ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ದ್ವಿತೀಯೋಽನುವಾಕಃ

[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]

ಅನ್ನಾದ್ವೈ ಪ್ರಜಾಃ ಪ್ರಜಾಯಂತೇ ಯಾಃ ಕಾಶ್ಚ ಪೃಥಿಗ್ಂ ಶ್ರಿತಾಃ ಅಥೋ ಅನ್ನೇನೈವ ಜೀವಂತಿ ಅಥೈನದಪಿ ಯಂತ್ಯಂತತಃ ಅನ್ನಗ್ಂ ಹಿ ಭೂತಾನಾಂ ಜ್ಯೇಷ್ಠಮ್ ತಸ್ಮಾತ್ ಸರ್ವೌಷಧಮುಚ್ಯತೇ ಸರ್ವಂ ವೈ ತೇಽನ್ನಮಾಪ್ನುವಂತಿ ಯೇಽನ್ನಂ ಬ್ರಹ್ಮೋಪಾಸತೇ ಅನ್ನಗ್ಂ ಹಿ ಭೂತಾನಾಂ ಜ್ಯೇಷ್ಠಮ್ ತಸ್ಮಾತ್ ಸರ್ವೌಷಧಮುಚ್ಯತೇ ಅನ್ನಾದ್ ಭೂತಾನಿ ಜಾಯಂತೇ ಜಾತಾನ್ಯನ್ನೇನ ವರ್ಧಂತೇ ಅದ್ಯತೇಽತ್ತಿ ಚ ಭೂತಾನಿ ತಸ್ಮಾದನ್ನಂ ತದುಚ್ಯತ ಇತಿ ।। 1 ।।

ಅನ್ನದಿಂದಲೇ ಪ್ರಜೆಗಳು ಹುಟ್ಟುತ್ತವೆ. ಭೂಮಿಯನ್ನಾಶ್ರಯಿಸಿರುವ ಎಲ್ಲ ಪ್ರಾಣಿಗಳೂ ಅನ್ನದಿಂದಲೇ ಜೀವಿಸಿರುತ್ತವೆ. ಮತ್ತೆ ಕೊನೆಯಲ್ಲಿ ಅನ್ನವನ್ನೇ ಸೇರುತ್ತವೆ. ಭೂತಗಳಲ್ಲೆಲ್ಲಾ ಅನ್ನವೇ ಹಿರಿಯದು. ಆದ್ದರಿಂದ ಎಲ್ಲಕ್ಕೂ ಔಷಧಿಯು. ಅನ್ನದಿಂದ ಪ್ರಾಣಿಗಳು ಹುಟ್ಟುತ್ತವೆ. ಹುಟ್ಟಿದವು ಅನ್ನದಿಂದ ಬೆಳೆಯುತ್ತವೆ. ಅನ್ನವಾಗಿ ತಿನ್ನಲ್ಪಡುತ್ತದೆ. ಮತ್ತು ಭೂತಗಳನ್ನು ತಿನ್ನುತ್ತದೆ. ಆದ್ದರಿಂದ ಅದು ಅನ್ನವೆನಿಸುತ್ತದೆ.

ರಸ-ರೇತಸ್ಸು ಮೊದಲಾದ ರೂಪದಿಂದ ಪರಿಣಮಿಸುವ ಅನ್ನದಿಂದಲೇ ಪ್ರಜೆಗಳು ಅಂದರೆ ಪ್ರಾಣಿಗಳು ಹುಟ್ಟುತ್ತವೆ. ಈ ಭೂಮಿಯ ಮೇಲಿರುವ ಎಲ್ಲವೂ ಅನ್ನದಿಂದಲೇ ಹುಟ್ಟುತ್ತವೆ. ಮತ್ತು ಹುಟ್ಟಿದವು ಅನ್ನದಿಂದಲೇ ಜೀವಿಸಿರುತ್ತವೆ. ಪ್ರಾಣವನ್ನು ಧರಿಸಿರುತ್ತವೆ. ಬೆಳೆಯುತ್ತಿರುತ್ತವೆ. ಕೊನೆಗೆ ಅನ್ನದಲ್ಲಿಯೇ ಹೋಗಿ ಅಡಗುತ್ತವೆ. ಕೊನೆಯಲ್ಲಿ ಎಂದರೆ ಜೀವನ ರೂಪದ ಬೆಳವಣಿಗೆಯು ಮುಗಿದ ನಂತರ. ಏಕೆಂದರೆ ಅನ್ನವು ಪ್ರಾಣಿಗಳಿಗೆ ಹಿರಿಯದು ಅಂದರೆ ಅವುಗಳಿಗಿಂತ ಮೊದಲು ಹುಟ್ಟಿದುದು. ಆದ್ದರಿಂದ ಎಲ್ಲಾ ಪ್ರಜೆಗಳೂ ಅನ್ನದಿಂದ ಹುಟ್ಟಿ, ಅನ್ನದಿಂದ ಬದುಕಿಕೊಂಡಿತ್ತು, ಅನ್ನದಲ್ಲಿಯೇ ಅಡಗುತ್ತವೆ. ಅನ್ನವು ಸರ್ವೌಷಧವು ಎಂದರೆ ಎಲ್ಲಾ ಪ್ರಾಣಿಗಳ ದೇಹಗಳನ್ನೂ ಸುಡುವ ಹಸಿವನ್ನು ಶಾಂತಗೊಳಿಸುವಂಥಹುದು.

ಜಾತಾನ್ಯನ್ನೇನ ವರ್ಧಂತೇ – ಅನ್ನಬ್ರಹ್ಮವನ್ನು ಬಲ್ಲವನು ಎಂದರೆ ಅನ್ನವನ್ನು ಬ್ರಹ್ಮವೆಂದು ಉಪಾಸನೆ ಮಾಡುವವರು, ಎಲ್ಲಾ ಅನ್ನವನ್ನೂ ಅಂದರೆ ಒಟ್ಟು ಅನ್ನ ಸಮೂಹವನ್ನೇ ಪಡೆದುಕೊಳ್ಳುತ್ತಾರೆ. “ಅನ್ನಜಃ, ಅನ್ನಾತ್ಮಾ, ಅನ್ನಪ್ರಲಯೋಽಹಮ್” ಅರ್ಥಾತ್: ನಾನು ಅನ್ನದಿಂದ ಹುಟ್ಟಿ, ಅನ್ನಸ್ವರೂಪನಾಗಿ, ಅನ್ನದಲ್ಲಿ ಅಡಗುತ್ತೇನೆ. ಆದ್ದರಿಂದ ಅನ್ನವು ಬ್ರಹ್ಮವು” ಎಂದು ಉಪಾಸನೆ ಮಾಡುವವರು ಅನ್ನಬ್ರಹ್ಮವಿದರು.

ಅದ್ಯತೇಽತ್ತಿ ಚ ಭೂತಾನಿ – ಇಲ್ಲಿ ಅನ್ನ ಎಂಬ ಶಬ್ದದ ಅರ್ಥವನ್ನು ತಿಳಿಸುತ್ತದೆ. ಪ್ರಾಣಿಗಳಿಂದ ತಿನ್ನಲ್ಪಡುತ್ತದೆ ಅಥವಾ ಭೋಗಿಸಲ್ಪಡುತ್ತದೆಯಾದ್ದರಿಂದ ಹಾಗೂ ತಾನು ಆ ಭೂತಗಳನ್ನು ತಿನ್ನುತ್ತದೆಯಾದ್ದರಿಂದ ಅದು ಅನ್ನ.

ತಸ್ಮಾದ್ವಾ ಏತಸ್ಮಾದನ್ನರಸಮಯಾತ್ ಅನ್ಯೋಽಂತರ ಆತ್ಮಾ ಪ್ರಾಣಮಯಃ ತೇನೈಷ ಪೂರ್ಣಃ ।। 2 ।।

ಆ ಅನ್ನಮಯರಸ ಆತ್ಮನಿಗಿಂತಲೂ ಒಳಗಿನ ಇನ್ನೊಬ್ಬ ಪ್ರಾಣಮಯ ಆತ್ಮನಿದ್ದಾನೆ. ಅವನು ಪ್ರಾಣದಿಂದ ತುಂಬಿಕೊಂಡಿದ್ದಾನೆ.

ಈಗ ಹೇಳಿದ ಅನ್ನರಸಮಯ ಶರೀರಕ್ಕಿಂತಲೂ ಬೇರೆಯಾದ, ಆ ಅನ್ನರಮಯಶರೀರದ ಒಳಗೆ, ಶರೀರದಂತೆಯೇ ಅದೇ ಆತ್ಮವೆಂದು ತಪ್ಪಾಗಿ ಕಲ್ಪಿತನಾಗಿರುವ, ಪ್ರಾಣಮಯ ಆತ್ಮವಿದೆ. ಪ್ರಾಣ ಅಂದರೆ ವಾಯು. ಅದರಿಂದ ತುಂಬಿರುವವನು. ಅದೇ ಹೆಚ್ಚಾಗಿರುವವವನು. ಗಡಿಗೆಯು ಗಾಳಿಯಿಂದ ತುಂಬಿಕೊಂಡಿರುವಂತೆ ಅನ್ನಮಯ ಶರೀರವನ್ನು ಪ್ರಾಣವು ತುಂಬಿಕೊಂಡಿದೆ. ಈ ಪ್ರಾಣಮಯ ಆತ್ಮನು ಪುರುಷನಂತೆಯೇ, ಪುರುಷನ ಆಕಾರದಂತೆಯೇ ತಲೆ, ಪಕ್ಷ ಮೊದಲಾದವುಗಳಿಂದ ಕೂಡಿದ್ದಾನೆ. ಆದರೆ ತಾನೇ ಸ್ವತಂತ್ರ ಪುರುಷನಾಗಿರುವುದಿಲ್ಲ. ಅನ್ನರಸಮಯನಾದ ಆತ್ಮನ ಪುರುಷಾಕಾರವನ್ನು ಅನುಸರಿಸಿ ಈ ಪ್ರಾಣಮಯ ಶರೀರನೂ ಪುರುಷಾಕಾರದಲ್ಲಿರುತ್ತಾನೆ. ಅಚ್ಚಿನಲ್ಲಿ ಕರಗಿಸಿದ ತಾಮ್ರವನ್ನು ಸುರಿದಾಗ ಅಚ್ಚು ಯಾವ ಪ್ರತಿಮೆಯಾಗಿದ್ದಿರುತ್ತದೆಯೋ ಅದೇ ಪ್ರತಿಮೆಯ ಆಕಾರವನ್ನು ತಾಳುವಂತೆ, ಹಿಂದಿನ ಆತ್ಮನ ಪುರುಷಾಕಾರವನ್ನೇ ಅನುಸರಿಸಿ ಮುಂದಿನ ಆತ್ಮನು ಪುರುಷಾಕಾರವನ್ನು ಪಡೆಯುತ್ತಾನೆ. ಹಿಂದಿನ ಆತ್ಮವು ಅದರ ಮುಂದಿನ ಆತ್ಮನಿಂದ ತುಂಬಿಕೊಂಡಿರುತ್ತಾನೆ.

ಸ ವಾ ಏಷ ಪುರುಷವಿಧ ಏವ ತಸ್ಯ ಪುರುಷವಿಧತಾಮ್ ಅನ್ವಯಂ ಪುರುಷವಿಧಃ ತಸ್ಯ ಪ್ರಾಣ ಏವ ಶಿರಃ ವ್ಯಾನೋ ದಕ್ಷಿಣಃ ಪಕ್ಷಃ ಅಪಾನ ಉತ್ತರಃ ಪಕ್ಷಃ ಆಕಾಶ ಆತ್ಮಾ ಪೃಥಿವೀ ಪುಚ್ಛಂ ಪ್ರತಿಷ್ಠಾ ತದಪ್ಯೇಷ ಶ್ಲೋಕೋ ಭವತಿ ।। 3 ।। ಇತಿ ದ್ವಿತೀಯೋಽನುವಾಕಃ ।। 2 ।।

ಅವನು ಪುರುಷವಿಧನಾಗಿಯೇ ಇದ್ದಾನೆ. ಆತನ ಪುರುಷವಿಧವನ್ನು ಅನುಸರಿಸಿ ಇವನು ಪುರುಷನಂತೆಯೇ ಇರುತ್ತಾನೆ. ಇವನಿಗೆ ಪ್ರಾಣವೇ ತಲೆ. ವ್ಯಾನವು ದಕ್ಷಿಣಪಕ್ಷ. ಅಪಾನವು ಉತ್ತರಪಕ್ಷ. ಆಕಾಶವು ಆತ್ಮ. ಪೃಥ್ವಿಯು ಪುಚ್ಛ. ಪ್ರತಿಷ್ಠೆ.

ಈ ಪ್ರಾಣಮಯ ಆತ್ಮನಿಗೆ ಪ್ರಾಣವೇ ತಲೆ. ಬಾಯಿ ಮತ್ತು ಮೂಗುಗಳಿಂದ ಹೊರಗೆ ಬರುವ ಪ್ರಾಣದ ಒಂದು ಆವೃತ್ತಿಯು ಅವನ ತಲೆ ಎಂದು ಕಲ್ಪಿಸಲಾಗಿದೆ. ವ್ಯಾನವು ಬಲತೋಳು. ಅಪಾನವು ಎಡತೋಳು. ಆಕಾಶದಲ್ಲಿರುವ ಸಮಾನ ವೃತ್ತಿಯಲ್ಲಿರುವ ವಾಯುವು ಆತ್ಮನಂತೆ ಇರುವುದರಿಂದ ಆತ್ಮವು. ಇಲ್ಲಿ ಆಕಾಶ ಎಂದರೆ ಸಮಾನವಾಯು ಎಂದೇ ಅರ್ಥಮಾಡಿಕೊಳ್ಳಬೇಕು. ಪೃಥ್ವಿಯು ಪುಚ್ಛ ಮತ್ತು ಪ್ರತಿಷ್ಠೆ ಎಂದರೆ ಇಲ್ಲಿ ಪೃಥ್ವೀ ದೇವತೆಯು ಆಧ್ಯತ್ಮಿಕವಾದ ಪ್ರಾಣವನ್ನು ಹಿಡಿದಿಟ್ಟಿರುವಂತಿದೆ. ಏಕೆಂದರೆ ಇದು ಎಲ್ಲವೂ ನಿಂತಿರುವುದಕ್ಕೆ ಕಾರಣವಾಗಿರುತ್ತದೆ. “ಸೈಷಾ ಪುರುಷಸ್ಯಾಪಾನಮವಷ್ಟಭ್ಯ” ಅರ್ಥಾತ್ “ಈ ಪೃಥಿವಿಯು ಪುರುಷನ ಅಪಾನವೃತ್ತಿಯನ್ನು ಹಿಡಿದೆಳೆದುಕೊಂಡಿರುತ್ತದೆ” (ಪ್ರಶ್ನೋಪನಿಷತ್ 3-8). ಹಾಗಿಲ್ಲದಿದ್ದರೆ ಉದಾನವೃತ್ತಿಯಿಂದ ಶರೀರವು ಮೇಲಕ್ಕೆ ಹೋಗಿ ಬಿಡುತ್ತಿತ್ತು ಅಥವಾ ಭಾರದಿಂದ ಕೆಳಕ್ಕೆ ಬೀಳುತ್ತಿತ್ತು. ಆದ್ಧರಿಂದ ಪೃಥ್ವಿಯು ಪ್ರಾಣಮಯಾತ್ಮನನ್ನು ಮೇಲಕ್ಕಿತ್ತಿ ಹಿಡಿದಿರುವ ಪುಚ್ಛವು. ಅದೇ ವಿಷಯದಲ್ಲಿ ಈ ಶ್ಲೋಕವಿದೆ.

Leave a Reply

Your email address will not be published. Required fields are marked *