ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಪಂಚಮೋಽನುವಾಕಃ

[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]

ವಿಜ್ಞಾನಂ ಯಜ್ಞಂ ತನುತೇ ಕರ್ಮಾಣಿ ತನುತೇಽಪಿ ಚ ವಿಜ್ಞಾನಂ ದೇವಾಃ ಸರ್ವೇ ಬ್ರಹ್ಮ ಜ್ಯೇಷ್ಠಮುಪಾಸತೇ ವಿಜ್ಞಾನಂ ಬ್ರಹ್ಮ ಚೇದ್ವೇದ ತಸ್ಮಾಚ್ಚೇನ್ನ ಪ್ರಮಾದ್ಯತಿ ಶರೀರೇ ಪಾಪ್ಮನೋ ಹಿತ್ವಾ ಸರ್ವಾನ್ಕಾಮಾನ್ ಸಮಶ್ನುತ ಇತಿ ।। 1 ।।

ವಿಜ್ಞಾನವು ಯಜ್ಞವನ್ನು ಮಾಡುತ್ತದೆ. ಕರ್ಮಗಳನ್ನೂ ಮಾಡುತ್ತದೆ. ವಿಜ್ಞಾನವನ್ನೇ ದೇವತೆಗಳೆಲ್ಲರೂ ಜ್ಯೇಷ್ಠ ಬ್ರಹ್ಮವೆಂದು ಉಪಾಸನೆ ಮಾಡುತ್ತಾರೆ. ವಿಜ್ಞಾನವನ್ನೇ ಬ್ರಹ್ಮವೆಂದು ತಿಳಿದವನು, ಅದರ ವಿಷಯದಲ್ಲಿ ಪ್ರಮಾದಗೊಳ್ಳದೇ ಕರ್ಮಮಾಡುವವನು ಶರೀರದಿಂದ ಮಾಡಿದ ಪಾಪಗಳನ್ನು ತೊರೆದು ಸರ್ವಕಾಮನೆಗಳನ್ನು ಪಡೆಯುತ್ತಾನೆ.

ವಿಜ್ಞಾನವುಳ್ಳವನೇ ಶ್ರದ್ಧಯೇ ಮೊದಲಾದವುಗಳಿಂದ ಕೂಡಿ ಯಜ್ಞವನ್ನು ಮಾಡುತ್ತಾನಾದ್ದರಿಂದ ಅದು ಯಜ್ಞವನ್ನು ಮಾಡುತ್ತದೆ ಎಂದು ವಿಜ್ಞಾನಮಯನಿಗೆ ಯಜ್ಞಕ್ರಿಯೆಯ ಕರ್ತೃತ್ವವನ್ನು ಹೇಳಿದೆ. ಯಜ್ಞವಷ್ಟೇ ಅಲ್ಲದೇ ಅದು ಉಳಿದ ಕರ್ಮಗಳನ್ನೂ ಮಾಡುತ್ತದೆ. ಇದನ್ನು ಮಾಡಬೇಕು, ಮಾಡಬಾರದು ಎಂದು ತಿಳಿದು ಕರ್ಮವನ್ನು ಮಾಡಿಸುವುದು ಮಾಡಿಸದೇ ಇರುವುದು ವಿಜ್ಞಾನಮಯ ಆತ್ಮನು. ಹೀಗೆ ಎಲ್ಲವೂ ವಿಜ್ಞಾವೆಂಬ ಕರ್ತೃವನ್ನು ಪಡೆದಿದ್ದಾದ್ದರಿಂದ ವಿಜ್ಞಾನಮಯ ಆತ್ಮನು ಬ್ರಹ್ಮವು. ಇಂದ್ರನೇ ಮೊದಲಾದ ದೇವತೆಗಳು ಅದನ್ನು ಜ್ಯೇಷ್ಠವಾದ ಅಂದರೆ ಸೃಷ್ಟಿಯಲ್ಲಿ ಮೊದಲು ಹುಟ್ಟಿದ ಹಿರಿಯ ಬ್ರಹ್ಮ ಎಂದು ಹೇಳಿದ್ದಾರೆ. ಹಿರಣ್ಯಗರ್ಭನು ಸೃಷ್ಟಿಯಲ್ಲಿ ಮೊದಲು ಹುಟ್ಟಿದವನು. ಅವನ ಉಪಾಧಿಯಾದ ಮಹತ್ತತ್ತ್ವವೆಂಬ ಸಮಷ್ಟಿ ಬುದ್ಧಿಯು ಮೊದಲು ಹುಟ್ಟಿತ್ತೆಂಬ ಕಾರಣದಿಂದಲೇ ಅವನು ಪ್ರಥಮಜ ಎಂದೆನಿಸಿಕೊಂಡಿರುತ್ತಾನೆ. ಮೊದಲು ಹುಟ್ಟಿದ ವಿಜ್ಞಾನವನ್ನು ಬ್ರಹ್ಮವಾಗಿ ಉಪಾಸನೆ ಮಾಡುತ್ತಾರೆ. ಆ ವಿಜ್ಞಾನಮಯನಾದ ಬ್ರಹ್ಮನಲ್ಲಿ ತಾವೆಂಬ ಅಭಿಮಾನವನ್ನು ಮಾಡಿಕೊಂಡು ಉಪಾಸನೆ ಮಾಡುತ್ತಾರೆ. ದೊಡ್ಡದಾದ ಬ್ರಹ್ಮವನ್ನು ಉಪಾಸನೆ ಮಾಡುವುದರಿಂದ ಅವರು ಜ್ಞಾನ-ಐಶ್ವರ್ಯಗಳಿಂದ ಕೂಡಿರುತ್ತಾರೆ.

ಆ ವಿಜ್ಞಾನವನ್ನು ಬ್ರಹ್ಮವೆಂದು ತಿಳಿಯುವವನು, ಅರಿತುಕೊಂಡವನು, ಸುಮ್ಮನೇ ಅರಿತುಕೊಂಡಿದ್ದಾನೆ ಎನ್ನುವುದಷ್ಟೇ ಅಲ್ಲ, ಆ ಬ್ರಹ್ಮದಿಂದ ಪ್ರಮಾದವನ್ನು ಎಸಗದೇ ಇದ್ದವನು, ಅಂದರೆ ಹೊರಗಿನ ಅನಾತ್ಮಗಳಲ್ಲಿ ತಾನೆಂಬ ಭಾವನೆಯನ್ನು ಇಟ್ಟುಕೊಳ್ಳದೇ ಇರುವವನು, ಅಥವಾ ಅನ್ನಮಯಾದಿಗಳಲ್ಲಿ ಅವೇ ತಾನೆಂಬ ಭಾವನೆಯನ್ನು ಬಿಟ್ಟು[1] ಬರಿಯ ವಿಜ್ಞಾನಮಯ ಬ್ರಹ್ಮದಲ್ಲಿ ತಾನೆಂದು ಭಾವಿಸಿಕೊಂಡಿರುವವನು, ಶರೀರದಲ್ಲಿ ಪಾಪಗಳನ್ನು ಬಿಟ್ಟು ವಿಜ್ಞಾನಮಯ ಬ್ರಹ್ಮದ ಸ್ವರೂಪವನ್ನು ಹೊಂದಿ, ವಿಜ್ಞಾನಮಯವೇ ಆದ ಸ್ವರೂಪದಿಂದ, ಅದರಲ್ಲಿರುವ ಎಲ್ಲ ಕಾಮನೆಗಳನ್ನೂ ಪಡೆಯುತ್ತಾನೆ. ಶರೀರದಲ್ಲಿ ಪಾಪಗಳನ್ನು ಬಿಟ್ಟು ಎಂದರೆ ಶರೀರವೇ ತಾನೆಂಬ ಅಭಿಮಾನದ ನಿಮಿತ್ತದಿಂದಲೇ ಎಲ್ಲ ಪಾಪಗಳೂ ಉಂಟಾಗುವುದರಿಂದ ಅವುಗಳನ್ನು ಬಿಡುವುದು ಎಂದರೆ ವಿಜ್ಞಾನಮಯವಾದ ಬ್ರಹ್ಮವೇ ತಾನು ಎಂಬ ಅಭಿಮಾನದಿಂದ ಪಾಪಗಳ ನಿಮಿತ್ತವು ಹೋಗುತ್ತದೆ. ಕೊಡೆಯು ಹೋದರೆ ನೆರಳೂ ಹೋದಂತೆ[2] ಎಂದರ್ಥ. ಆದ್ದರಿಂದ ಶರೀರದ ಅಭಿಮಾನದಿಂದ ಹುಟ್ಟುವ ಪಾಪಗಳನ್ನೆಲ್ಲ ಶರೀರದಲ್ಲಿಯೇ ಬಿಟ್ಟು ವಿಜ್ಞಾನಮಯ ಬ್ರಹ್ಮದ ಸ್ವರೂಪವನ್ನು ಹೊಂದಿ, ಅದರಲ್ಲಿರುವ ಎಲ್ಲಾ ಕಾಮನೆಗಳನ್ನೂ ಪಡೆಯುತ್ತಾನೆ[3] ಎಂದಿದೆ.

ತಸ್ಯೈಷ ಏವ ಶಾರೀರ ಆತ್ಮಾ ಯಃ ಪೂರ್ವಸ್ಯ ।। 2 ।। ತಸ್ಮಾದ್ವಾ ಏತಸ್ಮಾದ್ವಿಜ್ಞಾನಮಯಾತ್ ಅನ್ಯೋಽಂತರ ಆತ್ಮಾಽಽನಂದಮಯಃ ತೇನೈಷ ಪೂರ್ಣಃ ।। 3 ।।

ಆ ಹಿಂದಿನ ಮನೋಮಯನಿಗೆ ಆತ್ಮನು ಇವನೇ ಶಾರೀರನು. ಅಂದರೆ, ಮನೋಮಯವೆಂಬ ಶರೀರದಲ್ಲಿರುವ ಆತ್ಮನು ವಿಜ್ಞಾನಮಯನು. ಆದರೆ ವಿಜ್ಞಾನಮಯನಿಗಿಂತ ಇನ್ನೊಬ್ಬ ಆನಂದಮಯನಾದ ಒಳಗಿನ ಆತ್ಮನಿದ್ದಾನೆ. ಆನಂದಮಯನಿಂದ ವಿಜ್ಞಾನಮಯ ಶರೀರವು ತುಂಬಿಕೊಂಡಿದೆ.

ಇಲ್ಲಿ ಆನಂದಮಯ ಎಂದರೆ ಕಾರ್ಯಾತ್ಮನೆಂದೇ ತಿಳಿಯಬೇಕು. ಏಕೆಂದರೆ ಇಲ್ಲಿ ಮಯಟ್ ಅಥವಾ ವಿಕಾರ ಎಂಬ ಶಬ್ದವನ್ನು ಉಪಯೋಗಿಸಿದೆ. ಅನ್ನಮಯ ಎನ್ನುವಾಗ ಮಯಟ್ ಪ್ರತ್ಯಯವನ್ನು ಹೇಗೆ ವಿಕಾರಾರ್ಥದಲ್ಲಿ ಬಳಸಿದೆಯೋ ಹಾಗೆ ಆನಂದಮಯನೆಂದರೆ ಕಾರ್ಯಾತ್ಮನೆಂದೇ ತಿಳಿಯಬೇಕು. ಬ್ರಹ್ಮವೆಂದು ತಿಳಿಯಬಾರದು. ಆನಂದ ಎಂದರೆ ಜ್ಞಾನ ಮತ್ತು ಕರ್ಮಗಳ ಫಲವು. ಅವುಗಳಿಂದ ಉಂಟಾಗುವವನು ಆನಂದಮಯನು. ಅವನು ವಿಜ್ಞಾನಮಯನಿಗಿಂತ ಒಳಗಿದ್ದಾನೆ. ಯಜ್ಞವೇ ಮೊದಲಾದವುಗಳಿಗೆ ಕಾರಣನಾದ ವಿಜ್ಞಾನಮಯನಿಗಿಂತ ಒಳಗಿರುವುದೆಂದು ಹೇಳಿರುವುದರಿಂದ ಆನಂದವು ಯಜ್ಞಾದಿ ಕರ್ಮಗಳ ಫಲ ಎಂದು ಸಿದ್ಧವಾಗುತ್ತದೆ.

ಜ್ಞಾನಕರ್ಮಗಳ ಫಲವು ಭೋಕ್ತೃವಿಗಾಗಿ ಇರುವುದರಿಂದ ಎಲ್ಲಕ್ಕೂ ಒಳಗಿರಬೇಕಷ್ಟೇ? ಆನಂದಮಯನೂ ಹಿಂದಿನ ಅನ್ನಮಯಾದಿಗಳಿಗಿಂತ ಒಳಗಿದ್ದಾನೆ. ಜ್ಞಾನಕರ್ಮಗಳು ಪ್ರಿಯ ಮೊದಲಾದವುಗಳಿಗಾಗಿ ಉಂಟಾಗುತ್ತದೆಯಾದ್ದರಿಂದಲೂ ಆನಂದಮಯನು ಒಳಗಿದ್ದಾನೆ ಎನ್ನುವುದು ಸಿದ್ಧವಾಗುತ್ತದೆ. ಪ್ರಿಯೆಗಾಗಿ ಅಲ್ಲವೇ ಜ್ಞಾನಕರ್ಮಾದಿಗಳನ್ನು ಮಾಡುವುದು? ಫಲರೂಪವಾದ ಪ್ರಿಯವೇ ಮೊದಲಾದವುಗಳು ಆತ್ಮನಿಗೆ ಹತ್ತಿರವಾದ್ದರಿಂದ ಈ ಆನಂದಮಯನು ವಿಜ್ಞಾನಮಯನಿಗಿಂತಲೂ ಒಳಗಿದ್ದಾನೆ. ಪ್ರಿಯವೇ ಮೊದಲಾದ ವಾಸನೆಯಿಂದ ಉಂಟಾದ ಆನಂದಮಯಾತ್ಮನು ವಿಜ್ಞಾನಮಯನನ್ನು ಆಶ್ರಯಿಸಿ ಕನಸಿನಲ್ಲಿ ತೋರಿಕೊಳ್ಳುತ್ತಾನಲ್ಲವೇ?

ಸ ವಾ ಏಷ ಪುರುಷವಿಧ ಏವ ತಸ್ಯ ಪುರುಷವಿಧತಾಮ್ ಅನ್ವಯಂ ಪುರುಷವಿಧಃ ತಸ್ಯ ಪ್ರಿಯಮೇವ ಶಿರಃ ಮೋದೋ ದಕ್ಷಿಣಃ ಪಕ್ಷಃ ಪ್ರಮೋದ ಉತ್ತರಃ ಪಕ್ಷಃ ಆನಂದ ಆತ್ಮಾ ಬ್ರಹ್ಮ ಪುಚ್ಛಂ ಪ್ರತಿಷ್ಠಾ ।। 3 ।। ತದಪ್ಯೇಷ ಶ್ಲೋಕೋ ಭವತಿ ।। 4 ।। ಇತಿ ಪಂಚಮೋಽನುವಾಕಃ ।। 5 ।।

ಆನಂದಮಯಾತ್ಮನು ಪುರುಷವಿಧನಾಗಿಯೇ ಇದ್ದಾನೆ. ಇವನ ಪುರುಷವಿಧತ್ವವನ್ನು ಅನುಸರಿಸಿ ಇವನಿಗೆ ಪ್ರಿಯವೇ ತಲೆ. ಮೋದವೇ ಬಲತೋಳು. ಪ್ರಮೋದವೇ ಎಡತೋಳು. ಆನಂದವು ಆತ್ಮನು. ಬ್ರಹ್ಮವು ಪುಚ್ಛವು. ಪ್ರತಿಷ್ಠೆಯು.

ಈ ಆನಂದಮಯಾತ್ಮನಿಗೆ ಪ್ರಿಯವೇ ಶಿರ. ಏಕೆಂದರೆ ಅದೇ ಮುಖ್ಯವಾಗಿರುತ್ತದೆ. ಮೋದ ಎಂದರೆ ಪ್ರಿಯವಾದದ್ದು ದೊರೆತ ಕಾರಣದಿಂದ ಉಂಟಾಗುವ ಹರ್ಷ. ಆ ಹರ್ಷವೇ ಹೆಚ್ಚಾದರೆ ಅದು ಪ್ರಮೋದವು. ಆನಂದ ಎಂದರೆ ಸುಖಸಾಮಾನ್ಯವು ಪ್ರಿಯವೆ ಮೊದಲಾದ ಸುಖದ ಅವಯವಗಳಿಗೆ ಆತ್ಮನು. ಏಕೆಂದರೆ ಅದು ಇವೆಲ್ಲವನ್ನೂ ಹೊಂದಿಕೊಂಡಿರುತ್ತದೆ.

ಆನಂದ ಆತ್ಮಾ ಎನ್ನುವಲ್ಲಿ ಆನಂದವು ಪರಬ್ರಹ್ಮ. ಆನಂದಮಯ ಎನ್ನುವುದು ಭೋಕ್ತೃತ್ವವನ್ನು ತಿಳಿಸುವುದರಿಂದ ಜೀವನನ್ನೇ ಹೇಳುತ್ತದೆ. ಆದರೆ ಸ್ವರೂಪಾನಂದವು ಬ್ರಹ್ಮವೇ. ವಿಷಯ ಸುಖಗಳು ಕ್ಷಣಿಕವಾಗಿರುತ್ತವೆ. ಸುಖವನ್ನುಂಟುಮಾಡುವ ಅಂತಃಕರಣದಲ್ಲಾಗುವ ವೃತ್ತಿಯು ಕ್ಷಣಿಕವಾಗಿರುವುದರಿಂದ ಅದರಲ್ಲಿ ತೋರಿಕೊಳ್ಳುವ ಸುಖವೂ ಕ್ಷಣಿಕವಾಗಿ ತೋರುತ್ತದೆ. ನಿಜವಾಗಿ ಸುಖವು ಕ್ಷಣಿಕವಲ್ಲ. ಅದು ಆತ್ಮನ ಸ್ವರೂಪವೇ ಆಗಿರುವುದರಿಂದ ನಿತ್ಯವಾಗಿರುತ್ತದೆ.

ಅಂತಃಕರಣದಲ್ಲಿ ಯಾವಾಗ ತಪಸ್ಸಿನಿಂದಲೂ, ತಮಸ್ಸನ್ನು ನಾಶಗೊಳಿಸುವ ಜ್ಞಾನದಿಂದಲೂ, ಬ್ರಹ್ಮಚರ್ಯೆಯಿಂದಲೂ, ಶ್ರದ್ಧೆಯಿಂದಲೂ, ಎಷ್ಟೆಷ್ಟು ಮಟ್ಟಿಗೆ ನಿರ್ಮಲತೆಯನ್ನು ಹೊಂದುತ್ತದೆಯೋ ಅಷ್ಟಷ್ಟುಮಟ್ಟಿಗೆ ಅಂತಃಕರಣವು ಪ್ರಸನ್ನವಾಗಿ ಅದರಲ್ಲಿ ಬೇರೆ ಬೇರೆಯ ಆನಂದವು ಹೆಚ್ಚುತ್ತದೆ. ವಿಸ್ತಾರವಾಗುತ್ತದೆ. ವಿಸ್ತರಿಸುತ್ತದೆ. ಆದ್ದರಿಂದಲೇ ರಸೋ ವೈ ಸಃರಸಗ್ಂ ಹ್ಯೇವಾಯಂ ಲಬ್ಧ್ವಾ ಆನಂದೀ ಭವತಿಏಷ ಹ್ಯೇವಾನಂದಯಾತಿ । ಅರ್ಥಾತ್: ಅವನು ರಸವೇ. ಈ ಜೀವನು ರಸವನ್ನು ಹೊಂದಿ ಆನಂದಿಯಾಗುತ್ತಾನೆ. ಇವನೇ ಆನಂದವನ್ನುಂಟುಮಾಡುತ್ತಾನೆ ಎಂದು ಈ ಶ್ರುತಿಯಲ್ಲಿ ಮುಂದೆ ಈ ವಲ್ಲಿಯ 8ನೇ ಅನುವಾಕದಲ್ಲಿ ಹೇಳುತ್ತದೆ. ಹೀಗಿರುವುದರಿಂದಲೇ ಕಾಮವನ್ನು ತೊಲಗಿಸಿಕೊಳ್ಳುವುದು ಹೆಚ್ಚುಹೆಚ್ಚಾದಂತೆಲ್ಲಾ ಆನಂದವೂ ನೂರು ಪಾಲು ಮುಂದು ಮುಂದಕ್ಕೆ ಹೆಚ್ಚಾಗುವುದೆಂದು ಮುಂದೆ ಬರುತ್ತದೆ.

ಈ ರೀತಿ ಹೆಚ್ಚಾಗುತ್ತಿರುವ ಆನಂದಮಯಾತ್ಮನಿಗೆ ಪರಮಾರ್ಥಬ್ರಹ್ಮದ ಅರಿವಿನ ದೃಷ್ಟಿಯಿಂದ ನೋಡಿದರೆ ಬ್ರಹ್ಮವು ಅವನಿಗೆ ಪುಚ್ಛವು, ಪ್ರತಿಷ್ಠೆಯು. ಬ್ರಹ್ಮವು ಸತ್ಯ, ಜ್ಞಾನ ಮತ್ತು ಅನಂತವೆಂಬ ಲಕ್ಷಣವುಳ್ಳದ್ದು. ಇದರ ಅರಿವು ಉಂಟಾಗಲೆಂದು ಅನ್ನಮಯವೇ ಮೊದಲಾದ ಐದು ಕೋಶಗಳನ್ನು ಇಲ್ಲಿ ಹೇಳಲಾಗಿದೆ. ಯಾವುದು ಅವುಗಳೆಲ್ಲಕ್ಕೂ ಒಳಗಿದೆಯೋ, ಮತ್ತು ಯಾವುದರಿಂದಲೇ ಅವುಗಳೆಲ್ಲವೂ ಆತ್ಮವುಳ್ಳವುಗಳು ಎಂದು ಎನಿಸಿಕೊಂಡಿವೆಯೋ ಅದು ಬ್ರಹ್ಮ. ಅದೇ ವಿಷಯದಲ್ಲಿ ಈ ಶ್ಲೋಕವಿದೆ.

[1] ಆಯಾ ಕೋಶವನ್ನು ತಾನು ಎಂದುಕೊಂಡಾಗ ಹಿಂದಿನ ಕೋಶಗಳು ಅನಾತ್ಮವೆಂದೆನಿಸುತ್ತವೆ.

[2] ಯಾವ ನಿಮಿತ್ತದಿಂದ ಯಾವುದು ಆಗಿರುವುದೋ ಆ ನಿಮಿತ್ತವು ಇಲ್ಲವಾದರೆ ಅದು ತಾನೂ ಇಲ್ಲವಾಗುವುದು ಎಂಬುದು ನ್ಯಾಯ.

[3] ವಿರಾಡ್ರೂಪ ಅನ್ನಾತ್ಮನ ಉಪಾಸಕನಿಗೆ ಸರ್ವಾನ್ನಪ್ರಾಪ್ತಿ. ಪ್ರಾಣಾತ್ಮನ ಉಪಾಸಕನಿಗೆ ಸರ್ವಾಯುಃಪ್ರಾಪ್ತಿ. ಮನ ಆತ್ಮೋಪಾಸಕನಿಗೆ ಸರ್ವದಾ ಅಭಯಪ್ರಾಪ್ತಿ. ಇದರಂತೆ ವಿಜ್ಞಾನೋಪಾಸಕನಿಗೆ ಸರ್ವಭೋಗಪ್ರಾಪ್ತಿ.

Leave a Reply

Your email address will not be published. Required fields are marked *