ಉತ್ತರ ಗೋಗ್ರಹಣ - ೩

ಅರ್ಜುನ-ಕರ್ಣರ ಯುದ್ಧ

ಧನುರ್ಧರರಲ್ಲಿ ಶ್ರೇಷ್ಠ ಅರ್ಜುನನು ಶತ್ರುಸೈನ್ಯವನ್ನು ಕೂಡಲೆ ಚೆಲ್ಲಾಪಿಲ್ಲಿಮಾಡಿ ಆ ಗೋವುಗಳನ್ನು ಗೆದ್ದು ಅನಂತರ ಮತ್ತೆ ಯುದ್ಧದಲ್ಲಿ ಪ್ರಿಯವಾದುದನ್ನು ಮಾಡಬಯಸಿ, ದುರ್ಯೋಧನನತ್ತ ಹೊರಟನು. ಗೋವುಗಳು ವೇಗವಾಗಿ ಮತ್ಸ್ಯನಗರದತ್ತ ಹೋಗುತ್ತಿರಲು ಅರ್ಜುನನು ಕೃತಕೃತ್ಯನಾದನೆಂದು ತಿಳಿದು ಕುರುವೀರರು ದುರ್ಯೋಧನನತ್ತ ಹೋಗುತ್ತಿದ್ದ ಅವನ ಮೇಲೆ ಥಟ್ಟನೆ ಎರಗಿದರು. ಆಗ ದಟ್ಟವಾಗಿ ವ್ಯೂಹಗೊಂಡಿದ್ದ ಬಹಳ ಬಾವುಟಗಳಿಂದ ಕೂಡಿದ್ದ ಅವರ ಬಹುಸೇನೆಯನ್ನು ನೋಡಿ ಶತ್ರುನಾಶಕ ಅರ್ಜುನನು ಮತ್ಸ್ಯರಾಜ ವಿರಾಟನ ಮಗನನ್ನು ಕುರಿತು ಹೀಗೆಂದನು: “ಚಿನ್ನದ ಕಡಿವಾಣಗಳನ್ನು ಬಿಗಿದ ಈ ಕುದುರೆಗಳನ್ನು ಇದೇ ಮಾರ್ಗದಲ್ಲಿ ವೇಗವಾಗಿ ಓಡಿಸು. ಸರ್ವ ವೇಗದಿಂದಲೂ ಪ್ರಯತ್ನಿಸು. ಆ ರಥಿಕಸಿಂಹ ಸಮೂಹವನ್ನು ಹಿಡಿ. ರಾಜಪುತ್ರ! ಆನೆಯು ಆನೆಯೊಡನೆ ಹೋರಾಡಬಯಸುವಂತೆ ನನ್ನೊಡನೆ ಹೋರಾಡಬಯಸುವ, ದುರ್ಯೋಧನನ ಆಶ್ರಯದಿಂದ ದರ್ಪಿಷ್ಠನಾಗಿರುವ, ಆ ದುರಾತ್ಮ ಕರ್ಣನಲ್ಲಿಗೇ ನನ್ನನ್ನು ಕರೆದೊಯ್ಯಿ.”

ಆ ವಿರಾಟಪುತ್ರನು ಗಾಳಿಯ ವೇಗವನ್ನುಳ್ಳ, ಚಿನ್ನದ ಜೀನುಗಳನ್ನು ಹೊಡಿಸಿದ ಆ ದೊಡ್ಡ ಕುದುರೆಗಳಿಂದ ಆ ರಥಿಕರ ಸೇನೆಯನ್ನು ಧ್ವಂಸಮಾಡಿ ಆಮೇಲೆ ಅರ್ಜುನನನ್ನು ರಣರಂಗದ ಮಧ್ಯಕ್ಕೆ ಒಯ್ದನು. ಚಿತ್ರಸೇನ, ಸಂಗ್ರಾಮಜಿತ್, ಶತ್ರುಸಹ, ಜಯ - ಈ ಮಹಾರಥರು ಕರ್ಣನಿಗೆ ನೆರವಾಗ ಬಯಸಿ ಮೇಲೆ ಬೀಳುತ್ತಿದ್ದ ಅರ್ಜುನನತ್ತ ವಿಶಿಖ ವಿಪಾಠಗಳೆಂಬ ಬಾಣಗಳನ್ನು ಹಿಡಿದು ಧಾವಿಸಿದರು. ಆ ಪುರುಷಶ್ರೇಷ್ಠನು ಕೋಪಗೊಂಡು ಬಿಲ್ಲೆಂಬ ಬೆಂಕಿಯಿಂದಲೂ ಶರವೇಗವೆಂಬ ತಾಪದಿಂದಲೂ ಕೂಡಿದವನಾಗಿ ಅಗ್ನಿಯು ವನವನ್ನು ಸುಡುವಂತೆ ಕುರುಶ್ರೇಷ್ಠರ ರಥಸಮೂಹವನ್ನು ಸುಟ್ಟುಹಾಕಿದನು. ಅನಂತರ ತುಮುಲ ಯುದ್ಧವು ಮೊದಲಾಗಲು ಕುರುವೀರ ವಿಕರ್ಣನು ರಥದ ಮೇಲೆ ಕುಳಿತು ಭಯಂಕರ ಕವಲುಬಾಣಗಳ ಮಳೆಗರೆಯುತ್ತ ಅತಿರಥ ಅರ್ಜುನನನ್ನು ಸಮೀಪಿಸಿದನು. ಆಗ ಅರ್ಜುನನು ದೃಢ ಹೆದೆಯಿಂದಲೂ ಚಿನ್ನದ ತುದಿಗಳಿಂದಲೂ ಕೂಡಿದ ವಿಕರ್ಣನ ಬಿಲ್ಲನ್ನು ಸೆಳೆದುಕೊಂಡು ಅವನ ಬಾವುಟವನ್ನು ಚಿಂದಿಮಾಡಿ ಬೀಳಿಸಿದನು. ಬಾವುಟ ಚಿಂದಿಯಾಗಲು ಆ ವಿಕರ್ಣನು ವೇಗವಾಗಿ ಪಲಾಯನಮಾಡಿದನು. ಆಮೇಲೆ ಶತ್ರುಂತಪನು ಕೋಪವನ್ನು ತಡೆಯಲಾರದೆ ಶತ್ರುಗಣಬಾಧಕ ಅತಿಮಾನುಷ ಕಾರ್ಯಗಳನ್ನು ಮಾಡಿದ ಆ ಪಾರ್ಥನ ಮೇಲೆ ಕೂರ್ಮನಖ ಬಾಣಗಳನ್ನು ಪ್ರಯೋಗಿಸತೊಡಗಿದನು. ಆ ಅತಿರಥ ರಾಜನಿಂದ ಹೊಡೆಯಲ್ಪಟ್ಟು, ಕುರುಸೈನ್ಯದಲ್ಲಿ ಮುಳುಗಿಹೋದ ಅರ್ಜುನನು ಶತ್ರುಂತಪನನ್ನು ಬೇಗ ಐದು ಬಾಣಗಳಿಂದ ಭೇದಿಸಿ ಅನಂತರ ಅವನ ಸಾರಥಿಯನ್ನು ಹತ್ತು ಬಾಣಗಳಿಂದ ಕೊಂದನು. ಆಗ ಭರತಶ್ರೇಷ್ಠ ಅರ್ಜುನನು ಕವಚವನ್ನು ಭೇದಿಸಬಲ್ಲ ಬಾಣದಿಂದ ಆ ವಿಕರ್ಣನನ್ನು ಹೊಡೆಯಲು ಬಿರುಗಾಳಿಯಿಂದ ಮುರಿದು ಬೆಟ್ಟದ ತುದಿಯಿಂದ ಉರುಳುವ ಮರದಂತೆ ಅವನು ರಣರಂಗದಲ್ಲಿ ನೆಲದ ಮೇಲೆ ಸತ್ತುಬಿದ್ದನು. ಆ ರಥಿಕಶ್ರೇಷ್ಠ ವೀರರು ಆ ರಥಿಕಶ್ರೇಷ್ಠ ವೀರತರನಿಂದ ಯುದ್ಧದಲ್ಲಿ ಭಗ್ನರಾಗಿ ಪ್ರಳಯ ಕಾಲದ ಬಿರುಗಾಳಿಗೆ ಸಿಕ್ಕಿ ಕಂಪಿಸುವ ಮಹಾ ವನಗಳಂತೆ ಕಂಪಿಸಿದರು. ಐಶ್ವರ್ಯವನ್ನು ಕೊಡತಕ್ಕವರೂ, ದೇವೇಂದ್ರಸಮಾನ ವೀರ್ಯವುಳ್ಳವರೂ, ಸುವರ್ಣಖಚಿತ ಉಕ್ಕಿನ ಕವಚಗಳನ್ನು ತೊಟ್ಟವರೂ, ಒಳ್ಳೆಯ ವಸ್ತ್ರಧರಿಸಿದವರೂ, ವೀರಶ್ರೇಷ್ಠರೂ ಆದ ಆ ತರುಣರು ದೇವೇಂದ್ರಪುತ್ರ ಪಾರ್ಥನಿಂದ ಯುದ್ಧದಲ್ಲಿ ಪರಾಜಿತರೂ ಹತರೂ ಆಗಿ ಹಿಮಾಲಯದ ದೊಡ್ಡ ಆನೆಗಳಂತೆ ನೆಲದ ಮೇಲೊರಗಿದರು. ಹಾಗೆ ಆ ಗಾಂಡೀವಧನುರ್ಧಾರಿ ವೀರಶ್ರೇಷ್ಠ ಅರ್ಜುನನು ಯುದ್ಧದಲ್ಲಿ ಶತ್ರುಗಳನ್ನು ಕೊಲ್ಲುತ್ತ ಬೇಸಗೆಯ ಕಡೆಯಲ್ಲಿ ವನವನ್ನು ಸುಡುವ ಬೆಂಕಿಯಂತೆ ರಣರಂಗದಲ್ಲಿ ದಿಕ್ಕು ದಿಕ್ಕುಗಳಲ್ಲಿಯೂ ಸಂಚರಿಸುತ್ತಿದ್ದನು. ವಸಂತದಲ್ಲಿ ಬಿರುಗಾಳಿಯು ಉದುರಿದ ಎಲೆಗಳನ್ನು ಆಗಸಕ್ಕೆ ಹಾರಿಸಿ ಚದುರಿಸುವಂತೆ ಆ ಅತಿರಥ ಅರ್ಜುನನು ರಥದಲ್ಲಿ ಕುಳಿತು ಶತ್ರುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾ ರಣರಂಗದಲ್ಲಿ ಸಂಚರಿಸುತ್ತಿದ್ದನು. ಆ ಮಹಾಸತ್ವ ಕಿರೀಟಧಾರಿ ಅರ್ಜುನನು ಕರ್ಣನ ಸೋದರ ಸಂಗ್ರಾಮಜಿತ್ತಿನ ಕೆಂಪು ರಥಕ್ಕೆ ಕಟ್ಟಿದ ಕುದುರೆಗಳನ್ನು ಕೊಂದು, ಅನಂತರ ಅವನ ತಲೆಯನ್ನು ಒಂದೇ ಬಾಣದಿಂದ ಹಾರಿಸಿದನು. ತನ್ನ ಆ ಸೋದರನು ಹತನಾಗಲು ಸೂರ್ಯಪುತ್ರ ಕರ್ಣನು ತನ್ನ ಬಲವನ್ನು ಒಗ್ಗೂಡಿಸಿಕೊಂಡು ದಂತಗಳನ್ನು ಮುಂಚಾಚಿ ನುಗ್ಗುವ ಗಜರಾಜನಂತೆ, ದೊಡ್ಡ ಗೂಳಿಯತ್ತ ಧಾವಿಸುವ ಹುಲಿಯಂತೆ ಅರ್ಜುನನತ್ತ ಧಾವಿಸಿದನು. ಆ ಕರ್ಣನು ಅರ್ಜುನನನ್ನು ಹನ್ನೆರಡು ಬಾಣಗಳಿಂದ ಶೀಘ್ರವಾಗಿ ಹೊಡೆದನು. ಎಲ್ಲ ಕುದುರೆಗಳ ಶರೀರಗಳಿಗೂ ಬಾಣಗಳಿಂದ ಹೊಡೆದನು. ಉತ್ತರನನ್ನೂ ಬಾಣಗಳಿಂದ ಘಾತಿಸಿದನು. ಆ ಅರ್ಜುನನು ಸಾಮಾನ್ಯ ಆನೆಯಿಂದ ಪೆಟ್ಟುತಿಂದ ಗಜೇಂದ್ರನಂತೆ ಬತ್ತಳಿಕೆಯಿಂದ ಹರಿತ ಭಲ್ಲವೆಂಬ ಬಾಣಗಳನ್ನು ತೆಗೆದು ಕಿವಿಯವರೆಗೂ ಬಿಲ್ಲನ್ನೆಳೆದು ಕರ್ಣನನ್ನು ಆ ಬಾಣಗಳಿಂದ ಹೊಡೆದನು. ಅನಂತರ ಆ ಶತ್ರುನಾಶಕನು ಯುದ್ಧದಲ್ಲಿ ಸಿಡಿಲಿನ ಕಾಂತಿಯ ಬಾಣಗಳನ್ನು ಗಾಂಡೀವದಿಂದ ಬಿಟ್ಟು ರಣದಲ್ಲಿದ್ದ ಕರ್ಣನ ತೋಳು, ತೊಡೆ, ತಲೆ, ಹಣೆ, ಕೊರಳುಗಳನ್ನೂ, ರಥದ ಚಕ್ರಗಳನ್ನೂ ಭೇದಿಸಿದನು. ಪಾರ್ಥನು ಬಿಟ್ಟ ಬಾಣಗಳಿಂದ ಅಲ್ಲಾಡಿಹೋದ, ಪಾಂಡವ ಬಾಣತಪ್ತ ಕರ್ಣನು ಆನೆಗೆ ಸೋತುಹೋದ ಆನೆಯಂತೆ ಯುದ್ಧದ ಮಂಚೂಣಿಯನ್ನು ತೊರೆದು ಬೇಗ ಹೊರಟುಹೋದನು.

ಅರ್ಜುನನು ಕುರುಯೋಧರನ್ನು ಉತ್ತರನಿಗೆ ಪರಿಚಯಿಸಿದುದು

ಕರ್ಣನು ಹೊರಟುಹೋಗಲು ಉಳಿದವರು ದುರ್ಯೋಧನನನ್ನು ಮುಂದಿಟ್ಟುಕೊಂಡು ತಮ್ಮ ತಮ್ಮ ಸೈನ್ಯದೊಡನೆ ಕೂಡಿ ಅರ್ಜುನನನ್ನು ಬಾಣಗಳಿಂದ ಹೊಡೆದರು. ವ್ಯೂಹಗೊಂಡು ಬಹುಪ್ರಕಾರವಾಗಿ ಬಾಣಗಳಿಂದ ಎರಗುತ್ತಿದ್ದ ಆ ಸೈನ್ಯದ ಮೇಲೆ ಬೀಳಬೇಕೆಂಬ ಅರ್ಜುನನ ಅಭಿಪ್ರಾಯವನ್ನು ತಿಳಿದು ಉತ್ತರನು ಹೀಗೆ ಹೇಳಿದನು: “ಅರ್ಜುನ! ಈ ಸುಂದರ ರಥದಲ್ಲಿ ನನ್ನನ್ನು ಸಾರಥಿಯನ್ನಾಗಿ ಮಾಡಿಕೊಂಡು ಕುಳಿತಿರುವ ನೀನು ಈಗ ಯಾವ ಸೈನ್ಯದತ್ತ ಹೋಗಬಯಸುವೆ ಎಂಬುದನ್ನು ಹೇಳಿದರೆ ಅಲ್ಲಿಗೆ ಕರೆದೊಯ್ಯುತ್ತೇನೆ.”

ಅರ್ಜುನನು ಹೇಳಿದನು: “ಉತ್ತರ! ಆ ಕೆಂಪುಕಣ್ಣುಳ್ಳ, ಅಜೇಯ, ವ್ಯಾಘ್ರಚರ್ಮವನ್ನು ಧರಿಸಿದ, ನೀಲಿಬಣ್ಣದ ಬಾವುಟದ ರಥದಲ್ಲಿ ಕುಳಿತ, ನಿನಗೆ ಕಾಣಿಸುತ್ತಿರುವ ಅವನಲ್ಲಿಗೆ ಹೋಗಬೇಕು. ಅದು ಕೃಪನ ರಥಸೈನ್ಯ. ಅಲ್ಲಿಗೇ ನನ್ನನ್ನು ಕರೆದೊಯ್ಯಿ. ಆ ದೃಢಧನುರ್ಧರನಿಗೆ ನನ್ನ ಅಸ್ತ್ರವೇಗವನ್ನು ತೋರಿಸುತ್ತೇನೆ. ಧ್ವಜದಲ್ಲಿ ಸುವರ್ಣಮಯ ಶುಭ ಕಮಂಡಲು ಇರುವ ಈತನೇ ಸರ್ವಶಸ್ತ್ರಧರರಲ್ಲಿ ಶ್ರೇಷ್ಠ ಆಚಾರ್ಯ ದ್ರೋಣ. ಇಲ್ಲಿಯೇ ಸುಪ್ರಸನ್ನಚಿತ್ತದಿಂದ ವಿರೋಧವಿಲ್ಲದೇ ಇವನಿಗೆ ಪ್ರದಕ್ಷಿಣೆ ಹಾಕು. ಇದು ಸನಾತನ ಧರ್ಮ. ಮೊದಲು ದ್ರೋಣನು ನನಗೆ ಹೊಡೆದನೆಂದರೆ ನಂತರ ನಾನು ಅವನಿಗೆ ಹೊಡೆಯುತ್ತೇನೆ. ಆಗ ಅವನಿಗೆ ಕೋಪ ಬರುವುದಿಲ್ಲ. ಅವನಿಗೆ ಹತ್ತಿರದಲ್ಲಿ ಕಾಣಿಸುತ್ತಿರುವ, ಧ್ವಜಾಗ್ರದಲ್ಲಿ ಧನುವಿನ ಚಿಹ್ನೆಯನ್ನು ಹೊಂದಿದ ಇವನೇ ಆಚಾರ್ಯಪುತ್ರ ಮಹಾರಥಿ ಅಶ್ವತ್ಥಾಮ. ಇವನು ಯಾವಾಗಲೂ ನನಗೆ ಮತ್ತು ಎಲ್ಲ ಶಸ್ತ್ರಧರರಿಗೆ ಮಾನ್ಯನಾದವನು. ಇವನ ರಥವನ್ನು ಸಮೀಪಿಸಿದಾಗ ಅಲ್ಲಿಂದ ಮತ್ತೆ ಮತ್ತೆ ಹಿಮ್ಮೆಟ್ಟು. ರಥಸೈನ್ಯದಲ್ಲಿ ಸುವರ್ಣಕವಚವನ್ನು ಧರಿಸಿ, ಸೇನೆಯ ಶ್ರೇಷ್ಠ ಮೂರನೆಯ ಒಂದು ಭಾಗದಿಂದ ಪರಿವೃತನಾಗಿ, ಧ್ವಜಾಗ್ರದಲ್ಲಿ ಚಿನ್ನದಲ್ಲಿ ಕೆತ್ತಿದ ಆನೆಯುಳ್ಳವನಾಗಿರುವ ಈತನೇ ಧೃತರಾಷ್ಟ್ರಪುತ್ರ ಶ್ರೀಯುತ ರಾಜ ಸುಯೋಧನ. ವೀರ! ರಥವನ್ನು ಇವನ ಮುಂದಕ್ಕೆ ಒಯ್ಯಿ. ಇವನು ಶತ್ರುರಥಗಳನ್ನು ಧ್ವಂಸಮಾಡುವವನು, ಶತ್ರುಗಳ ತೇಜಸ್ಸನ್ನು ಕೆಡಿಸುವವನು ಮತ್ತು ಯುದ್ಧದುರ್ಮದವುಳ್ಳವನು. ಇವನು ದ್ರೋಣನ ಶಿಷ್ಯರಲ್ಲೆಲ್ಲ ಅಸ್ತ್ರವೇಗದಲ್ಲಿ ಮೊದಲಿಗನೆಂದು ತಿಳಿಯಲಾಗಿದೆ. ಇವನಿಗೆ ವಿಪುಲ ಶರಗಳಿಂದ ನನ್ನ ಅಸ್ತ್ರವೇಗವನ್ನು ತೋರಿಸುತ್ತೇನೆ. ಧ್ವಜಾಗ್ರದಲ್ಲಿ ಪ್ರಕಾಶಮಾನವಾದ ಆನೆಗೆ ಕಟ್ಟುವ ಹಗ್ಗವನ್ನುಳ್ಳ ಈತನೇ ಸೂರ್ಯಪುತ್ರ ಕರ್ಣ. ಇವನನ್ನು ಹಿಂದೆಯೇ ನೀನು ತಿಳಿದಿರುವೆ. ಈ ದುರಾತ್ಮ ಕರ್ಣನ ರಥವನ್ನು ಸಮೀಪಿಸಿದಾಗ ಜಾಗರೂಕನಾಗಿರು. ಇವನು ಯಾವಾಗಲೂ ಯುದ್ಧದಲ್ಲಿ ನನ್ನೊಡನೆ ಸ್ಪರ್ಧಿಸುತ್ತಾನೆ. ಇವನು ನೀಲಿಬಣ್ಣದ ಐದು ನಕ್ಷತ್ರಗಳ ಬಾವುಟವುಳ್ಳವನು. ದೊಡ್ಡ ಬಿಲ್ಲನ್ನು ಕೈಯಲ್ಲಿ ಹಿಡಿದು ರಥದಲ್ಲಿ ಕುಳಿತ ಪರಾಕ್ರಮಿ. ಇವನ ರಥದ ಮೇಲೆ ಸೂರ್ಯ ಮತ್ತು ನಕ್ಷತ್ರಗಳ ಚಿತ್ರವುಳ್ಳ ಶ್ರೇಷ್ಠ ಧ್ವಜವಿದೆ. ಇವನ ತಲೆಯ ಮೇಲೆ ವಿಮಲ ಬೆಳ್ಗೊಡೆಯಿದೆ. ಇವನು ಮೋಡಗಳ ಮುಂದೆ ನಿಂತ ಸೂರ್ಯನೆಂಬಂತೆ ನಾನಾ ಧ್ವಜಪತಾಕೆಗಳಿಂದ ಕೂಡಿದ ದೊಡ್ಡ ರಥಸಮೂಹದ ಮುಂದೆ ನಿಂತಿದ್ದಾನೆ. ಇವನ ಕವಚವು ಸೂರ್ಯಚಂದ್ರರಂತೆ ಹೊಳೆಯುತ್ತಿದೆ. ಇವನು ಚಿನ್ನದ ತಲೆಗಾಪನ್ನುಳ್ಳವನು. ನನ್ನ ಮನಸ್ಸಿಗೆ ಅಂಜಿಕೆಯನ್ನುಂಟುಮಾಡುತ್ತಿದ್ದಾನೆ. ಇವನೇ ಶಂತನುಪುತ್ರ ಭೀಷ್ಮ. ನಮ್ಮೆಲ್ಲರ ಅಜ್ಜ. ರಾಜೈಶ್ವರ್ಯಕ್ಕೆ ಕಟ್ಟುಬಿದ್ದು ದುರ್ಯೋಧನನ ವಶವರ್ತಿಯಾಗಿದ್ದಾನೆ. ಕಡೆಯಲ್ಲಿ ಇವನ ಬಳಿ ಹೋಗಬೇಕು. ಏಕೆಂದರೆ ಇವನಿಂದ ನನಗೆ ವಿಘ್ನವಾಗಬಾರದು. ಇವನೊಡನೆ ಯುದ್ಧಮಾಡುವಾಗ ನನ್ನ ಕುದುರೆಗಳನ್ನು ಎಚ್ಚರಿಕೆಯಿಂದ ನಡೆಸು.”

ಅನಂತರ ಉತ್ತರನು ಉದ್ವೇಗವಿಲ್ಲದೇ ಸವ್ಯಸಾಚಿ ಧನಂಜಯನನ್ನು ಯುದ್ಧಮಾಡಲು ಉತ್ಸುಕನಾಗಿ ನಿಂತಿದ್ದ ಕೃಪನಲ್ಲಿಗೆ ಕರೆದೊಯ್ದನು.

ಯುದ್ಧವನ್ನು ವೀಕ್ಷಿಸಲು ದೇವಗಣಗಳು ಆಗಸದಲ್ಲಿ ನೆರೆದುದು

ಆ ಉಗ್ರಧನುರ್ಧರ ಕೌರವರ ಸೇನೆಗಳು ಬೇಸಗೆಯ ಕಡೆಯಲ್ಲಿ ಮಂದಮಾರುತದಿಂದ ಚಲಿಸುವ ಮೋಡಗಳಂತೆ ತೋರಿದವು. ಹತ್ತಿರದಲ್ಲಿ ಯೋಧರು ಏರಿದ್ದ ಕುದುರೆಗಳೂ ತೋಮರ ಮತ್ತು ಅಂಕುಶಗಳಿಂದ ಪ್ರಚೋದಿತವಾದ ಭಯಂಕರ ರೂಪದ ಆನೆಗಳೂ ಇದ್ದವು. ಅನಂತರ ಇಂದ್ರನು ಸುದರ್ಶನ ರಥವನ್ನೇರಿ ದೇವಗಣಗಳೊಡನೆ ಮತ್ತು ವಿಶ್ವೇದೇವತೆಗಳು, ಅಶ್ವಿನಿಗಳ ಹಾಗೂ ಮರುತರ ಸಮೂಹಗಳೊಡನೆ ಆಗ ಅಲ್ಲಿಗೆ ಬಂದನು. ಮೋಡಗಳಿಲ್ಲದ ಆಕಾಶವು ಗ್ರಹಗಳಿಂದ ಶೋಭಿಸುವಂತೆ ಆ ದೇವ- ಯಕ್ಷ-ಗಂಧರ್ವ-ಮಹೋರಗರಿಂದ ತುಂಬಿ ಶೋಭಿಸುತ್ತಿತ್ತು. ಮನುಷ್ಯರು ಪ್ರಯೋಗಿಸುವ ತಮ್ಮ ಅಸ್ತ್ರಗಳ ಬಲವನ್ನೂ, ಭೀಷ್ಮಾರ್ಜುನರು ಸೇರಿದಾಗ ನಡೆಯುವ ಮಹಾಯುದ್ಧವನ್ನೂ ನೋಡಲು ಅವರು ಬಂದರು. ಆಗ ಸುವರ್ಣಮಯ ಮತ್ತು ಮಣಿರತ್ನಮಯ ಒಂದು ಕೋಟಿ ಕಂಬಗಳಿಂದ ಕೂಡಿದ ಪ್ರಾಸಾದವುಳ್ಳ, ಇಚ್ಛೆಯಂತೆ ಎಲ್ಲಿಗೆ ಬೇಕಾದರೂ ಹೋಗಬಲ್ಲ, ದಿವ್ಯ, ಸರ್ವರತ್ನ ವಿಭೂಷಿತ, ಗಗನ ಸಂಚಾರಿ, ದೇವೇಂದ್ರನ ವಿಮಾನವು ಶೋಭಿಸಿತು. ಇಂದ್ರನೊಡನೆ ಮೂವತ್ತಮೂರು ದೇವತೆಗಳೂ, ಮಹರ್ಷಿಗಳೊಂದಿಗೆ ಗಂಧರ್ವ-ರಾಕ್ಷಸ-ಸರ್ಪರೂ, ಪಿತೃಗಳೂ ಅಲ್ಲಿದ್ದರು. ಹಾಗೆಯೇ ರಾಜ ವಸುಮನ, ಬಲಾಕ್ಷ, ಸುಪ್ರತರ್ದನ, ಅಷ್ಟಕ, ಶಿಬಿ, ಯಯಾತಿ, ನಹುಷ, ಗಯ, ಮನು, ಕ್ಷುಪ, ರಘು, ಭಾನು, ಕೃಶಾಶ್ವ, ಸಗರ, ಶಲ ಇವರು ಪ್ರಕಾಶಮಾನರಾಗಿ ದೇವೇಂದ್ರನ ವಿಮಾನದಲ್ಲಿ ಕಾಣಿಸಿಕೊಂಡರು. ಅಗ್ನಿ, ಈಶ, ಸೋಮ, ವರುಣ, ಪ್ರಜಾಪತಿ, ಧಾತೃ, ವಿಧಾತೃ, ಕುಬೇರ, ಯಮ, ಅಲಂಬುಸ, ಉಗ್ರಸೇನ, ಗಂಧರ್ವ ತುಂಬುರ ಇವರ ವಿಮಾನಗಳು ತಕ್ಕ ತಕ್ಕ ವಿಭಾಗಸ್ಥಾನಗಳಲ್ಲಿ ಕಂಗೊಳಿಸಿದವು. ಎಲ್ಲ ದೇವ ಸಮೂಹಗಳೂ, ಸಿದ್ಧರೂ, ಪರಮ ಋಷಿಗಳೂ ಅರ್ಜುನನ ಮತ್ತು ಕೌರವರ ಯುದ್ಧವನ್ನು ನೋಡಲು ಬಂದರು. ಅಲ್ಲಿ ದಿವ್ಯಮಾಲೆಗಳ ಪುಣ್ಯಗಂಧವು ವಸಂತಾಗಮನವಾದಾಗ ಕುಸುಮಿಸುವ ವನಗಳ ಗಂಧದಂತೆ ಎಲ್ಲೆಡೆ ಹರಡಿತು. ಅಲ್ಲಿದ್ದ ದೇವತೆಗಳ ಕಡುಗೆಂಪಾದ ಕೊಡೆಗಳೂ, ವಸ್ತ್ರಗಳೂ, ಮಾಲೆಗಳೂ, ಚಾಮರಗಳೂ, ಚೆನ್ನಾಗಿ ಕಂಡುಬಂದವು. ನೆಲದ ದೂಳೆಲ್ಲ ಅಡಗಿಹೋಯಿತು. ಎಲ್ಲೆಡೆಯೂ ಕಾಂತಿ ವ್ಯಾಪಿಸಿ, ದಿವ್ಯಗಂಧವನ್ನು ಹೊತ್ತ ಗಾಳಿ ಯೋಧರನ್ನು ತಣಿಸಿತು. ಬರುತ್ತಿದ್ದ ಮತ್ತು ಆಗಲೇ ಬಂದಿದ್ದ, ನಾನಾ ರತ್ನಗಳಿಂದ ಹೊಳೆಯುತ್ತಿದ್ದ ದೇವಶ್ರೇಷ್ಠರು ತಂದಿದ್ದ ವಿವಿಧ ವಿಚಿತ್ರ ವಿಮಾನಗಳಿಂದ ಅಲಂಕೃತ ಆಕಾಶವು ಚಿತ್ರರೂಪವಾಗಿ ಶೋಭಿಸುತ್ತಿತ್ತು.

ಕೃಪ-ಅರ್ಜುನರ ಯುದ್ಧ

ಅಷ್ಟರಲ್ಲಿ ಮಹಾವೀರ್ಯ ಪರಾಕ್ರಮಿ, ಮಹಾಸತ್ವಶಾಲಿ, ಶಸ್ತ್ರಧಾರಿಗಳಲ್ಲಿ ಶ್ರೇಷ್ಠ, ಮಹಾರಥಿ ಕೃಪನು ಯುದ್ದಾಪೇಕ್ಷಿಯಾಗಿ ಅರ್ಜುನನೊಡನೆ ಹೋರಾಡಲು ಅಲ್ಲಿಗೆ ಬಂದನು. ವ್ಯವಸ್ಥಿತರಾಗಿ ನಿಂತು ಯುದ್ಧಸನ್ನದ್ದರಾಗಿದ್ದ ಆ ಸೂರ್ಯಸಮಾನ ರಥಿಕ ಮಹಾಬಲರು ಶರತ್ಕಾಲದ ಮೋಡಗಳಂತೆ ಹೊಳೆಯುತ್ತಿದ್ದರು. ಪಾರ್ಥನು ಲೋಕಪ್ರಸಿದ್ದ ಪರಮಾಯುಧ ಗಾಂಡೀವವನ್ನೆಳೆದು ಮರ್ಮಭೇದಕ ಬಹಳ ಬಾಣಗಳನ್ನು ಬಿಟ್ಟನು. ಪಾರ್ಥನ ಆ ರಕ್ತಕುಡಿಯುವ ಬಾಣಗಳನ್ನು, ಅವು ಬರುವುದಕ್ಕೆ ಮೊದಲೇ ಕೃಪನು ಹರಿತ ಬಾಣಗಳಿಂದ ನೂರಾಗಿ ಸಾವಿರವಾಗಿ ಕಡಿದುಹಾಕಿದನು. ಬಳಿಕ ಕೋಪಗೊಂಡ ಮಹಾರಥಿ ಪಾರ್ಥನು ವಿಚಿತ್ರ ತಂತ್ರಗಳನ್ನು ಪ್ರದರ್ಶಿಸುತ್ತಾ ಬಾಣಗಳಿಂದ ದಿಕ್ಕುದಿಕ್ಕುಗಳನ್ನೂ ಮುಚ್ಚಿದನು. ಆ ಅಮಿತಾತ್ಮ ಪ್ರಭು ಪಾರ್ಥನು ಆಕಾಶವನ್ನೆಲ್ಲ ಕವಿದುಕೊಳ್ಳುವಂತೆ ಮಾಡಿ ಕೃಪನನ್ನು ನೂರಾರು ಬಾಣಗಳಿಂದ ಮುಸುಕಿದನು. ಅಗ್ನಿಜ್ವಾಲೆಗಳಂತಹ ನಿಶಿತ ಬಾಣಗಳಿಂದ ಪೀಡಿತನಾಗಿ ಕೋಪಗೊಂಡ ಕೃಪನು ಯುದ್ಧದಲ್ಲಿ ಆ ಅಪ್ರತಿಮ ತೇಜಸ್ವಿ, ಮಹಾತ್ಮ ಅರ್ಜುನನ ಮೇಲೆ ಸಾವಿರ ಬಾಣಗಳನ್ನು ಬೇಗ ಬಿಟ್ಟು ಗರ್ಜಿಸಿದನು. ಆಮೇಲೆ ವೀರ ಅರ್ಜುನನು ಗಾಂಡೀವದಿಂದ ಬಿಡಲಾದ ಚಿನ್ನದ ಗರಿ ಮತ್ತು ನೇರ್ಪಡಿಸಿದ ಗಿಣ್ಣುಗಳಿಂದ ಕೂಡಿದ ತೀಕ್ಷ್ಣ, ಶ್ರೇಷ್ಠ ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನೂ ಬೇಗ ಭೇದಿಸಿದನು. ಸರ್ಪಗಳಂತೆ ಜ್ವಲಿಸುತ್ತಿದ್ದ ಹರಿತ ಬಾಣಗಳಿಂದ ಭೇದಿಸಲ್ಪಟ್ಟ ಆ ಕುದುರೆಗಳೆಲ್ಲ ಇದ್ದಕ್ಕಿಂದಂತೆ ಚಿಮ್ಮಿದವು. ಆಗ ಕೃಪನು ತನ್ನ ಸ್ಥಾನದಿಂದ ಉರುಳಿದನು. ಕೃಪನು ತನ್ನ ಸ್ಥಾನದಿಂದ ಉರುಳಿದುದನ್ನು ನೋಡಿ ಶತ್ರುವೀರರನ್ನು ಕೊಲ್ಲುವ, ಕುರುನಂದನ ಅರ್ಜುನನು ಅವನ ಗೌರವವನ್ನು ಕಾಯುವುದಕ್ಕಾಗಿ ಅವನನ್ನು ಬಾಣಗಳಿಂದ ಭೇದಿಸಲಿಲ್ಲ. ಕೃಪನಾದರೋ ಮತ್ತೆ ಸ್ವಸ್ಥಾನವನ್ನು ಸೇರಿ, ಕಂಕಪಕ್ಷಿಯ ಗರಿಗಳಿಂದ ಕೂಡಿದ ಹತ್ತು ಬಾಣಗಳಿಂದ ಅರ್ಜುನನನ್ನು ಬೇಗ ಹೊಡೆದನು. ಬಳಿಕ ಪಾರ್ಥನು ಅವನ ಬಿಲ್ಲನ್ನು ಹರಿತವಾದ ಒಂದೇ ಬಾಣದಿಂದ ಕತ್ತರಿಸಿದನು ಮತ್ತು ಅವನ ಕೈಯಿಂದ ಬಿಲ್ಲನ್ನು ತೊಲಗಿಸಿದನು. ಅನಂತರ ಅವನ ಕವಚವನ್ನು ಪಾರ್ಥನು ಮರ್ಮಭೇದಕ ತೀಕ್ಷ್ಣ ಬಾಣಗಳಿಂದ ಕತ್ತರಿಸಿದನು. ಆದರೆ ಅವನ ಶರೀರವನ್ನು ನೋಯಿಸಲಿಲ್ಲ. ಕವಚಮುಕ್ತವಾದ ಆ ಕೃಪನ ಶರೀರ ಆ ಸಮಯದಲ್ಲಿ ಪೊರೆಬಿಟ್ಟ ಹಾವಿನ ಶರೀರದಂತೆ ಶೋಭಿಸಿತು. ಪಾರ್ಥನಿಂದ ಬಿಲ್ಲು ಕಡಿದುಹೋಗಲು ಕೃಪನು ಮತ್ತೊಂದು ಬಿಲ್ಲನ್ನು ತೆಗೆದುಕೊಂಡು ಅದಕ್ಕೆ ಹೆದೆಯೇರಿಸಿದನು. ಅದು ಅದ್ಭುತವಾಗಿತ್ತು. ಅವನ ಆ ಬಿಲ್ಲನ್ನೂ ಕುಂತೀಪುತ್ರನು ನೇರಗಿಣ್ಣಿನ ಬಾಣದಿಂದ ಕತ್ತರಿಸಿ ಹಾಕಿದನು. ಹಾಗೆಯೇ ಕೃಪನ ಇತರ ಹಲವು ಬಿಲ್ಲುಗಳನ್ನೂ ಶತ್ರುನಾಶಕ ಆ ಪಾಂಡುಪುತ್ರನು ಕೈ ಚಳಕದಿಂದ ಕಡಿದು ಹಾಕಿದನು. ಅನಂತರ ಬಿಲ್ಲುಕತ್ತರಿಸಿಹೋಗಲಾಗಿ ಆ ಪ್ರತಾಪಶಾಲಿ ಕೃಪನು ಸಿಡಿಲಿನಂತೆ ಉರಿಯುವ ಶಕ್ತ್ಯಾಯುಧವನ್ನು ಅರ್ಜುನನ ಮೇಲೆ ಪ್ರಯೋಗಿಸಿದನು. ತನ್ನೆಡೆಗೆ ಬರುತ್ತಿದ್ದ ಚಿನ್ನದಿಂದ ಅಲಂಕೃತ, ಆಕಾಶಗಾಮಿ ದೊಡ್ಡ ಉಲ್ಕೆಯಂತಿದ್ದ ಆ ಶಕ್ತ್ಯಾಯುಧವನ್ನು ಅರ್ಜುನನು ಹತ್ತು ಬಾಣಗಳಿಂದ ಕತ್ತರಿಸಿದನು. ಧೀಮಂತ ಪಾರ್ಥನಿಂದ ಕತ್ತರಿಸಲ್ಪಟ್ಟ ಆ ಶಕ್ತ್ಯಾಯುಧವು ಹತ್ತು ತುಂಡುಗಳಾಗಿ ನೆಲಕ್ಕೆ ಬಿದ್ದಿತು. ಆಮೇಲೆ ಕೃಪನು ಕ್ಷಣಾರ್ಧದಲ್ಲಿಯೇ ಧನುರ್ಧರನಾಗಿ ಹರಿತ ಭಲ್ಲಗಳೆಂಬ ಹತ್ತು ಬಾಣಗಳಿಂದ ಆ ಪಾರ್ಥನನ್ನು ಬೇಗ ಹೊಡೆದನು. ಬಳಿಕ ಮಹಾತೇಜಸ್ವಿ ಪಾರ್ಥನು ಕೋಪಗೊಂಡು ಸಾಣೆಕಲ್ಲಿನಿಂದ ಹರಿತಗೊಳಿಸಿದ ಅಗ್ನಿಯಂತೆ ತೇಜಸ್ಸಿನಿಂದ ಕೂಡಿದ ಹದಿಮೂರು ಬಾಣಗಳನ್ನು ಯುದ್ಧದಲ್ಲಿ ಪ್ರಯೋಗಿಸಿದನು. ಅನಂತರ ಒಂದು ಬಾಣದಿಂದ ಆ ಕೃಪನ ರಥದ ನೊಗವನ್ನೂ, ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಸೀಳಿ, ಆರನೆಯ ಬಾಣವನ್ನು ಬಿಟ್ಟು ರಥದ ಸಾರಥಿಯ ತಲೆಯನ್ನು ಅವನ ದೇಹದಿಂದ ಬೇರ್ಪಡಿಸಿದನು. ಹಾಗೆಯೇ ಆ ಮಹಾಬಲಶಾಲಿಯು ಮೂರು ಬಾಣಗಳಿಂದ ರಥದ ಮೂರು ಬಿದಿರಿನ ದಂಡಗಳನ್ನೂ, ಎರಡು ಬಾಣಗಳಿಂದ ರಥದ ಅಚ್ಚನ್ನೂ, ಹನ್ನೆರಡನೆಯ ಬಾಣದಿಂದ ಧ್ವಜವನ್ನೂ ಯುದ್ಧದಲ್ಲಿ ಸೀಳಿಹಾಕಿದನು. ಅನಂತರ ಇಂದ್ರಸಮಾನ ಅರ್ಜುನನು ನಗುತ್ತ, ವಜ್ರಸಮಾನ ಹದಿಮೂರನೆಯ ಬಾಣದಿಂದ ಕೃಪನ ಎದೆಗೆ ಹೊಡೆದನು. ಬಿಲ್ಲು ಕತ್ತರಿಸಿ ಹೋಗಿ, ಕುದುರೆಗಳೂ ಸಾರಥಿಯೂ ಸತ್ತು, ವಿರಥನಾದ ಆ ಕೃಪನು ಗದೆಯನ್ನು ಹಿಡಿದು ಬೇಗ ಕೆಳಕ್ಕೆ ನೆಗೆದು ಆ ಗದೆಯನ್ನು ಅರ್ಜುನನ ಮೇಲೆ ಎಸೆದನು. ಕೃಪನು ಎಸೆದ, ಚೆನ್ನಾಗಿ ಮಾಡಿದ ಆ ಭಾರ ಗದೆಯು, ಅರ್ಜುನನ ಬಾಣಗಳಿಂದ ತಡೆಗೊಂಡು ಬೇರೆ ಮಾರ್ಗದಲ್ಲಿ ಹಿಂದಿರುಗಿತು. ಬಳಿಕ ಕೋಪಗೊಂಡ ಕೃಪನನ್ನು ರಕ್ಷಿಸಬಯಸಿದ ಯೋಧರು ಯುದ್ಧದಲ್ಲಿ ಪಾರ್ಥನನ್ನು ಸುತ್ತಲೂ ಬಾಣಗಳ ಮಳೆಯಿಂದ ಮುಸುಕಿದರು. ಆಮೇಲೆ ಉತ್ತರನು ಕುದುರೆಗಳನ್ನು ಎಡಕ್ಕೆ ತಿರುಗಿಸಿ ಯಮಕವೆಂಬ ಮಂಡಲವನ್ನು ರಚಿಸಿ ಆ ಯೋಧರನ್ನು ನಿವಾರಿಸಿದನು. ಆಮೇಲೆ ಮಹಾವೇಗವುಳ್ಳ ಆ ನರಶ್ರೇಷ್ಠರು ವಿರಥನಾಗಿದ್ದ ಕೃಪನನ್ನು ಎತ್ತಿಕೊಂಡು ಕುಂತೀಪುತ್ರ ಧನಂಜಯನ ಬಳಿಯಿಂದ ಕೊಂಡೊಯ್ದರು.

ದ್ರೋಣಾರ್ಜುನರ ಯುದ್ಧ

ಅರ್ಜುನನು ಹೇಳಿದನು: “ಮಿತ್ರ! ಉರಿಯುತ್ತಿರುವ ಅಗ್ನಿಜ್ವಾಲೆಗೆ ಸಮಾನ ಚಿನ್ನದ ವೇದಿಕೆಯನ್ನುಳ್ಳ, ಎತ್ತರವಾದ ಚಿನ್ನದ ದಂಡದ ತುದಿಗೆ ಬಿಗಿದಿರುವ ಬಾವುಟಗಳಿಂದ ಅಲಂಕೃತವಾದ ದ್ರೋಣಸೈನ್ಯದೆಡೆಗೆ ನನ್ನನ್ನು ಕರೆದೊಯ್ಯಿ. ನಿನಗೆ ಮಂಗಳವಾಗಲಿ. ದ್ರೋಣನ ಶ್ರೇಷ್ಠ ರಥಕ್ಕೆ ಹೂಡಿದ ಕುದುರೆಗಳು ಕೆಂಪಗೆ ಹೊಳೆಯುತ್ತಿವೆ. ಅವು ದೊಡ್ಡವು, ಸುಂದರವಾದವು. ಮಿರುಗುವ ಹರಣಕ್ಕೆ ಸಮನಾದವು. ತಾಮ್ರವರ್ಣದ ಮುಖವುಳ್ಳವು. ನೋಡುವುದಕ್ಕೆ ಅಂದವಾದವು ಮತ್ತು ಎಲ್ಲ ತರಬೇತಿಯನ್ನೂ ಪಡೆದವು. ದ್ರೋಣನು ಉದ್ದ ತೋಳುಗಳುಳ್ಳವನು. ಮಹಾತೇಜಸ್ವಿ. ಬಲ ಮತ್ತು ರೂಪವುಳ್ಳವನು. ಪ್ರತಾಪಶಾಲಿ ಮತ್ತು ಸರ್ವಲೋಕಗಳಲ್ಲಿಯೂ ಪ್ರಸಿದ್ಧ. ಅವನು ಬುದ್ಧಿಯಲ್ಲಿ ಶುಕ್ರನಿಗೂ, ನೀತಿಯಲ್ಲಿ ಬೃಹಸ್ಪತಿಗೂ ಸಮಾನ. ಮಿತ್ರ! ನಾಲ್ಕುವೇದಗಳೂ, ಅಂತೆಯೇ ಬ್ರಹ್ಮಚರ್ಯವೂ, ಉಪಸಂಹಾರ ವಿಧಿಸಹಿತವಾದ ಸಕಲ ದಿವ್ಯಾಸ್ತ್ರಗಳೂ, ಧನುರ್ವೇದವೂ, ಸಂಪೂರ್ಣವಾಗಿ ಸದಾ ಅವನಲ್ಲಿ ನೆಲೆಸಿವೆ.  ಆ ಬ್ರಾಹ್ಮಣೋತ್ತಮನಲ್ಲಿ ಕ್ಷಮೆ, ದಮೆ, ಸತ್ಯ, ದಯೆ, ಪ್ರಾಮಾಣಿಕತೆ - ಇವೂ, ಇತರ ಹಲವಾರು ಗುಣಗಳೂ, ನೆಲೆಸಿವೆ. ಆ ಮಹಾಭಾಗ್ಯಶಾಲಿಯೊಡನೆ ನಾನು ಯುದ್ಧದಲ್ಲಿ ಹೋರಾಡ ಬಯಸುತ್ತೇನೆ. ಆದ್ದರಿಂದ, ಉತ್ತರ! ನನ್ನನ್ನು ಆಚಾರ್ಯನೆಡೆಗೆ ಬೇಗನೆ ಕರೆದೊಯ್ಯಿ.”

ಅರ್ಜುನನು ಹೀಗೆ ಹೇಳಲು ಉತ್ತರನು ಚಿನ್ನದಿಂದ ಅಲಂಕೃತವಾದ ಆ ಕುದುರೆಗಳನ್ನು ದ್ರೋಣದ ರಥಕ್ಕೆ ಎದುರಾಗಿ ನಡೆಸಿದನು. ವೇಗವಾಗಿ ನುಗ್ಗಿ ಬರುತ್ತಿದ್ದ ಆ ರಥಿಕಶ್ರೇಷ್ಠ ಪಾಂಡುಪುತ್ರ ಪಾರ್ಥನನ್ನು ದ್ರೋಣನು ಮದ್ದಾನೆಯು ಮದ್ದಾನೆಯನ್ನು ಎದುರಿಸುವಂತೆ ಎದುರಿಸಿದನು. ಅನಂತರ ದ್ರೋಣನು ನೂರು ಭೇರಿಗಳಂತೆ ಶಬ್ಧಮಾಡುವ ಶಂಖವನ್ನು ಊದಿದನು. ಆಗ ಸೈನ್ಯವೆಲ್ಲವೂ ಅಲ್ಲೋಲಕಲ್ಲೋಲ ಸಮುದ್ರದಂತೆ ಪ್ರಕ್ಷುಬ್ದವಾಯಿತು. ಆಗ ಯುದ್ಧದಲ್ಲಿ ಅರ್ಜುನನ ಮನೋವೇಗದ ಮತ್ತು ಹಂಸವರ್ಣದ ಕುದುರೆಗಳೊಡನೆ ಕೂಡಿದ ದ್ರೋಣನ ಕೆಂಪು ಕುದುರೆಗಳನ್ನು ನೋಡಿ ರಣರಂಗದಲ್ಲಿದ್ದವರು ವಿಸ್ಮಯಗೊಂಡರು. ವೀರ್ಯಸಂಪನ್ನರೂ, ಗುರು-ಶಿಷ್ಯರೂ, ಸೋಲದವರೂ, ವಿದ್ಯಾಪಾರಂಗತರೂ, ಉದಾತ್ತರೂ, ಮಹಾಬಲರೂ ಆದ ಆ ರಥಿಕ ದ್ರೋಣ-ಪಾರ್ಥರು ಯುದ್ಧರಂಗದಲ್ಲಿ ಪರಸ್ಪರ ಮಿಳಿತರಾಗಿರುವುದನ್ನು ಕಂಡು ಭಾರತರ ಮಹಾಸೈನ್ಯವು ಮತ್ತೆ ಮತ್ತೆ ಕಂಪಿಸಿತು. ಆಮೇಲೆ ವೀರ್ಯಶಾಲಿ ಮಹಾರಥ ಪಾರ್ಥನು ಹರ್ಷಗೊಂಡು ನಗುತ್ತ ತನ್ನ ರಥವನ್ನು ದ್ರೋಣನ ರಥದ ಸಮೀಪ ತಂದನು. ಆ ಮಹಾಬಾಹು ಶತ್ರುನಾಶಕ ಅರ್ಜುನನು ದ್ರೋಣನಿಗೆ ವಂದಿಸಿ ವಿನಯಪೂರ್ವಕ ಮಧುರ ಈ ಮಾತುಗಳನ್ನಾಡಿದನು: “ಯುದ್ಧದಲ್ಲಿ ಸದಾ ಅಜೇಯನಾದವನೇ! ವನವಾಸಮಾಡಿದ ನಾವು ಈಗ ಪ್ರತೀಕಾರ ಮಾಡಬಯಸುತ್ತೇವೆ. ನೀನು ನಮ್ಮ ವಿಷಯದಲ್ಲಿ ಕೋಪಿಸಿಕೊಳ್ಳಬಾರದು. ಪಾಪರಹಿತನೇ! ನೀನು ನನ್ನನ್ನು ಮೊದಲು ಹೊಡೆದ ನಂತರ ಮಾತ್ರ ನಾನು ನಿನ್ನನ್ನು ಹೊಡೆಯುತ್ತೇನೆ ಎಂಬುದು ನನ್ನ ನಿಶ್ಚಯ. ಆದರಿಂದ ನೀನು ಹಾಗೆ ಮಾಡಬೇಕು.”

ಅನಂತರ ದ್ರೋಣನು ಅರ್ಜುನನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಬಾಣಗಳನ್ನು ಬಿಟ್ಟನು. ಅವು ಮುಟ್ಟುವುದಕ್ಕೆ ಮುನ್ನವೇ ಕೈಚಳಕದಿಂದ ಪಾರ್ಥಗಳನ್ನು ಅವುಗಳನ್ನು ಕತ್ತರಿಸಿದನು. ಆಮೇಲೆ ವೀರ್ಯಶಾಲಿ ದ್ರೋಣನು ಅಸ್ತ್ರಕೌಶಲವನ್ನು ಬೇಗ ತೋರಿಸುತ್ತಾ ಸಾವಿರ ಬಾಣಗಳಿಂದ ಅರ್ಜುನನ ರಥವನ್ನು ಮುಚ್ಚಿದನು. ದ್ರೋಣ ಮತ್ತು ಅರ್ಜುನರಿಗೆ ಹೀಗೆ ಯುದ್ಧ ಮೊದಲಾಯಿತು. ಯುದ್ಧದಲ್ಲಿ ಉರಿಯುವ ತೇಜಸ್ಸನ್ನುಳ್ಳ ಬಾಣಗಳನ್ನು ಇಬ್ಬರೂ ಸಮನಾಗಿ ಪ್ರಯೋಗಿಸುತ್ತಿದ್ದರು. ಇಬ್ಬರೂ ಖ್ಯಾತಕಾರ್ಯಗಳನ್ನು ಮಾಡಿದವರು. ಇಬ್ಬರೂ ವಾಯುಸಮಾನ ವೇಗವುಳ್ಳವರು. ಇಬ್ಬರೂ ದಿವ್ಯಾಸ್ತ್ರಗಳನ್ನು ಬಲ್ಲವರು. ಇಬ್ಬರೂ ಉತ್ತಮ ತೇಜಸ್ಸನ್ನುಳ್ಳವರು. ಅವರು ಬಾಣ ಸಮೂಹಗಳನ್ನು ಪ್ರಯೋಗಿಸುತ್ತಾ ದೊರೆಗಳನ್ನು ಬೆರಗುಗೊಳಿಸಿದರು. ಆಗ ಅಲ್ಲಿ ಸೇರಿದ್ದ ಯೋದ್ಧರೆಲ್ಲರೂ ವಿಸ್ಮಿತರಾಗಿ ಶೀಘ್ರವಾಗಿ ಬಾಣಪ್ರಯೋಗ ಮಾಡುತ್ತಿದ್ದ ಅವರನ್ನು “ಲೇಸು! ಲೇಸು!” ಎಂದು ಹೊಗಳಿದರು. “ಅರ್ಜುನನ ವಿನಾ ಯುದ್ಧದಲ್ಲಿ ದ್ರೋಣನೊಡನೆ ಹೋರಾಡಬಲ್ಲವರು ಬೇರೆ ಯಾರು? ಈ ಕ್ಷತ್ರಿಯ ಧರ್ಮ ಭಯಂಕರವಾದುದು. ಏಕೆಂದರೆ ಗುರುವಿನೊಡನೆಯೂ ಇವನು ಯುದ್ಧಮಾಡುತ್ತಿದ್ದಾನೆ!” ಎಂದು ಆ ಯುದ್ಧರಂಗದಲ್ಲಿದ್ದ ಜನರು ಮಾತನಾಡಿಕೊಳ್ಳುತ್ತಿದ್ದರು. ಹತ್ತಿರದಲ್ಲಿದ್ದ, ಮಹಾರಥರಾದ, ಸೋಲದ ಆ ವೀರರಿಬ್ಬರೂ ಕೋಪಾವಿಷ್ಟರಾಗಿ ಬಾಣಗಳ ಸಮೂಹದಿಂದ ಒಬ್ಬರನ್ನೊಬ್ಬರು ಮುಚ್ಚಿಬಿಟ್ಟರು. ಆಗ ದ್ರೋಣನು ಕೃದ್ಧನಾಗಿ ಚಿನ್ನದ ಬದಿಯನ್ನುಳ್ಳ ದೊಡ್ಡ ಅಜೇಯ ಬಿಲ್ಲನ್ನು ಮಿಡಿದು ಅರ್ಜುನನೊಡನೆ ಯುದ್ಧಮಾಡಿದನು. ಅವನು ಸಾಣೆಕಲ್ಲಿನಿಂದ ಹರಿತಗೊಳಿಸಿ ಹೊಳೆಯುವ ಬಾಣಗಳ ಜಾಲವನ್ನು ಅರ್ಜುನನ ರಥದ ಮೇಲೆ ಪ್ರಯೋಗಿಸಿ ಸೂರ್ಯನ ಪ್ರಭೆಯನ್ನು ಮುಸುಕಿಬಿಟ್ಟನು. ಆ ಮಹಾಬಾಹು ಮಹಾರಥಿ ದ್ರೋಣನು ಮೋಡವು ಮಳೆಯಿಂದ ಪರ್ವತವನ್ನು ಹೊಡೆಯುವಂತೆ ಮಹಾವೇಗವುಳ್ಳ ಹರಿತ ಬಾಣಗಳಿಂದ ಪಾರ್ಥನನ್ನು ಹೊಡೆದನು. ಅಂತೆಯೇ ಧೈರ್ಯಶಾಲಿ ಅರ್ಜುನನು ಆ ದಿವ್ಯ, ವೇಗಶಾಲಿ, ಶತ್ರುನಾಶಕ, ಮಹತ್ಕಾರ್ಯಸಾಧಕ, ಉತ್ತಮ ಗಾಂಡೀವ ಧನುಸ್ಸನ್ನು ತೆಗೆದುಕೊಂಡು ಬಹಳ ವಿಚಿತ್ರ ಸುವರ್ಣಖಚಿತ ಬಾಣಗಳನ್ನು ಬಿಟ್ಟನು. ಆ ವೀರ್ಯಶಾಲಿಯು ಬಿಲ್ಲಿನಿಂದ ಬಿಟ್ಟ ಬಾಣಗಳಿಂದ ದ್ರೋಣನ ಬಾಣಗಳ ಮಳೆಯನ್ನು ಬೇಗ ನಾಶಗೊಳಿಸಿದನು. ಅದು ಅದ್ಭುತವಾಗಿತ್ತು. ಆ ಸುಂದರ, ಕುಂತೀಪುತ್ರ ಧನಂಜಯನು ರಥದಲ್ಲಿ ಸಂಚರಿಸುತ್ತ ಏಕ ಕಾಲದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ತನ್ನ ಶಸ್ತ್ರಕೌಶಲವನ್ನು ತೋರಿಸಿದನು. ಅವನು ಆಕಾಶವನ್ನು ಎಲ್ಲೆಡೆಯಲ್ಲಿಯೂ ಬಾಣಗಳಿಂದ ಮುಚ್ಚಿ ಒಂದೇ ಸಮನೆ ಕತ್ತಲಾಗುವಂತೆ ಮಾಡಿದನು. ಆಗ ದ್ರೋಣನು ಮಂಜಿನಿಂದ ಆವೃತನಾಗಿ ಕಾಣದಂತಾದನು. ಆಗ ಸುತ್ತಲೂ ಉತ್ತಮ ಬಾಣಗಳು ಕವಿದ ಅವನ ರೂಪವು ಎಲ್ಲ ಕಡೆಯೂ ಉರಿಯುತ್ತಿರುವ ಪರ್ವತದಂತಾಯಿತು. ಯುದ್ಧದಲ್ಲಿ ತನ್ನ ರಥವು ಪಾರ್ಥನ ಬಾಣಗಳಿಂದ ಆವೃತವಾದುದನ್ನು ಕಂಡು ಆ ದ್ರೋಣನು ಮೋಡದ ಮೊಳಗಿನಂತೆ ಶಬ್ಧ ಮಾಡುವ ವಿಚಿತ್ರ ಬಿಲ್ಲನ್ನು ಮಿಡಿದನು. ಯುದ್ಧಕ್ಕೆ ಭೂಷಣಪ್ರಾಯ ದ್ರೊಣನು ಅಗ್ನಿಚಕ್ರ ಸದೃಶ, ಘೋರ, ಶ್ರೇಷ್ಠ ಆಯುಧವನ್ನು ಸೆಳೆದು ಆ ಬಾಣಗಳನ್ನು ಕತ್ತರಿಸಿದನು. ಆಗ ಸುಟ್ಟುಹೋಗುವ ಬಿದಿರಿನ ಶಬ್ಧದಂಥಹ ಮಹಾಶಬ್ಧವುಂಟಾಯಿತು. ಆ ಅಮಿತಾತ್ಮನು ಶ್ರೇಷ್ಠ ವಿಚಿತ್ರ ಬಿಲ್ಲಿನಿಂದ ಬಿಟ್ಟ ಚಿನ್ನದ ಗರಿಗಳ ಬಾಣಗಳಿಂದ ದಿಕ್ಕುಗಳನ್ನೂ ಸೂರ್ಯನ ಕಾಂತಿಯನ್ನೂ ಮುಚ್ಚಿದನು. ಆಗ ಚಿನ್ನದ ಗರಿಗಳ, ನೇರ್ಪಡಿಸಿದ ಗಿಣ್ಣುಗಳ, ಆಕಾಶಗಾಮಿ ಬಾಣಗಳಿಂದ ಆಗಸದಲ್ಲಿ ಬಹಳ ಬಾಣಗಳ ಸಂತತಿಯೇ ಗೋಚರಿಸಿತು. ದ್ರೋಣನ ಬಿಲ್ಲಿನಿಂದ ಪುಂಖಾನುಪುಂಖವಾಗಿ ಹೊಮ್ಮಿದ ಬಾಣಗಳು ಆಕಾಶದಲ್ಲಿ ಒಟ್ಟಿಗೆ ಸೇರಿ ಒಂದೇ ದೀರ್ಘ ಬಾಣದಂತೆ ತೋರಿದವು. ಹೀಗೆ ಆ ವೀರರಿಬ್ಬರೂ ಚಿನ್ನದಿಂದ ಮಾಡಿದ ಮಹಾಬಾಣಗಳನ್ನು ಬಿಡುತ್ತಾ ಆಕಾಶವು ಉಲ್ಕೆಗಳಿಂದ ಮುಚ್ಚಿ ಹೋಯಿತೆಂಬಂತೆ ಮಾಡಿದರು. ಕಂಕಪಕ್ಷಿಗಳ ಹೊದಿಕೆಯ ಗರಿಗಳಿಂದ ಕೂಡಿದ ಅವರ ಆ ಬಾಣಗಳು ಶರತ್ಕಾಲದ ಆಕಾಶದಲ್ಲಿ ಸಂಚರಿಸುವ ಹಂಸಗಳ ಸಾಲುಗಳಂತೆ ಗೋಚರಿಸಿದವು. ಆ ಮಹಾತ್ಮ ದ್ರೋಣಾರ್ಜುನರ ನಡುವಿನ ಯುದ್ಧವು ವೃತ್ರ ಮತ್ತು ಇಂದ್ರರ ನಡುವೆ ನಡೆದ ಯುದ್ಧದಂತೆ ಪ್ರಕ್ಷುಬ್ಧವೂ ಘೋರವೂ ಆಗಿತ್ತು. ದಂತಗಳಿಂದ ಪರಸ್ಪರ ಸೆಣೆಯುವ ಆನೆಗಳಂತೆ ಅವರು ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಒಬ್ಬರನ್ನೊಬ್ಬರು ಹೊಡೆದರು. ಕೃದ್ಧರೂ, ರಣರಂಗಕ್ಕೆ ಭೂಷಣಪ್ರಾಯರೂ ಆದ ಆ ವೀರರು ಒಂದೆಡೆಯಿಂದ ಮತ್ತೊಂದೆಡೆಗೆ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ನಿಯಮಾನುಸಾರವಾಗಿ ಯುದ್ಧದಲ್ಲಿ ಹೋರಾಡಿದರು. ಆಗ ಆಚಾರ್ಯಮುಖ್ಯನು ಬಿಟ್ಟ ಸಾಣೆಕಲ್ಲಿನಿಂದ ಮಸೆದ ಬಾಣಗಳನ್ನು ವಿಜಯಿಗಳಲ್ಲಿ ಶ್ರೇಷ್ಠ ಅರ್ಜುನನು ಹರಿತ ಬಾಣಗಳಿಂದ ನಿವಾರಿಸಿದನು. ಉಗ್ರಪರಾಕ್ರಮಿ ಅರ್ಜುನನು ತನ್ನ ಉಗ್ರತೆಯನ್ನು ಪ್ರದರ್ಶಿಸುತ್ತಾ ಬಹಳ ಬಾಣಗಳಿಂದ ಬೇಗ ಆಕಾಶವನ್ನು ಮುಚ್ಚಿಬಿಟ್ಟನು. ಯುದ್ಧದಲ್ಲಿ ತನ್ನನ್ನು ಹೊಡೆಯುತ್ತಿದ್ದ ನರಶ್ರೇಷ್ಠ, ತೀವ್ರತೇಜಸ್ವಿ ಅರ್ಜುನನೊಡನೆ ಆಚಾರ್ಯಮುಖ್ಯ, ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನು ನೇರ್ಪಡಿಸಿದ ಗಿಣ್ಣುಗಳ ಬಾಣಗಳಿಂದ ಆಟವಾಡುತ್ತಿದ್ದನು. ಆ ಮಹಾಯುದ್ಧದಲ್ಲಿ ದ್ರೋಣನು ದಿವಾಸ್ತ್ರಗಳನ್ನು ಬಿಡುತ್ತಿರಲು, ಅರ್ಜುನನು ಆ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ನಿವಾರಿಸಿ ಹೋರಾಡುತ್ತಿದ್ದನು. ಕುಪಿತರೂ ಅಸಹಿಷ್ಣುಗಳೂ ಆಗಿದ್ದ ಆ ನರಶ್ರೇಷ್ಠರ ನಡುವೆ ದೇವದಾನವರ ನಡುವಿನಂತೆ ಪರಸ್ಪರ ಯುದ್ಧವು ನಡೆಯಿತು. ದ್ರೋಣನು ಐಂದ್ರಾಸ್ತ್ರ, ವಾಯುವ್ಯಾಸ್ತ್ರ, ಅಗ್ನೇಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಂತೆಲ್ಲ ಅರ್ಜುನನು ಅವುಗಳನ್ನು ಅಸ್ತ್ರಗಳಿಂದ ಪುನಃ ಪುನಃ ನುಂಗಿಹಾಕುತ್ತಿದ್ದನು. ಹೀಗೆ ದೊಡ್ಡ ಬಿಲ್ಗಾರರಾದ ಆ ಶೂರರು ಹರಿತ ಬಾಣಗಳನ್ನು ಬಿಡುತ್ತಾ ಬಾಣಗಳ ಮಳೆಯಿಂದ ಆಕಾಶವನ್ನು ಒಂದೇಸಮನೆ ಮುಚ್ಚಿಬಿಟ್ಟರು. ಶತ್ರು ಶರೀರಗಳ ಮೇಲೆ ಬೀಳುತ್ತಿದ್ದ ಅರ್ಜುನನ ಬಾಣಗಳ ಶಬ್ಧವು ಪರ್ವತಗಳ ಮೇಲೆ ಬಿದ್ದ ಸಿಡಿಲುಗಳ ಶಬ್ಧದಂತೆ ಕೇಳಿಬರುತ್ತಿತ್ತು. ಆಗ ರಕ್ತದಿಂದ ತೊಯ್ದ ಆನೆಗಳೂ, ರಥಿಕರೂ, ಮತ್ತು ರಾವುತರೂ ಹೂಬಿಟ್ಟ ಮುತ್ತುಗದ ಮರಗಳಂತೆ ತೋರುತ್ತಿದ್ದರು. ಆ ದ್ರೋಣಾರ್ಜುನರ ಯುದ್ಧದಲ್ಲಿ ಪಾರ್ಥನ ಬಾಣಗಳಿಂದ ಕತ್ತರಿಸಲ್ಪಟ್ಟ ಕೇಯೂರಗಳ ತೋಳುಗಳಿಂದಲೂ, ಬಣ್ಣ್ನಬಣ್ಣದ ಮಹಾರಥರಿಂದಲೂ, ಸ್ವರ್ಣಖಚಿತ ಕವಚಗಳಿಂದಲೂ, ಬಿದ್ದ ಬಾವುಟಗಳಿಂದಲೂ, ಹತರಾದ ಯೋಧರಿಂದಲೂ, ಕುರುಸೈನ್ಯವು ದಿಗ್ಭ್ರಾಂತವಾಯಿತು. ಒತ್ತಡವನ್ನು ತಡೆಯಬಲ್ಲ ಬಿಲ್ಲುಗಳನ್ನು ಮಿಡಿಯುತ್ತ ಆ ವೀರರು ತಾಗುಬಾಣಗಳಿಂದ ತಡೆದುಕೊಳ್ಳಬಯಸಿ ಒಬ್ಬರನ್ನೊಬ್ಬರು ಮುಸುಕಿದರು. ಅನಂತರ ಆಕಾಶದಲ್ಲಿ ದ್ರೋಣನನ್ನು ಹೊಗಳುವವರ ದನಿಯೊಂದು ಕೇಳಿಬಂದಿತು: “ಶತ್ರುನಾಶಕ, ಮಹಾವೀರ್ಯಶಾಲಿ, ದೃಢಮುಷ್ಟಿಯುಳ್ಳ, ಎದುರಿಸಲಾಗದ, ದೇವದೈತ್ಯಸರ್ಪರನ್ನು ಗೆದ್ದ, ಮಹಾರಥಿ ಅರ್ಜುನನೊಡನೆ ಯುದ್ಧಮಾಡಿದ ದ್ರೋಣನು ದುಷ್ಕರವಾದುದನ್ನೇ ಮಾಡಿದ್ದಾನೆ.”

ಯುದ್ಧದಲ್ಲಿ ಪಾರ್ಥನ ಅನಾಯಾಸವನ್ನೂ, ಶಿಕ್ಷಣವನ್ನೂ, ಕೈಚಳಕವನ್ನೂ, ಬಾಣಗಳ ದೂರಪ್ರಯೋಗವನ್ನೂ ನೋಡಿ ದ್ರೋಣನಿಗೆ ವಿಸ್ಮಯವಾಯಿತು. ಆಮೇಲೆ ರಣದಲ್ಲಿ ಪಾರ್ಥನು ಕೋಪಗೊಂಡು ದಿವ್ಯ ಗಾಂಡೀವ ಧನುವನ್ನೆತ್ತಿ ತೋಳುಗಳಿಂದ ಸೆಳೆದನು. ಅವನ ಬಾಣಗಳ ಮಳೆ ಮಿಡಿತೆಗಳ ಸಮೂಹದಂತೆ ವಿಸ್ತಾರವಾಗಿತ್ತು. ಅವನ ಬಾಣಗಳ ನಡುವೆ ಗಾಳಿಯೂ ಚಲಿಸಲಾಗಲಿಲ್ಲ. ಆಗ ಪಾರ್ಥನು ನಿರಂತರವಾಗಿ ಬಾಣಗಳನ್ನು ತೆಗೆದು ಹೂಡಿ ಬಿಡುತ್ತಿರಲಾಗಿ ನಡುವೆ ಸ್ವಲ್ಪವೂ ಅಂತರವು ಕಾಣುತ್ತಿರಲಿಲ್ಲ. ಅನಂತರ ಭಯಂಕರ ಶೀಘ್ರಾಸ್ತ್ರಯುದ್ಧವು ನಡೆಯುತ್ತಿರಲು ಪಾರ್ಥನು ಮೊದಲಿಗಿಂತಲೂ ಶೀಘ್ರವಾಗಿ ಬೇರೆ ಬಾಣಗಳನ್ನು ಪ್ರಯೋಗಿಸಿದನು. ಬಳಿಕ ನೇರಗೊಳಿಸಿದ ಗಿಣ್ಣುಗಳನ್ನುಳ್ಳ ಲಕ್ಷಾಂತರ ಬಾಣಗಳು ಒಟ್ಟಿಗೇ ದ್ರೋಣನ ರಥದ ಸಮೀಪದಲ್ಲಿ ಬಿದ್ದವು. ಗಾಂಡೀವಧನುರ್ಧರನು ಬಾಣಗಳಿಂದ ದ್ರೋಣನನ್ನು ಮುಚ್ಚಿಹಾಕಲು ಸೈನ್ಯದಲ್ಲಿ ದೊಡ್ಡ ಹಾಹಾಕಾರವುಂಟಾಯಿತು. ಇಂದ್ರನೂ ಮತ್ತು ಅಲ್ಲಿ ಬಂದು ಸೇರಿದ ಗಂಧರ್ವಾಪ್ಸರೆಯರೂ ಅರ್ಜುನನ ಶೀಘ್ರಾಸ್ತ್ರ ಪ್ರಯೋಗವನ್ನು ಹೊಗಳಿದರು. ಆಮೇಲೆ, ರಥಸೈನ್ಯಕ್ಕೆ ಅಧಿಪತಿಯಾದ ಆಚಾರ್ಯಪುತ್ರನು ದೊಡ್ಡ ರಥಸಮೂಹದಿಂದ ಅರ್ಜುನನನ್ನು ಇದ್ದಕ್ಕಿದ್ದಂತೆ ತಡೆದನು. ಅಶ್ವತ್ಥಾಮನು ಮಹಾತ್ಮ ಪಾರ್ಥನ ಕಾರ್ಯವನ್ನು ಮನಸ್ಸಿನಲ್ಲಿ ಹೊಗಳಿದರೂ ಅವನ ಮೇಲೆ ಬಹಳ ಕೋಪಮಾಡಿಕೊಂಡನು. ಯುದ್ಧದಲ್ಲಿ ಅವನು ಕೋಪವಶನಾಗಿ ಮಳೆಗರೆಯುವ ಮೋಡದಂತೆ ಪಾರ್ಥನನ್ನು ಸಾವಿರ ಬಾಣಗಳಿಂದ ಮುಚ್ಚಿ ಅವನತ್ತ ನುಗ್ಗಿದನು. ಮಹಾಬಾಹು ಪಾರ್ಥನು ದ್ರೋಣಪುತ್ರನಿದ್ದೆಡೆಗೆ ತನ್ನ ಕುದುರೆಗಳನ್ನು ತಿರುಗಿಸಿ, ದ್ರೋಣನು ಜಾರಿಕೊಳ್ಳಲು ಅವಕಾಶ ಮಾಡಿಕೊಟ್ಟನು. ಅರ್ಜುನನ ಶ್ರೇಷ್ಠ ಬಾಣಗಳಿಂದ ಕವಚ ಮತ್ತು ಧ್ವಜಗಳು ಹರಿದು ಹೋಗಿ ಗಾಯಗೊಂಡಿದ್ದ ಆ ಶೂರ ದ್ರೋಣನು ಆ ಅವಕಾಶವನ್ನು ಬಳಸಿಕೊಂಡು ವೇಗಗಾಮಿ ಕುದುರೆಗಳ ನೆರವಿನಿಂದ ಬೇಗ ಹೊರಟುಹೋದನು.

ಅರ್ಜುನ-ಅಶ್ವತ್ಥಾಮರ ಯುದ್ಧ

ವಾಯುವೇಗದಂತೆ ಉದ್ಧತ, ಮಳೆಗರೆಯುವ ಮೋಡದಂಥ ಆ ಅಶ್ವತ್ಥಾಮನನ್ನು ಪಾರ್ಥನು ಬಾಣಗಳ ದೊಡ್ಡ ಸಮೂಹದಿಂದ ಎದುರಿಸಿದನು. ಬಾಣಗಳ ಸಮೂಹವನ್ನು ಬೀರುತ್ತಿದ್ದ ಅವರಲ್ಲಿ ವೃತ್ರ-ದೇವೇಂದ್ರರಿಗೆ ನಡೆದಂತೆ ದೇವಾಸುರ ಸಮಾನ ಮಹಾಯುದ್ಧವು ನಡೆಯಿತು. ಆಗ ಆಕಾಶವು ಬಾಣಗಳ ದಟ್ಟಣೆಯಿಂದ ಕವಿದುಹೋಗಲು, ಸೂರ್ಯನು ಹೊಳೆಯಲ್ಲಿಲ್ಲ ಮತ್ತು ಗಾಳಿಯು ಬೀಸಲಿಲ್ಲ. ಪರಸ್ಪರರನ್ನು ಹೊಡೆಯುತ್ತಿದ್ದ ಆ ಯೋಧರಿಂದ, ಉರಿಯುತ್ತಿರುವ ಬಿದಿರಿನಂತೆ, ಜೋರಾದ ಜಟಪಟ ಶಬ್ಧವು ಉಂಟಾಯಿತು. ಅರ್ಜುನನು ಅವನ ಕುದುರೆಗಳನ್ನೆಲ್ಲ ಕೊಂದುಹಾಕಲು, ಅಶ್ವತ್ಥಾಮನಿಗೆ ದಿಕ್ಕು ತೋರಲಿಲ್ಲ. ಅನಂತರ ಮಹಾವೀರ್ಯಶಾಲಿ ದ್ರೋಣಪುತ್ರನು ಚಲಿಸುತ್ತಿದ್ದ ಪಾರ್ಥನ ತುಸು ಅಜಾಕರೂಕತೆಯನ್ನು ಗಮನಿಸಿ ಕಿರುಗತ್ತಿಯಿಂದ ಅವನ ಬಿಲ್ಲಿನ ಹಗ್ಗವನ್ನು ಕತ್ತರಿಸಿದನು. ದೇವತೆಗಳು ಅವನ ಈ ಅತಿಮಾನುಷ ಕಾರ್ಯವನ್ನು ನೋಡಿ ಹೊಗಳಿದರು. ಆಮೇಲೆ ಅಶ್ವತ್ಥಾಮನು ಎಂಟು ಬಿಲ್ಲುಗಳ ಅಳತೆಯಷ್ಟು ಹಿಂದಕ್ಕೆ ಸರಿದು ಕಂಕ ಪಕ್ಷಿಯ ಗರಿಗಳ ಬಾಣಗಳಿಂದ ನರಶ್ರೇಷ್ಠ ಪಾರ್ಥನ ಎದೆಗೆ ಮತ್ತೆ ಹೊಡೆದನು. ಆಗ ಆ ಮಹಾನುಭಾವ ಪಾರ್ಥನು ಗಟ್ಟಿಯಾಗಿ ನಗುತ್ತಾ ಹೊಸದಾದ ಹಗ್ಗವನ್ನು ಗಾಂಡೀವಕ್ಕೆ ಬಲವಾಗಿ ಬಿಗಿದನು. ಆಮೇಲೆ ಪಾರ್ಥನು ಅರ್ಧಚಂದ್ರಾಕಾರವಾಗಿ ತಿರುಗಿ, ಮದಿಸಿದ ಸಲಗವು ಮದ್ದಾನೆಯನ್ನು ಸಂಧಿಸುವಂತೆ, ಅವನನ್ನು ಸಂಧಿಸಿದನು. ಆಗ ರಣರಂಗದ ನಡುವೆ ಆ ಲೋಕೈಕವೀರರಿಬ್ಬರಿಗೂ ರೋಮಾಂಚನಕಾರಿ ಮಹಾಯುದ್ಧವು ನಡೆಯಿತು. ಸಲಗಗಳಂತೆ ತೊಡಕಿಕೊಂಡು ಹೋರಾಡುತ್ತಿದ್ದ ಆ ಮಹಾತ್ಮ ವೀರರನ್ನು ಕುರುಯೋಧರೆಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು. ಆ ಪುರುಷಶ್ರೇಷ್ಠ ವೀರರು ಸರ್ಪಾಕಾರದ, ಉರಗಗಳಂತೆ ಜ್ವಲಿಸುವ ಬಾಣಗಳಿಂದ ಒಬ್ಬರನ್ನೊಬ್ಬರು ಪ್ರಹರಿಸಿದರು. ಮಹಾತ್ಮ ಅರ್ಜುನನಲ್ಲಿ ಎರಡು ಅಕ್ಷಯ ದಿವ್ಯ ಬತ್ತಳಿಕೆಗಳಿದ್ದುದರಿಂದ ಶೂರ ಪಾರ್ಥನು ರಣದಲ್ಲಿ ಪರ್ವತದಂತೆ ಅಚಲನಾಗಿದ್ದನು. ಅಶ್ವತ್ಥಾಮನಾದರೋ ಯುದ್ಧದಲ್ಲಿ ಬಾಣಗಳನ್ನು ಬೇಗ ಬೇಗ ಬಿಡುತ್ತಿದ್ದುದರಿಂದ ಅವು ಬೇಗ ಬರಿದಾದವು. ಆದ್ದರಿಂದ ಅರ್ಜುನನದೇ ಮೇಲುಗೈಯಾಯಿತು. ಆಗ ಕರ್ಣನು ರೋಷದಿಂದ ದೊಡ್ಡ ಬಿಲ್ಲನ್ನೆಳೆದು ಬಲವಾಗಿ ಮಿಡಿದನು. ಆಗ ದೊಡ್ಡ ಹಾಹಾಕಾರ ಶಬ್ಧವುಂಟಾಯಿತು. ಬಿಲ್ಲುಮಿಡಿದ ಕಡೆ ಪಾರ್ಥನು ಕಣ್ಣುಹಾಯಿಸಲು, ಅಲ್ಲಿ ಕರ್ಣನನ್ನು ಕಂಡು ಅವನ ಕೋಪವು ಇನ್ನು ಬಹಳವಾಯಿತು. ಆ ಕುರುಶ್ರೇಷ್ಠನು ರೋಷವಶನಾಗಿ ಕರ್ಣನನ್ನೇ ಕೊಲ್ಲಬಯಸಿ ಕಣ್ಣುತಿರುಗಿಸಿ ಅವನನ್ನು ದಿಟ್ಟಿಸಿದನು. ಪಾರ್ಥನು ಹಾಗೆ ಮುಖತಿರುಗಿಸಲು ತೀವ್ರಗಾಮಿ ಯೋಧರು ಸಾವಿರಾರು ಬಾಣಗಳನ್ನು ಅಶ್ವತ್ಥಾಮನಿಗೆ ತಂದುಕೊಟ್ಟರು. ಮಹಾಬಾಹು ಶತ್ರುವಿಜೇತನ ಧನಂಜಯನು ಆಗ ಅಶ್ವತ್ಥಾಮನನ್ನು ಬಿಟ್ಟು ಇದ್ದಕ್ಕಿದ್ದಂತಲೇ ಕರ್ಣನತ್ತಲೇ ನುಗ್ಗಿದನು. ಕೋಪದಿಂದ ಕಣ್ಣು ಕೆಂಪು ಮಾಡಿಕೊಂಡು ಅವನತ್ತ ನುಗ್ಗಿದ ಅರ್ಜುನನು ದ್ವಂದ್ವಯುದ್ಧವನ್ನು ಬಯಸಿ ಈ ಮಾತನ್ನಾಡಿದನು.

ಅರ್ಜುನ-ಕರ್ಣರ ಪುನರ್ಯುದ್ಧ

ಅರ್ಜುನನು ಹೇಳಿದನು: “ಕರ್ಣ! ಯುದ್ಧದಲ್ಲಿ ನನಗೆ ಸರಿಸಮಾನರಿಲ್ಲ ಎಂದು ನೀನು ಸಭೆಯ ನಡುವೆ ಬಹಳ ಮಾತುಗಳಿಂದ ಜಂಬ ಕೊಚ್ಚಿದೆಯಲ್ಲ! ಆ ಕಾಲವು ಇದೋ ಬಂದಿದೆ! ನೀನು ಧರ್ಮವನ್ನು ಸಂಪೂರ್ಣವಾಗಿ ತೊರೆದು ಕಠಿಣ ಮಾತುಗಳನ್ನಾಡಿದೆ. ನೀನು ಮಾಡಬಯಸುತ್ತಿರುವ ಈ ಕಾರ್ಯವು ನಿನಗೆ ದುಷ್ಕರವೆಂದು ಭಾವಿಸುತ್ತೇನೆ. ಕರ್ಣ! ನನ್ನನ್ನು ಎದುರಿಸುವ ಮುನ್ನವೇ ನೀನು ಏನೋ ಆಡಿದ್ದೆಯಲ್ಲ. ಕೌರವರ ನಡುವೆ ಅದನ್ನೀಗ ನನ್ನೊಡನೆ ಮಾಡಿ ತೋರಿಸು! ಸಭೆಯಲ್ಲಿ ದ್ರೌಪದಿಯು ದುರಾತ್ಮರಿಂದ ಕ್ಲೇಶಗೊಂಡಿದುದನ್ನು ನೀನು ನೋಡಿದೆ. ಅದರ ಫಲವನ್ನೀಗ ಸಂಪೂರ್ಣವಾಗಿ ಅನುಭವಿಸು. ಹಿಂದೆ ನಾನು ಧರ್ಮಪಾಶಕ್ಕೆ ಕಟ್ಟುಬಿದ್ದು ಸಹಿಸಿಕೊಂಡ ಕೋಪದ ಗೆಲುವನ್ನು ಈಗ ಯುದ್ಧದಲ್ಲಿ ನೋಡು. ಬಾ ಕರ್ಣ! ನನ್ನೊಡನೆ ಯುದ್ಧಮಾಡಲು ಒಪ್ಪಿಕೋ! ಕೌರವರೆಲ್ಲರೂ ಸೈನಿಕರ ಸಹಿತ ಪ್ರೇಕ್ಷಕರಾಗಲಿ.”

ಕರ್ಣನು ಹೇಳಿದನು: “ಪಾರ್ಥ! ಮಾತಿನಲ್ಲಿ ಆಡಿದುದನ್ನು ಕಾರ್ಯದಲ್ಲಿ ಮಾಡಿತೋರು. ಕಾರ್ಯವು ಮಾತಿಗಿಂತ ಮಿಗಿಲಾಗಿದುದೆಂದು ಲೋಕಪ್ರಸಿದ್ಧವಾಗಿದೆ. ನಿನ್ನ ಹೇಡಿತನವನ್ನು ನೋಡಿ ಹಿಂದೆ ನೀನು ಕೋಪವನ್ನು ಸಹಿಸಿಕೊಂಡಿದ್ದುದು ಅಶಕ್ತಿಯಿಂದ ಎಂದು ನನಗನ್ನಿಸುತ್ತದೆ. ಧರ್ಮಪಾಶಕ್ಕೆ ಬದ್ಧನಾಗಿ ಹಿಂದೆ ನೀನು ಕೋಪವನ್ನು ಸಹಿಸಿಕೊಂಡಿದ್ದೆಯಾದರೆ ಈಗಲೂ ನೀನು ಅದೇರೀತಿ ಬದ್ಧನಾಗಿದ್ದೀಯೆ. ಆದರೆ ನೀನು ಸ್ವತಂತ್ರನೆಂದು ಭಾವಿಸಿದ್ದೀಯೆ. ನೀನು ಹೇಳಿದಂತೆ ವನದಲ್ಲಿ ವಾಸಮಾಡಿದ್ದ ಪಕ್ಷದಲ್ಲಿ, ಧರ್ಮಾರ್ಥವಿದ ಕ್ಲೇಶಪೀಡಿತ ನೀನು ಹೇಗೆತಾನೆ ಪ್ರತಿಜ್ಞೆಯನ್ನು ಮುರಿಯಬಯಸುವೆ? ಸ್ವಯಂ ದೇವೇಂದ್ರನೇ ನಿನಗಾಗಿ ಯುದ್ಧಮಾಡಿದರೂ ಗೆಲ್ಲಲಿರುವ ನನಗೆ ಸ್ವಲ್ಪವೂ ವ್ಯಥೆಯಿಲ್ಲ. ನಿನ್ನ ಈ ಬಯಕೆ ಶೀಘ್ರದಲ್ಲಿ ಈಡೇರಲಿ. ನೀನೀಗ ನನ್ನೊಡನೆ ಹೋರಾಡುತ್ತೀಯೆ ಮತ್ತು ನನ್ನ ಬಲವನ್ನು ನೋಡುತ್ತೀಯೆ.”

ಅರ್ಜುನನು ಹೇಳಿದನು: “ರಾಧೇಯ! ಈಗತಾನೇ ನೀನು ನನ್ನೊಡನೆ ಹೋರಾಡುತ್ತಿದ್ದು ಯುದ್ಧದಿಂದ ಓಡಿಹೋಗಿದ್ದೆ. ಆದ್ದರಿಂದಲೇ ನೀನು ಇನ್ನೂ ಬದುಕಿದ್ದೀಯೆ. ನಿನ್ನ ತಮ್ಮನಾದರೋ ಹತನಾದನು. ನೀನಲ್ಲದೆ ಮತ್ತ್ಯಾರು ತಾನೇ ತನ್ನ ತಮ್ಮನನ್ನು ಕೊಲ್ಲಿಸಿ ರಣರಂಗವನ್ನು ಬಿಟ್ಟು ಓಡಿಹೋಗಿ ನಂತರ ಸತ್ಪುರುಷರ ನಡುವೆ ನಿಂತು ಹೀಗೆ ಮಾತನಾಡಿಯಾನು?”

ಸೋಲಿಲ್ಲದ ಅರ್ಜುನನು ಕರ್ಣನಿಗೆ ಹೀಗೆ ನುಡಿಯುತ್ತಲೇ, ಕವಚವನ್ನು ಭೇದಿಸುವಂತ ಬಾಣಗಳನ್ನು ಬಿಡುತ್ತಾ ಮುನ್ನುಗ್ಗಿದನು. ಅಗ್ನಿಜ್ವಾಲೆಗಳಂತಹ ಆ ಬಾಣಗಳನ್ನು ಕರ್ಣನು ಮಳೆಗರೆಯುವ ಮೋಡಗಳಂತಿದ್ದ ದೊಡ್ಡ ಶರವರ್ಷದಿಂದ ಎದುರಿಸಿದನು. ಘೋರರೂಪಿ ಬಾಣಸಮೂಹಗಳು ಎಲ್ಲೆಡೆಯಲ್ಲಿಯೂ ಬಿದ್ದು, ಕುದುರೆಗಳನ್ನೂ, ತೋಳುಗಳನ್ನೂ, ಕೈಗವಸುಗಳನ್ನೂ ಬೇರೆಬೇರೆಯಾಗಿ ಭೇದಿಸಿದವು. ಸಹಿಸಲಾರದ ಅರ್ಜುನನು ಹರಿತ ತುದಿಯುಳ್ಳ ಮತ್ತು ನೇರ್ಪಡಿಸಿದ ಗಿಣ್ಣುಗಳ ಬಾಣದಿಂದ ಕರ್ಣನ ಬತ್ತಳಿಕೆಯ ದಾರವನ್ನು ಕತ್ತರಿಸಿದನು. ಆಗ ಕರ್ಣನು ಬತ್ತಳಿಕೆಯಿಂದ ಬೇರೆ ಬಾಣಗಳನ್ನು ತೆಗೆದುಕೊಂಡು ಅರ್ಜುನನ ಕೈಗೆ ಹೊಡೆದನು. ಅರ್ಜುನನ ಮುಷ್ಟಿ ಸಡಿಲವಾಯಿತು. ಬಳಿಕ ಮಹಾಬಾಹು ಪಾರ್ಥನು ಕರ್ಣನ ಬಿಲ್ಲನ್ನು ತುಂಡರಿಸಿದನು. ಅವನು ಶಕ್ತ್ಯಾಯುಧವನ್ನು ಪ್ರಯೋಗಿಸಲು, ಪಾರ್ಥನು ಅದನ್ನು ಬಾಣಗಳಿಂದ ಕತ್ತರಿಸಿದನು. ಅನಂತರ ಕರ್ಣನ ಬಹುಮಂದಿ ಅನುಚರರು ಅವನ ಮೇಲೇರಿ ಬಂದರು. ಅವನು ಅವರನ್ನು ಗಾಂಡೀವದಿಂದ ಬಿಟ್ಟ ಬಾಣಗಳಿಂದ ಯಮಸದನಕ್ಕೆ ಅಟ್ಟಿದನು. ಆಗ ಅರ್ಜುನನು ತೀಕ್ಷ್ಣ ಪರಿಣಾಮಕಾರಿ ಬಾಣಗಳನ್ನು ಕಿವಿಯವರೆಗೂ ಎಳೆದು ಬಿಟ್ಟು ಕರ್ಣನ ಕುದುರೆಗಳಿಗೆ ಹೊಡೆಯಲು, ಅವು ಹತವಾಗಿ ನೆಲದಮೇಲೆ ಬಿದ್ದವು. ಆಗ ವೀರ್ಯಶಾಲಿ ಮಹಾಭುಜ ಅರ್ಜುನನು ಜ್ವಲಿಸುವ ಮತ್ತೊಂದು ತೀಕ್ಷ್ಣ ಬಾಣದಿಂದ ಕರ್ಣನ ಎದೆಗೆ ಹೊಡೆದನು. ಆ ಬಾಣವು ಅವನ ಕವಚವನ್ನು ಭೇದಿಸಿ ಶರೀರವನ್ನು ಹೊಕ್ಕಿತು. ಆಗ ಕತ್ತಲೆ ಕವಿದ ಅವನಿಗೆ ಏನೊಂದೂ ತಿಳಿಯದಾಯಿತು. ಗಾಢವೇದನೆಯಿಂದ ಅವನು ಯುದ್ಧವನ್ನು ತ್ಯಜಿಸಿ ಉತ್ತರಕ್ಕೆ ಓಡಿಹೋದನು. ಆಗ ಮಹಾರಥ ಅರ್ಜುನನೂ ಉತ್ತರನೂ ಧಿಕ್ಕಾರಹಾಕಿದರು.

ದುಃಶಾಸನ, ವಿಕರ್ಣ, ದುಃಸ್ಸಹ ಮತ್ತು ವಿವಿಂಶತಿಯರೊಂದಿಗೆ ಅರ್ಜುನನ ಯುದ್ಧ

ಕರ್ಣನನ್ನು ಗೆದ್ದ ಪಾರ್ಥನು ಉತ್ತರನಿಗೆ ನುಡಿದನು: “ಇದೋ ಚಿನ್ನದ ತಾಳೆಮರದ ಧ್ವಜಚಿಹ್ನೆಯಿರುವ ಸೈನ್ಯದೆಡೆಗೆ ನನ್ನನ್ನು ಕೊಂಡೊಯ್ಯಿ. ಅಲ್ಲಿ ಶಂತನುಪುತ್ರ ದೇವಸದೃಶ ನಮ್ಮ ಪಿತಾಮಹ ಭೀಷ್ಮನು ನನ್ನೊಡನೆ ಯುದ್ಧಕಾತುರನಾಗಿ ರಥದಲ್ಲಿದ್ದಾನೆ. ಯುದ್ಧದಲ್ಲಿ ಅವನ ಬಿಲ್ಲನ್ನೂ ಹೆದೆಯನ್ನೂ ಕತ್ತರಿಸುತ್ತೇನೆ. ಆಕಾಶದಲ್ಲಿ ಮೋಡದಿಂದ ನೂರಾರು ಮಿಂಚುಗಳು ಹೊಮ್ಮುವಂತೆ ಇಂದು ದಿವ್ಯಾಸ್ತ್ರಗಳನ್ನು ಅದ್ಭುತವಾಗಿ ಬಿಡುವ ನನ್ನನ್ನು ನೋಡು. ಚಿನ್ನದ ಹಿಂಬದಿಯುಳ್ಳ ನನ್ನ ಗಾಂಡೀವವನ್ನು ಕೌರವರು ಇಂದು ಕಾಣುತ್ತಾರೆ. ಶತ್ರುಗಳೆಲ್ಲ ಸೇರಿ ಬಲಗೈಯಿಂದಲೋ ಅಥವಾ ಎಡಗೈಯಿಂದಲೋ? ಯಾವುದರಿಂದ ಬಾಣವನ್ನು ಬಿಡುತ್ತಾನೆ? ಎಂದು ನನ್ನ ವಿಷಯದಲ್ಲಿ ತರ್ಕಿಸುತ್ತಾರೆ. ರಕ್ತವೆಂಬ ಜಲವನ್ನೂ, ರಥಗಳೆಂಬ ಸುಳಿಗಳನ್ನೂ, ಆನೆಗಳೆಂಬ ಮೊಸಳೆಗಳನ್ನೂ ಕೂಡಿದ, ದಾಟಲಾಗದ, ಪರಲೋಕದತ್ತ ಹರಿಯುವ ನದಿಯೊಂದನ್ನು ನಾನು ಇಂದು ಹರಿಯಿಸುತ್ತೇನೆ. ಕೈ, ಕಾಲು, ಬೆನ್ನು, ತೋಳುಗಳ ಕೊಂಬೆಗಳನ್ನುಳ್ಳ ದಟ್ಟವಾದ ಕುರುವನವನ್ನು ನೇರ್ಪಡಿಸಿದ ಗಿಣ್ಣಿನ ಭಲ್ಲೆಗಳಿಂದ ಕಡಿದುಹಾಕುತ್ತೇನೆ. ಬಿಲ್ಲು ಹಿಡಿದು ಕುರು ಸೈನ್ಯವನ್ನು ಒಂಟಿಯಾಗಿ ಗೆಲ್ಲುವ ನನಗೆ ಕಾಡಿನಲ್ಲಿ ಅಗ್ನಿಗೆ ಹೇಗೋ ಹಾಗೆ ನೂರು ಮಾರ್ಗಗಳು ಉಂಟಾಗುತ್ತವೆ. ನನ್ನಿಂದ ಹೊಡೆತ ತಿಂದ ಸೈನ್ಯವೆಲ್ಲ ಚಕ್ರದಂತೆ ಸುತ್ತುವುದನ್ನು ನೀನು ನೋಡುತ್ತೀಯೆ. ನೆಲ ಒಂದೇಸಮನಾಗಿರಲಿ ಅಥವಾ ಹಳ್ಳತಿಟ್ಟುಗಳಿಂದ ಕೂಡಿರಲಿ. ನೀನು ಗಾಬರಿಕೊಳ್ಳದೆ ರಥದಲ್ಲಿ ಕುಳಿತಿರು. ಆಕಾಶವನ್ನು ಆವರಿಸಿ ನಿಂತಿರುವ ಗಿರಿಯನ್ನು ಕೂಡ ನಾನು ಬಾಣಗಳಿಂದ ಭೇದಿಸುತ್ತೇನೆ. ಹಿಂದೆ ನಾನು ಇಂದ್ರನ ಮಾತಿನಂತೆ ಯುದ್ಧದಲ್ಲಿ ನೂರಾರು ಸಾವಿರಾರು ಮಂದಿ ಪೌಲೋಮ ಕಾಲಖಂಜರನ್ನು ಕೊಂದಿದ್ದೆ. ನಾನು ಇಂದ್ರನಿಂದ ದೃಢಮುಷ್ಠಿಯನ್ನೂ, ಬ್ರಹ್ಮನಿಂದ ಕೈಚಳಕವನ್ನೂ, ಪ್ರಜಾಪತಿಯಿಂದ ಗಾಢ, ಭಯಂಕರ ಅದ್ಭುತ ಭೇದಶಕ್ತಿಯನ್ನೂ ಪಡೆದಿದ್ಡೇನೆ. ನಾನು ಸಮುದ್ರದ ಆಚೆಯಿದ್ದ ಅರವತ್ತು ಸಾವಿರ ಉಗ್ರಧನುರ್ಧಾರಿ ರಥಿಕರನ್ನು ಗೆದ್ದು ಹಿರಣ್ಯಪುರವನ್ನು ನಾಶಮಾಡಿದ್ದೆ. ಬಾವುಟಗಳೆಂಬ ಮರಗಳಿಂದಲೂ, ಪದಾತಿಗಳೆಂಬ ಹುಲ್ಲಿನಿಂದಲೂ, ರಥಗಳೆಂಬ ಸಿಂಹ ಸಮೂಹದಿಂದಲೂ ಕೂಡಿದ ಕುರುವನವನ್ನು ನನ್ನ ಅಸ್ತ್ರಗಳ ತೇಜಸ್ಸಿನಿಂದ ಸುಟ್ಟುಹಾಕುತ್ತೇನೆ. ದೇವೇಂದ್ರನು ರಾಕ್ಷಸರನ್ನು ಅಟ್ಟಿದಂತೆ ನಾನೊಬ್ಬನೇ ನೇರ್ಪಡಿಸಿದ ಗಿಣ್ಣಿನ ಬಾಣಗಳನ್ನು ಬಿಟ್ಟು ಆ ಶತ್ರುಗಳನ್ನು ರಥಗಳೆಂಬ ಗೂಡುಗಳಿಂದ ಎಳೆದುಹಾಕುತ್ತೇನೆ. ನಾನು ರುದ್ರನಿಂದ ರೌದ್ರಾಸ್ತ್ರವನ್ನೂ, ವರುಣನಿಂದ ವಾರುಣಾಸ್ತ್ರವನ್ನೂ, ಅಗ್ನಿಯಿಂದ ಆಗ್ನೇಯಾಸ್ತ್ರವನ್ನೂ, ವಾಯುವಿನಿಂದ ವಾಯುವ್ಯಾಸ್ತ್ರವನ್ನೂ, ಇಂದ್ರನಿಂದ ವಜ್ರಾಯುಧವೇ ಮುಂತಾದ ಅಸ್ತ್ರಗಳನ್ನು ಪಡೆದುಕೊಂಡಿದ್ದೇನೆ. ಉತ್ತರ! ನರಶ್ರೇಷ್ಠರಿಂದ ರಕ್ಷಿತವಾದ ಧೃತರಾಷ್ಟ್ರಪುತ್ರರೆಂಬ ಈ ಘೋರ ವನವನ್ನು ನಾನು ಕಿತ್ತುಹಾಕುತ್ತೇನೆ. ನಿನ್ನ ಭಯವು ತೊಲಗಲಿ!”

ಹೀಗೆ ಆ ಸವ್ಯಸಾಚಿಯಿಂದ ಆಶ್ವಾಸನೆಗೊಂಡ ಉತ್ತರನು ಧೀಮಂತ ಭೀಷ್ಮನ ಭಯಂಕರ ರಥಸೈನ್ಯವನ್ನು ಪ್ರವೇಶಿಸಿದನು. ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲಬಯಸಿದ ಆ ಮಹಾಬಾಹು ಧನಂಜಯನನ್ನು ಕ್ರೂರಕಾರ್ಯಗಳನ್ನು ಮಾಡಿದ ಭೀಷ್ಮನು ಉದ್ವೇಗವಿಲ್ಲದೇ ತಡೆಗಟ್ಟಿದನು. ಸುಂದರ ಮಾಲೆಗಳನ್ನೂ, ಆಭರಣಗಳನ್ನೂ ಧರಿಸಿದ್ದ ವಿದ್ಯಾಪರಿಣಿತ ಆ ಚತುರನು ತೋಳುಗಳಿಂದ ಬಿಲ್ಲಿನ ಹೆದೆಯನ್ನು ಮಿಡಿಯುತ್ತ ಭಯಂಕರ ಧನುರ್ಧರನ ಮೇಲೆರಗಿದನು. ದುಃಶಾಸನ, ವಿಕರ್ಣ, ದುಃಸ್ಸಹ ಮತ್ತು ವಿವಿಂಶತಿ – ಇವರು ಭಯಂಕರ ಧನುರ್ಧರ ಅರ್ಜುನನತ್ತ ನುಗ್ಗಿ ಸುತ್ತುಗಟ್ಟಿದರು. ವೀರ ದುಃಶಾಸನನು ಭಲ್ಲೆಯಿಂದ ವಿರಾಟಪುತ್ರ ಉತ್ತರನನ್ನು ಹೊಡೆದು ಇನ್ನೊಂದರಿಂದ ಅರ್ಜುನನ ಎದೆಗೆ ಹೊಡೆದನು. ತಿರುಗಿ ಅರ್ಜುನನು ಹದ್ದಿನ ಗರಿಯ ವಿಶಾಲ ಅಲಗುಗಳ ಬಾಣಗಳಿಂದ ಅವನ ಸುವರ್ಣಖಚಿತ ಬಿಲ್ಲನ್ನು ಕತ್ತರಿಸಿದನು. ಆಮೇಲೆ ಐದು ಬಾಣಗಳಿಂದ ಅವನ ಎದೆಗೆ ಹೊಡೆದನು. ಪಾರ್ಥನ ಬಾಣಗಳಿಂದ ಭಾದಿತನಾದ ಅವನು ಯುದ್ಧರಂಗವನ್ನು ಬಿಟ್ಟು ಓಡಿ ಹೋದನು. ಧೃತರಾಷ್ಟ್ರಪುತ್ರ ವಿಕರ್ಣನು ಶತ್ರುವೀರರನ್ನು ಕೊಲ್ಲುವ ಅರ್ಜುನನನ್ನು ಹದ್ದಿನ ಗರಿಗಳ, ಹರಿತ ನೇರಗತಿಯ ಬಾಣಗಳಿಂದ ಹೊಡೆದನು. ಆಗ ಅರ್ಜುನನು ನೇರ್ಪಡಿಸಿದ ಗಿಣ್ಣಿನ ಬಾಣದಿಂದ ಬೇಗ ಅವನ ಹಣೆಗೆ ಹೊಡೆದನು. ಪೆಟ್ಟುತಿಂದ ಅವನು ರಥದಿಂದ ಬಿದ್ದನು. ಅನಂತರ ಯುದ್ಧದಲ್ಲಿ ಸೋದರರನ್ನು ರಕ್ಷಿಸ ಬಯಸಿದ ದುಃಸ್ಸಹನು ವಿವಿಂಶತಿಯೊಡಗೂಡಿ ಪಾರ್ಥನತ್ತ ನುಗ್ಗಿ ತೀಕ್ಷ್ಣಬಾಣಗಳಿಂದ ಅವನನ್ನು ಮುಚ್ಚಿದನು. ಧನಂಜಯನು ಉದ್ವಿಗ್ನನಾಗದೇ ಹದ್ದಿನ ಗರಿಗಳಿಂದ ಕೂಡಿದ ಹರಿತ ಬಾಣಗಳಿಂದ ಅವರಿಬ್ಬರನ್ನೂ ಏಕಕಾಲದಲ್ಲಿ ಹೊಡೆದು ಅವರ ಕುದುರೆಗಳನ್ನು ಕೊಂದನು. ಕುದುರೆಗಳು ಸತ್ತು, ಅವರ ದೇಹಗಳು ಗಾಯಗೊಳ್ಳಲು ಆ ಧೃತರಾಷ್ಟ್ರಪುತ್ರರಿಬ್ಬರನ್ನೂ ಅವರ ಕಾಲಾಳುಗಳು ಮುನ್ನುಗ್ಗಿ ಬೇರೆ ರಥಗಳಲ್ಲಿ ಕೊಂಡೊಯ್ದರು. ಸೋಲಿಲ್ಲದ, ಕಿರೀಟಧಾರಿ, ಗುರಿತಪ್ಪದ, ಬಹಾಬಲಿ ಅರ್ಜುನನು ಎಲ್ಲ ದಿಕ್ಕುಗಳನ್ನೂ ಆಕ್ರಮಿಸಿದನು.

ಸಂಕುಲಯುದ್ಧ

ಅನಂತರ ಕೌರವ ಮಹಾರಥರೆಲ್ಲ ಒಟ್ಟಾಗಿ ಸೇರಿ ಅರ್ಜುನನ ಮೇಲೆ ಬಲವಾಗಿ ಆಕ್ರಮಣ ಮಾಡಿದರು. ಮಂಜು ಪರ್ವತಗಳನ್ನು ಕವಿಯುವಂತೆ ಆ ಅಮೇಯಾತ್ಮನು ಆ ಮಹಾರಥರೆನ್ನೆಲ್ಲಾ ಬಾಣಗಳ ಜಾಲದಿಂದ ಮುಚ್ಚಿಬಿಟ್ಟನು. ಮಹಾಗಜಗಳ ಘೀಂಕಾರದಿಂದಲೂ, ಕುದುರೆಗಳ ಹೇಷಾರವದಿಂದಲೂ, ಭೇರಿ-ಶಂಖಗಳ ನಿನಾದದಿಂದಲೂ ತುಮುಲ ಶಬ್ಧವುಂಟಾಯಿತು. ಪಾರ್ಥನ ಸಾವಿರಾರು ಬಾಣ ಸಮೂಹಗಳು ಮನುಷ್ಯರ ಮತ್ತು ಕುದುರೆಗಳ ಶರೀರಗಳನ್ನೂ, ಲೋಹಕವಚಗಳನ್ನೂ ಭೇದಿಸಿ ಹೊರಬೀಳುತ್ತಿದ್ದವು. ತ್ವರೆಯಿಂದ ಬಾಣಗಳನ್ನು ಬಿಡುತ್ತಿದ್ದ ಆ ಅರ್ಜುನನು ಶರತ್ಕಾಲದ ನಡುಹಗಲಿನಲ್ಲಿ ಜ್ವಲಿಸುವ ಸೂರ್ಯನಂತೆ ಸಮರದಲ್ಲಿ ಶೋಭಿಸುತ್ತಿದ್ದನು.  ಆಗ ಹೆದರಿದ ರಥಿಕರು ರಥಗಳಿಂದಲೂ, ಅಶ್ವಸೈನಿಕರು ಕುದುರೆಗಳಿಂದಲೂ ಧುಮುಕುತ್ತಿದ್ದರು ಮತ್ತು ಕಾಲಾಳುಗಳು ನೆಲಕ್ಕೆ ಬೀಳುತ್ತಿದ್ದರು. ಬಾಣಗಳು ತಾಗಿದ ಮಹಾವೀರರ ತಾಮ್ರ, ಬೆಳ್ಳಿ, ಮತ್ತು ಉಕ್ಕುಗಳ ಕವಚಗಳಿಂದ ಮಹಾ ಶಬ್ಧವುಂಟಾಯಿತು. ಮಡಿದವರ ದೇಹಗಳಿಂದಲೂ, ಹರಿತ ಬಾಣಗಳಿಂದ ಪ್ರಾಣಾನೀಗಿದ ಗಜಾರೋಹೀ, ಅಶ್ವಾರೋಹಿಗಳಿಂದಲೂ ಆ ರಣರಂಗವೆಲ್ಲ ಮುಸುಕಿಹೋಯಿತು. ರಥದಿಂದುರಳಿ ಬಿದ್ದ ಮಾನವರಿಂದ ಭೂಮಿಯು ತುಂಬಿಹೋಯಿತು. ಧನಂಜಯನು ಕೈಯಲ್ಲಿ ಬಿಲ್ಲನ್ನು ಹಿಡಿದು ಯುದ್ಧದಲ್ಲಿ ಕುಣಿಯುತ್ತಿರುವಂತೆ ತೋರುತ್ತಿತ್ತು. ಸಿಡಿಲಿನ ಶಬ್ಧದಂತಿದ್ದ ಗಾಂಡೀವದ ನಿರ್ಘೋಷವನ್ನು ಕೇಳಿ ಎಲ್ಲ ಜೀವಿಗಳೂ ಆ ಮಹಾಯುದ್ಧಕ್ಕೆ ಹೆದರಿ ಓಡಿಹೋದವು. ಕುಂಡಲ-ಕಿರೀಟಗಳನ್ನೂ, ಚಿನ್ನದ ಹಾರಗಳನ್ನೂ ಧರಿಸಿದ ರುಂಡಗಳು ರಣರಂಗದಲ್ಲಿ ಬಿದ್ದಿರುವುದು ಕಂಡುಬರುತ್ತಿದ್ದವು. ಬಾಣಗಳಿಂದ ಗಾಸಿಗೊಂಡ ದೇಹಗಳಿಂದಲೂ, ಬಿಲ್ಲುಗಳು ಚುಚ್ಚಲ್ಪಟ್ಟ ತೋಳುಗಳಿಂದಲೂ, ಆಭರಣಗಳ ಸಹಿತ ಕೈಗಳಿಂದಲೂ ಭೂಮಿಯು ಮುಚ್ಚಿಹೋಗಿ ಶೋಭಿಸುತ್ತಿತ್ತು. ಆಕಾಶದಿಂದ ಕಲ್ಲುಗಳ ಮಳೆಸುರಿದಂತೆ ಹರಿತ ಬಾಣಗಳಿಂದ ರುಂಡಗಳು ಸತತವಾಗಿ ಬೀಳುತ್ತಿದ್ದವು. ಹದಿಮೂರು ವರ್ಷ ತಡೆದುಕೊಂಡಿದ್ದ ರುದ್ರಪರಾಕ್ರಮಿ ಪಾಂಡವ ಪಾರ್ಥನು ತನ್ನ ರೌದ್ರವನ್ನು ಹಾಗೆ ಪ್ರದರ್ಶಿಸುತ್ತಾ, ಸಂಚರಿಸುತ್ತಾ, ಆ ಭಯಂಕರ ಕೋಪಾಗ್ನಿಯನ್ನು ಧಾರ್ತರಾಷ್ಟ್ರರ ಮೇಲೆ ಸುರಿಸಿದನು. ಅವನಿಂದ ಸುಟ್ಟು ಹೋಗುತ್ತಿದ್ದ ಸೈನ್ಯವನ್ನೂ ಮತ್ತು ಅವನ ಪರಾಕ್ರಮವನ್ನು ನೋಡಿ ಎಲ್ಲ ಯೋಧರೂ ಧಾರ್ತರಾಷ್ಟ್ರನ ಕಣ್ಣೆದುರಿಗೇ ಮೂಕರಾದರು. ಜಯಶಾಲಿಗಳಲ್ಲಿ ಶ್ರೇಷ್ಠ ಅರ್ಜುನನು ಆ ಸೈನ್ಯವನ್ನು ಹೆದರಿಸುತ್ತಾ, ಮಹಾರಥಿಗಳನ್ನು ಓಡಿಸುತ್ತಾ ಸುತ್ತಾಡಿದನು. ರಕ್ತಪ್ರವಾಹದ ಅಲೆಗಳನ್ನುಳ್ಳ, ಮೂಳೆಗಳ ಪಾಚಿಯಿಂದ ತುಂಬಿದ, ಪ್ರಳಯಕಾಲದಲ್ಲಿ ಯಮನು ನಿರ್ಮಿಸಿದಂತಿದ್ದ ಘೋರ ನದಿಯನ್ನು ಹರಿಸಿದನು. ಬಿಲ್ಲು ಬಾಣಗಳ ದೋಣಿಗಳನ್ನುಳ್ಳ, ರಕ್ತ ಮಾಂಸಗಳ ಕೆಸರನ್ನುಳ್ಳ, ಮಹಾರಥರ ಮಹಾದ್ವೀಪಗಳನ್ನುಳ್ಳ, ಶಂಖದುಂದುಭಿಗಳ ಶಬ್ಧಗಳ, ಘೋರವಾಗಿ ಉಕ್ಕುತ್ತಿದ್ದ ನೆತ್ತರ ನದಿಯನ್ನು ಪಾರ್ಥನು ನಿರ್ಮಿಸಿದನು. ಅವನು ಬಾಣಗಳನ್ನು ತೆಗೆಯುವುದಕ್ಕೂ, ಹೂಡುವುದಕ್ಕೂ, ಗಾಂಡೀವವನ್ನೆಳೆದು ಬಿಡುವುದಕ್ಕೂ ನಡುವೆ ಯಾವುದೇ ಅಂತರವು ಕಾಣುತ್ತಿರಲಿಲ್ಲ.

ಅರ್ಜುನನಿಂದ ಇಂದ್ರಾಸ್ತ್ರ ಪ್ರಯೋಗ

ಆಮೇಲೆ ದುರ್ಯೋಧನ, ಕರ್ಣ, ದುಃಶಾಸನ, ವಿವಿಂಶತಿ, ಪುತ್ರಸಹಿತ ದ್ರೋಣ, ಅತಿರಥ ಕೃಪ ಇವರು ಬಲವಾದ ದೃಢ ಬಿಲ್ಲುಗಳನ್ನು ಮಿಡಿಯುತ್ತಾ ಧನಂಜಯನನ್ನು ಕೊಲ್ಲಬೇಕೆಂದು ಕೋಪಾವೇಶದಿಂದ ಮತ್ತೆ ಯುದ್ಧಕ್ಕೆ ಬಂದರು. ವಾನರಧ್ವಜ ಅರ್ಜುನನು ಹಾರಾಡುವ ಬಾವುಟಗಳನ್ನುಳ್ಳ ಸೂರ್ಯನಂತೆ ಪ್ರಕಾಶಿಸುವ ರಥದಲ್ಲಿ ಕುಳಿತು ಅವರೆಲ್ಲರನ್ನೂ ಎದುರಿಸಿದನು. ಬಳಿಕ ಕೃಪ, ಕರ್ಣ, ಮತ್ತು ರಥಿಗಳಲ್ಲಿ ಶ್ರೇಷ್ಠ ದ್ರೋಣರು ಮಹಾವೀರ್ಯ ಧನಂಜಯನನ್ನು ಮಹಾಸ್ತ್ರಗಳಿಂದ ತಡೆದರು. ಮೇಲೆ ಬೀಳುತ್ತಿದ್ದ ಕಿರೀಟಿಯಮೇಲೆ ಮಳೆಸುರಿಸುವ ಮೋಡಗಳಂತೆ ಬಾಣಗಳ ಮಳೆಗರೆದರು. ಆ ಮಾನ್ಯರು ಯುದ್ಧದಲ್ಲಿ ಅವನ ಹತ್ತಿರವೇ ನಿಂತು ಗರಿಗಳಿಂದ ಕೂಡಿದ ಬಾಣಗಳಿಂದ ಅವನನ್ನು ಶೀಘ್ರವಾಗಿ ಮುಚ್ಚಿಬಿಟ್ಟರು. ಹಾಗೆ ಸುತ್ತಲೂ ಆ ದಿವ್ಯಾಸ್ತ್ರಗಳಿಂದ ಮುಚ್ಚಿ ಹೋಗಿದ್ದ ಅವನ ದೇಹದಲ್ಲಿ ಒಂದು ಅಂಗುಲದಷ್ಟು ಕೂಡ ಜಾಗವು ಕಾಣುತ್ತಿರಲಿಲ್ಲ.  ಅನಂತರ ಮಹಾರಥಿ ಬೀಭತ್ಸುವು ನಕ್ಕು ಆದಿತ್ಯಸಂಕಾಶ ಇಂದ್ರಾಸ್ತ್ರವನ್ನು ಗಾಂಡೀವಕ್ಕೆ ಹೂಡಿದನು. ಸಮರದಲ್ಲಿ ಬಲಶಾಲಿ, ಕಿರೀಟಮಾಲಿ ಕೌಂತೇಯನು ಸೂರ್ಯನ ಕಿರಣದಂತೆ ಪ್ರಜ್ವಲಿಸುತ್ತಾ ಕುರುಗಳೆಲ್ಲರನ್ನೂ ಮುಚ್ಚಿಬಿಟ್ಟನು. ಕಾಮನಬಿಲ್ಲಿನಂತೆ ಬಗ್ಗಿದ್ದ ಗಾಂಡೀವವು ಮೋಡದಲ್ಲಿನ ಮಿಂಚಿನಂತೆ ಮತ್ತು ಪರ್ವತದ ಮೇಲಿನ ಬೆಂಕಿಯಂತೆ ಪ್ರಜ್ವಲಿಸುತ್ತಿತ್ತು. ಮೋಡವು ಮಳೆಗರೆಯುವಾಗ ಆಗಸದಲ್ಲಿ ಮಿಂಚು ಹೊಳೆಯುವಂತೆ ಗಾಂಡೀವವು ಹತ್ತುದಿಕ್ಕುಗಳಲ್ಲಿಯೂ ಬೆಂಕಿಯನ್ನು ಬೀಳಿಸಿತು. ಅಲ್ಲಿ ರಥಿಕರೆಲ್ಲರೂ ಎಲ್ಲೆಡೆಯೂ ತಲ್ಲಣಗೊಂಡರು. ಎಲ್ಲರೂ ಮೂಕರಾಗಿ, ಚಿತ್ತದ ಸ್ವಾಸ್ಥ್ಯವನ್ನು ಕಳೆದುಕೊಂಡರು. ಹತಚೇತಸರಾಗಿ ಯೋಧರೆಲ್ಲರೂ ಸಂಗ್ರಾಮವಿಮುಖರಾದರು. ಹೀಗೆ ಸೇನೆಗಳೆಲ್ಲವೂ ಛಿದ್ರ ಛಿದ್ರವಾಗಿ ತಮ್ಮ ಜೀವದ ಆಸೆಯನ್ನು ತೊರೆದು ಎಲ್ಲ ದಿಕ್ಕುಗಳಿಗೂ ಓಡಿಹೋದರು.

ಭೀಷ್ಮಾರ್ಜುನರ ಯುದ್ಧ

ಆಗ ಯೋಧರು ಹತರಾಗುತ್ತಿರಲು, ದುರಾಧರ್ಷ ಪ್ರತಾಪವಾನ್ ಶಾಂತನವ ಭೀಷ್ಮನು ಧನಂಜಯನೆಡೆಗೆ ನುಗ್ಗಿದನು. ಸುವರ್ಣಖಚಿತ ಶ್ರೇಷ್ಠ ಧನುಸ್ಸನ್ನು ಹಿಡಿದು, ಹರಿತ ಮೊನೆಗಳ ಮತ್ತು ಮರ್ಮಭೇದಕ ಶಕ್ತಿಯ ಬಾಣಗಳನ್ನು ಹಿಡಿದು, ತಲೆಯಮೇಲೆ ಬೆಳ್ಗೊಡೆಯನ್ನು ತಳೆದ ಆ ನರಶ್ರೇಷ್ಠನು ಸೂರ್ಯೋದಯದಲ್ಲಿ ಪರ್ವತದಂತೆ ಶೋಭಿಸುತ್ತಿದ್ದನು. ಆ ಗಾಂಗೇಯನು ಶಂಖವನ್ನೂದಿ ಕೌರವರಿಗೆ ಹರ್ಷವನ್ನುಂಟುಮಾಡಿ, ಬಲಕ್ಕೆ ತಿರುಗಿ ಬೀಭತ್ಸುವನ್ನು ಎದುರಿಸಿದನು. ಹಾಗೆ ಬರುತ್ತಿರುವ ಅವನನ್ನು ಕಂಡು ಪರವೀರಹ ಕೌಂತೇಯನು ಸಂತೋಷಗೊಂಡು ಮೋಡವನ್ನು ಪರ್ವತದಂತೆ ಎದುರಿಸಿದನು. ಆಗ ವೀರ್ಯವಂತ ಭೀಷ್ಮನು ಭುಸುಗುಡುವ ಸರ್ಪಗಳಂತಿರುವ ಮಹಾವೇಗವುಳ್ಳ ಎಂಟು ಬಾಣಗಳನ್ನು ಪಾರ್ಥನ ಧ್ವಜದ ಮೇಲೆ ಪ್ರಯೋಗಿಸಿದನು. ಉರಿಯುತ್ತಿದ ಆ ಬಾಣವು ಪಾಂಡುಪುತ್ರನ ಧ್ವಜಕ್ಕೆ ತಾಗಿ ಕಪಿಯನ್ನೂ ಧ್ಚಜಾಗ್ರದಲ್ಲಿ ನೆಲೆಗೊಂಡಿದ್ದವನ್ನೂ ಹೊಡೆದವು. ಆಗ ಪಾಂಡವನು ಅಗಲ ಅಲಗನ್ನುಳ್ಳ ದೊಡ್ಡ ಭಲ್ಲೆಯಿಂದ ಭೀಷ್ಮನ ಕೊಡೆಯನ್ನು ಕತ್ತರಿದನು ಮತ್ತು ಅದು ತಕ್ಷಣವೇ ನೆಲದಮೇಲೆ ಬಿದ್ದಿತು. ಶೀಘ್ರಕರ್ಮಿ ಕೌಂತೇಯನು ಅವನ ದೃಢ ಧ್ವಜವನ್ನೂ, ರಥದ ಕುದುರೆಗಳನ್ನೂ, ಪಕ್ಕದಲ್ಲಿದ್ದ ಇಬ್ಬರು ಸಾರಥಿಗಳನ್ನೂ ಬಾಣಗಳಿಂದ ಹೊಡೆದನು. ಬಲಿ ಮತ್ತು ವಾಸವನಿಗೆ ನಡೆದಂತೆ ಭೀಷ್ಮ ಪಾರ್ಥರಿಗೆ ರೋಮಾಂಚನಕಾರಿ ತುಮುಲ ಯುದ್ಧವು ನಡೆಯಿತು. ಭೀಷ್ಮಾರ್ಜುನರಿಗೆ ನಡೆದ ಯುದ್ಧದಲ್ಲಿ ಭಲ್ಲೆಗಳು ಭಲ್ಲೆಗಳಿಗೆ ತಾಗಿ ಮಳೆಗಾಲದ ಮಿಣುಕು ಹುಳುಗಳಂತೆ ಆಕಾಶದಲ್ಲಿ ಹೊಳೆದವು. ಎಡಗೈ ಮತ್ತು ಬಲಗೈ ಎರಡರಿಂದಲೂ ಶರಗಳನ್ನು ಬಿಡುತ್ತಿದ್ದ ಪಾರ್ಥನ ಗಾಂಡೀವವು ಅಗ್ನಿಚಕ್ರದಂತಿತ್ತು. ಮಳೆಯಿಂದ ಪರ್ವತವನ್ನು ಮುಚ್ಚಿಬಿಡುವ ಮೋಡದಂತೆ ಅವನು ಆ ಹರಿತ ನೂರು ಬಾಣಗಳಿಂದ ಭೀಷ್ಮನನ್ನು ಮುಚ್ಚಿಬಿಟ್ಟನು. ಮೇಲೆದ್ದು ಬರುವ ಅಲೆಯನ್ನು ತಡೆಯುವಂತೆ ಎರಗುವ ಆ ಬಾಣಗಳ ಮಳೆಯನ್ನು ಭೀಷ್ಮನು ಬಾಣಗಳಿಂದ ಕತ್ತರಿಸಿ ಅರ್ಜುನನನ್ನು ತಡೆದನು.

ಸಮರದಲ್ಲಿ ತುಂಡುತುಂಡಾಗಿ ಕತ್ತರಿಸಲ್ಪಟ್ಟ ಆ ಬಾಣಸಮೂಹಗಳು ಅರ್ಜುನನ ರಥದ ಮೇಲೆ ಉದುರಿಬಿದ್ದವು. ಆಗ ಪಾಂಡವನ ರಥದಿಂದ ಮಿಡಿತೆಗಳ ಹಿಂಡಿನಂತೆ ಚಿನ್ನದ ಗರಿಗಳನ್ನುಳ್ಳ ಬಾಣಗಳ ಮಳೆಯು ಶೀಘ್ರವಾಗಿ ಹೊಮ್ಮಿತು. ಭೀಷ್ಮನು ಪುನಃ ಅದನ್ನು ನೂರಾರು ಹರಿತ ಬಾಣಗಳಿಂದ ಕತ್ತರಿಸಿದನು. ಆಗ ಕೌರವರೆಲ್ಲರು ನುಡಿದರು: “ಸಾಧು! ಸಾಧು! ಅರ್ಜುನನೊಡನೆ ಯುದ್ಧಮಾಡುತ್ತಿರುವ ಭೀಷ್ಮನು ಅಸಾಧ್ಯವಾದುದನ್ನು ಮಾಡಿದನು. ಅರ್ಜುನನು ಬಲಶಾಲಿ, ತರುಣ, ದಕ್ಷ ಮತ್ತು ಶೀಘ್ರಕಾರಿ. ಶಂತನುಪುತ್ರ ಭೀಷ್ಮ, ದೇವಕೀಸುತ ಕೃಷ್ಣ, ಮಹಾಬಲಶಾಲಿ ಆಚಾರ್ಯಶೇಷ್ಠ ಭಾರದ್ವಾಜನನ್ನು ಬಿಟ್ಟರೆ ಬೇರೆಯಾರು ತಾನೇ ರಣದಲ್ಲಿ ಪಾರ್ಥನ ವೇಗವನ್ನು ಸಹಿಸಿಕೊಳ್ಳಬಲ್ಲರು?”

ಮಹಾಬಲಶಾಲಿಗಳಾಗಿದ್ದ ಆ ಪುರುಷಶ್ರೇಷ್ಠರೀರ್ವರೂ ಅಸ್ತ್ರಗಳಿಂದ ಅಸ್ತ್ರಗಳನ್ನು ತಡೆಗಟ್ಟುತ್ತಾ ಯುದ್ಧಕೃಡೆಯನ್ನಾಡುತ್ತಾ ಎಲ್ಲ ಜೀವಿಗಳ ಕಣ್ಣುಗಳನ್ನೂ ಮರುಳುಗೊಳಿಸಿದರು. ಬ್ರಹ್ಮ, ಇಂದ್ರ, ಅಗ್ನಿ, ಕುಬೇರ, ವರುಣ, ಯಮ, ವಾಯು ಇವರಿಂದ ಪಡೆದ ಭಯಂಕರ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಆ ಮಹಾತ್ಮರು ರಣರಂಗದಲ್ಲಿ ಚರಿಸುತ್ತಿದ್ದರು. ಆಗ ಅವರಿಬ್ಬರೂ ಯುದ್ಧದಲ್ಲಿ ತೊಡಗಿರುವುದನ್ನು ಕಂಡು ಎಲ್ಲ ಜೀವಿಗಳೂ ವಿಸ್ಮಯಗೊಂಡು “ಮಹಾಬಾಹು ಪಾರ್ಥ! ಲೇಸು! ಭೀಷ್ಮ! ಲೇಸು!” ಎಂದು ನುಡಿದವು. ಭೀಷ್ಮ-ಪಾರ್ಥರ ಯುದ್ಧದಲ್ಲಿ ಕಂಡುಬರುತ್ತಿರುವ ಈ ಮಹಾಸ್ತ್ರಗಳ ಮಹಾಪ್ರಯೋಗವು ಮನುಷ್ಯರಲ್ಲಿ ಕಾಣತಕ್ಕದ್ದಲ್ಲ! ಹೀಗೆ ಸರ್ವಾಸ್ತ್ರಕೋವಿದರ ನಡುವೆ ಅಸ್ತ್ರಯುದ್ಧವು ನಡೆಯಿತು. ಆಗ ಅರ್ಜುನನು ಪಕ್ಕಕ್ಕೆ ಸರಿದು ಅಗಲ ಅಲಗುಗಳನ್ನುಳ್ಳ ಬಾಣಗಳಿಂದ ಭೀಷ್ಮನ ಸ್ವರ್ಣಖಚಿತ ಬಿಲ್ಲನ್ನು ಕತ್ತರಿಸಿದನು. ಮಹಾಬಾಹು ಮಹಾಬಲಶಾಲಿ ಭೀಷ್ಮನು ಎವೆಯಿಕ್ಕುವಷ್ಟರಲ್ಲಿ ಬೇರೊಂದು ಬಿಲ್ಲನ್ನು ತೆಗೆದುಕೊಂಡು ಹೆದೆಯೇರಿಸಿ, ಕೋಪದಿಂದ ಯುದ್ಧದಲ್ಲಿ ಧನಂಜಯನ ಮೇಲೆ ಬೇಗ ಬಾಣಗಳನ್ನು ಬಿಟ್ಟನು. ಮಹಾತೇಜಸ್ವಿ ಅರ್ಜುನನೂ ಕೂಡ ಭೀಷ್ಮನ ಮೇಲೆ ವಿಚಿತ್ರವೂ ಹರಿತವೂ ಆದ ಅನೇಕ ಬಾಣಗಳನ್ನು ಬಿಟ್ಟನು. ಹಾಗೆಯೇ ಭೀಷ್ಮನೂ ಕೂಡ ಅರ್ಜುನನ ಮೇಲೆ ಬಿಟ್ಟನು. ನಿರಂತರವಾಗಿ ಬಾಣಗಳನ್ನು ಬಿಡುತ್ತಿದ್ದ ಆ ದಿವ್ಯಾಸ್ತ್ರವಿದ ಮಹಾತ್ಮರಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ಆಗ ಕಿರೀಟಮಾಲೀ ಅತಿರಥ ಕುಂತೀಪುತ್ರನು ಹತ್ತು ದಿಕ್ಕುಗಳನ್ನೂ ಬಾಣಗಳಿಂದ ಮುಚ್ಚಿದನು. ಶಾಂತನವನೂ ಹಾಗೆಯೇ ಮಾಡಿದನು. ಆ ಯುದ್ದದಲ್ಲಿ ಅರ್ಜುನನನ್ನು ಭೀಷ್ಮನೂ, ಭೀಷ್ಮನನ್ನು ಅರ್ಜುನನೂ ಮೀರಿಸಿದಂತಿತ್ತು. ಅದು ಲೋಕದಲ್ಲಿ ಅದ್ಭುತವಾಯಿತು. ಆಗ ಭೀಷ್ಮನ ಶೂರ ರಥರಕ್ಷಕರು ಅರ್ಜುನನಿಂದ ಹತರಾಗಿ ಅವನ ರಥದೆಡೆಯಲ್ಲಿ ಬಿದ್ದರು. ಆಗ ಅರ್ಜುನನ ಗಾಂಡೀವದಿಂದ ಹೊರಬಂದ ಗರಿಸಹಿತ ಬಾಣಗಳು ಹಗೆಯನ್ನು ಇಲ್ಲದಂತೆ ಮಾಡುವ ಬಯಕೆಯಿಂದ ಮುನ್ನುಗ್ಗಿದವು. ಅವನ ರಥದಿಂದ ಹೊಮ್ಮುತ್ತಿದ್ದ, ಬೆಳಗುತ್ತಿದ್ದ ಸುವರ್ಣಖಚಿತ ಬಾಣಗಳು ಆಕಾಶದಲ್ಲಿ ಹಂಸಗಳ ಸಾಲಿನಂತೆ ಕಾಣುತ್ತಿದ್ದವು. ಬಲವಾಗಿ ಪ್ರಯೋಗಿಸಲಾದ ಅವನ ಆ ವಿಚಿತ್ರ ದಿವ್ಯಾಸ್ತ್ರವನ್ನು ಇಂದ್ರಸಹಿತರಾಗಿ ಆಕಾಶದಲ್ಲಿ ದೇವತೆಗಳು ನೋಡುತ್ತಿದ್ದರು. ವಿಚಿತ್ರವೂ ಅದ್ಭೂತವೂ ಆದ ಅದನ್ನು ನೋಡಿ ಬಹಳ ಸಂತೋಷಗೊಂಡ ಪತಾಪಿ ಗಂಧರ್ವ ಚಿತ್ರಸೇನನು ದೇವೇಂದ್ರನ ಮುಂದೆ ಅರ್ಜುನನನ್ನು ಹೊಗಳಿದನು.

“ಒಂದಕ್ಕೊಂದು ಅಂಟಿಕೊಂಡಂತೆ ಹೋಗುತ್ತಿರುವ ಶತ್ರುಗಳನ್ನು ಸೀಳುವ ಈ ಬಾಣಗಳನ್ನು ನೋಡು. ಅರ್ಜುನನ ಈ ದಿವ್ಯಾಸ್ತ್ರಪ್ರಯೋಗವು ಅದ್ಭುತವಾಗಿದೆ. ಇದನ್ನು ಮಾನವರು ನಂಬುವುದಿಲ್ಲ. ಇದು ಅವರಲ್ಲಿಲ್ಲ. ಪ್ರಾಚೀನ ಕಾಲದ ಈ ಮಹಾಸ್ತ್ರಗಳ ಕೂಟ ವಿಚಿತ್ರವಾದುದು. ಆಕಾಶದಲ್ಲಿ ಜ್ವಲಿಸುತ್ತಿರುವ ಮಧ್ಯಾಹ್ನದ ಸೂರ್ಯನಂತಿರುವ ಅರ್ಜುನನನ್ನು ಸೈನ್ಯಗಳು ಕಣ್ಣೆತ್ತಿ ನೋಡಲಾರವು. ಇವರಿಬ್ಬರೂ ತಮ್ಮ ಕಾರ್ಯಗಳಲ್ಲಿ ಪ್ರಸಿದ್ಧರು. ಇಬ್ಬರೂ ಯುದ್ಧವಿಶಾರದರು. ಇಬ್ಬರೂ ಕೆಲಸದಲ್ಲಿ ಸಮಾನರು. ಇಬ್ಬರೂ ಯುದ್ಧದಲ್ಲಿ ಎದುರಿಸಲಾಗದವರು.”

ಚಿತ್ರಸೇನನು ಹೀಗೆ ಹೇಳಲು ದೇವೇಂದ್ರನು ದಿವ್ಯ ಹೂಮಳೆಯಿಂದ ಆ ಪಾರ್ಥ-ಭೀಷ್ಮರ ಕೂಟವನ್ನು ಗೌರವಿಸಿದನು. ಆಗ ಶಾಂತನವ ಭೀಷ್ಮನು ಬಾಣಪ್ರಯೋಗಮಾಡುತ್ತಿದ್ದ ಅರ್ಜುನನನಲ್ಲಿ ಆಸ್ಪದವನ್ನು ಕಂಡು ಎಡಬದಿಗೆ ಹೊಡೆದನು. ಆಗ ಅರ್ಜುನನು ನಕ್ಕು ಬಹು ತೇಜಸ್ವಿ ಭೀಷ್ಮನ ಬಿಲ್ಲನ್ನು ಹದ್ದಿನ ಗರಿಗಳನ್ನುಳ್ಳ ಅಗಲವಾದ ಅಲಗಿನ ಬಾಣದಿಂದ ಕತ್ತರಿಸಿದನು. ಹಾಗೆಯೇ ಕುಂತೀಪುತ್ರ ಧನಂಜಯನು ಪರಾಕ್ರಮದಿಂದ ಪ್ರಯತ್ನಿಸುತ್ತಿದ್ದ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು. ಯದ್ಧದಲ್ಲಿ ಎದುರಿಸಲಾಗದ ಮಹಾಬಾಹು ಗಾಂಗೇಯನು ಪೀಡಿತನಾಗಿ ರಥದ ದಂಡವನ್ನು ಹಿಡಿದು ಅಸ್ವಸ್ಥನಂತೆ ಬಹಳ ಹೊತ್ತು ಕುಳಿತುಬಿಟ್ಟನು. ಪ್ರಜ್ಞೆತಪ್ಪಿದ ಆ ಮಹಾರಥನನ್ನು ರಕ್ಷಿಸುವುದಕ್ಕಾಗಿ ರಥಾಶ್ವಗಳ ಸಾರಥಿಯು ಉಪದೇಶವನ್ನು ನೆನೆದು ಅವನನ್ನು ಕೊಂಡೊಯ್ದನು.

ಪಾರ್ಥ-ದುರ್ಯೋಧನರ ಯುದ್ಧ

ಭೀಷ್ಮನು ರಣರಂಗವನ್ನು ಬಿಟ್ಟು ಓಡಿಹೋಗಲು ಮಹಾತ್ಮ ದುರ್ಯೋಧನನು ಬಾವುಟವನ್ನೇರಿಸಿ ಬಿಲ್ಲು ಹಿಡಿದು ಗರ್ಜನೆ ಮಾಡುತ್ತಾ ತಾನೇ ಅರ್ಜುನನನ್ನು ಎದುರಿಸಿದನು. ಅವನು ಭಯಂಕರ ಬಿಲ್ಲನ್ನು ಹಿಡಿದ, ಉತ್ತುಂಗ ಪರಾಕ್ರಮವನ್ನುಳ್ಳ, ಶತ್ರುಸಮೂಹದಲ್ಲಿ ಸಂಚರಿಸುತ್ತಿದ್ದ ಧನಂಜಯನ ನಡುಹಣೆಗೆ ಕಿವಿಯವರೆಗೂ ಸೆಳೆದು ಬಿಟ್ಟ ಭಲ್ಲೆಯಿಂದ ಹೊಡೆದನು. ಮಹಾಕಾರ್ಯಗಳನ್ನು ಮಾಡಿದ ಆ ಅರ್ಜುನನು ಸುವರ್ಣಸದೃಶವೂ ತೀಕ್ಷ್ಣವೂ ಆದ ಆ ಬಾಣವು ನಾಟಲು, ಸುಂದರವಾದ ಒಂದೇ ಶಿಖರದ ಒಂದೇ ಸ್ತರದ ಪರ್ವತದಂತೆ ಶೋಭಿಸಿದನು. ಬಾಣದಿಂದ ಸೀಳಿದ ಅವನ ಹಣೆಯಿಂದ ಬೆಚ್ಚನೆಯ ರಕ್ತವು ಸತತವಾಗಿ ಹೊಮ್ಮಿತು. ಅದು ಚಿನ್ನದ ವಿಚಿತ್ರ ಹೂಮಾಲೆಯಂತೆ ಸುಂದರವಾಗಿ ಶೋಭಿಸಿತು. ದುರ್ಯೋಧನನ ಬಾಣತಾಗಿದ, ಕುಗ್ಗದ ಸತ್ವವುಳ್ಳ ಆ ಬಲಶಾಲಿಯು ಅತಿಶಯ ಕೋಪಾವೇಷದಿಂದ ವಿಷಾಗ್ನಿಸಮಾನ ಬಾಣಗಳನ್ನು ತೆಗೆದುಕೊಂಡು ಆ ರಾಜನನ್ನು ಹೊಡೆದನು. ಉಗ್ರತೇಜಸ್ವಿ ದುರ್ಯೊಧನನು ಪಾರ್ಥನನ್ನೂ, ಏಕೈಕವೀರನಾದ ಪಾರ್ಥನು ದುರ್ಯೋಧನನ್ನೂ ಯುದ್ಧದಲ್ಲಿ ಎದುರಿಸಿದರು. ಅಜಮೀಢ ವಂಶದ ಆ ವೀರಶ್ರೇಷ್ಠರಿಬ್ಬರೂ ಒಬ್ಬರನ್ನೊಬ್ಬರು ಸಮಾನವಾಗಿ ಘಾತಿಸಿದರು. ಅನಂತರ ವಿಕರ್ಣನು ಮದಿಸಿದ ಪರ್ವತಸಮಾನ ಮಹಾಗಜವನ್ನೇರಿ ಆನೆಯ ಕಾಲುಗಳನ್ನು ರಕ್ಷಿಸುವ ನಾಲ್ಕು ರಥಗಳೊಂದಿಗೆ ಕುಂತೀಪುತ್ರ ಅರ್ಜುನನತ್ತ ನುಗ್ಗಿದನು. ಧನಂಜಯನು ಬಿಲ್ಲನ್ನು ಕಿವಿಯವರೆಗೂ ಎಳೆದು ಬಿಟ್ಟ ಮಹಾವೇಗಶಾಲಿ ಉಕ್ಕಿನ ದೃಢ ಬಾಣದಿಂದ ಶೀಘ್ರವಾಗಿ ಮೇಲೇರಿ ಬರುತ್ತಿದ್ದ ಆ ಗಜೇಂದ್ರನ ಕುಂಭಸ್ಥಳದ ಮಧ್ಯಭಾಗಕ್ಕೆ ಹೊಡೆದನು. ಇಂದ್ರನು ಪ್ರಯೋಗಿಸಿದ ವಜ್ರಾಯುದವು ಪರ್ವತವನ್ನು ಭೇದಿಸಿ ಹೊಕ್ಕಂತೆ ಪಾರ್ಥನು ಬಿಟ್ಟ ಆ ಹದ್ದಿನ ಗರಿಯುಳ್ಳ ಬಾಣವು ಪರ್ವತಶ್ರೇಷ್ಠ ಸಮಾನ ಆ ಆನೆಯನ್ನು ಭೇದಿಸಿ ಪುಂಖದವರೆಗೂ ಒಳಹೊಕ್ಕಿತು. ಬಾಣದಿಂದ ಬಾಧಿತವಾಗಿ ಮೈ ನಡುಗಿ ಮನನೊಂದು ಕುಸಿತು ಆ ಶ್ರೇಷ್ಠ ಗಜವು ವಜ್ರಾಯುಧಹತ ಪರ್ವತಶಿಖರದಂತೆ ನೆಲಕ್ಕೆ ಬಿದ್ದಿತು. ಆ ಶ್ರೇಷ್ಠಗಜವು ನೆಲಕ್ಕುರುಳಲು ವಿಕರ್ಣನು ಭಯದಿಂದ ಥಟ್ಟನೇ ಕೆಳಗಿಳಿದು ಬೇಗ ನೂರೆಂಟು ಹೆಜ್ಜೆ ನಡೆದು ವಿವಿಂಶತಿಯ ರಥವನ್ನೇರಿದನು. ವಜ್ರಾಯುಧಸಮಾನ ಬಾಣದಿಂದ ಮಹಾಪರ್ವತದಂತೆಯೂ ಮೋಡದಂತೆಯೂ ಇದ್ದ ಆ ಆನೆಯನ್ನು ಕೊಂದ ಪಾರ್ಥನು ಅದೇ ರೀತಿಯ ಬಾಣದಿಂದ ದುರ್ಯೋಧನನ ಎದೆಯನ್ನು ಭೇದಿಸಿದನು. ಆಗ ರಾಜನೂ ಆನೆಯೂ ಗಾಯಗೊಂಡಿರಲು, ಆನೆಯ ಪಾದಗಳನ್ನು ರಕ್ಷಿಸುತ್ತಿದ್ದ ರಥಗಳೊಡನೆ ವಿಕರ್ಣನು ಭಗ್ನನಾಗಲು, ಗಾಂಡೀವದಿಂದ ಬಿಡಲಾದ ಬಾಣಗಳು ತಿವಿಯಲು, ಆ ಯೋಧಮುಖ್ಯರು ಕೂಡಲೇ ಚದುರಿ ಓಡಿಹೋದರು. ಆನೆಯು ಬಾಣದಿಂದ ಹತವಾದುದನ್ನೂ, ಯೋಧರೆಲ್ಲರೂ ಓಡಿಹೋಗುತ್ತಿದ್ದನ್ನೂ ಕಂಡು ಕುರುವೀರ ದುರ್ಯೋಧನನು ರಥವನ್ನು ತಿರುಗಿಸಿ ಪಾರ್ಥನಿಲ್ಲದೆಡೆಗೆ ರಣದಿಂದ ಓಡಿದನು. ಭಯಂಕರರೂಪವುಳ್ಳ, ಬೇಗಬೇಗ ಓಡುತ್ತಿದ್ದ, ಬಾಣನಾಟಿ ರಕ್ತಕಾರುತ್ತಿದ್ದ ದುರ್ಯೊಧನನನ್ನು ನೋಡಿ ಶತ್ರುಗಳನ್ನು ಎದುರಿಸಬಲ್ಲ, ಬತ್ತಳಿಕೆಯುಳ್ಳ, ಯುದ್ಧದಲ್ಲಿ ಆಸಕ್ತ ಅರ್ಜುನನು ಗರ್ಜಿಸಿದನು.

ಅರ್ಜುನನು ಹೇಳಿದನು: “ಅತಿಶಂii  ಕೀರ್ತಿ ಯಶಸ್ಸುಗಳನ್ನು ಬಿಟ್ಟು ಯುದ್ಧಕ್ಕೆ ಬೆನ್ನು ತಿರುಗಿಸಿ ಏತಕ್ಕೆ ಪಲಾಯನಮಾಡುತ್ತಿದ್ದೀಯೆ? ನಿನ್ನ ತೂರ್ಯಗಳು ನೀನು ಯುದ್ಧಕ್ಕೆ ಹೊರಟಾಗ ಮೊಳಗಿದಂತೆ ಇಂದು ಏಕೆ ಮೊಳಗುತ್ತಿಲ್ಲ? ದುರ್ಯೋಧನ! ಯುಧಿಷ್ಠಿರನ ಅಪ್ಪಣೆಗಳನ್ನು ಪಾಲಿಸುವ, ಕುಂತಿಯ ಮೂರನೆಯ ಮಗನಾದ ನಾನು ಯುದ್ಧದಲ್ಲಿ ಸ್ಥಿರವಾಗಿ ನಿಂತಿದ್ದೇನೆ. ಆದ್ದರಿಂದ ತಿರುಗಿ ಮುಖಕೊಟ್ಟು ಮಾತನಾಡು. ರಾಜಶ್ರೇಷ್ಠನ ನಡತೆಯನ್ನು ಸ್ಮರಿಸಿಕೋ. ದುರ್ಯೋಧನನೆಂದು ಹಿಂದೆ ನಿನಗಿಟ್ಟ ಈ ಹೆಸರು ಲೋಕದಲ್ಲಿ ವ್ಯರ್ಥವಾಯಿತು. ಯುದ್ಧವನ್ನು ಬಿಟ್ಟು ಪಲಾಯನಮಾಡುತ್ತಿರುವ ನಿನಗೆ ಈಗ ದುರ್ಯೋಧನತ್ವವು ಉಳಿದಿಲ್ಲ. ದುರ್ಯೋಧನ! ನಿನ್ನ ಹಿಂದಾಗಲೀ ಮುಂದಾಗಲೀ ರಕ್ಷಕರು ನನಗೆ ಕಾಣುತ್ತಿಲ್ಲ. ಕುರುವೀರ! ಯುದ್ಧದಿಂದ ಓಡಿಹೋಗು. ಪ್ರಿಯವಾದ ಪ್ರಾಣವನ್ನು ಪಾಂಡುಪುತ್ರನಿಂದ ಈಗ ಕಾಪಾಡಿಕೋ!”

ಪಾರ್ಥನಿಂದ ಸಮ್ಮೋಹನಾಸ್ತ್ರ ಪ್ರಯೋಗ

ಅವನಿಂದ ಯುದ್ಧಕ್ಕೆ ಆಹ್ವಾನಿತನಾದ ಮಹಾತ್ಮ ದುರ್ಯೋಧನನು ಅಂಕುಶದಿಂದ ತಿವಿತಗೊಂಡ ಮದಗಜವು ಹಿಂದಕ್ಕೆ ತಿರುಗುವಂತೆ ಅವನ ಮಾತಿನ ಅಂಕುಶದಿಂದ ತಿವಿತಗೊಂಡು ಹಿಂದಿರುಗಿದನು. ಆ ಅತಿರಥ, ಶೀಘ್ರತೆಯುಳ್ಳ ವೀರನು ಕಾಲಿನಿಂದ ತುಳಿದ ಸರ್ಪದಂತೆ ಮಹಾರಥಿ ಅರ್ಜುನನ ಮಾತಿನಿಂದ ಪೆಟ್ಟುಗೊಂಡು ಅದನ್ನು ಸೈರಿಸಲಾರದೇ ರಥದಲ್ಲಿ ಹಿಂದಿರುಗಿದನು. ಹಿಂದಕ್ಕೆ ಬರುತ್ತಿದ್ದ ಆ ದುರ್ಯೋಧನನ್ನು ನೋಡಿ ಯುದ್ಧದಲ್ಲಿ ಶರೀರ ಗಾಯಗೊಂಡ, ಸುವರ್ಣಮಾಲೆಯನ್ನು ಧರಿಸಿದ ವೀರ ಕರ್ಣನು ಅವನನ್ನು ತಡೆದು ದುರ್ಯೋಧನನ ಬಲಗಡೆಯಿದ ಪಾರ್ಥನಿದ್ದೆಡಗೆ ಹೋದನು. ಬಳಿಕ ಮಹಾಬಾಹು ಶಂತನುಪುತ್ರ ಭೀಷ್ಮನು ಚಿನ್ನದ ಜೀನುಗಳನ್ನುಳ್ಳ ಕುದುರೆಗಳನ್ನು ತ್ವರೆಗೊಳಿಸಿ ಹಿಂದಕ್ಕೆ ತಿರುಗಿಸಿ, ಬಿಲ್ಲನ್ನು ಮಿಡಿಯುತ್ತ ಹಿಂದಿನಿಂದ ದುರ್ಯೋಧನನನ್ನು ಪಾರ್ಥನಿಂದ ರಕ್ಷಿಸಿದನು. ದ್ರೋಣ, ಕೃಪ, ವಿವಿಂಶತಿ, ದುಃಶಾಸನ - ಎಲ್ಲರೂ ಬೇಗ ಹಿಂದುರಿಗಿ, ಬಾಣಹೂಡಿದ ಬಿಲ್ಲುಗಳನ್ನೆಳೆದು ದುರ್ಯೋಧನನ ರಕ್ಷಣೆಗಾಗಿ ಮುನ್ನುಗ್ಗಿದರು. ಹಿಂದಿರುಗಿ ಪೂರ್ಣಪ್ರವಾಹಸದೃಶ ಆ ಸೈನ್ಯಗಳನ್ನು ನೋಡಿದ ಕುಂತೀಪುತ್ರ ವೇಗಶಾಲಿ ಧನಂಜಯನು ಥಟ್ಟನೆ ಎದುರಾದ ಮೋಡಕ್ಕೆರಗುವ ಹಂಸದಂತೆ ಅವುಗಳ ಮೇಲೆ ಬಿದ್ದನು. ಅವರು ದಿವ್ಯಾಸ್ತ್ರಗಳನ್ನು ಹಿಡಿದು ಪಾರ್ಥನನ್ನು ಎಲ್ಲ ಕಡೆಗಳಿಂದಲೂ ಮುತ್ತಿ ಮೋಡಗಳು ಪರ್ವತದ ಮೇಲೆ ಜಲಧಾರೆಯನ್ನು ಸುರಿಸುವಂತೆ ಅವನ ಮೇಲೆ ಬಿದ್ದು ಸುತ್ತಲೂ ಬಾಣಗಳನ್ನು ಸುರಿಸಿದರು. ಆಗ ಶತ್ರುಗಳನ್ನು ಎದುರಿಸಬಲ್ಲ ಇಂದ್ರಪುತ್ರ ಗಾಂಡೀವಿಯು ಆ ಕೌರವಶ್ರೇಷ್ಠರ ಅಸ್ತ್ರಗಳನ್ನು ಅಸ್ತ್ರದಿಂದ ನಿವಾರಿಸಿ, ಸಮ್ಮೋಹನವೆಂಬ ಮತ್ತೊಂದು ಅಜೇಯ ಅಸ್ತ್ರವನ್ನು ಹೊರತೆಗೆದನು. ಆ ಬಲಶಾಲಿಯು ಹರಿತ ಅಲಗುಗಳಿಂದಲೂ, ಅಂದದ ಗರಿಗಳಿಂದಲೂ ಕೂಡಿದ ಬಾಣಗಳಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ ಗಾಂಡೀವ ಘೋಷದಿಂದ ಅವರ ಮನಸ್ಸುಗಳಿಗೆ ವ್ಯಥೆಯನ್ನುಂಟುಮಾಡಿದನು. ಆಗ ಶತ್ರುನಾಶಕ ಪಾರ್ಥನು ಭಯಂಕರ ಧ್ವನಿಯ, ಮಹಾಘೋಷವನ್ನುಳ್ಳ, ಮಹಾಶಂಖವನ್ನು ಎರಡು ಕೈಗಳಿಂದಲೂ ಹಿಡಿದು ಊದಿ ದಿಕ್ಕುದಿಕ್ಕುಗಳನ್ನೂ ಭೂಮ್ಯಾಕಾಶಗಳನ್ನೂ ಮೊಳಗಿಸಿದನು. ಪಾರ್ಥನು ಊದಿದ ಆ ಶಂಖದ ಶಬ್ಧದಿಂದ ಕೌರವವೀರರೆಲ್ಲ ಮೂರ್ಛಿತರಾಗಿ ಎದುರಿಸಲು ಅಶಕ್ಯವಾಗಿದ್ದ ತಮ್ಮ ಬಿಲ್ಲುಗಳನ್ನು ತ್ಯಜಿಸಿ ಸ್ತಬ್ಧರಾದರು. ಹಾಗೆ ಶತ್ರುಗಳು ಪ್ರಜ್ಞಾಹೀನರಾಗಿರಲು ಪಾರ್ಥನು ಉತ್ತರೆಯ ಮಾತುಗಳನ್ನು ಜ್ಞಾಪಿಸಿಕೊಂಡು ವಿರಾಟಪುತ್ರನಿಗೆ ಹೇಳಿದನು: “ಕೌರವರು ಪ್ರಜ್ಞಾಶೀಲರಾಗುವುದರೊಳಗೇ ಅವರ ನಡುವೆ ಹೋಗು. ಆಚಾರ್ಯ ದ್ರೋಣನ ಮತ್ತು ಕೃಪನ ಬಿಳಿಯ ವಸ್ತ್ರಗಳನ್ನೂ, ಕರ್ಣನ ಸುಂದರ ಹಳದಿ ವಸ್ತ್ರವನ್ನೂ, ಅಶ್ವತ್ಥಾಮನ ಹಾಗೂ ರಾಜ ದುರ್ಯೊಧನನ ನೀಲಿ ವಸ್ತ್ರವನ್ನೂ ತೆಗೆದುಕೊಂಡು ಬಾ. ಭೀಷ್ಮನು ಎಚ್ಚರವಾಗಿದ್ದಾನೆಂದು ಭಾವಿಸುತ್ತೇನೆ. ನನ್ನ ಅಸ್ತ್ರಕ್ಕೆ ಪ್ರತೀಕಾರವನ್ನು ಅವನು ಬಲ್ಲ. ಅವನ ಕುದುರೆಗಳನ್ನು ಎಡಕ್ಕಿಟ್ಟುಕೊಂಡು ಹೋಗು. ಪ್ರಜ್ಞೆತಪ್ಪದಿರುವವರ ಬಳಿಗೆ ಹೀಗೆಯೇ ಹೋಗಬೇಕು.”

ಆಗ ಮಹಾಸತ್ವ ವಿರಾಟಪುತ್ರನು ಕಡಿವಾಣಗಳನ್ನು ಬಿಟ್ಟು, ರಥದಿಂದ ಧುಮುಕಿ, ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ಶೀಘ್ರವಾಗಿ ಮತ್ತೆ ರಥವನ್ನೇರಿದನು. ವಿರಾಟಪುತ್ರನು ಚಿನ್ನದ ಜೀನುಗಳನ್ನುಳ್ಳ ನಾಲ್ಕು ಉತ್ತಮ ಕುದುರೆಗಳನ್ನು ಮುನ್ನಡೆಸಿದನು. ಆ ಬಿಳಿಯ ಕುದುರೆಗಳು ಅರ್ಜುನನನ್ನು ರಣರಂಗದ ಮಧ್ಯದಿಂದ ರಣದಿಂದಾದಾಚೆಗೆ ಕೊಂಡೊಯ್ದವು. ಹಾಗೆ ಹೋಗುತ್ತಿದ್ದ ವೀರಪುರುಷ ಅರ್ಜುನನನ್ನು ಚುರುಕಿನಿಂದ ಕೂಡಿದ ಭೀಷ್ಮನು ಬಾಣಗಳಿಂದ ಹೊಡೆದನು. ಅವನಾದರೋ ಭೀಷ್ಮನ ಕುದುರೆಗಳನ್ನು ಕೊಂದು ಹತ್ತು ಬಾಣಗಳಿಂದ ಅವನ ಪಕ್ಕೆಗೆ ಹೊಡೆದನು. ಬಳಿಕ ಅಜೇಯ ಬಿಲ್ಲನ್ನುಳ್ಳ ಅರ್ಜುನನನು ಭೀಷ್ಮನನ್ನು ಯುದ್ಧರಂಗದಲ್ಲಿ ಬಿಟ್ಟು ಅವನ ಸಾರಥಿಯನ್ನು ಹೊಡೆದು ರಾಹುವನ್ನು ಸೀಳಿಕೊಂಡು ಸೂರ್ಯನು ಹೊರಬರುವಂತೆ ರಥಸಮೂಹದ ಮಧ್ಯದಿಂದ ಹೊರಬಂದು ನಿಂತನು. ರಣದಿಂದ ಹೊರಬಂದು ಯುದ್ಧರಂಗದಲ್ಲಿ ಏಕಾಂಗಿಯಾಗಿ ನಿಂತಿದ್ದ ಮಹೇಂದ್ರಸಮ ಪಾರ್ಥನನ್ನು ಪ್ರಜ್ಞೆಬಂದ ಕುರುವೀರ ದುರ್ಯೋಧನನು ಕಂಡು ಭೀಷ್ಮನಿಗೆ ನುಡಿದನು: “ಇವನು ಹೇಗೆ ನಮ್ಮಿಂದ ತಪ್ಪಿಸಿಕೊಂಡ? ತಪ್ಪಿಸಿಕೊಳ್ಳದಂತೆ ಇವನನ್ನು ಕಟ್ಟಿಹಾಕಿ!” ಭೀಷ್ಮನು ನಕ್ಕು ಅವನಿಗೆ ಹೇಳಿದನು: “ನಿನ್ನ ಬುದ್ಧಿ ಎಲ್ಲಿ ಹೋಗಿತ್ತು? ನಿನ್ನ ಶೌರ್ಯ ಎಲ್ಲಿ ಹೋಗಿತ್ತು? ಬಾಣಗಳನ್ನೂ ಸುಂದರ ಬಿಲ್ಲನ್ನೂ ತ್ಯಜಿಸಿ ತೆಪ್ಪಗೆ ಸ್ತಬ್ಧನಾಗಿದ್ದೆಯಲ್ಲ? ಅರ್ಜುನನು ಕ್ರೂರಕಾರ್ಯವನ್ನು ಮಾಡುವವನಲ್ಲ. ಅವನ ಮನಸ್ಸು ಪಾಪದಲ್ಲಿ ಆಸಕ್ತವಾಗಿಲ್ಲ. ಮೂರುಲೋಕಗಳಿಗಾಗಿಯಾದರೂ ಅವನು ಸ್ವಧರ್ಮವನ್ನು ಬಿಡುವುದಿಲ್ಲ. ಆದ್ದರಿಂದಲೇ ಈ ಯುದ್ಧದಲ್ಲಿ ಎಲ್ಲರೂ ಹತರಾಗಿಲ್ಲ. ಕುರುವೀರ! ಬೇಗ ಕುರುದೇಶಕ್ಕೆ ಹೋಗಿಬಿಡು. ಪಾರ್ಥನೂ ಗೋವುಗಳನ್ನು ಗೆದ್ದುಕೊಂಡು ಹಿಂದಿರುಗಲಿ.”

ಆಗ ರಾಜ ದುರ್ಯೋಧನನು ತನಗೆ ಹಿತಕರವಾದ ಪಿತಾಮಹನ ಮಾತನ್ನು ಕೇಳಿ ಯುದ್ಧದ ಆಸೆಯನ್ನು ಬಿಟ್ಟು ಬಹಳ ಕೋಪದಿಂದ ನಿಡುಸುಯ್ದು ಸುಮ್ಮನಾದನು. ಭೀಷ್ಮನ ಆ ಹಿತಕರ ಮಾತನ್ನು ಪರಿಭಾವಿಸಿ ಹೆಚ್ಚುತ್ತಿರುವ ಧನಂಜಯಾಗ್ನಿಯನ್ನು ನೋಡಿ ದುರ್ಯೊಧನನನ್ನು ರಕ್ಷಿಸುತ್ತಾ ಹಿಂದಿರುಗಲು ಅವರೆಲ್ಲರೂ ಮನಸ್ಸು ಮಾಡಿದರು. ಕುಂತೀಪುತ್ರ ಮಹಾತ್ಮ ಧನಂಜಯನು ಕೌರವವೀರರು ಹೊರಡುತ್ತಿರುವುದನ್ನು ಕಂಡು ಸಂತೋಷಚಿತ್ತನಾಗಿ ಹಿರಿಯರೊಡನೆ ಮಾತನಾಡುತ್ತಾ ಅವರನ್ನು ಆದರಿಸಿ ತುಸುಹೊತ್ತು ಹಿಂಬಾಲಿಸಿದನು. ಅವನು ವೃದ್ಧ ಪಿತಾಮಹ ಶಾಂತನವನನ್ನೂ ಗುರುದ್ರೋಣನನ್ನೂ ತಲೆಬಾಗಿ ಗೌರವಿಸಿ ಅಶ್ವತ್ಥಾಮನನ್ನೂ ಕೃಪನನ್ನೂ ಇತರ ಎಲ್ಲ ಹಿರಿಯರನ್ನೂ ಸುಂದರ ಬಾಣಗಳಿಂದ ವಂದಿಸಿದನು. ಪಾರ್ಥನು ಶ್ರೇಷ್ಠ ರತ್ನಗಳಿಂದ ಸುಂದರವಾಗಿದ್ದ ದುರ್ಯೋಧನನ ಕಿರೀಟವನ್ನು ಬಾಣದಿಂದ ತುಂಡರಿಸಿದನು. ಅಂತೆಯೇ ಗಾಂಡೀವಘೋಷದಿಂದ ಲೋಕಗಳನ್ನು ಮೊಳಗಿಸುತ್ತಾ ಮಾನ್ಯನ್ಯ ವೀರರನ್ನು ಕರೆದು ಆದರಿಸಿದನು. ಆ ವೀರನು ಇದ್ದಕ್ಕಿದ್ದಂತೆ ದೇವದತ್ತವನ್ನು ಮೊಳಗಿಸಿ ಶತ್ರುಗಳ ಮನಸ್ಸನ್ನು ಭೇದಿಸಿದನು. ವೈರಿಗಳನ್ನೆಲ್ಲ ಸೋಲಿಸಿ ಚಿನ್ನದ ಸರಿಗೆಯುಳ್ಳ ಧ್ವಜದಿಂದ ಶೋಭಿಸಿದನು. ಕೌರವರು ಹೋದುದನ್ನು ನೋಡಿದ ಅರ್ಜುನನನು ಹರ್ಷಗೊಂಡು “ಕುದುರೆಗಳನ್ನು ತಿರುಗಿಸು. ನಿನ್ನ ಹಸುಗಳನ್ನು ಗೆದ್ದುದ್ದಾಯಿತು. ಶತ್ರುಗಳು ತೊಲಗಿದರು. ಸಂತೋಷದಿಂದ ನಗರಕ್ಕೆ ನಡೆ!” ಎಂದು ಉತ್ತರನಿಗೆ ಹೇಳಿದನು.

ಅನಂತರ ಯುದ್ಧದಲ್ಲಿ ಕೌರವರನ್ನು ಗೆದ್ದು ಗೂಳಿಗಣ್ಣಿನ ಅರ್ಜುನನು ವಿರಾಟನ ದೊಡ್ಡ ಗೋಧನವನ್ನು ಮರಳಿ ತಂದನು. ಕೌರವರು ಎಲ್ಲರೀತಿಯಿಂದ ಭಗ್ನರಾಗಿ ಹೋಗಲು ಬಹುಮಂದಿ ಕುರುಸೈನಿನಿಕರು ಅಡಗಿದ್ದ ಕಾಡಿನಿಂದ ಹೊರಬಿದ್ದು ಭಯಗೊಂಡ ಮನಸ್ಸುಳ್ಳವರಾಗಿ ಬೇರೆಬೇರೆ ಕಡೆಯಿಂದ ಪಾರ್ಥನ ಬಳಿ ಬಂದರು. ಕೆರಳಿದ ತಲೆಯವರಾಗಿ ಕಂಡುಬಂದ ಅವರು ಆಗ ಕೈಜೋಡಿಸಿ ನಿಂತರು. ಹಸಿವು ಬಾಯಾರಿಕೆಗಳಿಂದ ಬಳಲಿದ್ದವರೂ ವಿದೇಶದಲ್ಲಿದ್ದವರೂ ಚೈತನ್ಯಹೀನರೂ ಆಗಿದ್ದ ಅವರು ನಮಸ್ಕರಿಸಿ “ಪಾರ್ಥ! ನಾವು ನಿನಗೆ ಏನು ಮಾಡಬೇಕು?” ಎಂದು ದಿಗ್ಭ್ರಾಂತರಾಗಿ ಕೇಳಿದರು.

ಅರ್ಜುನನು ಹೇಳಿದನು: “ಒಳ್ಳೆಯದು! ಹೋಗಿ! ನಿಮಗೆ ಮಂಗಳವಾಗಲಿ! ಯಾವಕಾರಣದಿಂದಲೂ ಹೆದರಬೇಕಾಗಿಲ್ಲ. ಆರ್ತರನ್ನು ನಾನು ಕೊಲ್ಲಬಯಸುವುದಿಲ್ಲ. ನಿಮಗೆ ಬಹಳವಾಗಿ ಭರವಸೆಯನ್ನು ಕೊಡುತ್ತೇನೆ.”

ಬಂದಿದ್ದ ಯೋಧರು ಅವನ ಆ ಅಭಯವಾಕ್ಯವನ್ನು ಕೇಳಿ ಅವನಿಗೆ ಆಯುಷ್ಯ, ಕೀರ್ತಿ, ಯಶಸ್ಸುಗಳನ್ನು ಹಾರೈಸಿ ಅವನನ್ನು ಅಭಿನಂದಿಸಿದರು. ಅನಂತರ ಆ ಭಗ್ನ ಕುರುಯೋಧರು ಹಿಂದಿರುಗಿದರು. ತನ್ನ ದಾರಿಹಿಡಿದ ಅರ್ಜುನನನು ಉತ್ತರನಿಗೆ ಈ ಮಾತನ್ನಾಡಿದನು. “ರಾಜಪುತ್ರ! ಮಹಾಬಾಹೋ! ವೀರ! ಗೋಪಾಲಕರೊಡನೆ ಗೋಸಮೂಹವನ್ನೆಲ್ಲ ಹಿಂದಕ್ಕೆ ತಂದಿದ್ದೀವೆಯೋ ನೋಡು. ಕುದುರೆಗಳನ್ನು ಸಾಂತ್ವನಗೊಳಿಸಿ, ನೀರು ಕುಡಿಯಿಸಿ, ಮೀಯಿಸಿ, ಅನಂತರ ಸಾಯಂಕಾಲ ವಿರಾಟನಗರಕ್ಕೆ ಹೋಗೋಣ. ನೀನು ಕಳುಹಿಸುವ ಈ ಗೋಪಾಲಕರು ಬೇಗ ನಗರಕ್ಕೆ ಹೋಗಲಿ. ಪ್ರಿಯವನ್ನು ಹೇಳುವುದಕ್ಕಾಗಿ ನಿನ್ನ ಜಯಘೋಷ ಮಾಡಲಿ.”

ಬಳಿಕ ಉತ್ತರನು ಅರ್ಜುನನ ಮಾತಿನಂತೆ “ನನ್ನ ವಿಷಯವನ್ನು ಸಾರಿ!” ಎಂದು ಶೀಘ್ರವಾಗಿ ದೂತರಿಗೆ ಅಪ್ಪಣೆ ಮಾಡಿದನು.

Leave a Reply

Your email address will not be published. Required fields are marked *