ಶ್ರೀವರಾಹಮಹಾಪುರಾಣ: ಅಧ್ಯಾಯ 10, ಸೃಷ್ಟಿವರ್ಣನೆ-ದುರ್ಜಯಚರಿತೆ

 

ಶ್ರೀವರಾಹ ಉವಾಚ । ಏವಂ ಸೃಷ್ಟ್ವಾ ಜಗತ್ಸರ್ವಂ ಭಗವಾನ್ ಲೋಕಭಾವನಃ । ವಿರರಾಮ ತತಃ ಸೃಷ್ಟಿರ್ವ್ಯವರ್ದ್ಧತ ಧರೇ ತದಾ ।। 1 ।। ವೃದ್ಧಾಯಾಮಥ ಸೃಷ್ಟೌ ತು ಸರ್ವೇ ದೇವಾಃ ಪುರಾತನಮ್ । ನಾರಾಯಣಾಖ್ಯಂ ಪುರುಷಂ ಯಜಂತೋ ವಿವಿಧೈರ್ಮಖೈಃ ।। 2 ।। ದ್ವೀಪೇಷು ಚೈವ ಸರ್ವೇಷು ವರ್ಷೇಷು ಚ ಮಖೈರ್ಹರಿಮ್ । ದೇವಾಃ ಸತ್ರೈರ್ಮಹದ್ಭಿಸ್ತೇ ಯಜಂತಃ ಶ್ರದ್ಧಯಾಽನ್ವಿತಾಃ । ತೋಷಯಾಮಾಸುರತ್ಯರ್ಥಂ ಸ್ವಂ ಪೂಜ್ಯಂ ಕರ್ತುಮೀಪ್ಸವಃ ।। 3 ।। ಏವಂ ತೋಷಯತಾಂ ತೇಷಾಂ ಬಹುವರ್ಷಸಹಸ್ತ್ರಿಕಮ್ । ಕಾಲೇ ದೇವಸ್ತದಾ ತುಷ್ಟಃ ಪ್ರತ್ಯಕ್ಷತ್ವಂ ಜಗಾಮ ಹ ।। 4 ।। ಅನೇಕಬಾಹೂದರವಕ್ತ್ರನೇತ್ರೋ ಮಹಾಗಿರೇಃ ಶ್ರೃಂಗಮಿವೋಲ್ಲಿಖಂಸ್ತದಾ ಉವಾಚ ಕಿಂ ಕಾರ್ಯಮಥೋ ಸುರೇಶೋ ಬ್ರೂತಾಂ ವರಂ ದೇವವರಾ ವರಂ ವಃ ।। 5 ।।

ಶ್ರೀವರಾಹನು ಹೇಳಿದನು: “ಧರೇ! ಲೋಕಭಾವನ ಭಗವಂತನು ಸರ್ವ ಜಗತ್ತನ್ನೂ ಸೃಷ್ಟಿಸಿ ವಿರಮಿಸಿದನು. ನಂತರ ಆ ಸೃಷ್ಟಿಯು ಬೆಳೆಯಿತು. ಸೃಷ್ಟಿಯು ಬೆಳೆಯಲು ದೇವತೆಗಳೆಲ್ಲರೂ ತಮ್ಮನ್ನೇ ಪೂಜ್ಯರನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿ ಪುರಾಣಪುರುಷ ನಾರಾಯಣ ಹರಿಯನ್ನು ಎಲ್ಲ ದ್ವೀಪ-ವರ್ಷಗಳಲ್ಲಿ ವಿವಿಧ ಯಜ್ಞಗಳಿಂದ ಮಹಾಸತ್ರಗಳಿಂದ ಶ್ರದ್ಧಯಾನ್ವಿತರಾಗಿ ಪೂಜಿಸಿ ತೃಪ್ತಿಪಡಿಸಿದರು. ಅನೇಕ ಸಹಸ್ರವರ್ಷಗಳ ಪರ್ಯಂತ ತನ್ನನ್ನು ತೃಪ್ತಿಪಡಿಸುತ್ತಿದ್ದ ಅವರಿಗೆ ಕಾಲಾಂತರದಲ್ಲಿ ದೇವನು ತುಷ್ಟನಾಗಿ ಪ್ರತ್ಯಕ್ಷನಾಗಿಯೇ ಆಗಮಿಸಿದನು. ಅನೇಕ ಬಾಹುಗಳು, ಹೊಟ್ಟೆಗಳು, ಮುಖಗಳು ಮತ್ತು ಕಣ್ಣುಗಳಿದ್ದ ಹಾಗೂ ಮಹಾಗಿರಿಯ ಶಿಖರವನ್ನು ಮುಟ್ಟುವವನಂತೆ ಉನ್ನತನೂ ಆಗಿದ್ದ ಆ ದೇವೇಶನು “ಸುರೇಶ! ದೇವಶ್ರೇಷ್ಠ! ಯಾವ ಕಾರ್ಯವನ್ನು ಮಾಡಲಿ? ನಿಮ್ಮ ವರವೇನು? ಹೇಳಿ” ಎಂದನು.

ದೇವಾ ಊಚುಃ । ಜಯಸ್ವ ಗೋವಿಂದ ಮಹಾನುಭಾವ ತ್ವಯಾ ವಯಂ ನಾಥ ವರೇಣ ದೇವಾಃ ಮನುಷ್ಯಲೋಕೇಽಪಿ ಭವಂತಮಾದ್ಯಂ ವಿಹಾಯ ನಾಸ್ಮಾನ್ಭವತೇ ಹ ಕಶ್ಚಿತ್ ।। 6 ।। ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ ಸರ್ವೇ ಭವಂತಂ ಶರಣಂ ಗತಾಃ ಸ್ಮ ಕುರುಷ್ವ ಪೂಜ್ಯಾನಿಹ ವಿಶ್ವಮೂರ್ತೇ ।। 7 ।। ಏವಮುಕ್ತಸ್ತದಾ ತೈಸ್ತು ಮಹಾಯೋಗೇಶ್ವರೋ ಹರಿಃ । ಕರೋಮಿ ಸರ್ವಾನ್ ವಃ ಪೂಜ್ಯಾನಿತ್ಯುಕ್ತ್ವಾಽಂತರಧೀಯತ ।। 8 ।।

ದೇವತೆಗಳು ಹೇಳಿದರು: “ಗೋವಿಂದ! ಮಹಾನುಭಾವ! ಜಯಶೀಲ-ನಾಗು! ನಾಥ! ನಾವು ದೇವತೆಗಳು ನಿನ್ನಿಂದ ಬೇಡುವ ವರವಿದು. ಮನುಷ್ಯಲೋಕದಲ್ಲಿಯೂ ಆದ್ಯನಾದ ನಿನ್ನನ್ನು ಬಿಟ್ಟು ನಮ್ಮನ್ನು ಯಾರೂ ಪೂಜಿಸುವುದಿಲ್ಲ. ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವರು, ಅಶ್ವಿನೀಕುಮಾರರು, ಮರುದ್ಗಣಗಳು ಎಲ್ಲರೂ ನಿನ್ನ ಶರಣುಬಂದಿದ್ದೇವೆ. ವಿಶ್ವಮೂರ್ತೇ! ನಮ್ಮನ್ನು ಪೂಜ್ಯರನ್ನಾಗಿ ಮಾಡು!” ಆಗ ಅವರು ಹೀಗೆ ಪ್ರಾರ್ಥಿಸಲು ಮಹಾಯೋಗೇಶ್ವರ ಹರಿಯು “ನಿಮ್ಮೆಲ್ಲರನ್ನೂ ಪೂಜ್ಯರಾಗಿ ಮಾಡುತ್ತೇನೆ” ಎಂದು ಹೇಳಿ ಅಂತರ್ಧಾನನಾದನು.

ದೇವಾ ಅಪಿ ನಿಜೌಕಾಂಸಿ ಗತವಂತಃ ಸನಾತನಮ್ । ಸ್ತುವಂತಃ ಪರಮೇಶೋಽಪಿ ತ್ರಿವಿಧಂ ಭಾವಮಾಸ್ಥಿತಃ ।। 9 ।। ಏವಂ ತ್ರಿಧಾ ಜಗದ್ಧಾತಾ ಭೂತ್ವಾ ದೇವಾನ್ ಮಹೇಶ್ವರಃ । ಆರಾಧ್ಯ ಸಾತ್ತ್ವಿಕಂ ರಾಜಂ ತಾಮಸಂ ಚ ತ್ರಿಧಾ ಸ್ಥಿತಮ್ ।। 10 ।।

ಸನಾತನನನ್ನು ಸ್ತುತಿಸುತ್ತಾ ದೇವತಗಳೂ ಕೂಡ ತಮ್ಮ ತಮ್ಮ ಮನೆಗೆ ಹೊರಟುಹೋದರು. ಜಗದ್ಧಾತಾ ಮಹೇಶ್ವರ ಪರಮೇಶ್ವರನಾದರೋ ಸಾತ್ತ್ವಿಕ, ರಾಜಸ ಮತ್ತು ತಾಮಸಗಳೆಂಬ ತ್ರಿವಿಧ ಭಾವಗಳನ್ನು ತಳೆದು ದೇವತೆಗಳನ್ನು ಆರಾಧಿಸಿ ಮೂರಾಗಿ ನಿಂತನು.

ಸಾತ್ತ್ವಿಕೇನ ಪಠೇದ್ ವೇದಾನ್ ಯಜೇದ್ ಯಜ್ಞೇನ ದೇವತಾಃ । ಆತ್ಮನೋಽವಯವೋ ಭೂತ್ವಾ ರಾಜಸೇನಾಪಿ ಕೇಶವಃ ।। 11 ।। ಸ ಕಾಲರೂಪಿಣಂ ರೌದ್ರಂ ಪ್ರಕೃತ್ಯಾ ಶೂಲಪಾಣಿನಮ್ । ಆತ್ಮನೋ ರಾಜಸೀಂ ಮೂರ್ತಿಂ ಪೂಜಯಾಮಾಸ ಭಕ್ತಿತಃ । ತಾಮಸೇನಾಪಿ ಭಾವೇನ ಅಸುರೇಷು ವ್ಯವಸ್ಥಿತಃ ।। 12 ।। ಏವಂ ತ್ರಿಧಾ ಜಗದ್ಧಾತಾ ಭೂತ್ವಾ ದೇವಾನ್ ಮಹೇಶ್ವರಃ । ಆರಾಧಯಾಮಾಸ ತತೋ ಲೋಕೋಽಪಿ ತ್ರಿವಿಧೋಽಭವತ್ ।। 13 ।।

ಸಾತ್ತ್ವಿಕದಿಂದ ವೇದಗಳನ್ನು ಪಠಿಸಿ ಯಜ್ಞಗಳಿಂದ ದೇವತೆಗಳನ್ನು ಪೂಜಿಸಿದನು. ಕೇಶವನು ರಾಜಸದಿಂದ ತನಗೆ ತಾನೇ ಆಂಗವಾಗಿ ಪೂಜಿಸಿದನು. ಅವನು ಕಾಲರೂಪೀ ಸ್ವಾಭಾವಿಕವಾಗಿಯೇ ರೌದ್ರ ಶೂಲಪಾಣಿಯ ತನ್ನ ರಾಜಸೀ ಮೂರ್ತಿಯನ್ನು ಭಕ್ತಿಯುಕ್ತನಾಗಿ ಪೂಜಿಸಿದನು. ತಾಮಸ ಭಾವದಿಂದ ಅವನು ಅಸುರರಲ್ಲಿ ನೆಲಸಿದನು. ಜಗದ್ಧಾತಾ ಮಹೇಶ್ವರನು ಹೀಗೆ ಮೂರುಬಗೆಯುಳ್ಳವನಾಗಿ ದೇವತೆಗಳನ್ನು ಪೂಜಿಸಿದನು. ಆಗ ಲೋಕವೂ ಮೂರು ವಿಧವಾಯಿತು.

ಬ್ರಹ್ಮವಿಷ್ಣುಮಹೇಶಾನನಾಮ್ನಾ ಗೃಹ್ಯ ವ್ಯವಸ್ಥಿತಃ । ಸ ಚ ನಾರಾಯಣೋ ದೇವಃ ಕೃತೇ ಯುಗವರೇ ಪ್ರಭುಃ ।। 14 ।। ತ್ರೇತಾಯಾಂ ರುದ್ರರೂಪಸ್ತು ದ್ವಾಪರೇ ಯಜ್ಞಮೂರ್ತಿಮಾನ್ । ಕಲೌ ನಾರಾಯಣೋ ದೇವೋ ಬಹುರೂಪೋ ವ್ಯಜಾಯತ ।। 15 ।। ತಸ್ಯಾದಿಕೃತ್ತತೋ ವಿಷ್ಣೋಶ್ಚರಿತಂ ಭೂರಿತೇಜಸಃ । ಶ್ರೃಣುಷ್ವ ಸರ್ವಂ ಸುಶ್ರೋಣಿ ಗದತೋ ಮಮ ಭಾಮಿನಿ ।। 16 ।।

ಬ್ರಹ್ಮ-ವಿಷ್ಣು-ಮಹೇಶ್ವರರ ಹೆಸರುಗಳನ್ನು ಪಡೆದು ವ್ಯವಸ್ಥಿತನಾದನು. ಶ್ರೇಷ್ಠ ಯುಗವಾದ ಕೃತದಲ್ಲಿ ಅವನೇ ದೇವ ಪ್ರಭು ನಾರಾಯಣನು. ತ್ರೇತಾಯುಗದಲ್ಲಿ ರುದ್ರರೂಪನಾಗಿಯೂ ದ್ವಾಪರದಲ್ಲಿ ಯಜ್ಞಮೂರ್ತಿಯಾಗಿಯೂ ಆಗಿರುವನು. ಕಲಿಯಲ್ಲಿ ನಾರಾಯಣದೇವನು ಬಹುರೂಪಗಳಲ್ಲಿ ಅವತರಿಸುತ್ತಾನೆ. ಸುಶ್ರೋಣಿ! ಭಾಮಿನೀ! ಆ ಅದಿಕರ್ತೃ ಭೂರಿತೇಜಸ ವಿಷ್ಣುವಿನ ಕುರಿತಾದ ಎಲ್ಲವನ್ನೂ ಹೇಳುತ್ತೇನೆ. ಕೇಳು.

ಆಸೀತ್ ಕೃತಯುಗೇ ರಾಜಾ ಸುಪ್ರತೀಕೋ ಮಹಾಬಲಃ । ತಸ್ಯ ಭಾರ್ಯಾದ್ವಯಂ ಚಾಸೀದವಿಶಿಷ್ಟಂ ಮನೋರಮಮ್ ।। 17 ।। ವಿದ್ಯುತ್ಪ್ರಭಾ ಕಾಂತಿಮತೀ ತಯೋರೇತೇ ತು ನಾಮನೀ । ತಯೋಃ ಪುತ್ರಂ ಸಮಂ ರಾಜಾ ನ ಲೇಭೇ ಯತ್ನವಾನಪಿ ।। 18 ।। ಯದಾ ತದಾ ಮುನಿಶ್ರೇಷ್ಠಮಾತ್ರೇಯಂ ವೀತಕಲ್ಮಷಮ್ । ತೋಷಯಾಮಾಸ ವಿಧಿನಾ ಚಿತ್ರಕೂಟೇ ನಗೋತ್ತಮೇ ।। 19 ।। ಸಕ ಋಷಿಸ್ತೋಷಿತಸ್ತೇನ ದೀರ್ಘಕಾಲಂ ವರಾರ್ಥಿನಾ । ವರಂ ದಿದಿತ್ಸಯಾ ಯಾವದಬ್ರವೀದತ್ರಿಜೋ ಮುನಿಃ ।। 20 ।। ತಾವದಿಂದ್ರೋಽಪಿ ಕರಿಣಾ ಗತಃ ಪಾರ್ಶ್ವೇನ ತಸ್ಯ ಹ । ದೇವಸೈನ್ಯೈಃ ಪರಿವೃತಸ್ತೂಷ್ಣೀಮೇವ ಮಹಾಬಲಃ ।। 21 ।।

ಕೃತಯುಗದಲ್ಲಿ ಮಹಾಬಲ ಸುಪ್ರತೀಕನೆಂಬ ರಾಜನಿದ್ದನು. ಅವನಿಗೆ ಅನುರೂಪರೂ ಮನೋರಮೆಯರೂ ಆದ ಇಬ್ಬರು ಪತ್ನಿಯರಿದ್ದರು. ವಿದ್ಯುತ್ಪ್ರಭಾ ಮತ್ತು ಕಾಂತಿಮತೀ ಎಂದು ಅವರ ಹೆಸರುಗಳು. ಪ್ರಯತ್ನಿಸಿದರು ರಾಜನಿಗೆ ಬಹುಕಾಲ ಮಕ್ಕಳಾಗಲಿಲ್ಲ. ಆಗ ಅವನು ಉತ್ತಮ ಪರ್ವತ ಚಿತ್ರಕೂಟದಲ್ಲಿ ಮುನಿಶ್ರೇಷ್ಠ ಪಾಪರಹಿತ ಆತ್ರೇಯ ದುರ್ವಾಸನನ್ನು ವಿಧಿಪೂರ್ವಕವಾಗಿ ಸಂತೋಷಪಡಿಸಿದನು. ಬಹುಕಾಲ ವರವನ್ನು ಬಯಸಿದ್ದ ಆ ಸುಪ್ರತೀಕನಿಂದ ಸಂತೋಷವನ್ನು ಪಡೆದ ಅತ್ರಿಗೆ ಹುಟ್ಟಿದ ಮುನಿಯು ಅವನಿಗೆ ವರವನ್ನು ಕೊಡಬೇಕೆಂದಿರುವಷ್ಟರಲ್ಲಿಯೇ ಇಂದ್ರನೂ ಕೂಡ ದೇವಸೈನ್ಯದಿಂದ ಪರಿವೃತನಾಗಿ ಐರಾವತವನ್ನೇರಿ ಬಂದು ಸುಮ್ಮನೇ ಅವನ ಪಕ್ಕದಲ್ಲಿ ನಿಂತನು.

ತಂ ದೃಷ್ಟ್ವಾಽಂತರ್ಗತಪ್ರೀತಿಮಪ್ರೀತಿಂ ಪ್ರೀತವಾನ್ ಮುನಿಃ । ಚುಕೋಪ ದೇವರಾಜಾಯ ಶಾಪಮುಗ್ರಂ ಸಸರ್ಜ ಹ ।। 22 ।। ಯಸ್ಮಾತ್ ತ್ವಯಾ ಮಮಾವಜ್ಞಾ ಕೃತಾ ಮೂಢ ದಿವಸ್ಪತೇ । ತತಸ್ತ್ವಂ ಚಾಲಿತೋ ರಾಜ್ಯಾದನ್ಯಲೋಕೇ ವಸಿಷ್ಯಸಿ ।। 23 ।। ಏವಮುಕ್ತ್ವಾಽಪಿ ಕೋಪೇನ ಸುರೇಶಂ ತಂ ಚ ಭೂಪತಿಮ್ । ಉವಾಚ ರಾಜನ್ ಪುತ್ರಸ್ತೇ ಭವಿತಾ ದೃಢವಿಕ್ರಮಃ ।। 24 ।। ಇಂದ್ರರೂಪೋಪಮಃ ಶ್ರೀಮಾನುದ್ಯಚ್ಛಸ್ತ್ರಃ ಪ್ರತಾಪವಾನ್ । ವಿದ್ಯಾಪ್ರಭಾವಕರ್ಮ್ಮಜ್ಞಃ ಕ್ರೂರಕರ್ಮಾ ಭವಿಷ್ಯತಿ । ದುರ್ಜಯೋಽತಿಬಲೀ ರಾಜಾ ಏವಮುಕ್ತ್ವಾ ಗತೋ ಮುನಿಃ ।। 25 ।।

ಅವನನ್ನು ನೋಡಿ ಪ್ರೀತನಾದ ಆದರೆ ಅಪ್ರೀತ ಇಂದ್ರನನ್ನು ನೋಡಿ ಕುಪಿತನಾದ ಮುನಿಯು ದೇವರಾಜನಿಗೆ ಉಗ್ರ ಶಾಪವನ್ನಿತ್ತನು: “ದಿವಸ್ಪತೇ! ಮೂಢ! ನೀನು ನನ್ನನ್ನು ತಿರಸ್ಕರಿಸಿದುದರಿಂದ ನಿನ್ನ ರಾಜ್ಯದಿಂದ ಚ್ಯುತನಾಗಿ ಬೇರೆ ಲೋಕದಲ್ಲಿ ವಾಸಿಸುತ್ತೀಯೆ!” ಸುರೇಶನಿಗೆ ಕೋಪದಿಂದ ಹೀಗೆ ಹೇಳಿ ರಾಜನಿಗೆ ಹೇಳಿದನು: “ರಾಜನ್! ನಿನಗೆ ದೃಢವಿಕ್ರಮಿ ಮಗನಾಗುತ್ತಾನೆ. ಇಂದ್ರನಂತೆ ರೂಪವಂತನೂ, ಶ್ರೀಮಂತನೂ, ಪ್ರಕಾಶಮಾನ ಶಸ್ತ್ರಗಳುಳ್ಳವನೂ, ಪ್ರತಾಪಿಯೂ, ವಿದ್ಯಾ-ಪ್ರಭಾವ ತತ್ತ್ವವನ್ನು ತಿಳಿದವನೂ, ದುರ್ಜಯನೆಂಬ ಅತಿಬಲಶಾಲಿ ಆದರೆ ಕ್ರೂರಕರ್ಮೀ ರಾಜಪುತ್ರನು ಆಗುತ್ತಾನೆ.” ಹೀಗೆ ಹೇಳಿ ಮುನಿಯು ಹೊರಟುಹೋದನು.

ಸೋಽಪಿ ರಾಜಾ ಸುಪ್ರತೀಕೋ ಭಾರ್ಯಾಯಾಂ ಗರ್ಭಮಾವಹತ್ । ವಿದ್ಯುತ್ಪ್ರಭಾಯಾಂ ಧರ್ಮಜ್ಞಃ ಸಾಽಪಿ ಕಾಲೇ ತ್ವಸೂಯತ ।। 26 ।। ತಸ್ಯಾಃ ಪುತ್ರಃ ಸಮಭವದ್ ದುರ್ಜಯಾಖ್ಯೋ ಮಹಾಬಲಃ । ಜಾತಕರ್ಮಾದಿಸಂಸ್ಕಾರಂ ತಸ್ಯ ಚಕ್ರೇ ಮುನಿಃ ಸ್ವಯಮ್ ।। 27 ।। ತಸ್ಯ ಚೇಷ್ಟೇರ್ಬಲೇನಾಸೌ ಮುನೇಃ ಸೌಮ್ಯೋ ಬಭೂವ ಹ । ವೇದಶಾಸ್ತ್ರಾರ್ಥವಿದ್ಯಾಯಾಂ ಪಾರಗೋ ಧರ್ಮವಾನ್ ಶುಚಿಃ ।। 28 ।। ಯಾ ದ್ವಿತೀಯಾಽಭವತ್ ಪತ್ನೀ ತಸ್ಯ ರಾಜ್ಞೋ ಮಹಾತ್ಮನಃ । ನಾಮ್ನಾ ಕೀರ್ತಿಮತೀ ಧನ್ಯಾ ತಸ್ಯಾಃ ಪುತ್ರೋ ಬಭೂವ ಹ । ನಾಮ್ನಾ ಸುದ್ಯುಮ್ನ ಇತ್ಯೇವಂ ವೇದವೇದಾಂಗಪಾರಗಃ ।। 29 ।।

ಧರ್ಮಜ್ಞ ರಾಜಾ ಸುಪ್ರತೀಕನಿಂದ ಗರ್ಭಧರಿಸಿದ ಅವನ ಪತ್ನಿ ವಿದ್ಯುತ್ಪ್ರಭೆಯು ಸಕಾಲದಲ್ಲಿ ಮಗನನ್ನು ಪಡೆದಳು. ಮಹಬಲಶಾಲಿಯಾದ ಅವಳ ಆ ಪುತ್ರನು ದುರ್ಜಯನೆಂದಾದನು. ಅವನ ಜಾತಕರ್ಮಾದಿ ಸಂಸ್ಕಾರವನ್ನು ಸ್ವಯಂ ದುರ್ವಾಸಮುನಿಯೇ ನಡೆಸಿದನು. ಮುನಿಯ ಯಜ್ಞಬಲದಿಂದ ಅವನು ಸೌಮ್ಯನೂ, ವೇದಶಾಸ್ತ್ರಾರ್ಥವಿದ್ಯಾ ಪಾರಂಗತನೂ, ಧಾರ್ಮಿಕನೂ, ಶುಚಿಯೂ ಆದನು. ಆ ಮಹಾತ್ಮಾ ರಾಜನ ಎರಡನೇ ಪತ್ನಿ ಕೀರ್ತಿಮತಿ ಎಂಬ ಹೆಸರಿನ ಧನ್ಯೆಗೂ ಓರ್ವ ಪುತ್ರನಾದನು. ಸುದ್ಯುಮ್ನ ಎಂಬ ಹೆಸರಿನ ಅವನು ವೇದವೇದಾಂಗಪಾರಂಗತನಾಗಿದ್ದನು.

ಅಥ ಕಾಲೇನ ಮಹತಾ ಸ ರಾಜಾ ರಾಜಸತ್ತಮಃ । ಸುಪ್ರತೀಕಃ ಸುತಂ ದೃಷ್ಟ್ವಾ ದುರ್ಜಯಂ ಯೋಗ್ಯಮಂತಿಕೇ ।। 30 ।। ಆತ್ಮನೋ ವೃದ್ಧಭಾವಂ ಚ ವಾರಾಣಸ್ಯಾಧಿಪೋ ಬಲೀ । ಚಿಂತಯಾಮಾಸ ರಾಜ್ಯಾರ್ಥಂ ದುರ್ಜಯಂ ಪ್ರತಿ ಭಾಮಿನಿ ।। 31 ।। ಏವಂ ಸಂಚಿಂತ್ಯ ಧರ್ಮಾತ್ಮಾ ತಸ್ಯ ರಾಜ್ಯಂ ದದೌ ನೃಪಃ । ಸ್ವಯಂ ಚ ಚಿತ್ರಕೂಟಾಖ್ಯಂ ಪರ್ವತಂ ಸ ಜಗಾಮ ಹ ।। 32 ।। ದುರ್ಜಯೋಽಪಿ ಮಹದ್ರಾಜ್ಯಂ ಹಸ್ತ್ಯಶ್ವರಥವಾಜಿಭಿಃ । ಸಂಯೋಜ್ಯ ಚಿಂತಯಾಮಾಸ ರಾಜ್ಯವೃದ್ಧಿಂ ಪ್ರತಿ ಪ್ರಭುಃ ।। 33 ।। ಏವಂ ಸಂಚಿಂತ್ಯ ಮೇಧಾವೀ ಹಸ್ತ್ಯಶ್ವರಥಪತ್ತಿಭಿಃ । ಸಮೇತಾಂ ವಾಹಿನೀಂ ಕೃತ್ವಾ ಉತ್ತರಾಂ ದಿಶಮಾಶ್ರಿತಃ । ತಸ್ಯ ಚೋತ್ತರತೋ ದೇಶಾಃ ಸರ್ವೇ ಸಿದ್ಧಾ ಮಹಾತ್ಮನಃ ।। 34 ।। ಭಾರತಾಖ್ಯಮಿದಂ ವರ್ಷಂ ಸಾಧಯಿತ್ವಾ ಸುದುರ್ಜಯಃ । ತತಃ ಕಿಂಪುರುಷಂ ನಾಮ ವರ್ಷಂ ತೇನಾಪಿ ಸಾಧಿತಮ್ ।। 35 ।।

ಭಾಮಿನೀ! ದೀರ್ಘ ಕಾಲದ ನಂತರ ವಾರಾಣಸಿಯ ರಾಜ ಬಲಶಾಲೀ ರಾಜಸತ್ತಮ ರಾಜಾ ಸುಪ್ರತೀಕನು ದುರ್ಜಯನನ್ನು ಯೋಗ್ಯನೆನ್ನುವುದನ್ನು ಮತ್ತು ಸ್ವತಃ ತಾನು ವೃದ್ಧನಾಗುತ್ತಿದ್ದುದನ್ನು ನೋಡಿ ರಾಜ್ಯವನ್ನು ದುರ್ಜಯನಿಗೆ ಕೊಡಲು ಯೋಚಿಸಿದನು. ಹೀಗೆ ಯೋಚಿಸಿ ಧರ್ಮಾತ್ಮ ನೃಪನು ಅವನಿಗೆ ರಾಜ್ಯವನ್ನಿತ್ತು ಸ್ವಯಂ ತಾನು ಚಿತ್ರಕೂಟಪರ್ವತಕ್ಕೆ ಹೊರಟುಹೋದನು. ಪ್ರಭು ದುರ್ಜಯನಾದರೋ ಆನೆ-ಅಶ್ವ-ರಥ-ಪದಾತಿಗಳ ಮಹಾರಾಜ್ಯವನ್ನು ಪಡೆದು ರಾಜ್ಯವನ್ನು ಬೆಳೆಸುವುದರ ಕುರಿತು ಯೋಚಿಸಿದನು. ಹೀಗೆ ಯೋಚಿಸಿ ಮೇಧಾವೀ ದುರ್ಜಯನು ಆನೆ-ಕುದುರೆ-ರಥ-ಕಾಲಾಳು-ಗಳಿಂದ ಕೂಡಿದ ಸೇನೆಯನ್ನು ಸಿದ್ಧಗೊಳಿಸಿ ಉತ್ತರದಿಕ್ಕಿನಲ್ಲಿ ಹೊರಟನು. ಆ ಮಹಾತ್ಮನಿಗೆ ಉತ್ತರದಿಕ್ಕಿನ ದೇಶಗಳೆಲ್ಲವೂ ವಶವಾದವು. ಭಾರತವೆಂಬ ವರ್ಷವನ್ನು ವಶಪಡಿಸಿಕೊಂಡು ದುರ್ಜಯನು ಕಿಂಪುರುಷವೆಂಬ ವರ್ಷವನ್ನೂ ವಶಪಡಿಸಿಕೊಂಡನು.

ತತಃ ಪರತರಂ ಚಾನ್ಯದ್ಧರಿವರ್ಷಂ ಜಿಗಾಯ ಸಃ । ರಮ್ಯಂ ರೋಮಾವತಂ ವಾಪಿ[1] ಕುರುಭದ್ರಾಶ್ವಮೇವ ಚ । ಇಲಾವೃತಂ ಮೇರುಮಧ್ಯಮೇತತ್ ಸರ್ವಂ ಜಿಗಾಯ ಸಃ ।। 36 ।। ಜಿತ್ವಾ ಜಂಬ್ವಾಖ್ಯಮೇತದ್ಧಿ ದ್ವೀಪಂ ಯಾವದಸೌ ನೃಪಃ । ಜಗಾಮ ದೇವರಾಜಾನಂ ಜೇತುಂ ಸರ್ವಸುರಾನ್ವಿತಮ್ ।। 37 ।। ಮೇರುಪರ್ವತಮಾರುಹ್ಯ ದೇವಗಂಧರ್ವದಾನವಾನ್ । ಗುಹ್ಯಕಾನ್ ಕಿಂನರಾನ್ ದೈತ್ಯಾಂಸ್ತತೋ ಬ್ರಹ್ಮಸುತೋ ಮುನಿಃ । ನಾರದೋ ದುರ್ಜಯಜಯಂ ದೇವರಾಜಾಯ ಶಂಸತ ।। 38 ।। ತತ ಇಂದ್ರಸ್ತ್ವರಾಯುಕ್ತೋ ಲೋಕಪಾಲೈಃ ಸಮನ್ವಿತಃ । ಜಗಾಮ ದುರ್ಜಯಂ ಹಂತುಂ ಸೋಽಚಿರೇಣಾಸ್ತ್ರನಿರ್ಜ್ಜಿತಮ್ । ವಿಹಾಯ ಪರ್ವತಂ ಮೇರುಂ ಮರ್ತ್ಯಲೋಕಮಿಹಾಗತಃ ।। 39 ।। ಪೂರ್ವದೇಶೇ ಚ ದೇವೇಂದ್ರೋ ಲೋಕಪಾಲೈಃ ಸಮಂ ಪ್ರಭುಃ । ಸ್ಥಿತವಾಂಸ್ತಸ್ಯ ಸುಮಹಚ್ಚರಿತಂ ಸಂಭವಿಷ್ಯತಿ ।। 40 ।।

ಅದರ ನಂತರವೂ ಅನ್ಯ ಹರಿವರ್ಷವನ್ನು ಅವನು ಗೆದ್ದನು. ರಮ್ಯ ರೋಮಾವತ ಮತ್ತು ಕುರುಭದ್ರಾಶ್ವಗಳನ್ನೂ, ಇಲಾವೃತವನ್ನೂ ಮೇರುಮಧ್ಯವನ್ನೂ ಎಲ್ಲವನ್ನೂ ಜಯಿಸಿದನು. ಜಂಬೂದ್ವೀಪವೆನ್ನುವ ಇದನ್ನೂ ಜಯಿಸಿ ನೃಪನು ದೇವರಾಜ ಇಂದ್ರನನ್ನೂ, ದೇವ-ಗಂಧರ್ವ-ದಾನವರನ್ನೂ ಗುಹ್ಯಕರನ್ನೂ ಕಿನ್ನರರನ್ನೂ ದೈತ್ಯರನ್ನೂ – ದೇವತೆಗಳಿಂದ ಕೂಡಿದುದೆಲ್ಲವನ್ನೂ ಜಯಿಸಲು ಮೇರುಪರ್ವತವನ್ನೇರಿ ಹೊರಟಾಗ ಬ್ರಹ್ಮಪುತ್ರ ನಾರದಮುನಿಯು ಇಂದ್ರನಿಗೆ ದುರ್ಜಯನ ಜಯವನ್ನು ತಿಳಿಸಿದನು. ಆಗ ಇಂದ್ರನು ತ್ವರೆಮಾಡಿ ಲೋಕಪಾಲಕರನ್ನೊಡಗೂಡಿ ದುರ್ಜಯನನ್ನು ಕೊಲ್ಲಲು ಹೋದನು. ಆದರೆ, ಪ್ರಭು ಇಂದ್ರನು ದುರ್ಜಯನ ಅಸ್ತ್ರಗಳಿಗೆ ಸೋತು ಮೇರುಪರ್ವತವನ್ನು ಬಿಟ್ಟು ಮರ್ತ್ಯಲೋಕಕ್ಕೆ ಬಂದನು. ಪ್ರಭು ದೇವೇಂದ್ರನು ಲೋಕಪಾಲಕರೊಡನೆ ಪೂರ್ವದೇಶದಲ್ಲಿ ನೆಲೆಸಿದನು. ಅವನ ಚರಿತ್ರೆಯು ಬಹಳವಾಗುವುದು.

ದುರ್ಜಯಶ್ಚ ಸುರಾನ್ ಜಿತ್ವಾ ಯಾವತ್ ಪ್ರತಿನಿವರ್ತತೇ । ಗಂಧಮಾದನಪೃಷ್ಠೇ ತು ಸ್ಕಂಧಾವಾರನಿವೇಶನಮ್ । ಕೃತ್ವಾಽವಸ್ಥಿತಸಂಭಾರಮಾಗತಂ ತಾಪಸೌ ತು ತಮ್ ।। 41 ।। ತಾವಗತಾವಥಾಬ್ರೂತಾಂ ರಾಜನ್ ದುರ್ಜಯ ಲೋಕಪಾಃ । ನಿವಾರಿತಾಸ್ತ್ವಯಾ ಸರ್ವಂ ಲೋಕಪಾಲೈರ್ವಿನಾ ಜಗತ್ । ನಪ್ರವರ್ತೇತ್ತತೋ ದೇಹಿ ತತ್ಪದಂ ಸುಖಮುತ್ತಮಮ್[2] ।। 42 ।। ಏವಮುಕ್ತೇ ತತಸ್ತೌ ತು ದುರ್ಜಯಃ ಪ್ರಾಹ ಧರ್ಮವಿತ್ । ಕೌ ಭವಂತಾವಿತಿ ತತಸ್ತಾವೂಚತುರರಿಂದಮೌ । ವಿದ್ಯುತ್ಸುವಿದ್ಯುನ್ನಾಮಾನಾವಸುರಾವಿತಿ ನಾಮತಃ[3] ।। 43 ।। ತ್ವಯಾ ಸಂಪ್ರತಿ ಚೇಚ್ಛಾಮೋ ಧರ್ಮ್ಯಂ ಸತ್ಸು ಸುಸಂಸ್ಕೃತಮ್ । ಲೋಕಪಾನಾಂ ಸರ್ವಮಾವಾಂ ಕರ್ಮಕುರ್ವಃ ಸುದುರ್ಜಯ ।। 44 ।। ಏವಮುಕ್ತೇ ದುರ್ಜಯೇನ ತೌ ಸ್ವರ್ಗೇ ಸನ್ನಿವೇಶಿತೌ । ಲೌಕಪಾಲೌ ಕೃತೌ ಸದ್ಯಸ್ತತೋಽಂತರ್ಧಾನಮಾಪತುಃ ।। 45 ।। ತಯೋರಪಿ ಮಹತ್ಕರ್ಮ ಚರಿತಂ ಚ ಧರಾಧರೇ

ಸುರರನ್ನು ಗೆದ್ದು ದುರ್ಜಯನು ಹಿಂದಿರುಗುತ್ತಿದ್ದಾಗ ಗಂಧಮಾದನಪರ್ವತದ ತಪ್ಪಲಿನಲ್ಲಿ ಬೀಡು ಬಿಟ್ಟು ಸರ್ವಸಂಭಾರವುಳ್ಳವನಾಗಿದ್ದಾಗ ಇಬ್ಬರು ತಾಪಸರು ಅವನ ಬಳಿ ಬಂದರು. ಬಂದ ಅವರು “ರಾಜನ್! ದುರ್ಜಯ! ನೀನು ಲೋಕಪಾಲಕರೆಲ್ಲರನ್ನೂ ಅಧಿಕಾರದ ತಪ್ಪಿಸಿದೆ. ಲೋಕಪಾಲಕರಿಲ್ಲದೆ ಪ್ರಪಂಚವು ಸರಿಯಾಗಿ ಪ್ರವರ್ತಿಸುತ್ತಿಲ್ಲ. ಆದ್ದರಿಂದ ಉತ್ತಮವೂ ಸುಖಕರವೂ ಆದ ಆ ಪದವಿಯನ್ನು ನಮಗೆ ಕೊಡು.” ಅವರು ಹೀಗೆ ಹೇಳಲು ಧರ್ಮವಿದು ದುರ್ಜಯನು “ನೀವು ಯಾರು?” ಎಂದು ಕೇಳಿದನು. ಅದಕ್ಕೆ ಅ ಅರಿಂದಮರಿಬ್ಬರೂ ಹೇಳಿದರು: “ನಾವು ವಿದ್ಯುತ್ ಮತ್ತು ಸುವಿದ್ಯುತ್ ಎನ್ನುವ ಹೆಸರಿನ ಅಸುರರು. ನಿನ್ನಿಂದ ನಾವು ಸತ್ಪುರುಷರ ಸುಸಂಸ್ಕೃತ ಧರ್ಮವನ್ನು ಕಲಿಯಲಿಚ್ಛಿಸು-ತ್ತೇವೆ. ದುರ್ಜಯ! ಲೋಕಪಾಲರ ಕರ್ಮಗಳೆಲ್ಲವನ್ನೂ ನಾವು ಮಾಡುತ್ತೇವೆ.” ಹೀಗೆ ಹೇಳಲು ದುರ್ಜಯನು ಅವರಿಬ್ಬರನ್ನೂ ಲೋಕಪಾಲಕರನ್ನಾಗಿ ಮಾಡಿ ಸ್ವರ್ಗದಲ್ಲಿ ನೆಲೆಸುವಂತೆ ಮಾಡಿದನು. ಅವರಿಬ್ಬರೂ ಅಂತರ್ಧಾನರಾದರು. ಧರಾಧರೇ! ಅವರ ಕರ್ಮಚರಿತ್ರೆಯೂ ದೊಡ್ಡದಾಗಿದೆ.

ಭವಿಷ್ಯತಿ ಮಹಾರಾಜೋ ದುರ್ಜಯೋ ಮಂದರೋಪರಿ ।। 46 ।। ಧನದಸ್ಯ ವನಂ ದಿವ್ಯಂ ದೃಷ್ಟ್ವಾ ನಂದನಸನ್ನಿಭಮ್ । ಮುದಾಬಭ್ರಾಮ ರಮ್ಯೇಽಸ್ಮಿನ್ ಸ ಯಾವದ್ರಾಜಸತ್ತಮಃ ।। 47 ।। ತಾವತ್ಸುವರ್ಣವೃಕ್ಷಾಧಃ ಕನ್ಯಾದ್ವಯಮಪಶ್ಯತ । ಅತೀವರೂಪಸಂಪನ್ನಮತೀವಾದ್ಭುತದರ್ಶನಮ್ ।। 48 ।। ದೃಷ್ಟ್ವಾ ತು ವಿಸ್ಮಯಾವಿಷ್ಟಃ ಕ ಇಮೇ ಶುಭಲೋಚನೇ । ಏವಂ ಸಂಚಿಂತ್ಯ ಯಾವತ್ಸ ಕ್ಷಣಮೇಕಂ ವ್ಯವಸ್ಥಿತಃ । ತಸ್ಮಿನ್ವನೇ ತಾವದುಭೌ ತಾಪಸೌ ಸೋಽವಲೋಕಯತ್ ।। 49 ।। ತೌ ದೃಷ್ಟ್ವಾ ಸಹಸಾ ರಾಜಾ ಯಯೌ ಪ್ರೀತ್ಯಾ ಪರಾಂ ಮುದಮ್ । ಅವತೀರ್ಯ ದ್ವಿಪಾತ್ತೂರ್ಣಂ ನಮಶ್ಚಕ್ರೇ ತಯೋಃ ಸ್ವಯಮ್ ।। 50 ।। ಉಪವಿಷ್ಟಃ ಸ ತಾಭ್ಯಾಂತು ಕೌಶ್ಯೇದತ್ತೇ ವರಾಸನೇ । ಪೃಷ್ಟಃ ಕಸ್ತ್ವಂ ಕುತಶ್ಚಾಸಿ ಕಸ್ಯ ವಾ ಕಿಮಿಹ ಸ್ಥಿತಃ ।। 51 ।।

ನಂತರ ಮಹಾರಾಜಾ ದುರ್ಜಯನು ಮಂದರಪರ್ವತದ ಮೇಲೆ ನಂದನವನದಂತಿದ್ದ ಕುಬೇರನ ದಿವ್ಯ ವನವನ್ನು ನೋಡಿ ಸಂತೋಷದಿಂದ ಆ ರಮ್ಯವನದಲ್ಲಿ ಸಂಚರಿಸುತ್ತಿದ್ದನು. ಅಷ್ಟರಲ್ಲಿಯೇ ಅವನು ಸುವರ್ಣವೃಕ್ಷವೊಂದರ ಕೆಳಗೆ ಇಬ್ಬರು ಕನ್ಯೆಯರನ್ನು ಕಂಡನು. ಅತೀವರೂಪಸಂಪನ್ನರಾದ ಮತ್ತು ಅತೀವ ಅದ್ಭುತವಾಗಿ ಕಾಣುತ್ತಿದ್ದ ಅವರನ್ನು ನೋಡಿ ಈ ಶುಭಲೋಚನೆಯರು ಯಾರಿರಬಹುದು ಎಂದು ಆಲೋಚಿಸುತ್ತಾ ಒಂದು ಕ್ಷಣ ನಿಂತನು. ಅಷ್ಟರಲ್ಲಿ ಆ ವನದಲ್ಲಿ ಇಬ್ಬರು ಋಷಿಗಳು ಕಾಣಿಸಿಕೊಂಡರು. ಅವರನ್ನು ನೋಡಿ ಪರಮಸಂತೋಷದಿಂದ ತಟ್ಟನೇ ಸ್ವಯಂ ತಾನೇ ಆನೆಯಿಂದ ಇಳಿದು ಅವರಿಗೆ ನಮಸ್ಕರಿಸಿದನು. ಅವರು ಕೊಟ್ಟ ದರ್ಭೆಯ ಉತ್ತಮಾಸನದಲ್ಲಿ ಕುಳಿತುಕೊಂಡ ಆ ರಾಜನನ್ನು ಅವರು “ನೀನು ಯಾರು? ಎಲ್ಲಿಂದ ಬಂದಿದ್ದೀಯೆ? ಇಲ್ಲೇಕಿದ್ದೀಯೆ?” ಎಂದು ಕೇಳಿದರು.

ತೌ ಪ್ರಹಸ್ಯಾಬ್ರವೀದ್ರಾಜಾ ಸುಪ್ರತೀಕೇತಿ ವಿಶ್ರುತಃ । ತಸ್ಯ ಪುತ್ರಃ ಸಮುತ್ಪನ್ನೋ ದುರ್ಜಯೋ ನಾಮ ನಾಮತಃ ।। 52 ।। ಪೃಥಿವ್ಯಾಂ ಸರ್ವರಾಜಾನೋ ಜಿಗೀಷನ್ನಿಹ ಸತ್ತಮೌ । ಆಗತೋಽಸ್ಮಿ ಧ್ರುವಂ ಚೈವ ಸ್ಮರ್ತವ್ಯೋಽಹಂ ತಪೋಧನೌ । ಭವಂತೌ ಕೌ ಸಮಾಖ್ಯಾತಂ ಮಮಾನುಗ್ರಹಕಾಂಕ್ಷಯಾ ।। 53 ।।

ರಾಜನು ನಕ್ಕು ಅವರಿಗೆ ಹೇಳಿದನು: “ಸುಪ್ರತೀಕನೆಂದು ಪ್ರಸಿದ್ಧನಾದ ರಾಜನ ಪುತ್ರನು ನಾನು. ದುರ್ಜಯನೆಂಬ ಹೆಸರಿನಿಂದ ಹುಟ್ಟಿದ್ದೇನೆ. ಸತ್ತಮರೇ! ಪೃಥ್ವಿಯ ಸರ್ವರಾಜರನ್ನೂ ಜಯಿಸಲೋಸುಗ ಇಲ್ಲಿಗೆ ಬಂದಿದ್ದೇನೆ. ತಪೋಧನರೇ! ನಿಮಗೆ ನನ್ನ ನೆನಪಿರಲಿ! ನನ್ನನ್ನು ಅನುಗ್ರಹಿಸಲು ನೀವು ಯಾರೆನ್ನುವುದನ್ನು ಹೇಳಿ.”

ತಾಪಸಾವೂಚತುಃ । ಆವಾಂ ಹೇತೃಪ್ರಹೇತ್ರಾಖ್ಯೌ ಮನೋಃ ಸ್ವಾಯಂಭುವಃ ಸುತೌ । ಆವಾಂ ದೇವವಿನಾಶಾಯ ಗತೌ ಸ್ವೋಮೇರುಪರ್ವತಮ್ ।। 54 ।। ತತ್ರಾವಯೋರ್ಮಹಾಸೈನ್ಯಂ ಗಜಾಶ್ವರಥಸಂಕುಲಮ್ । ಜಿಗಾಯ ಸರ್ವದೇವಾನಾಂ ಶತಶೋಽಥ ಸಹಸ್ತ್ರಶಃ ।। 55 ।। ತೇ ಚ ದೇವಾ ಮಹತ್ಸೈನ್ಯಂ ದೃಷ್ಟ್ವಾ ಸೈನ್ಯಂ ನಿಪಾತಿತಮ್ । ಅಸುರೈರುಜ್ಝಿತಪ್ರಾಣಂ ತತಸ್ತೇ ಶರಣಂ ಗತಾಃ ।। 56 ।। ಕ್ಷೀರಾಬ್ಧೌ ಯತ್ರ ದೇವೇಶೋ ಹರಿಶ್ಯೇತೇ ಸ್ವಯಂ ಪ್ರಭುಃ । ತತ್ರ ವಿಜ್ಞಾಪಯಾಮಾಸುಃ ಸರ್ವೇ ಪ್ರಣತಿಪೂರ್ವಕಮ್ ।। 57 ।। ದೇವದೇವ ಹರೇ ಸರ್ವಂ ಸೈನ್ಯಂ ತ್ವಸುರಸತ್ತಮೈಃ । ಪರಾಜಿತಂ ಪರಿತ್ರಾಹಿ ಭೀತಂ ವಿಹ್ವಲಲೋಚನಮ್ ।। 58 ।। ತ್ವಯಾ ದೇವಾಸುರೇ ಯುದ್ಧೇ ಪೂರ್ವಂ ತ್ರಾತಾಃ ಸ್ಮಕೇಶವ । ಸಹಸ್ತ್ರಬಾಹೋಃ ಕ್ರೂರಸ್ಯ ಸಮರೇ ಕಾಲನೇಮಿನಃ ।। 59 ।। ಇದಾನೀಮಪಿ ದೇವೇಶ ಅಸುರೌ ದೇವಕಂಟಕೌ । ಹೇತೃಪ್ರಹೇತೃನಾಮಾನೌ ಬಹುಸೈನ್ಯಪರಿಚ್ಛದೌ । ತೌ ಹತ್ವಾ ತ್ರಾಹಿ ನಃ ಸರ್ವಾನ್ ದೇವದೇವ ಜಗತ್ಪತೇ ।। 60 ।।

ತಾಪಸರು ಹೇಳಿದರು: “ನಾವು ಹೇತೃ-ಪ್ರಹೇತೃಗಳೆಂಬ ಹೆಸರಿನವರು. ಸ್ವಾಯಂಭುವ ಮನುವಿನ ಮಕ್ಕಳು. ದೇವವಿನಾಶಕ್ಕಾಗಿ ನಾವು ಮೇರುಪರ್ವತಕ್ಕೆ ಹೋಗಿದ್ದೆವು. ಅಲ್ಲಿ ಆನೆ-ಅಶ್ವ-ರಥಸಂಕುಲಗಳಿಂದ ಕೂಡಿದ್ದ ನಮ್ಮ ಮಹಾಸೇನೆಯು ನಮ್ಮದಕ್ಕಿಂತಲೂ ನೂರು ಅಥವಾ ಸಾವಿರದಷ್ಟು ಹೆಚ್ಚಾಗಿದ್ದ ದೇವತೆಗಳ ಸೈನ್ಯವನ್ನು ಜಯಿಸಿತು. ಆ ದೇವತೆಗಳು ನಮ್ಮ ಮಹಾಸೇನೆಯನ್ನು ಮತ್ತು ತಮ್ಮ ಸೇನೆಯು ಬಿದ್ದುದನ್ನು ನೋಡಿ ಅಸುರರಿಂದ ಪ್ರಾಣವನ್ನುಳಿಸಿಕೊಂಡು ಎಲ್ಲಿ ದೇವೇಶ ಹರಿ ಸ್ವಯಂ ಪ್ರಭುವು ಮಲಗಿರುತ್ತಾನೋ ಆ ಕ್ಷೀರಸಾಗರಕ್ಕೆ ಹೋಗಿ ಅವನ ಶರಣುಹೊಕ್ಕರು. ಪ್ರಣತಿಪೂರ್ವಕವಾಗಿ ಎಲ್ಲವನ್ನೂ ಅವನಿಗೆ ವಿಜ್ಞಾಪಿಸಿದರು: “ದೇವದೇವ! ಹರೇ! ಅಸುರಸತ್ತಮರು ನಮ್ಮ ಸರ್ವಸೇನೆಯನ್ನೂ ಗೆದ್ದುಬಿಟ್ಟಿದ್ದಾರೆ. ಭೀತರೂ ವಿಹ್ವಲರಾಗಿ ಕಣ್ಣುಕಾಣದವರೂ ಆದ ನಮ್ಮನ್ನು ಕಾಪಾಡು! ಕೇಶವ! ಹಿಂದೆ ದೇವಾಸುರರ ಯುದ್ಧದಲ್ಲಿ, ಸಹಸ್ರಬಾಹು ಕ್ರೂರ ಕಾಲನೇಮಿಯ ಸಮರದಲ್ಲಿ ನೀನು ನಮ್ಮನ್ನು ರಕ್ಷಿಸಿದ್ದೆ. ದೇವೇಶ! ಈಗಲೂ ಕೂಡ ದೇವಕಂಟಕರಾದ ಹೇತೃ-ಪ್ರಹೇತೃಗಳೆಂಬ ದೇವಕಂಟಕ ಅಸುರರಿಬ್ಬರೂ ದೊಡ್ಡ ಸೇನೆಯೊಂದಿಗಿದ್ದಾರೆ. ದೇವದೇವ! ಜಗತ್ಪತೇ! ಅವರಿಬ್ಬರನ್ನೂ ಕೊಂದು ನಮ್ಮೆಲ್ಲರ್ನನೂ ರಕ್ಷಿಸು!”

ಏವಮುಕ್ತಸ್ತತೋ ದೇವೋ ವಿಷ್ಣುರ್ನಾರಾಯಣಃ ಪ್ರಭುಃ । ಅಹಂ ಯಾಸ್ಯಾಮಿ ತೌ ಹಂತುಮಿತ್ಯುವಾಚ ಜಗತ್ಪತಿಃ ।। 61 ।। ಏವಮುಕ್ತಾಸ್ತತೋ ದೇವಾ ಮೇರುಪರ್ವತಸನ್ನಿಧೌ । ಪ್ರತಸ್ಥುಸ್ತೇಽಥ ಮನಸಾ ಚಿಂತಯಂತೋ ಜನಾರ್ದನಮ್ ।। 62 ।। ತೈಃ ಸಂಚಿಂತಿತಮಾತ್ರಸ್ತು ದೇವಶ್ಚಕ್ರಗದಾಧರಃ । ಆವಯೋಃ ಸೈನ್ಯಮಾವಿಶ್ಯ ಏಕ ಏವ ಮಹಾಬಲಃ ।। 63 ।। ಏಕಧಾ ದಶಧಾತ್ಮಾನಂ ಶತಧಾ ಚ ಸಹಸ್ತ್ರಧಾ । ಲಕ್ಷಧಾ ಕೋಟಿಧಾ ಕೃತ್ವಾ ಸ್ವಭೂತ್ಯಾಚ ಜಗತ್ಪತಿಃ ।। 64 ।। ಏವಂ ಸ್ಥಿತೇ ದೇವವರೇ ಅಸ್ಮತ್ಸೈನ್ಯೇ ಮಹಾಬಲಃ । ಯಃ ಕಶ್ಚಿದಸುರೋ ರಾಜನ್ನಾವಯೋರ್ಬಲಮಾಶ್ರಿತಃ । ಸ ಹತಃ ಪತಿತೋ ಭೂಮೌ ದೃಶ್ಯತೇ ಗತಚೇತನಃ ।। 65 ।। ಏವಂ ತತ್ಸಹಸಾ ಸೈನ್ಯಂ ಮಾಯಯಾ ವಿಶ್ವಮೂರ್ತಿನಾ । ನಿಹತ್ಯ ಮಾಂಸಲಕಲಂಪತ್ತಿಧ್ವಜಸಮಾಕುಲಮ್ ।। 66 ।। ಚತುರಂಗ ಬಲಂ ಸರ್ವಂ ಹತ್ವಾ ದೇವೋ ರಥಾಂಗಧೃಕ್ । ಆವಾಂ ಶೋಷಾವಧೋ ದೃಷ್ಟ್ವಾ ಗತೋಽಂತರ್ದ್ಧಾನಮೀಶ್ವರಃ ।। 67 ।। ಆವಯೋರೀದೃಶಂ ಕರ್ಮ ದೃಷ್ಟಂ ದೇವಸ್ಯ ಶಾರ್ಙ್ಗಿಣಃ । ತತಸ್ತಮೇವ ಶರಣಂ ಗತಾವಾರಾಧನಾಯ ವೈ ।। 68 ।। ತ್ವಂ ಚಾಸ್ಮನ್ಮಿತ್ರತನಯಃ ಸುಪ್ರತೀಕಾತ್ಮಜೋ ನೃಪಃ । ಇಮೇ ಚ ಆವಯೋಃ ಕನ್ಯೇ ಗೃಹಾಣ ಮನುಜೇಶ್ವರ । ಹೇತೃಕನ್ಯಾ ಸುಕೇಶೀ ತು ಮಿಶ್ರಕೇಶೀ ಪ್ರಹೇತೃಣಃ ।। 69 ।।

ಹೀಗೆ ಹೇಳಲು ಪ್ರಭು ದೇವ ವಿಷ್ಣು ನಾರಾಯಣ ಜಗತ್ಪತಿಯು “ಅವರನ್ನು ಕೊಲ್ಲಲು ನಾನು ಬರುತ್ತೇನೆ” ಎಂದು ಹೇಳಿದನು. ಹೀಗೆ ಹೇಳಲು ದೇವತೆಗಳು ಜನಾರ್ದನನ್ನೇ ಮನಸಾರೆ ಚಿಂತಿಸುತ್ತಾ ಮೇರುಪರ್ವತದ ಸನ್ನಿಧಿಗೆ ಹೋದರು. ಅವರು ಸ್ಮರಿಸಿದ ಮಾತ್ರಕ್ಕೆ ಚಕ್ರಗದಾಧರ ಮಹಾಬಲನು ತಾನೊಬ್ಬನೇ ಹತ್ತು, ನೂರು, ಸಾವಿರ, ಲಕ್ಷ, ಕೋಟಿ ರೂಪಧಾರಿಯಾಗಿ ನಮ್ಮ ಸೇನೆಯನ್ನು ಹೊಕ್ಕನು. ರಾಜನ್! ಆ ದೇವವರ ಮಹಾಬಲನು ನಮ್ಮ ಸೇನೆಯಲ್ಲಿರಲು ನಮ್ಮ ಬಲವನ್ನಾಶ್ರಯಿಸಿದ್ದ ಯಾರೊಬ್ಬ ಅಸುರನೂ ಗತಚೇತಸನಾಗಿ ಭೂಮಿಯಲ್ಲಿ ಬಿದ್ದಿದನ್ನು ನೋಡಿದೆವು. ಹೀಗೆ ವಿಶ್ವಮೂರ್ತಿಯು ಮಾಯೆಯಿಂದ ಒಮ್ಮೆಲೇ ಆನೆ-ಕುದುರೆ-ರಥ-ಪದಾತಿಗಳೊಂದಿಗೆ ನಮ್ಮ ಸೇನೆಯನ್ನು ನಾಶಪಡಿಸಿದನು. ಚತುರಂಗಬಲವೆಲ್ಲವನ್ನೂ ನಾಶಪಡಿಸಿ ರಥಾಂಗಧೃಕ್ ದೇವ ಈಶ್ವರನು ನಾವಿಬ್ಬರೇ ಉಳಿದುಕೊಂಡಿದುದನ್ನು ನೋಡಿ ಅಂತರ್ಧಾನನಾದನು. ದೇವ ಶಾರ್ಙ್ಗ್ರಿಣಿಯ ಈ ಕರ್ಮವನ್ನು ನೋಡಿ ನಾವಿಬ್ಬರೂ ಅವನನ್ನೇ ಶರಣುಹೊಕ್ಕು ಆರಾಧಿಸಿದೆವು. ನೃಪ! ನೀನು ನಮ್ಮ ಮಿತ್ರ ಸುಪ್ರತೀಕನ ಮಗನು. ಮನುಜೇಶ್ವರ! ನಮ್ಮ ಈ ಕನ್ಯೆಯರನ್ನು ಸ್ವೀಕರಿಸು. ಹೇತೃವಿನ ಮಗಳು ಸುಕೇಶೀ ಮತ್ತು ಪ್ರಹೇತೃವಿನ ಮಗಳು ಮಿಶ್ರಕೇಶೀ.”

ದುರ್ಜಯಸ್ತ್ವೇವಮುಕ್ತಸ್ತು ತಾಭ್ಯಾಮೇತೇ ಉಭೇ ಶುಭೇ । ಕನ್ಯೇ ಜಗ್ರಾಹ ಧರ್ಮೇಣ ಭಾರ್ಯಾರ್ಥಂ ಮನುಜೇಶ್ವರಃ ।। 70 ।। ತೇ ಲಬ್ಧ್ವಾ ಸಹಸಾ ರಾಜಾ ಮುದಾ ಪರಮಯಾ ಯುತಃ । ಆಜಗಾಮ ಸ್ವಕಂ ರಾಷ್ಟ್ರಂ ನಿಜಸೈನ್ಯಸಮಾವೃತಃ ।। 71 ।। ತತಃ ಕಾಲೇನ ಮಹತಾ ತಸ್ಯ ಪುತ್ರದ್ವಯಂ ಬಭೌ । ಸುಕೇಶ್ಯಾಃ ಸುಪ್ರಭಃ ಪುತ್ರೋ ಮಿಶ್ರಕೇಶ್ಯಾಃ ಸುದರ್ಶನಃ ।। 72 ।। ಸ ರಾಜಾ ದುರ್ಜಯಃ ಶ್ರೀಮಾನ್ ಲಬ್ಧ್ವಾ ಪುತ್ರದ್ವಯಂ ಶುಭಮ್ । ಸ್ವಯಂ ಕಾಲಾಂತರೇ ಶ್ರೀಮಾನ್ ಜಗಾಮಾರಣ್ಯಮಂತಿಕೇ ।। 73 ।।

ಅವರು ಹೀಗೆ ಹೇಳಲು ಮನುಜೇಶ್ವರ ದುರ್ಜಯನು ಅವರಿಬ್ಬರು ಕನ್ಯೆಯರನ್ನೂ ಧರ್ಮಪೂರ್ವಕವಾಗಿ ಪತ್ನಿಯರನ್ನಾಗಿ ಸ್ವೀಕರಿಸಿದನು. ಅಕಸ್ಮಾತ್ತಾಗಿ ಅವರನ್ನು ಪಡೆದ ರಾಜನು ಪರಮಮುದಿತನಾಗಿ ತನ್ನ ಸೇನೆಯಿಂದ ಸಮಾವೃತನಾಗಿ ತನ್ನ ರಾಷ್ಟ್ರಕ್ಕೆ ಆಗಮಿಸಿದನು. ದೀರ್ಘ ಕಾಲದ ನಂತರ ಅವನಿಗೆ ಇಬ್ಬರು ಮಕ್ಕಳಾದರು: ಸುಕೇಶಿಯಲ್ಲಿ ಪುತ್ರ ಸುಪ್ರಭ ಮತ್ತು ಮಿಶ್ರಕೇಶಿಯಲ್ಲಿ ಸುದರ್ಶನ. ರಾಜಾ ಶ್ರೀಮಾನ್ ದುರ್ಜಯನು ಶುಭಕರರಾದ ಇಬ್ಬರು ಪುತ್ರರನ್ನು ಪಡೆದುಕೊಂಡು ಕಾಲಾಂತರದಿಲ್ಲ ಸ್ವಯಂ ಹತ್ತಿರದ ಅರಣ್ಯಕ್ಕೆ ತೆರಳಿದನು.

ತತ್ರಸ್ಥೋ ವನಜಾನ್ ಜಂತೂನ್ಬಂಧಯನ್ವೈ ಭಯಂಕರಾನ್ । ದದರ್ಶಾರಣ್ಯಮಾಶ್ರಿತ್ಯ ಮುನಿಂ ಸ್ಥಿತಮಕಲ್ಮಷಮ್ ।। 74 ।। ತಪಸ್ಯಂತಂ ಮಹಾಭಾಗಂ ನಾಮ್ನಾ ಗೌರಮುಖಂ ಶುಭಮ್ । ಋಷಿವೃಂದಸ್ಯ ಗೋಪ್ತಾರಂ ತ್ರಾತಾರಂ ಪಾಪಿನಾಂ ಸ್ವಯಮ್ ।। 75 ।। ತಸ್ಯಾಶ್ರಮೋ ವಿಮಲಜಲಾವಿಲೋ ಮರುತ್ಸುಗಂಧಿವೃಕ್ಷಪ್ರವರೋದ್ವಿಜನ್ಮನಃ ರರಾಜ ಜೀಮೂತ ಇವಾಂಬರಾನ್ಮಹೀಮುಪಾಗತಃ ಪ್ರವರವಿಮಾನವದ್ಗ್ರಹಃ ।। 76 ।। ಜ್ವಲನಮಖಾಗ್ನಿಪ್ರತಿಭಾಷಿತಾಂಬರಃ ಸುಶುದ್ಧಸಂವಾಸಿತವೇಶ ಕುಟ್ಟಕಃ ಶಿಷ್ಯೈಃ ಸಮುಚ್ಚಾರಿತಸಾಮನಾದಕಃ ಸುರೂಪಯೋಷಿನ್ಮುನಿ ಕನ್ಯಕಾಯುತಃ ಇತೀದೃಶೋಽಸ್ಯಾವಸಾಥೋ ವರಾಶ್ರಮೇ ಸುಪುಷ್ಪಿತಾಶೇಷತರುಪ್ರಸೂನಃ ।। 77 ।।

ಭಯಂಕರ ಕಾಡುಮೃಗಗಳನ್ನು ಬಂಧಿಸುತ್ತಿದ್ದ ಆ ದುರ್ಜಯನು ಅರಣ್ಯವನ್ನಾಶ್ರಯಿಸಿ ತಪಸ್ಸನ್ನಾಚರಿಸುತ್ತಿದ್ದ ಪಾಪರಹಿತನೂ, ಪೂಜ್ಯನೂ, ಋಷಿಸಮೂಹದ ರಕ್ಷಕನೂ, ಪಾಪಿಗಳನ್ನು ಸ್ವಯಂ ಉದ್ಧರಿಸುವವನೂ ಆದ ಗೌರಮುಖನೆಂಬ ಹೆಸರಿನ ಮುನಿಯನ್ನು ಕಂಡನು. ಆ ದ್ವಿಜನ ಆಶ್ರಮವು ನಿರ್ಮಲ ನೀರಿನಿಂದ ಕೂಡಿ ದಿವ್ಯ ಸುಗಂಧಿತ ಉತ್ತಮ ವೃಕ್ಷಗಳಿಂದಲೂ ಪ್ರಬಲ ವಿಮಾನಗಳಿಂದ ಕೂಡಿದ ಗ್ರಹಯುಕ್ತವಾದ ಆಕಾಶದಿಂದ ಭೂಮಿಗೆ ಇಳಿದುಬಂದ ಮೋಡದಂತೆ ಹೊಳೆಯುತ್ತಿತ್ತು. ಶ್ರೇಷ್ಠ ಆಶ್ರಮದಲ್ಲಿದ್ದ ಅವನ ಕುಟೀರವು ಪ್ರಜ್ವಲಿತ ಯಜ್ಞಾಗ್ನಿಯಿಂದ ಆಕಾಶವನ್ನು ಹೊಳೆಯಿಸುತ್ತಿತ್ತು. ಅತಿಶುದ್ಧ ಸುವಾಸಿತ ಅಂಗಳದಿಂದಲೂ ಶಿಷ್ಯರು ಉಚ್ಛರಿಸುತ್ತಿದ್ದ ಸಾಮವೇದದ ನಾದದಿಂದಲೂ, ರೂಪವತೀ ವನಿತೆಯರಿಂದರೂ, ಮುನಿಕನ್ನಿಕೆಯರಿಂದಲೂ, ಚೆನ್ನಾಗಿ ಹೂ-ಕಾಯಿ-ಹಣ್ಣುಗಳನ್ನು ಬಿಟ್ಟಿರುವ ಎಲ್ಲ ಮರಗಳಿಂದಲೂ ಕೂಡಿತ್ತು.

ಇತಿ ಶ್ರೀವರಾಹಪುರಾಣೇ ಆದಿಕೃತವೃತ್ತಾಂತೇ ಸೃಷ್ಟಿವರ್ಣನೇ ದುರ್ಜಯಚರಿತೇ ದಶಮೋಽಧ್ಯಾಯಃ ।।

 

[1] (ಪಾಠಾಂತರ) ಹಿರಣ್ಮಯಂ ಚಾಪಿ.

[2] (ಪಾಠಾಂತರ) ನ ಪ್ರವರ್ತ್ತತ ತಸ್ಮಾನ್ ನೌ ದೇಹಿ ತತ್ಪದಮುತ್ತಮಮ್ ।

[3] (ಪಾಠಾಂತರ) ಮಾನದ ।

Leave a Reply

Your email address will not be published. Required fields are marked *