ಕ್ರೌಷ್ಟುಕಿರುವಾಚ ।
ಭಗವಂಸ್ತ್ವಂಡಸಂಭೂತಿರ್ಯಥಾವತ್ಕಥಿತಾ ಮಮ ।
ಬ್ರಹ್ಮಾಂಡೇ ಬ್ರಹ್ಮಣೋ ಜನ್ಮ ತಥಾ ಚೋಕ್ತಂ ಮಹಾತ್ಮನಃ ।। 1 ।।
ಏತದಿಚ್ಚಾಮ್ಯಹಂ ಶ್ರೋತುಂ ತ್ವತ್ತೋ ಭೃಗುಕುಲೋದ್ಭವ ।
ಯದಾ ನ ಸೃಷ್ಟಿರ್ಭೂತಾನಾಮಸ್ತಿ ಕಿನ್ನು ನ ಚಾಸ್ತಿ ವಾ ।। 2 ।।
ಕಾಲೇ ವೈ ಪ್ರಲಯಸ್ಯಾಂತೇ ಸರ್ವಸ್ಮಿನ್ನುಪಸಂಹೃತೇ ।। 3 ।।
ಕ್ರೌಷ್ಟುಕಿಯು ಹೇಳಿದನು: “ಭಗವನ್! ಬ್ರಹ್ಮಾಂಡದ ಉತ್ಪತ್ತಿಯ ಕುರಿತು ನನಗೆ ಹೇಳಿದೆ. ಬ್ರಹ್ಮಾಂಡದಲ್ಲಿ ಮಹಾತ್ಮಾ ಬ್ರಹ್ಮನ ಜನ್ಮದ ಕುರಿತೂ ಹೇಳಿದ್ದೀಯೆ. ಭೃಗುಕುಲೋದ್ಭವ! ಭೂತಸೃಷ್ಟಿಯಾಗುವುದರ ಮೊದಲು ಯಾವುದಾದರೂ ತತ್ತ್ವವಿತ್ತೇ ಅಥವಾ ಇರಲಿಲ್ಲವೇ? ಸೃಷ್ಟಿಯು ಕಳೆದು ಎಲ್ಲ ಭೂತಸೃಷ್ಟಿಯೂ ಸಮಾಪ್ತಗೊಂಡು ಪ್ರಲಯವಾಗಿರುವ ಸಮಯದಲ್ಲಿ ಯಾವುದಾದರೂ ತತ್ತ್ವವು ಉಳಿದುಕೊಂಡಿರುತ್ತದೆಯೇ? ಅಥವಾ ಇಲ್ಲವೇ? ಇದನ್ನು ಕೇಳಲು ಬಯಸುತ್ತೇನೆ.”
ಮಾರ್ಕಂಡೇಯ ಉವಾಚ ।
ಯದಾ ತು ಪ್ರಕೃತೌ ಯಾತಿ ಲಯಂ ವಿಶ್ವಮಿದಂ ಜಗತ್ ।
ತದೋಚ್ಯತೇ ಪ್ರಾಕೃತೋಽಯಂ ವಿದ್ವದ್ಭಿಃ ಪ್ರತಿಸಂಚರಃ ।। 4 ।।
ಸ್ವಾತ್ಮನ್ಯವಸ್ಥಿತೇವ್ಯಕ್ತೇ ವಿಕಾರೇ ಪ್ರತಿಸಂಹೃತೇ ।
ಪ್ರಕೃತಿಃ ಪುರುಷಶ್ಚೈವ ಸಾಧರ್ಮ್ಯೇಣಾವತಿಷ್ಠತಃ ।। 5 ।।
ಯದಾ ತಮಶ್ಚ ಸತ್ತ್ವಂಚ ಸಮತ್ವೇನ ಗುಣೌ ಸ್ಥಿತೌ ।
ಅನುದ್ರಿಕ್ತಾವನೂನೌ ಚ ಓತಪ್ರೋತೌ ಪರಸ್ಪರಮ್ ।। 6 ।।
ತಿಲೇಷು ವಾ ಯಥಾ ತೈಲಂ ಘೃತಂ ಪಯಸಿ ವಾ ಸ್ಥಿತಮ್ ।
ತಥಾ ತಮಸಿ ಸತ್ತ್ವೇ ಚ ರಜೋಽಪ್ಯನುಸೃತಂ ಸ್ಥಿತಮ್ ।। 7 ।।
ಮಾರ್ಕಂಡೇಯನು ಹೇಳಿದನು: “ಈಗ ಕಾಣುವ ಸಮಸ್ತ ಜಗತ್ತು ಪ್ರಕೃತಿಯಲ್ಲಿ ಲಯಹೊಂದಿದಾಗ ಆಗುವ ಲಯವನ್ನು ಪ್ರಾಕೃತಪ್ರಲಯವೆಂದು ಪ್ರಾಜ್ಞರು ಹೇಳುತ್ತಾರೆ. ಅವ್ಯಕ್ತತತ್ತ್ವದಿಂದ ಜನಿಸಿದ ವಿಕಾರಗಳು ಅವ್ಯಕ್ತವೆಂಬ ಪ್ರಕೃತಿ ತತ್ತ್ವದಲ್ಲಿ ಅಡಗಿ ಹೋಗುವುದರಿಂದ ಅದು ಪ್ರಾಕೃತ ಪ್ರಲಯ ಎನಿಸಿಕೊಳ್ಳುತ್ತದೆ. ಆಗ ಪ್ರಕೃತಿ ಮತ್ತು ಪುರುಷ ಈ ಎರಡು ತತ್ತ್ವಗಳು ವಿಕಾರರಹಿತವಾದ ಸ್ವಸ್ವರೂಪವನ್ನು ಹೊಂದಿರುತ್ತವೆ. ಆ ಅವಸ್ಥೆಯಲ್ಲಿ ತಮೋಗುಣ ಸತ್ತ್ವಗುಣಗಳೆರಡೂ ಪರಿಮಾಣದಲ್ಲಿ ಒಂದಕ್ಕಿಂತ ಮತ್ತೊಂದು ಹೆಚ್ಚು ಅಥವಾ ಕಡಿಮೆಯಿಲ್ಲದಂತೆ ಸಮಪರಿಮಾಣಗಳಲ್ಲಿರುತ್ತವೆ. ಮತ್ತು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಎಳ್ಳುಕಾಳಿನಲ್ಲಿ ಎಣ್ಣೆ ಮತ್ತು ಹಾಲಿನಲ್ಲಿ ತುಪ್ಪವು ಹೇಗೋ ಹಾಗೆ ಒಂದು ಗುಣದಲ್ಲಿ ಮತ್ತೊಂದು ಗುಣವು ಬೆರೆತಿರುತ್ತದೆ. ಹೀಗಿನ ತಮೋ ಮತ್ತು ಸತ್ತ್ವಗುಣಗಳಲ್ಲಿ ರಜೋಗುಣವೂ ಹಾಗೆಯೇ ಸೇರಿಕೊಂಡಿರುತ್ತದೆ.
ಉತ್ಪತ್ತಿರ್ಬ್ರಹ್ಮಣೋ ಯಾವದಾಯುರ್ವೈ ದ್ವಿಪರಾರ್ಧಿಕಮ್ ।
ತಾವದ್ದಿನಂ ಪರೇಶಸ್ಯ ತತ್ಸಮಾ ಸಂಯಮೇ ನಿಶಾ ।। 8 ।।
ಅಷ್ಟೌ ಯುಗಸಹಸ್ರಾಣಿ ಅಹೋರಾತ್ರಂ ಪ್ರಜಾಪತೇಃ ।
ಅನೇನೈವ ತು ಮಾನೇನ ಶತಂ ಬ್ರಹ್ಮಾ ಸ ಜೀವತಿ ।। 9 ।।
ಪಿತಾಮಹಶತೇನೈವ ವಿಷ್ಣೋರ್ಮಾನಂ ವಿದೀಯತೇ ।
ನಿಮೇಷಾರ್ಧೇನ ಶಂಭೋಸ್ತು ಸಹಸ್ರಾಣಿ ಚತುರ್ದಶ ।। 10 ।।
ವಿನಶ್ಯಂತಿ ತಥಾ ವಿಷ್ಣೋರಸಂಖ್ಯಾತಾಃ ಪಿತಾಮಹಾಃ ।। 11 ।।
ಬ್ರಹ್ಮನ ಉತ್ಪತ್ತಿಯಾಗಿವ ವರೆಗೆ ಗುಣಗಳಲ್ಲಿ ಸಾಮ್ಯಾವಸ್ಥೆಯಿರುತ್ತದೆ. ಬ್ರಹ್ಮನ ಒಂದು ದಿನವನ್ನು ಪರಾ ಎನ್ನುತ್ತಾರೆ. ಈ ಪರದಲ್ಲಿ ಅರ್ಧಸಮಯವು ಅವನಿಗೆ ಹಗಲು ಮತ್ತು ಇನ್ನೊಂದು ಅರ್ಧವು ಅವನಿಗೆ ರಾತ್ರಿಯು. ಎಂಟು ಸಾವಿರ ಚತುರ್ಯುಗಗಳು ಬ್ರಹ್ಮನಿಗೆ ಒಂದು ಆಹೋರಾತ್ರಿ ಅಂದರೆ ಒಂದು ದಿನವಾಗುತ್ತದೆ. ಇಂತಹ ಅಹೋರಾತ್ರಗಳನ್ನುಳ್ಳ ಒಂದು ನೂರು ವರ್ಷಗಳ ಕಾಲ ಬ್ರಹ್ಮನು ಜೀವಿಸಿರುತ್ತಾನೆ. ಒಂದು ನೂರು ಬ್ರಹ್ಮರ ಆಯುಸ್ಸನ್ನು ವಿಷ್ಣುವಿನ ಆಯುಃಪರಿಮಾಣವೆಂದು ಹೇಳುತ್ತಾರೆ. ಶಂಭುವಿನ ಅರ್ಧ ನಿಮಿಷದಲ್ಲಿ ಹದಿನಾಲ್ಕು ಸಾವಿರ ವಿಷ್ಣುಗಳು ಮತ್ತು ಅಸಂಖ್ಯಾತ ಬ್ರಹ್ಮರು ಹುಟ್ಟಿ ನಾಶವಾಗುತ್ತಾರೆ.
ಅಹರ್ಮುಖೇ ಪ್ರಬುದ್ಧಸ್ತು ಜಗದಾದಿರನಾದಿಮಾನ್ ।
ಸರ್ವಹೇತುರಚಿಂತ್ಯಾತ್ಮಾ ಪರಃ ಕೋಽಪ್ಯಪರಕ್ರಿಯಃ ।। 12 ।।
ಪ್ರಕೃತಿಂ ಪುರುಷಂಚೈವ ಪ್ರಾವಿಶ್ಯಾಶು ಜಗತ್ಪತಿಃ ।
ಕ್ಷೋಭಯಾಮಾಸ ಯೋಗೇನ ಪರೇಣ ಪರಮೇಶ್ವರಃ ।। 13 ।।
ಯಥಾ ಮದೋ ನವಸ್ತ್ರೀಣಾಂ ಯಥಾ ವಾ ಮಾಧವಾನಿಲಃ ।
ಅನುಪ್ರವಿಷ್ಟಃ ಕ್ಷೋಭಾಯ ತಥಾಸೌ ಯೋಗಮೂರ್ತಿಮಾನ್ ।। 14 ।।
ಪ್ರಧಾನೇ ಕ್ಷೋಭ್ಯಮಾಣೇ ತು ಸ ದೇವೋ ಬ್ರಹ್ಮಸಂಜ್ಞಿತಃ ।
ಸಮುತ್ಪನ್ನೋಽಂಡಕೋಶಸ್ಥೋ ಯಥಾ ತೇ ಕಥಿತಂ ಮಯಾ ।। 15 ।।
ಹಗಲಿನ ಆರಂಭದಲ್ಲಿ ಜಗತ್ತಿನ ಆದಿಕಾರಣನೂ, ಅನಾದಿಯೂ, ಸರ್ವಕ್ಕೆ ಕಾರಣನೂ, ಅಚಿಂತ್ಯಾತ್ಮನೂ, ಪರನೂ, ಅಪರಕ್ರಿಯನೂ ಆದ ಜಗತ್ಪತಿಯು ಪ್ರಕೃತಿ-ಪುರುಷರನ್ನು ಪ್ರವೇಶಿಸುತ್ತಾನೆ. ಪರಮ ಯೋಗದಿಂದ ಪರಮೇಶ್ವರನು ಅವರಲ್ಲಿ ಕ್ಷೋಭೆಯನ್ನುಂಟುಮಾಡುತ್ತಾನೆ. ನವತಾರುಣ್ಯ ಸ್ತ್ರೀಯರಿಗೆ ಮದ್ಯಪಾನದಿಂದ ಉಂಟಾಗುವ ಮದದಂತೆಯೂ ವಸಂತಋತುವಿನಲ್ಲಿ ಬೀಸುವ ಮಂದಮಾರುತದಂತೆಯೂ ಯೋಗಮೂರ್ತಿಮಾನ್ ಪರಮೇಶ್ವರನು ಪ್ರಕೃತಿ-ಪುರುಷ ತತ್ತ್ವಗಳನ್ನು ಪ್ರವೇಶಿಸಿ ಅವುಗಳಲ್ಲಿ ಕ್ಷೋಭೆಯನ್ನುಂಟುಮಾಡುತ್ತಾನೆ. ಪ್ರಧಾನತತ್ತ್ವದಲ್ಲಿ ಕ್ಷೋಭೆಯುಂಟಾಗಲು ಬ್ರಹ್ಮನೆಂದು ಕರೆಯಲ್ಪಡುವ ದೇವನು ಅಂಡಕೋಶದೊಳಗಿದ್ದುಕೊಂಡು ನಾನು ಮೊದಲೇ ಹೇಳಿದಂತೆ ಉತ್ಪನ್ನನಾಗುತ್ತಾನೆ.
ಸ ಏವ ಕ್ಷೋಭಕಃ ಪೂರ್ವಂ ಸ ಕ್ಷೋಭ್ಯಃ ಪ್ರಕೃತೇಃ ಪತಿಃ ।
ಸ ಸಂಕೋಚವಿಕಾಸಾಭ್ಯಾಂ ಪ್ರಧಾನತ್ವೇಽಪಿ ಸಂಸ್ಥಿತಃ ।। 16 ।।
ಉತ್ಪನ್ನಃ ಸ ಜಗದ್ಯೋನಿರಗುಣೋಽಪಿ ರಜೋಗುಣಮ್ ।
ಭುಂಜನ್ ಪ್ರವರ್ತತೇ ಸರ್ಗೇ ಬ್ರಹ್ಮತ್ವಂ ಸಮುಪಾಶ್ರಿತಃ ।। 17 ।।
ಬ್ರಹ್ಮತ್ವೇ ಸ ಪ್ರಜಾಃ ಸೃಷ್ಟ್ವಾ ತತಃ ಸತ್ತ್ವಾತಿರೇಕವಾನ್ ।
ವಿಷ್ಣುತ್ವಮೇತ್ಯ ಧರ್ಮೇಣ ಕುರುತೇ ಪರಿಪಾಲನಮ್ ।। 18 ।।
ತತಸ್ತಮೋಗುಣೋದ್ರಿಕ್ತೋ ರುದ್ರತ್ವೇ ಚಾಖಿಲಂ ಜಗತ್ ।
ಉಪಸಂಹೃತ್ಯ ವೈ ಶೇತೇ ತ್ರೈಲೋಕ್ಯಂ ತ್ರಿಗುಣೋಽಗುಣಃ ।। 19 ।।
ಕ್ಷೋಭೆಗೊಳಿಸುವ ಆ ಪ್ರಕೃತಿಯ ಪತಿಯು ಮೊದಲು ಅವನೇ ಕ್ಷೋಭೆಗೊಳಗಾಗಿ, ಸಂಕೋಚ-ವಿಕಾಸಗಳ ಗುಣಗಳೊಂದಿಗೆ ಪ್ರಧಾನತತ್ತ್ವದಲ್ಲಿ ನೆಲೆಸಿರುತ್ತಾನೆ. ನಿರ್ಗುಣನಾಗಿದ್ದರೂ ರಜೋಗುಣವನ್ನು ಭುಂಜಿಸಿ ಹುಟ್ಟಿದ್ದ ಆ ಜಗದ್ಯೋನಿಯು ಬ್ರಹ್ಮತ್ವವನ್ನು ಆಶ್ರಯಿಸಿ ಸೃಷ್ಟಿಕಾರ್ಯವನ್ನು ನಡೆಸುತ್ತಾನೆ. ಆ ಪರಮೇಶ್ವರನು ಬ್ರಹ್ಮತ್ವದಿಂದ ಪ್ರಜೆಗಳನ್ನು ಸೃಷ್ಟಿಸಿ ನಂತರ ಸತ್ತ್ವಗುಣದ ಆಧಿಕ್ಯದಿಂದ ವಿಷ್ಣುತ್ವವನ್ನು ಪಡೆದು ಧರ್ಮದಿಂದ ಜಗತ್ತನ್ನು ಪರಿಪಾಲಿಸುತ್ತಾನೆ. ನಂತರ ತಮೋಗುಣೋದ್ರಿಕ್ತನಾಗಿ ರುದ್ರತ್ವವನ್ನು ಪಡೆದು ಅಖಿಲ ಜಗತ್ತನ್ನೂ, ತ್ರಿಲೋಕಗಳನ್ನೂ ತ್ರಿಗುಣಗಳಲ್ಲಿ ಉಪಸಂಹಾರಮಾಡಿ ಅಗುಣನಾಗಿ ನಿದ್ರಿಸುತ್ತಾನೆ.
ಯಥಾ ಪ್ರಾಗ್ವ್ಯಾಪಕಃ ಕ್ಷೇತ್ರೀ ಪಾಲಕೋ ಲಾವಕಸ್ತಥಾ ।
ಯಥಾ ಸ ಸಂಜ್ಞಾಮಾಯಾತಿ ಬ್ರಹ್ಮವಿಷ್ಣುಹರಾತ್ಮಿಕಾಮ್ ।। 20 ।।
ಬ್ರಹ್ಮತ್ವೇ ಸೃಜತೇ ಲೋಕಾನ್ರುದ್ರತ್ವೇ ಸಂಹರತ್ಯಪಿ ।
ವಿಷ್ಣುತ್ವೇ ಚಾಪ್ಯುದಾಸೀನಸ್ತಿಸ್ತ್ರೋಽವಸ್ಥಾಃ ಸ್ವಯಂಭುವಃ ।। 21 ।।
ರಜೋ ಬ್ರಹ್ಮಾ ತಮೋ ರುದ್ರೋ ವಿಷ್ಣುಃ ಸತ್ತ್ವಂ ಜಗತ್ಪತಿಃ ।
ಏತ ಏವ ತ್ರಯೋ ದೇವಾ ಏತ ಏವ ತ್ರಯೋ ಗುಣಾಃ ।। 22 ।।
ಅನ್ಯೋನ್ಯಮಿಥುನಾ ಹ್ಯೇತೇ ಅನ್ಯೋನ್ಯಾಶ್ರಯಿಣಸ್ತಥಾ ।
ಕ್ಷಣಂ ವಿಯೋಗೋ ನ ಹ್ಯೇಷಾಂ ನ ತ್ಯಜಂತಿ ಪರಸ್ಪರಮ್ ।। 23 ।।
ರೈತನು ತನ್ನ ಹೊಲವನ್ನು ಪಾಲಿಸುವವನೂ ಕೊಯ್ಯುವವನೂ ತಾನೇ ಆಗಿ ಅನೇಕ ಅಧಿಕಾರಗಳನ್ನು ನಿರ್ವಹಿಸುವಂತೆ ಸರ್ವವ್ಯಾಪಕನಾದ ಪರಮಾತ್ಮನು ತಾನೇ ಜಗತ್ತನ್ನು ಸೃಷ್ಟಿಸುವ, ಪಾಲಿಸುವ ಮತ್ತು ಸಂಹರಿಸುವ ಬ್ರಹ್ಮ, ವಿಷ್ಣು ಮತ್ತು ರುದ್ರರೆಂಬ ಸಂಜ್ಞೆಗಳನ್ನು ಪಡೆದುಕೊಳ್ಳುತ್ತಾನೆ. ಬ್ರಹ್ಮತ್ವದಲ್ಲಿ ಲೋಕಗಳನ್ನು ಸೃಷ್ಟಿಸುತ್ತಾನೆ. ರುದ್ರತ್ವದಲ್ಲಿ ಈ ಲೋಕಗಳನ್ನು ಸಂಹರಿಸುತ್ತಾನೆ ಕೂಡ. ವಿಷ್ಣುತ್ವದಲ್ಲಿ ಸೃಷ್ಟಿ-ಲಯಗಳ ವಿಷಯದಲ್ಲಿ ಉದಾಸೀನನಾಗಿದ್ದುಕೊಂಡು ಲೋಕಗಳನ್ನು ಪಾಲಿಸುತ್ತಾನೆ. ಹೀಗೆ ಸ್ವಯಂಭುವಾದ ಪರಮಾತ್ಮನಿಗೆ ಬ್ರಹ್ಮ, ವಿಷ್ಣು, ರುದ್ರತ್ವಗಳೆಂಬ ಮೂರು ಅವಸ್ಥೆಗಳು ಕ್ರಮವಾಗಿ ಉಂಟಾಗುತ್ತವೆ. ರಜೋಗುಣವು ಬ್ರಹ್ಮ, ತಮೋಗುಣವು ರುದ್ರ, ಮತ್ತು ಜಗತ್ಪತಿ ವಿಷ್ಣುವು ಸತ್ತ್ವಗುಣ. ಇವೇ ಮೂರು ದೇವತೆಗಳು ಮತ್ತು ಮೂರು ಗುಣಗಳು. ಈ ಮೂರುಗುಣಗಳು ಒಂದರಲ್ಲಿ ಮತ್ತೊಂದು ಮಿಥುನಭಾವದಿಂದ ಸೇರಿವೆ ಮತ್ತು ಅನ್ಯೋನ್ಯರನ್ನು ಆಶ್ರಯಿಸಿವೆ. ಒಂದು ಕ್ಷಣಕಾಲವೂ ಈ ಗುಣಗಳಿಗೆ ವಿಯೋಗವೆನ್ನುವುದಿಲ್ಲ. ಆದ್ದರಿಂದ ಒಂದನ್ನೊಂದು ಬಿಟ್ಟಿರುವುದಿಲ್ಲ.
ಏವಂ ಬ್ರಹ್ಮಾ ಜಗತ್ಪೂರ್ವೋ ದೇವದೇವಶ್ಚತುರ್ಮುಖಃ ।
ರಜೋಗುಣಂ ಸಮಾಶ್ರಿತ್ಯ ಸ್ರಷ್ಟ್ಟತ್ವೇ ಸ ವ್ಯವಸ್ಥಿತಃ ।। 24 ।।
ಹಿರಣ್ಯಗರ್ಭೋ ದೇವಾದಿರನಾದಿರುಪಚಾರತಃ ।
ಭೂಪದ್ಮಕರ್ಣಿಕಾಸಂಸ್ಥೋ ಬ್ರಹ್ಮಾಗ್ರೇ ಸಮಜಾಯತ ।। 25 ।।
ತಸ್ಯ ವರ್ಷಶತಂ ತ್ವೇಕಂ ಪರಮಾಯುರ್ಮಹಾತ್ಮನಃ ।
ಬ್ರಾಹ್ಮೇಣೈವ ಹಿ ಮಾನೇನ ತಸ್ಯ ಸಂಖ್ಯಾಂ ನಿಬೋಧ ಮೇ ।। 26 ।।
ಹೀಗೆ ಜಗತ್ತಿನ ಮೊದಲು ದೇವದೇವ ಚತುರ್ಮುಖ ಬ್ರಹ್ಮನು ರಜೋಗುಣವನ್ನು ಅವಲಂಬಿಸಿ ಸೃಷ್ಟಿಕಾರ್ಯದ ವ್ಯವಸ್ಥೆಯಲ್ಲಿರುತ್ತಾನೆ. ಭೂಮಂಡಲವೆಂಬ ಪದ್ಮದ ಮಧ್ಯದಲ್ಲಿ ಇರುವ ಹಿರಣ್ಯಗರ್ಭ, ಅನಾದಿ ಎಂದು ಉಪಚರಿಸಲ್ಪಡುವ ಬ್ರಹ್ಮದೇವನು ಎಲ್ಲಕ್ಕಿಂತ ಮೊದಲು ಜನಿಸಿದನು. ಆ ಮಹಾತ್ಮನಿಗೆ ಒಂದು ನೂರು ವರ್ಷಗಳ ಆಯುಷ್ಯ. ಬ್ರಹ್ಮಮಾನದ ಪ್ರಕಾರ ಆ ಆಯುಷ್ಯದ ಸಂಖ್ಯೆಯನ್ನು ಹೇಳುತ್ತೇನೆ. ಕೇಳು.
ನಿಮೇಷೈರ್ದಶಭಿಃ ಕಾಷ್ಠಾ ತಥಾ ಪಂಚಭಿರುಚ್ಯತೇ ।
ಕಲಾಸ್ತ್ರಿಂಶಚ್ಚ ವೈ ಕಾಷ್ಠಾ ಮುಹೂರ್ತಂ ತ್ರಿಂಶದೇವ ತಾಃ ।। 27 ।।
ಅಹೋರಾತ್ರಂ ಮುಹೂರ್ತಾನಾಂ ನೃಣಾಂ ತ್ರಿಂಶತ್ತು ವೈ ಸ್ಮೃತಮ್ ।
ಅಹೋರಾತ್ರೈಶ್ಚ ತ್ರಿಂಶದ್ಭಿಃ ಪಕ್ಷೌ ದ್ವೌ ಮಾಸ ಉಚ್ಯತೇ ।। 28 ।।
ತೈಃ ಷಡ್ಭಿರಯನಂ ವರ್ಷಂ ದ್ವೇಽಯನೇ ದಕ್ಷಿಣೋತ್ತರೇ ।
ತದ್ದೇವಾನಾಮಹೋರಾತ್ರಂ ದಿನಂ ತತ್ರೋತ್ತರಾಯಣಮ್ ।। 29 ।।
ಕಾಲಪರಿವರ್ತನೆಯಲ್ಲಿ ಕಣ್ಣನ್ನು ಮಿಟಿಕಿಸುವ ಸೂಕ್ಷ್ಮಕಾಲವು ಒಂದು ನಿಮೇಷ. ಹದಿನೈದು ನಿಮೇಷಗಳು ಒಂದು ಕಾಷ್ಠಾ ಎನಿಸುತ್ತವೆ. ಮೂವತ್ತು ಕಾಷ್ಠಾಗಳು ಒಂದು ಕಲಾ ಎಂದೂ ಮೂವತ್ತು ಕಲೆಗಳು ಒಂದು ಮುಹೂರ್ತ ಎಂದೂ ಎನಿಸುತ್ತವೆ. ಅಂತಹ ಮೂವತ್ತು ಮುಹೂರ್ತಗಳು ಮನುಷ್ಯರಿಗೆ ಒಂದು ಅಹೋರಾತ್ರಿ ಎನಿಸುತ್ತದೆ. ಮೂವತ್ತು ಅಹೋರಾತ್ರಗಳು ಕಳೆದರೆ ಎರಡು ಪಕ್ಷಗಳಾಗುತ್ತವೆ. ಎರಡು ಪಕ್ಷಗಳು ಸೇರಿ ಒಂದು ಮಾಸವಾಗುತ್ತದೆ. ಅಂತಹ ಆರು ಮಾಸಗಳಿಂದ ಒಂದು ಅಯನವೂ, ದಕ್ಷಿಣ ಮತ್ತು ಉತ್ತರಗಳೆಂಬ ಎರಡು ಅಯನಗಳಿಂದ ಒಂದು ವರ್ಷವೂ ಆಗುತ್ತದೆ. ಮನುಷ್ಯರ ಒಂದು ವರ್ಷವು ದೇವತೆಗಳ ಒಂದು ಅಹೋರಾತ್ರವಾಗುತ್ತದೆ. ಅದರಲ್ಲಿ ಉತ್ತರಾಯಣವು ಹಗಲು.
ದಿವ್ಯೈರ್ವರ್ಷಸಹಸ್ರೈಸ್ತು ಕೃತತ್ರೇತಾದಿಸಂಜ್ಞಿತಮ್ ।
ಚತುರ್ಯುಗಂ ದ್ವಾದಶಭಿಸ್ತದ್ವಿಭಾಗಂ ಶೃಣುಷ್ವ ಮೇ ।। 30 ।।
ಚತ್ವಾರಿ ತು ಸಹಸ್ರಾಣಿ ವರ್ಷಾಣಾಂ ಕೃತಮುಚ್ಯತೇ ।
ಶತಾನಿ ಸಂಧ್ಯಾ ಚತ್ವಾರಿ ಸಂಧ್ಯಾಂಶಶ್ಚ ತಥಾವಿಧಃ ।। 31 ।।
ತ್ರೇತಾ ತ್ರೀಣಿ ಸಹಸ್ರಾಣಿ ದಿವ್ಯಾಬ್ದಾನಾಂ ಶತತ್ರಯಮ್ ।
ತಸ್ಯ ಸಂಧ್ಯಾ ಸಮಾಖ್ಯಾತಾ ಸಂಧ್ಯಾಂಶಶ್ಚ ತಥಾವಿಧಃ ।। 32 ।।
ದ್ವಾಪರಂ ದ್ವೇ ಸಹಸ್ರೇ ತು ವರ್ಷಾಣಾಂ ದ್ವೇ ಶತೇ ತಥಾ ।
ತಸ್ಯ ಸಂಧ್ಯಾ ಸಮಾಖ್ಯಾತಾ ದ್ವೇ ಶತಾಬ್ದೇ ತದಂಶಕಃ ।। 33 ।।
ಕಲಿಃ ಸಹಸ್ರಂ ದಿವ್ಯಾನಾಮಬ್ದಾನಾಂ ದ್ವಿಜಸತ್ತಮ ।
ಸಂಧ್ಯಾ ಸಂಧ್ಯಾಂಶಕಶ್ಚೈವ ಶತಕೌ ಸಮುದಾಹೃತೌ ।। 34 ।।
ಏಷಾ ದ್ವಾದಶಸಾಹಸ್ತ್ರೀ ಯುಗಾಖ್ಯಾ ಕವಿಭಿಃ ಕೃತಾ ।
ಏತತ್ಸಹಸ್ರಗುಣಿತಮಹೋ ಬ್ರಾಹ್ಮಮುದಾಹೃತಮ್ ।। 35 ।।
ದೇವತೆಗಳ ಹನ್ನೆರಡು ಸಾವಿರ ವರ್ಷಗಳು ಕೃತ-ತ್ರೇತಾದಿ ಚತುರ್ಯುಗವಾಗುತ್ತದೆ. ಅವುಗಳ ವಿಭಾಗವನ್ನು ಕೇಳು. ದೇವತೆಗಳ ನಾಲ್ಕು ಸಾವಿರ ವರ್ಷಗಳು ಕೃತಯುಗವೆಂದು ಹೇಳುತ್ತಾರೆ. ಅದರ ಮೊದಲು ಮತ್ತು ನಂತರ ನಾಲ್ಕು ನೂರು ದೇವವರ್ಷಗಳ ಸಂಧ್ಯೆಗಳಿವೆ. ದೇವಮಾನದ ಮೂರು ಸಾವಿರ ವರ್ಷಗಳು ತ್ರೇತಾಯುಗವೆಂದು ಹೇಳುತ್ತಾರೆ. ತ್ರೇತಾಯುಗದ ಸಂಧ್ಯೆ ಮತ್ತು ಸಂಧ್ಯಾಂಶಕಾಲಗಳು ಒಂದೊಂದೂ ಮೂರುನೂರು ವರ್ಷಗಳು. ದ್ವಾಪರಯುಗವು ದೇವತೆಗಳ ಎರಡು ಸಾವಿರ ವರ್ಷಗಳು. ಅದರ ಸಂಧ್ಯೆ ಮತ್ತು ಸಂಧ್ಯಾಂಶಗಳು ಒಂದೊಂದೂ ಎರಡುನೂರು ವರ್ಷಗಳು. ದ್ವಿಜಸತ್ತಮ! ಕಲಿಯುಗವು ದೇವತೆಗಳ ಒಂದು ನೂರು ಸಾವಿರ ವರ್ಷಗಳು. ಅದರ ಸಂಧ್ಯೆ ಮತ್ತು ಸಂಧ್ಯಾಂಶಗಳು ಒಂದೊಂದೂ ನೂರು ವರ್ಷಗಳೆಂದು ಹೇಳುತ್ತಾರೆ. ಹೀಗೆ ಪ್ರಾಜ್ಞರು ಹನ್ನೆರಡು ಸಾವಿರ ದೇವವರ್ಷಗಳನ್ನು ಯುಗವೆಂದು ಮಾಡಿದ್ದಾರೆ. ಇಂತಹ ಚತುರ್ಯುಗಗಳ ಒಂದು ಸಾವಿರ ಆವೃತ್ತಿಯು ಬ್ರಹ್ಮನ ಹಗಲೆಂದು ಹೇಳಿದ್ದಾರೆ.
ಬ್ರಹ್ಮಣೋ ದಿವಸೇ ಬ್ರಹ್ಮನ್ ಮನವಃ ಸ್ಯುಶ್ಚತುರ್ದಶ ।
ಭವಂತಿ ಭಾಗಶಸ್ತೇಷಾಂ ಸಹಸ್ರಂ ತದ್ವಿಭಜ್ಯತೇ ।। 36 ।।
ದೇವಾಃ ಸಪ್ತರ್ಷಯಃ ಸೇಂದ್ರಾ ಮನುಸ್ತತ್ಸೂನವೋ ನೃಪಾಃ ।
ಮನುನಾ ಸಹ ಸೃಜ್ಯಂತೇ ಸಂಹ್ರಿಯಂತೇ ಚ ಪೂರ್ವವತ್ ।। 37 ।।
ಚತುರ್ಯುಗಾನಾಂ ಸಂಖ್ಯಾತಾ ಸಾಧಿಕಾ ಹ್ಯೇಕಸಪ್ತತಿಃ ।
ಮನ್ವಂತರಂ ತಸ್ಯ ಸಂಖ್ಯಾಂ ಮಾನುಷಾಬ್ದೈರ್ನಿಬೋಧ ಮೇ ।। 38 ।।
ತ್ರಿಂಶತ್ಕೋಟ್ಯಸ್ತು ಸಂಪೂರ್ಣಾಃ ಸಂಖ್ಯಾತಾಃ ಸಂಖ್ಯಯಾ ದ್ವಿಜ ।
ಸಪ್ತಷಷ್ಟಿಸ್ತಥಾನ್ಯಾನಿ ನಿಯುತಾನಿ ಚ ಸಂಖ್ಯಯಾ ।। 39 ।।
ವಿಂಶತಿಶ್ಚ ಸಹಸ್ರಾಣಿ ಕಾಲೋಽಯಂ ಸಾಧಿಕಂ ವಿನಾ ।
ಏತನ್ಮನ್ವಂತರಂ ಪ್ರೋಕ್ತಂ ದಿವ್ಯೈರ್ವರ್ಷೈರ್ನಿಬೋಧ ಮೇ ।। 40 ।।
ಅಷ್ಟೌ ವರ್ಷಸಹಸ್ರಾಣಿ ದಿವ್ಯಯಾ ಸಂಖ್ಯಯಾ ಯುತಮ್ ।
ದ್ವಿಪಂಚಾಶತ್ತಥಾನ್ಯಾನಿ ಸಹಸ್ರಾಣ್ಯಧಿಕಾನಿ ತು ।। 41 ।।
ಬ್ರಹ್ಮನ್! ಬ್ರಹ್ಮನ ಒಂದು ಹಗಲಿನಲ್ಲಿ ಹದಿನಾಲ್ಕು ಮನುಗಳು ಆಗುತ್ತಾರೆ. ಆ ಸಾವಿರ ಯುಗಗಳ ಕಾಲವು ಮನುಗಳಲ್ಲಿ ವಿಭಜನಗೊಂಡಿದೆ. ಒಂದು ಮನ್ವಂತರದಲ್ಲಿ ಇಂದ್ರಾದಿ ದೇವತೆಗಳು, ಸಪ್ತರ್ಷಿಗಳು, ಮನು ಮತ್ತು ಅವನ ಪುತ್ರರಾದ ನೃಪರು ಸೃಷ್ಟಿಸಲ್ಪಟ್ಟು ಮೊದಲಿನ ಮನುವಿನಂತೆಯೇ ಸಂಹರಿಸಲ್ಪಡುತ್ತಾರೆ. ಸ್ವಲ್ಪ ಅಧಿಕ ಭಾಗವನ್ನೊಳಗೊಂಡ ಎಪ್ಪತ್ತೊಂದು ಚತುರ್ಯುಗಗಳು ಒಂದು ಮನ್ವಂತರವೆನಿಸುತ್ತದೆ. ಮನುಷ್ಯಮಾನದಂತೆ ಒಂದು ಮನ್ವಂತರದ ಪರಿಮಿತಿಯನ್ನು ಕೇಳು. ದ್ವಿಜ! ಒಂದು ಮನ್ವಂತರದಲ್ಲಿ ಅಧಿಕ ಸಂಧ್ಯಾಕಾಲಗಳನ್ನು ಬಿಟ್ಟು ಒಟ್ಟು ಮೂವತ್ತುಕೋಟಿ ಎಪ್ಪತ್ನಾಲ್ಕು ಲಕ್ಷ ಇಪ್ಪತ್ತು ಸಾವಿರ ಮನುಷ್ಯ ವರ್ಷಗಳಿವೆ. ದೇವಮಾನದಿಂದಲೂ ಮನ್ವಂತರದ ಪರಿಮಾಣವನ್ನು ಕೇಳು. ದೇವಮಾನದ ಗಣನೆಯಂತೆ ಎಂಟು ಸಾವಿರದ ಐವತ್ತೆರಡು ವರ್ಷಗಳು ಒಂದು ಮನ್ವಂತರವಾಗುತ್ತದೆ.
ಚತುರ್ದಶಗುಣೋ ಹ್ಯೇಷ ಕಾಲೋ ಬ್ರಾಹ್ಮಮಹಃ ಸ್ಮೃತಮ್ ।
ತಸ್ಯಾಂತೇ ಪ್ರಲಯಃ ಪ್ರೋಕ್ತೋ ಬ್ರಾಹ್ಮೋ ನೈಮಿತ್ತಿಕೋ ಬುಧೈಃ ।। 42 ।।
ಭೂರ್ಲೋಕೋಽಥ ಭುವರ್ಲೋಕಃ ಸ್ವರ್ಲೋಕಸ್ತನ್ನಿವಾಸಿನಃ ।
ತಥಾ ವಿನಾಶಮಾಯಾಂತಿ ಮಹರ್ಲೋಕಶ್ಚ ತಿಷ್ಠತಿ ।। 43 ।।
ತದ್ವಾಸಿನೋಽಪಿ ತಾಪೇನ ಜನಲೋಕಂ ಪ್ರಯಾಂತಿ ವೈ ।
ಏಕಾರ್ಣವೇ ಚ ತ್ರೈಲೋಕ್ಯೇ ಬ್ರಹ್ಮಾ ಸ್ವಪಿತಿ ವೈ ನಿಶಿ ।। 44 ।।
ತತ್ಪ್ರಮಾಣೈವ ಸಾ ರಾತ್ರಿಸ್ತದಂತೇ ಸೃಜ್ಯತೇ ಪುನಃ ।
ಏವಂತು ಬ್ರಹ್ಮಣೋ ವರ್ಷಮೇಕಂ ವರ್ಷಶತಂ ತು ತತ್ ।। 45 ।।
ಶತಂ ಹಿ ತಸ್ಯ ವರ್ಷಾಣಾಂ ಪರಮಿತ್ಯಭಿಧೀಯತೇ ।
ಪಂಚಾಶದ್ಭಿಸ್ತಥಾ ವರ್ಷೈಃ ಪರಾರ್ಧಮಿತಿ ಕೀರ್ತ್ಯತೇ ।। 46 ।।
ಹದಿನಾಲ್ಕು ಮನ್ವಂತರಗಳು ಸೇರಿ ಬ್ರಹ್ಮನ ಒಂದು ಹಗಲೆಂದು ಸ್ಮರಿಸಲ್ಪಟ್ಟಿದೆ. ಆ ಹಗಲಿನ ಸಮಾಪ್ತಿಯಲ್ಲಿ ನಿಮಿತ್ತದಿಂದಾಗುವ ಪ್ರಲಯವನ್ನು ವಿದ್ವಾಂಸರು ನೈಮಿತ್ತಿಕ ಪ್ರಲಯವೆಂದು ಹೇಳಿದ್ದಾರೆ. ಈ ಪ್ರಲಯದಲ್ಲಿ ಭೂಲೋಕ, ಭುವರ್ಲೋಕ, ಮತ್ತು ಸ್ವರ್ಲೋಕಗಳು ಹಾಗೂ ಅವುಗಳ ನಿವಾಸಿಗಳು ನಾಶಹೊಂದುತ್ತವೆ. ಮಹರ್ಲೋಕವು ನಾಶಹೊಂದದೇ ಇರುತ್ತದೆ. ಮಹರ್ಲೋಕದ ನಿವಾಸಿಗಳು ಪ್ರಲಯಾಗ್ನಿಯ ತಾಪದಿಂದ ಅಲ್ಲಿರಲಾರದೇ ಮುಂದಿನ ಜನಲೋಕವನ್ನು ಪ್ರವೇಶಿಸುತ್ತಾರೆ. ಹೀಗೆ ಮೂರು ಲೋಕಗಳೂ ನೀರಿನಲ್ಲಿ ಮುಳುಗಿ ಸಮುದ್ರವಾದಾಗ ರಾತ್ರಿಯಲ್ಲಿ ಬ್ರಹ್ಮನು ನಿದ್ರಿಸುತ್ತಾನೆ. ಕಾಲಪ್ರಮಾಣದಲ್ಲಿ ಹಗಲು ಎಷ್ಟೋ ಅಷ್ಟೇ ಅವನ ರಾತ್ರಿ ಕೂಡ. ರಾತ್ರಿಯು ಕಳೆಯಲು ಪುನಃ ಸೃಷ್ಟಿಮಾಡುತ್ತಾನೆ. ಹೀಗೆ ಬ್ರಹ್ಮನಿಗೆ ಒಂದೊಂದಾಗಿ ನೂರು ವರ್ಷಗಳು ಕಳೆಯುತ್ತವೆ. ಬ್ರಹ್ಮನ ನೂರು ವರ್ಷಗಳ ದೀರ್ಘಕಾಲವನ್ನು ಪರ ಎಂದು ಕರೆಯುತ್ತಾರೆ. ಅದರ ಅರ್ಧಭಾಗವಾದ ಐವತ್ತು ವರ್ಷಗಳ ಕಾಲವನ್ನು ಪರಾರ್ಧವೆಂದೂ ಕರೆಯುತ್ತಾರೆ.
ಏವಮಸ್ಯ ಪರಾರ್ಧಂತು ವ್ಯತೀತಂ ದ್ವಿಜಸತ್ತಮ ।
ಯಸ್ಯಾಂತೇಽಭೂನ್ಮಹಾಕಲ್ಪಃ ಪಾದ್ಮ ಇತ್ಯಭಿವಿಶ್ರುತಃ ।। 47 ।।
ದ್ವಿತೀಯಸ್ಯ ಪರಾರ್ಧಸ್ಯ ವರ್ತಮಾನಸ್ಯ ವೈ ದ್ವಿಜ ।
ವಾರಾಹ ಇತಿ ಕಲ್ಪೋಽಯಂ ಪ್ರಥಮಃ ಪರಿಕಲ್ಪಿತಃ ।। 48 ।।
ದ್ವಿಜಸತ್ತಮ! ಈಗ ಬ್ರಹ್ಮನ ಪರಾರ್ಧವು ಕಳೆದಿದೆ. ಆ ಪರಾರ್ಧದ ಕೊನೆಯ ಕಲ್ಪದ ಪ್ರಲಯವು ಪಾದ್ಮಕಲ್ಪದ ಅಂತ್ಯವೆಂದು ಪ್ರಸಿದ್ಧಿಹೊಂದಿದೆ. ದ್ವಿಜ! ಈಗ ದ್ವಿತೀಯ ಪರಾರ್ಧದಲ್ಲಿ ಪ್ರಥಮವಾದ ವಾರಾಹ ಎಂಬ ಕಲ್ಪವು ನಡೆಯುತ್ತಿದೆ.”
ಇತಿ ಶ್ರೀಮಾರ್ಕಂಡೇಯಪುರಾಣೇ ಬ್ರಹ್ಮಾಯುಃಪ್ರಮಾಣಕಥನಂ ನಾಮ ತ್ರಿಚತ್ವಾರಿಂಶೋಽಧ್ಯಾಯಃ
ಶ್ರೀಮಾರ್ಕಂಡೇಯ ಮಹಾಪುರಾಣದ ಇತರ ಅಧ್ಯಾಯಗಳು:
- ಅಧ್ಯಾಯ 42: ಬ್ರಹ್ಮೋತ್ಪತ್ತಿನಿರೂಪಣಮ್
- ಅಧ್ಯಾಯ 44: ಪ್ರಾಕೃತವೈಕೃತಸರ್ಗವರ್ಣನಮ್