ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಸಪ್ತಮೋಽನುವಾಕಃ
[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]
ಅಸದ್ವಾ ಇದಮಗ್ರ ಆಸೀತ್ । ತತೋ ವೈ ಸದಜಾಯತ । ತದಾತ್ಮಾನಗ್ಂ ಸ್ವಯಮಕುರುತ । ತಸ್ಮಾತ್ತತ್ಸುಕೃತಮುಚ್ಯತ ಇತಿ ।। 1 ।।
ಇದು ಮೊದಲು ಅಸತ್ತೇ ಆಗಿತ್ತು. ಅದರಿಂದಲೇ ಸತ್ತು ಹುಟ್ಟಿತು. ಅದು ತನ್ನನ್ನು ತಾನೇ ಉಂಟುಮಾಡಿಕೊಂಡಿತು. ಆದರಿಂದ ಅದು ಸುಕೃತ ಎನಿಸುತ್ತದೆ.
ಬ್ರಹ್ಮವು ಇದೆಯೋ ಇಲ್ಲವೋ ಎಂಬ ಅನುಪ್ರಶ್ನೆಯು ಪ್ರಕೃತವಾಗಿತ್ತು. ಅದಕ್ಕೆ ಉತ್ತರಿಸುವಾಗ “ಆತ್ಮಾ ಅಕಾಮಯತ ಬಹು ಸ್ಯಾಮ್” – ಆತ್ಮನು ಬಹುವಾಗುತ್ತೇನೆಂದು ಕಾಮಿಸಿದನು – ಎಂದು ಹೇಳಲಾಯಿತು. ಅವನು ಈ ಕಾಮಕ್ಕೆ ಅನುಗುಣವಾಗಿ ಸತ್ತು-ತ್ಯತ್ತು ಮೊದಲಾದ ಸ್ವಭಾವವಿರುವ ಆಕಾಶವೇ ಮೊದಲಾದ ಕಾರ್ಯವನ್ನು ಸೃಷ್ಟಿಸಿ ಅದರೊಳಗೆ ಹೊಕ್ಕು, ನೋಡುವವನಾಗಿ, ಕೇಳುವವನಾಗಿ, ಅಲೋಚಿಸುವವನಾಗಿ, ಅರಿತುಕೊಳ್ಳುವವನಾಗಿ, ಬಹುವಾದನು. ಆದ್ದರಿಂದ ಆಕಾಶವೇ ಮೊದಲಾದವುಗಳಿಗೆ ಕಾರಣವಾಗಿರುವ ಅದೇ ಬ್ರಹ್ಮವು ಕಾರ್ಯದಲ್ಲಿದ್ದುಕೊಂಡು ಪರಮಾಕಾಶದಲ್ಲಿರುವ ಹೃದಯಗುಹೆಯಲ್ಲಿ ಇದ್ದು, ಆ ಹೃದಯದ ಪ್ರತ್ಯಗಳ ಆಯಾ ಹೊಳಪಿನ ಬಲದಿಂದ ಕಂಡುಬರುವುದರಿಂದ ಅದು “ಇದೆ” ಎಂದೇ ತಿಳಿಯಬೇಕು ಎಂದು ಹೇಳಿಯಾಯಿತು. ಹಿಂದಿನ ಐದು ಪರ್ಯಾಯಗಳಲ್ಲಿಯೂ ಹೇಗೆ ಅನ್ನಮಯನೇ ಮೊದಲಾದ ಆತ್ಮರನ್ನು ಪ್ರಕಾಶಗೊಳಿಸುವ ಮಂತ್ರಗಳು ಬಂದಿದ್ದವೋ ಹಾಗೆಯೇ ಎಲ್ಲಕ್ಕೂ ತೀರ ಒಳಗಿರುವ ಆತ್ಮನು ಇರುವನೆಂಬುದನ್ನು ಕಾರ್ಯದ್ವಾರದಿಂದ ಈ ಮಂತ್ರವು ತಿಳಿಸುತ್ತದೆ.
ಬ್ರಹ್ಮವು ಮೊದಲು ಅಸತ್ತೇ ಆಗಿತ್ತು. ಇಲ್ಲಿ ಅಸತ್ತು ಎಂದರೆ ಬಿಡಿಯಾಗಿರುವ ನಾಮ-ರೂಪಗಳೆಂಬ ವಿಶೇಷ ರೂಪಕ್ಕೆ ವಿರುದ್ಧ ರೂಪದ, ವಿಕಾರವಾಗದೇ ಇರುವ, ಬ್ರಹ್ಮದ ಹೆಸರು. ಇಲ್ಲಿ ಅಸತ್ತು ಎಂದರೆ ಇಲ್ಲದೇ ಇದ್ದದ್ದು ಎಂಬ ಅರ್ಥವಲ್ಲ. ಏಕೆಂದರೆ ಅಸತ್ತಿನಿಂದ ಸತ್ತು ಹುಟ್ಟಲಾರದು. ಮತ್ತು ಇಲ್ಲಿ “ಇದು” ಎಂದರೆ ನಾಮ-ರೂಪಗಳೆಂಬ ವಿಶೇಷ ರೂಪವಿರುವ ವ್ಯಾಕೃತವಾದ ಜಗತ್ತು. ಮೊದಲು ಎಂದರೆ, ಮುಂಚೆ, ಸೃಷ್ಟಿಯ ಪೂರ್ವದಲ್ಲಿ, ಈ ಜಗತ್ತು ಅಸತ್ತೆಂಬ ಶಬ್ದಕ್ಕೆ ವಾಚ್ಯವಾದ ಬ್ರಹ್ಮವೇ ಆಗಿತ್ತು. ಅದರಿಂದಲೇ, ಅಂದರೆ, ಆ ಅಸತ್ತಿನಿಂದಲೇ, ಸತ್ತು, ಎಂದರೆ, ನಾಮ-ರೂಪವೆಂಬ ವಿಶೇಷರೂಪಗಳಿಂದ ವಿಂಗಡವಾಗಿರುವ ಈ ಜಗತ್ತು ಹುಟ್ಟಿತು. ಉಂಟಾಯಿತು. ತಂದೆಗಿಂತ ಬೇರೆಯಾಗಿ ಮಗನು ಹುಟ್ಟುವಂತೆ, ಬ್ರಹ್ಮಕ್ಕಿಂತ ಬೇರೆಯಾದ ಜಗತ್ತು ಹುಟ್ಟಿತೋ ಎಂದರೆ ಅಲ್ಲ ಎಂದು ಶ್ರುತಿಯು ಹೇಳುತ್ತಿದೆ. ಆ ಅಸತ್ ಎಂಬ ಶಬ್ದದಿಂದ ಹೇಳಲ್ಪಡುವ ಬ್ರಹ್ಮವು ತಾನೇ ತನ್ನನ್ನು ಜಗತ್ತನ್ನಾಗಿ ಮಾಡಿಕೊಂಡಿತು.
ಈ ಕಾರಣದಿಂದ ಬ್ರಹ್ಮವೇ ಸುಕೃತ ಎಂದರೆ ಸ್ವಯಂಕರ್ತೃ ಎಂದು ಎನಿಸಿಕೊಳ್ಳುತ್ತದೆ. ತಾನೇ ಸ್ವತಂತ್ರವಾಗಿ ಮಾಡುವುದು. ಮತ್ತೊಂದರ ಪ್ರೇರಣೆಯಿಂದ ಅಥವಾ ಸಹಾಯದಿಂದ ಮಾಡಿದ್ದಲ್ಲ. ಬ್ರಹ್ಮವೇ ಎಲ್ಲಕ್ಕೂ ಕಾರಣವಾಗಿರುವುದರಿಂದ ಅದು ಸ್ವಯಂಕರ್ತೃವಾಗುತ್ತದೆ. ಅಥವಾ ಬ್ರಹ್ಮವು ತಾನೇ ಎಲ್ಲವನ್ನೂ ಎಲ್ಲದರ ರೂಪದಿಂದ ಮಾಡಿತಾದ್ದರಿಂದ ಪುಣ್ಯರೂಪದಿಂದಲೂ ಅದೇ ಬ್ರಹ್ಮವು ಕಾರಣವಾಗಿರುತ್ತದೆಯಾಗಿ ಸುಕೃತ ಎನಿಸಿಕೊಳ್ಳುತ್ತದೆ.
ಯದ್ವೈ ತತ್ ಸುಕೃತಮ್ । ರಸೋ ವೈ ಸಃ । ರಸಗ್ಂ ಹ್ಯೇವಾಯಂ ಲಬ್ಧ್ವಾಽಽನಂದೀ ಭವತಿ ।। 2 ।। ಕೋ ಹ್ಯೇವಾನ್ಯಾತ್ಕಃ ಪ್ರಾಣ್ಯಾತ್ । ಯದೇಷ ಆಕಾಶ ಆನಂದೋ ನ ಸ್ಯಾತ್ । ಏಷ ಹ್ಯೇವಾಽಽನಂದಯಾತಿ ।। 3 ।।
ಈ ಸುಕೃತವೆನ್ನುವುದು ಇದೆಯಲ್ಲ ಅದು ರಸವೇ. ರಸವನ್ನು ಪಡೆದೇ ಅಲ್ಲವೇ ಇವನು ಆನಂದಿಯಾಗುತ್ತಾನೆ? ಆ ಆಕಾಶದಲ್ಲಿ ಆನಂದವು ಇಲ್ಲದೇ ಇದ್ದರೆ ಯಾರು ತಾನೇ ಉಸಿರು ತೆಗೆದುಕೊಂಡಾನು, ಯಾರು ತಾನೇ ಉಸಿರು ಬಿಟ್ಟಾನು? ಇವನೇ ಅಲ್ಲವೇ ಆನಂದಪಡಿಸುವವನು?
ಮೇಲೆ ಹೇಳಿದ ಸುಕೃತ ಎನ್ನುವುದು ರಸವು. ರಸ ಎಂದರೆ ತೃಪ್ತಿಗೆ ಕಾರಣವಾಗಿ ಆನಂದವನ್ನುಂಟುಮಾಡುವ ಸಿಹಿ, ಹುಳಿ, ಮೊದಲಾದವುಗಳು. ಈ ರಸವನ್ನೇ ಪಡೆದುಕೊಂಡರೆ, ದೊರಕಿಸಿಕೊಂಡರೆ, ಮನುಷ್ಯನು ಆನಂದಿಯಾಗುತ್ತಾನೆ. ಸುಖಿಯಾಗುತ್ತಾನೆ. ಇಲ್ಲದೇ ಇರುವ ಪದಾರ್ಥವು ಆನಂದಕ್ಕೆ ಕಾರಣವಾಗುವುದಿಲ್ಲ. ಹೊರಗಿನ ಆನಂದ ಸಾಧನಗಳು ಯಾವುವೂ ಇಲ್ಲದಿದ್ದರೂ, ಯಾವ ಕೆಲಸವನ್ನೂ ಮಾಡದೇ, ಯಾವ ಬಯಕೆಯೂ ಇಲ್ಲದೇ, ಬ್ರಹ್ಮಜ್ಞಾನಿಗಳು ಹೊರಗಿನ ರಸವನ್ನು ಪಡೆದುಕೊಂಡವರಂತೆ ಆನಂದದಿಂದ ಇರುವುದು ಕಾಣಸಿಗುತ್ತದೆ. ಅವರಿಗೆ ಬ್ರಹ್ಮವೇ ರಸವಾಗಿರುತ್ತದೆ. ಆದ್ದರಿಂದ ಅವರಿಗೆ ರಸದಂತೆ ಆನಂದಕ್ಕೆ ಕಾರಣವಾಗಿರುವುದರಿಂದಲೂ ಬ್ರಹ್ಮವು ಇದೆ ಎಂದು ಸಿದ್ಧವಾಗುತ್ತದೆ.
ಪ್ರಾಣವೇ ಮೊದಲಾದ ಕ್ರಿಯೆಗಳು ಕಾಣುವುದರ ಕಾರಣದಿಂದಲೂ ಬ್ರಹ್ಮವು ಇದೆ ಎಂದು ಸಿದ್ಧವಾಗುತ್ತದೆ. ಬದುಕಿರುವವನ ಈ ಶರೀರವೂ ಕೂಡ ಪ್ರಾಣವಾಯುವಿನಿಂದ ಉಸಿರು ಬಿಡುತ್ತದೆ ಮತ್ತು ಅಪಾನ ವಾಯುವಿನಿಂದ ಉಸಿರನ್ನು ಎಳೆದುಕೊಳ್ಳುತ್ತದೆ. ಹೀಗೆ ವಾಯು ಮತ್ತು ಇಂದ್ರಿಯಗಳ ವ್ಯಾಪಾರಗಳು ಒಂದಕ್ಕೊಂದು ಸಂಹತವಾಗಿರುವ - ಒಟ್ಟಿಗೆ ಕೆಲಸಮಾಡುತ್ತಿರುವ - ದೇಹೇಂದ್ರಿಯಗಳಿಂದ ನಡೆಯುತ್ತಿರುತ್ತದೆ. ಒಂದೇ ಪ್ರಯೋಜನಕ್ಕಾಗಿ ಕೆಲಸಮಾಡಲು ಹಾಗೆ ಸೇರಿಕೊಂಡಿರುವುದೆಂಬುದು ಅಸಂಹತನಾದ ಚೇತನನಿಲ್ಲದೇ ಆಗುವುದೇ ಇಲ್ಲ.
ಒಂದುವೇಳೆ ಆಕಾಶದಲ್ಲಿ ಅಥವಾ ಪರಮವ್ಯೋಮದಲ್ಲಿರುವ ಗುಹೆಯಲ್ಲಿರುವ ಆನಂದವು ಇಲ್ಲವಾಗಿದ್ದರೆ, ಇರದೇ ಇದ್ದಿದ್ದರೆ, ಲೋಕದಲ್ಲಿ ಯಾರು ತಾನೇ ಅಪಾನವೃತ್ತಿಯ ವ್ಯಾಪಾರವನ್ನು ಮಾಡುತ್ತಾನೆ? ಮತ್ತು ಯಾರು ಉಸಿರೆಳೆದುಕೊಳ್ಳುತ್ತಿದ್ದನು? ಆದ್ದರಿಂದ ಯಾವುದಕ್ಕಾಗಿ ದೇಹ-ಇಂದ್ರಿಯಗಳ ಪ್ರಾಣವ್ಯಾಪರವೇ ಮೊದಲಾದವುಗಳು ನಡೆಯುತ್ತಿರುತ್ತವೆಯೋ ಆ ಬ್ರಹ್ಮವು ಇದೆ. ಅದರಿಂದಲೇ ಜನರಿಗೆ ಆನಂದವುಂಟಾಗುತ್ತದೆ. ಏಕೆಂದರೆ ಈ ಪರಮಾತ್ಮನೇ ಜನರನ್ನು, ಅವರ ಧರ್ಮಕ್ಕೆ ಅನುಗುಣವಾಗಿ, ಆನಂದಯಾತಿ – ಆನಂದಯತಿ – ಸುಖಿಗಳನ್ನಾಗಿ ಮಾಡುತ್ತಾನೆ. ಆ ಆನಂದರೂಪನಾದ ಆತ್ಮನೇ ಅವಿದ್ಯೆಯಿಂದ ಅಳತೆಗೆ ಕಟ್ಟುಬಿದ್ದ ಪ್ರಾಣಿಗಳಿಗೆ ಸುಖವಾಗಿ ತೋರುತ್ತಿರುತ್ತಾನೆ ಎಂದರ್ಥ.
ಅಜ್ಞಾನಿಗಳಿಗೆ ಭಯವುಂಟಾಗುವುದರಿಂದಲೂ ಮತ್ತು ಜ್ಞಾನಿಗಳಿಗೆ ಭಯವಿಲ್ಲದೇ ಇರುವುದರಿಂದಲೂ ಆ ಬ್ರಹ್ಮವು ಇದೆ ಎಂದು ತಿಳಿಯಬೇಕು. ಇರುವ ವಸ್ತುವನ್ನು ಆಶ್ರಯಿಸುವುದರಿಂದ ಅಲ್ಲವೇ ಅಭಯವುಂಟಾಗುವುದು? ಇಲ್ಲದ ವಸ್ತುವಿನ ಆಶ್ರಯದಿಂದ ಭಯವಾಗದೆ ಇರುವುದಿಲ್ಲ. ಬ್ರಹ್ಮವು ಅಭಯಕ್ಕೆ ಕಾರಣವಾಗುವುದು ಹೇಗೆ ಎನ್ನುವುದನ್ನು ಶ್ರುತಿಯು ಹೇಳುತ್ತದೆ.
ಯದಾ ಹ್ಯೇವೈಷ ಏತಸ್ಮಿನ್ನದೃಶ್ಯೇಽನಾತ್ಮ್ಯೇಽನಿರುಕ್ತೇಽನಿಲಯನೇಽಭಯಂ ಪ್ರತಿಷ್ಠಾಂ ವಿಂದತೇ । ಅಥ ಸೋಽಭಯಂ ಗತೋ ಭವತಿ ।। 4 ।। ಯದಾ ಹ್ಯೇವೈಷ ಏತಸ್ಮಿನ್ನುದರಮಂತರಂ ಕುರುತೇ । ಅಥ ತಸ್ಯ ಭಯಂ ಭವತಿ । ತತ್ವೇವ ಭಯಂ ವಿದುಷೋಽಮನ್ವಾನಸ್ಯ ।। 5 ।। ತದಪ್ಯೇಷ ಶ್ಲೋಕೋ ಭವತಿ ।। 6 ।। ಇತಿ ಸಪ್ತಮೋಽನುವಾಕಃ ।। 7 ।।
ಈ ಅದೃಶ್ಯವಾದ, ಅನಾತ್ಮ್ಯವಾದ, ಅನಿರುಕ್ತವಾದ, ಅನಿಲಯನವಾದ ಬ್ರಹ್ಮದಲ್ಲಿ ಅಭಯವಾಗಿ ಪ್ರತಿಷ್ಠೆಯನ್ನು ಪಡೆದಾಗ ಅವನು ಅಭಯವನ್ನು ಹೊಂದುತ್ತಾನೆ. ಯಾವಾಗ ಇದರಲ್ಲಿ ಸ್ವಲ್ಪವಾದರೂ ಅಂತರವನ್ನಿಟ್ಟುಕೊಳ್ಳುತ್ತಾನೋ ಆಗ ಅದರಿಂದ ಅವನಿಗೆ ಭಯವುಂಟಾಗುತ್ತದೆ. ಅದೇ ಹಾಗೆ ತಿಳಿಯುವ ಆ ತಿಳಿಯದಾತನಿಗೆ ಭಯವು. ಅದರ ವಿಷಯದಲ್ಲಿಯೇ ಈ ಶ್ಲೋಕವಿರುವುದು.
ಇಲ್ಲಿ ಅದೃಶ್ಯವಾದ ಎಂದರೆ ಅವಿಕಾರವಾದದ್ದು, ಯಾವುದಕ್ಕೂ ವಿಷಯವಲ್ಲದ್ದು, ಎಂದರ್ಥ. ಅನಾತ್ಮ್ಯವಾದ ಎಂದರೆ ಶರೀರವಿಲ್ಲದುದು ಎಂದರ್ಥ. ಅನಿರುಕ್ತ ಎಂದರೆ ವಿಶೇಷವಿಲ್ಲದ್ದು. ವಿಶೇಷವನ್ನೇ ಅಲ್ಲವೇ ಗೊತ್ತುಮಾಡಿ ಹೇಳುವುದು? ವಿಕಾರವೆನ್ನುವುದು ವಿಶೇಷವು. ಆದರೆ ಬ್ರಹ್ಮವು ಅವಿಕಾರವಾಗಿರುತ್ತದೆ. ಏಕೆಂದರೆ ಅದು ಎಲ್ಲ ವಿಕಾರಗಳಿಗೂ ಕಾರಣವಾಗಿರುತ್ತದೆ. ಆದ್ದರಿಂದ ಅದು ಅನಿರುಕ್ತವು. ಅನಿಲಯನ ಎಂದರೆ ಆಧಾರವಿಲ್ಲದ್ದು ಎಂದರ್ಥ. ಹೀಗೆ ಈ ಅದೃಶ್ಯವಾದ, ಅನಾತ್ಮ್ಯವಾದ, ಅನಿರ್ತವಾದ, ಅನಿಲಯನವಾದ ಬ್ರಹ್ಮ ಎಂದರೆ ಕಾರ್ಯಗಳಲ್ಲಿರುವ ಯಾವ ಧರ್ಮವೂ ಇಲ್ಲದ, ಬೇರೆಯೇ ಸ್ವಭಾವದ ಬ್ರಹ್ಮ ಎಂದರ್ಥ.
ಪ್ರತಿಷ್ಠೆ ಎಂದರೆ ತಾನೇ ಅದೆಂಬ ಭಾವವನ್ನು ಪಡೆಯುವುದು. ಮೇಲೆ ಹೇಳಿದಂತಹ ಬ್ರಹ್ಮದಲ್ಲಿ ಭಯಕ್ಕೆ ಕಾರಣವಾದ ಅವಿದ್ಯಾಕಲ್ಪಿತವಾದ ನಾನಾತ್ವವನ್ನು ಕಾಣದೇ ಇರುವುದರಿಂದ ಬ್ರಹ್ಮದಲ್ಲಿ ಪ್ರತಿಷ್ಠನಾದವನು ಅಭಯವನ್ನು ಪಡೆಯುತ್ತಾನೆ. ಏಕೆಂದರೆ, ಯಾವಾಗ ಇವನು ತನ್ನ ಸ್ವರೂಪದಲ್ಲಿ ನಿಲ್ಲುತ್ತಾನೋ ಆಗ ಮತ್ತೊಂದನ್ನು ಕಾಣುವುದಿಲ್ಲ. ಮತ್ತೊಂದನ್ನು ಕೇಳುವುದಿಲ್ಲ. ಮತ್ತೊಂದನ್ನು ಅರಿಯುವುದಿಲ್ಲ. ತಾನೆ ಬೇರೆ ಎಂದು ತಿಳಿದವನಿಗೆ ತಾನೇ ಇತರ ಬೇರೆಯವರೊಂದ ಭಯವುಂಟಾಗುವುದು? ತನ್ನಿಂದಲೇ ತನಗೆ ಭಯವುಂಟಾಗುವುದಿಲ್ಲವಲ್ಲ. ಆದ್ದರಿಂದ ತನಗೆ ತಾನೇ ಅಭಯಕ್ಕೆ ಕಾರಣವು. ಸಾಧಕನು ಯಾವಾಗ ಮತ್ತೊಂದನ್ನು ಕಾಣುವುದಿಲ್ಲವೋ, ತನ್ನಲ್ಲಿ ಅಂತರವನ್ನು ಅಥವಾ ಭೇದವನ್ನು ಮಾಡಿಕೊಳ್ಳುವುದಿಲ್ಲವೋ, ಆಗ ಅಭಯವನ್ನು ಹೊಂದುತ್ತಾನೆ ಎಂದು ಅಭಿಪ್ರಾಯ.
ಇದಕ್ಕೆ ಬದಲಾಗಿ, ಅವಿದ್ಯಾವಸ್ಥೆಯಲ್ಲಿರುವವನು, ಎಂದರೆ ಅವಿದ್ಯೆಯಿಂದ ಕೂಡಿರುವವನು, ಅವಿದ್ಯೆಯಿಂದಾಗಿ, ಮುಂದಿರುವ ವಸ್ತುವನ್ನು ಪರೆಕಟ್ಟಿದ ಕಣ್ಣಿಗೆ ಕಾಣುವ ಎರಡನೇ ಚಂದ್ರನಂತೆ ಕಲ್ಪಿತವಾದ ವಸ್ತುವನ್ನು ಕಾಣುತ್ತಾನೆ. ಮತ್ತು ಆತ್ಮನಾಗಿರುವ ಬ್ರಹ್ಮದಲ್ಲಿ ಅಂತರವನ್ನಿಟ್ಟುಕೊಂಡಿರುತ್ತಾನ. ಆದರೆ ತನ್ನ ಆತ್ಮನಾಗಿರುವ ಬ್ರಹ್ಮದಲ್ಲಿ ಅಲ್ಪವಾದರೂ ಅಂತರ ಎಂದರೆ ಛಿದ್ರವನ್ನು, ಭೇದ ದರ್ಶನವನ್ನು ಮಾಡಿಕೊಳ್ಳುವವನಿಗೆ ಆತ್ಮನಿಂದಲೇ ಭಯವುಂಟಾಗುತ್ತದೆ. ಆದ್ದರಿಂದ ಅಜ್ಞನಿಗೆ ತಾನೇ ತನಗೆ ಭಯಕ್ಕೆ ಕಾರಣನು.
ಈ ಅರ್ಥವನ್ನೇ ಶ್ರುತಿಯು ಹೇಳುತ್ತದೆ. ಆ ಬ್ರಹ್ಮವೇ ಭೇದವನ್ನು ಕಾಣುವ ಜ್ಞಾತೃವಿಗೆ ಭಯವು. “ಈಶ್ವರನು ನನಗಿಂತ ಬೇರೆ, ಸಂಸಾರಿಯಾಗಿರುವ ನಾನು ಬೇರೆ” ಎಂದು ತಿಳಿಯುವವನಿಗೆ ಬೇರೆಯಾಗಿ ಕಂಡ ಈಶ್ವರ, ಬ್ರಹ್ಮ ಮತ್ತು ತಾನೂ ಒಂದೇ ಎಂದು ತಿಳದುಕೊಳ್ಳದೇ ಇರುವವನಿಗೆ ಭಯವಾಗುತ್ತದೆ.