ಶ್ರೀಮದ್ಭಾಗವತಮಹಾಪುರಾಣ
ಜನ್ಮಾದ್ಯಸ್ಯ ಯತೋಽನ್ವಯಾದಿರತರಶ್ಚಾರ್ಥೇಷ್ವಭಿಜ್ಞಃ ಸ್ವರಾಟ್ । ತೇನೇ ಬ್ರಹ್ಮಹೃದಾ ಯ ಆದಿಕವಯೇ ಮುಹ್ಯಂತಿ ಯತ್ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರತ್ರಿಸರ್ಗೋಽಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।।
[ಶ್ರೀಮದ್ಭಾಗವತಮಹಾಪುರಾಣಂ (ಸರಳ ಸಚಿತ್ರ ಕನ್ನಡ ಅನುವಾದಸಹಿತ, 2 ಭಾಗಗಳಲ್ಲಿ), ಅನುವಾದಕ ಕೀರ್ತನಾಚಾರ್ಯ ಶ್ರೀಲಕ್ಷ್ಮಣದಾಸ ವೇಲಣಕರ್, ಗೀತಾ ಪ್ರೆಸ್, ಗೋರಖಪುರ, 2007]
ಶ್ರೀಮದ್ಭಾಗವತಮಹಾಪುರಾಣವನ್ನು ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳಂತೆ ದಾರ್ಶನಿಕ ಶಾಸ್ತ್ರವೆಂದೂ ಪರಿಗಣಿಸುತ್ತಾರೆ. ಶ್ರೀವಲ್ಲಭಾಚಾರ್ಯ ಮತ್ತು ಶ್ರೀಚೈತನ್ಯ ಮಹಾಪ್ರಭು ಮೊದಲಾದ ಮಹಾತ್ಮರು ತಮ್ಮ ಆಧ್ಯಾತ್ಮ ಸಿದ್ಧಾಂತಗಳಿಗೆ ಈ ಪುರಾಣವನ್ನೇ ಆಧರಿಸಿದ್ದಾರೆ. ಈ ಪುರಾಣಕ್ಕೆ ಅನೇಕ ವ್ಯಾಖ್ಯಾನ-ಟೀಕೆಗಳಿವೆ: (1) ಅಧ್ವೈತಾಚಾರ್ಯರಾದ ಶ್ರೀಧರ ಸ್ವಾಮಿಗಳ ಭಾಗವತಾರ್ಥ ದೀಪಿಕಾ, (2) ವಿಶಿಷ್ಟಾದ್ವೈತದ ಸಂಪ್ರದಾಯದ ಸಂದರ್ಶನ ಸೂರಿಗಳ ಶುಕಪಕ್ಷೀಯ, (3) ವೀರರಾಘವಾಚಾರ್ಯರ ಭಾಗವತ ಚಂದ್ರ ಚಂದ್ರಿಕಾ, (4) ವೆಂಕಟಕೃಷ್ಣಮಾಚಾರ್ಯರ ಭಾಗವತ ಚಂದ್ರಿಕಾ, (5) ದ್ವೈತಮತ ಸ್ಥಾಪಕರಾದ ಶ್ರೀಮದಾನಂದತೀರ್ಥಭಗವತ್ಪಾದರ ಭಾಗವತ ತಾತ್ಪರ್ಯ ನಿರ್ಣಯ, (6) ಶ್ರೀವಿಜಯಧ್ವಜರ ಪದರತ್ನಾವಳಿ, (7) ನಿಂಬಾರ್ಕಮತದ ಶ್ರೀ ಶುಕದೇವಾಚಾರ್ಯರ ಸಿದ್ಧಾಂತ ಪ್ರದೀಪ, (8) ಶುದ್ಧಾದ್ವೈತ ಸಂಪ್ರದಾಯದ ಪ್ರತಿಷ್ಠಾಪಕರಾದ ಶ್ರೀ ವಲ್ಲಭಾಚಾರ್ಯರ ಸುಬೋಧಿನೀ, (9) ಶ್ರೀಗಿರಿಧರಾಚಾರ್ಯರ ಆಧ್ಯಾತ್ಮಿಕ ವ್ಯಾಖ್ಯಾನ, (10) ಶ್ರೀಚೈತನ್ಯ ಮತೀಯರಾದ ಜೀವಗೋಸ್ವಾಮಿಗಳ ಸಂದರ್ಭ (11) ಶ್ರೀ ವಿಶ್ವನಾಥ ಚಕ್ರವರ್ತಿಗಳ ಸಾರಾರ್ಥ ದರ್ಶಿನೀ, ಮತ್ತು (12) ಶ್ರೀಹರಿಯ ಹರಿಭಕ್ತಿ ರಸಾಯನ, ಮೊದಲಾದವುಗಳು.
ಮತ್ಸ್ಯಪುರಾಣದ ಪ್ರಕಾರ ಗಾಯತ್ರಿಯ ಅರ್ಥವನ್ನು ವಿಚಾರಿಸಿ ಧರ್ಮವನ್ನು ಪ್ರತಿಪಾದಿಸುವ ಪುರಾಣವು ಭಾಗವತವೆನಿಸುವುದು. ಅದರಲ್ಲಿ ವೃತ್ರಾಸುರನ ವಧೆಯನ್ನು ವರ್ಣಿಸಿದೆ. ಇದು ಸಾರಸ್ವತ ಕಲ್ಪದ ಮಧ್ಯದಲ್ಲಿ ಮಹಾಪುರುಷರ ವೃತ್ತಾಂತವನ್ನೊಳಗೊಂಡಿದೆ.[1] ನಾರದೀಯಪುರಾಣದ ಪ್ರಕಾರ ಭಾಗವತಪುರಾಣದಲ್ಲಿ 12 ಸ್ಕಂಧಗಳಿವೆ ಮತ್ತು 18,000 ಶ್ಲೋಕಗಳಿವೆ.[2]
ನಮಗೆ ದೊರಕಿರುವ ಈ ಪುರಾಣದಲ್ಲಿ ಒಟ್ಟು 12 ಸ್ಕಂಧಗಳೂ, 246 ಅಧ್ಯಾಯಗಳೂ, ಮತ್ತು 14,133 ಶ್ಲೋಕಗಳೂ ಇವೆ.
ಪ್ರಥಮಸ್ಕಂಧ (19 ಅಧ್ಯಾಯಗಳು, 813 ಶ್ಲೋಕಗಳು): ನೈಮಿಷೀಯೋ-ಪಾಖ್ಯಾನ, ವ್ಯಾಸ-ನಾರದ ಸಂವಾದ, ದ್ರೌಣಿನಿಗ್ರಹ, ಕುಂತೀಸ್ತುತಿ, ಯುಧಿಷ್ಠಿರಾನುತಾಪ, ಯುಧಿಷ್ಠಿರ ರಾಜ್ಯ ಪ್ರಲಂಭ, ಪರೀಕ್ಷಿತ್ಜನ್ಮ, ಪಾಂಡವಸ್ವರ್ಗಾರೋಹಣ, ಪರೀಕ್ಷಿದ್ರಾಜಚರಿತ್ರೆ. ನಾರದೀಯಪುರಾಣದ ಪ್ರಕಾರ ಪ್ರಥಮಸ್ಕಂಧದಲ್ಲಿ ಸೂತ-ಶೌನಕಸಮಾವೇಶ, ವ್ಯಾಸಚರಿತ್ರೆ, ಪಾಂಡವರ ಕಥೆ, ಪರಿಕ್ಷಿದ್ರಾಜನ ಚರಿತ್ರೆ, ದ್ವಿಜಶಾಪ, ಶುಕ-ಪರೀಕ್ಷಿತ್ಸಮಾವೇಶ ಇವು ವರ್ಣಿತವಾಗಿವೆ.[3]
ದ್ವಿತೀಯಸ್ಕಂಧ (10 ಅಧ್ಯಾಯಗಳು, 391 ಶ್ಲೋಕಗಳು): ಮಹಾಪುರುಷ-ಸಂಸ್ಥಾನುವರ್ಣನ, ಬ್ರಹ್ಮ-ನಾರದ ಸಂವಾದ ಮತ್ತು ಪ್ರಶ್ನವಿಧಿ.
ತೃತೀಯಸ್ಕಂಧ (33 ಅಧ್ಯಾಯಗಳು, 1,411 ಶ್ಲೋಕಗಳು): ವಿದುರ-ಉದ್ಧವಸಂವಾದ, ವಿದುರ-ಮೈತ್ರೇಯಸಂವಾದ, ವರಾಹಪ್ರಾದುರ್ಭಾವ-ವರ್ಣನ, ಜಯವಿಜಯರಿಗೆ ಸನಕಾದಿಗಳ ಶಾಪ, ಹಿರಣ್ಯಾಕ್ಷವಧ, ಕಾಪಿಲೇಯೋಪಾಖ್ಯಾನ.
ಚತುರ್ಥಸ್ಕಂಧ (31 ಅಧ್ಯಾಯಗಳು, 1,475 ಶ್ಲೋಕಗಳು): ದಕ್ಷಯಜ್ಞವಿಧ್ವಂಸ, ಧ್ರುವಚರಿತ್ರೆ, ಪೃಥುಚರಿತ್ರೆ, ರುದ್ರಗೀತೆ, ಪುರಂಜನೋಪಾಖ್ಯಾನ, ಪ್ರಚೇತ ಉಪಾಖ್ಯಾನ.
ಪಂಚಮಸ್ಕಂಧ (26 ಅಧ್ಯಾಯಗಳು, 668 ಶ್ಲೋಕಗಳು): ಋಷಭಾವತಾರ, ಭರತಚರಿತ್ರೆ, ಭುವನಕೋಶವರ್ಣನೆ, ಜಂಬೂದ್ವೀಪವರ್ಣನೆ, ಶಿಶುಮಾರಸಂಸ್ಥಾನವರ್ಣನೆ, ಗ್ರಹಗಳ ವರ್ಣನೆ, ನರಕವರ್ಣನೆ.
ಷಷ್ಠಸ್ಕಂಧ (19 ಅಧ್ಯಾಯಗಳು, 851 ಶ್ಲೋಕಗಳು): ಅಜಮೀಳೋಪಾಖ್ಯಾನ, ವೃತ್ರಾಸುರ ವಧೆ, ಚಿತ್ರಕೇತುಕಥನ, ಮರುದುದ್ಪತ್ತಿ ಕಥನ, ಪುಂಸನವ್ರತಕಥನ.
ಸಪ್ತಮಸ್ಕಂಧ (15 ಅಧ್ಯಾಯಗಳು, 750 ಶ್ಲೋಕಗಳು): ಪ್ರಹ್ಲಾದಚರಿತ್ರೆ, ಯುಧಿಷ್ಠಿರ-ನಾರದಸಂವಾದೇ ತ್ರಿಪುರವಿಜಯ, ಸದಾಚಾರನಿರ್ಣಯ, ಯತಿಧರ್ಮ.
ಅಷ್ಟಮಸ್ಕಂಧ (24 ಅಧ್ಯಾಯಗಳು, 931 ಶ್ಲೋಕಗಳು): ಮನ್ವಂತರಾನುಚರಿತ್ರೆ, ಗಜೇಂದ್ರೋಪಾಖ್ಯಾನ, ಅಮೃತಮಥನ, ವಾಮನಪ್ರಾದುರ್ಭಾವ, ಮತ್ಸ್ಯಾವತಾರವರ್ಣನೆ.
ನವಮಸ್ಕಂಧ (24 ಅಧ್ಯಾಯಗಳು, 964 ಶ್ಲೋಕಗಳು): ಇಲೋಪಾಖ್ಯಾನ, ಅಂಬರೀಷಚರಿತ್ರೆ, ಸೌಭರ್ಯಾಖ್ಯಾನ, ಹರಿಶ್ಚಂದ್ರೋಪಾಖ್ಯಾನ, ಸಗರೋಪಾಖ್ಯಾನ, ಶ್ರೀರಾಮೋಪಾಖ್ಯಾನ, ಐಲೋಪಾಖ್ಯಾನ, ಚಂದ್ರವಂಶಾನುವರ್ಣನ, ಯದುವಂಶಾನುವರ್ಣನ.
ದಶಮಸ್ಕಂಧ (90 ಅಧ್ಯಾಯಗಳು, 3,946 ಶ್ಲೋಕಗಳು): ಕೃಷ್ಣಬಾಲಚರಿತ್ರೆ, ಕಂಸವಧೆ, ರುಕ್ಮಿಣೀವಿವಾಹ-ಪ್ರದ್ಯುಮ್ನೋತ್ಪತ್ತಿ, ಸ್ಯಮಂತೋಪಾಖ್ಯಾನ, ಪಾರಿಜಾತಹರಣ-ನರಕವಧೆ, ಬಾಣಯುದ್ಧ, ನೃಗೋಪಾಖ್ಯಾನ, ಯಮುನಾಕರ್ಷಣ, ಪೌಂಡ್ರಕಾದಿವಧೆ, ಜರಾಸಂಧವಧೆ, ಶಿಶುಪಾಲವಧೆ, ದುರ್ಯೋಧನಮಾನಭಂಗ, ಸೌಭವಧೆ, ಬಲದೇವತೀರ್ಥಯಾತ್ರಾ, ಶ್ರೀಕೃಷ್ಣಚರಿತಾನುವರ್ಣನ.
ಏಕಾದಶಸ್ಕಂಧ (31 ಅಧ್ಯಾಯಗಳು, 1,367 ಶ್ಲೋಕಗಳು): ಭಗವದುದ್ಧವಸಂವಾದ.
ದ್ವಾದಶಸ್ಕಂಧ (13 ಅಧ್ಯಾಯಗಳು, 566 ಶ್ಲೋಕಗಳು): ವೇದಶಾಖ್ಯಾಪ್ರಣಯನ, ಪುರಾಣಲಕ್ಷಣ.
_____________
[1] ಯತ್ರಾಧಿಕೃತ್ಯ ಗಾಯತ್ರೀಂ ವರ್ಣ್ಯತೇ ಧರ್ಮವಿಸ್ತರಃ । ವೃತ್ರಾಸುರವಧೋ-ಪೇತಂ ತದ್ಭಾಗವತಮುಚ್ಯತೇ ।। 20 ।। ಸಾರಸ್ವತಸ್ಯ ಕಲ್ಪಸ್ಯ ಮಧ್ಯೇ ಯೇ ಸ್ಯುರ್ನರೋತ್ತಮಾಃ । ತದ್ವೃತ್ತಾಂತೋದ್ಭವಂ ಲೋಕೇ ತದ್ಭಾಗವತಮುಚ್ಯತೇ ।। 21 ।। (ಮತ್ಸ್ಯಪುರಾಣ, ಅಧ್ಯಾಯ 53)
[2] ತದಷ್ಟಾದಶಸಾಹಸ್ರಂ ಕೀರ್ತಿತಂ ಪಾಪನಾಶನಮ್ । ಸುರಪಾದಪರೂಪೋ-ಯಂ ಸ್ಕಂಧೈರ್ವಾದಶಭಿರ್ಯುತಃ ।। 2 ।। (ನಾರದೀಯಪುರಾಣ, ಅಧ್ಯಾಯ 96)
[3] ತತ್ರ ತು ಪ್ರಥಮಸ್ಕಂಧೇ ಸೂತರ್ಷೀಣಾಂ ಸಮಾಗಮಃ । ವ್ಯಾಸಸ್ಯ ಚರಿತಂ ಪುಣ್ಯಂ ಪಾಂಡವಾನಾಂ ತಥೈವ ಚ । ಪಾರೀಕ್ಷಿತಮುಪಖ್ಯಾನಮಿತೀದಂ ಸಮುದಾಹೃತಮ್ ।। 3 ।। (ನಾರದೀಯ ಪುರಾಣ, ಅಧ್ಯಾಯ 96)