ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 3[1]

 

 

ಮೈತ್ರೇಯ ಉವಾಚ । ನಿರ್ಗುಣಸ್ಯಾಪ್ರಮೇಯಸ್ಯ ಶುದ್ಧಸ್ಯಾಪ್ಯಮಲಾತ್ಮನಃ । ಕಥಂ ಸರ್ಗಾದಿಕರ್ತೃತ್ವಂ ಬ್ರಹ್ಮಣೋಽಭ್ಯುಪಪದ್ಯತೇ ।। 1 ।।

ಮೈತ್ರೇಯನು ಹೇಳಿದನು: “ನಿರ್ಗುಣನೂ ಅಪ್ರಮೇಯನೂ ಶುದ್ಧನೂ ಮಹಾತ್ಮನೂ ಆದ ಬ್ರಹ್ಮನಿಗೆ ಸೃಷ್ಟಿ-ಸ್ಥಿತಿ-ಲಯಗಳ ಕರ್ತೃತ್ವವು ಹೇಗೆ ಉಂಟಾಗುತ್ತದೆ?”

ಪರಾಶರ ಉವಾಚ । ಶಕ್ತಯಃ ಸರ್ವಭಾವಾನಾಮಚಿಂತ್ಯಜ್ಞಾನಗೋಚರಾಃ । ಯತ್ತತೋ ಬ್ರಹ್ಮಣಸ್ತಾಸ್ತು ಸರ್ಗಾದ್ಯಾ ಭಾವಶಕ್ತಯಃ । ಭವಂತಿ ತಪತಾಂ ಶ್ರೇಷ್ಠ ಪಾವಕಸ್ಯ ಯಥೋಷ್ಣತಾ ।। 2 ।। ತನ್ನಿಬೋಧ ಯಥಾ ಸರ್ಗೇ ಭಗವಾನ್ಸಂಪ್ರವರ್ತತೇ । ನಾರಾಯಣಾಖ್ಯೋ ಭಗವಾನ್ ಬ್ರಹ್ಮಾ ಲೋಕಪಿತಾಮಹಃ ।। 3 ।। ಉತ್ಪನ್ನಃ ಪ್ರೋಚ್ಯತೇ ವಿದ್ವನ್ನಿತ್ಯ ಏವೋಪಚಾರತಃ ।। 4 ।।

ಪರಾಶರನು ಹೇಳಿದನು: “ಸರ್ವ ಭಾವಶಕ್ತಿಗಳೂ ಅಚಿಂತ್ಯವಾದವುಗಳು ಮತ್ತು ಜ್ಞಾನಕ್ಕೂ ಅಗೋಚರವಾದವುಗಳು. ತಪಸ್ವಿಗಳಲ್ಲಿ ಶ್ರೇಷ್ಠ! ಪಾವಕನಿಗೆ ಉಷ್ಣವು ಹೇಗೋ ಹಾಗೆ ಸೃಷ್ಟಿ ಮೊದಲಾದವುಗಳು ಬ್ರಹ್ಮನ ಭಾವಶಕ್ತಿಗಳೇ. ಭಗವಾನ್ ನಾರಾಯಣನೆಂಬ ಲೋಕಪಿತಾಮಹ ಭಗವಾನ್ ಬ್ರಹ್ಮನು ಹೇಗೆ ಸೃಷ್ಟಿಯಲ್ಲಿ ಪ್ರವೃತ್ತನಾಗುತ್ತಾನೆ ಎನ್ನುವುದನ್ನು ಕೇಳು. ಔಪಚಾರಿಕವಾಗಿ ವಿದ್ವಾಂಸರು ಬ್ರಹ್ಮನು ಉತ್ಪನ್ನನಾದನು ಎಂದು ಹೇಳುತ್ತಾರೆ.

ನಿಜೇನ ತಸ್ಯ ಮಾನೇನ ಆಯುರ್ವರ್ಷಶತಂ ಸ್ಮೃತಮ್ । ತತ್ಪರಾಖ್ಯಂ ತದರ್ಧಂ ಚ ಪರಾರ್ಧಮಭಿಧೀಯತೇ ।। 5 ।। ಕಾಲಸ್ವರೂಪಂ ವಿಷ್ಣೋಶ್ಚ ಯನ್ಮಯೋಕ್ತಂ ತವಾನಘ । ತೇನ ತಸ್ಯ ನಿಬೋಧ ತ್ವಂ ಪರಿಮಾಣೋಪಪಾದನಮ್ ।। 6 ।। ಅನ್ಯೇಷಾಂ ಚೈವ ಜಂತೂನಾಂ ಚರಾಣಾಮಚರಾಶ್ಚ ಯೇ । ಭೂಭೂಭೃತ್ಸಾಗರಾದೀನಾಮಶೇಷಾಣಾಂ ಚ ಸತ್ತಮ ।। 7 ।।

ಅವನ ಅಳತೆಯಿಂದ ಬ್ರಹ್ಮನಿಗೆ ನೂರು ವರ್ಷ ಆಯುಸ್ಸೆಂದು ತಿಳಿಯಬೇಕು. ಅದಕ್ಕೆ ಪರಾ ಎಂದು ಕರೆಯುತ್ತಾರೆ. ಅದರ ಅರ್ಧವು ಪರಾರ್ಧ ಎಂದು ಹೇಳುತ್ತಾರೆ.ಅನಘ! ನಾನು ಹೇಳಿದಂತೆ ವಿಷ್ಣುವು ಕಾಲಸ್ವರೂಪನೂ ಹೌದು. ಸತ್ತಮ! ಆ ಕಾಲವನ್ನನುಸರಿಸಿ ಬ್ರಹ್ಮನಿಗೂ, ಇತರ ಚರಾಚರ ಪ್ರಾಣಿಗಳಿಗೂ ಇರುವ ಹಾಗೂ ಪರ್ವತ-ಸಾಗರಗಳಿಗಿರುವ ಕಾಲದ ಪರಿಮಾಣಗಳ ಕುರಿತು ಕೇಳು.

ಕಾಷ್ಠಾ ಪಂಚದಶಾಖ್ಯಾತಾ ನಿಮೇಷಾ ಮುನಿಸತ್ತಮ । ಕಾಷ್ಠಾತ್ರಿಂಶತ್ಕಲಾ ತ್ರಿಂಶತ್ಕಲಾ ಮೌಹೂರ್ತಿಕೋ ವಿಧಿಃ ।। 8 ।। ತಾವತ್ಸಂಖ್ಯೈರಹೋರಾತ್ರಂ ಮುಹೂರ್ತೈರ್ಮಾನುಷಂ ಸ್ಮೃತಮ್ । ಅಹೋರಾತ್ರಾಣಿ ತಾವಂತಿ ಮಾಸಃ ಪಕ್ಷದ್ವಯಾತ್ಮಕಃ ।। 9 ।। ತೈಃ ಷಡ್ಭಿರಯನಂ ವರ್ಷಂ ದ್ವೇಽಯನೇ ದಕ್ಷಿಣೋತ್ತರೇ । ಅಯನಂ ದಕ್ಷಿಣಂ ರಾತ್ರಿರ್ದೇವಾನಾಮುತ್ತರಂ ದಿನಮ್ ।। 10 ।। ದಿವ್ಯೈರ್ವರ್ಷಸಹಸ್ರೈಸ್ತು ಕೃತತ್ರೇತಾದಿಸಂಜ್ಞಕಮ್ । ಚತುರ್ಯುಗಂ ದ್ವಾದಶಭಿಸ್ತದ್ವಿಭಾಗಂ ನಿಬೋಧ ಮೇ ।। 11 ।। ಚತ್ವಾರಿ ತ್ರೀಣಿ ದ್ವೇ ಚೈಕಂ ಕೃತಾದಿಷು ಯಥಾಕ್ರಮಮ್ । ದಿವ್ಯಾಬ್ದಾನಾಂ ಸಹಸ್ರಾಣಿ ಯುಗೇಷ್ವಾಹುಃ ಪುರಾವಿದಃ ।। 12 ।। ತತ್ಪ್ರಮಾಣೈಃ ಶತೈಃ ಸಂಧ್ಯಾ ಪೂರ್ವಾ ತತ್ರಾಭಿಧೀಯತೇ । ಸಂಧ್ಯಾಂಶಶ್ಚಾಪಿ ತತ್ತುಲ್ಯೋ ಯುಗಸ್ಯಾನಂತರೋ ಹಿ ಸಃ ।। 13 ।। ಸಂಧ್ಯಾಸಂಧ್ಯಾಂಶಯೋರಂತರ್ಯಃ ಕಾಲೋ ಮುನಿಸತ್ತಮ । ಯುಗಾಖ್ಯಃ ಸ ತು ವಿಜ್ಞೇಯಃ ಕೃತತ್ರೇತಾದಿಸಂಜ್ಞಿತಃ ।। 14 ।।

ಕಣ್ಣುರೆಪ್ಪೆಯನ್ನು ಒಂದಾವೃತ್ತಿ ಮುಚ್ಚಿ ಬಿಡುವ ಕಾಲಕ್ಕೆ ನಿಮೇಷ ಎಂದು ಹೆಸರು. ಹದಿನೈದು ನಿಮೇಷಗಳಿಗೆ ಒಂದು ಕಾಷ್ಠ. ಮೂವತ್ತು ಕಾಷ್ಠಗಳಿಗೆ ಒಂದು ಕಲೆ. ಮೂವತ್ತು ಕಲೆಗಳಿಗೆ ಒಂದು ಮುಹೂರ್ತವಾಗುತ್ತದೆ. ಮೂವತ್ತು ಮುಹೂರ್ತಗಳಿಗೆ ಮನುಷ್ಯನ ಒಂದು ಅಹೋರಾತ್ರಿಯಾಗುತ್ತದೆ. ಮೂವತ್ತು ಅಹೋರಾತ್ರಿಗಳು ಒಂದು ಮಾಸವಾಗುತ್ತದೆ. ಆ ಮಾಸಕ್ಕೆ ಎರಡು ಪಕ್ಷಗಳು. ಅಂತಹ ಎರಡು ಆರು ಮಾಸಗಳು – ದಕ್ಷಿಣ ಮತ್ತು ಉತ್ತರಾಯಣಗಳು – ಸೇರಿ ಒಂದು ವರ್ಷವಾಗುತ್ತದೆ. ದಕ್ಷಿಣಾಯನವು ದೇವತೆಗಳಿಗೆ ರಾತ್ರಿ ಮತ್ತು ಉತ್ತರಾಯಣವು ದೇವತೆಗಳಿಗೆ ಹಗಲು. ಹೀಗೆ ದೇವತೆಗಳ ಮಾನದಿಂದ 12,000 ವರ್ಷಗಳಿಗೆ ಒಂದು ಚತುರ್ಯುಗವಾಗುತ್ತದೆ. ಕ್ರಮವಾಗಿ ಕೃತ, ತ್ರೇತ, ದ್ವಾಪರ ಮತ್ತು ಕಲಿಯುಗಗಳಿಗೆ ನಾಲ್ಕು, ಮೂರು, ಎರಡು, ಮತ್ತು ಒಂದು ಸಾವಿರ ದೇವಮಾನದ ವರ್ಷಗಳಾಗುತ್ತವೆ. ಪ್ರತಿಯೊಂದು ಯುಗದ ಮೊದಲು ಮತ್ತು ಕೊನೆಯಲ್ಲಿ ಕ್ರಮವಾಗಿ ನಾಲ್ಕು, ಮೂರು, ಎರಡು, ಮತ್ತು ಒಂದು ನೂರು ದೇವಮಾನದ ವರ್ಷಗಳು ಸಂಧಿ-ಸಂಧ್ಯಾಂಶಗಳ ಕಾಲವೆನಿಸುತ್ತದೆ. ಸಂಧಿಕಾಲಕ್ಕೂ ಸಂಧ್ಯಾಂಶಕಾಲಕ್ಕೂ ನಡುವೆ ಇರುವ ನಾಲ್ಕು, ಮೂರು, ಎರಡು, ಮತ್ತು ಒಂದು ಸಾವಿರ ವರ್ಷಗಳೇ ಕೃತ, ತ್ರೇತ, ದ್ವಾಪರ, ಮತ್ತು ಕಲಿಯುಗಗಳ ಪ್ರಮಾಣಗಳು.

ಕೃತಂ ತ್ರೇತಾ ದ್ವಾಪರಶ್ಚ ಕಲಿಶ್ಚೇತಿ ಚತುರ್ಯುಗಮ್ । ಪ್ರೋಚ್ಯತೇ ತತ್ಸಹಸ್ರಂ ಚ ಬ್ರಹ್ಮಣೋ ದಿವಸಂ ಮುನೇ ।। 15 ।। ಬ್ರಹ್ಮಣೋ ದಿವಸೇ ಬ್ರಹ್ಮನ್ಮನವಸ್ತು ಚತುರ್ದಶ । ಭವಂತಿ ಪರಿಮಾಣಂ ಚ ತೇಷಾಂ ಕಾಲಕೃತಂ ಶೃಣು ।। 16 ।। ಸಪ್ತರ್ಷಯಃ ಸುರಾಃ ಶಕ್ರೋ ಮನುಸ್ತತ್ಸೂನವೋ ನೃಪಾಃ । ಏಕಕಾಲೇ ಹಿ ಸೃಜ್ಯಂತೇ ಸಂಹ್ರಿಯಂತೇ ಚ ಪೂರ್ವವತ್ 17 ।। ಚತುರ್ಯುಗಾಣಾಂ ಸಂಖ್ಯಾತಾ ಸಾಧಿಕಾ ಹ್ಯೇಕಸಪ್ತತಿಃ । ಮನ್ವಂತರಂ ಮನೋಃ ಕಾಲಃ ಸುರಾದೀನಾಂ ಚ ಸತ್ತಮ ।। 18 ।। ಅಷ್ಟೌ ಶತಸಹಸ್ರಾಣಿ ದಿವ್ಯಯಾ ಸಂಖ್ಯಯಾ ಸ್ಮೃತಮ್ । ದ್ವಿಪಂಚಾಶತ್ತಥಾನ್ಯಾನಿ ಸಹಸ್ರಾಣ್ಯಧಿಕಾನಿ ತು ।। 19 ।। ತ್ರಿಂಶತ್ಕೋಟ್ಯಸ್ತು ಸಂಪೂರ್ಣಾಃ ಸಂಖ್ಯಾತಾಃ ಸಂಖ್ಯಯಾ ದ್ವಿಜ । ಸಪ್ತಷಷ್ಟಿಸ್ತಥಾನ್ಯಾನಿ ನಿಯುತಾನಿ ಮಹಾಮುನೇ ।। 20 ।। ವಿಂಶತಿಶ್ಚ ಸಹಸ್ರಾಣಿ ಕಾಲೋಽಯಮಧಿಕಂ ವಿನಾ । ಮನ್ವಂತರಸ್ಯ ಸಂಖ್ಯೇಯಂ ಮಾನುಷೈರ್ವತ್ಸರೈರ್ದ್ವಿಜ ।। 21 ।। 

ಮುನೇ! ಕೃತ, ತ್ರೇತ, ದ್ವಾಪರ ಮತ್ತು ಕಲಿಗಳೆಂಬ ಒಂದು ಸಾವಿರ ಚತುರ್ಯುಗಗಳು ಬ್ರಹ್ಮನ ಒಂದು ಹಗಲೆಂದು ಹೇಳುತ್ತಾರೆ. ಬ್ರಹ್ಮನ ಒಂದು ಹಗಲಿನಲ್ಲಿ ಹದಿನಾಲ್ಕು ಮನುಗಳು ಆಗಿಹೋಗುತ್ತಾರೆ. ಆ ಮನ್ವಂತರಗಳ ಕಾಲವನ್ನು ಕೇಳು. ಸಪ್ತರ್ಷಿಗಳು, ದೇವತೆಗಳು, ದೇವೇಂದ್ರ, ಮನು, ಮನುಪುತ್ರರಾದ ನೃಪರು ಇವರೆಲ್ಲರೂ ಏಕಕಾಲದಲ್ಲಿ ಸೃಷ್ಟಿಯಾಗಿ ಹಿಂದಿನಂತೆ ಏಕಕಾಲದಲ್ಲಿಯೇ ಉಪಸಂಹಾರಹೊಂದುತ್ತಾರೆ. ಒಂದೊಂದು ಮನ್ವಂತರಕ್ಕೆ ಎಪ್ಪತ್ತೊಂದು ಚತುರ್ಯುಗಗಳಿಗಿಂತ ಸ್ವಲ್ಪ ಅಧಿಕ ಕಾಲವಾಗುತ್ತದೆ. ಸತ್ತಮ! ಈ ಮನ್ವಂತರವು ಮನುವಿನ ಮತ್ತು ದೇವತೆಗಳು ಮೊದಲಾದವರ ಕಾಲವು. ಎಪ್ಪತ್ತೊಂದು ಚತುರ್ಯುಗಗಳ ಕಾಲಮಾನವು ದೇವಮಾನದ ಪ್ರಕಾರ ಎಂಟು ಲಕ್ಷದ ಐವತ್ತೆರಡು ಸಾವಿರ (8,52,000) ದೇವ ವರ್ಷಗಳಾಗುತ್ತವೆ. ಮಹಾಮುನೇ! ದ್ವಿಜ! ಅಧಿಕ ಕಾಲವನ್ನು ಬಿಟ್ಟು ಮನುಷ್ಯರ ವರ್ಷಗಳಲ್ಲಿ ಈ ಎಪ್ಪತ್ತೊಂದು ಚತುರ್ಯುಗಗಳ ಕಾಲಮಾನವು ಮೂವತ್ತು ಕೋಟಿ ಅರವತ್ತೇಳು ಲಕ್ಷದ ಇಪ್ಪತ್ತು ಸಾವಿರ (30,67,20,000) ವರ್ಷಗಳಾಗುತ್ತವೆ.

ಚತುರ್ದಶಗುಣೋ ಹ್ಯೇಷ ಕಾಲೋ ಬ್ರಾಹ್ಮಮಹಃ ಸ್ಮೃತಮ್ । ಬ್ರಾಹ್ಮೋ ನೈಮಿತ್ತಿಕೋ ನಾಮ ತಸ್ಯಾಂತೇ ಪ್ರತಿಸಂಚರಃ ।। 22 ।। ತದಾ ಹಿ ದಹ್ಯತೇ ಸರ್ವಂ ತ್ರೈಲೋಕ್ಯಂ ಭೂರ್ಭುವಾದಿಕಮ್ । ಜನಂ ಪ್ರಯಾಂತಿ ತಾಪಾರ್ತಾ ಮಹರ್ಲೋಕನಿವಾಸಿನಃ ।। 23 ।।

ಹದಿನಾಲ್ಕು ಮನ್ವಂತರಗಳು ಬ್ರಹ್ಮನ ಒಂದು ಹಗಲು ಎನ್ನುತ್ತಾರೆ. ಹಗಲಿನ ಅಂತ್ಯದಲ್ಲಿ ಬ್ರಹ್ಮನ ನಿದ್ರಾನಿಮಿತ್ತವಾದ ನೈಮಿತ್ತಿಕ ಎಂಬ ಪ್ರಳಯವು ಉಂಟಾಗುತ್ತದೆ. ಆ ಪ್ರಳಯದಲ್ಲಿ ಭೂಲೋಕ, ಭುವರ್ಲೋಕ, ಮತ್ತು ಸುವರ್ಲೋಕವೆಂಬ ಮೂರು ಲೊಕಗಳೂ ಸುಟ್ಟುಹೋಗುತ್ತವೆ. ಆ ತಾಪದ ಬಾಧೆಯಿಂದ ಮಹರ್ಲೋಕ ನಿವಾಸಿಗಳು ಜನೋಲೋಕಕ್ಕೆ ಹೋಗುತ್ತಾರೆ.

ಏಕಾರ್ಣವೇ ತು ತ್ರೈಲೋಕ್ಯೇ ಬ್ರಹ್ಮಾ ನಾರಾಯಣಾತ್ಮಕಃ । ಭೋಗಿಶಯ್ಯಾಂಗತಃ ಶೇತೇ ತ್ರೈಲೋಕ್ಯಗ್ರಾಸಬೃಂಹಿತಃ ।। 24 ।। ಜನಸ್ಥೈರ್ಯೋಗಿಭಿರ್ದೇವಶ್ಚಿಂತ್ಯಮಾನೋಽಬ್ಜಸಂಭವಃ । ತತ್ಪ್ರಮಾಣಾಂ ಹಿ ತಾಂ ರಾತ್ರಿಂ ತದಂತೇ ಸೃಜತೇ ಪುನಃ ।। 25 ।। ಏವಂ ತು ಬ್ರಹ್ಮಣೋ ವರ್ಷಮೇವಂ ವರ್ಷಶತಂ ತು ತತ್ । ಶತಂ ಹಿ ತಸ್ಯ ವರ್ಷಾಣಾಂ ಪರಮಾಯುರ್ಮಹಾತ್ಮನಃ ।। 26 ।। ಏಕಮಸ್ಯಾಪ್ಯತೀತಂ ತು ಪರಾರ್ಧಂ ಬ್ರಹ್ಮಣೋಽನಘ । ತಸ್ಯಾಂತೇಽಭೂನ್ಮಹಾಕಲ್ಪಃ ಪಾದ್ಮ ಇತ್ಯಭಿವಿಶ್ರುತಃ ।। 27 ।। ದ್ವಿತೀಯಸ್ಯ ಪರಾರ್ಧಸ್ಯ ವರ್ತಮಾನಸ್ಯ ವೈ ದ್ವಿಜ । ವಾರಾಹ ಇತಿ ಕಲ್ಪೋಽಯಂ ಪ್ರಥಮಃ ಪರಿಕೀರ್ತಿತಃ ।। 28 ।।

ಮೂರು ಲೋಕಗಳೂ ನೀರಿನಿಂದ ತುಂಬಿ ಒಂದೇ ಸಮುದ್ರವಾಗಲು ನಾರಾಯಣಾತ್ಮಕ ಬ್ರಹ್ಮನು ಮೂರೂಲೋಕಗಳನ್ನೂ ನುಂಗಿ ಉಬ್ಬಿದವನಾಗಿ ಆದಿಶೇಷನ ಹಾಸಿಗೆಯಲ್ಲಿ ನಿದ್ರಿಸುತ್ತಾನೆ. ಆ ಬ್ರಹ್ಮನು ತನ್ನ ಹಗಲಿನ ಪ್ರಮಾಣದಷ್ಟೇ ಆದ ರಾತ್ರಿಯಲ್ಲಿ ಜನೋಲೋಕವಾಸಿಗಳು ಅವನನ್ನು ಧ್ಯಾನಿಸುತ್ತಿರಲು ಯೋಗನಿದ್ರೆಯಲ್ಲಿದ್ದು, ರಾತ್ರಿಯ ಕೊನೆಯಲ್ಲಿ ಪುನಃ ಸೃಷ್ಟಿಮಾಡುತ್ತಾನೆ. ಹೀಗೆ ಬ್ರಹ್ಮನ ದಿನಪ್ರಮಾಣದಂತೆ ಅವನಿಗೆ ಒಂದು ನೂರು ವರ್ಷ ಪರಮ ಆಯುಸ್ಸಿರುತ್ತದೆ. ಅನಘ! ಈ ಬ್ರಹ್ಮನಿಗೆ ಒಂದು ಪರಾರ್ಧಕಾಲವು ಕಳೆಯಿತು. ಈ ಕಾಲದ ಕೊನೆಯಲ್ಲಿ ಪಾದ್ಮ ಎಂಬ ಮಹಾಕಲ್ಪವು ಕಳೆದು ಹೋಯಿತು. ದ್ವಿಜ! ಈಗ ನಡೆಯುತ್ತಿರುವ ಬ್ರಹ್ಮನ ಎರಡನೆಯ ಪರಾರ್ಧದ ಮೊದಲನೆಯ ಈ ಕಲ್ಪವು ವಾರಾಹ ಕಲ್ಪ ಎಂದು ಕರೆಯಲ್ಪಟ್ಟಿದೆ.

ಇತಿ ಶ್ರೀವಿಷ್ಣುಪುರಾಣೇ ಪ್ರಥಮೇಽಂಶೇ ತೃತೀಯೋಽಧ್ಯಾಯಃ ।।

[1] ಈ ಅಧ್ಯಾಯವು ಹೆಚ್ಚು ಕಡಿಮೆ ಪದ್ಮಪುರಾಣದ ಸೃಷ್ಟಿಖಂಡದ 3ನೇ ಅಧ್ಯಾಯವನ್ನೇ ಹೋಲುತ್ತದೆ.

Leave a Reply

Your email address will not be published. Required fields are marked *