ಋಗ್ವೇದ ಸಂಹಿತೆ ಮಂಡಲ 10, ಅನುವಾಕ 6, ಸೂಕ್ತ 81

[ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 29 ಎಂಟನೆಯ ಅಷ್ಟಕದ ಅಧ್ಯಾಯಗಳು 3-4 ಹತ್ತನೆಯ ಮಂಡಲದ ಸೂಕ್ತಗಳು 72-94, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 29, ಶ್ರೀ ವಿನಾಯಕ ಪ್ರಿಂಟಿಂಗ್ ವರ್ಕ್ಸ್, ಮೈಸೂರು, 1954] [193]

[ಸೂಕ್ತದಲ್ಲಿರುವ ಋಕ್ಸಂಖ್ಯೆ 7; ಋಷಿಃ – ವಿಶ್ವಕರ್ಮಾ ಭೌವನಃ । ದೇವತಾ – ವಿಶ್ವಕರ್ಮಾ । ಛಂದಃ – ತ್ರಿಷ್ಟುಪ್]

ಯ ಇಮಾ ವಿಶ್ವಾ ಭುವನಾನಿ ಜುಹ್ವದೃಷಿರ್ಹೋತಾ ನ್ಯಸೀದತ್ಪಿತಾ ನಃ । ಸ ಆಶಿಷಾ ದ್ರವಿಣಮಿಚ್ಛಮಾನಃ ಪ್ರಥಮಚ್ಛದವರಾಙ್ ಆ ವಿವೇಶ ।। 1 ।।

ಋಷಿಃ – ಸರ್ವಜ್ಞನೂ । ಹೋತಾ – ಹೋಮಸಂಪಾದಕನೂ ಆದ । ಯಃ – ಯಾವ ವಿಶ್ವಕರ್ಮನು । ವಿಶ್ವಾ - ಸಮಸ್ತವಾದ । ಇಮಾ ಭುವನಾನಿ – ಈ ಲೋಕಗಳನ್ನು । ಜುಹ್ವತ್ – ಆಹುತಿರೂಪದಲ್ಲಿ ಅರ್ಪಿಸಿ । ನ್ಯಸೀದತ್ – ತನ್ನ ದಿವ್ಯಸ್ಥಾನದಲ್ಲಿ ಕುಳಿತನೋ । ಸಃ - ಅಂತಹ । ನಃ ಪಿತಾ – ನಮಗೆಲ್ಲಾ ಉತ್ಪಾದಕನಾದ ಅದೇ ವಿಶ್ವಕರ್ಮನು । ಆಶಿಷಾ – ಆಶೀರ್ವಾದಪೂರ್ವಕವಾದ । ದ್ರವಿಣಂ - ಧನವನ್ನು । ಇಚ್ಛಮಾನಃ - ಅಪೇಕ್ಷಿಸಿಯೂ । ಪ್ರಥಮಚ್ಛತ್ – ಪ್ರಥಮದಲ್ಲಿ ಸರ್ವವನ್ನೂ ಅಗ್ನಿರೂಪದಲ್ಲಿ ವ್ಯಾಪಿಸಿದವನಾಗಿಯೂ । ಆವರಾನ್ – ತನ್ನಿಂದ ಅರ್ಪಿತವಾದ ಸಕಲ ಭೂತಗಳನ್ನೂ । ಆ ವಿವೇಶ – ಪ್ರವೇಶಿಸಿದನು.

ಸರ್ವಜ್ಞನೂ, ಹೋಮಸಂಪಾದಕನೂ ಆದ ಯಾವ ವಿಶ್ವಕರ್ಮನು ಸಕಲ ಲೋಕಗಳನ್ನೂ ಆಹುತಿರೂಪದಲ್ಲಿ ಅರ್ಪಿಸಿ ತನ್ನ ದಿವ್ಯಸ್ಥಾನದಲ್ಲಿ ಕುಳಿತನೋ, ಅಂತಹ ನಮಗೆಲ್ಲ ಉತ್ಪಾದಕನಾದ ಅದೇ ವಿಶ್ವಕರ್ಮನು ಆಶೀರ್ವಾದಪೂರ್ವಕವಾದ ಧನವನ್ನು ಅಪೇಕ್ಷಿಸಿಯೂ, ಪ್ರಥಮದಲ್ಲಿ ಸರ್ವವನ್ನೂ ಅಗ್ನಿರೂಪದಲ್ಲಿ ವ್ಯಾಪಿಸಿಯೂ, ತನ್ನಿಂದ ಅರ್ಪಿತವಾದ ಸಕಲ ಭೂತಗಳನ್ನೂ ಪ್ರವೇಶಿಸಿದನು.

 ಈ ಋಕ್ಕಿನಲ್ಲಿ ವಿಶ್ವಕರ್ಮನ ನಾಲ್ಕು ಕ್ರಿಯೆಗಳ ವರ್ಣನೆಯಿದೆ: (1) ಯಃ ಇಮಾ ವಿಶ್ವಾ ಭುವನಾನಿ ಜುಹ್ವತ್ – ವಿಶ್ವಕರ್ಮನು ಸಕಲ ವಿಶ್ವವನ್ನೂ ಯಜ್ಞಾಹುತಿಯ ರೂಪದಲ್ಲಿ ಅರ್ಪಿಸಿದನು (2) ಸ ಆಶಿಷಾ ದ್ರವಿಣಮಿಚ್ಛಮಾನಃ – ಆಹುತಿಯ ರೂಪದಲ್ಲಿ ಅರ್ಪಿಸಿದ ಆ ಜಗತ್ತನ್ನೇ ಪುನಃ ಸೃಷ್ಟಿಸಬೇಕೆಂದು ಅಪೇಕ್ಷಿಸಿದನು (3) ಪ್ರಥಮಚ್ಛತ್ – ನಿಷ್ಪ್ರಪಂಚವೂ ಪಾರಮಾರ್ಥಿಕವೂ ಆದ ರೂಪವನ್ನು ಹೊಂದಿದನು ಮತ್ತು (4) ಅವರಾನ್ ಆ ವಿವೇಶಃ – ತನ್ನ ಇಚ್ಛೆಯಿಂದಲೇ ಸೃಷ್ಟವಾದ ಸಕಲ ಭೂತಗಳ ಹೃದಯಗಳನ್ನೂ ಪ್ರವೇಶಿಸಿ ಸರ್ವಾಂತರ್ಯಾಮಿಯಾದನು. ಈ ಸೃಷ್ಟ್ಯಾದಿ ಕಾರ್ಯಗಳಲ್ಲಿ ಪ್ರಥಮತಃ ಸೃಷ್ಟಿಯ ವರ್ಣನೆಯಿಲ್ಲ ಎನ್ನುವುದನ್ನು ಗಮನಿಸಬೇಕು. ಮೊದಲು ಪ್ರಳಯರೂಪವಾದ ಕ್ರಿಯೆ, ನಂತರ ಸೃಷ್ಟಿಯ ಇಚ್ಛೆ, ತದನಂತರ ಸೃಷ್ಟಿ ಮತ್ತು ಕೊನೆಯಲ್ಲಿ ಸೃಷ್ಟಿಸಿದ ಜಗತ್ತಿನಲ್ಲಿ ತನ್ನ ವ್ಯಾಪಕತ್ವ – ಈ ಕ್ರಮದಲ್ಲಿ ವಿಶ್ವಕರ್ಮನ ಕ್ರಿಯೆಗಳು ವರ್ಣಿತವಾಗಿವೆ.

ತಾನೇ ಸೃಷ್ಟಿಸಿದ ಜಗತ್ತನ್ನು ತನ್ನಲ್ಲೇ ಅಡಗಿಸಿಕೊಂಡು ತಾನು ಮಾತ್ರ ಅದ್ವಿತೀಯನಾಗಿರುವುದು ಈಶ್ವರನ ಲೀಲೆಗಳಲ್ಲೊಂದು. ಜಗತ್ತಿನ ದೃಷ್ಟಿಯಿಂದ ಈ ಕಾರ್ಯವು ನಾಶರೂಪವಾದರೂ, ಈಶ್ವರನ ದೃಷ್ಟಿಯಿಂದ ಇದು ಕೇವಲ ಅವಸ್ಥಾವಿಶೇಷವೆಂದು ಪರಿಗಣಿತವಾಗುತ್ತದೆ. ಪ್ರಳಯ ರೂಪವಾದ ಈ ಆಹುತ್ಯರ್ಪಣವನ್ನು ಶತಪಥಬ್ರಾಹ್ಮಣವು ಹೀಗೆ ವಿವರಿಸಿದೆ: ಬ್ರಹ್ಮ ವೈ ಸ್ವಯಂಭು ತಪೋಽತಪ್ಯತ । ತದೈಕ್ಷತ ನ ವೈ ತಪಸ್ಯಾನಂತಮಸ್ತಿ ಹಂತಾಹಂ ಭೂತೇಷ್ವಾತ್ಮಾನಂ ಜುಹವಾನಿ ಭೂತಾನಿ ಚಾತ್ಮನೀತಿ ತತ್ಸರ್ವೇಷು ಭೂತೇಷ್ವಾತ್ಮಾನಗ್ಂ ಹುತ್ವಾ ಭೂತಾನಿ ಚಾತ್ಮನಿ ಸರ್ವೇಷಾಂ ಭೂತಾನಾಗ್ ಶ್ರೈಷ್ಠ್ಯಗ್ಗ್ ಸ್ವಾರಾಜ್ಯಮಾಧಿಪತ್ಯಂ ಪರ್ಯೇತಿ ।। (ಶತಪಥ ಬ್ರಾಹ್ಮಣ 13-7-1-1). ತೇನೈತೇನ ವಿಶ್ವಕರ್ಮಾ ಭೌವನ ಈಜೇ । ತೇನೇಷ್ಟ್ವಾತ್ಯತಿಷ್ಠತ್ಸರ್ವಾಣಿ ಭೂತಾನೀದಗ್ಂ ಸರ್ವಮಭವತ್...ಯ ಏವಂ ವಿದ್ವಾನ್... ।। (ಶತಪಥ ಬ್ರಾಹ್ಮಣ 13-7-1-14). ಅರ್ಥಾತ್: ಸ್ವಯಂಭುಸಂಜ್ಞಕನಾದ ಬ್ರಹ್ಮನು ತಪಸ್ಸನ್ನಾಚರಿಸುತ್ತಿದ್ದನು. ಆಗ ಅವನು ಯೋಚಿಸಿದನು – ತಪಸ್ಸು ಅನಂತವಾಗಿರತಕ್ಕದ್ದಲ್ಲ. ಇದರ ಪರ್ಯಾಯವಾಗಿ ನಾನು ಸರ್ವಮೇಧವನ್ನು ಆಚರಿಸುತ್ತೇನೆ. ನನ್ನನ್ನೇ ನಾನು ಭೂತಗಳಲ್ಲಿ ಆಹುತಿರೂಪದಲ್ಲಿ ಅರ್ಪಿಸುತ್ತೇನೆ. ಮತ್ತು ಭೂತಗಳನ್ನು ನನ್ನಲ್ಲೇ ಆಹುತಿರೂಪದಲ್ಲಿ ಅರ್ಪಿಸಿಕೊಳ್ಳುತ್ತೇನೆ. ಹೀಗೆ ತನ್ನನ್ನು ಭೂತಗಳಲ್ಲಿಯೂ ಸಕಲ ಭೂತಗಳನ್ನು ತನ್ನಲ್ಲಿಯೂ ಅರ್ಪಿಸಿಕೊಳ್ಳುವುದರಿಂದ ಅವನು ತನ್ನದೇ ಆದ ಸ್ವರಾಜ್ಯವನ್ನೂ ವಿಶ್ವಗಳಿಗೆಲ್ಲ ಅಧಿಪತ್ಯವನ್ನೂ ಹೊಂದಿದನು. ಹೀಗೆ ಭುವನ ಪುತ್ರ ವಿಶ್ವಕರ್ಮನು ಸರ್ವಮೇಧವನ್ನು ನಡೆಸಿ ಅದರ ಫಲವಾಗಿ ಸಕಲ ಭೂತಗಳಿಗಿಂತಲೂ ಅಧಿಕ ಸ್ಥಾನವನ್ನು ಪಡೆದನು ಹಾಗೂ ತಾನೇ ಸಕಲ ಭೂತಗಳ ರೂಪವನ್ನು ಪಡೆದನು ಎಂದಿದೆ.

 ಈ ವಿಧದ ಸರ್ವಮೇಧವು ವಿಧಾತನ ಕಾರ್ಯಗಳಲ್ಲೊಂದು. ಯಾರು ಸೃಷ್ಟಿಕರ್ತನೋ ಅವನೇ ಸಂಹಾರಕರ್ತೃವು. ತನಗೆ ತನ್ನಿಂದ ಸೃಷ್ಟವಾದ ವಿಶ್ವವೇ ಆಹುತಿಯು. ತನಗೆ ತಾನೇ ಆಹುತಿಯು. ಇದೊಂದು ಯಜ್ಞ ಪ್ರಬೇದ. ಜಗತ್ತಿನ ಸೃಷ್ಟಿಗೆ ಯಜ್ಞವು ಹೇಗೆ ಆದಿಕಾರಣವೋ ಹಾಗೆಯೇ ವಿಶ್ವದ ಲಯವೂ ಯಜ್ಞರೂಪವಾಗಿರುತ್ತದೆ. ಯಾವ ಯಜ್ಞಕ್ಕೆ ಸರ್ವೇಷಾಂ ಭೂತಾನಾಮಾತ್ಮಾ ಯಜ್ಞಃ (ಶತಪಥ ಬ್ರಾಹ್ಮಣ 14-3-2-1) ಎಂಬ ಪ್ರಶಂಸೆಯಿದೆಯೋ ಅದೇ ಯಜ್ಞವು ಸಕಲ ಭೂತಗಳನ್ನೂ ಕಬಳಿಸುವುದೂ ಆಗಿರುತ್ತದೆ. ಯಜ್ಞೋ ವೈ ಭುಜ್ಯುರ್ಯಜ್ಞೋ ಹಿ ಸರ್ವಾಣಿ ಭೂತಾನಿ ಭುನಕ್ತಿ (ಶತಪಥ ಬ್ರಾಹ್ಮಣ 9-4-1-11) – ಯಜ್ಞವೇ ಸಕಲ ಭೂತಗಳನ್ನೂ ಭುಜಿಸುವುದರಿಂದ ಯಜ್ಞಕ್ಕೆ ಭುಜ್ಯು ಎಂದು ಹೆಸರು. ಯಾವ ಲೋಕಗಳನ್ನು ಪ್ರಜಾಪತಿಯು ಉತ್ಪನ್ನಮಾಡುತ್ತಾನೋ ಅದನ್ನೇ ಭುಜಿಸುವುದೂ ಅವನ ಸ್ವಭಾವವು. ಉತ್ಪನ್ನವಾದ ವಸ್ತುಗಳಲ್ಲಿ ಯಾವುದೂ ಶಾಶ್ವತವಾಗಿರಲು ಸಾಧ್ಯವಿಲ್ಲ. ಪ್ರತಿಯೊಂದೂ ಲಯವನ್ನು ಹೊಂದಲೇ ಬೇಕು. ಸೃಷ್ಟಿಕರ್ತನಾದ ಪ್ರಜಾಪತಿಯೇ ಈ ಲಯಕರ್ತನು.

 ಏಕೋ ಹಿ ರುದ್ರೋ ನ ದ್ವಿತೀಯಾಯ ತಸ್ಥುರ್ಯ ಇಮಾನ್ ಲೋಕಾನೀಶತ ಈಶನೀಭಿಃ । ಪ್ರತ್ಯಙ್ ಜನಾಸ್ತಿಷ್ಠತಿ ಸಂಚುಕೋಚಾಂತಕಾಲೇ ಸಂಸೃಜ್ಯ ವಿಶ್ವಾ ಭುವನಾನಿ ಗೋಪಾಃ ।। (ಶ್ವೇತಾವಾಸ್ಯೋಪನಿಷತ್ 3-2). ಯಾವ ಅದ್ವಿತೀಯನಾದ ರುದ್ರನು ಜಗತ್ತನ್ನು ನಿಯಮಿಸುತ್ತಲೂ ರಕ್ಷಿಸುತ್ತಲೂ ಇರುವನೋ ಅವನು ಸಕಲ ಜಗತ್ತನ್ನೂ ವ್ಯಾಪಿಸಿ ಅಂತರ್ಯಾಮಿಯಾಗಿರುತ್ತಾನೆ. ಸೂಕ್ಷ್ಮರೂಪವಾದ ಜಗತ್ತನ್ನು ವಿಸ್ತರಿಸಿ ಜಗದ್ವ್ಯವಹಾರವು ಮುಗಿಯಿತೆಂದು ತನಗೆ ತಿಳಿದೊಡನೆಯೇ ಸಕಲ ವಿಶ್ವವನ್ನೂ ತನ್ನಲ್ಲಿಯೇ ಅಡಗಿಸಿಕೊಳ್ಳುತ್ತಾನೆ. ಇದೇ ಪ್ರಳಯವು. ಅಸ್ಯ ವಾಮಸ್ಯ ಪಲಿತಸ್ಯ ಹೋತುಃ (ಋಗ್ವೇದಸಂಹಿತಾ 1-164-1) ಎಂಬ ವಾಕ್ಯದಲ್ಲಿ ಹೋತುಃ ಎನ್ನುವುದಕ್ಕೂ ಸಂಹರ್ತುಃ ಎಂಬ ಅರ್ಥದಲ್ಲಿ ಈ ಪ್ರಳಯಕಾರ್ಯವನ್ನೇ ವರ್ಣಿಸಿದೆ. ಸ ಯದ್ಯದೇವಾಸೃಜತ ತತ್ತದತ್ತುಮಧ್ರಿಯತ ಸರ್ವಂ ವಾ ಅತ್ತೀತಿ...ಸರ್ವಸ್ಯೇತಸ್ಯಾತ್ತಾ ಭವತಿ ಸರ್ವಮಸ್ಯಾನ್ನಂ ಭವತಿ । (ಬೃಹದಾರಣ್ಯಕೋಪನಿಷತ್ 1-2-5). ಪ್ರಜಾಪತಿಯು ತಾನು ಉತ್ಪನ್ನಮಾಡಿದುದನ್ನೇ ಭಕ್ಷಿಸತೊಡಗಿದನು. ವಿಶ್ವವೆಲ್ಲವೂ ಅವನಿಗೆ ಅನ್ನವಾಗಿದೆ.

ಜಗತ್ತನ್ನು ಆಹುತಿರೂಪದಲ್ಲಿ ತನಗೆ ಅರ್ಪಿಸಿಕೊಂಡ ಕಾಲವೇ ಪ್ರಳಯಕಾಲವು. ಈ ಕಾಲದಲ್ಲಿ ವಿಶ್ವವನ್ನೆಲ್ಲಾ ಮೃತ್ಯುವು ಆವರಿಸಿಕೊಳ್ಳುತ್ತದೆ. ಆಗ ಈಶ್ವರನು ಅದ್ವಿತೀಯನು. ಪುನಃ ಸದ್ವಿತೀಯನಾಗಲು ಬಯಸುತ್ತಾನೆ. ಜಗತ್ತಿನ ಸಂಕೋಚಕಾಲವೂ ಶಾಶ್ವತವಲ್ಲ. ಅದು ವಿಕಾಸವನ್ನು ಹೊಂದಲೇ ಬೇಕು. ಮೃತ್ಯುವಿನಿಂದ ಆವೃತವಾದ ಜಗತ್ತು ವಿಕಾಸಹೊಂದಬೇಕಾದರೆ ಅದಕ್ಕೆ ಈಶ್ವರ ಸಂಕಲ್ಪವು ಅತ್ಯವಶ್ಯಕವಾಗಿರುತ್ತದೆ. ಈ ಸಂಕಲ್ಪವಾದೊಡನೆಯೇ ಪುನಃ ವಿಕಾಸವು.

ಅದ್ವಿತೀಯನಾದ ಈಶ್ವರನು ನಿತ್ಯವಾಗಿ ಹೀಗೆಯೇ ಇರಲು ಸಾಧ್ಯವಿಲ್ಲ. ಸದ್ವಿತೀಯನಾಗಲು ಅವನಲ್ಲೂ ಕಾಮವು ಉದ್ಭವಿಸುತ್ತದೆ. ಅದನ್ನೇ ಈ ಋಕ್ಕಿನಲ್ಲಿ ಆಶಿಷಾ ದ್ರವಿಣಮಿಚ್ಛಮಾನಃ । ಪುನಃ ಪುನಃ ಸಿಸೃಕ್ಷಯಾ ಜಗದ್ಭೋಗಮಾಕಾಂಕ್ಷಮಾಣಃ । ಪುನಃ ಜಗತ್ತಿನ ಭೋಗವನ್ನು ಆಶಿಸಿ ಸೃಷ್ಟಿಯನ್ನು ಆರಂಭಿಸಲು ಇಚ್ಛಿಸುತ್ತಾನೆಂದೂ ತನ್ನಿಂದ ಸೃಷ್ಟವಾದ ಸಕಲ ವಸ್ತುಗಳಲ್ಲಿಯೂ ತಾನೂಪ ಪ್ರವೇಶಿಸುತ್ತಾನೆ (ಪ್ರಥಮಮೃಚ್ಛತ್; ಆವರಾನ್ ಅವಿವೇಶ) ಎಂದೂ ತಿಳಿಸಿದೆ.

 ಯಾವ ಮೂಲತತ್ತ್ವವು ಪ್ರಥಮತಃ ಅದ್ವಿತೀಯವಾಗಿದ್ದು ನಂತರ ಸದ್ವಿತೀಯವಾಗಬೇಕೆಂದು ಆಶಿಸಿ ವೈವಿಧ್ಯವನ್ನು ಹೊಂದಿದ ಜಗತ್ತನ್ನು ಸೃಷ್ಟಿಸಿ ಅದರೊಳಗೆ ತಾನೂ ಪ್ರವೇಶಿಸುತ್ತನೋ ಅದನ್ನು ಕೆಲವೆಡೆ ಪ್ರಜಾಪತಿಯೆಂದೂ, ಕೆಲವೆಡೆ ಕೇವಲ ಆತ್ಮ (ಪರಮಾತ್ಮ) ಎಂದೂ, ಇನ್ನೂ ಕೆಲವೆಡೆ ಹಿರಣ್ಯಗರ್ಭನೆಂದೂ ಮತ್ತು ಕೆಲವೆಡೆಗಳಲ್ಲಿ ವಿಶ್ವಕರ್ಮನೆಂದೂ ನಿರ್ದೇಶಿಸಿದೆ. ಆದರೆ ಸೃಷ್ಟಿಯ ಇಚ್ಛೆ, ಸೃಷ್ಟಿಯ ಕ್ರಮ ಇವುಗಳು ಮಾತ್ರ ಮುಖ್ಯ ವಿಷಯಗಳಲ್ಲಿ ಒಂದೇ ರೀತಿಯಲ್ಲಿರುತ್ತವೆ. ಕೆಲವು ವಿಷಯಗಳಲ್ಲಿ ಮಾತ್ರ ವ್ಯತ್ಯಸ್ತವಾಗಿರುತ್ತವೆ.

ಕಿಂ ಸ್ವಿದಾಸೀದಧಿಷ್ಠಾನಮಾರಂಭಣಂ ಕತಮತ್ಸ್ವಿತ್ಕಥಾಸೀತ್ । ಯತೋ ಭೂಮಿಂ ಜನಯನ್ವಿಶ್ವಕರ್ಮಾ ವಿ ದ್ಯಾಮೌರ್ಣೋನ್ಮಹಿನಾ ವಿಶ್ವಚಕ್ಷಾಃ ।। 2 ।।

ಯತಃ – ಯಾವ ಆಧಾರ ಮತ್ತು ಮೂಲಕಾರಣದಿಂದ । ವಿಶ್ವಚಕ್ಷಾಃ – ಸಕಲವನ್ನೂ ನೋಡಬಲ್ಲ । ವಿಶ್ವಕರ್ಮಾ – ಲೋಕೇಶ್ವರನು । ಭೂಮಿಂ – ಭೂಮಿಯನ್ನು । ಜನಯನ್ - ಉತ್ಪನ್ನಮಾಡುತ್ತಾ । ಮಹಿನಾ – ತನ್ನ ಮಾಹಾತ್ಮ್ಯದಿಂದ । ದ್ಯಾಂ – ದ್ಯುಲೋಕವೆಲ್ಲವನ್ನೂ । ವೌರ್ಣೋತ್ – ನಿರ್ಮಿಸಿದನೋ ಅಂತಹ । ಅಧಿಷ್ಠಾನಂ – ಈ ಲೋಕನಿರ್ಮಾಣಕ್ಕೆ ಆಧಾರಸ್ಥಾನವು । ಕಿಂ ಸ್ವಿತ್ ಆಸೀತ್ – ಯಾವುದಿದ್ದಿತು? । ಆರಂಭಣಂ – ಉತ್ಪಾದನಕ್ಕೆ ಮೂಲಕಾರಣವು । ತತಮತ್ ಸ್ವಿತ್ – ಯಾವುದಿದ್ದಿತು? । ಕಥಾ ಆಸೀತ್ – ಯಾವ ಪ್ರಕಾರವಾಗಿದ್ದಿತು?

ಸಕಲವನ್ನೂ ನೋಡಬಲ್ಲ ಲೋಕೇಶ್ವರನು ಯಾವ ಆಧಾರ ಮತ್ತು ಮೂಲ ಕಾರಣಗಳಿಂದ ಭೂಮಿಯನ್ನು ಉತ್ಪನ್ನಮಾಡುತ್ತಾ ತನ್ನ ಮಾಹಾತ್ಮ್ಯದಿಂದ ದ್ಯುಲೋಕವೆಲ್ಲವನ್ನೂ ನಿರ್ಮಿಸಿದನೋ, ಅಂತಹ ಈ ಲೋಕನಿರ್ಮಾಣದ ಆಧಾರಸ್ಥಾನವು ಯಾವುದು? ಇದರ ಉತ್ಪತ್ತಿಗೆ ಮೂಲಕಾರಣವು ಯಾವುದು? ಅದರ ಪ್ರಕಾರವೇನು? ಸ್ವರೂಪವೇನು?

ಹಿಂದಿನ ಋಕ್ಕಿನಲ್ಲಿ ಜಗತ್ಪ್ರಳಯದ ಸ್ವರೂಪವನ್ನು ತಿಳಿಸಿ ಕೆಲವು ಕಾಲಾನಂತರ ಪುನಃ ಸೃಷ್ಟಿಮಾಡಬೇಕೆಂದು ಪರಮೇಶ್ವರನು ಇಚ್ಛಿಸಿ ಅದರಂತೆ ಸೃಷ್ಟಿಮಾಡಿ ನಂತರ ಸೃಷ್ಟಿಮಾಡಿದ ಚರಚರಾತ್ಮಕವಾದ ಸರ್ವವಸ್ತುಗಳಲ್ಲಿಯೂ ಪರಮಾತ್ಮನು ಪ್ರವೇಶಿಸಿದನೆಂದು ಹೇಳಿದೆ. ಸೃಷ್ಟಿಯ ಪೂರ್ವದಲ್ಲಿ ಬ್ರಹ್ಮವಸ್ತು ಮಾತ್ರ ಇದ್ದಿತ್ತೆಂದೂ ಬೇರೆ ಏನೂ ಇರಲಿಲ್ಲವೆಂದೂ ಸಹ ತಿಳಿಸಿದೆ. ಒಂದು ವಸ್ತುವನ್ನು ಸೃಷ್ಟಿಮಾಡಬೇಕಾದರೆ ಸೃಷ್ಟಿಮಾಡಲು ಬೇಕಾದ ಸ್ಥಳ, ಮೂಲವಸ್ತು ಮತ್ತು ಸೃಷ್ಟಿಮಾಡುವ ಪುರುಷ ಇವು ಅವಶ್ಯವಾಗಿ ಬೇಕೇಬೇಕೆಂದು ಲೋಕವ್ಯವಹಾರದಲ್ಲಿ ಎಲ್ಲರಿಗೂ ತಿಳಿದ ವಿಷಯವು. ಪ್ರಳಯಕಾಲದಲ್ಲಿ ಪರಮೇಶ್ವರನೊಬ್ಬನೇ ಇದ್ದು ಬೇರಾವ ವಸ್ತುವೂ ಇಲ್ಲದಿದ್ದಾಗ ಈ ಸೃಷ್ಟಿಯು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಇಲ್ಲಿ ವರ್ಣಿಸಿದೆ.

ಇದಕ್ಕೆ ಒಂದು ಉದಾಹರಣೆಯನ್ನು ಕೊಟ್ಟು ವಿವರಿಸಬಹುದು. ಕುಂಬಾರನೋರ್ವನು ಒಂದು ಒಂದು ಮಡಕೆಯನ್ನು ಮಾಡುತ್ತಾನೆಂದು ಭಾವಿಸಿದರೆ ಆ ಮಡಕೆಯನ್ನು ನಿರ್ಮಿಸುವುದಕ್ಕೆ ಸ್ಥಳ ಬೇಕು, ಅದಕ್ಕೆ ಬೇಕಾದ ಮೂಲವಸ್ತು ಅಂದರೆ ಮಣ್ಣು ಬೇಕು, ಸಾಧನವಾದ ಚಕ್ರ, ನೀರು, ಕೋಲು ಇವುಗಳು ಬೇಕು, ಮತ್ತು ಇವುಗಳನ್ನೆಲ್ಲಾ ಉಪಯೋಗಿಸಿ ತನ್ನ ಬುದ್ಧಿವಂತಿಕೆಯಿಂದ ಮಡಕೆಯನ್ನು ನಿರ್ಮಿಸಬಲ್ಲ ಕರ್ತೃ ಅಂದರೆ ಕುಂಬಾರನು ಬೇಕು. ಇವಿಷ್ಟೂ ಇದ್ದರೆ ಮಾತ್ರ ಮಡಕೆಯನ್ನು ನಿರ್ಮಿಸಲು ಸಾಧ್ಯ. ಇಲ್ಲದಿದ್ದರೆ ಸಾಧ್ಯವಿಲ್ಲ.

ಈಗ ಪ್ರಳಯಕಾಲದಲ್ಲಿ ಸೃಷ್ಟಿಮಾಡಲು ಕರ್ತೃವಾದ ಪರಮಾತ್ಮನೇನೋ ಇದ್ದನು. ಆದರೆ ಸ್ಥಳವೆಲ್ಲಿತ್ತು? ಜಗತೃಷ್ಟಿಗೆ ಬೇಕಾದ ಮೂಲವಸ್ತುವು (raw materials) ಎಲ್ಲಿತ್ತು? ಸಾಧನಸಾಮಗ್ರಿಗಳು ಎಲ್ಲಿದ್ದವು? ಯಾವುದೂ ಇರಲಿಲ್ಲ. ಆದರೂ ಪರಮಾತ್ಮನು ಜಗತ್ತನ್ನು ಸೃಷ್ಟಿಮಾಡಿದನು. ಅದನ್ನೇ ಈ ಋಕ್ಕಿನಲ್ಲಿ ಋಷಿಯು ಪ್ರಶ್ನೋತ್ತರದ ಮೂಲಕ ವಿಮರ್ಶಿಸಿ ಸೃಷ್ಟಿಯು ಹೇಗೆ ನಡೆತೆನ್ನುವುದನ್ನು ವಿವರಿಸುತ್ತಾನೆ.

ಅಧಿಷ್ಠಾನಂ ಕಿಂ ಸ್ವಿತ್ ಆಸೀತ್-  ಜಗತ್ಸೃಷ್ಟಿಕಾಲದಲ್ಲಿ ಈ ಲೋಕನಿರ್ಮಾಣಕ್ಕೆ ಆಧಾರಸ್ಥಾನವು ಯಾವುದಾಗಿತ್ತು? ಈಗ ನಮಗೆ ಕಾಣುತ್ತಿರುವ ದ್ಯಾವಾಪೃಥಿವೀ ಅಂದರೆ ಭೂಮಿ-ಅಂತರಿಕ್ಷ-ಸ್ವರ್ಗ ಎಂಬ ಮೂರು ಲೋಕಗಳು ಆಗ ಇರಲಿಲ್ಲವಾದ್ದರಿಂದ ಈ ಲೋಕಗಳನ್ನು ಸೃಷ್ಟಿಸಲು ಆ ಪರಮಾತ್ಮನು ಎಲ್ಲಿ ನಿಂತುಕೊಂಡು ಹೇಗೆ ಮಾಡಿದನು? ಅಂದರೆ ಲೋಕಸೃಷ್ಟಿಗೆ ಆಧಾರಸ್ಥಾನವು ಆಗ ಯಾವುದೂ ಇರಲಿಲ್ಲ.

ಆರಂಭಣಂ ಕತಮತ್ಸ್ವಿತ್ – ಇದಲ್ಲದೇ ವಸ್ತುನಿರ್ಮಾಣಮಾಡುವುದಕ್ಕೆ ಪ್ರಾರಂಭದಲ್ಲಿ ಅದಕ್ಕೆ ಬೇಕಾದ ಮೂಲವಸ್ತು ಯಾವುದಿತ್ತು? ಯಾವುದೂ ಇರಲಿಲ್ಲ. ಮೂಲವಸ್ತುವೆಂದರೆ ಮಡಕೆಯನ್ನು ಮಾಡುವುದಕ್ಕೆ ಮಣ್ಣೇ ಮೂಲವಸ್ತುವು. ಬಟ್ಟೆಯನ್ನು ಮಾಡುವುದಕ್ಕೆ ಹತ್ತಿಯೇ ಮೂಲವಸ್ತುವು. ಪಾತ್ರೆಗಳನ್ನು ಮಾಡುವುದಕ್ಕೆ ಲೋಹವೇ ಮೂಲವಸ್ತುವು. ಮೇಜು-ಕುರ್ಚಿ ಮೊದಲಾದವುಗಳನ್ನು ಮಾಡುವುದಕ್ಕೆ ಮರವೇ ಮೂಲವಸ್ತುವು. ಹೀಗಿರುವಲ್ಲಿ ಈ ದ್ಯಾವಾಪೃಥಿವಿಗಳನ್ನು ನಿರ್ಮಿಸುವುದಕ್ಕೆ ಆ ಕಾಲದಲ್ಲಿ ಯಾವ ಮೂಲವಸ್ತುವಿತ್ತು? ಯಾವುದೂ ಇರಲಿಲ್ಲ.

ಕಥಾ ಆಸೀತ್ – ಸ್ಥಳವೂ, ಮೂಲವಸ್ತುವೂ ಇಲ್ಲದಿದ್ದಾಗ ಈ ಸೃಷ್ಟಿಕಾರ್ಯವು ಹೇಗಾಯಿತು ಎಂದು ಋಷಿಯು ಪ್ರಶ್ನಿಸುತ್ತಾನೆ. ಋಕ್ಕಿನ ಕೊನೆಯ ವಾಕ್ಯದಲ್ಲಿ ಈ ಪ್ರಶ್ನೆಗೆ ಉತ್ತರವಿದೆ.

ಮಹಿನಾ ವಿಶ್ವಚಕ್ಷಾಃ – ಅಂದರೆ ವಿಶ್ವಕರ್ಮನು ತನ್ನ ಮಹಾಮಹಿಮೆಯಿಂದ ಈ ಜಗತ್ತನ್ನು ಸೃಷ್ಟಿಸಿದನು. ಇಲ್ಲಿ ವಿಶ್ವಚಕ್ಷಾಃ ಎಂಬ ಶಬ್ದವು ವಿಶ್ವಕರ್ಮನ ಅಗಾಧವಾದ ಮಹಿಮೆಯನ್ನು ವರ್ಣಿಸುವ ವಿಶೇಷಣಪದವಾಗಿದೆ. ಈ ಪರಮೇಶ್ವರನು ಸಮಸ್ತವನ್ನೂ ನೋಡಬಲ್ಲವನು ಎಂದರೆ ತಿಳಿಯಬಲ್ಲವನು. ಇವನೇ ಸಕಲ ಚರಾಚರವಸ್ತುಗಳಾಗಿ ಪರಿವರ್ತಿತನಾಗಿರುವುದರಿಂದ ಅಥವಾ ಸೃಷ್ಟವಾದ ಸಮಸ್ತ ವಸ್ತುಗಳಲ್ಲಿಯೂ ಇವನು ಅಂತರ್ಯಾಮಿಯಾಗಿ ಪ್ರವೇಶಿಸಿ ಪ್ರಾಣಿಗಳ ಚಲನವಲನಗಳಿಗೆ ಪ್ರೇರಕನಾಗಿರುವುದರಿಂದ ಈ ಪರಮೇಶ್ವರನಿಗೆ ವಿಶ್ವಕರ್ಮನಿಗೆ ಕಾಣಿಸದ ಅಥವಾ ತಿಳಿಯದ ವಿಷಯವು ಯಾವುದೂ ಇಲ್ಲ. ಅವನ ಮಹಿಮೆಯ ಸ್ವರೂಪವೇನು ಎನ್ನುವುದನ್ನು ಋಷಿಯು ಮುಂದಿನ ಋಕ್ಕಿನಲ್ಲಿ ವರ್ಣಿಸಿದ್ದಾನೆ.

ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಃಸ್ಪಾತ್ । ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ದೇವ ಏಕಃ ।। 3 ।।

ವಿಶ್ವತಶ್ಚಕ್ಷುಃ – ಸರ್ವತ್ರ ಪ್ರಸರಿಸಿದ ಕಣ್ಣುಗಳುಳ್ಳವನೂ । ಉತ - ಮತ್ತು । ವಿಶ್ವತೋಮುಖಃ – ಸರ್ವತ್ರ ಹೊಂದಿರತಕ್ಕ ಮುಖವುಳ್ಳವನೂ । ವಿಶ್ವತೋಬಾಹುಃ – ಸರ್ವತ್ರ ಪ್ರಸರಿಸಿದ ಬಾಹುಗಳುಳ್ಳವನೂ । ಉತ - ಮತ್ತು । ವಿಶ್ವತಸ್ಪಾತ್ – ಎಲ್ಲ ಕಡೆಯೂ ನೀಡಿದ ಪಾದಗಳುಳ್ಳವನೂ ಆದ ಈಶ್ವರನ್ । ಬಾಹುಭ್ಯಾಂ – ತನ್ನ ಬಾಹುಗಳಿಂದ । ಸಂ ಧಮತಿ – ದ್ಯುಲೋಕವನ್ನು ಪ್ರೇರಿಸುತ್ತಾನೆ । ಪತತ್ರೈಃ – ಚಲಿಸುವ ಪಾದಗಳಿಂದ । ಸಂ-  ಪೃಥ್ವಿಯನ್ನು ಪ್ರೇರಿಸುತ್ತಾನೆ । ದ್ಯಾವಾಭೂಮೀ – ದ್ಯಾವಾಪೃಥ್ವಿಗಳನ್ನು । ಜನಯನ್ - ಉತ್ಪನ್ನಮಾಡುತ್ತಾ । ಏಕಃ – ಅಸಹಾಯನಾಗಿಯೂ (ಅದ್ವಿತೀಯನಾಗಿಯೂ) । ದೇವಃ – ಪ್ರಕಾಶಿಸುತ್ತಲೂ ಸ್ಥಿತನಾಗಿದ್ದಾನೆ ।

ಸರ್ವತ್ರ ಪ್ರಸರಿಸಿದ ಕಣ್ಣುಗಳುಳ್ಳವನೂ, ಸರ್ವತ್ರ ಹೊಂದಿರತಕ್ಕ ಮುಖಗಳುಳ್ಳವನೂ, ಸರ್ವತ್ರ ಪ್ರಸರಿಸಿದ ಬಾಹುಗಳುಳ್ಳವನೂ, ಎಲ್ಲ ಕಡೆಯೂ ನೀಡಿದ ಪಾದಗಳುಳ್ಳವನೂ ಆದ ಈಶ್ವರನು ತನ್ನ ಬಾಹುಗಳಿಂದ ದ್ಯುಲೋಕವನ್ನು ಪ್ರೇರಿಸುತ್ತಾನೆ. ಚಲಿಸುವ ಪಾದಗಳಿಂದ ಪೃಥ್ವಿಯನ್ನು ಪ್ರೇರಿಸುತ್ತಾನೆ. ದ್ಯಾವಾಪೃಥಿವಿಗಳನ್ನು ಉತ್ಪನ್ನಮಾಡುತ್ತಾ ಅದ್ವಿತೀಯನಾಗಿ ಪ್ರಕಾಶಿಸುತ್ತಾನೆ.

ಈ ಋಕ್ಕಿನಲ್ಲಿ ವಿಶ್ವಕರ್ಮ ಪರಮೇಶ್ವರನ ಮಹತ್ಸ್ವರೂಪದ ವರ್ಣನೆಯಿದೆ. ಈ ಋಕ್ಕಿನಲ್ಲಿರುವ ಅಭಿಪ್ರಾಯವೇ ಇದೇ ಮಂಡಲದ 90ನೇ ಸೂಕ್ತದ ಮೊದಲನೇ ಋಕ್ಕಿನಲ್ಲಿ ಸಹಸ್ರಶೀರ್ಷಾ ಪುರುಷಃ ಎಂಬ ಋಕ್ಕಿನಲ್ಲಿ ಸೂಚಿತವಾಗಿದೆ. ಈ ಋಕ್ಕಿನಲ್ಲಿರುವ ವಿಶ್ವತಃ ಎಂಬ ಶಬ್ದಕ್ಕೆ ಬದಲಾಗಿ ಅಲ್ಲಿ ಸಹಸ್ರ ಎಂಬ ಶಬ್ದದ ಪ್ರಯೋಗವಿದೆ. ಈ ಎರಡೂ ಶಬ್ದಗಳ ಅರ್ಥಗಳೂ ಒಂದೇ.

ಪ್ರಕೃತ ಋಕ್ಕಿನಲ್ಲಿ ಆ ವಿಶ್ವಕರ್ಮನ ಕಣ್ಣುಗಳು ಎಲ್ಲೆಲ್ಲಿಯೂ ವ್ಯಾಪಿಸಿವೆ ಎಂದು ಹೇಳಿದೆ. ಆದರೆ ಸಾಮಾನ್ಯ ಮನುಷ್ಯರಿಗೆ ಇರುವಂತೆ ಪರಮೇಶ್ವರನಿಗೆ ಕಣ್ಣು, ಮುಖ, ಬಾಹುಗಳು, ಕಾಲುಗಳು ಇವೆಯೇ? ಅವುಗಳ ಸಹಾಯದಿಂದಲೇ ಅವನು ಮನುಷ್ಯರಂತೆ ಜಗತ್ಸೃಷ್ಟ್ಯಾದಿ ಕಾರ್ಯಗಳನ್ನು ನಿರ್ವಹಿಸುತ್ತಾನೆಯೇ?

ಸಾಮಾನ್ಯ ಮನುಷ್ಯನು ತನ್ನ ಕಣ್ಣುಗಳಿಂದ ನೋಡುತ್ತಾನೆ. ಕಣ್ಣುಗಳಿಲ್ಲದಿದ್ದರೆ ಅವನಿಗೆ ನೋಡಲು ಸಾಧ್ಯವಿಲ್ಲ. ಅದರಂತೆಯೇ ಬಾಹುಗಳಿಂದ ಕೆಲಸಕಾರ್ಯಗಳನ್ನೂ ಪಾದಗಳಿಂದ ಸಂಚಾರವನ್ನೂ ನಿರ್ವಹಿಸುತ್ತಾನೆ. ಆದರೆ ಪರಮಾತ್ಮನ ವಿಷಯದಲ್ಲಿ ಈ ನಿಯಮವಿಲ್ಲ. ಅವನು ನಿರವಯನು. ಅವನಿಗೆ ಅವಯವಗಳ ಅವಶ್ಯಕತೆಯಿಲ್ಲ. ಲೋಕದಲ್ಲಿರುವ ಸಮಸ್ತ ವಸ್ತುಗಳೂ ಪ್ರಾಣಿಗಳೂ ಪರಮಾತ್ಮನ ಅಂಶಗಳೇ ಆಗಿ ಅವುಗಳಲ್ಲಿ ಪರಮಾತ್ಮನ ಚೈತನ್ಯವೇ ತುಂಬಿರುವುದರಿಂದಲೂ, ಮತ್ತು ಈ ಪರಮಾತ್ಮನು ವ್ಯಾಪಿಸದೇ ಇರುವ ವಸ್ತುವು ಯಾವುದೂ ಇಲ್ಲದೇ ಇದ್ದುದರಿಂದಲೂ, ಪರಮಾತ್ಮನು ನೋಡದ ಅಥವಾ ತಿಳಿಯದ ವಸ್ತುಗಳೇ ಇಲ್ಲ. ಇದಲ್ಲದೇ ನೋಡುವ ಶಕ್ತಿ, ಚಲಿಸುವ ಶಕ್ತಿ, ಮತ್ತು ಎಲ್ಲಾ ವಿಧದ ಶಕ್ತಿಗಳೂ ಪರಮಾತ್ಮನ ಚೈತನ್ಯದ ಅಂಶಗಳೇ ಆಗಿರುವುದರಿಂದ ಎಲ್ಲರಂತೆ ಪರಮಾತ್ಮನು ತನ್ನ ಕಣ್ಣುಗಳನ್ನೇ ಉಪಯೋಗಿಸಿ ನೋಡಬೇಕಾಗಿಲ್ಲ. ಬಾಹುಗಳನ್ನೇ ಉಪಯೋಗಿಸಿ ಕೆಲಸಮಾಡಬೇಕಾಗಿಲ್ಲ. ಪಾದಗಳನ್ನೇ ಉಪಯೋಗಿಸಿ ಸಂಚರಿಸಬೇಕಾಗಿಲ್ಲ. ಅಂದರೆ, ಪರಮಾತ್ಮನಿಗೆ ಕಣ್ಣು, ಮುಖ, ಬಾಹು, ಪಾದ ಮೊದಲಾದ ಅವಯವಗಳ ಅವಶ್ಯಕತೆಯೇ ಇರುವುದಿಲ್ಲ. ಇವುಗಳು ಇಲ್ಲದೆಯೇ ಯಾವ ಕಾರ್ಯವನ್ನು ಬೇಕಾದರೂ ಮಾಡಬಲ್ಲನು. ಏಕೆಂದರೆ ಚೈತನ್ಯವೇ ಅವನು. ಯಾವ ಕೆಲಸಮಾಡಬೇಕಾದರೂ ಚೈತನ್ಯದ ಪ್ರೇರಣೆ ಇರಬೇಕು. ಇಲ್ಲದಿದ್ದರೆ ಆಗುವುದಿಲ್ಲ. ಲೋಕದಲ್ಲಿ ಪ್ರಾಣಿಗಳಲ್ಲಿ ವ್ಯಕ್ತವಾಗುವ ಸಮಸ್ತ ಚೈತನ್ಯಕ್ಕೂ ಪರಮಾತ್ಮನೇ ಮೂಲವಾಗಿರುವುದರಿಂದ ಅವನಿಗೆ ತಿಳಿಯದ ವಸ್ತುವಿಲ್ಲ.

ಇಲ್ಲಿ ಹೇಳಿರುವ ಕಣ್ಣು, ಮುಖ, ಬಾಹು, ಪಾದಗಳು ಎಂಬ ಶಬ್ದಗಳನ್ನು ಆಯಾ ಇಂದ್ರಿಯಗಳು ಮಾಡುವ ಕಾರ್ಯವನ್ನು ಸೂಚಿಸುವುದಕ್ಕಾಗಿ ಇಲ್ಲಿ ಉಪಯೋಗಿಸಲಾಗಿದೆ. ಈ ಇಂದ್ರಿಯಗಳು ನೆರಬೇರಿಸಬೇಕಾದ ಕಾರ್ಯಗಳನ್ನು ಪರಮಾತ್ಮನು ಇಂದ್ರಿಯಗಳ ಸಹಾಯವಿಲ್ಲದೆಯೇ ಮಾಡುತ್ತಾನೆ. ಆದ್ದರಿಂದ ಎಲ್ಲೆಲ್ಲಿಯೂ ಇವನಿಗೆ ಕಣ್ಣುಗಳಿವೆ ಎಂದರೆ ಎಲ್ಲ ಕಡೆಯಲ್ಲಿಯೂ ಪರಮಾತ್ಮನು ವ್ಯಾಪಿಸಿರುವುದರಿಂದ ಎಲ್ಲವನ್ನೂ ನೋಡಿ ತಿಳಿದುಕೊಳ್ಳಬಲ್ಲನು ಎಂಬ ಅಭಿಪ್ರಾಯವು.

ಚಕ್ಷುಃ – ಕಣ್ಣುಗಳು ಎಂಬ ಶಬ್ದವು ಕೇವಲ ವರ್ಣನೆಗಾಗಿ ಮಾತ್ರ. ನಮಗಿರುವಂತೆ ಪರಮಾತ್ಮನಿಗೆ ಕಣ್ಣುಗಳು ಎಂಬ ಪ್ರತ್ಯೇಕ ಇಂದ್ರಿಯಗಳ ಅವಶ್ಯಕತೆಯಿಲ್ಲ. ಅದರಂತೆ ಬಾಹು ಮೊದಲಾದವುಗಳು ಕೂಡ. ಆದರೂ ಇಲ್ಲಿ ಈ ಅವಯವಗಳ ಹೆಸರುಗಳನ್ನು ಹೇಳಬೇಕಾದ ಅವಶ್ಯಕತೆ ಏನು ಎಂದರೆ, ಪರಮಾತ್ಮನ ಅಗಾಧವಾದ ಶಕ್ತಿಯನ್ನು ಮನಸ್ಸಿಗೆ ತಿಳಿಯುವಂತೆ ಸ್ಪಷ್ಟವಾಗಿ ವಿವರಿಸುವುದಕ್ಕಾಗಿಯೇ ಇಂದ್ರಿಯಗಳ ಸಾದೃಶವನ್ನು ಹೇಳಿದೆ. ಈ ವಿಷಯವನ್ನೇ ಒಂದು ಉದಾಹರಣೆಯ ಮೂಲಕ ಈ ಋಕ್ಕಿನ ಉತ್ತರಾರ್ಧದಲ್ಲಿ ಸ್ಪಷ್ಟವಾಗಿ ವಿವರಿಸಿದೆ.

ಬಾಹುಭ್ಯಾಂ ಪತತ್ರೈಃ ಸಂ ಧಮತಿ ದ್ಯಾವಾಭೂಮೀ – ಈ ಬಾಹುಗಳು ಅಂತರಿಕ್ಷ ಅಥವಾ ಸ್ವರ್ಗವನ್ನು ಪ್ರೇರಿಸುತ್ತವೆ. ಇವನ ಪಾದಗಳು ಭೂಮಿಯನ್ನು ವ್ಯಾಪಿಸಿ ಅದನ್ನು ಪ್ರೇರಿಸುತ್ತವೆ. ಇಲ್ಲಿ ಭೂಮಿಗೂ ಮತ್ತು ಸ್ವರ್ಗಾಂತರಿಕ್ಷಗಳಿಗೂ ಮಧ್ಯದಲ್ಲಿ ಅತ್ಯಧಿಕವಾದ ಅಂತರ (ದೂರ) ವಿರುವುದೆನ್ನುವುದನ್ನೂ, ಹಾಗಿದ್ದರೂ ಸಹ ಪರಮೇಶ್ವರನು ತನ್ನ ಮಹಾಶಕ್ತಿಯಿಂದ ಏಕಕಾಲದಲ್ಲಿ ಅಷ್ಟು ದೂರಗಳಲ್ಲಿರುವ ಲೋಕತ್ರಯಗಳನ್ನು ವ್ಯಾಪಿಸಿ ಇವುಗಳನ್ನು ಪ್ರೇರಿಸುವನೆಂದೂ ತಿಳಿಸಲು ಈ ವರ್ಣನೆಯಿದೆ. ಇವೆಲ್ಲವೂ ಈ ಪರಮೇಶ್ವರನ ಅತ್ಯಧಿಕವಾದ ಶಕ್ತಿ-ಸಾಮರ್ಥ್ಯಗಳನ್ನು ಸೂಚಿಸುತ್ತವೆ. ಆದ್ದರಿಂದ ಇಂತಹ ಅಪರಿಮಿತ ಶಕ್ತಿ-ಸಾಮರ್ಥ್ಯಗಳುಳ್ಳ ಪರಮೇಶ್ವರನು ಮೂಲವಸ್ತು, ಸಾಧನಸಾಮಗ್ರಿ ಮೊದಲಾದ ಯಾವ ಉಪಕರಣಗಳ ಸಹಾಯವಿಲ್ಲದಿದ್ದರೂ ತನ್ನ ಅಸಾಧಾರಣ ಮಹಿಮೆಯಿಂದಲೇ ಸಮಸ್ತ ಜಗತ್ತನ್ನೂ ನಿರ್ಮಿಸಿ ಪಾಲಿಸುತ್ತಾನೆ ಎಂಬ ಅಭಿಪ್ರಾಯವು.

ದೇವ ಏಕಃ – ಎಂಬ ವಾಕ್ಯದ ಪ್ರಯೋಗದಿಂದ ಉಪಾದಾನಕಾರಣಗಳು ಅಂದರೆ ಸಾಧನಸಾಮಗ್ರಿಗಳೊಂದೂ ಇಲ್ಲದೆ, ಯಾರ ಸಹ್ಾವೂ ಇಲ್ಲದೇ, ತನ್ನ ಮಹಾಶಕ್ತಿಯಿಂದಲೇ ಪರಮೇಶ್ವರನು ಜಗತ್ತನ್ನು ನಿರ್ಮಿಸಿದನು ಎಂದು ತಿಳಿಸುತ್ತದೆ.

ಕಿಂ ಸ್ವಿದ್ವನಂ ಕ ಉ ಸ ವೃಕ್ಷ ಆಸ ಯತೋ ದ್ಯಾವಾಪೃಥಿವೀ ನಿಷ್ಟತಕ್ಷುಃ । ಮನೀಷಿಣೋ ಮನಸಾ ಪೃಚ್ಛತೇದು ತದ್ಯದಷ್ಯತಿಷ್ಠದ್ಭುವನಾನಿ ಧಾರಯನ್ ।। 4 ।।

ಯತಃ – ಯಾವ ವನವೃಕ್ಷಾದಿಗಳಿಂದ । ದ್ಯಾವಾಪೃಥಿವೀ – ದ್ಯಾವಾಪೃಥಿವಿಗಳನ್ನು । ನಿಷ್ಟತಕ್ಷುಃ – ಜಗನ್ನಿರ್ಮಾಪಕರು ನಿರ್ಮಿಸಿದರೋ । ವನಂ – ಆ ವನವು । ಕಿಂ ಸ್ವಿತ್ – ಯಾವುದು? । ಸಃ ವೃಕ್ಷಃ – ಆ ವೃಕ್ಷವು । ಕ ಉ ಆಸ – ಯಾವುದು? । ಮನೀಷಿಣಃ – ಎಲೈ ಪ್ರಾಜ್ಞರೇ । ಮನಸಾ – ಧ್ಯಾನರೂಪದಲ್ಲಿ । ಪೃಚ್ಛತೇದು – ಆ ವಿಷಯವನ್ನು ವಿಮರ್ಶಿಸಿ ತಿಳಿಯಿರಿ । ಯತ್ – ಯಾವ ಸತ್ತ್ವವು । ಭುವನಾನಿ – ಸಕಲ ಲೋಕಗಳನ್ನೂ । ಧಾರಯನ್-  ಧರಿಸುತ್ತ । ಅಧ್ಯತಿಷ್ಠತ್ – ಸ್ಥಿತವಾಗಿದ್ದಿತೋ । ತತ್ – ಅದರ ವಿಷಯವನ್ನೂ ವಿಮರ್ಶಿಸಿ ತಿಳಿಯಿರಿ ।

ಯಾವ ವನವೃಕ್ಷಾದಿಗಳಿಂದ ಜಗನ್ನಿರ್ಮಾಪಕರು ದ್ಯಾವಾಪೃಥಿವಿಗಳನ್ನು ನಿರ್ಮಿಸಿದರೋ ಆ ವನವು ಯಾವುದು? ಆ ವೃಕ್ಷವು ಯಾವುದು? ಎಲೈ ಪ್ರಾಜ್ಞರೇ! ಧ್ಯಾನರೂಪದಲ್ಲಿ ಆ ವಿಷಯವನ್ನು ವಿಮರ್ಶಿಸಿ ತಿಳಿಯಿರಿ. ಯಾವ ಸತ್ತ್ವವು ಸಕಲ ಲೋಕಗಳನ್ನೂ ಧರಿಸುತ್ತಾ ಸ್ಥಿತನಾಗಿದ್ದಿತೋ ಅದರ ವಿಷಯವನ್ನೂ ವಿಮರ್ಶಿಸಿರಿ.

ದ್ಯಾವಾಪೃಥಿವಿಗಳ ನಿರ್ಮಾಣಕ್ಕೆ ವಿಶ್ವಕರ್ಮನು (ಅಥವಾ ಇಂದ್ರಾದಿ ದೇವತೆಗಳು) ಉಪಯೋಗಿಸಿದ ವೃಕ್ಷವ್ಯಾವುದು? ಆ ವೃಕ್ಷವನ್ನು ಯಾವ ವನದಿಂದ ತಂದು ಉಪಯೋಗಿಸಿದರು ಎನ್ನುವುದೇ ಪ್ರಕೃತ ಋಕ್ಕಿನಲ್ಲಿರುವ ಪ್ರಶ್ನೆಯು. ಗೃಹನಿರ್ಮಾಣಕ್ಕೆ ಹೇಗೆ ವೃಕ್ಷಾದಿಗಳು ಅತ್ಯವಶ್ಯವೋ ಹಾಗೆ ದ್ಯಾವಾಪೃಥಿವಿಗಳೆಂಬ ಗೃಹನಿರ್ಮಾಣಕ್ಕೂ ಅವು ಅತ್ಯವಶ್ಯವೆಂಬ ಭಾವನೆಯು ಸಹಜವು.

ದ್ಯಾವಾಪೃಥಿವಿಗಳ ನಿರ್ಮಾಣವನ್ನು ಗೃಹನಿರ್ಮಾಣಕ್ಕೆ ಹೋಲಿಸುವ ಈ ವಿಧವಾದ ರೂಪಕವನ್ನು ವೇದವಾಕ್ಯಗಳಲ್ಲಿ ಅನೇಕ ಸನ್ನಿವೇಶಗಳಲ್ಲಿ ಬರುತ್ತದೆ. ಪ್ರಥಮತಃ ಮರಗಳನ್ನು ಕಡಿದು ಸಿದ್ಧಪಡಿಸಿಕೊಳ್ಳುವುದು, ನಿರ್ಮಾಣಪ್ರದೇಶವನ್ನು ಅಳೆದು ಸರಿಪಡಿಸಿಕೊಳ್ಳುವುದು, ಒಳ್ಳೆಯ ಆಸರೆಯೊಂದಿಗೆ ನಾಲ್ಕು ಮೂಲೆಗಳಲ್ಲಿಯೂ ನಾಲ್ಕು ಕಂಬಗಳನ್ನು ನೆಡುವುದು, ಮತ್ತು ಮುಂಭಾಗದಲ್ಲಿ ಎರಡು ಮಹಾದ್ವಾರಗಳನ್ನು ರಚಿಸುವುದು, ಅಡ್ಡ ತೊಲೆ, ಚಾವಣಿ, ಜಂತೆಗಳು ಇತ್ಯಾದಿಗಳನ್ನು ಸಂಪಾದಿಸುವುದು, ಈ ಹಂತಗಳೆಲ್ಲ್ೂ ವಿಶ್ವನಿರ್ಮಾಣಕ್ರಿಯೆಯಲ್ಲಿ ವರ್ಣಿತವಾಗಿವೆ.

ಸೃಷ್ಟಿಗೆ ಪೂರ್ವಭಾವಿಯಾಗಿ ಈಶ್ವರನ ಅದ್ವಿತೀಯತ್ವವನ್ನು ಹೇಳಿ, ಭಾವರೂಪವಾದ ವಿಶ್ವಕ್ಕೆ ಅತ್ಯಂತಾಭಾವವಿರಲಿಲ್ಲವೆಂದೂ, ಅಸದ್ರೂಪದಿಂದ ಸದ್ರೂಪವು ಉತ್ಪನ್ನವಾಗಲು ಸಾಧ್ಯವಿಲ್ಲವೆಂದು ತಿಳಿಸುವ ವಾಕ್ಯಗಳನ್ನು ಉದಾಹರಿಸಿ, ಸದ್ರೂಪವಾದ ವಿಶ್ವಕ್ಕೆ ಸದ್ರೂಪವಾದ ಉಪಾದಾನ ಕಾರಣಗಳೇ ಮೂಲವೆಂದೂ ಈ ಸೂಕ್ತವು ತಿಳಿಸುತ್ತದೆ.

ಯಾ ತೇ ಧಾಮಾನಿ ಪರಮಾಣಿ ಯಾವಮಾ ಯಾ ಮಧ್ಯಮಾ ವಿಶ್ವಕರ್ಮನ್ನುತೇಮಾ । ಶಿಕ್ಷಾ ಸಖಿಭ್ಯೋ ಹವಿಷಿ ಸ್ವಧಾವಃ ಸ್ವಯಂ ಯಜಸ್ವ ತನ್ವಂ ವೃಧಾನಃ ।। 5 ।।

ವಿಶ್ವಕರ್ಮನ್ – ಎಲೈ ವಿಶ್ವಕರ್ಮನೇ । ತೇ - ನಿನ್ನ । ಯಾ - ಯಾವ । ಪರಮಾಣಿ ಧಾಮಾನಿ – ಅತ್ಯುತ್ಕೃಷ್ಟವಾದ ಶರೀರವಿದೆಯೋ । ಯಾ - ಯಾವುದು । ಮಧ್ಯಮಾ – ಮಧ್ಯಮರೂಪವಾಗಿರುವುದೋ । ಉತ - ಮತ್ತು । ಅವಮಾ – ನಿಕೃಷ್ಟವಾಗಿರುವುದೋ । ತಾ ಇಮಾ – ಆ ಎಲ್ಲ ವಿಧವಾದ ಶರೀರ ವಿಶೇಷಗಳನ್ನೂ । ಹವಿಷಿ – ಹವಿಸ್ಸನ್ನು ಅರ್ಪಿಸುವ ಕಾಲದಲ್ಲಿ । ಸಖಿಭ್ಯಃ – ಮಿತ್ರರಾದ ನಮಗೆ । ಶಿಕ್ಷ - ಕೊಡು । ಸ್ವಧಾವಃ – ಅನ್ನವಂತನಾದ ಎಲೈ ವಿಶ್ವಕರ್ಮನೇ । ಸ್ವಯಂ – ನೀನೂ ಕೂಡ । ತನ್ವಂ – ನಿನ್ನ ಈ ಎಲ್ಲ ರೂಪದ ಶರೀರವನ್ನೂ । ವೃಧಾನಃ – ಪುಷ್ಟಿಗೊಳಿಸುತ್ತಾ । ಯಜಸ್ವ - ಪೂಜಿಸು ।

ಹವಿಸ್ಸಿನ ರೂಪದ ಅನ್ನವಂತನಾದ ಎಲೈ ವಿಶ್ವಕರ್ಮನೇ! ನಿನ್ನ ಯಾವ ಉತ್ಕೃಷ್ಟವಾದ, ಮಧ್ಯಮರೂಪದ ಮತ್ತು ನಿಕೃಷ್ಟವಾದ ಶರೀರ ಪ್ರಭೇದಗಳಿವೆಯೋ ಆ ಎಲ್ಲ ವಿಧದ ಶರೀರ ವಿಶೇಷಗಳನ್ನೂ ಕೂಡ ಹವಿಸ್ಸನ್ನು ಅರ್ಪಿಸುವ ಸಮಯದಲ್ಲಿ ಮಿತ್ರರಾದ ನಮಗೆ ಕೊಡು. ಅನ್ನವಂತನಾದ ಎಲೈ ವಿಶ್ವಕರ್ಮನೇ! ನೀನೂ ಸಹ ನಿನ್ನ ಈ ಎಲ್ಲ ರೂಪದ ಶರೀರವನ್ನೂ ಪುಷ್ಟಿಗೊಳಿಸುತ್ತಾ ಪೂಜಿಸು.

ಹರಿಃ  ಈ ಋಕ್ಕು ವಿಶ್ವಕರ್ಮನ ವಿಶ್ವರೂಪವಾದ ಶರೀರವಿಸ್ತರಣವನ್ನು ನಿರ್ದೇಶಿಸುತ್ತದೆ. ಈ ವಿಸ್ತರಣದಲ್ಲಿ ಮೂರು ಪ್ರಭೇದಗಳಿವೆ. ಪರಮ, ಮಧ್ಯಮ ಮತ್ತು ಅಧಮ. ಇವು ದ್ಯುಲೋಕ, ಅಂತರಿಕ್ಷ ಮತು ಪ್ರೃಥ್ವೀಲೋಕಗಳೆಂದಾಗಬಹುದು. ಅಥವಾ ದೇವತಾರೂಪ, ಮನುಷ್ಯರೂಪ ಮತ್ತು ಕ್ರಿಮಿಕೀಟಾದಿ ರೂಪ ಎಂದು ಮೂರು ವಿಧವಾಗಬಹುದು. ವಿಶ್ವದ ಸಕಲ ಚಿದಚಿದ್ರೂಪವಾದ ಎಲ್ಲವೂ ಈಶ್ವರನ ದಿವ್ಯವಿಭೂತಿ ವಿಶೇಷಗಳೆಂದೇ ಇದರ ತಾತ್ಪರ್ಯ.

ಈ ವಿಸ್ತರಣವೂ ವ್ಯಾಪಕತ್ವವೂ ಕೂಡ ತಪೋರೂಪವಾದ ಯಜ್ಞಫಲವೇ ಆಗಿದೆ. ಪ್ರಜಾಪತಿಯ ಶರೀರವಿಸ್ತರಣಕ್ಕೆ ಯಜ್ಞವು ಮೂಲಕಾರಣವು ಹೇಗೆ ಎನ್ನುವುದನ್ನು ಮುಂದಿನ ಋಕ್ಕಿನಲ್ಲಿ ತಿಳಿಯುತ್ತದೆ.

ವಿಶ್ವಕರ್ಮನ್ಹವಿಷಾ ವಾವೃಧಾನಃ ಸ್ವಯಂ ಯಜಸ್ವ ಪೃಥಿವೀಮುತ ದ್ಯಾಂ । ಮುಹ್ಯಂತ್ವನ್ಯೇ ಅಭಿತೋ ಜನಾಸ ಇಹಾಸ್ಮಾಕಂ ಮಘವಾ ಸೂರಿರಸ್ತು ।। 6 ।।

ವಿಶ್ವಕರ್ಮನ್ – ಎಲೈ ವಿಶ್ವಕರ್ಮನೇ! ಹವಿಷಾ – ಹವಿಸ್ಸಿನಿಂದ । ವವೃಧಾನಃ – ವೃದ್ಧಿಯನ್ನು ಹೊಂದಿ । ಸ್ವಯಂ - ನೀನಾಗಿಯೇ । ಪೃಥಿವೀಂ – ಪೃಥ್ವಿಯನ್ನೂ । ಉತ - ಮತ್ತು । ದ್ಯಾಂ – ದ್ಯುಲೋಕವನ್ನು । ಯಜಸ್ವ - ಪೂಜಿಸು । ಅನ್ಯೇ ಜನಾಸಃ – ಕರ್ಮರಹಿತರಾದ ಉಳಿದ ಜನರು । ಅಭಿತಃ - ಸರ್ವತ್ರ । ಮುಹ್ಯಂತು – ಮೋಹದಿಂದ ಆವೃತರಾಗಲಿ । ಮಘವಾ – ಧನವಂತನಾದ ಈಶ್ವರನು । ಇಹ – ನಮ್ಮ ಈ ಯಜ್ಞದಲ್ಲಿ । ಅಸ್ಮಾಕಂ - ನಮಗೆ । ಸೂರಿಃ – ಸ್ವರ್ಗಾದಿ ಪ್ರೇರಕನಾಗಿ । ಅಸ್ತು – ಆಗಿರಲಿ ।

ಎಲೈ ವಿಶ್ವಕರ್ಮನೇ! ನಮ್ಮ ಹವಿಸ್ಸಿನಿಂದ ನೀನು ವೃದ್ಧಿಹೊಂದಿ ನೀನಾಗಿಯೇ ದ್ಯಾವಾಪೃಥಿವಿಗಳನ್ನು ಪೂಜಿಸು. ಕರ್ಮರಹಿತರಾದ ಉಳಿದ ಜನರು ಸರ್ವತ್ರ ಮೋಹದಿಂದ ಆವೃತರಾಗಲಿ. ಧನವಂತನಾದ ವಿಶ್ವಕರ್ಮನು ನಮ್ಮ ಈ ಯಜ್ಞದಲ್ಲಿ ನಮಗೆ ಸ್ವರ್ಗಕ್ಕೆ ಪ್ರೇರಕನಾಗಲಿ.

ಈ ಋಕ್ಕಿನಲ್ಲಿ ವಿಶ್ವಕರ್ಮನು ಮಾಡುವ ಕ್ರಿಯೆಯನ್ನೂ ಅದರಿಂದ ಲಭಿಸುವ ಫಲವನ್ನೂ ಪ್ರಶಂಸಿಸಿದೆ. ಎಲೈ ವಿಶ್ವಕರ್ಮನೇ! ಸರ್ವಮೇಧ ಯಾಗದಲ್ಲಿ ಅರ್ಪಿಸಲ್ಪಡುವ ಹವಿಸ್ಸಿನಿಂದ ವೃದ್ಧಿಹೊಂದುವ ನೀನು ಪೃಥಿವಿಯನ್ನೂ ಸ್ವರ್ಗವನ್ನೂ ಯಜ್ಞದಲ್ಲಿ ಅರ್ಪಿಸು ಅಂದರೆ ನೀನೇ ದ್ಯಾವಾಪೃಥಿವಿಗಳಲ್ಲೆಲ್ಲಾ ವ್ಯಾಪಿಸಿ ನೆಲೆಸಿರು. ಇತರ ಜನರು ಅಂದರೆ ನಿನ್ನನ್ನು ಆರಾಧಿಸದೇ ಇರುವ ನಿನ್ನ ಪ್ರತಿಸ್ಪರ್ಧಿಗಳೆಲ್ಲರೂ ವಿವೇಕಜ್ಞಾನವಿಲ್ಲದವರಾಗಿ ಮೋಹ ಪರವಶರಾಗಲಿ. ನಂತರ ಸಮಸ್ತ ಧನಕ್ಕೂ ಸ್ವಾಮಿಯಾದ, ಅಪ್ರತಿಹತಜ್ಞಾನಿಯೂ ಆದ ಸರ್ವೇಶ್ವರನು (ವಿಶ್ವಕರ್ಮನು) ಈ ಯಜ್ಞಕರ್ಮದಲ್ಲಿ ಅಥವಾ ವಿಶ್ವಕರ್ಮನ ಆರಾಧನಾರೂಪವಾದ ಕರ್ಮದಲ್ಲಿ ನಮಗೆ ಪ್ರೇರಕನಾಗಿರಲಿ.

ಯಜ್ಞಮಯನೂ ಯಜ್ಞಮೂಲನೂ ಆದ ವಿಶ್ವಕರ್ಮನ ಪ್ರಶಂಸೆಯೇ ಈ ಸೂಕ್ತದ ವಿಶೇಷ ವಿಷಯ. ವಿಶ್ವಕರ್ಮನು ಯಜ್ಞಕರ್ತನು ಮತ್ತು ಯಜ್ಞಭೋಕ್ತೃವು. ಸೃಷ್ಟಿಗೆ ಮೊದಲು ತಾನೇ ಯಜ್ಞಭೂಮಿ ಮತ್ತು ಸೃಷ್ಟಿಯ ನಂತರ ವಿಶ್ವವೇ ಯಜ್ಞಭೂಮಿ. ಸೂಕ್ಷ್ಮರೂಪನಾದ ವಿಶ್ವಕರ್ಮನು ಸ್ಥೂಲರೂಪನಾಗಿ ಆವಿರ್ಭವಿಸುವುದೇ ಸೃಷ್ಟಿ. ಈ ಸೃಷ್ಟಿಗೂ ಯಜ್ಞವೇ ಮೂಲ. ಈ ಯಜ್ಞದಲ್ಲಿ ಹವಿಸ್ಸೂ ವಿಶ್ವಕರ್ಮನೇ. ಹವಿರ್ಭೋಕ್ತೃವೂ ಅವನೇ. ವಿಶ್ವರೂಪದಿಂದ ತನ್ನ ವಿಸ್ತೃತವಾದ ಪ್ರಕಾಶನವೇ ಯಜ್ಞದ ಫಲ. ಇದನ್ನೇ ಈ ಋಕ್ಕಿನಲ್ಲಿ ಹವಿಷಾ ವಾವೃಧಾನಃ ಎಂದು ತಿಳಿಸಿದೆ.

ಇದು ಬಹಳ ಗಂಭೀರವಾದ ವಿಷಯ. ಆಧ್ಯಾತ್ಮಿಕ ಮತ್ತು ಆಧಿದೈವಿಕವಾದ ತತ್ತ್ವಗಳನ್ನೊಳಗೊಂಡಿದೆ. ವಿಶ್ವದ ಸೃಷ್ಟಿ, ಸ್ಥಿತಿ, ಮತ್ತು ಲಯ ಇವೆಲ್ಲವೂ ಚಕ್ರಾಕಾರ. ಎಲ್ಲವೂ ಈಶ್ವರನ ಅವಸ್ಥಾವಿಶೇಷಗಳೇ ಆಗಿವೆ. ಇವೆಲ್ಲವೂ ಯಜ್ಞಮಯ. ಎಲ್ಲಕ್ಕೂ ಯಜ್ಞವೇ ಮೂಲ. ಎಲ್ಲವೂ ಯಜ್ಞರೂಪ. ಸೃಷ್ಟಿ-ಸ್ಥಿತಿ-ಲಯರೂಪವಾದ ಯಜ್ಞವು ಅನುಸ್ಯೂತವಾಗಿ ನಡೆಯುತ್ತಲೇ ಇದೆ. ಇವು ಚಲನಾತ್ಮಕ ಅವಸ್ಥಾವಿಶೇಷಗಳು.

ವಿಶ್ವಕರ್ಮನು ಹೇಗೆ ಸಕಲ ದೇವಮಾನವಾದಿಗಳಿಗೆಲ್ಲಾ ಆತ್ಮನೋ ಹಾಗೆ ಯಜ್ಞವೂ ಸರ್ವಾತ್ಮಕವು. ಇವೆರಡೂ ಬೇರೆ ಬೇರೆಯಲ್ಲ. ವಿಶ್ವಕರ್ಮನೇ ಯಜ್ಞವು. ಯಜ್ಞವೇ ವಿಶ್ವಕರ್ಮಾತ್ಮಕವು. ವಿಶ್ವಕರ್ಮರೂಪನಾದ ಪ್ರಜಾಪತಿಯ ಪ್ರತಿಬಿಂಬವೇ ಯಜ್ಞವು.

ವಾಚಸ್ಪತಿಂ ವಿಶ್ವಕರ್ಮಾಣಮೂತಯೇ ಮನೋಜುವಂ ವಾಜೇ ಅದ್ಯಾ ಹುವೇಮ । ಸ ನೋ ವಿಶ್ವಾನಿ ಹವನಾನಿ ಜೋಷದ್ವಿಶ್ವಸಂಭೂರವಸೇ ಸಾಧುಕರ್ಮಾ ।। 7 ।।

ವಾಚಸ್ಪತಿಂ – ಮಂತ್ರರೂಪವಾದ ವಾಕ್ಕುಗಳಿಗೆ ಒಡೆಯನೂ । ವಿಶ್ವಕರ್ಮಾಣಂ – ಸಕಲ ಜಗತ್ತಿಗೂ ನಿರ್ಮಾಪಕನೂ । ಮನೋಜುವಂ – ಮನಸ್ಸಿನಂತೆ ವೇಗವುಳ್ಳವನೂ ಆದ ವಿಶ್ವಕರ್ಮನನ್ನು । ವಾಜೇ – ಯಜ್ಞದಲ್ಲಿ । ಅದ್ಯ - ಈಗ । ಊತಯೇ – ರಕ್ಷಣಾರ್ಥವಾಗಿ । ಹುವೇಮ - ಕರೆಯುತ್ತೇವೆ । ವಿಶ್ವಶಂಭೂಃ – ಎಲ್ಲರಿಗೂ ಮಂಗಳವನ್ನುಂಟುಮಾಡುವವನೂ । ಸಾಧುಕರ್ಮಾ – ಉತ್ತಮವಾದ ಕರ್ಮವುಳ್ಳವನೂ ಆದ । ಸಃ – ವಿಶ್ವಕರ್ಮದೇವನು । ನಃ - ನಮ್ಮ । ವಿಶ್ವಾನಿ ಹವನಾನಿ – ಸಕಲ ಆಹ್ವಾನಗಳನ್ನೂ । ಅವಸೇ – ನಮ್ಮ ರಕ್ಷಣಾರ್ಥವಾಗಿ । ಜೋಷತ್ – ಸೇವಿಸಲಿ ।

ಮಂತ್ರರೂಪವಾದ ವಾಕ್ಕುಗಳಿಗೆ ಒಡೆಯನೂ, ಸಕಲ ಜಗತ್ತಿಗೂ ನಿರ್ಮಾಪಕನೂ, ಮನಸ್ಸಿನಂತೆ ವೇಗವುಳ್ಳವನೂ ಆದ ವಿಶ್ವಕರ್ಮನನ್ನು ಈಗ ಯಜ್ಞದಲ್ಲಿ ರಕ್ಷಣಾರ್ಥವಾಗಿ ಪ್ರಾರ್ಥಿಸಿ ಕರೆಯುತ್ತೇವೆ. ಎಲ್ಲರಿಗೂ ಮಂಗಳವನ್ನುಂಟುಮಾಡುವವನೂ ಉತ್ತಮ ಕರ್ಮವುಳ್ಳವನೂ ಆದ ವಿಶ್ವಕರ್ಮದೇವನು ನಮ್ಮ ಸಕಲ ಆಹ್ವಾನಗಳನ್ನು ನಮ್ಮ ರಕ್ಷಣಾರ್ಥವಾಗಿ ಸೇವಿಸಲಿ (ಕೇಳಲಿ).

 

Leave a Reply

Your email address will not be published. Required fields are marked *