ಶ್ರೀಪದ್ಮಮಹಾಪುರಾಣ
Contents
Toggleನಮಾಮಿ ಗೋವಿಂದಪದಾರವಿಂದಮ್ ಸದೇಂದಿರಾನಂದನಮುತ್ತಮಾಢ್ಯಮ್ । ಜಗಜ್ಜನಾನಾಂ ಹೃದಿ ಸನ್ನಿವಿಷ್ಟಮ್ ಮಹಾಜನೈಕಾಯನಮುತ್ತಮೋತ್ತಮಮ್ ।।
[ಪದ್ಮಮಹಾಪುರಾಣಂ (ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದ, 22 ಭಾಗಗಳಲ್ಲಿ), ಅನುವಾದಕ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 16, ಮೈಸೂರು, ಬೆಂಗಳೂರು ಪ್ರೆಸ್ ಬ್ರಾಂಚ್, 1944]
ಮತ್ಸ್ಯಪುರಾಣದ ಅಧ್ಯಾಯ 53ರ 14ನೇ ಶ್ಲೋಕದ ಪ್ರಕಾರ ಏತದೇವ ಯದಾ ಪದ್ಮಮಭೂದ್ಧೈರಣ್ಮಯಂ ಜಗತ್ । ತದ್ವೃತ್ತಾಂತಾಶ್ರಯಂ ತದ್ವ-ತ್ಪಾದ್ಮಮಿತ್ಯುಚ್ಯತೇ ಬುಧೈಃ । ಪಾದ್ಮಂ ತತ್ಪಂಚಪಂಚಾಶತ್ಸಹಸ್ರಾಣೀಹ ಕಥ್ಯತೇ ।। ಅರ್ಥಾತ್: ಪ್ರಪಂಚವು ಸುವರ್ಣಮಯ ಪದ್ಮರೂಪದಿಂದ ಹುಟ್ಟಿದ ವೃತ್ತಾಂತವನ್ನು ಕುರಿತ ಪುರಾಣಕ್ಕೆ ಪಾದ್ಮಪುರಾಣವೆಂದು ಹೆಸರು. ಅದರಲ್ಲಿ 55,000 ಶ್ಲೋಕಗಳಿವೆ. ನಾರದೀಯ ಪುರಾಣದಲ್ಲಿಯೂ ಪದ್ಮಪುರಾಣದ ಶ್ಲೋಕ ಸಂಖ್ಯೆ 550,00 ಎಂದಿದೆ (ಏತದ್ವೈ ಪಂಚಪಂ-ಚಾಶತ್ಸಹಸ್ರಂ ಪದ್ಮಸಂಜ್ಞಕಮ್ ।).
ನಾರದೀಯಪುರಾಣದ ಪ್ರಕಾರ ಪದ್ಮಪುರಾಣದಲ್ಲಿ ಐದು ಖಂಡಗಳಿವೆ – ಯಥಾ ಪಂಚೇಂದ್ರಿಯಃ ಸರ್ವಃ ಶರೀರೀತಿ ನಿಗದ್ಯತೇ । ತಥೇದಂ ಪಂಚಭಿಃ ಖಂಡೈರುದಿತಂ ಪಾಪನಾಶನಮ್ ।। (ನಾರದೀಯಪುರಾಣ, ಅಧ್ಯಾ-ಯ 93, ಶ್ಲೋಕ 2) – ಸೃಷ್ಟಿ, ಭೂಮಿ, ಸ್ವರ್ಗ, ಪಾತಾಳ, ಮತ್ತು ಉತ್ತರ ಖಂಡಗಳು. ಮೈಸೂರು ಅರಮನೆಯ ಪ್ರಕಾಶನದ ಪದ್ಮಪುರಾಣವು ಆದಿ, ಭೂಮಿ, ಬ್ರಹ್ಮ, ಪಾತಾಳ, ಸೃಷ್ಟಿ ಮತ್ತು ಉತ್ತರ ಖಂಡಗಳೆಂದು ಆರು ಭಾಗಗಳಾಗಿ ವಿಂಗಡಿತಗೊಂಡಿದೆ.
ಆದಿ ಅಥವಾ ಸ್ವರ್ಗ ಖಂಡ (1-62 ಅಧ್ಯಾಯಗಳು):
ಭೂಲೋಕದಲ್ಲಿರುವ ತೀರ್ಥಗಳ ಹೆಸರುಗಳು, ಅವುಗಳಿಗೆ ಆ ಹೆಸರು ಬರಲು ಕಾರಣ, ಅಲ್ಲಿ ಮುಕ್ತಿಯನ್ನು ಪಡೆಯುವ ರೀತಿ, ಅವುಗಳ ಯೋಗ್ಯತೆ – ಇವುಗಳ ವರ್ಣನೆಯಿದೆ. ಸ್ವರ್ಗವಾಸಿಗಳಾದ ದೇವತೆಗಳೂ ಭೂಲೋಕಕ್ಕೆ ಬಂದು ತಮ್ಮ ಪಾಪಗಳನ್ನು ಕಳೆದುಕೊಂಡು ಹಿತವನ್ನು ಸಾಧಿಸಿಕೊಂಡರು ಎನ್ನುವುದನ್ನು ತಿಳಿಸಿ ಭಾರತದ ಈ ಪುಣ್ಯ ಭೂಮಿಯನ್ನು ಬಿಟ್ಟರೆ ಪುಣ್ಯಸಂಪಾದನೆಗೆ ಬೇರೊಂದು ಸ್ಥಳವಿಲ್ಲವೆನ್ನುವುದನ್ನು ಸಾರುತ್ತದೆ. ನೈಮಿಷಾರಣ್ಯವಾಸೀ ಶೌನಕಾದಿ ಮುನಿಗಳಿಗೆ ಸೂತಮಹರ್ಷಿಯು ಹೇಳಿದ ಈ ಆದಿಖಂಡದಲ್ಲಿ ಬರುವ ಮುಖ್ಯ ವಿಷಯಗಳು ಹೀಗಿವೆ: ಪಿಂಡೋತ್ಪತ್ತಿಯ ವರ್ಣನೆ, ದ್ವೀಪ-ಭೂಮಿಗಳ ವಿಭಾಗ ವರ್ಣನೆ, ಮೇರುಪರ್ವತದ ಸುತ್ತಲೂ ಇರುವ ಪ್ರದೇಶಗಳ ವರ್ಣನೆ, ಭಾರತದೇಶದ ವರ್ಣನೆ, ನಾರದ-ಯುಧಿಷ್ಠಿರರ ಸಂವಾದದಲ್ಲಿ ಭೂಮಿಯಲ್ಲಿರುವ ತೀರ್ಥಗಳ ವರ್ಣನೆ – ಮುಖ್ಯವಾಗಿ ಪುಷ್ಕರ, ನರ್ಮದಾ, ಪ್ರಯಾಗ ಮೊದಲಾದ ಕ್ಷೇತ್ರಗಳ ವರ್ಣನೆ.
ನಾರದೀಯ ಪುರಾಣದ ಪ್ರಕಾರ ಸ್ವರ್ಗಖಂಡದಲ್ಲಿ ಬ್ರಹ್ಮಾಂಡೋತ್ಪತ್ತಿ, ಭೂಲೋಕಸ್ಥಿತಿ, ತೀರ್ಥೋಪಾಖ್ಯಾನ, ನರ್ಮದೋತ್ಪತ್ತಿ, ಆಯಾ ಕ್ಷೇತ್ರಗಳ ಪ್ರತ್ಯೇಕ ಕಥೆಗಳು, ಕುರುಕ್ಷೇತ್ರಾದಿ ಪುಣ್ಯತೀರ್ಥಗಳ ಕಥೆ, ಯಮುನಾನದಿಯ ಪುಣ್ಯಕಥೆ, ಕಾಶೀ-ಗಯಾ-ಪ್ರಯಾಗಕ್ಷೇತ್ರಗಳ ಮಹಾತ್ಮೆ, ವರ್ಣಾಶ್ರಮವಿಹಿತಕರ್ಮಯೋಗನಿರೂಪಣೆ, ಪುಣ್ಯಕರ್ಮಕಥಾಸಹಿತವಾದ ವ್ಯಾಸ-ಜೈಮಿನಿ ಸಂವಾದ, ಸಮುದ್ರಮಥನ ಚರಿತ್ರೆ, ವ್ರತೋಪಾಖ್ಯಾನ, ಊರ್ಜಪಂಚಾಹಮಹಾತ್ಮೆ. ಸರ್ವಾಪರಾಧಹರಸ್ತೋತ್ರ ಇವು ಉಕ್ತವಾಗಿವೆ.[1]
ಭೂಮಿ ಖಂಡ (125 ಅಧ್ಯಾಯಗಳು):
ಭೂಮಿಖಂಡದಲ್ಲಿ ಬರುವ ಮುಖ್ಯ ವಿಷಯಗಳು ಹೀಗಿವೆ: ಪ್ರಹ್ಲಾದನ ಪೂರ್ವಚರಿತ್ರೆ, ಶಿವಶರ್ಮನ ಕಥೆ, ಕಶ್ಯಪನು ದಿತಿಗೆ ಆತ್ಮಜ್ಞಾನವನ್ನು ಬೋಧಿಸುವುದು, ಸುವ್ರತೋಪಾ-ಖ್ಯಾನ, ದುರ್ವಾಸ-ಧರ್ಮರ ಸಂವಾದ, ಸೋಮನೆ-ಸೋಮಶರ್ಮರ ಬ್ರಹ್ಮಚರ್ಯ, ಬಲ-ವೃತ್ರರ ವಧೆ, ಮರುತ್ತುಗಳ ಜನನ, ಪೃಥು ಚರಿತ್ರೆ, ವೇನೋಪಾಖ್ಯಾನ, ಅಂಗನ ಕಥೆ, ಸುನೀಥೆಯ ಚರಿತ್ರೆ, ಸುದೇವೆಯ ಚರಿತ್ರೆ, ಪದ್ಮಾವತಿ-ಉಗ್ರಸೇನರ ಚರಿತ್ರೆ, ಪಿತೃತೀರ್ಥ, ನಹುಷಚರಿತ್ರೆ, ಯಯಾತಿ ಚರಿತ್ರೆ (ಅಧ್ಯಾಯ 64-83 ಸಂಪುಟ 3), ಗುರುತೀರ್ಥ – ಚ್ಯವನನ ತೀರ್ಥಯಾತ್ರೆ, ಕುಂಜಲನ ಕಥೆ, ಜೈಮಿನಿಯಿಂದ ಸ್ವರ್ಗದ ವರ್ಣನೆ ಮತ್ತು ದಾನದ ಶ್ರೇಷ್ಠತೆಯ ಪ್ರತಿಪಾದನೆ, ನಹುಷನ ಕಥೆ, ಕಾಮೋದೆಯ ಕಥೆ, ವಿಷ್ಣುವಿಗೆ ಭೃಗುಶಾಪ, ವೇನಚರಿತ್ರೆ.
ನಾರದೀಯಪುರಾಣದ ಪ್ರಕಾರ ಸೂತ-ಶೌನಕ ಸಂವಾದ ರೂಪವಾದ ಭೂಮಿ ಖಂಡದಲ್ಲಿ ಮಾತಾಪಿತೃಗಳು ಪೂಜ್ಯರೆಂಬ ವಿಷಯದಲ್ಲಿ ಶಿವಶರ್ಮನ ಕಥೆ, ಸುವ್ರತನ ಕಥೆ, ವೃತ್ರಾಸುರಸಂಹಾರ, ಪೃಥು-ವೇನರ ಚರಿತ್ರೆ, ಸನೀತೆಯ ಕಥೆ, ಸುಕಲೋಪಾಖ್ಯಾನ, ಧರ್ಮಖ್ಯಾನ, ಪಿತೃಸೇವೋಪಾಖ್ಯಾನ, ನಹುಷ-ಯಯಾತಿಯರ ಚರಿತ್ರೆ, ಗುರುತೀರ್ಥನಿರೂಪಣೆ, ರಾಜ-ಜೈಮಿನಿ ಸಂವಾದ, ಹುಂಡನ ಸಂಹಾರದಿಂದೊಡಗೂಡಿದ ಅಶೋಕಸುಂದರಿಯ ಕಥೆ, ಕಾಮೋದಕಿಯ ಚರಿತ್ರೆ, ವಿಹುಂಡವಧೆ, ಕುಂಜಲ-ಚ್ಯವನ ಸಂವಾದ ಮತ್ತು ಸಿದ್ಧಾಖ್ಯಾನಗಳು ಉಕ್ತವಾಗಿವೆ.[2]
ಬ್ರಹ್ಮ ಖಂಡ (26 ಅಧ್ಯಾಯಗಳು):
ಶೌನಕನು ಸೂತಪುರಾಣಿಕನನ್ನು ಕಲಿಕಾಲದಲ್ಲಿ ಹುಟ್ಟಿದ ಜನರು ಉದ್ಧಾರವಾಗುವುದು ಹೇಗೆಂದು ಸೂತಪುರಾಣಿಕನನ್ನು ಪ್ರಶ್ನಿಸಲು ಅವನು ವ್ಯಾಸ-ಜೈಮಿನಿಯರ ಸಂವಾದವನ್ನು ಉದಾಹರಿಸಿ ಹರಿಭಕ್ತಿಯನ್ನು ವರ್ಣಿಸುತ್ತಾನೆ. ವಿಷ್ಣುಮಹಿಮೆಯೇ ಇದರ ಪ್ರಧಾನ ವಿಷಯ. ಇದರಲ್ಲಿರುವ ವಿಷಯಗಳು ಹೀಗೆವೆ: ಕಾರ್ತೀಕಮಾಸದ ಮಹಿಮೆ, ಜಯಂತೀವ್ರತ, ರಾಧಾಜನ್ಮಾಷ್ಟಮಿಯ ಮಹಿಮೆ, ಸಮುದ್ರಮಥನ (ಅಧ್ಯಾಯ 8-10), ಮಾರ್ಗಶಿರಮಾಸದ ಗುರುವಾರವ್ರತ, ಕೃಷ್ಣಜನ್ಮಾಷ್ಟಮೀ ವ್ರತ, ಏಕಾದಶಿಯ ಮಹಿಮೆ, ಆಶ್ವಯುಜ ಹುಣ್ಣಿಮೆಯ ಮಹಿಮೆ, ತುಳಸಿ-ನೆಲ್ಲಿಗಳ ಮಹಿಮೆ, ವಿಷ್ಣುಪಂಚಕವೆಂಬ ಕಾರ್ತೀಕಮಾಸದ ಕೊನೆಯ ಐದು ದಿನಗಳ ಮಹಿಮೆ, ಸನತ್ಕುಮಾರ-ನಾರದರ ಸಂವಾದದಲ್ಲಿ ಹರಿನಾಮದ ಮಹಿಮೆ.
ಸೃಷ್ಟಿ ಖಂಡ (82 ಅಧ್ಯಾಯಗಳು):
ಇದರಲ್ಲಿ ಬ್ರಹ್ಮನು ತಾನು ಸೃಷ್ಟಿಯನ್ನು ಹೇಗೆ ಮಾಡುತ್ತಾನೆ ಮತ್ತು ಮಾಡಿಸುತ್ತಾನೆ ಎನ್ನುವುದರ ವರ್ಣನೆಯಿದೆ. ನೈಮಿಷಾರಣ್ಯದ ಮಹಿಮೆ, ಅದಕ್ಕೆ ಆ ಹೆಸರು ಬರಲು ಕಾರಣ, ಸೂತನ ಉತ್ಪತ್ತಿ ಮತ್ತು ಅವನ ಧರ್ಮಗಳ ಕಥನ, ವ್ಯಾಸೋತ್ಪತ್ತಿಯ ವರ್ಣನೆ (ಅಧ್ಯಾಯ 1), ಭೀಷ್ಮ-ಪುಲಸ್ತ್ಯರ ಸಂವಾದ (ಅಧ್ಯಾಯ 2), ಕಾಲದ ವಿಭಾಗಗಳು, ಸೃಷ್ಟಿ (ಅಧ್ಯಾಯ 3), ಸಮುದ್ರಮಥನ (ಅಧ್ಯಾಯ 4), ದಕ್ಷಯಜ್ಞ (ಅಧ್ಯಾಯ 5), ದೇವದಾನವಗಂಧರ್ವೌರಗರಾಕ್ಷಸರ ಪೂರ್ವಸೃಷ್ಟಿ, ಗರುಡೋತ್ಪತ್ತಿ, ಉಳಿದ ಜೀವಿಗಳ ಉತ್ಪತ್ತಿ (ಅಧ್ಯಾಯ 6), ಮರುತ್ತರ ಉತ್ಪತ್ತಿ (ಅಧ್ಯಾಯ 7), ಪೃಥುವಿನ ಕಥೆ (ಅಧ್ಯಾಯ 8), ಭೀಷ್ಮ-ಪುಲಸ್ತ್ಯರ ಸಂವಾದದಲ್ಲಿ ಪಿತೃಗಳ ಮತ್ತು ಶ್ರಾದ್ಧದ ವರ್ಣನೆ (ಅಧ್ಯಾಯ 9-11), ಚಂದ್ರವಂಶಕಥನ (ಅಧ್ಯಾಯ 12), ಶುಕ್ರ-ಬೃಹಸ್ಪತಿಯರ ಕಥೆ (ಅಧ್ಯಾಯ 13), ಮೂರುಜನರಿಂದ ಅರ್ಜುನನು ಹುಟ್ಟಿದುದರ ಕಥೆ (ಅಧ್ಯಾಯ 14), ಪುಷ್ಕರಕ್ಷೇತ್ರಮಹಾತ್ಮೆ (ಅಧ್ಯಾಯ 15), ಬ್ರಹ್ಮನ ಯಾಗದ ವರ್ಣನೆ, ಭೀಮದ್ವಾದಶೀವ್ರತ ಕಥನ (ಅಧ್ಯಾಯ 23), ಅಶೂನ್ಯಶಯನವ್ರತ (ಅಧ್ಯಾಯ 24), ವಾಮನಾವತಾರ (ಅಧ್ಯಾಯ 25), ನಾಗತೀರ್ಥ (25-26), ಮಾರ್ಕಂಡೇಯನ ಉತ್ಪತ್ತಿಯ ವರ್ಣನೆ (28), ರಾಮನು ಶೂದ್ರಕನನ್ನು ಕೊಂದುದು, ದಂಡಕಾರಣ್ಯದ ಕಥೆ, ಯುಗಗಳ ಅಳತೆ (36), ತಾರಕ-ಮಯರ ಯುದ್ಧ, ವಜ್ರಾಂಗ, ಕಾಲನೇಮಿ (37-41), ಹಿರಣ್ಯಕಶಿಪು (42), ಅಂಧಕಾಸುರವಧೆ (43), ಶ್ರಾದ್ಧದ ಪ್ರಶಂಸೆ (47), ಅಣೀಮಾಂಡವ್ಯನ ಕಥೆ (48-49), ತುಲಾಧಾರಚರಿತ್ರೆ (50), ಇಂದ್ರ-ಅಹಲ್ಯೆಯರ ಕಥೆ (51), ರುದ್ರಾಕ್ಷಿಯ ಮಹಿಮೆ (57), ಗಂಗೆಯ ಮಹಿಮೆ (59-60), ಗಣೇಶನ ಕಥೆ (61-63), ವರಾಹಾವತಾರ (73), ಮಹಾಭಾರತದಲ್ಲಿ ಕರ್ಣನೇ ಮೊದಲಾದವರು ದೈತ್ಯರೆಂದೂ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಷ್ಣ, ಪಾಂಡವರು, ಗಾಂಧಾರೀ, ಕುಂತಿ, ದ್ರೌಪದಿಯರು ದೇವತೆಗಳೆನ್ನುವುದು (74), ಸೂರ್ಯನ ಚರಿತ್ರೆ ಮತ್ತು ಮಹಾತ್ಮ್ಯೆ (75-77), ನವಗ್ರಹಗಳ ಕಥೆ ಮತ್ತು ಪೂಜೆ (78-82).
ನಾರದೀಯಪುರಾಣದ ಪ್ರಕಾರ ಸೃಷ್ಟಿಖಂಡದಲ್ಲಿ ಸೃಷ್ಟ್ಯಾದಿಕ್ರಮದಿಂದ ನಾನಾವಿಧದ ಉಪಾಖ್ಯಾನಗಳನ್ನು ಇತಿಹಾಸರೂಪವಾದ ಪುಲಸ್ತ್ಯನು ಭೀಷ್ಮನಿಗೆ ಉಪದೇಶಿಸುತ್ತಾನೆ. ಇದರಲ್ಲಿ ಧರ್ಮ, ಪುಷ್ಕರಕ್ಷೇತ್ರದ ಮಹಿಮೆ, ಬ್ರಹ್ಮಯಜ್ಞವಿಧಾನ, ವೇದಪಾಠಾದಿಲಕ್ಷಣ, ದಾನಗಳು, ಭಿನ್ನಭಿನ್ನ ವ್ರತಗಳು, ಗಿರಿಜಾಕಲ್ಯಾಣ, ತಾರಕೋಪಾಖ್ಯಾನ, ಗೋಮಾಹಾತ್ಮ್ಯೆ, ಕಾಲಕೇಯ ಮೊದಲಾದ ದೈತ್ಯರ ಸಂಹಾರ, ನವಗ್ರಹಗಳ ಪೂಜಾವಿಧಿ, ದಾನ ಮೊದಲಾದ ವಿಷಗಳಿವೆ.[3]
ಪಾತಾಳಖಂಡ (113 ಅಧ್ಯಾಯಗಳು):
ಶೇಷ-ವಾತ್ಸ್ಯಾಯನರ ಸಂವಾದದಲ್ಲಿ ರಾಮಾಶ್ವಮೇಧ ಚರಿತ್ರೆ – ಹೆಚ್ಚಿನದಾಗಿ ರಾಮಾಯಣದ ಉತ್ತರಕಾಂಡದ ವಿಷಯಗಳು (ಅಧ್ಯಾಯ 1-68), ಕೃಷ್ಣಕಥೆ, ವೈಶಾಖಮಾಸದ ಮಹಿಮೆ (69-99), ರಾಮನ ಪೂರ್ವಜನ್ಮವೃತ್ತಾಂತ (100-101), ಭಸ್ಮಮಹಿಮೆ, ಶಿವಲಿಂಗಪೂಜೆಯ ಮಹಿಮೆ (102-111), ರಾಮ-ಜಾಂಬವಂತರ ಸಂವಾದದಲ್ಲಿ ಹಿಂದಿನ ಕಲ್ಪದಲ್ಲಿ ನಡೆದ ರಾಮಾಯಣದ ವರ್ಣನ (112-113).
ನಾರದೀಯಪುರಾಣದ ಪ್ರಕಾರ ಪಾತಾಳಖಂಡದಲ್ಲಿ ರಾಮಾಶ್ವಮೇಧ, ಶ್ರೀರಾಮರಾಜ್ಯಾಭಿಷೇಕ, ಅಗಸ್ತ್ಯಾದಿಗಳ ಆಗಮನ, ಪೌಲಸ್ತ್ಯವಂಶಕೀರ್ತನೆ, ಅಶ್ವಮೇಧೋಪದೇಶ, ಅಶ್ವಸಂಚಾರ, ನಾನಾರಾಜಕಥೆ, ಜಗನ್ನಾಥಕ್ಷೇತ್ರವರ್ಣನೆ, ವೃಂದಾವನಮಹಾತ್ಮೆ, ಶ್ರೀಕೃಷ್ಣನ ನಿತ್ಯಲೀಲೆಯ ವರ್ಣನೆ, ವೈಶಾಖಸ್ನಾನಮಹಿಮೆ, ಸ್ನಾನ-ದಾನ-ಪೂಜೆಗಳ ಫಲ, ವರಾಹ-ಧರಾದೇವಿಯರ ಸಂವಾದ, ಯಮಬ್ರಾಹ್ಮಣಕಥೆ, ರಾಜದೂತರ ಕೃಷ್ಣಸ್ತುತಿ, ಶಂಭುಸಮಾಯೋಗ, ದಧೀಚ್ಯಾಖ್ಯಾನ, ಭಸ್ಮಮಹಾತ್ಮೆ, ಉತ್ಕೃಷ್ಟ ಶಿವಮಹಾತ್ಮೆ, ದೇವರಾತಸುತೋಪಾಖ್ಯಾನ, ಪುರಾಣಜ್ಞಾನಿಪ್ರಶಂಸೆ, ಗೌತಮೋಪಾಖ್ಯಾನ, ಶಿವಗೀತೆ, ಭಾರದ್ವಾಜಾಶ್ರಮದಲ್ಲಿ ನಡೆದ ಕಲ್ಪಾಂತರ ರಾಮಕಥೆ ಇವು ಉಕ್ತವಾಗಿವೆ.[4]
ಶ್ರೀಪದ್ಮಪುರಾಣದ ಬೆಂಗಾಲೀ ಸಂಪುಟದಲ್ಲಿ ಪಾತಾಳಖಂಡದಲ್ಲಿ ಶೇಷ-ವಾತ್ಸ್ಯಾಯನರ ಸಂವಾದದಲ್ಲಿ ಶಕುಂತಲೋಪಾಖ್ಯಾನವೂ ಇದೆ ಎನ್ನುವುದನ್ನು ಗಮನಿಸಬೇಕು. ಇಲ್ಲಿರುವ ಶಕುಂತಲೋಪಾಖ್ಯಾನವು ಮಹಾಭಾರತದ ಆದಿಪರ್ವದ ಸಂಭವಪರ್ವದಲ್ಲಿ ಬರುವ ಶಕುಂತಲೋಪಾಖ್ಯಾನಕ್ಕಿಂತ ಭಿನ್ನವಾಗಿದ್ದು ಕಾಳಿದಾಸನ ಅಭಿಜ್ಞಾನಶಾಕುಂತಲ ನಾಟಕವನ್ನು ಹೋಲುತ್ತದೆ.
ಉತ್ತರಖಂಡ (282 ಅಧ್ಯಾಯಗಳು):
ನಾರದ-ಮಹೇಶ್ವರರ ಸಂವಾದ, ಬದರೀ ಆಶ್ರಮದ ವರ್ಣನೆ (1-2), ಜಲಂಧರನ ಕಥೆ (3-19), ತೀರ್ಥ-ಮಹಿಮೆ (20-26), ದಾನಮಹಿಮೆ (27-28), ದಶರಥನ ಶನಿಸ್ತೋತ್ರ (34), ಏಕಾದಶೀ ವ್ರತಗಳ ಮಹಿಮೆ (35-65), ಚಾತುರ್ಮಾಸ್ಯ ವ್ರತ (66-72), ವಿಷ್ಣುಸಹಸ್ರನಾಮ (73), ರಾಮರಕ್ಷಾಸ್ತೋತ್ರ (74), ಋಷಿ-ಪಂಚಮೀ ವ್ರತ (78), ಅಪಾಮಾರ್ಜನಸ್ತೋತ್ರ (79-80), ವೈಷ್ಣವ ಕಥನ (81-89), ಕಾರ್ತೀಕಮಹಿಮೆ (90), ಸತ್ಯಭಾಮೆಯ ಪೂರ್ವಜನ್ಮ ವಿವರ-ಣೆ (91), ಶಂಖಾಸುರ ವಧೆ (92-93), ತುಲಸೀ ಮಹಾತ್ಮೆ-ಜಲಂಧರ ಕಥೆ (98-107), ಮಾಘಮಾಸದ ಮಹಿಮೆ (121), ಸಾಲಗ್ರಾಮ ಪೂಜೆ (122), ದೀಪಾವಳಿ (124), ತೀರ್ಥಮಹಿಮೆ (130-169), ನೃಸಿಂಹವ್ರತ (170), ಗೀತಾಮಾಹಾತ್ಮ್ಯೆ (171-188), ಭಾಗವತ ಮಹಿಮೆ (189-194), ಕಾಳಿಂದೀಮಹಿಮೆ (195-218), ಮಾಘಮಹಿಮೆ (219-230), ಕೃಷ್ಣನು ಗುರುಪುತ್ರನನ್ನು ಬದುಕಿಸಿದುದು (231), ಮಾರ್ಕಂಡೇಯ ವೃತ್ತಾಂತ (236), ಶಿವರಾತ್ರಿಯ ಮಹಿಮೆ (240-241), ಮಾಘಸ್ನಾನ-ಪ್ರಶಂಸೆ (247-250), ವಿಷ್ಣುಮಂತ್ರಪ್ರಶಂಸೆ (251-257), ಮತ್ಯ್ಸಾವ-ತಾರವರ್ಣನೆ (258), ಕೂರ್ಮಾವತಾರದ ವರ್ಣನೆ (259-263), ವರಾಹಾತಾರವರ್ಣನೆ (264), ನೃಸಿಂಹಾವತಾರವರ್ಣನೆ (265), ವಾಮನಾವತಾರವರ್ಣನೆ (266-267), ಪರಾಶುರಾಮಚರಿತ್ರೆ (268), ಶ್ರೀರಾಮಚರಿತ್ರೆ (269-270), ಕೃಷ್ಣಚರಿತ್ರೆ (272-279), ವಿಷ್ಣುಪೂಜೆ, ರಾಮನಾಮಮಹಿಮೆ (280-281), ಶಿವನಿಗೆ ಯೋನಿಲಿಂಗಸ್ವರೂಪ, ಫಲಶ್ರುತಿ (282).
ನಾರದೀಯಪುರಾಣದ ಪ್ರಕಾರ ಉತ್ತರಖಂಡದಲ್ಲಿ ಪಾರ್ವತಿಗೆ ಮಹೇಶ್ವರನು ಉಪದೇಶಿಸಿದ ಪರ್ವತೋಪಾಖ್ಯಾನ, ಜಲಂಧರನ ಕಥೆ, ಶ್ರೀಶೈಲದ ವರ್ಣನೆ, ಸಗರ ಚರಿತೆ, ಗಂಗಾಪ್ರಯಾಗ-ಕಾಶೀ-ಗಯಗಳ ಮಹಿಮೆ, ಅನಾದಿದಾನಮಹಾತ್ಮೆ, ಮಹಾದ್ವಾದಶೀವ್ರತ, ಪ್ರತ್ಯೇಕವಾಗಿ 24 ಏಕಾದಶಿಗಳ ಮಹಾತ್ಮೆ, ವಿಷ್ಣುಧರ್ಮ, ವಿಷ್ಣುಸಹಸ್ರನಾಮ, ಕಾರ್ತೀಕವ್ರತಮಹಾತ್ಮೆ, ಮಾಘಸ್ನಾನಫಲ, ಜಂಬೂದ್ವೀಪದ ಪಾಪನಾಶಕ ತೀರ್ಥಗಳ ಮಹಾತ್ಮೆ, ಸಾಬರಮತಿಯ ಮಹಾತ್ಮೆ, ನರಸಿಂಹಾವತಾರ, ದೇವಶರ್ಮಾದಿಗಳ ಉಪಾಖ್ಯಾನ, ಗೀತಾಮಹಿಮೆ, ಭಕ್ತ್ಯುಪಾಖ್ಯಾನ, ಶ್ರೀಮದ್ಭಾಗವತಮಹಾತ್ಮೆ, ಬಹುತೀರ್ಥಗಳ ಚರಿತ್ರೆಸಹಿತವಾದ ಇಂದ್ರಪ್ರಸ್ಥಮಹಾತ್ಮೆ, ಶ್ರೇಷ್ಠಮಂತ್ರಗಳು, ತ್ರಿಪಾದ್ಭೂತ್ಯನುವರ್ಣನೆ, ಮತ್ಸ್ಯಾವತಾರವರ್ಣನೆ, ರಾಮನಾಮಶತ ಮತ್ತು ಅದರ ಮಹಾತ್ಮೆ, ವಿಷ್ಣುವೈಭವವನ್ನು ಭೃಗುಮುನಿಯು ಪರೀಕ್ಷಿಸಿದುದು ಇವು ಉಕ್ತವಾಗಿವೆ.[5]
ಶ್ಲೋಕಸಹಿತ ಕನ್ನಡ ಅನುವಾದ
- ಆದಿಖಂಡ, ಅಧ್ಯಾಯ 2
- ಸೃಷ್ಟಿಖಂಡ, ಅಧ್ಯಾಯ 2
- ಸೃಷ್ಟಿಖಂಡ, ಅಧ್ಯಾಯ 3
____
[1] ಬ್ರಹ್ಮಾಂಡೋತ್ಪತ್ತಿರುದಿತಾ ಋಷಿಭಿರ್ಯತ್ರ ಸೌತಿನಾ । ಸಭೂಮಿಲೋಕ-ಸಂಸ್ಥಾನಂ ತೀರ್ಥಾಖ್ಯಾನಂ ತತಃ ಪರಮ್ ।। 14 ।। ನರ್ಮದೋತ್ಪತ್ತಿಕಥನಂ ತತ್ತೀರ್ಥಾನಾಂ ಕಥಾಃ ಪೃಥಕ್ । ಕುರುಕ್ಷೇತ್ರಾದಿತೀರ್ಥಾನಾಂ ಕಥಾ ಪುಣ್ಯಾ ಪ್ರಕೀರ್ತಿತಾ ।। 15 ।। ಕಾಲಿಂದೀಪುಣ್ಯಕಥನಂ ಕಾಶೀಮಾಹಾತ್ಮ್ಯವರ್ಣನಮ್ । ಗಯಾಯಾಶ್ಚೈವ ಮಾಹಾತ್ಮ್ಯಂ ಪ್ರಯಾಗಸ್ಯ ಚ ಪುಣ್ಯಕಮ್ ।। 16 ।। ವರ್ಣಾಶ್ರ-ಮಾನುರೋಧೇನ ಕರ್ಮಯೋಗನಿರೂಪಣಮ್ । ವ್ಯಾಸಜೈಮಿನಿಸಂವಾದಃ ಪುಣ್ಯಕರ್ಮಕಥಾನ್ವಿತಃ ।। 17 ।। ಸಮುದ್ರಮಥನಾಖ್ಯಾನಂ ವ್ರತಾಖ್ಯಾನಂ ತತಃ ಪರಮ್ । ಊರ್ಜ್ಜಪಂಚಾಹಮಾಹಾತ್ಮ್ಯಂ ಸ್ತೋತ್ರಂ ಸರ್ವಾಪರಾಧನಮ್ ।। 18 ।। ಏತತ್ಸ್ವರ್ಗಾಭಿದಂ ವಿಪ್ರ ಸರ್ವಪಾತಕನಾಶನಮ್ । (ನಾರದೀಯಪುರಾಣ, ಅಧ್ಯಾಯ 93)
[2] ಪಿತೃಮಾತ್ರಾದಿಪೂಜ್ಯತ್ವೇ ಶಿವಶರ್ಮಕಥಾ ಪುರಾ । ಸುವ್ರತಸ್ಯ ಕಥಾ ಪಶ್ಚಾ-ದ್ವೃತ್ರಸ್ಯ ಚ ವಧಸ್ತಥಾ ।। 8 ।। ಪೃಥೋರ್ವೇನಸ್ಯ ಚಾಖ್ಯಾನಂ ಸುನೀಥಾಯಾಃ ಕಥಾ ತಥಾ । ಸುಕಲಾಖ್ಯಾನಕಂ ಚೈವ ಧರ್ಮಾಖ್ಯಾನಂ ತತಃ ಪರಮ್ ।। 9 ।। ಪಿತೃಶುಶ್ರೂಷಣಾಖ್ಯಾನಂ ನಹುಷಸ್ಯ ಕಥಾ ತತಃ । ಯಯಾತಿಚರಿತಂ ಚೈವ ಗುರುತೀರ್ಥನಿರೂಪಣಮ್ ।। 10 ।। ರಾಜಜೈಮಿನಿಸಂವಾದೋ ಬಹ್ವಾಶ್ಚರ್ಯ್ಯ-ಕಥಾಯುತಃ । ಕಥಾ ಹ್ಯಶೋಕಸುಂದರ್ಯಾಹುಂಡದೈತ್ಯವಧಾನ್ವಿತಾ ।। 11 ।। ಕಾಮೋದಾಖ್ಯಾನಕಂ ತತ್ರ ವಿಹುಂಡವಧಸಂಯುತಮ್ । ಕುಂಜಲಸ್ಯ ಚ ಸಂವಾದಶ್ಚ್ಯವನೇನ ಮಹಾತ್ಮನಾ ।। 12 ।। ಸಿದ್ಧಾಖ್ಯಾನಂ ತತಃ ಪ್ರೋಕ್ತಂ ಖಂಡಸ್ಯಾಸ್ಯ ಫಲೋಹನಮ್ । ಸೂತಶೌನಕಸಂವಾದಂ ಭೂಮಿಖಂಡಮಿದಂ ಸ್ಮೃತಮ್ ।। 13 ।। (ನಾರದೀಯಪುರಾಣ, ಅಧ್ಯಾಯ 93).
[3] ಪುಲಸ್ತ್ಯೇನ ತು ಭೀಷ್ಮಾಯ ಸೃಷ್ಟ್ಯಾದಿಕ್ರಮತೋ ದ್ವಿಜ । ನಾನಾಖ್ಯಾನೇತಿಹಾ-ಸಾದ್ಯೈರ್ಯತ್ರೋಕ್ತೋ ಧರ್ಮವಿಸ್ತರಃ ।। 3 ।। ಪುಷ್ಕರಸ್ಯ ಚ ಮಾಹಾತ್ಮ್ಯಂ ವಿಸ್ತರೇಣ ಪ್ರಕೀರ್ತಿತಮ್ । ಬ್ರಹ್ಮಯಜ್ಞವಿಧಾನಂ ಚ ವೇದಪಾಠಾದಿಲಕ್ಷಣಮ್ ।। 4 ।। ದಾನಾನಾಂ ಕೀರ್ತನಂ ಯತ್ರ ವ್ರತಾನಾಂ ಚ ಪೃಥಕ್ಪೃಥಕ್ । ವಿವಾಹಃ ಶೈಲಜಾಯಾಶ್ಚ ತಾರಕಾಖ್ಯಾನಕಂ ಮಹತ್ ।। 5 ।। ಮಾಹಾತ್ಮ್ಯಂ ಚ ಗವಾದೀನಾಂ ಕೀರ್ತಿತಂ ಸರ್ವಪುಣ್ಯದಮ್ । ಕಾಲಕೇಯಾದಿದೈತ್ಯಾನಾಂ ವಧೋ ಯತ್ರ ಪೃಥಕ್ಪೃಥಕ್ ।। 6 ।। ಗ್ರಹಾಣಾಮರ್ಚನಂ ದಾನಂ ಯತ್ರ ಪ್ರೋಕ್ತಂ ದ್ವಿಜೋತ್ತಮ । ತತ್ಸೃಷ್ಟಿಖಂಡಮುದ್ದಿಷ್ಟಂ ವ್ಯಾಸೇನ ಸುಮಾತ್ಮನಾ ।। 7 ।। (ನಾರದೀಯಪುರಾಣ, ಅಧ್ಯಾಯ 93).
[4] ರಾಮಾಶ್ವಮೇಧಂ ಪ್ರಥಮಂ ರಾಮರಾಜ್ಯಾಭಿಷೇಚನಮ್ ।। 19 ।। ಅಗಸ್ತ್ಯಾ-ದ್ಯಾಗಮಶ್ಚೈವ ಪೌಲಸ್ತ್ಯಾನ್ವಯಕೀರ್ತನಮ್ । ಅಶ್ವಮೇಧೋಪದೇಶಶ್ಚ ಹಯ-ಚರ್ಯಾ ತತಃ ಪರಮ್ ।। 20 ।। ನಾನಾರಾಜಕಥಾಃ ಪುಣ್ಯಾ ಜಗನ್ನಾಥಾನುವ-ರ್ಣನಮ್ । ವೃಂದಾವನಸ್ಯ ಮಾಹಾತ್ಮ್ಯಂ ಸರ್ವಪಾಪಪ್ರಣಾಶನಮ್ ।। 21 ।। ನಿತ್ಯಲೀಲಾನುಕಥನಂ ಯತ್ರ ಕೃಷ್ಣಾವತಾರಿಣಃ । ಮಾಧವಸ್ನಾನಮಾಹಾತ್ಮ್ಯಂ ಸ್ನಾನದಾನಾರ್ಚನೇ ಫಲಮ್ ।। 22 ।। ಧರಾವರಾಹಸಂವಾದೋ ಯಮಬ್ರಾಹ್ಮ-ಣಯೋಃ ಕಥಾ । ಸಂವಾದೋ ರಾಜದೂತಾನಾಂ ಕೃಷ್ಣಸ್ತೋತ್ರನಿರೂಪಣಮ್ ।। 23 ।। ಶಿವಶಂಭುಸಮಾಯೋಗೋ ದಧೀಚಾಖ್ಯಾನಕಂ ತತಃ । ಭಸ್ಮಮಾಹಾತ್ಮ್ಯ-ಮತುಲಂ ಶಿವಮಾಹಾತ್ಮ್ಯಮುತ್ತಮಮ್ ।। 24 ।। ದೇವರಾತಸುತಾಖ್ಯಾನಂ ಪುರಾಣಜ್ಞಪ್ರಶಂಸನಮ್ । ಗೌತಮಾಖ್ಯಾನಕಂ ಚೈವ ಶಿವಗೀತಾ ತತಃ ಸ್ಮೃತಾ ।। 25 ।। ಕಲ್ಪಾಂತರೇ ರಾಮಕಥಾ ಭಾರದ್ವಾಜಾಶ್ರಮಸ್ಥಿತಾ । ಪಾತಾಲಖಂಡಮೇ-ತದ್ಧಿ ಶೃಣ್ವತಾಂ ಪಠತಾಂ ಸದಾ ।। 26 ।। (ನಾರದೀಯಪುರಾಣ, ಅಧ್ಯಾಯ 93).
[5] ಪರ್ವತಾಖ್ಯಾನಕಂ ಪೂರ್ವಂ ಗೌರ್ಯೈ ಪ್ರೋಕ್ತಂ ಶಿವೇನ ವೈ । ಜಾಲಂಧರ-ಕಥಾ ಪಶ್ಚಾಚ್ಛ್ರೀಶೈಲಾದ್ಯನುಕೀರ್ತನಮ್ । ಸಗರಸ್ಯ ಕಥಾ ಪುಣ್ಯಾ ತತಃ ಪರ-ಮುದೀರತಮ್ ।। 28 ।। ಗಂಗಾಪ್ರಯಾಗಕಾಶೀನಾಂ ಗಯಾಯಾಶ್ಚಾಧಿಪುಣ್ಯಕಮ್ । ಅನ್ನಾದಿದಾನಮಾಹಾತ್ಮ್ಯಂ ತನ್ಮದಾದ್ವಾದಶೀವ್ರತಮ್ ।। 29 ।। ಚತುರ್ವಿಂಶೈ-ಕಾದಶೀನಾಂ ಮಾಹಾತ್ಮ್ಯಂ ಪೃಥಗೀರಿತಮ್ । ವಿಷ್ಣುಧರ್ಮಸಮಾಖ್ಯಾನಂ ವಿಷ್ಣುನಾಮಸಹಸ್ರಕಮ್ ।। 30 ।। ಕಾರ್ತಿಕವ್ರತಮಾಹಾತ್ಮ್ಯಂ ಮಾಘಸ್ನಾನಫಲಂ ತತಃ । ಜಂಬೂದ್ವೀಪಸ್ಯ ತೀರ್ಥಾನಾಂ ಮಾಹಾತ್ಮ್ಯಂ ಪಾಪನಾಶನಮ್ ।। 31 ।। ಸಾಭ್ರಮತ್ಯಾಶ್ಚ ಮಾಹಾತ್ಮ್ಯಂ ನೃಸಿಂಹೋತ್ಪತ್ತಿವರ್ಣನಮ್ । ದೇವಶರ್ಮಾದಿ-ಕಾಖ್ಯಾನಂ ಗೀತಾಮಾಹಾತ್ಮ್ಯವರ್ಣನಮ್ ।। 32 ।। ಭಕ್ತ್ಯಾಖ್ಯಾನಂ ಚ ಮಾಹಾ-ತ್ಮ್ಯಂ ಶ್ರೀಮದ್ಭಾಗವತಸ್ಯ ಹ । ಇಂದ್ರಪ್ರಸ್ಥಸ್ಯ ಮಾಹತ್ಮ್ಯಂ ಬಹುತೀರ್ಥಕಥಾ-ನ್ವಿತಮ್ ।। 33 ।। ಮಂತ್ರರತ್ನಾಭಿಧಾನಂ ಚ ತ್ರಿಪಾದ್ಭೂತ್ಯನುವರ್ಣನಮ್ । ಅವತಾರಕಥಾಃ ಪುಣ್ಯಾಃ ಮತ್ಸ್ಯಾದೀನಾಮತಃ ಪರಮ್ ।। 34 ।। ರಾಮನಾಮ-ಶತಂ ದಿವ್ಯಂ ತನ್ಮಾಹಾತ್ಮ್ಯಂ ಚ ವಾಡವ । ಪರೀಕ್ಷಣಂ ಚ ಭೃಗುಣಾ ಶ್ರೀವಿ-ಷ್ಣೋರ್ವೈಭವಸ್ಯ ।। 35 ।। ಇತ್ಯೇತದುತ್ತರಂ ಖಂಡಂ ಪಂಚಮಂ ಸರ್ವಪುಣ್ಯದಮ್ । (ನಾರದೀಯಪುರಾಣಂ, ಅಧ್ಯಾಯ 93).