ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 4[1]

 

ಮೈತ್ರೇಯ ಉವಾಚ । ಬ್ರಹ್ಮನಾರಾಯಣಾಖ್ಯೋಽಸೌ ಕಲ್ಪಾದೌ ಭಗವಾನ್ಯಥಾ । ಸಸರ್ಜ ಸರ್ವಭೂತಾನಿ ತನ್ಮೇ ವದ ಮಹಾಮುನೇ ।। 1 ।।

ಮೈತ್ರೇಯನು ಹೇಳಿದನು: “ಮಹಾಮುನೇ! ನಾರಾಯಣಾಖ್ಯನಾದ ಭಗವಾನ್ ಬ್ರಹ್ಮನು ಈ ಕಲ್ಪದ ಪ್ರಾರಂಭದಲ್ಲಿ ಸಮಸ್ತ ಭೂತಗಳನ್ನೂ ಹೇಗೆ ಸೃಷ್ಟಿಸಿದನು ಎನ್ನುವುದನ್ನು ನನಗೆ ಹೇಳು.”

ಪರಾಶರ ಉವಾಚ । ಪ್ರಜಾಃ ಸಸರ್ಜ ಭಗವಾನ್ ಬ್ರಹ್ಮಾ ನಾರಾಯಣಾತ್ಮಕಃ । ಪ್ರಜಾಪತಿಪತಿರ್ದೇವೋ ಯಥಾ ತನ್ಮೇ ನಿಶಾಮಯ ।। 2 ।। ಅತೀತಕಲ್ಪಾವಸಾನೇ ನಿಶಾಸುಪ್ತೋತ್ಥಿತಃ ಪ್ರಭುಃ । ಸತ್ತ್ವೋದ್ರಿಕ್ತಸ್ತದಾ ಬ್ರಹ್ಮಾ ಶೂನ್ಯಂ ಲೋಕಮವೈಕ್ಷತ ।। 3 ।। ನಾರಾಯಣಃ ಪರೋಽಚಿಂತ್ಯಃ ಪರೇಷಾಮಪಿ ಸ ಪ್ರಭುಃ । ಬ್ರಹ್ಮಸ್ವರೂಪೀ ಭಗವಾನನಾದಿಃ ಸರ್ವಸಂಭವಃ ।। 4 ।। ಇಮಂ ಚೋದಾಹರಂತ್ಯತ್ರ ಶ್ಲೋಕಂ ನಾರಾಯಣಂ ಪ್ರತಿ । ಬ್ರಹ್ಮಸ್ವರೂಪಿಣಂ ದೇವಂ ಜಗತಃ ಪ್ರಭವಾಪ್ಯಯಮ್ ।। 5 ।। ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ । ಅಯನಂ ತಸ್ಯ ತಾಃ ಪೂರ್ವಂ ತೇನ ನಾರಾಯಣಃ ಸ್ಮೃತಃ ।। 6 ।।

ಪರಾಶರನು ಹೇಳಿದನು: “ನಾರಾಯಣಾತ್ಮಕನಾದ ದೇವ ಪ್ರಜಾಪತಿ ಭಗವಾನ್ ಬ್ರಹ್ಮನು ಪ್ರಜೆಗಳನ್ನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ಕೇಳು. ಹಿಂದಿನ ಕಲ್ಪಾವಸಾನದ ರಾತ್ರಿ ಮಲಗಿ ಪ್ರಭು ಬ್ರಹ್ಮನು ಸತ್ವಗುಣೋದ್ರಿಕ್ತನಾಗಿ ಎದ್ದು ಲೋಕವೆಲ್ಲವೂ ಶೂನ್ಯವಾಗಿರುವುದನ್ನು ನೋಡಿದನು. ಅತ್ಯಂತ ಶ್ರೇಷ್ಠನೂ, ಮನಸ್ಸಿಗೆ ಅಗೋಚರನೂ ಆದ ಪ್ರಭು ಭಗವಾನ್ ನಾರಾಯಣನು ಅನಾದಿಯು ಮತ್ತು ಸರ್ವಕ್ಕೂ ಕಾರಣನು. ಬ್ರಹ್ಮಸ್ವರೂಪೀ ಜಗತ್ತಿನ ಸೃಷ್ಟಿ-ಲಯಕಾರೀ ದೇವ ನಾರಾಯಣನ ಕುರಿತು ಈ ಶ್ಲೋಕವನ್ನು ಉದಾಹರಿಸುತ್ತಾರೆ: “ನೀರಿಗೆ ನಾರಾ ಎಂದು ಹೆಸರು. ನರ ಅಥವಾ ಪುರುಷೋತ್ತಮನು ಅದರಿಂದ ಹುಟ್ಟಿದುದರಿಂದ ನೀರು ನಾರ ಎಂಬ ಹೆಸರನ್ನು ಪಡೆಯಿತು. ಆ ನೀರೇ ಅವನಿಗೆ ಹಿಂದೆ ವಾಸಸ್ಥಾನವಾಗಿದ್ದುದರಿಂದ ಆ ದೇವನನ್ನು ನಾರಾಯಣನೆಂದು ಕರೆಯುತ್ತಾರೆ.

ತೋಯಾಂತಸ್ಥಾಂ ಮಹೀಂ ಜ್ಞಾತ್ವಾ ಜಗತ್ಯೇಕಾರ್ಣವೇ ಪ್ರಭುಃ । ಅನುಮಾನಾತ್ತದುದ್ಧಾರಂ ಕರ್ತುಕಾಮಃ ಪ್ರಜಾಪತಿಃ ।। 7 ।। ಅಕರೋತ್ಸ ತನೂಮನ್ಯಾಂ ಕಲ್ಪಾದಿಷು ಯಥಾ ಪುರಾ । ಮತ್ಸ್ಯಕೂರ್ಮಾದಿಕಾಂ ತದ್ವದ್ವಾರಾಹಂ ವಪುರಾಸ್ಥಿತಃ ।। 8 ।। ವೇದಯಜ್ಞಮಯಂ ರೂಪಮಶೇಷಜಗತಃ ಸ್ಥಿತೌ । ಸ್ಥಿತಃ ಸ್ಥಿರಾತ್ಮಾ ಸರ್ವಾತ್ಮಾ ಪರಮಾತ್ಮಾ ಪ್ರಜಾಪತಿಃ ।। 9 ।। ಜನಲೋಕಗತೈಃ ಸಿದ್ಧೈಃ ಸನಕಾದ್ಯೈರಭಿಷ್ಟುತಃ । ಪ್ರವಿವೇಶ ತದಾ ತೋಯಮಾತ್ಮಾಧಾರೋ ಧರಾಧರಃ ।। 10 ।। ನಿರೀಕ್ಷ್ಯ ತಂ ತದಾ ದೇವೀ ಪಾತಾಲತಲಮಾಗತಮ್ । ತುಷ್ಟಾವ ಪ್ರಣತಾ ಭೂತ್ವಾ ಭಕ್ತಿನಮ್ರಾ ವಸುಂಧರಾ ।। 11 ।।

ಭೂಮಿಯು ಏಕಾರ್ಣವ ಜಗತ್ತಿನಲ್ಲಿ ಮುಳುಗಿರುವುದನ್ನು ತಿಳಿದು ಪ್ರಭು ಪ್ರಜಾಪತಿಯು ಅದನ್ನು ಮೇಲಕ್ಕೆತ್ತಲು ಬಯಸಿದನು. ಹಿಂದಿನ ಕಲ್ಪಗಳಲ್ಲಿ ಹೇಗೆ ಮತ್ಸ್ಯ-ಕೂರ್ಮಾದಿ ಅನ್ಯ ಶರೀರಗಳನ್ನು ಧರಿಸಿದ್ದನೋ ಹಾಗೆ ಅವನು ವಾರಾಹ ಶರೀರವನ್ನು ತಾಳಿದನು. ಸ್ಥಿರಾತ್ಮಾ, ಸರ್ವತ್ಮಾ, ಪರಮಾತ್ಮಾ ಪ್ರಜಾಪತಿಯು ವೇದಯಜ್ಞಮಯ ವರಾಹ ರೂಪವನ್ನು ಧರಿಸಿ ನಿಂತನು. ಜನೋಲೋಕದಲ್ಲಿದ್ದ ಸಿದ್ಧರೂ ಸನಕಾದಿ ಮುನಿಗಳೂ ಸ್ತೋತ್ರಮಾಡುತ್ತಿರಲು ಆತ್ಮಾಧಾರ ಧರಾಧರನು ನೀರನ್ನು ಪ್ರವೇಶಿಸಿದನು. ಪಾತಾಳತಳಕ್ಕೆ ಆಗಮಿಸಿದ ಅವನನ್ನು ನೋಡಿ ವಸುಂಧರೆಯು ಭಕ್ತಿನಮ್ರಳಾಗಿ ತಲೆಬಾಗಿಸಿ ಸ್ತುತಿಸಿದಳು.

ಪೃಥಿವ್ಯುವಾಚ । ನಮಸ್ತೇ ಪುಂಡರೀಕಾಕ್ಷ ತುಭ್ಯಂ ಶಂಖಗದಾಧರ । ಮಾಮುದ್ಧರಾಸ್ಮಾದದ್ಯ ತ್ವಂ ತ್ವತ್ತೋಽಹಂ ಪೂರ್ವಮುತ್ಥಿತಾ ।। 12 ।। ತ್ವಯಾಹಮುದ್ಧೃತಾ ಪೂರ್ವಂ ತ್ವನ್ಮಯಾಹಂ ಜನಾರ್ದನ । ತಥಾನ್ಯಾನಿ ಚ ಭೂತಾನಿ ಗಗನಾದೀನ್ಯಶೇಷತಃ ।। 13 ।। ನಮಸ್ತೇ ಪರಮಾತ್ಮಾತ್ಮನ್ ಪುರುಷಾತ್ಮನ್ನಮೋಽಸ್ತು ತೇ । ಪ್ರಧಾನವ್ಯಕ್ತಭೂತಾಯ ಕಾಲಭೂತಾಯ ತೇ ನಮಃ ।। 14 ।। ತ್ವಂ ಕರ್ತಾ ಸರ್ವಭೂತಾನಾಂ ತ್ವಂ ಪಾತಾ ತ್ವಂ ವಿನಾಶಕೃತ್ । ಸರ್ಗಾದಿಷು ಪ್ರಭೋ ಬ್ರಹ್ಮವಿಷ್ಣುರುದ್ರಾತ್ಮರೂಪಧೃಕ್ ।। 15 ।। ಸಂಭಕ್ಷಯಿತ್ವಾ ಸಕಲಂ ಜಗತ್ಯೇಕಾರ್ಣವೀಕೃತೇ । ಶೇಷೇ ತ್ವಮೇವ ಗೋವಿಂದ ಚಿಂತ್ಯಮಾನೋ ಮನೀಷಿಭಿಃ ।। 16 ।। ಭವತೋ ಯತ್ಪರಂ ರೂಪಂ ತನ್ನ ಜಾನಾತಿ ಕಶ್ಚನ । ಅವತಾರೇಷು ಯದ್ರೂಪಂ ತದರ್ಚಂತಿ ದಿವೌಕಸಃ ।। 17 ।। ತ್ವಾಮಾರಾಧ್ಯ ಪರಂಬ್ರಹ್ಮ ಯಾತಾ ಮುಕ್ತಿಂ ಮುಮುಕ್ಷವಃ । ವಾಸುದೇವಮನಾರಾಧ್ಯ ಕೋ ಮೋಕ್ಷಂ ಸಮವಾಪ್ಸ್ಯತಿ ।। 18 ।। ಯತ್ಕಿಂಚಿನ್ಮನಸಾ ಗ್ರಾಹ್ಯಂ ಯದ್ಗ್ರಾಹ್ಯಂ ಚಕ್ಷುರಾದಿಭಿಃ । ಬುದ್ಧ್ಯಾ ಚ ಯತ್ಪರಿಚ್ಛೇದ್ಯಂ ತದ್ರೂಪಮಖಿಲಂ ತವ ।। 19 ।। ತ್ವನ್ಮಯಾಹಂ ತ್ವದಾಧಾರಾ ತ್ವತ್ಸೃಷ್ಟಾ ತ್ವತ್ಸಮಾಶ್ರಯಾ । ಮಾಧವೀಮಿತಿ ಲೋಕೋಽಯಮಭಿಧತ್ತೇ ತತೋ ಹಿ ಮಾಮ್ ।। 20 ।। ಜಯಾಖಿಲಜ್ಞಾನಮಯ ಜಯ ಸ್ಥೂಲಮಯಾವ್ಯಯ । ಜಯಾನಂತ ಜಯಾವ್ಯಕ್ತ ಜಯ ವ್ಯಕ್ತಮಯ ಪ್ರಭೋ । ಪರಾಪರಾತ್ಮನ್ಸರ್ವಾತ್ಮನ್ ಜಯ ಯಜ್ಞಪತೇಽನಘ ।। 21 ।। ತ್ವಂ ಯಜ್ಞಸ್ತ್ವಂ ವಷಟ್ಕಾರಸ್ತ್ವಮೋಂಕಾರಸ್ತ್ವಮಗ್ನಯಃ । ತ್ವಂ ವೇದಾಸ್ತ್ವಂ ತದಂಗಾನಿ ತ್ವಂ ಯಜ್ಞಪುರುಷೋ ಹರೇ ।। 22 ।। ಸೂರ್ಯಾದಯೋ ಗ್ರಹಾಸ್ತಾರಾ ನಕ್ಷತ್ರಾಣ್ಯಖಿಲಾನಿ ಚ । ಮೂರ್ತಾಮೂರ್ತಮದೃಶ್ಯಂ ಚ ದೃಶ್ಯಂ ಚ ಪುರುಷೋತ್ತಮ ।। 23 ।। ಯಚ್ಚೋಕ್ತಂ ಯಚ್ಚ ನೈವೋಕ್ತಂ ಮಯಾತ್ರ ಪರಮೇಶ್ವರ । ತತ್ಸರ್ವಂ ತ್ವಂ ನಮಸ್ತುಭ್ಯಂ ಭೂಯೋ ಭೂಯೋ ನಮೋ ನಮಃ ।। 24 ।।

ಪೃಥ್ವಿಯು ಹೇಳಿದಳು: “ಪುಂಡರೀಕಾಕ್ಷ! ನಿನಗೆ ನಮಸ್ಕಾರ! ಶಂಖ-ಗದಾಧರ! ನಿನಗೆ ನಮಸ್ಕಾರ! ಹಿಂದೆ ನೀನು ನನ್ನನ್ನು ಹೇಗೆ ಮೇಲಕ್ಕೆತ್ತಿದ್ದೆಯೋ ಹಾಗೆ ಇಂದೂ ಕೂಡ ನನ್ನನ್ನು ಮೇಲಕ್ಕೆತ್ತು. ಜನಾರ್ದನ! ಹಿಂದೆ ನೀನು ನನ್ನನ್ನು ಉದ್ಧರಿಸಿದ್ದೆ. ಆಕಾಶ ಮೊದಲಾದ ಸಕಲ ಅನ್ಯ ಭೂತಗಳಂತೆ ನಾನೂ ನಿನ್ನಿಂದಲೇ ಮಾಡಲ್ಪಟ್ಟಿದ್ದೇನೆ. ಪರಮಾತ್ಮಾತ್ಮನ್! ನಿನಗೆ ನಮಸ್ಕಾರ! ಪುರುಷಾತ್ಮನ್! ನಿನಗೆ ನಮಸ್ಕಾರ! ಪ್ರಧಾನವ್ಯಕ್ತರೂಪನಿಗೆ ನಮಸ್ಕಾರ! ಕಾಲಭೂತನಾದ ನಿನಗೆ ನಮಸ್ಕಾರ! ಸರ್ವಭೂತಗಳ ಕರ್ತನು ನೀನು. ಸರ್ವಭೂತಗಳ ಪಾಲಕನೂ ನೀನೇ. ವಿನಾಶಮಾಡುವವನೂ ನೀನೇ. ಆದಿಯಲ್ಲಿ ಸೃಷ್ಟಿಸಿದ ಪರಬ್ರಹ್ಮನೂ, ವಿಷ್ಣು-ರುದ್ರಾತ್ಮ ರೂಪಧರನೂ ನೀನೇ. ನಿನ್ನ ಪರಮ ರೂಪವನ್ನು ಯಾರೂ ತಿಳಿಯಲಾರರು. ಯಾವರೂಪದಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ನೀನು ಅವತರಿಸುತ್ತೀಯೆ ಎನ್ನುವುದನ್ನು ತ್ರಿದಿವೌಕಸರೂ ತಿಳಿಯರು. ಪರಬ್ರಹ್ಮನಾದ ನಿನ್ನನ್ನು ಆರಾಧಿಸಿ ಮೋಕ್ಷಬಯಸುವವರು ಮುಕ್ತಿಯನ್ನು ಪಡೆಯುತ್ತಾರೆ. ವಾಸುದೇವನನ್ನು ಆರಾಧಿಸದೇ ಯಾರು ತಾನೇ ಮೋಕ್ಷವನ್ನು ಹೊಂದುತ್ತಾರೆ? ಚಕ್ಷುರಾದಿ ಇಂದ್ರಿಯಗಳಿಂದ ಮತ್ತು ಮನಸ್ಸಿನಿಂದ ಯಾವ ರೂಪವನ್ನು ಗ್ರಹಿಸಬಲ್ಲೆವೋ ಮತ್ತು ಬುದ್ಧಿಯಿಂದ ಯಾವುದನ್ನು ಪ್ರತ್ಯೇಕವೆಂದು ತಿಳಿಯುತ್ತೇವೋ ಆ ಅಖಿಲ ರೂಪಗಳೂ ನಿನ್ನದೇ ಆಗಿವೆ. ನಾನು ನಿನ್ನಿಂದಲೇ ಆಗಿದ್ದೇನೆ. ನೀನೇ ನನಗೆ ಆಧಾರನು. ನಿನ್ನಿಂದಲೇ ಸೃಷ್ಟಿಸಲ್ಪಟ್ಟಿದ್ದೇನೆ ಮತ್ತು ನಿನ್ನನ್ನೇ ಆಶ್ರಯಿಸಿದ್ದೇನೆ. ಆದ್ದರಿಂದ ಲೋಕವು ನನ್ನನ್ನು ಮಾಧವೀ ಎಂದೇ ಕರೆಯುತ್ತದೆ. ಅಖಿಲ ಜ್ಞಾನಮಯ! ನಿನಗೆ ಜಯ! ಸ್ಥೂಲಮಯ! ಅವ್ಯಯ! ನಿನಗೆ ಜಯ! ಅನಂತನಿಗೆ ಜಯ! ಅವ್ಯಕ್ತನಿಗೆ ಜಯ! ವ್ಯಕ್ತಮಯ ಪ್ರಭೋ! ನಿನಗೆ ಜಯ! ಪರಾಪರಾತ್ಮನ್! ಸರ್ವಾತ್ಮನ್! ಯಜ್ಞಪತೇ! ಅನಘ! ನಿನಗೆ ಜಯ! ನೀನು ಯಜ್ಞ! ನೀನು ವಷಟ್ಕಾರ! ನೀನು ಓಂಕಾರ! ನೀನು ಅಗ್ನಿ! ನೀನು ವೇದ! ನೀನು ವೇದಾಂಗಗಳು! ಹರೇ! ನೀನು ಯಜ್ಞಪುರುಷ! ಪುರುಷೋತ್ತಮ! ಸೂರ್ಯಾದಿಗ್ರಹ-ತಾರೆಗಳೂ, ಅಖಿಲ ನಕ್ಷತ್ರಗಳೂ, ಮೂರ್ತ-ಅಮೂರ್ತಗಳೂ, ಅದೃಶ್ಯ-ದೃಶ್ಯಗಳೂ ನೀನೇ! ಪರಮೇಶ್ವರ! ಯಾವುದರ ಕುರಿತು ನಾನು ಇಲ್ಲಿ ಹೇಳಿದ್ದೇನೋ ಮತ್ತು ಹೇಳಿಲ್ಲವೋ ಅವೆಲ್ಲವೂ ನೀನೇ! ನಿನಗೆ ನಮಸ್ಕಾರವು! ಪುನಃ ಪುನಃ ನಿನಗೆ ನಮೋ ನಮಃ!””

ಪರಾಶರ ಉವಾಚ । ಏವಂ ಸಂಸ್ತೂಯಮಾನಸ್ತು ಪೃಥಿವ್ಯಾ ಪೃಥಿವೀಧರಃ । ಸಾಮಸ್ವರಧ್ವನಿಃ ಶ್ರೀಮಾನ್ ಜಗರ್ಜ ಪರಿಘರ್ಘರಮ್ ।। 25 ।। ತತಃ ಸಮುತ್ಕ್ಷಿಪ್ಯ ಧರಾಂ ಸ್ವದಂಷ್ಟ್ರಯಾ ಮಹಾವರಾಹಃ ಸ್ಫುಟಪದ್ಮಲೋಚನಃ । ರಸಾತಲಾದುತ್ಪಲಪತ್ರಸಂನಿಭಃ ಸಮುತ್ಥಿತೋ ನೀಲ ಇವಾಚಲೋ ಮಹಾನ್ ।। 26 ।। ಉತ್ತಿಷ್ಠತಾ ತೇನ ಮುಖಾನಿಲಾಹತಂ ತತ್ಸಂಭವಾಂಭೋ ಜನಲೋಕಸಂಶ್ರಯಾನ್ । ಸನಂದನಾದೀನಪಕಲ್ಮಷಾನ್ಮುನೀನ್ಶ್ಚಕಾರ ಭೂಯೋಽಪಿ ಪವಿತ್ರತಾ ಪದಮ್ ।। 27 ।। ಪ್ರಯಾಂತಿ ತೋಯಾನಿ ಖುರಾಗ್ರವಿಕ್ಷತೇ ರಸಾತಲೇಽಧಃ ಕೃತಶಬ್ದಸಂತತಿಃ । ಶ್ವಾಸಾನಿಲಾಸ್ತಾಃ ಪರತಃ ಪ್ರಯಾಂತಿ ಸಿದ್ಧಾ ಜನೇ ಯೇ ನಿಯತಂ ವಸಂತಿ ।। 28 ।। ಉತ್ತಿಷ್ಠತಸ್ತಸ್ಯ ಜಲಾರ್ದ್ರಕುಕ್ಷೇರ್ಮಹಾವರಾಹಸ್ಯ ಮಹೀಂ ವಿಗೃಹ್ಯ । ವಿಧುನ್ವತೋ ವೇದಮಯಂ ಶರೀರಂ ವ್ಯೋಮಾಂತರಸ್ಥಾ ಮುನಯಃ ಸ್ತುವಂತಿ ।। 29 ।। ತಂ ತುಷ್ಟುವುಸ್ತೋಷಪರೀತಚೇತಸೋ ಲೋಕೇ ಜನೇ ಯೇ ನಿವಸಂತಿ ಯೋಗಿನಃ । ಸನಂದನಾದ್ಯಾ ಹ್ಯತಿನಮ್ರಕಂಧರಾ ಧರಾಧರಂ ತಾರತರೋದ್ಧತೇಕ್ಷಣಮ್ ।। 30 ।।

ಪರಾಶರನು ಹೇಳಿದನು: ಪೃಥ್ವಿಯು ಹೀಗೆ ಸ್ತುತಿಸಲು ಶ್ರೀಮಾನ್ ಪೃಥ್ವೀಧರನು ಸಾಮಸ್ವರ ಧ್ವನಿಯಲ್ಲಿ ಜೋರಾಗಿ ಗರ್ಜಿಸಿದನು. ಮಹಾನ್ ನೀಲಪರ್ವತದಂತಿದ್ದ ಆ ಮಹಾವರಾಹನು ಅರಳಿದ ಕನ್ನೈದಿಲೆಯಂತಿದ್ದ ಭೂಮಿಯನ್ನು ತನ್ನ ಕೋರೆದಾಡೆಗಳಿಂದ ಮೇಲಕ್ಕೆತ್ತಿ ತನ್ನ ಮೇಲೆ ಕುಳ್ಳಿರಿಸಿಕೊಂಡು ರಸಾತಲದಿಂದ ಮೇಲೆದ್ದನು. ರಭಸದಿಂದ ಮೇಲೇಳುತ್ತಿದ್ದಾಗ ಅವನ ಬಾಯಿಯ ಉಚ್ಛ್ವಾಸದಿಂದ ಹಾರಿದ ನೀರಿನ ತುಂತುರು ಹನಿಗಳು ಜನೋಲೋಕನಿವಾಸಿಗಳನ್ನೂ ತೋಯಿಸಿತು. ಹಾಗೆ ಅಲ್ಲಿದ್ದ ಸನಂದನನೇ ಮೊದಲಾದ ಮುನಿಗಳನ್ನು ಪಾಪರಹಿತರಾಗಿದ್ದರೂ ಇನ್ನೂ ಪವಿತ್ರರನ್ನಾಗಿ ಮಾಡಿದನು. ರಸಾತಲವನ್ನು ತನ್ನ ಕಾಲಿನ ಗೊರಸಿನಿಂದ ಕೆರೆಯಲು ಕೆಳಗಡೆ ಅತಿಜೋರಾದ ಶಬ್ದವಾಯಿತು. ಉಚ್ಛ್ವಾಸದ ಗಾಳಿಯು ಎಲ್ಲಕಡೆ ನೀರನ್ನು ಹಾರಿಸುತ್ತಾ ಸಿದ್ಧಲೋಕದಲ್ಲಿದ್ದ ಸಿದ್ಧಜನರ ವರೆಗೂ ಹೋಗುತ್ತಿತ್ತು. ಭೂಮಿಯನ್ನು ಕಿತ್ತು ಎತ್ತಿಕೊಂಡು ಮೈಯೆಲ್ಲವೂ ನೀರಾಗಿ ಮೇಲಕ್ಕೇಳುತ್ತಿದ್ದ ಆ ವರಾಹನು ತನ್ನ ವೇದಮಯ ಶರೀರವನ್ನು ಕೊಡವುತ್ತಿರಲು, ಆಕಾಶದಲ್ಲಿದ್ದ ಮುನಿಗಳು ಮಹಾವರಾಹನನ್ನು ಸ್ತುತಿಸಿದರು. ಜನೋಲೋಕದಲ್ಲಿ ವಾಸಿಸುತ್ತಿದ್ದ ಸನಂದಾದಿ ಯೋಗಿಗಳು ತಮ್ಮ ತಲೆ ಬಗ್ಗಿಸಿ ಸಂತೋಷ ಚೇತನರಾಗಿ ಉದಾರ ನೋಟದ ಆ ವರಾಹಸ್ವಾಮಿಯನ್ನು ಸ್ತುತಿಸಿದರು.

ಜಯೇಶ್ವರಾಣಾಂ ಪರಮೇಶ ಕೇಶವ ಪ್ರಭೋ ಗದಾಶಂಖಧರಾಸಿಚಕ್ರಧೃಕ್ । ಪ್ರಸೂತಿನಾಶಸ್ಥಿತಿಹೇತುರೀಶ್ವರಸ್ತ್ವಮೇವ ನಾನ್ಯತ್ಪರಮಂ ಚ ಯತ್ಪದಮ್ ।। 31 ।। ಪಾದೇಷು ವೇದಾಸ್ತವ ಯೂಪದಂಷ್ಟ್ರಾ ದಂತೇಷು ಯಜ್ಞಾಶ್ಚಿತಯಶ್ಚ ವಕ್ತ್ರೇ । ಹುತಾಶಜಿಹ್ವೋಽಸಿ ತನೂರುಹಾಣಿ ದರ್ಭಾಃ ಪ್ರಭೋ ಯಜ್ಞಪುಮಾಂಸ್ತ್ವಮೇವ ।। 32 ।। ವಿಲೋಚನೇ ರಾತ್ರ್ಯಹನೀ ಮಹಾತ್ಮನ್ಸರ್ವಾತ್ಮಕಂ ಬ್ರಹ್ಮಪರಂ ಶಿರಸ್ತೇ । ಸೂಕ್ತಾನ್ಯಶೇಷಾಣಿ ಸಟಾಕಲಾಪೋ ಘ್ರಾಣಂ ಸಮಸ್ತಾನಿ ಹವೀಂಷಿ ದೇವ ।। 32 ।। ಸ್ರುಕ್ತುಂಡಸಾಮಸ್ವರಧೀರನಾದ ಪ್ರಾಗ್ವಂಶಕಾಯಾಖಿಲಸತ್ರಸಂಧೇ । ಪೂರ್ತೇಷ್ಟಧರ್ಮಶ್ರವಣೋಽಸಿ ದೇವ ಸನಾತನಾತ್ಮನ್ ಭಗವನ್ ಪ್ರಸೀದ ।। 33 ।। ಪದಕ್ರಮಾಕ್ರಾಂತಭುವಂ ಭವಂತಮಾದಿಸ್ಥಿತಿಂ ಚಾಕ್ಷರವಿಶ್ವಮೂರ್ತೇ । ವಿಶ್ವಸ್ಯ ವಿದ್ಮಃ ಪರಮೇಶ್ವರೋಽಸಿ ಪ್ರಸೀದ ನಾಥೋಽಸಿ ಚರಾಚರಸ್ಯ ।। 34 ।। ದಂಷ್ಟ್ರಾಗ್ರವಿನ್ಯಸ್ತಮಶೇಷಮೇತದ್ಭೂಮಂಡಲಂ ನಾಥ ವಿಭಾವ್ಯತೇ ತೇ । ವಿಗಾಹತಃ ಪದ್ಮವನಂ ವಿಲಗ್ನಂ ಸರೋಜಿನೀಪತ್ರಮಿವೋಢಪಂಕಮ್ ।। 35 ।। ದ್ಯಾವಾಪೃಥಿವ್ಯೋರತುಲಪ್ರಭಾವ ಯದಂತರಂ ತದ್ವಪುಷಾ ತವೈವ । ವ್ಯಾಪ್ತಂ ಜಗದ್ವ್ಯಾಪ್ತಿಸಮರ್ಥದೀಪ್ತೇ ಹಿತಾಯ ವಿಶ್ವಸ್ಯ ವಿಭೋ ಭವ ತ್ವಮ್ ।। 36 ।।

ಕೇಶವ! ಈಶ್ವರರ ಪರಮ ಈಶ! ನಿನಗೆ ಜಯವಾಗಲಿ! ಪ್ರಭು! ಗದಾ-ಶಂಖ-ಖಡ್ಗ-ಚಕ್ರಧಾರಿಯೇ! ಸೃಷ್ಟಿ-ಸ್ಥಿತಿ-ನಾಶಹೇತುವೇ! ಈಶ್ವರ! ಪರಮ ಪದವು. ನಿನಗಿಂತ ಅನ್ಯ ಪದವಿಲ್ಲ. ನಿನ್ನ ಪಾದಗಳಲ್ಲಿ ವೇದಗಳಿವೆ. ನಿನ್ನ ಕೋರೆದಾಡೆಗಳು ಯೂಪಸ್ತಂಭಗಳು. ಹಲ್ಲುಗಳಲ್ಲಿ ಯಜ್ಞಗಳಿವೆ. ಮುಖದಲ್ಲಿ ಶ್ರುತಿಗಳಿವೆ. ನಾಲಿಗೆಯಲ್ಲಿ ಅಗ್ನಿಯಿದೆ. ನಿನ್ನ ರೋಮಗಳೇ ದರ್ಭೆಗಳು. ಪ್ರಭೋ! ನೀನೇ ಯಜ್ಞಪುರುಷ! ನಿನ್ನ ಕಣ್ಣುಗಳೇ ಹಗಲು-ರಾತ್ರಿಗಳು. ನಿನ್ನ ಶಿರಸ್ಸೇ ಪರಬ್ರಹ್ಮ ತತ್ತ್ವವು. ಕುತ್ತಿಗೆಯ ಕೂದಲುಗಳೇ ಸಮಸ್ತ ವೇದಸೂಕ್ತಗಳು. ದೇವ! ನಿನ್ನ ಮೂಗೇ ಗಂಧವತ್ತಾದ ಹವಿಸ್ಸುಗಳು. ನಿನ್ನ ಮುಖವು ಸ್ರುಕ್ಕಿನಂತಿದೆ. ನಿನ್ನ ಧ್ವನಿಯು ಗಂಭೀರ ಸಾಮಗಾನದಂತಿದೆ. ನಿನ್ನ ಶರೀರದ ಮಧ್ಯಭಾಗವು ಯಜ್ಞಶಾಲೆಯ ಪೂರ್ವಭಾಗದಂತಿದೆ. ದೇವ! ನಿನ್ನ ಕಿವಿಗಳು ಇಷ್ಟಾಪೂರ್ತ ಕರ್ಮಗಳಂತಿವೆ. ಸನಾತನಾತ್ಮನ್! ಭಗವನ್! ಪ್ರಸನ್ನನಾಗು! ವಿಶ್ವಮೂರ್ತೇ! ಪಾದದಿಂದ ಭೂಮಿಯನ್ನು ಆಕ್ರಮಿಸಿದ ನೀನು ಪ್ರಪಂಚದ ಆದಿಸ್ಥಿತಿಗೆ ಕಾರಣನು. ಅಕ್ಷರನು. ಈ ವಿಶ್ವದ ಪರಮೇಶ್ವರನು ನೀನು ಎಂದು ತಿಳಿದಿದ್ದೇವೆ. ಚರಾಚರ ಜಗತ್ತಿನ ನಾಥನಾಗಿದ್ದೀಯೆ! ಪ್ರಸನ್ನನಾಗು! ನಾಥ! ನಿನ್ನ ಕೋರೆದಾಡೆಯ ಮೇಲಿರುವ ಭೂಮಂಡಲವು ಕಮಲದ ವನವನ್ನು ಪ್ರವೇಶಿಸಿ ಕ್ರೀಡಿಸುತ್ತಿದ್ದ ಗಜೇಂದ್ರನು ಸೊಂಡಲಿನಿಂದ ಎತ್ತಿಹಿಡಿದ ಕೆಸರುಬಳಿದುಕೊಂಡಿರುವ ಕಮಲದ ಎಲೆಯಂತೆ ಶೋಭಿಸುತ್ತಿದೆ. ಅತುಲಪ್ರಭಾವೀ! ನಿನ್ನ ಶರೀರದಲ್ಲಿಯೇ ಪೃಥ್ವಿ-ಅಂತರಿಕ್ಷಗಳು ಅಡಗಿವೆ. ಈ ಪ್ರಪಂಚವೆಲ್ಲವೂ ನಿನ್ನ ದೇಹವು. ಪ್ರಭೋ! ಪ್ರಪಂಚದ ಹಿತಕ್ಕಾಗಿಯೇ ನೀನಿದ್ದೀಯೆ

ಪರಮಾರ್ಥಸ್ತ್ವಮೇವೈಕೋ ನಾನ್ಯೋಽಸ್ತಿ ಜಗತಃ ಪತೇ । ತವೈಷ ಮಹಿಮಾ ಯೇನ ವ್ಯಾಪ್ತಮೇತಚ್ಚರಾಚರಮ್ ।। 37 ।। ಯದೇತದ್ದೃಶ್ಯತೇ ಮೂರ್ತಮೇತದ್ಜ್ಞಾನಾತ್ಮನಸ್ತವ । ಭ್ರಾಂತಿಜ್ಞಾನೇನ ಪಶ್ಯಂತಿ ಜಗದ್ರೂಪಮಯೋಗಿನಃ ।। 38 ।। ಜ್ಞಾನಸ್ವರೂಪಮಖಿಲಂ ಜಗದೇತದಬುದ್ಧಯಃ । ಅರ್ಥಸ್ವರೂಪಂ ಪಶ್ಯಂತೋ ಭ್ರಾಮ್ಯಂತೇ ಮೋಹಸಂಪ್ಲವೇ ।। 39 ।। ಯೇ ತು ಜ್ಞಾನವಿದಃ ಶುದ್ಧಚೇತಸಸ್ತೇಽಖಿಲಂ ಜಗತ್ । ಜ್ಞಾನಾತ್ಮಕಂ ಪ್ರಪಶ್ಯಂತಿ ತ್ವದ್ರೂಪಂ ಪರಮೇಶ್ವರ ।। 40 ।। ಪ್ರಸೀದ ಸರ್ವಸರ್ವಾತ್ಮನ್ ಭವಾಯ ಜಗತಾಮಿಮಾಮ್ । ಉದ್ಧರೋರ್ವೀಮಮೇಯಾತ್ಮನ್ ಶಂ ನೋ ದೇಹ್ಯಬ್ಜಲೋಚನ ।। 41 ।। ಸತ್ತ್ವೋದ್ರಿಕ್ತೋಽಸಿ ಭಗವನ್ಗೋವಿಂದ ಪೃಥಿವೀಮಿಮಾಮ್ । ಸಮುದ್ಧರ ಭವಾಯೇಶ ಶಂ ನೋ ದೇಹ್ಯಬ್ಜಲೋಚನ ।। 42 ।। ಸರ್ಗಪ್ರವೃತ್ತಿರ್ಭವತೋ ಜಗತಾಮುಪಕಾರಿಣೀ । ಭವತ್ವೇಷಾ ನಮಸ್ತೇಽಸ್ತು ಶಂ ನೋ ದೇಹ್ಯಬ್ಜಲೋಚನ ।। 43 ।।

ನೀನೊಬ್ಬನೇ ಜಗತ್ತಿನ ಒಡೆಯನು. ಪರಮಾರ್ಥನು. ಇನ್ನೊಬ್ಬನಿಲ್ಲ. ನಿನ್ನ ಮಹಿಮೆಯು ಈ ಚರಾಚರ ಜಗತ್ತೆಲವನ್ನೂ ವ್ಯಾಪಿಸಿದೆ. ಮೂರ್ತಿಮತ್ತಾಗಿ ಏನೆಲ್ಲ ಕಾಣುತ್ತಿದೆಯೋ ಅವೆಲ್ಲವೂ ನಿನ್ನ ಜ್ಞಾನಸ್ವರೂಪವು. ಬುದ್ಧಿಯಿಲ್ಲದವರು ನಿನ್ನ ಅರ್ಥಸ್ವರೂಪವನ್ನು ಮಾತ್ರ ಕಂಡು ತಮಸ್ಸಿನ ದೋಣಿಯಲ್ಲಿ ಸುತ್ತುತ್ತಿರುತ್ತಾರೆ. ಪರಮೇಶ್ವರ! ಜ್ಞಾನವಿದ ವೃದ್ಧಚೇತಸರು ಅಖಿಲ ಜಗತ್ತನ್ನೂ ನಿನ್ನ ಜ್ಞಾನಾತ್ಮಕ ರೂಪವೆಂದು ಕಾಣುತ್ತಾರೆ. ಸರ್ವಭೂತಾತ್ಮನ್! ಪ್ರಸನ್ನನಾಗು. ಅಮೇಯಾತ್ಮನ್! ಈ ಜಗತ್ತಿನ ಒಳಿತಿಗಾಗಿ ಜಲರಾಶಿಯಲ್ಲಿ ಮುಳುಗಿರುವ ಉರ್ವಿಯನ್ನು ಮೇಲಕ್ಕೆತ್ತು. ಅಬ್ಜಲೋಚನ! ನಮಗೆ ಮಂಗಳನ್ನುಂಟುಮಾಡು. ಭಗವನ್! ಗೋವಿಂದ! ಅಬ್ಜಲೋಚನ! ಸತ್ವಗುಣದಿಂದ ಉದ್ರಿಕ್ತನಾಗಿದ್ದೀಯೆ. ನಮ್ಮೆಲ್ಲರ ಶಾಂತಿಗಾಗಿ ಈ ಪೃಥ್ವಿಯನ್ನು ಸಮುದ್ಧರಿಸು. ನಿನ್ನ ಸೃಷ್ಟಿ-ಸ್ಥಿತಿ ಕಾರ್ಯಗಳು ಲೋಕಕ್ಕೆ ಉಪಕಾರವನ್ನುಂಟುಮಾದಲಿ. ಅಬ್ಜಲೋಚನ! ನಿನಗೆ ನಮಸ್ಕಾರವು! ನಮಗೆ ಸುಖವನ್ನುಂಟುಮಾಡು!””

ಪರಾಶರ ಉವಾಚ । ಏವಂ ಸಂಸ್ತೂಯಮಾನಸ್ತು ಪರಮಾತ್ಮಾ ಮಹೀಧರಃ । ಉಜ್ಜಹಾರ ಕ್ಷಿತಿಂ ಕ್ಷಿಪ್ರಂ ನ್ಯಸ್ತವಾಂಶ್ಚ ಮಹಾಂಭಸಿ 44 ।। ತಸ್ಯೋಪರಿ ಜಲೌಘಸ್ಯ ಮಹತೀ ನೌರಿವ ಸ್ಥಿತಾ । ವಿತತತ್ವಾತ್ತು ದೇಹಸ್ಯ ನ ಮಹೀ ಯಾತಿ ಸಂಪ್ಲವಮ್ ।। 45 ।। ತತಃ ಕ್ಷಿತಿಂ ಸಮಾಂ ಕೃತ್ವಾ ಪೃಥಿವ್ಯಾಂ ಸೋಽಚಿನೋದ್ ಗಿರೀನ್ । ಯಥಾವಿಭಾಗಂ ಭಗವಾನನಾದಿಃ ಪರಮೇಶ್ವರಃ ।। 46 ।। ಪ್ರಾಕ್ಸರ್ಗದಗ್ಧಾನಖಿಲಾನ್ ಪರ್ವತಾನ್ ಪೃಥಿವೀತಲೇ । ಅಮೋಘೇನ ಪ್ರಭಾವೇನ ಸಸರ್ಜಾಮೋಘವಾಂಛಿತಃ ।। 47 ।। ಭೂವಿಭಾಗಂ ತತಃ ಕೃತ್ವಾ ಸಪ್ತದ್ವೀಪಾನ್ ಯಥಾತಥಮ್ । ಭೂರಾದ್ಯಾಂಶ್ಚತುರೋ ಲೋಕಾನ್ಪೂರ್ವವತ್ಸಮಕಲ್ಪಯತ್ ।। 48 ।। ಬ್ರಹ್ಮರೂಪಧರೋ ದೇವಸ್ತತೋಽಸೌ ರಜಸಾವೃತಃ । ಚಕಾರ ಸೃಷ್ಟಿಂ ಭಗವಾಂಶ್ಚತುರ್ವಕ್ತ್ರಧರೋ ಹರಿಃ ।। 49 ।। ನಿಮಿತ್ತಮಾತ್ರಮೇವಾಸೌ ಸೃಜ್ಯಾನಾಂ ಸರ್ಗಕರ್ಮಣಿ । ಪ್ರಧಾನಕಾರಣೀಭೂತಾ ಯತೋ ವೈ ಸೃಜ್ಯಶಕ್ತಯಃ ।। 50 ।। ನಿಮಿತ್ತಮಾತ್ರಂ ಮುಕ್ತ್ವೈಕಂ ನಾನ್ಯತ್ಕಿಂಚಿದಪೇಕ್ಷ್ಯತೇ । ನೀಯತೇ ತಪತಾಂ ಶ್ರೇಷ್ಠ ಸ್ವಶಕ್ತ್ಯಾ ವಸ್ತುವಸ್ತುತಾಮ್ ।। 51 ।।

ಹೀಗೆ ಸ್ತುತಿಸುತ್ತಿರಲು ಪರಮಾತ್ಮಾ ಮಹೀಧರನು ಬೇಗನೇ ಕ್ಷಿತಿಯನ್ನು ಮೇಲಕ್ಕೆತ್ತಿ ಆ ಮಹಾಸಾಗರದ ಮೇಲಿಟ್ಟನು. ಆ ಜಲರಾಶಿಯ ಮೇಲೆ ಅದು ದೊಡ್ಡ ಹಡಗಿನಂತೆ ನಿಂತಿತು. ನಂತರ ಕ್ಷಿತಿಯನ್ನು ಸಮತಟ್ಟನಾಗಿ ಮಾಡಿ ಪರ್ವತಗಳು ಮೇಲೆ ಕಾಣುವಂತೆ ಮಾಡಿದನು. ಆದಿ ಪುರುಷೋತ್ತಮ ಭಗವಂತನು ಭೂಮಿಯನ್ನು ಏಳು ದ್ವೀಪಗಳನ್ನಾಗಿ ವಿಭಜಿಸಿ ಯಾವ ಯಾವ ದ್ವೀಪಗಳು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇಟ್ಟನು. ಹಿಂದಿನ ಸೃಷ್ಟಿಯಲ್ಲಿದ್ದು ಸುಟ್ಟುಹೋಗಿದ್ದ ಸರ್ವ ಪರ್ವತಗಳನ್ನೂ ಭೂಮಿಯಮೇಲೆ ತನ್ನ ಅಮೋಘ ಪ್ರಭಾವದಿಂದ ಸೃಷ್ಟಿಸಿದನು. ಭೂಮಿಯ ಮೇಲಿನ ನಾಲ್ಕೂ ಲೋಕಗಳನ್ನೂ ಮೊದಲಿದ್ದಂತೆಯೇ ಕಲ್ಪಿಸಿದನು. ರಜೋಗುಣದಿಂದ ಕೂಡಿದ ಚತುರ್ಮುಖ ಬ್ರಹ್ಮರೂಪಧರನಾದ ಆ ದೇವ ಭಗವಾನ್ ಹರಿಯು ಸೃಷ್ಟಿಯನ್ನು ನಡೆಸಿದನು. ಸೃಷ್ಟಿಕಾರ್ಯದಲ್ಲಿ ಕೇವಲ ಸಾನ್ನಿಧ್ಯರೂಪನಾಗಿ ಅವನು ಜಗತ್ತಿನ ನಿಮಿತ್ತಕಾರಣ ಮಾತ್ರನಾಗಿದ್ದಾನೆ. ಆವನ ಶಕ್ತಿರೂಪವಾದ ಪ್ರಕೃತಿಯೇ ಸೃಷ್ಟಿಸಬೇಕಾದ ವಸ್ತುಗಳಿಗೆ ಉಪದಾನಕಾರಣವು. ತಪಸ್ವಿಗಳಲ್ಲಿ ಶ್ರೇಷ್ಠ! ಮಳೆಯ ಪರಿಣಾಮದಿಂದ ಬೀಜದಲ್ಲಿರುವ ಸೂಕ್ಷ್ಮ ಅಂಕುರ ಶಕ್ತಿಯು ಸ್ಥೂಲವಾದ ಮರವಾಗುವಂತೆ ಪರಮಾತ್ಮನ ಸಾನ್ನಿದ್ಧ್ಯದಿಂದ ಸೂಕ್ಷ್ಮವಾಗಿ ಸಂಸ್ಕಾರರೂಪದಲ್ಲಿದ್ದ ಪ್ರಕೃತಿರೂಪವಾದ ಆತ್ಮಶಕ್ತಿಯು ಪ್ರಕಟಗೊಂಡು ಸ್ಥೂಲವಾದ ಪ್ರಪಂಚರೂಪವಾಗುತ್ತದೆ.”

ಇತಿ ಶ್ರೀವಿಷ್ಣುಪುರಾಣೇ ಪ್ರಥಮೇಽಂಶೇ ಚತುರ್ಥೋಽಧ್ಯಾಯಃ ।।

[1] ಈ ಅಧ್ಯಾಯದ ಅಧಿಕ ಶ್ಲೋಕಗಳು ಪದ್ಮಪುರಾಣದ ಸೃಷ್ಟಿಖಂಡದ ಮೂರನೇ ಅಧ್ಯಾಯದ 21-52 ನೇ ಶ್ಲೋಕಗಳನ್ನು ಹೋಲುತ್ತವೆ.

Leave a Reply

Your email address will not be published. Required fields are marked *