ಉಪಮನ್ಯು

ಈ ಕಥೆಯು ಮಹಾಭಾರತದ ಆದಿ ಪರ್ವ, ಪೌಷ್ಯ ಪರ್ವ, ಅಧ್ಯಾಯ ೩ರಲ್ಲಿ ಬರುತ್ತದೆ. ನೈಮಿಷಾರಣ್ಯ ವಾಸೀ ಋಷಿಗಳಿಗೆ ಮಹಾಭಾರತ ಕಥೆಯನ್ನು ಹೇಳಲು ಪ್ರಾರಂಭಿಸುವಾಗ ಸೂತ ಪುರಾಣಿಕ ಉಗ್ರಶ್ರವನು ಇದನ್ನು ಹೇಳುತ್ತಾನೆ.

01003032A ಅಥಾಪರಃ ಶಿಷ್ಯಸ್ತಸ್ಯೈವಾಯೋದಸ್ಯ ಧೌಮ್ಯಸ್ಯೋಪಮನ್ಯುರ್ನಾಮ||

01003033A ತಮುಪಾಧ್ಯಾಯಃ ಪ್ರೇಷಯಾಮಾಸ|

01003033B ವತ್ಸೋಪಮನ್ಯೋ ಗಾ ರಕ್ಷಸ್ವೇತಿ||

ಅಯೋದ ಧೌಮ್ಯನ ಇನ್ನೊಬ್ಬ ಶಿಷ್ಯನ ಹೆಸರು ಉಪಮನ್ಯು. ಉಪಾಧ್ಯಾಯನು ಅವನನ್ನು “ವತ್ಸ ಉಪಮನ್ಯು! ಗೋವುಗಳನ್ನು ರಕ್ಷಿಸು” ಎಂದು ಕಳುಹಿಸಿದನು.

01003034A ಸ ಉಪಾಧ್ಯಾಯವಚನಾದರಕ್ಷದ್ಗಾಃ|

01003034B ಸ ಚಾಹನಿ ಗಾ ರಕ್ಷಿತ್ವಾ ದಿವಸಕ್ಷಯೇಽಭ್ಯಾಗಮ್ಯೋಪಾಧ್ಯಾಯಸ್ಯಾಗ್ರತಃ ಸ್ಥಿತ್ವಾ ನಮಶ್ಚಕ್ರೇ||

ಉಪಾಧ್ಯಾಯನ ವಚನದಂತೆ ಅವನು ಗೋವುಗಳನ್ನು ರಕ್ಷಿಸಲು ಹೋದನು. ಇಡೀ ದಿನ ಗೋವುಗಳನ್ನು ರಕ್ಷಿಸಿ ದಿವಸಕ್ಷಯವಾಗುತ್ತಿದ್ದಂತೆ ಉಪಾಧ್ಯಾಯನ ಬಳಿಬಂದು ನಮಸ್ಕರಿಸಿ ಅವನ ಎದಿರು ನಿಂತನು.

01003035A ತಮುಪಾಧ್ಯಾಯಃ ಪೀವಾನಮಪಶ್ಯತ್|

01003035B ಉವಾಚ ಚೈನಂ|

01003035C ವತ್ಸೋಪಮನ್ಯೋ ಕೇನ ವೃತ್ತಿಂ ಕಲ್ಪಯಸಿ|

01003035D ಪೀವಾನಸಿ ದೃಧಮಿತಿ||

ಅವನು ದಷ್ಟಪುಷ್ಟನಾಗಿರುವುದನ್ನು ನೋಡಿ ಉಪಾಧ್ಯಾಯನು ಹೇಳಿದನು: “ವತ್ಸ ಉಪಮನ್ಯು! ಇಷ್ಟು ದಷ್ಟಪುಷ್ಟನಾಗಿರಲು ಏನು ಮಾಡುತ್ತೀಯೆ?”

01003036A ಸ ಉಪಾಧ್ಯಾಯಂ ಪ್ರತ್ಯುವಾಚ|

01003036B ಭೈಕ್ಷೇಣ ವೃತ್ತಿಂ ಕಲ್ಪಯಾಮೀತಿ||

ಅವನು ಉಪಾಧ್ಯಾಯನಿಗೆ ಉತ್ತರಿಸಿದನು: “ಭಿಕ್ಷೆಬೇಡಿ ನನ್ನ ಹೊಟ್ಟೆ ಹೊರೆದುಕೊಳ್ಳುತ್ತೇನೆ.”

01003037A ತಮುಪಾಧ್ಯಾಯಃ ಪ್ರತ್ಯುವಾಚ|

01003037B ಮಮಾನಿವೇದ್ಯ ಭೈಕ್ಷಂ ನೋಪಯೋಕ್ತವ್ಯಮಿತಿ||

ಉಪಾಧ್ಯಾಯನು ಅವನಿಗೆ ಪುನಃ ಹೇಳಿದನು: “ಭಿಕ್ಷವನ್ನು ನನಗೆ ನೈವೇದ್ಯಮಾಡದೇ ಉಪಯೋಗಿಸಕೂಡದು.”

01003038A ಸ ತಥೇತ್ಯುಕ್ತ್ವಾ ಪುನರರಕ್ಷದ್ಗಾಃ|

01003038B ರಕ್ಷಿತ್ವಾ ಚಾಗಮ್ಯ ತಥೈವೋಪಾಧ್ಯಾಯಸ್ಯಾಗ್ರತಃ ಸ್ಥಿತ್ವಾ ನಮಶ್ಚಕ್ರೇ||

ಹೀಗೆ ಕೇಳಿದನಂತರ ಪುನಃ ಅವನು ಗೋವುಗಳನ್ನು ರಕ್ಷಿಸಲು ಹೋದನು. ರಕ್ಷಿಸಿಯಾದ ನಂತರ ಉಪಾಧ್ಯಾಯನ ಎದಿರು ನಿಂತು ನಮಸ್ಕರಿಸಿದನು.

01003039A ತಮುಪಾಧ್ಯಾಯಸ್ತಥಾಪಿ ಪೀವಾನಮೇವ ದೃಷ್ಟ್ವೋವಾಚ|

01003039B ವತ್ಸೋಪಮನ್ಯೋ ಸರ್ವಮಶೇಷತಸ್ತೇ ಭೈಕ್ಷಂ ಗೃಹ್ಣಾಮಿ|

01003039C ಕೇನೇದಾನೀಂ ವೃತ್ತಿಂ ಕಲ್ಪಯಸೀತಿ||

ಈಗಲೂ ಕೂಡ ಅವನು ದಷ್ಟ ಪುಷ್ಠನಾಗಿದ್ದುದನ್ನು ನೋಡಿ ಕೇಳಿದನು: “ವತ್ಸ ಉಪಮನ್ಯು! ಏನನ್ನೂ ಇಟ್ಟುಕೊಳ್ಳದೇ ನಿನ್ನ ಸರ್ವ ಭಿಕ್ಷವನ್ನೂ ನನಗೆ ಕೊಟ್ಟಿದ್ದೀಯೆ. ಈಗ ನೀನು ಹೇಗೆ ನಿನ್ನ ಹೊಟ್ಟೆ ಹೊರೆದುಕೊಳ್ಳುತ್ತಿರುವೆ?”

01003040A ಸ ಏವಮುಕ್ತ ಉಪಾಧ್ಯಾಯೇನ ಪ್ರತ್ಯುವಾಚ|

01003040B ಭಗವತೇ ನಿವೇದ್ಯ ಪೂರ್ವಮಪರಂ ಚರಾಮಿ|

01003040C ತೇನ ವೃತ್ತಿಂ ಕಲ್ಪಯಾಮೀತಿ||

ಹೀಗೆ ಕೇಳಿದ ಉಪಾಧ್ಯಾಯನಿಗೆ ಅವನು ಉತ್ತರಿಸಿದನು: “ಒಮ್ಮೆ ಪಡೆದ ಭಿಕ್ಷೆಯನ್ನು ನಿಮಗೆ ಒಪ್ಪಿಸಿ ನಂತರ ಪುನಃ ಭಿಕ್ಷೆಬೇಡಲು ಹೋಗುತ್ತೇನೆ. ಈ ರೀತಿ ನನ್ನ ಹೊಟ್ಟೆ ಹೊರೆದುಕೊಳ್ಳುತ್ತೇನೆ.”

01003041A ತಮುಪಾಧ್ಯಾಯಃ ಪ್ರತ್ಯುವಾಚ|

01003041B ನೈಷಾ ನ್ಯಾಯ್ಯಾ ಗುರುವೃತ್ತಿಃ|

01003041C ಅನ್ಯೇಷಾಮಪಿ ವೃತ್ತ್ಯುಪರೋಧಂ ಕರೋಷ್ಯೇವಂ ವರ್ತಮಾನಃ|

01003041D ಲುಬ್ಧೋಽಸೀತಿ||

ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ಇದು ಗುರುವಿಗೆ ನಡೆದುಕೊಳ್ಳುವ ನ್ಯಾಯ ಮಾರ್ಗವಲ್ಲ. ಎರಡನೇ ಸಾರಿ ಭಿಕ್ಷೆಬೇಡುವುದರಿಂದ ನೀನು ಅನ್ಯ ಭಿಕ್ಷುಕರಿಗೆ ಹೊಟ್ಟೆ ಹೊರೆದುಕೊಳ್ಳಲು ಅಡ್ಡಿಯಾಗುತ್ತಿರುವೆ. ನಿನ್ನ ಈ ರೀತಿಯು ಲುಬ್ಧವಾಗಿದೆ.”

01003042A ಸ ತಥೇತ್ಯುಕ್ತ್ವಾ ಗಾ ಅರಕ್ಷತ್|

01003042B ರಕ್ಷಿತ್ವಾ ಚ ಪುನರುಪಾಧ್ಯಾಯಗೃಹಂ ಆಗಮ್ಯೋಪಾಧ್ಯಾಯಸ್ಯಾಗ್ರತಃ ಸ್ಥಿತ್ವಾ ನಮಶ್ಚಕ್ರೇ||

ಹೀಗೆ ಕೇಳಿದ ಅವನು ಗೋವುಗಳನ್ನು ರಕ್ಷಿಸಲು ಹೋದನು. ಗೋವುಗಳನ್ನು ರಕ್ಷಿಸಿ ಪುನಃ ಉಪಾಧ್ಯಾಯನನ ಮನೆಗೆ ಬಂದು ಉಪಾಧ್ಯಾಯನ ಎದುರಿನಲ್ಲಿ ನಿಂತು ನಮಸ್ಕರಿಸಿದನು.

01003043A ತಮುಪಾಧ್ಯಾಯಸ್ತಥಾಪಿ ಪೀವಾನಮೇವ ದೃಷ್ಟ್ವಾ ಪುನರುವಾಚ|

01003043B ಅಹಂ ತೇ ಸರ್ವಂ ಭೈಕ್ಷಂ ಗೃಹ್ಣಾಮಿ ನ ಚಾನ್ಯಚ್ಚರಸಿ|

01003043C ಪೀವಾನಸಿ|

01003043D ಕೇನ ವೃತ್ತಿಂ ಕಲ್ಪಯಸೀತಿ||

ಈಗಲೂ ಅವನು ದಷ್ಟಪುಷ್ಟನಾಗಿರುವುದನ್ನು ನೋಡಿ ಉಪಾಧ್ಯಾಯನು ಪುನಃ ಕೇಳಿದನು: “ನಿನ್ನ ಸರ್ವ ಭಿಕ್ಷವನ್ನೂ ನಾನು ತೆಗೆದುಕೊಂಡಿದ್ದೇನೆ, ಮತ್ತು ನೀನು ಎರಡನೇ ಬಾರಿ ಭಿಕ್ಷೆಗೆಂದು ಹೋಗುವುದಿಲ್ಲ. ಆದರೂ ನೀನು ದಷ್ಟಪುಷ್ಟನಾಗಿದ್ದೀಯೆ. ನಿನ್ನ ಹೊಟ್ಟೆಯನ್ನು ಹೊರೆಯಲು ಏನು ಮಾಡುತ್ತಿರುವೆ?”

01003044A ಸ ಉಪಾಧ್ಯಾಯಂ ಪ್ರತ್ಯುವಾಚ|

01003044B ಭೋ ಏತಾಸಾಂ ಗವಾಂ ಪಯಸಾ ವೃತ್ತಿಂ ಕಲ್ಪಯಾಮೀತಿ||

ಆಗ ಅವನು ಉಪಾಧ್ಯಾಯನಿಗೆ ಉತ್ತರಿಸಿದನು: “ಈ ಹಸುಗಳ ಹಾಲನ್ನು ಕುಡಿದು ನನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದೇನೆ.”

01003045A ತಮುಪಾಧ್ಯಾಯಃ ಪ್ರತ್ಯುವಾಚ|

01003045B ನೈತನ್ನ್ಯಾಯ್ಯಂ ಪಯ ಉಪಯೋಕ್ತುಂ ಭವತೋ ಮಯಾನನುಜ್ಞಾತಮಿತಿ||

ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ನನ್ನ ಅನುಮತಿಯಿಲ್ಲದೇ ನೀನು ಹಾಲನ್ನು ಕುಡಿಯುವುದು ಸರಿಯಲ್ಲ.”

01003046A ಸ ತಥೇತಿ ಪ್ರತಿಜ್ಞಾಯ ಗಾ ರಕ್ಷಿತ್ವಾ ಪುನರುಪಾಧ್ಯಾಯಗೃಹಾನೇತ್ಯ ಗುರೋರಗ್ರತಃ ಸ್ಥಿತ್ವಾ    ನಮಶ್ಚಕ್ರೇ||

“ಹಾಗೆಯೇ ಮಾಡುತ್ತೇನೆ” ಎಂದು ವಚನವನ್ನಿತ್ತ ಅವನು ಗೋವುಗಳನ್ನು ರಕ್ಷಿಸಿ ಪುನಃ ಉಪಾಧ್ಯಾಯನ ಮನೆಗೆ ಬಂದು ಗುರುವಿನ ಎದಿರು ನಿಂತು ಸಮಸ್ಕರಿಸಿದನು.

01003047A ತಮುಪಾಧ್ಯಾಯಃ ಪೀವಾನಮೇವಾಪಶ್ಯತ್|

01003047B ಉವಾಚ ಚೈನಂ|

01003047C ಭೈಕ್ಷಂ ನಾಶ್ನಾಸಿ ನ ಚಾನ್ಯಚ್ಚರಸಿ|

01003047D ಪಯೋ ನ ಪಿಬಸಿ|

01003047E ಪೀವಾನಸಿ|

01003047F ಕೇನ ವೃತ್ತಿಂ ಕಲ್ಪಯಸೀತಿ||

ಪುನಃ ದಷ್ಟಪುಷ್ಟವಾಗಿರುವ ಅವನನ್ನು ನೋಡಿ ಉಪಾಧ್ಯಾಯನು ಹೇಳಿದನು: “ಭಿಕ್ಷೆಯನ್ನೂ ಬೇಡುತ್ತಿಲ್ಲ. ಹಾಲನ್ನೂ ಕುಡಿಯುವುದಿಲ್ಲ. ಆದರೂ ದಷ್ಟಪುಷ್ಠನಾಗಿರುವೆ. ನಿನ್ನ ಹೊಟ್ಟೆ ಹೊರೆಯಲು ಏನು ಮಾಡುತ್ತಿರುವೆ?”

01003048A ಸ ಏವಮುಕ್ತ ಉಪಾಧ್ಯಾಯಂ ಪ್ರತ್ಯುವಾಚ|

01003048B ಭೋಃ ಫೇನಂ ಪಿಬಾಮಿ ಯಮಿಮೇ ವತ್ಸಾ ಮಾತೄಣಾಂ ಸ್ತನಂ ಪಿಬಂತ ಉದ್ಗಿರಂತೀತಿ||

ಉಪಾಧ್ಯಾಯನ ಈ ಪ್ರಶ್ನೆಗೆ ಅವನು ಉತ್ತರಿಸಿದನು: “ಕರುಗಳು ತಾಯಂದಿರ ಮೊಲೆ ಕುಡಿಯುವಾಗ ಹೊರಗೆ ಬೀಳುವ ಹಾಲಿನ ನೊರೆಯನ್ನು ನಾನು ಕುಡಿಯುತ್ತೇನೆ.”

01003049A ತಮುಪಾಧ್ಯಾಯಃ ಪ್ರತ್ಯುವಾಚ|

01003049B ಏತೇ ತ್ವದನುಕಂಪಯಾ ಗುಣವಂತೋ ವತ್ಸಾಃ ಪ್ರಭೂತತರಂ ಫೇನಮುದ್ಗಿರಂತಿ|

01003049C ತದೇವಮಪಿ ವತ್ಸಾನಾಂ ವೃತ್ತ್ಯುಪರೋಧಂ ಕರೋಷ್ಯೇವಂ ವರ್ತಮಾನಃ|

01003049D ಫೇನಮಪಿ ಭವಾನ್ನ ಪಾತುಮರ್ಹತೀತಿ||

ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ನಿನ್ನ ಮೇಲಿನ ಅನುಕಂಪದಿಂದ ಈ ಕರುಗಳು ಹೆಚ್ಚು ನೊರೆಯನ್ನು ಚೆಲ್ಲುತ್ತವೆ. ಈ ರೀತಿಯಲ್ಲಿ ಅವುಗಳು ತಮಗೇ ಆಹಾರವನ್ನು ಕಡಿಮೆಮಾಡಿಕೊಳ್ಳುತ್ತವೆ. ಈ ರೀತಿ ಮಾಡುವುದೂ ಸರಿಯಲ್ಲ.”

01003050A ಸ ತಥೇತಿ ಪ್ರತಿಜ್ಞಾಯ ನಿರಾಹಾರಸ್ತಾ ಗಾ ಅರಕ್ಷತ್|

01003050B ತಥಾ ಪ್ರತಿಷಿದ್ಧೋ ಭೈಕ್ಷಂ ನಾಶ್ನಾತಿ ನ ಚಾನ್ಯಚ್ಚರತಿ|

01003050C ಪಯೋ ನ ಪಿಬತಿ|

01003050D ಫೇನಂ ನೋಪಯುಂಕ್ತೇ||

“ಹಾಗೆಯೇ ಮಾಡುತ್ತೇನೆ” ಎಂದು ವಚನವನ್ನಿತ್ತು ಅವನು ನಿರಾಹಾರನಾಗಿ ಗೋವುಗಳನ್ನು ಕಾಯಲು ಹೋದನು. ಅವನು ಭಿಕ್ಷೆ ಬೇಡಲು ಹೋಗಲಿಲ್ಲ, ಹಾಲನ್ನು ಕುಡಿಯಲಿಲ್ಲ, ಕೆನೆಯನ್ನೂ ನೆಕ್ಕಲಿಲ್ಲ.

01003051A ಸ ಕದಾಚಿದರಣ್ಯೇ ಕ್ಷುಧಾರ್ತೋಽರ್ಕಪತ್ರಾಣ್ಯಭಕ್ಷಯತ್||

01003052A ಸ ತೈರರ್ಕಪತ್ರೈರ್ಭಕ್ಷಿತೈಃ ಕ್ಷಾರಕಥೂಷ್ಣವಿಪಾಕಿಭಿಶ್ಚಕ್ಷುಷ್ಯುಪಹತೋಽನ್ಧೋಽಭವತ್|

01003052B ಸೋಽನ್ಧೋಽಪಿ ಚಂಕ್ರಮ್ಯಮಾಣಃ ಕೂಪೇಽಪತತ್||

ಒಮ್ಮೆ ಅರಣ್ಯದಲ್ಲಿ ಹಸಿವೆಯಿಂದ ಬಳಲಿದ ಅವನು ಅರ್ಕಪತ್ರಗಳನ್ನು ತಿಂದನು. ಅರ್ಕಪತ್ರಗಳನ್ನು ಸೇವಿಸಿದುದರಿಂದ ಅದರ ಕ್ಷಾರ, ಕಟು ಮತ್ತು ಉಷ್ಣದ ಗುಣಗಳಿಂದಾಗಿ ಅವನ ಕಣ್ಣುಗಳು ಕುರುಡಾದವು. ಅಂಧನಾಗಿ, ದಾರಿಯನ್ನು ಕಾಣದೇ ಒಂದು ಬಾವಿಯಲ್ಲಿ ಬಿದ್ದನು.

01003053A ಅಥ ತಸ್ಮಿನ್ನನಾಗಚ್ಛತ್ಯುಪಾಧ್ಯಾಯಃ ಶಿಷ್ಯಾನವೋಚತ್|

01003053B ಮಯೋಪಮನ್ಯುಃ ಸರ್ವತಃ ಪ್ರತಿಷಿದ್ಧಃ|

01003053C ಸ ನಿಯತಂ ಕುಪಿತಃ|

01003053D ತತೋ ನಾಗಚ್ಛತಿ ಚಿರಗತಶ್ಚೇತಿ||

01003054A ಸ ಏವಮುಕ್ತ್ವಾ ಗತ್ವಾರಣ್ಯಮುಪಮನ್ಯೋರಾಹ್ವಾನಂ ಚಕ್ರೇ|

01003054B ಭೋ ಉಪಮನ್ಯೋ ಕ್ವಾಸಿ|

01003054C ವತ್ಸೈಹೀತಿ||

ಅವನು ಬರದೇ ಇದ್ದುದನ್ನು ನೋಡಿ ಉಪಾಧ್ಯಾಯನು ತನ್ನ ಶಿಷ್ಯರಿಗೆ ಹೇಳಿದನು: “ಉಪಮನ್ಯುವು ನನ್ನ ಎಲ್ಲ ರೀತಿಯ ಪ್ರತಿಬಂಧದಿಂದ ಸಿಟ್ಟಾಗಿರಬಹುದು. ಅದಕ್ಕಾಗಿಯೇ ಅವನು ಬರುವುದನ್ನು ತಡಮಾಡುತ್ತಿದ್ದಾನೆ.” ಹೀಗೆ ಹೇಳುತ್ತಾ ಅವನು ಅರಣ್ಯಕ್ಕೆ ಹೋಗಿ ಅಲ್ಲಿ ಉಪಮನ್ಯುವನ್ನು ಕರೆಯ ತೊಡಗಿದನು: “ಉಪಮನ್ಯು! ಎಲ್ಲಿದ್ದೀಯೆ? ವತ್ಸ! ಇಲ್ಲಿ ಬಾ.”

01003055A ಸ ತದಾಹ್ವಾನಮುಪಾಧ್ಯಾಯಾಚ್ಛ್ರುತ್ವಾ ಪ್ರತ್ಯುವಾಚೋಚ್ಚೈಃ|

01003055B ಅಯಮಸ್ಮಿ ಭೋ ಉಪಾಧ್ಯಾಯ ಕೂಪೇ ಪತಿತ ಇತಿ||

ಉಪಾಧ್ಯಾಯನ ಆ ಕರೆಯನ್ನು ಕೇಳಿ ಉಚ್ಛ ಸ್ವರದಲ್ಲಿ ಕೂಗಿ ಹೇಳಿದನು: “ಉಪಾಧ್ಯಾಯರೇ! ನಾನು ಇಲ್ಲಿ ಬಾವಿಯಲ್ಲಿ ಬಿದ್ದಿದ್ದೇನೆ.”

01003056A ತಮುಪಾಧ್ಯಾಯಃ ಪ್ರತ್ಯುವಾಚ|

01003056B ಕಥಮಸಿ ಕೂಪೇ ಪತಿತ ಇತಿ||

01003057A ಸ ತಂ ಪ್ರತ್ಯುವಾಚ|

01003057B ಅರ್ಕಪತ್ರಾಣಿ ಭಕ್ಷಯಿತ್ವಾಂಧೀಭೂತೋಽಸ್ಮಿ|

01003057C ಅತಃ ಕೂಪೇ ಪತಿತ ಇತಿ||

01003058A ತಮುಪಾಧ್ಯಾಯಃ ಪ್ರತ್ಯುವಾಚ|

01003058B ಅಶ್ವಿನೌ ಸ್ತುಹಿ|

01003058C ತೌ ತ್ವಾಂ ಚಕ್ಷುಷ್ಮಂತಂ ಕರಿಷ್ಯತೋ ದೇವಭಿಷಜಾವಿತಿ||

ಆಗ ಉಪಾಧ್ಯಾಯನು ತಿರುಗಿ ಕೇಳಿದನು: “ಬಾವಿಯಲ್ಲಿ ಹೇಗೆ ಬಿದ್ದೆ?” ಅದಕ್ಕೆ ಉತ್ತರಿಸಿದನು: “ಅರ್ಕಪತ್ರಗಳನ್ನು ತಿಂದು ಅಂಧನಾಗಿದ್ದೇನೆ.  ಆದ್ದರಿಂದ ಬಾವಿಯಲ್ಲಿ ಬಿದ್ದಿದ್ದೇನೆ.” ಆಗ ಉಪಾಧ್ಯಾಯನು ಹೇಳಿದನು: “ಅಶ್ವಿನಿ[1]ಯರನ್ನು ಸ್ತುತಿಸು. ಆ ದೇವವೈದ್ಯರು ನಿನ್ನ ದೃಷ್ಟಿಯನ್ನು ಸರಿಮಾಡುವರು.”

01003059A ಸ ಏವಮುಕ್ತ ಉಪಾಧ್ಯಾಯೇನ ಸ್ತೋತುಂ ಪ್ರಚಕ್ರಮೇ ದೇವಾವಶ್ವಿನೌ ವಾಗ್ಭಿರೃಗ್ಭಿಃ||

ಉಪಾಧ್ಯಾಯನ ಮಾತಿನಂತೆ ಋಗ್ವೇದದಲ್ಲಿರುವ ಶ್ಲೋಕಗಳಿಂದ ಅಶ್ವಿನೀ ದೇವತೆಗಳನ್ನು ಸ್ತುತಿಸಲು ತೊಡಗಿದನು.

01003060a ಪ್ರ ಪೂರ್ವಗೌ ಪೂರ್ವಜೌ ಚಿತ್ರಭಾನೂ

         ಗಿರಾ ವಾ ಶಂಸಾಮಿ ತಪನಾವನಂತೌ|

01003060c ದಿವ್ಯೌ ಸುಪರ್ಣೌ ವಿರಜೌ ವಿಮಾನಾವ್

         ಅಧಿಕ್ಷಿಯಂತೌ ಭುವನಾನಿ ವಿಶ್ವಾ||

“ಅಶ್ವಿನೀ ದೇವತೆಗಳೇ! ನೀವು ಎಲ್ಲರಿಗಿಂತಲೂ ಮೊದಲು ಯಜ್ಞಕ್ಕೆ ಹೋಗುವವರು. ಅಶ್ವಜಾತಿಯ ಸ್ವಭಾವವನ್ನು ಅನುಸರಿಸಿ ಹುಟ್ಟಿದವರು. ನಿಮ್ಮ ಪ್ರಕಾಶವು ಅಗ್ನಿ ಸಮಾನ. ನೀವು ಸ್ವಸಾಮರ್ಥ್ಯದಿಂದ ಅನೇಕ ರೂಪಗಳನ್ನು ಧರಿಸುತ್ತೀರಿ. ನಿಮ್ಮ ಗಮನವು ಮನೋಹರವಾದುದು. ನೀವು ರಜೋಗುಣ ರಹಿತರಾಗಿದ್ದು ಎಲ್ಲ ಲೋಕಗಳಲ್ಲಿಯೂ ನಿಮ್ಮ ವಿಮಾನವನ್ನು ನಡೆಸುತ್ತೀರಿ. ನಿಮ್ಮನ್ನು ನಾನು ಈ ವಾಕ್ಕುಗಳಿಂದ ಸ್ತುತಿಸುತ್ತೇನೆ[2].

01003061a ಹಿರಣ್ಮಯೌ ಶಕುನೀ ಸಾಂಪರಾಯೌ

         ನಾಸತ್ಯದಸ್ರೌ ಸುನಸೌ ವೈಜಯಂತೌ|

01003061c ಶುಕ್ರಂ ವಯಂತೌ ತರಸಾ ಸುವೇಮಾವ್

         ಅಭಿ ವ್ಯಯಂತಾವಸಿತಂ ವಿವಸ್ವತ್||

ಪಕ್ಷಿಗಳಂತೆ ವೇಗವಾಗಿ ಹೋಗುವ ಸುವರ್ಣಮಯ ವಿಮಾನಗಳಲ್ಲಿ ಕುಳಿತು ನೀವು ಹೋಗುತ್ತೀರಿ. ನಿಮ್ಮ ಮೈ ಚಿನ್ನದ ಬಣ್ಣದ್ದು. ನೀವು ಆರೋಗ್ಯ ಶಕ್ತಿಯನ್ನು ಕೊಡುತ್ತೀರಿ. ನೀವು ಪರಲೋಕ ಬಂಧುಗಳನ್ನೂ ಭಕ್ತರನ್ನೂ ಆಪತ್ತುಗಳಿಂದ ಉದ್ಧರಿಸುತ್ತೀರಿ. ನೀವು ಸುಳ್ಳಾಡುವುದಿಲ್ಲ. ನೀವು ಅಶ್ವರೂಪದಲ್ಲಿದ್ದ ಸೂರ್ಯದೇವನ ಮೂಗಿನ ಹೊಳ್ಳೆಗಳಿಂದ ಹುಟ್ಟಿದಿರಿ. ನಿಮ್ಮ ಮೂಗುಗಳು ಸುಂದರ. ಸೂರ್ಯನ ಮಕ್ಕಳಾಗಿದ್ದು ತಂದೆಯ ಸಾಮರ್ಥ್ಯದಿಂದ ಕೃಷ್ಣ ಕುಷ್ಠ ರೋಗವನ್ನು ಯಶಸ್ವಿಯಾಗಿ ಹೋಗಲಾಡಿಸುವ ವೈದ್ಯರು ನೀವು. ನೀವು ಒಳ್ಳೆಯ ಮೈಬಣ್ಣವನ್ನೂ ನೇತ್ರಶಕ್ತಿಯನ್ನೂ ನೀಡುತ್ತೀರಿ. ಹೇಗೆ ನೇಕಾರರು ದಾರದ ಜೊತೆ ಸೇರಿದ ಕಪ್ಪು ಕೂದಲು ಮುಂತಾದವುಗಳನ್ನು ತೆಗೆದು ಹಾಕಿ ಶುದ್ಧ ದಾರದಿಂದ ನೇಯುತ್ತಾರೆಯೋ ಹಾಗೆ ನೀವು ಶ್ಯಾಮ ಕುಷ್ಠವನ್ನು ತೊಡೆದುಹಾಕಿ ಒಳ್ಳೆಯ ಶುಕ್ರಕಾಂತಿಯನ್ನು ನೀಡುತ್ತೀರಿ[3].

01003062a ಗ್ರಸ್ತಾಂ ಸುಪರ್ಣಸ್ಯ ಬಲೇನ ವರ್ತಿಕಾಂ

         ಅಮುಂಚತಾಮಶ್ವಿನೌ ಸೌಭಗಾಯ|

01003062c ತಾವತ್ಸುವೃತ್ತಾವನಮಂತ ಮಾಯಯಾ

         ಸತ್ತಮಾ ಗಾ ಅರುಣಾ ಉದಾವಹನ್||

ಅಶ್ವಿನೀ ದೇವತೆಗಳೇ! ಗರುಡನಷ್ಟೇ ಪರಾಕ್ರಮಿ ಮತ್ತು ವೇಗಶಾಲಿಯಾದ ಒಂದು ನಾಯಿಯು ಗುಬ್ಬಚ್ಚಿಯ ಜಾತಿಯ ಒಂದು ಹೆಣ್ಣು ಪಕ್ಷಿಯನ್ನು ಬಾಯಲ್ಲಿ ಕಚ್ಚಿ ಕೊಂಡಿದ್ದಾಗ ನೀವು ಅದನ್ನು ಬಿಡಿಸಿ ಅದಕ್ಕೆ ಪುನಃ ಜೀವನ ಸೌಖ್ಯವನ್ನು ದೊರಕಿಸಿಕೊಟ್ಟಿರಿ. ಸೋಮಯಾಗದಲ್ಲಿ ಇಂದ್ರನೇ ಮೊದಲಾದ ದೇವತೆಗಳಿದ್ದರೂ ಯಜಮಾನನನ್ನು ಕಾಡಿಸುವ ತುಂಟ ಹಸುಗಳ ಮೇಲ್ವಿಚಾರಣೆಯು ನಿಮ್ಮಿಬ್ಬರ ಹೊರತು ಬೇರೆ ಯಾರಿಗೂ ಸಾದ್ಯವಿಲ್ಲ ಎಂದು ತಿಳಿದು ಅವುಗಳನ್ನು ಕಾಪಾಡುವುದಕ್ಕೆ ನಿಮ್ಮನ್ನೇ ಪ್ರಾರ್ಥಿಸಿದ್ದನು[4].

01003063a ಷಷ್ಟಿಶ್ಚ ಗಾವಸ್ತ್ರಿಶತಾಶ್ಚ ಧೇನವ

         ಏಕಂ ವತ್ಸಂ ಸುವತೇ ತಂ ದುಹಂತಿ|

01003063c ನಾನಾಗೋಷ್ಠಾ ವಿಹಿತಾ ಏಕದೋಹನಾಸ್

         ತಾವಶ್ವಿನೌ ದುಹತೋ ಘರ್ಮಮುಕ್ಥ್ಯಂ||

೩೬೦ ಹಸುಗಳು ಒಂದು ವರ್ಷ ಪರ್ಯಂತವೂ ತಮ್ಮ ಸರದಿಯ ಪ್ರಕಾರ ಹಾಲು ಕರೆದು ಘರ್ಮವನ್ನು ಸಿದ್ಧಪಡಿಸಿ ಕೊಡುತ್ತವೆ. ಘರ್ಮವನ್ನು ತಯಾರಿಸಲು ಒಂದೊಂದು ದಿನಕ್ಕೆ ಒಂದೊಂದು ಹಸುವು ಹಾಲನ್ನು ನೀಡುವುದರಿಂದ, ಅವುಗಳೆಲ್ಲವೂ ಪ್ರತ್ಯೇಕ ಕೊಟ್ಟಿಗೆಗಳಲ್ಲಿ ಇರುವಂತೆ ತೋರುತ್ತವೆ. ಅವುಗಳನ್ನು ಅಧ್ವರ್ಯ ಎಂಬ ಒಬ್ಬನೇ ಋತ್ವಿಕನು ಕರೆಯುತ್ತಾನೆ. ಹೀಗೆ ಸಿದ್ಧಪಡಿಸಿದ ಉತ್ತಮ ಘರ್ಮವನ್ನು ಯಾಜ್ಞಿಕರು ಅಶ್ವಿನೀದೇವತೆಗಳಿಗೆ ಸಮರ್ಪಿಸುತ್ತಾರೆ.

01003064a ಏಕಾಂ ನಾಭಿಂ ಸಪ್ತಶತಾ ಅರಾಃ ಶ್ರಿತಾಃ

         ಪ್ರಧಿಷ್ವನ್ಯಾ ವಿಂಶತಿರರ್ಪಿತಾ ಅರಾಃ|

01003064c ಅನೇಮಿ ಚಕ್ರಂ ಪರಿವರ್ತತೇಽಜರಂ

         ಮಾಯಾಶ್ವಿನೌ ಸಮನಕ್ತಿ ಚರ್ಷಣೀ||

ಜಗತ್ಪಾಲಕ ಸೂರ್ಯನ ರಥಕ್ಕೆ ಕಾಲವೇ ಚಕ್ರ. ಆ ಕಾಲಚಕ್ರಕ್ಕೆ ಸಂವತ್ಸರವೇ ಒಂದು ಸ್ಥೂಲ ನಾಭಿ. ಕಾಲಚಕ್ರಕ್ಕೆ ಒಟ್ಟು ೭೦೦ ಅರಗಳಿವೆ: ೩೫೦ ಹಗಲುಗಳು ಮತ್ತು ೩೫೦ ರಾತ್ರಿಗಳು. ಈ ಚಕ್ರದ ಹಳಿಗೆ ಸಾವನ ಸಂವತ್ಸರದ ೩೬೦ ದಿವಸಗಳಲ್ಲಿ ಉಳಿದ ಹತ್ತು ಹಗಲುಗಳು ಮತ್ತು ಹತ್ತು ರಾತ್ರಿಗಳು ಉದ್ದವಾದ ಅರಗಳಂತೆ ಸೇರಿಕೊಂಡಿವೆ. 

01003065a ಏಕಂ ಚಕ್ರಂ ವರ್ತತೇ ದ್ವಾದಶಾರಂ ಪ್ರಧಿ

         ಷಣ್ಣಾಭಿಮೇಕಾಕ್ಷಮಮೃತಸ್ಯ ಧಾರಣಂ|

01003065c ಯಸ್ಮಿನ್ದೇವಾ ಅಧಿ ವಿಶ್ವೇ ವಿಷಕ್ತಾಸ್

         ತಾವಶ್ವಿನೌ ಮುಂಚತೋ ಮಾ ವಿಷೀದತಂ||

ಒಂದು ಚಕ್ರದಿಂದ ರಥವು ಚಲಿಸುವುದಿಲ್ಲ. ಆದುದರಿಂದ ಇನ್ನೊಂದು ಚಕ್ರದ ಕಲ್ಪನೆಯನ್ನು ಮಾಡಿದ್ದಾರೆ. ಕಾಲಚಕ್ರದ ಸಂವತ್ಸರವೆಂಬ ಸ್ಥೂಲ ನಾಭಿಯಲ್ಲಿ ಹನ್ನೆರಡು ಮಾಸಗಳು ಹನ್ನೆರಡು ಅರಗಳಂತಿವೆ. ಆರು ಋತುಗಳು ಆ ಚಕ್ರದ ಆರು ನಾಭಿಗಳು. ಆ ಚಕ್ರಕ್ಕೆ ಒಂದೇ ಒಂದು ದೃಢ ಅಚ್ಚು ಮರವಿದೆ. ಸ್ವರ್ಗ ರಕ್ಷಕ ಮತ್ತು ಎಲ್ಲ ದೇವತೆಗಳ ಆಧಾರವಾಗಿರುವ ಇಂತಹ ಚಕ್ರವನ್ನು ಅಶ್ವಿನೀ ದೇವತೆಗಳು ನಡೆಸುತ್ತಾರೆ. ಹೀಗೆ ಜಗತ್ತಿಗೆ ಆಧಾರ ಸೂರ್ಯದೇವನ ರಥ ಚಕ್ರವನ್ನು ನಡೆಸುವ ಅಶ್ವಿನೀ ದೇವತೆಗಳೇ! ಸಂಕಟದಲ್ಲಿ ಸಿಕ್ಕಿಬಿದ್ದಿರುವ ನನ್ನನ್ನು ಪಾರುಮಾಡಿ.

01003066a ಅಶ್ವಿನಾವಿಂದ್ರಮಮೃತಂ ವೃತ್ತಭೂಯೌ

         ತಿರೋಧತ್ತಾಮಶ್ವಿನೌ ದಾಸಪತ್ನೀ|

01003066c ಭಿತ್ತ್ವಾ ಗಿರಿಮಶ್ವಿನೌ ಗಾಮುದಾಚರಂತೌ

         ತದ್ವೃಷ್ಟಮಹ್ನಾ ಪ್ರಥಿತಾ ವಲಸ್ಯ||

ಅಶ್ವಿನೀ ದೇವತೆಗಳೇ! ಮನುಷ್ಯರಿಗೆ ಉಪಕಾರಿಯಾದ ನೀರಿನಲ್ಲಿ ಚಂದ್ರನ ಶಕ್ತಿಯು ಇರುವುದರಿಂದ ನೀವು ನೀರಿನಿಂದ ಚಿಕಿತ್ಸೆ ನೀಡುತ್ತೀರಿ. ಮೇರು ಪರ್ವತದಿಂದ ಹೊರಟು ಬರುವ ಅನ್ನವನ್ನು ಕೊಡಬಲ್ಲ ಮಳೆಯನ್ನೂ ನೀವು ಬೇಗ ಉಂಟುಮಾಡುತ್ತೀರಿ.

01003067a ಯುವಾಂ ದಿಶೋ ಜನಯಥೋ ದಶಾಗ್ರೇ

         ಸಮಾನಂ ಮೂರ್ಧ್ನಿ ರಥಯಾ ವಿಯಂತಿ|

01003067c ತಾಸಾಂ ಯಾತಮೃಷಯೋಽನುಪ್ರಯಾಂತಿ

         ದೇವಾ ಮನುಷ್ಯಾಃ ಕ್ಷಿತಿಮಾಚರಂತಿ||

ಅಶ್ವಿನೀ ದೇವತೆಗಳು ಇತರ ದೇವತೆಗಳಿಗಿಂತ ಮೊದಲೇ ಸೋಮಯಾಗಕ್ಕೆ ಹೋಗುತ್ತಾರೆ. ಆದುದರಿಂದ ಇವರು ಇತರ ದೇವತೆಗಳ ಪ್ರಾದುರ್ಭಾವ ಸೂಚಕರು. ಋಷಿಗಳು ಮತ್ತು ಮನುಷ್ಯರು ಈ ದೇವತೆಗಳನ್ನು ಕ್ರಮವರಿದು ಪೂಜಿಸುತ್ತಾರೆ. ದೇವತೆಗಳು ಮತ್ತು ಮನುಷ್ಯರು ನಿಮ್ಮ ಐಶ್ವರ್ಯ ಪ್ರತಿಪಾದಕ ಸ್ತೋತ್ರಮಾಡುತ್ತಾರೆ.

01003068a ಯುವಾಂ ವರ್ಣಾನ್ವಿಕುರುಥೋ ವಿಶ್ವರೂಪಾನ್

         ತೇಽಧಿಕ್ಷಿಯಂತಿ ಭುವನಾನಿ ವಿಶ್ವಾ|

01003068c ತೇ ಭಾನವೋಽಪ್ಯನುಸೃತಾಶ್ಚರಂತಿ

         ದೇವಾ ಮನುಷ್ಯಾಃ ಕ್ಷಿತಿಮಾಚರಂತಿ||

ಅಶ್ವಿನೀ ದೇವತೆಗಳು ಸೂರ್ಯಕಿರಣಗಳ ಏಳು ಬಣ್ಣಗಳನ್ನೂ ಆಯಾ ಸಮಯಗಳಲ್ಲಿ ಪ್ರಕಟಪಡಿಸಿ ಅವು ಭೂಮಂಡಲವನ್ನು ಆವರಿಸುವಂತೆ ಮಾಡುತ್ತಾರೆ. ಅವರ ಇಚ್ಛೆಯಂತೆ ಈ ಕಿರಣಗಳು ಜನರಿಗೆ ರೋಗಪರಿಹಾರಕ ಮತ್ತು ಆರೋಗ್ಯಪ್ರದ. ಈ ರೀತಿಯ ಮಹಿಮೆಯ ಅವರನ್ನು ದೇವತೆಗಳೂ ಮನುಷ್ಯರೂ ಸ್ತುತಿಸುತ್ತಾರೆ.

01003069a ತೌ ನಾಸತ್ಯಾವಶ್ವಿನಾವಾಮಹೇ ವಾಂ

         ಸ್ರಜಂ ಚ ಯಾಂ ಬಿಭೃಥಃ ಪುಷ್ಕರಸ್ಯ|

01003069c ತೌ ನಾಸತ್ಯಾವಮೃತಾವೃತಾವೃಧಾವ್

         ಋತೇ ದೇವಾಸ್ತತ್ ಪ್ರಪದೇನ ಸೂತೇ||

ಕಮಲದ ಮಾಲೆಗಳನ್ನು ಧರಿಸಿ ಅಶ್ವಿನೀ ದೇವತೆಗಳು ಅತೀವ ಸುಂದರರಾಗಿ ಕಾಣುತ್ತಾರೆ. ಅಶ್ವಿನೀ ದೇವತೆಗಳೇ ಸೋಮಯಾಗಕ್ಕೆ ಮೊದಲು ಹೋಗುವವರಾದುದರಿಂದ ಇವರನ್ನು ಬಿಟ್ಟು ಇತರ ದೇವತೆಗಳು ತಮ್ಮ ಅಂಶವನ್ನು ಸ್ವೀಕರಿಸುವುದಿಲ್ಲ. ಅಂಥಹ ಮರಣರಹಿತರೂ, ಯಜ್ಞವರ್ಧಕರೂ ಆದ ಅಶ್ವಿನೀ ದೇವತೆಗಳನ್ನು ಕಣ್ಣುಗಳಿಲ್ಲದೆ ಸಾಧನ ಹೀನನಾಗಿರುವ ನಾನು ಮನಸ್ಸಿನಲ್ಲಿಯೇ ಪೂಜಿಸುತ್ತೇನೆ.

01003070a ಮುಖೇನ ಗರ್ಭಂ ಲಭತಾಂ ಯುವಾನೌ

         ಗತಾಸುರೇತತ್ಪ್ರಪದೇನ ಸೂತೇ|

01003070c ಸದ್ಯೋ ಜಾತೋ ಮಾತರಮತ್ತಿ ಗರ್ಭಃ 

         ತಾವಶ್ವಿನೌ ಮುಂಚಥೋ ಜೀವಸೇ ಗಾಃ||

ಅಶ್ವಿನೀ ದೇವತೆಗಳು ನವಮಾಸಕಾಲ ಗರ್ಭದಲ್ಲಿದ್ದು ನಂತರ ಹುಟ್ಟಿದವರಲ್ಲ. ಅಶ್ವರೂಪ ಸೂರ್ಯನಿಂದ ವಡವಾ ರೂಪಿಣಿ ಸಂಜ್ಞಾದೇವಿಯಲ್ಲಿ ಮುಖಸಂಬಂಧಮಾತ್ರದಿಂದ ತರುಣರಾಗಿಯೇ ಹುಟ್ಟಿದವರು. ಅಲ್ಪವಾದ ಪ್ರಾಣಶಕ್ತಿ ಮತ್ತು ಆಯುಸ್ಸನ್ನುಳ್ಳ ಮನುಷ್ಯ ಶಿಶುಗಳಿಗೆ ಮಾತ್ರವೇ ಒಂಭತ್ತು ತಿಂಗಳು ತಾಯಿಯ ಗರ್ಭವಾಸವೂ, ಹುಟ್ಟಿದ ನಂತರ ತಮ್ಮ ಜೀವನಕ್ಕೆ ತಾಯಿಯ ಹಾಲಿನ ಅಪೇಕ್ಷೆಯೂ ಇರುತ್ತದೆ. ದೇವತೆಗಳಿಗೆ ಹೀಗಿಲ್ಲ. ಆದುದರಿಂದ ನಿತ್ಯ ತರುಣ ಅಶ್ವಿನೀ ದೇವತೆಗಳೇ! ಸಾಮರ್ಥ್ಯಶಾಲಿಗಳಾದ ನೀವು ಸುಖಜೀವನವನ್ನು ಮಾಡುವುದಕ್ಕೆ ನನಗೆ ನೇತ್ರಶಕ್ತಿಯನ್ನು ದಾನ ಮಾಡಿ.”

01003071A ಏವಂ ತೇನಾಭಿಷ್ಟುತಾವಶ್ವಿನಾವಾಜಗ್ಮತುಃ|

01003071B ಆಹತುಶ್ಚೈನಂ|

01003071C ಪ್ರೀತೌ ಸ್ವಃ|

01003071D ಏಷ ತೇಽಪೂಪಃ|

01003071E ಅಶಾನೈನಮಿತಿ||

ಹೀಗೆ ಅವರನ್ನು ಸ್ತುತಿಸಿದಾಗ ಅಶ್ವಿನಿಗಳು ಅಲ್ಲಿಗೆ ಬಂದು: “ನಾವು ನಿನ್ನ ಮೇಲೆ ಪ್ರೀತರಾಗಿದ್ದೇವೆ. ಇದೋ ಈ ಪೂಪವನ್ನು ತಿನ್ನು.” ಎಂದರು.

01003072A ಸ ಏವಮುಕ್ತಃ ಪ್ರತ್ಯುವಾಚ|

01003072B ನಾನೃತಮೂಚತುರ್ಭವಂತೌ|

01003072C ನ ತ್ವಹಮೇತಮಪೂಪಮುಪಯೋಕ್ತುಮುತ್ಸಹೇ ಅನಿವೇದ್ಯ ಗುರವ ಇತಿ||

ಇದನ್ನು ಕೇಳಿದ ಅವನು ಉತ್ತರಿಸಿದನು: “ನಿಮ್ಮ ವಚನಗಳು ಎಂದೂ ಸುಳ್ಳಾಗಲಾರವು. ಆದರೆ ನೀವು ಕೊಟ್ಟಿರುವ ಈ ಪೂಪವನ್ನು ನನ್ನ ಗುರುವಿಗೆ ಕೊಡದೇ ತಿನ್ನಲು ಸಾದ್ಯವಿಲ್ಲ.”

01003073A ತತಸ್ತಮಶ್ವಿನಾವೂಚತುಃ|

01003073B ಆವಾಭ್ಯಾಂ ಪುರಸ್ತಾದ್ಭವತ ಪಾಧ್ಯಾಯೇನೈವಮೇವಾಭಿಷ್ಟುತಾಭ್ಯಾಮಪೂಪಃ ಪ್ರೀತಾಭ್ಯಾಂ ದತ್ತಃ|

01003073C ಉಪಯುಕ್ತಶ್ಚ ಸ ತೇನಾನಿವೇದ್ಯ ಗುರವೇ|

01003073D ತ್ವಮಪಿ ತಥೈವ ಕುರುಷ್ವ ಯಥಾ ಕೃತಮುಪಾಧ್ಯಾಯೇನೇತಿ||

ಅದಕ್ಕೆ ಅಶ್ವಿನಿ ದೇವತೆಗಳು ಉತ್ತರಿಸಿದರು: “ಹಿಂದೆ ನಿನ್ನ ಉಪಾಧ್ಯಾಯನೂ ಕೂಡ ನಮ್ಮನ್ನು ಸ್ತುತಿಸಿದಾಗ ಅವನಿಗೆ ಪ್ರೀತಿಯಿಂದ ಪೂಪವನ್ನಿತ್ತಾಗ ತನ್ನ ಗುರುವಿಗೆ ನೀಡದೇ ಸೇವಿಸಿದ್ದನು. ನೀನೂ ಕೂಡ ನಿನ್ನ ಗುರು ಮಾಡಿದಹಾಗೆ ಮಾಡು.”

01003074A ಸ ಏವಮುಕ್ತಃ ಪುನರೇವ ಪ್ರತ್ಯುವಾಚೈತೌ|

01003074B ಪ್ರತ್ಯನುನಯೇ ಭವಂತಾವಶ್ವಿನೌ|

01003074C ನೋತ್ಸಹೇಽಹಮನಿವೇದ್ಯೋಪಾಧ್ಯಾಯಾಯೋಪಯೋಕ್ತುಮಿತಿ||

ಅವರ ಈ ಮಾತುಗಳನ್ನು ಕೇಳಿ ಪುನಃ ಅವನು ಹೇಳಿದನು: “ಅಶ್ವಿನಿಗಳೇ! ನಿಮ್ಮ ಕ್ಷಮೆಯನ್ನು ಕೇಳುತ್ತೇನೆ. ಮೊದಲು ನನ್ನ ಉಪಾಧ್ಯಾಯನಿಗೆ ಇದನ್ನು ನೀಡದೇ ನಾನು ತಿನ್ನಲಾರೆ.”

01003075A ತಮಶ್ವಿನಾವಾಹತುಃ|

01003075B ಪ್ರೀತೌ ಸ್ವಸ್ತವಾನಯಾ ಗುರುವೃತ್ತ್ಯಾ|

01003075C ಉಪಾಧ್ಯಾಯಸ್ಯ ತೇ ಕಾರ್ಷ್ಣಾಯಸಾ ದಂತಾಃ|

01003075D ಭವತೋ ಹಿರಣ್ಮಯಾ ಭವಿಷ್ಯಂತಿ|

01003075E ಚಕ್ಷುಷ್ಮಾಂಶ್ಚ ಭವಿಷ್ಯಸಿ|

01003075F ಶ್ರೇಯಶ್ಚಾವಾಪ್ಸ್ಯಸೀತಿ||

ಆಗ ಅಶ್ವಿನಿಯರು ಹೇಳಿದರು: “ನಿನ್ನ ಗುರುಭಕ್ತಿಯಿಂದ ಪ್ರೀತರಾಗಿದ್ದೇವೆ. ನಿನ್ನ ಉಪಾಧ್ಯಾಯನ ಹಲ್ಲುಗಳು ಕಪ್ಪು ಕಬ್ಬಿಣದಂತಿವೆ. ನಿನ್ನವು ಚಿನ್ನದವುಗಳಾಗುತ್ತವೆ. ನಿನ್ನ ದೃಷ್ಠಿಯೂ ಮರಳಿ ಬರುತ್ತದೆ. ಮತ್ತು ನಿನಗೆ ಒಳ್ಳೆಯ ಶ್ರೇಯಸ್ಸು ಆಗುತ್ತದೆ.”

01003076A ಸ ಏವಮುಕ್ತೋಽಶ್ವಿಭ್ಯಾಂ ಲಬ್ಧಚಕ್ಷುರುಪಾಧ್ಯಾಯಸಕಾಶಂ ಆಗಮ್ಯೋಪಾಧ್ಯಾಯಮಭಿವಾದ್ಯಾಚಚಕ್ಷೇ|

01003076B ಸ ಚಾಸ್ಯ ಪ್ರೀತಿಮಾನಭೂತ್||

01003077A ಆಹ ಚೈನಂ|

01003077B ಯಥಾಶ್ವಿನಾವಾಹತುಸ್ತಥಾ ತ್ವಂ ಶ್ರೇಯೋಽವಾಪ್ಸ್ಯಸೀತಿ|

01003077C ಸರ್ವೇ ಚ ತೇ ವೇದಾಃ ಪ್ರತಿಭಾಸ್ಯಂತೀತಿ||

01003078A ಏಷಾ ತಸ್ಯಾಪಿ ಪರೀಕ್ಷೋಪಮನ್ಯೋಃ||

ಅಶ್ವಿನಿಯರು ಈ ರೀತಿ ಹೇಳಿದ ನಂತರ, ಪುನಃ ದೃಷ್ಠಿಯನ್ನು ಪಡೆದು ಉಪಾಧ್ಯಾಯನ ಬಳಿ ಬಂದು ಉಪಾಧ್ಯಾಯನನ್ನು ನಮಸ್ಕರಿಸಿ, ನಡೆದುದೆಲ್ಲವನ್ನೂ ಹೇಳಿದನು. ಅವನೂ ಸಹ ಅತ್ಯಂತ ಪ್ರೀತನಾಗಿ ಹೇಳಿದನು: "ಅಶ್ವಿನಿಯರು ಹೇಳಿದಂತೆ ನೀನು ಬಹಳ ಶ್ರೇಯಸ್ಸನ್ನು ಹೊಂದುವೆ. ಎಲ್ಲ ವೇದಗಳೂ ನಿನ್ನಲ್ಲಿ ಪ್ರತಿಭೆಗೊಳ್ಳುತ್ತವೆ." ಇದು ಉಪಮನ್ಯುವಿನ ಪರೀಕ್ಷೆಯಾಗಿತ್ತು[5].

 

[1] ಋಗ್ವೇದದ ಪ್ರಕಾರ ಅಶ್ವಿನೀ ಕುಮಾರರು ದೇವಲೋಕದ ಅಶ್ವಾರೋಹಿಗಳು – ಮೋಡಗಳ ಅಧಿದೇವತೆ ಶರಣ್ಯ ಮತ್ತು ವಿವಸ್ವತನ ರೂಪದಲ್ಲಿದ್ದ ಸೂರ್ಯ – ಇವರಿಬ್ಬರಿಗೆ ಹುಟ್ಟಿದ ಅವಳಿ ಮಕ್ಕಳು. ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಬೆಳಕನ್ನು ಸೂಚಿಸುವ ಇವರೀರ್ವರು ವೈದಿಕ ದೇವತೆಗಳು ಈ ಎರಡು ಸಂಧ್ಯಾಕಾಲಗಳಲ್ಲಿ ಬಂಗಾರದ ರಥದ ಮೇಲೆ ಆಕಾಶದಲ್ಲಿ ಕಾಣಿಸಿಕೊಂಡು ಮನುಷ್ಯರಿಗೆ ಸಂಪತ್ತನ್ನು ನೀಡಿ, ವಿಘ್ನ ಮತ್ತು ರೋಗರುಜಿನಗಳಿಂದ ಮುಕ್ತಿಯನ್ನು ನೀಡುವರು ಎಂಬ ನಂಬಿಕೆ. ಇವರಿಬ್ಬರನ್ನೂ ದೇವವೈದ್ಯರೆಂದೂ ಆಯುರ್ವೇದದ ಅಧಿದೇವತೆಗಳೆಂದೂ ಪರಿಗಣಿಸಿದ್ದಾರೆ. ಋಗ್ವೇದದಲ್ಲಿ ಅವರನ್ನು ನಾಸತ್ಯ ಅಂದರೆ ಕರುಣೆಯುಳ್ಳವರು ಮತ್ತು ಸಹಾಯಶೀಲರು ಎಂದು ಕರೆಯಲ್ಪಟ್ಟಿದೆ. ಋಗ್ವೇದದಲ್ಲಿ ಅಶ್ವಿನಿಯರ ಹೆಸರು ಒಟ್ಟು ೩೭೬ ಬಾರಿ ಕಂಡುಬರುತ್ತದೆ ಮತ್ತು ಅದರಲ್ಲಿ ಇವರಿಗೆ ಸಂಬಂಧಿಸಿದ ೫೭ ಮಂತ್ರಗಳಿವೆ.

[2] ದಿಕ್ಕಿನ ಮಾರ್ಗದರ್ಶಕರಾದ, ಆದಿಯಲ್ಲಿಯೇ ಹುಟ್ಟಿದ, ಅನಂತ ಮತ್ತು ಉರಿಯುತ್ತಿರುವ ಚಿತ್ರಭಾನುಗಳೇ ನಿಮ್ಮನ್ನು ನಾನು ಸ್ತುತಿಸುತ್ತಿದ್ದೇನೆ. ನೀವು ದಿವ್ಯರು, ಸುಪರ್ಣರು, ವಿಮಾನಗಳಲ್ಲಿ ವಿರಜಿಸುತ್ತಾ ವಿಶ್ವದ ಭುವನಗಳ ಮೇಲೆ ಇಳಿಯುವವರು.

[3] ಮೊನಚಾದ ಕೊಕ್ಕೆಗಳನ್ನುಳ್ಳ ಹಿರಣ್ಮಯ ಪಕ್ಷಿಗಳೇ, ನಾಸತ್ಯರೇ, ಸುನಸರೇ, ವೈಜಂತರೇ, ಮಗ್ಗದ ಮೇಲೆ ವೈವಸ್ವತನ ಬಿಳಿ ಮತ್ತು ಕಪ್ಪು ಕಿರಣಗಳ ನೂಲನ್ನು ಎಣೆಯುವವರೇ!

[4] ಸುಪರ್ಣನ ಬಲದಿಂದ ಗ್ರಸ್ತರಾದ ಸುಭಗವನ್ನು ಅಶ್ವಿನಿಯರು ಬಿಡುಗಡೆ ಮಾಡಿದರು.  ನಿಮ್ಮ ಮಾಯಾ ಧನುಸ್ಸಿನಿಂದ ಅರುಣೋದಯದಲ್ಲಿ ಅಪಹರಿಸಲ್ಪಟ್ಟ ಗೋವುಗಳನ್ನು ರಕ್ಷಿಸಿದಿರಿ.

[5] ಉಪಮನ್ಯುವಿನ ಕಥೆಯು ಮಹಾಭಾರತದ ಅನುಶಾಸನ ಪರ್ವದಲ್ಲಿ ಮುಂದುವರೆಯುತ್ತದೆ. ಉಪಮನ್ಯುವು ಶ್ರೀಕೃಷ್ಣನಿಗೆ ಶಿವ ಪರಮೇಶ್ವರನ ಮಹಿಮೆಗಳನ್ನು ಹೇಳಿ ಅವನಿಗೆ ಶಿವಮಂತ್ರವನ್ನು ಉಪದೇಶಿಸುತ್ತಾನೆ.

Leave a Reply

Your email address will not be published. Required fields are marked *