಶ್ಚರ್ಯದಿಂದ ತುಟಿಗಳು ನಡುಗುತ್ತಿರಲು, ಮತ್ತೊಂದು ಮುಖವು ಹಿಂದುಗಡೆ ಮೂಡಿತು. ಕೊನೆಗೆ ನಮಸ್ಕಾರ ಮಾಡಿ ಮೇಲಕ್ಕೇಳುವ ಅವಳ ರೂಪವನ್ನು ನೋಡಬೇಕೆಂಬ ಕುತೂಹಲದಿಂದ ಮನ್ಮಥ ಶರಪೀಡಿತವಾಗಿ ಆತುರದಿಂದ ಕೂಡಿದ ಇನ್ನೊಂದು ಮುಖವು ಎಡಗಡೆ ಹುಟ್ಟಿತು. ಇದು ನಾಲ್ಕನೆಯದು.

ಸೃಷ್ಟ್ಯರ್ಥಂ ಯತ್ಕೃತಂ ತೇನ ತಪಃ ಪರಮದಾರುಣಮ್ ।। 39 ।। ತತ್ಸರ್ವಂ ನಾಶಮಗಮತ್ಸ್ವಸುತೋಪಗಮೇಚ್ಛಯಾ । ತೇನೋರ್ಧ್ವಂ ವಕ್ತ್ರಮಭವತ್ಪಂಚಮಂ ತಸ್ಯ ಧೀಮತಃ । ಆವಿರ್ಭವಜ್ಜಟಾಭಿಶ್ಚ ತದ್ವಕ್ತ್ರಂ ಚಾವೃಣೋತ್ಪ್ರಭುಃ ।। 40 ।।

ಜಗತ್ತಿನ ಸೃಷ್ಟಿಗಾಗಿ ಬ್ರಹ್ಮನು ಆಚರಿಸಿದ ಪರಮ ದಾರುಣ ತಪಸ್ಸೆಲ್ಲವೂ ತನ್ನ ಮಗಳನ್ನೇ ಮೋಹಿಸಿದ ಕಾರಣ ನಷ್ಟವಾಯಿತು. ವೇದಶಾಸ್ತ್ರಜ್ಞನಾದ ಅವನ ತಲೆಯ ಮೇಲೆ ಐದನೆಯ ತಲೆಯು ಹುಟ್ಟಲು, ಪ್ರಭುವು ಹುಟ್ಟಿ ಬೆಳೆಯುತ್ತಿದ್ದ ಜಟೆಗಳಿಂದ ಅದನ್ನು ಮುಚ್ಚಿಕೊಂಡನು.

ತತಸ್ತಾನಬ್ರವೀದ್ಬ್ರಹ್ಮಾ ಪುತ್ರಾನಾತ್ಮಸಮುದ್ಭವಾನ್ । ಪ್ರಜಾಃ ಸೃಜಧ್ವಮಭಿತಃ ಸದೇವಾಸುರಮಾನುಷೀಃ ।। 41 ।। ಏವಮುಕ್ತಾಸ್ತತಸ್ಸರ್ವೇ ಸಸೃಜುರ್ವಿವಿಧಾಃ ಪ್ರಜಾಃ । ಗತೇಷು ತೇಷು ಸೃಷ್ಟ್ಯರ್ಥಂ ಪ್ರಣಾಮಾವನತಾಮಿಮಾಮ್ ।। 42 ।। ಉಪಯೇಮೇ ಸ ವಿಶ್ವಾತ್ಮಾ ಶತರೂಪಾಮನಿಂದಿತಾಮ್ । ಸಂಬಭೂವ ತಯಾ ಸಾರ್ಧಮತಿಕಾಮಾತುರೋ ವಿಭುಃ । ಸಲಜ್ಜಾಂ ಚಕಮೇ ದೇವಃ ಕಮಲೋದರಮಂದಿರೇ ।। 43 ।। ಯಾವದಬ್ದಶತಂ ದಿವ್ಯಂ ಯಥಾನ್ಯಃ ಪ್ರಾಕೃತೋ ಜನಃ । ತತಃ ಕಾಲೇನ ಮಹತಾ ತಸ್ಯಾಃ ಪುತ್ರೋಽಭವನ್ಮನುಃ ।। 44 ।। ಸ್ವಾಯಂಭುವ ಇತಿ ಖ್ಯಾತಃ ಸ ವಿರಾಡಿತಿ ನಃ ಶ್ರುತಮ್ । ತದ್ರೂಪಗುಣಸಾಮಾನ್ಯಾದಧಿಪೂರುಷ ಉಚ್ಯತೇ ।। 45 ।। ವೈರಾಜಾ ಯತ್ರ ತೇ ಜಾತಾ ಬಹವಃ ಶಂಸಿತವ್ರತಾಃ । ಸ್ವಾಯಂಭುವಾ ಮಹಾಭಾಗಾಃ ಸಪ್ತ ಸಪ್ತ ತಥಾಪರೇ ।। 46 ।। ಸ್ವಾರೋಚಿಷಾದ್ಯಾಃ ಸರ್ವೇ ತೇ ಬ್ರಹ್ಮತುಲ್ಯಸ್ವರೂಪಿಣಃ । ಔತ್ತಮಿಪ್ರಮುಖಾಸ್ತದ್ವದ್ಯೇಷಾಂ ತ್ವಂ ಸಪ್ತಮೋಽಧುನಾ ।। 47 ।।

ನಂತರ ಬ್ರಹ್ಮನು “ದೇವಾಸುರಮನುಷ್ಯರಿಂದೊಡಗೂಡಿದ ಪ್ರಜೆಗಳನ್ನು ಸೃಷ್ಟಿಸಿ!” ಎಂದು ತನ್ನ ಮಕ್ಕಳಿಗೆ ಹೇಳಿದನು. ಅವನು ಹೇಳಿದಂತೆ ಎಲ್ಲರೂ ವಿವಿಧ ಪ್ರಜೆಗಳನ್ನು ಸೃಷ್ಟಿಸಿದರು. ಸೃಷ್ಟಿಕಾರ್ಯಕ್ಕಾಗಿ ಅವರು ಹೋಗಲು, ತಲೆಬಾಗಿ ನಿಂತಿದ್ದ ಅನಿಂದಿತೆ ಶತರೂಪೆಯನ್ನು ಆ ವಿಶ್ವಾತ್ಮನು ವಿವಾಹವಾದನು. ಅತಿಕಾಮಾತುರನಾಗಿ ಸಾಮಾನ್ಯ ಮನುಷ್ಯನಂತೆ ತನ್ನ ಕಮಲಮಂದಿರದೊಳಗೆ ದೇವಮಾನದ ನೂರುವರ್ಷಗಳ ಕಾಲ ಲಜ್ಜಾಯುಕ್ತೆಯಾದ ಅವಳೊಡನೆ ರಮಿಸಿದನು. ದೀರ್ಘ ಕಾಲದ ನಂತರ ಅವಳಿಗೆ ಮನುವೆಂಬ ಮಗನಾದನು. ಅವನು ಸ್ವಾಯಂಭುವನೆಂದೂ ವಿರಾಟ್ ಎಂದೂ ಖ್ಯಾತನಾದನು. ಗುಣದಲ್ಲಿ ಬ್ರಹ್ಮನಿಗೆ ಸಮಾನನಾದ್ದರಿಂದ ಅವನನ್ನು ಅಧಿಪೂರುಷ ಎಂದೂ ಕರೆಯುತ್ತಾರೆ. ಅವನಿಂದ ಹುಟ್ಟಿದ ಬಹುಮಂದಿಗಳನ್ನು ವೈರಾಜರೆಂದು ಕರೆಯುತ್ತಾರೆ. ಅವರು ಶ್ಲಾಘ್ಯ ವ್ರತದವರು. ಹಾಗೆಯೇ ಸ್ವಯಂಭು ಬ್ರಹ್ಮನ ಉಳಿದ ಮಕ್ಕಳಾದ ಸ್ವಾರೋಚಿಷನೇ ಮೊದಲಾದವರು ಹದಿನಾಲ್ಕು[8] ಜನ. ಅವರೆಲ್ಲರೂ ಬ್ರಹ್ಮಸದೃಶ ರೂಪವುಳ್ಳವರು. ಔತ್ತಮಿ ಮೊದಲಾದ ಆ ಮಕ್ಕಳಲ್ಲಿ ನೀನು ಏಳನೆಯವನು.”

ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ಮುಖೋತ್ಪತ್ತಿರ್ನಾಮ ತೃತೀಯೋಽಧ್ಯಾಯಃ ।।

ಇದು ಶ್ರೀ ಮತ್ಸ್ಯಮಹಾಪುರಾಣದಲ್ಲಿ ಆದಿಸರ್ಗದಲ್ಲಿ ಮುಖೋತ್ಪತ್ತಿ ಎನ್ನುವ ಮೂರನೇ ಅಧ್ಯಾಯವು.

[1] ವೇದಾರ್ಥಜ್ಞಾನಕ್ಕೆ ಅತ್ಯಾವಶ್ಯಕಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ ಎಂಬ ಆರು ಶಾಸ್ತ್ರಗಳಿಗೆ ವೇದಾಂಗಗಳೆಂದು ಹೆಸರು (ಅನುಬಂಧ 3ನ್ನು ನೋಡಿ).

[2] ಪುರಾಣಗಳು, ಧರ್ಮಶಾಸ್ತ್ರಗಳು, ನ್ಯಾಯಶಾಸ್ತ್ರ, ಮತ್ತು ಮೀಮಾಂಸಶಾಸ್ತ್ರ ಇವು ವೇದಗಳ ಉಪಾಂಗಗಳು.

[3] ಅರ್ಥಕ್ಕನುಸಾರವಾಗಿ ಸಂಹಿತರೂಪವಾದ ವೇದವನ್ನು ಪದವಿಭಾಗ ಮಾಡುವುದೇ ಪದ.

[4] ನಿರ್ದಿಷ್ಟ ರೀತಿಯಲ್ಲಿ ಪದಗಳ ಆವೃತ್ತಿಯು ವೇದ ಕ್ರಮ.

[5] ಕರ್ಮಕಾಂಡ ಮತ್ತು ಜ್ಞಾನಕಾಂಡಗಳನ್ನು ಪ್ರತಿಪಾದಿಸುವ ಪೂರ್ವ ಮತ್ತು ಉತ್ತರ ಮೀಮಾಂಸ ಶಾಸ್ತ್ರಗಳು.

[6] ಪ್ರತ್ಯಕ್ಷ, ಅನುಮಾನ, ಶಬ್ದ, ಉಪಮಾನ, ಅರ್ಥಾಪತ್ತಿ, ಅನುಪಲಬ್ಧಿ, ಸಂಭವ ಮತ್ತು ಐತಿಹ್ಯಗಳು ನ್ಯಾಯಶಾಸ್ತ್ರಗಳಲ್ಲಿ ಇರುವ ಅಷ್ಟ ಪ್ರಮಾಣಗಳು.

[7] ಸಾಮ್ಯ ಸ್ಥಿತಿಯಲ್ಲಿದ್ದ ಗುಣಗಳಲ್ಲಿ ಒಂದು ಹೆಚ್ಚು- ಮತ್ತು ಉಳಿದವು ಕಡಿಮೆ ಆದಾಗ.

[8] ಬ್ರಹ್ಮನಿಗೆ ಶತರೂಪೆಯಲ್ಲಿ ಹುಟ್ಟಿದ ಹದಿನಾಲ್ಕು ಮಕ್ಕಳು ಎಲ್ಲರೂ ಮನುಗಳು ಎಂದಾದರು. (1) ಸ್ವಾಯಂಭುವ (2) ಸ್ವಾರೋಚಿಷ (3) ಔತ್ತಮಿ (4) ತಾಮಸ (5) ರೈವತ (6) ಚಾಕ್ಷುಷ (7) ವೈವಸ್ವತ (8) ಸಾವರ್ಣಿ (9) ದಕ್ಷಸಾವರ್ಣಿ (10) ಬ್ರಹ್ಮಸಾವರ್ಣಿ (11) ಧರ್ಮಸಾವರ್ಣಿ (12) ರುದ್ರಸಾವರ್ಣಿ (13) ದೇವಸಾವರ್ಣಿ (14) ಇಂದ್ರಸಾವರ್ಣಿ. ಇವರಲ್ಲಿ ಒಬ್ಬೊಬ್ಬರ ಆಧಿಪತ್ಯಕಾಲಕ್ಕೂ ಮನ್ವಂತರವೆಂದು ಹೆಸರು. ಈಗ ನಡೆಯುತ್ತಿರುವುದು ವೈವಸ್ವತ ಮನ್ವಂತರ.

Leave a Reply

Your email address will not be published. Required fields are marked *