ಹದಿನಾರನೇ ದಿನದ ಯುದ್ಧ - ೩

ಕರ್ಣ ಯುದ್ಧ

ಅತಿಮಾನ್ಯ ಪಾಂಡ್ಯರಾಜನು ಕೆಳಗುರುಳಿಸಲ್ಪಡಲು ಕೃಷ್ಣನು ಅರ್ಜುನನಿಗೆ ಪಾಂಡವರಿಗೆ ಹಿತಕರವಾಗುವ ಈ ಮಾತುಗಳನ್ನಾಡಿದನು: “ಅಶ್ವತ್ಥಾಮನ ಸಂಕಲ್ಪದಂತೆ ಕರ್ಣನು ಸೃಂಜಯರನ್ನು ಸಂಹರಿಸಿ ಅಶ್ವ-ನರ-ಗಜಗಳ ಮಹಾ ಕದನವನ್ನೇ ಎಸಗಿದ್ದಾನೆ.” ವಾಸುದೇವನು ಇದನ್ನು ಹೇಳಲು, ಅದನ್ನು ಕೇಳಿದ ಮತ್ತು ನೋಡಿದ ಅರ್ಜುನನು ಅಣ್ಣನಿಗೊದಗಿದ ಮಹಾ ಘೋರ ಭಯದಿಂದಾಗಿ “ಹೃಷೀಕೇಶ! ಕುದುರೆಗಳನ್ನು ಮುಂದೆ ನಡೆಸು!” ಎಂದನು. ಆಗ ಹೃಷೀಕೇಶನು ರಥವನ್ನು ಮುಂದುವರೆಸಿದನು. ಪುನಃ ಅಲ್ಲಿ ದಾರುಣ ಸಂಗ್ರಾಮವು ಪ್ರಾರಂಭವಾಯಿತು. ಆಗ ಪುನಃ ಯಮರಾಷ್ಟ್ರವಿವರ್ಧನ ಸಂಗ್ರಾಮವು ಕರ್ಣ ಮತ್ತು ಪಾಂಡವರ ನಡುವೆ ಪ್ರಾರಂಭವಾಯಿತು.

ಪರಸ್ಪರರನ್ನು ಸಂಹರಿಸಲು ಬಯಸಿದ ಅವರು ಧನುಸ್ಸು, ಬಾಣ, ಪರಿಘ, ಖಡ್ಗ, ತೋಮರ, ಪಟ್ಟಿಶ, ಮುಸಲ, ಭುಶುಂಡೀ, ಶಕ್ತಿ, ಋಷ್ಟಿ, ಪರಶು, ಗದ, ಪ್ರಾಸ, ಕುಂತ, ಭಿಂಡಿಪಾಲ ಮತ್ತು ಮಹಾ ಅಂಕುಶಗಳನ್ನು ಹಿಡಿದು ಎಸೆಯುತ್ತಿದ್ದರು. ಬಾಣ-ಶಿಂಜಿನಿ-ಧನುಸ್ಸುಗಳ ಶಬ್ಧದಿಂದ ಆಕಾಶ-ದಿಕ್ಕು-ಉಪದಿಕ್ಕುಗಳನ್ನು ಮೊಳಗಿಸುತ್ತಾ, ರಥಚಕ್ರಗಳ ಘೋಷದಿಂದ ಭೂಮಿಯನು ಮೊಳಗಿಸುತ್ತಾ, ಸಿಂಹನಾದಗೈಯುತ್ತಾ ಅವರು ಶತ್ರುಗಳ ಮೇಲೆ ಆಕ್ರಮಣಿಸಿದರು. ಆ ಮಹಾಘೋರ ಕಲಹದ ಕೊನೆಗಾಣಬೇಕೆಂಬ ಇಚ್ಛೆಯಿಂದ ವೀರರು ಆ ಮಹಾಶಬ್ಧದಿಂದ ಸಂಪ್ರಹೃಷ್ಟರಾಗಿ ವೀರತನದಿಂದ ಸಂಗ್ರಾಮವನ್ನು ನಡೆಸಿದರು. ಧನುಸ್ಸಿನ ಟೇಂಕಾರಗಳು, ಆನೆಗಳ ಘೀಳುಗಳು, ಹೊಡೆಯುವವರ ಮತ್ತು ಬೀಳುವವರ ನಿನಾದವು ಅತಿಯಾಗಿತ್ತು. ಬಾಣಗಳ ಶಬ್ಧಗಳು ಮತ್ತು ಶೂರರ ವಿವಿಧ ಗರ್ಜನೆಗಳ ಶಬ್ಧಗಳನ್ನು ಕೇಳಿ ಕೆಲವರು ನಡುಗಿದರು, ಅಸುನೀಗಿದರು ಮತ್ತು ಕೆಲವರು ಮೂರ್ಛೆ ಹೋದರು. ರಣದಲ್ಲಿ ಹಾಗೆ ಸಿಂಹನಾದಗೈಯುತ್ತಾ ಶಸ್ತ್ರವೃಷ್ಟಿಯನ್ನು ಸುರಿಸುತ್ತಿದ್ದ ಅನೇಕ ಸೈನಿಕರನ್ನು ಕರ್ಣನು ಬಾಣಗಳಿಂದ ಸದೆಬಡಿದನು. ಕರ್ಣನು ಶರಗಳಿಂದ ಅಶ್ವ-ಸೂತ-ಧ್ವಜಗಳೊಂದಿಗೆ ಪಾಂಚಾಲ ವೀರರ ಐದು, ನಂತರ ಹತ್ತು ಮತ್ತು ಐದು ರಥಗಳನ್ನು ಯಮಕ್ಷಯಕ್ಕೆ ಕಳುಹಿಸಿದನು. ಪಾಂಡವ ಯೋಧಮುಖ್ಯರು ರಣದಲ್ಲಿ ಶೀಘ್ರವಾಗಿ ಅಸ್ತ್ರಗಳಿಂದ ಆಕಾಶವನ್ನು ಮುಚ್ಚುತ್ತಾ ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದರು. ಆಗ ಕರ್ಣನು ಶರವರ್ಷಗಳಿಂದ ಅಲ್ಲೋಲಕಲ್ಲೋಲಗೊಳಿಸುತ್ತಾ ಕಮಲ-ಪಕ್ಷಿಗಳಿಂದ ಕೂಡಿದ ಸರೋವರವನ್ನು ಸಲಗವು ಹೇಗೋ ಹಾಗೆ ಶತ್ರುಸೇನೆಯನ್ನು ಹೊಕ್ಕನು. ಶತ್ರುಸೇನೆಯ ಮಧ್ಯಹೋಗಿ ರಾಧೇಯನು ಉತ್ತಮ ಧನುಸ್ಸನ್ನು ಟೇಂಕರಿಸುತ್ತಾ ನಿಶಿತ ಬಾಣಗಳಿಂದ ಶಿರಗಳನ್ನು ಕತ್ತರಿಸುತ್ತಾ ಬೀಳಿಸುತ್ತಿದ್ದನು. ಉಸಿರಿಲ್ಲದ ಶರೀರಗಳಿಂದಲೋ ಎನ್ನುವಂತೆ ಸೈನಿಕರ ಕವಚ-ಗುರಾಣಿಗಳನ್ನು ತುಂಡರಿಸುವ ಕರ್ಣನ ಎರಡನೆಯ ಬಾಣವನ್ನು ಯಾರಿಗೂ ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಚಾವಟಿಯಿಂದ ಕುದುರೆಯನ್ನು ಹೊಡೆಯುವ ಹಾಗೆ ಅವನು ಧನುಸ್ಸಿನ ಶಿಂಜನಿಯಿಂದ ಪ್ರಯೋಗಿಸಿದ ಶರಗಳಿಂದ ಕವಚಗಳೊಂದಿಗೆ ಶರೀರಗಳನ್ನು ಮಥಿಸಿ ಸಂಹರಿಸಿದನು. ಸಿಂಹವು ಮೃಗಗಣಗಳನ್ನು ಕೂಡಲೇ ಕೊಲ್ಲುವಂತೆ ಕರ್ಣನು ತನ್ನ ಶರಕ್ಕೆ ಗೋಚರರಾದ ಪಾಂಡು-ಸೃಂಜಯ-ಪಾಂಚಾಲರನ್ನು ಸಂಹರಿಸಿದನು. ಆಗ ಪಾಂಚಾಲಪುತ್ರರು, ದ್ರೌಪದೇಯರು, ನಕುಲ-ಸಹದೇವರು ಮತ್ತು ಯುಯುಧಾನ ಸಾತ್ಯಕಿಯರು ಒಟ್ಟಿಗೇ ಕರ್ಣನನ್ನು ಆಕ್ರಮಣಿಸಿದರು.

ಪರಿಶ್ರಮದಿಂದ ಹೋರಾಡುತ್ತಿದ್ದ ಕುರು-ಪಾಂಡವ-ಸೃಂಜಯ ಯೋಧರು ತಮ್ಮ ಪ್ರಿಯ ಜೀವಗಳ ಮೇಲಿನ ಆಸೆಯನ್ನೂ ತೊರೆದು ಪರಸ್ಪರರ ಮೇಲೆ ಎರಗಿದರು. ಸುಸನ್ನದ್ಧ ಕವಚಧಾರೀ ಶಿರಸ್ತ್ರಾಣ-ಭೂಷಣಧಾರೀ ಮಹಾರಥರು ಗರ್ಜಿಸುತ್ತಾ, ಕರೆಯುತ್ತಾ ಮತ್ತು ಕುಪ್ಪಳಿಸುತ್ತಾ ಕಾಲದಂಡಗಳಂಥಹ ಗದೆ-ಮುಸಲ-ಪರಿಘ ಮತ್ತು ಅನ್ಯ ಆಯುಧಗಳನ್ನು ಮೇಲೆತ್ತಿ ಆಕ್ರಮಣಿಸುತ್ತಿದ್ದರು. ಆಗ ಅನ್ಯೋನ್ಯರನ್ನು ಹೊಡೆದು ಕೆಳಗುರುಳಿಸಲು ಅವರು ಶರೀರರಿಂದ ರಕ್ತವನ್ನು ಕಾರುತ್ತಾ ಮೆದುಳು ಕಣ್ಣುಗಳನ್ನು ಕಳೆದುಕೊಂಡು ಯುದ್ಧದಲ್ಲಿ ಬೀಳುತ್ತಿದ್ದರು. ಶಸ್ತ್ರಗಳಿಂದ ಎಲ್ಲಾಕಡೆ ಚುಚ್ಚಲ್ಪಟ್ಟ ಕೆಲವರು ಜೀವವಿಲ್ಲದಿದ್ದರೂ ರಕ್ತದಿಂದ ತೋಯ್ದು ದಾಳಿಂಬೇಹಣ್ಣಿನಂತಹ ಹಲ್ಲುಗಳಿಂದ ಹೊಳೆಯುತ್ತಾ ಜೀವಂತವಿದ್ದಾರೋ ಎನ್ನುವಂತೆ ನಿಂತಿದ್ದರು. ಕ್ರುದ್ಧ ಯೋಧರು ಪರಸ್ಪರರನ್ನು ಪಟ್ಟಿಶ, ಖಡ್ಗ, ಶಕ್ತಿ, ಭಿಂಡಿಪಾಲ, ನಖರ, ಪ್ರಾಸ ಮತ್ತು ತೋಮರಗಳಿಂದ ಕತ್ತರಿಸುತ್ತಿದ್ದರು, ದೂರಕ್ಕೆಸೆಯುತ್ತಿದ್ದರು, ತುಂಡು ತುಂಡು ಮಾಡುತ್ತಿದ್ದರು ಹಾಗೂ ಸಂಹರಿಸುತ್ತಿದ್ದರು. ಚಂದನವೃಕ್ಷವು ಕತ್ತರಿಸಿದಾಗ ಕೆಂಪುಬಣ್ಣದ ರಸವನ್ನು ಸುರಿಸುವಂತೆ ಅನ್ಯೋನ್ಯರಿಂದ ಕಡಿಯಲ್ಪಟ್ಟವರು ರಕ್ತವನ್ನು ಸುರಿಸುತ್ತಾ ಕೆಳಗುರುಳುತ್ತಿದ್ದರು. ಸಹಸ್ರಾರು ಸಂಖ್ಯೆಗಳಲ್ಲಿ ರಥಗಳು ರಥಗಳಿಂದಲೂ, ಆನೆಗಳು ಆನೆಗಳಿಂದಲೂ, ಮನುಷ್ಯರು ನವಶ್ರೇಷ್ಠರಿಂದಲೂ, ಕುದುರೆಗಳು ಕುದುರೆಗಳೂ ಹತಗೊಂಡು ಕೆಳಗುರುಳಿತ್ತಿದ್ದವು. ಧ್ವಜಗಳು, ಶಿರಸ್ಸುಗಳು, ಛತ್ರಗಳು, ಆನೆಯ ಸೊಂಡಿಲುಗಳು, ಮನುಷ್ಯರ ಭುಜಗಳು, ಕ್ಷುರ-ಭಲ್ಲ-ಅರ್ಧಚಂದ್ರ ಶಸ್ತ್ರಗಳು ತುಂಡಾಗಿ ಬಿದ್ದಿದ್ದವು. ಯುದ್ಧದಲ್ಲಿ ನರರು, ಆನೆಗಳು, ರಥಗಳು, ಕುದುರೆಗಳು ಸದೆಬಡಿಯುತ್ತಿದ್ದವು. ಸಹಸ್ರಾರು ಆನೆಗಳು ಶೂರರು ಕೈಗಳನ್ನು ಮತ್ತು ಸೊಂಡಿಲುಗಳನ್ನು ಅಶ್ವಾರೋಹಿಗಳಿಂದ ಕಳೆದುಕೊಂಡರು. ಸೀಳಿಹೋದ ಪರ್ವತಗಳಂತೆ ಪತಾಕೆ-ಧ್ವಜಗಳ ಸಹಿತವಾಗಿ ಪದಾತಿಗಳು, ಅನೆಗಳು ಮತ್ತು ರಥಗಳು ಕೆಳಗುರುಳಿದವು.

ಪ್ರಹರಿಸಿ ಸಂಹರಿಸುವವರು ಕೂಡ ಎಲ್ಲ ಕಡೆ ಬೀಳುತ್ತಿದ್ದರು. ಅಶ್ವಾರೋಹಿಗಳು ತ್ವರೆಮಾಡಿ ಪದಾತಿಗಳನ್ನು ಸಂಹರಿಸುತ್ತಿದ್ದರು. ಪದಾತಿ ಸಂಘಗಳೂ ಅಶ್ವಾರೋಹಿಗಳನ್ನು ಕೊಂದು ರಣದಲ್ಲಿ ಮಲಗಿಸುತ್ತಿದ್ದರು. ಹತರಾಗಿ ಕೆಳಗೆ ಬಿದ್ದಿರುವ ಯೋಧರ ಮುಖಗಳೂ ದೇಹಗಳೂ ಹೊಸಕಿದ ಕಮಲಗಳಂತೆ ಮತ್ತು ಬಾಡಿಹೋದ ಹಾರಗಳಂತೆ ಕಾಣುತ್ತಿದ್ದವು. ಆನೆ, ಕುದುರೆ ಮತ್ತು ಮನುಷ್ಯರ ಅತ್ಯಂತ ಸುಂದರ ರೂಪಗಳು ಆ ಸಮಯದಲ್ಲಿ ಕೆಸರಿನಲ್ಲಿ ಬಿದ್ದ ವಸ್ತ್ರಗಳಂತೆ ಕಣ್ಣಿಂದ ನೋಡಲಾರದಷ್ಟು ವಿಕಾರವಾಗಿದ್ದವು.

ಗಜಸೇನೆಯೊಂದಿಗೆ ಪಾಂಡವರ ಯುದ್ಧ

ದುರ್ಯೋಧನನು ಪ್ರಚೋದಿಸಿದ ಮಾವುತರು ತಮ್ಮ ಆನೆಗಳೊಂದಿಗೆ ಧೃಷ್ಟದ್ಯುಮ್ನನನ್ನು ಸಂಹರಿಸುವ ಇಚ್ಛೆಯಿಂದ ಪರಮಕ್ರುದ್ಧರಾಗಿ ಪಾರ್ಷತನನ್ನು ಆಕ್ರಮಣಿಸಿದರು. ಪೂರ್ವ ಮತ್ತು ದಕ್ಷಿಣ ದೇಶಗಳ ಶ್ರೇಷ್ಠ ಗಜಯೋಧರು, ಅಂಗ-ವಂಗ-ಪುಂಡ್ರ-ಮಾಗಧ-ತಾಮ್ರಲಿಪ್ತ-ಮೇಖಲ-ಕೋಶಲ-ಮದ್ರ-ದಶಾರ್ಣ-ನಿಷಧರು ಗಜಯುದ್ಧದಲ್ಲಿ ಕುಶಲರಾದ ಕಲಿಂಗರೊಂದಿಗೆ ಎಲ್ಲರೂ ಶರ-ತೋಮರ-ನಾರಾಚಗಳಿಂದ ಮಳೆಸುರಿಸುವ ಮೋಡಗಳಂತೆ ಪಾಂಚಾಲಾಚಲವನ್ನು ಯುದ್ಧದಲ್ಲಿ ತೋಯಿಸಿದರು. ಶತ್ರುಗಳನ್ನು ಮರ್ದಿಸಲು ಮಾವುತರ ಹಿಮ್ಮಡಿ-ಹೆಬ್ಬರಳು ಮತ್ತು ಅಂಕುಶಗಳ ತಿವಿತದಿಂದ ಪ್ರಚೋದಿಸಲ್ಪಟ್ಟ ಆ ಆನೆಗಳನ್ನು ಪಾರ್ಷತನು ನಾರಾಚ ಬಾಣಗಳಿಂದ ಮುಚ್ಚಿಬಿಟ್ಟನು. ಗಿರಿಗಳಂತಿದ್ದ ಆ ಆನೆಗಳಲ್ಲಿ ಪ್ರತಿಯೊಂದನ್ನೂ ಹತ್ತು-ಆರು ಮತ್ತು ಎಂಟು ಬಾಣಗಳಿಂದ ಗಾಯಗೊಳಿಸಿ ಧೃಷ್ಟದ್ಯುಮ್ನನು ಮೇಘಗಳು ಸೂರ್ಯನನ್ನು ಮುಚ್ಚುವಂತೆ ಮುಚ್ಚಿಬಿಟ್ಟನು. ಅವನನ್ನು ನೋಡಿದ ಪಾಂಡು-ಪಾಂಚಾಲರು ನಕುಲ, ಸಹದೇವ, ದ್ರೌಪದೇಯರು, ಪ್ರಭದ್ರಕರು, ಸಾತ್ಯಕಿ, ಶಿಖಂಡಿ ಮತ್ತು ಚೇಕಿತಾನರು ಶಿಂಜಿನಿ ಮತ್ತು ಬಾಣಗಳ ಶಬ್ಧಗಳೊಂದಿಗೆ ಸಿಂಹನಾದಗೈಯುತ್ತಾ ಆ ಆನೆಗಳ ಮೇಲೆ ನಿಶಿತಾಯುಧಗಳ ಮಳೆಗಳನ್ನೇ ಸುರಿಸಿದರು. ಮ್ಲೇಚ್ಛರಿಂದ ಕಳುಹಿಸಲ್ಪಟ್ಟ ಆ ಕುಪಿತ ಆನೆಗಳು ಮನುಷ್ಯರನ್ನು, ಕುದುರೆಗಳನ್ನು ಮತ್ತು ರಥಗಳನ್ನೂ ಕೂಡ ಸೊಂಡಿಲುಗಳಿಂದ ಮೇಲೆತ್ತಿ ಕಾಲಿನಿಂದ ತುಳಿಯುತ್ತಿದ್ದವು. ದಂತಗಳ ಅಗ್ರಭಾಗದಿಂದ ಇರಿಯುತ್ತಿದ್ದವು. ಸೊಂಡಲಿಗೆ ಸುತ್ತಿಹಾಕಿ ಎಸೆಯುತ್ತಿದ್ದವು. ಅನ್ಯರು ದಂತಗಳ ಅಗ್ರಭಾಗಕ್ಕೆ ಸಿಕ್ಕಿಹಾಕಿಕೊಂಡು ಭಯಂಕರವಾಗಿ ಕೆಳಗಿ ಬೀಳುತ್ತಿದ್ದರು. ಆಗ ಸಾತ್ಯಕಿಯು ಎದುರಿದ್ದ ವಂಗದೇಶದ ಆನೆಯ ಮರ್ಮಸ್ಥಾನಗಳನ್ನು ಉಗ್ರವೇಗದ ನಾರಾಚಗಳಿಂದ ಸೀಳಿ ಕೆಳಕ್ಕುರುಳಿಸಿದನು. ಆ ಆನೆಯನ್ನು ಬಿಟ್ಟು ಕೆಳಗೆ ಹಾರುತ್ತಿದ್ದ ವಂಗರಾಜನನ್ನು ಸಾತ್ಯಕಿಯು ನಾರಾಚದಿಂದ ಪ್ರಹರಿಸಿ ನೆಲಕ್ಕೆ ಕೆಡವಿದನು. ಚಲಿಸುವ ಪರ್ವತದಂತೆ ತನ್ನ ಮೇಲೆ ಬೀಳುತ್ತಿದ್ದ ಪುಂಡ್ರನ ಆನೆಯನ್ನು ಸಹದೇವನು ಮೂರು ನಾರಾಚಗಳಿಂದ ಗಾಯಗೊಳಿಸಿದನು. ಪುನಃ ಸಹದೇವನು ಆ ಆನೆಯನ್ನು ಪತಾಕೆ, ಮಾವುತ, ಕವಚ, ಧ್ವಜ ಮತ್ತು ಪ್ರಾಣಗಳಿಂದ ವಿಹೀನವನ್ನಾಗಿಸಿ ಅಂಗನ ಕಡೆ ಧಾವಿಸಿದನು. ನಕುಲನಾದರೋ ಸಹದೇವನನ್ನು ತಡೆದು ತಾನೇ ಮೂರು ಯಮದಂಡ ಸದೃಶ ನಾರಾಚಗಳಿಂದ ಅಂಗನನ್ನು ಪ್ರಹರಿಸಿ, ಅವನ ಆನೆಯನ್ನು ನೂರು ಬಾಣಗಳಿಂದ ಹೊಡೆದನು. ಆಗ ಅಂಗನು ಸೂರ್ಯನ ಕಿರಣಗಳಿಗೆ ಸಮತೇಜಸ್ಸುಳ್ಳ ಎಂಟುನೂರು ತೋಮರಗಳನ್ನು ನಕುಲನ ಮೇಲೆ ಪ್ರಯೋಗಿಸಲು, ನಕುಲನು ಅವು ಒಂದೊಂದನ್ನೇ ಮೂರು ಮೂರು ಭಾಗಗಳಾಗಿ ತುಂಡರಿಸಿದನು. ಕೂಡಲೇ ಪಾಂಡವ ನಕುಲನು ಅವನ ಶಿರವನ್ನು ಅರ್ಧಚಂದ್ರದಿಂದ ಕತ್ತರಿಸಲು ಆನೆಯೊಂದಿಗೆ ಆ ಮ್ಲೇಚ್ಛಅಂಗನು ಹತನಾಗಿ ಕೆಳಕ್ಕುರಿಳಿದನು. ಹಸ್ತಿಶಿಕ್ಷಾವಿಶಾರದ ಅಂಗನು ಹತನಾಗಲು ಅಂಗದೇಶದ ಸೈನಿಕರು ಕ್ರುದ್ಧರಾಗಿ ಮಹಾಮಾತ್ರದ ಆನೆಗಳ ಸಂಕುಲಗಳೊಂದಿಗೆ ನಕುಲನನ್ನು ಆಕ್ರಮಣಿಸಿದರು.

ಚಲಿಸುತ್ತಿರುವ ಪತಾಕೆಗಳಿಂದ ಮತ್ತು ಬಂಗಾರದ ಹಗ್ಗ ಮತ್ತು ಕವಚಗಳಿಂದ ಕೂಡಿ ಶತ್ರುಗಳನ್ನು ಧ್ವಂಸಮಾಡಲು ತ್ವರೆಮಾಡಿಬರುತ್ತಿದ್ದ ಆ ಪ್ರಮುಖ ಆನೆಗಳು ಉರಿಯುತ್ತಿರುವ ಪರ್ವತಗಳಂತೆ ತೋರುತ್ತಿದ್ದವು. ನಕುಲನನ್ನು ಕೊಲ್ಲಲೋಸುಗ ಆ ಆನೆಗಳೊಂದಿಗೆ ಮೇಕಲೋತ್ಕಲ-ಕಲಿಂದ-ನಿಷಧ-ತಾಮ್ರಲಿಪ್ತ ಯೋಧರು ಶರ-ತೋಮರಗಳ ಮಳೆಯನ್ನೇ ಸುರಿಸುತ್ತಾ ಆಕ್ರಮಣಿಸಿದರು. ಮೋಡಗಳಿಂದ ದಿವಾಕರನು ಹೇಗೋ ಹಾಗೆ ಅವುಗಳಿಂದ ಅಚ್ಛಾದಿತನಾಗಿದ್ದ ನಕುಲನನ್ನು ನೋಡಿ ಪಾಂಡವ-ಪಾಂಚಾಲ-ಸೋಮಕ ಯೋಧರು ಕುಪಿತರಾಗಿ ಎದುರಾಳಿಗಳ ಮೇಲೆ ಎರಗಿದರು. ಆಗ ಅಲ್ಲಿ ಸಹಸ್ರಾರು ಶರ-ತೋಮರಗಳ ಮಳೆಸುರಿಸುವ ರಥಿಗಳ ಮತ್ತು ಗಜಾರೋಢರ ನಡುವೆ ಯುದ್ಧವು ನಡೆಯಿತು. ನಾರಾಚಗಳಿಂದ ಆನೆಗಳ ಕುಂಭಗಳು, ವಿವಿಧ ಕವಚಗಳು ಒಡೆದುಹೋದವು. ದಂತಗಳೂ ಆಭರಣಗಳೂ ತುಂಡಾದವು. ಅವುಗಳಲ್ಲಿ ಎಂಟು ಮಹಾಗಜಗಳನ್ನು ಅರವತ್ತೆಂಟು ಸುತೇಜಸ ಬಾಣಗಳಿಂದ ಸಹದೇವನು ಸಂಹರಿಸಲು ಅವು ಮಾವುತರೊಡನೆ ಕೆಳಕ್ಕುರುಳಿದವು. ನಕುಲನೂ ಕೂಡ ತನ್ನ ಉತ್ತಮ ಧನುಸ್ಸನ್ನು ಬಗ್ಗಿಸಿ ವೇಗವಾಗಿ ಚಲಿಸುವ ನಾರಾಚಗಳಿಂದ ಅನೇಕ ಆನೆಗಳನ್ನು ಸಂಹರಿಸಿದನು. ಅನಂತರ ಧೃಷ್ಟದ್ಯುಮ್ನ-ಸಾತ್ಯಕಿಯರು, ದ್ರೌಪದೇಯರು, ಪ್ರಭದ್ರಕರು ಮತ್ತು ಶಿಖಂಡಿಯು ಮಹಾಗಜಗಳನ್ನು ಶರವೃಷ್ಟಿಗಳಿಂದ ಅಭಿಷೇಕಿಸಿದರು. ಶತ್ರುಗಳ ಆ ಆನೆಗಳೆಂಬ ಪರ್ವತಗಳು ಪಾಂಡುಯೋಧರೆಂಬ ಮೇಘಗಳಿಂದ ಸುತ್ತುವರೆಯಲ್ಪಟ್ಟು, ಬಾಣಗಳ ಮಳೆಗಳಿಂದ ಹತಗೊಂಡು ವಜ್ರವೃಷ್ಟಿಗೆ ಗುರಿಯಾದ ಗಿರಿಗಳಂತೆ ಕೆಳಕ್ಕುರುಳಿದವು. ಹೀಗೆ ಕೌರವ ಸೇನೆಯ ಆನೆಗಳನ್ನು ಸಂಹರಿಸಿದ ಆ ಪಾಂಡುನರಕುಂಜರರು ದಡವೊಡೆದ ನದಿಯಂತೆ ಹರಿದು ಓಡಿ ಹೋಗುತ್ತಿದ್ದ ಶತ್ರು ಸೇನೆಗಳನ್ನು ನೋಡಿದರು. ಪಾಂಡುಪುತ್ರನ ಸೈನಿಕರು ಆ ಸೇನೆಯನ್ನು ನೋಡಿ ಸಂಪೂರ್ಣವಾಗಿ ಅದನ್ನು ಅಲ್ಲೋಲಕಲ್ಲೋಲಗೊಳಿಸಿ ಪುನಃ ಕರ್ಣನನ್ನೇ ಆಕ್ರಮಿಸಿದರು.

ಸಹದೇವ-ದುಃಶಾಸನರ ಯುದ್ಧ

ಕ್ರುದ್ಧನಾಗಿ ಕೌರವ ವಾಹಿನಿಯನ್ನು ಸುಡುತ್ತಿದ್ದ ಸಹದೇವನನ್ನು ಭ್ರಾತಾ ದುಃಶಾಸನನು ಎದುರಿಸಿದನು. ಮಹಾಯುದ್ಧದಲ್ಲಿ ಅವರಿಬ್ಬರೂ ತೊಡಗಿರುವುದನ್ನು ನೋಡಿ ಅಲ್ಲಿದ್ದ ನರಾಧಿಪರು ತಮ್ಮ ಅಂಗವಸ್ತ್ರಗಳನ್ನು ಮೇಲಕ್ಕೆ ಹಾರಿಸಿ ಸಿಂಹನಾದಗೈದರು. ಆಗ ದುಃಶಾಸನನು ಕ್ರುದ್ಧನಾಗಿ ಪಾಂಡುಪುತ್ರನ ವಕ್ಷಸ್ಥಳವನ್ನು ಮೂರು ಬಾಣಗಳಿಂದ ಹೊಡೆದನು. ಸಹದೇವನು ಆಗ ನಾರಾಚದಿಂದ ದುಃಷಾಸನನನ್ನು ಹೊಡೆದು ಪುನಃ ಎಪ್ಪತ್ತರಿಂದ ಅವನನ್ನೂ ಮತ್ತು ಮೂರರಿಂದ ಅವನ ಸಾರಥಿಯನ್ನೂ ಹೊಡೆದನು. ಆಗ ದುಃಶಾಸನನು ಸಹದೇವನ ಚಾಪವನ್ನು ಕತ್ತರಿಸಿ ಅವನ ಬಾಹು-ಎದೆಗಳಿಗೆ ಎಪ್ಪತ್ತುಮೂರು ಬಾಣಗಳಿಂದ ಹೊಡೆದನು. ಆಗ ಯೋಧಶ್ರೇಷ್ಠ ಸಹದೇವನು ಕ್ರುದ್ಧನಾಗಿ ಖಡ್ಗವನ್ನು ಹಿಡಿದು ತಿರುಗಿಸಿ ದುಃಶಾಸನನ ಕಡೆ ಎಸೆದನು. ಆ ಮಹಾಖಡ್ಗವು ಅವನ ಧನುರ್ಬಾಣ-ಶಿಂಜಿನಿಗಳನ್ನು ಕತ್ತರಿಸಿ ಅಂಬರದಿಂದ ಚ್ಯುತಗೊಂಡು ಬೀಳುವ ಸರ್ಪದಂತೆ ಭೂಮಿಯ ಮೇಲೆ ಬಿದ್ದಿತು. ಅನಂತರ ಸಹದೇವನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ದುಃಶಾಸನನ ಮೇಲೆ ಅಂತಕರ ಬಾಣವನ್ನು ಪ್ರಯೋಗಿಸಿದನು. ಮೇಲೆ ಬೀಳುತ್ತಿದ್ದ ಆ ಯಮದಂಡದ ಕಾಂತಿಯನ್ನು ಹೊಂದಿದ್ದ ವಿಶಿಖವನ್ನು ಕೌರವನು ಹರಿತ ಖಡ್ಗದಿಂದ ಎರಡು ಭಾಗಗಳಾಗಿ ಕತ್ತರಿಸಿದನು. ತನ್ನ ಮೇಲೆ ಬೀಳಲಿದ್ದ ಆ ಖಡ್ಗವನ್ನು ಸಮರದಲ್ಲಿ ಸಹದೇವನು ನಸುನಗುತ್ತಲೇ ನಿಶಿತ ಶರಗಳಿಂದ ಕೂಡಲೇ ಕತ್ತರಿಸಿ ಕೆಡವಿದನು. ಆಗ ದುಃಶಾಸನನು ಬೇಗನೇ ಸಹದೇವನ ರಥದ ಮೇಲೆ ಅರವತ್ನಾಲ್ಕು ಬಾಣಗಳನ್ನು ಎರಚಿದನು. ವೇಗದಿಂದ ಬೀಳುತ್ತಿದ್ದ ಆ ಅನೇಕ ಶರಗಳಲ್ಲಿ ಒಂದೊಂದನ್ನೂ ಸಹದೇವನು ಐದೈದು ಬಾಣಗಳಿಂದ ಕತ್ತರಿಸಿದನು. ದುಃಶಾಸನನು ಕಳುಹಿಸಿದ ಮಹಾಬಾಣಗಳೆಲ್ಲವನ್ನೂ ತಡೆದು ಮಾದ್ರೀಪುತ್ರನು ಅವನ ಮೇಲೆ ಅನೇಕ ಬಾಣಗಳನ್ನು ಸುರಿಸಿದನು. ಆಗ ಸಹದೇವನು ಕ್ರುದ್ಧನಾಗಿ ಮೃತ್ಯುಕಾಲಾಂತಕನಂತಿರುವ ಘೋರ ಶರವನ್ನು ತೆಗೆದುಕೊಂಡು ಚಾಪವನ್ನು ಬಲದಿಂದ ಎಳೆದು ದುಃಶಾಸನನ ಮೇಲೆ ಪ್ರಯೋಗಿಸಿದನು. ಅದು ವೇಗದಿಂದ ಅವನ ಮಹಾ ಕವಚವನ್ನು ಭೇದಿಸಿ ಸರ್ಪವು ಬಿಲವನ್ನು ಹೊಗುವಂತೆ ಧರಣಿಯನ್ನು ಬೇದಿಸಿ ಹೊಕ್ಕಿತು. ಆಗ ದುಃಶಾಸನನು ಮೂರ್ಛಿತನಾದನು. ಅವನು ಮೂರ್ಛಿತನಾದುದನ್ನು ನೋಡಿ ಅವನ ಸಾರಥಿಯು ನಿಶಿತಶರಗಳಿಂದ ಪ್ರಹರಿಸಲ್ಪಟ್ಟು ಭಯಭೀತನಾಗಿ ತ್ವರೆಮಾಡಿ ರಥವನ್ನು ದೂರಕ್ಕೊಯ್ದುಕೊಂಡು ಹೋದನು.

ರಣದಲ್ಲಿ ದುರ್ಯೋಧನನ ಬಲವನ್ನು ಪರಾಜಯಗೊಳಿಸಿ ಪ್ರಹೃಷ್ಟನಾದ ಪಾಂಡವನು ಎಲ್ಲಕಡೆಗಳಿಂದಲೂ ಸೈನಿಕರನ್ನು ಸದೆಬಡಿದನು. ರೋಷಗೊಂಡ ಮನುಷ್ಯನು ಕೆಂಜಿಗಗಳಿರುವ ಎಲೆಗಳ ಗೂಡನ್ನು ನೆಲಕ್ಕೆ ತಿಕ್ಕಿ ಹಾಕುವಂತೆ ಸಹದೇವನು ಕೌರವೀ ಸೇನೆಯನ್ನು ನಾಶಗೊಳಿಸಿದನು.

ನಕುಲ-ಕರ್ಣರ ಯುದ್ಧ; ಕುಂತಿಗೆ ಕೊಟ್ಟ ಮಾತನ್ನು ಸ್ಮರಿಸಿ ಕರ್ಣನು ನಕುಲನನ್ನು ವಧಿಸದೆಯೇ ಅಪಮಾನಿಸಿದುದು

ಯುದ್ಧದಲ್ಲಿ ರಭಸವಾಗಿ ಸೇನೆಗಳನ್ನು ಸೀಳುತ್ತಿದ್ದ ನಕುಲನನ್ನು ವೈಕರ್ತನ ಕರ್ಣನು ತಡೆದನು. ಆಗ ನಕುಲನು ಕರ್ಣನಿಗೆ ನಗುತ್ತಾ ಹೇಳಿದನು: “ಬಹಳಕಾಲದ ನಂತರ ನಾನು ದೇವತೆಗಳ ಸೌಮ್ಯದೃಷ್ಟಿಗೆ ಪಾತ್ರನಾಗಿದ್ದೇನೆ! ರಣದಲ್ಲಿ ಪಾಪಿ ನಿನ್ನನ್ನು ನೋಡುತ್ತಿದ್ದೇನಲ್ಲ! ಏಕೆಂದರೆ ನೀನೇ ಈ ವೈರ, ಕಲಹ ಮತ್ತು ಅನರ್ಥಗಳಿಗೆ ಮೂಲ ಕಾರಣನು. ನಿನ್ನ ದೋಷಗಳಿಂದಲೇ ಕುರುಗಳು ಪರಸ್ಪರರೊಡನೆ ಹೊಡೆದಾಡಿ ಕ್ಷೀಣರಾಗುತ್ತಿದ್ದಾರೆ! ಇಂದು ನಿನ್ನನ್ನು ಸಮರದಲ್ಲಿ ಸಂಹರಿಸಿ ವಿಜ್ವರನೂ ಕೃತಕೃತ್ಯನೂ ಆಗುತ್ತೇನೆ!”

ಹೀಗೆ ಹೇಳಿದ ನಕುಲನಿಗೆ ಸೂತನಂದನನು ಉತ್ತರಿಸಿದನು: “ನೀನು ಹೇಳಿದುದು ರಾಜಪುತ್ರನಿಗೂ ಅದರನ್ನೂ ವಿಶೇಷವಾಗಿ ನಿನ್ನಂತ ಧನ್ವಿಗೆ ತಕ್ಕುದಾಗಿದೆ. ಬಾಲಕನೇ! ಪ್ರಹರಿಸು! ರಣದಲ್ಲಿ ನಿನ್ನ ಪೌರುಷವನ್ನು ನಾನು ನೋಡುತ್ತೇನೆ! ರಣದಲ್ಲಿ ಕರ್ಮಗಳನ್ನೆಸಗಿ ನಂತರ ಕೊಚ್ಚಿಕೊಳ್ಳುವಿಯಂತೆ! ಶೂರರಾದವರು ಏನನ್ನೂ ಮಾತನಾಡದೇ ಸಮರದಲ್ಲಿ ಶಕ್ತಿಯನ್ನುಪಯೋಗಿಸಿ ಯುದ್ಧಮಾಡುತ್ತಾರೆ. ನೀನೂ ಕೂಡ ನನ್ನೊಡನೆ ಶಕ್ತಿಯನ್ನು ಬಳಸಿ ಯುದ್ಧಮಾಡು. ಇಂದು ನಿನ್ನ ದರ್ಪವನ್ನು ನಾಶಗೊಳಿಸುತ್ತೇನೆ!”

ಹೀಗೆ ಹೇಳಿ ತಕ್ಷಣವೇ ಸೂತಜನು ಪಾಂಡುಪುತ್ರನನ್ನು ಎಪ್ಪತ್ತು ಮೂರು ಶಿಲೀಮುಖಗಳಿಂದ ಗಾಯಗೊಳಿಸಿದನು. ಸೂತಪುತ್ರನಿಂದ ಗಾಯಗೊಂಡ ನಕುಲನಾದರೋ ಸರ್ಪವಿಷೋಪಮ ಎಂಭತ್ತು ಬಾಣಗಳಿಂದ ಸೂತಪುತ್ರನನ್ನು ಹೊಡೆದನು. ಆಗ ಕರ್ಣನು ಸ್ವರ್ಣಪುಂಖ ಶಿಲಾಶಿತಗಳಿಂದ ನಕುಲನ ಧನುಸ್ಸನ್ನು ಕತ್ತರಿಸಿ ಮೂವತ್ತು ಬಾಣಗಳಿಂದ ಪಾಂಡವನನ್ನು ಹೊಡೆದನು. ವಿಷದ ಹಲ್ಲುಗಳುಳ್ಳ ಸರ್ಪಗಳು ಭೂಮಿಯನ್ನು ಕೊರೆದು ನೀರನ್ನು ಕುಡಿಯುವಂತೆ ಆ ಬಾಣಗಳು ನಕುಲನ ಕವಚವನ್ನು ಭೇದಿಸಿ ಶರೀರವನ್ನು ಹೊಕ್ಕು ರಕ್ತವನ್ನು ಕುಡಿದವು. ಕೂಡಲೇ ನಕುಲನು ಇನ್ನೊಂದು ಬಂಗಾರದ ಹಿಂಭಾಗವುಳ್ಳ ದುರಾಸದ ಧನುಸ್ಸನ್ನು ಎತ್ತಿಕೊಂಡು ಕರ್ಣನನ್ನು ಇಪ್ಪತ್ತು ಬಾಣಗಳಿಂದಲೂ ಅವನ ಸಾರಥಿಯನ್ನು ಮೂರರಿಂದಲೂ ಹೊಡೆದನು. ಆಗ ನಕುಲನು ಕ್ರುದ್ಧನಾಗಿ ತೀಕ್ಷ್ಣ ಕ್ಷುರಪ್ರದಿಂದ ಕರ್ಣನ ಧನುಸ್ಸನ್ನು ಕತ್ತರಿಸಿದನು. ಕೂಡಲೇ ನಗುತ್ತಾ ಆ ವೀರನು ಧನುಸ್ಸು ತುಂಡಾಗಿದ್ದ ಸರ್ವಲೋಕಮಹಾರಥ ಕರ್ಣನನ್ನು ಮುನ್ನೂರು ಸಾಯಕಗಳಿಂದ ಪ್ರಹರಿಸಿದನು. ಪಾಂಡುಪುತ್ರನು ಕರ್ಣನನ್ನು ಹೀಗೆ ಗಾಯಗೊಳಿಸಿದುದನ್ನು ನೋಡಿ ದೇವತೆಗಳೊಂದಿಗೆ ರಥಿಗಳೆಲ್ಲರೂ ಪರಮ ವಿಸ್ಮಿತರಾದರು. ಕೂಡಲೇ ಕರ್ಣನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಐದು ಬಾಣಗಳಿಂದ ನಕುಲನ ಕೊರಳಿಗೆ ಹೊಡೆದನು. ಆದಿತ್ಯನು ತನ್ನ ರಶ್ಮಿಗಳಿಂದ ಭುವನಗಳನ್ನು ಪ್ರಭೆಸೂಸಿ ಬೆಳಗುವಂತೆ ಮಾದ್ರೀಪುತ್ರನು ಕೊರಳಿಗೆ ನಾಟಿದ ಆ ಬಾಣಗಳಿಂದ ಪ್ರಕಾಶಿಸಿದನು. ಆಗ ನಕುಲನು ಕರ್ಣನನ್ನು ಏಳು ಆಯಸಗಳಿಂದ ಪ್ರಹರಿಸಿ ಅವನ ಧನುಸ್ಸಿನ ಅಗ್ರಭಾಗವನ್ನು ಪುನಃ ಕತ್ತರಿಸಿದನು. ಕರ್ಣನಾದರೋ ಸಮರದಲ್ಲಿ ಇನ್ನೂ ವೇಗವತ್ತರವಾದ ಬೇರೊಂದು ಕಾರ್ಮುಕವನ್ನು ತೆಗೆದುಕೊಂಡು ನಕುಲನ ಸುತ್ತಲೂ ಬಾಣಗಳನ್ನು ಸುರಿಸಿ ದಿಕ್ಕುಗಳನ್ನು ಮುಚ್ಚಿದನು. ಕರ್ಣನ ಚಾಪದಿಂದ ಹೊರಟ ಶರಗಳಿಂದ ಮುಸುಕಲ್ಪಟ್ಟ ಮಹಾರಥ ನಕುಲನು ಶೀಘ್ರವಾಗಿ ಆ ಶರಗಳನ್ನು ಶರಗಳಿಂದಲೇ ತುಂಡರಿಸಿದನು. ಆಕಾಶದಲ್ಲಿ ಹಾರಾಡುತ್ತಿರುವ ಮಿಣುಕುಹುಳುಗಳ ಜಾಲಗಳಂತೆ ಹಾರಾಡುತ್ತಿದ್ದ ಬಾಣಗಳಿಂದ ತುಂಬಿದ ಜಾಲಗಳುಳ್ಳಂತೆ ಆಕಾಶವು ಕಂಡಿತು. ಅವರಿಬ್ಬರ ಬಿಲ್ಲುಗಳಿಂದ ಚ್ಯುತವಾದ ನೂರಾರು ಬಾಣಗಳು ಮಿಡಿತೆಹುಳುಗಳ ಸಮೂಹಗಳು ಆಕಾಶವನ್ನು ಮುಚ್ಚಿವವೋ ಎನ್ನುವಂತೆ ತೋರುತ್ತಿದ್ದವು.

ಬಾರಿಬಾರಿಗೂ ಬಿಲ್ಲುಗಳಿಂದ ಸಾಲುಸಾಲಾಗಿ ಹೊರಡುತ್ತಿದ್ದ ಸುವರ್ಣಮಯ ಬಾಣಗಳು ಸಾಲುಸಾಲಾಗಿ ಹಾರುತ್ತಿರುವ ಕ್ರೌಂಚಪಕ್ಷಿಗಳಂತೆ ಕಾಣುತ್ತಿದ್ದವು. ಆಕಾಶವು ಬಾಣಜಾಲಗಳಿಂದ ಮುಚ್ಚಿಹೋಗಿ ದಿವಾಕರನು ಕಾಣದಂತಾಗಲು, ಆಕಾಶದಿಂದ ಭೂಮಿಯ ಮೇಲೆ ಏನೊಂದೂ ಬೀಳುತ್ತಿರಲಿಲ್ಲ. ಶರಸಂಘಗಳಿಂದ ಸುತ್ತಲಿನ ಎಲ್ಲ ಮಾರ್ಗಗಳೂ ತಡೆಯಲ್ಪಟ್ಟಿರಲು ಆ ಇಬ್ಬರು ಮಹಾಭಾಗರೂ ಉದಯಿಸುತ್ತಿರುವ ಬಾಲಸೂರ್ಯಗಳಂತೆ ವಿರಾಜಿಸಿದರು. ಕರ್ಣನ ಚಾಪದಿಂದ ಚ್ಯುತಗೊಂಡ ಬಾಣಗಳಿಂದ ಪ್ರಹರಿಸಲ್ಪಟ್ಟ ಸೋಮಕರು ಶರಾರ್ದಿತರಾಗಿ ವೇದನೆಯಿಂದ ಆರ್ತರಾಗಿ ನರಳುತ್ತಿದ್ದರು. ಹಾಗೆಯೇ ನಕುಲನ ಬಾಣಗಳಿಂದ ವಧಿಸಲ್ಪಡುತ್ತಿದ್ದ ಕೌರವ ಸೇನೆಯು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ದಿಕ್ಕಾಪಾಲಾಗಿ ಚದುರಿಹೋಯಿತು. ಅವರಿಬ್ಬರ ದಿವ್ಯ ಮಹಾಶರಗಳಿಂದ ಪೀಡಿಸಲ್ಪಟ್ಟ ಎರಡೂ ಸೇನೆಗಳೂ ಬಾಣಗಳು ಬೀಳುವ ಪ್ರದೇಶವನ್ನು ಬಿಟ್ಟು ದೂರ ನಿಂತು ಯುದ್ಧವನ್ನು ನೋಡತೊಡಗಿದವು. ಜನರು ಕರ್ಣ ಮತ್ತು ಪಾಂಡವನ ಶರಗಳಿಂದ ದೂರನಿಲ್ಲಲಾಗಿ ಆ ಇಬ್ಬರು ಮಹಾತ್ಮರೂ ಪರಸ್ಪರರನ್ನು ಶರವೃಷ್ಟಿಗಳಿಂದ ಮುಚ್ಚಿದರು. ರಣಮೂರ್ಧನಿಯಲ್ಲಿ ತಮ್ಮ ತಮ್ಮ ದಿವ್ಯಾಸ್ತ್ರಗಳನ್ನು ಪ್ರದರ್ಶಿಸುತ್ತಾ ಪರಸ್ಪರರನ್ನು ವಧಿಸಲಿಚ್ಛಿಸಿ ಪರಸ್ಪರರನ್ನು ಬಾಣಗಳಿಂದ ಆಚ್ಛಾದಿಸಿದರು. ನಕುಲನು ಪ್ರಯೋಗಿಸಿದ ರಣಹದ್ದು ಮತ್ತು ನವಿಲುಗಳ ಗರಿಗಳಿಂದ ಕೂಡಿದ ಬಾಣಗಳು ಕರ್ಣನನ್ನು ಆಚ್ಛಾದಿಸಿ ಆಕಾಶದಲ್ಲಿಯೇ ನಿಂತುಬಿಡುತ್ತಿದ್ದವು.

ಮಳೆಗಾಲದ ಪ್ರಾರಂಭದಲ್ಲಿ ಸೂರ್ಯಚಂದ್ರರು ಮೋಡಗಳಿಂದ ಮುಸುಕಿಕೊಂಡ ಹಾಗೆ ಶರಗಳಿಂದಲೇ ನಿರ್ಮಿತ ಮನೆಗಳನ್ನು ಪ್ರವೇಶಿಸಿದ ಅವರಿಬ್ಬರು ಯಾರಿಗೂ ಕಾಣುತ್ತಿರಲಿಲ್ಲ. ಆಗ ರಣದಲ್ಲಿ ಕರ್ಣನು ಕ್ರುದ್ಧನಾಗಿ ಮುಖವನ್ನು ಘೋರತರವಾಗಿಸಿಕೊಂಡು ಪಾಂಡವನನ್ನು ಎಲ್ಲಕಡೆಗಳಿಂದ ಶರವೃಷ್ಟಿಗಳಿಂದ ಮುಚ್ಚಿಬಿಟ್ಟನು. ಮೋಡಗಳಿಂದ ಮುಸುಕಲ್ಪಟ್ಟ ಭಾಸ್ಕರನು ಹೇಗೋ ಹಾಗೆ ಸಮರದಲ್ಲಿ ಸೂತಪುತ್ರನಿಂದ ಮುಸುಕಲ್ಪಟ್ಟ ಪಾಂಡವನು ಸ್ವಲ್ಪವೂ ವ್ಯಥೆಪಡಲಿಲ್ಲ. ಆಧಿರಥಿಯು ಗಹಗಹಿಸಿ ನಗುತ್ತಾ ನೂರಾರು ಸಾವಿರಾರು ಶರಜಾಲಗಳನ್ನು ಸಮರದಲ್ಲಿ ಪ್ರಯೋಗಿಸತೊಡಗಿದನು. ಆ ಮಹಾತ್ಮನ ಬಾಣಗಳಿಂದ ಎಲ್ಲವು ಅಂಧಕಾರಮಯವಾಯಿತು. ಸತತವಾಗಿ ಬೀಳುತ್ತಿದ್ದ ಆ ಉತ್ತಮ ಶರಗಳಿಂದಾಗಿ ಮೋಡಗಳೇ ಕವಿದಂತೆ ತೋರುತ್ತಿತ್ತು. ಆಗ ಕರ್ಣನು ನಸುನಗುತ್ತಾ ನಕುಲನ ಧನುಸ್ಸನ್ನು ಕತ್ತರಿಸಿ ರಥಪೀಠದಿಂದ ಅವನ ಸಾರಥಿಯನ್ನೂ ಕೆಡವಿದನು. ಆಗ ಅವನು ನಾಲ್ಕು ನಿಶಿತ ಶರಗಳಿಂದ ನಕುಲನ ನಾಲ್ಕು ಕುದುರೆಗಳನ್ನೂ ಬೇಗನೇ ಯಮಸದನಕ್ಕೆ ಕಳುಹಿಸಿದನು. ಕೊನೆಗೆ ನಕುಲನ ರಥವನ್ನು ತಕ್ಷಣವೇ ಶರಗಳಿಂದ ಹೊಡೆದು ಎಳ್ಳಿನ ಕಾಳುಗಳಷ್ಟು ನುಚ್ಚುನೂರು ಮಾಡಿಬಿಟ್ಟನು. ಅವನ ಪತಾಕೆಯನ್ನೂ, ಇಬ್ಬರು ಚಕ್ರರಕ್ಷಕರನ್ನೂ, ಧ್ವಜ, ಖಡ್ಗ, ಶತಚಂದ್ರಗಳಿರುವ ಅವನ ಕವಚ ಮತ್ತು ಸರ್ವ ಉಪಕರಣಗಳನ್ನು ಕೂಡ ಧ್ವಂಸಮಾಡಿದನು. ಕುದುರೆ, ರಥ ಮತ್ತು ಕವಚಗಳನ್ನು ಕಳೆದುಕೊಂಡ ನಕುಲನು ಕೂಡಲೆ ರಥದಿಂದ ಇಳಿದು ಪರಿಘವನ್ನು ಹಿಡಿದು ನಿಂತನು. ಅವನು ಹಿಡಿದಿದ್ದ ಆ ಮಹಾಘೋರ ಪರಿಘವನ್ನು ಸೂತಜನು ಸಾಯಕಗಳಿಂದ ನೂರಾರು ಸಹಸ್ರಾರು ತುಂಡುಗಳನ್ನಾಗಿಸಿ ನಾಶಗೊಳಿಸಿದನು. ನಿರಾಯುಧನಾದ ನಕುಲನನ್ನು ನೋಡಿ ಕರ್ಣನು ಸನ್ನತಪರ್ವ ಶರಗಳಿಂದ ಬಹಳವಾಗಿ ಪ್ರಹರಿಸಿದನು. ಆದರೂ ಅವನು ಅವನನ್ನು ಹೆಚ್ಚಾಗಿ ಪೀಡಿಸಲಿಲ್ಲ.

ಸಮರದಲ್ಲಿ ತನಗಿಂತ ಹೆಚ್ಚು ಕೃತಾಸ್ತ್ರನೂ ಬಲಶಾಲಿಯೂ ಆದ ಕರ್ಣನಿಂದ ಪ್ರಹರಿಸಲ್ಪಟ್ಟ ನಕುಲನು ವ್ಯಾಕುಲನಾಗಿ ಕೂಡಲೇ ಪಲಾಯನಗೈದನು. ಅವನನ್ನು ಬೆನ್ನಟ್ಟಿ ಹೋಗಿ ರಾಧೇಯನು ಪುನಃ ಪುನಃ ನಗುತ್ತಾ ಮೌರ್ವಿಯಿಂದ ಕೂಡಿದ್ದ ಧನುಸ್ಸನ್ನೇ ನಕುಲನ ಕೊರಳಿಗೆ ಹಾಕಿದನು. ಕುತ್ತಿಗೆಯಲ್ಲಿ ಕರ್ಣನ ಮಹಾಧನುಸ್ಸನ್ನು ಧರಿಸಿದ್ದ ನಕುಲನು ಆಕಾಶದಲ್ಲಿ ಪರಿಧಿಯ ಪ್ರಭೆಯಿಂದ ಕೂಡಿದ ಚಂದ್ರನಂತೆಯೂ ಕಾಮನಬಿಲ್ಲಿನಿಂದ ಶೋಭಿತವಾದ ಮೇಘದಂತೆಯೂ ಕಾಣಿಸಿದನು. ಆಗ ಅವನಿಗೆ ಕರ್ಣನು ಹೇಳಿದನು: “ವ್ಯರ್ಥವಾಗಿ ಕೊಚ್ಚಿಕೊಂಡೆಯಲ್ಲವೇ? ನನ್ನಿಂದ ಪುನಃ ಪುನಃ ಪ್ರಹೃತನಾಗುತ್ತಿರುವ ನೀನು ಈಗಲೂ ಹೃಷ್ಟನಾಗಿರುವೆಯಾ ಹೇಳು! ಪಾಂಡವ! ನಿನಗಿಂತಲೂ ಹಿರಿಯರೊಂದಿಗೆ ಮತ್ತು ಬಲವಂತರೊಂದಿಗೆ ಯುದ್ಧಮಾಡಬೇಡ! ನಿನ್ನಂತೆಯೇ ಇರುವವರೊಡನೆ ಮಾತ್ರ ಯುದ್ಧಮಾಡು. ನಾಚಿಕೊಳ್ಳಬೇಡ! ಮನೆಗಾದರೂ ಹೋಗು ಅಥವಾ ಕೃಷ್ಣ-ಪಲ್ಗುನರಿರುವಲ್ಲಿಗಾದರೂ ಹೋಗು!”

ಹೀಗೆ ಹೇಳಿ ಕರ್ಣನು ಅವನನ್ನು ಬಿಟ್ಟುಬಿಟ್ಟನು. ವಧಿಸಲು ಅವಕಾಶವಿದ್ದರೂ ಸೂತನಂದನನು ಅವನನ್ನು ವಧಿಸಲಿಲ್ಲ. ಕುಂತಿಗೆ ಕೊಟ್ಟ ಮಾತನ್ನು ಸ್ಮರಿಸಿದೊಂಡು ಅವನನ್ನು ಹಾಗೆಯೇ ಬಿಟ್ಟು ಬಿಟ್ಟನು. ಸೂತಪುತ್ರನಿಂದ ಬಿಡುಗಡೆಹೊಂದಿದ ಪಾಂಡವನು ನಾಚಿಕೆಗೊಂಡವನಾಗಿ ಯುಧಿಷ್ಠಿರನ ರಥದ ಕಡೆ ಹೋದನು. ಅವನ ರಥವನ್ನೇರಿ ಸೂತಪುತ್ರನ ಪ್ರತಾಪಕ್ಕೆ ಸಿಲುಕಿದ್ದ ನಕುಲನು ಮಡಿಕೆಯಲ್ಲಿಟ್ಟಿದ್ದ ಸರ್ಪದಂತೆ ದುಃಖಸಂತಪ್ತನಾಗಿ ನಿಟ್ಟುಸಿರುಬಿಡುತ್ತಿದ್ದನು.

ಕರ್ಣನು ಪಾಂಚಾಲರ ರಥಸೇನೆಯನ್ನು ನಾಶಗೊಳಿಸಿದ್ದುದು

ರಣದಲ್ಲಿ ನಕುಲನನ್ನು ಬಿಟ್ಟು ಚಂದ್ರವರ್ಣದ ಕುದುರೆಗಳಿಂದ ಮತ್ತು ಎತ್ತರದಲ್ಲಿ ಹಾರಾಡುತ್ತಿದ್ದ ಪತಾಕೆಯುಳ್ಳ ರಥದಲ್ಲಿ ಕುಳಿತು ಕರ್ಣನು ತ್ವರೆಮಾಡಿ ಪಾಂಚಾಲರಿದ್ದಲ್ಲಿಗೆ ಬಂದನು. ಸೇನಾಪತಿಯು ಪಾಂಚಾಲರ ರಥಸಮೂಹಗಳ ಕಡೆ ಹೋದುದನ್ನು ನೋಡಿ ಪಾಂಡವರ ಸೇನೆಯಲ್ಲಿ ಮಹಾ ಆಕ್ರಂದನವುಂಟಾಯಿತು. ದಿನಕರನು ನಡುನೆತ್ತಿಗೆ ಬರಲಾಗಿ ಸೂತನಂದನನು ಅಲ್ಲಿ ಚಕ್ರದಂತೆಯೇ ಸಂಚರಿಸುತ್ತಾ ಕದನವನ್ನಾಡಿದನು.

ಕೆಲವು ರಥಗಳ ಚಕ್ರಗಳು ಮುರಿದವು. ಕೆಲವರ ಧ್ವಜ-ಪತಾಕೆಗಳು ಮುರಿದವು. ಕುದುರೆಗಳೂ ಸಾರಥಿಗಳೂ ಹತರಾದರು. ಅಚ್ಚುಮರಗಳು ಮುರಿದುಬಿದ್ದವು. ಹೀಗೆ ಪಾಂಚಾಲರ ರಥಸಮೂಹವು ನಾಶಗೊಂಡಿತು. ಮಹಾವನದಲ್ಲಿ ದವಾಗ್ನಿಯಿಂದ ಸುಡಲ್ಪಡುತ್ತಿರುವವರೋ ಎನ್ನುವಂತೆ ಮದಿಸಿದ ಆನೆಗಳು ಅಲ್ಲಲ್ಲಿ ಸಂಭ್ರಾಂತಗೊಂಡು ಓಡುತ್ತಿದ್ದವು. ಕುಂಭಗಳೊಡೆದು ಮತ್ತು ಸೊಂಡಿಲುಗಳು ಕತ್ತರಿಸಲ್ಪಟ್ಟು ಆನೆಗಳು ರಕ್ತವನ್ನು ಸುರಿಸುತ್ತಿದ್ದವು. ಮಹಾತ್ಮ ಕರ್ಣನಿಂದ ವಧಿಸಲ್ಪಡುತ್ತಿದ್ದ ಆ ಆನೆಗಳ ಅಂಗಾಂಗಗಳೂ ಸೊಂಡಿಲುಗಳೂ ತುಂಡಾಗಿ ಚದುರಿಹೋದ ಮೋಡಗಳಂತೆ ಕೆಳಗೆ ಬೀಳುತ್ತಿದ್ದವು. ಇತರ ಆನೆಗಳು ನೂರಾರು ನಾರಾಚ-ತೋಮರಗಳಿಂದ ಪೀಡಿತಗೊಂಡು ದೀಪದ ಹುಳುಗಳು ಬೆಂಕಿಯಲ್ಲಿ ಬೀಳುವಂತೆ ಕರ್ಣನನ್ನೇ ಎದುರಿಸಿ ಬಂದು ಬೀಳುತ್ತಿದ್ದವು. ಇನ್ನು ಇತರ ಮಹಾಗಜಗಳು ಜೋರಾಗಿ ಕೂಗಿಕೊಳ್ಳುತ್ತಾ ಪರ್ವತಗಳು ನೀರನ್ನು ಸ್ರವಿಸುವಂತೆ ರಕ್ತವನ್ನು ಸುರಿಸುತ್ತಾ ಓಡಿ ಹೋಗುತ್ತಿದ್ದವು. ಕುದುರೆಗಳ ಎದೆಮುಚ್ಚುವ ಕವಚಗಳು, ಬಾಲಬಂಧಗಳು, ಬೆಳ್ಳಿ-ಕಂಚು-ಸುವರ್ಣಗಳಿಂದ ಮಾಡಿದ ಭೂಷಣಗಳು ತುಂಡಾಗಿ ಬಿದ್ದಿದ್ದವು. ಕುದುರೆಗಳ ಕಡಿವಾಣಗಳೇ ಇರಲಿಲ್ಲ. ಕುದುರೆಗಳ ಮೇಲಿದ್ದ ಚಾಮರಗಳೂ, ರತ್ನಗಂಬಳಿಗಳೂ, ಬತ್ತಳಿಕೆಗಳೂ ಕೆಳಗೆ ಬಿದ್ದುಹೋಗಿದ್ದವು. ಯುದ್ಧಶೋಭನ ಶೂರ ಕುದುರೆಸವಾರರೂ ಹತರಾಗಿದ್ದರು. ಅಲ್ಲಿ ರಣದಲ್ಲಿ ಉತ್ತಮ ಕುದುರೆಗಳು ಸುತ್ತಲೂ ತಿರುಗಾಡುತ್ತಿರುವುದನ್ನು ನೋಡಿದೆವು. ಕವಚ ಉಷ್ಣೀಷಗಳನ್ನು ಧರಿಸಿದ್ದ ಕುದುರೆಯೋಧರು ಪ್ರಾಸ, ಖಡ್ಗ, ಋಷ್ಟಿ ಇವೇ ಮೊದಲಾದ ಆಯುಧಗಳಿಂದ ವಿಹೀನರಾಗಿ ಬೀಳುತ್ತಿದ್ದರು. ರಥಿಗಳು ಹತರಾಗಿ ವೇಗವಾಗಿ ಹೋಗುವ ಕುದುರೆಗಳನ್ನು ಕಟ್ಟಲ್ಪಟ್ಟು ಅಲ್ಲಲ್ಲಿ ತಿರುಗುತ್ತಿದ್ದ ಹೇಮಭೂಷಿತ ರಥಗಳು ಕಾಣುತ್ತಿದ್ದವು. ಅವುಗಳ ಅಚ್ಚುಮರಗಳು ಮತ್ತು ಮೂಕಿಗಳು ಮುರಿದುಹೋಗಿದ್ದವು. ಕೆಲವು ರಥಗಳ ಚಕ್ರಗಳೂ ಮುರಿದಿದ್ದವು. ಪತಾಕೆ-ಧ್ವಜಗಳಿಲ್ಲದೇ ಇದ್ದ ಸುಂದರ ಈಷಾದಂಡಗಳು ಮುರಿದುಹೋಗಿದ್ದ ಅನೇಕ ರಥಗಳು ಕಂಡವು. ಸೂರ್ಯಪುತ್ರನ ಶರಗಳಿಂದ ಪೀಡಿತರಾದ ರಥಿಗಳು ರಥಗಳಿಂದ ವಿಹೀನರಾಗಿ, ಶಸ್ತ್ರಗಳನ್ನು ಕಳೆದುಕೊಂಡು, ಅನ್ಯರು ಶಸ್ತ್ರಗಳೊಂದಿಗೆ ಹತರಾಗಿ, ನಕ್ಷತ್ರಜಾಲಗಳ ಚಿಹ್ನೆಗಳುಳ್ಳ ಪತಾಕೆಗಳಿಂದ ಅಲಂಕೃತರಾಗಿ ಉತ್ತಮ ಘಂಟೆಗಳಿಂದ ಸುಶೋಭಿತರಾಗಿ ಎಲ್ಲಕಡೆ ಓಡಿ ಹೋಗುತ್ತಿದ್ದರು.

ನಾನಾವರ್ಣದ ವಿಚಿತ್ರ ಪತಾಕೆಗಳಿಂದ ಅಲಂಕೃತರಾದ ಪದಾತಿಗಳು ಎಲ್ಲ ಕಡೆ ಓಡಿಹೋಗುತ್ತಿದ್ದರು. ಕರ್ಣನ ಧನುಸ್ಸಿನಿಂದ ಹೊರಟ ಬಾಣಗಳಿಂದ ತುಂಡಾಗಿ ಬೀಳುತ್ತಿದ್ದ ಅನೇಕ ಶಿರ-ಬಾಹು-ತೊಡೆ ಮತ್ತು ಕತ್ತರಿಸಲ್ಪಟ್ಟ ಇತರ ಅಂಗಾಂಗಗಳು ಅಲ್ಲಿ ಕಾಣುತ್ತಿದ್ದವು. ಕರ್ಣನ ನಿಶಿತ ಸಾಯಕ ಶರಗಳಿಂದ ಹತರಾಗುತ್ತಿದ್ದ ಯೋಧರು ರೌದ್ರರಾಗಿ ಮಹಾ ಭಯಂಕರರಾಗಿ ಕಾಣುತ್ತಿದ್ದರು. ದೀಪದ ಹುಳುಗಳು ಬೆಂಕಿಯಲ್ಲಿ ಬೀಳುವಂತೆ ಸಮರದಲ್ಲಿ ಸೂತಪುತ್ರನಿಂದ ವಧಿಸಲ್ಪಡುತ್ತಿದ್ದ ಸೃಂಜಯರು ಅವನಿಗೇ ಅಭಿಮುಖರಾಗಿ ಬಂದು ಬೀಳುತ್ತಿದ್ದರು. ಅಲ್ಲಲ್ಲಿ ಸೇನೆಗಳನ್ನು ಸುಡುತ್ತಿದ್ದ ಆ ಮಹಾರಥ ಕರ್ಣನನನ್ನು ಯುಗಾಂತ ಕಾಲದಲ್ಲಿ ಪ್ರಚಂಡ ಅಗ್ನಿಯಿಂದ ಪ್ರಾಣಿಗಳು ದೂರವಿರುವಂತೆ ಕ್ಷತ್ರಿಯರು ಬಿಟ್ಟು ದೂರಸರಿಯುತ್ತಿದ್ದರು. ಹತರಾಗದೇ ಉಳಿದು ಓಡಿ ಹೋಗುತ್ತಿದ್ದ ಪಾಂಚಾಲ ವೀರರನ್ನು ಕರ್ಣನು ಬೆನ್ನಟ್ಟಿ ಹೋಗಿ ಶರಗಳನ್ನು ಎರಚಿ ಅವರ ಕವಚ-ಧ್ವಜಗಳನ್ನು ಕತ್ತರಿಸಿ ಹಾಕಿದನು. ಸೂತಪುತ್ರನು ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ಭೂತಗಳನ್ನು ಹೇಗೆ ಪರಿತಪಿಸುತ್ತಾನೋ ಹಾಗೆ ಅವರನ್ನು ಬಾಣಗಳಿಂದ ಪರಿತಾಪಗೊಳಿಸಿದನು.

ಯುಯುತ್ಸು-ಉಲೂಕರ ಯುದ್ಧ

ಮಹಾಸೇನೆಯನ್ನು ಓಡಿಹೋಗುವಂತೆ ಮಾಡುತ್ತಿದ್ದ ನಿನ್ನ ಪುತ್ರ ಯುಯುತ್ಸುವನ್ನು ಉಲೂಕನು ತಕ್ಷಣವೇ ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು. ಆಗ ಯುಯುತ್ಸುವಾದರೋ ನಿಶಿತ ಬಾಣಗಳಿಂದ ಇಂದ್ರನು ವಜ್ರದಿಂದ ಪರ್ವತವನ್ನು ಹೊಡೆಯುವಂತೆ ಉಲೂಕನನ್ನು ಹೊಡೆದನು. ಆಗ ಉಲೂಕನಾದರೋ ಯುಯುತ್ಸುವಿನ ಮೇಲೆ ಕ್ರುದ್ಧನಾಗಿ ಕ್ಷುರಪ್ರದಿಂದ ಧನುಸ್ಸನ್ನು ಕತ್ತರಿಸಿ ಕರ್ಣಿಗಳಿಂದ ಹೊಡೆಯತೊಡಗಿದನು. ಸಂರಕ್ತಲೋಚನನಾದ ಯುಯುತ್ಸುವು ತುಂಡಾದ ಧನುಸ್ಸನ್ನು ಎಸೆದು ವೇಗವತ್ತರವಾದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡನು. ಅವನು ಶಕುನಿಯ ಮಗನನ್ನು ಅರವತ್ತು ಬಾಣಗಳಿಂದ ಹೊಡೆದನು. ಸಾರಥಿಯನ್ನು ಮೂರರಿಂದ ಹೊಡೆದು ಇನ್ನೊಮ್ಮೆ ಉಲೂಕನನ್ನು ಪ್ರಹರಿಸಿದನು. ಉಲೂಕನಾದರೋ ಕ್ರುದ್ಧನಾಗಿ ಯುಯುತ್ಸುವನ್ನು ಇಪ್ಪತ್ತು ಹೇಮಭೂಷಿತ ಬಾಣಗಳಿಂದ ಹೊಡೆದು ಅವನ ಕಾಂಚನಧ್ವಜವನ್ನೂ ತುಂಡರಿಸಿದನು. ದಂಡವು ತುಂಡಾದ ಆ ಕಾಂಚನೋಜ್ವಲ ಮಹಾಧ್ವಜವು ಛಿನ್ನ-ಛಿನ್ನವಾಗಿ ಯುಯುತ್ಸುವಿನ ಎದುರಿನಲ್ಲಿಯೇ ಬಿದ್ದಿತು. ಧ್ವಜವು ಧ್ವಂಸವಾದುದನ್ನು ನೋಡಿ ಕ್ರೋಧಮೂರ್ಛಿತನಾದ ಯುಯುತ್ಸುವು ಐದು ಬಾಣಗಳಿಂದ ಉಲೂಕನ ವಕ್ಷಸ್ಥಳಕ್ಕೆ ಹೊಡೆದನು. ಉಲೂಕನು ಒಮ್ಮೆಲೇ ತನ್ನ ತೈಲಧೌತ ಭಲ್ಲದಿಂದ ಯುಯುತ್ಸುವಿನ ಸಾರಥಿಯ ಶಿರವನ್ನು ಕತ್ತರಿಸಿದನು. ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿ ಅವನನ್ನು ಐದು ಬಾಣಗಳಿಂದ ಗಾಯಗೊಳಿಸಿದನು. ಹೀಗೆ ಬಲವತ್ತರವಾಗಿ ಪ್ರಹರಿಸಲ್ಪಟ್ಟ ಯುಯುತ್ಸುವು ಇನ್ನೊಂದು ರಥವನ್ನೇರಿ ಪಲಾಯನಮಾಡಿದನು.

ರಣದಲ್ಲಿ ಯುಯುತ್ಸುವನ್ನು ಜಯಿಸಿ ಉಲೂಕನು ತ್ವರೆಮಾಡಿ ನಿಶಿತ ಶರಗಳಿಂದ ಪಾಂಚಾಲರನ್ನು ಮತ್ತು ಸೃಂಜಯರನ್ನು ಸಂಹರಿಸುತ್ತಾ ಹೊರಟನು.

ಶ್ರುತಕರ್ಮ-ಶತಾನೀಕರ ಯುದ್ಧ

ಧೃತರಾಷ್ಟ್ರನ ಮಗ ಶ್ರುತಕರ್ಮನು ಗಾಬರಿಗೊಳ್ಳದೇ ನಿಮಿಷಾರ್ಧದಲ್ಲಿ ಶತಾನೀಕನನ್ನು ಕುದುರೆಗಳು, ಸಾರಥಿ ಮತ್ತು ರಥಗಳಿಂದ ವಿಹೀನನನ್ನಾಗಿ ಮಾಡಿದನು. ಶತಾನೀಕನು ಕುದುರೆಗಳು ಹತವಾಗಲು ರಥದಮೇಲೆಯೇ ನಿಂತು ಕ್ರುದ್ಧನಾಗಿ ಶ್ರುತಕರ್ಮನ ಮೇಲೆ ಗದೆಯನ್ನು ಎಸೆದನು. ಆ ಗದೆಯು ಶ್ರುತಕರ್ಮನ ರಥವನ್ನು ಕುದುರೆ-ಸಾರಥಿಯೊಂದಿಗೆ ಭಸ್ಮೀಭೂತವನ್ನಾಗಿ ಮಾಡಿ ಸೀಳಿಬಿಡುವುದೋ ಎನ್ನುವಂತೆ ಭೂಮಿಯ ಮೇಲೆ ಬಿದ್ದಿತು. ಯುದ್ಧಾರ್ತಿಗಳಾಗಿದ್ದ ಆ ಇಬ್ಬರು ವಿರಥ ವೀರ ಕುರುಗಳ ಕೀರ್ತಿವರ್ಧನರು ಪರಸ್ಪರರನ್ನು ನೋಡುತ್ತಾ ಹಿಂದೆಸರಿದರು. ಸಂಭ್ರಾಂತನಾದ ಶ್ರುತಕರ್ಮನಾದರೋ ವಿವಿತ್ಸುವಿನ ರಥವನ್ನು ಏರಿದನು. ಶತಾನೀಕನೂ ಕೂಡ ತ್ವರೆಮಾಡಿ ಪ್ರತಿವಿಂದ್ಯನ ರಥಕ್ಕೆ ಹೋದನು.

ಶಕುನಿ-ಸುತಸೋಮರ ಯುದ್ಧ

ಸುತಸೋಮನಾದರೋ ಶಕುನಿಯನ್ನು ನಿಶಿತ ಶರಗಳಿಂದ ಹೊಡೆದನು. ಆದರೂ ಭೀರುಗಾಳಿಯು ಪರ್ವತವನ್ನು ಹೇಗೆ ಅಲುಗಾಡಿಸುವುದಿಲ್ಲವೋ ಹಾಗೆ ಶಕುನಿಯು ಸಂರಬ್ಧನಾಗಿ ಕಂಪಿಸಲಿಲ್ಲ. ತನ್ನ ತಂದೆಯ ಅತ್ಯಂತ ವೈರಿ ಶಕುನಿಯನ್ನು ನೋಡಿ ಸುತಸೋಮನಾದರೋ ಅನೇಕ ಸಹಸ್ರ ಶರಗಳಿಂದ ಅವನನ್ನು ಮುಸುಕಿದನು. ಅಸ್ತ್ರಗಳಲ್ಲಿ ಹಸ್ತಲಾಘವವನ್ನು ಹೊಂದಿದ್ದ ಚಿತ್ರಯೋಧೀ ವಿಜಯಶ್ರೀಯಿಂದ ಸುಶೋಭಿತನಾಗಿದ್ದ ಶಕುನಿಯು ಆ ಶರಗಳನ್ನು ತಕ್ಷಣವೇ ಅನ್ಯ ಪತತ್ರಿಗಳಿಂದ ತುಂಡರಿಸಿದನು. ಆ ಶರಗಳನ್ನು ನಿಶಿತ ಶರಗಳಿಂದ ತಡೆದು ಸುಸಂಕ್ರುದ್ಧ ಶಕುನಿಯು ಸುತಸೋಮನನ್ನು ಮೂರು ಶರಗಳಿಂದ ಗಾಯಗೊಳಿಸಿದನು. ಆಗ ಶಕುನಿಯು ಶರಗಳಿಂದ ಸುತಸೋಮನ ಕುದುರೆಗಳು, ಧ್ವಜ ಮತ್ತು ಸೂತರನ್ನು ಎಳ್ಳಿನಷ್ಟು ನುಚ್ಚುನೂರುಮಾಡಿದನು. ಆಗ ಅಲ್ಲಿದ್ದ ಜನರು ಹರ್ಷಸೂಚಕವಾಗಿ ಕೂಗಿದರು. ಹತಾಶ್ವನೂ ವಿರಥನೂ, ಚಿನ್ನಧನ್ವಿಯೂ ಆದ ಸುತಸೋಮನು ಶ್ರೇಷ್ಠ ಧನುಸ್ಸನ್ನು ಹಿಡಿದು ರಥದಿಂದಿಳಿದು ಭೂಮಿಯ ಮೇಲೆ ನಿಂತನು. ಸ್ವರ್ಣಪುಂಖಗಳ ಶಿಲಾಶಿತ ಸಾಯಕಗಳನ್ನು ಪ್ರಯೋಗಿಸುತ್ತಾ ಅವನು ಶಕುನಿಯ ರಥವನ್ನೇ ಮುಚ್ಚಿಬಿಟ್ಟನು. ಮಿಡಿತೆಗಳೋಪಾದಿಯಲ್ಲಿ ಮಹಾರಥವನ್ನು ಸಮೀಪಿಸುತ್ತಿದ್ದ ಆ ಶರವ್ರಾತವನ್ನು ರಥದಲ್ಲಿ ಕುಳಿತಿದ್ದ ಸೌಬಲನು ನೋಡಿಯೂ ಕೂಡ ಸ್ವಲ್ಪವಾದರೂ ವ್ಯಥೆಪಡಲಿಲ್ಲ. ಶಕುನಿಯು ಆ ಶರಗಳ ಮಳೆಯನ್ನು ಶರಗಳಿಂದಲೇ ಧ್ವಂಸಗೊಳಿಸಿದನು.

ಸುತಸೋಮನಾದರೋ ಪದಾತಿಯಾಗಿಯೇ ರಥಸ್ಥನಾಗಿದ್ದ ಆ ನೃಪತಿಯೊಡನೆ ಯುದ್ಧಮಾಡುತ್ತಿದ್ದನು. ಅವನ ಆ ನಂಬಲಸಾಧ್ಯ ಅದ್ಭುತ ಕೃತ್ಯವನ್ನು ನೋಡಿ ಇತರ ಯೋಧರೂ ಆಕಾಶದಲ್ಲಿ ನೆರೆದಿದ್ದ ಸಿದ್ಧರೂ ಹರ್ಷಿತರಾದರು. ಆ ಸಮಯದಲ್ಲಿ ಶಕುನಿಯು ಮಹಾವೇಗದ ತೀಕ್ಷ್ಣ ಸನ್ನತಪರ್ತ ಭಲ್ಲಗಳಿಂದ ಸುತಸೋಮನ ಧನುಸ್ಸನ್ನೂ ಬತ್ತಳಿಕೆಯನ್ನೂ ಸಂಪೂರ್ಣವಾಗಿ ನಾಶಗೊಳಿಸಿದನು. ಧನುಸ್ಸು ತುಂಡಾದ ಸುತಸೋಮನು ವೈಡೂರ್ಯಮಣಿ ಮತ್ತು ನೀಲಕಮಲಗಳ ಬಣ್ಣದ ಆನೆಯ ದಂತದ ಹಿಡಿಯಿದ್ದ ಖಡ್ಗವನ್ನು ಮೇಲೆತ್ತಿ ಸಿಂಹನಾದಗೈದನು. ಶುದ್ಧ ಆಕಾಶದ ಕಾಂತಿಯಿದ್ದ ಆ ಖಡ್ಗವನ್ನು ತಿರುಗಿಸುತ್ತಿದ್ದ ಸುತಸೋಮನನ್ನು ಶಕುನಿಯು ಕಾಲನೆಂದೇ ಭಾವಿಸಿದನು. ಶಿಕ್ಷಾಬಲಸಮನ್ವಿತ ಖಡ್ಗಧಾರೀ ಸುತಸೋಮನು ಹದಿನಾಲ್ಕು ಸಾವಿರ ಮಂಡಲಗಳಲ್ಲಿ ಸಂಚರಿಸುತ್ತಿದ್ದನು. ಸೌಬಲನಾದರೋ ಅವನ ಮೇಲೆ ಶರಗಳನ್ನು ಪ್ರಯೋಗಿಸಲು ಬೀಳುವುದರೊಳಗೇ ಸುತಸೋಮನು ಶ್ರೇಷ್ಠ ಖಡ್ಗದಿಂದ ಅವುಗಳನ್ನು ತುಂಡರಿಸಿದನು. ಆಗ ಸೌಬಲನು ಕ್ರುದ್ಧನಾಗಿ ಸುತಸೋಮನ ಮೇಲೆ ಸರ್ಪವಿಷಗಳಿಗೆ ಸಮಾನ ಶರಗಳನ್ನು ಪ್ರಯೋಗಿಸಿದನು. ಗರುಡನ ವೀರ್ಯ ಸಮದ್ಯುತಿ ಸುತಸೋಮನು ತನ್ನ ಶಿಕ್ಷಣ ಮತ್ತು ಬಲಗಳಿಂದ ಆ ಬಾಣಗಳನ್ನು ಖಡ್ಗದಿಂದ ತುಂಡರಿಸಿ ಯುದ್ಧದಲ್ಲಿ ತನ್ನ ಹಸ್ತಲಾಘವವನ್ನು ತೋರಿಸಿದನು. ಆಗ ಮಂಡಲಾವರ್ತದಲ್ಲಿ ಸಂಚರಿಸುತ್ತಿದ್ದ ಶಕುನಿಯು ತೀಕ್ಷ್ಣ ಕ್ಷುರಪ್ರದಿಂದ ಸುತಸೋಮನ ಸುಪ್ರಭ ಖಡ್ಗವನ್ನು ಕತ್ತರಿಸಿದನು. ತುಂಡಾದ ಆ ಮಹಾಖಡ್ಗವು ಕೂಡಲೇ ಭೂಮಿಯ ಮೇಲೆ ಬಿದ್ದಿತು. ಆ ಖಡ್ಗದ ಸುಂದರ ಹಿಡಿಯು ಮಾತ್ರ ಸುತಸೋಮನ ಕೈಯಲ್ಲಿಯೇ ಉಳಿಯಿತು. ತನ್ನ ಖಡ್ಗವು ತುಂಡಾಯಿತೆಂದು ತಿಳಿದ ಮಹಾರಥ ಸುತಸೋಮನು ಕೂಡಲೇ ಆರು ಹೆಜ್ಜೆ ಮುಂದೆ ಹೋಗಿ ತನ್ನ ಕೈಯಲ್ಲಿ ಉಳಿದಿದ್ದ ಆ ಖಡ್ಗದ ಅರ್ಧಭಾಗದಿಂದಲೇ ಶಕುನಿಯನ್ನು ಪ್ರಹರಿಸಿದನು. ಸ್ವರ್ಣವಜ್ರವಿಭೂಷಿತ ಆ ಖಡ್ಗದ ತುಂಡು ಮಹಾತ್ಮ ಶಕುನಿಯ ಉತ್ತಮ ಚಾಪವನ್ನು ತುಂಡರಿಸಿ ತಕ್ಷಣವೇ ರಣಭೂಮಿಯ ಮೇಲೆ ಬಿದ್ದಿತು. ಆಗ ಸುತಸೋಮನು ಶ್ರುತಕೀರ್ತಿಯ ಮಹಾರಥವನ್ನು ಹತ್ತಿದನು.

ಸೌಬಲನೂ ಕೂಡ ಇನ್ನೊಂದು ದುಃಸ್ಸಹ ಘೋರ ಧನುಸ್ಸನ್ನು ತೆಗೆದುಕೊಂಡು ಪಾಂಡವ ಸೇನೆಯನ್ನು ಹೊಕ್ಕು ಅನೇಕ ಶತ್ರುಗಳನ್ನು ಸಂಹರಿಸಿದನು. ಆಗ ಸಮರದಲ್ಲಿ ಭೀತಿಯೇ ಇಲ್ಲದವನಂತೆ ಸಂಚರಿಸುತ್ತಿದ್ದ ಸೌಬಲನನ್ನು ನೋಡಿ ಪಾಂಡವರ ಕಡೆಯಲ್ಲಿ ಮಹಾ ಕೋಲಾಹಲವುಂಟಾಯಿತು. ಶಸ್ತ್ರಗಳನ್ನು ಹೊಂದಿದ್ದ ದರ್ಪಿತ ಪಾಂಡವರ ಮಹಾ ಸೇನೆಗಳು ಸೌಬಲನಿಂದ ಓಡಿಸಲ್ಪಟ್ಟವು. ದೈತ್ಯಸೇನೆಯನ್ನು ದೇವರಾಜನು ಹೇಗೆ ಮರ್ದಿಸಿದನೋ ಹಾಗೆ ಪಾಂಡವೀ ಸೇನೆಯು ಸೌಬಲನಿಂದ ನಾಶಗೊಂಡಿತು.

ಕೃಪ-ಧೃಷ್ಟದ್ಯುಮ್ನರ ಯುದ್ಧ

ವನದಲ್ಲಿ ಶರಭವು ದರ್ಪಿತ ಆನೆಯನ್ನು ಹೊಡೆದಾಡಿ ತಡೆಯುವಂತೆ ಕೃಪನು ಧೃಷ್ಟದ್ಯುಮ್ನನನ್ನು ತಡೆದನು. ಗೌತಮನಿಂದ ತಡೆಯಲ್ಪಟ್ಟ ಪಾರ್ಷತನಿಗೆ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಾಗಲಿಲ್ಲ. ಧೃಷ್ಟದ್ಯುಮ್ನನ ರಥದ ಬಳಿ ಗೌತಮನ ರೂಪವನ್ನು ಕಂಡು ಸರ್ವಭೂತಗಳೂ ಪ್ರಳಯವೇ ಪ್ರಾಪ್ತವಾಯಿತೋ ಎಂದುಕೊಂಡು ನಡುಗಿದವು. ವಿಮನಸ್ಕರಾಗಿದ್ದ ರಥಿಗಳೂ ಕುದುರೆಸವಾರರೂ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು: “ದ್ರೋಣನ ನಿಧನದಿಂದಾಗಿ ಕೃಪನು ತುಂಬಾ ಸಂಕ್ರುದ್ಧನಾಗಿದ್ದಾನೆ. ಮಹಾತೇಜಸ್ವಿ, ದಿವ್ಯಾಸ್ತ್ರವಿದು, ಉದಾರಬುದ್ಧಿಯ ಶಾರದ್ವತ ಗೌತಮನಿಂದ ಇಂದು ಧೃಷ್ಟದ್ಯುಮ್ನನಿಗೆ ಒಳ್ಳೆಯದೇನಾದರೂ ಆಗಬಹುದೇ? ಈ ಸಂಪೂರ್ಣ ಸೇನೆಯು ಮಹಾಭಯದಿಂದ ಬಿಡುಗಡೆ ಹೊಂದಬಲ್ಲದೇ? ಈ ಬ್ರಾಹ್ಮಣನು ಸೇರಿರುವ ನಮ್ಮೆಲ್ಲರನ್ನೂ ಸಂಹರಿಸದೇ ಬಿಟ್ಟಾನೆಯೇ? ಅವನ ಈ ರೂಪವು ಅಂತಕನ ರೂಪದಂತೆಯೇ ತೋರುತ್ತಿದೆ. ಇಂದು ಕೃಪನೂ ಕೂಡ ಯುದ್ಧದಲ್ಲಿ ಭಾರದ್ವಾಜ ದ್ರೋಣನ ಪದವಿಯಲ್ಲಿ ಹೋಗುತ್ತಿದ್ದಾನೆ. ಆಚಾರ್ಯನು ಕ್ಷಿಪ್ರಹಸ್ತನು. ಯುದ್ಧದಲ್ಲಿ ಸದಾ ವಿಜಯಗಳಿಸುವವನು. ಅಸ್ತ್ರವಾನನೂ ವೀರ್ಯಸಂಪನ್ನನೂ ಆದ ಇವನು ಕ್ರೋಧಸಮನ್ವಿತನಾಗಿದ್ದಾನೆ. ಈ ಯುದ್ಧದಲ್ಲಿ ಪಾರ್ಷತನು ವಿಮುಖನಾಗುತ್ತಾನೆ ಎಂದೇ ಕಂಡುಬರುತ್ತಿದೆ!” ಹೀಗೆ ವಿವಿಧ ರೀತಿಯಲ್ಲಿ ಕೌರವರು ಮತ್ತು ಪಾಂಡವರು ಮಾತನಾಡಿಕೊಳ್ಳುತ್ತಿದ್ದರು.

ಆಗ ಕೋಪದಿಂದ ನಿಟ್ಟುಸಿರು ಬಿಡುತ್ತಾ ಕೃಪನು ಪಾರ್ಷತನಿಗೆ ಎಲ್ಲ ಕಡೆಗಳಿಂದ ಪ್ರಹರಿಸಿ ನಿಶ್ಚೇಷ್ಟನನ್ನಾಗಿಸಿದನು. ಗೌತಮನಿಂದ ವಧಿಸಲ್ಪಡುತ್ತಿದ್ದ ಧೃಷ್ಟದ್ಯುಮ್ನನು ಮೋಹಿತನಾಗಿ ಯುದ್ದದಲ್ಲಿ ಏನು ಮಾಡಬೇಕೆನ್ನುವುದನ್ನೇ ತಿಳಿಯದಾದನು. ಆಗ ಅವನ ಸಾರಥಿಯು ಅವನನ್ನು ಪ್ರಶ್ನಿಸಿದನು: “ಪಾರ್ಷತ! ಏನು ಕ್ಷೇಮದಿಂದಿರುವೆಯಾ? ಯುದ್ಧದಲ್ಲಿ ನೀನು ಈ ರೀತಿ ವ್ಯಸನದಲ್ಲಿರುವುದನ್ನು ನಾನು ಇದೂವರೆಗೂ ನೋಡಿರಲಿಲ್ಲ! ದ್ವಿಜಮುಖ್ಯನು ನಿನ್ನ ಮರ್ಮಗಳನ್ನೇ ಗುರಿಯಿಟ್ಟು ಪ್ರಯೋಗಿಸಿದ ಮರ್ಮಭೇದಿ ಬಾಣಗಳು ದೈವಯೋಗದಿಂದ ನಿನ್ನ ಮರ್ಮಗಳ ಮೇಲೆ ಬೀಳಲಿಲ್ಲ. ವೇಗವಾಗಿ ಸಾಗರದ ಕಡೆ ಹರಿಯುತ್ತಿರುವ ನದಿಯನ್ನು ಹಿಂದೆ ಸರಿಸುವಂತೆ ನಿನ್ನ ರಥವನ್ನು ನಾನು ಬೇಗ ಹಿಂದಿರುಗಿಸುತ್ತೇನೆ. ನಿನ್ನ ವಿಕ್ರಮವನ್ನು ಕುಂದಿಸಿರುವ ಈ ಬ್ರಾಹ್ಮಣನು ಅವಧ್ಯನೆಂದು ನನಗನ್ನಿಸುತದೆ.”

ಆಗ ಧೃಷ್ಟದ್ಯುಮ್ನನು ಮೆಲ್ಲನೇ ಈ ಮಾತುಗಳನ್ನಾಡಿದನು: “ಅಯ್ಯಾ! ನನ್ನ ಮನಸ್ಸು ಭ್ರಮೆಗೊಂಡಿದೆ. ಶರೀರವು ಬೆವರುತ್ತಿದೆ. ಶರೀರವು ನಡುಗುತ್ತಿದೆ. ರೋಮಹರ್ಷಣವಾಗುತ್ತಿರುವುದನ್ನೂ ನೋಡು. ಸಾರಥೇ! ಯುದ್ಧದಲ್ಲಿ ಈ ಬ್ರಾಹ್ಮಣನನ್ನು ಬಿಟ್ಟು ನಿಧಾನವಾಗಿ ನನ್ನನ್ನು ಅರ್ಜುನ ಅಥವಾ ಭೀಮಸೇನನು ಯುದ್ಧಮಾಡುತ್ತಿರುವಲ್ಲಿಗೆ ಕರೆದುಕೊಂಡು ಹೋಗು! ಇದೇ ಇಂದು ನನಗೆ ಕ್ಷೇಮವನ್ನುಂಟುಮಾಡುತ್ತದೆ ಎಂದು ನನ್ನ ದೃಢ ನಂಬಿಕೆಯಾಗಿದೆ.”

ಆಗ ಸಾರಥಿಯು ತ್ವರೆಯಾಗಿ ಕುದುರೆಗಳನ್ನು ಭೀಮನು ಕೌರವ ಸೈನಿಕರೊಂದಿಗೆ ಯುದ್ಧಮಾಡುತ್ತಿರುವಲ್ಲಿಗೆ ತಲುಪಿಸಿದನು. ಹಾಗೆ ಓಡಿ ಹೋಗುತ್ತಿರುವ ಧೃಷ್ಟದ್ಯುಮ್ನನ ರಥವನ್ನು ನೋಡಿ ಗೌತಮನು ನೂರಾರು ಶರಗಳನ್ನು ಎರಚುತ್ತಾ ಅವನನ್ನೇ ಹಿಂಬಾಲಿಸಿ ಹೋದನು. ಮಹೇಂದ್ರನು ಶಂಬರನನ್ನು ಹೇಗೋ ಹಾಗೆ ಪಾರ್ಷತನನ್ನು ಬೆನ್ನಟ್ಟಿ ಹೋಗಿ ಕೃಪನು ಪುನಃ ಪುನಃ ಶಂಖವನ್ನು ಮೊಳಗಿಸಿದನು.

ಕೃತವರ್ಮ-ಶಿಖಂಡಿಯರ ಯುದ್ಧ

ಪುನಃ ಪುನಃ ನಗುತ್ತಿರುವನೋ ಎಂದು ತೋರುತ್ತಾ ಹಾರ್ದಿಕ್ಯ ಕೃತವರ್ಮನು ಭೀಷ್ಮನ ಮೃತ್ಯು ದುರಾಸದ ಶಿಖಂಡಿಯನ್ನು ತಡೆದನು. ಹಾರ್ದಿಕ್ಯನನ್ನು ಎದುರಿಸಿ ಶಿಖಂಡಿಯು ಐದು ನಿಶಿತ ಭಲ್ಲಗಳಿಂದ ಅವನ ಜತ್ರುಪ್ರದೇಶವನ್ನು ಪ್ರಹರಿಸಿದನುಮಹಾರಥ ಕೃತವರ್ಮನಾದರೋ ಸಂಕ್ರುದ್ಧನಾಗಿ ಅರವತ್ತು ಬಾಣಗಳಿಂದ ಹೊಡೆದು ಒಂದೇ ಬಾಣದಿಂದ ನಗುತ್ತಾ ಅವನ ಧನುಸ್ಸನ್ನು ಕತ್ತರಿಸಿದನು. ದ್ರುಪದಾತ್ಮಜನಾದರೋ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸಂಕ್ರುದ್ಧನಾಗಿ ಹಾರ್ದಿಕ್ಯನಿಗೆ ನಿಲ್ಲು ನಿಲ್ಲೆಂದು ಕೂಗಿ ಹೇಳಿದನು. ಅವನು ರುಕ್ಮಪುಂಖಗಳ ಸುತೇಜಯುಕ್ತ ತೊಂಬತ್ತು ಬಾಣಗಳನ್ನು ಕೃತವರ್ಮನ ಮೇಲೆ ಪ್ರಯೋಗಿಸಿದನು. ಅವು ಅವನ ಕವಚಕ್ಕೆ ತಾಗಿ ಕೆಳಗೆ ಬಿದ್ದವು. ಅವೆಲ್ಲವೂ ವ್ಯರ್ಥವಾಗಿ ಭೂಮಿಯ ಮೇಲೆ ಬಿದ್ದುದನ್ನು ನೋಡಿದ ಶಿಖಂಡಿಯು ತೀಕ್ಷ್ಣ ಕ್ಷುರಪ್ರದಿಂದ ಕೃತವರ್ಮನ ಧನುಸ್ಸನ್ನು ತುಂಡರಿಸಿದನು. ಧನುಸ್ಸು ತುಂಡಾಗಿ ಕೋಡುಗಳು ತುಂಡಾಗಿದ್ದ ಹೋರಿಯಂತೆ ಕಾಣುತ್ತಿದ್ದ ಕೃತವರ್ಮನ ತೋಳುಗಳು ಮತ್ತು ಎದೆಗೆ ಕ್ರುದ್ಧನಾದ ಶಿಖಂಡಿಯು ಎಂಭತ್ತು ಮಾರ್ಗಣಗಳಿಂದ ಪ್ರಹರಿಸಿದನು. ಮಾರ್ಗಣಗಳಿಂದ ಕ್ಷತವಿಕ್ಷತನಾದ ಕೃತವರ್ಮನಾದರೋ ಕ್ರುದ್ಧನಾಗಿ ಮಾರ್ಗಣಗಣಗಳಿಂದ ಕೂಡಿದ್ದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಶ್ರೇಷ್ಠ ಬಾಣಗಳಿಂದ ಶಿಖಂಡಿಯ ಹೆಗಲಿಗೆ ಹೊಡೆದನು. ಹೆಗಲಿನ ಮೇಲೆ ಚುಚ್ಚಿಕೊಂಡಿದ್ದ ಬಾಣಗಳಿಂದ ಶಿಖಂಡಿಯು ಕವಲೊಡೆದ ರೆಂಬೆಗಳಿಂದ ಕೂಡಿದ ಮಹಾ ವೃಕ್ಷದಂತೆ ರಾರಾಜಿಸಿದನು. ಅನ್ಯೋನ್ಯರನ್ನು ಚೆನ್ನಾಗಿ ಪ್ರಹರಿಸಿ ರಕ್ತವನ್ನು ಸುರಿಸುತ್ತಿದ್ದ ಅವರಿಬ್ಬರೂ ಅನ್ಯೋನ್ಯರನ್ನು ಕೋಡುಗಳಿಂದ ತಿವಿದು ಹೋರಾಡುತ್ತಿರುವ ಹೋರಿಗಳಂತೆ ರಾರಾಜಿಸಿದರು. ಅನ್ಯೋನ್ಯರ ವಧೆಗೆ ಪ್ರಯತ್ನಿಸುತ್ತಾ ಆ ಇಬ್ಬರು ಮಹಾರಥರೂ ರಥಗಳಲ್ಲಿ ಸಹಸ್ರಾರು ಮಂಡಲಗಳಲ್ಲಿ ಸಂಚರಿಸುತ್ತಿದ್ದರು. ಕೃತವರ್ಮನು ಪಾರ್ಷತನನ್ನು ಎಪ್ಪತ್ತು ಸ್ವರ್ಣಪುಂಖಗಳ ಶಿಲಾಶಿತ ನಿಶಿತ ಶರಗಳಿಂದ ಹೊಡೆದನು. ಆಗ ಭೋಜನು ತ್ವರೆಮಾಡಿ ಜೀವಿತಾಂತಕರವಾದ ಘೋರ ಬಾಣವನ್ನು ಶಿಖಂಡಿಯ ಮೇಲೆ ಪ್ರಯೋಗಿಸಿದನು.

ಅದರಿಂದ ಪ್ರಹರಿಸಲ್ಪಟ್ಟ ಶಿಖಂಡಿಯು ಮೂರ್ಛಿತನಾದನು. ಮೂರ್ಛಿತನಾಗಿ ಅವನು ಧ್ವಜದಂಡದ ಆಶ್ರಯವನ್ನು ಪಡೆದು ಒರಗಿ ಕುಳಿತುಕೊಂಡನು. ಹಾರ್ದಿಕ್ಯನ ಶರದಿಂದ ಸಂತಪ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದ ಆ ಶಿಖಂಡಿಯನ್ನು ಅವನ ಸಾರಥಿಯು ರಣದಿಂದ ದೂರ ಕೊಂಡೊಯ್ದನು. ದ್ರುಪದನ ಶೂರ ಸುತನು ಹೀಗೆ ಪರಾಜಿತನಾಗಲು ವಧಿಸಲ್ಪಡುತ್ತಿರುವ ಪಾಂಡವೀ ಸೇನೆಯು ಎಲ್ಲ ಕಡೆ ಪಲಾಯನಗೈಯಿತು.

ಅರ್ಜುನನ ಯುದ್ಧ

ಭಿರುಗಾಳಿಯು ಹತ್ತಿಯ ರಾಶಿಯನ್ನು ಎಲ್ಲಕಡೆ ಚದುರಿಸಿ ಹಾಳುಮಾಡುವಂತೆ ಶ್ವೇತಾಶ್ವನು ಕೌರವ ಸೇನೆಯನ್ನು ಧ್ವಂಸಗೊಳಿಸುತ್ತಿದ್ದನು. ತ್ರಿಗರ್ತರು, ಶಿಬಿಗಳು, ಕೌರವರು, ಶಾಲ್ವರು, ಸಂಶಪ್ತಕರು ಮತ್ತು ನಾರಾಯಣ ಸೇನೆಗಳು ಒಟ್ಟಿಗೇ ಅವನನ್ನು ಎದುರಿಸಿ ಯುದ್ಧಮಾಡಿದರು. ತ್ರಿಗರ್ತರಾಜನು ಸತ್ಯಸೇನ, ಸತ್ಯಕೀರ್ತಿ, ಮಿತ್ರದೇವ, ಶ್ರುತಂಜಯ, ಸೌಶ್ರುತಿ, ಚಿತ್ರಸೇನ ಮತ್ತು ಮಿತ್ರವರ್ಮರೆಂಬ ಸಹೋದರರೊಂದಿಗೆ ಮತ್ತು ಯುದ್ಧದಲ್ಲಿ ನಾನಾ ಶಸ್ತ್ರಗಳನ್ನು ಧರಿಸಿದ್ದ ಮಹೇಷ್ವಾಸ ಪುತ್ರರೊಂದಿಗೆ ಕದನವಾಡುತ್ತಿದ್ದನು. ಅವರು ಸಮುದ್ರವನ್ನು ಮುತ್ತಿಡುವ ಚಂಡಮಾರುತದಂತೆ ಶರಗಳ ಭಿರುಗಾಳಿಯನ್ನೇ ಎರಚುತ್ತಾ ಯುದ್ಧದಲ್ಲಿ ಅರ್ಜುನನನ್ನು ಆಕ್ರಮಣಿಸಿದರು. ನೂರು ಸಾವಿರ ಸಂಖ್ಯೆಗಳಲ್ಲಿದ್ದ ಆ ಯೋಧರು ಎಲ್ಲರೂ ಅರ್ಜುನನನ್ನು ಎದುರಿಸಿ ಗರುಡನನ್ನು ನೋಡಿದ ಸರ್ಪಗಳು ಬಿಲವನ್ನು ಹೊಗುವಂತೆ ಯಮನ ಆಲಯಕ್ಕೆ ತೆರಳಿದರು. ಅಗ್ನಿಯಿಂದ ಸುಡಲ್ಪಡುತ್ತಿದ್ದರೂ ಪತಂಗದ ಹುಳುಗಳು ಅಗ್ನಿಯನ್ನೇ ಹೊಗುವಂತೆ ಸಮರದಲ್ಲಿ ವಧಿಸಲ್ಪಡುತ್ತಿದ್ದ ಅವರು ಅರ್ಜುನನನ್ನು ಬಿಟ್ಟು ಓಡಿ ಹೋಗಲಿಲ್ಲ. ಅರ್ಜುನನನ್ನು ಸತ್ಯಸೇನನು ಮೂರು ಬಾಣಗಳಿಂದ ಹೊಡೆದನು. ಮಿತ್ರದೇವನು ಅರವತ್ಮೂರು, ಚಂದ್ರದೇವನು ಏಳು, ಮಿತ್ರವರ್ಮನು ಎಪ್ಪತ್ಮೂರು, ಸೌಶ್ರುತಿಯು ಐದು, ಶತ್ರುಂಜಯನು ಇಪ್ಪತ್ತು ಮತ್ತು ಸುಶರ್ಮನು ಒಂಭತ್ತು ಶರಗಳಿಂದ ಅವನನ್ನು ಹೊಡೆದರು. ಆಗ ಅರ್ಜುನನು ಶಿಲಾಶಿತ ಶರಗಳಿಂದ ಶತ್ರುಂಜಯನನ್ನು ಸಂಹರಿಸಿ, ಕಿರೀಟದೊಂದಿಗೆ ಸುಶ್ರುತನ ಶಿರವನ್ನು ಕಾಯದಿಂದ ಅಪಹರಿಸಿದನು. ನಂತರ ತ್ವರೆಮಾಡಿ ಶರಗಳಿಂದ ಚಂದ್ರದೇವನನ್ನು ಯಮಕ್ಷಯಕ್ಕೆ ಕಳುಹಿಸಿದನು. ನಂತರ ಅವನು ಆ ಮಹಾರಥರಲ್ಲಿ ಒಬ್ಬೊಬ್ಬರನ್ನೂ ಐದು ಐದು ಬಾಣಗಳಿಂದ ಹೊಡೆದು ತಡೆದನು.

ಸತ್ಯಸೇನನನಾದರೋ ಸಂಕ್ರುದ್ದನಾಗಿ ಮಹಾ ತೋಮರವನ್ನು ರಣದಲ್ಲಿ ಕೃಷ್ಣನನ್ನೇ ಗುರಿಯಿಟ್ಟು ಪ್ರಯೋಗಿಸಿ ಸಿಂಹನಾದಗೈದನು. ಉಕ್ಕಿನಿಂದ ಮಾಡಲ್ಪಟ್ಟಿದ್ದ ಆ ಮಹಾಚಂಡ ತೋಮರವು ಮಾದವನ ಎಡಭುಜವನ್ನು ಗಾಯಗೊಳಿಸಿ ಭೂಮಿಯ ಮೇಲೆ ಬಿದ್ದಿತು. ಗಾಯಗೊಂಡ ಕೃಷ್ಣನ ಕೈಗಳಿಂದ ಮಹಾರಣದಲ್ಲಿ ಚಾವಟಿ ಮತ್ತು ಕಡಿವಾಣಗಳು ಜಾರಿ ಕೆಳಕ್ಕೆ ಬಿದ್ದವು. ಕೃಷ್ಣನು ಪುನಃ ಚಾವಟಿ ಮತ್ತು ಕಡಿವಾಣಗಳನ್ನು ಹಿಡಿದು ಆ ಅಶ್ವಗಳನ್ನು ಸತ್ಯಸೇನನ ರಥದ ಕಡೆ ಓಡಿಸಿದನು.

ಧನಂಜಯನು ಗಾಯಗೊಂಡಿದ್ದ ವಿಷ್ವಕ್ಸೇನನನ್ನು ನೋಡಿ ಸತ್ಯಸೇನನನ್ನು ತೀಕ್ಷ್ಣ ಶರಗಳಿಂದ ಗಾಯಗೊಳಿಸಿದನು. ನಂತರ ಅವನ ಸೇನೆಯ ಮಧ್ಯಭಾಗದಲ್ಲಿಯೇ ನಿಶಿತ ಬಾಣಗಳಿಂದ ಕುಂಡಲಗಳಿಂದ ಶೋಭಿಸುತ್ತಿದ್ದ ರಾಜನ ಮಹಾಶಿರವನ್ನು ದೇಹದಿಂದ ಕತ್ತರಿಸಿದನು. ಅವನನ್ನು ಸಂಹರಿಸಿ ಅರ್ಜುನನು ನಿಶಿತ ಬಾಣಗಳಿಂದ ಮಿತ್ರವರ್ಮನನ್ನು ಮುಚ್ಚಿ ತೀಕ್ಷ್ಣ ವತ್ಸದಂತದಿಂದ ಅವನ ಸಾರಥಿಯನ್ನು ಸಂಹರಿಸಿದನು. ಪುನಃ ಸಂಕ್ರುದ್ಧನಾದ ಅವನು ನೂರಾರು ಶರಗಳಿಂದ ಸಂಶಪ್ತಕ ಗಣಗಳನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಉರುಳಿಸಿದನು. ಆ ಮಹಾಯಶಸ್ವಿಯು ರಜತಪುಂಖದ ಕ್ಷುರಪ್ರದಿಂದ ಮಹಾತ್ಮ ಮಿತ್ರದೇವ ರಾಜನ ಶಿರವನ್ನು ತುಂಡರಿಸಿದನು. ಸಂಕ್ರುದ್ಧನಾಗಿ ಸುಶರ್ಮನನ್ನು ಕೂಡ ವಕ್ಷಸ್ಥಳದಲ್ಲಿ ಹೊಡೆದನು.

ಆಗ ಕ್ರುದ್ಧ ಸಂಶಪ್ತಕರೆಲ್ಲರೂ ಧನಂಜಯನನ್ನು ಸುತ್ತುವರೆದು ಹತ್ತು ದಿಕ್ಕುಗಳೂ ಮೊಳಗುವಂತೆ ಸಿಂಹನಾದಗೈಯುತ್ತಾ ಶಸ್ತ್ರಗಳ ಮಳೆಯನ್ನೇ ಸುರಿಸಿದರು. ಅವರಿಂದ ಹಾಗೆ ಪೀಡಿಸಲ್ಪಟ್ಟ ಅರ್ಜುನನು ಐಂದ್ರಾಸ್ತ್ರವನ್ನು ಪ್ರಕಟಿಸಿದನು. ಅದರಿಂದ ಸಹಸ್ರಾರು ಬಾಣಗಳು ಪ್ರಾದುರ್ಭವಿಸಿದವು. ಕೂಡಲೇ ಯುದ್ಧದಲ್ಲಿ ಕತ್ತರಿಸಲ್ಪಡುತ್ತಿದ್ದ ಧ್ವಜಗಳ, ಧನುಸ್ಸುಗಳ, ಪತಾಕೆಗಳೊಂದಿಗೆ ರಥಗಳ, ಶರಗಳೊಂದಿಗೆ ತುಂಡಾಗುತ್ತಿದ್ದ ಬತ್ತಳಿಕೆಗಳ, ರಥದ ನೊಗಗಳು, ತೋಳುಮರಗಳ, ಚಕ್ರಗಳ ಶಬ್ಧಗಳು ಕೇಳಿಬಂದವು. ಕಲ್ಲುಗಳು ಬೀಳುವ, ಪ್ರಾಸ-ಋಷ್ಟಿಗಳು ಬೀಳುವ, ಗದ-ಪರಿಘ-ಶಕ್ತಿ-ತೋಮರಳು ಬೀಳುವ, ಶತಘ್ನಿ-ಚಕ್ರಗಳು ಬೀಳುವ, ತೋಳುಗಳು-ತೊಡೆಗಳು ಬೀಳುವ, ಕಂಟಸೂತ್ರ-ಅಂಗದ-ಕೇಯೂರಗಳು ಬೀಳುವ, ಹಾರ-ಕಿರೀಟ-ಕವಚಗಳು ಬೀಳುವ, ಚತ್ರ-ಚಾಮರಗಳು ಬೀಳುವ, ಮುಕುಟಗಳೊಂದಿಗೆ ಶಿರಗಳು ಬೀಳುವ ಮಹಾ ಶಬ್ಧಗಳು ಅಲ್ಲಲ್ಲಿ ಕೇಳಿಬಂದವು. ಆಕಾಶದಲ್ಲಿ ಹಾರಿ ಬೀಳುತ್ತಿದ್ದ ಸುಂದರ ಕುಂಡಲಗಳು ಮತ್ತು ಕಣ್ಣುಗಳಿಂದ ಪೂರ್ಣಚಂದ್ರನಂತೆ ಹೊಳೆಯುತ್ತಿದ್ದ ಶಿರಸ್ಸುಗಳು ಆಕಾಶದಲ್ಲಿ ರಾರಾಜಿಸುವ ನಕ್ಷತ್ರಗಳಂತೆ ತೋರಿದವು. ಹತರಾಗಿ ಬಿದ್ದಿದ್ದ ಚಂದನ ಲೇಪಿತ ಶರೀರಗಳಿಂದ, ಸುಂದರ ಹಾರಗಳಿಂದ, ಮತ್ತು ಸುಂದರ ವಸ್ತ್ರಗಳಿಂದ ರಣಭೂಮಿಯು ಗಂಧರ್ವನಗರಿಯಂತೆ ಘೋರವಾಗಿ ಕಾಣುತ್ತಿತ್ತು. ಚೂರಾದ ಪರ್ವತಗಳಂತೆ ಹತರಾಗಿ ಬಿದ್ದಿದ್ದ ಕ್ಷತ್ರಿಯ ರಾಜಪುತ್ರರು, ಆನೆಗಳು, ಮತ್ತು ಕುದುರೆಗಳಿಂದಾಗಿ ರಣಭೂಮಿಯು ಅಗಮ್ಯವಾಗಿ ಕಾಣುತ್ತಿತ್ತು. ಅಮಿತ ಸಂಖ್ಯೆಗಳಲ್ಲಿ ಶತ್ರುಗಳನ್ನೂ ಆನೆಗಳನ್ನೂ ಭಲ್ಲಗಳಿಂದ ಸಂಹರಿಸುತ್ತಿದ್ದ ಪಾಂಡವನ ರಥಚಕ್ರವು ಹೋಗಲೂ ದಾರಿಯಿಲ್ಲದಂತಾಯಿತು. ರಕ್ತದ ಕೆಸರಿನಿಂದ ಕೂಡಿದ್ದ ಆ ರಣಾಂಗಣದಲ್ಲಿ ಸಂಚರಿಸುತ್ತಿದ್ದ ಅರ್ಜುನನ ರಥಚಕ್ರಗಳು ಕೆಸರಿನಲ್ಲಿ ಹೂತುಕೊಂಡವು.

ಹುಗಿದುಹೋಗಿದ್ದ ಚಕ್ರಗಳು ಕುದುರೆಗಳನ್ನು ಬಹಳ ಆಯಾಸಗೊಳಿಸುತ್ತಿದ್ದವು. ಮನಸ್ಸು ಮತ್ತು ವಾಯುಗಳ ವೇಗವುಳ್ಳ ಆ ಕುದುರೆಗಳು ಮಹಾ ಪ್ರಯತ್ನಪಟ್ಟು ಹೋಗುತ್ತಿದ್ದವು. ಧನ್ವಿ ಪಾಂಡುಪುತ್ರನಿಂದ ವಧಿಸಲ್ಪಟ್ಟ ಆ ಸೈನದಲ್ಲಿ ಅಳಿದುಳಿದ ಎಲ್ಲರೂ ಅಲ್ಲಿ ನಿಲ್ಲದೇ ಪ್ರಾಯಶಃ ವಿಮುಖರಾಗಿದ್ದರು. ಆ ಅನೇಕ ಸಂಶಪ್ತಕ ಗಣಗಳನ್ನು ಗೆದ್ದು ಜಿಷ್ಣು ಅರ್ಜುನನು ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸಿ ರಾರಾಜಿಸಿದನು.

ಯುಧಿಷ್ಠಿರ-ದುರ್ಯೋಧನರ ಯುದ್ಧ

ಅನೇಕ ಶರಗಳನ್ನು ಪ್ರಯೋಗಿಸುತ್ತಿದ್ದ ಯುಧಿಷ್ಠಿರನನ್ನು ಸ್ವಯಂ ರಾಜಾ ದುರ್ಯೋಧನನು ನಿರ್ಭಯನಾಗಿ ಎದುರಿಸಿದನು. ತನ್ನ ಮೇಲೆ ಒಮ್ಮಿಂದೊಮ್ಮೆಲೇ ಆಕ್ರಮಣಿಸಿದ ದುರ್ಯೋಧನನನ್ನು ಬೇಗನೆ ಬಾಣಗಳಿಂದ ಹೊಡೆದು ಧರ್ಮರಾಜನು “ನಿಲ್ಲು! ನಿಲ್ಲು!” ಎಂದು ಹೇಳಿದನು. ದುರ್ಯೋಧನನು ತುಂಬಾ ಕ್ರೋಧಿತನಾಗಿ ಯುಧಿಷ್ಠಿರನನ್ನು ಒಂಭತ್ತು ನಿಶಿತ ಶರಗಳಿಂದ ಮತ್ತು ಅವನ ಸಾರಥಿಯನ್ನು ಭಲ್ಲದಿಂದ ಹೊಡೆದನು. ಆಗ ರಾಜಾ ಯುಧಿಷ್ಠಿರನು ದುರ್ಯೋಧನನ ಮೇಲೆ ಹದಿಮೂರು ಶಿಲಾಶಿತ ಶಿಲೀಮುಖ ಹೇಮಪುಂಖಗಳುಳ್ಳ ಬಾಣಗಳನ್ನು ಪ್ರಯೋಗಿಸಿದನು. ಆ ಮಹಾರಥನು ನಾಲ್ಕು ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಐದನೆಯ ಬಾಣದಿಂದ ಸಾರಥಿಯ ಶಿರವನ್ನು ಕಾಯದಿಂದ ಬೇರ್ಪಡಿಸಿ ಕೆಡವಿದನು. ಆರನೆಯದರಿಂದ ಯುಧಿಷ್ಠಿರನು ದುರ್ಯೋಧನನ ಧ್ವಜವನ್ನು, ಏಳನೆಯದರಿಂದ ಧನುಸ್ಸನ್ನೂ, ಎಂಟನೆಯದರಿಂದ ಖಡ್ಗವನ್ನೂ ಭೂಮಿಯ ಮೇಲೆ ಕೆಡವಿಸಿದನು. ನಂತರ ಐದು ಬಾಣಗಳಿಂದ ಧರ್ಮರಾಜನು ದುರ್ಯೋಧನನನ್ನು ಜೋರಾಗಿ ಗಾಯಗೊಳಿಸಿದನು. ದುರ್ಯೋಧನನು ಕುದುರೆಗಳು ಸತ್ತುಹೋಗಿದ್ದ ರಥದಿಂದ ಕೆಳಕ್ಕೆ ಹಾರಿ ಭೂಮಿಯ ಮೇಲೆಯೇ ನಿಂತುಕೊಂಡನು. ಹಾಗೆ ಅವನು ಕಷ್ಟಕ್ಕೀಡಾದುದನ್ನು ನೋಡಿ ಕರ್ಣ-ಅಶ್ವತ್ಥಾಮ-ಕೃಪಾದಿಗಳು ಒಂದಾಗಿ ನರಾಧಿಪನನ್ನು ರಕ್ಷಿಸಲು ಧಾವಿಸಿ ಬಂದರು. ಕೂಡಲೇ ಪಾಂಡುಸುತರೆಲ್ಲರೂ ಯುಧಿಷ್ಠಿರನನ್ನು ಸುತ್ತುವರೆದು ಅವನನ್ನೇ ಅನುಸರಿಸಿ ಯುದ್ಧದಲ್ಲಿ ತೊಡಗಿದರು.

ಕೂಡಲೇ ಆ ಮಹಾಯುದ್ಧದಲ್ಲಿ ಸಹಸ್ರಾರು ರಣವಾದ್ಯಗಳು ಮೊಳಗಿದವು. ರಣಾಂಗಣದ ಸುತ್ತಲೂ ಕಿಲಾಕಿಲಾ ಶಬ್ಧವು ಕೇಳಿಬಂದಿತು. ಸಮರದಲ್ಲಿ ಪಾಂಚಾಲರು ಕೌರವರೊಂದಿಗೆ ಯುದ್ಧದಲ್ಲಿ ತೊಡಗಿದರು. ಪದಾತಿಗಳು ಪದಾತಿಗಳೊಡನೆಯೂ, ಆನೆಗಳು ಆನೆಗಳೊಡನೆಯೂ, ರಥಗಳು ರಥಗಳೊಡನೆಯೂ, ಕುದುರೆಗಳು ಇತರ ಕುರುರೆಸವಾರರೊಂದಿಗೂ ಹೋರಾಡಿದರು. ಆ ಸಮರದಲ್ಲಿ ವಿಸ್ಮಯಕಾರಕ, ಯೋಚಿಸಲೂ ಅಸಾಧ್ಯವಾದ, ಉತ್ತಮ ಶಸ್ತ್ರಗಳನ್ನುಪಯೋಗಿಸಿದ ಪ್ರೇಕ್ಷಣೀಯ ದ್ವಂದ್ವಯುದ್ಧಗಳು ನಡೆದವು. ಪರಸ್ಪರರನ್ನು ವಧಿಸಲು ಬಯಸಿ ಯೋಧವ್ರತವನ್ನು ಅನುಷ್ಠಾನಗೈಯುತ್ತಿರುವ ಅವರು ಸಮರದಲ್ಲಿ ಅತ್ಯಂತವೇಗವಾಗಿ ಅನ್ಯೋನ್ಯರನ್ನು ಸಂಹರಿಸುತ್ತಿದ್ದರು. ಯಾವುದೇ ಕಾರಣಕ್ಕೂ ಅವರು ಯುದ್ಧದಲ್ಲಿ ಬೆನ್ನುತೋರಿಸುತ್ತಿರಲಿಲ್ಲ. ಮುಹೂರ್ತಕಾಲ ಮಾತ್ರ ಆ ಯುದ್ಧವು ನೋಡಲು ಮಧುರವಾಗಿತ್ತು. ಆದರೆ ಕೂಡಲೇ ಅದು ಮರ್ಯಾದೆಗಳಿಲ್ಲದೇ ಉನ್ಮತ್ತರು ಯುದ್ಧಮಾಡುತ್ತಿರುವರೋ ಎನ್ನುವಂತೆ ಪರಿಣಮಿಸಿತು. ರಣಮೂರ್ಧನಿಯಲ್ಲಿ ರಥಸೇನಾನಿಗಳು ಗಜಸೇನಾನಿಗಳನ್ನು ಎದುರಿಸಿ ಸನ್ನತಪರ್ವ ಶರಗಳಿಂದ ಕಾಲನಿಗೆ ಕಳುಹಿಸತೊಡಗಿದರು. ಅನೇಕ ಆನೆಗಳು ಕುದುರೆಗಳನ್ನು ಆಕ್ರಮಿಸಿ ನಾಶಗೊಳಿಸುತ್ತಿದ್ದವು. ಅಲ್ಲಲ್ಲಿ ಆಗಾಗ ಕುದುರೆಗಳು ಉಗ್ರವಾಗಿ ಓಡಿಹೋಗುತ್ತಿದ್ದವು. ಅನೇಕ ಆನೆಗಳು ಕುದುರೆಗಳನ್ನು ಆಕ್ರಮಿಸಿ ಅವುಗಳನ್ನು ದಂತಗಳಿಂದ ಸೀಳಿದವು ಮತ್ತು ಇತರ ಕುದುರೆಗಳನ್ನು ಕಾಲಿನಿಂದ ತುಳಿದು ಜಜ್ಜಿದವು. ಅವುಗಳು ಅಶ್ವಾರೋಹಿಗಳನ್ನು ಮತ್ತು ಅಶ್ವಗಳನ್ನು ರಣದಲ್ಲಿ ದಂತಗಳಿಂದ ಸೀಳುತ್ತಿದ್ದವು. ಇತರ ಆನೆಗಳು ಅವುಗಳನ್ನು ವೇಗದಿಂದ ಮೇಲೆತ್ತಿ ಅತಿ ದೂರದ ವರೆಗೆ ಎಸೆಯುತ್ತಿದ್ದವು. ಪದಾತಿಗಳಿಂದ ಹೊಡೆಯಲ್ಪಟ್ಟ ಆನೆಗಳು ಘೀಳಿಡುತ್ತಾ ಸುತ್ತಲೂ ಓಡಿಹೋಗುತ್ತಿದ್ದವು. ಹತ್ತು ದಿಕ್ಕುಗಳಲ್ಲಿ ಓಡುತ್ತಿದ್ದ ಆನೆಗಳು ಘೋರವಾಗಿ ಆರ್ತಸ್ವರಗೈಯುತ್ತಿದ್ದವು. ಮಹಾರಣದಲ್ಲಿ ಓಡಿಹೋಗುತ್ತಿದ್ದ ಆನೆಗಳಿಂದ ಕಾಲಿಗೆ ಸಿಲುಕಿದ ಪದಾತಿಗಳು ಆಭರಣಗಳನ್ನೂ ಕೂಡಲೇ ಕಳಚಿ ಎಸೆದು ಹಾರಿಕೊಂಡು ಓಡಿ ಹೋಗುತ್ತಿದ್ದರು. ಆ ಆಭರಣಗಳನ್ನು ತಮ್ಮ ಮೇಲೆ ಪ್ರಯೋಗಿಸುತ್ತಿದ್ದಾರೆಂದು ಭಾವಿಸಿ ಮಹಾಗಜಗಳು ಆ ಚಿತ್ರ ಆಭರಣಗಳನ್ನು ತುಳಿದು ಪುಡಿ ಪುಡಿ ಮಾಡುತ್ತಿದ್ದವು. ಇತರ ಪದಾತಿಗಳು ಪ್ರಾಸ-ತೋಮರ-ಶಕ್ತಿಗಳಿಂದ ಆನೆಗಳ ಕುಂಭಸ್ಥಳಗಳನ್ನೂ, ದಂತಗಳನ್ನೂ ಹಿಡಿದು ತಿವಿಯುತ್ತಿದ್ದರು. ಪಕ್ಕದಲ್ಲಿದ್ದ ರಥಿಗಳು ಮತ್ತು ಅಶ್ವಾರೂಢರು ಕೆಲವರು ಗದೆಗಳನ್ನು ಹಿಡಿದು ಆನೆಗಳ ಪಕ್ಕೆಗಳನ್ನು ತುಂಬಾ ದಾರುಣವಾಗಿ ಹೊಡೆಯಲು ಅವು ಒಡೆದು ಭೂಮಿಯ ಮೇಲೆ ಬೀಳುತ್ತಿದ್ದವು.

ಇತರ ಮಹಾಗಜಗಳು ಕವಚ ಮತ್ತು ಪತಾಕೆಗಳೊಂದಿಗೆ ರಥ ಮತ್ತು ಅಶ್ವಾರೋಹಿಗಳನ್ನು ಮೇಲೆತ್ತಿ ಭೂಮಿಯ ಮೇಲೆ ವೇಗದಿಂದ ಎಸೆಯುತ್ತಿದ್ದವು. ಆ ಘೋರರೂಪದ ಮಹಾಯುದ್ಧದಲ್ಲಿ ಆನೆಗಳು ರಥವನ್ನು ಆಕ್ರಮಣಿಸಿ ಸೊಂಡಿಲಿನಿಂದ ಮೇಲೆತ್ತಿ ಕೂಡಲೇ ಎಸೆಯುತ್ತಿದ್ದವು. ಮಹಾಗಜಗಳೂ ಕೂಡ ನಾರಾಚಗಳಿಂದ ವಧಿಸಲ್ಪಟ್ಟು ವಜ್ರದಿಂದ ಭಗ್ನವಾದ ಪರ್ವತ ಶಿಖರಗಳಂತೆ ಮಹೀತಲದಲ್ಲಿ ಬೀಳುತ್ತಿದ್ದವು. ಯೋಧರು ಯೋಧರನ್ನು ಯುದ್ಧದಲ್ಲಿ ಎದುರಿಸಿ ಅನ್ಯೋನ್ಯರ ಕೂದಲುಗಳನ್ನು ಎಳೆದು ಮುಷ್ಟಿಗಳಿಂದ ಹೊಡೆದು ಕೆಳಗೆ ಬೀಳಿಸುತ್ತಿದ್ದರು. ಇತರರು ಎರಡು ಭುಜಗಳನ್ನೂ ಮೇಲೆತ್ತಿ ಭೂಮಿಯ ಮೇಲೆ ಬೀಳಿಸುತ್ತಿದ್ದರು. ಚಡಪಡಿಸುತ್ತಿದ್ದವರ ಎದೆಯಮೇಲೆ ಕಾಲಿಟ್ಟು ತಲೆಗಳನ್ನು ಕತ್ತರಿಸುತ್ತಿದ್ದರು. ಅನ್ಯರು ಮೃತರಾದವರನ್ನು ಕಾಲುಗಳಿಂದ ಒದೆದು ತುಳಿಯುತ್ತಿದ್ದರು. ಇನ್ನೂ ಕೆಲವರು ಜೀವವಿದ್ದವರ ಶರೀರಗಳಲ್ಲಿ ಆಯುಧಗಳನ್ನು ನಾಟಿಸಿ ಕೊಲ್ಲುತ್ತಿದ್ದರು. ಅಲ್ಲಿ ಯೋಧರ ಮಹಾ ಮುಷ್ಟಿಯುದ್ಧವೂ ನಡೆಯಿತು. ಹಾಗೆಯೇ ಕೇಶಗಳನ್ನು ಹಿಡಿದು ಕೇವಲ ಉಗ್ರ ಬಾಹುಯುದ್ಧಗಳೂ ನಡೆದವು. ಇನ್ನೊಬ್ಬರೊಡನೆ ಯುದ್ಧದಲ್ಲಿ ಸಮಾಸಕ್ತರಾಗಿದ್ದಾಗ ಇತರರು ತಿಳಿಸದೆಯೇ ನಾನಾ ಶಸ್ತ್ರಗಳಿಂದ ಸಮರದಲ್ಲಿ ಬಹಳಷ್ಟು ಜನರನ್ನು ವಧಿಸಿದರು. ಹೀಗೆ ಪರಸ್ಪರರನ್ನು ಹತ್ತಿಕೊಂಡು ಸಂಕುಲ ಯುದ್ಧವು ನಡೆಯುತ್ತಿರಲು ನೂರಾರು ಸಹಸ್ರಾರು ಕಬಂಧಗಳು ಮೇಲೆ ಎದ್ದು ನಿಂತವು. ರಕ್ತದಿಂದ ತೋಯ್ದುಹೋಗಿದ್ದ ಶಸ್ತ್ರಗಳು ಮತ್ತು ಕವಚಗಳು ಕೂಡ ರಕ್ತದಿಂದ ಕೆಂಪುಬಣ್ಣವನ್ನು ತಳೆದಿದ್ದ ವಸ್ತ್ರಗಳಂತೆಯೇ ತೋರಿದವು. ಹೀಗೆ ಅತ್ಯಂತ ದಾರುಣ ಸಂಕುಲ ಮಹಾಯುದ್ಧವು ನಡೆಯುತ್ತಿರಲು ಹುಚ್ಚೆದ್ದ ರಂಗಮಂಚದಂತೆ ಶಬ್ಧಗಳಿಂದ ಜಗತ್ತೇ ತುಂಬಿಕೊಂಡಿತು. ಯುದ್ಧಮಾಡಬೇಕೆಂದು ಯುದ್ಧಮಾಡುತ್ತಿದ್ದ ಜಯಾಭಿಲಾಷೀ ರಾಜರು ಶರಾತುರರಾಗಿ ತಮ್ಮವರು ಯಾರು ಮತ್ತು ಶತ್ರುಗಳು ಯಾರು ಎನ್ನುವುದನ್ನು ತಿಳಿದುಕೊಳ್ಳದೇ ಯುದ್ಧಮಾಡುತ್ತಿದ್ದರು. ಕೌರವರು ಕೌರವರನ್ನೇ ಸಂಹರಿಸುತ್ತಿದ್ದರು. ಎದುರಾದ ಶತ್ರುಗಳನ್ನು ಕೂಡ ಸಂಹರಿಸುತ್ತಿದ್ದರು. ಎರಡೂ ಸೇನೆಗಳ ವೀರರಲ್ಲಿ ಒಂದು ತರಹದ ವ್ಯಾಕುಲತೆಯು ಹುಟ್ಟಿಕೊಂಡಿತು. ಭಗ್ನರಥಗಳಿಂದ, ಕೆಳಗುರುಳಿದ ಆನೆಗಳಿಂದ, ಬಿದ್ದ ಕುದುರೆಗಳಿಂದ, ಉರುಳಿಸಲ್ಪಟ್ಟ ಪದಾತಿಗಳಿಂದ ಮತ್ತು ಮಾಂಸ-ರಕ್ತಗಳ ಕೆಸರಿನಿಂದ ರಣಭೂಮಿಯು ಅಗಮ್ಯವಾಗಿ ಪರಿಣಮಿಸಿತು. ಕ್ಷಣದಲ್ಲಿಯೇ ರಕ್ತದ ನದಿಯು ಹರಿಯತೊಡಗಿತು.

ಪಾಂಚಾಲರನ್ನು ಕರ್ಣನೂ, ತ್ರಿಗರ್ತರನ್ನು ಧನಂಜಯನೂ ಮತ್ತು ಕುರುಗಳನ್ನೂ ಅವರ ಗಜಸೇನೆಗಳನ್ನೂ ಭೀಮಸೇನನು ಸರ್ವಶಃ ವಧಿಸಿದರು. ಈ ರೀತಿ ಅಪರಾಹ್ಣದಲ್ಲಿ ವಿಪುಲ ಜಯವನ್ನು ಬಯಸುತ್ತಿದ್ದ ಕುರು-ಪಾಂಡವಸೇನೆಗಳ ನಾಶವು ನಡೆಯಿತು.

ಭಾಗಶಃ ಸೇನೆಗಳು ಯುದ್ಧದಲ್ಲಿ ತೊಡಗಿರಲು ದುರ್ಯೋಧನನು ಇನ್ನೊಂದು ರಥವನ್ನು ಏರಿದನು. ವಿಷಭರಿತ ಸರ್ಪದಂತೆ ಮಹಾ ಕ್ರೋಧದಿಂದ ಆವಿಷ್ಟನಾದ ದುರ್ಯೋಧನನು ಯುಧಿಷ್ಠಿರನನ್ನು ನೋಡಿ ಸೂತನಿಗೆ ಹೇಳಿದನು: “ಬೇಗ ಹೋಗು! ಹೋಗು! ಸಾರಥೇ! ಶ್ವೇತ ಚತ್ರದಡಿಯಲ್ಲಿ ಕವಚಧರಿಸಿ ನಿಂತಿರುವ ರಾಜ ಪಾಂಡವನಿರುವಲ್ಲಿಗೆ ಬೇಗನೆ ನನ್ನನ್ನು ಕೊಂಡೊಯ್ಯಿ!” ರಾಜನಿಂದ ಹಾಗೆ ಪ್ರಚೋದಿಸಲ್ಪಟ್ಟ ಸೂತನು ರಾಜನ ಉತ್ತಮ ರಥವನ್ನು ಯುಧಿಷ್ಠಿರನ ಎದುರಾಗಿ ಕೊಂಡೊಯ್ದನು. ಆಗ ಯುಧಿಷ್ಠಿರನು ಮದಿಸಿದ ಸಲಗದಂತೆ ಕ್ರುದ್ಧನಾಗಿ ಸುಯೋಧನನಿರುವಲ್ಲಿಗೆ ಹೋಗು ಎಂದು ಸಾರಥಿಯನ್ನು ಪ್ರಚೋದಿಸಿದನು. ಅವರಿಬ್ಬರು ವೀರ ಸಹೋದರರು ಯುದ್ಧದಲ್ಲಿ ಸಂಘರ್ಷಿಸಿ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು. ಆಗ ದುರ್ಯೋಧನನು ಧರ್ಮಶೀಲನ ಧನುಸ್ಸನ್ನು ಶಿಲಾಶಿತ ಭಲ್ಲದಿಂದ ತುಂಡರಿಸಿದನು. ಆ ಕೃತ್ಯವನ್ನು ಸಂಕ್ರುದ್ಧನಾದ ಯುಧಿಷ್ಠಿರನು ಸಹಿಸಿಕೊಳ್ಳಲಿಲ್ಲ. ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಧರ್ಮಪುತ್ರನು ತುಂಡಾದ ಧನುಸ್ಸನ್ನು ಎಸೆದು ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು. ಅವನು ದುರ್ಯೋಧನನ ಧ್ವಜ ಮತ್ತು ಧನುಸ್ಸುಗಳನ್ನು ತುಂಡರಿಸಿಸನು. ದುರ್ಯೋಧನನಾದರೋ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪಾಂಡವನಿಗೆ ತಿರುಗಿ ಹೊಡೆದನು. ಪರಸ್ಪರರನ್ನು ಗೆಲ್ಲಲು ಬಯಸಿ ಕ್ರುದ್ಧ ಸಿಂಹಗಳಂತೆ ರೋಷಗೊಂಡ ಅವರಿಬ್ಬರು ಅನ್ಯೋನ್ಯರ ಮೇಲೆ ಶರವರ್ಷಗಳನ್ನು ಸುರಿಸಿದರು.

ಗೂಳಿಗಳಂತೆ ಗರ್ಜಿಸುತ್ತಾ ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಆ ಮಹಾರಥರಿಬ್ಬರೂ ಪರಸ್ಪರರನ್ನು ದುರುಗುಟ್ಟಿ ನೋಡುತ್ತಾ ಸುತ್ತುತ್ತಿದ್ದರು. ಕಿವಿಯ ತುದಿಯವರೆಗೂ ಸೆಳೆದು ಬಿಡುತ್ತಿದ್ದ ಬಾಣಗಳಿಂದ ಅನ್ಯೋನ್ಯರನ್ನು ಬಹಳವಾಗಿ ಗಾಯಗೊಳಿಸಿದ ಅವರಿಬ್ಬರೂ ಹೂಬಿಟ್ಟ ಮುತ್ತುಗದ ಮರಗಳಂತೆ ರಾರಾಜಿಸುತ್ತಿದ್ದರು. ಮಹಾಯುದ್ಧದಲ್ಲಿ ಅವರಿಬ್ಬರೂ ಮತ್ತೆ ಮತ್ತೆ ಸಿಂಹನಾದಗೈಯುತ್ತಾ ಅನ್ಯೋನ್ಯರನ್ನು ಬೆದರಿಸುತ್ತಿದ್ದರು. ಚಪ್ಪಾಳೆಗಳನ್ನು ತಟ್ಟುತ್ತಾ ಧನುಸ್ಸನ್ನು ಟೇಂಕರಿಸಿ ಶಬ್ಧಮಾಡುತ್ತಿದ್ದರು. ಆ ರಥಸತ್ತಮರಿಬ್ಬರೂ ಶಂಖಗಳನ್ನು ಊದಿ ಶಬ್ಧಮಾಡುತ್ತಿದ್ದರು. ಅನ್ಯೋನ್ಯರನ್ನು ಬಹಳವಾಗಿ ಪೀಡಿಸುತ್ತಿದ್ದರು. ಆಗ ರಾಜಾ ಯುಧಿಷ್ಠಿರನು ಕ್ರುದ್ಧನಾಗಿ ವಜ್ರವೇಗವುಳ್ಳ ಮೂರು ದುರಾಸದ ಶರಗಳಿಂದ ದುರ್ಯೋಧನನ ಎದೆಗೆ ಹೊಡೆದನು. ಅದಕ್ಕೆ ಪ್ರತಿಯಾಗಿ ಕೂಡಲೇ ದುರ್ಯೋಧನನು ಐದು ಶಿಲಾಶಿತ ಹೇಮಪುಂಖ ನಿಶಿತ ಬಾಣಗಳಿಂದ ಮಹೀಪತಿಯನ್ನು ಹೊಡೆದನು. ಆಗ ದುರ್ಯೋಧನನು ಮಹಾ ಉಲ್ಕೆಯಂತಿದ್ದ ತೀಕ್ಷ್ಣವಾದ ಸಂಪೂರ್ಣ ಉಕ್ಕಿನಿಂದ ಮಾಡಿದ್ದ ಶಕ್ತ್ಯಾಯುಧವನ್ನು ಪ್ರಯೋಗಿಸಿದನು. ಬೀಳುತ್ತಿದ್ದ ಆ ಶಕ್ತಿಯನ್ನು ಧರ್ಮರಾಜನು ಒಮ್ಮೆಲೇ ಶಿಲಾಶಿತ ಬಾಣಗಳಿಂದ ತುಂಡರಿಸಿ, ದುರ್ಯೋಧನನನ್ನು ಏಳರಿಂದ ಹೊಡೆದನು. ಹೇಮದಂಡದ ಆ ಮಹಾಘನ ಶಕ್ತ್ಯಾಯುಧವು ಕೆಳಗೆ ಬಿದ್ದಿತು. ಕೆಳಗೆ ಬೀಳುತ್ತಿದ್ದ ಅದು ಶಿಖಿಯಿಂದ ಉತ್ಪನ್ನವಾದ ಮಹಾ ಉಲ್ಕೆಯಂತೆ ವಿರಾಜಿಸಿತು. ಶಕ್ತಿಯು ನಾಶವಾದುದನ್ನು ನೋಡಿದ ದುರ್ಯೋಧನನು ನಿಶಿತವಾದ ಒಂಭತ್ತು ಭಲ್ಲಗಳಿಂದ ಯುಧಿಷ್ಠಿರನನ್ನು ಹೊಡೆದನು. ಯುಧಿಷ್ಠಿರನು ಆ ಬಲಶಾಲಿಯಿಂದ ಅತಿಯಾಗಿ ಗಾಯಗೊಂಡನು. ಅವನು ಬಾಣವೊಂದನ್ನು ಹಿಡಿದು ದುರ್ಯೋಧನನಿಗೆ ಗುರಿಯಿಟ್ಟನು. ಆ ಉಗ್ರ ಬಾಣವನ್ನು ಧನುಸ್ಸಿಗೆ ಹೂಡಿ ಕ್ರುದ್ಧನಾದ ರಾಜನು ರಾಜನ ಮೇಲೆ ಪ್ರಯೋಗಿಸಿದನು. ಆ ಬಾಣವು ದುರ್ಯೋಧನನಿಗೆ ತಾಗಿ, ರಾಜನನ್ನು ಮೂರ್ಛೆಗೊಳಿಸಿ, ಭೂಮಿಯನ್ನು ಸೀಳಿ ಹೊಕ್ಕಿಕೊಂಡಿತು.

ಆಗ ದುರ್ಯೋಧನನು ಕ್ರುದ್ಧನಾಗಿ ಕಲಹವನ್ನು ಕೊನೆಗೊಳಿಸಬೇಕೆಂದು ಬಯಸಿ ಗದೆಯನ್ನು ಮೇಲೆತ್ತಿಕೊಂಡು ವೇಗದಿಂದ ಪಾಂಡವನ ಕಡೆ ಧಾವಿಸಿ ಎರಗಿದನು. ದಂಡವನ್ನು ಹಿಡಿದ ಅಂತಕನಂತೆ ಗದೆಯನ್ನು ಮೇಲೆತ್ತಿ ಬರುತ್ತಿದ್ದ ದುರ್ಯೋಧನನನ್ನು ನೋಡಿ ಧರ್ಮರಾಜನು ಮಹಾವೇಗವುಳ್ಳ, ಮಹಾ ಉಲ್ಕೆಯಂತೆ ಉರಿದು ಬೆಳಗುತ್ತಿದ್ದ ಮಹಾಶಕ್ತಿಯನ್ನು ಪ್ರಯೋಗಿಸಿದನು. ಅದು ರಥಸ್ಥ ದುರ್ಯೋಧನ ಕವಚವನ್ನು ಸೀಳಿ ಗಾಯಗೊಳಿಸಿತು. ಅದರಿಂದ ತುಂಬಾ ಸಂವಿಗ್ನ ಹೃದಯನಾದ ಅವನು ಕೆಳಗೆ ಬಿದ್ದು ಮೂರ್ಛಿತನಾದನು. ಆಗ ವ್ಯಸನಸಮುದ್ರದಲ್ಲಿ ಮುಳುಗಿಹೋಗಿದ್ದ ದುರ್ಯೋಧನನ ಬಳಿಗೆ ತ್ವರೆಮಾಡಿ ಕೃತವರ್ಮನು ಸಮೀಪಿಸಿದನು. ಭೀಮನೂ ಕೂಡ ಹೇಮಪರಿಷ್ಕೃತ ಮಹಾಗದೆಯನ್ನು ಹಿಡಿದು ವೇಗದಿಂದ ಯುದ್ಧದಲ್ಲಿ ಕೃತವರ್ಮನನ್ನು ಆಕ್ರಮಣಿಸಿದನು. ಹೀಗೆ ಶತ್ರುಗಳೊಡನೆ ಕೌರವರ ಯುದ್ಧವು ನಡೆಯಿತು.

ಹದಿನಾರನೆಯ ದಿನದ ಯುದ್ಧ ಸಮಾಪ್ತಿ

ಆಗ ಯುದ್ಧದುರ್ಮದರಾದ ಕೌರವರು ಕರ್ಣನನ್ನು ಮುಂದೆಮಾಡಿಕೊಂಡು ಪುನಃ ಹಿಂದಿರುಗಿ ದೇವಾಸುರಸಮಾನ ಸಂಗ್ರಾಮವನ್ನು ನಡೆಸಿದರು. ಆನೆ-ರಥ-ಸೈನಿಕ-ಅಶ್ವ-ಶಂಖಗಳ ಶಬ್ಧಗಳಿಂದ ಹರ್ಷಿತರಾದ ಅವರು ರಥ-ಗಜ-ಅಶ್ವ-ಪದಾತಿ ಸೈನಿಕರು ಶತ್ರುಗಳನ್ನು ಎದುರಿಸಿ ವಿವಿಧ ಶಸ್ತ್ರಗಳನ್ನು ಪ್ರಯೋಗಿಸಿ ಪ್ರಹರಿಸಿದರು. ಆ ಮಹಾಯುದ್ಧದಲ್ಲಿ ಆನೆ-ರಥ-ಕುದುರೆಗಳನ್ನೇರಿದ ಶ್ರೇಷ್ಠ ಪುರುಷರು ಬಾಣ-ಪರಶು-ಖಡ್ಗ-ಪಟ್ಟಿಶಗಳಿಂದಲೂ ಅನೇಕ ವಿಧದ ಬಾಣಗಳಿಂದಲೂ ಪುರುಷರನ್ನು ಸಂಹರಿಸುತ್ತಿದ್ದರು. ಕಮಲ-ಸೂರ್ಯ-ಚಂದ್ರರ ಕಾಂತಿಗೆ ಸಮಾನ ಕಾಂತಿಯುಳ್ಳ ಬಿಳಿಯ ಹಲ್ಲುಗಳ ಸಾಲುಗಳಿಂದ, ಮೂಗು ಮತ್ತು ಕಣ್ಣುಗಳಿಂದ ಶೋಭಿಸುತ್ತಿದ್ದ ಸುಂದರ ಮುಖಗಳಿಂದ, ಸುಂದರ ಮುಕುಟ-ಕುಂಡಲಗಳಿಂದ ಕೂಡಿದ ಪುರುಷರ ಶಿರಗಳಿಂದ ರಣಭೂಮಿಯು ಶೋಭಿಸುತ್ತಿತ್ತು. ನೂರಾರು ಪರಿಘ, ಮುಸುಲ, ಶಕ್ತಿ, ತೋಮರ, ನಖರ, ಭುಶಂಡಿ ಮತ್ತು ಗದೆಗಳಿಂದ ಗಾಯಗೊಂಡ ಮನುಷ್ಯರು, ಆನೆಗಳು ಮತ್ತು ಕುದುರೆಗಳಿಂದಾಗಿ ರಣಭೂಮಿಯಲ್ಲಿ ರಕ್ತದ ಪ್ರವಾಹವೇ ಹರಿಯಿತು. ಜಜ್ಜಲ್ಪಟ್ಟಿದ್ದ ಮನುಷ್ಯರು, ರಥಗಳು, ಆನೆಗಳು ಮತ್ತು ಕುದುರೆಗಳು ನೋಡಲು ಅತಿ ಭಯಂಕರವಾಗಿ ಕಾಣುತ್ತಿದ್ದವು. ಶತ್ರುಗಳಿಂದ ಹತವಾಗಿದ್ದ ಆ ಸೇನೆಗಳಿಂದ ರಣಭೂಮಿಯು ಪ್ರಳಯಕಾಲದಲ್ಲಿನ ಯಮರಾಜ್ಯದಂತೆ ಕಾಣುತ್ತಿತ್ತು. ಅನಂತರ ಕೌರವ ಸೈನಿಕರು ಮತ್ತು ಧೃತರಾಷ್ಟ್ರನ ಮಕ್ಕಳು ರಣದಲ್ಲಿ ಅಮಿತಬಲವನ್ನು ಮುಂದಿರಿಸಿಕೊಂಡು ಶಿನಿಯ ಮೊಮ್ಮಗನನ್ನು ಆಕ್ರಮಣಿಸಿದರು. ಅಮರಾಸುರ ಸೇನೆಗಳಂತಿದ್ದ, ಸಮುದ್ರದ ಭೋರ್ಗರೆಯಂತೆ ಗರ್ಜಿಸುತ್ತಿದ್ದ, ಶ್ರೇಷ್ಠ ನರ-ಅಶ್ವ-ರಥ-ಆನೆಗಳಿಂದ ಕೂಡಿದ ಕೌರವ ಸೇನೆಯು ರಕ್ತರಂಜಿತವಾಗಿಯೂ ಭಯಂಕರವಾಗಿಯೂ ಪ್ರಕಾಶಿಸುತ್ತಿತ್ತು.

ಕರ್ಣನು ಯುದ್ಧದಲ್ಲಿ ದಿನಕರಕಿರಣಗಳ ಪ್ರಭೆಯುಳ್ಳ ಪೃಷತಗಳಿಂದ ಶಿನಿಪ್ರವೀರನನ್ನು ಪ್ರಹರಿಸಿದನು. ಶಿನಿವೃಷಭನೂ ಕೂಡ ರಣದಲ್ಲಿ ಸರ್ಪವಿಷಸಮಪ್ರಭೆಯುಳ್ಳ ವಿವಿಧ ಶರಗಳಿಂದ ತ್ವರೆಮಾಡಿ ಕರ್ಣನನ್ನು ಅವನ ರಥ-ಕುದುರೆಗಳು ಮತ್ತು ಸಾರಥಿಯರನ್ನೂ ಸೇರಿಸಿ, ಪ್ರಹರಿಸಿದನು. ಶಿನಿವೃಷಭನ ಶರಪೀಡಿತ ರಥರ್ಷಭ ವಸುಷೇಣನ ಬಳಿಗೆ ಕೌರವ ಅತಿರಥರು ಆನೆ-ರಥ-ಅಶ್ವ-ಪದಾತಿಗಳೊಂದಿಗೆ ಧಾವಿಸಿಬಂದರು. ಆಗ ಅತಿವೇಗಶಾಲಿಗಳಾದ ದ್ರುಪದಸುತ ಮತ್ತು ಅವನ ಸಖರು ಸಮುದ್ರದಂತಿದ್ದ ಶತ್ರು ಸೇನೆಯನ್ನು ಆಕ್ರಮಣಿಸಿ, ಮಹಾ ಪುರುಷ-ರಥ-ಅಶ್ವ-ಗಜಕ್ಷಯವನ್ನು ನಡೆಸಿದರು.

ಅನಂತರ ಪುರುಷಶ್ರೇಷ್ಠ ಅರ್ಜುನ-ಕೇಶವರು ಆಹ್ನಿಕವನ್ನು ಪೂರೈಸಿ ಯಥಾವಿಧಿಯಾಗಿ ಪ್ರಭು ಭವನನ್ನು ಪೂಜಿಸಿ ಶತ್ರುವಧೆಗೈಯುವ ನಿಶ್ಚಯಮಾಡಿಕೊಂಡು ಕೌರವ ಸೇನೆಯ ಕಡೆ ಧಾವಿಸಿ ಬಂದರು. ಗುಡುಗಿನಂತೆ ಶಬ್ಧಮಾಡುತ್ತಿದ್ದ, ಗಾಳಿಯಿಂದ ಬೀಸುತ್ತಿದ್ದ ಪಾತಕೆಗಳಿಂದ ಯುಕ್ತವಾದ, ಬಿಳಿಯ ಕುದುರೆಗಳು ಎಳೆದು ತರುತ್ತಿದ್ದ ಅವರ ರಥವು ಹತ್ತಿರಬರುತ್ತಿರುವುದನ್ನು ಶತ್ರುಗಳು ಉತ್ಸಾಹಶೂನ್ಯರಾಗಿ ನೋಡಿದರು. ಅನಂತರ ಅರ್ಜುನನು ರಣದಲ್ಲಿ ನರ್ತಿಸುತ್ತಿರುವನೋ ಎನ್ನುವಂತೆ ಗಾಂಡೀವವನ್ನು ಟೇಂಕರಿಸಿ ಶರಸಾಲುಗಳಿಂದ ಆಕಾಶವನ್ನೂ, ದಿಕ್ಕು-ಉಪದಿಕ್ಕುಗಳನ್ನೂ ತುಂಬಿಸಿದನು. ಬಿರುಗಾಳಿಯು ಮೇಘಮಂಡಲವನ್ನು ಚದುರಿಸಿಬಿಡುವಂತೆ ಅವನು ಬಾಣಗಳಿಂದ ವಿಮಾನದಂತಿರುವ ರಥಗಳನ್ನು, ಅವುಗಳ ಯಂತ್ರ, ಆಯುಧ, ಧ್ವಜಗಳೊಂದಿಗೆ ಮತ್ತು ಸಾರಥಿಗಳೊಂದಿಗೆ ದಿಕ್ಕಾಪಾಲಾಗಿ ಮಾಡಿದನು. ಅರ್ಜುನನು ಪತಾಕೆ-ಆಯುಧ-ಧ್ವಜ ಸಹಿತ ಆನೆಗಳನ್ನು, ಮಾವುತರನ್ನು, ಕುದುರೆಗಳನ್ನೂ, ಕುದುರೆಸವಾರರನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಅಂತಕನಂತೆ ಕ್ರುದ್ಧ ತಡೆಯಲಸಾಧ್ಯ ಆ ಮಹಾರಥನನ್ನು ದುರ್ಯೋಧನನು ಓರ್ವನೇ ವಿವಿಧ ಬಾಣಗಳಿಂದ ಪ್ರಹರಿಸಿ ಆಕ್ರಮಣಿಸಿದನು. ಅರ್ಜುನನು ಅವನ ಧನುಸ್ಸನ್ನೂ, ಸೂತನನ್ನೂ, ಕೇತುವನ್ನೂ, ಕುದುರೆಗಳನ್ನೂ ಏಳು ಸಾಯಕಗಳಿಂದ ನಾಶಗೊಳಿಸಿ ಒಂದೇ ಒಂದು ಪತ್ರಿಯಿಂದ ಅವನ ಚತ್ರವನ್ನೂ ತುಂಡರಿಸಿದನು. ದುರ್ಯೋಧನನನ್ನು ಸಂಹರಿಸಲು ಒಂಭತ್ತನೆಯ ಶ್ರೇಷ್ಠ ಬಾಣವೊಂದನ್ನು ಅವನು ತೆಗೆದು ಪ್ರಹರಿಸಲು ದ್ರೌಣಿಯು ಅದನ್ನು ಏಳು ಭಾಗಗಳನ್ನಾಗಿ ತುಂಡರಿಸಿದನು. ಆಗ ಅರ್ಜುನನು ದ್ರೌಣಿಯ ಧನುಸ್ಸನ್ನು ತುಂಡರಿಸಿ ಮತ್ತು ಶ್ರೇಷ್ಠ ಕುದುರೆಗಳನ್ನು ಬಾಣಗಳಿಂದ ಸಂಹರಿಸಿ ಕೃಪನ ಉಗ್ರ ಧನುಸ್ಸನ್ನೂ ತುಂಡರಿಸಿದನು. ಹಾರ್ದಿಕ್ಯನ ಧನುಸ್ಸು ಧ್ವಜಗಳನ್ನು ತುಂಡರಿಸಿ, ಅಶ್ವಗಳನ್ನು ಸಂಹರಿಸಿ, ದುಃಶಾಸನನ ಬಿಲ್ಲನ್ನು ಕತ್ತರಿಸಿಸಿ ಅರ್ಜುನನು ರಾಧೇಯನನ್ನು ಆಕ್ರಮಣಿಸಿದನು. ಕೂಡಲೇ ಕರ್ಣನು ತ್ವರೆಮಾಡಿ ಸಾತ್ಯಕಿಯನ್ನು ಬಿಟ್ಟು ಮೂರು ಶರಗಳಿಂದ ಅರ್ಜುನನನ್ನು ಹೊಡೆದು, ಇಪ್ಪತ್ತರಿಂದ ಮತ್ತು ಪುನಃ ಮೂರು ಶರಗಳಿಂದ ಕೃಷ್ಣ-ಪಾರ್ಥರನ್ನು ಹೊಡೆದನು. ಕೂಡಲೇ ಸಾತ್ಯಕಿಯು ಬಂದು ಕರ್ಣನನ್ನು ನಿಶಿತ ಶರಗಳಿಂದ ಹೊಡೆದು ಪುನಃ ಅವನನ್ನು ನೂರಾ ತೊಂಭತ್ತೊಂಭತ್ತು ಉಗ್ರ ಶರಗಳಿಂದ ಪ್ರಹರಿಸಿದನು. ಆಗ ಪಾಂಡವ ಪ್ರವೀರರೆಲ್ಲರೂ ಕರ್ಣನನ್ನು ಪೀಡಿಸತೊಡಗಿದರು: ಯುಧಾಮನ್ಯು, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಉತ್ತಮೌಜ, ಯುಯುತ್ಸು, ಯಮಳರು, ಪಾರ್ಷತ, ಚೇದಿ-ಕರೂಷ-ಮತ್ಯ್ಸರು, ಕೇಕಯರು, ಚೇಕಿತಾನರು, ಮತ್ತು ಧರ್ಮರಾಜ. ಉಗ್ರವಿಕ್ರಮ ರಥ-ಅಶ್ವ-ಗಜ-ಪದಾತಿಸೇನೆಗಳೊಡನೆ ಇವರುಗಳು ರಣದಲ್ಲಿ ಕರ್ಣನನ್ನು ಸುತ್ತುವರೆದು ನಾನಾ ಶಸ್ತ್ರಗಳಿಂದ ಮುಚ್ಚಿಬಿಟ್ಟರು. ಎಲ್ಲರೂ ಕರ್ಣನ ವಧೆಯನ್ನೇ ಉದ್ದೇಶವನ್ನಾಗಿಟ್ಟುಕೊಂಡು ಉಗ್ರ ಮಾತುಗಳನ್ನಾಡುತ್ತಾ ಸುತ್ತುವರೆದರು. ಅವರ ಆ ಶಸ್ತ್ರವೃಷ್ಟಿಯನ್ನು ನಿಶಿತ ಶರಗಳಿಂದ ಚೂರು ಚೂರಾಗಿ ಮಾಡಿ ಕರ್ಣನು ಭಿರುಗಾಳಿಯು ಮರಗಳನ್ನು ಬುಡಮೇಲಾಗಿ ಕಿತ್ತೆಸೆಯುವಂತೆ ಅವರೆಲ್ಲರನ್ನೂ ಬೀಳಿಸಿದನು. ಸಂಕ್ರುದ್ಧನಾದ ಕರ್ಣನು ರಥಿಗಳನ್ನೂ, ಮಹಾಗಾತ್ರದ ಆನೆಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ, ಶರವ್ರಾತಗಳನ್ನೂ ನಾಶಗೊಳಿಸುತ್ತಿರುವುದು ಕಾಣುತ್ತಿತ್ತು. ಕರ್ಣನ ಅಸ್ತ್ರತೇಜಸ್ಸಿನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಯ ದೇಹಗಳು ತುಂಡಾಗಿ ನಾಶಗೊಂಡಿದವು. ಪ್ರಾಯಶಃ ಪರಾಙ್ಮುಖರಾದರು.

ಕೂಡಲೆ ಸ್ವಯಂ ಅರ್ಜುನನು ಕರ್ಣನ ಅಸ್ತ್ರಗಳನ್ನು ಅಸ್ತ್ರಗಳಿಂದ ನಾಶಗೊಳಿಸಿದನು ಮತ್ತು ಶರವೃಷ್ಟಿಯಿಂದ ಆಕಾಶ, ದಿಕ್ಕುಗಳು ಮತ್ತು ಭೂಮಿಯನ್ನು ತುಂಬಿಸಿಬಿಟ್ಟನು. ಅವನ ಬಾಣಗಳು ಮುಸಲಗಳಂತೆ, ಶತ್ರಘ್ನಗಳಂತೆ ಮತ್ತು ಇನ್ನು ಉಳಿದವು ಉಗ್ರ ವಜ್ರಗಳಂತೆ ಬೀಳುತ್ತಿದ್ದವು. ಅವುಗಳಿಂದ ವಧಿಸಲ್ಪಡುತ್ತಿರುವ ಪದಾತಿ-ಅಶ್ವ-ರಥ-ಗಜಗಳಿಂದೊಡಗೂಡಿದ ಆ ಸೈನ್ಯವು ಕಣ್ಣುಮುಚ್ಚಿ ಗಟ್ಟಿಯಾಗಿ ಕೂಗುತ್ತಾ ಚಡಪಡಿಸತೊಡಗಿತು. ಶರಗಳಿಂದ ವಧಿಸಲ್ಪಡುತ್ತಿರುವ ಅಶ್ವ-ನರ-ಗಜಗಳು ಯುದ್ಧದಲ್ಲಿ ನಿಶ್ಚಿತ ಕೈವಲ್ಯವನ್ನು ಪಡೆದರು. ಅನ್ಯರು ಭೀತರಾಗಿ ಪಲಾಯನಗೈದರು. ಈ ರೀತಿ ಜಯೈಷಿಗಳು ಯುದ್ಧದಲ್ಲಿ ತೊಡಗಿರಲು ಭಾನುಮತನು ಅಸ್ತಾಚಲವನ್ನು ಸೇರಿ ಕಾಣದಂತಾದನು. ಕತ್ತಲೆಯಿಂದ ಮತ್ತು ವಿಶೇಷವಾದ ಧೂಳಿನಿಂದಾಗಿ ಅಲ್ಲಿ ಶುಭಾಶುಭವಾದ ಏನೂ ಕಾಣದಂತಾಯಿತು. ರಾತ್ರಿಯುದ್ಧಕ್ಕೆ ಹೆದರಿದ್ದ ಆ ಮಹೇಷ್ವಾಸರು ಸರ್ವವಾಹನಗಳೊಂದಿಗೆ ಹಿಂದೆಸರಿಯಲು ಪ್ರಾರಂಭಿಸಿದರು. ಆ ದಿನಕ್ಷಯದಲ್ಲಿ ಕೌರವರು ಹೊರಟುಹೋಗಲು ಜಯವನ್ನು ಗಳಿಸಿ ಸುಮನಸ್ಕರಾದ ಪಾರ್ಥರು ವಿವಿಧ ಮಂಗಳವಾದ್ಯಗಳನ್ನು ನುಡಿಸುತ್ತಾ, ಸಿಂಹನಾದಗಳಿಂದ ನರ್ತಿಸುತ್ತಾ, ಶತ್ರುಗಳನ್ನು ಹಾಸ್ಯಮಾಡುತ್ತಾ, ಕೃಷ್ಣಾರ್ಜುನರನ್ನು ಸ್ತುತಿಸುತ್ತಾ ತಮ್ಮ ಶಿಬಿರಕ್ಕೆ ತೆರಳಿದರು. ಆ ವೀರರಿಂದ ಹಿಂದೆಕರೆಸಲ್ಪಟ್ಟ ಸೈನಿಕರು ಮತ್ತು ನರೇಶ್ವರರೆಲ್ಲರೂ ಪಾಂಡವೇಯರನ್ನು ಆಶೀರ್ವದಿಸಿ ವಿಶ್ರಮಿಸಿದರು. ಹಿಂದೆಸರಿದ ಕುರುಪಾಂಡವ ನರೇಶ್ವರರು ಪ್ರಹೃಷ್ಟರಾಗಿ ಶಿಬಿರಗಳಿಗೆ ತೆರಳಿ ರಾತ್ರಿಯನ್ನು ಕಳೆದರು. ರುದ್ರನ ಕ್ರೀಡಾಸ್ಥಳದಂತಿರುವ ಘೋರ ರಣಭೂಮಿಗೆ ಯಕ್ಷ-ರಾಕ್ಷಸ-ಪಿಶಾಚಿ ಗಣಗಳು ಹೋಗಿ ಸೇರಿಕೊಂಡವು.

Leave a Reply

Your email address will not be published. Required fields are marked *