ಶ್ರೀಮದ್ಭಾಗವತಮಹಾಪುರಾಣ, ದ್ವೀತೀಯ ಸ್ಕಂಧಃ, ಅಧ್ಯಾಯ 7: ಮೈತ್ರೇಯ-ವಿದುರ ಸಂವಾದ
ಶ್ರೀಶುಕ ಉವಾಚ । ಏವಂ ಬ್ರುವಾಣಂ ಮೈತ್ರೇಯಂ ದ್ವೈಪಾಯನಸುತೋ ಬುಧಃ । ಪ್ರೀಣಯನ್ನಿವ ಭಾರತ್ಯಾ ವಿದುರಃ ಪ್ರತ್ಯಭಾಷತ ।। 1 ।।
ಶ್ರೀಶುಕನು ಹೇಳಿದನು: “ಮೈತ್ರೇಯನ ಈ ನಿರೂಪಣೆಯನ್ನು ಕೇಳಿ ದ್ವೈಪಾಯನಸುತ ವಿದ್ವಾಂಸ ವಿದುರನು ತನ್ನ ಮಧುರ ವಾಣಿಯಿಂದ ಅವನನ್ನು ಸಂತೋಷಪಡಿಸುತ್ತಾ ತಿರುಗಿ ಮಾತನಾಡಿದನು.
ವಿದುರ ಉವಾಚ । ಬ್ರಹ್ಮನ್ಕಥಂ ಭಗವತಶ್ಚಿನ್ಮಾತ್ರಸ್ಯಾವಿಕಾರಿಣಃ । ಲೀಲಯಾ ಚಾಪಿ ಯುಜ್ಯೇರನ್ನಿರ್ಗುಣಸ್ಯ ಗುಣಾಃ ಕ್ರಿಯಾಃ ।। 2 ।। ಕ್ರೀಡಾಯಾಮುದ್ಯಮೋಽರ್ಭಸ್ಯ ಕಾಮಶ್ಚಿಕ್ರೀಡಿಷಾನ್ಯತಃ । ಸ್ವತಸ್ತೃಪ್ತಸ್ಯ ಚ ಕಥಂ ನಿವೃತ್ತಸ್ಯ ಸದಾನ್ಯತಃ ।। 3 ।। ಅಸ್ರಾಕ್ಷೀದ್ಭಗವಾನ್ವಿಶ್ವಂ ಗುಣಮಯ್ಯಾತ್ಮಮಾಯಯಾ । ತಯಾ ಸಂಸ್ಥಾಪಯತ್ಯೇತದ್ಭೂಯಃ ಪ್ರತ್ಯಪಿಧಾಸ್ಯತಿ ।। 4 ।। ದೇಶತಃ ಕಾಲತೋ ಯೋಽಸಾವವಸ್ಥಾತಃ ಸ್ವತೋಽನ್ಯತಃ । ಅವಿಲುಪ್ತಾವಬೋಧಾತ್ಮಾ ಸ ಯುಜ್ಯೇತಾಜಯಾ ಕಥಮ್ ।। 5 ।। ಭಗವಾನೇಕ ಏವೈಷ ಸರ್ವಕ್ಷೇತ್ರೇಷ್ವವಸ್ಥಿತಃ । ಅಮುಷ್ಯ ದುರ್ಭಗತ್ವಂ ವಾ ಕ್ಲೇಶೋ ವಾ ಕರ್ಮಭಿಃ ಕುತಃ ।। 6 ।। ಏತಸ್ಮಿನ್ಮೇ ಮನೋ ವಿದ್ವನ್ಖಿದ್ಯತೇಽಜ್ಞಾನಸಂಕಟೇ । ತನ್ನಃ ಪರಾಣುದ ವಿಭೋ ಕಶ್ಮಲಂ ಮಾನಸಂ ಮಹತ್ ।। 7 ।।
ವಿದುರನು ಹೇಳಿದನು: “ಬ್ರಹ್ಮನ್! ಶ್ರೀಭಗವಂತನಾದರೋ ಕೇವಲ ಜ್ಞಾನಸ್ವರೂಪನು. ನಿರ್ವಿಕಾರನು ಮತ್ತು ಸತ್ತ್ವಾದಿ ತ್ರಿಗುಣರಹಿತನು. ಅವನಿಗೆ ಲೀಲಾರ್ಥವಾಗಿಯಾದರೂ ಗುಣಗಳು ಮತ್ತು ಕ್ರಿಯೆಗಳೊಡನೆ ಹೇಗೆ ಸಂಬಂಧವು ಉಂಟಾಗುತ್ತದೆ? ಬಾಲಕರಲ್ಲಾದರೋ ಕಾಮನೆ ಹಾಗೂ ಬೇರೆಯವರೊಡನೆ ಆಡಬೇಕೆಂಬ ಇಚ್ಛೆ ಇರುತ್ತದೆ. ಆದ್ದರಿಂದ ಅವರು ಆಟಕ್ಕಾಗಿ ಪ್ರಯತ್ನಿಸುತ್ತಾರೆ. ಆದರೆ ಭಗವಂತನಾದರೋ ಸ್ವತಃ ನಿತ್ಯ ತೃಪ್ತನು. ಪೂರ್ಣಕಾಮನು. ಸದಾ ನಿರ್ಲಿಪ್ತನು. ಹೀಗಿರುವಾಗ ಅವನು ಕ್ರೀಡಿಸಲಿಕ್ಕಾಗಿಯೇ ಏಕೆ ಸಂಕಲ್ಪಿಸಿದನು? ಭಗವಂತನು ತನ್ನ ತ್ರಿಗುಣಮಯೀ ಮಾಯೆಯಿಂದ ಜಗತ್ತನ್ನು ರಚಿಸಿದ್ದಾನೆ. ಆ ಮಾಯೆಯಿಂದಲೇ ಇದನ್ನು ಪಾಲಿಸುತ್ತಾನೆ. ಕೊನೆಗೆ ಅದರಿಂದಲೇ ಸಂಹಾರ ಮಾಡುತ್ತಾನೆ. ಭಗವಂತನ ಜ್ಞಾನಕ್ಕೆ ದೇಶ-ಕಾಲ-ಅವಸ್ಥೆಗಳಿಂದಾಗಲೀ, ತನ್ನಿಂದಾಗಲೀ, ಬೇರೆ ನಿಮಿತ್ತದಿಂದಾಗಲೀ ಎಂದಿಗೂ ಲೋಪವಿಲ್ಲ. ಹಾಗಿರುವಾಗ ಅವನಿಗೆ ಮಾಯೆಯೊಡನೆ ಸಂಯೋಗವಾದರೂ ಹೇಗೆ ಉಂಟಾಯಿತು? ಭಗವಂತನೊಬ್ಬನೇ ಸಮಸ್ತ ಕ್ಷೇತ್ರಗಳಲ್ಲಿಯೂ ಸಾಕ್ಷಿರೂಪದಿಂದ ಇರುತ್ತಾನೆ. ಅವನಿಗೆ ದುರ್ಭಾಗ್ಯವಾಗಲೀ, ಯಾವುದಾದರೂ ಕರ್ಮದಿಂದ ಉಂಟಾದ ಕ್ಲೇಶವಾಗಲೀ ಹೇಗೆ ಆಗಬಲ್ಲದು? ವಿಭೋ! ಈ ಅಜ್ಞಾನಸಂಕಟದಲ್ಲಿ ಬಿದ್ದು ನನ್ನ ಮನಸ್ಸು ಖಿನ್ನವಾಗುತ್ತಿದೆ. ನೀವು ಕೃಪೆಮಾಡಿ ನನ್ನ ಮನಸ್ಸಿನ ಈ ಅಜ್ಞಾನಮೋಹವನ್ನು ನಿವಾರಣೆ ಮಾಡಬೇಕು.””
ಶ್ರೀಶುಕ ಉವಾಚ । ಸ ಇತ್ಥಂ ಚೋದಿತಃ ಕ್ಷತ್ತ್ರಾ ತತ್ತ್ವಜಿಜ್ಞಾಸುನಾ ಮುನಿಃ । ಪ್ರತ್ಯಾಹ ಭಗವಚ್ಚಿತ್ತಃ ಸ್ಮಯನ್ನಿವ ಗತಸ್ಮಯಃ ।। 8 ।।
ಶ್ರೀಶುಕನು ಹೇಳಿದನು: “ತತ್ತ್ವ ಜಿಜ್ಞಾಸು ಕ್ಷತ್ತನು ಹೀಗೆ ಪ್ರಚೋದಿಸಲು ಮುನಿಯು ಮುಗುಳ್ನಕ್ಕು ಭಗವಂತನನ್ನು ಸ್ಮರಿಸುತ್ತಾ ಉತ್ತರಿಸಿದನು.
ಮೈತ್ರೇಯ ಉವಾಚ । ಸೇಯಂ ಭಗವತೋ ಮಾಯಾ ಯನ್ನಯೇನ ವಿರುಧ್ಯತೇ । ಈಶ್ವರಸ್ಯ ವಿಮುಕ್ತಸ್ಯ ಕಾರ್ಪಣ್ಯಮುತ ಬಂಧನಮ್ ।। 9 ।। ಯದರ್ಥೇನ ವಿನಾಮುಷ್ಯ ಪುಂಸ ಆತ್ಮವಿಪರ್ಯಯಃ । ಪ್ರತೀಯತ ಉಪದ್ರಷ್ಟುಃ ಸ್ವಶಿರಶ್ಛೇದನಾದಿಕಃ ।। 10 ।। ಯಥಾ ಜಲೇ ಚಂದ್ರಮಸಃ ಕಂಪಾದಿಸ್ತತ್ಕೃತೋ ಗುಣಃ । ದೃಶ್ಯತೇಽಸನ್ನಪಿ ದ್ರಷ್ಟುರಾತ್ಮನೋಽನಾತ್ಮನೋ ಗುಣಃ ।। 11 ।। ಸ ವೈ ನಿವೃತ್ತಿಧರ್ಮೇಣ ವಾಸುದೇವಾನುಕಂಪಯಾ । ಭಗವದ್ಭಕ್ತಿಯೋಗೇನ ತಿರೋಧತ್ತೇ ಶನೈರಿಹ ।। 12 ।। ಯದೇಂದ್ರಿಯೋಪರಾಮೋಽಥ ದ್ರಷ್ಟ್ರಾತ್ಮನಿ ಪರೇ ಹರೌ । ವಿಲೀಯಂತೇ ತದಾ ಕ್ಲೇಶಾಃ ಸಂಸುಪ್ತಸ್ಯೇವ ಕೃತ್ಸ್ನಶಃ ।। 13 ।। ಅಶೇಷಸಂಕ್ಲೇಶಶಮಂ ವಿಧತ್ತೇ ಗುಣಾನುವಾದಶ್ರವಣಂ ಮುರಾರೇಃ । ಕಿಂ ವಾ ಪುನಸ್ತಚ್ಚರಣಾರವಿಂದಪರಾಗಸೇವಾರತಿರಾತ್ಮಲಬ್ಧಾ ।। 14 ।।
ಮೈತ್ರೇಯನು ಹೇಳಿದನು: “ಎಲ್ಲರ ಸ್ವಾಮಿಯೂ, ನಿತ್ಯಮುಕ್ತನೂ ಆದ ಪರಮಾತ್ಮನಿಗೆ ದೀನತೆ-ಬಂಧನವುಂಟಾಗುತ್ತದೆ ಎಂದರೆ ಅವಶ್ಯವಾಗಿ ಯುಕ್ತಿಗೆ ವಿರುದ್ಧವಾಗಿದೆ. ಆದರೆ ವಸ್ತುತಃ ಇದೇ ಭಗವಂತನ ಮಾಯೆಯಾಗಿದೆ. ಸ್ವಪ್ನವನ್ನು ಕಾಣುವವನಿಗೆ ತನ್ನ ತಲೆಯೇ ಕತ್ತರಿಸಿದಂತೆ ಅನುಭವವಾಗಬಹುದು. ಆದರೆ ನಿಜವಾಗಿ ಏನೂ ಆಗಿರುವುದಿಲ್ಲ. ಆದರೂ ಅಜ್ಞಾನದಿಂದ ಅವನು ಸತ್ಯವೆಂದೇ ತಿಳಿದು ಗಾಬರಿಪಡುವಂತೆ ಈ ಜೀವನಿಗೆ ಬಂಧನಾದಿಗಳು ಯಾವುದೂ ಇಲ್ಲದಿದ್ದರೂ, ಅಜ್ಞಾನವಶದಿಂದ ಹಾಗೆಯೇ ಇರುವಂತೆ ಕಂಡುಬರುತ್ತದೆ. ಈ ಬಂಧನವೇ ಮೊದಲಾದ ತೋರಿಕೆಗಳು ಈಶ್ವರನಿಗೆ ಏಕೆ ಆಗುವುದಿಲ್ಲ? ಅಂದರೆ – ನೀರಿನಲ್ಲಿ ಬಿದ್ದ ಚಂದ್ರಬಿಂಬವು ಅಲ್ಲಾಡಿದಂತೆ ಕಂಡುಬಂದರೂ ಆಕಾಶದಲ್ಲಿರುವ ಚಂದ್ರನಲ್ಲಿ ಕಂಪನವಿರುವುದಿಲ್ಲ. ಹಾಗೆಯೇ ದೇಹಾಭಿಮಾನೀ ಜೀವನಲ್ಲೇ ದೇಹಾದಿ ಮಿಥ್ಯಾಧರ್ಮಗಳ ತೋರಿಕೆ ಕಂಡುಬರುತ್ತದೆ. ಪರಮಾತ್ಮನಲ್ಲಿ ಇಲ್ಲ. ನಿಷ್ಕಾಮಭಾವದಿಂದ ಧರ್ಮಗಳನ್ನು ಆಚರಿಸಿದಾಗ, ಭಗವತ್ ಕೃಪೆಯಿಂದ ಪ್ರಾಪ್ತವಾದ ಭಕ್ತಿಯೋಗದ ಮೂಲಕ ಈ ಮಿಥ್ಯಾಪ್ರತೀತಿಗಳು ನಿಧಾನವಾಗಿ ತೊಲಗಿಹೋಗುತ್ತವೆ. ಸಮಸ್ತ ಇಂದ್ರಿಯಗಳು ವಿಷಯಗಳಿಂದ ಹಿಮ್ಮೆಟ್ಟಿ, ಸಾಕ್ಷೀಸ್ವರೂಪನಾದ ಶ್ರೀಹರಿಯಲ್ಲಿ ನಿಶ್ಚಲವಾಗಿ ನೆಲೆಗೊಂಡಾಗ, ಗಾಢನಿದ್ದೆಯಲ್ಲಿ ಮಲಗಿದ ಮನುಷ್ಯನಂತೆ ಜೀವಿಯ ರಾಗ-ದ್ವೇಷಾದಿ ಎಲ್ಲ ಕ್ಲೇಶಗಳೂ ಪೂರ್ಣವಾಗಿ ನಾಶಹೊಂದುತ್ತವೆ. ಶ್ರೀಕೃಷ್ಣ ಪರಮಾತ್ಮನ ಗುಣಗಳ ವರ್ಣನೆಯನ್ನು ಶ್ರವಣಮಾಡುತ್ತಿದ್ದರೆ ಸಮಸ್ತ ದುಃಖರಾಶಿಯೂ ಶಾಂತವಾಗಿ ಬಿಡುತ್ತದೆ. ಹೀಗಿರುವಾಗ ನಮ್ಮ ಹೃದಯದಲ್ಲಿ ಅವನ ಪಾದಾರವಿಂದಗಳ ಧೂಳನ್ನು ಸೇವಿಸಬೇಕೆಂಬ ಪರಮ ಪ್ರೇಮವು ಜಾಗ್ರತಗೊಂಡರೆ, ಮತ್ತೆ ಹೇಳುವುದೇನಿದೆ?”
ವಿದುರ ಉವಾಚ । ಸಂಛಿನ್ನಃ ಸಂಶಯೋ ಮಹ್ಯಂ ತವ ಸೂಕ್ತಾಸಿನಾ ವಿಭೋ । ಉಭಯತ್ರಾಪಿ ಭಗವನ್ಮನೋ ಮೇ ಸಂಪ್ರಧಾವತಿ ।। 15 ।। ಸಾಧ್ವೇತದ್ವ್ಯಾಹೃತಂ ವಿದ್ವನ್ನಾತ್ಮಮಾಯಾಯನಂ ಹರೇಃ । ಆಭಾತ್ಯಪಾರ್ಥಂ ನಿರ್ಮೂಲಂ ವಿಶ್ವಮೂಲಂ ನ ಯದ್ಬಹಿಃ ।। 16 ।। ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ । ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ ।। 17 ।। ಅರ್ಥಾಭಾವಂ ವಿನಿಶ್ಚಿತ್ಯ ಪ್ರತೀತಸ್ಯಾಪಿ ನಾತ್ಮನಃ । ತಾಂ ಚಾಪಿ ಯುಷ್ಮಚ್ಚರಣಸೇವಯಾಹಂ ಪರಾಣುದೇ ।। 18 ।। ಯತ್ಸೇವಯಾ ಭಗವತಃ ಕೂಟಸ್ಥಸ್ಯ ಮಧುದ್ವಿಷಃ । ರತಿರಾಸೋ ಭವೇತ್ತೀವ್ರಃ ಪಾದಯೋರ್ವ್ಯಸನಾರ್ದನಃ ।। 19 ।। ದುರಾಪಾ ಹ್ಯಲ್ಪತಪಸಃ ಸೇವಾ ವೈಕುಂಠ ವರ್ತ್ಮಸು । ಯತ್ರೋಪಗೀಯತೇ ನಿತ್ಯಂ ದೇವದೇವೋ ಜನಾರ್ದನಃ ।। 20 ।।
ವಿದುರನು ಹೇಳಿದನು: “ವಿಭೋ! ನನ್ನ ಪ್ರಶ್ನೆಗೆ ಉತ್ತರವಾಗಿ ನೀವು ಹೇಳಿದ ಸೂಕ್ತಿಯೆಂಬ ಖಡ್ಗದಿಂದ ನನ್ನ ಸಂದೇಹವು ಸಮೂಲವಾಗಿ ಕತ್ತರಿಸಿ ಹೋಯಿತು. ಈಗ ನನ್ನ ಮನಸ್ಸು ಪರಮಾತ್ಮನ ಸ್ವತಂತ್ರತೆ ಮತ್ತು ಜೀವಿಯ ಪರತಂತ್ರತೆ ಎಂಬ ಎರಡು ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿದೆ. ವಿದ್ವನ್! ಜೀವಿಯಲ್ಲಿ ಕಂಡುಬರುವ ಕ್ಲೇಶಾದಿಗಳ ಆಧಾರವು ಕೇವಲ ಭಗವಂತನ ಮಾಯೆಯೇ ಆಗಿದೆ ಎಂದು ನೀವು ಹೇಳಿದುದು ಸರಿಯಾಗಿಯೇ ಇದೆ. ಆ ಕ್ಲೇಶವು ಮಿಥ್ಯ ಹಾಗೂ ಆಧಾರರಹಿತವಾಗಿದೆ. ಏಕೆಂದರೆ, ಈ ವಿಶ್ವದ ಮೂಲಕಾರಣವು ಮಾಯೆಯಲ್ಲದೇ ಬೇರೆ ಏನೂ ಇಲ್ಲ. ಈ ಪ್ರಪಂಚದಲ್ಲಿ ಎರಡು ವರ್ಗದ ಜನರೇ ಸುಖವಾಗಿರುತ್ತಾರೆ: ಏನೂ ಅರಿಯದ (ಅಜ್ಞಾನದಿಂದ ಕೂಡಿದ) ಕಡುಮೂರ್ಖರು ಮತ್ತು ಬುದ್ಧಿ ಮುಂತಾದವುಗಳಿಂದ ಮೀರಿರುವ ಶ್ರೀಭಗವಂತನನ್ನು ಹೊಂದಿರುವವರು. ನಡುವಣ ಶ್ರೇಣಿಯ ಜನರು ಸಂಶಯಗಳಿಗೆ ವಶರಾಗಿ ದುಃಖಪಡುತ್ತಿರುತ್ತಾರೆ. ಈ ಅನಾತ್ಮ ವಸ್ತುಗಳು ವಾಸ್ತವವಾಗಿ ಇಲ್ಲವೇ ಇಲ್ಲ. ಕೇವಲ ಕಂಡುಬರುತ್ತದೆಯಷ್ಟೆ ಎಂಬ ನಿಶ್ಚಯವು ನಿಮ್ಮ ಕೃಪೆಯಿಂದ ನನಗೆ ಉಂಟಾಯಿತು. ಈಗ ನಿಮ್ಮ ಚರಣಸೇವೆಯ ಪ್ರಭಾವದಿಂದ ಆ ಪ್ರತೀತಿಗಳನ್ನು ಹೋಗಲಾಡಿಸಿಕೊಳ್ಳುತ್ತೇನೆ. ಈ ನಿಮ್ಮ ಚರಣಸೇವೆಯಿಂದ ನಿತ್ಯಸಿದ್ಧ ಭಗವಾನ್ ಮಧುಸೂದನನ ಚರಣಕಮದಲ್ಲಿ ಉತ್ಕಟಪ್ರೇಮ ಮತ್ತು ಆನಂದದ ವೃದ್ಧಿಯಾಗುತ್ತದೆ. ಅದು ಹುಟ್ಟು-ಸಾವುಗಳನ್ನು ನಾಶಮಾಡಿಬಿಡುತ್ತದೆ. ಭಗವದ್ಭಕ್ತರಾದ ಮಹಾತ್ಮರೇ ಭಗವತ್ ಪ್ರಾಪ್ತಿಯ ಸಾಕ್ಷಾತ್ ಮಾರ್ಗವಾಗಿದ್ದಾರೆ. ಅವರಲ್ಲಿ ಸದಾಕಾಲ ದೇವದೇವನಾದ ಶ್ರೀಹರಿಯ ಗುಣಗಾನವಾಗುತ್ತಾ ಇರುತ್ತದೆ. ಅಂತಹ ಮಹಾತ್ಮರ ಸೇವಾಭಾಗ್ಯವು ಅಲ್ಪಪುಣ್ಯವಿರುವವರಿಗೆ ದೊರಕಲಾರದು.
ಸೃಷ್ಟ್ವಾಗ್ರೇ ಮಹದಾದೀನಿ ಸವಿಕಾರಾಣ್ಯನುಕ್ರಮಾತ್ । ತೇಭ್ಯೋ ವಿರಾಜಮುದ್ಧೃತ್ಯ ತಮನು ಪ್ರಾವಿಶದ್ವಿಭುಃ ।। 21 ।। ಯಮಾಹುರಾದ್ಯಂ ಪುರುಷಂ ಸಹಸ್ರಾಂಘ್ರ್ಯೂರುಬಾಹುಕಮ್ । ಯತ್ರ ವಿಶ್ವ ಇಮೇ ಲೋಕಾಃ ಸವಿಕಾಶಂ ಸಮಾಸತೇ ।। 22 ।। ಯಸ್ಮಿಂದಶವಿಧಃ ಪ್ರಾಣಃ ಸೇಂದ್ರಿಯಾರ್ಥೇಂದ್ರಿಯಸ್ತ್ರಿವೃತ್ । ತ್ವಯೇರಿತೋ ಯತೋ ವರ್ಣಾಸ್ತದ್ವಿಭೂತೀರ್ವದಸ್ವ ನಃ ।। 23 ।। ಯತ್ರ ಪುತ್ರೈಶ್ಚ ಪೌತ್ರೈಶ್ಚ ನಪ್ತೃಭಿಃ ಸಹ ಗೋತ್ರಜೈಃ । ಪ್ರಜಾ ವಿಚಿತ್ರಾಕೃತಯ ಆಸನ್ಯಾಭಿರಿದಂ ತತಮ್ ।। 24 ।। ಪ್ರಜಾಪತೀನಾಂ ಸ ಪತಿಶ್ಚಕ್ಲೃಪೇ ಕಾನ್ಪ್ರಜಾಪತೀನ್ । ಸರ್ಗಾಂಶ್ಚೈವಾನುಸರ್ಗಾಂಶ್ಚ ಮನೂನ್ಮನ್ವಂತರಾಧಿಪಾನ್ ।। 25 ।। ಏತೇಷಾಮಪಿ ವಂಶಾಂಶ್ಚ ವಂಶಾನುಚರಿತಾನಿ ಚ । ಉಪರ್ಯಧಶ್ಚಯೇ ಲೋಕಾ ಭೂಮೇರ್ಮಿತ್ರಾತ್ಮಜಾಸತೇ ।। 26 ।। ತೇಷಾಂ ಸಂಸ್ಥಾಂ ಪ್ರಮಾಣಂ ಚ ಭೂರ್ಲೋಕಸ್ಯ ಚ ವರ್ಣಯ । ತಿರ್ಯಂಙ್ಮಾನುಷದೇವಾನಾಂ ಸರೀಸೃಪಪತತ್ತ್ರಿಣಾಮ್ । ವದ ನಃ ಸರ್ಗಸಂವ್ಯೂಹಂ ಗಾರ್ಭಸ್ವೇದದ್ವಿಜೋದ್ಭಿದಾಮ್ ।। 27 ।।
ಸೃಷ್ಟಿಯ ಪ್ರಾರಂಭದಲ್ಲಿ ಭಗವಂತನು ಕ್ರಮವಾಗಿ ಮಹತ್ತು ಮೊದಲಾದ ತತ್ತ್ವಗಳನ್ನು ಹಾಗೂ ಅದರ ವಿಕಾರಗಳನ್ನು ರಚಿಸಿ, ನಂತರ ಅವುಗಳ ಅಂಶಗಳಿಂದ ವಿರಾಟ್ ಪುರುಷನನ್ನು ನಿರ್ಮಿಸಿದನು. ಆಮೇಲೆ ತಾನೇ ಅದರಲ್ಲಿ ಪ್ರವೇಶಿಸಿದನು ಎಂದು ನೀವು ತಿಳಿಸಿದಿರಿ. ಆ ವಿರಾಟ್ ಪುರುಷನಿಗೆ ಸಾವಿರಾರು ಕಾಲುಗಳು, ಮೊಣಕಾಲುಗಳೂ, ಬಾಹುಗಳೂ ಇವೆ. ಅವನನ್ನೇ ವೇದಗಳು ಆದಿಪುರುಷನೆಂದು ಕರೆಯುತ್ತವೆ. ವಿಸ್ತಾರಗೊಂಡ ಈ ಸಮಸ್ತ ಲೋಕಗಳೂ ಅವನಲ್ಲಿಯೇ ಅಡಕವಾಗಿವೆ. ಇಂದ್ರಿಯ ವಿಷಯಗಳಿಂದಲೂ, ತ್ರಿಗುಣಗಳಿಂದಲೂ ಕೂಡಿದ ಇಂದ್ರಿಯ ಬಲ, ಮನೋಬಲ, ಶಾರೀರಿಕ ಬಲಗಳೊಂದಿಗೆ ಹತ್ತು ವಿಧದ ಪ್ರಾಣಗಳೂ ಅವನಲ್ಲಿಯೇ ಸೇರಿಕೊಂಡಿವೆ. ಬ್ರಾಹ್ಮಣಾದಿ ವರ್ಣಗಳೂ ಅವನಿಂದಲೇ ಹುಟ್ಟಿದವು ಎನ್ನುವುದನ್ನೂ ವರ್ಣಿಸಿದಿರಿ. ಈಗ ನನಗೆ ಆ ಪರಮಾತ್ಮನ ಬ್ರಹ್ಮಾದಿ ವಿಭೂತಿಗಳನ್ನು ತಿಳಿಸಿ. ಈ ಇಡೀ ಬ್ರಹ್ಮಾಂಡವನ್ನು ತುಂಬಿಕೊಂಡಿರುವ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಮೊದಲಾದ ಬಂಧುಗಳೊಡನೆ ಕೂಡಿದ ಎಲ್ಲ ಪ್ರಜೆಗಳೂ ಆ ವಿಭೂತಿಯಿಂದಲೇ ಉಂಟಾದವರು, ಅಲ್ಲವೇ? ಆ ವಿರಾಟ್ ಪುರುಷನು ಬ್ರಹ್ಮಾದಿ ಪ್ರಜಾಪತಿಗಳಿಗೂ ಪ್ರಭುವು. ಅವನು ಯಾವ ಯಾವ ಪ್ರಜಾಪತಿಗಳನ್ನು ಸೃಷ್ಟಿಸಿದನು? ಸೃಷ್ಟಿ-ಉಪಸೃಷ್ಟಿ ಮತ್ತು ಮನ್ವಂತರಾಧಿಪತಿಗಳನ್ನು ಯಾವ ಕ್ರಮದಿಂದ ಸೃಷ್ಟಿಸಿದನು? ಆ ಮನುಗಳ ವಂಶಗಳನ್ನೂ, ಆ ವಂಶಗಳಿಗೆ ಸೇರಿದ ರಾಜರ ಚರಿತ್ರೆಗಳನ್ನೂ ವರ್ಣಿಸಿರಿ. ಭೂಮಿಯ ಮೇಲೆ ಯಾವ ಲೋಕಗಳಿವೆ? ಕೆಳಗೆ ಯಾವ ಲೋಕಗಳಿವೆ? ಭೂಲೋಕದ ವಿಸ್ತಾರವೇನು? ಸ್ಥಿತಿಯೇನು? ಇವುಗಳನ್ನೂ ವರ್ಣಿಸಿ. ತಿರ್ಯಕ್, ಮನುಷ್ಯರು, ದೇವತೆಗಳು, ತೆವಳುವ ಪ್ರಾಣಿಗಳು, ಪಕ್ಷಿಗಳು, ಜರಾಯುಜ, ಸ್ವೇದಜ, ಅಂಡಜ, ಉದ್ಭಿಜ್ಜ ಈ ನಾಲ್ಕು ಪ್ರಕಾರದ ಪ್ರಾಣಿಗಳ ಉತ್ಪತ್ತಿ ಕ್ರಮವನ್ನೂ ತಿಳಿಸಿ.
ಗುಣಾವತಾರೈರ್ವಿಶ್ವಸ್ಯ ಸರ್ಗಸ್ಥಿತ್ಯಪ್ಯಯಾಶ್ರಯಮ್ । ಸೃಜತಃ ಶ್ರೀನಿವಾಸಸ್ಯ ವ್ಯಾಚಕ್ಷ್ವೋದಾರವಿಕ್ರಮಮ್ ।। 28 ।। ವರ್ಣಾಶ್ರಮವಿಭಾಗಾಂಶ್ಚ ರೂಪಶೀಲಸ್ವಭಾವತಃ । ಋಷೀಣಾಂ ಜನ್ಮಕರ್ಮಾದಿ ವೇದಸ್ಯ ಚ ವಿಕರ್ಷಣಮ್ ।। 29 ।। ಯಜ್ಞಸ್ಯ ಚ ವಿತಾನಾನಿ ಯೋಗಸ್ಯ ಚ ಪಥಃ ಪ್ರಭೋ । ನೈಷ್ಕರ್ಮ್ಯಸ್ಯ ಚ ಸಾಂಖ್ಯಸ್ಯ ತಂತ್ರಂ ವಾ ಭಗವತ್ಸ್ಮೃತಮ್ ।। 30 ।। ಪಾಖಂಡಪಥವೈಷಮ್ಯಂ ಪ್ರತಿಲೋಮನಿವೇಶನಮ್ । ಜೀವಸ್ಯ ಗತಯೋ ಯಾಶ್ಚ ಯಾವತೀರ್ಗುಣಕರ್ಮಜಾಃ ।। 31 ।। ಧರ್ಮಾರ್ಥಕಾಮಮೋಕ್ಷಾಣಾಂ ನಿಮಿತ್ತಾನ್ಯವಿರೋಧತಃ । ವಾರ್ತಾಯಾ ದಂಡನೀತೇಶ್ಚ ಶ್ರುತಸ್ಯ ಚ ವಿಧಿಂ ಪೃಥಕ್ ।। 32 ।। ಶ್ರಾದ್ಧಸ್ಯ ಚ ವಿಧಿಂ ಬ್ರಹ್ಮನ್ಪಿತೄಣಾಂ ಸರ್ಗಮೇವ ಚ । ಗ್ರಹನಕ್ಷತ್ರತಾರಾಣಾಂ ಕಾಲಾವಯವಸಂಸ್ಥಿತಿಮ್ ।। 33 ।।
ಶ್ರೀಹರಿಯು ಸೃಷ್ಟಿಮಾಡುವಾಗ ಜಗತ್ತಿನ ಉತ್ಪತ್ತಿ-ಸ್ಥಿತಿ-ಸಂಹಾರಕ್ಕಾಗಿ ತನ್ನ ಗುಣಾವತಾರವಾದ ಬ್ರಹ್ಮ-ವಿಷ್ಣು-ಮಹೇಶ್ವರ ರೂಪಗಳಲ್ಲಿಯೂ, ಇತರ ಅವತಾರ ರೂಪಗಳಲ್ಲಿಯೂ ಯಾವ ಮಂಗಳಕರ ಲೀಲೆಗಳನ್ನು ಮಾಡಿದನು? ವೇಷ-ಆಚಾರ-ಸ್ವಭಾವಗಳಿಗೆ ಅನುಸಾರವಾಗಿ ವರ್ಣಾಶ್ರಮಗಳ ವಿಭಾಗ, ಋಷಿಗಳ ಜನ್ಮ-ಕರ್ಮಾದಿಗಳೂ, ವೇದಗಳ ವಿಭಾಗ, ಯಜ್ಞಗಳ ವಿಸ್ತಾರ, ಯೋಗದ ಮಾರ್ಗ, ಜ್ಞಾನಮಾರ್ಗ ಮತ್ತು ಅದಕ್ಕೆ ಸಾಧನವಾದ ಸಾಂಖ್ಯಮಾರ್ಗ, ಹಾಗೂ ಶ್ರೀಭಗವಂತನು ಉಪದೇಶಿಸಿದ ನಾರದ ಪಾಂಚರಾತ್ರಾದಿ ತಂತ್ರಶಾಸ್ತ್ರಗಳನ್ನೂ ವಿಭಿನ್ನ ಪಾಷಂಡ ಮತಗಳ ಮಾರ್ಗಭೇದಗಳನ್ನೂ, ಅದರ ಪ್ರಚಾರದಿಂದ ಉಂಟಾಗುವ ವೈಷಮ್ಯವನ್ನೂ, ಪ್ರತಿಲೋಮ ವರ್ಣಗಳ ಸೃಷ್ಟಿ-ಸ್ಥಿತಿಗಳನ್ನೂ, ಬೇರೆ ಬೇರೆ ಗುಣಗಳಿಂದಲೂ, ಕರ್ಮಗಳಿಂದಲೂ ಜೀವರಿಗೆ ಉಂಟಾಗುವ ಬಗೆ ಬಗೆಯ ಗತಿಯನ್ನೂ ನಿರೂಪಿಸಿ. ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಪರಸ್ಪರ ವಿರೋಧ ಬಾರದಂತೆ ಸಾಧಿಸುವ ಮಾರ್ಗಗಳನ್ನೂ, ವಾಣಿಜ್ಯ-ದಂಡನೀತಿ ಮತ್ತು ಶಾಸ್ತ್ರಶ್ರವಣದ ವಿಧಿಗಳನ್ನೂ, ಶ್ರಾದ್ಧದ ವಿಧಿಯನ್ನೂ, ಪಿತೃದೇವತೆಗಳ ಸೃಷ್ಟಿಯನ್ನೂ, ಹಾಗೆಯೇ ಕಾಲಚಕ್ರದಲ್ಲಿ ಗ್ರಹ-ನಕ್ಷತ್ರ-ತಾರಾಗಣಗಳ ಸ್ಥಿತಿಯನ್ನೂ, ಬೇರೆ ಬೇರೆಯಾಗಿ ವರ್ಣಿಸಿ.
ದಾನಸ್ಯ ತಪಸೋ ವಾಪಿ ಯಚ್ಚೇಷ್ಟಾ ಪೂರ್ತಯೋಃ ಫಲಮ್ । ಪ್ರವಾಸಸ್ಥಸ್ಯ ಯೋ ಧರ್ಮೋ ಯಶ್ಚ ಪುಂಸ ಉತಾಪದಿ ।। 34 ।। ಯೇನ ವಾ ಭಗವಾಂಸ್ತುಷ್ಯೇದ್ಧರ್ಮಯೋನಿರ್ಜನಾರ್ದನಃ । ಸಂಪ್ರಸೀದತಿ ವಾ ಯೇಷಾಮೇತದಾಖ್ಯಾಹಿ ಚಾನಘ ।। 35 ।। ಅನುವ್ರತಾನಾಂ ಶಿಷ್ಯಾಣಾಂ ಪುತ್ರಾಣಾಂ ಚ ದ್ವಿಜೋತ್ತಮ । ಅನಾಪೃಷ್ಟಮಪಿ ಬ್ರೂಯುರ್ಗುರವೋ ದೀನವತ್ಸಲಾಃ ।। 36 ।। ತತ್ತ್ವಾನಾಂ ಭಗವಂಸ್ತೇಷಾಂ ಕತಿಧಾ ಪ್ರತಿಸಂಕ್ರಮಃ । ತತ್ರೇಮಂ ಕ ಉಪಾಸೀರನ್ಕ ಉ ಸ್ವಿದನುಶೇರತೇ ।। 37 ।।
ದಾನ-ತಪಸ್ಸು-ಇಷ್ಟಾಪೂರ್ತಕರ್ಮಗಳ ಫಲವೇನು? ಪ್ರವಾಸ ಮತ್ತು ಆಪತ್ಕಾಲದಲ್ಲಿ ಮನುಷ್ಯನು ಯಾವ ಧರ್ಮವನ್ನು ಆಚರಿಸಬೇಕು? ಅನಘ! ಧರ್ಮಕ್ಕೆ ಮೂಲ ಕಾರಣನಾದ ಭಗವಾನ್ ಜನಾರ್ದನನು ಯಾವ ಆಚರಣೆಗಳಿಂದ ಸಂತುಷ್ಟನಾಗುತ್ತಾನೆ? ಯಾರ ಮೇಲೆ ಅನುಗ್ರಹ ತೋರಿಸುತ್ತಾನೆ? ದ್ವಿಜೋತ್ತಮ! ದೀನವತ್ಸಲ ಗುರುಗಳು ತಮಗೆ ವಿಧೇಯರಾಗಿರುವ ಶಿಷ್ಯರಿಗೂ ಪುತ್ರರಿಗೂ ಕೇಳದೆಯೇ ಹಿತೋಪದೇಶ ಮಾಡುತ್ತಾರೆ. ಭಗವನ್! ಮಹದಾದಿ ತತ್ತ್ವಗಳ ಪ್ರಳಯಗಳು ಎಷ್ಟು ಪ್ರಕಾರಗಳಾಗಿವೆ? ಶ್ರೀ ಭಗವಂತನು ಯೋಗನಿದ್ರೆಯಲ್ಲಿ ಇರುವಾಗ ಅವುಗಳಲ್ಲಿ ಯಾವ ಯಾವ ತತ್ತ್ವಗಳು ಅವನ ಸೇವೆ ಮಾಡುತ್ತವೆ? ಯಾವ-ಯಾವ ತತ್ತ್ವಗಳು ಅವನಲ್ಲಿ ಲಯ ಹೊಂದುತ್ತವೆ?
ಪುರುಷಸ್ಯ ಚ ಸಂಸ್ಥಾನಂ ಸ್ವರೂಪಂ ವಾ ಪರಸ್ಯ ಚ । ಜ್ಞಾನಂ ಚ ನೈಗಮಂ ಯತ್ತದ್ಗುರುಶಿಷ್ಯಪ್ರಯೋಜನಮ್ ।। 38 ।। ನಿಮಿತ್ತಾನಿ ಚ ತಸ್ಯೇಹ ಪ್ರೋಕ್ತಾನ್ಯನಘ ಸೂರಿಭಿಃ । ಸ್ವತೋ ಜ್ಞಾನಂ ಕುತಃ ಪುಂಸಾಂ ಭಕ್ತಿರ್ವೈರಾಗ್ಯಮೇವ ವಾ ।। 39 ।। ಏತಾನ್ಮೇ ಪೃಚ್ಛತಃ ಪ್ರಶ್ನಾನ್ಹರೇಃ ಕರ್ಮವಿವಿತ್ಸಯಾ । ಬ್ರೂಹಿ ಮೇಽಜ್ಞಸ್ಯ ಮಿತ್ರತ್ವಾದಜಯಾ ನಷ್ಟಚಕ್ಷುಷಃ ।। 40 ।। ಸರ್ವೇ ವೇದಾಶ್ಚ ಯಜ್ಞಾಶ್ಚ ತಪೋ ದಾನಾನಿ ಚಾನಘ । ಜೀವಾಭಯಪ್ರದಾನಸ್ಯ ನ ಕುರ್ವೀರನ್ಕಲಾಮಪಿ ।। 41 ।।
ಜೀವದ ತತ್ತ್ವವೇನು? ಪರಮ ಪುರುಷನ ಸ್ವರೂಪವೇನು? ಉಪನಿಷತ್ ಪ್ರತಿಪಾದಿತ ಜ್ಞಾನದ ಸ್ವರೂಪ ಮತ್ತು ಗುರು-ಶಿಷ್ಯರ ಪಾರಸ್ಪರಿಕ ಪ್ರಯೋಜನವೇನು? ಅನಘ! ಈ ಜ್ಞಾನದ ಪ್ರಾಪ್ತಿಗಾಗಿ ವಿದ್ವಾಂಸರು ಯಾವ ಯಾವ ಉಪಾಯಗಳನ್ನು ಹೇಳಿದ್ದಾರೆ? ಏಕೆಂದರೆ, ಮನುಷ್ಯರಿಗೆ ಜ್ಞಾನ-ಭಕ್ತಿ-ವೈರಾಗ್ಯಗಳು ತಾವೇ ತಾವಾಗಿ ಉಂಟಾಗಲಾರದಷ್ಟೇ? ಮಾಯಾಮೋಹದಿಂದಾಗಿ ನನ್ನ ವಿಚಾರದೃಷ್ಟಿಯು ನಷ್ಟವಾಗಿಬಿಟ್ಟಿದೆ. ಅಜ್ಞನಾಗಿದ್ದೇನೆ. ನೀವಾದರೋ ನನ್ನ ಪರಮ ಹಿತೈಷಿಗಳು. ಆದ್ದರಿಂದ ಶ್ರೀಹರಿಲೀಲೆಯ ಜ್ಞಾನವನ್ನು ಪಡೆಯುವ ಇಚ್ಛೆಯಿಂದ ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ. ಅನಘ! ಸಮಸ್ತ ವೇದಗಳ ಅಧ್ಯಯನ, ಯಜ್ಞ, ತಪಸ್ಸು, ದಾನಾದಿಗಳಿಂದ ಉಂಟಾಗುವ ಪುಣ್ಯವು ಭಗವತ್ತತ್ತ್ವದ ಉಪದೇಶದಿಂದ ಜೀವಿಯನ್ನು ಜನ್ಮ-ಮೃತ್ಯುಗಳಿಂದ ಬಿಡಿಸಿ ಅವನನ್ನು ನಿರ್ಭಯನನ್ನಾಗಿಸುವುದರಲ್ಲಿ ಉಂಟಾಗುವ ಪುಣ್ಯದ ಹದಿನಾರನೇ ಒಂದು ಭಾಗಕ್ಕೂ ಸಾಟಿಯಾಗಲಾರದು.””
ಶ್ರೀಶುಕ ಉವಾಚ । ಸ ಇತ್ಥಮಾಪೃಷ್ಟಪುರಾಣಕಲ್ಪಃ ಕುರುಪ್ರಧಾನೇನ ಮುನಿಪ್ರಧಾನಃ । ಪ್ರವೃದ್ಧಹರ್ಷೋ ಭಗವತ್ಕಥಾಯಾಂ ಸಂಚೋದಿತಸ್ತಂ ಪ್ರಹಸನ್ನಿವಾಹ ।। 42 ।।
ಶ್ರೀಶುಕನು ಹೇಳಿದನು: “ಕುರುಪ್ರಧಾನ ವಿದುರನು ಹೀಗೆ ಪುರಾಣದ ವಿಷಯದಲ್ಲಿ ಪ್ರಶ್ನೆಮಾಡಿದಾಗ ಮುನಿಪ್ರಧಾನ ಮೈತ್ರೇಯನಿಗೆ ತುಂಬಾ ಸಂತೋಷವಾಯಿತು. ಶ್ರೀಭಗವಂತನ ಕಥೆಯನ್ನು ಹೇಳಲು ಪ್ರೇರಣೆ ಬಂದದ್ದರಿಂದ ಹರ್ಷಗೊಂಡು ನಸುನಗುತ್ತಾ ಅವನಿಗೆ ಹೀಗೆ ಹೇಳತೊಡಗಿದರು.”
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಸಪ್ತಮೋಽಧ್ಯಾಯಃ ।।
ಇದು ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಪರಮಹಂಸ ಸಂಹಿತೆಯಲ್ಲಿ ಮೂರನೇ ಸ್ಕಂಧದಲ್ಲಿ ಏಳನೇ ಅಧ್ಯಾಯವು.