ಭವಿಷ್ಯಮಹಾಪುರಾಣ
ಜಯತಿ ಭುವನದೀಪೋ ಭಾಸ್ಕರೋ ಲೋಕಕರ್ತಾ ಜಯತಿ ಚ ಶಿತಿದೇಹಃ ಶಾರ್ಙ್ಗ್ರಧನ್ವಾ ಮುರಾರಿಃ । ಜಯತಿ ಚ ಶಶಿಮೌಲೀ ರುದ್ರನಾಮಾಭಿಧೇಯೋ ಜಯತಿ ಚ ಸ ತು ದೇವೋ ಭಾನುಮಾಂಚಿತ್ರಭಾನುಃ ।।
[ಭವಿಷ್ಯಮಹಾಪುರಾಣಂ (ಸಂಸ್ಕೃತಮೂಲ, ಕನ್ನಡದ ಅನುವಾದವಿವರಣೆಗಳೊಡನೆ, 13 ಭಾಗಗಳಲ್ಲಿ), ಅನುವಾದಕ ಬಿ, ಚನ್ನಕೇಶವಯ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 36, ಮೈಸೂರು, ಶ್ರೀಬಸವೇಶ್ವರ ಎಲೆಕ್ಟ್ರಿಕ್ ಪ್ರೆಸ್, 1946]
ಮತ್ಸ್ಯಪುರಾಣದ 63ನೇ ಅಧ್ಯಾಯದ 31-32ನೇ ಶ್ಲೋಕಗಳ ಪ್ರಕಾರ ಯತ್ರಾಧಿಕೃತ್ಯ ಮಾಹಾತ್ಮ್ಯಮಾದಿತ್ಯಸ್ಯ ಚತುರ್ಮುಖಃ । ಅಘೋರಕಲ್ಪವೃತ್ತಾಂತಪ್ರಸಂಗೇನ ಜಗತ್ಸ್ಥಿತಿಮ್ । ಮನವೇ ಕಥಯಾಮಾಸ ಭೂತಗ್ರಾಮಸ್ಯ ಲಕ್ಷಣಮ್ ।। ಚತುರ್ದಶ ಸಹಸ್ರಾಣಿ ತಥಾ ಪಂಚ ಶತಾನಿ ಚ । ಭವಿಷ್ಯಚರಿತಪ್ರಾಯಂ ಭವಿಷ್ಯಂ ತದಿಹೋಚ್ಯತೇ ।। ಅರ್ಥಾತ್: ಚತುರ್ಮುಖ ಬ್ರಹ್ಮನು ಅಘೋರ ಕಲ್ಪವೃತ್ತಾಂತದ ಮೂಲಕ ಜಗತ್ತಿನ ಸ್ಥಿತಿಯನ್ನು ಮನುವಿಗೆ ಹೇಳಿದ ಪುರಾಣವು ಭವಿಷ್ಯಪುರಾಣ ಎನಿಸುತ್ತದೆ. ಅದರಲ್ಲಿ ಸೂರ್ಯನ ಮಾಹಾತ್ಮ್ಯವೂ, ಪ್ರಾಣಿವರ್ಗದ ಲಕ್ಷಣವೂ ಪ್ರತಿಪಾದ್ಯವಾಗಿವೆ. ಮುಂದೆಬರಲಿರುವ ವೃತ್ತಾಂತವನ್ನು ವಿಶೇಷವಾಗಿ ಒಳಗೊಂಡಿರುವ ಅದರಲ್ಲಿ 14,500 ಶ್ಲೋಕಗಳಿವೆ.
ಈ ಪುರಾಣದ ಪ್ರಾರಂಭದ ಅಧ್ಯಾಯಾಂತದಲ್ಲಿ “ಇತಿ ಶ್ರೀ ಭವಿಷ್ಯೇಮಹಾಪುರಾಣೇ ಶತಾರ್ಧಸಾಹಸ್ರ್ಯಾಂ ಸಂಹಿತಾಯಾಂ” ಎಂದು ಹೇಳಿರುವಂತೆ ಇದು 50,000 ಶ್ಲೋಕಗಳುಳ್ಳದ್ದೆಂದೂ, “ಪರ್ವಾಣಿಚಾತ್ರವೈಪಂಚ” ಎಂಬ ಉಕ್ತಿಯಿಂದ ಐದು ಪರ್ವಗಳುಳ್ಳದ್ದಾಗಿತ್ತೆಂದೂ ತಿಳಿಯುತ್ತದೆ. ಆದರೆ ಈಗ ಉಪಲಬ್ಧವಾಗಿರುವ ಭವಿಷ್ಯಪುರಾಣದಲ್ಲಿ ಬ್ರಹ್ಮ, ಮಧ್ಯಮ, ಪ್ರತಿಸರ್ಗ ಮತ್ತು ಉತ್ತರ ಗಳೆಂಬ ನಾಲ್ಕು ಪರ್ವಗಳೂ, 26,300 ಶ್ಲೋಕಗಳೂ, 586 ಅಧ್ಯಾಯಗಳೂ ಇವೆ.
ಬ್ರಹ್ಮಪರ್ವ (216 ಅಧ್ಯಾಯಗಳು, 8,940 ಶ್ಲೋಕಗಳು): ಸ್ತ್ರೀ-ಪುರುಷಲಕ್ಷಣಗಳು, ಉಪನಯನ-ವಿವಾಹವಿಧಿಗಳು, ಸ್ತ್ರೀಧರ್ಮಕಥನ, ಪ್ರತಿಪದಾದಿ ಕಲ್ಪವ್ರತವರ್ಣನೆ, ಕಾರ್ತಿಕೇಯಮಹಾತ್ಮೆ, ಸೂರ್ಯಮಹಾತ್ಮೆ, ಸಾಂಬೋಪಾಖ್ಯಾನ, ಸೌರಧರ್ಮ.
ಮಧ್ಯಮಪರ್ವ (62 ಅಧ್ಯಾಯಗಳು, 2,941 ಶ್ಲೋಕಗಳು): ಸೃಷ್ಟಿವಿಷಯ, ಭುವನಕೋಶ, ಪುರಾಣ-ಇತಿಹಾಸವರ್ಣನೆ, ಪೂರ್ತಕರ್ಮನಿರೂಪಣೆ, ಯಜ್ಞಗಳು, ಮಂಡಲ-ಕಲಶಸ್ಥಾಪನಾ ವಿಧಿಗಳು, ಪೂಜಾಕ್ರಮಗಳು
ಪ್ರತಿಸರ್ಗಪರ್ವ (100 ಅಧ್ಯಾಯಗಳು, 5,981 ಶ್ಲೋಕಗಳು): ಚತುರ್ಯುಗಗಳ ರಾಜರ ವೃತ್ತಾಂತ, ಸತ್ಯನಾರಾಯಣಕಥೆ, ಮ್ಲೇಚ್ಛಯಜ್ಞ, ಕಲಿಯುಗದ ಇತಿಹಾಸ, ದೆಹಲಿಯಲ್ಲಿ ಮ್ಲೇಚ್ಛರಾಜರ ಆಳ್ವಿಕೆ, ಕಲ್ಕಿವಿಜಯ ವೃತ್ತಾಂತ.
ಉತ್ತರಪರ್ವ (208 ಅಧ್ಯಾಯಗಳು, 6,432 ಶ್ಲೋಕಗಳು): ವ್ಯಾಸ-ಯುಧಿಷ್ಠಿರಸಂವಾದ, ಕೃಷ್ಣ-ಯುಧಿಷ್ಠಿರ ಸಂವಾದ, ಭಗವಂತನ ಮಾಯಾಸ್ವರೂಪ, ಜನನ-ಸಂಸಾರಗಳಿಂದಾಗುವ ದೋಷಗಳು, ಅಧರ್ಮ-ಪಾಪಭೇದಗಳ ವಿವರಣೆ, ಕರ್ಮಕ್ಕೆ ತಕ್ಕ ಫಲಪ್ರಾಪ್ತಿಯ ವಿಧಾನ, ನಾನಾ ವ್ರತಮಹಾತ್ಮೆಗಳ ವರ್ಣನೆ, ಪೂರ್ತಕರ್ಮಗಳು, ಹೋಮಗಳು, ಮತ್ತು ದಾನ ವಿಧಿಗಳು.