ಶ್ರೀಮದ್ಭಾಗವತಮಹಾಪುರಾಣ, ದ್ವೀತೀಯ ಸ್ಕಂಧಃ, ಅಧ್ಯಾಯ 6: ವಿರಾಡ್ವಿಭೂತಿವರ್ಣನಮ್
ಬ್ರಹ್ಮೋವಾಚ । ವಾಚಾಂ ವಹ್ನೇರ್ಮುಖಂ ಕ್ಷೇತ್ರಂ ಛಂದಸಾಂ ಸಪ್ತ ಧಾತವಃ । ಹವ್ಯಕವ್ಯಾಮೃತಾನ್ನಾನಾಂ ಜಿಹ್ವಾ ಸರ್ವರಸಸ್ಯ ಚ ।। 1 ।। ಸರ್ವಾಸೂನಾಂ ಚ ವಾಯೋಶ್ಚ ತನ್ನಾಸೇ ಪರಮಾಯನೇ । ಅಶ್ವಿನೋರೋಷಧೀನಾಂ ಚ ಘ್ರಾಣೋ ಮೋದಪ್ರಮೋದಯೋಃ ।। 2 ।। ರೂಪಾಣಾಂ ತೇಜಸಾಂ ಚಕ್ಷುರ್ದಿವಃ ಸೂರ್ಯಸ್ಯ ಚಾಕ್ಷಿಣೇ । ಕರ್ಣೌ ದಿಶಾಂ ಚ ತೀರ್ಥಾನಾಂ ಶ್ರೋತ್ರಮಾಕಾಶಶಬ್ದಯೋಃ । ತದ್ಗಾತ್ರಂ ವಸ್ತು ಸಾರಾಣಾಂ ಸೌಭಗಸ್ಯ ಚ ಭಾಜನಮ್ ।। 3 ।। ತ್ವಗಸ್ಯ ಸ್ಪರ್ಶವಾಯೋಶ್ಚ ಸರ್ವಮೇಧಸ್ಯ ಚೈವ ಹಿ । ರೋಮಾಣ್ಯುದ್ಭಿಜ್ಜಜಾತೀನಾಂ ಯೈರ್ವಾ ಯಜ್ಞಸ್ತು ಸಂಭೃತಃ ।। 4 ।।
ಬ್ರಹ್ಮನು ಹೇಳಿದನು: “ವಿರಾಟ್ಪುರುಷನ ಮುಖವು ವಾಣಿ, ಅದರ ಅಧಿಷ್ಠಾತೃದೇವತೆ ಅಗ್ನಿ, ಛಂದಸ್ಸಿನ ಸಪ್ತ ಧಾತುಗಳಿಗೆ[1] ಕ್ಷೇತ್ರವು. ಹಾಗೆಯೇ ದೇವತೆಗಳ ಆಹಾರವಾದ ಹವ್ಯ, ಪಿತೃಗಳ ಅಹಾರವಾದ ಕವ್ಯ, ಮತ್ತು ಅವರಿಬ್ಬರಿಂದಲೂ ಭುಕ್ತಶೇಷವಾದ ಅಮೃತ – ಈ ಮೂರುಬಗೆಯ ಅನ್ನಗಳಲ್ಲಿರುವ ಷಡ್ವಿಧ ರಸಗಳಿಗೂ[2], ರಸನೇಂದ್ರಿಯಕ್ಕೂ, ಆ ಇಂದ್ರಿಯಕ್ಕೆ ಅಧಿದೇವತೆಯಾದ ವರುಣನಿಗೂ ಆ ವಿರಾಟ್ಪುರುಷನ ನಾಲಿಗೆಯೇ ಕ್ಷೇತ್ರವು. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ – ಈ ಐದು ಪ್ರಾಣಗಳಿಗೂ, ಅವುಗಳ ಅಧಿದೇವತೆ ವಾಯುವಿಗೂ ಅವನ ಮೂಗಿನ ಹೊಳ್ಳೆಗಳೇ ಕ್ಷೇತ್ರವು. ಓಷಧಿಗಳಿಗೂ, ಅಶ್ವಿನೀ ದೇವತೆಗಳಿಗೂ, ಇಷ್ಟವಸ್ತುಲಾಭದಿಂದ ಉಂಟಾಗುವ ಸುಖರೂಪದ ಮೋದಕ್ಕೂ, ಇಷ್ಟವಸ್ತುವಿನಲ್ಲಿ ಮಮತೆಯಿಂದ ಹುಟ್ಟುವ ಸುಖರೂಪದ ಪ್ರಮೋದಕ್ಕೂ ಅವನ ಘ್ರಾಣೇಂದ್ರಿಯವೇ ಕ್ಷೇತ್ರವು. ರೂಪಗಳಿಗೂ ಬಣ್ಣಗಳಿಗೂ ಅವನ ಕಣ್ಣುಗಳು ಹಾಗೂ ಅವನ ನೇತ್ರಗೊಳಕವು ದ್ಯೌರ್ಲೋಕ ಮತ್ತು ಸೂರ್ಯನಿಗೂ ಕ್ಷೇತ್ರವು. ಅವನ ಶ್ರೋತ್ರೇಂದ್ರಿಯ ಕಿವಿಗಳು ದಿಕ್ಕುಗಳು, ತೀರ್ಥಗಳು ಮತ್ತು ಆಕಾಶದ ಗುಣವಾದ ಶಬ್ದಕ್ಕೂ ಕ್ಷೇತ್ರವು. ಸಮಸ್ತ ವಸ್ತುಗಳ ಸಾರಾಂಶಗಳಿಗೂ ಸೌಂದರ್ಯಕ್ಕೂ ಆ ವಿರಾಟ್ಪುರುಷನ ಶರೀರವೇ ಸ್ಥಾನವು. ಸ್ಪರ್ಶಗುಣಕ್ಕೂ, ವಾಯುವಿಗೂ, ಸಮಸ್ತ ಯಜ್ಞಕ್ಕೂ ಅವನ ಚರ್ಮವೇ ಕ್ಷೇತ್ರವು. ಯಜ್ಞಕ್ಕೆ ಬೇಕಾಗುವ ಉದ್ಭಿಜ್ಜ ಜಾತಿಯ ವನಸ್ಪತಿಗಳಿಗೆ ಅವನ ರೋಮಗಳು ಉತ್ಪತ್ತಿಸ್ಥಾನವು.
ಕೇಶಶ್ಮಶ್ರುನಖಾನ್ಯಸ್ಯ ಶಿಲಾಲೋಹಾಭ್ರವಿದ್ಯುತಾಮ್ । ಬಾಹವೋ ಲೋಕಪಾಲಾನಾಂ ಪ್ರಾಯಶಃ ಕ್ಷೇಮಕರ್ಮಣಾಮ್ ।। 5 ।। ವಿಕ್ರಮೋ ಭೂರ್ಭುವಃ ಸ್ವಶ್ಚ ಕ್ಷೇಮಸ್ಯ ಶರಣಸ್ಯ ಚ । ಸರ್ವಕಾಮವರಸ್ಯಾಪಿ ಹರೇಶ್ಚರಣ ಆಸ್ಪದಮ್ ।। 6 ।। ಅಪಾಂ ವೀರ್ಯಸ್ಯ ಸರ್ಗಸ್ಯ ಪರ್ಜನ್ಯಸ್ಯ ಪ್ರಜಾಪತೇಃ । ಪುಂಸಃ ಶಿಶ್ನ ಉಪಸ್ಥಸ್ತು ಪ್ರಜಾತ್ಯಾನಂದನಿರ್ವೃತೇಃ ।। 7 ।। ಪಾಯುರ್ಯಮಸ್ಯ ಮಿತ್ರಸ್ಯ ಪರಿಮೋಕ್ಷಸ್ಯ ನಾರದ । ಹಿಂಸಾಯಾ ನಿರೃತೇರ್ಮೃತ್ಯೋರ್ನಿರಯಸ್ಯ ಗುದಂ ಸ್ಮೃತಃ ।। 8 ।। ಪರಾಭೂತೇರಧರ್ಮಸ್ಯ ತಮಸಶ್ಚಾಪಿ ಪಶ್ಚಿಮಃ । ನಾಡ್ಯೋ ನದನದೀನಾಂ ಚ ಗೋತ್ರಾಣಾಮಸ್ಥಿಸಂಹತಿಃ ।। 9 ।। ಅವ್ಯಕ್ತರಸಸಿಂಧೂನಾಂ ಭೂತಾನಾಂ ನಿಧನಸ್ಯ ಚ । ಉದರಂ ವಿದಿತಂ ಪುಂಸೋ ಹೃದಯಂ ಮನಸಃ ಪದಮ್ ।। 10 ।। ಧರ್ಮಸ್ಯ ಮಮ ತುಭ್ಯಂ ಚ ಕುಮಾರಾಣಾಂ ಭವಸ್ಯ ಚ । ವಿಜ್ಞಾನಸ್ಯ ಚ ಸತ್ತ್ವಸ್ಯ ಪರಸ್ಯಾತ್ಮಾ ಪರಾಯಣಮ್ ।। 11 ।।
ಅವನ ಗಡ್ಡ, ಮೀಸೆ, ಮತ್ತು ಉಗುರುಗಳಿಂದ ಮೇಘ, ಮಿಂಚು, ಶಿಲೆ, ಕಬ್ಬಿಣ ಮೊದಲಾದ ಧಾತುಗಳೂ, ಬಾಹುಗಳಿಂದ ಜಗತ್ತನ್ನು ರಕ್ಷಿಸುವ ಲೋಕಪಾಲಕರೂ ಉತ್ಪನ್ನರಾದರು. ಇವನ ಮೂರು ಹೆಜ್ಜೆಗಳು ಭೂಃ, ಭುವಃ ಮತ್ತು ಸುವಃ ಎಂಬ ಮೂರು ಲೋಕಗಳನ್ನೂ ವ್ಯಾಪಿಸಿವೆ. ಶರಣಾಗತರಾದವರ ಕ್ಷೇಮ ಮತ್ತು ಸರ್ವಕಾಮಗಳ ಈಡೇರಿಕೆಗಳಿಗೂ ಹರಿಯ ಚರಣಗಳೇ ಆಶ್ರಯವು. ನೀರಿನ ಶಕ್ತಿ, ಮಳೆಯ ದೇವತೆ ಪರ್ಜನ್ಯ ಮತ್ತು ಪ್ರಜಾಪತಿ ಬ್ರಹ್ಮನ ಸೃಜನಶಕ್ತಿ ಇವೆಲ್ಲವೂ ಭಗವಂತನ ಶಿಶ್ನ–ಉಪಸ್ಥ ಭಾಗಗಳಲ್ಲಿ ಪ್ರತಿಫಲಿಸುತ್ತವೆ. ಏಕೆಂದರೆ ಆ ಭಾಗವೇ ಪ್ರಜಾ ಉತ್ಪತ್ತಿ ಹಾಗೂ ಸಂತಾನೋದ್ಭವಾನಂದದ ಮೂಲವಾಗಿದೆ. ನಾರದ! ವಿರಾಟ್ಪುರುಷನ ಪಾಯು (ಗುದದ್ವಾರ)ವು ಯಮ, ಮಿತ್ರ[3], ಪರಿಮೋಕ್ಷ (ವಿಸರ್ಜನೆ), ಹಿಂಸೆ, ನಿರೃತಿ, ಮೃತ್ಯು ಮತ್ತು ನರಕಗಳ ಪ್ರತಿನಿಧಿ ಎಂದು ಸ್ಮರಿಸಲ್ಪಟ್ಟಿದೆ. ಅವನ ಬೆನ್ನಿನಿಂದ ಪರಾಜಯವೂ, ಅಧರ್ಮವೂ ಅಜ್ಞಾನವೂ ಹುಟ್ಟಿದವು. ನಾಡಿಗಳಿಂದ ನದ-ನದಿಗಳೂ, ಮೂಳೆಗಳಿಂದ ಪರ್ವತಗಳೂ ನಿರ್ಮಾಣವಾದವು. ಅವ್ಯಕ್ತ (ಮೂಲ ಪ್ರಕೃತಿ), ಅನ್ನಾದಿಗಳಲ್ಲಿರುವ ರಸಗಳು, ಸಮುದ್ರಗಳು ಮತ್ತು ಪ್ರಾಣಿಗಳ ಮೃತ್ಯುವೂ ಪುರುಷನ ಉದರದಲ್ಲಿ ನೆಲೆಸಿವೆ. ಅವನ ಹೃದಯವೇ ಮನಸ್ಸಿನ ಉಗಮಸ್ಥಾನವು. ಧರ್ಮಕ್ಕೆ, ನನಗೆ, ನಿನಗೆ, ಸನಕಾದಿ ಕುಮಾರರಿಗೆ, ಶಂಕರನಿಗೆ, ಪರಮ ಜ್ಞಾನಕ್ಕೆ, ಸತ್ತ್ವಗುಣಕ್ಕೆ, ಎಲ್ಲಕ್ಕೂ ಆ ಪುರುಷನೇ ಉದ್ಗಮಸ್ಥಾನವು. ಅವನೇ ಎಲ್ಲರ ಆತ್ಮನು.
ಅಹಂ ಭವಾನ್ಭವಶ್ಚೈವ ತ ಇಮೇ ಮುನಯೋಽಗ್ರಜಾಃ । ಸುರಾಸುರನರಾ ನಾಗಾಃ ಖಗಾ ಮೃಗಸರೀಸೃಪಾಃ ।। 12 ।। ಗಂಧರ್ವಾಪ್ಸರಸೋ ಯಕ್ಷಾ ರಕ್ಷೋಭೂತಗಣೋರಗಾಃ । ಪಶವಃ ಪಿತರಃ ಸಿದ್ಧಾ ವಿದ್ಯಾಧ್ರಾಶ್ಚಾರಣಾ ದ್ರುಮಾಃ ।। 13 ।। ಅನ್ಯೇ ಚ ವಿವಿಧಾ ಜೀವಾಜಲಸ್ಥಲನಭೌಕಸಃ । ಗ್ರಹರ್ಕ್ಷಕೇತವಸ್ತಾರಾಸ್ತಡಿತಃ ಸ್ತನಯಿತ್ನವಃ ।। 14 ।। ಸರ್ವಂ ಪುರುಷ ಏವೇದಂ ಭೂತಂ ಭವ್ಯಂ ಭವಚ್ಚ ಯತ್ । ತೇನೇದಮಾವೃತಂ ವಿಶ್ವಂ ವಿತಸ್ತಿಮಧಿತಿಷ್ಠತಿ ।। 15 ।। ಸ್ವಧಿಷ್ಣ್ಯಂ ಪ್ರತಪನ್ಪ್ರಾಣೋ ಬಹಿಶ್ಚ ಪ್ರತಪತ್ಯಸೌ । ಏವಂ ವಿರಾಜಂ ಪ್ರತಪಂಸ್ತಪತ್ಯಂತರ್ಬಹಿಃ ಪುಮಾನ್ ।। 16 ।। ಸೋಽಮೃತಸ್ಯಾಭಯಸ್ಯೇಶೋ ಮರ್ತ್ಯಮನ್ನಂ ಯದತ್ಯಗಾತ್ । ಮಹಿಮೈಷ ತತೋ ಬ್ರಹ್ಮನ್ಪುರುಷಸ್ಯ ದುರತ್ಯಯಃ ।। 17 ।।
ನಾನು, ನೀನು, ನಿನ್ನ ಅಣ್ಣಂದಿರಾದ ಈ ಸನಕಾದಿ ಮುನಿಗಳೂ, ಸುರ-ಅಸುರ-ನರರೂ, ನಾಗ-ಪಕ್ಷಿ-ಮೃಗ-ಸರೀಸೃಪಗಳೂ, ಗಂಧರ್ವ-ಅಪ್ಸರ-ಯಕ್ಷ-ರಾಕ್ಷಸ-ಭೂತಗಣ-ಉರಗಗಳೂ, ಪಶುಗಳು, ಪಿತೃಗಳು, ಸಿದ್ಧ-ವಿದ್ಯಾಧರ-ಚಾರಣರೂ, ವೃಕ್ಷಗಳೂ, ಮತ್ತು ಅನ್ಯ ವಿವಿಧ ಜಲ-ಭೂಮಿ-ಆಕಾಶಗಳಲ್ಲಿ ವಾಸಿಸುವ ಜೀವಗಳೂ, ಗ್ರಹ-ನಕ್ಷತ್ರ-ಧೂಮಕೇತುಗಳೂ, ಮಿಂಚು-ಮೋಡಗಳೂ – ಇವೆಲ್ಲವೂ ಆ ಪುರುಷನ ಅವಯವಗಳು. ಭೂತ-ಭವಿಷ್ಯ-ವರ್ತಮಾನಗಳಿಗೆ ಸೇರಿದ ಎಲ್ಲವೂ ಅವನೇ[4]. ಇವೆಲ್ಲವನ್ನೂ ಇವನು ಎಲ್ಲಕಡೆಗಳಿಂದಲೂ ಆವರಿಸಿ ತುಂಬಿರುವನಲ್ಲದೇ ಹತ್ತು ಅಂಗುಲದಷ್ಟು ಮೇಲೆ ಇದನ್ನು ಮೀರಿಯೂ ಇದ್ದಾನೆ.[5] ಸೂರ್ಯನು ತನ್ನ ಮಂಡಲವನ್ನು ಪ್ರಕಾಶಿಸುತ್ತಾ, ಒಳಗೂ, ಹೊರಗೂ, ವಿಶ್ವದ ಎಲ್ಲೆಡೆಯಲ್ಲಿಯೂ ಹೇಗೆ ಪ್ರಕಾಶವನ್ನು ಹರಡುತ್ತಾನೆಯೋ ಹಾಗೆಯೇ ಪ್ರಾಣವೆಂಬ ಪುರಾಣ ಪುರುಷ ಪರಮಾತ್ಮನೂ ಕೂಡ ಬ್ರಹ್ಮಾಂಡವನ್ನು ಪ್ರಕಾಶಿಸುತ್ತಾ, ಅದರ ಒಳಗೆ, ಹೊರಗೆ, ಎಲ್ಲೆಡೆಗಳಲ್ಲಿ ಪ್ರಕಾಶಿತನಾಗಿದ್ದಾನೆ. ಬ್ರಹ್ಮನ್! ಅಮೃತ ಮತ್ತು ಅಭಯಪದನಾಗಿರುವ ಈ ಪರಮಾತ್ಮನು ಮನುಷ್ಯನ ಕ್ರಿಯೆ ಮತ್ತು ಸಂಕಲ್ಪಗಳಿಂದ ಏನೆಲ್ಲಾ ಸಾಧ್ಯವಿದೆಯೋ ಅವೆಲ್ಲವನ್ನೂ ಮೀರಿದ್ದಾನೆ. ಪುರುಷನ ಈ ಮಹಿಮೆಯನ್ನು ಯಾರೂ ಹೊಂದಲಾರರು.
ಪಾದೇಷು ಸರ್ವಭೂತಾನಿ ಪುಂಸಃ ಸ್ಥಿತಿಪದೋ ವಿದುಃ । ಅಮೃತಂ ಕ್ಷೇಮಮಭಯಂ ತ್ರಿಮೂರ್ಧ್ನೋಽಧಾಯಿ ಮೂರ್ಧಸು ।। 18 ।। ಪಾದಾಸ್ತ್ರಯೋ ಬಹಿಶ್ಚಾಸನ್ನಪ್ರಜಾನಾಂ ಯ ಆಶ್ರಮಾಃ । ಅಂತಸ್ತ್ರಿಲೋಕ್ಯಾಸ್ತ್ವಪರೋ ಗೃಹಮೇಧೋಽಬೃಹದ್ವ್ರತಃ ।। 19 ।। ಸೃತೀ ವಿಚಕ್ರಮೇ ವಿಶ್ವಂಙ್ ಸಾಶನಾನಶನೇ ಉಭೇ । ಯದವಿದ್ಯಾ ಚ ವಿದ್ಯಾ ಚ ಪುರುಷಸ್ತೂಭಯಾಶ್ರಯಃ ।। 20 ।। ಯಸ್ಮಾದಂಡಂ ವಿರಾಡ್ಜಜ್ಞೇ ಭೂತೇಂದ್ರಿಯಗುಣಾತ್ಮಕಃ । ತದ್ದ್ರವ್ಯಮತ್ಯಗಾದ್ವಿಶ್ವಂ ಗೋಭಿಃ ಸೂರ್ಯ ಇವಾತಪನ್ ।। 21 ।।
ಸರ್ವಭೂತಗಳೂ ಪುರುಷನ ಒಂದು ಕಾಲುಭಾಗ ಮಾತ್ರವಾಗಿದೆ ಎಂದು ತಿಳಿದಿದ್ದಾರೆ. ಅವನ ನೆತ್ತಿಯಲ್ಲಿ ಮೂರು ಲೋಕಗಳಿವೆ: ಜನೋಲೋಕದಲ್ಲಿ ಅಮೃತವಿದೆ, ತಪೋ ಲೋಕದಲ್ಲಿ ಕ್ಷೇಮವಿದೆ ಮತ್ತು ಸತ್ಯಲೋಕದಲ್ಲಿ ಅಭಯಪದವಿದೆ.[6] ಈ ಮೂರೂ ಲೋಕಗಳು ವಿರಾಟ್ ಪುರುಷನ ಮೂರ್ಧ್ನಿಯಲ್ಲಿ ಇರುವುದರಿಂದ ಇವನನ್ನು ತ್ರಿಮೂರ್ಧಾ ಎಂದು ಹೇಳುತ್ತಾರೆ. ಜನೋಲೋಕ, ತಪೋಲೋಕ, ಸತ್ಯಲೋಕಗಳಲ್ಲಿ ಅವಿವಾಹಿತರೂ, ಬ್ರಹ್ಮಚಾರಿಗಳೂ, ವಾನಪ್ರಸ್ಥರೂ, ಸಂನ್ಯಾಸಿಗಳೂ ವಾಸಿಸುತ್ತಾರೆ. ಇದು ಅವನ ಹೊರಗಿನ ಪಾದವು. ದೀರ್ಘಕಾಲೀನ ಬ್ರಹ್ಮಚರ್ಯರಹಿತರಾದ ಗೃಹಸ್ಥರು ಭೂಲೋಕ, ಭುವರ್ಲೋಕ, ಸ್ವರ್ಲೋಕಗಳಲ್ಲಿ ವಾಸಿಸುತ್ತಾರೆ. ಇದು ಅವನ ಒಳಗಿನ ಪಾದವು. ಭಗವಂತನು ಮನುಷ್ಯರಿಗಾಗಿ ಎರಡು ಮಾರ್ಗಗಳನ್ನು ಹೇಳಿದ್ದಾನೆ. ಇವುಗಳಲ್ಲಿ ಅವನು ಯಾವುದೊಂದರಲ್ಲಿಯಾದರೂ ಹೋಗಬಲ್ಲನು. ಒಂದು ಸ+ಅಶನ – ಅರ್ಥಾತ್ – ಸಕಾಮ ಅನುಷ್ಠಾನ. ಇನ್ನೊಂದು ಅನ+ಅಶನ – ಅರ್ಥಾತ್ – ನಿಷ್ಕಾಮ ಅನುಷ್ಠಾನ. ಇವೆರಡರಲ್ಲಿ ಸಕಾಮ ಮಾರ್ಗವನ್ನು ಅವಿದ್ಯೆಯೆಂದೂ, ನಿಷ್ಕಾಮ ಮಾರ್ಗವನ್ನು ವಿದ್ಯೆ ಎಂದೂ ಹೇಳಲಾಗಿದೆ. ನಿಷ್ಕಾಮಕರ್ಮದಲ್ಲಿ ಪರಮಾತ್ಮನ ಉಪಾಸನಾ ಬುದ್ಧಿಯಿಂದ ಕ್ರಿಯೆಗಳು ನಡೆಯುತ್ತವೆ. ಸಕಾಮದಲ್ಲಿ ಕರ್ಮಗಳು ವಿಸ್ತಾರವಾಗಿವೆ. ಅವು ಅವಿದ್ಯಾಮೂಲವಾಗಿವೆ. ಕ್ಷೇತ್ರಜ್ಞ ಜೀವಾತ್ಮನು ಈ ಎರಡರಲ್ಲಿನ ಯಾವುದೇ ಮಾರ್ಗವನ್ನು ಹಿಡಿಯಬಲ್ಲನು. ಎರಡೂ ಮಾರ್ಗಗಳ ಆಧಾರವು ಈ ವಿರಾಟ್ ಪುರುಷ ಪರಮಾತ್ಮನೇ ಆಗಿದ್ದಾನೆ. ಏಕೆಂದರೆ, ಈ ವಿರಾಟ್ ಪುರುಷನಿಂದಲೇ ಭೂತಗಳು, ಇಂದ್ರಿಯಗಳು, ಮತ್ತು ಗುಣಗಳಿರುವ ಈ ಬ್ರಹ್ಮಾಂಡವು ಉತ್ಪನ್ನವಾಗಿದೆ. ಸೂರ್ಯನು ಹೇಗೆ ತನ್ನ ಕಿರಣಗಳಿಂದ ವಿಶ್ವವನ್ನೆಲ್ಲ ಪ್ರಕಾಶಗೊಳಿಸುತ್ತಿದ್ದು, ವಿಶ್ವಕ್ಕಿಂತ ಬೇರೆಯೇ ಆಗಿದ್ದಾನೋ ಹಾಗೆಯೇ ಪರಮಾತ್ಮನೂ ಕೂಡ ಸಮಗ್ರ ವಿಶ್ವವನ್ನು ನಿರ್ಮಿಸಿ ಅದನ್ನು ಪ್ರಕಾಶಿಸುತ್ತಿದ್ದಾನೆ. ಆದರೆ ಅವನು ಇದರಿಂದ ಅತೀತನೇ ಆಗಿದ್ದಾನೆ.[7]
ಯದಾಸ್ಯ ನಾಭ್ಯಾನ್ನಲಿನಾದಹಮಾಸಂ ಮಹಾತ್ಮನಃ । ನಾವಿದಂ ಯಜ್ಞಸಂಭಾರಾನ್ಪುರುಷಾವಯವಾದೃತೇ ।। 22 ।। ತೇಷು ಯಜ್ಞಸ್ಯ ಪಶವಃ ಸವನಸ್ಪತಯಃ ಕುಶಾಃ । ಇದಂ ಚ ದೇವಯಜನಂ ಕಾಲಶ್ಚೋರುಗುಣಾನ್ವಿತಃ ।। 23 ।। ವಸ್ತೂನ್ಯೋಷಧಯಃ ಸ್ನೇಹಾ ರಸಲೋಹಮೃದೋ ಜಲಮ್ । ಋಚೋ ಯಜೂಂಷಿ ಸಾಮಾನಿ ಚಾತುರ್ಹೋತ್ರಂ ಚ ಸತ್ತಮ ।। 24 ।। ನಾಮಧೇಯಾನಿ ಮಂತ್ರಾಶ್ಚ ದಕ್ಷಿಣಾಶ್ಚ ವ್ರತಾನಿ ಚ । ದೇವತಾನುಕ್ರಮಃ ಕಲ್ಪಃ ಸಂಕಲ್ಪಸ್ತಂತ್ರಮೇವ ಚ ।। 25 ।। ಗತಯೋ ಮತಯಃ ಶ್ರದ್ಧಾ ಪ್ರಾಯಶ್ಚಿತ್ತಂ ಸಮರ್ಪಣಮ್ । ಪುರುಷಾವಯವೈರೇತೇ ಸಂಭಾರಾಃ ಸಂಭೃತಾ ಮಯಾ ।। 26 ।। ಇತಿ ಸಂಭೃತಸಂಭಾರಃ ಪುರುಷಾವಯವೈರಹಮ್ । ತಮೇವ ಪುರುಷಂ ಯಜ್ಞಂ ತೇನೈವಾಯಜಮೀಶ್ವರಮ್ ।। 27 ।। ತತಸ್ತೇ ಭ್ರಾತರ ಇಮೇ ಪ್ರಜಾನಾಂ ಪತಯೋ ನವ । ಅಯಜನ್ವ್ಯಕ್ತಮವ್ಯಕ್ತಂ ಪುರುಷಂ ಸುಸಮಾಹಿತಾಃ ।। 28 ।। ತತಶ್ಚ ಮನವಃ ಕಾಲೇ ಈಜಿರೇ ಋಷಯೋಽಪರೇ । ಪಿತರೋ ವಿಬುಧಾ ದೈತ್ಯಾ ಮನುಷ್ಯಾಃ ಕ್ರತುಭಿರ್ವಿಭುಮ್ ।। 29 ।।
ಆ ಮಹಾತ್ಮಾ ಪುರುಷನ ನಾಭಿಕಮಲದಿಂದ ನಾನು ಜನಿಸಿದಾಗ ನನಗೆ ಯಜ್ಞಮಾಡುವುದಕ್ಕೆ ಆ ಪುರುಷನ ಅಂಗಗಳನ್ನು ಬಿಟ್ಟು ಬೇರೆ ಯಾವ ಸಾಮಗ್ರಿಯೂ ದೊರೆಯಲಿಲ್ಲ. ಆಗ ನಾನು ಅವನ ಅವಯವಗಳಲ್ಲಿಯೇ ಯಜ್ಞದ ಪಶು, ಯೂಪಸ್ತಂಭ, ಕುಶ, ಯಜ್ಞಭೂಮಿ, ಯಜ್ಞಕ್ಕೆ ಯೋಗ್ಯವಾದ ಉತ್ತಮ ಕಾಲ ಇವುಗಳನ್ನು ಕಲ್ಪಿಸಿಕೊಂಡೆ. ಸತ್ತಮ! ಯಜ್ಞಕ್ಕೆ ಅವಶ್ಯಕವಾದ ಪಾತ್ರೆ-ಹುಟ್ಟು ಮೊದಲಾದ ವಸ್ತುಗಳನ್ನೂ, ಅಕ್ಕಿ-ಗೋಧಿ ಮೊದಲಾದ ಓಷಧಗಳನ್ನೂ, ತುಪ್ಪವನ್ನೂ, ರಸಗಳನ್ನೂ, ಲೋಹಗಳನ್ನೂ, ಮಣ್ಣನ್ನೂ, ಜಲವನ್ನೂ, ಋಕ್ಕು-ಯಜುಸ್-ಸಾಮಗಳನ್ನೂ, ಚಾತುರ್ಹೋತ್ರರನ್ನೂ[8], ನಾಮಧೇಯಗಳನ್ನೂ, ಮಂತ್ರಗಳನ್ನೂ, ದಕ್ಷಿಣೆಗಳನ್ನೂ, ವ್ರತಗಳನ್ನೂ, ಅನುಕ್ರಮವಾಗಿ ದೇವತೆಗಳನ್ನೂ, ಯಜ್ಞದ ವಿಧಿಯನ್ನೂ, ಸಂಕಲ್ಪವನ್ನೂ, ತಂತ್ರವನ್ನೂ, ಗತಿಯನ್ನೂ, ಮತಿ-ಶ್ರದ್ಧೆ-ಪ್ರಾಯಶ್ಚಿತ್ತ-ಸಮರ್ಪಣೆಗಳನ್ನೂ – ಈ ಎಲ್ಲ ಯಜ್ಞಸಂಭಾರಗಳನ್ನು ಆ ಪುರುಷನ ಅಂಗಗಳಿಂದಲೇ ಸಂಗ್ರಹಿಸಿದೆನು. ಹೀಗೆ ಆ ವಿರಾಟ ಪುರುಷನ ಅವಯವಗಳಿಂದ ಯಜ್ಞಸಾಮಗ್ರಿಗಳನ್ನು ಸಂಗ್ರಹಿಸಿ, ಅದೇ ಪುರುಷನನ್ನು ಯಜ್ಞದಲ್ಲಿ ಅರ್ಪಿಸಿ ಈಶ್ವರನನ್ನು ಆರಾಧಿಸಿದೆನು. ನಂತರ ನಿನ್ನ ಸಹೋದರರಾದ ಈ ನವ ಪ್ರಜಾಪತಿಗಳು ಸುಸಮಾಹಿತರಾಗಿ ವ್ಯಕ್ತ-ಅವ್ಯಕ್ತ ರೂಪನಾದ ಪುರುಷನನ್ನು ಯಜ್ಞದ ಮೂಲಕ ಆರಾಧಿಸಿದರು. ನಂತರ ಕಾಲ-ಕಾಲದಲ್ಲಿ ಮನುಗಳು, ಇತರ ಋಷಿಗಳು, ಪಿತೃಗಳು, ದೇವತೆಗಳು, ದೈತ್ಯರು ಮತ್ತು ಮನುಷ್ಯರು ಕ್ರತುಗಳ ಮೂಲಕ ವಿಭುವನ್ನು ಆರಾಧಿಸಿದರು.
ನಾರಾಯಣೇ ಭಗವತಿ ತದಿದಂ ವಿಶ್ವಮಾಹಿತಮ್ । ಗೃಹೀತಮಾಯೋರುಗುಣಃ ಸರ್ಗಾದಾವಗುಣಃ ಸ್ವತಃ ।। 30 ।। ಸೃಜಾಮಿ ತನ್ನಿಯುಕ್ತೋಽಹಂ ಹರೋ ಹರತಿ ತದ್ವಶಃ । ವಿಶ್ವಂ ಪುರುಷರೂಪೇಣ ಪರಿಪಾತಿ ತ್ರಿಶಕ್ತಿಧೃಕ್ ।। 31 ।। ಇತಿ ತೇಽಭಿಹಿತಂ ತಾತ ಯಥೇದಮನುಪೃಚ್ಛಸಿ । ನಾನ್ಯದ್ಭಗವತಃ ಕಿಂಚಿದ್ಭಾವ್ಯಂ ಸದಸದಾತ್ಮಕಮ್ ।। 32 ।।
ಈ ವಿಶ್ವವೆಲ್ಲವೂ ಆ ಭಗವಂತ ನಾರಾಯಣನಲ್ಲಿಯೇ ನೆಲೆಗೊಂಡಿದೆ. ಸ್ವಯಂ ಅಗುಣನಾಗಿದ್ದರೂ ಸೃಷ್ಟಿಯ ಪ್ರಾರಂಭದಲ್ಲಿ ತನ್ನ ಮಾಯಾಶಕ್ತಿಯಿಂದ ತ್ರಿಗುಣಗಳನ್ನು ಸ್ವೇಚ್ಛೆಯಿಂದಲೇ ಸ್ವೀಕರಿಸುತ್ತಾನೆ. ಅವನ ಪ್ರೇರಣೆಯಿಂದಲೇ ನಾನು ಈ ವಿಶ್ವವನ್ನು ರಚಿಸುತ್ತೇನೆ. ಅವನಿಗೆ ಅಧೀನನಾಗಿಯೇ ಹರನು ಇದನ್ನು ಸಂಹರಿಸುತ್ತಾನೆ. ಸತ್ತ್ವ-ರಜ-ತಮಸ್ಸುಗಳೆಂಬ ಮೂರು ಶಕ್ತಿಗಳನ್ನು ಸ್ವೀಕರಿಸಿದ ಪುರುಷರೂಪದಿಂದಲೇ ಅವನು ವಿಶ್ವವನ್ನು ಪಾಲಿಸುತ್ತಾನೆ. ಮಗೂ! ನೀನು ಕೇಳಿದ ಪ್ರಶ್ನೆಗಳನ್ನು ಉತ್ತರಿಸಿದ್ದೇನೆ. ಒಟ್ಟಿನಲ್ಲಿ ಹೇಳುವುದಾದರೆ, ಆ ಭಗವಂತನನ್ನು ಬಿಟ್ಟು ಸದ್ರೂಪವಾಗಲೀ, ಅಸದ್ರೂಪವಾಗಲೀ, ಕಾರ್ಯ-ಕಾರಣವಾಗಲೀ, ಯಾವ ವಸ್ತುವೂ ಇಲ್ಲ ಎಂದು ತಿಳಿ.[9]
ನ ಭಾರತೀ ಮೇಽಂಗ ಮೃಷೋಪಲಕ್ಷ್ಯತೇ ನ ವೈ ಕ್ವಚಿನ್ಮೇ ಮನಸೋ ಮೃಷಾ ಗತಿಃ । ನ ಮೇ ಹೃಷೀಕಾಣಿ ಪತಂತ್ಯಸತ್ಪಥೇ ಯನ್ಮೇ ಹೃದೌತ್ಕಂಠ್ಯವತಾ ಧೃತೋ ಹರಿಃ ।। 33 ।। ಸೋಽಹಂ ಸಮಾಮ್ನಾಯಮಯಸ್ತಪೋಮಯಃ ಪ್ರಜಾಪತೀನಾಮಭಿವಂದಿತಃ ಪತಿಃ । ಆಸ್ಥಾಯ ಯೋಗಂ ನಿಪುಣಂ ಸಮಾಹಿತಸ್ತಂ ನಾಧ್ಯಗಚ್ಛಂ ಯತ ಆತ್ಮಸಂಭವಃ ।। 34 ।। ನತೋಽಸ್ಮ್ಯಹಂ ತಚ್ಚರಣಂ ಸಮೀಯುಷಾಂ ಭವಚ್ಛಿದಂ ಸ್ವಸ್ತ್ಯಯನಂ ಸುಮಂಗಲಮ್ । ಯೋ ಹ್ಯಾತ್ಮಮಾಯಾವಿಭವಂ ಸ್ಮಪರ್ಯಗಾದ್ಯಥಾ ನಭಃ ಸ್ವಾಂತಮಥಾಪರೇ ಕುತಃ ।। 35 ।। ನಾಹಂ ನ ಯೂಯಂ ಯದೃತಾಂ ಗತಿಂ ವಿದುರ್ನ ವಾಮದೇವಃ ಕಿಮುತಾಪರೇ ಸುರಾಃ । ತನ್ಮಾಯಯಾ ಮೋಹಿತಬುದ್ಧಯಸ್ತ್ವಿದಂ ವಿನಿರ್ಮಿತಂ ಚಾತ್ಮಸಮಂ ವಿಚಕ್ಷ್ಮಹೇ ।। 36 ।। ಯಸ್ಯಾವತಾರಕರ್ಮಾಣಿ ಗಾಯಂತಿ ಹ್ಯಸ್ಮದಾದಯಃ । ನ ಯಂ ವಿದಂತಿ ತತ್ತ್ವೇನ ತಸ್ಮೈ ಭಗವತೇ ನಮಃ ।। 37 ।। ಸ ಏಷ ಆದ್ಯಃ ಪುರುಷಃ ಕಲ್ಪೇ ಕಲ್ಪೇ ಸೃಜತ್ಯಜಃ । ಆತ್ಮಾಽಽತ್ಮನ್ಯಾತ್ಮಽಽನಾತ್ಮಾನಂ ಸ ಸಂಯಚ್ಛತಿ ಪಾತಿ ಚ ।। 38 ।। ವಿಶುದ್ಧಂ ಕೇವಲಂ ಜ್ಞಾನಂ ಪ್ರತ್ಯಕ್ಸಮ್ಯಗವಸ್ಥಿತಮ್ । ಸತ್ಯಂ ಪೂರ್ಣಮನಾದ್ಯಂತಂ ನಿರ್ಗುಣಂ ನಿತ್ಯಮದ್ವಯಮ್ ।। 39 ।। ಋಷೇ ವಿದಂತಿ ಮುನಯಃ ಪ್ರಶಾಂತಾತ್ಮೇಂದ್ರಿಯಾಶಯಾಃ । ಯದಾ ತದೇವಾಸತ್ತರ್ಕೈಸ್ತಿರೋಧೀಯೇತ ವಿಪ್ಲುತಮ್ ।। 40 ।।
ನಾನು ಪ್ರೇಮಪೂರ್ಣ ಹೃದಯದಿಂದ ಭಗವಂತನ ಸ್ಮರಣೆಯಲ್ಲಿ ಮಗ್ನನಾಗಿರುತ್ತೇನೆ. ಇದರಿಂದಲೇ ನನ್ನ ವಾಣಿಯು ಎಂದೂ ಸುಳ್ಳಾಗಿರುವುದು ಕಂಡುಬಂದಿಲ್ಲ. ಇದರಿಂದಲೇ ನನ್ನ ಮನಸ್ಸಿನ ಸಂಕಲ್ಪವು ಎಂದೂ ಅಸತ್ಯವಾಗುವುದಿಲ್ಲ. ನನ್ನ ಇಂದ್ರಿಯಗಳು ಎಂದೂ ಮರ್ಯಾದೆ ಮೀರಿ ದುರ್ಮಾರ್ಗದಲ್ಲಿ ಪ್ರವರ್ತಿಸುವುದಿಲ್ಲ. ನಾನು ವೇದಮಯನಾಗಿದ್ದೇನೆ. ತಪೋಮಯನಾಗಿದ್ದೇನೆ. ದೊಡ್ಡ-ದೊಡ್ಡ ಪ್ರಜಾಪತಿಗಳೂ ನಮಸ್ಕರಿಸುವ ಪ್ರಜಾಪತಿ ಸಾರ್ವಭೌಮನಾಗಿದ್ದೇನೆ. ಆದರೆ ಹೀಗೆ ಸಂಪೂರ್ಣ ಯೋಗನಿಷ್ಠೆಯನ್ನು ಆಚರಿಸುತ್ತಿರುವ ನನಗೂ ಮೂಲಕಾರಣನಾದ ಆ ಪರಮಾತ್ಮನ ಸ್ವರೂಪವನ್ನು ತಿಳಿಯಲು ಮೊದಲು ಸಾಧ್ಯವಾಗಲಿಲ್ಲ. ಏಕೆಂದರೆ ಅವನಾದರೋ ಏಕಮಾತ್ರ ಭಕ್ತಿಯಿಂದಲೇ ದೊರಕುವವನು. ನಾನಾದರೋ ಪರಮಮಂಗಲಮಯನಾದ ಹಾಗೂ ಶರಣುಬಂದ ಭಕ್ತರ ಭವ-ಬಂಧನಗಳನ್ನು ನಾಶಪಡಿಸುವ, ಕ್ಷೇಮಪ್ರದನಾದ ಭಗವಂತನ ಚರಣಗಳಿಗೇ ನಮಸ್ಕರಿಸುತ್ತೇನೆ. ಅವನಲ್ಲಿ ಶರಣಾಗಿದ್ದೇನೆ. ಅನಂತ-ಅಪಾರ ಆಕಾಶಕ್ಕೆ ಮೇರೆಯೇ ಇಲ್ಲದಿರುವಂತೆ ಭಗವಂತನ ಅನಂತ ಮಹಿಮೆಗೆ ಪಾರವಿಲ್ಲ. ಅವನ ಮಾಯೆಯ ವೈಭವವು ಅಪಾರವಾದುದು, ಅನಂತವಾದುದು. ಆಕಾಶವು ತನ್ನ ಅನಂತತೆಯನ್ನು ತಾನೇ ತಿಳಿದುಕೊಂಡಿರದಂತೆ ಇವನೂ ಕೂಡ ತನ್ನ ಮಹಿಮೆಯ ವಿಸ್ತಾರವನ್ನು ಅರಿಯನು. ಹೀಗಿರುವಾಗ ಇನ್ನೊಬ್ಬರು ಹೇಗೆ ಅರಿಯಬಲ್ಲರು? ಅವನ ಮಾಯೆಯಿಂದ ಮೋಹಿತರಾದ ನಾವು, ಅವನನ್ನು ತಿಳಿಯುವುದಿರಲಿ, ಅವನು ನಿರ್ಮಿಸಿದ ಜಗತ್ತಿನ ಸ್ವರೂಪವನ್ನೂ ಸರಿಯಾಗಿ ತಿಳಿಯಲಾರೆವು. ನಮ್ಮ ನಮ್ಮ ಬುದ್ಧಿಮಟ್ಟಕ್ಕೆ ತಕ್ಕಂತೆ ಅದನ್ನು ವರ್ಣಿಸುತ್ತಿದ್ದೇವೆ[10]. ವಾಸ್ತವವಾಗಿ ಆ ತತ್ತ್ವವನ್ನು ಮಾತು ಮತ್ತು ಬುದ್ಧಿಯ ಮೂಲಕ ವರ್ಣಿಸಲು ಸಾಧ್ಯವಾಗುವುದಿಲ್ಲ. ನಾವು ಕೇವಲ ಅವನ ಅವತಾರಗಳನ್ನು ಮಾತ್ರ ಗಾನಮಾಡಬಲ್ಲವೇ ಹೊರತು ಅವನ ತತ್ತ್ವವನ್ನು ತಿಳಿಯಲಾರೆವು. ಅಂತಹ ಭಗವಂತನ ಶ್ರೀಚರಣಗಳಲ್ಲಿ ನಾನು ನಮಸ್ಕರಿಸುತ್ತೇನೆ. ಅವನು ಜನ್ಮರಹಿತನಾದ ಆದಿಪುರುಷನು. ಪ್ರತಿಯೊಂದು ಕಲ್ಪದಲ್ಲಿಯೂ ತನ್ನನ್ನು ತಾನೇ ಸೃಷ್ಟಿಸಿಕೊಂಡು, ರಕ್ಷಿಸಿಕೊಳ್ಳುತ್ತಾ, ಉಪಸಂಹಾರವನ್ನೂ ಮಾಡಿಕೊಳ್ಳುತ್ತಾನೆ. ಅವನು ಲೇಶಮಾತ್ರ ಮಾಯೆಯೂ ಇಲ್ಲದ ಶುದ್ಧಜ್ಞಾನ ಸ್ವರೂಪನು. ಅಂತರಾತ್ಮನಾದ ಆತ್ಮನಾಗಿ ಬೆಳಗುತ್ತಿರುವವನೂ, ಸತ್ಯವೂ, ಪರಿಪೂರ್ಣನೂ, ಆದ್ಯಂತರಹಿತನೂ, ಗುಣಾತೀತನೂ, ನಿತ್ಯನೂ, ಅದ್ವಿತೀಯನೂ ಆದ ಪರಮಾತ್ಮನೇ ಅವನು. ಋಷೇ! ಮಹಾತ್ಮರು ತಮ್ಮ ಅಂತಃಕರಣ, ಇಂದ್ರಿಯಗಳು ಮತ್ತು ಶರೀರವನ್ನು ಪ್ರಶಾಂತಗೊಳಿಸಿಕೊಂಡಾಗ ಅವನ ಸಾಕ್ಷಾತ್ಕಾರವಾಗುತ್ತದೆ. ಆದರೆ ಕೆಟ್ಟ ತರ್ಕಗಳ ಮುಸುಕು ಹಾಕಿಕೊಂಡಾಗ ಅವನು ಮರೆಯಾಗುತ್ತಾನೆ.
ಆದ್ಯೋಽವತಾರಃ ಪುರುಷಃ ಪರಸ್ಯ ಕಾಲಃ ಸ್ವಭಾವಃ ಸದಸನ್ಮನಶ್ಚ । ದ್ರವ್ಯಂ ವಿಕಾರೋ ಗುಣ ಇಂದ್ರಿಯಾಣಿ ವಿರಾಟ್ ಸ್ವರಾಟ್ ಸ್ಥಾಸ್ನು ಚರಿಷ್ಣು ಭೂಮ್ನಃ ।। 41 ।। ಅಹಂ ಭವೋ ಯಜ್ಞ ಇಮೇ ಪ್ರಜೇಶಾ ದಕ್ಷಾದಯೋ ಯೇ ಭವದಾದಯಶ್ಚ ।ಸ್ವರ್ಲೋಕಪಾಲಾಃ ಖಗಲೋಕಪಾಲಾ ನೃಲೋಕಪಾಲಾಸ್ತಲಲೋಕಪಾಲಾಃ ।। 42 ।। ಗಂಧರ್ವವಿದ್ಯಾಧರಚಾರಣೇಶಾ ಯೇ ಯಕ್ಷರಕ್ಷೋರಗನಾಗನಾಥಾಃ । ಯೇ ವಾ ಋಷೀಣಾಮೃಷಭಾಃ ಪಿತೄಣಾಂ ದೈತ್ಯೇಂದ್ರ ಸಿದ್ಧೇಶ್ವರದಾನವೇಂದ್ರಾಃ । ಅನ್ಯೇ ಚ ಯೇ ಪ್ರೇತಪಿಶಾಚಭೂತ ಕೂಷ್ಮಾಂಡಯಾದೋಮೃಗಪಕ್ಷ್ಯಧೀಶಾಃ ।। 43 ।। ಯತ್ಕಿಂಚ ಲೋಕೇ ಭಗವನ್ಮಹಸ್ವದೋಜಃಸಹಸ್ವದ್ಬಲವತ್ ಕ್ಷಮಾವತ್ । ಶ್ರೀಹ್ರೀವಿಭೂತ್ಯಾತ್ಮವದದ್ಭುತಾರ್ಣಂ ತತ್ತ್ವಂ ಪರಂ ರೂಪವದಸ್ವರೂಪಮ್ ।। 44 ।। ಪ್ರಾಧಾನ್ಯತೋ ಯಾನೃಷ ಆಮನಂತಿ ಲೀಲಾವತಾರಾನ್ಪುರುಷಸ್ಯ ಭೂಮ್ನಃ । ಆಪೀಯತಾಂ ಕರ್ಣಕಷಾಯಶೋಷಾನನುಕ್ರಮಿಷ್ಯೇ ತ ಇಮಾನ್ಸುಪೇಶಾನ್ ।। 45 ।।
ಪರಮಾತ್ಮನ ಮೊದಲ ಅವತಾರವೇ ಈ ವಿರಾಟ್ ಪುರುಷನದು. ಕಾಲ-ಸ್ವಭಾವ-ಕಾರ್ಯ-ಕಾರಣ-ಮನಸ್ಸು-ಪಂಚಭೂತಗಳು-ಅಹಂಕಾರ-ತ್ರಿಗುಣಗಳು-ಇಂದ್ರಿಯಗಳು-ಬ್ರಹ್ಮಾಂಡಶರೀರ-ಅದರ ಅಭಿಮಾನಿ ದೇವತೆ-ಸ್ಥಾವರಜಂಗಮ ಜೀವರು – ಇವೆಲ್ಲವೂ ಆ ಭಗವಾನ್ ಅನಂತನದೇ ರೂಪಗಳಾಗಿವೆ. ಇವೆಲ್ಲ ರೂಪಗಳಲ್ಲಿದ್ದರೂ ವಾಸ್ತವವಾಗಿ ಅವನು ಒಬ್ಬನೇ ಆಗಿದ್ದಾನೆ. ಅವನ ಮಹಿಮೆಗೆ ಪಾರವಿಲ್ಲ. ಆದ್ದರಿಂದ ಅನಂತನಾಗಿದ್ದಾನೆ. ಸರ್ವವ್ಯಾಪಿಯೂ, ಭೂಮನೂ, ಅರ್ಥಾತ್ ಮಹತ್ತನೂ ಆಗಿದ್ದಾನೆ. ನಾನು, ಶಂಕರ, ಯಜ್ಞಪುರುಷನಾದ ವಿಷ್ಣು, ದಕ್ಷನೇ ಮೊದಲಾದ ಪ್ರಜಾಪತಿಗಳು, ನೀನು ಮತ್ತು ನಿನ್ನಂತಹ ದಿವ್ಯ ಮಹರ್ಷಿಗಳು, ಸ್ವರ್ಗಾಧಿಪತಿಗಳು, ದಿವ್ಯಪಕ್ಷಿಗಳ ಅಧಿಪತಿಗಳು, ನರಪತಿಗಳು, ಪಾತಾಳವೇ ಮೊದಲಾದ ಕೆಳಗಿನ ಲೋಕಗಳ ಪಾಲಕರು, ಗಂಧರ್ವ-ವಿದ್ಯಾಧರ-ಚಾರಣರ ಅಧಿನಾಯಕರು, ಯಕ್ಷ-ರಾಕ್ಷಸ-ಸರ್ಪ-ನಾಗಜಾತಿಗಳ ನಾಯಕರು, ಮಹರ್ಷಿಗಳು, ಪಿತೃಪತಿಗಳು, ದೈತ್ಯೇಂದ್ರರು, ಸಿದ್ಧೇಶ್ವರರು, ದಾನವ-ಅಸುರರು, ಭೂತ-ಪ್ರೇತ-ಪಿಶಾಚ-ಕೂಷ್ಮಾಂಡ-ಜಲಜಂತುಗಳು, ಮೃಗಗಳು, ಪಕ್ಷಿಗಳ ಒಡೆಯರು, ಐಶ್ವರ್ಯ, ತೇಜಸ್ಸು, ಇಂದ್ರಿಯಬಲ, ಮನೋಬಲ, ಶರೀರಬಲ ಅಥವಾ ವಿಶೇಷವಾದ ಸೌಂದರ್ಯ, ಲಜ್ಜೆ, ವೈಭವ ಮತ್ತು ವಿಭೂತಿಗಳಿಂದ ಬೆಳಗುತ್ತಿರುವ, ಅದ್ಭುತವಾದ ರೂಪ-ಸಂಪತ್ತುಗಳಿಂದ ಖ್ಯಾತವಾದವುಗಳೂ, ರೂಪರಹಿತರಾಗಿ ಅತಿಶಯವನ್ನು ಪಡೆದಿರುವವರೂ, ಎಲ್ಲರೂ, ಎಲ್ಲವೂ ಆ ಪರಮತತ್ತ್ವಮಯ ಭಗವತ್ಸ್ವರೂಪಗಳೇ ಆಗಿವೆ. ನಾರದ! ಇವುಗಳಲ್ಲದೇ ಆ ಪರಮಪುರುಷನ ಪರಮ ಪವಿತ್ರವಾದ ಮತ್ತು ಪ್ರಧಾನವಾದ ಅನೇಕ ಲೀಲಾವತಾರಗಳು ಶಾಸ್ತ್ರಗಳಲ್ಲಿ ವರ್ಣಿತವಾಗಿವೆ. ಅವು ಕಿವಿಗಳಿಗೆ ಇಂಪಾಗಿ, ಕಿವಿಗಳ ಕೊಳೆಯನ್ನು ತೊಳೆದು ಹಾಕುವ, ದಿವ್ಯಚರಿತ್ರೆಗಳು. ಅವುಗಳನ್ನು ನಾನು ಕ್ರಮವಾಗಿ ವರ್ಣಿಸುತ್ತೇನೆ. ಸಾವಧಾನದಿಂದ ಕೇಳು.”
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಬ್ರಹ್ಮನಾರದಸಂವಾದೇ ಷಷ್ಠೋಽಧ್ಯಾಯಃ ।।
ಇದು ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಪರಮಹಂಸ ಸಂಹಿತೆಯಲ್ಲಿ ಎರಡನೇ ಸ್ಕಂಧದಲ್ಲಿ ಬ್ರಹ್ಮನಾರದಸಂವಾದದಲ್ಲಿ ಆರನೇ ಅಧ್ಯಾಯವು.
[1] ಛಂದೋಶಾಸ್ತ್ರದ ಛಂದೋಲಕ್ಷಣ ಭಾಗದಲ್ಲಿರುವಂತೆ ಛಂದಸ್ಸಿನ ಸಪ್ತ ಧಾತುಗಳು: ಅಕ್ಷರಂ ಗಣಶ್ಚ ಪಾದಶ್ಚ ವೃತ್ತಂ ಯತಿರ್ಲಘುರ್ಗುರುಃ । ಏತೇ ಛಂದಸಾಂ ಧಾತವಃ ಸಪ್ತ ಪ್ರೋಕ್ತಾಃ ಮನೀಷಿಭಿಃ ।। ಅರ್ಥಾತ್: ಅಕ್ಷರ, ಗಣ, ಪಾದ, ವೃತ್ತ, ಯತಿ, ಲಘು ಮತ್ತು ಗುರು — ಈ ಏಳು ಅಂಶಗಳೇ ಛಂದಸ್ಸಿನ ಧಾತುಗಳು ಎಂದು ಮನುಷ್ಯಮೇಧಾವಿಗಳು ಹೇಳಿದ್ದಾರೆ. (1) ಅಕ್ಷರ – ಛಂದಸ್ಸಿನ ಅಣು ಎಂದರೆ ಅಕ್ಷರಗಳು ಅಥವಾ syllables ಛಂದಸ್ಸಿನ ಮೂಲ ಘಟಕ (2) ಗಣ – ಅಕ್ಷರಗಳ ಗುಂಪು, ಲಘು-ಗುರು ಸಂಯೋಜನೆಗಳು, ಉದಾ: ಯ, ರ, ತ, ಭ ಇತ್ಯಾದಿ (3) ಪಾದ - ಛಂದಸ್ಸಿನ ಒಂದು ಚರಣ ಅಥವಾ ಸಾಲು — ಪ್ರತಿ ಛಂದಸ್ಸಿಗೆ 4 ಪಾದಗಳು ಸಾಮಾನ್ಯ (4) ವೃತ್ತ - ಒಟ್ಟು ಛಂದಸ್ಸಿನ ರಚನೆ — ಪಾದಗಳ ಸಮಾನತೆ ಅಥವಾ ವ್ಯತ್ಯಾಸದ ಮೇಲೆ ಆಧಾರಿತ ರೂಪ (5) ಯತಿ - ಪಾದದ ಒಳಗಿನ ವಿರಾಮಸ್ಥಾನ, ಅಂದರೆ rhythmic pause (6) ಲಘು - ಚಿಕ್ಕ ಅಕ್ಷರ (short syllable), ಸ್ವರದ ಕೃತಕಾಲ (7) ಗುರು - ದೀರ್ಘ ಅಕ್ಷರ (long syllable), ದೀರ್ಘ ಸ್ವರ ಅಥವಾ ಸಂಯುಕ್ತಾಕ್ಷರ.
[2] ಮಧುರಃ, ಅಮ್ಲಃ, ಲವಣಃ, ಕಟುಃ, ತಿಕ್ತಃ, ಕಷಾಯಶ್ಚ ಇತಿ ಷಡ್ರಸಾಃ । ಪ್ರತಿ ರಸವೂ ಪಂಚಮಹಾಭೂತಗಳಲ್ಲಿ (ಆಕಾಶ, ವಾಯು, ಅಗ್ನಿ, ಆಪ ಮತ್ತು ಪೃಥ್ವಿ) ಎರಡು ಭೂತಗಳ ಸಂಯೋಜನೆಯಿಂದ ನಿರ್ಮಿತವಾಗಿದೆ. ಆಯುರ್ವೇದದ ಪ್ರಕಾರ ಈ ಭೂತಸಂಯೋಗವೇ ಅದರ ಗುಣ, ರುಚಿ, ಮತ್ತು ದೋಷಪ್ರಭಾವವನ್ನು ನಿರ್ಧರಿಸುತ್ತದೆ.
| ರಸ | ಉದಾಹರಣೆ | ಸಂಯುಕ್ತ ಮಹಾ ಭೂತಗಳು | ಮುಖ್ಯ ಗುಣಗಳು | ದೋಷಗಳ ಮೇಲೆ ಪರಿಣಾಮ |
| ಮಧುರ | ಹಾಲು, ಅಕ್ಕಿ, ಸಕ್ಕರೆ, ಗೋಧಿ | ಪೃಥ್ವಿ+ಆಪ | ಶೀತಲ, ಪೋಷಕ, ಬಲವರ್ಧಕ, ಶಾಂತಿ ಕಾರಕ. | ವಾತ-ಪಿತ್ತ ಶಮನ, ಕಫ ವೃದ್ಧಿ |
| ಆಮ್ಲ | ಲಿಂಬೆ, ಮೊಸರು, ಹುಣಿಸೇ ಹಣ್ಣು | ಅಗ್ನಿ + ಪೃಥ್ವಿ | ಉಷ್ಣ, ರುಚಿ ಕಾರಕ, ದೀಪನ, ಸ್ಫೋಟಕ | ವಾತ ಶಮನ, ಪಿತ್ತ-ಕಫ ವೃದ್ಧಿ |
| ಲವಣ | ಉಪ್ಪು, ಸಮುದ್ರ ಲವಣ, ಕಲ್ಲುಪ್ಪು | ಅಗ್ನಿ + ಆಪ | ಉಷ್ಣ, ಸ್ನಿಗ್ಧ, ಲಘು, ದೀಪನ | ವಾತ ಶಮನ, ಪಿತ್ತ-ಕಫ ವೃದ್ಧಿ |
| ಕಟು | ಮೆಣಸು, ಶುಂಠಿ, ಹುಣಸೆಬೇಳೆ | ಅಗ್ನಿ + ವಾಯು | ಉಷ್ಣ, ಲಘು, ರುಕ್ಷ, ದೋಷ ನಾಶಕ | ಕಫ-ಮೇದ ನಾಶಕ, ವಾತ ವೃದ್ಧಕ, ಪಿತ್ತ ವೃದ್ಧಕ |
| ತಿಕ್ತ | ಬೇವು, ಹಾಗಲ ಕಾಯಿ, ಮೆಂತ್ಯೆ | ಆಕಾಶ + ವಾಯು | ಶೀತಲ, ರುಕ್ಷ, ಲಘು, ಶೋಧಕ | ಪಿತ್ತ-ಕಫ ಶಮನ, ವಾತ ವೃದ್ಧಕ |
| ಕಷಾಯ | ಹುಣಸೆ ಹಣ್ಣು, ಅರಳಿಬೇರು, ನೇರಳೆ ಹಣ್ಣು | ವಾಯು + ಪೃಥ್ವಿ | ಶೀತಲ, ರುಕ್ಷ, ಸ್ಥಂಭಕ, ಶೋಷಕ | ಪಿತ್ತ-ಕಫ ಶಮನ, ವಾತ ವೃದ್ಧಕ |
[3] ವೇದಸಂಪ್ರದಾಯದಲ್ಲಿ ಮಿತ್ರ ಎನ್ನುವುದು ಒಂದು ದೇವತೆಯ ಹೆಸರು; ಸತ್ಯ, ಕ್ರಮ ಮತ್ತು ಸ್ನೇಹ ತತ್ತ್ವದ ಪ್ರತೀಕ. ಮಿತ್ರನು ಋಗ್ವೇದದಲ್ಲಿ ಮಿತ್ರಾವರುಣೌ ಎಂದು ವರುಣನೊಂದಿಗೆ ಜೋಡಿಯಾಗಿ ಉಲ್ಲೇಖಿಸಲ್ಪಟ್ಟಿದ್ದಾನೆ. ಮಿತ್ರ-ವರುಣ ಇಬ್ಬರೂ ಸೇರಿ ಸತ್ಯ, ಧರ್ಮ ಮತ್ತು ನೈತಿಕ ಕರ್ಮಗಳ ಸಂರಕ್ಷರು. ಪುರಾಣಗಳಲ್ಲಿ ಮಿತ್ರನು ಸೂರ್ಯನ ಹನ್ನೆರಡು ರೂಪಗಳಲ್ಲಿ ಒಬ್ಬನೆಂದಿದೆ. ಮಿತ್ರನು ಉದಯಕಾಲದ ಸೂರ್ಯನು. ಇವನು ಶರೀರದ ಪಾಯುಸ್ಥಾನದ ನಿಯಂತ್ರಕನೆಂದೂ ಇದೆ. ಅಂದರೆ ನಿಯಮ, ಶುದ್ಧೀಕರಣ, ಮತ್ತು ವಿಸರ್ಜನೆಯ ತತ್ತ್ವದ ದೇವತೆ. ಋಗ್ವೇದ ಸಂಹಿತೆಯ 3ನೇ ಮಂಡಲದ 59ನೇ ಸೂಕ್ತವು ಸಂಪೂರ್ಣವಾಗಿ ಮಿತ್ರದೇವತೆಗೆ ಸಮರ್ಪಿತವಾದ ಸೂಕ್ತ (ಮಿತ್ರೋ ಜನಾನ್ ಸೂಕ್ತ).
[4] ಇಲ್ಲಿ “ಪುರುಷ ಏವೇದಗ್ಂ ಸರ್ವಂ ಯದ್ಭೂತಂ ಯಚ್ಚ ಭವ್ಯಂ” ಎಂಬ ಪುರುಷಸೂಕ್ತದ ವಾಕ್ಯಾರ್ಥವನ್ನು ಸೂಚಿಸುತ್ತದೆ. ಚರಚರಾತ್ಮಕವಾದ ಪ್ರಪಂಚವು ಭಗವಂತನಿಗೆ ಶರೀರಭೂತವೆಂದು ಹೇಳುವುದರಿಂದ, ಜೀವ-ಶರೀರಗಳಿಗೆ ಭೇದವಿರುವಂತೆ, ಪರಮಾತ್ಮನನ್ನೂ-ಪ್ರಪಂಚವನ್ನೂ ಬೇರೆ ಬೇರೆಯಾಗಿ ಗ್ರಹಿಸಬಾರದು. ಏಕೆಂದರೆ, ನಾಮ-ರೂಪ ವಿಭಾಗಗಳೊಂದೂ ತೋರದಂತೆ ಸೂಕ್ಷ್ಮಾವಸ್ಥೆಯಲ್ಲಿದ್ದ ಪ್ರಕೃತಿ-ಪುರುಷ-ಕಾಲಗಳನ್ನು ಶರೀರವಾಗಿ ಹೊಂದಿದ ಪರಮ ಪುರುಷನು ನಾಮ-ರೂಪ ವಿಭಾಗಗಳಿಂದ ಕಾಣುವ ಸ್ಥೂಲಾವಸ್ಥೆಯನ್ನು ಪಡೆದ ಪ್ರಕೃತಿ ಮೊದಲಾದ ಶರೀರದೊಡನೆ ಸ್ವಸ್ವರೂಪವಾದ ಜಗತ್ತಾಗಿ ಪರಿಣಮಿಸುವುದರಿಂದ ಏಕತ್ವವೇ ಸಂಭವಿಸುತ್ತದೆ. “ಸರ್ವಂ ಖಲ್ವಿದಂ ಬ್ರಹ್ಮ”, “ಅಯಮಾತ್ಮಾ ಬ್ರಹ್ಮ”, “ತತ್ವಮಸಿ” ಇತ್ಯಾದಿ ಉಪನಿಷದ್ವಾಕ್ಯಗಳಿಗೆ ಇದೇ ಅಭಿಪ್ರಾಯವು (ಶ್ರೀ ಅಳಸಿಂಗರಾಚಾರ್ಯ).
[5] ದಶಾಂಗುಲ ಎನ್ನುವುದು ಒಂದು ಉಪಲಕ್ಷಣವಾಗಿದೆ. ಹೆಬ್ಬೆರಳು ಮತ್ತು ತೋರುಬೆರಳು ಚಾಚಿದಾಗ ಅದರ ಮಧ್ಯಭಾಗಕ್ಕೆ ಪ್ರಾವೇಶಮಾತ್ರ ಎನ್ನುವ ಸಂಜ್ಞೆಯಿದೆ. ಇದೇ ಸಾಮಾನ್ಯವಾಗಿ 10 ಅಂಗುಲ ಎಂದು ತಿಳಿಯಲಾಗಿದೆ. ಇದಲ್ಲದೇ ದಶಾಂಗುಲ ನ್ಯಾಯವೆಂದೂ ಹೇಳಲಾಗಿದೆ. ಬ್ರಹ್ಮಾಂಡದ ಏಳು ಆವರಣಗಳನ್ನು ವರ್ಣಿಸುವಾಗ ವೇದಾಂತ ಪ್ರಕ್ರಿಯೆಯಲ್ಲಿ ಹೀಗೆ ಹೇಳಿದೆ: ಬ್ರಹ್ಮಾಂಡದ ಸುತ್ತಲೂ ಅದರ ಹತ್ತು ಪಟ್ಟು ವಿಸ್ತೀರ್ಣದ ಜಲದ ಆವರಣವಿದೆ. ಜಲದ ಹತ್ತು ಪಟ್ಟು ಅಗ್ನಿಯೂ, ಅಗ್ನಿಗಿಂತ ಹತ್ತು ಪಟ್ಟು ವಾಯುವೂ, ವಾಯುವಿಗಿಂತ ಹತ್ತು ಪಟ್ಟು ಆಕಾಶವೂ, ಆಕಾಶಕ್ಕಿಂತ ಹತ್ತು ಪಟ್ಟು ಅಹಂಕಾರವೂ, ಅಹಂಕಾರಕ್ಕಿಂತ ಹತ್ತು ಪಟ್ಟು ಮಹತ್ತತ್ತ್ವವೂ, ಮಹತ್ತತ್ತ್ವಕ್ಕಿಂತ ಹತ್ತು ಪಟ್ಟು ಮೂಲಪ್ರಕೃತಿಯೂ ಆವರಿಸಿದೆ. ಆ ಮೂಲಪ್ರಕೃತಿಯು ಪುರುಷನ ಕೇವಲ ಒಂದು ಕಾಲುಭಾಗ ಮಾತ್ರ. ಹೀಗೆ ಪುರುಷನ ಮಹತ್ವವನ್ನು ವರ್ಣಿಸಿದ್ದಾರೆ. ಇದನ್ನೇ ದಶಾಂಗುಲ ನ್ಯಾಯವೆಂದು ಹೇಳುತ್ತಾರೆ. ಹತ್ತು ಅಂಗುಲಗಳಿಗೂ ಮೀರಿದ್ದಾನೆ ಎಂದರೆ ಈ ವಿಶ್ವಕ್ಕಿಂತಲೂ ಅತಿ ದೊಡ್ಡವನಾಗಿರುವವನು, ತುಂಬಾ ಮೇಲಿನ ವರೆಗೆ ಇರುವವನು, ಎಲ್ಲವನ್ನೂ ತುಂಬಿ ಮೀರಿರುವನು ಎಂಬ ತಾತ್ಪರ್ಯವು. ಅಪರಿಚ್ಛಿನ್ನನಾದ ಭಗವಂತ ಪುರುಷನು ಕೇವಲ ಹತ್ತು ಅಂಗುಲದಷ್ಟು ದೊಡ್ಡವನು ಎಂದರೆ ಇದು ಪರಿಮಾಣದ ನಿರ್ದೇಶವಲ್ಲ (ಶ್ರೀಧರೀಯ).
[6] ಇಲ್ಲಿ ಅಮೃತಾದಿ ವಿಶೇಷಣತ್ರಯದಿಂದ ಆತ್ಮನಿಗೆ ಮುಕ್ತದಶೆಯಲ್ಲಿ ಪ್ರಾಪ್ತವಾಗುವ “ಏಷ ಆತ್ಮಾ ಅಪಹತಪಾಪ್ಮಾ ವಿಜರೋ ವಿಮೃತ್ಯುರ್ವಿಶೋಕೋ ವಿಜಿಘಿತ್ಸೋಽಪಿ ಪಾಸಸ್ಸತ್ಯಕಾಮಸ್ಸತ್ಯಸಂಕಲ್ಪಃ” ಎಂಬ ಶ್ರುತ್ಯುಕ್ತಗಳಾದ ಎಂಟು ಗುಣಗಳೂ ಸೂಚಿತವಾಗಿವೆ (ಶ್ರೀ ಅಳಸಿಂಗರಾಚಾರ್ಯ).
[7] ಇಲ್ಲಿ 21ನೇ ಶ್ಲೋಕಕ್ಕೆ ಈ ಕೆಳಗಿನ ಅನುವಾದವೂ ಇದೆ: ಪ್ರಪಂಚಸೃಷ್ಟಿಗೆ ಮೊದಲು ವಿರಾಟ್ಪುರುಷನೆಂದೂ ಅನಿರುದ್ಧನೆಂದೂ ಪ್ರಖ್ಯಾತನಾದ ಅವನು ತನಗೆ ಶರೀರಭೂತವಾಗಿಯೂ, ಈ ಪ್ರಪಂಚನಿರ್ಮಾಣಕ್ಕೆ ಬೇಕಾದ (ಉಪಾದಾನ) ಸಾಮಗ್ರಿಯಾಗಿಯೂ ಇದ್ದ ಪ್ರಕೃತಿಯಿಂದ ಮಹತ್ತು, ಅಹಂಕಾರ, ಭೂತಗುಣಗಳೈದು, ಭೂತಗಳೈದು, ಇವೆಲ್ಲವನ್ನೂ ಗ್ರಹಿಸಿ, ಸಪ್ತೀಕರಣರೀತಿಯಿಂದ ಒಂದಕ್ಕೊಂದನ್ನು ಕಲೆಸಿ, ಅಂಡವನ್ನು ಸೃಷ್ಟಿಸಿದನು. ಆಮೇಲೆ ಪಂಚಭೂತಗಳಿಂದಲೂ, ಏಕಾದಶೇಂದ್ರಿಯಗಳಿಂದಲೂ, ಸತ್ತ್ವರಜಸ್ತಮೋಗುಣಗಳಿಂದಲೂ ಕೂಡಿದ ದೇವಮನುಷ್ಯಾದಿ ಪ್ರಪಂಚಗಳನ್ನು ಸೃಷ್ಟಿಸಬೇಕೆಂದೆಣಿಸಿ, ಅದಕ್ಕೆ ತಕ್ಕ ಆಕಾರದಿಂದ ತಾನೂ ಗೋಚರಿಸಿದನು. ಮತ್ತು ಆ ಪರಮ ಪುರುಷನು ತಾನು ಆ ಅಂಡದಲ್ಲಿ ಮಾತ್ರವೇ ಅಡಗಿರದೇ, ಸೂರ್ಯನು ಘಟಾದಿ ವಸ್ತುಗಳಲ್ಲಿ ತನ್ನ ಕಿರಣಗಳಿಂದ ಒಳಹೊಕ್ಕು, ಅವುಗಳ ಒಳಭಾಗದಲ್ಲಿ ಮಾತ್ರವೇ ಅಡಗಿರದೇ, ತನ್ನ ಕಿರಣಗಳಿಂದ ಅವುಗಳ ಹೊರಭಾಗವನ್ನೂ ವ್ಯಾಪಿಸಿ ನಿಲ್ಲುವಂತೆ, ಭಗವಂತನೂ ಕೂಡ ಆ ಅಂಡವೆಲ್ಲವನ್ನೂ ತನ್ನ ಸ್ವರೂಪದಿಂದ ವ್ಯಾಪಿಸಿದನು. ಆದ್ದರಿಂದ ಭಗವಂತನು ಆ ಪ್ರಕೃತಿಗಿಂತಲೂ ವಿಲಕ್ಷಣನಾಗಿಯೂ, ತನಗೆ ಶರೀರಭೂತಗಳಾದ ಚೇತನಾಚೇತನಗಳಲ್ಲಿರುವ ದೋಷಗಳಿಗೆ ಭಾಗಿಯಾಗದೆಯೂ ಇರುವನೆಂದು ತಿಳಿ! (ಶ್ರೀಅಳಸಿಂಗರಾಚಾರ್ಯ).
[8] ಚಾತುರ್ಹೋತ್ರ ಎನ್ನುವುದು “ನಾಲ್ಕು ಹೋತ್ರರು” ಅಥವಾ “ನಾಲ್ಕು ವಿಧದ ಯಜ್ಞಕರ್ಮಿಗಳು” ಅಥವಾ “ನಾಲ್ಕು ವಿಧದ ಹೋಮಗಳು” ಎನ್ನುವ ಅರ್ಥದಲ್ಲಿ ಬಳಸುವ ವೇದಶಬ್ದವಾಗಿದೆ. ಆದ್ದರಿಂದ ಚಾತುರ್ಹೋತ್ರ ಎಂದರೆ ನಾಲ್ಕು ವಿಧದ ಹೋಮ/ಯಜ್ಞಗಳು ಅಥವಾ ನಾಲ್ಕು ಮುಖ್ಯ ಋತ್ವಿಜರು ನಡೆಸುವ ಯಜ್ಞ ವ್ಯವಸ್ಥೆ. ಯಜ್ಞದಲ್ಲಿ ಪ್ರಮುಖ ನಾಲ್ಕು ಋತ್ವಿಜರು ಇರುತ್ತಾರೆ: (1) ಹೋತೃ - ಋಗ್ವೇದ ಮಂತ್ರಗಳನ್ನು ಪಠಿಸಿ ಹವಿರರ್ಪಣೆ ಮಾಡುವವರು. ಇವರು “ಋಗ್ವೇದ” ಸಂಬಂದಿ. (2) ಅಧ್ವರ್ಯು - ಯಜ್ಞದ ಕರ್ಮಾಂಗ (ಕಟ್ಟಡ, ಹೋಮ, ಉಪಕರಣ ಸಿದ್ಧತೆ) ನಡೆಸುವವರು. ಇವರು “ಯಜುರ್ವೇದ” ಸಂಬಂದಿ. (3) ಉದ್ಗಾತೃ - ಸಾಮಗಾನ (ಸಾಮವೇದದ ಗಾಯನ) ಮಾಡುವವರು. ಇವರು “ಸಾಮವೇದ” ಸಂಬಂದಿ. (4) ಬ್ರಹ್ಮ - ಎಲ್ಲಾ ಕ್ರಮಗಳ ಮೇಲ್ವಿಚಾರಣೆ ಮಾಡುವವರು; ತಪ್ಪುಗಳ ಶುದ್ಧಿ ಮಾಡುವವರು. ಇವರು “ಅಥರ್ವವೇದ” ಸಂಬಂದಿ. ಚಾತುರ್ಹೋತ್ರದ ಇನ್ನೊಂದು ಅರ್ಥ — ನಾಲ್ಕು ಹೋಮಗಳು. ಕೆಲವು ಗ್ರಂಥಗಳಲ್ಲಿ “ಚಾತುರ್ಹೋತ್ರ” ಎಂಬ ಪದವನ್ನು ನಾಲ್ಕು ವಿಧದ ಹೋಮಗಳ ಸಮೂಹ ಎಂದೂ ಹೇಳಿದ್ದಾರೆ. ಅವುಗಳೆಂದರೆ: (1) ಅಗ್ನಿಹೋತ್ರ (2) ದರ್ಶಪೂರ್ಣಮಾಸ ಹೋಮ (3) ಚಾತುರ್ಮಾಸ್ಯ ಹೋಮ (4) ಅಗ್ನಿಷ್ಠೋಮ ಯಾಗ.
[9] ಭಗವದ್ಗೀತೆಯಲ್ಲಿ ಭಗವಂತನು ಹೇಳಿದ್ದಾನೆ: ಮತ್ತಃ ಪರತರಂ ನಾನ್ಯತ್ಕಿಂಚಿದಸ್ತಿ ಧನಂಜಯ । ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ।। ಅರ್ಥಾತ್: ಧನಂಜಯ! ನನಗಿಂತ ಭಿನ್ನವಾದ ಯಾವುದೇ ಪರಮ ಕಾರಣವು ಇಲ್ಲವಾಗಿದೆ. ಈ ಸಂಪೂರ್ಣ ಜಗತ್ತು ಸೂತ್ರದಲ್ಲಿ ನೂಲಿನ ಮಣಿಗಳಂತೆ ನನ್ನಲ್ಲಿ ಪೋಣಿಸಲ್ಪಟ್ಟಿದೆ (ವೇಣಲಂಕರ್).
[10] ಕುರುಡರು ಆನೆಯನ್ನು ಕಂಡ ಇದೊಂದು ದೃಷ್ಟಾಂತ. ಒಮ್ಮೆ ಮೂರುಜನ ಕುರುಡರು ಒಟ್ಟಿಗೇ ಹೋಗುತ್ತಿದ್ದರು. ಅವರಿಗೆ ದಾರಿಯಲ್ಲಿ ಒಂದು ಆನೆ ಸಿಕ್ಕಿತು. ಒಬ್ಬನು ಆನೆಯ ಕಾಲನ್ನು ಮುಟ್ಟಿ ಹೇಳಿದನು – “ಆನೆಯೆಂದರೆ ಕಂಭವಾಗಿದೆ.” ಇನ್ನೊಬ್ಬನು ಕಿವಿಯನ್ನು ಮುಟ್ಟಿ, “ಆನೆಯೆಂದರೆ ಮೊರವಾಗಿದೆ” ಎಂದನು. ಮೂರನೆಯವನು ಆನೆಯ ಸೊಂಡಿಲನ್ನು ಮುಟ್ಟಿ “ಆನೆಯೆಂದರೆ ದೊಡ್ಡ ಹೆಬ್ಬಾವಿನಂತಿದೆ” ಎಂದನು. ಆನೆಯ ವಿಷಯದಲ್ಲಿ ಮೂವರು ಕುರುಡರಿಗೂ ತಮ್ಮ-ತಮ್ಮ ಬುದ್ಧಿಗನುಸಾರವಾದ ಅಭಿಪ್ರಾಯಗಳಿರುವಂತೆಯೇ, ಆ ಪರಬ್ರಹ್ಮ ಪರಮಾತ್ಮನ ವಿಷಯದಲ್ಲಿ ಬೇರೆ-ಬೇರೆ ಮಾನ್ಯತೆಯ ಭೇದವಿದೆ. ನಿಜವಾಗಿ ಈ ತತ್ತ್ವವನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಾಗುವುದೇ ಇಲ್ಲ.