ಶ್ರೀಪದ್ಮಪುರಾಣ: ಸೃಷ್ಟಿಖಂಡ, ಅಧ್ಯಾಯ 3

 

[47] ಭೀಷ್ಮ ಉವಾಚ । ನಿರ್ಗುಣಸ್ಯಾಪ್ರಮೇಯಸ್ಯ ಶುದ್ಧಸ್ಯಾಥ ಮಹಾತ್ಮನಃ । ಕಥಂ ಸರ್ಗಾದಿಕರ್ತೃತ್ವಂ ಬ್ರಹ್ಮಣೋ ಹ್ಯುಪಪದ್ಯತೇ ।। 1 ।।

ಭೀಷ್ಮನು ಹೇಳಿದನು: “ನಿರ್ಗುಣನೂ ಅಪ್ರಮೇಯನೂ ಶುದ್ಧನೂ ಮಹಾತ್ಮನೂ ಆದ ಬ್ರಹ್ಮನಿಗೆ ಸೃಷ್ಟಿ-ಸ್ಥಿತಿ-ಲಯಗಳ ಕರ್ತೃತ್ವವು ಹೇಗೆ ಉಂಟಾಗುತ್ತದೆ?”

ಪುಲಸ್ತ್ಯ ಉವಾಚ । ಶಕ್ತಯಸ್ಸರ್ವಭಾವಾನಾಮಚಿಂತ್ಯ ಜ್ಞಾನಗೋಚರಾಃ । ಯತ್ತತೋ ಬ್ರಹ್ಮಣಸ್ತಾಸ್ತು ಸರ್ಗಾದ್ಯಾ ಭಾವಶಕ್ತಯಃ ।। 2 ।। ಉತ್ಪನ್ನಃ ಪ್ರೋಚ್ಯತೇ ವಿದ್ವಾನ್ನಿತ್ಯ ಏವೋಪಚಾರತಃ । ನಿಜೇನ ಸ್ವಸ್ವಮಾನೇನ ಆಯುರ್ವರ್ಷಶತಂ ಸ್ಮೃತಮ್ ।। 3 ।। ತತ್ಪರಾಖ್ಯಂ ಪರಾರ್ಧಂ ಚ ತದರ್ಧಂ ಪರಿಕೀರ್ತಿತಮ್ । ಕಾಷ್ಠಾ ಪಂಚದಶಾಖ್ಯಾತಾ ನಿಮೇಷಾ ನೃಪಸತ್ತಮ ।। 4 ।। ಕಾಷ್ಠಾಸ್ತ್ರಿಂಶತ್ಕಲಾಸ್ತ್ರಿಂಶತ್ಕಲೋ ಮೌಹೂರ್ತಿಕೋ ವಿಧಿಃ । ತಾವತ್ಸಂಖ್ಯೈರಹೋರಾತ್ರಂ ಮುಹೂರ್ತೈರ್ಮಾನುಷಂ ಸ್ಮೃತಮ್ ।। 5 ।। ಅಹೋರಾತ್ರಾಣಿ ತಾವಂತಿ ಮಾಸಃ ಪಕ್ಷದ್ವಯಾತ್ಮಕಃ । 

ಪುಲಸ್ತ್ಯನು ಹೇಳಿದನು: “ಸರ್ವ ಭಾವಶಕ್ತಿಗಳೂ ಅಚಿಂತ್ಯವಾದವುಗಳು ಮತ್ತು ಜ್ಞಾನಕ್ಕೂ ಅಗೋಚರವಾದವುಗಳು. ಬ್ರಹ್ಮನ ಆ ಭಾವಶಕ್ತಿಗಳೇ ಸೃಷ್ಟಿ ಮೊದಲಾದವುಗಳು. ಬ್ರಹ್ಮನು ಉತ್ಪನ್ನನಾದವನು ಎಂದು ವಿದ್ವಾಂಸರು ಹೇಳುತ್ತಾರೆ. ಆದರೆ ಅದು ಒಂದು ಔಪಚಾರಿಕವಾದ ಮಾತು. ಅವರವರ ಅಳತೆಗಳಿಂದ ಪ್ರತಿಯೊಂದಕ್ಕೂ ನೂರು ವರ್ಷ ಆಯುಸ್ಸೆಂದು ತಿಳಿಯಬೇಕು. ಅದಕ್ಕೆ ಪರಾ ಎಂದು ಕರೆಯುತ್ತಾರೆ. ಅದರ ಅರ್ಧವು ಪರಾರ್ಧ ಎಂದು ಹೇಳುತ್ತಾರೆ. ನೃಪಸತ್ತಮ! ಕಣ್ಣುರೆಪ್ಪೆಯನ್ನು ಒಂದಾವೃತ್ತಿ ಮುಚ್ಚಿ ಬಿಡುವ ಕಾಲಕ್ಕೆ ನಿಮೇಷ ಎಂದು ಹೆಸರು. ಹದಿನೈದು ನಿಮೇಷಗಳಿಗೆ ಒಂದು ಕಾಷ್ಠ. ಮೂವತ್ತು ಕಾಷ್ಠಗಳಿಗೆ ಒಂದು ಕಲೆ. ಮೂವತ್ತು ಕಲೆಗಳಿಗೆ ಒಂದು ಮುಹೂರ್ತವಾಗುತ್ತದೆ. ಮೂವತ್ತು ಮುಹೂರ್ತಗಳಿಗೆ ಮನುಷ್ಯನ ಒಂದು ಅಹೋರಾತ್ರಿಯಾಗುತ್ತದೆ. ಮೂವತ್ತು ಅಹೋರಾತ್ರಿಗಳು ಒಂದು ಮಾಸವಾಗುತ್ತದೆ. ಆ ಮಾಸಕ್ಕೆ ಎರಡು ಪಕ್ಷಗಳು.

[1]ಸ್ವಪ್ರಮಾಣೈಃ ಶತೈಃ ಸಂಧ್ಯಾ ಪೂರ್ವಾ ತತ್ರಾಭಿಧೀಯತೇ ।। 6 ।। ಸಂಧ್ಯಾಂಶಕಶ್ಚ ತತ್ತುಲ್ಯೋ ಯುಗಸ್ಯಾನಂತರೋ ಹಿ ಯಃ । ಸಂಧ್ಯಾಸಂಧ್ಯಾಂಶಯೋರಂತಃ ಕಾಲೋ ಯೋ ನೃಪಸತ್ತಮ ।। 7 ।। ಯುಗಾಖ್ಯಃ ಸ ತು ವಿಜ್ಞೇಯಃ ಕೃತತ್ರೇತಾದಿಸಂಜ್ಞಿತಃ

ಪ್ರತಿಯೊಂದು ಯುಗದ ಮೊದಲು ಮತ್ತು ಕೊನೆಯಲ್ಲಿ ಕ್ರಮವಾಗಿ ನಾಲ್ಕು, ಮೂರು, ಎರಡು, ಮತ್ತು ಒಂದು ನೂರು ದೇವಮಾನದ ವರ್ಷಗಳು ಸಂಧಿ-ಸಂಧ್ಯಾಂಶಗಳ ಕಾಲವೆನಿಸುತ್ತದೆ. ಸಂಧಿಕಾಲಕ್ಕೂ ಸಂಧ್ಯಾಂಶಕಾಲಕ್ಕೂ ನಡುವೆ ಇರುವ ನಾಲ್ಕು, ಮೂರು, ಎರಡು, ಮತ್ತು ಒಂದು ಸಾವಿರ ವರ್ಷಗಳೇ ಕೃತ, ತ್ರೇತ, ದ್ವಾಪರ, ಮತ್ತು ಕಲಿಯುಗಗಳ ಪ್ರಮಾಣಗಳು.

ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೈವ ಚತುರ್ಯುಗಮ್ ।। 8 ।। ಪ್ರೋಚ್ಯತೇ ತತ್ಸಹಸ್ರಂ ತು ಬ್ರಹ್ಮಣೋ ದಿವಸಂ ನೃಪ । ಬ್ರಹ್ಮಣೋ ದಿವಸೇ ರಾಜನ್ಮನವಶ್ಚ ಚತುರ್ದಶ ।। 9 ।। ಭವಂತಿ ಪರಿಮಾಣಂ ಚ ತೇಷಾಂ ಕಾಲಕೃತಂ ಶೃಣು । ಸಪ್ತರ್ಷಯಃ ಸುರಾಃ ಶಕ್ರೋ ಮನುಸ್ತತ್ಸೂನವೋ ನೃಪ ।। 10 ।। ಏಕಕಾಲೇ ಹಿ ಸೃಜ್ಯಂತೇ ಸಂಹ್ರಿಯಂತೇ ಚ ಪೂರ್ವವತ್ । ಚತುರ್ಯುಗಾನಾಂ ಸಂಖ್ಯಾತಾ ಸಾಧಿಕಾ ಹ್ಯೇಕಸಪ್ತತಿಃ ।। 11 ।। ಮನ್ವಂತರಂ ಮನೋಃ ಕಾಲಃ ಸುರಾದೀನಾಂ ಚ ಪಾರ್ಥಿವ । ಅಷ್ಟೌ ಶತಸಹಸ್ರಾಣಿ ದಿವ್ಯಯಾ ಸಂಖ್ಯಯಾ ಸ್ಮೃತಃ ।। 12 ।।

ಕೃತ, ತ್ರೇತಾ, ದ್ವಾಪರ ಮತ್ತು ಕಲಿ – ಇವು ಚತುರ್ಯುಗಗಳು. ನೃಪ! ಅಂತಹ ಸಾವಿರ ಚತುರ್ಯುಗಗಳು ಬ್ರಹ್ಮನ ಒಂದು ಹಗಲು ಎನ್ನುತ್ತಾರೆ. ಬ್ರಹ್ಮನ ಒಂದು ಹಗಲಿನಲ್ಲಿ ಹದಿನಾಲ್ಕು ಮನುಗಳಾಗುತ್ತಾರೆ. ಅವರ ಕಾಲಪರಿಮಾಣವು ಮನ್ವಂತರವೆನಿಸುತ್ತದೆ. ಆ ಕಾಲದ ಕುರಿತು ಕೇಳು. ನೃಪ! ಒಂದು ಮನ್ವಂತರದಲ್ಲಿ ಸಪ್ತರ್ಷಿಗಳು, ದೇವತೆಗಳು, ಇಂದ್ರ, ಮನು ಮತ್ತು ಮನುವಿನ ಮಕ್ಕಳು – ಇವರುಗಳ ಸೃಷ್ಟಿಯು ಹಿಂದಿನ ಮನ್ವಂತರದಂತೆ ಒಟ್ಟಿಗೇ ಒಂದೇ ಸಾರಿಯಾಗುತ್ತದೆ ಮತ್ತು ಅವರ ನಾಶವೂ ಒಟ್ಟಿಗೇ ಒಂದೇ ಸಾರಿಯಾಗುತ್ತದೆ. ಪಾರ್ಥಿವ! ಎಪ್ಪತ್ತೊಂದಕ್ಕೂ ಸ್ವಲ್ಪ ಅಧಿಕ ಚತುರ್ಯುಗಗಳಷ್ಟು ಮನು ಮತ್ತು ಸುರರ ಕಾಲವಾದ ಮನ್ವಂತರ ಎಂದು ಹೇಳಿದ್ದಾರೆ. ಒಂದು ಸಾವಿರದ ಎಂಟು ಮನ್ವಂತರಗಳಿಗೆ ಒಂದು ದೇವಸಂವತ್ಸರವೆಂದಿದೆ.

ದ್ವಾಪಂಚಾಶತ್ತಥಾನ್ಯಾನಿ ಸಹಸ್ರಾಣ್ಯಧಿಕಾನಿ ಚ । ತ್ರಿಂಶತ್ಕೋಟ್ಯಸ್ತು ಸಂಪೂರ್ಣಾಃ ಸಂಖ್ಯಾತಾಃ ಸಂಖ್ಯಯಾ ನೃಪ ।। 13 ।। ಸಪ್ತಷಷ್ಟಿಸ್ತಥಾನ್ಯಾನಿ ನಿಯುತಾನಿ ಮಹಾಮತೇ । ವಿಂಶತಿಶ್ಚ ಸಹಸ್ರಾಣಿ ಕಾಲೋಽಯಮಧಿಕಂ ವಿನಾ ।। 14 ।। ಮನ್ವಂತರಸ್ಯ ಸಂಖ್ಯೇಯಂ ಮಾನುಷೈರಿಹ ವತ್ಸರೈಃ । ಸೋಽಯಂ ಮನುಪ್ರಮಾಣೇನ ಕಾಲೋ ಬ್ರಾಹ್ಮಮಹಃ ಸ್ಮೃತಮ್ ।। 15 ।। ಬ್ರಾಹ್ಮೋ ನೈಮಿತ್ತಿಕೋ ನಾಮ ತಸ್ಯಾಂತೇ ಪ್ರತಿಸಂಚರಃ । ತದಾಹಿ ದಹ್ಯತೇ ಸರ್ವಂ ತ್ರೈಲೋಕ್ಯಂ ಭೂರ್ಭುವಾದಿಕಮ್ ।। 16 ।। ಜನಂ ಪ್ರಯಾಂತಿ ತಾಪಾರ್ತಾ ಮಹರ್ಲೋಕನಿವಾಸಿನಃ । ಏಕಾರ್ಣವೇ ತು ತ್ರೈಲೋಕ್ಯೇ ಬ್ರಹ್ಮಾ ಬ್ರಹ್ಮವಿದಾಂ ವರಃ ।। 17 ।। ಭೋಗಿಶಯ್ಯಾಗತಃ ಶೇತೇ ತ್ರೈಲೋಕ್ಯಗ್ರಾಸಬೃಂಹಿತಃ

ನೃಪ! ಮನುಷ್ಯನ ಸಂವತ್ಸರಗಳ ಪ್ರಕಾರ ಹದಿನಾಲ್ಕು ಮನ್ವಂತರಗಳ ಒಟ್ಟು ಕಾಲಮಾನವು 30 ಕೋಟಿ, 67 ಲಕ್ಷ, 20 ಸಾವಿರದ 52 ವರ್ಷಗಳು (30,67,20,052).[2] ಇದು ಬ್ರಹ್ಮನ ಒಂದು ಹಗಲು ಎನಿಸಿಕೊಳ್ಳುತ್ತದೆ. ಇದರ ನಂತರ ಬ್ರಹ್ಮನ ನೈಮಿತ್ತಿಕ ಎಂಬ ಹೆಸರಿನ ಪ್ರಳಯವಾಗುತ್ತದೆ. ಆಗ  ಭೂಃ-ಭುವಃ-ಸುವಃಗಳೆಂಬ ತ್ರಿಲೋಕಗಳೆಲ್ಲವೂ ಸುಟ್ಟುಹೋಗುತ್ತವೆ. ತಾಪವನ್ನು ತಡೆಯಲಾರದೇ ಮಹರ್ಲೋಕನಿವಾಸಿಗಳು ಜನೋಲೋಕಕ್ಕೆ ಹೊರಟುಹೋಗುತ್ತಾರೆ. ಮೂರೂ ಲೋಕಗಳೂ ಏಕಾರ್ಣವವಾದಾಗ ಬ್ರಹ್ಮವಿದರಲ್ಲಿ ಶ್ರೇಷ್ಠ ಬ್ರಹ್ಮನು ಸರ್ಪಶಯ್ಯೆಯಲ್ಲಿ ಮೂರುಲೋಕಗಳನ್ನೂ ಕಬಳಿಸಿ ಮಲಗುತ್ತಾನೆ.

ಜನಸ್ಥೈರ್ಯೋಗಿಭಿರ್ದ್ದೇವಶ್ಚಿಂತ್ಯಮಾನೋ ಜಗದ್ವಿಭುಃ ।। 18 ।। ತತ್ಪ್ರಮಾಣಾಂ ಹಿ ತಾಂ ರಾತ್ರಿಂ ತದಂತೇ ಸೃಜತೇ ಪುನಃ । ಏವಂ ತು ಬ್ರಹ್ಮಣೋ ವರ್ಷಮೇವಂ ವರ್ಷಶತಂ ಚ ಯತ್ ।। 19 ।। ಶತಂ ಹಿ ತಸ್ಯ ವರ್ಷಾಣಾಂ ಪರಮಾಯುರ್ಮಹಾತ್ಮನಃ । ಪ್ರಜಾಃ ಸಸರ್ಜ ಭಗವಾಂಸ್ತತ್ರಾದಿಸ್ಸರ್ವಸಂಭವಃ ।। 20 ।।

ಜನೋಲೋಕದಲ್ಲಿರುವ ಯೋಗಿಗಳು ಧ್ಯಾನಮಾಡುತ್ತಿರಲು ಜಗದ್ವಿಭುವು ಅಷ್ಟೇ ಕಾಲಪ್ರಮಾಣದ ರಾತ್ರಿಯ ಅಂತ್ಯದಲ್ಲಿ ಪುನಃ ಸೃಷ್ಟಿಸುತ್ತಾನೆ. ಹೀಗೆ ಬ್ರಹ್ಮನ ದಿನಗಳು ವರ್ಷವಾಗಿ, ನೂರು ವರ್ಷಗಳಾಗುತ್ತವೆ. ಆ ಮಹಾತ್ಮನ ಪರಮ ಆಯುಸ್ಸು ನೂರು ವರ್ಷಗಳ ಪರ್ಯಂತವೂ ಸರ್ವಸಂಭವ ಭಗವಾನ್ ಬ್ರಹ್ಮನು ತನ್ನ ಹಗಲಿನ ಆದಿಯಲ್ಲಿ ಪ್ರಜೆಗಳನ್ನು ಸೃಷ್ಟಿಸುತ್ತಾನೆ.

ಅತೀತಕಲ್ಪಾವಸಾನೇ ನಿಶಾಸುಪ್ತೋತ್ಥಿತಃ ಪ್ರಭುಃ । ಸತ್ತ್ವೋದ್ರಿಕ್ತಸ್ತಥಾ ಬ್ರಹ್ಮಾ ಶೂನ್ಯಂ ಲೋಕಮಪಶ್ಯತ ।। 21 ।। ತೋಯಾಂತೇ ಸ ಮಹೀಂ ಜ್ಞಾತ್ವಾ ನಿಮಗ್ನಾಂ ವಾರಿಸಂಪ್ಲವೇ । ಪ್ರವಿಚಿಂತ್ಯ ತದುದ್ಧಾರಂ ಕರ್ತುಕಾಮಃ ಪ್ರಜಾಪತಿಃ ।। 22 ।। ವಿಷ್ಣುರೂಪಂ ತದಾ ಜ್ಞಾತ್ವಾ ಪೃಥ್ವೀಂ ವೋಢುಂ ಸ್ವತೇಜಸಾ । ಮತ್ಸ್ಯಕೂರ್ಮಾದಿಕಾಂಶ್ಚಾನ್ಯಾನ್ವಾರಾಹೀಂ ತನುಮಾವಿಶತ್ ।। 23 ।। ವೇದಯಜ್ಞಮಯಂ ರೂಪಮಶೇಷಜಗತಸ್ಥಿತೌ । ಪ್ರವಿವೇಶೇ ತದಾ ತೋಯಂ ತೋಯಾಧಾರೇ ಧರಾಧರಃ ।। 24 ।। ನಿರೀಕ್ಷ್ಯ ತಂ ತದಾ ದೇವೀ ಪಾತಾಲತಲಮಾಗತಮ್ । ತುಷ್ಟಾವ ಪ್ರಣತಾ ಭೂತ್ವಾ ಭಕ್ತಿನಮ್ರಾ ವಸುಂಧರಾ ।। 25 ।।

ಹಿಂದಿನ ಕಲ್ಪಾವಸಾನದ ರಾತ್ರಿ ಮಲಗಿ ಪ್ರಭುವು ಸತ್ತ್ವಗುಣೋದ್ರಿಕ್ತನಾಗಿ ಪುನಃ ಎದ್ದು ಲೋಕವೆಲ್ಲವೂ ಶೂನ್ಯವಾಗಿರುವುದನ್ನು ಕಂಡನು. ಭೂಮಂಡಲವು ನೀರಿನಲ್ಲಿ ಮುಳುಗಿಹೋದುದನ್ನು ತಿಳಿದು ಜಲಸಾಗರದಲ್ಲಿ ಮುಳುಗಿದ್ದ ಭೂಮಿಯನ್ನು ಮೇಲೆತ್ತಲು ಪ್ರಜಾಪತಿಯು ಬಯಸಿದನು. ಆಗ ತನ್ನದೇ ತೇಜಸ್ಸಿನಿಂದ ವಿಷ್ಣುರೂಪವನ್ನು ಹೊಂದಿ, ಪೃಥ್ವಿಯನ್ನು ಮೇಲೆತ್ತಲು, ಮತ್ಸ್ಯ, ಕೂರ್ಮ, ವರಾಹಾದಿ ಶರೀರಗಳನ್ನು ಪ್ರವೇಶಿಸಿದನು. ಪ್ರಪಂಚವನ್ನು ಉದ್ಧರಿಸಲು ಆ ಧರಾಧರನು ವೇದಯಜ್ಞಮಯ ರೂಪವನ್ನು ಧರಿಸಿ ಭೂಮಿಯನ್ನು ಎತ್ತಲು ನೀರಿನೊಳಗೆ ಪ್ರವೇಶಿಸಿದನು. ಪಾತಾಲತಳಕ್ಕೆ ಆಗಮಿಸಿದ ಅವನನ್ನು ನೋಡಿ ವಸುಂಧರೆಯು ಭಕ್ತಿನಮ್ರಳಾಗಿ ನಮಸ್ಕರಿಸಿ ಸ್ತುತಿಸಿದಳು.

ಪೃಥಿವ್ಯುವಾಚ । ನಮಸ್ತೇ ಸರ್ವಭೂತಾಯ ನಮಸ್ತೇ ಪರಮಾತ್ಮನೇ । ಮಾಮುದ್ಧರಾಸ್ಮಾದದ್ಯ ತ್ವಂ ತ್ವತ್ತೋಹಂ ಪೂರ್ವಮುತ್ಥಿತಾ ।। 26 ।। ಪರಮಾತ್ಮನ್ನಮಸ್ತೇಸ್ತು ಪುರುಷಾಯ ನಮೋಽಸ್ತು ತೇ । ಪ್ರಧಾನವ್ಯಕ್ತರೂಪಾಯ ಕಾಲಭೂತಾಯ ತೇ ನಮಃ ।। 27 ।। ತ್ವಂ ಕರ್ತಾ ಸರ್ವಭೂತಾನಾಂ ತ್ವಂ ಪಾತಾ ತ್ವಂ ವಿನಾಶಕೃತ್ । ಸರ್ಗಾದೌ ಯಃ ಪರೋ ಬ್ರಹ್ಮಾ ವಿಷ್ಣುರುದ್ರಾತ್ಮರೂಪಧೃಕ್ ।। 28 ।। ಭವತೋ ಯತ್ಪರಂ ರೂಪಂ ತನ್ನ ಜಾನಾತಿ ಕಶ್ಚನ । ಅವತಾರೇಷು ಯದ್ರೂಪಂ ತದರ್ಥಂ ತ್ರಿದಿವೌಕಸಃ ।। 29 ।। ತ್ವಾಮಾರಾಧ್ಯ ಪರಂ ಬ್ರಹ್ಮ ಯಾತಾ ಮುಕ್ತಿಂ ಮುಮುಕ್ಷವಃ । ವಾಸುದೇವಮನಾರಾಧ್ಯ ಕೋ ಮೋಕ್ಷಂ ಸಮವಾಪ್ಸ್ಯತೇ ।। 30 ।। ಯದ್ರೂಪಂ ಮನಸಾ ಗ್ರಾಹ್ಯಂ ಯದ್ಗ್ರಾಹ್ಯಂ ಚಕ್ಷುರಾದಿಭಿಃ । ಬುದ್ಧ್ಯಾ ಚ ಯತ್ಪರಿಚ್ಛೇದ್ಯಂ ತದ್ರೂಪಮಖಿಲಂ ತವ ।। 31 ।। ತ್ವನ್ಮಯಾಹಂ ತ್ವದಾಧಾರಾ ತ್ವತ್ಸೃಷ್ಟಾ ತ್ವಾಮುಪಾಶ್ರಿತಾ । ಮಾಧವೀಮಿತಿ ಲೋಕೋಯಮಭಿಧತ್ತೇ ತತೋ ಹಿ ಮಾಮ್ ।। 32 ।।

ಪೃಥ್ವಿಯು ಹೇಳಿದಳು: “ಸರ್ವಭೂತನಾದ ನಿನಗೆ ನಮಸ್ಕಾರ! ಪರಮಾತ್ಮನೇ ನಿನಗೆ ನಮಸ್ಕಾರ! ಇಂದು ನನ್ನನ್ನು ಇದರಿಂದ ಮೇಲಕ್ಕೆತ್ತು. ಹಿಂದೆಯೂ ಕೂಡ ನೀನು ನನ್ನನ್ನು ಮೇಲೆತ್ತಿದ್ದೆ. ಪರಮಾತ್ಮನ್! ನಿನಗೆ ನಮಸ್ಕಾರ! ಪುರುಷ! ನಿನಗೆ ನಮಸ್ಕಾರ! ಪ್ರಧಾನವ್ಯಕ್ತರೂಪನಿಗೆ ನಮಸ್ಕಾರ! ಕಾಲಭೂತನಾದ ನಿನಗೆ ನಮಸ್ಕಾರ! ಸರ್ವಭೂತಗಳ ಕರ್ತನು ನೀನು. ಸರ್ವಭೂತಗಳ ಪಾಲಕನೂ ನೀನೇ. ವಿನಾಶಮಾಡುವವನೂ ನೀನೇ. ಆದಿಯಲ್ಲಿ ಸೃಷ್ಟಿಸಿದ ಪರಬ್ರಹ್ಮನೂ, ವಿಷ್ಣು-ರುದ್ರಾತ್ಮ ರೂಪಧರನೂ ನೀನೇ. ನಿನ್ನ ಪರಮ ರೂಪವನ್ನು ಯಾರೂ ತಿಳಿಯಲಾರರು. ಯಾವರೂಪದಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ನೀನು ಅವತರಿಸುತ್ತೀಯೆ ಎನ್ನುವುದನ್ನು ತ್ರಿದಿವೌಕಸರೂ ತಿಳಿಯರು. ಪರಬ್ರಹ್ಮನಾದ ನಿನ್ನನ್ನು ಆರಾಧಿಸಿ ಮೋಕ್ಷಬಯಸುವವರು ಮುಕ್ತಿಯನ್ನು ಪಡೆಯುತ್ತಾರೆ. ವಾಸುದೇವನನ್ನು ಆರಾಧಿಸದೇ ಯಾರು ತಾನೇ ಮೋಕ್ಷವನ್ನು ಹೊಂದುತ್ತಾರೆ? ಚಕ್ಷುರಾದಿ ಇಂದ್ರಿಯಗಳಿಂದ ಮತ್ತು ಮನಸ್ಸಿನಿಂದ ಯಾವ ರೂಪವನ್ನು ಗ್ರಹಿಸಬಲ್ಲೆವೋ ಮತ್ತು ಬುದ್ಧಿಯಿಂದ ಯಾವುದನ್ನು ಪ್ರತ್ಯೇಕವೆಂದು ತಿಳಿಯುತ್ತೇವೋ ಆ ಅಖಿಲ ರೂಪಗಳೂ ನಿನ್ನದೇ ಆಗಿವೆ. ನಾನು ನಿನ್ನಿಂದಲೇ ಆಗಿದ್ದೇನೆ. ನೀನೇ ನನಗೆ ಆಧಾರನು. ನಿನ್ನಿಂದಲೇ ಸೃಷ್ಟಿಸಲ್ಪಟ್ಟಿದ್ದೇನೆ ಮತ್ತು ನಿನ್ನನ್ನೇ ಆಶ್ರಯಿಸಿದ್ದೇನೆ. ಆದ್ದರಿಂದ ಲೋಕವು ನನ್ನನ್ನು ಮಾಧವೀ ಎಂದೇ ಕರೆಯುತ್ತದೆ.”

ಸ ಚ ಸಂಸ್ತೂಯಮಾನಸ್ತು ಪೃಥಿವ್ಯಾ ಪೃಥಿವೀಧರಃ । ಸಾಮಸ್ವರಧ್ವನಿಃ ಶ್ರೀಮಾನ್ಜಗರ್ಜ ಪರಿಘರ್ಘರಮ್ ।। 33 ।। ತತಃ ಸಮುತ್ಕ್ಷಿಪ್ಯ ಧರಾಂ ಸ್ವಕೀಲಯಾ ಮಹಾವರಾಹಃ ಸ್ಫುಟಪದ್ಮಲೋಚನಃ । ರಸಾತಲಾದುತ್ಪಲಫುಲ್ಲಸನ್ನಿಭಃ ಸಮುತ್ಥಿತೋ ನೀಲ ಇವಾಚಲೋ ಮಹಾನ್ ।। 34 ।। ಉತ್ತಿಷ್ಠತಾ ತೇನ ಮುಖಾನಿಲಾಹತಾಂ ಸ್ತದಾಪ್ಲುವಾಂಭೋಜನಲೋಕ ಸಂಶ್ರಯಾನ್ । ಸನಂದನಾದೀನಪಕಲ್ಮಷಾನ್ಮುನೀಂಶ್ಚಕಾರ ಭೂಯೋಪಿ ಪವಿತ್ರತಾಸ್ಪದಮ್ ।। 35 ।। ಪ್ರಯಾಂತಿ ತೋಯಾನಿ ಖುರಾಗ್ರವಿಕ್ಷತೇ ರಸಾತಲೇಽಧ ಕೃತಶಬ್ದಸಂತತಿ । ಶ್ವಾಸಾನಿಲಾಸ್ತಾ ಪರಿತಃ ಪ್ರಯಾತಿ ಸಿದ್ಧಾ ಜನಾ ಯೇ ನಿಯತಂ ವಸಂತಿ ।। 36 ।। ಉತ್ತಿಷ್ಠತಸ್ತಸ್ಯ ಜಲಾರ್ದ್ರಕುಕ್ಷೇರ್ಮಹಾವರಾಹಸ್ಯ ಮಹೀಂ ವಿದಾರ್ಯ । ವಿಧುನ್ವತೋ ವೇದಮಯಂ ಶರೀರಂ ವ್ಯೋಮಾಂತರಸ್ಥಾ ಮುನಯೋ ಜುಷಂತಿ ।। 37 ।।

ಪೃಥ್ವಿಯು ಹೀಗೆ ಸ್ತುತಿಸಲು ಶ್ರೀಮಾನ್ ಪೃಥ್ವೀಧರನು ಸಾಮಸ್ವರ ಧ್ವನಿಯಲ್ಲಿ ಜೋರಾಗಿ ಗರ್ಜಿಸಿದನು. ಮಹಾನ್ ನೀಲಪರ್ವತದಂತಿದ್ದ ಆ ಮಹಾವರಾಹನು ಅರಳಿದ ಕನ್ನೈದಿಲೆಯಂತಿದ್ದ ಭೂಮಿಯನ್ನು ತನ್ನ ಕೋರೆದಾಡೆಗಳಿಂದ ಮೇಲಕ್ಕೆತ್ತಿ ತನ್ನ ಮೇಲೆ ಕುಳ್ಳಿರಿಸಿಕೊಂಡು ರಸಾತಲದಿಂದ ಮೇಲೆದ್ದನು. ರಭಸದಿಂದ ಮೇಲೇಳುತ್ತಿದ್ದಾಗ ಅವನ ಬಾಯಿಯ ಉಚ್ಛ್ವಾಸದಿಂದ ಹಾರಿದ ನೀರಿನ ತುಂತುರು ಹನಿಗಳು ಜನೋಲೋಕನಿವಾಸಿಗಳನ್ನೂ ತೋಯಿಸಿತು. ಹಾಗೆ ಅಲ್ಲಿದ್ದ ಸನಂದನನೇ ಮೊದಲಾದ ಋಷಿಗಳನ್ನು ಪಾಪರಹಿತರಾಗಿದ್ದರೂ ಇನ್ನೂ ಪವಿತ್ರರನ್ನಾಗಿ ಮಾಡಿದನು. ರಸಾತಲವನ್ನು ತನ್ನ ಕಾಲಿನ ಗೊರಸಿನಿಂದ ಕೆರೆಯಲು ಕೆಳಗಡೆ ಅತಿಜೋರಾದ ಶಬ್ದವಾಯಿತು. ಉಚ್ಛ್ವಾಸದ ಗಾಳಿಯು ಎಲ್ಲಕಡೆ ನೀರನ್ನು ಹಾರಿಸುತ್ತಾ ಸಿದ್ಧಲೋಕದಲ್ಲಿದ್ದ ಸಿದ್ಧಜನರವರೆಗೂ ಹೋಗುತ್ತಿತ್ತು. ಭೂಮಿಯನ್ನು ಕಿತ್ತು ಎತ್ತಿಕೊಂಡು ಮೈಯೆಲ್ಲವೂ ನೀರಾಗಿ ಮೇಲಕ್ಕೇಳುತ್ತಿದ್ದ ಆ ವರಾಹನು ತನ್ನ ವೇದಮಯ ಶರೀರವನ್ನು ಕೊಡವುತ್ತಿರಲು, ಆಕಾಶದಲ್ಲಿದ್ದ ಮುನಿಗಳು ಮಹಾವರಾಹನನ್ನು ಸ್ತುತಿಸಿದರು.

ಮುನಯ ಊಚುಃ । ಜನೇಶ್ವರಾಣಾಂ ಪರಮೇಶ ಕೇಶವಃ ಪ್ರಭುರ್ಗದಾಶಂಖವರಾಸಿಚಕ್ರಧೃಕ್ । ಪ್ರಸೂತಿನಾಶಸ್ಥಿತಿಹೇತುರೀಶ್ವರಸ್ತ್ವಮೇವ ನಾನ್ಯತ್ಪರಮಂ ಚ ಯತ್ಪದಮ್ ।। 38 ।। ಪಾದೇಷು ವೇದಾಸ್ತವ ಯೂಪದಂಷ್ಟ್ರಾ ದಂತೇಷು ಯಜ್ಞಾಃ ಶ್ರುತಯಶ್ಚ ವಕ್ತ್ರೇ । ಹುತಾಶಜಿಹ್ವೋಸಿ ತನೂರುಹಾಣಿ ದರ್ಭಾಃ ಪ್ರಭೋ ಯಜ್ಞಪುಮಾಂಸ್ತ್ವಮೇವ ।। 39 ।। ದ್ಯಾವಾಪೃಥಿವ್ಯೋರತುಲಪ್ರಭಾವ ಯದಂತರಂ ತದ್ವಪುಷಾ ತವೈವ । ವ್ಯಾಪ್ತಂ ಜಗದ್ವಾಪಿ ಸಮಸ್ತಮೇತದ್ಧಿತಾಯ ವಿಶ್ವಸ್ಯ ವಿಭೋ ಭವ ತ್ವಮ್ ।। 40 ।।

ಮುನಿಗಳು ಹೇಳಿದರು: “ಕೇಶವ! ಜನೇಶ್ವರರ ಪರಮ ಈಶ! ಪ್ರಭು! ಗದಾ-ಶಂಖ-ಖಡ್ಗ-ಚಕ್ರಧಾರಿಯೇ! ಸೃಷ್ಟಿ-ಸ್ಥಿತಿ-ನಾಶಹೇತುವೇ! ಈಶ್ವರ! ನೀನೇ ಪರಮ ಪದವು. ನಿನಗಿಂತ ಅನ್ಯ ಪದವಿಲ್ಲ. ನಿನ್ನ ಪಾದಗಳಲ್ಲಿ ವೇದಗಳಿವೆ. ನಿನ್ನ ಕೋರೆದಾಡೆಗಳು ಯೂಪಸ್ತಂಭಗಳು. ಹಲ್ಲುಗಳಲ್ಲಿ ಯಜ್ಞಗಳಿವೆ. ಮುಖದಲ್ಲಿ ಶ್ರುತಿಗಳಿವೆ. ನಾಲಿಗೆಯಲ್ಲಿ ಅಗ್ನಿಯಿದೆ. ನಿನ್ನ ರೋಮಗಳೇ ದರ್ಭೆಗಳು. ಪ್ರಭೋ! ನೀನೇ ಯಜ್ಞಪುರುಷ! ಅತುಲಪ್ರಭಾವೀ! ನಿನ್ನ ಶರೀರದಲ್ಲಿಯೇ ಪೃಥ್ವಿ-ಅಂತರಿಕ್ಷಗಳು ಅಡಗಿವೆ. ಈ ಪ್ರಪಂಚವೆಲ್ಲವೂ ನಿನ್ನ ದೇಹವು. ಪ್ರಭೋ! ಪ್ರಪಂಚದ ಹಿತಕ್ಕಾಗಿಯೇ ನೀನಿದ್ದೀಯೆ. 

ಪರಮಾತ್ಮಾ ತ್ವಮೇವೈಕೋ ನಾನ್ಯೋಸ್ತಿ ಜಗತಃ ಪತೇ । ತವೈಷ ಮಹಿಮಾ ಯೇನ ವ್ಯಾಪ್ತಮೇತಚ್ಚರಾಚರಂ ।। 41 ।। ಜ್ಞಾನಸ್ವರೂಪಮಖಿಲಂ ಜಗದೇತದಬುದ್ಧಯಃ । ಅರ್ಥಸ್ವರೂಪಂ ಪಶ್ಯಂತೋ ಭ್ರಾಮ್ಯಂತೇ ತಮಸಃ ಪ್ಲವೇ ।। 42 ।। ಯೇ ತು ಜ್ಞಾನವಿದೋ ವೃದ್ಧಾಶ್ಚೇತಸಸ್ತೇಽಖಿಲಂ ಜಗತ್ । ಜ್ಞಾನಾತ್ಮಕಂ ಪ್ರಪಶ್ಯಂತಿ ತ್ವದ್ರೂಪಂ ಪರಮೇಶ್ವರ ।। 43 ।। ಪ್ರಸೀದ ಸರ್ವಭೂತಾತ್ಮನ್ಭವಾಯ ಜಗತಸ್ತ್ವಿಮಾಮ್ । ಉದ್ಧರೋರ್ವೀಮಮೇಯಾತ್ಮನ್ನಿಮಗ್ನಾಂ ಜಲಸಂಪ್ಲವೇ ।। 44 ।। ಸತ್ತ್ವೋದ್ರಿಕೋಽಸಿ ಭಗವನ್ಗೋವಿಂದ ಪೃಥಿವೀಮಿಮಾಮ್ । ಸಮುದ್ಧರ ಭವಾಯೇಶ ಕುರು ಸರ್ವಜಗದ್ಧಿತಂ ।। 45 ।।

ಪರಮಾತ್ಮಾ! ನೀನೊಬ್ಬನೇ ಜಗತ್ತಿನ ಒಡೆಯನು. ಇನ್ನೊಬ್ಬನಿಲ್ಲ. ನಿನ್ನ ಮಹಿಮೆಯು ಈ ಚರಾಚರ ಜಗತ್ತೆಲವನ್ನೂ ವ್ಯಾಪಿಸಿದೆ. ಅಖಿಲ ಜಗತ್ತೂ ನಿನ್ನ ಜ್ಞಾನಸ್ವರೂಪವು. ಬುದ್ಧಿಯಿಲ್ಲದವರು ನಿನ್ನ ಅರ್ಥಸ್ವರೂಪವನ್ನು ಮಾತ್ರ ಕಂಡು ತಮಸ್ಸಿನ ದೋಣಿಯಲ್ಲಿ ಸುತ್ತುತ್ತಿರುತ್ತಾರೆ. ಪರಮೇಶ್ವರ! ಜ್ಞಾನವಿದ ವೃದ್ಧಚೇತಸರು ಅಖಿಲ ಜಗತ್ತನ್ನೂ ನಿನ್ನ ಜ್ಞಾನಾತ್ಮಕ ರೂಪವೆಂದು ಕಾಣುತ್ತಾರೆ. ಸರ್ವಭೂತಾತ್ಮನ್! ಪ್ರಸನ್ನನಾಗು. ಅಮೇಯಾತ್ಮನ್! ಈ ಜಗತ್ತಿನ ಒಳಿತಿಗಾಗಿ ಜಲರಾಶಿಯಲ್ಲಿ ಮುಳುಗಿರುವ ಉರ್ವಿಯನ್ನು ಮೇಲಕ್ಕೆತ್ತು. ಭಗವನ್! ಗೋವಿಂದ! ಸತ್ತ್ವಗುಣದಿಂದ ಉದ್ರಿಕ್ತನಾಗಿದ್ದೀಯೆ. ಈಶ! ಸರ್ವಜಗತ್ತಿನ ಹಿತಕ್ಕಾಗಿ ಈ ಪೃಥ್ವಿಯನ್ನು ಸಮುದ್ಧರಿಸು.”

ಏವಂ ಸಂಸ್ತೂಯಮಾನಶ್ಚ ಪರಮಾತ್ಮಾ ಮಹೀಧರಃ । ಉಜ್ಜಹಾರ ಕ್ಷಿತಿಂ ಕ್ಷಿಪ್ರಂ ನ್ಯಸ್ತವಾನ್ಸ ಮಹಾರ್ಣವೇ ।। 46 ।। ತಸ್ಯೋಪರಿ ಜಲೌಘಸ್ಯ ಮಹತೀ ನೌರಿವಾಸ್ಥಿತಾ । ತತಃ ಕ್ಷಿತಿಂ ಸಮಾಂ ಕೃತ್ವಾ ಪೃಥಿವ್ಯಾಮುಚ್ಚಿನೋದ್ಗಿರೀನ್ ।। 47 ।। ಯಥಾವಿಭಾಗಂ ಭಗವಾನನಾದಿಃ ಪುರುಷೋತ್ತಮಃ । ಭೂವಿಭಾಗಂ ತತಃ ಕೃತ್ವಾ ಸಪ್ತ ದ್ವೀಪಾನ್ಯಥಾತಥಂ ।। 48 ।। ಭೂರಾದ್ಯಾಂಶ್ಚತುರೋ ಲೋಕಾನ್ಪೂರ್ವವತ್ಸಮಕಲ್ಪಯತ್ । ಬ್ರಹ್ಮಣೇ ವಿಷ್ಣುನಾ ಪೂರ್ವಮೇತದೇವ ಪ್ರದರ್ಶಿತಂ ।। 49 ।। ತುಷ್ಟೇನ ದೇವದೇವೇನ ತ್ವಂ ದೇವಃ ಪುರುಷೋತ್ತಮಃ । ತ್ವಯಾ ಮಯಾ ಜಗಚ್ಚೇದಂ ಧಾರ್ಯಂ ಪಾಲ್ಯಂ ಚ ಯತ್ನತಃ ।। 50 ।। ಯೇಷಾಂ ತ್ವಸುರಮುಖ್ಯಾನಾಂ ವರೋ ದತ್ತೋ ಮಯಾಧುನಾ । ದೇವಾನಾಂ ಹಿತಕಾಮೇನ ಹಂತವ್ಯಾಸ್ತೇ ತ್ವಯಾ ವಿಭೋ ।। 51 ।। ಅಹಂ ಸೃಷ್ಟಿಂ ಕರಿಷ್ಯಾಮಿ ಸಾ ಚ ಪಾಲ್ಯಾ ತ್ವಯಾ ವಿಭೋ । ಏವಮುಕ್ತೋ ಗತೋ ವಿಷ್ಣುರ್ದೇವಾದೀನಸೃಜತ್ಪ್ರಭುಃ ।। 52 ।।

ಹೀಗೆ ಸ್ತುತಿಸುತ್ತಿರಲು ಪರಮಾತ್ಮಾ ಮಹೀಧರನು ಬೇಗನೇ ಕ್ಷಿತಿಯನ್ನು ಮೇಲಕ್ಕೆತ್ತಿ ಆ ಮಹಾರ್ಣವದ ಮೇಲಿಟ್ಟನು. ಆ ಜಲರಾಶಿಯ ಮೇಲೆ ಅದು ದೊಡ್ಡ ಹಡಗಿನಂತೆ ನಿಂತಿತು. ನಂತರ ಕ್ಷಿತಿಯನ್ನು ಸಮತಟ್ಟು ಮಾಡಿ ಪರ್ವತಗಳು ಮೇಲೆ ಕಾಣುವಂತೆ ಮಾಡಿದನು. ಆದಿ ಪುರುಷೋತ್ತಮ ಭಗವಂತನು ಭೂಮಿಯನ್ನು ಏಳು ದ್ವೀಪಗಳನ್ನಾಗಿ ವಿಭಜಿಸಿ ಯಾವ ಯಾವ ದ್ವೀಪಗಳು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇಟ್ಟನು. ಭೂಮಿಯ ಮೇಲಿನ ನಾಲ್ಕೂ ಲೋಕಗಳನ್ನೂ ಮೊದಲಿದ್ದಂತೆಯೇ ಕಲ್ಪಿಸಿದನು. ವಿಷ್ಣುವು ಬ್ರಹ್ಮನಿಗೆ ಹಿಂದೆ ಇದನ್ನೇ ಮಾಡಿ ತೋರಿಸಿದ್ದನು. ದೇವದೇವನಿಂದ ತುಷ್ಟನಾಗಿ ಬ್ರಹ್ಮನು “ನೀನು ದೇವ! ಪುರುಷೋತ್ತಮನು! ನೀನು ಮತ್ತು ನಾನು ಈ ಜಗತ್ತನ್ನು ಧರಿಸಬೇಕು ಮತ್ತು ಯತ್ನತಃ ಪಾಲಿಸಬೇಕು. ವಿಭೋ! ಈ ಅಸುರಮುಖ್ಯರಿಗೆ ನಾನು ಏನೇ ವರವನ್ನು ಕೊಟ್ಟಿದ್ದರೂ ದೇವತೆಗಳ ಹಿತವನ್ನು ಬಯಸಿ ನೀನು ಅವರನ್ನು ಸಂಹರಿಸಬೇಕು. ನಾನು ಸೃಷ್ಟಿಯನ್ನು ಮಾಡುತ್ತೇನೆ. ವಿಭೋ! ನೀನು ಅದನ್ನು ಪಾಲಿಸಬೇಕು.” ಹೀಗೆ ಹೇಳಲು ವಿಷ್ಣುವು ಹೊರಟುಹೋದನು. ಪ್ರಭು ಬ್ರಹ್ಮನು ದೇವಾದಿ ಪ್ರಜೆಗಳನ್ನು ಸೃಷ್ಟಿಸಿದನು.

ಅಬುದ್ಧಿಪೂರ್ವಕಸ್ತಸ್ಯ ಪ್ರಾದುರ್ಭೂತಸ್ತಮೋಮಯಃ । ಅವಿದ್ಯೇಯಂ ಚ ಸರ್ವೇಷಾಂ ಪ್ರಾದುರ್ಭೂತಾ ಮಹಾತ್ಮನಃ ।। 53 ।। ಪಂಚಧಾವಸ್ಥಿತಃ ಸರ್ಗೋ ಧ್ಯಾಯತಃ ಪ್ರತಿಬುದ್ಧವಾನ್ । ಬಹಿರಂತಶ್ಚಾಪ್ರಕಾಶಃ ಸಂವೃತಾತ್ಮಾನಮಾತ್ಮನಃ ।। 54 ।। ಮುಖ್ಯಾ ನಾಗಾ ಯತಶ್ಚೋಕ್ತಾ ಮುಖ್ಯಸರ್ಗಸ್ತತಸ್ತ್ವಯಂ । ತಂ ದೃಷ್ಟ್ವಾಽಸಾಧಕಂ ಸರ್ಗಮಮನ್ಯದಪರಂ ಪ್ರಭುಃ ।। 55 ।। ತಸ್ಯಾಭಿಧ್ಯಾಯತೋನಸ್ತಸ್ತಿರ್ಯಕ್ಸ್ರೋತೋಽಭ್ಯವರ್ತತ । ಯಸ್ಮಾತ್ತಿರ್ಯಕ್ಪ್ರವೃತ್ತಿಸ್ಸ್ಯಾತ್ತಿರ್ಯಕ್ಸ್ರೋತಸ್ತತಃ ಸ್ಮೃತಃ ।। 56 ।। ಪಶ್ವಾದಯಸ್ತೇ ವಿಖ್ಯಾತಾಸ್ತಮಃ ಪ್ರಾಯಾ ಹ್ಯವೇದಿನಃ । ಉತ್ಪಥಗ್ರಾಹಿಣಶ್ಚೈವ ತೇಽಜ್ಞಾನೇ ಜ್ಞಾನಮಾನಿನಃ ।। 57 ।। ಅಹಂಕೃತಾಸ್ತ್ವಹಂಮಾನಾ ಅಷ್ಟಾವಿಂಶದ್ವಿಧಾತ್ಮಕಾಃ । ಅಂತಃಪ್ರಕಾಶಾಸ್ತೇ ಸರ್ವ ಆವೃತಾಸ್ತೇ ಪರಸ್ಪರಮ್ ।। 58 ।।

ಮೊದಲು ಅವನಿಗೆ ಅಬುದ್ಧಿಪೂರ್ವಕವಾದ ತಮೋಮಯ ಭೂತವು ಹುಟ್ಟಿಕೊಂಡಿತು. ಅದೇ ಅವಿದ್ಯೆಯು ಎಲ್ಲವನ್ನೂ ಆವರಿಸಿಕೊಂಡಿತು. ಎಚ್ಚೆತ್ತು ಧ್ಯಾನಿಸುತ್ತಿದ್ದಾಗ ಅಪ್ರಕಾಶವಾಗಿದ್ದ ಹಿಂದಿನ ಐದು ಬಗೆಯ ಸೃಷ್ಟಿಗಳು ಅವನಿಗೆ ಬಹಿರಂಗವಾಗಿ ಗೋಚರವಾದವು. ಸ್ಥಾವರಗಳು ಮುಖ್ಯವಾದುದೆಂದು ಹೇಳಿ ಅವುಗಳ ಸೃಷ್ಟಿಯೇ ಮುಖ್ಯಸರ್ಗವೆನಿಸಿತು. ಆ ಸೃಷ್ಟಿಯು ಅಸಾಧಕವೆಂದು ಕಂಡು ಪ್ರಭುವು ಅನ್ಯ ಸೃಷ್ಟಿಯನ್ನು ಪ್ರಾರಂಭಿಸಿದನು. ಹಾಗೆ ಯೋಚಿಸುತ್ತಿದ್ದಾಗ ಅವನ ಮೂಗಿನಿಂದ ಕೆಳಗೆ ಪ್ರವಾಹವು ಹೊರಟಿತು. ಅದರಿಂದ ತಿರ್ಯಗ್ಜಂತುಗಳು ಹುಟ್ಟಿದವು. ಅವುಗಳ ಪ್ರವೃತ್ತಿಯು ಕೀಳಾದುದರಿಂದ ಆ ಸೃಷ್ಟಿಗೆ ತಿರ್ಯಕ್ಸ್ರೋತವೆಂದು ಹೆಸರಾಯಿತು. ಹೆಚ್ಚಾಗಿ ತಮೋಗುಣಗಳಿದ್ದ, ತಿಳುವಳಿಕೆಯಿಲ್ಲದ, ದಾರಿತಪ್ಪಿ ನಡೆಯುವ ಮತ್ತು ಅಜ್ಞಾನದಲ್ಲಿದ್ದರೂ ಜ್ಞಾನಿಗಳೆಂದು ತಿಳಿದುಕೊಂಡಿದ್ದ ಅವು ಪಶು ಮೊದಲಾದವುಗಳೆಂದು ವಿಖ್ಯಾತವಾದವು. ಅಹಂಕಾರದಿಂದ ಕೂಡಿಕೊಂಡು ತಾನೇ ದೊಡ್ಡವನೆಂದು ತಿಳಿದ ಇವು ಇಪ್ಪತ್ತೆಂಟು ವಿಧಗಳಲ್ಲಿವೆ. ಇವೆಲ್ಲಕ್ಕೂ ಅಂತಃಪ್ರಕಾಶವಿದ್ದರೂ ಹೊರಗೆ ಅಜ್ಞಾನದಿಂದ ಆವರಿಸಿಕೊಂಡಿವೆ.

ತಮಪ್ಯಸಾಧಕಂ ಮತ್ವಾ ಧ್ಯಾಯತೋಽನ್ಯಸ್ತತೋಭವತ್ । ಊರ್ಧ್ವಸ್ರೋತಸ್ತೃತೀಯಸ್ತು ಸಾತ್ತ್ವಿಕೋರ್ಧ್ವಮವರ್ತತ ।। 59 ।। ತೇ ಸುಖಪ್ರೀತಿಬಹುಲಾ ಬಹಿರಂತರನಾವೃತಾಃ । ಪ್ರಕಾಶಾ ಬಹಿರಂತಶ್ಚ ಊರ್ದ್ಧ್ವಸ್ರೋತಸ್ತತಃ ಸ್ಮೃತಃ ।। 60 ।। ತುಷ್ಟಾತ್ಮನಸ್ತೃತೀಯಸ್ತು ದೇವಸರ್ಗಸ್ತು ಸಂಸ್ಮೃತಃ । ತಸ್ಮಿನ್ಸರ್ಗೇಽಭವತ್ಪ್ರೀತಿರ್ನಿಷ್ಪನ್ನೇ ಬ್ರಹ್ಮಣಸ್ತದಾ ।। 61 ।।

ಆ ಸೃಷ್ಟಿಯು ಸಾಧಕವಲ್ಲವೆಂದು ತಿಳಿದು ಬ್ರಹ್ಮನು ಪುನಃ ಧ್ಯಾನಮಗ್ನನಾದನು. ನಂತರ ಮೇಲ್ಮುಖವಾಗಿ ಪ್ರವಾಹವು ಹರಿಯಿತು. ಅದೇ ಮೂರನೆಯ ಸೃಷ್ಟಿಯು. ಆ ಊರ್ಧ್ವಸ್ರೋತವು ಸಾತ್ವಿಕವಾಯಿತು. ಸೃಷ್ಟಿಸಲ್ಪಟ್ಟ ಆ ಭೂತಗಳು ಸುಖದಿಂದಲೂ ಪ್ರೀತಿಯಿಂದಲೂ ಕೂಡಿ ಒಳಗೂ ಹೊರಗೂ ಆವರಣಗಳಿಲ್ಲದಂತಾದವು. ಅವುಗಳಿಗೆ ಒಳಗೂ ಮತ್ತು ಹೊರಗೂ ಪ್ರಕಾಶವಿದ್ದಿತು. ಈ ಸೃಷ್ಟಿಯು ಊರ್ಧ್ವಸ್ರೋತ ಎಂದಾಯಿತು. ತುಷ್ಟಾತ್ಮರ ಈ ಮೂರನೆಯ ಸೃಷ್ಟಿಯು ದೇವಸೃಷ್ಟಿ ಎಂದೂ ಕರೆಯಲ್ಪಟ್ಟಿತು. ಆ ಸೃಷ್ಟಿಯ ಸಮಯದಲ್ಲಿ ಬ್ರಹ್ಮನು ಪ್ರೀತಿನಿಷ್ಪನ್ನನಾಗಿದ್ದನು.

ತತೋಽನ್ಯಂ ಸ ತದಾ ದಧ್ಯೌ ಸಾಧಕಂ ಸರ್ಗಮುತ್ತಮಮ್ । ಅಸಾಧಕಾಂಸ್ತು ತಾನ್ಜ್ಞಾತ್ವಾ ಮುಖ್ಯಸರ್ಗಾದಿಸಂಭವಾನ್ ।। 62 ।। ತಥಾಭಿಧ್ಯಾಯತಸ್ತಸ್ಯ ಸತ್ಯಾಭಿಧ್ಯಾಯಿನಸ್ತತಃ । ಪ್ರಾದುರ್ಭೂತಸ್ತದಾ ವ್ಯಕ್ತಾದರ್ವಾಕ್ಸ್ರೋತಸ್ತು ಸಾಧಕಃ ।। 63 ।। ಯಸ್ಮಾದರ್ವಾಕ್ಪ್ರವರ್ತಂತೇ ತತೋಽವಾಕ್ಸ್ರೋತಸಸ್ತು ತೇ । ತೇ ಚ ಪ್ರಕಾಶಬಹುಲಾಸ್ತಮೋದ್ರಿಕ್ತಾ ರಜೋಧಿಕಾಃ ।। 64 ।। ತಸ್ಮಾತ್ತೇ ದುಃಖಬಹುಲಾ ಭೂಯೋಭೂಯಶ್ಚ ಕಾರಿಣಃ । ಪ್ರಕಾಶಾ ಬಹಿರಂತಶ್ಚ ಮನುಷ್ಯಾಃ ಸಾಧಕಾಶ್ಚ ತೇ ।। 65 ।।

ಮುಖ್ಯವೇ ಮೊದಲಾದ ಸೃಷ್ಟಿಗಳಲ್ಲಿ ಹುಟ್ಟಿದ ಅವರು ಅಸಾಧಕರು ಎಂದು ತಿಳಿದು ಅವನು ಅನ್ಯ ಸಾಧಕ ಉತ್ತಮ ಸೃಷ್ಟಿಯನ್ನು ಮಾಡಬೇಕೆಂದು ಯೋಚಿಸಿದನು. ಹಾಗೆ ಧ್ಯಾನಿಸುತ್ತಾ ಅವನು ಸತ್ಯವನ್ನು ಧ್ಯಾನಿಸಿದನು. ಆಗ ವ್ಯಕ್ತದಿಂದ ಸಾಧಕವಾದ ಅರ್ವಾಕ್ಸ್ರೋತವು ಹುಟ್ಟಿತು. ಅಡ್ಡಡ್ಡಲಾಗಿ ಹರಿಯುತ್ತಿದ್ದುದರಿಂದ ಅದಕ್ಕೆ ಅರ್ವಾಕ್ಸ್ರೋತವೆಂದು ಹೆಸರಾಯಿತು. ಅವರು ಅತಿಯಾಗಿ ಪ್ರಕಾಶಮಾನರಾಗಿದ್ದರು. ತಮೋಗುಣವು ಉದ್ರೇಕಗೊಂಡಿತ್ತು ಮತ್ತು ರಜೋಗುಣವೂ ಅಧಿಕವಾಗಿತ್ತು. ಆದ್ದರಿಂದ ಅವರಿಗೆ ದುಃಖವು ಹೆಚ್ಚಾಯಿತು. ಪದೇ ಪದೇ ಕೆಲಸಮಾಡುವವರಾದರು. ಒಳಗೂ ಹೊರಗೂ ಪ್ರಕಾಶವಿದ್ದ ಅವರೇ ಸಾಧಕ ಮನುಷ್ಯರು.

ಪಂಚಮೋಽನುಗ್ರಹಃ ಸರ್ಗಃ ಸ ಚತುರ್ಧಾ ವ್ಯವಸ್ಥಿತಃ । ವಿಪರ್ಯಯೇಣ ಸಿದ್ಧ್ಯಾ ಚ ಶಕ್ತ್ಯಾ ತುಷ್ಟ್ಯಾ ತಥೈವ ಚ ।। 66 ।। ವಿವೃತ್ತಂ ವರ್ತಮಾನಂ ಚ ತೇಽನುಜಾನಂತಿ ವೈ ಪುನಃ । ಭೂತಾದಿಕಾನಾಂ ಭೂತಾನಾಂ ಷಷ್ಠಃ ಸರ್ಗಃ ಸ ಉಚ್ಯತೇ ।। 67 ।। ತೇ ಪರಿಗ್ರಾಹಿಣಃ ಸರ್ವೇ ಸವಿಭಾಗತರಾಸ್ತು ತೇ । ಚೋದನಾಜಾಪ್ಯಶೀಲಾಶ್ಚ ಜ್ಞೇಯಾ ಭೂತಾದಿಕಾಸ್ತು ತೇ ।। 68 ।।

ಐದನೆಯದು ಅನುಗ್ರಹ ಸೃಷ್ಟಿ. ಇದು ವಿಪರ್ಯಯದಿಂದಲೂ, ಸಿದ್ಧಿಯಿಂದಲೂ, ಶಕ್ತಿ ಮತ್ತು ತುಷ್ಟಿಗಳಿಂದಲೂ ನಾಲ್ಕು ವಿಧವಾಯಿತು. ಅವರು ಭೂತವನ್ನೂ ವರ್ತಮಾನವನ್ನೂ ತಿಳಿದಿರುತ್ತಾರೆ. ಭೂತಗಳೇ ಆದಿಯಾಗಿರುವ ಭೂತಸೃಷ್ಟಿಯು ಆರನೆಯ ಸೃಷ್ಟಿಯು. ಆ ಭೂತಗಳು ತೆಗೆದುಕೊಳ್ಳುವವುಗಳಾದವು ಮತ್ತು ವಿಭಾಗವನ್ನು ಹೊಂದಿದವು. ಮತ್ತೊಬ್ಬರಿಗೆ ಹೇಳಿ ಪ್ರೇರಿಸುವವರಾದರು. ಜಪಮಾಡಲು ಶಕ್ತರಾದರು.

ಇತ್ಯೇತೇ ಕಥಿತಾಃ ಸರ್ಗಾಃ ಷಡತ್ರ ನೃಪಸತ್ತಮ । ಪ್ರಥಮೋ ಮಹತಸ್ಸರ್ಗೋ ವಿಜ್ಞೇಯೋ ಬ್ರಹ್ಮಣಸ್ತು ಯಃ 69 ।। ತನ್ಮಾತ್ರಾಣಾಂ ದ್ವಿತೀಯಸ್ತು ಭೂತಸರ್ಗೋಹಿ ಸ ಸ್ಮೃತಃ । ವೈಕಾರಿಕಸ್ತೃತೀಯಸ್ತು ಸರ್ಗಶ್ಚೈಂದ್ರಿಯಕಃ ಸ್ಮೃತಃ ।। 70 ।। ಇತ್ಯೇಷ ಪ್ರಾಕೃತಃ ಸರ್ಗಃ ಸಂಭೂತೋಽಬುದ್ಧಿಪೂರ್ವಕಃ । ಮುಖ್ಯಸರ್ಗಶ್ಚತುರ್ಥಸ್ತು ಮುಖ್ಯಾ ವೈ ಸ್ಥಾವರಾಃ ಸ್ಮೃತಾಃ ।। 71 ।। ತಿರ್ಯಕ್ಸ್ರೋತಶ್ಚ ಯಃ ಪ್ರೋಕ್ತಸ್ತಿರ್ಯಗ್ಯೋನಿಸ್ಸ ಉಚ್ಯತೇ । ತತೋರ್ಧ್ವಸ್ರೋತಸಾಂ ಷಷ್ಠೋ ದೇವಸರ್ಗಸ್ತು ಸ ಸ್ಮೃತಃ ।। 72 ।। ತತೋಽರ್ವಾಕ್ಸ್ರೋತಸಾಂ ಸರ್ಗಃ ಸಪ್ತಮಃ ಸ ತು ಮಾನುಷಃ । ಅಷ್ಟಮೋಽನುಗ್ರಹಃ ಸರ್ಗಃ ಸಾತ್ವಿಕಸ್ತಾಮಸಸ್ತು ಸಃ ।। 73 ।। ಪಂಚೈತೇ ವೈಕೃತಾಃ ಸರ್ಗಾಃ ಪ್ರಾಕೃತಾಸ್ತು ತ್ರಯಃ ಸ್ಮೃತಾಃ । ಏತೇ ತವ ಸಮಾಖ್ಯಾತಾ ನವ ಸರ್ಗಾಃ ಪ್ರಜಾಪತೇಃ ।। 74 ।। ಪ್ರಾಕೃತಾ ವೈಕೃತಾಶ್ಚೈವ ಜಗತೋ ಮೂಲಹೇತವಃ । ಸೃಜತೋ ಜಗದೀಶಸ್ಯ ಕಿಮನ್ಯಚ್ಛ್ರೋತುಮಿಚ್ಛಸಿ ।। 75 ।।

ನೃಪಸತ್ತಮ! ಹೀಗೆ ಆರು ವಿಧದ ಸೃಷ್ಟಿಗಳ ಕುರಿತು ಹೇಳಿದ್ದಾರೆ. ಬ್ರಹ್ಮನು ಮಾಡಿದ ಮೊದಲನೆಯ ಸೃಷ್ಟಿಯು ಮಹತ್ಸೃಷ್ಟಿ. ಎರಡನೆಯದು ತನ್ಮಾತ್ರಗಳ ಸೃಷ್ಟಿ – ಭೂತಸೃಷ್ಟಿ. ಮೂರನೆಯದು ಇಂದ್ರಿಯಗಳ ಸೃಷ್ಟಿಯಾದ ವೈಕಾರಿಕ ಸೃಷ್ಟಿ. ಈ ಮೂರೂ ಅಬುದ್ಧಿಪೂರ್ವಕವಾಗಿ ಆದ ಪ್ರಕೃತಿಸಂಬಂಧಿಯಾದ (ಪ್ರಾಕೃತ) ಸೃಷ್ಟಿಯು. ಮುಖ್ಯವಾದುದು ನಾಲ್ಕನೆಯ ಸೃಷ್ಟಿ – ಸ್ಥಾವರಗಳ ಸೃಷ್ಟಿ ಅಥವಾ ಮುಖ್ಯ ಸೃಷ್ಟಿ. ನಂತರ ತಿರ್ಯಗ್ಯೋನಿಗಳ ಸೃಷ್ಟಿ ಅಥವಾ ತಿರ್ಯಕ್ಸ್ರೋತ ಸೃಷ್ಟಿ. ಆರನೆಯದು ಊರ್ಧ್ವರೇತಸ್ಸಿನವರ ಸೃಷ್ಟಿ ಅಥವಾ ದೇವಸೃಷ್ಟಿ. ನಂತರ ಏಳನೆಯದು ಅರ್ವಾಕ್ಸ್ರೋತಸ ಸೃಷ್ಟಿ. ಅದು ಮನುಷ್ಯರ ಸೃಷ್ಟಿಯು. ಎಂಟನೆಯದು ಸಾತ್ವಿಕವೂ ತಾಮಸವೂ ಆಗಿರುವ ಅನುಗ್ರಹ ಸೃಷ್ಟಿ. ಈ ಐದು ಬ್ರಹ್ಮನ ವಿಕೃತಿಯಿಂದಾದ ಸೃಷ್ಟಿಗಳು. ಪ್ರಕೃತಿಯಿಂದ ಉಂಟಾದವು ಮೊದಲ ಮೂರು. ಹೀಗೆ ಒಂಬತ್ತು[3] ಬಗೆಯ ಸೃಷ್ಟಿಗಳ ಕುರಿತು ನಿನಗೆ ಹೇಳಿದ್ದೇನೆ. ಈ ಪ್ರಾಕೃತ-ವೈಕೃತ ಸೃಷ್ಟಿಗಳು ಜಗತ್ತನ್ನು ಸೃಷ್ಟಿಸುವ ಬ್ರಹ್ಮನ ಜಗತ್ತಿಗೆ ಮೂಲಕಾರಣಗಳು. ಇನ್ನೇನನ್ನು ಕೇಳಬಯಸುತ್ತೀಯೆ?”

ಭೀಷ್ಮ ಉವಾಚ । ಸಂಕ್ಷೇಪಾತ್ಕಥಿತಾಃ ಸರ್ಗಾ ದೇವಾದೀನಾಂ ಗುರೋ ತ್ವಯಾ । ವಿಸ್ತರಾಚ್ಛ್ರೋತುಮಿಚ್ಚಾಮಿ ತ್ವತ್ತೋ ಮುನಿವರೋತ್ತಮ ।। 76 ।।

ಭೀಷ್ಮನು ಹೇಳಿದನು: “ಗುರೋ! ದೇವಾದಿಗಳ ಸೃಷ್ಟಿಯನ್ನು ಸಂಕ್ಷಿಪ್ತವಾಗಿ ಹೇಳಿದ್ದೀಯೆ. ಮುನಿವರೋತ್ತಮ! ನಿನ್ನಿಂದ ಅದನ್ನು ವಿಸ್ತಾರವಾಗಿ ಕೇಳ ಬಯಸುತ್ತೇನೆ.”

ಪುಲಸ್ತ್ಯ ಉವಾಚ । ಕರ್ಮಭಿರ್ಭಾವಿತಾಃ ಸರ್ವೇ ಕುಶಲಾಕುಶಲಾಸ್ತು ತೇ । ಖ್ಯಾತಾಸ್ತ್ವಯಾ ಹ್ಯನಿರ್ಮುಕ್ತಾಃ ಸಂಹಾರಾದ್ಯುಪಸಂಹತಾಃ ।। 77 ।। ಸ್ಥಾವರಾದ್ಯಾಸ್ಸುರಾದ್ಯಾಸ್ತು ಪ್ರಜಾ ರಾಜಂಶ್ಚತುರ್ವಿಧಾಃ । ಬ್ರಹ್ಮಣಃ ಕುರ್ವತಃ ಸೃಷ್ಟಿಂ ಜಜ್ಞಿರೇ ಮಾನಸಾಃ ಸ್ಮೃತಾಃ ।। 78 ।। ತತೋ ದೇವಾಸುರಪಿತೄನ್ಮಾನುಷಾಂಸ್ತು ಚತುಷ್ಟಯಂ । ಸಿಸೃಕ್ಷುರಂಭಸ್ಯೇತಾನಿ ಸ್ವಮಾತ್ಮಾನಮಯೂಯುಜತ್ ।। 79 ।। ಮುಕ್ತಾತ್ಮನಸ್ತತೋ ಜಾತಾ ದುರಾತ್ಮಾನಃ ಪ್ರಜಾಪತೇಃ । ಸಿಸೃಕ್ಷೋರ್ಜಘನಾತ್ಪೂರ್ವಂ ಜಜ್ಞಿರೇ ತ್ವಸುರಾಸ್ತತಃ ।। 80 ।। ತತ್ಯಾಜಾಥ ತತೋ ದುಷ್ಟಾಂ ತಮೋಮಾತ್ರಾತ್ಮಿಕಾಂ ತನುಂ । ಸಾ ಚ ತ್ಯಕ್ತಾ ತತಸ್ತೇನ ರಾಜೇಂದ್ರಾಭೂದ್ವಿಭಾವರೀ ।। 81 ।। ಸಿಸೃಕ್ಷುರನ್ಯದೇಹಸ್ಥಃ ಪ್ರೀತಿಮಾಪುಸ್ತತಃ ಸುರಾಃ । ಸತ್ತ್ವೋದ್ರಿಕ್ತಾಃ ಸಮುದ್ಭೂತಾ ಮುಖತೋ ಬ್ರಾಹ್ಮಣಾದಯಃ ।। 82 ।। ತ್ಯಕ್ತಾ ಸಾಪಿ ತನುಸ್ತೇನ ಸತ್ತ್ವಪ್ರಾಯಮಭೂದ್ದಿನಂ । ತತೋ ಹಿ ಬಲಿನೋ ರಾತ್ರಾವಸುರಾ ದೇವತಾ ದಿವಾ ।। 83 ।। ಸತ್ತ್ವಮಾತ್ರಾತ್ಮಿಕಾಂ ಚೈವ ತತೋಽನ್ಯಾಂ ಜಗೃಹೇ ತನುಮ್ । ಪಿತೃವನ್ಮನ್ಯಮಾನಸ್ಯ ಪಿತರಸ್ತಸ್ಯ ಜಜ್ಞಿರೇ ।। 84 ।। ಉತ್ಸಸರ್ಜ ಪಿತೄನ್ಕೃತ್ವಾ ತತಸ್ತಾಮಪಿ ಸ ಪ್ರಭುಃ । ಸಾ ಚೋತ್ಸೃಷ್ಟಾಽಭವತ್ಸಂಧ್ಯಾ ದಿನನಕ್ತಾಂತರಸ್ಥಿತಿಃ ।। 85 ।। ರಜೋಮಾತ್ರಾತ್ಮಿಕಾಮನ್ಯಾಂ ಜಗೃಹೇ ಸ ತನುಂ ತತಃ । ರಜೋಮಾತ್ರೋತ್ಕಟಾ ಜಾತಾ ಮನುಷ್ಯಾಃ ಕುರುಸತ್ತಮ ।। 86 ।। ತಾಮಪ್ಯಾಶು ಸ ತತ್ಯಾಜ ತನುಮಾದ್ಯಾಂ ಪ್ರಜಾಪತಿಃ । ಜ್ಯೋತ್ಸ್ನಾ ಸಮಭವಚ್ಚಾಪಿ ಪ್ರಾಕ್ಸಂಧ್ಯಾಥಾಭಿಧೀಯತೇ ।। 87 ।। ಜ್ಯೋತ್ಸ್ನಾಗಮೇ ತು ಬಲಿನೋ ಮನುಷ್ಯಾಃ ಪಿತರಸ್ತಥಾ । ರಾಜೇಂದ್ರ ಸಂಧ್ಯಾಸಮಯೇ ತಸ್ಮಾತ್ತೇ ಪ್ರಭವಂತಿ ವೈ ।। 88 ।।

ಪುಲಸ್ತ್ಯನು ಹೇಳಿದನು: “ಇವರೆಲ್ಲರೂ ಕರ್ಮಗಳಿಂದ ಪ್ರಭಾವಿತರಾಗಿ ಸುಖ-ದುಃಖಗಳನ್ನು ಅನುಭವಿಸುತ್ತಾರೆ. ನೀನು ಕೇಳಿದವರು ಮುಕ್ತರಲ್ಲ. ಸಂಹಾರದಿಂದ ನಾಶವಾಗತಕ್ಕವರು. ರಾಜನ್! ಸ್ಥಾವರಾದಿ, ಅಸುರಾದಿ ಪ್ರಜೆಗಳು ನಾಲ್ಕು ವಿಧಗಳು. ಸೃಷ್ಟಿಯನ್ನು ಮಾಡುವಾಗ ಬ್ರಹ್ಮನು ಮಾನಸಪ್ರಜೆಗಳನ್ನೂ ಹುಟ್ಟಿಸಿದನು. ನಂತರ ದೇವ-ಅಸುರ-ಪಿತೃಗಳು ಮತ್ತು ಮನುಷ್ಯರೆಂಬ ನಾಲ್ಕು ಜೀವವರ್ಗಗಳನ್ನು ಸೃಷ್ಟಿಸಬೇಕೆಂದು ಬಯಸಿದ ಬ್ರಹ್ಮನು ತನ್ನ ಆತ್ಮವನ್ನು ಜಲದಲ್ಲಿ ಸಂಯೋಜಿಸಿದನು. ಸೃಷ್ಟಿಸಲು ಬಯಸಿದ ಮುಕ್ತಾತ್ಮ ಪ್ರಜಾಪತಿಯ ಜಘನದಿಂದ ಮೊದಲು ದುರಾತ್ಮರಾದ ಅಸುರರು ಹುಟ್ಟಿದರು. ನಂತರ ಅವನು ತಮೋಮಾತ್ರಾತ್ಮಿಕವಾದ ಆ ದುಷ್ಟ ಶರೀರವನ್ನು ತೊರೆದನು. ರಾಜೇಂದ್ರ! ಹಾಗೆ ಅವನು ತ್ಯಜಿಸಿದ ಶರೀರವೇ ರಾತ್ರಿಯಾಯಿತು. ಅನ್ಯದೇಹದಿಂದ ಸೃಷ್ಟಿಮಾಡ ಬಯಸಿ ಪ್ರೀತಮನಸ್ಕನಾದ ಅವನ ಮುಖದಿಂದ ಸತ್ತ್ವಗುಣವು ಅಧಿಕವಾಗಿರುವ ಸುರರೂ ಬ್ರಾಹ್ಮಣಾದಿಗಳೂ ಹುಟ್ಟಿದರು. ಸತ್ತ್ವಗುಣವು ಅಧಿಕವಾಗಿದ್ದ ಆ ಶರೀರವನ್ನೂ ತೊರೆಯಲು ಅದು ಹಗಲಾಯಿತು. ಆದ್ದರಿಂದಲೇ ರಾತ್ರಿಯಲ್ಲಿ ಅಸುರರೂ ಹಗಲಿನಲ್ಲಿ ದೇವತೆಗಳೂ ಬಲಿಷ್ಠರಾಗಿರುತ್ತಾರೆ. ಸತ್ತ್ವಗುಣಯುಕ್ತವಾದ ಇನ್ನೊಂದು ಶರೀರವನ್ನು ಪಡೆದುಕೊಂಡು, ಹಿರಿಯರು ಎಂಬ ಭಾವವನ್ನು ಇಟ್ಟುಕೊಂಡು ಸೃಷ್ಟಿಸಲು ಪಿತೃಗಳು ಹುಟ್ಟಿದರು. ಪಿತೃಗಳನ್ನು ಉತ್ಪನ್ನ ಮಾಡಿ ತ್ಯಜಿಸಿದ ಆ ದೇಹವು ಹಗಲು-ರಾತ್ರಿಗಳ ಮಧ್ಯದ ಸಾಯಂಕಾಲವಾಗಿ ಪರಿಣಮಿಸಿತು. ನಂತರ ಅವನು ರಜೋಗುಣಯುಕ್ತವಾದ ಇನ್ನೊಂದು ದೇಹವನ್ನು ಪಡೆದುಕೊಂಡನು. ಕುರುಸತ್ತಮ! ಅದರಿಂದ ರಜೋಗುಣವು ಉತ್ಕಟವಾಗಿರುವ ಮನುಷ್ಯರು ಹುಟ್ಟಿದರು. ಪ್ರಜಾಪತಿಯು ಆ ಶರೀರವನ್ನೂ ತೊರೆಯಲು ಅದು ರಾತ್ರಿ-ಹಗಲುಗಳ ಮಧ್ಯದ ಪ್ರಾಕ್ಸಂಧ್ಯೆ ಅಥವಾ ನಸುಕಾಗಿ ಪರಿಣಮಿಸಿತು. ರಾಜೇಂದ್ರ! ಬೆಳದಿಂಗಳಿನ ಆ ಸಂಧ್ಯಾ ಸಮಯದಲ್ಲಿ ಮನುಷ್ಯರು ಮತ್ತು ಪಿತೃಗಳು ಬಲಿಷ್ಠರಾಗಿರುತ್ತಾರೆ. ಏಕೆಂದರೆ ಆ ದೇಹದಿಂದ ಅವರು ಹುಟ್ಟಿದರಷ್ಟೇ?

ಬ್ರಹ್ಮಣಸ್ತು ಶರೀರಾಣಿ ತ್ರಿಗುಣೋಪಾಶ್ರಯಾಣಿ ಚ । ರಜೋಮಾತ್ರಾತ್ಮಿಕಾಮೇವ ತತೋಽನ್ಯಾಂ ಜಗೃಹೇ ತನುಂ ।। 89 ।। ತತಸ್ತು ಬ್ರಹ್ಮಣೋ ಜಾತಾ ಜಜ್ಞೇ ಕೋಪಸ್ತಥಾಕೃತಃ । ಕ್ಷುತ್ಕ್ಷಾಮೋ ಹ್ಯಂಧಕಾರೇ ತು ತೇಽಸೃಜದ್ಭಗವಾಂಸ್ತತಃ ।। 90 ।। ವಿರೂಪಾಶ್ಶ್ಮಶ್ರುಜಾತಾಸ್ತೇ ಸಮಧಾವಂತ ತಂ ಪ್ರಭುಮ್ । ರಕ್ಷತಾಮೇಷ ಯೈರುಕ್ತಂ ರಾಕ್ಷಸಾಸ್ತೇ ತತೋಽಭವನ್ ।। 91 ।। ಊಚುಃ ಖಾದಾಮ ಇತ್ಯನ್ಯೇ ಯೇ ತೇ ಯಕ್ಷಾಸ್ತು ತೇಽಭವನ್ । ಅಪಿ ಏನಾಸ್ಯ ತಾಂದೃಷ್ಟ್ವಾ ಕೇಶಾಃ ಶೀರ್ಯಂತಿ ವೇಧಸಃ ।। 92 ।। ಹೀನಾಶ್ಚ ಶಿರಸೋ ಭೂಯಃ ಸಮಾರೋಹಂತಿ ತೇ ಶಿರಃ । ಸರ್ಪಣಾತ್ತೇಽಭವನ್ಸರ್ಪಾ ಹೀನತ್ವಾದಹಯಃ ಸ್ಮೃತಾಃ ।। 93 ।। ತತಃ ಕ್ರುದ್ಧೇನ ವೈ ಸ್ರಷ್ಟ್ರಾ ಕ್ರೋಧಾತ್ಮಾನೋ ವಿನಿರ್ಮಿತಾಃ । ವರ್ಣೇನ ಕಪಿಶೇನೋಗ್ರಾ ಭೂತಾಸ್ತೇ ಪಿಶಿತಾಶಿನಾಃ ।। 94 ।।

ಬ್ರಹ್ಮನ ಶರೀರಗಳು ತ್ರಿಗುಣಗಳನ್ನು ಆಶ್ರಯಿಸಿವೆ. ನಂತರ ಅವನು ರಜೋಮಾತ್ರಾತ್ಮಿಕವಾದ ಅನ್ಯ ಶರೀರವನ್ನು ಪಡೆದುಕೊಂಡನು. ಆಗ ಬ್ರಹ್ಮನಿಗೆ ಕೋಪವೂ, ಹಸಿವು ಬಾಯಾರಿಕೆಗಳೂ ಉಂಟಾದವು. ಭಗವಂತನು ಆಗ ಅಂಧಕಾರದಲ್ಲಿಯೇ ಸೃಷ್ಟಿಸಿದನು. ಆಗ ವಿರೂಪರಾಗಿಯೂ, ಹೆಚ್ಚು ಕೂದಲುಗಳುಳ್ಳವರಾಗಿಯು ಹುಟ್ಟಿದವರು ಪ್ರಭು ಬ್ರಹ್ಮನನ್ನೇ ಓಡಿಸಿಕೊಂಡು ಹೋಗಿ ಆಕ್ರಮಣಿಸಿದರು. “ಇವರಿಂದ ರಕ್ಷಿಸಿ!” ಎಂದು ಯಾರ ಕುರಿತು ಅವನು ಹೇಳಿದನೋ ಅವರು ರಾಕ್ಷಸರಾದರು. “ತಿನ್ನುತ್ತೇವೆ” ಎಂದು ಯಾರು ಹೇಳಿದ ಇತರರು ಯಕ್ಷರಾದರು. ಇವರನ್ನು ನೋಡಿ ಬ್ರಹ್ಮನ ತಲೆಕೂದಲು ಉದುರಿತು. ಹಾಗೆ ಬಿದ್ದ ಕೂದಲುಗಳು ತಾವೇ ಬ್ರಹ್ಮನ ತಲೆಯನ್ನು ಏರಿದವು. ಹಾಗೆ ಮೇಲಕ್ಕೆ ಹತ್ತಿದುದರಿಂದ ಅವು ಸರ್ಪಗಳಾದವು. ಬಿದ್ದುದರಿಂದ ಅಹಿಗಳಾದವು. ನಂತರ ಬ್ರಹ್ಮನು ಕ್ರುದ್ಧನಾಗಿ ಕ್ರೋಧಾತ್ಮರನ್ನು ಸೃಷ್ಟಿಸಿದನು. ಕೆಂಪುಬಣ್ಣವನ್ನು ಹೊಂದಿದ್ದ ಆ ಉಗ್ರ ಭೂತಗಳು ಮಾಂಸಭಕ್ಷಕರಾದರು.

ಧಯಂತೋ ಗಾಂ ಸಮುದ್ಭೂತಾ ಗಂಧರ್ವಾಸ್ತಸ್ಯ ತತ್ಕ್ಷಣಾತ್ । ಪಿಬಂತೋ ಜಜ್ಞಿರೇ ವಾಚಂ ಗಂಧರ್ವಾಸ್ತೇನ ತೇಽಭವನ್ ।। 95 ।। ಏತಾನಿ ಸೃಷ್ಟ್ವಾ ಭಗವಾನ್ಬ್ರಹ್ಮಾ ತಚ್ಛಕ್ತಿಚೋದಿತಃ । ತತಃ ಸ್ವಚ್ಚಂದತೋಽನ್ಯಾನಿ ವಯಾಂಸಿ ವಯಸೋಽಸೃಜತ್ ।। 96 ।। ಅವಯೋ ಬಾಹುತಶ್ಚಕ್ರೇ ಮುಖತೋಽಜಾಂಶ್ಚ ಸೃಷ್ಟವಾನ್ । ಸೃಷ್ಟವಾನುದರಾದ್ಗಾಶ್ಚ ಮಹಿಷಾಂಶ್ಚ ಪ್ರಜಾಪತಿಃ ।। 97 ।। ಪದ್ಭ್ಯಾಂ ಚಾಶ್ವಾನ್ಸಮಾತಂಗಾನ್ರಾಸಭಾನ್ಗವಯಾನ್ಮೃಗಾನ್ । ಉಷ್ಟ್ರಾನಶ್ವತರಾಂಶ್ಚೈವ ಪಶೂನನ್ಯಾಶ್ಚ ಜಾತಯಃ ।। 98 ।। ಓಷಧ್ಯಃ ಫಲಮೂಲಾನಿ ರೋಮಭ್ಯಸ್ತಸ್ಯ ಜಜ್ಞಿರೇ । ತ್ರೇತಾಯುಗಮುಖೇ ಬ್ರಹ್ಮಾ ಕಲ್ಪಸ್ಯಾದೌ ನೃಪೋತ್ತಮ ।। 99 ।। ಸೃಷ್ಟ್ವಾ ಪಶ್ವೋಷಧೀಸ್ಸಮ್ಯಕ್ಸ ಯುಯೋಜ ತದಾಧ್ವರೇ । ಗೌರಜಃ ಪುರುಷೋ ಮೇಷ ಅಶ್ವಾಶ್ವತರಗರ್ದಭಾಃ ।। 100 ।। ಏತಾನನ್ಯಾನ್ಪಶೂನಾಹುರಾರಣ್ಯಾಂಶ್ಚ ನಿಬೋಧ ಮೇ । ಶ್ವಾಪದಂ ದ್ವಿಖುರಂ ಹಸ್ತೀ ವಾನರಂ ಪಕ್ಷಿಪಂಚಮಮ್ ।। 101 ।। ಕ್ಷುದ್ರಕಾಃ ಪಶವಷ್ಷಷ್ಠಾಸ್ಸಪ್ತಮಾಸ್ತು ಸರೀಸೃಪಾಃ

ಬ್ರಹ್ಮನು ಹಸುವನ್ನು ಕರೆಯುವಾಗ ಹುಟ್ಟಿದವರು ಗಂಧರ್ವರಾದರು. ಮಾತನ್ನೇ ಕುಡಿಯುವ ಅವರು ಗಂಧರ್ವರೆಂದಾದರು. ಇವುಗಳನ್ನು ಸೃಷ್ಟಿಸಿ ಬ್ರಹ್ಮನು ತನ್ನ ಶಕ್ತಿಯಿಂದ ಪ್ರೇರಿತನಾಗಿ ಸ್ವಚ್ಚಂದವಾಗಿರುವ ಅನ್ಯ ಪಕ್ಷಿಗಳನ್ನು ಸೃಷ್ಟಿಸಿದನು. ತನ್ನ ಬಾಹುಗಳಿಂದ ಕುರಿಗಳನ್ನೂ, ಮುಖದಿಂದ ಆಡುಗಳನ್ನೂ ಸೃಷ್ಟಿಸಿದನು. ಪ್ರಜಾಪತಿಯು ಉದರದಿಂದ ಗೋವುಗಳನ್ನೂ ಎಮ್ಮೆಗಳನ್ನೂ ಸೃಷ್ಟಿಸಿದನು. ಅವನ ಕಾಲುಗಳಿಂದ ಕುದುರೆಗಳೂ, ಆನೆ-ಕತ್ತೆ-ಗವಯ-ಜಿಂಕೆ-ಒಂಟೆ-ಹೇಸರಗತ್ತೆ ಮತ್ತು ಅನ್ಯ ಜಾತಿಯ ಪಶುಗಳು ಹುಟ್ಟಿದವು. ಅವನ ರೋಮಗಳಿಂದ ಓಷಧಿಗಳೂ[4], ಫಲ-ಮೂಲಗಳೂ ಹುಟ್ಟಿದವು. ನೃಪೋತ್ತಮ! ಕಲ್ಪದ ಮೊದಲನೇ ತ್ರೇತಾಯುಗದ ಪ್ರಾರಂಭದಲ್ಲಿ ಬ್ರಹ್ಮನು ಸಕಲ ಪಶುಗಳು ಮತ್ತು ಓಷಧಿಗಳನ್ನು ಸೃಷ್ಟಿಸಿ ಅವುಗಳನ್ನು ಯಜ್ಞಗಳಲ್ಲಿ ಬಳಸಿದನು[5]. ಹಸು, ಆಡು, ಮನುಷ್ಯ, ಟಗರು, ಕುದುರೆ, ಹೇಸರಗತ್ತೆ, ಕತ್ತೆ ಇವುಗಳನ್ನು ಪಶುಗಳು ಎನ್ನುತ್ತಾರೆ. ಇನ್ನು ಆರಣ್ಯ ಪಶುಗಳ ಕುರಿತು ಕೇಳು: ಶ್ವಾಪದಗಳು (ಹುಲಿ-ಸಿಂಹ-ಚಿರತೆ ಮೊದಲಾದ ಕ್ರೂರ ಪ್ರಾಣಿಗಳು), ದ್ವಿಖುರಗಳು (ಗೊರಸು ಸೀಳಿರುವ ಪಶುಗಳು), ಆನೆ, ವಾನರ, ಮತ್ತು ಐದನೆಯದಾಗಿ ಪಕ್ಷಿಗಳು, ಆರನೆಯದಾಗಿ ಕ್ಷುದ್ರಕ ಪ್ರಾಣಿಗಳು (ನರಿ, ತೋಳ ಮೊದಲಾದವು), ಮತ್ತು ಎಂಟನೆಯದಾಗಿ ಸರೀಸೃಪಗಳು (ಹಾವು ಮೊದಲಾದ ಹರಿದಾಡುವ ಪ್ರಾಣಿಗಳು.

[6]ಗಾಯತ್ರವತ್ಸ್ಯವಶ್ಚೈವ ಬೃಹತ್ಸಾಮ ರಥಂತರಮ್ ।। 102 ।।[7]  ಅಗ್ನಿಷ್ಟೋಮಂ ಚ ಯಜ್ಞಾನಾಂ ನಿರ್ಮಮೇ ಪ್ರಥಮಾನ್ಮುಖಾತ್ । ಯಜೂಂಷಿ ತ್ರೈಷ್ಟುಭಂ ಛಂದಸ್ತೋಮಂ ಪಂಚದಶಂ ತಥಾ ।। 103 ।। ಬೃಹತ್ಸಾಮ ತಥೋಕ್ಥ್ಯಂ ಚ ದಕ್ಷಿಣಾದಸೃಜನ್ಮುಖಾತ್ । ಸಾಮಾನಿ ಜಗತೀಛಂದಸ್ತೋಮಂ ಸಪ್ತದಶಂ[8] ತಥಾ ।। 104 ।। ವೈರೂಪಮತಿರಾತ್ರಂ ಚ ಪಶ್ಚಿಮಾದಸೃಜನ್ಮುಖಾತ್ । ಏಕವಿಂಶಮಥರ್ವಾಣಂ ಸಾಮೋರ್ಯಾ ಮಾನಮೇವ ಚ ।। 105 ।। ಆನುಷ್ಟುಭಂ ಸವೈರಾಜಮುತ್ತರಾದಸೃಜನ್ಮುಖಾತ್ । 

ಬ್ರಹ್ಮನು ತನ್ನ ಪ್ರಥಮ ಮುಖದಿಂದ[9] ಗಾಯತ್ರೀ ಛಂದಸ್ಸು[10], ಅತ್ಸ್ಯವ ಸ್ತೋಮ[11], ಬೃಹತ್ ಸಾಮ, ರಥಂತರ ಸಾಮ[12], ಮತ್ತು ಅಗ್ನಿಷ್ಟೋಮ ಯಾಗವನ್ನು[13] ನಿರ್ಮಿಸಿದನು. ದಕ್ಷಿಣದಿಕ್ಕಿನ ಮುಖದಿಂದ ಯಜು, ತ್ರಿಷ್ಟುಪ್ ಛಂದಸ್ಸು, ಪಂಚದಶಸ್ತೋಮ, ಬೃಹತ್ ಸಾಮ, ಮತ್ತು ಉಕ್ಥ್ಯ[14]ವನ್ನು ಸೃಷ್ಟಿಸಿದನು. ಪಶ್ಚಿಮದಿಕ್ಕಿನ ಮುಖದಿಂದ ಸಾಮವೇದ, ಜಗತೀ ಛಂದಸ್ಸು, ಸಪ್ತದಶಸ್ತೋಮ, ವೈರೂಪವೆಂಬ ಸಾಮ, ಅತಿರಾತ್ರವೆಂಬ ಯಜ್ಞ – ಇವುಗಳನ್ನು ಸೃಷ್ಟಿಸಿದನು. ಉತ್ತರದಿಕ್ಕಿನ ಮುಖದಿಂದ ಅಥರ್ವವೇದ, ಏಕವಿಂಶತಿಸ್ತೋಮ, ಅನುಷ್ಟುಪ್ ಛಂದಸ್ಸು, ಅಪ್ತೋರ್ಯಾಮ ಯಜ್ಞ, ವೈರಾಜವೆಂಬ ಸಾಮಗಳನ್ನು ಸೃಷ್ಟಿಸಿದನು.

[15]ಉಚ್ಚಾವಚಾನಿ ಭೂತಾನಿ ಗಾತ್ರೇಭ್ಯಸ್ತಸ್ಯ ಜಜ್ಞಿರೇ ।। 106 ।। ದೇವಾಸುರಪಿತೄನ್ಸೃಷ್ಟ್ವಾ ಮನುಷ್ಯಾಂಶ್ಚ ಪ್ರಜಾಪತಿಃ । ತತಃ ಪುನಃ ಸಸರ್ಜಾಸೌ ಸ ಕಲ್ಪಾದೌ ಪಿತಾಮಹಃ ।। 107 ।। ಯಕ್ಷಾನ್ಪಿಶಾಚಾನ್ಗಂಧರ್ವಾಂಸ್ತಥೈವಾಪ್ಸರಸಾಂ ಗಣಾನ್ । ಸಿದ್ಧಕಿನ್ನರರಕ್ಷಾಂಸಿ ಸಿಂಹಾನ್ಪಕ್ಷಿಮೃಗೋರಗಾನ್ ।। 108 ।। ಅವ್ಯಯಂ ಚ ವ್ಯಯಂ ಚೈವ ಯದಿದಂ ಸ್ಥಾಣುಜಂಗಮಮ್ । ತತ್ತತ್ಸಮಸೃಜದ್ಬ್ರಹ್ಮಾ ಭಗವಾನಾದಿಕೃದ್ವಿಭುಃ ।। 109 ।।

ನಂತರ ಬ್ರಹ್ಮನ ಶರೀರದಿಂದ ಉಚ್ಚ-ನೀಚರಾದ ಭೂತಗಳು ಹುಟ್ಟಿದವು. ದೇವ-ಅಸುರ-ಪಿತೃಗಳು ಮತ್ತು ಮನುಷ್ಯರನ್ನು ಸೃಷ್ಟಿಸಿ ವಿಭು, ಆದಿಕೃತ್, ಭಗವಾನ್ ಬ್ರಹ್ಮನು ಕಲ್ಪಾದಿಯಲ್ಲಿ ಪುನಃ ಯಕ್ಷರು, ಪಿಶಾಚರು, ಗಂಧರ್ವರು, ಅಪ್ಸರಗಣಗಳು, ಸಿದ್ಧರು, ಕಿನ್ನರರು, ರಾಕ್ಷಸರು, ಸಿಂಹಗಳು, ಮೃಗ-ಪಕ್ಷಿಗಳು, ಉರಗರು, ಬಹುಕಾಲ ಬದುಕುವ ಮತ್ತು ಸ್ವಲ್ಪಕಾಲ ಜೀವಿಸುವ ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದನು.

[16]ತೇಷಾಂ ಚ ಯಾನಿ ಕರ್ಮಾಣಿ ಪ್ರಾಕ್ಸೃಷ್ಟ್ಯಾಂ ಪ್ರತಿಪೇದಿರೇ । ತಾನ್ಯೇವ ಪ್ರತಿಪದ್ಯಂತೇ ಸೃಜ್ಯಮಾನಾಃ ಪುನಃ ಪುನಃ ।। 110 ।। ಹಿಂಸ್ರಾಹಿಂಸ್ರೇ ಮೃದುಕ್ರೂರೇ ಧರ್ಮಾಧರ್ಮೇ ಋತಾನೃತೇ । ತದ್ಭಾವಿತಾಃ ಪ್ರಪದ್ಯಂತೇ ತಸ್ಮಾತ್ತತ್ತಸ್ಯ ರೋಚತೇ ।। 111 ।। ಇಂದ್ರಿಯಾರ್ಥೇಷು ಸರ್ವೇಷು ಶರೀರೇಷು ಚ ಸ ಪ್ರಭುಃ । ನಾನಾತ್ವಂ ವಿನಿಯೋಗಂ ಚ ಧಾತೈವ ವ್ಯಸೃಜತ್ಸ್ವಯಂ ।। 112 ।। ನಾಮ ರೂಪಂ ಚ ಭೂತಾನಾಂ ಕೃತ್ಯಾನಾಂ ಚ ಪ್ರಪಂಚನಮ್ । ವೇದಶಬ್ದೇಭ್ಯ ಏವಾದೌ ದೇವಾದೀನಾಂ ಚಕಾರ ಸಃ ।। 113 ।। ಋಷೀಣಾಂ ನಾಮಧೇಯಾನಿ ಯಥಾವೇದಶ್ರುತಾನಿ ವೈ । ಯಥಾಯೋಗಸ್ಯ ಯೋಗ್ಯಾನಿ ಅನ್ಯೇಷಾಮಪಿ ಸೋಽಕರೋತ್ ।। 114।। ಯಥಾಯತರ್ಥುಲಿಂಗಾನಿ ನಾನಾರೂಪಾಣಿ ಪರ್ಯಯೇ । ದೃಶ್ಯಂತೇ ತಾನಿ ತಾನ್ಯೇವ ತಥಾ ಭಾವಾ ಯುಗಾದಿಷು ।। 115 ।।[17] ಕರೋತ್ಯೇವಂವಿಧಾಂ ಸೃಷ್ಟಿಂ ಕಲ್ಪಾದೌ ಸ ಪುನಃ ಪುನಃ । ಸಿಸೃಕ್ಷುಃ ಶಕ್ತಿಯುಕ್ತೋಸೌ ಸೃಜ್ಯಸೃಷ್ಟಿಪ್ರಚೋದಿತಃ ।। 116 ।।

ಬ್ರಹ್ಮಸೃಷ್ಟಿಯಿಂದ ಉಂಟಾದ ಜೀವರುಗಳು ಹಿಂದಿನ ಸೃಷ್ಟಿಯಲ್ಲಿ ಯಾವ ಯಾವ ಕರ್ಮಫಲಗಳನ್ನು ಪಡೆದರೋ ಆ ಫಲಗಳನ್ನೇ ಅನುಸರಿಸಿ ಪುನಃ ಪುನಃ ಆಗುವ ಸೃಷ್ಟಿಯಲ್ಲಿ ಆ ಫಲಗಳನ್ನೇ ಪಡೆಯುತ್ತಾರೆ. ಹಿಂಸೆ-ಅಹಿಂಸೆ ಇವೆರಡೂ ಶಾರೀರಿಕ ಕರ್ಮಗಳು. ಮೃದು-ಕ್ರೂರ ಇವೆರಡೂ ಮಾನಸಿಕ ಕರ್ಮಗಳು. ಸತ್ಯ-ಸುಳ್ಳು ಇವೆರಡೂ ವಾಚಕ ಕರ್ಮಗಳು. ಇವು ಸಂದರ್ಭಾನುಸಾರವಾಗಿ ಧರ್ಮ-ಅಧರ್ಮಗಳಾಗುತ್ತವೆ. ಹೇಗೆಂದರೆ ಅಗ್ನಿಷ್ಟೋಮ ಯಾಗದಲ್ಲಿ ಪಶ್ವಾಲಂಭನವು ಹಿಂಸೆಯಾದರೂ ಧರ್ಮವಾಗುತ್ತದೆ. ಪರಸ್ತ್ರೀಗಮನವು ಅಹಿಂಸೆಯಾದರೂ ಅಧರ್ಮವಾಗುತ್ತದೆ. ರಾಜರು ಕಳ್ಳರೇ ಮೊದಲಾದವರನ್ನು ರಕ್ಷಿಸುವುದು ಮೃದು ಸ್ವಭಾವವಾದರೂ ಅಧರ್ಮವಾಗುತ್ತದೆ. ದುಷ್ಟರನ್ನು ದಂಡಿಸುವುದು ಕ್ರೂರವಾದರೂ ಧರ್ಮವಾಗುತ್ತದೆ. ಬ್ರಾಹ್ಮಣಾದಿಗಳ ವಧೆಯ ಸಂದರ್ಭವು ಬಂದಾಗ ಸುಳ್ಳುಹೇಳಿ ಅವನನ್ನು ಉಳಿಸುವುದು ಧರ್ಮವಾಗುತ್ತದೆ. ಈ ಸಂದರ್ಭದಲ್ಲಿ ನಿಜವನ್ನು ಹೇಳುವುದು ಅಧರ್ಮವಾಗುತ್ತದೆ. ಜೀವರು ಹಿಂದಿನ ಸಂಸ್ಕಾರಕ್ಕನುಸಾರವಾಗಿ ಆ ಪೂರ್ವಜನ್ಮವಾಸನಾನುಸಾರವಾಗಿ ಈ ಜನ್ಮದಲ್ಲಿಯೂ ಅದೇ ಸ್ವಭಾವವನ್ನು ಪಡೆಯುತ್ತಾರೆ. ಹೀಗೆ ಆ ಪ್ರಭುವು ಜೀವರ ಕರ್ಮಫಲಾನುಸಾರವಾಗಿ ಇಂದ್ರಿಯಾರ್ಥಗಳಾದ ಆಹಾರಾದಿ ವಿಷಯಗಳನ್ನೂ, ಅಂದರೆ ಅಮೃತ-ಅನ್ನ-ಫಲ-ಹುಲ್ಲು ಇತ್ಯಾದಿಗಳನ್ನೂ, ಭೂತಗಳಲ್ಲಿ ಜಲಚರ-ಸ್ಥಳಚರಗಳನ್ನೂ, ಶರೀರಗಳಲ್ಲಿ ದ್ವಿಪಾದ-ಚತುಷ್ಪಾದಗಳನ್ನೂ ಅನುಸರಿಸಿ ಅನೇಕ ರೂಪಗಳನ್ನು ಸೃಷ್ಟಿಸಿದನು. ಮತ್ತು ಅವನು ದೇವತೆಗಳಲ್ಲಿ ಇಂದ್ರ-ಅಗ್ನಿ-ಯಮ ಮೊದಲಾದ ಹೆಸರುಗಳನ್ನೂ, ವಜ್ರಹಸ್ತಾದಿ ರೂಪಗಳನ್ನೂ, ಮಳೆ ಮೊದಲಾದ ಕಾರ್ಯಗಳನ್ನೂ, ವೇದಶಬ್ದಗಳನ್ನು ಅನುಸರಿಸಿ ವಿಸ್ತರಿಸಿದನು. ಋಷಿಗಳ ಹೆಸರುಗಳನ್ನೂ ವೇದದ ಸೂಕ್ತಗಳಲ್ಲಿ ಇರುವಂತೆಯೇ ಗೊತ್ತುಮಾಡಿದನು. ವಸಂತಾದಿ ಋತುಗಳು ಬಂದರೆ ಆ ಋತುವನ್ನು ಅನುಸರಿಸಿ ಹೂ-ಹಣ್ಣು ಮೊದಲಾದವುಗಳು ಪುನಃ ಅವುಗಳೇ ಬರುವಂತೆ ಕಲ್ಪ-ಮನ್ವಂತರಗಳ ಆದಿಯಲ್ಲಿ ದೇವತೆಗಳು ಅನಿತ್ಯರಾದರೂ ನಿತ್ಯವಾಗಿರುವ ವೇದದಲ್ಲಿ ಹೇಳಿದ ಹೆಸರುಗಳೇ ಬರುತ್ತವೆ. ಹೀಗೆ ಬ್ರಹ್ಮನು ಸೃಷ್ಟಿಯ ಪ್ರಾರಂಭದಲ್ಲಿ ಸೃಷ್ಟಿಶಕ್ತಿಯಿಂದ ಕೂಡಿ ಸೃಷ್ಟಿಸಬೇಕಾದ ಜೀವರ ಕರ್ಮವಾಸನಾ ಶಕ್ತಿಯಿಂದ ಪ್ರೇರಿತನಾಗಿ ಬಗೆ ಬಗೆಯ ಸೃಷ್ಟಿಯನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾನೆ.”

ಭೀಷ್ಮ ಉವಾಚ । [18]ಅರ್ವಾಕ್ಸ್ರೋತಾಶ್ಚ ಕಥಿತೋ ಭವತಾ ಯಶ್ಚ ಮಾನುಷಃ । ಬ್ರಹ್ಮನ್ವಿಸ್ತರತೋ ಬ್ರೂಹಿ ಬ್ರಹ್ಮಾ ತಮಸೃಜದ್ಯಥಾ ।। 117 ।। ಯಥಾ ವರ್ಣಾನ್ಸಮಸೃಜದ್ಗುಣಾಂಶ್ಚ ಸ ಮಹಾಮುನೇ । ಯಚ್ಚ ತೇಷಾಂ ಸ್ಮೃತಂ ಕರ್ಮ ವಿಪ್ರಾದೀನಾಂ ತದುಚ್ಯತಾಮ್ ।। 118 ।।

ಭೀಷ್ಮನು ಹೇಳಿದನು: “ಬ್ರಹ್ಮನ್! ಅರ್ವಾಕ್ಸ್ರೋತವೆಂಬ ಮನುಷ್ಯ ಸೃಷ್ಟಿಯನ್ನು ಹೇಳಿದಿರಿ. ಬ್ರಹ್ಮನ ಆ ಸೃಷ್ಟಿಕ್ರಮವನ್ನು ವಿಸ್ತಾರವಾಗಿ ಹೇಳಬೇಕು. ಮಹಾಮುನೇ! ಅವನು ವರ್ಣಗಳನ್ನು ಮತ್ತು ಅವುಗಳ ಗುಣಗಳನ್ನು ಹೇಗೆ ಸೃಷ್ಟಿಸಿದನು? ವಿಪ್ರಾದಿ ವರ್ಣಗಳ ಕರ್ಮಗಳನ್ನು ಹೇಗೆ ನಿಗದಿಪಡಿಸಿದನು ಎನ್ನುವುದನ್ನು ಹೇಳಬೇಕು.”

ಪುಲಸ್ತ್ಯ ಉವಾಚ । [19]ಸತ್ತ್ವಾಭಿಧ್ಯಾಯಿನಸ್ತಸ್ಯ ಸಿಸೃಕ್ಷೋರ್ಬ್ರಹ್ಮಣಃ ಪ್ರಜಾಃ । ಅಜಾಯಂತ ಕುರುಶ್ರೇಷ್ಠ ಸತ್ತ್ವೋದ್ರಿಕ್ತಾ ಮುಖಾದ್ವಿಜಾಃ ।। 119 ।। ವಕ್ಷಸೋ ರಜಸೋದ್ರಿಕ್ತಾಸ್ತಥಾನ್ಯಾ ಬ್ರಹ್ಮಣೋಽಭವನ್ । ರಾಜನ್ಯಾಸ್ತಮಸಾ ವೈಶ್ಯಾಸ್ತಮೋದ್ರಿಕ್ತಾಸ್ತಥೋರುತಃ ।। 120 ।। ಪದ್ಭ್ಯಾಂ ಸಮಸೃಜದ್ಬ್ರಹ್ಮಾ ಶೂದ್ರಾನ್ನೃಪವರೋತ್ತಮ । ತಮಃ ಪ್ರಧಾನಾಸ್ತೇ ಸರ್ವೇ ಚಾತುರ್ವರ್ಣ್ಯಮಿದಂ ತತಃ ।। 121 ।। ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚ ನೃಪಸತ್ತಮ । ಪಾದೋರುವಕ್ಷಸ್ಥಲಜಾ ಮುಖತಶ್ಚ ಸಮುದ್ಭವಾಃ ।। 122 ।। ಯಜ್ಞನಿಷ್ಪತ್ತಯೇ ಸರ್ವಮೇತದ್ಬ್ರಹ್ಮಾ ಚಕಾರ ಹ । ಚಾತುರ್ವರ್ಣ್ಯಂ ಮಹಾಭಾಗ ಯಜ್ಞಸಾಧನಮುತ್ತಮಮ್ ।। 123 ।। ಯಜ್ಞೇನಾಪ್ಯಾಯಿತಾ ದೇವಾ ವೃಷ್ಟ್ಯುತ್ಸರ್ಗೇಣ ಮಾನವಾಃ । ಆಪ್ಯಾಯನಂ ವೈ ಕುರ್ವಂತಿ ಯಜ್ಞಾಃ ಕಲ್ಯಾಣಹೇತವಃ ।। 124 ।। ನಿಷ್ಪಾದ್ಯಂತೇ ನರೈಸ್ತೇ ತು ಸ್ವಕರ್ಮನಿರತೈಸ್ಸದಾ । ವಿಶುದ್ಧಾಚರಣೋಪೇತೈಃ ಸದ್ಭಿಸ್ಸನ್ಮಾರ್ಗಗಾಮಿಭಿಃ ।। 125 ।। ಸ್ವರ್ಗಾಪವರ್ಗೌ ಮಾನುಷ್ಯಾತ್ಪ್ರಾಪ್ನುವಂತಿ ನರಾ ನೃಪ । ಯಚ್ಚಾಭಿರುಚಿತಂ ಸ್ಥಾನಂ ತದ್ಯಾಂತಿ ಮನುಜಾ ವಿಭೋ ।। 126 ।।

ಪುಲಸ್ತ್ಯನು ಹೇಳಿದನು: “ಕುರುಶ್ರೇಷ್ಠ! ಸತ್ಯ ಸಂಕಲ್ಪನಾದ ಬ್ರಹ್ಮನು ಜಗತ್ತನ್ನು ಸೃಷ್ಟಿಸಲು ಬಯಸಿದಾಗ ಅವನ ಮುಖದಿಂದ ಸತ್ತ್ವಗುಣವು ಉದ್ರಿಕ್ತವಾದ ಪ್ರಜೆಗಳೂ, ವಕ್ಷಸ್ಥಳದಿಂದ ರಜೋಗುಣವು ಉದ್ರಿಕ್ತವಾದವರೂ, ತೊಡೆಗಳಿಂದ ರಜಸ್ಸು ಮತ್ತು ತಮೋಗುಣಗಳು ಉದ್ರಿಕ್ತರಾದವರೂ, ಹಾಗೂ ಪಾದಗಳಿಂದ ತಮೋಗುಣ ಉದ್ರಿಕ್ತರಾದ ಮನುಷ್ಯರೂ ಹುಟ್ಟಿದರು. ನೃಪವರೋತ್ತಮ! ಇವರೇ ಮುಖ, ವಕ್ಷಸ್ಥಳ, ತೊಡೆಗಳು ಮತ್ತು ಪಾದಗಳಿಂದ ಹುಟ್ಟಿದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರರೆಂಬ ನಾಲ್ಕು ವರ್ಣದವರಾದರು.  ಮಹಾಭಾಗ! ಬ್ರಹ್ಮನು ಯಜ್ಞಾದಿ ಸರ್ವ ವೇದೋಕ್ತ ಕರ್ಮಗಳನ್ನು ಸರಿಯಾಗಿ ಮಾಡುವುದಕ್ಕಾಗಿಯೇ ಈ ನಾಲ್ಕು ವರ್ಣಗಳನ್ನು ಸೃಷ್ಟಿಸಿದನು. ಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿದರೆ, ಅವರು ಮಳೆಯನ್ನುಂಟುಮಾಡಿ ಪ್ರಜೆಗಳನ್ನು ತೃಪ್ತಗೊಳಿಸುತ್ತಾರೆ. ಯಜ್ಞಗಳು ಕಲ್ಯಾಣಕ್ಕೆ ಕಾರಣಗಳು. ಸದಾ ಸ್ವಕರ್ಮಗಳಲ್ಲಿ ನಿರತರಾಗಿರುವ, ವಿಶುದ್ಧ ಆಚಾರಗಳನ್ನು ಹೊಂದಿರುವ, ಸನ್ಮಾರ್ಗದಲ್ಲಿ ಹೋಗುತ್ತಿರುವ ಸತ್ಪುರುಷ ನರರು ಆ ಯಜ್ಞಗಳನ್ನು ಮಾಡುತ್ತಾರೆ. ನೃಪ! ವಿಭೋ! ಮನುಷ್ಯರಿಂದಲೇ ಸ್ವರ್ಗ ಮತ್ತು ಮೋಕ್ಷಗಳನ್ನು ಪಡೆಯಲು ಸಾಧ್ಯ. ಮನುಷ್ಯರು ತಮಗಿಷ್ಟವಾದ ಸ್ಥಾನವನ್ನು ಪಡೆದುಕೊಳ್ಳಬಹುದು.

[20]ಪ್ರಜಾಸ್ತಾ ಬ್ರಹ್ಮಣಾ ಸೃಷ್ಟಾಶ್ಚಾತುರ್ವರ್ಣ್ಯವ್ಯವಸ್ಥಿತೌ । ಸಮ್ಯಕ್ಶ್ರದ್ಧಾಸಮಾಚಾರಾಚರಣಾನ್ನೃಪಸತ್ತಮ ।। 127 ।। ಯಥೇಚ್ಛಾಚಾರನಿರತಾಃ ಸರ್ವಬಾಧಾವಿವರ್ಜಿತಾಃ । ಶುದ್ಧಾಂತಃಕರಣಾ ಪುಣ್ಯಾ ಧರ್ಮಾನುಷ್ಠಾನನಿರ್ಮಲಾಃ ।। 128 ।। ಶುದ್ಧೇ ಚ ತಾಸಾಂ ಮನಸಿ ಶುದ್ಧೇಂತಃಕರಣೇ ಹರೌ । ಶುದ್ಧಜ್ಞಾನಂ ಪ್ರಪಶ್ಯಂತಿ ಬ್ರಹ್ಮಾಖ್ಯಂ ಯೇನ ತತ್ಪದಮ್ ।। 129 ।।

ನೃಪಸತ್ತಮ! ಬ್ರಹ್ಮನು ಚಾತುರ್ವರ್ಣ್ಯದ ವ್ಯವಸ್ಥೆಗನುಗುಣವಾಗಿ ಸೃಷ್ಟಿಸಿದ ಪ್ರಜೆಗಳು ಉತ್ತಮ ಶ್ರದ್ಧೆಯುಳ್ಳವರಾಗಿ, ಪರ್ವತದ ಗುಹೆ ಮೊದಲಾದ ಏಕಾಂತ ಸ್ಥಳಗಳಲ್ಲಿ ವಾಸಿಸುತ್ತಾ ಶೀತೋಷ್ಣ-ಹಸಿವು-ಬಾಯಾರಿಕೆ ಮೊದಲಾದ ಬಾಧೆಗಳಿಲ್ಲದೇ, ಶುದ್ಧಮನಸ್ಕರಾಗಿ, ಪುಣ್ಯ ಧರ್ಮಾನುಷ್ಠಾನರಾಗಿ, ನಿರ್ಮಲ, ಶುದ್ಧ ಮನಸ್ಕರಾಗಿ ಜ್ಞಾನಸ್ವರೂಪನಾದ ಹರಿಯು ಅವರ ಮನಸ್ಸಿನಲ್ಲಿ ನೆಲೆಸಲು, ವಿಷ್ಣುವೆಂಬ ಹೆಸರಿನ ಆ ಪರಮ ಪದವಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿದ್ದರು.

[21]ತತಃ ಕಾಲಾತ್ಮಕೋ ಯೋಸೌ ವಿರಿಂಚ್ಯಾವಾಸ ಉಚ್ಯತೇ । ಸಂಸಾರಪಾತಮತ್ಯರ್ಥಂ ಘೋರಮಲ್ಪಾಲ್ಪಸಾರವತ್ ।। 130 ।। ಅಧರ್ಮಬೀಜಭೂತಂ ಚ ಮೋಹಲೋಭಸಮನ್ವಿತಮ್ । ಪ್ರಜಾಸು ತಾಸು ರಾಜೇಂದ್ರ ಜರಾದಿಕ್ರಮಸಾಧಕಮ್ ।। 131 ।। ತತಃ ಸಾ ಸಹಜಾಸಿದ್ಧಿಸ್ತಾಸಾಂ ಚಾತೀವ ಜಾಯತೇ । ರಸೋಲ್ಲಾಸಾದಯಶ್ಚಾನ್ಯಾಸ್ಸಿದ್ಧಯೋಽಷ್ಟೌ[22] ಭವಂತಿ ಯಾಃ ।। 132 ।। ತಾಸು ಕ್ಷೀಣಾಸ್ವಶೇಷಾಸು ವರ್ಧಮಾನೇ ಚ ಪಾತಕೇ । ದ್ವಂದ್ವಾಭಿನವದುಃಖಾರ್ತಾಸ್ತಾ ಭವಂತಿ ತತಃ ಪ್ರಜಾಃ ।। 133 ।। ತತೋ ದುರ್ಗಾಣಿ ತಾಶ್ಚಕ್ರುರ್ವಾರ್ಕ್ಷಂ ಪಾರ್ವತಮೌದಕಮ್ । ಕೃತ್ರಿಮಂ ಚ ತಥಾ ದುರ್ಗಂ ಪುರಂ ಖರ್ವಟಕಾದಿಕಮ್ ।। 134 ।। ಗೃಹಾಣಿ ಚ ಯಥಾನ್ಯಾಯಂ ತೇಷು ಚಕ್ರುಃ ಪುರಾದಿಷು । ಶೀತತಾಪಾದಿಬಾಧಾನಾಂ ಪ್ರಶಮಾಯ ಮಹಾಮತೇ ।। 135 ।। ಪ್ರತೀಹಾರಮಿಮಂ ಕೃತ್ವಾ ಶೀತಾದೇಸ್ತಾಃ ಪ್ರಜಾಃ ಪುನಃ । ವಾರ್ತೋಪಾಯಂ ತತಶ್ಚಕ್ರುರ್ಹಸ್ತಸಿದ್ಧಿಂ ಚ ಕರ್ಮಜಾಮ್ ।। 136 ।।

ನಂತರ ಬ್ರಹ್ಮನ ಉಡುಗೆಯೆಂದು ಹೇಳುವ ಕಾಲವು ಯುಗಧರ್ಮಕ್ಕನುಸಾರವಾಗಿ ಪ್ರಜೆಗಳಲ್ಲಿ ವಿಷಯಾಭಿಲಾಷೆ, ಮಾತ್ಸರ್ಯ ಮೊದಲಾದ ಪುರುಷಾರ್ಥಸಿದ್ಧಿಗೆ ವಿಘ್ನರೂಪವಾದ, ಭಯಂಕರವಾದ ಅಂದರೆ ಅತ್ಯಲ್ಪ ಸುಖವೂ, ಬಹು ದುಃಖವೂ ಇರುವ ಪಾಪಗಳನ್ನು ಹರಡುತ್ತದೆ. ಈ ಪಾಪವು ಅಧರ್ಮಕ್ಕೆ ಕಾರಣ. ಮೋಹಲೋಭಗಳನ್ನು ಕೂಡಿದೆ. ರಾಜೇಂದ್ರ! ಮುಪ್ಪು ಮೊದಲಾದವುಗಳಿಗೆ ಕಾರಣವಾದ ಅದು ಪ್ರಜೆಗಳಲ್ಲಿರುವ ಸಹಜ ಸಿದ್ಧಿಗೆ ವಿಘ್ನವನ್ನುಂಟುಮಾಡುತ್ತದೆ. ಆಗ ಮನುಷ್ಯರಿಗೆ ಕೃತಯುಗದಲ್ಲಿ ಸ್ವಾಭಾವಿಕವಾಗಿಯೇ ಉಂಟಾಗುತ್ತಿದ್ದ, ಹಸಿವು-ಬಾಯಾರಿಕೆ ಮೊದಲಾದ ದುಃಖಗಳನ್ನು ಜಯಿಸುವ ರಸೋಲ್ಲಾಸಾದಿ ಅಷ್ಟಸಿದ್ಧಿಗಳು[23] ಉಂಟಾಗುವುದಿಲ್ಲ. ತ್ರೇತಾಯುಗದಲ್ಲಿ ಜನರಿಗೆ ಅಷ್ಟಸಿದ್ಧಿಶಕ್ತಿಗಳು ಕಡಿಮೆಯಾಗುತ್ತಾ ಬಂದಹಾಗೆ ಪಾಪಗಳು ಹೆಚ್ಚಾಗುತ್ತಾ ಶೀತೋಷ್ಣ ಸುಖದುಃಖಾದಿ ದ್ವಂದ್ವಗಳ ಬಾಧೆಯು ಹೆಚ್ಚಾಗುತ್ತದೆ. ಮಹಾಮತೇ! ನಂತರ ಮನುಷ್ಯರು ಕಳ್ಳರೇ ಮೊದಲಾದವರ ಭಯಪರಿಹಾರಕ್ಕಾಗಿ ಕೃತ್ರಿಮವಾದ ಕಾಡು, ಪರ್ವತ, ನದಿಪ್ರದೇಶಗಳಲ್ಲಿ ದುರ್ಗ-ಕೋಟೆಗಳನ್ನೂ, ಶೀತೋಷ್ಣಗಳ ಪರಿಹಾರಕ್ಕಾಗಿ ಮನೆಗಳನ್ನೂ, ಪುರಿ[24], ಖರ್ವಟ[25] ಮೊದಲಾದವುಗಳನ್ನೂ, ಜೀವನಕ್ಕಾಗಿ ಕೈಗಾರಿಕೆ-ಕೃಷಿ-ವಾಣಿಜ್ಯಗಳನ್ನೂ ಮಾಡಿಕೊಂಡರು.

[26]ವ್ರೀಹಯಶ್ಚ ಯವಾಶ್ಚೈವ ಗೋಧೂಮಾ ಅಣವಸ್ತಿಲಾಃ । ಪ್ರಿಯಂಗುಕೋವಿದಾರಾಶ್ಚ ಕೋರದೂಷಾಸ್ಸತೀನಕಾಃ ।। 137 ।। ಮಷಮುದ್ಗಾ ಮಸೂರಾಶ್ಚ ನಿಷ್ಪಾವಾಶ್ಚ ಕುಲುತ್ಥಕಾಃ । ಆಢಕ್ಯಶ್ಚಣಕಾಶ್ಚೈವ ಶಣಾಸ್ಸಪ್ತದಶ ಸ್ಮೃತಾಃ ।। 138 ।। ಇತ್ಯೇತಾ ಓಷಧೀನಾಂ ತು ಗ್ರಾಮ್ಯಾಣಾಂ ಜಾತಯೋ ನೃಪ । ಓಷಧ್ಯೋ ಯಾಜ್ಞಿಯಾಶ್ಚೈವ ಗ್ರಾಮ್ಯಾರಣ್ಯಾಶ್ಚತುರ್ದಶ ।। 139 ।। ವ್ರೀಹಯಸ್ಸಯವಾ ಮಾಷಾ ಗೋಧೂಮಾ ಅಣವಸ್ತಿಲಾಃ । ಪ್ರಿಯಂಗುಸಪ್ತಮಾ ಹ್ಯೇತಾ ಅಷ್ಟಮಾಸ್ತು ಕುಲುತ್ಥಕಾಃ ।। 140 ।। ಶ್ಯಾಮಾಕಸ್ತ್ವಥ ನೀವಾರಾ ಜರ್ತಿಲಾಶ್ಚ ಗವೇಧುಕಾಃ । ತಥಾ ವೇಣುಯವಾಃ ಪ್ರೋಕ್ತಾಸ್ತದ್ವನ್ಮರ್ಕಟಕಾ ನೃಪ ।। 141 ।। ಗ್ರಾಮ್ಯಾರಣ್ಯಾಃ ಸ್ಮೃತಾ ಹ್ಯೇತಾ ಓಷಧ್ಯಶ್ಚ ಚತುರ್ದಶ । 

ವ್ರೀಹಿ (ಅಕ್ಕಿ), ಯವೆ (ಜೋಳ, ಬಾರ್ಲಿ), ಗೋಧೂಮ (ಗೋಧಿ/ಗೋದಿ), ಅಣವ (ಸಣ್ಣ ಜೋಳ/ಬರಗು), ತಿಲ (ಎಳ್ಳು), ಪ್ರಿಯಂಗು (ಒಂದು ಧಾನ್ಯ ಪ್ರಭೇದ) ಕೋವಿದಾರ, ಕೋರದೂಷ, ಸತೀನಕ, ಮಷ (ಉದ್ದು), ಉದ್ಗ (ಹೆಸರು), ಮಸೂರ (ಮಸೂರದ ಬೀಜ), ನಿಷ್ಪಾವಾ (ಅವರೆಕಾಳು), ಕುಲುತ್ಥಕ (ಹುರಿಗಡಲೆ), ಅಢಕ್ಯ (ಒಂದು ವಿಧದ ಕಡಲೆ), ಚಣಕ (ಕಡಲೆ), ಮತ್ತು ಶಣ (ಅಲಸಿ, ಜ್ಯೂಟ್ ಬೀಜ) ಇವು ಒಟ್ಟು ಹದಿನೇಳು ವಿಧದ ಧಾನ್ಯಗಳು ಎಂದು ಮುನಿಗಳು ಹೇಳಿದ್ದಾರೆ. ನೃಪ! ಇವುಗಳೆಲ್ಲ ಗ್ರಾಮ್ಯ (ಮಾನವನ ಬಳಕೆಯ) ಧಾನ್ಯಗಳ ಜಾತಿಗಳು. ಇವುಗಳಲ್ಲಿ ಕೆಲವನ್ನು ಯಜ್ಞಗಳಿಗೆ ಬಳಸುತ್ತಾರೆ. ಒಟ್ಟು ಗ್ರಾಮ್ಯ ಮತ್ತು ಅರಣ್ಯ ಓಷಧಿಗಳು (ಧಾನ್ಯಗಳು) ನಾಲ್ಕು ವರ್ಗಗಳಾಗಿ ಹೇಳಲ್ಪಟ್ಟಿವೆ: ವ್ರೀಹಿ, ಯವೆ, ಮಾಷ, ಗೋಧೂಮ, ಅಣವ, ತಿಲ, ಪ್ರಿಯಂಗು ಇವು ಏಳು ಮುಖ್ಯಧಾನ್ಯಗಳು. ಎಂಟನೆಯದು ಕುಲುತ್ಥಕ. ಶ್ಯಾಮಾಕ (ಕಂಪು ಅಥವಾ ಸಮೈ), ನೀವಾರ (ಕಾಡು ಅಕ್ಕಿ), ಅಜರ್ತಿಲ (ಒಂದು ಕಾಡು ಧಾನ್ಯ), ಗವೇಧುಕ (ಕಾಡು ಯವೆ), ವೇಣುಯವ (ಬಿದಿರಿನ ಅಕ್ಕಿ), ಮತ್ತು ಮರ್ಕಟಕ (ಒಂದು ಕಾಡುಕಾಳು) – ಇವು ಅರಣ್ಯ ಅಥವಾ ಕಾಡಿನ ಧಾನ್ಯಗಳ ವರ್ಗಕ್ಕೆ ಸೇರಿವೆ. ಹೀಗೆ ಗ್ರಾಮ್ಯ ಮತ್ತು ಅರಣ್ಯ ಸೇರಿ ಒಟ್ಟು 14 ವಿವಿಧ ಧಾನ್ಯ/ಓಷಧಿಗಳು ಪ್ರಸ್ತಾಪವಾಗಿವೆ.

ಯಜ್ಞನಿಷ್ಪತ್ತಯೇ ತದ್ವತ್ತಥಾಽಽಸಾಂ ಹೇತುರುತ್ತಮಃ ।। 142 ।। ಏತಾಶ್ಚ ಸಹಯಜ್ಞೇನ ಪ್ರಜಾನಾಂ ಕಾರಣಂ ಪರಮ್ । ಏತೇರೈವ ಮಹಾಪ್ರಾಜ್ಞಸ್ತತೋ ಯಜ್ಞಾನ್ವಿತನ್ವತೇ ।। 143 ।। ಅಹನ್ಯಹನ್ಯನುಷ್ಠಾನಂ ಯಜ್ಞಾನಾಂ ಪಾರ್ಥಿವೋತ್ತಮ । ಉಪಕಾರಂ ಪರಂ ಪುಂಸಾಂ ಕ್ರಿಯಮಾಣಂ ಚ ಶಾಂತಿದಮ್ ।। 144 ।। ಯೇಷಾಂ ಚಕಾರ ಸೃಷ್ಟೋಽಸೌ ಪರಬಿಂದುರ್ಮಹಾಮತೇ । ಮರ್ಯಾದಾಂ ಸ್ಥಾಪಯಾಮಾಸ ಯಥಾಸ್ಥಾನಂ ಯಥಾಗುಣಮ್ ।। 145 ।। ವರ್ಣಾನಾಮಾಶ್ರಮಾಣಾಂ ಚ ಧರ್ಮಾಧರ್ಮಭೃತಾಂವರ । ಲೋಕಾನಾಂ ಸರ್ವವರ್ಣಾನಾಂ ಸಮ್ಯಗ್ಧರ್ಮಾನುಪಾಲಿನಾಮ್ ।। 146 ।। ಪ್ರಾಜಾಪತ್ಯಂ ಬ್ರಾಹ್ಮಣಾನಾಂ ಸ್ಮೃತಂ ಸ್ಥಾನಂ ತು ಪಾರ್ಥಿವ । ಸ್ಥಾನಮೈಂದ್ರಂ ಕ್ಷತ್ರಿಯಾಣಾಂ ಸಂಗ್ರಾಮೇಷ್ವನಿವರ್ತಿನಾಮ್ ।। 147 ।। ವೈಶ್ಯಾನಾಂ ಮಾರುತಂ ಸ್ಥಾನಂ ಸ್ವಧರ್ಮಮನುವರ್ತಿನಾಮ್ । ಗಾಂಧರ್ವಂ ಸರ್ವಶೂದ್ರಾಣಾಂ ಪರಿಚರ್ಯಾನುವರ್ತಿನಾಮ್ ।। 148 ।।

ಇವೆಲ್ಲವೂ ಯಜ್ಞದಲ್ಲಿ ಬಳಸಲಾಗುತ್ತವೆ. ಇವೇ ಯಜ್ಞಕ್ಕೆ ಉತ್ತಮ ಕಾರಣಗಳು. ಯಜ್ಞಗಳೊಂದಿಗೆ ಇವು ಪ್ರಜೆಗಳಿಗೆ ಪರಮ ಕಾರಣವಾಗಿದೆ. ಮಹಾಪ್ರಾಜ್ಞ! ಯಜ್ಞಗಳಲ್ಲಿ ಇವುಗಳನ್ನೇ ಬಳಸುತ್ತಾರೆ. ಪಾರ್ಥಿವೋತ್ತಮ! ಪ್ರತಿದಿನವೂ ಯಜ್ಞಗಳ ಅನುಷ್ಠಾನ ಮಾಡುವುದರಿಂದ ಮನುಷ್ಯರಿಗೆ ಪರಮ ಉಪಕಾರವಾಗುತ್ತದೆ ಮತ್ತು ಶಾಂತಿಯು ದೊರೆಯುತ್ತದೆ. ಮಹಾಮತೇ! ಬ್ರಹ್ಮನು ಅಮೃತಬಿಂದು ಸ್ವರೂಪವಾದ ಯಜ್ಞಗಳ ಸೃಷ್ಟಿಯನ್ನು ಮಾಡಿದನು ಮತ್ತು ಯಥಾಸ್ಥಾನಗಳಲ್ಲಿ ಯಥಾಗುಣವಾಗಿ ಮರ್ಯಾದೆಗಳನ್ನು ಸ್ಥಾಪಿಸಿದನು. ಧರ್ಮಭೃತರಲ್ಲಿ ಶ್ರೇಷ್ಠ! ವರ್ಣಗಳ ಮತ್ತು ಆಶ್ರಮಗಳ ಧರ್ಮ-ಅಧರ್ಮಗಳನ್ನೂ, ಲೋಕಗಳಲ್ಲಿ ಸರ್ವವರ್ಣಗಳು ಚೆನ್ನಾಗಿ ಧರ್ಮಪಾಲನೆಯನ್ನು ಮಾಡುವಂತಾಯಿತು. ಪಾರ್ಥಿವ! ವರ್ಣಾಶ್ರಮಧರ್ಮಗಳನ್ನು ಪಾಲಿಸುವ ಬ್ರಾಹ್ಮಣರಿಗೆ ಪ್ರಾಜಾಪತ್ಯ ಸ್ಥಾನವು ದೊರೆಯುತ್ತದೆ. ಸಂಗ್ರಾಮದಲ್ಲಿ ಹಿಂದೆ ಸರಿಯದ ಕ್ಷತ್ರಿಯರಿಗೆ ಇಂದ್ರನ ಸ್ಥಾನವು ದೊರೆಯುತ್ತದೆ. ಸ್ವಧರ್ಮವನ್ನು ಅನುಸರಿಸುವ ವೈಶ್ಯರಿಗೆ ಮಾರುತನ ಸ್ಥಾನವು ಲಭಿಸುತ್ತದೆ. ಪರಿಚರ್ಯೆಯನ್ನು ಮಾಡುವ ಸರ್ವಶೂದ್ರರಿಗೂ ಗಾಂಧರ್ವಸ್ಥಾನವು ದೊರೆಯುತ್ತದೆ.

ಅಷ್ಟಾಶೀತಿಸಹಸ್ರಾಣಾಂ ಯತೀನಾಮೂರ್ಧ್ವರೇತಸಾಮ್ । ಸ್ಮೃತಂ ಯೇಷಾಂ ತು ಯತ್ಸ್ಥಾನಂ ತದೇವ ಗುರುವಾಸಿನಾಮ್ ।। 149 ।। ಸಪ್ತರ್ಷೀಣಾಂ ಚ ಯತ್ಸ್ಥಾನಂ ಸ್ಮೃತಂ ತದ್ವೈ ವನೌಕಸಾಮ್ । ಪ್ರಾಜಾಪತ್ಯಂ ಗೃಹಸ್ಥಾನಾಂ ನ್ಯಾಸಿನಾಂ ಬ್ರಹ್ಮಸಂಜ್ಞಿತಮ್ ।। 150 ।। ಯೋಗಿನಾಮಮೃತಂ ಸ್ಥಾನಂ ಬ್ರಹ್ಮಣಃ ಪರಮಂ ಪದಂ । ಏಕಾಂತಿನಸ್ಸದೋದ್ಯುಕ್ತಾ ಧ್ಯಾಯಿನೋ ಯೋಗಿನೋ ಹಿ ಯೇ ।। 151 ।। ತೇಷಾಂ ತತ್ಪರಮಂ ಸ್ಥಾನಂ ಯತ್ತತ್ಪಶ್ಯಂತಿ ಸೂರಯಃ । ಗತಾಗತಾ ನಿವರ್ತಂತೇ ಚಂದ್ರಾದಿತ್ಯಾದಯೋ ಗ್ರಹಾಃ ।। 152 ।। ಅದ್ಯಾಪಿ ನೋ ನಿವರ್ತಂತೇ ಪ್ರಾಣಾಯಾಮಪರಾಯಣಾಃ

ಊರ್ಧ್ವರೇತಸರಾದ 88 ಸಾವಿರ ಯತಿಗಳಿಗೆ ಯಾವ ಸ್ಥಾನವು ನಿಯತವೋ ಆ ಸ್ಥಾನವು ಗುರುಕುಲದಲ್ಲಿ ವಾಸಿಸುವ ಬ್ರಹ್ಮಚಾರಿಗಳಿಗೆ ದೊರೆಯುತ್ತದೆ. ವಾನಪ್ರಸ್ಥರಿಗೆ ಸಪ್ತರ್ಷಿಗಳ ಸ್ಥಾನವೂ, ಗೃಹಸ್ಥರಿಗೆ ಪ್ರಜಾಪತಿಯ ಸ್ಥಾನವೂ ಮತ್ತು ಸಂನ್ಯಾಸಿಗಳಿಗೆ ಬ್ರಹ್ಮಲೋಕವೂ ದೊರೆಯುತ್ತವೆ. ಏಕಾಂತಿಗಳು, ಧ್ಯಾನಿಗಳು ಮತ್ತು ಯೋಗಿಗಳಿಗೆ ಅಮೃತಸ್ಥಾನವಾದ ಬ್ರಹ್ಮನ ಪರಮ ಪದವು ಲಭಿಸುತ್ತದೆ. ಅಂತಹ ಯೋಗಿಗಳಿಗೆ ವಿದ್ವಾಂಸರಿಗೂ ಗೋಚರವಾಗದ ಸ್ಥಾನವು ಲಭಿಸುತ್ತದೆ. ಸೂರ್ಯ-ಚಂದ್ರ ಮೊದಲಾದ ಗ್ರಹಗಳೂ ಹೋಗುತ್ತವೆ ಮತ್ತು ಬರುತ್ತವೆ. ಹುಟ್ಟುತ್ತವೆ ಮತ್ತು ಸಾಯುತ್ತವೆ. ಆದರೆ ಪ್ರಾಣಾಯಾಮ ಪರಾಯಣರಾದ ಯೋಗಿಗಳು ಇದೂವರೆಗೂ ಅವರ ಸ್ಥಾನದಿಂದ ಹಿಂದಿರುಗಿಯೇ ಇಲ್ಲ.

ತಾಮಿಸ್ರಮಂಧತಾಮಿಸ್ರಂ ಮಹಾರೌರವರೌರವಮ್ ।। 153 ।। ಅಸಿಪತ್ರವನಂ ಘೋರಂ ಕಾಲಸೂತ್ರಮವೀಚಿಮತ್ । ವಿನಿಂದಕಾನಾಂ ವೇದಸ್ಯ ಯಜ್ಞವ್ಯಾಘಾತಕಾರಿಣಾಮ್ ।। 154 ।। ಸ್ಥಾನಮೇತತ್ಸಮಾಖ್ಯಾತಂ ಸ್ವಧರ್ಮತ್ಯಾಗಿನಶ್ಚ ಯೇ

ವೇದವನ್ನು ನಿಂದಿಸುವವರಿಗೂ, ಯಜ್ಞಗಳನ್ನು ನಾಶ ಪಡಿಸುವವರಿಗೂ, ಮತ್ತು ಸ್ವಧರ್ಮವನ್ನು ತ್ಯಜಿಸುವವರಿಗೂ ತಾಮಿಸ್ರ[27], ಅಂಧತಾಮಿಸ್ರ[28], ರೌರವ[29], ಮಹಾರೌರವ[30], ಘೋರವಾದ ಅಸಿಪತ್ರವನ[31], ಕಾಲಸೂತ್ರ[32] ಮತ್ತು ಅವೀಚಿ[33] ಮೊದಲಾದ ನರಕಗಳಿರುತ್ತವೆ.

ತತೋಽಭಿಧ್ಯಾಯತಸ್ತಸ್ಯ ಜಜ್ಞಿರೇ ಮಾನಸೀ ಪ್ರಜಾಃ ।। 155 ।। ತಚ್ಛರೀರಸಮುತ್ಪನ್ನೈಃ ಕಾಯಸ್ಥೈಃ ಕರಣೈಸ್ಸಹ । ಕ್ಷೇತ್ರಜ್ಞಾಸ್ಸಮವರ್ತಂತ ಗಾತ್ರೇಭ್ಯಸ್ತಸ್ಯ ಧೀಮತಃ ।। 156 ।। ತೇ ಸರ್ವೇ ಸಮವರ್ತಂತ ಯೇ ಮಯಾ ಪ್ರಾಗುದಾಹೃತಾಃ । ದೇವಾದ್ಯಾಃ ಸ್ಥಾವರಾದ್ಯಾಶ್ಚ ತ್ರೈಗುಣ್ಯವಿಷಯೇಸ್ಥಿತಾಃ ।। 157 ।। ಏವಂ ಭೂತಾನಿ ಸೃಷ್ಟಾನಿ ಸ್ಥಾವರಾಣಿ ಚರಾಣಿ ಚ । ಯದಾಸ್ಯ ತಾಃ ಪ್ರಜಾಸ್ಸರ್ವಾ ನ ವ್ಯವರ್ಧಂತ ಧೀಮತಃ ।। 158 ।। ಅಥಾನ್ಯಾನ್ಮಾನಸಾನ್ಪುತ್ರಾನ್ಸದೃಶಾನಾತ್ಮನಾಸೃಜತ್ । ಭೃಗುಂ ಚ ಪುಲಹಂ ಚೈವ ಕ್ರತುಮಂಗಿರಸಂ ತಥಾ ।। 159 ।। ಮರೀಚಿಂ ದಕ್ಷಮತ್ರಿಂ ಚ ವಸಿಷ್ಠಂ ಚೈವಮಾನಸಾನ್ । ನವಬ್ರಹ್ಮಾಣ ಇತ್ಯೇತೇಪುರಾಣೇ ನಿಶ್ಚಯಂ ಗತಾಃ ।। 160 ।। ಸನಂದನಾದಯೋ ಯೇ ಚ ಪೂರ್ವಂ ಸೃಷ್ಟಾಶ್ಚ ವೇಧಸಾ । ನ ತೇ ಲೋಕೇಷ್ವಸಜ್ಯಂತ ನಿರಪೇಕ್ಷಾಃ ಪ್ರಜಾಸು ತೇ ।। 161 ।। ಸರ್ವೇ ಹ್ಯಾಗತವಿಜ್ಞಾನಾ ವೀತರಾಗಾ ವಿಮತ್ಸರಾಃ । ತೇಷ್ವೇವಂ ನಿರಪೇಕ್ಷೇಷು ಲೋಕಸೃಷ್ಟೌ ಮಹಾತ್ಮನಃ ।। 162 ।।

ಬ್ರಹ್ಮನ ಧ್ಯಾನದ ಫಲವಾಗಿ, ಅವನ ಮನಸ್ಸಿನಿಂದ ಮಾನಸ ಸೃಷ್ಟಿಗಳು (ಚೈತನ್ಯಜೀವಿಗಳು) ಹುಟ್ಟಿದುವು. ಅವನ ದೇಹದಿಂದ ಉತ್ಪನ್ನವಾದ ಇಂದ್ರಿಯಗಳು ಹಾಗೂ ಅಂಗಗಳ ಸಹಿತವಾಗಿ, ಚೈತನ್ಯರೂಪದ ಕ್ಷೇತ್ರಜ್ಞರು (ಜೀವಾತ್ಮರು) ಅವನ ಅಂಗಗಳಿಂದ ಪ್ರಕಟವಾದರು. ನಾನು ಮೊದಲೇ ಹೇಳಿದಂತೆ ದೇವಾದಿ ಸ್ಥಾವರಾದಿ ಈ ಎಲ್ಲ ಸೃಷ್ಟಿಗಳೂ ತ್ರಿಗುಣಾತ್ಮಿಕ ವಿಷಯಗಳಲ್ಲಿ ನೆಲೆಸಿ ವರ್ತಿಸುತ್ತಿದ್ದರು. ಅವನಿಂದ ಹುಟ್ಟಿದ ಈ ಎಲ್ಲ ಪ್ರಜೆಗಳೂ – ಸ್ಥಾವರ-ಚರ ಭೂತಗಳೂ, ವೃದ್ಧಿಹೊಂದಲಿಲ್ಲ. ಇದನ್ನು ನೋಡಿ ಅವನು ತನಗೆ ಸಮಾನರಾದ ಅನ್ಯ ಮಾನಸ ಪುತ್ರರನ್ನು ಸೃಷ್ಟಿಸಿದನು: ಭೃಗು, ಪುಲಹ, ಕ್ರತು, ಅಂಗಿರಸ, ಮರೀಚಿ, ದಕ್ಷ, ಅತ್ರಿ, ಮತ್ತು ವಸಿಷ್ಠ. ಈ ಮಾನಸಪುತ್ರರು ಪುರಾಣಗಳಲ್ಲಿ ನವಬ್ರಹ್ಮರು ಎಂದು ಪ್ರಖ್ಯಾತರಾಗಿದ್ದಾರೆ. ಬ್ರಹ್ಮನು ಮೊದಲೇ ಸೃಷ್ಟಿಸಿದ್ದ ಸನಂದಾದಿಗಳು ಪ್ರಜೆಗಳನ್ನು ಅಪೇಕ್ಷಿಸದೇ ಲೋಕದಲ್ಲಿ ಮಕ್ಕಳನ್ನು ಸೃಷ್ಟಿಸಲಿಲ್ಲ. ಅವರೆಲ್ಲರಿಗೂ ಹುಟ್ಟಿದೊಡನೆಯೇ ಜ್ಞಾನೋದಯವಾಯಿತು. ವೀತರಾಗರಾಗಿ, ವಿಮತ್ಸರಾಗಿದ್ದ ಆ ಮಹಾತ್ಮರು ಲೋಕಸೃಷ್ಟಿಯಲ್ಲಿ ಅನಾಸಕ್ತರಾದರು.

ಬ್ರಹ್ಮಣೋಭೂನ್ಮಹಾನ್ಕ್ರೋಧಸ್ತ್ರೈಲೋಕ್ಯದಹನಕ್ಷಮಃ । ತಸ್ಯ ಕ್ರೋಧಾತ್ಸಮುದ್ಭೂತಂ ಜ್ವಾಲಾಮಾಲಾವದೀಪಿತಮ್ ।। 163 ।। ಬ್ರಹ್ಮಣಸ್ತು ತದಾ ಜ್ಯೋತಿಸ್ತ್ರೈಲೋಕ್ಯಮಖಿಲಂ ದಹತ್ । ಭ್ರುಕುಟೀಕುಟಿಲಾತ್ತಸ್ಯ ಲಲಾಟಾತ್ಕ್ರೋಧದೀಪಿತಾತ್ ।। 164 ।। ಸಮುತ್ಪನ್ನಸ್ತದಾ ರುದ್ರೋ ಮಧ್ಯಾಹ್ನಾರ್ಕಸಮಪ್ರಭಃ । ಅರ್ಧನಾರೀನರವಪುಃ ಪ್ರಚಂಡೋಽತಿಶರೀರವಾನ್ ।। 165 ।। ವಿಭಜಾತ್ಮಾನಮಿತ್ಯುಕ್ತ್ವಾ ತಂ ಬ್ರಹ್ಮಾಂತರ್ದಧೇ ತತಃ । ತಥೋಕ್ತೋಽಸೌ ದ್ವಿಧಾ ಸ್ತ್ರೀತ್ವಂ ಪುರುಷತ್ವಂ ತಥಾಕರೋತ್ ।। 166 ।। ಬಿಭೇದ ಪುರುಷತ್ವಂ ಚ ದಶಧಾ ಚೈಕಧಾ ಚ ಸಃ । ಸೌಮ್ಯಾಸೌಮ್ಯೈಸ್ತಥಾ ರೂಪೈಃ ಶಾಂತೈಃ ಸ್ತ್ರೀತ್ವಂ ಚ ಸ ಪ್ರಭುಃ ।। 167 ।। ಬಿಭೇದ ಬಹುಧಾ ಚೈವ ಸ್ವರೂಪೈರಸಿತೈಸ್ಸಿತೈಃ

ಅದನ್ನು ನೋಡಿ ಬ್ರಹ್ಮನಿಗೆ ಮೂರುಲೋಕಗಳನ್ನು ಸುಡುವ ಸಾಮರ್ಥ್ಯವಿದ್ದ ಮಹಾಕ್ರೋಧವುಂಟಾಯಿತು. ಬ್ರಹ್ಮನ ಕೋಪದಿಂದ ಹುಟ್ಟಿದ ಬೆಂಕಿಯ ಜ್ವಾಲಾಮಾಲೆಯು ಮೂರು ಲೋಕಗಳನ್ನು ಸುಟ್ಟುಬಿಟ್ಟಿತು. ಕೋಪದಿಂದ ಹುಬ್ಬು ಗಂಟುಕಟ್ಟಿದ್ದ ಬ್ರಹ್ಮನ ಹಣೆಯಿಂದ ಮಧ್ಯಾಹ್ನದ ಸೂರ್ಯನಂತೆ ಜ್ವಲಿಸುತ್ತಿದ್ದ, ಅರ್ಧ ಶರೀರವು ನಾರಿ ಮತ್ತು ಇನ್ನು ಅರ್ಧ ಶರೀರವು ನರನಾಗಿದ್ದ, ಅತಿ ದೊಡ್ಡ ಕಾಯದ ಪ್ರಚಂಡ ರುದ್ರನು ಉತ್ಪನ್ನನಾದನು. “ನಿನ್ನನ್ನು ನೀನೇ ವಿಭಜನೆ ಮಾಡಿಕೋ!” ಎಂದು ಹೇಳಿ ಬ್ರಹ್ಮನು ಅಂತರ್ಧಾನನಾದನು. ಹೀಗೆ ಹೇಳಲು ಅವನು ತನ್ನನ್ನು ಸ್ತ್ರೀ-ಪುರುಷನೆಂದು ಎರಡು ಭಾಗವನ್ನಾಗಿ ಮಾಡಿಕೊಂಡನು. ನಂತರ ಅವನು ಪುರುಷತ್ವವನ್ನು ಇನ್ನೂ ಹನ್ನೊಂದು ಭಾಗಗಳನ್ನಾಗಿ ಮಾಡಿಕೊಂಡನು. ಮತ್ತು ಆ ಪ್ರಭುವು ಶಾಂತವಾಗಿದ್ದ ಸ್ತ್ರೀಶರೀರವನ್ನು ಕಪ್ಪು-ಬಿಳಿಪು ಮೊದಲಾದ ನಾನಾ ಬಣ್ಣಗಳಿರುವ ಸೌಮ್ಯ-ಕ್ರೂರ ಮೊದಲಾದ ಅನೇಕ ರೂಪಗಳನ್ನಾಗಿ ವಿಭಜಿಸಿದನು. 

ತತೋ ಬ್ರಹ್ಮಾ ಸ್ವಸಂಭೂತಂ ಸರ್ವಂ ಸ್ವಾಯಂಭುವಂ ಪ್ರಭುಮ್ ।। 168 ।। ಆತ್ಮಾನಮೇವ ಕೃತವಾನ್ಪ್ರಜಾಪತ್ಯೇ ಮನುಂ ನೃಪ । ಶತರೂಪಾಂ ಚ ತಾಂ ನಾರೀಂ ತಪೋನಿರ್ಧೂತಕಲ್ಮಷಾಮ್ ।। 169 ।। ಸ್ವಾಯಂಭುವೋ ಮನುರ್ನಾಮ ಪತ್ನೀತ್ವೇ ಜಗೃಹೇ ಪ್ರಭುಃ । ತಸ್ಮಾಚ್ಚ ಪುರುಷಾದ್ದೇವೀಸ್ವರೂಪಾಚ್ಚ ವ್ಯಜಾಯತ ।। 170 ।। ಪ್ರಿಯವ್ರತೋತ್ತಾನಪಾದಪ್ರಸೂತ್ಯಾಕೂತಿಸಂಜ್ಞಿತಮ್ । ದದೌ ಪ್ರಸೂತಿಂ ದಕ್ಷಾಯ ಆಕೂತಿಂ ರುಚಯೇ ಪುರಾ ।। 171 ।। ಪ್ರಜಾಪತಿಸ್ಸ ಜಗ್ರಾಹ ತಯೋರ್ಜಜ್ಞೇ ಸದಕ್ಷಿಣಃ । ಪುತ್ರೋ ಯಜ್ಞೋ ಮಹಾಭಾಗ ದಂಪತ್ಯೋರ್ಮಿಥುನಂ ತತಃ ।। 172 ।। ಯಜ್ಞಸ್ಯ ದಕ್ಷಿಣಾಯಾಂ ತು ಪುತ್ರಾ ದ್ವಾದಶ ಜಜ್ಞಿರೇ । ಯಾಮಾ ಇತಿ ಸಮಾಖ್ಯಾತಾ ದೇವಾಃ ಸ್ವಾಯಂಭುವೇ ಮನೌ ।। 173 ।।

ನಂತರ ಬ್ರಹ್ಮನು ತನ್ನಿಂದಲೇ ಉತ್ಪನ್ನನಾದ ಸ್ವಾಯಂಭುವ ಪ್ರಭು ಮನುವನ್ನು ಪ್ರಜಾಪತಿಯ ಅಧಿಕಾರದಲ್ಲಿ ನಿಯಮಿಸಿದನು. ಪ್ರಭು ಸ್ವಾಯಂಭುವ ಮನುವು ತಪಸ್ಸಿನಿಂದ ಪಾಪಕಲ್ಮಷಗಳನ್ನು ತೊಳೆದುಕೊಂಡಿದ್ದ ಶತರೂಪಾ ಎಂಬ ನಾರಿಯನ್ನು[34] ಪತ್ನಿಯನ್ನಾಗಿ ಸ್ವೀಕರಿಸಿದನು. ಆಗ ಪುರುಷನಿಂದ ಆ ದೇವಿಯಲ್ಲಿ ಸ್ವರೂಪರಾದ ನಾಲ್ವರು ಪುತ್ರರು ಜನಿಸಿದರು: ಪ್ರಿಯವ್ರತ, ಉತ್ತಾನಪಾದ, ಪ್ರಸೂತಿ ಮತ್ತು ಅಕೂತಿ. ಹಿಂದೆ ಪ್ರಸೂತಿಯನ್ನು ದಕ್ಷನಿಗೂ ಅಕೂತಿಯನ್ನು ರುಚನಿಗೂ ಕೊಟ್ಟರು. ಪ್ರಜಾಪತಿಯು ಸ್ವೀಕರಿಸಿದ ಶತರೂಪೆಯಲ್ಲಿ ಯಜ್ಞನೆಂಬ ಮಗನೂ, ದಕ್ಷಿಣೆಯೆಂಬ ಮಗಳೂ ಹುಟ್ಟಿದರು. ಅವರಿಬ್ಬರೂ ಗಂಡ-ಹೆಂಡಿರಾದರು. ಯಜ್ಞನಿಗೆ ದಕ್ಷಿಣೆಯಲ್ಲಿ ಹನ್ನೆರಡು ಪುತ್ರರು ಹುಟ್ಟಿದರು. ಇವರೆಲ್ಲರೂ ಯಾಮಾ ಎಂದು ಖ್ಯಾತರಾದ ದೇವತೆಗಳು – ಸ್ವಾಯಂಭುವ ಮನುವಿನ ಸಂತಾನಗಳು.

ಪ್ರಸೂತ್ಯಾಂ ಚ ತದಾ ಚಾತಾಶ್ಚತ್ವಾರೋ ವಿಂಶತಿಸ್ತಥಾ । ಸಸರ್ಜ ಕನ್ಯಾಸ್ತಾಸಾಂ ತು ಸಮ್ಯಙ್ನಾಮಾನಿ ಮೇ ಶೃಣು ।। 174 ।। ಶ್ರದ್ಧಾ ಲಕ್ಷ್ಸೀರ್ಧೃತಿಃ ಪುಷ್ಟಿಸ್ತುಷ್ಟಿರ್ಮೇಧಾ ಕ್ರಿಯಾ ತಥಾ । ಬುದ್ಧಿರ್ಲಜ್ಜಾವಪುಃ ಶಾಂತಿಃ ಸಿದ್ಧಿಃ ಕೀರ್ತಿಸ್ತ್ರಯೋದಶೀ ।। 175 ।। ಪತ್ನ್ಯರ್ಥಂ ಪ್ರತಿಜಗ್ರಾಹ ಧರ್ಮೋ ದಾಕ್ಷಾಯಿಣೀಂ ಪ್ರಭುಃ । ತಾಭ್ಯಸ್ಸೃಷ್ಟಾ ಯವೀಯಸ್ಯ ಏಕಾದಶ ಸುಲೋಚನಾಃ ।। 176 ।। ಖ್ಯಾತಿಶ್ಶ್ಯಾಂತ್ಯಥ ಸಂಭೂತಿಃ ಸ್ಮೃತಿಃ ಪ್ರೀತಿಃ ಕ್ಷಮಾ ತಥಾ । ಸನ್ನತಿಶ್ಚಾನಸೂಯಾ ಚ ಊರ್ಜಾ ಸ್ವಾಹಾ ಸ್ವಧಾ ತಥಾ ।। 177 ।। ಭೃಗುರ್ಭಗೋ ಮರೀಚಿಶ್ಚ ತಥಾ ಚೈವಾಂಗಿರಾ ಮುನಿಃ । ಅಹಂ ಚ ಪುಲಹಶ್ಚೈವ ಕ್ರತುಶ್ಚರ್ಷಿವರಸ್ತಥಾ ।। 178 ।। ಅತ್ರಿರ್ವಸಿಷ್ಠೋ ವಹ್ನಿಶ್ಚ ಪಿತರಶ್ಚ ಯಥಾಕ್ರಮಮ್ । ಖ್ಯಾತ್ಯಾದ್ಯಾ ಜಗೃಹುಃ ಕನ್ಯಾ ಮುನಯೋ ರಾಜಸತ್ತಮ ।। 179 ।।

ಪ್ರಸೂತಿಯಲ್ಲಿ ದಕ್ಷನಿಂದ ಇಪ್ಪತ್ನಾಲ್ಕು ಕನ್ಯೆಯರು ಹುಟ್ಟಿದರು. ಅವರ ಹೆಸರುಗಳನ್ನು ಕೇಳು. ಶ್ರದ್ಧೆ, ಲಕ್ಷ್ಮಿ, ಧೃತಿ, ಪುಷ್ಟಿ, ತುಷ್ಟಿ, ಮೇಧಾ, ಕ್ರಿಯಾ, ಬುದ್ಧಿ, ಲಜ್ಜಾ, ವಪು, ಶಾಂತಿ, ಸಿದ್ಧಿ, ಮತ್ತು ಹದಿಮೂರನೆಯವಳು ಕೀರ್ತಿ. ದಕ್ಷನ ಮಕ್ಕಳಾದ ಈ ಹದಿಮೂರು ದಾಕ್ಷಾಯಣಿಯರನ್ನು ಪ್ರಭು ಧರ್ಮನು ಪತ್ನಿಯರನ್ನಾಗಿ ಸ್ವೀಕರಿಸಿದನು. ಕಿರಿಯವಳಾದ ಕೀರ್ತಿಯಲ್ಲಿ ಹನ್ನೊಂದು ಸುಲೋಚನ ಕನ್ಯೆಯರು ಹುಟ್ಟಿದರು: ಖ್ಯಾತಿ, ಶಾಂತಿ, ಸಂಭೂತಿ, ಸ್ಮೃತಿ, ಪ್ರೀತಿ, ಕ್ಷಮಾ, ಸನ್ನತಿ, ಅನಸೂಯಾ, ಊರ್ಜಾ, ಸ್ವಾಹಾ ಮತ್ತು ಸ್ವಧಾ. ರಾಜಸತ್ತಮ! ಋಷಿಶ್ರೇಷ್ಠರಾದ ಭೃಗು, ಭಗ, ಮರೀಚಿ, ಅಂಗೀರಸ ಮುನಿ, ನಾನು, ಪುಲಹ, ಕ್ರತು, ಅತ್ರಿ, ವಸಿಷ್ಠ, ವಹ್ನಿ ಮತ್ತು ಪಿತೃಗಳು – ಈ ಮುನಿಗಳು ಯಥಾಕ್ರಮವಾಗಿ ಖ್ಯಾತಿಯೇ ಮೊದಲಾದ ಕನ್ಯೆಯರನ್ನು ಪತ್ನಿಯರನ್ನಾಗಿ ಸ್ವೀಕರಿಸಿದರು.[35]

ಶ್ರದ್ಧಾ ಕಾಮಂ ತಥಾ ಲಕ್ಷ್ಮೀರ್ದರ್ಪಂ ಚ ನಿಯಮಂ ಧೃತಿಃ । ಸಂತೋಷಂ ಚ ತಥಾ ತುಷ್ಟಿರ್ಲೋಭಂ ಪುಷ್ಟಿರಸೂಯತ ।। 180 ।। ಮೇಧಾ ಶ್ರಿಯಂ ಕ್ರಿಯಾ ದಂಡಂ ನಯಂ ವಿನಯಮವೇವ ಚ । ಬೋಧಂ ಬುದ್ಧಿಸ್ತಥಾ ಲಜ್ಜಾ ವಿನಯಂ ವಪುರಾತ್ಮಜಮ್ ।। 181 ।। ವ್ಯವಸಾಯಂ ಕ್ರಿಯಾ ಜಜ್ಞೇ ಕ್ಷೇಮಂ ಶಾಂತಿರಸೂಯತ । ಸುಖಂ ಸಿದ್ಧಿರ್ಯಶಃ ಕೀರ್ತಿರಿತ್ಯೇತೇ ಧರ್ಮಸೂನವಃ ।। 182 ।।

ಶ್ರದ್ಧೆಯಲ್ಲಿ ಕಾಮನೂ, ಲಕ್ಷ್ಮಿಯಲ್ಲಿ ದರ್ಪನೂ, ಧೃತಿಯಲ್ಲಿ ನಿಯಮನೂ, ತುಷ್ಟಿಯಲ್ಲಿ ಸಂತೋಷನೂ, ಪುಷ್ಟಿಯಲ್ಲಿ ಲೋಭನೂ ಹುಟ್ಟಿದರು. ಮೇಧೆಯು ಶ್ರೀಯನ್ನೂ, ಕ್ರಿಯೆಯು ಉತ್ತಮನೂ ವಿನಯಸಂಪನ್ನನೂ ಆದ ದಂಡನನ್ನೂ, ಬುದ್ಧಿಯು ಬೋಧನನ್ನೂ, ಲಜ್ಜೆಯು ವಿನಯನನ್ನೂ, ವಪುವು ವ್ಯವಸಾಯನೆಂಬ ಮಗನನ್ನೂ, ಕ್ರಿಯೆ ಎಂಬ ಮಗಳನ್ನೂ, ಶಾಂತಿಯು ಕ್ಷೇಮನನ್ನೂ, ಸಿದ್ಧಿಯು ಸುಖನನ್ನೂ, ಕೀರ್ತಿಯು ಯಶಸ್ಸನ್ನೂ ಪಡೆದರು. ಇವರೇ ಧರ್ಮನ ಪುತ್ರರು.

ಕಾಮಾನ್ನಂದೀ ಸುತಂ ಹರ್ಷಂ ಧರ್ಮಪುತ್ರಾದಸೂಯತ । ಹಿಂಸಾ ಭಾರ್ಯಾ ತ್ವಧರ್ಮಸ್ಯ ತಸ್ಯಾಂ ಜಜ್ಞೇ ತದಾನೃತಂ ।। 183 ।। ಕನ್ಯಾ ಚ ನಿಕೃತಿಸ್ತಾಭ್ಯಾಂ ಭಯಂ ನರಕಮೇವ ಚ । ಮಾಯಾಥ ವೇದನಾ ಚೈವ ಮಿಥುನಂ ದ್ವಂದ್ವಮೇವ ಚ ।। 184 ।। ತತೋ ಜಜ್ಞೇ ತಥಾ ಮಾಯಾಂ ಮೃತ್ಯುಂ ಭೂತಾಪಹಾರಿಣಮ್ । ವೇದನಾ ಸ್ವಸುತಂ ಚಾಪಿ ದುಃಖಂ ಜಜ್ಞೇಽಥ ರೌರವಾನ್ ।। 185 ।। ಮೃತ್ಯೋರ್ವ್ಯಾಧಿಜರಾಶೋಕ ತೃಷ್ಣಾಕ್ರೋಧಾಶ್ಚ ಜಜ್ಞಿರೇ । ದುಃಖೋತ್ತರಾಸ್ಸ್ಮೃತಾ ಹ್ಯೇತೇ ಸರ್ವೇ ಚಾಧರ್ಮಲಕ್ಷಣಾಃ ।। 186 ।। ನೈಷಾಂ ಭಾರ್ಯಾಸ್ತಿ ಪುತ್ರೋ ವಾ ತೇ ಸರ್ವೇ ಹ್ಯೂರ್ದ್ಧ್ವರೇತಸಃ । ರೌದ್ರಾಣ್ಯೇತಾನಿ ರೂಪಾಣಿ ಬ್ರಹ್ಮಣೋ ನೃವರಾತ್ಮಜ ।। 187 ।। ನಿತ್ಯಂ ಪ್ರಲಯಹೇತುತ್ವಂ ಜಗತೋಽಸ್ಯ ಪ್ರಯಾಂತಿ ವೈ । ರುದ್ರಸರ್ಗಂ ಪ್ರವಕ್ಷ್ಯಾಮಿ ಯಥಾ ಬ್ರಹ್ಮಾ ಚಕಾರ ಹ ।। 188 ।।

ಧರ್ಮಪುತ್ರ ಕಾಮನು ನಂದಿಯಲ್ಲಿ ಹರ್ಷನೆಂಬ ಮಗನನ್ನು ಪಡೆದನು. ಅಧರ್ಮನಿಗೆ ಹಿಂಸೆಯು ಪತ್ನಿಯು. ಅವಳಲ್ಲಿ ಅನೃತನು ಹುಟ್ಟಿದನು. ಅಧರ್ಮನ ಪತ್ನಿ ಹಿಂಸೆಯಲ್ಲಿಯೇ ನಿಕೃತಿ ಎಂಬ ಕನ್ಯೆಯೂ, ಭಯ-ನರಕರೆಂಬ ಇನ್ನಿಬ್ಬರು ಪುತ್ರರೂ ಹುಟ್ಟಿದರು. ಅವಳಿಗೆ ಮಾಯಾ, ವೇದನಾ, ಮಿಥುನ, ಮತ್ತು ದ್ವಂದ್ವರೆಂಬ ಮಕ್ಕಳೂ ಆದರು. ನಂತರ ಮಾಯೆಯಲ್ಲಿ ಪ್ರಾಣಿಗಳನ್ನು ನಾಶಮಾಡುವ ಮೃತ್ಯುವು ಹುಟ್ಟಿದನು. ವೇದನೆಯು ದುಃಖ ಮತ್ತು ರೌರವರೆನ್ನುವವರನ್ನು ಹೆತ್ತಳು. ಮೃತ್ಯುವಿಗೆ ವ್ಯಾಧಿ, ಜರೆ, ಶೋಕ, ತೃಷ್ಣೆ, ಮತ್ತು ಕ್ರೋಧರೆಂಬ ಮಕ್ಕಳಾದರು. ಇವರೆಲ್ಲರೂ ದುಃಖವನ್ನು ಕೊಡುವವರು. ಅಧರ್ಮದ ಲಕ್ಷಣವುಳ್ಳವರು. ರಾಜಪುತ್ರ! ಊರ್ಧ್ವರೇತಸರಾದ ಇವರಿಗೆ ಹೆಂಡತಿ-ಮಕ್ಕಳು ಯಾರೂ ಇಲ್ಲ. ಇವರೆಲ್ಲರೂ ಬ್ರಹ್ಮನ ರೌದ್ರರೂಪಗಳು. ಇವರು ನಿತ್ಯವೂ ಜಗತ್ತಿನ ಪ್ರಲಯಕ್ಕೆ ಕಾರಣರಾಗಿರುತ್ತಾರೆ. ಈಗ ಬ್ರಹ್ಮನು ಮಾಡಿದ ರುದ್ರಸೃಷ್ಟಿಯ ಕುರಿತು ಹೇಳುತ್ತೇನೆ.

ಕಲ್ಪಾದಾವಾತ್ಮನಸ್ತುಲ್ಯಂ ಸುತಂ ಪ್ರಧ್ಯಾಯತಸ್ತತಃ । ಪ್ರಾದುರಾಸೀತ್ಪ್ರಭೋರಂಕೇ ಕುಮಾರೋ ನೀಲಲೋಹಿತಃ ।। 189 ।। ರುದನ್ವೈ ಸುಸ್ವರಂ ಸೋಽಥ ದ್ರವಂಶ್ಚ ನೃಪಸತ್ತಮ । ಕಿಂ ರೋದಿಷೀತಿ ತಂ ಬ್ರಹ್ಮಾ ರುದಂತಂ ಪ್ರತ್ಯುವಾಚ ವೈ ।। 190 ।। ನಾಮ ದೇಹೀತಿ ತಂ ಸೋಽಥ ಪ್ರತ್ಯುವಾಚ ಪ್ರಜಾಪತಿಮ್ । ರುದ್ರಸ್ತ್ವಂ ದೇವನಾಮಾಸಿ ಮಾರೋದೀರ್ಧೈರ್ಯಮಾವಹ ।। 191 ।। ಏವಮುಕ್ತಃ ಪುನಸ್ಸೋಽಥ ಸಪ್ತಕೃತ್ವೋ ರುರೋದ ಹ । ತತೋಽನ್ಯಾನಿ ದದೌ ತಸ್ಮೈ ಸಪ್ತನಾಮಾನಿ ವೈ ಪ್ರಭುಃ ।। 192 ।। ಸ್ಥಾನಾನಿ ಚೈಷಾಮಷ್ಟಾನಾಂ ಪತ್ನೀಃ ಪುತ್ರಾಂಸ್ತಥೈವ ಚ । ಭವಂ ಶರ್ವಮಥೇಶಾನಂ ಶಿವಂ ಪಶುಪತೀಂ ನೃಪ ।। 193 ।। ಭೀಮಮುಗ್ರಂ ಮಹಾದೇವಮುವಾಚ ಸ ಪಿತಾಮಹಃ । ಸೂರ್ಯೋ ಜಲಂ ಮಹೀವಹ್ನಿರ್ವಾಯುರಾಕಾಶಮೇವ ಚ ।। 194 ।। ದೀಕ್ಷಿತೋ ಬ್ರಾಹ್ಮಣಃ ಸೋಮ ಇತ್ಯೇತಾಸ್ತನವಃ ಕ್ರಮಾತ್ । ಸುವರ್ಚಲಾ ತಥಾ ಚೋಷಾ ವಿಕೇಶೀ ಚ ತಥಾ ಶಿವಾ ।। 195 ।। ಸ್ವಾಹಾದೇಶಸ್ತಥಾ ದೀಕ್ಷಾ ರೋಹಿಣೀ ಚ ಯಥಾಕ್ರಮಮ್ । ಸೂರ್ಯಾದೀನಾಂ ನರಶ್ರೇಷ್ಠ ರುದ್ರಾದ್ಯೈರ್ನಾಮಭಿಃ ಕ್ರಮಾತ್ ।। 196 ।। ಪತ್ನ್ಯಶ್ಚ ತಾ ಮಹಾಭಾಗಾಸ್ತದಪತ್ಯಾನಿ ಮೇ ಶೃಣು । ಯೇಷಾಂ ಸೂತಿಃ ಪ್ರಸೂತಿಶ್ಚ ಇದಮಾಪೂರಿತಂ ಜಗತ್ ।। 197 ।। ಶನೈಶ್ಚರಸ್ತಥಾ ಶುಕ್ರೋ ಲೋಹಿತಾಂಗೋ ಮನೋಜವಃ । ಸ್ವರ್ಗಾಸ್ಕಂದೋಽಥ ಸಂತಾನೋ ಬುಧಶ್ಚಾನುಕ್ರಮಾತ್ಸುತಾಃ ।। 198 ।। ಏವಂ ಪ್ರಕಾರೋ ರುದ್ರೋಽಸೌ ಸತೀಂ ಭಾರ್ಯಾಮವಿಂದತ । ದಕ್ಷಕೋಪಾಚ್ಚ ತತ್ಯಾಜ ಸಾ ಸತೀ ಸ್ವಂ ಕಲೇವರಮ್ ।। 199 ।। ಹಿಮವತಸ್ತು  ಸಾ ಭೂತಾ ಮೇನಾಯಾಂ ದ್ವಿಜಸತ್ತಮ । ಉಪಯೇಮೇ ಪುನಶ್ಚೈವ ಯಾಚಿತ್ವಾ ಭಗವಾನುತ ।। 200 ।।

ಕಲ್ಪದ ಆದಿಯಲ್ಲಿ ತನಗೆ ಸಮನಾದ ಮಗನು ಹುಟ್ಟಬೇಕೆಂದು ಯೋಚಿಸುತ್ತಿದ್ದ ಬ್ರಹ್ಮಣ ತೊಡೆಯಿಂದ ನೀಲಲೋಹಿತ[36] ಕುಮಾರನು ಹುಟ್ಟಿದನು. ನೃಪಸತ್ತಮ! ಆ ಕುಮಾರನು ಸುಸ್ವರವಾಗಿ ಅಳುತ್ತಾ ನೀರಾಗತೊಡಗಿದನು. “ಏಕೆ ಅಳುತ್ತಿರುವೆ?” ಎಂದು ಅಳುತ್ತಿದ್ದ ಅವನನ್ನು ಬ್ರಹ್ಮನು ಕೇಳಿದನು. “ನನಗೆ ಹೆಸರನ್ನು ಕೊಡು” ಎಂದು ಅವನು ಪ್ರಜಾಪತಿಗೆ ಉತ್ತರಿಸಿದನು. ಬ್ರಹ್ಮನು ಅವನಿಗೆ “ನೀನು ರುದ್ರನೆಂಬ ಹೆಸರಿನ ದೇವನಾಗುತ್ತೀಯೆ! ರೋದಿಸಬೇಡ. ಧೈರ್ಯತಾಳು.” ಹೀಗೆ ಹೇಳಿದರೂ ರುದ್ರನು ಏಳು ಬಾರಿ ಅತ್ತನು. ಆಗ ಪ್ರಭು ಬ್ರಹ್ಮನು ಅವನಿಗೆ ಅನ್ಯ ಏಳು ಹೆಸರುಗಳನ್ನು ಕೊಟ್ಟನು. ಹಾಗೆಯೇ ಆ ಎಂಟು ಮಂದಿಗೆ ಸ್ಥಾನಗಳನ್ನೂ, ಪತ್ನಿ-ಪುತ್ರರನ್ನೂ ಕೊಟ್ಟನು. ನೃಪ! ಪಿತಾಮಹನು ಅವರಿಗೆ ಭವ, ಶರ್ವ, ಈಶಾನ, ಶಿವ, ಪಶುಪತಿ, ಭೀಮ, ಉಗ್ರ ಮತ್ತು ಮಹಾದೇವನೆಂಬ ಹೆಸರುಗಳನ್ನಿತ್ತನು. ಕ್ರಮವಾಗಿ ಅವರಿಗೆ ಸೂರ್ಯ, ನೀರು, ಭೂಮಿ, ಬೆಂಕಿ, ಗಾಳಿ, ಆಕಾಶ, ದೀಕ್ಷಿತ, ಬ್ರಾಹ್ಮಣ ಮತ್ತು ಸೋಮ ಎಂಬ ದೇಹಗಳನ್ನಿತ್ತನು. ಸೂರ್ಯಾದಿ ಹೆಸರುಗಳಿರುವ ಈ ರುದ್ರರಿಗೆ ಕ್ರಮವಾಗಿ ಸುವರ್ಚಲಾ, ಉಷೆ, ವಿಕೇಶೀ, ಶಿವೆ, ಸ್ವಾಹಾ, ಆದೇಶ, ದೀಕ್ಷಾ ಮತ್ತು ರೋಹಿಣೀ ಎಂಬ ಪತ್ನಿಯರನ್ನೂ ಮಾಡಿದನು. ನರಶ್ರೇಷ್ಠ! ಈ ಮಹಾಭಾಗರ ಪತ್ನಿಯರಿಂದಾದ ಮಕ್ಕಳ ಕುರಿತು ಕೇಳು. ಅವರ ಮಕ್ಕಳು ಮೊಮ್ಮಕ್ಕಳುಗಳಿಂದ ಈ ಜಗತ್ತು ತುಂಬಿಹೋಗಿದೆ. ಶನೈಶ್ಚರ, ಶುಕ್ರ, ಲೋಹಿತಾಂಗ (ಅಂಗಾರಕ), ಮನೋಜವ, ಸ್ವರ್ಗ, ಆಸ್ಕಂದ, ಸಂತಾನ ಮತ್ತು ಬುಧ ಇವರು ಕ್ರಮವಾಗಿ ಅವರಿಗಾದ ಒಬ್ಬೊಬ್ಬ ಮಕ್ಕಳು. ಹೀಗಿದ್ದರೂ ರುದ್ರನು ಸತಿಯನ್ನು ಪತ್ನಿಯನ್ನಾಗಿ ಪಡೆದುಕೊಂಡನು. ಆ ಸತಿಯು ದಕ್ಷನ ಮೇಲಿನ ಕೋಪದಿಂದ ತನ್ನ ದೇಹವನ್ನು ತ್ಯಜಿಸಿದಳು. ದ್ವಿಜಸತ್ತಮ! ಅವಳು ಮೇನೆಯಲ್ಲಿ ಹಿಮವತನಿಗೆ ಮಗಳಾಗಿ ಹುಟ್ಟಿದಳು. ನಂತರ ಆ ಭಗವಂತನನ್ನು ಕೇಳಿಕೊಂಡು ಪುನಃ ಅವನೊಂದಿಗೆ ವಿವಾಹವಾದಳು.

ದೇವೌ ಧಾತೃವಿಧಾತಾರೌ ಭೃಗೋಃ ಖ್ಯಾತಿರಸೂಯತ । ಶ್ರಿಯಂ ಚ ದೇವದೇವಸ್ಯ ವಾಸುದೇವಪರಿಗ್ರಹಮ್ ।। 201 ।। 

ಭೃಗುವಿನಿಂದ ಖ್ಯಾತಿಯಲ್ಲಿ ಧಾತೃ-ವಿಧಾತೃಗಳೂ, ದೇವದೇವ ವಾಸುದೇವನ ಪತ್ನಿಯಾದ ಶ್ರೀಯೂ ಹುಟ್ಟಿದರು.”

ಇತಿ ಶ್ರೀಮಹಾಪುರಾಣೇ ಪಾದ್ಮೇ ಪಂಚಮೇ ಸೃಷ್ಟಿಖಂಡೇ ತೃತೀಯೋಽಧ್ಯಾಯಃ ।।

ಇದು ಶ್ರೀಪದ್ಮಮಹಾಪುರಾಣದ ಐದನೇ ಸೃಷ್ಟಿಖಂಡದಲ್ಲಿ  ಮೂರನೇ ಅಧ್ಯಾಯವು.

[1] ಈ ಶ್ಲೋಕಕ್ಕೂ ಹಿಂದಿನ ಶ್ಲೋಕಕ್ಕೂ ನಡುವಿನ ಮೂರು ಶ್ಲೋಕಗಳು ಇಲ್ಲಿ ತಪ್ಪಿಹೋದಂತೆ ಇದೆ. ಈ ಶ್ಲೋಕಗಳು ವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 3 ರಲ್ಲಿ ಇರುವಂತೆ ಇಲ್ಲಿ ಸೇರಿಸಿದ್ದೇನೆ: ತೈಃ ಷಡ್ಭಿರಯನಂ ವರ್ಷಂ ದ್ವೇಽಯನೇ ದಕ್ಷಿಣೋತ್ತರೇ ಅಯನಂ ದಕ್ಷಿಣಂ ರಾತ್ರಿರ್ದೇವಾನಾಮುತ್ತರಂ ದಿನಮ್ ।। ದಿವ್ಯೈರ್ವರ್ಷಸಹಸ್ರೈಸ್ತು ಕೃತತ್ರೇತಾದಿಸಂಜ್ಞಕಮ್ ಚತುರ್ಯುಗಂ ದ್ವಾದಶಭಿಸ್ತದ್ವಿಭಾಗಂ ನಿಬೋಧ ಮೇ ।। ಚತ್ವಾರಿ ತ್ರೀಣಿ ದ್ವೇ ಚೈಕಂ ಕೃತಾದಿಷು ಯಥಾಕ್ರಮಮ್ ದಿವ್ಯಾಬ್ದಾನಾಂ ಸಹಸ್ರಾಣಿ ಯುಗೇಷ್ವಾಹುಃ ಪುರಾವಿದಃ ।। ಅರ್ಥಾತ್: ಅಂತಹ ಎರಡು ಆರು ಮಾಸಗಳು – ದಕ್ಷಿಣ ಮತ್ತು ಉತ್ತರಾಯಣಗಳು – ಸೇರಿ ಒಂದು ವರ್ಷವಾಗುತ್ತದೆ. ದಕ್ಷಿಣಾಯನವು ದೇವತೆಗಳಿಗೆ ರಾತ್ರಿ ಮತ್ತು ಉತ್ತರಾಯಣವು ದೇವತೆಗಳಿಗೆ ಹಗಲು. ಹೀಗೆ ದೇವತೆಗಳ ಮಾನದಿಂದ 12,000 ವರ್ಷಗಳಿಗೆ ಒಂದು ಚತುರ್ಯುಗವಾಗುತ್ತದೆ. ಕ್ರಮವಾಗಿ ಕೃತ, ತ್ರೇತ, ದ್ವಾಪರ ಮತ್ತು ಕಲಿಯುಗಗಳಿಗೆ ನಾಲ್ಕು, ಮೂರು, ಎರಡು, ಮತ್ತು ಒಂದು ಸಾವಿರ ದೇವಮಾನದ ವರ್ಷಗಳಾಗುತ್ತವೆ.

[2] ತ್ರಿಂಶತ್ಕೋಟಿ=30 ಕೋಟಿ + ಸಪ್ತಷಷ್ಟಿ ನಿಯುತಾನಿ=67 ಲಕ್ಷ + ವಿಂಶತಿಶ್ಚ ಸಹಸ್ರಾಣಿ=20 ಸಾವಿರ + ದ್ವಾಪಂಚಾಶತ್=52 = 30 ಕೋಟಿ, 67 ಲಕ್ಷ, 20 ಸಾವಿರ ಮತ್ತು 52.

[3] ಇಲ್ಲಿ ಎಂಟೇ ವಿಧದ ಸೃಷ್ಟಿಗಳನ್ನು ಹೇಳಿದೆ. ಒಂಬತ್ತಲ್ಲ.

[4] ಓಷಧಿಗಳು=ಧಾನ್ಯಗಳು.

[5] ಕಲ್ಪದ ಮೊದಲನೇ ಕೃತಯುಗದಲ್ಲಿ ಯಜ್ಞಗಳು ಇರಲಿಲ್ಲ. ಯಜ್ಞಗಳು ಕಲ್ಪದ ಮೊದಲನೇ ತ್ರೇತಾಯುಗದಲ್ಲಿ ಪ್ರಾರಂಭಗೊಂಡವು.

[6] ಇಲ್ಲಿಯ ಶ್ಲೋಕ 102-105 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 5 ರ ಶ್ಲೋಕ 53-56ನ್ನು ಹೋಲುತ್ತವೆ.

[7] ಶ್ರೀವಿಷ್ಣುಪುರಾಣದಲ್ಲಿ ಇದೇ ಶ್ಲೋಕಾರ್ಧವು ಹೀಗಿದೆ: ಗಾಯತ್ರಂ ಚ ಋಚಶ್ಚೈವ ತ್ರಿವೃತ್ಸೋಮಂ ರಥಂತರಮ್ ।

[8] ಅರಮನೆ ಪ್ರಕಾಶನದ ಶ್ಲೋಕ ಪಾಠದಲ್ಲಿ ಪಂಚದಶ ಎಂದಿದೆ. ಹಿಂದಿನ ಶ್ಲೋಕದಲ್ಲಿ ಪಂಚದಶ ಸ್ತೋಮದ ಕುರಿತು ಬಂದಿದೆಯಾದ್ದರಿಂದ ಈ ಶ್ಲೋಕದಲ್ಲಿ ವಿಷ್ಣುಪುರಾಣದಲ್ಲಿರುವಂತೆ ಸಪ್ತದಶಂ ಎನ್ನುವುದೇ ಸರಿ ಎಂದು ತಿಳಿದು ಅದನ್ನೇ ಇಲ್ಲಿ ಬಳಸಿದ್ದೇನೆ.

[9] ಪ್ರಥಮಾನ್ಮುಖಾತ್ ಎನ್ನುವುದಕ್ಕೆ ಬ್ರಹ್ಮನ ಪೂರ್ವದಿಕ್ಕಿನ ಮುಖ ಎಂದೂ ಅನುವಾದಿಸಿದ್ದಾರೆ.

[10] ಛಂದಸ್ಸು ಎಂದರೆ ಋಕ್ಕಿನ ಛಂದೋವಿನ್ಯಾಸ, ಅಂದರೆ ಅದರ ಓಟ, ಲಯ, ಅಕ್ಷರಸಂಖ್ಯೆಯ ಕ್ರಮಬದ್ಧ ವಿನ್ಯಾಸ. ಸಾಧಾರಣವಾಗಿ ಹೇಳುವುದಾದರೆ ಛಂದಸ್ಸು ಎಂದರೆ ಪದ್ಯದ ಲಯ ಅಥವಾ ಛಂದೋಮಾಪನ (metrical pattern or rhythm). ಛಾದನ ಎಂಬ ಧಾತುವಿನಿಂದ ಛಂದಸ್ಸು ಎಂಬ ಪದವು ಬಂದಿದೆ. ಆವರಣ ಅಥವಾ ಸುಂದರವಾದ ವಿನ್ಯಾಸ ಎಂದರ್ಥ. ಋಕ್ಕಿನ ಛಂದಸ್ಸು ಅದರ ಸೌಂದರ್ಯವನ್ನು ಆವರಿಸುತ್ತದೆ. ಆದ್ದರಿಂದ ಅದು ಛಂದಸ್ಸು ಎನ್ನುತ್ತಾರೆ. ಋಕ್ಕುಗಳು ಅಥವಾ ವೇದಮಂತ್ರಗಳು ಎಲ್ಲವೂ ಒಂದೊಂದು ಛಂದಸ್ಸಿನಲ್ಲಿ (metre) ರಚಿಸಲ್ಪಟ್ಟಿವೆ. ಋಗ್ವೇದದ ಮಂತ್ರಗಳು ಬಹುತೇಕ ಗಾಯತ್ರಿ, ತ್ರಿಷ್ಟುಪ್, ಜಗತಿ ಇತ್ಯಾದಿ ಛಂದಸ್ಸಿನಲ್ಲಿವೆ. ಯಜುರ್ವೇದದಲ್ಲಿ ಕೆಲವು ಮಿಶ್ರಛಂದಸ್ಸುಗಳಿವೆ. ಸಾಮವೇದದಲ್ಲಿ ಗಾನಕ್ಕೆ ಹೊಂದುವ ಛಂದಸ್ಸುಗಳಿವೆ. ವೇದಗಳಲ್ಲಿ ಅನೇಕ ಛಂದಸ್ಸುಗಳಿವೆ. ಅವುಗಳಲ್ಲಿ ಮುಖ್ಯವಾಗಿ ಋಗ್ವೇದದಲ್ಲಿ ಉಲ್ಲೇಖವಾಗಿರುವ ಏಳು ಪ್ರಮುಖ ಛಂದಸ್ಸುಗಳು ವೇದಾಧ್ಯಯನದ ಆಧಾರವಾಗಿವೆ.

ಛಂದಸ್ಸಿನ ಹೆಸರು ಪ್ರತಿ ಪಾದದ ಅಕ್ಷರಸಂಖ್ಯೆ ಒಟ್ಟು ಅಕ್ಷರಗಳು ವೇದದ ಉದಾಹರಣೆ
ಗಾಯತ್ರಿ 8 24 ಅಗ್ನಿಮೀಳೇ ಪುರೋಹಿತಮ್... (ಋಗ್ವೇದ 1.1.1)
ಉಷ್ಣಿಕ್ 8,8,12 28 ಇಂದ್ರಂ ವೋ ವೀರಂ ಹವಾಮಹೇ...
ಅನುಷ್ಟುಪ್ 8,8,8,8 32 ಪುರಾಣ ಇತಿಹಾಸಗಳಲ್ಲಿ ಸಾಮಾನ್ಯವಾಗಿ ಇರುವ ಶ್ಲೋಕಗಳು
ಬೃಹತೀ 8,8,12,8 36 ಇಂದ್ರಂ ಮದೇಶೂ...
ಪಂಕ್ತಿ 8,8,8,8,8 40 ಅಗ್ನಯೇ ಸ್ವಾಹಾ...
ತ್ರಿಷ್ಟುಪ್ 11 44 ಇಂದ್ರಂ ವೃತ್ರಹರಣಂ ವಜ್ರಿಣಂ...
ಜಗತೀ 12 48 ಅಗ್ನಿರ್ಮೂರ್ಧಾ ದಿವಃ ಕಕುದ್

ಇವೂ ಅಲ್ಲದೇ ವೇದ, ಪುರಾಣ, ಇತಿಹಾಸಗಳಲ್ಲಿ ಇನ್ನೂ ಹಲವು ವಿಶೇಷ ಛಂದಸ್ಸುಗಳಿವೆ. ಉದಾಹರಣೆಗೆ ಹೆಚ್ಚು ಅಕ್ಷರಗಳಿರುವ ಅತಿಜಗತೀ, ಅತಿಶಕ್ವರೀ, ಮೊದಲಾದವುಗಳು; ವಿಭಿನ್ನ ಗಾನ ಅಥವಾ ಪ್ರಯೋಗಶೈಲಿಗಳಿರುವ ಮಹಾತಿ, ದ್ವಿಪದಾ, ಆರ್ಷ, ರಥಂತರೀ, ಪವಮಾನೀ ಮೊದಲಾದವು. ಛಂದಸ್ಸುಗಳು ದೇವತೆಗಳ ರೂಪಕ ಎಂದು ವೇದಗಳು ಹೇಳುತ್ತವೆ. ಉದಾಹರಣೆಗೆ, ಛಂದೋಭ್ಯೋ ಹ ವ್ಯಾಹೃತಯಃ । ವ್ಯಾಹೃತಿಭ್ಯೋ ಲೋಕಾಃ । ಅರ್ಥಾತ್: ಛಂದಸ್ಸಿನಿಂದಲೇ ಬ್ರಹ್ಮಾಂಡದ ವ್ಯವಹಾರವು ಉಂಟಾಗಿದೆ.

[11] ಸ್ತೋಮವು ವೇದಯಜ್ಞಗಳಲ್ಲಿ, ವಿಶೇಷವಾಗಿ ಸೋಮಯಾಗಗಳಲ್ಲಿ, ಸ್ತೋತ್ರಗಳ ವಿನ್ಯಾಸ (pattern)  ಅಥವಾ ಗಾನಪದ್ಧತಿ ಅಥವಾ ಹಾಡಿನ ವಿನ್ಯಾಸ. ಸೋಮಯಾಗದಲ್ಲಿ ಋಗ್ವೇದ ಮಂತ್ರಗಳನ್ನು ಸ್ತೋತ್ರವಾಗಿ ಪಠಿಸಲ್ಪಡುತ್ತವೆ. ಅವುಗಳನ್ನು ಸಾಮಗಾನ ರೂಪದಲ್ಲಿ ಹಾಡಲಾಗುತ್ತದೆ. ಈ ಗಾಯನದ ವಿಧಾನಗಳನ್ನು ಸ್ತೋಮಗಳು ಎನ್ನುತ್ತಾರೆ. ಅತ್ಸ್ಯವ ಸ್ತೋಮವು ಸಾಮಗಾನದ ಒಂದು ನಿರ್ದಿಷ್ಟ ವಿಧವಾದ ಸ್ತುತಿ ಕ್ರಮವು. ಕೆಲವೊಂದು ವ್ಯಾಖ್ಯಾನಗಳಲ್ಲಿ “ಅತ್ಸ್ಯವ” ಎಂಬ ಪದವು “ಅತಿ-ಶ್ರುತಿ-ಸಾಮ” ಅಥವಾ “ಅತಿ-ಸ್ವರ-ಗಾನ” ಎಂಬ ಅರ್ಥದಲ್ಲಿಯೂ ವಿವರಿಸಲಾಗುತ್ತದೆ — ಅಂದರೆ ಗಾನದ ವಿಶಿಷ್ಟ ಉಚ್ಚಾರ / ಉನ್ನತಸ್ವರ ವಿಧಾನ. ವೇದಗಳಲ್ಲಿ ಅನೇಕ ಸ್ತೋಮಗಳು ಉಲ್ಲೇಖವಾಗಿವೆ. ಉದಾಹರಣೆಗೆ: (1) ಏಕವಿಂಶ ಸ್ತೋಮ – 21 ಸ್ತೋತ್ರಗಳಿರುವುದು (2) ತ್ರಿವಿಂಶಸ್ತೋಮ – 33 ಸ್ತೋತ್ರಗಳಿರುವವು (3) ಪಂಚದಶಸ್ತೋಮ – 15 ಸ್ತೋತ್ರಗಳಿರುವವು (4) ಸಪ್ತದಶಸ್ತೋಮ – 17 ಸ್ತೋತ್ರಗಳಿರುವವು (5) ಚತುರ್ವಿಂಶ ಸ್ತೋಮ – 24 ಸ್ತೋತ್ರಗಳಿರುವವು (6) ಶೋಧಶಿ ಸ್ತೋಮ (7)  ಏಕತ್ರಿಂಶಸ್ತೋಮ – 31 ಸ್ತೋತ್ರಗಳಿರುವವು. ಪ್ರತಿ ಸ್ತೋಮದಲ್ಲಿ ನಿರ್ದಿಷ್ಟ ಸಂಖ್ಯೆ ಅಥವಾ ಕ್ರಮದ ಸ್ತೋತ್ರಗಳು (chants) ಇರುತ್ತವೆ. ಪ್ರತಿ ಯಜ್ಞದಲ್ಲಿ ಯಾವ ಸ್ತೋಮವನ್ನು ಉಪಯೋಗಿಸಬೇಕು ಎನ್ನುವುದನ್ನು ಶ್ರೌತಸೂತ್ರಗಳು ನಿಯಮಿಸುತ್ತವೆ. ಸಂಗೀತದಲ್ಲಿ ರಾಗವು ಹೇಗೆ ಭಿನ್ನವಾಗಿದೆಯೋ ಹಾಗೆ ಯಜ್ಞಗಳಲ್ಲಿ ಸ್ತೋಮಗಳು ವಿಭಿನ್ನ ಸ್ತೋತ್ರಗಾನಶೈಲಿಗಳನ್ನು ಹೊಂದಿವೆ.

[12] ಸಾಮ ಎಂದರೆ ಗಾನರೂಪದ ಋಕ್ ಅಥವಾ ಮಂತ್ರ. ಅಂದರೆ ಹಾಡಿನ ಶೈಲಿಯಲ್ಲಿ ಉಚ್ಚರಿಸುವ ಸ್ತೋತ್ರ. ಇದು ಸಂಗಾನಂ ಎಂಬ ಮೂಲದಿಂದ ಬಂದಿದ್ದು, ಅರ್ಥ “ಸುಮಧುರವಾಗಿ ಹಾಡುವುದು”. ಋಗ್ವೇದಗಳಲ್ಲಿನ ಋಕ್ಕುಗಳನ್ನೇ ಸಾಮವೇದದಲ್ಲಿ ಗಾನರೂಪದಲ್ಲಿ ಪರಿವರ್ತಿಸಿ ಬಳಸಲಾಗುತ್ತದೆ. ಸಾಮಗರು (ಸಾಮವೇದದ ಪಂಡಿತರು) ಯಜ್ಞದಲ್ಲಿ ಸ್ತೋತ್ರಗಾನ ಮಾಡುತ್ತಾರೆ. ಉದಾಹರಣೆಗೆ: ಸಾಮಗಾನದಲ್ಲಿ “ಓಂ ಅಗ್ನಾಯೇ ಸ್ವಾಹಾ” ಎಂಬ ಋಕ್ಕನ್ನು ಸಂಗೀತಮಯವಾಗಿ “ಓಂಮಾ ಅಘ್ನಾಯೇಯೇ ಸ್ವಾಹಾ” ಎಂದು ಗಾನರೂಪದಲ್ಲಿ ಉಚ್ಚರಿಸುತ್ತಾರೆ. ವೇದಗಳಲ್ಲಿ ಕೆಲವು ಪ್ರಮುಖ ಸಾಮಗಳು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿವೆ. ಅವುಗಳಲ್ಲಿ ಕೆಲವುಗಳ ಹೆಸರು ಮತ್ತು ಅರ್ಥ/ದೇವತೆಗಳು ಹೀಗಿವೆ: (1) ರಥಂತರ ಸಾಮ – ಸೂರ್ಯ/ಪ್ರಜಾಪತಿ – ಪ್ರಾಣಸ್ವರೂಪ (2) ಬೃಹತ್ ಸಾಮ – ಇಂದ್ರ/ವಿಶ್ವದ ವ್ಯಾಪಕತೆಯ ಪ್ರತೀಕ (3) ವಾಮದೇವ್ಯ ಸಾಮ – ವಾಮದೇವ ಋಷಿಯು ಪಠಿಸಿದ ಸಾಮ (4) ಆರ್ಯ ಸಾಮ – ಆರ್ಯ ಋಷಿಗಳಿಂದ ಪ್ರಸಿದ್ಧವಾದ ಸಾಮ (5) ದೇವರಥ ಸಾಮ – ದೇವತೆಯ ಸ್ತುತಿಗಾನ (6) ವೈರೂಪ ಸಾಮ (7) ವೈಶ್ವದೇವ ಸಾಮ (8) ಅಘಮರ್ಷಣ ಸಾಮ, ಮೊದಲಾದವುಗಳು. “ಬೃಹತ್” ಎಂದರೆ “ಮಹತ್ತರ, ವಿಶಾಲ”. “ಸಾಮ” ಎಂದರೆ “ಗಾನ” ಅಥವಾ “ಸ್ತುತಿ”. ಆದ್ದರಿಂದ ಬೃಹತ್ ಸಾಮ ಎಂದರೆ “ಮಹೋನ್ನತ ಸಾಮಗಾನ” — ಅತ್ಯಂತ ಉನ್ನತ ಶ್ರೇಣಿಯ ವೇದಗಾನ. ಬೃಹತ್ ಸಾಮವು ಸಾಮವೇದದ ಉದ್ಗೀತ ಭಾಗಕ್ಕೆ ಸೇರಿದೆ ಮತ್ತು ಸಾಮಾನ್ಯವಾಗಿ ರಥಂತರ ಸಾಮದ ಜೊತೆಯಲ್ಲಿ ಉಲ್ಲೇಖಿತವಾಗುತ್ತದೆ. ಈ ಎರಡನ್ನೂ “ಸಾಮಗಳ ಜೋಡಿ” ಎಂದು ಪರಿಗಣಿಸುತ್ತಾರೆ.

[13] ಅಗ್ನಿಷ್ಟೋಮ ಯಾಗವು ಏಳು ವಿಧದ ಸೋಮಯಾಗಗಳ ಮೂಲಯಾಗ. ಅಂದರೆ ಇತರ ಸೋಮಯಾಗಗಳೆಲ್ಲವೂ ಇದರ ಆಧಾರದಿಂದಲೇ ರೂಪಗೊಂಡಿವೆ. ಅಗ್ನಿ ಎಂದರೆ ಅಗ್ನಿ ದೇವತೆ. ಷ್ಟೋಮ ಎಂದರೆ ಸ್ತುತಿ ಅಥವಾ ಸ್ತೋತ್ರಗಾನ (ಗಾನರೂಪದ ಸ್ತುತಿ). ಹೀಗಾಗಿ ಅಗ್ನಿಷ್ಟೋಮ ಎಂದರೆ ಅಗ್ನಿದೇವನಿಗೆ ಸ್ತುತಿಗಾನಮಾಡುವ ಯಜ್ಞ ಅಥವಾ ಅಗ್ನಿಯ ಸ್ತುತಿಯೊಂದಿಗೆ ನಡೆಯುವ ಸೋಮಯಾಗ. ಅಗ್ನಿಷ್ಟೋಮವು ಒಂದು ಸೋಮಯಾಗ. ಸೋಮಯಾಗ ಎಂದರೆ ಸೋಮಲತೆಯಿಂದ ಪಡೆದ ಸೋಮರಸವನ್ನು ದೇವತೆಗಳಿಗೆ ಅರ್ಪಿಸುವ ಯಜ್ಞ. ಏಳು ವಿಧದ ಸೋಮಯಾಗಳು: (1) ಅಗ್ನಿಷ್ಟೋಮ (2) ಅತ್ಯಗ್ನಿಷ್ಟೋಮ (3) ಉಕ್ಥ್ಯ (4) ಶೋದಶೀ (5) ವಾಜಪೇಯ (6) ಅತಿರಾತ್ರ (7) ಅಪ್ತೋರ್ಯಾಮ. ಈ ಎಲ್ಲ ಸೋಮಯಾಗಗಳಲ್ಲಿ ಅಗ್ನಿಷ್ಟೋಮವು ಪ್ರಥಮ ಮತ್ತು ಮೂಲರೂಪ. ಇದಕ್ಕಿಂತಲೂ ದೊಡ್ಡದಾಗಿರುವ ಉಕ್ಥ್ಯ, ಶೋದಶೀ, ವಾಜಪೇಯೀ, ಅತಿರಾತ್ರ ಮೊದಲಾದ ಎಲ್ಲವೂ ಅಗ್ನಿಷ್ಟೋಮದ ವಿಸ್ತಾರರೂಪಗಳೇ. ವೇದಸಾರದಲ್ಲಿ ಅಗ್ನಿಷ್ಟೋಮಯಾಗವನ್ನು ಜೀವನದ ಪರಿವರ್ತನೆಯ ಯಜ್ಞ ಎಂದು ಹೇಳುತ್ತಾರೆ. ಇದು ಮನಸ್ಸು, ಪ್ರಾಣ, ವಚನ, ಕ್ರಿಯೆ, ಜ್ಞಾನ ಇವುಗಳನ್ನು ದೇವತ್ವದತ್ತ ಏರಿಸುವ ಒಂದು ಉಪಚಾರ. ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳು ಹೇಳುವಂತೆ ಅಗ್ನಿಷ್ಟೋಮೇನ ಸ್ವರ್ಗಕಾಮೋ ಯಜೇತ । ಅರ್ಥಾತ್: ಸ್ವರ್ಗಕಾಮಿಯು ಅಗ್ನಿಷ್ಟೋಮದಿಂದ ಯಜ್ಞಮಾಡಲಿ.

[14] ಉಕ್ಥ್ಯ ಎಂಬ ಪದವು ಉಕ್ತ (ಉಚ್ಚರಿಸು, ಪಠಿಸು) ಎಂಬ ಧಾತುವಿನಿಂದ ಬಂದಿದೆ. ಏಳು ವಿಧದ ಸೋಮಯಾಗಗಳಲ್ಲಿ ಉಕ್ಥ್ಯ ಎನ್ನುವ ಯಾಗವು ಮೂರನೆಯದು. ಅಗ್ನಿಷ್ಟೋಮಯಾಗದಂತೆಯೇ ಇರುವ ಉಕ್ಥ್ಯ ಯಾಗದಲ್ಲಿ ಮೂರು ಉಕ್ತಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ. ಉಕ್ಥ್ಯ ಯಾಗವು ಸಾಮಾನ್ಯವಾಗಿ ದೇವತಾಪ್ರೀತ್ಯರ್ಥಂ, ಸ್ವರ್ಗಲಾಭ ಅಥವಾ ಪುಣ್ಯವರ್ಧನೆಗಾಗಿ ಮಾಡಲಾಗುತ್ತದೆ.

[15] ಇಲ್ಲಿಯ ಶ್ಲೋಕ 106-109 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 5 ರ ಶ್ಲೋಕ 57-59ನ್ನು ಹೋಲುತ್ತವೆ.

[16] ಇಲ್ಲಿಯ ಶ್ಲೋಕ 110-116 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 5 ರ ಶ್ಲೋಕ 60-66ನ್ನು ಹೋಲುತ್ತವೆ.

[17] ಇದೇ ಶ್ಲೋಕವು ಮಹಾಭಾರತದ ಆದಿಪರ್ವದ ಅನುಕ್ರಮಣೀಪರ್ವದ ಅಧ್ಯಾಯ 1ರಲ್ಲಿ (ಶ್ಲೋಕ 37) ಬಂದಿದೆ.

[18] ಇಲ್ಲಿಯ ಶ್ಲೋಕ 117-118 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 6 ರ ಶ್ಲೋಕ 1-2ನ್ನು ಹೋಲುತ್ತವೆ.

[19] ಇಲ್ಲಿಯ ಶ್ಲೋಕ 119-126 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 6 ರ ಶ್ಲೋಕ 3-10ನ್ನು ಹೋಲುತ್ತವೆ.

[20] ಇಲ್ಲಿಯ ಶ್ಲೋಕ 127-129 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 6 ರ ಶ್ಲೋಕ 11-13ನ್ನು ಹೋಲುತ್ತವೆ.

[21] ಇಲ್ಲಿಯ ಶ್ಲೋಕ 130-136 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 6 ರ ಶ್ಲೋಕ 14-20ನ್ನು ಹೋಲುತ್ತವೆ.

[22] ಅರಮನೆ ಪ್ರಕಾಶನದ ಮೂಲ ಶ್ಲೋಕದಲ್ಲಿ “ರಾಗೋಽಲಸಾದಯಶ್ಚಾನ್ಯಾಃ” ಎಂದಿದೆ. ಆದರೆ ವಿಷ್ಣುಪುರಾಣದ ಪ್ರಥಮಾಂಶದ 6ನೇ ಅಧ್ಯಾಯದ 16ನೇ ಶ್ಲೋಕದಲ್ಲಿರುವ “ರಸೋಲ್ಲಾಸಾದಯಶ್ಚಾನ್ಯಾಸ್ಸಿದ್ಧಯೋಽಷ್ಟೌ” ಎನ್ನುವುದೇ ಸರಿಯೆಂದು ಆ ಪದವನ್ನೇ ಇಲ್ಲಿ ಬಳಸಿದ್ದೇನೆ.

[23] ರಸೋಲ್ಲಾಸಾದಿ ಅಷ್ಟಸಿದ್ಧಿಗಳು ಎನ್ನುವುದು ತಂತ್ರಶಾಸ್ತ್ರ ಮತ್ತು ಯೋಗಶಾಸ್ತ್ರಗಳಲ್ಲಿ ಹೇಳಿರುವ ವಿಶಿಷ್ಠ ಶಕ್ತಿಗಳ (ಅಲೌಕಿಕ ಸಾಮರ್ಥ್ಯಗಳ) ಗುಂಪಾಗಿದೆ. ಅಂದರೆ ಎಂಟು ಸಾಧನೆಗಳು ಅಥವಾ ಎಂಟು ಅಲೌಕಿಕ ಶಕ್ತಿಗಳು ಎಂದರ್ಥ. ಆದರೆ ರಸೋಲ್ಲಾಸಾದಿ ಅಷ್ಟಸಿದ್ಧಿಗಳು ಸಾಮಾನ್ಯವಾಗಿ ತಿಳಿದಿರುವ ಅಣಿಮಾ, ಮಹಿಮಾ, ಗರಿಮಾ ಇತ್ಯಾದಿ ಯೋಗದ ಅಷ್ಟಸಿದ್ಧಿಗಳಲ್ಲ. ಇದು ರಸ, ತಂತ್ರ ಮತ್ತು ಯೋಗದ ಅನುಭವಾತ್ಮಕ ಶಕ್ತಿಗಳ ಒಂದು ವರ್ಗ. ಈ ರಸದ ಉದಯದಿಂದ ಮುಂದಿನ ಏಳು ಶಕ್ತಿಗಳು ಕ್ರಮವಾಗಿ ವ್ಯಕ್ತವಾಗುತ್ತವೆ. ಒಟ್ಟಾಗಿ ಅವುಗಳನ್ನು ರಸೋಲ್ಲಾಸಾದಿ ಅಷ್ಟಸಿದ್ಧಿಗಳು ಎಂದು ಕರೆಯುತ್ತಾರೆ. ಈ ಅಷ್ಟಸಿದ್ಧಿಗಳೂ ಮತ್ತು ಅವುಗಳ ತಾಂತ್ರಿಕ ವಿವರಣೆಗಳು ಹೀಗಿವೆ: (1) ರಸೋಲ್ಲಾಸಾ – ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ನಾಡಿಗಳಲ್ಲಿ ಆನಂದದ ಕಂಪನದ ಅನುಭವ (2) ರಸಸಿದ್ಧಿ – ದೇಹದ ರಸ (ಜಲ, ಪ್ರಾಣ, ಚೇತನ) ಗಳನ್ನು ಶುದ್ಧೀಕರಿಸಿ ಅಮೃತಸ್ವರೂಪವಾಗುವ ಶಕ್ತಿ (3) ರಸಜ್ಞಾನ – ಅಂತರಂಗದ ಆನಂದ ಮತ್ತು ಪರಮ ತತ್ತ್ವದ ರಸದ ಜ್ಞಾನವು ವ್ಯಕ್ತವಾಗುವುದು (4) ರಸಪ್ರವಾಹ – ಪ್ರಾಣಶಕ್ತಿಯು ದೇಹದೊಳಗೆ ನಿರಂತರವಾಗಿ ಹರಿಯುವ ಆನಂದಧಾರೆ (5) ರಸಾನುಭವ – ಯೋಗಿಯು ಆ ರಸದ ಮೂಲಕ ಪರಮಾನುಭವದಲ್ಲಿ ಲೀನನಾಗುವುದು (6) ರಸಸ್ಪೂರ್ತಿ – ಚೈತನ್ಯವು ದೇಹದ ಪ್ರತಿಯೊಂದು ಅಂಗದಲ್ಲಿ ತೇಜಸ್ಸಾಗಿ ಪ್ರಕಟವಾಗುವುದು (7) ರಸಲಹರಿ – ಭಾವಾತ್ಮಕ, ಆಧ್ಯಾತ್ಮಿಕ ಪರಾಕಾಷ್ಠೆಯ ಉಲ್ಲಾಸ, ತಾತ್ವಿಕ ಮಿಲನ (8) ರಸಸಮಾಧಿ – ರಸರೂಪ ಬ್ರಹ್ಮನೊಂದಿಗಿನ ಏಕೀಭಾವ – ಪರಮಾನಂದದ ಸ್ಥಿತಿ. ತಂತ್ರಗ್ರಂಥಗಳಲ್ಲಿ ಒಂದಾದ ರಸಹೃದಯತಂತ್ರದಲ್ಲಿ (ಪಾಠಾಂತರಾನುಸಾರ ಅಧ್ಯಾಯ 11 ಅಥವಾ 12) ರಸೋಲ್ಲಾಸಾದಿ ಅಷ್ಟಸಿದ್ಧಿಗಳ ಕುರಿತು ಬರುತ್ತದೆ. ರಸಸ್ಯಸ್ವತ ಏವಾಂತರುಲ್ಲಾಸಸ್ಸ್ಯಾತ್ಕೃತೇಯುಗೇ । ರಸೋಲ್ಲಾಸಾಖ್ಯಕಾಸಿದ್ಧಿಸ್ತಯಾ ಹಂತಿಕ್ಷುಧನಂ ನರಃ ।। ಸ್ತ್ರ್ಯಾದೀನಾಂ ನೈರಪೇಕ್ಷ್ಯೇಣ ಸದಾತೃಪ್ತಾಃ ಪ್ರಜಾಸ್ತಥಾ । ದ್ವಿತೀಯಾ ಸಿದ್ಧಿರುದ್ದಿಷ್ಟಾಸಾತೃಪ್ತಿರ್ಮುನಿಸತ್ತಮೈಃ ।। ಧರ್ಮೋತ್ತಮಂಚನಾಸ್ತ್ಯಾಸಾಂ ಸಾತೃತೀಯಾಭಿಧೀಯತೇ । ಚತುರ್ಥೀತುಲ್ಯತಾತಾ ಸಾಮಾಯುಷಸ್ಸುಖರೂಪಯೋಃ ।। ಐಕಾಂತ ಬಲಬಾಹುಲ್ಯಂ ವಿಶೋಕಾನಾಮ ಪಂಚಮೀ । ಪರಮಾತ್ಮ ಪರತ್ವೇನ ತಪೋಧ್ಯಾನಾದಿ ನಿಷ್ಠಿತಾ ।। ಷಷ್ಠೀ ಚ ಕಾಮಚಾರಿತ್ವಂ ಸಪ್ತಮೀ ಸಿದ್ಧಿರುಚ್ಯತೇ । ಅಷ್ಟಮೀ ಚ ಯಥಾಪ್ರೋಕ್ತಾಯತ್ರಕ್ವಚನ ಶಾಯಿತಾ ।। ಅರ್ಥಾತ್: (1) ಕೃತಯುಗದಲ್ಲಿ ರಸ (ಚೈತನ್ಯರಸ)ವು ಸ್ವತಃ ಅಂತರಂಗದಲ್ಲಿ ಉಲ್ಲಾಸಗೊಂಡಾಗ ರಸೋಲ್ಲಾಸವೆಂಬ ಮೊದಲನೇ ಸಿದ್ಧಿಯು ಉಂಟಾಗುತ್ತದೆ. ಈ ಸಿದ್ಧಿಯು ಸಾಧಕನ ಹಸಿವು, ದೇಹದ ಕ್ಷುಧೆ ಆಯಾಸ ಇವುಗಳನ್ನು ನಿವಾರಿಸುತ್ತದೆ. (2) ಸ್ತ್ರೀ ಮುಂತಾದ ಇಂದ್ರಿಯ ವಿಷಯಗಳ ಮೇಲೆ ಯಾವುದೇ ಆಸಕ್ತಿಯಿಲ್ಲದೇ ಯೋಗಿಯು ಸದಾ ಆಂತರಿಕ ತೃಪ್ತಿಯಲ್ಲಿ ನೆಲೆಸಿದಾಗ ಅದು ದ್ವಿತೀಯ ಸಿದ್ಧಿ ಅಥವಾ ಅತೃಪ್ತ ಸಿದ್ಧಿ ಎಂದು ಮುನಿಸತ್ತಮರು ಹೇಳಿದ್ದಾರೆ. (3) ಮೂರನೆಯ ಸಿದ್ಧಿಯು ಧರ್ಮೋತ್ತಮಾ. ಇದು ಸರ್ವೋತ್ತಮ ಧರ್ಮದ ಸ್ಥಿತಿಯಾಗಿದೆ. ಯಾವುದೇ ಅಶುದ್ಧಿ ಅಥವಾ ಅಧರ್ಮವಿಲ್ಲದ ಪರಿಪೂರ್ಣ ಸ್ಥಿತಿ. (4) ನಾಲ್ಕನೆಯ ಸಿದ್ಧಿ ತತ್ಸಾಮ್ಯಾ – ಯೋಗಿಯು ಆಯುಷ್ಯ ಮತ್ತು ಸುಖದಲ್ಲಿ ಸಮತ್ವವನ್ನು ಹೊಂದುತ್ತಾನೆ. ಅವನಿಗೆ ಜನನ-ಮರಣ ಅಥವಾ ಸುಖ-ದುಃಖಗಳಲ್ಲಿ ವ್ಯತ್ಯಾಸ ಕಾಣುವುದಿಲ್ಲ. (5) ಐದನೆಯ ಸಿದ್ಧಿ ವಿಶೋಕಾ. ಇದರಿಂದ ಯೋಗಿಯು ದೈಹಿಕ ಮತ್ತು ಮಾನಸಿಕ ಬಲದಲ್ಲಿ ಪರಿಪೂರ್ಣನಾಗುತ್ತಾನೆ. ಅವನಲ್ಲಿ ಯಾವುದೇ ದುಃಖ, ಶೋಕ ಅಥವಾ ದುರ್ಬಲತೆಯು ಇರುವುದಿಲ್ಲ. (6) ಆರನೆಯದು ಪರಮಾತ್ಮನಿಷ್ಠಾ ಸಿದ್ಧಿ. ಅವನು ಪರಮಾತ್ಮನಲ್ಲಿಯೇ ಸ್ಥಿರನಾಗಿರುತ್ತಾನೆ. ತಪಸ್ಸು, ಧ್ಯಾನ ಮತ್ತು ಆತ್ಮಚಿಂತನೆಗಳಲ್ಲಿ ಶ್ರದ್ಧೆಯಿಂದ ನೆಲೆಸಿರುತ್ತಾನೆ. (7) ಏಳನೆಯ ಸಿದ್ಧಿ ಕಾಮಾಚಾರಾ ಸಿದ್ಧಿಯು. ಇದರಿಂದ ಸಾಧಕನು ತನ್ನ ಇಚ್ಛೆಯಂತೆ ಎಲ್ಲೆಡೆ ಸಂಚರಿಸಲು, ರೂಪಾಂತರಗೊಳ್ಳಲು, ಕಾರ್ಯಸಾಧನೆ ಮಾಡಲು ಶಕ್ತನಾಗುತ್ತಾನೆ. (8) ಎಂಟನೆಯದು ಯಥಾಪ್ರೋಕ್ತಾ ಸಿದ್ಧಿ. ಇದು ಪೂರ್ವೋಕ್ತ ಎಲ್ಲ ಸಿದ್ಧಿಗಳ ಸಮಪೂರ್ಣ ಸ್ಥಿತಿ. ಯೋಗಿಯು ಎಲ್ಲೆಡೆ ಸ್ಥಿತನಾಗುವ, ಬ್ರಹ್ಮತತ್ತ್ವದೊಂದಿಗೆ ಏಕೀಭವಗೊಳ್ಳುವ ಪರಮ ಸ್ಥಿತಿ.

[24] ಪುರಿ=ರಾಜನು ವಾಸಿಸುವ ಸ್ಥಳ.

[25] ಖರ್ವಟ=ಒಂದೆಡೆ ಗ್ರಾಮವೂ ಮತ್ತೊಂದೆಡೆ ನಗರವೂ ಇರುವ ನದೀತೀರ ಪ್ರದೇಶ

[26] ಇಲ್ಲಿಯ ಶ್ಲೋಕ 137-141 ಶ್ರೀವಿಷ್ಣುಪುರಾಣದ ಪ್ರಥಮಾಂಶದ ಅಧ್ಯಾಯ 6 ರ ಶ್ಲೋಕ 21-25ನ್ನು ಹೋಲುತ್ತವೆ.

[27] ತಾಮಿಸ್ರ=ಕತ್ತಲೆ. ಇದು ಆಧ್ಯಾತ್ಮಿಕ ಅಜ್ಞಾನ ಮತ್ತು ದ್ರೋಹದ ಕತ್ತಲೆಯ ಸಂಕೇತ. ಪರದಾರೆಯನ್ನು ಮೋಸದಿಂದ ವಶಪಡಿಸಿ ಕೊಳ್ಳುವವರು ಅಥವಾ ಇತರರ ಸಂಪತ್ತನ್ನು ಕಪಟದಿಂದ ಕಸಿದುಕೊಳ್ಳುವವರು ಈ ನರಕಕ್ಕೆ ಬೀಳುತ್ತಾರೆ. ಅವರು ಕತ್ತಲಾದ ಗುಹೆಗಳಲ್ಲಿ ಬಂಧಿತರಾಗುತ್ತಾರೆ. ಆಹಾರ-ನೀರು ಇಲ್ಲದೇ ಕಷ್ಟಪಟ್ಟು ದೇಹವು ಬಲಹೀನವಾಗುತ್ತದೆ. ನರಕದ ರಕ್ಷಕರು ಅವರನ್ನು ಬಲತ್ಕಾರವಾಗಿ ಬಡಿದು ಎಳೆಯುತ್ತಾರೆ.

[28] ಅಂಧತಾಮಿಸ್ರ=ಸಂಪೂರ್ಣಕತ್ತಲೆ. ಇದು ದಿವ್ಯಜ್ಞಾನವಿಲ್ಲದ ದುಷ್ಟಮನಸ್ಸಿನ ಸ್ಥಿತಿ.  ಧರ್ಮದ ಹೆಸರಿನಲ್ಲಿ ದೇವ-ಗುರು-ಪಿತೃಗಳ ಗೌರವವನ್ನು ಕಳೆದು ಇತರರನ್ನು ಮೋಸಗೊಳಿಸುವವರು ಈ ನರಕಕ್ಕೆ ಬೀಳುತ್ತಾರೆ. ಅವರು ಅಂಧಕಾರದೊಳಗೆ ಎಸೆಯಲ್ಪಟ್ಟು ಕಣ್ಣು ಕಾಣದ ಸ್ಥಿತಿಯನ್ನು ಹೊಂದುತ್ತಾರೆ. ಬಾಧೆ ಮತ್ತು ಭಯದಿಂದ ಚಿತ್ತಶಕ್ತಿಯನ್ನು ಕಳೆದುಕೊಳ್ಳುತ್ತಾರೆ.

[29] ರೌರವ ನರಕದಲ್ಲಿ “ರುರು” ಎಂಬ ಭಯಾನಕ ಮಾಂಸಾಹಾರೀ ಸರ್ಪಾಕಾರದ ಪ್ರಾಣಿಗಳು ಪಾಪಿಗಳನ್ನು ಹಿಂಸಿಸುತ್ತವೆ. ಅವರ ಕೂಗಿನಿಂದ ಈ ನರಕಕ್ಕೆ “ರೌರವ” ಎಂಬ ಹೆಸರು ಬಂದಿದೆ. ಸ್ವಾರ್ಥಕ್ಕಾಗಿ ಇತರರಿಗೆ ಭಯಂಕರ ಹಾನಿಯನ್ನು ಮಾಡುವವರು ಅಥವಾ ಜೀವಿಗಳನ್ನು ಅನಾವಶ್ಯಕವಾಗಿ ಹಿಂಸಿಸುವವರು ಇಲ್ಲಿ ಬೀಳುತ್ತಾರೆ.

[30] ಮಹಾರೌರವ ನರಕದಲ್ಲಿ ರೌರವಕ್ಕಿಂತಲೂ ಭಯಾನಕ ಕೃಮಿಸರ್ಪಗಳು ಪಾಪಿಯನ್ನು ಜೀವಂತವಾಗಿಯೇ ಕಡಿಯುತ್ತವೆ. ಪಾಪಿಯ ಚಿತ್ತವು ನಿರಂತರ ನೋವಿನಲ್ಲಿ ತೊಳಲುತ್ತದೆ. ಸ್ವಂತ ಜೀವ ಉಳಿಸಿಕೊಳ್ಳಲು ಇತರರ ಪ್ರಾಣವನ್ನು ಬಲಿಕೊಡುವವರು ಅಥವಾ ತಮ್ಮ ಸ್ವಾರ್ಥಕ್ಕಾಗಿ ಪ್ರಾಣಿಗಳನ್ನು ಹಿಂಸಿಸುವವರು ಇಲ್ಲಿ ಬೀಳುತ್ತಾರೆ.

[31] ಅಸಿ=ಕತ್ತಿ, ಪತ್ರ=ಎಲೆ. ಅಸಿಪತ್ರ ನರಕದಲ್ಲಿ ಕತ್ತಿಯಂತೆ ಉರಿಯುವ ಎಲೆಗಳಿರುವ ಮರಗಳ ಕಾಡಿದೆ. ಪಾಪಿಗಳು ಅದರೊಳಗೆ ಓಡಾಡುವಾಗ ಕತ್ತಿಯ ಎಲೆಗಳು ದೇಹವನ್ನು ಕಡಿಯುತ್ತವೆ. ಅವರು ಬೀಳುತ್ತಿದ್ದರೂ ಪುನಃ ಎದ್ದು ಹೋಗಬೇಕಾಗುತ್ತದೆ. ಅಸಹನೀಯ ಕಷ್ಟ. ಧರ್ಮಗ್ರಂಥಗಳನ್ನು ತಿರಸ್ಕರಿಸುವವರು, ಸನಾತನ ಮಾರ್ಗವನ್ನು ನಿಂದಿಸುವವರು, ನಾಸ್ತಿಕರು ಮತ್ತು ದುರ್ಜನರು ಈ ನರಕಕ್ಕೆ ಬೀಳುತ್ತಾರೆ.

[32] ಕಾಲಸೂತ್ರ ಎಂದರೆ ಕಾಲವೇ ಬಂಧನ. ಅಂತ್ಯವಿಲ್ಲದ ಯಾತನೆ. ಅಲ್ಲಿ ನೆಲವು ಉರಿಯುತ್ತಿರುವ ಅಗ್ಗಿಯಂತೆ ಕಾವಾಗಿರುತ್ತದೆ, ಮೇಲೆ ಸೂರ್ಯನ ತಾಪವೂ ಇರುತ್ತದೆ. ಅಲ್ಲಿ ಬಿದ್ದವರು ದಿನರಾತ್ರಿ ಉಷ್ಣತೆಯಿಂದ ಸುಡುತ್ತಾ, ಕಾಡಿನಿಂದ, ಹುಳಗಳಿಂದ, ಶೋಕದಿಂದ ನರಳುತ್ತಾರೆ. ತಮ್ಮ ತಾಯ್ತಂದೆ, ಬ್ರಾಹ್ಮಣ, ಅಥವಾ ಗುರುವಿನ ವಿರುದ್ಧ ಪಾಪಮಾಡುವವರು, ಹಾಗೂ ಧರ್ಮನಿಂದಕರು ಈ ನರಕಕ್ಕೆ ಬೀಳುತ್ತಾರೆ.

[33] ಅ-ವೀಚಿ ಎಂದರೆ ವಿಶ್ರಾಂತಿಯಿಲ್ಲದುದು. ಅಲ್ಲಿ ಪಾಪಿಯು ಆಳವಾದ ಕುಣಿಯಲ್ಲಿ ಬೀಳುತ್ತಾನೆ; ಅದರ ಅಡಿಯಲ್ಲಿ ಉರಿ-ಅಗ್ನಿ, ಮೇಲೆ ಕಲ್ಲಿನ ಮಳೆ. ಅವರು ಬೀಳುತ್ತಿದ್ದರೂ ತಕ್ಷಣ ಮೇಲಕ್ಕೆ ಎಸೆದಲ್ಪಟ್ಟು ಮತ್ತೆ ಬೀಳುತ್ತಾರೆ — ಅನಂತ ಚಕ್ರ. ಅತಿ ಕ್ರೂರರು — ದೇವನಿಂದಕರು, ಶರಣಾಗತರ ಹತ್ಯಾಕಾರರು, ಪಾಪವನ್ನು ಧರ್ಮವೆಂದು ಬೋಧಿಸುವವರು ಈ ನರಕಕ್ಕೆ ಬೀಳುತ್ತಾರೆ.

[34] ರುದ್ರನು ಸೃಷ್ಟಿಸಿದ ನಾರಿಯರಲ್ಲಿ ಶತರೂಪೆಯೂ ಒಬ್ಬಳೇ?

[35] ಖ್ಯಾತಿ-ಭೃಗು, ಶಾಂತಿ-ಭಗ, ಸಂಭೂತಿ-ಮರೀಚಿ, ಸ್ಮೃತಿ-ಅಂಗಿರಸ, ಪ್ರೀತಿ-ಪುಲಸ್ತ್ಯ, ಕ್ಷಮಾ-ಪುಲಹ, ಸನ್ನತಿ-ಕ್ರತು, ಅನಸೂಯ-ಅತ್ರಿ, ಊರ್ಜಾ-ವಸಿಷ್ಠ, ಸ್ವಾಹಾ-ಅಗ್ನಿ, ಮತ್ತು ಸ್ವಧಾ-ಪಿತೃಗಳು.

[36] ನೀಲಲೋಹಿತ=ಕಪ್ಪು ಮತ್ತು ಕೆಂಪು ಬಣ್ಣದವನು.

Leave a Reply

Your email address will not be published. Required fields are marked *