ಶ್ರೀ ಕೂರ್ಮಪುರಾಣ: ಅಧ್ಯಾಯ 98: ನೈಮಿತ್ತಿಕಪ್ರಲಯವರ್ಣನಮ್

 

ಸೂತ ಉವಾಚ । ಏತದಾಕರ್ಣ್ಯ ವಿಜ್ಞಾನಂ ನಾರಾಯಣಮುಖೇರಿತಮ್ । ಕೂರ್ಮರೂಪಧರಂ ದೇವಂ ಪಪ್ರಚ್ಚುರ್ಮುನಯಃ ಪ್ರಭುಮ್ ।। 1 ।।

ಸೂತನು ಹೇಳಿದನು: “ನಾರಾಯಣನ ಮುಖದಿಂದ ಹೊರಬಂದ ಈ ವಿಜ್ಞಾನವನ್ನು ಕೇಳಿ ಮುನಿಗಳು ಕೂರ್ಮರೂಪಧರನಾದ ಪ್ರಭು ದೇವನನ್ನು ಕೇಳಿದರು.

ಮುನಯ ಊಚುಃ । ಕಥಿತಾ ಭವತಾ ಧರ್ಮೋ ಮೋಕ್ಷಜ್ಞಾನಂ ಸವಿಸ್ತರಮ್ । ಲೋಕಾನಾಂ ಸರ್ಗವಿಸ್ತಾರೋ ವಂಶೋ ಮನ್ವಂತರಾಣಿ ಚ ।। 2 ।। ಇದಾನೀಂ ದೇವದೇವೇಶ ಪ್ರಲಯಂ ವಕ್ತುಮರ್ಹಸಿ । ಭೂತಾನಾಂ ಭೂತಭವ್ಯೇಶ ಯಥಾ ಪೂರ್ವಂ ತ್ವಯೋದಿತಮ್ ।। 3 ।।

ಮುನಿಗಳು ಹೇಳಿದರು: “ದೇವದೇವೇಶ! ಭೂತಭವ್ಯೇಶ! ಧರ್ಮಗಳನ್ನೂ, ಮೋಕ್ಷಜ್ಞಾನವನ್ನೂ, ಲೋಕಗಳ ಸೃಷ್ಟಿ-ವಿಸ್ತಾರಗಳನ್ನೂ, ಮನ್ವಂತರಗಳನ್ನು ಮತ್ತು ಮನುಗಳ ವಂಶಗಳನ್ನು ಸುವಿಸ್ತಾರವಾಗಿ ನೀನು ಹೇಳಿದ್ದೀಯೆ. ಇನ್ನು ನೀನು ಹಿಂದೆ ಹೇಳಿದ ಭೂತಗಳ ಪ್ರಳಯದ ಕುರಿತು ಹೇಳಬೇಕು.””

ಸೂತ ಉವಾಚ । ಶ್ರುತ್ವಾ ತೇಷಾಂ ತದಾ ವಾಕ್ಯಂ ಭಗವಾನ್ ಕೂರ್ಮರೂಪಧೃಕ್ । ವ್ಯಾಜಹಾರ ಮಹಾಯೋಗೀ ಭೂತಾನಾಂ ಪ್ರತಿಸಂಚರಮ್ ।। 4 ।।

ಸೂತನು ಹೇಳಿದನು: “ಅವರ ಆ ಮಾತನ್ನು ಕೇಳಿ ಮಹಾಯೋಗೀ ಕೂರ್ಮರೂಪಧರ ಭಗವಂತನು ಭೂತಗಳ ಪ್ರತಿಸಂಚರ[1]ದ ಕುರಿತು ಹೇಳತೊಡಗಿದನು.

ಕೂರ್ಮ ಉವಾಚ । ನಿತ್ಯೋ ನೈಮಿತ್ತಿಕಶ್ಚೈವ ಪ್ರಾಕೃತೋಽತ್ಯಂತಿಕಸ್ತಥಾ । ಚತುರ್ಧಾಯಂ ಪುರಾಣೇಽಸ್ಮಿನ್ ಪ್ರೋಚ್ಯತೇ ಪ್ರತಿಸಂಚರಃ ।। 5 ।। ಯೋಽಯಂ ಸಂದೃಶ್ಯತೇ ನಿತ್ಯಂ ಲೋಕೇ ಭೂತಕ್ಷಯಸ್ತಥಾ । ನಿತ್ಯಃ ಸಂಕೀರ್ತ್ಯತೇ ನಾಮ್ನಾ ಮುನಿಭಿಃ ಪ್ರತಿಸಂಚರಃ ।। 6 ।। ಬ್ರಹ್ಮನೈಮಿತ್ತಿಕೋ ನಾಮ ಕಲ್ಪಾಂತೇ ಯೋ ಭವಿಷ್ಯತಿ । ತ್ರೈಲೋಕ್ಯಸ್ಯಾಸ್ಯ ಕಥಿತಃ ಪ್ರತಿಸರ್ಗೋ ಮನೀಷಿಭಿಃ ।। 7 ।। ಮಹದಾದ್ಯಂ ವಿಶೇಷಾಂತಂ ಯದಾ ಸಂಯಾತಿ ಸಂಕ್ಷಯಮ್ । ಪ್ರಾಕೃತಃ ಪ್ರತಿಸರ್ಗೋಽಯಂ ಪ್ರೋಚ್ಯತೇ ಕಾಲಚಿಂತಕೈಃ ।। 8 ।। ಜ್ಞಾನಾದಾತ್ಯಂತಿಕಃ ಪ್ರೋಕ್ತೋ ಯೋಗಿನಃ ಪರಮಾತ್ಮನಿ । ಪ್ರಲಯಃ ಪ್ರತಿಸರ್ಗೋಽಯಂ ಕಾಲಚಿಂತಾಪರೈರ್ದ್ವಿಜೈಃ ।। 9 ।। ಆತ್ಯಂತಿಕಸ್ತು ಪ್ರಲಯಃ ಕಥಿತೋ ಜ್ಞಾನಸಾಧನ । ನೈಮಿತ್ತಿಕಮಿದಾನೀಂ ವಃ ಕಥಯಿಷ್ಯೇ ಸಮಾಸತಃ ।। 10 ।।

ಕೂರ್ಮನು ಹೇಳಿದನು: “ನಿತ್ಯ, ನೈಮಿತ್ತಿಕ, ಪ್ರಾಕೃತ ಮತ್ತು ಆತ್ಯಂತಿಕ ಎಂದು ಪ್ರಳಯವು ನಾಲ್ಕು ವಿಧವುಳ್ಳದ್ದೆಂದು ಈ ಪುರಾಣದಲ್ಲಿ ಹೇಳಿದೆ. ಲೋಕದಲ್ಲಿ ನಿತ್ಯವೂ ಕಾಣುವ ಭೂತಗಳ ಕ್ಷಯವನ್ನು ಮುನಿಗಳು ನಿತ್ಯಪ್ರಳಯ ಎಂಬ ಹೆಸರಿನಿಂದ ಕರೆಯುತ್ತಾರೆ. ಬ್ರಹ್ಮನ ಹಗಲಿನ ಕಲ್ಪದ ಅಂತ್ಯದಲ್ಲಿ ಈ ಮೂರು[2] ಲೋಕಗಳ ನಾಶವಾಗುವುದನ್ನು ನೈಮಿತ್ತಿಕ ಪ್ರಳಯ ಎಂದು ವಿದ್ವಾಂಸರು ಹೇಳುತ್ತಾರೆ. ಮಹತ್ತಿನಿಂದ ಹಿಡಿದು ಪಂಚಭೂತಗಳ ವರೆಗಿನ ಎಲ್ಲವೂ ಸೇರಿ ಕ್ಷಯವಾಗುವುದನ್ನು ಪ್ರಾಕೃತ ಪ್ರಳಯ ಎಂದು ಕಾಲಚಿಂತಕರು ಹೇಳುತ್ತಾರೆ. ಯೋಗಿಗಳಿಗೆ ಜ್ಞಾನವುಂಟಾಗಿ ಅವರು ಪರಮಾತ್ಮನಲ್ಲಿ ಏಕೀಭಾವವನ್ನು ಹೊಂದುವುದನ್ನು ಇತರ ಕಾಲಚಿಂತಕ ದ್ವಿಜರು ಆತ್ಯಂತಿಕ ಪ್ರಲಯ ಎನ್ನುತ್ತಾರೆ. ಆತ್ಯಂತಿಕ ಪ್ರಳಯಕ್ಕೆ ಜ್ಞಾನವೇ ಸಾಧನವೆಂದು ಹೇಳುತ್ತಾರೆ. ಈಗ ನಾನು ಸಂಕ್ಷಿಪ್ತವಾಗಿ ನೈಮಿತ್ತಕ ಪ್ರಳಯದ ಕುರಿತು ಹೇಳುತ್ತೇನೆ.

ಚತುರ್ಯುಗಸಹಸ್ರಾಂತೇ[3] ಸಂಪ್ರಾಪ್ತೇ ಪ್ರತಿಸಂಚರೇ । ಸ್ವಾತ್ಮಸಂಸ್ಥಾಃ ಪ್ರಜಾಃ ಕರ್ತುಂ ಪ್ರತಿಪೇದೇ ಪ್ರಜಾಪತಿಃ ।। 11 ।। ತತೋಽಭವತ್ತ್ವನಾವೃಷ್ಟಿಸ್ತೀವ್ರಾ ಸಾ ಶತವಾರ್ಷಿಕೀ । ಭೂತಕ್ಷಯಕರೀ ಘೋರಾ ಸರ್ವಭೂತಕ್ಷಯಂಕರೀ ।। 12 ।। ತತೋ ಯಾನ್ಯಲ್ಪಸಾರಾಣಿ ಸತ್ತ್ವಾನಿ ಪೃಥಿವೀತಲೇ[4] । ತಾನಿ ಚಾಗ್ರೇ ಪ್ರಲೀಯಂತೇ ಭೂಮಿತ್ವಮುಪಯಾಂತಿ ಚ ।। 13 ।। ಸಪ್ತರಶ್ಮಿರಥೋ ಭೂತ್ವಾ ಸಮುತ್ತಿಷ್ಠನ್ ದಿವಾಕರಃ । ಅಸಹ್ಯರಶ್ಮಿರ್ಭವತಿ ಪಿಬನ್ನಂಭೋ ಗಭಸ್ತಿಭಿಃ ।। 14 ।। ತಸ್ಯ ತೇ ರಶ್ಮಯಃ ಸಪ್ತ ಪಿಬಂತ್ಯಂಬು ಮಹಾರ್ಣವೇ । ತೇನಾಹಾರೇಣ ತಾ ದೀಪ್ತ್ವಾ ಸಪ್ತಸೂರ್ಯಾ ಭವಂತ್ಯುತ ।। 15 ।। ತತಸ್ತೇ ರಶ್ಮಯಃ ಸಪ್ತ ಶೋಷಯಿತ್ವಾ ಚತುರ್ದಿಶಮ್ । ಚತುರ್ಲೋಕಮಿಮಂ ಸರ್ವಂ ದಹಂತಿ ಶಿಖಿನೋ ಯಥಾ ।। 16 ।। ವ್ಯಾಪ್ನುವಂತಶ್ಚ ತೇ ದೀಪ್ತಾ ಊರ್ಧ್ವಂ ಚಾಧಃ ಸ್ವರಶ್ಮಿಭಿಃ । ದೀಪ್ಯಂತೇ ಭಾಸ್ಕರಾಃ ಸಪ್ತ ಯುಗಾಂತಾಗ್ನಿಪ್ರದೀಪಿತಾಃ ।। 17 ।।

ಸಾವಿರ ಚತುರ್ಯುಗಗಳ ಅಂತ್ಯದಲ್ಲಿ ಪ್ರಳಯವು ಸಂಭವಿಸುವಾಗ ಪ್ರಜಾಪತಿಯು ಸಮಸ್ತ ಪ್ರಜೆಗಳನ್ನು ತನ್ನಲ್ಲಿ ಅಡಗಿಸಿಕೊಳ್ಳಬೇಕೆಂದು ಸಂಕಲ್ಪಿಸುತ್ತಾನೆ. ಆಗ ಪ್ರಾಣಿಗಳನ್ನು ನಾಶಮಾಡುವ, ಸರ್ವಭೂತಗಳನ್ನು ನಾಶಪಡಿಸುವ ಘೋರವಾದ ನೂರು ವರ್ಷಗಳ ತೀವ್ರ ಅನಾವೃಷ್ಟಿಯು ಉಂಟಾಗುತ್ತದೆ. ಭೂಮಿಯ ಮೇಲಿರುವ ಅಲ್ಪ ಸಾರದ ಪ್ರಾಣಿಗಳು ಮೊದಲು ಲಯಹೊಂದಿ ಭೂಮಿತ್ವವನ್ನು ಪಡೆಯುತ್ತವೆ. ಆಗ ಸಪ್ತರಶ್ಮಿರಥವನ್ನೇರಿ ದಿವಾಕರನು ತನ್ನ ಕಿರಣಗಳಿಂದ ನೀರನ್ನು ಕುಡಿಯುತ್ತಾ ಸಹಿಸಲಸಾಧ್ಯ ರಶ್ಮಿಯುಳ್ಳವನಾಗುತ್ತಾನೆ. ಅವನ ಆ ಏಳು ರಶ್ಮಿಗಳು ಮಹಾಸಮುದ್ರದ ನೀರನ್ನು ಕುಡಿಯುತ್ತವೆ. ಆ ಸಮುದ್ರಜಲದ ಆಹಾರದಿಂದ ಇನ್ನೂ ಬೆಳಗಿ ಅವು ಏಳು ಸೂರ್ಯಗಳಾಗುತ್ತವೆ. ನಂತರ ಆ ಏಳು ರಶ್ಮಿಗಳು ಈ ನಾಲ್ಕೂ ಲೋಕಗಳನ್ನೂ, ನಾಲ್ಕೂ ದಿಕ್ಕುಗಳನ್ನೂ ಒಣಗಿಸಿ, ಜ್ವಾಲಾಮಯ ಅಗ್ನಿಗಳಂತೆ ಎಲ್ಲವನ್ನೂ ಸುಡುತ್ತವೆ. ಯುಗಾಂತದ ಅಗ್ನಿಯಿಂದ ದೀಪ್ತರಾಗಿ ಆ ಏಳು ಸೂರ್ಯಗಳು ತಮ್ಮ ರಶ್ಮಿಗಳಿಂದ ಬೆಳಗುತ್ತಾ ಮೇಲೆ-ಕೆಳಗೆ ವ್ಯಾಪಿಸಿಕೊಳ್ಳುತ್ತವೆ.

ತೇ ಸೂರ್ಯಾ ವಾರಿಣಾ ದೀಪ್ತಾ ಬಹುಸಾಹಸ್ರರಶ್ಮಯಃ । ಖಂ ಸಮಾವೃತ್ಯ ತಿಷ್ಠಂತಿ ಪ್ರದಹಂತೋ ವಸುಂಧರಾಮ್ ।। 18 ।। ತತಸ್ತೇಷಾಂ ಪ್ರತಾಪೇನ ದಹ್ಯಮಾನಾ ವಸುಂಧರಾ । ಸಾದ್ರಿನದ್ಯಾರ್ಣವದ್ವೀಪಾ ನಿಃಸ್ನೇಹಾ ಸಂಪ್ರಪದ್ಯತೇ ।। 19 ।। ದೀಪ್ತಾಭಿಃ ಸಂತತಾಭಿಶ್ಚ ರಶ್ಮಿಭಿರ್ವೈ ಸಮಂತತಃ । ಅಧಶ್ಚೋರ್ಧ್ವಂ ಚ ಲಗ್ನಾಭಿಸ್ತಿರ್ಯಕ್ಚೈವ ಸಮಾವೃತಮ್ ।। 20 ।। ಸೂರ್ಯಾಗ್ನಿನಾ ಪ್ರಮೃಷ್ಟಾನಾಂ ಸಂಸೃಷ್ಟಾನಾಂ ಪರಸ್ಪರಮ್ । ಏಕತ್ವಮುಪಯಾತಾನಾಮೇಕಜ್ವಾಲಂ ಭವತ್ಯುತ ।। 21 ।। ಸರ್ವಲೋಕಪ್ರಣಾಶಶ್ಚ ಸೋಽಗ್ನಿರ್ಭೂತ್ವಾ ತು ಮಂಡಲೀ । ಚತುರ್ಲೋಕಮಿಮಂ ಸರ್ವಂ ನಿರ್ದಹತ್ಯಾಶು ತೇಜಸಾ ।। 22 ।। ತತಃ ಪ್ರಲೀನೇ ಸರ್ವಸ್ಮಿನ್ ಜಂಗಮೇ ಸ್ಥಾವರೇ ತಥಾ । ನಿರ್ವೃಕ್ಷಾ ನಿಸ್ತೃಣಾ ಭೂಮಿಃ ಕೂರ್ಮಪೃಷ್ಠಾ ಪ್ರಕಾಶತೇ ।। 23 ।। ಅಂಬರೀಷಮಿವಾಭಾತಿ ಸರ್ವಮಾಪೂರಿತಂ ಜಗತ್ । ಸರ್ವಮೇವ ತದರ್ಚಿರ್ವೈ ಪೂರ್ಣಂ ಜಾಜ್ವಲ್ಯತೇ ಪುನಃ ।। 24 ।। ಪಾತಾಲೇ ಯಾನಿ ಸತ್ತ್ವಾನಿ ಮಹೋದಧಿಗತಾನಿ ಚ । ತತಸ್ತಾನಿ ಪ್ರಲೀಯಂತೇ ಭೂಮಿತ್ವಮುಪಯಾಂತಿ ಚ ।। 25 ।।

ನೀರನ್ನು ಕುಡಿದು ಪ್ರಜ್ವಲಿಸುವ ಅನೇಕ ಸಹಸ್ರ ರಶ್ಮಿಗಳಿಂದ ಕೂಡಿದ ಆ ಸೂರ್ಯರು ಆಕಾಶವನ್ನು ಆವರಿಸಿಕೊಂಡು ಭೂಮಿಯನ್ನು ದಹಿಸುತ್ತಾರೆ. ಆಗ ಅವರ ಪ್ರತಾಪದಿಂದ ಪರ್ವತ-ನದಿ-ಸಮುದ್ರ-ದ್ವೀಪಗಳ ಸಮೇತ ಭೂಮಿಯು ಸ್ವಲ್ಪವೂ ತೇವವಿಲ್ಲದೇ ಒಣಗಿ ಹೋಗುತ್ತದೆ. ಜಗತ್ತಿನ ಮೇಲೆ-ಕೆಳಗೆ ಮತ್ತು ಅಡ್ಡಡ್ಡವಾಗಿ – ಎಲ್ಲಕಡೆ ಉರಿಯುತ್ತಿರುವ ಸೂರ್ಯರಶ್ಮಿಗಳ ಸಂತತಿಗಳು ಆವರಿಸುತ್ತವೆ. ಪರಸ್ಪರರನ್ನು ಹುಟ್ಟಿಸಿ ವೃದ್ಧಿಗೊಳಿಸುವ ಸೂರ್ಯ ಮತ್ತು ಅಗ್ನಿಗಳು ಏಕತ್ವವನ್ನು ಹೊಂದಿ ಒಂದೇ ಜ್ವಾಲೆಯಾಗುತ್ತವೆ. ಸರ್ವಲೋಕಗಳ ನಾಶಕ್ಕೂ ಕಾರಣವಾಗಿ ಮಂಡಲಾಕಾರವಾದ ಆ ಅಗ್ನಿಯು ತನ್ನ ತೇಜಸ್ಸಿನಿಂದ ಈ ನಾಲ್ಕೂ ಲೋಕಗಳನ್ನೂ ಸುಟ್ಟು ಭಸ್ಮಮಾಡಿಬಿಡುತ್ತದೆ. ಹೀಗೆ ಅಲ್ಲಿದ್ದ ಸ್ಥಾವರ-ಜಂಗಮಗಳೆಲ್ಲವೂ ನಾಶವಾಗಿ, ವೃಕ್ಷಗಳಿಲ್ಲದೇ, ಹುಲ್ಲುಗಳಿಲ್ಲದೇ ಭೂಮಿಯು ಆಮೆಯ ಬೆನ್ನಿನಂತೆ ಬೋಳಾಗಿ ಕಾಣಿಸುತ್ತದೆ. ಆ ತೇಜೋಜ್ವಾಲೆಯ ತೇಜಸ್ಸಿನಿಂದ ಸಂಪೂರ್ಣವಾಗಿ ತುಂಬಿಕೊಂಡಿರುವ ಜಗತ್ತು ಆಗ ಹುರಿಯುವ ಹೆಂಚಿನಂತೆ ಪ್ರಕಾಶಿಸುತ್ತದೆ. ಪಾತಾಳದಲ್ಲಿ ಮತ್ತು ಸಮುದ್ರಗಳಲ್ಲಿ ಯಾವ್ಯಾವ ಪ್ರಾಣಿಗಳಿವೆಯೋ ಅವೆಲ್ಲವೂ ಲಯಹೊಂದಿ ಭೂಮಿತ್ವವನ್ನು ಪಡೆದುಕೊಳ್ಳುತ್ತವೆ.

ದ್ವೀಪಾಂಶ್ಚ ಪರ್ವತಾಂಶ್ಚೈವ ವರ್ಷಾಣ್ಯಥ ಮಹೋದಧೀನ್ । ತಾನ್ಸರ್ವಾನ್ ಭಸ್ಮಸಾಚ್ಚಕ್ರೇ ಸಪ್ತಾತ್ಮಾ ಪಾವಕಃ ಪ್ರಭುಃ ।। 26 ।। ಸಮುದ್ರೇಭ್ಯೋ ನದೀಭ್ಯಶ್ಚ ಆಪಃ ಶುಷ್ಕಾಶ್ಚ ಸರ್ವಶಃ । ಪಿಬನ್ನಪಃ ಸಮಿದ್ಧೋಽಗ್ನಿಃ ಪೃಥಿವೀಮಾಶ್ರಿತೋ ಜ್ವಲನ್ ।। 27 ।। ತತಃ ಸಂವರ್ತಕಃ ಶೈಲಾನತಿಕ್ರಮ್ಯ ಮಹಾಂಸ್ತಥಾ । ಲೋಕಾನ್ದಹತಿ ದೀಪ್ತಾತ್ಮಾ ಮಾರುತೇಭ್ಯೋ ವಿಜೃಂಭಿತಃ ।। 28 ।। ಸ ದಗ್ಧ್ವಾ ಪೃಥಿವೀಂ ದೇವೋ ರಸಾತಲಮಶೋಷಯತ್ । ಅಧಸ್ತಾತ್ ಪೃಥಿವೀಂ ದಗ್ಧ್ವಾ ದಿವಮೂರ್ಧ್ವಂ ದಹಿಷ್ಯತಿ ।। 29 ।। ಯೋಜನಾನಾಂ ಶತಾನೀಹ ಸಹಸ್ರಾಣ್ಯಯುತಾನಿ ಚ । ಉತ್ತಿಷ್ಠಂತಿ ಶಿಖಾಸ್ತಸ್ಯ ವಹ್ನೇಃ ಸಂವರ್ತಕಸ್ಯ ತು ।। 30 ।। ಗಂಧರ್ವಾಂಶ್ಚ ಪಿಶಾಚಾಂಶ್ಚ ಸಯಕ್ಷೋರಗರಾಕ್ಷಸಾನ್ । ತದಾ ದಹತ್ಯಸೌ ದೀಪ್ತಃ ಕಾಲರುದ್ರಪ್ರಣೋದಿತಃ ।। 31 ।। ಭೂರ್ಲೋಕಂ ಚ ಭುವರ್ಲೋಕಂ ಸ್ವರ್ಲೋಕಂ ಚ ತಥಾ ಮಹಃ[5] । ದಹೇದಶೇಷಂ ಕಾಲಾಗ್ನಿಃ ಕಾಲಾವಿಷ್ಟತನುಃ ಸ್ವಯಮ್ ।। 32 ।। ವ್ಯಾಪ್ತೇಷ್ವೇತೇಷು ಲೋಕೇಷು ತಿರ್ಯಗೂರ್ಧ್ವಮಥಾಗ್ನಿನಾ । ತತ್ತೇಜಃ ಸಮನುಪ್ರಾಪ್ಯ ಕೃತ್ಸ್ನಂ ಜಗದಿದಂ ಶನೈಃ ।। 33 ।। ಅಯೋ ಗೂಢಮಿದಂ ಸರ್ವಂ ತದೇವೈಕಂ ಪ್ರಕಾಶತೇ ।। 34 ।।

ಸಪ್ತಾತ್ಮಕನಾದ ಪ್ರಭು ಪಾವಕನು ದ್ವೀಪಗಳನ್ನೂ, ಪರ್ವತಗಳನ್ನೂ, ವರ್ಷಗಳನ್ನೂ, ಮಹಾಸಮುದ್ರಗಳೆಲ್ಲವನ್ನೂ ಸುಟ್ಟು ಭಸ್ಮಮಾಡುತ್ತಾನೆ. ಸಮುದ್ರಗಳಲ್ಲಿಯೂ ನದಿಗಳಲ್ಲಿಯೂ ಇರುವ ಜಲವೆಲ್ಲವೂ ಒಣಗಿಹೋಗುತ್ತದೆ. ಜಲವನ್ನು ಕುಡಿದ ಅಗ್ನಿಯು ಪೃಥ್ವಿಯನ್ನೇ ಕಟ್ಟಿಗೆಯನ್ನಾಗಿ ಮಾಡಿಕೊಂಡು ಪ್ರಜ್ವಲಿಸುತ್ತದೆ. ನಂತರ ವಾಯುಗಳಿಂದ ವಿಜೃಂಭಿತನಾದ ಆ ದೀಪ್ತಾತ್ಮಾ ಸಂವರ್ತಕಾಗ್ನಿಯು ಪರ್ವತಗಳನ್ನೂ ಸುಟ್ಟು ಮುಂದೆ ಲೋಕಗಳನ್ನೂ ದಹಿಸುತ್ತಾನೆ. ಪೃಥ್ವಿಯನ್ನು ಭಸ್ಮಮಾಡಿ ಆ ದೇವನು ರಸಾತಲವನ್ನೂ ಒಣಗಿಸುತ್ತಾನೆ. ಪೃಥ್ವಿಯ ತಳಭಾಗವನ್ನು ದಹಿಸಿ ಅದರ ಮೇಲ್ಭಾಗದ ದ್ಯುಲೋಕ[6]ವನ್ನೂ ಸುಡುತ್ತಾನೆ. ಸಂವರ್ತಕಾಗ್ನಿಯ ಜ್ವಾಲೆಗಳು ನೂರರಿಂದ ಸಾವಿರ ಯೋಜನಗಳಷ್ಟು ಮತ್ತು ಸಾವಿರದಿಂದ ಹತ್ತು ಸಾವಿರ ಯೋಜನಗಳಷ್ಟು ಬೆಳೆದು ನಿಲ್ಲುತ್ತವೆ. ಕಾಲರುದ್ರನಿಂದ ಪ್ರೇರೇಪಿಸಲ್ಪಟ್ಟು ಉರಿಯುವ ಆ ಸಂವರ್ತಕಾಗ್ನಿಯು ಗಂಧರ್ವರನ್ನೂ, ಪಿಶಾಚರನ್ನೂ, ಯಕ್ಷ-ಉರಗ-ರಾಕ್ಷಸರನ್ನೂ ಸುಟ್ಟು ಭಸ್ಮಮಾಡುತ್ತದೆ. ಮೃತ್ಯುದೇವನಿಂದ ಆವೇಶಹೊಂದಿದ ಆ ಕಾಲಾಗ್ನಿಯು ಭೂಲೋಕ, ಭುವರ್ಲೋಕ, ಸ್ವರ್ಲೋಕ ಮತ್ತು ಮಹರ್ಲೋಕಗಳನ್ನು ಸಂಪೂರ್ಣವಾಗಿ ಸುಟ್ಟು ಭಸ್ಮಮಾಡುತ್ತದೆ. ಹೀಗೆ ನಿಧಾನವಾಗಿ ಲೋಕಗಳ ಮೇಲೆ-ಕೆಳಗೆ ಮತ್ತು ಅಡ್ಡಲಾಗಿ ವ್ಯಾಪ್ತವಾದ ಅಗ್ನಿಯಿಂದ ಈ ಜಗತ್ತೆಲ್ಲವೂ ಆ ಅಗ್ನಿತತ್ತ್ವದ ವಶವಾಗುತ್ತದೆ. ಎಲ್ಲವೂ ಏಕಾಕಾರವನ್ನು ಹೊಂದಿ, ತನ್ನ ತನ್ನ ವಿಶೇಷಾಂತರಹಿತವೂ, ಗೂಢವೂ ಮತ್ತು ಒಂದೇ ತತ್ತ್ವವಾಗಿಯೂ ಪ್ರಕಾಶಿಸುತ್ತದೆ.

ತತೋ ಗಜಕುಲಾಕಾರಾಸ್ತಡಿದ್ಭಿಃ ಸಮಲಂಕೃತಾಃ । ಉತ್ತಿಷ್ಠಂತಿ ತದಾ ವ್ಯೋಮ್ನಿ ಘೋರಾಃ ಸಂವರ್ತಕಾ ಘನಾಃ ।। 35 ।। ಕೇಚಿನ್ನೀಲೋತ್ಪಲಶ್ಯಾಮಾಃ ಕೇಚಿತ್ಕುಮುದಸನ್ನಿಭಾಃ । ಧೂಮ್ರವರ್ಣಾಸ್ತಥಾ ಕೇಚಿತ್ಕೇಚಿತ್ಪೀತಾಃ ಪಯೋಧರಾಃ ।। 36 ।। ಕೇಚಿದ್ರಾಸಭವರ್ಣಾಸ್ತು ಲಾಕ್ಷಾರಸನಿಭಾಃ ಪರೇ । ಶಂಖಕುಂದನಿಭಾಶ್ಚಾನ್ಯೇ ಜಾತ್ಯಂಜನನಿಭಾಸ್ತಥಾ ।। 37 ।। ಮನಃಶಿಲಾಭಾಶ್ಚ ಪರೇ ಕಪೋತಸದೃಶಾಃ ಪರೇ । ಇಂದ್ರಗೋಪನಿಭಾಃ ಕೇಚಿದ್ಧರಿತಾಲನಿಭಾಸ್ತಥಾ ।। 38 ।। ಇಂದ್ರಚಾಪನಿಭಾಃ ಕೇಚಿದುತ್ತಿಷ್ಠಂತಿ ಘನಾ ದಿವಿ । ಕೇಚಿತ್ಪರ್ವತಸಂಕಾಶಾಃ ಕೇಚಿದ್ಗಜಕುಲೋಪಮಾಃ ।। 39 ।। ಕಟಾಂಗಾರನಿಭಾಶ್ಚಾನ್ಯೇ ಕೇಚಿನ್ಮೀನಕುಲೋದ್ವಹಾಃ । ಬಹೂರೂಪಾ ಘೋರರೂಪಾ ಘೋರಸ್ವರನಿನಾದಿನಃ ।। 40 ।। ತದಾ ಜಲಧರಾಃ ಸರ್ವೇ ಪೂರಯಂತಿ ನಭಃ ಸ್ಥಲಮ್ ।। 41 ।।

ನಂತರ ಆಕಾಶದಲ್ಲಿ ಆನೆಗಳ ಹಿಂಡಿನಂತೆ ಬೃಹದಾಕಾರ ಉಳ್ಳವುಗಳೂ, ಮಿಂಚುಗಳಿಂದ ಅಲಂಕೃತವೂ ಆದ ಘೋರ ಸಂವರ್ತಕ ಮೋಡಗಳು ಹುಟ್ಟಿಕೊಳ್ಳುತ್ತವೆ. ಆ ಮೋಡಗಳಲ್ಲಿ ಕೆಲವು ಕನ್ನೈದಿಲೆಯಂತೆ ನೀಲಿಬಣ್ಣದಲ್ಲಿಯೂ, ಮತ್ತೆ ಕೆಲವು ಕುಮುದದಂತೆ ಬಿಳೀ ಬಣ್ಣದಲ್ಲಿಯೂ, ಮತ್ತೆ ಕೆಲವು ಹೊಗೆಯ ಬಣ್ಣದಲ್ಲಿಯೂ, ಕೆಲವು ಹಳದೀ ಬಣ್ಣದಲ್ಲಿಯೂ ಕಾಣುತ್ತವೆ. ಕೆಲವು ಕತ್ತೆಯ ಬಣ್ಣವನ್ನೂ, ಕೆಲವು ಅರಗಿನ ರಸದ ಬಣ್ಣವನ್ನೂ, ಇನ್ನು ಕೆಲವು ಶಂಖ-ಮಾಘಮಲ್ಲಿಗೆ ಹೂವುಗಳಂತೆ ಬಿಳಿಯ ಬಣ್ಣವನ್ನೂ, ಕೆಲವು ಅಂಜನದಂತೆ ಕಪ್ಪುಬಣ್ಣವನ್ನೂ ಹೊಂದಿರುತ್ತವೆ. ಕೆಲವು ಮೋಡಗಳು ಮನಃಶಿಲೆ[7]ಯ ಬಣ್ಣವನ್ನು ಹೊಂದಿದ್ದರೆ ಇತರ ಮೋಡಗಳು ಪಾರಿವಾಳದ ಬಣ್ಣವನ್ನು ಹೊಂದಿರುತ್ತವೆ. ಕೆಲವಿಗೆ ಚಿಟ್ಟೆಗಳ ಬಣ್ಣವೂ ಮತ್ತು ಕೆಲವಿಗೆ ಹರಿತಾಲ[8]ದ ಬಣ್ಣವೂ ಇರುತ್ತದೆ. ಕೆಲವು ದಟ್ಟ ಕಾಮನಬಿಲ್ಲಿನ ಬಣ್ಣಗಳಲ್ಲಿ ಮೇಲೇಳುತ್ತವೆ. ಕೆಲವು ಪರ್ವತಗಳಂತಿದ್ದರೆ ಇನ್ನು ಕೆಲವು ಆನೆಗಳ ಹಿಂಡುಗಳಂತೆ ಇರುತ್ತವೆ. ಕೆಲವು ಬೆಂಕಿಯಿದ್ದ ಕೆಂಡಗಳಂತೆ ಕಾಣುತ್ತಿದ್ದರೆ ಇನ್ನು ಕೆಲವು ಮೀನುಗಳ ಸಮೂಹದಂತೆ ಕಾಣುತ್ತವೆ. ಅನೇಕರೂಪಗಳ ಆ ಘೋರರೂಪೀ ಮೋಡಗಳು ಘೋರವಾಗಿ ಗರ್ಜಿಸುತ್ತಿರುತ್ತವೆ. ಆ ಎಲ್ಲ ಮೋಡಗಳೂ ನಭಃಸ್ಥಲವನ್ನು ತುಂಬಿಕೊಳ್ಳುತ್ತವೆ.

ತತಸ್ತೇ ಜಲದಾ ಘೋರಾ ರಾವಿಣೋ ಭಾಸ್ಕರಾತ್ಮಜಾಃ । ಸಪ್ತಧಾ ಸಂವೃತಾತ್ಮಾನಂ ತಮಗ್ನಿಂ ಶಮಯಂತಿ ತೇ ।। 42 ।। ತತಸ್ತೇ ಜಲದಾ ವರ್ಷಂ ಮುಂಚಂತೀಹ ಮಹೌಘವತ್ । ಸುಘೋರಮಶಿವಂ ಸರ್ವಂ ನಾಶಯಂತಿ ಚ ಪಾವಕಮ್ ।। 43 ।। ಅತಿವೃದ್ಧಂ ತದಾತ್ಯರ್ಥಮಂಭಸಾ ಪೂರ್ಯತೇ ಜಗತ್ । ಅದ್ಭಿಸ್ತೇಽಂಭೋಽಭಿಭೂತತ್ವಾತ್ತದಾಗ್ನಿಃ ಪ್ರವಿಶತ್ಯಪಃ ।। 44 ।। ನಷ್ಟೇ ಚಾಗ್ನೌ ವರ್ಷಶತೈಃ ಪಯೋದಾಃ ಕ್ಷಯಸಂಭವಾಃ । ಪ್ಲಾವಯಂತೋ ಜಗತ್ಸರ್ವಂ ಮಹಾಜಲಪರಿಸ್ರವೈಃ ।। 45 ।। ಧಾರಾಭಿಃ ಪೂರಯಂತೀದಂ ನೋದ್ಯಮಾನಾಃ ಸ್ವಯಂಭುವಾ । ಅತ್ಯಂತಸಲಿಲೌಘಾಸ್ತು ವೇಲಾ ಇವ ಮಹೋದಧೇಃ ।। 46 ।। ಸಾದ್ರಿದ್ವೀಪಾ ತಥಾ ಪೃಥ್ವೀ ಜಲೈಃ ಸಂಛಾದ್ಯತೇ ಶನೈಃ ।। 47 ।।

ಆಗ ಭಾಸ್ಕರಾತ್ಮಜರಾದ ಆ ಮೋಡಗಳು ಘೋರವಾಗಿ ಗರ್ಜಿಸುತ್ತಾ ಮಳೆಸುರಿಸಿ ಏಳು ವಿಧದ ಆ ಅಗ್ನಿಯನ್ನು ನಾಶಗೊಳಿಸುತ್ತವೆ. ಆ ಮೋಡಗಳು ಮಹಾಪ್ರವಾಹದಂತೆ ಧಾರಾಕಾರವಾಗಿ ಘೋರವೂ ಅಮಂಗಳಕರವೂ ಆದ ಮಳೆಯನ್ನು ಸುರಿಸಿ ಅಗ್ನಿಯನ್ನು ಆರಿಸುತ್ತವೆ. ಆಗ ಅತಿ ವೃದ್ಧವಾದ ಜಗತ್ತು ಜಲರಾಶಿಯಲ್ಲಿ ಮುಳುಗಿ, ಜಲರಾಶಿಯಿಂದ ತಿರಸ್ಕಾರಹೊಂದಿದ ಅಗ್ನಿಯೂ ಜಲವನ್ನು ಪ್ರವೇಶಿಸುತ್ತದೆ. ಪ್ರಳಯಕಾಲದ ಮೇಘಗಳು ನೂರಾರು ಮಳೆಗಳನ್ನು ಸುರಿಸಿ ಅಗ್ನಿಯನ್ನು ಆರಿಸಲು ಇಡೀ ಜಗತ್ತು ಜಲಪ್ರವಾಹದಲ್ಲಿ ತೇಲಾಡುತ್ತಿರುತ್ತದೆ. ಸ್ವಯಂಭು ಬ್ರಹ್ಮನಿಂದ ಪ್ರೇರಿಸಲ್ಪಟ್ಟ ಮೋಡಗಳು ಸುರಿಸಿದ ಮಳೆಯಿಂದ ಜಲಪ್ರವಾಹವುಂಟಾಗಿ, ಜಲವು ಈ ಸಂಪೂರ್ಣ ಜಗತ್ತನ್ನು ತುಂಬಿಕೊಳ್ಳುತ್ತದೆ. ಹೀಗೆ ನಿಧಾನವಾಗಿ ಪರ್ವತ-ದ್ವೀಪಗಳಿಂದ ಕೂಡಿದ ಭೂಮಿಯು ನೀರಿನಿಂದ ಮುಚ್ಚಿಹೋಗುತ್ತದೆ.

ಆದಿತ್ಯರಶ್ಮಿಭಿಃ ಪೀತಂ ಜಲಮಭ್ರೇಷು ತಿಷ್ಠತಿ । ಪುನಃ ಪತತಿ ತದ್ಭೂಮೌ ಪೂರ್ಯಂತೇ ತೇನ ಚಾರ್ಣವಾಃ ।। 48 ।। ತತಃ ಸಮುದ್ರಾಃ ಸ್ವಾಂ ವೇಲಾಮತಿಕ್ರಾಂತಾಸ್ತು ಕೃತ್ಸ್ನಶಃ । ಪರ್ವತಾಶ್ಚ ವಿಲೀಯಂತೇ ಮಹೀ ಚಾಪ್ಸು ನಿಮಜ್ಜತಿ ।। 49 ।। ತಸ್ಮಿನ್ನೇಕಾರ್ಣವೇ ಘೋರೇ ನಷ್ಟೇ ಸ್ಥಾವರಜಂಗಮೇ । ಯೋಗನಿದ್ರಾಂ ಸಮಾಸ್ಥಾಯ ಶೇತೇ ದೇವಃ ಪ್ರಜಾಪತಿಃ ।। 50 ।।

ಸೂರ್ಯರಶ್ಮಿಗಳು ಕುಡಿದ ಜಲವು ಮೋಡಗಳಲ್ಲಿ ಇರುತ್ತವೆ. ಅಲ್ಲಿಂದ ಮತ್ತೆ ಆ ಜಲವು ಭೂಮಿಯ ಮೇಲೆ ಮಳೆಯಾಗಿ ಬೀಳುತ್ತದೆ. ಅದರಿಂದ ಸಮುದ್ರಗಳು ತುಂಬುತ್ತವೆ. ನಂತರ ಸಮುದ್ರಗಳು ತುಂಬಿ, ತಮ್ಮ ತೀರವನ್ನೂ ಮೀರಿ, ಉಕ್ಕಿ ಬರುತ್ತವೆ. ಪರ್ವತಗಳು ಕರಗಿ ಹೋಗುತ್ತವೆ. ಭೂಮಿಯು ನೀರಿನಲ್ಲಿ ಮುಳುಗಿಹೋಗುತ್ತದೆ. ಸ್ಥಾವರ-ಜಂಗಮಗಳೆಲ್ಲವೂ ಆ ಘೋರ ಏಕಾರ್ಣವದಲ್ಲಿ ನಷ್ಟವಾಗಿ ಹೋಗಲು, ದೇವ ಪ್ರಜಾಪತಿಯು ಯೋಗನಿದ್ರೆಯನ್ನು ಆಶ್ರಯಿಸಿ ಶಯನಮಾಡುತ್ತಾನೆ.

ಚತುರ್ಯುಗಸಹಸ್ರಾಂತಂ ಕಲ್ಪಮಾಹುರ್ಮನೀಷಿಣಃ । ವಾರಾಹೋ ವರ್ತತೇ ಕಲ್ಪೋ ಯಸ್ಯ ವಿಸ್ತರ ಈರಿತಃ ।। 51 ।। ಅಸಂಖ್ಯಾತಾಸ್ತಥಾ ಕಲ್ಪಾ ಬ್ರಹ್ಮವಿಷ್ಣುಶಿವಾತ್ಮಕಾಃ । ಕಥಿತಾ ಹಿ ಪುರಾಣೇಷು ಮುನಿಭಿಃ ಕಾಲಚಿಂತಕೈಃ ।। 52 ।। ಸಾತ್ತ್ವಿಕೇಷ್ವಥ ಕಲ್ಪೇಷು ಮಾಹಾತ್ಮ್ಯಮಧಿಕಂ ಹರೇಃ । ತಾಮಸೇಷು ಹರಸ್ಯೋಕ್ತಂ ರಾಜಸೇಷು ಪ್ರಜಾಪತೇಃ ।। 53 ।। ಯೋಽಯಂ ಪ್ರವರ್ತತೇ ಕಲ್ಪೋ ವಾರಾಹಃ ಸಾತ್ತ್ವಿಕೋ ಮತಃ । ಅನ್ಯೇ ಚ ಸಾತ್ತ್ವಿಕಾಃ ಕಲ್ಪಾ ಮಮ ತೇಷು ಪರಿಗ್ರಹಃ ।। 54 ।।

ಒಂದು ಸಹಸ್ರ ಚತುರ್ಯುಗಗಳ ಅಂತ್ಯವನ್ನು ಒಂದು ಕಲ್ಪ ಎಂದು ವಿದ್ವಾಂಸರು ಹೇಳುತ್ತಾರೆ. ಈಗ ವರಾಹ ಕಲ್ಪವು ನಡೆಯುತ್ತಿದೆ. ಇದರ ಕುರಿತು ಇದಾಗಲೇ ವಿಸ್ತಾರವಾಗಿ ಹೇಳಿದ್ದೇನೆ[9]. ಕಾಲಚಿಂತಕರಾದ ಮುನಿಗಳು ಪುರಾಣಗಳಲ್ಲಿ ಬ್ರಹ್ಮ-ವಿಷ್ಣು-ಶಿವಾತ್ಮಕರಾದ ಅಸಂಖ್ಯಾತ ಕಲ್ಪಗಳ ಕುರಿತು ಹೇಳಿದ್ದಾರೆ. ಸಾತ್ತ್ವಿಕ ಕಲ್ಪಗಳಲ್ಲಿ ಹರಿಯ ಮಹಾತ್ಮೆ, ತಾಮಸಿಕ ಕಲ್ಪಗಳಲ್ಲಿ ಹರನ ಮಹಾತ್ಮೆ ಮತ್ತು ರಾಜಸಿಕ ಕಲ್ಪಗಳಲ್ಲಿ ಪ್ರಜಾಪತಿ ಬ್ರಹ್ಮನ ಮಹಾತ್ಮೆಯು ಅಧಿಕವಾಗಿದೆ ಎಂದೂ ಹೇಳಿದ್ದಾರೆ[10]. ಈಗ ನಡೆಯುತ್ತಿರುವ ವಾರಾಹ ಕಲ್ಪವು ಸಾತ್ತ್ವಿಕ ಕಲ್ಪ ಎಂಬ ಮತವಿದೆ. ಇನ್ನೂ ಅನೇಕ ಸಾತ್ತ್ವಿಕ ಕಲ್ಪಗಳಿವೆ. ಅವುಗಳಲ್ಲಿ ನನಗೆ ಮಾಹಾತ್ಮ್ಯಾಭಿಮಾನಗಳು ವಿಶೇಷವಾಗಿವೆ.

ಧ್ಯಾನಂ ತಪಸ್ತಥಾ ಜ್ಞಾನಂ ಲಬ್ಧ್ವಾ ತೇ ಯೋಗಿನಃ ಪರಮ್ । ಆರಾಧ್ಯ ತಂ ಚ ಗಿರಿಶಂ ಯಾಂತಿ ತತ್ಪರಮಂ ಪದಮ್ ।। 55 ।। ಸೋಽಹಂ ತತ್ತ್ವಂ ಸಮಾಸ್ಥಾಯ ಮಾಯೀ ಮಾಯಾಮಯೀಂ ಸ್ವಯಮ್ । ಏಕಾರ್ಣವೇ ಜಗತ್ಯಸ್ಮಿನ್ಯೋಗನಿದ್ರಾಂ ವ್ರಜಾಮಿ ತು ।। 56 ।। ಮಾಂ ಪಶ್ಯಂತಿ ಮಹಾತ್ಮಾನಃ ಸುಪ್ತಿಕಾಲೇ ಮಹರ್ಷಯಃ । ಜನಲೋಕೇ ವರ್ತಮಾನಾಸ್ತಾಪಸಾ ಯೋಗಚಕ್ಷುಷಾ ।। 57 ।। ಅಹಂ ಪುರಾಣಃ ಪುರುಷೋ ಭೂರ್ಭುವಃ ಪ್ರಭವೋ ವಿಭುಃ । ಸಹಸ್ರಚರಣಃ ಶ್ರೀಮಾನ್ಸಹಸ್ರಾಕ್ಷಃ ಸಹಸ್ರಪಾತ್ ।। 58 ।। ಮಂತ್ರೋಽಹಂ ಬ್ರಾಹ್ಮಣಾ ಗಾವಃ ಕುಶೋಽಥ ಸಮಿಧೋ ಹವಿಃ । ಪ್ರೋಕ್ಷಣೀಯಂ ಸ್ವಯಂ ಚೈವ ಸೋಮವ್ರತಮಥಾಸ್ಮ್ಯಹಮ್ ।। 59 ।। ಸಂವರ್ತಕೋ ಮಹಾನಾತ್ಮಾ ಪವಿತ್ರಂ ಪರಮಂ ಯಶಃ । ಮೇಧಾಪ್ಯಹಂ ಪ್ರಭುರ್ಗೋಪ್ತಾ ಗೋಪತಿರ್ಬ್ರಹ್ಮಣೋ ಮುಖಮ್ ।। 60 ।। ಅನಂತಸ್ತಾರಕೋ ಯೋಗೀ ಗತಿರ್ಗತಿಮತಾಂ ವರಃ । ಹಂಸಃ ಪ್ರಾಣೋಽಥ ಕಪಿಲೋ ವಿಶ್ವಮೂರ್ತಿಃ ಸನಾತನಃ ।। 61 ।। ಕ್ಷೇತ್ರಜ್ಞಃ ಪ್ರಕೃತಿಃ ಕಾಲೋ ಜಗದ್ಬೀಜಮಥಾಮೃತಮ್ । ಮಾತಾ ಪಿತಾ ಮಹಾದೇವೋ ಮತ್ತೋ ಹ್ಯನ್ಯೋ ನ ವಿದ್ಯತೇ ।। 62 ।। ಆದಿತ್ಯವರ್ಣೋ ಭುವನಸ್ಯ ಗೋಪ್ತಾ ನಾರಾಯಣಃ ಪುರುಷೋ ಯೋಗಮೂರ್ತಿಃ । ಮಾಂ ಪಶ್ಯಂತೇ ಯತಯೋ ಯೋಗನಿಷ್ಠಾ ಜ್ಞಾತ್ವಾತ್ಮಾನಂ ಮಮ ತತ್ತ್ವಂ ವ್ರಜಂತಿ ।। 63 ।।

ಪರಮ ಯೋಗಿಗಳು ಧ್ಯಾನ, ತಪಸ್ಸುಗಳ ಮೂಲಕ ಗಿರಿಶ ಶಂಕರನನ್ನು ಆರಾಧಿಸಿ, ಜ್ಞಾನವನ್ನು ಪಡೆದು ಆ ಪರಮ ಪದವನ್ನು ಸೇರುತ್ತಾರೆ.[11] ಸ್ವಯಂ ನಾನು ಮಾಯಾ ತತ್ತ್ವವನ್ನು ಆಶ್ರಯಿಸಿ ಏಕಾರ್ಣವವಾದ ಈ ಜಗತ್ತಿನಲ್ಲಿ ಮಾಯಾಮಯೀ ಯೋಗನಿದ್ರೆಯನ್ನು ಹೊಂದುತ್ತೇನೆ. ನಿದ್ರಿಸುತ್ತಿರುವ ನನ್ನನ್ನು ಜನೋಲೋಕದಲ್ಲಿ ತಪಸ್ಸನ್ನು ತಪಿಸುತ್ತಿರುವ ಯೋಕಚಕ್ಷುಷ ಮಹಾತ್ಮಾ ಮಹರ್ಷಿಗಳು ನೋಡುತ್ತಾರೆ.[12] ನಾನು ಪುರಾಣಪುರುಷನು. ಭೂಃ ಮತ್ತು ಭುವರ್ಲೋಕಗಳ ಮೂಲ ಮತ್ತು ವಿಭು – ಸಹಸ್ರ ಚರಣನು, ಶ್ರೀಮಾನನು, ಸಹಸ್ರಾಕ್ಷನು ಮತ್ತು ಸಹಸ್ರಪಾದನು. ಮಂತ್ರಗಳು, ಬ್ರಾಹ್ಮಣರು, ಗೋವುಗಳು, ದರ್ಭೆಗಳು, ಸಮಿತ್ತುಗಳು, ಪ್ರೋಕ್ಷಣೆಗೆ ಅರ್ಹವಾದ ಹವಿಸ್ಸು, ಸೋಮಲತೆ ಮೊದಲಾದ ಯಜ್ಞಾಂಗ ಸಾಧನಗಳೂ ವ್ರತಗಳೂ ನನ್ನ  ವಿಭೂತಿಯಿಂದಲೇ ಸಂಭವಿಸಿವೆ. ನಾನು ಸಂವರ್ತಕನೂ, ಮಹಾನಾತ್ಮನೂ, ಪವಿತ್ರನೂ, ಪರಮ ಯಶಸ್ವಿಯೂ. ಮೇಧಾಶಕ್ತಿಯೂ, ಪ್ರಭುವೂ, ರಕ್ಷಕನೂ, ಗೋಪತಿಯೂ, ಬ್ರಹ್ಮನ ಮುಖವೂ ಆಗಿದ್ದೇನೆ. ಅನಂತನೂ, ತಾರಕನೂ, ಯೋಗಿಯೂ, ಗತಿಯೂ, ಗತಿಯನ್ನು ಪಡೆದವರಲ್ಲಿ ಶ್ರೇಷ್ಠನೂ, ಹಂಸನೂ, ಪ್ರಾಣನೂ, ಕಪಿಲನೂ, ವಿಶ್ವಮೂರ್ತಿಯೂ, ಸನಾತನನೂ ಆಗಿದ್ದೇನೆ. ಹಾಗೆಯೇ ಕ್ಷೇತ್ರಜ್ಞನೂ, ಪ್ರಕೃತಿಯೂ, ಕಾಲನೂ, ಜಗತ್ತಿನ ಬೀಜನೂ, ಅಮೃತನೂ, ಮಾತಾ-ಪಿತನೂ, ಮಹಾದೇವನೂ ನಾನೇ ಆಗಿದ್ದೇನೆ. ನನಗಿಂತ ಅನ್ಯನು ಯಾರೂ ಇಲ್ಲ. ಭುವನವನ್ನು ರಕ್ಷಿಸುವ ಆದಿತ್ಯವರ್ಣ, ನಾರಾಯಣ, ಪುರುಷ ಯೋಗಮೂರ್ತಿಯು ನಾನೇ. ಯೋಗನಿಷ್ಠರಾದ ಯತಿಗಳು ಅವನನ್ನೇ ಕಾಣುತ್ತಾರೆ. ಆತ್ಮವನ್ನು ಅರಿತು, ನನ್ನ ತತ್ತ್ವವನ್ನೇ ಹೊಂದುತ್ತಾರೆ.”

ಇತಿ ಶ್ರೀಕೂರ್ಮಪುರಾಣೇ ಉತ್ತರಾರ್ಧೇ ಅಷ್ಟಾನವತಿತಮೋಽಧ್ಯಾಯಃ ।।

ಇದು ಶ್ರೀಕೂರ್ಮಪುರಾಣದ ಉತ್ತರಾರ್ಧದಲ್ಲಿ ತೊಂಬತ್ತೆಂಟನೇ ಅಧ್ಯಾಯವು.

[1] ಪ್ರತಿಸಂಚರ=ಪ್ರಳಯ

[2] ಮುಂದೆ 16, 22 ಮತ್ತು 32ನೇ ಶ್ಲೋಕಗಳಲ್ಲಿ ನಾಲ್ಕು ಲೋಕಗಳು (ಭೂಃ, ಭುವಃ, ಸುವಃ ಮತ್ತು ಮಹಃ) ನಾಶವಾಗುವುದರ ವರ್ಣನೆಯಿದೆ.

[3] ಅರಮನೆ ಪ್ರಕಾಶನದಲ್ಲಿ ಚತುರ್ವ್ಯೂಹಸಹಸ್ರಾಂತೇ ಎಂದಿದೆ.

[4] ಅರಮನೆ ಪ್ರಕಾಶನದಲ್ಲಿ ಪೃಥಿವೀಪತೇ ಎಂದಿದೆ.

[5] ಅರಮನೆ ಪ್ರಕಾಶನದಲ್ಲಿ ಭೂರ್ಲೋಕಂ ಚ ಭುವರ್ಲೋಕಂ ಮಹರ್ಲೋಕಂ ತಥೈವ ಚ ಎಂದಿದೆ.

[6] ದ್ಯುಲೋಕ=ಮೇಲಿನ ಪ್ರಕಾಶಮಯ ಲೋಕ, ಸ್ವರ್ಗಲೋಕ, ಸ್ವರ್ಲೋಕ

[7] ಮನಃಶಿಲೆ = ರಿಯಲ್‌ಗರ್ (Realgar). ಇದು ಭಾರತೀಯ ರಸವಿಜ್ಞಾನ-ಆಯುರ್ವೇದದಲ್ಲಿ ಪ್ರಸಿದ್ಧವಾದ ಕೆಂಪು ಖನಿಜ. ರಾಸಾಯನಿಕವಾಗಿ: Arsenic Disulfide (AsS). ಬಣ್ಣ: ಕಿತ್ತಳೆ-ಕೆಂಪು / ಗಾಢ ಕೆಂಪು. ಇದು ಪ್ರಕೃತಿಯಲ್ಲಿ ಬೆಳಕಿಗೆ ಬಿದ್ದಾಗ ಹಳದಿ ಹರಿತಾಲಕ್ಕೆ (Orpiment) ಪರಿವರ್ತನೆಗೊಳ್ಳುವುದು ಸಾಮಾನ್ಯ. ಆಯುರ್ವೇದದಲ್ಲಿ “ಮನಃಶಿಲಾ ಭಸ್ಮ”, “ಮನಃಶಿಲಾ ಲೇಪ”, “ಮನಃಶಿಲಾ ತೈಲ” ಮೊದಲಾಗಿ ಬಳಕೆಯಾಗುತ್ತದೆ.

[8] ಹರಿತಾಲ=ಹಳದೀ ಬಣ್ಣದ ಒಂದು ಖನಿಜ ಪದಾರ್ಥ, ಒರ್ಪಿಮೆಂಟ್ (Orpiment) – ರಾಸಾಯನಿಕವಾಗಿ Arsenic Trisulfide (AsS). ಪ್ರಕಾಶಮಾನವಾದ ಹಳದಿ–ಹಸಿರು ಮಿಶ್ರ ಬಣ್ಣ. ಆಯುರ್ವೇದದಲ್ಲಿ — ಔಷಧೀಯ–ರಸಶಾಸ್ತ್ರದ ಧಾತು. ರಸಶಾಸ್ತ್ರದಲ್ಲಿ — ಹರಿತಾಲ ತಾಮ್ರ, ಹರಿತಾಲ ಕ್ಷಾರ ಸಂಯೋಜನೆಗಳು.

[9] ಈ ಅಧ್ಯಾಯವು ಕೂರ್ಮಪುರಾಣದ ಕೊನೆಯಿಂದ ಎರಡನೆಯದು. ಆದ್ದರಿಂದ ಕೂರ್ಮಪುರಾಣದಲ್ಲಿರುವ ಬಹುತೇಕ ಎಲ್ಲ ವಿಷಯಗಳೂ ವರಾಹಕಲ್ಪಕ್ಕೆ ಅಂದರೆ ಈಗಿನ ಕಲ್ಪಕ್ಕೆ ಸಂಬಂಧಿಸಿದ್ದು ಎಂದು ತಿಳಿಯಬೇಕು.

[10] ಮೂವತ್ತು ಕಲ್ಪಗಳನ್ನು ತ್ರಿಗುಣಗಳ ಆಧಾರದ ಮೇಲೆ 10 ಸಾತ್ತ್ವಿಕ, 10 ರಾಜಸಿಕ, ಮತ್ತು 10 ತಾಮಸಿಕ ಕಲ್ಪಗಳೆಂದು ವಿಭಜಿಸಿದ್ದಾರೆ.

ಸಾತ್ತ್ವಿಕ ರಾಜಸಿಕ ತಾಮಸಿಕ
1. ಶ್ವೇತ/ವರಾಹ 1. ಸಾಧ್ಯ 1. ಪಿತೃ
2. ನೀಲಲೋಹಿತ 2. ಹರಿಮೇಧ 2. ಅನುಪ
3. ವಾಮದೇವ 3. ವಿದ್ಯುತ್ 3. ರೌತ್ರ / ರೌದ್ರ
4. ರಥಾಂತರ 4. ಆವರ್ಥ 4. ಘೋರ
5. ರೌರವ 5. ಮಹಾವರ್ತ 5. ದೇವಬ್ರಹ್ಮ
6. ದೇವ 6. ವರ್ಷ 6. ಮಹಾದೇವ
7. ಬ್ರಾಹ್ಮ 7. ಭಾಗ 7. ವೃಷ
8. ಸಾವರ್ಣಿ 8. ಕಾಲ 8. ಮಹಾಕಲ್ಪ
9. ದಕ್ಷ 9. ಲೋಕ 9. ಮಂಡಲ
10. ಸೋಮ 10. ಶೌರ್ಯ 10. ಅದ್ಭುತ

 

[11] ಇದೇ ಆತ್ಯಂತಿಕ ಪ್ರಳಯ ಅಥವಾ ಮೋಕ್ಷ.

[12] ಅಂದರೆ ನೈಮಿತ್ತಿಕ ಪ್ರಳಯದಲ್ಲಿ ಜನೋಲೋಕವು ನಾಶವಾಗುವುದಿಲ್ಲ. ನೈಮಿತ್ತಿಕ ಅರ್ಥಾತ್ ಕಲ್ಪದ ಅಂತ್ಯದಲ್ಲಿ ನಡೆಯುವ ಪ್ರಳಯದಲ್ಲಿ ಒಟ್ಟು 14 ಲೋಕಗಳಲ್ಲಿ ಕೇವಲ 4 ಲೋಕಗಳು (ಭೂಃ, ಭುವಃ, ಸುವಃ ಮತ್ತು ಮಹಃ) ನಾಶವಾಗುತ್ತವೆ. ಉಳಿದ ಹತ್ತು ಲೋಕಗಳು (ಭೂಮಿಯ ಕೆಳಗಿನ 7 ಅತಳ, ವಿತಳ, ಸುತಳಾದಿ ಪಾತಾಳ ಲೋಕಗಳು ಹಾಗೂ ಊರ್ಧ್ವಲೋಕಗಳಾದ ಜನಃ, ತಪಃ ಮತ್ತು ಸತ್ಯಲೋಕಗಳು ಹಾಗೆಯೇ ಇರುತ್ತವೆ. ಬ್ರಹ್ಮನು ಸತ್ಯಲೋಕದಲ್ಲಿ ಮಲಗಿರುತ್ತಾನೆ?

Leave a Reply

Your email address will not be published. Required fields are marked *