ಬೃಹದಾರಣ್ಯಕೋಪನಿಷತ್ತು
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ । ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ।। ಓಂ ಶಾಂತಿಃ ಶಾಂತಿಃ ಶಾಂತಿಃ ।।
[ಆಧಾರಗ್ರಂಥ: ಸ್ವಾಮಿ ಆದಿದೇವಾನಂದ, ಬೃಹದಾರಣ್ಯಕೋಪನಿಷತ್, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2008]
ಗಾತ್ರದಿಂದಲೂ ವಿಷಯಸಮೃದ್ಧಿಯಿಂದಲೂ ಅತ್ಯಂತ ಬೃಹತ್ತಾಗಿರುವ ಬೃಹದಾರಣ್ಯಕೋಪನಿಷತ್ತು ಶುಕ್ಲಯಜುರ್ವೇದದ ಶತಪಥಬ್ರಾಹ್ಮಣದ ಕಾಣ್ವಶಾಖೆಯ 17ನೇ ಕಾಂಡದ 3-8 ಅಧ್ಯಾಯಗಳಿಗೂ ಮತ್ತು ಮಾಧ್ಯಂದಿನ ಶಾಖೆಯ 14ನೇ ಕಾಂಡದ 4-9 ಅಧ್ಯಾಯಗಳಿಗೂ ಸೇರಿದೆ. ಶ್ರೀಶಂಕಾರಾಚಾರ್ಯರ ಭಾಷ್ಯವು ಕಾಣ್ವಶಾಖೆಯನ್ನೇ ಅನುಸರಿಸಿದೆ.
ಬೃಹದಾರಣ್ಯಕೋಪನಿಷತ್ತಿನಲ್ಲಿಯ 6 ಅಧ್ಯಾಯಗಳು 47 ಬ್ರಾಹ್ಮಣಗಳೆಂಬ ಖಂಡಗಳಾಗಿಯೂ, ಪ್ರತಿ ಬ್ರಾಹ್ಮಣಗಳು ಚಿಕ್ಕ ಚಿಕ್ಕ ಪರಿಚ್ಛೇದಗಳಾಗಿಯೂ ವಿಭಜಿತಗೊಂಡಿವೆ. ಈ ಉಪನಿಷತ್ತನ್ನು ಎರಡೆರಡು ಅಧ್ಯಾಯಗಳನ್ನೊಳಗೊಂಡಿರುವ ಮೂರು ಕಾಂಡಗಳಾಗಿಯೂ ವಿಂಗಡಿಸುತ್ತಾರೆ: ಮಧುಕಾಂಡ (ಬಹುದೇವತೋಪಾಸನೆಯನ್ನು ಮೀರಿರುವ ಆತ್ಮತತ್ತ್ವವನ್ನು ಪ್ರತಿಪಾದಿಸುತ್ತದೆ), ಯಾಜ್ಞವಲ್ಕ್ಯಕಾಂಡ ಅಥವಾ ಮುನಿಕಾಂಡ (ಆತ್ಮಬ್ರಹ್ಮತತ್ತ್ವದ ವಿಸ್ತಾರವಾದ ಮತ್ತು ಸೂಕ್ಷ್ಮವಾದ ವರ್ಣನೆ) ಮತ್ತು ಖಿಲಕಾಂಡ (ಕೆಲವು ಉಪಾಸನೆಗಳು ಮತ್ತು ಉತ್ಕ್ರಾಂತಿಯ ಕ್ರಮ). ಬೃಹದಾರಣ್ಯಕೋಪನಿಷತ್ತಿನ ಅಧ್ಯಾಯಗಳಲ್ಲಿರುವ ಮುಖ್ಯ ವಿಷಯಗಳ ಸಾರಾಂಶವು ಹೀಗಿದೆ:
ಅಧ್ಯಾಯ 1: ಸಂಸಾರತತ್ತ್ವವನ್ನು ತಿಳಿಸುವ ಮಧುಕಾಂಡದ ಈ ಮೊದಲ-ನೇ ಅಧ್ಯಾಯದಲ್ಲಿ 6 ಬ್ರಾಹ್ಮಣಗಳಿವೆ.
(1) ಅಶ್ವಬ್ರಾಹ್ಮಣ – ಇಲ್ಲಿ ಅಶ್ವಮೇಧ ಯಜ್ಞಕ್ಕೆ ಅರ್ಹವಾದ ಕುದುರೆಯ ಶರೀರವು ಪ್ರಜಾಪತಿಯ ವಿರಾಡ್ರೂಪವೆಂಬ ವರ್ಣನೆಯಿದೆ. ಪ್ರಜಾಪತಿಯ ರೂಪವಾಗಿರುವ ಕಾಲ-ಲೋಕ-ದೇವತೆಗಳನ್ನು ಯಜ್ಞಪಶುವಾದ ಕುದುರೆಯಲ್ಲಿ ಅಧ್ಯಾರೋಪಿಸಿದರೆ ಪಶುವೇ ಪ್ರಜಾಪತಿಯಾಗುತ್ತದೆ. ಅಶ್ವಮೇಧದಲ್ಲಿ ಅಧಿಕಾರವಿಲ್ಲದವರಿಗೂ ಈ ಉಪಾಸನೆಯಿಂದ ಅಶ್ವಮೇಧದ ಫಲವು ದೊರೆಯುತ್ತದೆ. ಆದರೆ ಅಶ್ವಮೇಧದ ಫಲವಾದ ಬ್ರಹ್ಮಲೋಕಪ್ರಾಪ್ತಿಯೂ ಅನಿತ್ಯವು, ಮತ್ತು ಇತರ ವೈದಿಕಕರ್ಮಗಳಂತೆ ಅಜ್ಞಾನವನ್ನು ನಾಶಪಡಿಸಲು ಅಸಮರ್ಥವಾಗಿವೆ. ಅಜ್ಞಾನವನ್ನು ನಾಶಪಡಿಸಿ ಸಂಸಾರವನ್ನು ತಪ್ಪಿಸಲು ಬ್ರಹ್ಮಜ್ಞಾನಕ್ಕೆ ಮಾತ್ರ ಸಾಧ್ಯ. ಆದ್ದರಿಂದ ಕಾಮಾದಿ ದೋಷಗಳಿಗೂ, ಕರ್ಮಕ್ಕೂ, ಕಾರಣವಾದ ಅವಿದ್ಯೆಯು ನಾಶವಾಗಲೆಂದು – ಹಗ್ಗದಲ್ಲಿ ಉಂಟಾಗಿರುವ ಹಾವಿನ ಭಾವನೆಯನ್ನು ಹೋಗಲಾಡಿಸಲು – ಈ ಉಪನಿಷತ್ತು ವಿರಕ್ತನಾದವನಿಗೆ ಬ್ರಹ್ಮವಿದ್ಯೆಯನ್ನು ಪ್ರಾರಂಭಿಸುತ್ತದೆ.
(2) ಅಗ್ನಿಬ್ರಾಹ್ಮಣ – ಇಲ್ಲಿ ಅಶ್ವಮೇಧದಲ್ಲಿ ಉಪಯೋಗಿಸುವ ಅಗ್ನಿಯ ಉತ್ಪತ್ತಿ ಮತ್ತು ಜಗತ್ತಿನ ವಿಕಸನಗಳ ವರ್ಣನೆಗಳಿವೆ. ಮಡಕೆ ಮುಂತಾದವು ಪಿಂಡಾವಸ್ಥೆಯಲ್ಲಿರುವ ಮಣ್ಣಿನಿಂದ ಆವೃತವಾಗಿರುವಂತೆ ನಾಮ-ರೂಪಾತ್ಮಕವಾದ ಈ ಜಗತ್ತು ವ್ಯಕ್ತವಾಗುವುದಕ್ಕೆ ಮೊದಲು ಮೃತ್ಯುವಿನಿಂದ ಆವೃತವಾಗಿತ್ತು. ಮೃತ್ಯುವೇ ಹಿರಣ್ಯಗರ್ಭ ಅಥವಾ ಪ್ರಜಾಪತಿ. ಅಶ್ವದಂತೆ ಈ ಅಗ್ನಿಯನ್ನೂ ಪ್ರಜಾಪತಿಯಾಗಿ ಅಥವಾ ಪ್ರಥಮ ಶರೀರಿಯಾದ ವಿರಾಟ್ಪುರುಷನಾಗಿ ಉಪಾಸಿಸಬೇಕು. ಪುನರ್ಮರಣವನ್ನು ಹೊಂದದಿರುವುದೇ ಈ ಉಪಾಸನೆಯ ಫಲ.
(3) ಉದ್ಗೀತಬ್ರಾಹ್ಮಣ –ದೇವಾಸುರರಲ್ಲಿರುವ ಸ್ಪರ್ಧೆಯನ್ನು ರೂಪಕವನ್ನಾಗಿರಿಸಿಕೊಂಡು ವೇದೋಕ್ತ ಉಪಾಸನಾಕರ್ಮಗಳ ಫಲವೆಲ್ಲ ಸಂಸಾರವಿಷಯವೆಂದೂ ಕೇವಲ ಬ್ರಹ್ಮವಿದ್ಯೆಯು ಮೋಕ್ಷಕ್ಕೆ ಕಾರಣವೆಂಬ ವಿವರಣೆಯೂ ಇದರಲ್ಲಿದೆ. ಬಹುಸಂಖ್ಯಾತರಾದ ಅಸುರರನ್ನು ಜಯಿಸಲು ದೇವತೆಗಳು ಜ್ಯೋತಿಷ್ಟೋಮಯಜ್ಞದಲ್ಲಿ ವಾಗಿಂದ್ರಿಯ, ಮೂಗು, ಕಣ್ಣುಗಳು, ಕಿವಿಗಳು, ಮನಸ್ಸು – ಇವುಗಳನ್ನು ಉದ್ಗೀಥವನ್ನು ಹಾಡಬೇಕೆಂದು ಒಬ್ಬರಾದ ಮೇಲೆ ಇನ್ನೊಬ್ಬರಲ್ಲಿ ಕೇಳಿಕೊಂಡರು. ಇಂದ್ರಿಯಗಳು ಒಪ್ಪಿಕೊಂಡವು. ಅಸುರರು ಈ ಇಂದ್ರಿಯಗಳನ್ನು ಒಂದಾದಮೇಲೊಂದರಂತೆ ಸಂಗರೂಪದ ಪಾಪದಿಂದ ಹೊಡೆದರು. ಆದರೆ ಅವರು ಪ್ರಾಣವನ್ನು ಹೊಡೆದಾಗ ತಾವೇ ಪುಡಿಪುಡಿಯಾದರು. ಪ್ರಾಣವು ಶರೀರೇಂದ್ರಿಯಗಳ ರಸವೆಂದೂ ಶರೀರೇಂದ್ರಿಯಗಳನ್ನು ಉಪಾಸಿಸದೇ ಪ್ರಾಣವನ್ನೇ ಉಪಾಸಿಸಬೇಕೆಂದೂ ಈ ರೂಪಕವು ತಿಳಿಸುತ್ತದೆ.
(4) ಪುರುಷವಿಧಬ್ರಾಹ್ಮಣ – ಸೃಷ್ಟಿಗೆ ಮೊದಲು ಪ್ರಜಾಪತಿಯ ಶರೀರಕ್ಕಿಂತ ಬೇರೆಯಾದ ಶರೀರಭೇದಸಮೂಹವಿರಲಿಲ್ಲ. ಅವನು ಒಬ್ಬಂಟಿಗನಾಗಿದ್ದುದರಿಂದ ಕಳವಳಪಟ್ಟು ಸಂಗಾತಿಯನ್ನು ಬಯಸಿದನು. ಸತ್ಯಸಂಕಲ್ಪನಾದ ಅವನು ತನ್ನ ಪೂರ್ವರೂಪವನ್ನು ಬಿಡದೇ, ಮೊದಲಿನಂತೆಯೇ ಇದ್ದು, ತನಗಿಂತ ಬೇರೆಯಾದ ಮತ್ತೊಂದು ಶರೀರವನ್ನು ಸೃಷ್ಟಿಸಿ ಅದನ್ನು ಪತಿ (ಮನುವಾಗಿ) ಪತ್ನಿ (ಶತರೂಪೆಯಾಗಿ) ಎಂದು ಎರಡಾಗಿ ಮಾಡಿದನು; ಅವರ ಸಂಯೋಗದಿಂದ ಮನುಷ್ಯರು ಹುಟ್ಟಿದರು. ಇವರಿಬ್ಬರೂ ಬೇರೆ ಬೇರೆ ವರ್ಗದ ಸ್ತ್ರೀ-ಪುರುಷರಾಗಿ ಇರುವೆಯವರೆಗಿನ ಸಮಸ್ತ ಪ್ರಾಣಿಗಳನ್ನೂ ಸೃಷ್ಟಿಸಿದರು. ತಾನು ಸೃಷ್ಟಿಸಿದ ಜಗತ್ತು ತನ್ನ ಹಾಗೆಯೇ ಇರುವುದರಿಂದ ತಾನೇ ಅದೆಂದು ತಿಳಿದುಕೊಂಡನು. ನಂತರ ಅಗ್ನಿಯೇ ಮೊದಲಾದ ದೇವತೆಗಳನ್ನು ಸೃಷ್ಟಿಸಲು ಅಗ್ನಿಷೋಮಾತ್ಮಿಕವಾದ ಈ ಜಗತ್ತೆಲ್ಲ ಹುಟ್ಟಿತು.
(5) ಸಪ್ತಾನ್ನಬ್ರಾಹ್ಮಣ – ಇಲ್ಲಿ ಅನ್ನವನ್ನು ಏಳು ಭಾಗಗಳನ್ನಾಗಿ ವಿಂಗಡಿಸಿದೆ: ಒಂದು ಎಲ್ಲರಿಗೂ ಸಾಮಾನ್ಯವಾದ ಅನ್ನವು; ಎರಡು ದೇವತೆಗಳಿಗಾಗಿ (ಹುತ-ಪ್ರಹೃತಗಳು); ಪಶುಗಳಿಗೆ ಕೊಟ್ಟ ಹಾಲೆನ್ನುವುದು ಇನ್ನೊಂದು ಅನ್ನವು ಮತ್ತು ವಾಙ್ಮನಪ್ರಾಣಗಳೆಂಬ ಉಳಿದ ಮೂರು ಅನ್ನಗಳು ಇಡೀ ಜಗತ್ತನ್ನು ವ್ಯಾಪಿಸಿವೆ.
(6) ಸಾಧ್ಯ-ಸಾಧನ-ಲಕ್ಷಣವುಳ್ಳ ವ್ಯಾಕೃತ-ಅವ್ಯಾಕೃತ ಜಗತ್ತೆಲ್ಲ ನಾಮ, ರೂಪ, ಕರ್ಮ ಎಂಬ ಈ ಮೂರೇ ಆಗಿವೆ. ಇವು ಒಂದಕ್ಕೊಂದು ಆಶ್ರಯವಾಗಿ, ಪರಸ್ಪರ ಅಭಿವ್ಯಕ್ತಿಗೆ ಕಾರಣವಾಗಿ, ಒಂದರಲ್ಲೊಂದು ಲಯವಾಗುತ್ತವೆ. ಇವು ಪರಮಾತ್ಮನಿಗೆ ಉಪಾಧಿಗಳಾಗಿವೆ. ಅನಾತ್ಮಗಳಾದ ಈ ಮೂರರಿಂದ ಯಾರ ಮನಸ್ಸು ಹಿಂದಿರುಗುವುದಿಲ್ಲವೋ ಅವನಿಗೆ ಆತ್ಮಲೋಕದಲ್ಲಿ ಆಸಕ್ತಿಯಿರುವುದಿಲ್ಲ. ಏಕೆಂದರೆ ಬಾಹ್ಯ ಪ್ರವೃತ್ತಿಗೂ ಪ್ರತ್ಯಗಾತ್ಮ ಪ್ರವೃತ್ತಿಗೂ ಅತ್ಯಂತ ವಿರೋಧವಿದೆ.
ಅಧ್ಯಾಯ 2: ಆತ್ಮತತ್ತ್ವವನ್ನು ತಿಳಿಸುವ ಮಧುಕಾಂಡದ ಈ ಎರಡನೇ ಅಧ್ಯಾಯದಲ್ಲಿ 6 ಬ್ರಾಹ್ಮಣಗಳಿವೆ.
(1) ಗಾರ್ಗ್ಯ-ಅಜಾತಶತ್ರುಸಂವಾದ – ಗರ್ಗಗೋತ್ರಕ್ಕೆ ಸೇರಿದ ದೃಪ್ತ-ಬಾಲಾಕಿ ಎನ್ನುವವನಿಗೆ ಕಾಶೀರಾಜ ಅಜಾತಶತ್ರುವು ಬ್ರಹ್ಮವಿದ್ಯೆಯನ್ನು ಉಪದೇಶಿಸಿದನು. ದೃಪ್ತಬಾಲಕಿಯು ಕೇವಲ ಅವಿದ್ಯಾವಿಷಯಕವಾದ ಸೋಪಾಧಿಕಬ್ರಹ್ಮವನ್ನು (ಅಂದರೆ ಆದಿತ್ಯ, ಚಂದ್ರ, ವಿದ್ಯುತ್ತು, ಆಕಾಶ, ವಾಯು, ಅಗ್ನಿ, ನೀರು, ಕನ್ನಡಿ, ಹೆಜ್ಜೆಯ ಶಬ್ದ, ದಿಕ್ಕುಗಳು, ಕತ್ತಲೆ, ಹಿರಣ್ಯಗರ್ಭ – ಇವರಲ್ಲಿರುವ ಪುರುಷನನ್ನೇ ಬ್ರಹ್ಮವೆಂದು) ಅರಿತಿದ್ದನು. ಇದಕ್ಕೆ ವಿರುದ್ಧವಾದ ನಿರುಪಾಧಿಕ ಧರ್ಮವನ್ನು ಅಜಾತಶತ್ರುವು ಅವನಿಗೆ ಉಪದೇಶಿಸಿದನು: ಗಾಢ ನಿದ್ರೆಯಲ್ಲಿ ವಾಗಾದಿ ಇಂದ್ರಿಯಗಳೆಲ್ಲ ಲಯವನ್ನು ಹೊಂದಿದಾಗ ಜೀವಾತ್ಮನು ಉಪಾಧಿಯಿಂದ ಆಗಿದ್ದ ವಿಶೇಷಾತ್ಮರೂಪವನ್ನು ಬಿಟ್ಟು ನಿರ್ವಿಶೇಷವಾದ ಪರಮಾತ್ಮನಲ್ಲಿ ಮಲಗುತ್ತಾನೆ. ಏನನ್ನೂ ಅರಿಯಲಾಗದ ಆ ತನಿನಿದ್ರೆಯಲ್ಲಿ ಜೀವಾತ್ಮನು ಕುಮಾರನಂತೆ, ಮಹಾರಾಜನಂತೆ ಅಥವಾ ಪರಾಕಾಷ್ಠೆಯನ್ನು ಮುಟ್ಟಿರುವ ಮಹಾಬ್ರಾಹ್ಮಣನಂತೆ ಆಗುತ್ತಾನೆ. ಅಗ್ನಿಯಿಂದ ಸಣ್ಣ ಕಿಡಿಗಳು ಹಾರಿದಂತೆ ಪರಮಾತ್ಮನಿಂದ ಎಲ್ಲ ಲೋಕಗಳೂ, ಎಲ್ಲ ಪ್ರಾಣಿಗಳೂ, ಎಲ್ಲ ದೇವತೆಗಳೂ ಬರುತ್ತಾರೆ. ಜೀವನು ತನ್ನ ಪರಮಾತ್ಮ ಸ್ವರೂಪವನ್ನು ಮರೆತು ದೇಹೇಂದ್ರಿಯಗಳೆಂಬ ಕಾಡಿನಲ್ಲಿ ಪ್ರವೇಶಿಸಿ ಸಂಸಾರಧರ್ಮವನ್ನು ಪಡೆದಿರುತ್ತಾನೆ.
(2) ಶರೀರಮಧ್ಯದಲ್ಲಿರುವ ಪ್ರಾಣವೇ ಕರುವು, ಈ ಶರೀರವು ಅದರ ವಾಸಸ್ಥಾನ, ತಲೆಯು ಅದರ ವಿಶೇಷಸ್ಥಾನ, ಅನ್ನಪಾನಾದಿಗಳಿಂದ ಆಗುವ ಶಕ್ತಿಯು ಅದರ ಗೂಟ, ಅನ್ನವು ಅದರ ಹಗ್ಗ. ಈ ಪ್ರಾಣವನ್ನು ಅಕ್ಷಯಕ್ಕೆ ಕಾರಣವಾಗಿರುವ ಏಳು ದೇವತೆಗಳು ಸ್ತುತಿಸುತ್ತಿರುವರೆಂದು ಉಪಾಸಿಸಬೇಕು.
(3) ಬ್ರಹ್ಮನಿಗೆ ಎರಡು ರೂಪಗಳಿವೆ: ಒಂದು ರೂಪವು ಮೂರ್ತವೂ, ಮರ್ತ್ಯವೂ, ಪರಿಚ್ಛಿನ್ನವೂ, ಅಸಾಧಾರಣ ಧರ್ಮವುಳ್ಳದ್ದೂ ಆಗಿದ್ದರೆ ಇನ್ನೊಂದು ಅಮೂರ್ತವೂ, ಅಮೃತವೂ, ಅಪರಿಚ್ಛಿನ್ನವೂ, ಪರೋಕ್ತವಾಗಿ ಹೇಳುವುದಕ್ಕೆ ಯೋಗ್ಯವೂ ಆಗಿದೆ. “ನೇತಿ, ನೇತಿ” ಎಂಬ ಎರಡು ಪದಗಳು ಮೂರ್ತಾಮೂರ್ತಗಳಲ್ಲದೇ ಸಮಸ್ತ ವಿಶೇಷಣಗಳನ್ನು ನಿಷೇಧಿಸಿ ಬ್ರಹ್ಮದ ಸ್ವರೂಪವನ್ನು ನಿರೂಪಿಸುತ್ತವೆ.
(4) ಯಾಜ್ಞವಲ್ಕ್ಯ-ಮೈತ್ರೇಯೀ ಸಂವಾದ – ಬ್ರಹ್ಮಜ್ಞನಾದ ಯಾಜ್ಞವಲ್ಕ್ಯನಿಗೆ ಮೈತ್ರೇಯೀ ಮತ್ತು ಕಾತ್ಯಾಯನೀ ಎನ್ನುವ ಇಬ್ಬರು ಪತ್ನಿಯರಿದ್ದರು. ಸಂನ್ಯಾಸವನ್ನು ಸ್ವೀಕರಿಸಲು ಸಿದ್ಧನಾದ ಯಾಜ್ಞವಲ್ಕ್ಯನು ಹೊರಡುವುದಕ್ಕೆ ಮೊದಲು ತನ್ನ ಸ್ವತ್ತನ್ನು ಪತ್ನಿಯರಿಬ್ಬರಿಗೂ ಹಂಚಲು ಬಯಸಿದಾಗ ಮೈತ್ರೇಯಿಯು “ಧನಪರಿಪೂರ್ಣಳಾದ ಈ ಪೃಥ್ವಿಯೆಲ್ಲ ನನಗಿದ್ದರೆ ಅದರ ಮೂಲಕ ನಾನು ಅಮೃತಳಾಗಬಲ್ಲೆನೇ?” ಎಂದು ಪ್ರಶ್ನಿಸುತ್ತಾಳೆ. ಯಾಜ್ಞವಲ್ಕ್ಯನು ಧನಸಾಧ್ಯವಾದ ಅಗ್ನಿಹೋತ್ರಾದಿಕರ್ಮಗಳಿಂದ ಅಮೃತತ್ವವು ಸಾಧ್ಯವೇ ಇಲ್ಲವೆಂದು ಹೇಳಿದಾಗ, ಧನವನ್ನು ನಿರಾಕರಿಸಿ ತನಗೆ ಅಮೃತತ್ತ್ವಸಾಧನವನ್ನು ಉಪದೇಶಿಸಬೇಕೆಂದು ಕೇಳಿಕೊಂಡಾಗ ಅವನು ಮೈತ್ರೇಯಿಗೆ ಆತ್ಮನ ವೈಭವವನ್ನು ವರ್ಣಿಸುತ್ತಾನೆ. ಅವಿದ್ಯಾರೋಪಿತವಾದ ಭಿನ್ನಜ್ಞಾನವು ನಾಶವಾದರೆ ವಿಜ್ಞಾನಘನವಾದ ಬ್ರಹ್ಮಸ್ವರೂಪವು ವ್ಯಕ್ತವಾಗುತ್ತದೆ. ಎಲ್ಲಿ ದ್ವೈತವಿದೆಯೋ ಅಲ್ಲಿ ಮನುಷ್ಯನು ನೋಡುತ್ತಾನೆ, ಕೇಳುತ್ತಾನೆ, ಮಾತನಾಡುತ್ತಾನೆ, ಅಥವಾ ಆತ್ಮನಿಗಿಂತ ಬೇರೆ ವಸ್ತುವಿದೆಯೆಂದು ಭಾವಿಸುತ್ತಾನೆ. ಆದರೆ ಆತ್ಮಜ್ಞಾನಿಗೆ ಕರಣ-ಕ್ರಿಯಾ-ಕಾರಕಗಳಾಗಲೀ ಜ್ಞಾತೃ-ಜ್ಞೇಯ-ಜ್ಞಾನಗಳಾಗಲೀ ಇರುವುದಿಲ್ಲ.
(5) ಐದನೆಯ ಬ್ರಾಹ್ಮಣದ ಪ್ರಕಾರ ಜಗತ್ತೆಲ್ಲವೂ ಒಂದಕ್ಕೊಂದು ಉಪಕಾರ್ಯ-ಉಪಕಾರಕವಾಗಿರುವುದರಿಂದ ಆತ್ಮನಿಂದಲೇ ಹುಟ್ಟಿ ಆತ್ನನನ್ನೇ ಸಾಮಾನ್ಯವಾಗಿ ಹೊಂದಿ ಆತ್ಮನಲ್ಲಿಯೇ ಲಯಗೊಳ್ಳುತ್ತವೆ. ಅರೆಕಾಲುಗಳು ಚಕ್ರನಾಭಿ ಮತ್ತು ಹೊರವಲಯಕ್ಕೆ ಹೇಗೆ ಹೊಂದಿಕೊಂಡಿರುತ್ತವೆಯೋ ಹಾಗೆ ಪರಮಾತ್ಮನಲ್ಲಿ ಎಲ್ಲ ಪ್ರಾಣಿಗಳೂ, ಎಲ್ಲ ದೇವತೆಗಳೂ, ಎಲ್ಲ ಲೋಕಗಳೂ, ಎಲ್ಲ ಜೀವಾತ್ಮರೂ ಸಮರ್ಪಿತರಾಗಿದ್ದಾರೆ. ಪರಮಾತ್ಮನು ಅದ್ವಯನಾಗಿದ್ದರೂ ಮಾಯೆಯಿಂದ ಬಹುರೂಪನಾಗಿ ತೋರುತ್ತಾನೆ.
(6) ಆರನೆಯ ಬ್ರಾಹ್ಮಣಕ್ಕೆ ವಂಶಬ್ರಾಹ್ಮಣವೆಂದು ಹೆಸರು. ಬ್ರಹ್ಮವಿದ್ಯೆಯ ಆಚಾರ್ಯವಂಶವನ್ನು ಇಲ್ಲಿ ವರ್ಣಿಸಲಾಗಿದೆ.
ಅಧ್ಯಾಯ 3: ಯಾಜ್ಞವಲ್ಕೀಯಕಾಂಡದ ಮೊದಲನೇ ಈ ಅಧ್ಯಾಯದಲ್ಲಿ 9 ಬ್ರಾಹ್ಮಣಗಳಿವೆ.
(1) ಆಶ್ವಲಬ್ರಾಹ್ಮಣ – ಜನಕ ವೈದೇಹನು ಬಹುದಕ್ಷಿಣವೆಂಬ ಯಾಗವನ್ನು ಮಾಡಿದನು. ಅಲ್ಲಿಗೆ ಬಂದಿದ್ದ ಕುರು-ಪಾಂಚಾಲದೇಶದ ಬ್ರಾಹ್ಮಣರಲ್ಲಿ ಬ್ರಹ್ಮಿಷ್ಠರು ಯಾರೆಂದು ತಿಳಿಯಬೇಕೆಂದು ಜನಕನು ಪ್ರತಿ ಕೊಂಬಿಗೂ ಹತ್ತು ಹತ್ತು ಚಿನ್ನದ ಪಾದಗಳನ್ನು ಕಟ್ಟಿದ ಒಂದು ಸಾವಿರ ಗೋವುಗಳನ್ನು ಕೊಟ್ಟಿಗೆಯಲ್ಲಿ ನಿಲ್ಲಿಸಿ, ಬ್ರಹ್ಮಿಷ್ಠನಾದವನು ಇವುಗಳನ್ನೆಲ್ಲ ಹೊಡೆದುಕೊಂಡು ಹೋಗಬಹುದು ಎಂದನು. ಅಲ್ಲಿದ್ದ ಯಾಜ್ಞವಲ್ಕ್ಯನು ಆ ಎಲ್ಲ ಗೋವುಗಳನ್ನೂ ತನ್ನ ಮನೆಗೆ ಹೊಡೆದು-ಕೊಂಡು ಹೋಗೆಂದು ಶಿಷ್ಯ ಸೋಮಶ್ರವನಿಗೆ ಆಜ್ಞಾಪಿಸಿದನು. ಇದ-ರಿಂದ ಕುಪಿತರಾದ ಬ್ರಾಹ್ಮಣರು ಯಾಜ್ಞವಲ್ಕ್ಯನ ಮೇಲೆ ಪ್ರಶ್ನೆಗಳ ಮಳೆಗರೆದರು. ಆಶ್ವಲನೆನ್ನುವವನು ಮುಂದೆಬಂದು ಕೇಳಿದ ಪ್ರಶ್ನೆಗ-ಳಿಗಳಿಗೆಲ್ಲ ಯಾಜ್ಞವಲ್ಕ್ಯನು ಶೀಘ್ರವಾಗಿ ಉತ್ತರಿಸಲು, ಎದುರಾಳಿಯ ಪ್ರತಿಭೆಯನ್ನು ಒಪ್ಪಿಕೊಂಡು ಆಶ್ವಲನು ಸುಮ್ಮನಾದನು.
(2) ಎರಡನೆಯ ಬ್ರಾಹ್ಮಣದಲ್ಲಿ ಜಾರತ್ಕಾರವ ಆರ್ತಭಾಗನು ಯಾಜ್ಞವಲ್ಕ್ಯನಿಂದ ತನ್ನ ಆರು ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುತ್ತಾನೆ. ಅವನ ಆರನೆಯ ಪ್ರಶ್ನೆಯು ಹೀಗಿತ್ತು: ಸಮ್ಯಗ್ದರ್ಶಿಯಲ್ಲದ ಮನುಷ್ಯನು ಸತ್ತಮೇಲೆ ಎಲ್ಲಿ ಹೋಗುತ್ತಾನೆ? ಯಾಜ್ಞವಲ್ಕ್ಯನು ಇದು ಜನಸಂದಣಿಯಲ್ಲಿ ನಿರ್ಣಯಿಸಬಹುದಾದ ಪ್ರಶ್ನೆಯಲ್ಲವೆಂದೂ ಏಕಾಂತದಲ್ಲಿ ನಿರ್ಣಯಿಸಬೇಕೆಂದೂ ಹೇಳಲು ಅವರಿಬ್ಬರೂ ನಿರ್ಜನ ಪ್ರದೇಶವೊಂದಕ್ಕೆ ಹೋಗಿ ಚರ್ಚಿಸಿ ಕರ್ಮವೊಂದೇ ಮನುಷ್ಯನ ಪುನರ್ಜನ್ಮಕ್ಕೆ ಕಾರಣವೆಂದು ತೀರ್ಮಾನಿಸುತ್ತಾರೆ. ಪುಣ್ಯಕರ್ಮದಿಂದ ಮನುಷ್ಯನು ಪುಣ್ಯನಾಗುತ್ತಾನೆ. ಪಾಪಕರ್ಮ-ದಿಂದ ಪಾಪಿಯಾಗುತ್ತಾನೆ.
(3) ಮೂರನೆಯದಕ್ಕೆ ಭುಜ್ಯುಬ್ರಾಹ್ಮಣವೆಂದು ಹೆಸರು. ಕರ್ಮಫಲವು ಎಷ್ಟೇ ಒಳ್ಳೆಯದಾಗಿದ್ದರೂ ಸಂಸಾರದಲ್ಲಿಯೇ ಅಂತರ್ಗತವಾಗಿದೆ ಮತ್ತು ಉಪಾಸನಾಸಹಿತವಾದ ಕರ್ಮವು ಮೋಕ್ಷಪ್ರದವಲ್ಲ ಎಂದು ಇದು ಪ್ರತಿಪಾದಿಸುತ್ತದೆ.
(4) ನಾಲ್ಕನೆಯದಕ್ಕೆ ಉಷಸ್ತಬ್ರಾಹ್ಮಣವೆಂದು ಹೆಸರು. ವಿಷಯೇಂದ್ರಿಯಗಳಿಂದ ಗ್ರಸ್ತನಾಗಿ ಸಂಚರಿಸುವ ಆತ್ಮನು ಇದ್ದಾನೆಯೋ ಅಥವಾ ಇಲ್ಲವೋ? ಇರುವುದಾದರೆ ಅವನ ಸ್ವರೂಪವೇನು? ಎಂಬ ಉಷಸ್ತ ಚಾಕ್ರಾಯಣನ ಪ್ರಶ್ನೆಗಳಿಗೆ ಯಾಜ್ಞವಲ್ಕ್ಯನು ಉತ್ತರಿಸುತ್ತಾ ಪ್ರಾಣಾಪಾನವ್ಯಾನಗಳ ಮೂಲಕ ಶರೀರದಲ್ಲಿ ಕೆಲಸಮಾಡುವ ಆತ್ಮವು ನೋಡುವವನೂ, ಕೇಳುವವನೂ, ಮನನಮಾಡುವವನೂ, ಅರಿಯುವವನೂ ಆದುದರಿಂದ ಆತ್ಮವನ್ನು ವಿಷಯವಸ್ತುವಿನಂತೆ ಸಾಕ್ಷಾತ್ತಾಗಿ ನೋಡಲು, ಕೇಳಲು, ಭಾವಿಸಲು ಅಥವಾ ಅರಿತುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾನೆ.
(5) ಐದನೆಯದ್ದು ಕಹೋಲಬ್ರಾಹ್ಮಣ. ಬಂಧನದಿಂದ ಮೋಕ್ಷವನ್ನು ಪಡೆಯಲು ಸಾಧನವಾದ ಸಂನ್ಯಾಸರಹಿತವಾದ ಆತ್ಮಜ್ಞಾನವನ್ನು ಇಲ್ಲಿ ಹೇಳಿದೆ. ಹಸಿವು-ಬಾಯಾರಿಕೆಗಳನ್ನೂ, ಶೋಕ-ಮೋಹಗಳನ್ನೂ, ಮುಪ್ಪು-ಮರಣಗಳನ್ನೂ ದಾಟಿರುವ ಆತ್ಮನನ್ನು ಅರಿತು ಪುತ್ರ-ವಿತ್ತ-ಲೋಕಗಳಲ್ಲಿರುವ ಆಶೆಯನ್ನು ಬಿಟ್ಟು ಬ್ರಾಹ್ಮಣರು ಭಿಕ್ಷಾಟನೆ ಮಾಡುತ್ತಾರೆ. ಬ್ರಹ್ಮಜ್ಞಾನಿಯು ಹೇಗೆ ನಡೆದುಕೊಂಡರೂ ಬ್ರಹ್ಮಜ್ಞಾನಿಯೇ. ಬ್ರಹ್ಮನಿಷ್ಠೆಗೆ ನಾಶವಿಲ್ಲ.
(6) ಗಾರ್ಗೀಬ್ರಾಹ್ಮಣವೆಂಬ ಹೆಸರಿರುವ ಈ ಆರನೆಯ ಬ್ರಾಹ್ಮಣದಲ್ಲಿ ಗಾರ್ಗಿಯು ಯಾಜ್ಞವಲ್ಕ್ಯನಲ್ಲಿ ಪಂಚಭೂತಗಳ ಮತ್ತು ವಿವಿಧ ಲೋಕಗಳ ಸೂಕ್ಷ್ಮ-ಸೂಕ್ಷ್ಮತರ ತಾರತಮ್ಯವನ್ನು ಪ್ರಶ್ನಿಸುತ್ತಾಳೆ. ಕೊನೆಗೆ ಬ್ರಹ್ಮಲೋಕವು ಯಾವುದರಿಂದ ಆವೃತವಾಗಿದೆ ಎಂದು ಕೇಳಲು ಯಾಜ್ಞವಲ್ಕ್ಯನು ಬ್ರಹ್ಮಸ್ವರೂಪವನ್ನು ಅನುಮಾನ-ಪ್ರಮಾಣಗಳಿಂದ ಅರಿಯಲಾಗುವುದಿಲ್ಲ; ಶಾಸ್ತ್ರಾಚಾರ್ಯರಿಂದಲೇ ಅರಿತುಕೊಳ್ಳಬೇಕು ಎನ್ನುತ್ತಾನೆ.
(7) ಬ್ರಹ್ಮಲೋಕದ ಅಂತರತಮ ಸೂತ್ರವನ್ನು ಹೇಳಲು ಏಳನೆಯ ಅಂತರ್ಯಾಮೀ ಬ್ರಾಹ್ಮಣವಿದೆ. ಯಾವುದರಿಂದ ಇಹಪರಲೋಕಗಳೂ, ಎಲ್ಲ ಪ್ರಾಣಿಗಳೂ ಪೋಣಿಸಲ್ಪಟ್ಟಿವೆಯೋ ಆ ಸೂತ್ರವು ಯಾವುದು? ಯಾವನು ಒಳಗಿದ್ದುಕೊಂಡು ಇಹಪರಲೋಕಗಳನ್ನೂ ಸರ್ವಪ್ರಾಣಿಗಳನ್ನೂ ನಿಯಮಿಸುತ್ತಾನೆಯೋ ಆ ಅಂತರ್ಯಾಮಿಯು ಯಾರು? ಇದು ಉದ್ದಾಲಕ ಆರುಣಿಯ ಪ್ರಶ್ನೆ. ಯಾಜ್ಞವಲ್ಕ್ಯನ ಉತ್ತರವು ಈ ರೀತಿ ಇದೆ: ವಾಯುವೇ ಆ ಸೂತ್ರವು. ಈ ಪೃಥ್ವಿ, ನೀರು, ಅಗ್ನಿ, ಅಂತರಿಕ್ಷ, ವಾಯು, ದ್ಯುಲೋಕ, ಆದಿತ್ಯ, ದಿಕ್ಕುಗಳು, ಚಂದ್ರ-ನಕ್ಷತ್ರಗಳು, ಆಕಾಶ, ತಮಸ್ಸು, ತೇಜಸ್ಸು, ಸರ್ವಪ್ರಾಣಿಗಳು, ವಾಗಾದಿ ಇಂದ್ರಿಯಗಳು, ಮನಸ್ಸು, ಬುದ್ಧಿ, ರೇತಸ್ಸು – ಇವುಗಳ ಒಳಗಿದ್ದುಕೊಂಡು ನಿಯಮಿಸುವವನು ಅಂತರ್ಯಾಮಿಯು. ಅವನು ಈ ಭೂತ-ಭೌತಿಕ ವಸ್ತುಗಳ ಒಳಗಿದ್ದುಕೊಂಡು ಒಳಗಿನಿಂದಲೇ ನಿಯಂತ್ರಿಸುತ್ತಿದ್ದರೂ, ಅವುಗಳ ಆತ್ಮನಾಗಿದ್ದರೂ, ಇವನ ಶರೀರವಾದ ಈ ವಸ್ತುಗಳು ಇವನನ್ನು ಅರಿಯವು. ಇವನು ಸಾಕ್ಷಿ. ಆದರೆ ಇವನನ್ನು ನೋಡಲಾಗುವುದಿಲ್ಲ. ಇವನು ಶ್ರೋತೃ. ಆದರೆ ಇವನನ್ನು ಕೇಳಲಾಗುವುದಿಲ್ಲ. ಇವನು ಮಂತ್ರ. ಆದರೆ ಇವನು ಮನಸ್ಸಿಗೆ ವಿಷಯನಲ್ಲ. ಇವನು ಜ್ಞಾತೃ. ಆದರೆ ಇವನನ್ನು ತಿಳಿಯಲಾಗುವುದಿಲ್ಲ. ಇವನಿಗಿಂತ ಬೇರೆ ಯಾವ ಸಾಕ್ಷಿಯಾಗಲೀ, ಶ್ರೋತೃವಾಗಲೀ, ಮಂತ್ರವಾಗಲೀ, ಜ್ಞಾತೃವಾಗಲೀ ಇಲ್ಲ. ಇವನೇ ಎಲ್ಲರ ಅಮೃತನಾದ ಆತ್ಮನು. ಇವನಿಗಿಂತ ಭಿನ್ನವಾದುದೆಲ್ಲ ನಶ್ವರವು.
(8) ಎಂಟನೆಯ ಬ್ರಾಹ್ಮಣದಲ್ಲಿ ಗಾರ್ಗಿಯ ಇನ್ನೆರಡು ಪ್ರಶ್ನೆಗಳು ಬರುತ್ತವೆ. ಮೊದಲನೆಯ ಪ್ರಶ್ನೆಯಾದ ವ್ಯಕ್ತವಾದ ಜಗತ್ತು ಯಾವುದರಿಂದ ವ್ಯಾಪ್ತವಾಗಿದೆ ಎನ್ನುವುದಕ್ಕೆ ಆಕಾಶ ಎಂದೂ ಆಕಾಶವು ಯಾವುದರಿಂದ ವ್ಯಾಪ್ತವಾಗಿದೆ ಎನ್ನುವುದಕ್ಕೆ ಅಕ್ಷರವೆಂದೂ ಯಾಜ್ಞವಲ್ಕ್ಯನು ಉತ್ತರಿಸುತ್ತಾನೆ. ಈ ಅಕ್ಷರವು ಅಸ್ಥೂಲ, ಅನಣು, ಅಹ್ರಸ್ವ, ಅದೀರ್ಘ, ಇತ್ಯಾದಿ. ಅದಕ್ಕೆ ಇಂದ್ರಿಯಗಳಾಗಲೀ ಪ್ರಾಣಗಳಾಗಲೀ ಇಲ್ಲ. ಅದಕ್ಕೆ ಒಳಗಿಲ್ಲ ಮತ್ತು ಹೊರಗಿಲ್ಲ. ಅದು ಯಾವುದನ್ನೂ ತಿನ್ನುವುದಿಲ್ಲ. ಅದನ್ನು ಯಾವುದೂ ತಿನ್ನುವುದಿಲ್ಲ. ಈ ಅಕ್ಷರದ ಶಾಸನದಿಂದಲೇ ಸೂರ್ಯ-ಚಂದ್ರರು ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲಿಸಲ್ಪಟ್ಟಿದ್ದಾರೆ. ದ್ಯುಲೋಕಪೃಥ್ವಿಗಳೂ, ನಿಮಿಷಮುಹೂರ್ತಾದಿ ಕಾಲಮಾನಗಳೂ ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲಿಸಲ್ಪಟ್ಟಿವೆ ಮತ್ತು ನದಿಗಳೂ ಆಯಾ ದಿಕ್ಕುಗಳಲ್ಲಿಯೇ ಹರಿಯುತ್ತಿರುತ್ತವೆ. ಈ ಅಕ್ಷರವನ್ನು ತಿಳಿದುಕೊಳ್ಳದೇ ಅನೇಕ ಸಹಸ್ರ ವರ್ಷಗಳವರೆಗೆ ಹೋಮ-ಯಾಗ-ತಪಸ್ಸುಗಳನ್ನು ಮಾಡಿದರೂ ಅವುಗಳೆಲ್ಲ ನಶ್ವರವೇ ಆಗುತ್ತವೆ. ಈ ಅಕ್ಷರವನ್ನು ತಿಳಿದುಕೊಳ್ಳದೇ ಈ ಲೋಕವನ್ನು ಬಿಡುವವನು ಕೃಪಣನು. ಆದರೆ ಈ ಅಕ್ಷರವನ್ನು ತಿಳಿದುಕೊಂಡು ಈ ಲೋಕವನ್ನು ಬಿಡುವವನು ಬ್ರಹ್ಮವಿದನು.
(9) ಈ ಶಾಕಲ್ಯಬ್ರಾಹ್ಮಣವು ದೇವತೆಗಳ ವೃದ್ಧಿಕ್ಷಯಗಳ ಮೂಲಕ ಆತ್ಮನ ಸಾಕ್ಷಾದಪರೋಕ್ಷತ್ವವನ್ನು ನಿರ್ಧರಿಸುತ್ತದೆ. ವಿದಗ್ಧ ಶಾಕಲ್ಯನು ದೇವತೆಗಳು ಎಷ್ಟೆಂದು ಕೇಳಲು ಯಾಜ್ಞವಲ್ಕ್ಯನು – ದೇವತೆಗಳು ಅಸಂಖ್ಯಾತರಾಗಿದ್ದರೂ ಅವರೆಲ್ಲ ಒಂದೇ ದೇವತೆಯ ಅಂದರೆ ಹಿರಣ್ಯಗರ್ಭನ ಅಥವಾ ಪ್ರಾಣನ ವಿಭೂತಿಗಳು ಎಂದು ಹೇಳುತ್ತಾನೆ. ಏಕನೂ ಅನಂತನೂ ಆಗಿರುವ ಹಿರಣ್ಯಗರ್ಭನೇ ಅನಂತಸಂಖ್ಯಾತನಾಗಿ ವಿಸ್ತರಿಸುತ್ತಾನೆ. ಒಂದೇ ದೇವತೆಯಲ್ಲಿ ಉಂಟಾಗಿರುವ ನಾಮರೂಪಾದಿ ಭೇದಕ್ಕೆ ಉಪಾಸಕರ ಭೇದವೇ ಕಾರಣ.
ಅಧ್ಯಾಯ 4: ಯಾಜ್ಞವಲ್ಕೀಯಕಾಂಡದ ಎರಡನೇ ಈ ಅಧ್ಯಾಯದಲ್ಲಿ 6 ಬ್ರಾಹ್ಮಣಗಳಿವೆ.
(1) ಯಾಜ್ಞವಲ್ಕ್ಯನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜನಕ ವೈದೇಹನು ತಾನು ಹಿಂದೆ ಆರು ಆಚಾರ್ಯರಿಂದ ತಿಳಿದುಕೊಂಡ ಬ್ರಹ್ಮದ ಕೆಲವು ಲಕ್ಷಣಗಳನ್ನು ಇಲ್ಲಿ ಹೇಳುತ್ತಾನೆ: ವಾಕ್ಕು, ಪ್ರಾಣ, ಕಣ್ಣು, ಕಿವಿ, ಮನಸ್ಸು, ಬುದ್ಧಿ ಇವುಗಳ ಅಧಿಷ್ಠಾತೃ ದೇವತೆಗಳಾದ ಅಗ್ನಿ, ವಾಯು, ಆದಿತ್ಯ, ದಿಗ್ದೇವತೆ, ಚಂದ್ರ ಮತ್ತು ಪ್ರಜಾಪತಿ (ಹಿರಣಗರ್ಭ) ಇವರು ಒಬ್ಬೊಬ್ಬರೂ ಬ್ರಹ್ಮವೇ. ಈ ಬ್ರಹ್ಮಗಳಿಗೆಲ್ಲ ಒಂದೇ ಕಾಲಿದೆಯೆಂದು ಯಾಜ್ಞವಲ್ಕ್ಯನು ತಿಳಿಸುತ್ತಾನೆ.
(2) ಇದರಲ್ಲಿ ಯಾಜ್ಞವಲ್ಕ್ಯನು ಆತ್ಮನ ಅವಸ್ಥಾತ್ರಯವನ್ನು ಉಪದೇಶಿಸುತ್ತಾನೆ: ಜಾಗ್ರತ್-ಸ್ವಪ್ನ-ಸುಷುಪ್ತಿಗಳಲ್ಲಿ ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳೊಂದಿಗೆ ತಾದಾತ್ಮ್ಯವನ್ನು ಪಡೆದಿರುವ ಆತ್ಮನಿಗೆ ವಿಶ್ವ (ಅಥವಾ ವೈಶ್ವಾನರ), ತೈಜಸ, ಮತ್ತು ಪ್ರಜ್ಞ ಎಂಬ ಹೆಸರುಗಳಿವೆ. ಸರ್ವಾತ್ಮನಾದ ಪ್ರಾಜ್ಞನಲ್ಲಿ ಎಲ್ಲವನ್ನೂ ಲಯಗೊಳಿಸಿದ ಮೇಲೆ ಯಾವ ವಿಶೇಷವೂ ಉಳಿಯುವುದಿಲ್ಲ. ಈ ಪ್ರಾಜ್ಞನು ಅಗ್ರಾಹ್ಯನು, ಅಕ್ಷಯನು, ಅಸಂಗನು ಮತ್ತು ಬಂಧರಹಿತನು.
(3) ಜ್ಯೋತಿರ್ಬ್ರಾಹ್ಮಣವೆನ್ನುವ ಈ ಮೂರನೆಯ ಬ್ರಾಹ್ಮಣವು ಅತಿ ದೊಡ್ಡದು. ಇದರಲ್ಲಿ ಜನಕನ ಮರುಪ್ರಶ್ನೆಗಳಿಗೆ ಉತ್ತರವಾಗಿ ಯಾಜ್ಞವಲ್ಕ್ಯನು ಆತ್ಮನ ಅವಸ್ಥಾತ್ರಯವನ್ನು ವಿಸ್ತಾರವಾಗಿ ವರ್ಣಿಸುತ್ತಾನೆ. ಒಂದು ದೊಡ್ಡ ಮೀನು ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜುವ ಹಾಗೆ ಆತ್ಮನು ಬುದ್ಧಿರೂಪವನ್ನು ತಾಳಿ ಸ್ವಪ್ನದಿಂದ ಜಾಗ್ರತ್ತಿಗೂ ಜಾಗ್ರತ್ತಿನಿಂದ ಸ್ವಪ್ನಕ್ಕೂ ಸಂಚರಿಸುತ್ತಿರುತ್ತಾನೆ. ಸ್ವಚ್ಛಗುಣವುಳ್ಳ ಬುದ್ಧಿಯು ಆತ್ಮನಿಗೆ ಅತ್ಯಂತ ಸಮೀಪದಲ್ಲಿರುವುದರಿಂದ ಆತ್ಮ ಚೈತನ್ಯವನ್ನು ಅದು ಪ್ರತಿಬಿಂಬಿಸುತ್ತದೆ. ಸ್ವಚ್ಛ ಸ್ಪಟಿಕವು ದೇಪದಿಂದ ಪ್ರಕಾಶಿಸುವಂತೆ ಸ್ವಾಭಾವಿಕವಾಗಿ ಜಡವಾಗಿರುವ ಬುದ್ಧಿಯು ಆತ್ಮದ ಬೆಳಕಿನಿಂದ ಪ್ರಕಾಶಿಸುವಂತೆ ತೋರುತ್ತದೆ. ಆದರೆ ನಿಜವಾಗಿ ಆತ್ಮನು ಮಾತ್ರ ಸ್ವಯಂಜ್ಯೋತಿಯು. ಇವನ ಜ್ಯೋತಿಯಿಂದಲೇ ಸೂರ್ಯಚಂದ್ರಾದಿಗಳೆಲ್ಲ ಪ್ರಕಾಶಿಸುತ್ತಾರೆ.
(4) ಶಾರೀರಿಕಬ್ರಾಹ್ಮಣವೆನ್ನುವ ಈ ನಾಲ್ಕನೇ ಬ್ರಾಹ್ಮಣದಲ್ಲಿ ಯಾವಾಗ ಮತ್ತು ಹೇಗೆ ಜೀವಾತ್ಮನು ಅಗಂಗಳಿಂದ ಕಳಚಿಕೊಳ್ಳುತ್ತಾನೆ ಎನ್ನುವುದನ್ನು ವಿಸ್ತಾರವಾಗಿ ಹೇಳಿದೆ. ದೌರ್ಬಲ್ಯವನ್ನು ಹೊಂದಿ ಮೋಹವನ್ನು ಪಡೆದಂತಾಗುವ ಮರಣಕಾಲದಲ್ಲಿ ಜೀವನು ಇಂದ್ರಿಯಗಳನ್ನು ಉಪಸಂಹರಿಸಿಕೊಂಡು ಹೃದಯವನ್ನು ಸೇರುತ್ತಾನೆ. ಆಗ ಇಂದ್ರಿಯಗಳ ಅಧಿಷ್ಠಾತೃ ದೇವತೆಗಳ ಅಂಶಗಳು ತಮ್ಮ ತಮ್ಮ ಕಾರಣಗಳಿಗೆ ಹಿಂದಿರುಗುತ್ತವೆ. ಮುಂದಿನ ಜನ್ಮದ ಶರೀರದ “ವಾಸನೆಗಳನ್ನು” ಅರಿತುಕೊಂಡು ಜೀವನು ಶರೀರದ ಯಾವುದಾದರೂ ಒಂದು ಅಂಗದ ಮೂಲಕ ನಿಷ್ಕ್ರಮಿಸುತ್ತಾನೆ. ಉಪಾಸನೆ, ಕರ್ಮ ಮತ್ತು ಹಿಂದಿನ ಕರ್ಮಫಲಾನುಭವದ ವಾಸನೆ ಇವು ಜೀವವನ್ನು ಅನುಸರಿಸುತ್ತವೆ. ತನ್ನ ಕರ್ಮಕ್ಕೆ ಅನುಗುಣವಾಗಿ ಜೀವನು ಮತ್ತೊಂದು ಹೊಸ ಶರೀರವನ್ನು ಧರಿಸುತ್ತಾನೆ. ಕಾಮದಿಂದ ಉತ್ಕ್ರಾಂತಿಯೂ ಅಕಾಮದಿಂದ ಅನುತ್ಕ್ರಾಂತಿಯೂ ಆಗುತ್ತವೆ. ಅಕಾಮಿಯೂ, ನಿಷ್ಕಾಮಿಯೂ, ಆಪ್ತಕಾಮಿಯೂ, ಆತ್ಮಕಾಮಿಯೂ ಆದವನ ಇಂದ್ರಿಯಗಳು ಉತ್ಕ್ರಮಿಸುವುದಿಲ್ಲ; ಅಂಥವನು ಬ್ರಹ್ಮವೇ ಆಗಿ ಬ್ರಹ್ಮದಲ್ಲಿ ಲೀನನಾಗುತ್ತಾನೆ. ಹೃದಯದಲ್ಲಿರುವ ಕಾಮಗಳೆಲ್ಲ ಬಿಟ್ಟುಹೋದಾಗ ಮರ್ತ್ಯನು ಅಮೃತನಾಗುತ್ತಾನೆ. ಜಡವಾದ ಹಾವಿದ ಪೊರೆಯಂತೆ ಬ್ರಹ್ಮಜ್ಞಾನಿಯು ಅಚೇತನವಾದ ಶರೀರವನ್ನು ಒಗೆಯುತ್ತಾನೆ. ಸಂಸಾರದಲ್ಲಿರುವಾಗಲೇ ಬ್ರಹ್ಮವನ್ನು ಅರಿತುಕೊಳ್ಳಬೇಕು. ಬ್ರಹ್ಮದಲ್ಲಿ ಸ್ವಲ್ಪವೂ ನಾನಾತ್ವವಿಲ್ಲ. ಅದರಲ್ಲಿ ನಾನಾತ್ವವನ್ನು ನೋಡುವವನು ಮೃತ್ಯುವಿನಿಂದ ಮೃತ್ಯುವಿಗೆ ಹೋಗುತ್ತಾನೆ.
(5) ಮಧುಕಾಂಡದ ನಾಲ್ಕನೇ ಬ್ರಾಹ್ಮಣವಾದ ಮೈತ್ರೇಯೀ ಬ್ರಾಹ್ಮಣವು ಇಲ್ಲಿ ಮತ್ತೊಮ್ಮೆ ಬಂದಿದೆ.
(6) ವಂಶಬ್ರಾಹ್ಮಣ ಎನ್ನುವ ಈ ಆರನೆಯ ಬ್ರಾಹ್ಮಣವು ಯಾಜ್ಞವಲ್ಕೀಯ ಕಾಂಡದ ಆಚಾರ್ಯರ ವಂಶವನ್ನು ತಿಳಿಸುತ್ತದೆ.
ಅಧ್ಯಾಯ 5: ಖಿಲಕಾಂಡದ ಮೊದಲನೇ ಈ ಅಧ್ಯಾಯದಲ್ಲಿ 15 ಬ್ರಾಹ್ಮಣಗಳಿವೆ. ಈ ಅಧ್ಯಾಯದಲ್ಲಿ ಸೋಪಾಧಿಕವೂ ಶಬ್ದಾರ್ಥ ವ್ಯವಹಾರಕ್ಕೆ ವಿಷಯವೂ ಆದ ಅದೇ ನಿರುಪಾಧಿಕ ಬ್ರಹ್ಮದ ಕೆಲವು ಉಪಾಸನೆಗಳ ವರ್ಣನೆಗಳಿವೆ.
(1) ಪ್ರಣವೋಪಾಸನೆಯನ್ನು ವರ್ಣಿಸುವ ಈ ಬ್ರಾಹ್ಮಣವು ಓಂಕಾರವು ಬ್ರಹ್ಮಕ್ಕೆ ಅತ್ಯಂತ ನಿಕಟವರ್ತಿಯಾದುದರಿಂದ ಬ್ರಹ್ಮಪ್ರಾಪ್ತಿಗೆ ಇದು ಶ್ರೇಷ್ಠಸಾಧನವು ಎನ್ನುವುದನ್ನು ಹೇಳುತ್ತದೆ.
(2) ಈ ಬ್ರಾಹ್ಮಣದಲ್ಲಿ ದಮ, ದಾನ, ದಯೆ – ಇವುಗಳನ್ನು ಉಪಾಸನೆಗೆ ಅಂಗವಾಗಿ ವಿಧಿಸಿದೆ.
(3) ಹೃದಯದಲಿರುವ ಬುದ್ಧಿಯನ್ನು ಈ ಬ್ರಾಹ್ಮಣವು ಸ್ತುತಿಸುತ್ತದೆ. ಬುದ್ಧಿಯು ನಾಮ-ರೂಪ-ಕರ್ಮಗಳ ಪ್ರತಿಷ್ಠೆಯೆಂದೂ ಸರ್ವಪ್ರಾಣಿಗಳ ಆತ್ಮವೆಂದೂ ಹೇಳಲ್ಪಟ್ಟಿದೆ.
(4) ಈ ಬ್ರಾಹ್ಮಣವು ಹೃದಯಬ್ರಹ್ಮವು ಸತ್ಯ ಎಂಬ ಉಪಾಸನೆಯನ್ನು ವಿಧಿಸುತ್ತದೆ.
(5) ಈ ಬ್ರಾಹ್ಮಣವು ಸತ್ಯಬ್ರಹ್ಮವನ್ನು ಸ್ತುತಿಸುತ್ತದೆ ಮತ್ತು ಅದರ ಶರೀರಭಾಗಗಳಲ್ಲಿ ಉಪಾಸನೆಯನ್ನು ಹೇಳುತ್ತದೆ. ಆದಿತ್ಯಮಂಡಲದಲ್ಲಿರುವ ಪುರುಷನೂ ಅಕ್ಷಿಪುರುಷನೆಂದು ಹೇಳಲ್ಪಡುವ ಜೀವಾತ್ಮನೂ ಸತ್ಯಬ್ರಹ್ಮದ ಆಕಾರವಿಶೇಷಗಳೇ. ಜೀವಾತ್ಮನು ಉತ್ಕ್ರಮಿಸುವ ಕಾಲದಲ್ಲಿ ಆದಿತ್ಯ ಪುರುಷನ ಅನುಗ್ರಹವಿದ್ದಾಗ ಆದಿತ್ಯಮಂಡಲವನ್ನು ರಶ್ಮಿಹೀನವಾದಂತೆ ನೋಡುತ್ತಾನೆ.
(6) ಈ ಬ್ರಾಹ್ಮಣವು ಬ್ರಹ್ಮಕ್ಕೆ ವಿಶಿಷ್ಠವಾಗಿರುವ ಮನಸ್ಸೆಂಬ ಉಪಾಧಿಯ ಉಪಾಸನೆಯನ್ನು ವಿಧಿಸುತ್ತದೆ.
(7) ವಿದ್ಯುತ್ತು ಬ್ರಹ್ಮವೆನ್ನುವ ಉಪಾಸನೆ
(8) ವಾಗ್ಧೇನು ಬ್ರಹ್ಮವೆನ್ನುವ ಉಪಾಸನೆ
(9) ಜಾಠರಾಗ್ನಿಯು ಬ್ರಹ್ಮವೆನ್ನುವ ಉಪಾಸನೆ
(10) ಈ ಎಲ್ಲ ಉಪಾಸನೆಗಳನ್ನೂ ಅರಿತುಕೊಂಡವನು ಬ್ರಹ್ಮಲೋಕದಲ್ಲಿ ಪ್ರಜಾಪತಿಯ ಜೀವಮಾನದವರೆಗೂ ಇರುತ್ತಾರೆ ಎನ್ನುವುದನ್ನು ಈ ಹತ್ತನೆಯ ಬ್ರಾಹ್ಮಣವು ಹೇಳುತ್ತದೆ.
(11) ಜ್ವರ ಮೊದಲಾದವುಗಳನ್ನು ಮತ್ತು ಶರೀರವನ್ನು ದಹನಕ್ರಿಯೆಗೆ ಒಯ್ಯುವುದನ್ನು ಮನುಷ್ಯನ ತಪಸ್ಸೆಂದು ಭಾವಿಸಬೇಕೆಂದು ಈ ಬ್ರಾಹ್ಮಣವು ಹೇಳುತ್ತದೆ.
(12) ಅನ್ನ-ಪ್ರಾಣಗಳನ್ನು ಬ್ರಹ್ಮವೆಂದು ಉಪಾಸಿಸಬೇಕೆಂದು ಈ ಬ್ರಾಹ್ಮಣವು ವಿಧಿಸುತ್ತದೆ.
(13) ಈ ಬ್ರಾಹ್ಮಣದಲ್ಲಿ ಪ್ರಾಣವನ್ನು ಉಕ್ಥ, ಯಜುಸ್ಸು, ಸಾಮ ಮತ್ತು ಕ್ಷತ್ರ ಎಂದು ಉಪಾಸನೆ ಮಾಡಬೇಕು ಎಂದಿದೆ.
(14) ಬ್ರಹ್ಮವು ಗಾಯತ್ರಿಯೆಂಬ ಉಪಾಧಿಯಿಂದ ವಿಶಿಷ್ಠವಾಗಿದೆಯೆಂದು ಅದರ ಉಪಾಸನೆಯನ್ನು ಈ ಬ್ರಾಹ್ಮಣವು ವಿದಿಸುತ್ತದೆ. ಗಾಯತ್ರಿಗೆ ನಾಲ್ಕು ಪಾದಗಳಿವೆ: ಭೂಮ್ಯಂತರಿಕ್ಷ ದ್ಯುಲೋಕಗಳು ಒಂದು ಪಾದ, ಋಗ್ಯಜುಸ್ಸಾಮವೇದಗಳು ಎರಡನೇ ಪಾದ, ಪ್ರಾಣಾಪಾನವ್ಯಾನಗಳು ಮೂರನೇ ಪಾದ, ಮತ್ತು ತುರೀಯವಾದ ರಜೋತೀತಪಾದವೇ ಆದಿತ್ಯನು. ಗಾಯತ್ರಿಯ ಮುಖವನ್ನು ಅರಿ-ತುಕೊಂಡು ಉಪಾಸನೆ ಮಾಡುವವನು ಪಾಪವನ್ನೆಲ್ಲ ದಹಿಸಿ ಶುದ್ಧನೂ, ಪವಿತ್ರನೂ, ಅಜರನೂ, ಅಮೃತನೂ ಆಗುತ್ತಾನೆ.
(15) ಹದಿನೈದನೇ ಮತ್ತು ಕೊನೆಯ ಈ ಬ್ರಾಹ್ಮಣದಲ್ಲಿ ಜ್ಞಾನಕರ್ಮ ಸಮುಚ್ಛಯವನ್ನು ಮಾಡಿರುವವನು ಮರಣಕಾಲದಲ್ಲಿ ಆದಿತ್ಯನಿಗೆ ಮಾಡುವ ಪ್ರಾರ್ಥನೆಯಿದೆ. ಈಶಾವಾಸ್ಯೋಪನಿಷತ್ತಿನಲ್ಲಿ ಇದೇ ಮಂತ್ರಗಳಿವೆ.
ಅಧ್ಯಾಯ 6: ಖಿಲಕಾಂಡದ ಎರಡನೇ ಈ ಅಧ್ಯಾಯಕ್ಕೆ ಐದು ಬ್ರಾಹ್ಮಣಗಳಿವೆ.
(1) ಪ್ರಾಣವೇ ಜ್ಯೇಷ್ಠವು ಮತ್ತು ಶ್ರೇಷ್ಠವು ಎನ್ನುವುದನ್ನು ಮೊದಲನೇ ಬ್ರಾಹ್ಮಣದಲ್ಲಿ ಒಂದು ರೂಪಕದ ಮೂಲಕ ಹೇಳಿದೆ: ಒಮ್ಮೆ ವಾಗಾದಿ ಕರಣಗಳು ತಮ್ಮ ಪ್ರಾಧಾನ್ಯವನ್ನು ಸ್ಥಾಪಿಸಲು ಕಲಹಮಾಡುತ್ತಾ ಬ್ರಹ್ಮನ ಬಳಿ ಹೋಗಿ “ನಮ್ಮಲ್ಲಿ ಶ್ರೇಷ್ಠವು ಯಾವುದು?” ಎಂದು ಪ್ರಶ್ನಿಸಿದವು. “ನಿಮ್ಮಲ್ಲಿ ಯಾವುದು ಉತ್ಕ್ರಮಿಸಿದರೆ ಈ ಶರೀರವು ಅಶುಚಿಯೆಂದು ಜನರು ಎಣಿಸುತ್ತಾರೋ ಅದೇ ನಿಮ್ಮಲ್ಲಿ ಶ್ರೇಷ್ಠವು” ಎಂದು ಬ್ರಹ್ಮನು ಹೇಳಿದನು. ಆಗ ವಾಕ್ಕೇ ಮೊದಲಾದ ಇಂದ್ರಿಯಗಳು ತಮ್ಮ ಶ್ರೇಷ್ಠತ್ವವನ್ನು ಸ್ಥಾಪಿಸಲು ಒಂದೊಂದಾಗಿ ಶರೀರದಿಂದ ಹೊರ ಹೊರಟವು; ಆದರೆ ಶರೀರವು ಮೊದಲಿಗಿಂತ ಹೆಚ್ಚಾಗಿ ಕೆಡಲಿಲ್ಲ. ಕೊನೆಗೆ ಮುಖ್ಯಪ್ರಾಣವು ಉತ್ಕ್ರಮಿಸಲು ಸಿದ್ಧವಾದಾಗ ಇಂದ್ರಿಯಗಳೆಲ್ಲ ತಮ್ಮ ತಮ್ಮ ಸ್ಥಾನಗಳಿಂದ ಕಿತ್ತುಹಾಕಲ್ಪಟ್ಟವು. ಆಗ ಇಂದ್ರಿಯಗಳು ಪ್ರಾಣವನ್ನು ಶರೀರದಿಂದ ಉತ್ಕ್ರಮಿಸಕೂಡದೆಂದು ಬೇಡಿಕೊಂಡು ಅದಕ್ಕೆ ಕಾಣಿಕೆಯನ್ನು ಉಪ್ಪಿಸಿದವು.
(2) ಪಂಚಾಗ್ನಿವಿದ್ಯೆಯನ್ನೂ ಸಂಸಾರಗತಿಗಳನ್ನೂ ಈ ಬ್ರಾಹ್ಮಣವು ವರ್ಣಿಸುತ್ತದೆ. ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಪ್ರದರ್ಶಿಸಲು ಪ್ರವಹಣ ರಾಜನ ಸಭೆಗೆ ಹೋಗುತ್ತಾನೆ. ರಾಜನು ಅವನಿಗೆ ಐದು ಪ್ರಶ್ನೆಗಳನ್ನು ಕೇಳುತ್ತಾನೆ: ಸತ್ತಮೇಲೆ ಮನುಷ್ಯರು ಬೇರೆ ಬೇರೆ ಮಾರ್ಗಗಳಲ್ಲಿ ಹೇಗೆ ಹೋಗುತ್ತಾರೆ? ಅವರು ಈ ಲೋಕಕ್ಕೆ ಹೇಗೆ ಹಿಂತಿರುಗುತ್ತಾರೆ? ಇಲ್ಲಿ ಅನೇಕ ಜನರು ಪುನಃ ಪುನಃ ಸಾಯುತ್ತಿದ್ದರೂ ಪರಲೋಕವು ಏಕೆ ತುಂಬಿಹೋಗುವುದಿಲ್ಲ? ಎಷ್ಟನೆಯ ಆಹುತಿಯನ್ನು ಕೊಟ್ಟಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತನಾಡುತ್ತದೆ? ದೇವಯಾನ-ಪಿತೃಯಾನಗಳನ್ನು ಹೇಗೆ ಪಡೆಯಬಹುದ್? ಶ್ವೇತಕೇತುವಿಗೆ ಈ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರವು ತಿಳಿದಿರಲಿಲ್ಲ. ಆಗ ರಾಜನು ಶ್ವೇತಕೇತುವಿಗೆ ಅಲ್ಲಿ ವಾಸಮಾಡಲು ಆಹ್ವಾನಿಸಿದನು; ಆದರೆ ಶ್ವೇತಕೇತುವು ಅದಕ್ಕೊಪ್ಪದೇ ತನ್ನ ತಂದೆ ಗೌತಮನಬಳಿ ಅವಸರದಿಂದ ಹಿಂದಿರುಗಿ, ರಾಜನು ಪ್ರಶ್ನಿಸಿದ ವಿಷಯಗಳನ್ನೆಲ್ಲ ತನಗೆ ಏಕೆ ಹೇಳಿಕೊಡಲಿಲ್ಲವೆಂದು ತಂದೆಯನ್ನು ಆಕ್ಷೇಪಿಸಿದನು. ತನಗೂ ಕೂಡ ಅದು ತಿಳಿದಿಲ್ಲವೆಂದೂ, ತಾವಿಬ್ಬರೂ ರಾಜನಲ್ಲಿಗೆ ಹೋಗಿ ವಿದ್ಯೆಯನ್ನು ಕಲಿಯಬೇಕೆಂದೂ ಗೌತಮನು ಮಗನಿಗೆ ಸೂಚಿಸಿದನು. ಆದರೆ ಶ್ವೇತಕೇತುವು ಅದಕ್ಕೆ ಒಪ್ಪಿಕೊಳ್ಳದೇ ಇರಲು ಗೌತಮನೊಬ್ಬನೇ ಹೋಗಿ ಈ ವಿದ್ಯೆಯನ್ನು ಉಪದೇಶಿಸಬೇಕೆಂದು ರಾಜನಲ್ಲಿ ಕೇಳಿಕೊಂಡನು. ಗೌತಮನ ವಿನಯಕ್ಕೆ ಮೆಚ್ಚಿ ರಾಜನು ಪಂಚಾಗ್ನಿವಿದ್ಯೆಯನ್ನು ಉಪದೇಶಿಸಿದನು: ದ್ಯುಲೋಕಾಗ್ನಿ, ಪರ್ಜನ್ಯಾಗ್ನಿ, ಈ ಲೋಕವೆಂಬ ಅಗ್ನಿ, ಪುರುಷಶರೀರವೆಂಬ ಅಗ್ನಿ ಮತ್ತು ಯೋಷಾಗ್ನಿ – ಈ ಪಂಚಾಗ್ನಿಗಳನ್ನು ಅರಿತುಕೊಂಡ ಗೃಹಸ್ಥನೂ, ಶ್ರದ್ಧೆಯಿಂದ ಹಿರಣ್ಯಗರ್ಭವನ್ನು ಉಪಾಸಿಸುವ ವಾನಪ್ರಸ್ಥನೂ ಮತ್ತು ಪರಿವ್ರಾಜಕನೂ ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಅವರಿಗೆ ಪುನರಾವೃತ್ತಿಯಿಲ್ಲ. ಇದು ದೇವಯಾನ ಅಥವಾ ಉತ್ತರಮಾರ್ಗ. ಆದರೆ ಯಜ್ಞ-ದಾನ-ತಪಸ್ಸುಗಳನ್ನು ಮಾಡುವ್ವರ ಪಿತೃಯಾನದ ಮೂಲಕ ಚಂದ್ರನನ್ನು ಸೇರುತ್ತಾರೆ. ಇವರು ಉತ್ತರಮಾರ್ಗಕ್ಕೆ ಹೋಗುವವರೆಗೂ ಸಂಸಾರದಲ್ಲಿ ಚಕ್ರದಂತೆ ಸುತ್ತುತ್ತಿರುತ್ತಾರೆ. ಈ ಎರಡು ಮಾರ್ಗಗಳನ್ನೂ ಅರಿಯದವರು ಕೀಟ-ಪತಂಗಾದಿಗಳಾಗಿ ಹುಟ್ಟುತ್ತಾರೆ.
(3) ಮೂರನೆಯ ಬ್ರಾಹ್ಮಣವು ಮಹತ್ವವನ್ನು ಹೊಂದಿ ಅದರ ಮೂಲಕ ಯಜ್ಞಾದಿ ಕರ್ಮಗಳಿಗೆ ಅವಶ್ಯಕವಾದ ಧನಸಂಪಾದನೆಯನ್ನು ಮಾಡಲು ಇರುವ ಶ್ರೀಮಂಥಕರ್ಮವನ್ನು ಹೇಳುತ್ತದೆ.
(4) ನಾಲ್ಕನೆಯ ಬ್ರಾಹ್ಮಣದಲ್ಲಿ ತನಗೂ ಮತ್ತು ತನ್ನ ತಂದೆಗೂ ಉತ್ತಮ ಲೋಕಗಳನ್ನು ಜಯಿಸಿಕೊಡಬಲ್ಲ ಯೋಗ್ಯ ಪುತ್ರನನ್ನು ಪಡೆಯುವ ಪುತ್ರಮಂಥನಕರ್ಮವನ್ನು ವಿವರಿಸಿದೆ.
(5) ಐದನೆಯದಾದ ವಂಶಬ್ರಾಹ್ಮಣವು ಇಡೀ ಉಪನಿಷತ್ತಿನ ಆಚಾರ್ಯವಂಶವನ್ನು ವರ್ಣಿಸುತ್ತದೆ.