ಶ್ರೀಶಿವಮಹಾಪುರಾಣ

ಆದ್ಯಂತಮಂಗಲಮಜಾತಸಮಾನಭಾವಮಾರ್ಯಂ ತಮೀಶಮಜರಾಮರಮಾತ್ಮದೇವಮ್ । ಪಂಚಾನನಂ ಪ್ರಬಲಪಂಚವಿನೋದಶೀಲಮ್ ಸಂಭಾವಯೇ ಮನಸಿ ಶಂಕರಮಂಬಿಕೇಶಮ್ ।।

[ಶ್ರೀಶಿವಮಹಾಪುರಾಣಂ (ಕನ್ನಡ ಅನುವಾದಸಹಿತ, 12 ಭಾಗಗಳಲ್ಲಿ), ಅನುವಾದಕ ಪಂಡಿತ ಗಂಜಾಂ ತಿಮ್ಮಣ್ಣಯ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 49, ಮೈಸೂರು, ಶ್ರೀವಿನಾಯಕ್ ಪ್ರಿಂಟಿಂಗ್ ಪ್ರೆಸ್, 1948]

ಒಟ್ಟು 193 ಅಧ್ಯಾಯಗಳಿರುವ ಶ್ರೀಶಿವಪುರಾಣವು ಏಳು ಸಂಹಿತೆಗಳಾಗಿ ವಿಂಗಡಗೊಂಡಿದೆ: (1) ವಿದ್ಯೇಶ್ವರಸಂಹಿತೆ (2) ರುದ್ರಸಂಹಿತೆ – ಇದರಲ್ಲಿ ಸೃಷ್ಟಿ, ಸತೀ, ಪಾರ್ವತೀ, ಕುಮಾರ ಮತ್ತು ಯುದ್ಧಗಳೆಂಬ ಐದು ಖಂಡಗಳಿವೆ (3) ಶತರುದ್ರಸಂಹಿತೆ (4) ಕೋಟಿರುದ್ರಸಂಹಿತೆ (5) ಉಮಾಸಂಹಿತೆ (6) ಕೈಲಾಸಸಂಹಿತೆ ಮತ್ತು (7) ವಾಯವೀಯಸಂಹಿತೆ. ಪ್ರತಿಸಂಹಿತೆಗಳಲ್ಲಿರುವ ವಿಷಯವಿಸ್ತಾರವು ಈ ಕೆಳಗಿನಂತಿವೆ:

ವಿದ್ಯೇಶ್ವರಸಂಹಿತೆ (18 ಅಧ್ಯಾಯಗಳು): ಲಿಂಗಪೂಜೆ, ಪಂಚಕಾರ್ಯಗಳ ಪ್ರತಿಪಾದನೆ, ಪ್ರಣವ ಮತ್ತು ಪಂಚಾಕ್ಷರದ ಮಹತ್ವ, ಪಾರ್ಥಿವ ಪೂಜೆ, ಭಸ್ಮಧಾರಣೆ, ರುದ್ರಾಕ್ಷ ಧಾರಣೆ.

ರುದ್ರಸಂಹಿತೆ – ಸೃಷ್ಟಿಖಂಡ (17 ಅಧ್ಯಾಯಗಳು): ನಾರದನ ಕಾಮವಿಜಯ ಗರ್ವಭಂಗ, ಸೃಷ್ಟಿಯಲ್ಲಿ ನಿರ್ಗುಣ ನಿರಾಕಾರ ಬ್ರಹ್ಮನಿಂದ ಈಶ್ವರಮೂರ್ತಿಯ ಪ್ರಾಕಟ್ಯ, ಶಿವನ ವಾಮಾಂಗದಿಂದ ವಿಷ್ಣುವಿನ ಪ್ರಾದುರ್ಭಾವ, ಶ್ರೀಹರಿಗೆ ಸೃಷ್ಟಿಯ ರಕ್ಷಣೆಯ ಭಾರವನ್ನೂ, ಭೋಗ-ಮೋಕ್ಷಗಳ ದಾನದ ಅಧಿಕಾರವನ್ನೂ ಶಿವನು ಕೊಟ್ಟುದುದು, ಸೃಷ್ಟಿಯ ವರ್ಣನೆ, ಯಜ್ಞದತ್ತ ಕುಮಾರನಿಗೆ ಶಿವನ ಕೃಪೆಯಿಂದ ಕುಬೇರಪದದ ಪ್ರಾಪ್ತಿ, ಶಿವನೊಂದಿಗೆ ಮಿತ್ರತ್ವ.

ರುದ್ರಸಂಹಿತೆ – ಸತೀಖಂಡ (30 ಅಧ್ಯಾಯಗಳು): ಸಂಧ್ಯೆಯು ಅರುಂಧತಿಯಾಗಿ ಅವತರಿಸಿ ವಸಿಷ್ಠನ ಸತಿಯಾದುದು, ದಕ್ಷಸೃಷ್ಟಿ, ದೇವಿಯು ಸತಿಯಾಗಿ ಅವತರಿಸಿದುದು, ಸತಿ-ಶಿವರ ವಿವಾಹ, ದಂಡಕಾರಣ್ಯದಲ್ಲಿ ಸತಿಯು ರಾಮನನ್ನು ಪರೀಕ್ಷಿಸಿದುದು, ದಕ್ಷಯಜ್ಞ.

ರುದ್ರಸಂಹಿತೆ – ಪಾರ್ವತೀಖಂಡ (40 ಅಧ್ಯಾಯಗಳು): ಸತಿಯು ಉಮೆಯಾಗಿ ಹಿಮವಂತ-ಮೇನಕೆಯರಿಗೆ ಜನಿಸಿದುದು, ಶಿವ-ಪಾರ್ವತಿಯರ ವಿವಾಹ.

ರುದ್ರಸಂಹಿತೆ – ಕುಮಾರಖಂಡ (5 ಅಧ್ಯಾಯಗಳು): ಸ್ಕಂದನಿಂದ ತಾರಕವಧೆ ಮತ್ತು ಗಣಪತಿ ಚರಿತ್ರೆ

ರುದ್ರಸಂಹಿತೆ – ಯುದ್ಧಖಂಡ (20 ಅಧ್ಯಾಯಗಳು): ತ್ರಿಪುರವಧೆ, ಶಂಖಚೂಡ ವಧೆ, ಅಂಧಕಾಸುರ ವಧೆ ಮತ್ತು ಅದರಲ್ಲಿಯೇ ಶುಕ್ರಾಚಾರ್ಯನನ್ನು ಶಿವನು ನುಂಗಿದುದು ಮತ್ತು ನೂರು ವರ್ಷಗಳ ಬಳಿಕ ಶುಕ್ರನು ಶಿವನ ಲಿಂಗದ್ವಾರದಿಂದ ಹೊರಬಂದುದು, ಶಿವ ಅಷ್ಟೋತ್ತರ ಶತನಾಮ ವರ್ಣನೆ, ಬಾಣಾಸುರ ಯುದ್ಧ, ಮತ್ತು ಗಜಾಸುರವಧೆ.

ಶತರುದ್ರಸಂಹಿತೆ (21 ಅಧ್ಯಾಯಗಳು): ಶಿವನ ಸದ್ಯೋಜಾತ, ವಾಮದೇವ, ತತ್ಪುರುಷ ಮತ್ತು ಈಶಾನ ಅವತಾರಗಳ ಕಥೆ, ಶಿವನ ಅಷ್ಟಮೂರ್ತಿ ಮತ್ತು ಅರ್ಧನಾರೀಶ್ವರ ರೂಪಗಳ ವರ್ಣನೆ, ಶಿವನ 28 ಅವತಾರಗಳು, ನಂದೀಶ್ವರನ ಅವತಾರವರ್ಣನೆ, ಕಾಲಭೈರವ ಮಹಾತ್ಮೆ, ಮಹಾಕಾಲ ಮೊದಲಾದ ಹನ್ನೊಂದು ರುದ್ರರ ಅವತಾರ, ಶಿವನ ದುರ್ವಾಸಾವತಾರ ಮತ್ತು ಹನುಮಾವತಾರಗಳ ವರ್ಣನೆ, ಪಿಪ್ಪಲಾದ ಅವತಾರ, ವೃತ್ರಾಸುರ ವಧೆ, ಶಿವನ ಕೃಷ್ಣದರ್ಶನ, ಉಪಮನ್ಯುವಿನ ತಪಸ್ಸು ಮತ್ತು ವರಪ್ರಾಪ್ತಿ, ಕಿರಾತಾವತಾರ ಪ್ರಸಂಗದಲ್ಲಿ ಶ್ರೀಕೃಷ್ಣನಿಂದ ದ್ವೈತವನದಲ್ಲಿ ದುರ್ವಾಸರ ಶಾಪದಿಂದ ಪಾಂಡವರ ರಕ್ಷಣೆ, ಕಿರಾತಾರ್ಜುನೀಯ, ಶಿವನ ದ್ವಾದಶ ಜ್ಯೋತಿರ್ಲಿಂಗಾವತಾರಗಳ ವರ್ಣನೆ.

ಕೋಟಿರುದ್ರಸಂಹಿತೆ (24 ಅಧ್ಯಾಯಗಳು): ಜ್ಯೋತಿರ್ಲಿಂಗಗಳು, ಕಾಶಿಯ ಲಿಂಗ, ಮೊದಲಾದ ಲಿಂಗಗಳ ವರ್ಣನೆ, ಶಂಕರನ ಆರಾಧನೆಯಿಂದ ವಿಷ್ಣುವಿಗೆ ಸುದರ್ಶನ ಚಕ್ರ ಪ್ರಾಪ್ತಿ, ವಿಷ್ಣುವು ಪಠಿಸಿದ ಶಿವಸಹಸ್ರನಾಮ ಸ್ತೋತ್ರ, ಶಿವನ ವ್ರತಗಳು, ಶಿವರಾತ್ರೀ ವ್ರತ.

ಉಮಾಸಂಹಿತೆ (18 ಅಧ್ಯಾಯಗಳು): ಕೃಷ್ಣನಿಗೆ ಶಿವ-ಪಾರ್ವತಿಯರಿತ್ತ ವರ, ನರಕದ ವರ್ಣನೆ, ದಾನಗಳ ಮಹತ್ವ, ಕಾಲವನ್ನು ಗೆಲ್ಲುವ ಉಪಾಯ, ಉಮೆಯ ಕಾಲಿಕಾ ಅವತಾರದ ಕಥೆ, ದೇವತೆಗಳ ತೇಜಸ್ಸಿನಿಂದ ದೇವಿಯ ಮಹಾಲಕ್ಷ್ಮೀ ಅವತಾರ ಮತ್ತು ಮಹಿಷಾಸುರವಧೆ, ಉಮೆಯ ಶರೀರದಿಂದ ಸರಸ್ವತಿಯ ಆವಿರ್ಭಾವ, ಶುಂಭ-ನಿಶುಂಭರ ಸಂಹಾರ, ದೇವತೆಗಳ ಗರ್ವವನ್ನು ಮುರಿಯಲು ಉಮೆಯ ತೇಜಃಪುಂಜರೂಪಿಣಿಯಾಗಿ ಪ್ರಾದುರ್ಭಾವ, ದುರ್ಗಮಾಸುರವಧೆ, ದೇವಿಯ ಕ್ರಿಯಾಯೋಗದ ವರ್ಣನೆ.

ಕೈಲಾಸಸಂಹಿತೆ (9 ಅಧ್ಯಾಯಗಳು): ವರ್ಣಾಶ್ರಮಧರ್ಮಗಳು, ಸಂನ್ಯಾಸಗ್ರಹಣದ ಶಾಸ್ತ್ರೀಯ ವಿಧಿ, ಪ್ರಣವದ ಅರ್ಥವಿವೇಚನೆ, ಶೈವದರ್ಶನ, ಮಹಾವಾಕ್ಯಗಳ ಅರ್ಥ ಕುರಿತ ವಿಚಾರ, ಮತ್ತು ಯತಿಯ ಅಂತೇಷ್ಟಿಕರ್ಮಗಳ ವರ್ಣನೆ.

ವಾಯವೀಯ ಸಂಹಿತೆ (9 ಅಧ್ಯಾಯಗಳು): ವಾಯುವಿನಿಂದ ಪಶು, ಪಾಶ ಮತ್ತು ಪಶುಪತಿಯ ತಾತ್ತ್ವಿಕ ವಿವೇಚನೆ, ಮಹೇಶ್ವರನ ಮಹಿಮೆ, ಬ್ರಹ್ಮನ ಮುಖದಿಂದ ರುದ್ರನ ಪ್ರಾಕಟ್ಯ, ರುದ್ರಗಣಗಳ ಸೃಷ್ಟಿ, ಮಹಾದೇವನ ಶರೀರದಿಂದ ದೇವಿಯ ಪ್ರಾಕಟ್ಯ ಮತ್ತು ದೇವಿಯ ಭ್ರೂಮಧ್ಯದಿಂದ ಶಕ್ತಿಯ ಪ್ರಾಕಟ್ಯ.

 

Leave a Reply

Your email address will not be published. Required fields are marked *