ಹದಿನೇಳನೇ ದಿನದ ಯುದ್ಧ - ೯: ಸಂಜಯನು ಧೃತರಾಷ್ಟ್ರನಿಗೆ ಕರ್ಣವಧೆಯನ್ನು ತಿಳಿಸಿದುದು
ಕರ್ಣನು ಹತನಾಗಲು ಆ ರಾತ್ರಿಯೇ ದೀನ ಗಾವಲ್ಗಣಿಯು ವಾಯುವೇಗ ಸಮಾನ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ನಾಗಪುರಕ್ಕೆ ಹೊರಟನು. ಹಸ್ತಿನಾಪುರಕ್ಕೆ ಹೋಗಿ ತುಂಬಾ ಉದ್ವಿಗ್ನಮಾನಸನಾದ ಅವನು ಬಾಂಧವಶೂನ್ಯ ಧೃತರಾಷ್ಟ್ರನ ಬಳಿ ಹೋದನು. ಅತ್ಯಂತ ದುಃಖದಿಂದ ಕಳೆಗುಂದಿದ್ದ ರಾಜನನ್ನು ಸ್ವಲ್ಪಹೊತ್ತು ನೋಡಿ ಅವನು ರಾಜನ ಪಾದಗಳಲ್ಲಿ ತಲೆಯನ್ನಿಟ್ಟು ಕೈಮುಗಿದು ವಂದಿಸಿದನು. ಯಥಾನ್ಯಾಯವಾಗಿ ಮಹೀಪತಿ ಧೃತರಾಷ್ಟ್ರನನ್ನು ಗೌರವಿಸಿ “ಅಯ್ಯೋ ಕಷ್ಟವೇ!” ಎಂದು ಹೇಳಿ ಅನಂತರ ಈ ಮಾತುಗಳನ್ನಾಡಿದನು: “ಕ್ಷಿತಿಪತೇ! ನಾನು ಸಂಜಯ! ನೀನು ಸುಖದಿಂದಿರುವೆಯಷ್ಟೇ? ನಿನ್ನದೇ ದೋಷದಿಂದ ಆಪತ್ತನ್ನು ತಂದುಕೊಂಡು ವಿಮೋಹಿತನಾಗಿಲ್ಲ ತಾನೇ? ವಿದುರ, ದ್ರೋಣ, ಗಾಂಗೇಯ ಮತ್ತು ಕೇಶವರು ಹೇಳಿದ್ದ ಹಿತ ಮಾತುಗಳನ್ನು ಸ್ವೀಕರಿಸದೇ ಇದ್ದುದನ್ನು ನೆನಪಿಸಿಕೊಂಡು ನೀನು ಈಗ ವ್ಯಥೆಪಡುತ್ತಿಲ್ಲ ತಾನೇ? ಪರಶುರಾಮ, ನಾರದ, ಮತ್ತು ಕಣ್ವರು ಸಭಾಂಗಣದಲ್ಲಿ ಹೇಳಿದ್ದ ಹಿತಮಾತುಗಳನ್ನು ಸ್ವೀಕರಿಸದೇ ಇದ್ದುದನ್ನು ಸ್ಮರಿಸಿಕೊಂಡು ಈಗ ನೀನು ವ್ಯಥೆಪಡುತ್ತಿಲ್ಲ ತಾನೇ? ನಿನ್ನದೇ ಹಿತವನ್ನು ಬಯಸುತ್ತಿದ್ದ ಸುಹೃದಯ ಭೀಷ್ಮ ಮತ್ತು ದ್ರೋಣಾದಿಗಳು ಶತ್ರುಗಳಿಂದ ಯುದ್ಧದಲ್ಲಿ ಹತರಾದರೆನ್ನುವುದನ್ನು ನೆನಪಿಸಿಕೊಳ್ಳುತ್ತಾ ನೀನು ವ್ಯಥೆಪಡುತ್ತಿಲ್ಲ ತಾನೇ?”
ಅಂಜಲೀ ಬದ್ಧನಾಗಿ ಈ ರೀತಿ ಹೇಳುತ್ತಿದ್ದ ಸೂತಪುತ್ರನಿಗೆ ರಾಜನು ದುಃಖಾರ್ತನಾಗಿ ದೀರ್ಘ ನಿಟ್ಟುಸಿರು ಬಿಡುತ್ತಾ ಹೇಳಿದನು: “ಸಂಜಯ! ದಿವ್ಯಾಸ್ತ್ರಗಳನ್ನು ಹೊಂದಿದ್ದ ಶೂರ ಗಾಂಗೇಯ ಮತ್ತು ಪರಮೇಷ್ವಾಸ ದ್ರೋಣರು ಹತರಾಗಲು ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಗಿತ್ತು. ಹತ್ತುದಿನಗಳ ಪರ್ಯಂತವಾಗಿ ಪ್ರತಿದಿನವೂ ಸಹಸ್ರಾರು ಕವಚಧಾರಿ ಮಹಾರಥರನ್ನು ಸಂಹರಿಸಿದ ತೇಜಸ್ವೀ ವಸುಸಂಭವನನ್ನು ಯಜ್ಞಸೇನನ ಮಗ ಶಿಖಂಡಿಯಿಂದ ರಕ್ಷಿಸಲ್ಪಟ್ಟ ಪಾಂಡವೇಯನು ಸಂಹರಿಸಿದನು ಎಂದು ಕೇಳಿ ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಯಿತು. ಯಾವ ಮಹಾತ್ಮನಿಗೆ ಭಾರ್ಗವನು ಪರಮಾಸ್ತ್ರವನ್ನು ನೀಡಿದ್ದನೋ, ಯಾರು ಸಾಕ್ಷಾದ್ ಪರಶುರಾಮನಿಂದ ಬಾಲ್ಯದಲ್ಲಿಯೇ ಧನುರ್ವೇದವನ್ನು ಪಡೆದುಕೊಂಡನೋ, ಯಾರ ಪ್ರಸಾದದಿಂದ ಮಹಾಬಲಶಾಲಿ ರಾಜಪುತ್ರ ಕೌಂತೇಯರು ಮತ್ತು ಅನ್ಯ ವಸುಧಾಧಿಪರು ಮಹಾರಥತ್ವವನ್ನು ಹೊಂದಿದರೋ ಆ ಸತ್ಯಸಂಧ ಮಹೇಷ್ವಾಸ ದ್ರೋಣನನ್ನು ಯುದ್ಧದಲ್ಲಿ ಧೃಷ್ಟದ್ಯುಮ್ನನು ಸಂಹರಿಸಿದನು ಎನ್ನುವುದನ್ನು ಕೇಳಿ ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಯಿತು. ಅಸ್ತ್ರವಿದ್ಯೆಯಲ್ಲಿ ಮೂರುಲೋಕಗಳಲ್ಲಿಯೂ ಯಾರ ಸಮಾನ ಯಾವ ಪುರುಷನೂ ಇಲ್ಲವೋ ಅಂತಹ ದ್ರೋಣನು ಹತನಾದುದನ್ನು ಕೇಳಿ ನನ್ನವರು ಏನು ಮಾಡಿದರು? ಸಂಶಪ್ತಕ ಸೇನೆಯನ್ನು ಮಹಾತ್ಮ ಪಾಂಡವ ಧನಂಜಯನು ವಿಕ್ರಮದಿಂದ ಯಮಸಾದನಕ್ಕೆ ಕಳುಹಿಸಲು, ಧೀಮತ ದ್ರೋಣಪುತ್ರನ ನಾರಾಯಣಾಸ್ತ್ರವೂ ನಾಶಗೊಳ್ಳಲು, ಅಳಿದುಳಿದ ಸೇನೆಗಳೊಂದಿಗೆ ನನ್ನವರು ಏನು ಮಾಡಿದರು? ದ್ರೋಣನು ಹತನಾದ ನಂತರ ನನ್ನವರು ಪಲಾಯನ ಮಾಡಿ ಸಾಗರದ ಮಧ್ಯೆ ನೌಕೆಯನ್ನು ಕಳೆದುಕೊಂಡವರಂತೆ ಶೋಕಸಾಗರದಲ್ಲಿ ಮುಳುಗಿಹೋಗಿರಬಹುದೆಂದು ನಾನು ಭಾವಿಸುತ್ತೇನೆ. ಸಂಜಯ! ಸೇನೆಗಳು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿರಲು ದುರ್ಯೋಧನ, ಕರ್ಣ, ಭೋಜ ಕೃತವರ್ಮ, ಮದ್ರರಾಜ ಶಲ್ಯ, ದ್ರೌಣಿ, ಕೃಪ, ಮತ್ತು ನನ್ನ ಉಳಿದ ಪುತ್ರರ ಮತ್ತು ಅನ್ಯರ ಮುಖಕಾಂತಿಯು ಹೇಗಿದ್ದಿತು? ರಣದಲ್ಲಿ ಪಾಂಡವರು ಮತ್ತು ನನ್ನವರ ನಡುವೆ ಏನೆಲ್ಲ ನಡೆಯಿತೋ ಅವೆಲ್ಲವನ್ನೂ ನಡೆದಂತೆಯೇ ನನಗೆ ಹೇಳು!”
ಸಂಜಯನು ಹೇಳಿದನು: “ಮಾರಿಷ! ಪಾಂಡವ ಕೌರವರ ನಡುವೆ ಏನು ನಡೆಯಿತೆನ್ನುವುದನ್ನು ಕೇಳಿ ವ್ಯಥೆಪಡಬಾರದು. ಏಕೆಂದರೆ ದೈವದಿಂದಲೇ ದುಃಖವು ಪ್ರಾಪ್ತವಾದಾಗ ತಿಳಿದವನು ವ್ಯಥೆಪಡುವುದಿಲ್ಲ. ಮನುಷ್ಯನಿಗೆ ನಡೆಯಬಾರದ್ದುದು ನಡೆಯಬಹುದು ಅಥವಾ ಒಳ್ಳೆಯದೇ ಆಗಬಹುದು. ಪ್ರಾಪ್ತವಾಗಿದ್ದುದಕ್ಕೆ ಅಥವಾ ಪ್ರಾಪ್ತವಾಗದೇ ಇದ್ದುದಕ್ಕೆ ತಿಳಿದವನು ವ್ಯಥೆಪಡುವುದಿಲ್ಲ.”
ಧೃತರಾಷ್ಟ್ರನು ಹೇಳಿದನು: “ಸಂಜಯ! ಇವೆಲ್ಲವೂ ದೈವೇಚ್ಛೆಯಿಂದ ನಡೆಯುತ್ತಿದೆಯೆಂದು ನನಗೆ ಮೊದಲೇ ತಿಳಿದಿದ್ದುದರಿಂದ ಏನನ್ನು ಕೇಳಿದರೂ ನನ್ನ ಮನಸ್ಸು ವ್ಯಥೆಗೊಳ್ಳುವುದಿಲ್ಲ. ನಿನಗಿಷ್ಟವಾದಂತೆ ಹೇಳುತ್ತಾ ಹೋಗು!”
ಸಂಜಯನು ಹೇಳಿದನು: “ಮಹೇಷ್ವಾಸ ದ್ರೋಣನು ಹತನಾಗಲು ನಿನ್ನ ಮಹಾರಥ ಪುತ್ರರು ಬಾಡಿದ ಮುಖವುಳ್ಳವರಾಗಿ ವಿಷಣ್ಣರಾಗಿ ಚೇತನವನ್ನೇ ಕಳೆದುಕೊಂಡರು. ಶೋಕಾರ್ತರಾಗಿ ತಲೆ ತಗ್ಗಿಸಿಕೊಂಡಿದ್ದ ಆ ಎಲ್ಲ ಶಸ್ತ್ರಭೃತರೂ ಪರಸ್ಪರರನ್ನು ನೋಡುತ್ತಲೂ ಇರಲಿಲ್ಲ ಮತ್ತು ಪರಸ್ಪರರೊಂದಿಗೆ ಮಾತನಾಡುತ್ತಲೂ ಇರಲಿಲ್ಲ. ಅವರನ್ನು ನೋಡಿ ನಿನ್ನ ಸೇನೆಗಳು ಕೂಡ ವ್ಯಥೆಗೊಂಡವು. ದುಃಖದಿಂದ ನಡುಗುತ್ತಾ ಮೇಲೆ ಆಕಾಶವನ್ನೇ ಮತ್ತೆ ಮತ್ತೆ ನೋಡುತ್ತಿದ್ದರು. ದ್ರೋಣನು ಕೆಳಗುರುಳಿದುದನ್ನು ನೋಡಿ ರಕ್ತದಿಂದ ಸಂಪೂರ್ಣ ತೋಯ್ದು ಹೋಗಿದ್ದ ಶಸ್ತ್ರಗಳು ಸೈನಿಕರ ಕೈಗಳಿಂದ ಕೆಳಗಿ ಜಾರಿ ಬಿದ್ದವು. ಅವರು ಕಟ್ಟಿಕೊಂಡಿದ್ದ ಆಯುಧಗಳೂ ಅನಿಷ್ಟರೀತಿಯಲ್ಲಿ ಜೋಲಾಡುತ್ತಾ ಆಕಾಶದಲ್ಲಿರುವ ನಕ್ಷತ್ರಗಳಂತೆ ಕಾಣುತ್ತಿದ್ದವು. ಹೀಗೆ ಆರ್ತರಾಗಿ ಸತ್ತ್ವವನ್ನೇ ಕಳೆದುಕೊಂಡವರಂತೆ ಸ್ತಬ್ಧವಾಗಿ ನಿಂತಿರುವ ತನ್ನ ಸೇನೆಯನ್ನು ನೋಡಿ ರಾಜಾ ದುರ್ಯೋಧನನು ಅವರಿಗೆ ಹೇಳಿದನು: “ಯುದ್ಧದಲ್ಲಿ ನಿಮ್ಮ ಬಾಹುವೀರ್ಯವನ್ನೇ ಆಶ್ರಯಿಸಿ ನಾನು ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸಿದ್ದೆನು. ಅದೇ ಯುದ್ಧವು ಈಗಲೂ ನಡೆಯುತ್ತಿದೆ. ಈಗ ದ್ರೋಣನು ಹತನಾದುದರಿಂದ ನೀವು ವಿಷಣ್ಣರಾಗಿರುವಂತೆ ತೋರುತ್ತಿರುವಿರಿ. ಸಮರದಲ್ಲಿ ಯುದ್ಧಮಾಡುವಾಗ ಸಾಮಾನ್ಯವಾಗಿ ಯೋಧರು ವಧಿಸಲ್ಪಡುತ್ತಲೇ ಇರುತ್ತಾರೆ. ರಣದಲ್ಲಿ ಯುದ್ಧಮಾಡುವವನಿಗೆ ಜಯವಾಗಲೀ ವಧೆಯಾಗಲೀ ಆಗಿಯೇ ಆಗುತ್ತದೆ. ಅದರಲ್ಲಿ ವಿಚಿತ್ರವಾದುದೇನಿದೆ? ಎಲ್ಲಕಡೆಗಳಿಂದ ಶತ್ರುಗಳನ್ನು ಮುತ್ತಿ ಯುದ್ಧಮಾಡಿ! ಯುದ್ಧದಲ್ಲಿ ದಿವ್ಯಾಸ್ತ್ರಗಳೊಂದಿಗೆ ಸಂಚರಿಸುತ್ತಿರುವ ಮಹೇಷ್ವಾಸ ಮಹಾಬಲ ಮಹಾತ್ಮ ವೈಕರ್ತನ ಕರ್ಣನನ್ನು ನೋಡಿ! ಇವನಿಂದ ಯುದ್ಧದಲ್ಲಿ ಭಯಗೊಂಡ ಕುಂತೀಪುತ್ರ ಧನಂಜಯನು ಕ್ಷುದ್ರಮೃಗವೊಂದು ಸಿಂಹದಿಂದ ಹಿಂದೆಸರಿಯುವಂತೆ ಹಿಂದೆಸರಿಯುತ್ತಾನೆ. ಸಾವಿರ ಆನೆಗಳ ಬಲವಿರುವ ಮಹಾಬಲ ಭೀಮಸೇನನನ್ನು ಕೂಡ ಇವನು ಮಾನುಷ ಯುದ್ಧದಿಂದಲೇ ದುರವಸ್ಥೆಗೆ ಈಡುಮಾಡುವವನಿದ್ದಾನೆ. ಮಾಯಾವೀ ಘಟೋತ್ಕಚನನ್ನು ರಣದಲ್ಲಿ ದಿವ್ಯಾಸ್ತ್ರ ಶಕ್ತಿಯಿಂದ ಸಂಹರಿಸಿ ಭೈರವವಾಗಿ ಕೂಗಿದ ಶೂರ ವೀರ ಸತ್ಯಸಂಧ ಧೀಮತ ಕರ್ಣನ ಬಾಹುಗಳ ಅಕ್ಷಯ್ಯ ಬಲವನ್ನು ಇಂದು ಯುದ್ಧದಲ್ಲಿ ನೋಡುವಿರಿ! ಮಹಾತ್ಮರೇ! ಪಾಂಡು-ಪಾಂಚಾಲ ಸೇನೆಗಳ ಮೇಲೆ ದ್ರೋಣಪುತ್ರ ಮತ್ತು ರಾಧೇಯರಿಬ್ಬರೂ ತಮ್ಮ ವಿಕ್ರಾಂತವನ್ನು ಪ್ರಯೋಗಿಸುವುದನ್ನು ನೀವು ನೋಡಲಿರುವಿರಿ. ನೀವೆಲ್ಲರೂ ಶೂರರು, ಪ್ರಾಜ್ಞರು, ಉತ್ತಮ ಕುಲದಲ್ಲಿ ಉದ್ಭವಿಸಿದವರು. ಶೀಲವಂತರು ಮತ್ತು ಕೃತಾಸ್ತ್ರರು. ಪರಸ್ಪರರನ್ನು ರಕ್ಷಿಸಲು ಸಮರ್ಥರು.”
ನೃಪನು ಹೀಗೆ ಹೇಳಲು ಮಹಾಬಲ ವೈಕರ್ತನ ಕರ್ಣನು ಜೋರಾಗಿ ಸಿಂಹನಾದಗೈದನು ಮತ್ತು ಯುದ್ಧವನ್ನು ಪ್ರಾರಂಭಿಸಿದನು. ಎಲ್ಲರೂ ನೋಡುತ್ತಿದ್ದಂತೆಯೇ ಅವನು ಸೃಂಜಯ-ಪಾಂಚಾಲ-ಕೇಕಯರು ಮತ್ತು ವಿದೇಹದವರೊಂದಿಗೆ ಮಹಾ ಕದನವನ್ನು ನಡೆಸಿದನು. ಅವನ ಧನುಸ್ಸಿನಿಂದ ಒಂದರ ಅಗ್ರಭಾಗವು ಇನ್ನೊಂದರ ಪುಂಖಗಳಿಗೆ ಅಂಟಿಕೊಂಡು ದುಂಬಿಗಳ ಸಾಲಿನಂತೆ ನೂರಾರು ಬಾಣಗಳು ಹೊರಬರುತ್ತಿದ್ದವು. ಅವನು ಸಹಸ್ರಾರು ಯೋಧರನ್ನು ಸಂಹರಿಸಿ ತರಸ್ವಿಗಳಾಗಿದ್ದ ಪಾಂಚಾಲ-ಪಾಂಡವರನ್ನು ಬಹಳವಾಗಿ ಪೀಡಿಸಿ, ಅರ್ಜುನನಿಂದ ಹತನಾದನು.”
ಇದನ್ನು ಕೇಳಿ ಅಂಬಿಕಾಸುತ ಧೃತರಾಷ್ಟ್ರನು ಶೋಕದ ಅಂತ್ಯವೇನೆನ್ನುವುದನ್ನೇ ಕಾಣದಾಗಿ, ಸುಯೋಧನನೇ ಹತನಾದನೆಂದು ತಿಳಿದು ವಿಹ್ವಲನಾಗಿ ಮೂರ್ಛೆಗೊಂಡ ಆನೆಯಂತೆ ನೆಲದ ಮೇಲೆ ಬಿದ್ದನು. ವಿಹ್ವಲ ರಾಜಸತ್ತಮನು ಹಾಗೆ ನೆಲದ ಮೇಲೆ ಬೀಳಲು ಸ್ತ್ರೀಯರ ಮಹಾ ಆರ್ತನಾದವುಂಟಾಯಿತು. ಮಹಾಘೋರ ಶೋಕಾರ್ಣವದಲ್ಲಿ ಮುಳುಗುತ್ತಿದ್ದ ಆ ಭರತಸ್ತ್ರೀಯರ ಕೂಗು ಭೂಮಿಯ ಎಲ್ಲದಿಕ್ಕುಗಳನ್ನೂ ತುಂಬಿತು. ರಾಜನ ಬಳಿಬಂದ ಗಾಂಧಾರಿಯೂ ಮತ್ತು ಅಂತಃಪುರದ ಸರ್ವ ಸ್ತ್ರೀಯರೂ ಮೂರ್ಛೆತಪ್ಪಿ ಭೂಮಿಯ ಮೇಲೆ ಬಿದ್ದರು. ಬಹಳವಾಗಿ ರೋದಿಸುತ್ತಾ ಪುನಃ ಪುನಃ ಮೂರ್ಛೆಹೋಗುತ್ತಿದ್ದ ಅವರನ್ನು ಸಂಜಯನು ಅನೇಕರೀತಿಯಲ್ಲಿ ಸಮಾಧಾನಗೊಳಿಸಲು ಪ್ರಯತ್ನಿಸಿದನು. ಸಮಾಧಾನಗೊಳಿಸಲ್ಪಡುತ್ತಿದ್ದರೂ ಕಣ್ಣೀರು ತುಂಬಿದ ಆ ಸ್ತ್ರೀಯರು ಭಿರುಗಾಳಿಗೆ ಸಿಲುಕಿದ ಬಾಳೆಯ ಗಿಡಗಳಂತೆ ನಡುಗಿ ತೂರಾಡುತ್ತಿದ್ದರು. ವಿದುರನೂ ಕೂಡ ನೀರನ್ನು ಸಿಂಪಡಿಸಿ ಪ್ರಜ್ಞಾಚಕ್ಷು ಈಶ್ವರ ರಾಜ ಕೌರವನನ್ನು ಸಮಾಧಾನಗೊಳಿಸತೊಡಗಿದನು. ಮೆಲ್ಲನೆ ಎಚ್ಚೆತ್ತು ಸ್ತ್ರೀಯರನ್ನು ಕೂಡ ಕಂಡ ರಾಜಾ ನೃಪನು ಉನ್ಮತ್ತನಾದವನಂತೆ ಸುಮ್ಮನಾಗಿಯೇ ಕುಳಿತಿದ್ದನು. ಅನಂತರ ತುಂಬಾ ಹೊತ್ತು ಯೋಚಿಸಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಅವನು ತನ್ನ ಮಕ್ಕಳನ್ನು ಬಹಳವಾಗಿ ನಿಂದಿಸಿದನು ಮತ್ತು ಪಾಂಡವರನ್ನು ಪ್ರಶಂಸಿಸಿದನು. ತನ್ನ ಮತ್ತು ಶಕುನಿ ಸೌಬಲನ ಬುದ್ಧಿಗಳನ್ನು ನಿಂದಿಸುತ್ತಿದ್ದನು. ತುಂಬಾಹೊತ್ತು ಯೋಚಿಸುತ್ತಿದ್ದು ಪುನಃ ಪುನಃ ನಡುಗುತ್ತಿದ್ದನು. ಪುನಃ ಧೈರ್ಯವನ್ನು ತಂದುಕೊಂಡು ಮನಸ್ಸನ್ನು ಸ್ಥಿರವಾಗಿರಿಸಿಕೊಂಡು ಮತ್ತೆ ಗಾವಲ್ಗಣಿ ಸೂತ ಸಂಜಯನನ್ನು ಪ್ರಶ್ನಿಸಿದನು: “ಸಂಜಯ! ನೀನು ಹೇಳಿದ ಮಾತುಗಳನ್ನು ನಾನು ಕೇಳಿಸಿಕೊಂಡೆನು. ದುರ್ಯೋಧನನು ಯಮಕ್ಷಯಕ್ಕೆ ಹೋಗಲಿಲ್ಲ ತಾನೇ? ನೀನೀಗ ಹೇಳಿದ ವಿಷಯವನ್ನೇ ಪುನಃ ಯಥಾವತ್ತಾಗಿ ಹೇಳು!”
ಇದನ್ನು ಕೇಳಿದ ಸೂತನು ರಾಜನಿಗೆ ಹೇಳಿದನು: “ರಾಜನ್! ಮಹಾರಥ ಮಕ್ಕಳೊಂದಿಗೆ, ಮಹೇಷ್ವಾಸ ಸಹೋದರರೊಂದಿಗೆ ಸೂತಪುತ್ರ ವೈಕರ್ತನನು ಹತನಾಗಿ ದೇಹವನ್ನು ತ್ಯಜಿಸಿದನು. ಯಶೋವಂತ ಪಾಂಡವ ಭೀಮಸೇನನು ಸಂಯುಗದಲ್ಲಿ ದುಃಶಾಸನನನ್ನೂ ಸಂಹರಿಸಿ ಕೋಪದಿಂದ ಅವನ ರಕ್ತವನ್ನೂ ಕುಡಿದನು.”
ಇದನ್ನು ಕೇಳಿ ಶೋಕವ್ಯಾಕುಲ ಚೇತನನಾದ ಅಂಬಿಕಾಸುತ ಧೃತರಾಷ್ಟ್ರನು ಸೂತ ಸಂಜಯನಿಗೆ ಹೇಳಿದನು: “ಅಯ್ಯಾ! ನಾನು ಮಾಡಿದ ಅನ್ಯಾಯದಿಂದಾಗಿ ವೈಕರ್ತನನು ಹತನಾದನೆಂದು ಕೇಳಿ ಶೋಕದಿಂದ ನನ್ನ ಮರ್ಮಸ್ಥಾನಗಳು ಕತ್ತರಿಸಲ್ಪಡುತ್ತಿವೆ. ಕೊರೆಯುತ್ತಿರುವ ಈ ದುಃಖವನ್ನು ಪಾರುಮಾಡಲು ಬಯಸುತ್ತಿರುವ ನನಗೆ ಕುರುಗಳಲ್ಲಿ ಮತ್ತು ಸೃಂಜಯರಲ್ಲಿ ಯಾವ ಪರಮ ಕೃತಾಸ್ತ್ರರು ಜೀವದಿಂದಿರುವರು ಮತ್ತು ಯಾರು ಮೃತರಾದರು ಎಂದು ಹೇಳು!”
ಸಂಜಯನು ಹೇಳಿದನು: “ರಾಜನ್! ಹತ್ತು ದಿನಗಳಲ್ಲಿ ಪ್ರತಿದಿನವೂ ಹತ್ತುಸಾವಿರ ಪಾಂಡವ ಯೋಧರನ್ನು ಸಂಹರಿಸಿ ದುರಾಧರ್ಷ ಪ್ರತಾಪವಾನ್ ಶಾಂತನವನು ಹತನಾದನು. ಅನಂತರ ಯುದ್ಧದಲ್ಲಿ ಪಾಂಚಾಲರ ರಥಗುಂಪುಗಳನ್ನು ನಾಶಗೊಳಿಸಿದ ಮಹೇಷ್ವಾಸ ದುರ್ಧರ್ಷ ರುಕ್ಮರಥ ದ್ರೋಣನು ಹತನಾದನು. ಮಹಾತ್ಮ ಭೀಷ್ಮ ಮತ್ತು ದ್ರೋಣರಿಂದ ಹತರಾಗದೇ ಉಳಿದ ಸೇನೆಯ ಅರ್ಧವನ್ನು ಸಂಹರಿಸಿ ವೈಕರ್ತನ ಕರ್ಣನೂ ಹತನಾದನು. ರಾಜಪುತ್ರ ವಿವಿಂಶತಿಯು ರಣದಲ್ಲಿ ನೂರಾರು ಆನರ್ತಯೋಧರನ್ನು ಸಂಹರಿಸಿ ಹತನಾದನು. ಇನ್ನು ನಿನ್ನ ಮಗ ವಿಕರ್ಣನು ವಾಹನ ಆಯುಧಗಳನ್ನು ಕಳೆದುಕೊಂಡರೂ ಶೂರನಾಗಿ ಕ್ಷತ್ರಧರ್ಮವನ್ನು ಸ್ಮರಿಸಿಕೊಂಡು ಶತ್ರುಗಳಿಗೆ ಎದುರಾಗಿ ನಿಂತು ದುರ್ಯೋಧನನು ಮಾಡಿದ್ದ ಅನೇಕ ಘೋರ ಪರಿಕ್ಲೇಶಗಳನ್ನು ಮತ್ತು ತಾನು ಮಾಡಿದ್ದ ಪ್ರತಿಜ್ಞೆಯನ್ನು ನೆನಪಿಸಿಕೊಂಡ ಭೀಮಸೇನನಿಂದ ಹತನಾದನು. ಅವಂತಿಯ ರಾಜಪುತ್ರ ವಿಂದಾನುವಿಂದರು ದುಷ್ಕರ ಸಾಹಸವನ್ನು ಮಾಡಿ ವೈವಸ್ವತಕ್ಷಯಕ್ಕೆ ಹೋದರು. ಸಿಂಧುರಾಷ್ಟ್ರವೇ ಮುಖ್ಯವಾಗಿ ಹತ್ತು ರಾಷ್ಟ್ರಗಳು ಯಾರ ಅಧೀನದಲ್ಲಿದ್ದವೋ, ಯಾರು ನಿನ್ನ ಶಾಸನದಡಿಯಲ್ಲಿದ್ದನೋ ಆ ವೀರನ ಹನ್ನೊಂದು ಅಕ್ಷೌಹಿಣೀ ಸೇನೆಗಳನ್ನೂ ನಿಶಿತ ಶರಗಳಿಂದ ಸೋಲಿಸಿ ಮಹಾವೀರ್ಯ ಜಯದ್ರಥನನ್ನು ಅರ್ಜುನನು ಸಂಹರಿಸಿದನು. ಹಾಗೆಯೇ ತಂದೆಯ ಶಾಸನಾನುಸಾರವಾಗಿಯೇ ನಡೆಯುತ್ತಿದ್ದ ದುರ್ಯೋಧನನ ಮಗ ತರಸ್ವೀ ಯುದ್ಧದುರ್ಮದ ಲಕ್ಷ್ಮಣನನ್ನು ಸೌಭದ್ರನು ಕೆಳಗುರುಳಿಸಿದನು. ಹಾಗೆಯೇ ದುಃಶಾಸನನ ಮಗ ವೀರ ಬಾಹುಶಾಲೀ ರಣೋತ್ಕಟನು ದ್ರೌಪದೇಯನ ವಿಕ್ರಮ್ಯದಿಂದ ಯಮಸಾದನಕ್ಕೆ ಹೋದನು. ಸಾಗರತೀರದಲ್ಲಿ ವಾಸಿಸುವ ಕಿರಾತರ ಅಧಿಪತಿ, ದೇವರಾಜನ ಸಖ, ಧರ್ಮಾತ್ಮ, ಬಹುಮತದಂತೆ ಪ್ರಿಯ ಸಖ, ಸದಾ ಕ್ಷತ್ರಧರ್ಮದಲ್ಲಿ ನಿರತ ಮಹೀಪಾಲ ಭಗದತ್ತನು ಧನಂಜಯನ ವಿಕ್ರಮದಿಂದ ಯಮಸಾದನಕ್ಕೆ ಹೋದನು. ಹಾಗೆಯೇ ಕೌರವರ ದಾಯಾದಿ ಮಹಾಯಶಸ್ವಿ, ಸೋಮದತ್ತನ ಮಗ ಶೂರ ಭೂರಿಶ್ರವನು ಯುದ್ಧದಲ್ಲಿ ಸಾತ್ಯಕಿಯಿಂದ ಹತನಾದನು. ಕ್ಷತ್ರಿಯರ ಧನುರ್ಧರ ಅಂಬಷ್ಠ ಶ್ರುತಾಯುವೂ ಕೂಡ ಯುದ್ಧದಲ್ಲಿ ನಿರ್ಭಯದಿಂದ ಹೋರಾಡಿ ಸವ್ಯಸಾಚಿಯಿಂದ ಹತನಾದನು.ಯುದ್ಧದಲ್ಲಿ ಸದಾ ಕೃತಾಸ್ತ್ರನಾಗಿದ್ದ ಯುದ್ಧದುರ್ಮದನಾಗಿದ್ದ ನಿನ್ನ ಮಗ ದುಃಶಾಸನನನ್ನು ಭೀಮಸೇನನು ಕೆಳಗುರುಳಿಸಿದನು. ಅನೇಕ ಸಾವಿರ ಆನೆಗಳ ಅದ್ಭುತ ಸೇನೆಯನ್ನು ಹೊಂದಿದ್ದ ಸುದಕ್ಷಿಣನು ಸಂಗ್ರಾಮದಲ್ಲಿ ಸವ್ಯಸಾಚಿಯಿಂದ ಹತನಾದನು. ಕೋಸಲರ ಅಧಿಪತಿಯು ಅನೇಕ ನೂರು ಶತ್ರುಗಳನ್ನು ಸಂಹರಿಸಿ ಸೌಭದ್ರನ ವಿಕ್ರಮ್ಯದಿಂದ ಯಮಸಾದನಕ್ಕೆ ಹೋದನು. ಭೀಮಸೇನನೊಂದಿಗೆ ಅನೇಕ ಬಾರಿ ಯುದ್ಧಮಾಡಿ ನಿನ್ನ ಮಗ ಮಹಾರಥ ಚಿತ್ರಸೇನನು ಭೀಮಸೇನನಿಂದ ಹತನಾದನು. ಶತ್ರುಗಳ ಭಯವನ್ನು ವರ್ಧಿಸುವ, ಖಡ್ಗ-ಗುರಾಣಿಗಳನ್ನು ಧರಿಸಿದ್ದ ಶ್ರೀಮಾನ್ ಶೂರ ಮದ್ರರಾಜನ ಮಗನು ಸೌಭದ್ರನಿಂದ ಹತನಾದನು. ಸಮರದಲ್ಲಿ ಕರ್ಣನ ಸಮನಾಗಿದ್ದ ಮಹಾತೇಜಸ್ವಿ ಶೀಘ್ರಾಸ್ತ್ರ, ಕೃತನಿಶ್ಚಯ ವೃಷಸೇನನು ಕರ್ಣನು ನೋಡುತ್ತಿದ್ದಂತೆಯೇ ಅಭಿಮನ್ಯುವಿನ ವಧೆಯನ್ನು ಮತ್ತು ತಾನು ಮಾಡಿದ ಪ್ರತಿಜ್ಞೆಯನ್ನು ನೆನಪಿಸಿಕೊಂಡ ಧನಂಜಯನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು. ನಿತ್ಯವೂ ಪಾಂಡವರೊಡನೆ ವೈರವನ್ನು ಸಾಧಿಸಿಕೊಂಡು ಬಂದಿದ್ದ ಪೃಥಿವೀಪತಿ ಶ್ರುತಾಯುಯು ತನ್ನ ವೈರವನ್ನು ಪ್ರಕಟಿಸಿ ಪಾರ್ಥನಿಂದ ಕೆಳಗುರುಳಿಸಲ್ಪಟ್ಟನು. ಸಹೋದರನಂತಿದ್ದ, ಸೋದರಮಾವನ ಮಗ, ಶಲ್ಯಪುತ್ರ ವಿಕ್ರಾಂತ ರುಕ್ಮರಥನನ್ನು ಯುದ್ಧದಲ್ಲಿ ಸಹದೇವನು ಸಂಹರಿಸಿದನು. ವೃದ್ಧನಾಗಿದ್ದ ರಾಜಾ ಭಗೀರಥ ಮತ್ತು ಕೇಕಯ ಬೃಹತ್ಕ್ಷತ್ರ ಇಬ್ಬರು ಪರಾಕ್ರಮಿಗಳೂ, ವಿಕ್ರಾಂತರೂ, ವೀರ್ಯವತ್ತರರೂ ಹತರಾದರು. ಕೃತಪ್ರಜ್ಞ ಮಹಾಬಲ ಭಗದತ್ತನ ಮಗನು ರಣದಲ್ಲಿ ಗಿಡುಗನಂತೆ ಸಂಚರಿಸುತ್ತಾ ನಕುಲನಿಂದ ಹತನಾದನು. ಹಾಗೆಯೇ ನಿನ್ನ ಪಿತಾಮಹ ಬಾಹ್ಲೀಕನು ಬಾಹ್ಲೀಕರೊಂದಿಗೆ ಭೀಮಸೇನನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು. ಮಾಗಧ ಜರಾಸಂಧನ ಮಗ ಜಯತ್ಸೇನನು ಯುದ್ಧದಲ್ಲಿ ಮಹಾತ್ಮ ಸೌಭದ್ರನಿಂದ ಹತನಾದನು. ನಿನ್ನ ಮಹಾರಥ ಮಕ್ಕಳಾದ ದುರ್ಮುಖ ಮತ್ತು ದುಃಸಹರು ಭೀಮಸೇನನ ಗದೆಯಿಂದ ಹತರಾದರು. ದುರ್ಮರ್ಷಣ, ದುರ್ವಿಷಹ ಮತ್ತು ದುರ್ಜಯರು ದುಷ್ಕರ ಕರ್ಮಗಳನ್ನೆಸಗಿ ವೈವಸ್ವತಕ್ಷಯವನ್ನು ಸೇರಿದರು. ನಿನ್ನ ಸಚಿವ ಪರಮ ವೀರ್ಯವಂತ ಸೂತ ವೃಷವರ್ಮನು ಭೀಮಸೇನನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು. ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದ ಪೌರವಮಹಾರಾಜನು ತನ್ನ ಗಣಗಳೊಂದಿಗೆ ಪಾಂಡುಪುತ್ರ ಸವ್ಯಸಾಚಿಯಿಂದ ಹತನಾದನು. ಎರಡು ಸಾವಿರ ಪ್ರಹಾರಿ ವಸಾಯತರೂ ವಿಕ್ರಾಂತ ಶೂರಸೇನರೂ ಎಲ್ಲರೂ ಯುದ್ಧದಲ್ಲಿ ಕೆಳಗುರುಳಿದರು. ಕವಚಿ ಪ್ರಹರಿ ಮದೋತ್ಕಟ ಅಭೀಷಾಹರೂ, ರಥೋದಾರ ಶಿಬಿಗಳೂ ಕಲಿಂಗರೊಂದಿಗೆ ಹತರಾದರು. ಗೋಕುಲದಲ್ಲಿ ಹುಟ್ಟಿ ಬೆಳೆದಿದ್ದ, ಯುದ್ಧದಲ್ಲಿ ಪರಮ ಕೋವಿದರಾಗಿದ್ದ ಅನೇಕ ಸಹಸ್ರ ಸಂಶಪ್ತಕಗಣಗಳು ಎಲ್ಲರೂ ಪಾರ್ಥನನ್ನು ಎದುರಿಸಿ ವೈವಸ್ವತಕ್ಷಯಕ್ಕೆ ಹೋದರು. ನಿನ್ನ ಬಾವಂದಿರು ಪರಾಕ್ರಾಂತ ರಾಜ ವೃಷಕ ಮತ್ತು ಅಚಲರು ನಿನಗಾಗಿ ಸವ್ಯಸಾಚಿಯಿಂದ ಹತರಾದರು. ಉಗ್ರಕರ್ಮಿ, ಕರ್ಮದಲ್ಲಿ ಹೆಸರುಗಳಿಸಿದ, ಮಹೇಷ್ವಾಸ ಶಾಲ್ವರಾಜನು ಭೀಮಸೇನನಿಂದ ಕೆಳಗುರುಳಿಸಲ್ಪಟ್ಟನು. ಪರಾಕ್ರಮಿ ಓಘವ ಮತ್ತು ಬೃಹಂತರು ಒಟ್ಟಿಗೇ ಮಿತ್ರನಿಗೋಸ್ಕರ ರಣದಲ್ಲಿ ಹೋರಾಡಿ ವೈವಸ್ವತಕ್ಷಯಕ್ಕೆ ಹೋದರು. ಹಾಗೆಯೇ ರಥಿಗಳಲ್ಲಿ ಶ್ರೇಷ್ಠ ಕ್ಷೇಮಧೂರ್ತಿಯು ಯುದ್ಧದಲ್ಲಿ ಭೀಮಸೇನನ ಗದೆಯಿಂದ ಹತನಾದನು. ಹಾಗೆಯೇ ರಾಜಾ ಜಲಸಂಧನು ರಣದಲ್ಲಿ ಮಹಾ ಕದನವನ್ನಾಡಿ ಸಾತ್ಯಕಿಯಿಂದ ಹತನಾದನು. ಕತ್ತೆಗಳನ್ನು ಕಟ್ಟಿದ್ದ ರಥದಲ್ಲಿ ಸಂಚರಿಸುತ್ತಿದ್ದ ರಾಕ್ಷಸೇಂದ್ರ ಅಲಾಯುಧನು ಘಟೋತ್ಕಚನ ವಿಕ್ರಮದಿಂದಾಗಿ ಯಮಸಾದನವನ್ನು ಸೇರಿದನು. ಸೂತಪುತ್ರ ರಾಧೇಯನೂ, ಅವನ ಮಹಾರಥ ಸಹೋದರರು, ಕೇಕಯರು ಎಲ್ಲರೂ ಸವ್ಯಸಾಚಿಯಿಂದ ಹತರಾದರು. ಮಾಲವರು, ಮದ್ರಕರು, ಉಗ್ರವಿಕ್ರಮಿ ದ್ರವಿಡರು, ಯೌಧೇಯರು, ಲಲಿತರು, ಕ್ಷುದ್ರಕರು, ಉಶೀನರರು, ಮಾವೇಲ್ಲಕರು, ತುಂಡಿಕೇರರು, ಸಾವಿತ್ರೀಪುತ್ರಕರು, ಪೂರ್ವದೇಶದವರು, ಪಶ್ಚಿಮದೇಶದವರು, ಉತ್ತರದವರು, ದಕ್ಷಿಣಾತ್ಯರು ಇವರೆಲ್ಲರೂ ಹತ್ತುಸಾವಿರ ಕಾಲಾಳುಸಮೂಹಗಳೊಂದಿಗೆ ರಥವ್ರಜಗಳೊಂದಿಗೆ, ಶ್ರೇಷ್ಠ ಆನೆಗಳೊಂದಿಗೆ ಹತರಾದರು. ಉತ್ತಮ ಕುಲದಲ್ಲಿ ಬೆಳೆದು ಪ್ರಯತ್ನಪಡುತ್ತಿದ್ದ ಕವಚ-ವಸ್ತ್ರ-ಭೂಷಣಗಳನ್ನು ಧರಿಸಿದ್ದ ಶೂರರು ಕಾಲದ ಮಹಾತ್ಮೆಯಿಂದಾಗಿ ಧ್ವಜ-ಆಯುಧಗಳೊಂದಿಗೆ ಪಾರ್ಥನಿಂದ ಸಮರದಲ್ಲಿ ಹತರಾದರು. ಹಾಗೆಯೇ ಪರಸ್ಪರರನ್ನು ವಧಿಸಲು ಬಯಸುತ್ತಿದ್ದ ಇನ್ನೂ ಇತರ ಅಮಿತಬಲಶಾಲಿ ಅನೇಕ ರಾಜರುಗಳೂ ತಮ್ಮ ಸೇನೆಗಳೊಂದಿಗೆ ರಣದಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಹತರಾದರು. ಇದು ನೀನು ಕೇಳಿದ್ದಲ್ಲವೇ? ಕರ್ಣಾರ್ಜುನರ ಸಮಾಗಮದಲ್ಲಿ ಈ ರೀತಿಯ ನಷ್ಟವುಂಟಾಯಿತು. ಆ ಪ್ರಹರಿಗಳಲ್ಲಿ ಶ್ರೇಷ್ಠ ಯುದ್ಧದುರ್ಮದ ಶೂರ ಕರ್ಣನು ಸಮರದ ರಣದಲ್ಲಿ ತ್ರೈಲೋಕ್ಯವಿಶ್ರುತವಾದ ಘೋರ ಮಹಾಯುದ್ಧವನ್ನು ಮಾಡಿ ಮಹೇಂದ್ರನೊಂದಿಗೆ ವೃತ್ರನು ಹೇಗೋ, ರಾಮನೊಂದಿಗೆ ರಾವಣನು ಹೇಗೋ, ಕೃಷ್ಣನಿಂದ ಮುರನು ರಣದಲ್ಲಿ ಕೆಳಗುರುಳಿಸಲ್ಪಟ್ಟು ಹೇಗೆ ಹತನಾದನೋ, ಕಾರ್ತವೀರ್ಯನು ಭಾರ್ಗವ ರಾಮನಿಂದ ಹೇಗೆ ಹತನಾದನೋ, ಹಾಗೆ ಅರ್ಜುನನೊಡನೆ ದ್ವೈರಥಯುದ್ಧಮಾಡಿ ಅಮಾತ್ಯ ಬಾಂಧವರೊಡನೆ ಹತನಾದನು. ಧಾರ್ತರಾಷ್ಟ್ರರಿಗೆ ಯಾರಿಂದ ಜಯದ ಆಸೆಯಿತ್ತೋ, ಮತ್ತು ಆ ವೈರಕ್ಕೆ ಮುಖ್ಯ ಕಾರಣನು ಯಾರಾಗಿದ್ದನೋ ಅವನನ್ನು ಪಾಂಡವರು ದಾಟಿಬಿಟ್ಟರು! ಹೀಗಾಗುತ್ತದೆಯೆನ್ನುವುದನ್ನು ನೀನು ಮೊದಲು ಯೋಚಿಸಿರಲಿಲ್ಲ. ಹಿತಾಕಾಂಕ್ಷಿಗಳು ಮತ್ತು ಬಂಧುಗಳು ಹೇಳುತ್ತಿದ್ದರೂ ನೀನು ಅವುಗಳಿಗೆ ಗಮನನೀಡದಿದ್ದುದಕ್ಕಾಗಿಯೇ ಈ ಮಹಾ ನಾಶದ ವ್ಯಸನವು ನಿನಗೆ ಪ್ರಾಪ್ತವಾಗಿದೆ. ನಿನ್ನ ರಾಜ್ಯಕಾಮಿ ಪುತ್ರರ ಹಿತವನ್ನೇ ಬಯಸಿದ ನೀನು ಪಾಂಡವರಿಗೆ ಅನೇಕ ಅಹಿತ ಕಾರ್ಯಗಳನ್ನು ಮಾಡಿದುದರ ಈ ಫಲವು ನಿನಗೆ ದೊರಕಿರುವುದು!”
ಧೃತರಾಷ್ಟ್ರನು ಹೇಳಿದನು: “ಅಯ್ಯಾ ಸಂಜಯ! ಯುದ್ಧದಲ್ಲಿ ಪಾಂಡವರಿಂದ ಹತರಾದ ನನ್ನವರ ಕುರಿತು ನೀನು ಹೇಳಿರುವೆ. ನನ್ನವರಿಂದ ಹತರಾದ ಪಾಂಡವರ ಕುರಿತು ಹೇಳು!”
ಸಂಜಯನು ಹೇಳಿದನು: “ಯುದ್ಧದಲ್ಲಿ ಮಹಾಬಲ ಕುಂತಯರು ಬಂಧು-ಅಮಾತ್ಯರೊಂದಿಗೆ ರಣದಲ್ಲಿ ಭೀಷ್ಮನಿಂದ ಕೆಳಗುರುಳಿಸಲ್ಪಟ್ಟರು. ಯುದ್ಧದ ವೀರ್ಯ-ಬಲಗಳಲ್ಲಿ ಕಿರೀಟಿಯ ಸಮನಾದ ಸತ್ಯಜಿತುವು ದ್ರೋಣನಿಂದ ರಣದಲ್ಲಿ ಹತನಾದನು. ಹಾಗೆಯೇ ವೃದ್ಧ ನೃಪರಾಗಿದ್ದ ಪರಾಕ್ರಮಿ ವಿರಾಟ-ದ್ರುಪದರು ಮಕ್ಕಳೊಂದಿಗೆ ದ್ರೋಣನಿಂದ ಹತರಾದರು. ಬಾಲಕನಾಗಿದ್ದರೂ ಸಮರದಲ್ಲಿ ಸವ್ಯಸಾಚಿ, ಕೇಶವ ಮತ್ತು ಬಲದೇವರ ಸಮನೆನಿಸಿಕೊಂಡಿದ್ದ ದುರ್ಧರ್ಷ ರಣ ವಿಶಾರದ ಅಭಿಮನ್ಯುವು ಮಹಾ ಕದನವನ್ನೆಸಗಿ ಷಡ್ರಥರಿಂದ ಸುತ್ತುವರೆಯಲ್ಪಟ್ಟು ಕೆಳಗುರುಳಿದನು. ಕ್ಷತ್ರಧರ್ಮವ್ಯವಸ್ಥಿತ ಆ ವೀರ ಸೌಭದ್ರನನ್ನು ರಣದಲ್ಲಿ ವಿರಥನನ್ನಾಗಿ ಮಾಡಿ ದುಃಶಾಸನನ ಮಗನು ಸಂಹರಿಸಿದನು. ಕೃತಾಸ್ತ್ರ ಮಹೇಷ್ವಾಸ ಯುದ್ಧದುರ್ಮದ ಬೃಹಂತನು ದುಃಶಾಸನನ ವಿಕ್ರಮದಿಂದ ಯಮಸಾದನಕ್ಕೆ ಹೋದನು. ಯುದ್ಧದುರ್ಮದ ಪರಾಕ್ರಮಿ ರಾಜ ಮಣಿಮಾನ್ ಮತ್ತು ದಂಡಧಾರರು ಮಿತ್ರನಿಗಾಗಿ ದ್ರೋಣನಿಂದ ಹತರಾದರು. ಮಹಾರಥ ಭೋಜರಾಜ ಅಂಶುಮಾನನು ಸೇನೆಯೊಂದಿಗೆ ಭಾರದ್ವಾಜ ದ್ರೋಣನ ವಿಕ್ರಮದಿಂದ ಯಮಸಾದನಕ್ಕೆ ಹೋದನು. ಚಿತ್ರಾಯುಧ ಮತ್ತು ಚಿತ್ರಯೋಧಿಗಳು ಮಹಾ ಕದನವನ್ನೆಸಗಿ ಚಿತ್ರಮಾರ್ಗಗಳಿಂದ ಕರ್ಣನ ವಿಕ್ರಮದಿಂದಾಗಿ ಯುದ್ಧದಲ್ಲಿ ಹತರಾದರು. ಯುದ್ಧದಲ್ಲಿ ವೃಕೋದರನ ಸಮನಾಗಿದ್ದ ದೃಢ ಕೇಕಯವಂಶಜನು ಭ್ರಾತ ಕೇಕಯನ ವಿಕ್ರಮದಿಂದಲೇ ಕೆಳಗುರುಳಿಸಲ್ಪಟ್ಟನು. ಗದಾಯೋಧೀ, ಪ್ರತಾಪವಾನ್, ಪರ್ವತರಾಜ ಜನಮೇಜಯನನ್ನು ನಿನ್ನ ಮಗ ದುರ್ಮುಖನು ಕೆಳಗುರುಳಿಸಿದನು. ಸೂರ್ಯಚಂದ್ರರಂತೆ ಮಿಂಚುತ್ತಿದ್ದ ನರವ್ಯಾಘ್ರ ಜೋಡಿ ರಾಜಕುಮಾರ ರೋಚಮಾನರಿಬ್ಬರನ್ನು ದ್ರೋಣನು ಶರಗಳನ್ನು ಪ್ರಯೋಗಿಸಿ ಸ್ವರ್ಗಕ್ಕೆ ಕಳುಹಿಸಿದನು. ಸವ್ಯಸಾಚಿಯ ಸೋದರ ಮಾವಂದಿರಾದ ನೃಪ ಪುರುಜಿತ್ ಮತ್ತು ಕುಂತಿಭೋಜರು, ಪರಾಕ್ರಾಂತರಾಗಿ ಮತ್ತು ಎದುರಾಳಿಗಳಾಗಿ ಯುದ್ಧಮಾಡುತ್ತಾ, ಅಸಾಧ್ಯ ಕೃತ್ಯಗಳನ್ನೆಸಗಿ ಕೊನೆಗೆ ದ್ರೋಣನ ಸಾಯಕಗಳಿಗೆ ಸಿಲುಕಿ ವೈವಸ್ವತಕ್ಷಯಕ್ಕೆ ಹೋಗಿ ಪುಣ್ಯ ಲೋಕಗಳನ್ನು ಸೇರಿದರು. ಅನೇಕ ಕಾಶೀವಾಸಿಯೋಧರಿಂದ ಪರಿವೃತರಾಗಿದ್ದ ಅಭಿಭೂ ಮತ್ತು ಕಾಶಿರಾಜರು ವಸುದಾನನ ಪುತ್ರನಿಂದ ದೇಹಾವಸಾನಹೊಂದಿದರು. ವೀರ್ಯವಂತರಾದ ಅಮಿತೌಜಸ, ಯುಧಾಮನ್ಯು ಮತ್ತು ಉತ್ತಮೌಜಸರು ನೂರಾರು ಶೂರರನ್ನು ಸಂಹರಿಸಿ ಕೊನೆಗೆ ರಣದಲ್ಲಿ ಶತ್ರುಗಳಿಂದ ಹತರಾದರು. ಪಾಂಚಾಲ್ಯ ಮಹೇಷ್ವಾಸ ಕ್ಷತ್ರಧರ್ಮ ಮತ್ತು ಕ್ಷತ್ರವರ್ಮ ಇಬ್ಬರೂ ದ್ರೋಣನಿಂದ ಯಮಸಾದನಕ್ಕೆ ಕಳುಹಿಸಲ್ಪಟ್ಟರು. ಶಿಖಂಡಿಯ ಮಗ ಸೇನಾಪತಿ ಕ್ಷತ್ರದೇವನು ಯುದ್ಧದಲ್ಲಿ ನಿನ್ನ ಮೊಮ್ಮಗ ಲಕ್ಷ್ಮಣನಿಂದ ಹತನಾದನು. ರಣದಲ್ಲಿ ಸಂಚರಿಸುತ್ತಿದ್ದ ಮಹಾರಥ ಮಹಾವೀರ್ಯ ತಂದೆ ಸುಚಿತ್ರ ಮತ್ತು ಮಗ ಚಿತ್ರಧರ್ಮರು ದ್ರೋಣನಿಂದ ಹತರಾದರು. ರಣದಲ್ಲಿ ಕದನವನ್ನಾಡಿ ವಾರ್ಧಕ್ಷೇಮಿಯು ಕೌರವ ಬಾಹ್ಲೀಕನಿಂದ ಕೆಳಗುರುಳಿಸಲ್ಪಟ್ಟನು. ಚೇದಿಗಳ ರಥಪ್ರವರ ಧೃಷ್ಟಕೇತುವು ಬಹುಕಷ್ಟಕರ ಕರ್ಮಗಳನ್ನೆಸಗಿ ವೈವಸ್ವತಕ್ಷಯಕ್ಕೆ ಹೋದನು. ಹಾಗೆಯೇ ಪರಾಕ್ರಾಂತ ಸತ್ಯಧೃತಿಯು ಪಾಂಡವರಿಗೋಸ್ಕರ ರಣದಲ್ಲಿ ಯುದ್ಧಮಾಡಿ ಯಮಸಾದನಕ್ಕೆ ಹೋದನು. ಶಿಶುಪಾಲನ ಮಗ ಸುಕೇತುವು ರಣದಲ್ಲಿ ಶತ್ರುಗಳನ್ನು ಸಂಹರಿಸಿ ಯುದ್ಧದಲ್ಲಿ ದ್ರೋಣನಿಂದ ಹತನಾದನು. ಹಾಗೆಯೇ ವೀರ ಸತ್ಯಧೃತಿ, ವೀರ್ಯವಾನ್ ಮದಿರಾಶ್ವ, ಮತ್ತು ವಿಕ್ರಾಂತ ಸೂರ್ಯದತ್ತರು ದ್ರೋಣನ ಸಾಯಕಗಳಿಂದ ಹತರಾದರು. ಯುದ್ಧಮಾಡುತ್ತಿದ್ದ ಪರಾಕ್ರಮೀ ಶ್ರೇಣಿಮಾನನೂ ಕೂಡ ಅಸಾಧ್ಯ ಕೃತ್ಯಗಳನ್ನೆಸಗಿ ವೈವಸ್ವತಕ್ಷಯಕ್ಕೆ ಹೋದನು. ಹಾಗೆಯೇ ರಣದಲ್ಲಿ ಯುದ್ಧಮಾಡುತ್ತಿದ್ದ ಪರಾಕ್ರಮೀ ಮಾಗಧನು ಭೀಷ್ಮನಿಂದ ಹತನಾದನು. ರಣದಲ್ಲಿ ಅತೀವ ಕದನವಾಡುತ್ತಿದ್ದ ವಸುದಾನನು ಭಾರದ್ವಾಜನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು. ನನ್ನನ್ನು ನೀನು ಕೇಳಿದಂತೆ, ಇವರು ಮತ್ತು ಇನ್ನೂ ಅನೇಕ ಪಾಂಡವರ ಮಹಾರಥರು ದ್ರೋಣನ ವಿಕ್ರಮದಿಂದಾಗಿ ಹತರಾದರು.”
ಧೃತರಾಷ್ಟ್ರನು ಹೇಳಿದನು: “ಸೂತ! ಇವರೆಲ್ಲರೂ ನನ್ನ ಸೇನೆಯಲ್ಲಿ ಹತರಾದ ಪ್ರಮುಖರು. ಅಲ್ಲಿ ಇನ್ನೂ ಜೀವಂತವಾಗಿರುವ ಕೆಲವರು ಯಾರು ಎನ್ನುವುದನ್ನು ಹೇಳು. ನೀನು ಹೇಳಿದ ಇವರೇ ಹತರಾಗಿ ಹೋದರೆಂದರೆ ಇನ್ನೂ ಹತರಾಗದೇ ಉಳಿದಿರುವವರು ಕೂಡ ಸ್ವರ್ಗವನ್ನು ಗೆದ್ದರೆಂದೇ ನನಗನ್ನಿಸುತ್ತದೆ!”
ಸಂಜಯನು ಹೇಳಿದನು: “ರಾಜನ್! ವೀರ ದ್ವಿಜಸತ್ತಮ ದ್ರೋಣನಿಂದ ಚತುರ್ವಿಧದ ವಿಚಿತ್ರ ಶುಭ್ರ ಮತ್ತು ದಿವ್ಯ ಮಹಾಸ್ತ್ರಗಳನ್ನು ಕಲಿತಿರುವ, ಮಾಡಿತೋರಿಸುವ, ಮಹಾರಥ ಕ್ಷಿಪ್ರಹಸ್ತ ದೃಢಾಯುಧ ದೃಢಮುಷ್ಟಿ ದೃಢೇಷು ವೀರ್ಯವಾನ್ ತರಸ್ವೀ ದ್ರೋಣಪುತ್ರನು ನಿನಗೋಸ್ಕರ ಯುದ್ಧಮಾಡಲು ಬಯಸಿ ಯುದ್ಧಸನ್ನದ್ಧನಾಗಿದ್ದಾನೆ. ಸಾತ್ವತರಲ್ಲಿಯೇ ಶ್ರೇಷ್ಠ ಮಹಾರಥ ಆನರ್ತವಾಸೀ ಹೃದಿಕನ ಮಗ ಭೋಜರಾಜ ಕೃತಾಸ್ತ್ರ ಕೃತವರ್ಮನು ಸ್ವಯಂ ನಿನಗೋಸ್ಕರ ಯುದ್ಧಮಾಡಲು ಇಚ್ಛಿಸಿ ವ್ಯವಸ್ಥಿತನಾಗಿದ್ದಾನೆ. ಬಹುಚಿತ್ರಾಸ್ತ್ರಯೋಧೀ ಮಹಾಬಲಶಾಲೀ ಶಾರದ್ವತ ಗೌತಮನೂ ಕೂಡ ಮಹಾಭಾರವನ್ನೂ ಹೊರಬಲ್ಲ ವಿಚಿತ್ರ ಧನುಸ್ಸನ್ನು ಹಿಡಿದು ಯುದ್ಧಮಾಡಲು ಸಿದ್ಧನಾಗಿರುವನು. ಯುದ್ಧದಲ್ಲಿ ಅಲುಗಾಡಿಸಲೂ ಅಸಾಧ್ಯನಾದ, ನಿನ್ನ ಸೇನಾಪತಿಗಳಲ್ಲಿಯೇ ಅಗ್ರಗಣ್ಯನಾದ, ವೇಗಶಾಲಿಯಾದ, ತನ್ನ ಮಾತನ್ನು ಸತ್ಯವನ್ನಾಗಿಸಲು ಯುದ್ಧದಲ್ಲಿ ಕರ್ಣನ ತೇಜೋವಧೆಯನ್ನು ಮಾಡುತ್ತೇನೆಂದು ಯುಧಿಷ್ಠಿರನಿಗೆ ಭರವಸೆಯನ್ನಿತ್ತು ತಂಗಿಯ ಮಕ್ಕಳಾದ ಪಾಂಡವರನ್ನು ಬಿಟ್ಟು ನಿನ್ನ ಕಡೆಗೆ ಆಗಮಿಸಿದ, ಇಂದ್ರನ ಸಮಾನ ಪರಾಕ್ರಮವುಳ್ಳ ದುರಾಧರ್ಷ, ಋತಾಯನಪುತ್ರ ಶಲ್ಯನು ನಿನ್ನ ಸಲುವಾಗಿ ಯುದ್ಧಮಾಡುವ ಇಚ್ಛೆಯಿಂದ ಸನ್ನದ್ಧನಾಗಿ ನಿಂತಿದ್ದಾನೆ. ನದೀಜ-ಕಾಂಬೋಜ, ವನಾಯುಜ ಮತ್ತು ಬಾಹ್ಲಿಕಗಳೇ ಮೊದಲಾದ ಉತ್ತಮ ಜಾತಿಯ ಸಿಂಧೂದೇಶದ ಮತ್ತು ಪರ್ವತ ಪ್ರದೇಶದ ಕುದುರೆಗಳಿಂದಲೂ ಮತ್ತು ತನ್ನ ಸೇನೆಗಳಿಂದಲೂ ಕೂಡಿದ ಗಾಂಧಾರರಾಜ ಶಕುನಿಯು ನಿನ್ನ ಸಲುವಾಗಿ ಯುದ್ಧಮಾಡುವ ಇಚ್ಛೆಯಿಂದ ಸನ್ನದ್ಧನಾಗಿ ನಿಂತಿದ್ದಾನೆ. ಕುರುಕುಲಪ್ರವೀರನಾದ ನಿನ್ನ ಮಗ ಕುರುಮಿತ್ರನು ಅಗ್ನಿ ಮತ್ತು ಸೂರ್ಯರ ಕಾಂತಿಗೆ ಸಮಾನ ಕಾಂತಿಯುಳ್ಳ ರಥದಲ್ಲಿ ಕುಳಿತು ಮೋಡವಿಲ್ಲದ ಆಕಾಶದಲ್ಲಿ ಸೂರ್ಯನು ಪ್ರಕಾಶಿಸುವಂತೆ ಪ್ರಕಾಶಿಸುತ್ತಾ ಯುದ್ಧ ಸನ್ನದ್ಧನಾಗಿದ್ದಾನೆ. ಆನೆಗಳ ಸೈನ್ಯದ ಮಧ್ಯದಲ್ಲಿ ತನ್ನ ಸುವರ್ಣಭೂಷಿತ ರಥದಲ್ಲಿ ಕುಳಿತು ನಿನ್ನ ಮಗ ಮಹಾವೀರ್ಯ ದುರ್ಯೋಧನನು ತನ್ನ ಮುಖ್ಯ ಸೇನೆಗಳೊಂದಿಗೆ ಯುದ್ಧಮಾಡಲು ಇಚ್ಛಿಸಿ ರಣದಲ್ಲಿ ಸನ್ನದ್ಧನಾಗಿ ನಿಂತಿದ್ದಾನೆ. ಕಮಲವರ್ಣ ಪುರುಷಶ್ರೇಷ್ಠ ದುರ್ಯೋಧನನು ಸುವರ್ಣಮಯ ವಿಚಿತ್ರಕವಚವನ್ನು ಧರಿಸಿ, ಸ್ವಲ್ಪವೇ ಹೊಗೆಯಿಂದ ಕೂಡಿರುವ ಯಜ್ಞೇಶ್ವರನಂತೆಯೂ ಮೋಡಗಳ ಮಧ್ಯದಲ್ಲಿರುವ ಸೂರ್ಯನಂತೆಯೂ ರಾಜರ ಮಧ್ಯದಲ್ಲಿ ಪ್ರಕಾಶಿಸುತ್ತಿರುವನು. ಹಾಗೆಯೇ ಕತ್ತಿ-ಗುರಾಣಿಗಳನ್ನು ಕೈಯಲ್ಲಿ ಹಿಡಿದು ಸುಷೇಣನೂ, ನಿನ್ನ ಮಗ ವೀರ ಸತ್ಯಸೇನನೂ ಹೃಷ್ಟಾತ್ಮರಾಗಿ ಸಮರದಲ್ಲಿ ಯುದ್ಧಮಾಡುವ ಇಚ್ಛೆಯಿಂದ ಚಿತ್ರಸೇನನೊಡನೆ ನಿಂತಿದ್ದಾರೆ. ಲಜ್ಜಾವಿನಯಶೀಲ ಬಲಶಾಲೀ ಭಾರತ ರಾಜಪುತ್ರ ಚಿತ್ರಾಯುಧ, ಶ್ರುತಕರ್ಮ, ಜಯ, ಶಲ, ಸತ್ಯವ್ರತ ಮತ್ತು ದುಃಶಲರು ಯುದ್ಧಮಾಡಲು ಬಯಸಿ ನಿಂತಿರುವರು. ಜೂಜುಗಾರರಿಗೆ ಅಧಿಪತಿಯೆನಿಸಿಕೊಂಡಿರುವ, ಶೂರಮಾನೀ, ಪ್ರತಿಯೊಂದು ಯುದ್ಧದಲ್ಲಿಯೂ ಶತ್ರುಗಳನ್ನು ಸಂಹರಿಸುತ್ತಾ ಬಂದಿರುವ, ರಥ-ಗಜಾಶ್ವ-ಪದಾತಿಗಳಿಂದ ಕೂಡಿರುವ ರಾಜಪುತ್ರ ಉಲೂಕನು ನಿನ್ನ ಸಲುವಾಗಿ ಯುದ್ಧಮಾಡಲು ಇಚ್ಛಿಸಿ ಸನ್ನದ್ಧನಾಗಿದ್ದಾನೆ. ಸತ್ಯಸಂಧ ಪ್ರಹಾರಿ ಮಾನಿನಿ ನರಾಗ್ರ ವೀರ ಶ್ರುತಾಯು, ಶ್ರುತಾಯುಧ, ಚಿತ್ರಾಂಗದ, ಮತ್ತು ವೀರ ಚಿತ್ರವರ್ಮರು ಸೇನೆಯಲ್ಲಿ ಸನ್ನದ್ಧರಾಗಿ ನಿಂತಿದ್ದಾರೆ. ಸತ್ಯಸಂಧ ಮಹಾತ್ಮ ಕರ್ಣನ ಮಗನು ನಿನ್ನ ಸಲುವಾಗಿ ಯುದ್ಧಮಾಡುವ ಇಚ್ಛೆಯಿಂದ ರಣಾಂಗಣದಲ್ಲಿ ವ್ಯವಸ್ಥಿತನಾಗಿದ್ದಾನೆ. ಹಾಗೆಯೇ ವರಾರ್ಹ ಲಘುಹಸ್ತ ಅಲ್ಪಧೈರ್ಯವಿರುವವರಿಂದ ಗೆಲ್ಲಲಸಾಧ್ಯ ಕರ್ಣನ ಇನ್ನಿಬ್ಬರು ಮಕ್ಕಳೂ ನಿನಗಾಗಿ ಯುದ್ಧಮಾಡಲು ನಿಂತಿರುವರು. ಇವರೇ ಮೊದಲಾದ ಪ್ರಮುಖವೀರರಿಂದಲೂ ಮತ್ತು ಅಮಿತ ಪ್ರಭಾವಶಾಲೀ ಯೋಧರಿಂದ ಕೂಡಿಕೊಂಡು ಆನೆಗಳ ಸೇನೆಗಳ ಮಧ್ಯಭಾಗದಲ್ಲಿ ಮಹೇಂದ್ರನಂತೆ ಕುರುರಾಜ ದುರ್ಯೋಧನನು ಜಯವನ್ನು ಬಯಸಿ ವ್ಯವಸ್ಥಿತನಾಗಿದ್ದಾನೆ.”
ಧೃತರಾಷ್ಟ್ರನು ಹೇಳಿದನು: “ಜೀವಂತವಾಗಿರುವವರ ಕುರಿತು ಹೇಳಿರುವೆ. ಇವರನ್ನು ಬಿಟ್ಟು ಅನ್ಯರು ಅಸುನೀಗಿರುವವರೆಂದು ಸ್ಪಷ್ಟವಾಗಿದೆ. ಇದೂವರೆಗಿನ ಆಗುಹೋಗುಗಳಿಂದಲೇ ಮುಂದೇನಾಗಬಹುದೆಂದು ವ್ಯಕ್ತವಾಗಿ, ಅದನ್ನು ನಾನು ಮನಗಂಡಿದ್ದೇನೆ.”
ಹೀಗೆ ಹೇಳಿ ಅಂಬಿಕಾಸುತ ಧೃತರಾಷ್ಟ್ರನು ತನ್ನ ಸೇನೆಯಲ್ಲಿ ಪ್ರಮುಖರು ಹತರಾಗಿ ಕೆಲವರು ಮಾತ್ರ ಉಳಿದಿರುವುದನ್ನು ಕೇಳಿ ವ್ಯಾಕುಲಗೊಂಡ ಇಂದ್ರಿಯಗಳುಳ್ಳವನಾಗಿ ಮೂರ್ಛೆಹೋದನು. ಎಚ್ಚರತಪ್ಪುವಾಗಲೇ ಆ ಜಗತೀಪತಿಯು “ಸಂಜಯ! ಸ್ವಲ್ಪಕಾಲ ಇಲ್ಲಿಯೇ ಇರು! ಮಹಾ ಅಪ್ರಿಯವಾಗಿರುವುದನ್ನು ಕೇಳಿ ನನ್ನ ಮನಸ್ಸು ವ್ಯಾಕುಲಗೊಂಡಿದೆ!” ಎಂದು ಹೇಳಿ ಕೂಡಲೇ ಮೂರ್ಛಿತನಾದನು.
ಮೇರುಪರ್ವತವು ಹರಿದುಹೋಯಿತೆಂಬುದು, ಮಹಾಮತಿ ಭಾರ್ಗವನ ಚಿತ್ತವು ಮೋಹಪರವಶವಾಯಿತು ಎನ್ನುವುದು, ಶತ್ರುಗಳಿಂದ ಭೀಮಕರ್ಮಿ ಇಂದ್ರನ ಪರಾಜಯವಾಯಿತೆನ್ನುವುದು, ಮಹಾದ್ಯುತಿ ಭಾನುವು ಆಕಾಶದಿಂದ ಕೆಳಕ್ಕೆ ಬಿದ್ದನೆನ್ನುವುದು, ಅಚಿಂತ್ಯ ಅಕ್ಷಯಾಂಭಸ ಸಮುದ್ರವು ಒಣಗಿಹೋಯಿತೆನ್ನುವುದು, ಮತ್ತು ಪುಣ್ಯ-ಪಾಪಕರ್ಮಗಳೆರಡು ವೈಫಲ್ಯವೆನ್ನುವುದು ಎಷ್ಟು ಭಯಂಕರವಾದುದೋ ಮತ್ತು ಭೂತಗಳನ್ನು ಎಷ್ಟು ಭ್ರಾಂತಿಗೊಳಿಸಬಲ್ಲದೋ ಹಾಗೆ ಅದ್ಭುತವಾಗಿರುವ ಕರ್ಣನ ನಿಧನವನ್ನು ಕೇಳಿ ಅವನು ನಂಬಲೇ ಇಲ್ಲ. ಜನೇಶ್ವರ ಧೃತರಾಷ್ಟ್ರನು ತನ್ನ ನಿಪುಣ ಬುದ್ಧಿಯಿಂದ ಚಿಂತಿಸಿ ಕರ್ಣನ ನಿಧನವಾಗಲಿಲ್ಲವೆಂದೇ ಯೋಚಿಸಿದನು. ಅಂಬಿಕಾಸುತ ಧೃತರಾಷ್ಟ್ರನು ತನ್ನಿಂದಾಗಿ ಮನುಷ್ಯ-ಪ್ರಾಣಿಗಳ ವಿನಾಶವು ನಡೆದುಹೋಯಿತೆಂದು ಭಾವಿಸಿ, ಶೋಕಾಗ್ನಿಯಿಂದ ಸುಡುತ್ತಾ, ಎದೆಯೊಡೆದವನಂತೆ ವಿಲಪಿಸಿದನು.
ಧೃತರಾಷ್ಟ್ರನು ಹೇಳಿದನು: “ಸಂಜಯ! ಅಧಿರಥನ ಮಗ ವೀರ ಕರ್ಣನು ಸಿಂಹ ಮತ್ತು ಆನೆಗಳ ವಿಕ್ರಮವನ್ನು ಹೊಂದಿದ್ದನು. ಗೂಳಿಯ ಹೆಗಲಿನಂಥಹ ಹೆಗಲನ್ನು ಹೊಂದಿದ್ದ ಅವನ ಕಣ್ಣುಗಳೂ, ನಡಿಗೆಯೂ ಗೂಳಿಯದ್ದಂತೆಯೇ ಇದ್ದವು. ವಜ್ರಸಮ ದೇಹವನ್ನು ಹೊಂದಿದ್ದ ಆ ಯುವಕನು ಗೂಳಿಯೊಡನೆ ಹೋರಾಡುವ ಗೂಳಿಯಂತೆ, ಶತ್ರುವು ಮಹೇಂದ್ರನೇ ಆಗಿದ್ದರೂ, ಯುದ್ಧದಿಂದ ಹಿಂದಿರುಗುತ್ತಿರಲಿಲ್ಲ. ಅವನ ಬಿಲ್ಲಿನ ಶಬ್ಧದಿಂದ ಮತ್ತು ಶರವೃಷ್ಟಿಗಳ ಶಬ್ಧದಿಂದ ರಥ, ಅಶ್ವ, ನರ, ಮಾತಂಗಗಳು ಯುದ್ಧದಲ್ಲಿ ನಿಲ್ಲುತ್ತಿರಲಿಲ್ಲ. ಶತ್ರುಸಂಘಗಳನ್ನು ನಾಶಪಡಿಸಬಲ್ಲ ಅಚ್ಯುತ ಮಹಾಬಾಹು ಕರ್ಣನನ್ನು ಆಶ್ರಯಿಸಿಯೇ ದುರ್ಯೋಧನನು ಮಹಾಬಲ ಪಾಂಡುಪುತ್ರರಿಂದ ವೈರವನ್ನು ಕಟ್ಟಿಕೊಂಡನು. ಅಂಥಹ ರಥಿಗಳಲ್ಲಿ ಪುರುಷವ್ಯಾಘ್ರ, ಶತ್ರುಗಳಿಗೆ ಸಹಿಸಲಸಾಧ್ಯ ವಿಕ್ರಮವುಳ್ಳ ಶ್ರೇಷ್ಠ ಕರ್ಣನು ಯುದ್ಧದಲ್ಲಿ ಪಾರ್ಥನಿಂದ ಹೇಗೆ ಹತನಾದನು? ತನ್ನದೇ ಬಾಹುಬಲಗಳನ್ನು ಆಶ್ರಯಿಸಿದ್ದ ಅವನು ನಿತ್ಯವೂ ಅಚ್ಯುತನನ್ನಾಗಲೀ ಧನಂಜಯನನ್ನಾಗಲೀ ಅನ್ಯ ವೃಷ್ಣಿಗಳನ್ನಾಗಲೀ ಗಣನೆಗೇ ತೆಗೆದುಕೊಳ್ಳುತ್ತಿರಲಿಲ್ಲ. “ಅಪರಾಜಿತ ಶಾಂಘ್ರ-ಗಾಂಡೀವಧನ್ವಿಗಳನ್ನು ಒಟ್ಟಿಗೇ ದಿವ್ಯ ರಥದಿಂದ ನಾನು ಒಬ್ಬನೇ ಕೆಳಗುರುಳಿಸುತ್ತೇನೆ” ಎಂದು ಅವನು ಸತತವೂ ತಲೆಯನ್ನು ಕೆಳಕ್ಕೆ ಮಾಡಿ ಕುಳಿತಿರುತ್ತಿದ್ದ ರಾಜ್ಯಕಾಮುಕ, ಆತುರ, ಮಂದ, ಲೋಭಮೋಹಿತ ದುರ್ಯೋಧನನಿಗೆ ಹೇಳುತ್ತಿದ್ದನು. ಹಿಂದೆ ಆ ವೀರ ಬಲಿಭೃತನು ಸಮರದಲ್ಲಿ ಅತಿಬಲಶಾಲಿ ಅಮಿತ್ರ ದುರ್ಜಯ ಗಾಂಧಾರರನ್ನು, ಮದ್ರಕರನ್ನು, ಮತ್ಸ್ಯರನ್ನು, ತ್ರಿಗರ್ತರನ್ನು, ತಂಗಣ-ಶಕರನ್ನೂ, ಪಾಂಚಾಲರನ್ನೂ, ವಿದೇಹ-ಕುಣಿಂದರನ್ನೂ, ಕಾಶಿ-ಕೋಸಲರನ್ನೂ, ಸುಹ್ಮಾನಂಗರನ್ನು, ಪುಂಡ್ರರನ್ನೂ, ನಿಷಾದರನ್ನೂ, ವಂಗ-ಕೀಚಕರನ್ನೂ, ವತ್ಸರನ್ನೂ, ಕಲಿಂಗರನ್ನೂ, ತರಲರನ್ನು, ಅಶ್ಮಕರನ್ನೂ, ಋಷಿಕರನ್ನೂ ಗೆದ್ದಿದ್ದನು. ಅಶ್ವಗಳಲ್ಲಿ ಉಚ್ಛೈಶ್ರವವು ಶ್ರೇಷ್ಠವಾದಂತೆ, ರಾಜರಲ್ಲಿ ವೈಶ್ರವಣನು ಶ್ರೇಷ್ಠನಾಗಿರುವಂತೆ, ದೇವತೆಗಳಲ್ಲಿ ಮಹೇಂದ್ರನು ಶ್ರೇಷ್ಠನಾಗಿರುವಂತೆ ಪ್ರಹರಿಗಳಲ್ಲಿ ಕರ್ಣನು ಶ್ರೇಷ್ಠನು. ರಾಜಾ ಮಾಗಧನೂ ಕೂಡ ಸಂಪತ್ತು-ಗೌರವಗಳಿಂದ ಅವನನ್ನು ತನ್ನ ಸಖನನ್ನಾಗಿ ಪಡೆದುಕೊಂಡು ಕೌರವ-ಯಾದವರನ್ನು ಬಿಟ್ಟು ಇತರ ಅನೇಕ ಪಾರ್ಥಿವ ಕ್ಷತ್ರಿಯರನ್ನು ಬಂಧನದಲ್ಲಿಟ್ಟಿದ್ದನು. ಅಂತಹ ಕರ್ಣನು ಸವ್ಯಸಾಚಿಯಿಂದ ದ್ವೈರಥದಲ್ಲಿ ಹತನಾದನೆಂದು ಕೇಳಿ ಸಾಗರದಲ್ಲಿ ಮುಳುಗಿದವನಂತೆ ನಾನು ಶೋಕಸಾಗರದಲ್ಲಿ ಮುಳುಗಿಹೋಗಿದ್ದೇನೆ. ಈ ತರಹದ ದುಃಖದಿಂದ ಕೂಡ ನನ್ನ ಈ ಹೃದಯವು ಒಡೆದುಹೋಗುತ್ತಿಲ್ಲವಲ್ಲ! ಒಡೆಯದೇ ಇರುವ ನನ್ನ ಈ ಹೃದಯವು ವಜ್ರಕ್ಕಿಂತಲೂ ಗಟ್ಟಿಯಾದುದೆಂದು ಭಾವಿಸುತ್ತೇನೆ. ಕುಲದವರು, ಸಂಬಂಧಿಗಳು ಮತ್ತು ಮಿತ್ರರ ಈ ಪರಾಜಯವನ್ನು ಕೇಳಿಯೂ ನನ್ನಂಥಹ ಬೇರೆ ಯಾವ ಪುರುಷನು ತಾನೆ ಜೀವವನ್ನು ತೊರೆಯದೇ ಇದ್ದಾನು? ವಿಷ, ಅಗ್ನಿ, ಅಥವಾ ಪರ್ವತ ಮೇಲಿನಿಂದ ಪ್ರಪಾತವನ್ನೇ ಆರಿಸಿಕೊಳ್ಳುತ್ತೇನೆ. ಈ ಕಷ್ಟ-ದುಃಖಗಳನ್ನು ಸಹಿಸಲು ಶಕ್ತನಾಗಿಲ್ಲ.”
ಸಂಜಯನು ಹೇಳಿದನು: “ಇಂದು ಸಂತರು ನಿನ್ನನ್ನು ಸಂಪತ್ತು, ಕುಲ, ಯಶಸ್ಸು, ತಪಸ್ಸು ಮತ್ತು ಶ್ರುತಿಗಳಲ್ಲಿ ನಾಹುಷ ಯಯಾತಿಗೆ ಸಮಾನನೆಂದು ಅಭಿಪ್ರಾಯಪಡುತ್ತಾರೆ. ಶ್ರುತಿಗಳಲ್ಲಿ ಮಹರ್ಷಿಗಳ ಸಮನಾಗಿರುವೆ. ಪಾರ್ಥಿವ! ಕೃತಕೃತ್ಯನಾಗಿರುವೆ. ನಿನ್ನನ್ನು ನೀನು ಸ್ಥಿರಗೊಳಿಸಿಕೋ! ಮನಸ್ಸನ್ನು ವಿಷಾದದಲ್ಲಿ ತೊಡಗಿಸಿಕೊಳ್ಳಬೇಡ!”
ಧೃತರಾಷ್ಟ್ರನು ಹೇಳಿದನು: “ಪರಶುರಾಮನಂತಿದ್ದ ಕರ್ಣನು ಯುದ್ಧದಲ್ಲಿ ಹತನಾದನೆಂದರೆ ದೈವವೇ ಮೇಲಿನದು ಮತ್ತು ಅನರ್ಥ ಪೌರುಷಕ್ಕೆ ಧಿಕ್ಕಾರ ಎಂದನ್ನಿಸುತ್ತದೆ. ಯುಧಿಷ್ಠಿರನ ಸೇನೆಯನ್ನೂ ಪಾಂಚಾಲರ ರಥರಾಶಿಗಳನ್ನೂ ಸಂಹರಿಸಿ, ಶರವರ್ಷಗಳಿಂದ ದಿಕ್ಕುಗಳನ್ನೂ ಬೆಳಗಿಸಿ, ವಜ್ರಹಸ್ತನು ಅಸುರರನ್ನು ಹೇಗೋ ಹಾಗೆ ರಣದಲ್ಲಿ ಪಾರ್ಥರನ್ನು ಭ್ರಾಂತರನ್ನಾಗಿಸಿ ಹೇಗೆ ತಾನೇ ಆ ಮಹಾರಥನು ಭಿರುಗಾಳಿಯಿಂದ ಬುಡಸಹಿತ ಕಿತ್ತು ಬೀಳಿಸಲ್ಪಟ್ಟ ವೃಕ್ಶದಂತೆ ಹತನಾಗಿ ಮಲಗಿದ್ದಾನೆ? ಸಮುದ್ರದ ದಡವನ್ನೇ ಕಾಣದ ನಾವಿಗನಂತೆ ನಾನು ಈ ಶೋಕಸಾಗರದ ಅಂತ್ಯವನ್ನೇ ಕಾಣದಂತಾಗಿದ್ದೇನೆ. ನನ್ನ ಚಿಂತೆಯು ಹೆಚ್ಚಾಗುತ್ತಿದೆ. ಜೀವನದಲ್ಲಿ ತೀವ್ರ ಜಿಗುಪ್ಸೆಯೂ ಹುಟ್ಟಿಕೊಂಡಿದೆ. ಕರ್ಣನ ನಿಧನ ಮತ್ತು ಫಲ್ಗುನನ ವಿಜಯದ ಕುರಿತು ಕೇಳಿ ಕರ್ಣನ ವಧೆಯು ನಂಬಲಿಕ್ಕಾಗದೇ ಇರುವಂತಹುದೆಂದು ಭಾವಿಸುತ್ತೇನೆ. ಪುರುಷವ್ಯಾಘ್ರ ಕರ್ಣನು ಹತನಾದನೆಂದು ಕೇಳಿಯೂ ಕೂಡ ಒಡೆದುಹೋಗದೇ ಇರುವ ನನ್ನ ಈ ಸುದೃಢ ಹೃದಯವು ನಿಜವಾಗಿಯೂ ವಜ್ರದಿಂದ ಮಾಡಿದ್ದಾಗಿರಬಹುದು! ಕರ್ಣನು ಹತನಾದನೆಂದು ಕೇಳಿಯೂ ಕೂಡ ಸುದುಃಖಿತನಾದ ನಾನು ಜೀವಿಸಿದ್ದೇನೆಂದರೆ, ಹಿಂದೆ ದೇವತೆಗಳು ನನಗೆ ಸುದೀರ್ಘ ಆಯುಸ್ಸನ್ನು ನೀಡಿರುವುದು ಸತ್ಯ. ಸಂಜಯ! ನನ್ನ ಈ ಜೀವಿತಕ್ಕೇ ಧಿಕ್ಕಾರ! ಇಂದು ನಾನು ಸುಹೃದಯರನ್ನು ಕಳೆದುಕೊಂಡಿದ್ದೇನೆ. ಇಂದು ನಾನು ನಿಂದನೀಯ ದಶೆಯನ್ನು ಹೊಂದಿದ್ದೇನೆ. ಸಾಮಾನ್ಯನಂತೆ ವರ್ತಿಸುತ್ತಿದ್ದೇನೆ. ಮೂಢನಾದ ನಾನು ಸರ್ವರಿಗೂ ಶೋಚನೀಯನಾಗಿದ್ದೇನೆ. ಹಿಂದೆ ಸರ್ವಲೋಕಗಳಿಂದಲೂ ಸತ್ಕೃತನಾಗಿದ್ದ ನಾನು ಹೇಗೆ ತಾನೇ ಶತ್ರುಗಳಿಂದ ಅವಮಾನಿತನಾಗಿ ಜೀವಿಸಬಲ್ಲೆ? ದುಃಖದ ಮೇಲೆ ದುಃಖದ ವ್ಯಸನವು ನನಗೆ ಬಂದೊದಗಿದೆಯಲ್ಲಾ! ಭೀಷ್ಮವಧೆ, ನಂತರ ಮಹಾತ್ಮ ದ್ರೋಣನ ವಧೆ ಹಾಗೂ ಸೂತಪುತ್ರನು ಹತನಾದ ನಂತರ ಯುದ್ಧದಲ್ಲಿ ಉಳಿದುಹೋಗಿರುವವರನ್ನು ಯಾರನ್ನೂ ನಾನು ಕಾಣುತ್ತಿಲ್ಲ. ಯುದ್ಧದಲ್ಲಿ ಅನೇಕ ಸಾಯಕಗಳನ್ನು ಪ್ರಯೋಗಿಸಿ ಸಂಹರಿಸುತ್ತಿದ್ದ ಆ ಶೂರನೇ ನನ್ನ ಪುತ್ರರಿಗೆ ತೀರಪ್ರಾಯನಾಗಿದ್ದನು. ಆ ಪುರುಷರ್ಷಭನ ಹೊರತಾಗಿ ನನ್ನ ಜೀವಿತದಲ್ಲಿ ಇನ್ನು ಅರ್ಥವೇನಿದೆ? ಸಾಯಕಾರ್ದಿತ ಆ ಅತಿರಥನು ನಿಜವಾಗಿಯೂ ರಥದಿಂದ ಕೆಳಕ್ಕೆ ಬಿದ್ದಿರಬೇಕು! ವಜ್ರಾಯುಧ ಪ್ರಹಾರದಿಂದ ಪರ್ವತಶಿಖರವು ಕೆಳಗುರುಳುವಂತೆ, ಮದಿಸಿದ ಮಾತಂಗದಿಂದ ಕೆಳಗುರುಳಸಲ್ಪಟ್ಟ ಮಾತಂಗದಂತೆ ರುಧಿರೋಕ್ಷಿತನಾಗಿ ಮಲಗಿರುವ ಅವನು ಪೃಥ್ವಿಯನ್ನೇ ಶೋಭೆಗೊಳಿಸಿದ್ದಾನೆ. ಧಾರ್ತರಾಷ್ಟ್ರರಿಗೆ ಬಲವಾಗಿದ್ದ, ಪಾಂಡವರಿಗೆ ಭಯವಾಗಿದ್ದ ಮತ್ತು ಧನುಷ್ಮತರಿಗೆ ಆದರ್ಶಪ್ರಾಯ ಕರ್ಣನು ಅರ್ಜುನನಿಂದ ಹತನಾದನು! ಪುತ್ರರಿಗೆ ಅಭಯಂಕರನಾಗಿದ್ದ ಮತ್ತು ಶಕ್ರನಷ್ಟೇ ಬಲಶಾಲಿಯಾಗಿದ್ದ ಆ ವೀರ ಮಹೇಷ್ವಾಸ ವೀರನು ಹತನಾಗಿ ಮಲಗಿದ್ದಾನೆ! ಹೆಳವನಿಗೆ ಮಾರ್ಗಗಮನಮಾಡಲು ಸಾಧ್ಯವಾಗದಂತೆ, ದರಿದ್ರನ ಆಸೆಗಳು ಪೂರೈಸದಂತೆ, ಜಲಬಿಂದುಗಳು ಬಾಯಾರಿದವನ ಬಾಯಾರಿಕೆಯನ್ನು ಹೋಗಲಾಡಿಸದಂತೆ ದುರ್ಯೋಧನನ ಆಶಯಗಳೂ ಕೈಗೂಡದಂತಾಯಿತು. ಯಾವುದೋ ರೀತಿಯಲ್ಲಿ ಯೋಚಿಸಿ ಕಾರ್ಯಮಾಡಿದರೆ ಆ ಕಾರ್ಯವು ಬೇರೆಯೇ ರೀತಿಯಲ್ಲಿ ನಡೆದುಹೋಗುತ್ತದೆ. ಅಯ್ಯೋ! ದೈವವೇ ಬಲಶಾಲಿಯು. ಕಾಲವನ್ನು ಮೀರಲು ಸಾಧ್ಯವಿಲ್ಲ! ನನ್ನ ಪುತ್ರ ದುಃಶಾಸನನು ಕೃಪಣನಾಗಿ, ದೀನಾತ್ಮನಾಗಿ, ದೀನಪೌರುಷನಾಗಿ ಪಲಾಯನಮಾಡುತ್ತಿರುವಾಗ ಹತನಾಗಲಿಲ್ಲ ತಾನೇ? ಸಂಯುಗದಲ್ಲಿ ಅವನು ನೀಚರಂತೆ ನಡೆದುಕೊಳ್ಳಲಿಲ್ಲ ತಾನೇ? ಕ್ಷತ್ರಿಯರು ಹತರಾಗುವಂತೆಯೇ ನನ್ನ ಶೂರನೂ ಹತನಾದ ತಾನೇ? ಯುದ್ಧವನ್ನು ಮಾಡಬೇಡ ಎಂದು ಸರ್ವದಾ ಹೇಳುತ್ತಿದ್ದ ಯುಧಿಷ್ಠಿರನ ಪಥ್ಯ-ಔಷಧಗಳಂತಿದ್ದ ಮಾತನ್ನು ಮೂಢ ದುರ್ಯೋಧನನು ಸ್ವೀಕರಿಸಲಿಲ್ಲ. ಶರತಲ್ಪದಲ್ಲಿ ಮಲಗಿದ್ದ ಮಹಾತ್ಮ ಭೀಷ್ಮನು ಪಾನೀಯವನ್ನು ಯಾಚಿಸಲು ಪಾರ್ಥನು ಮೇದಿನೀತಲವನ್ನು ಭೇದಿಸಿದ್ದನು. ಪಾಂಡವನು ಜಲಧಾರೆಯನ್ನು ತಂದಿದ್ದನ್ನು ನೋಡಿ ಆ ಮಹಾಬಾಹುವು “ಮಗನೇ! ಪಾಂಡವರೊಂದಿಗೆ ಶಾಂತಿಸಂಧಾನ ಮಾಡಿಕೋ!” ಎಂದು ಹೇಳಿದ್ದನು. “ಸಂಧಿಯಿಂದ ಶಾಂತಿಯುಂಟಾಗುತ್ತದೆ. ನನ್ನ ಅಂತ್ಯದೊಂದಿಗೆ ನಿಮ್ಮ ಯುದ್ಧದ ಅಂತ್ಯವೂ ಆಗಲಿ. ಪಾಂಡುಸುತರೊಂದಿಗೆ ಭ್ರಾತೃಭಾವದಿಂದ ಪೃಥ್ವಿಯನ್ನು ಭೋಗಿಸು!” ಆ ದೀರ್ಘದರ್ಷಿಯ ಮಾತಿನಂತೆ ಮಾಡದೇ ಇದ್ದುದರಿಂದಲೇ ಇದು ಪ್ರಾಪ್ತವಾಗಿದೆ ಎಂದು ನನ್ನ ಮಗನು ಈಗ ಶೋಕಿಸುತ್ತಿರಬಹುದು. ನಾನಾದರೋ ದ್ಯೂತದ ಕಾರಣದಿಂದಾಗಿ ಅಮಾತ್ಯ-ಪುತ್ರರನ್ನು ಕಳೆದುಕೊಂಡು, ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಯಂತೆ ಮಹಾ ಕಷ್ಟದಲ್ಲಿ ಸಿಲುಕಿದ್ದೇನೆ. ಆಟವಾಡುತ್ತಿರುವ ಬಾಲಕರು ಪಕ್ಷಿಯನ್ನು ಹಿಡಿದು ಅದರ ರೆಕ್ಕೆಗಳನ್ನು ಹೇಗೆ ಕತ್ತರಿಸಿ ಬಿಟ್ಟು ಬಿಡುತ್ತಾರೋ ಹಾಗೆ ನಾನೂ ಕೂಡ ರೆಕ್ಕೆಗಳನ್ನು ಕಳೆದುಕೊಂಡು ಎಲ್ಲಿಗೆ ಹಾರಿಹೋಗಬೇಕೆಂದು ತಿಳಿಯದೇ ಕಷ್ಟಕ್ಕೊಳಗಾಗಿದ್ದೇನೆ. ಕ್ಷೀಣನಾಗಿದ್ದೇನೆ. ಸರ್ವಸಂಪತ್ತನ್ನೂ ಕಳೆದುಕೊಂಡಿದ್ದೇನೆ. ಬಂಧು-ಬಾಂಧವ ರಹಿತನಾಗಿದ್ದೇನೆ. ಶತ್ರುವಶನಾಗಿ ದೀನನಾಗಿರುವ ನಾನು ಯಾವ ದಿಕ್ಕಿನಲ್ಲಿ ಓಡಿ ಹೋಗಲಿ? ದುರ್ಯೋಧನನ ರಾಜ್ಯವೃದ್ಧಿಗಾಗಿ ಪ್ರಭು ಕರ್ಣನು ಪೃಥ್ವಿಯನ್ನೇ ಗೆದ್ದಿದ್ದನು. ಅವನು ವೀರ್ಯಶಾಲೀ ಸಮರ್ಥ ಶೂರ ಪಾಂಡವರಿಗೆ ಸೋತನು! ಆ ಮಹೇಷ್ವಾಸ ಕರ್ಣನು ಯುದ್ಧದಲ್ಲಿ ಕಿರೀಟಿಯಿಂದ ಹತನಾದಾಗ ಅವನನ್ನು ಯಾವ ವೀರರು ಸುತ್ತುವರೆದಿದ್ದರು ಎನ್ನುವುದನ್ನು ನನಗೆ ಹೇಳು! ಪರಿತ್ಯಕ್ತನಾಗಿ ರಣದಲ್ಲಿ ಏಕಾಂಗಿಯಾಗಿದ್ದಾಗ ಅವನನ್ನು ಪಾಂಡವರು ಸಂಹರಿಸಲಿಲ್ಲ ತಾನೇ? ಹಿಂದೆ ನೀನು ವೀರನು ಕೆಳಗುರುಳಿಸಲ್ಪಟ್ಟನು ಎಂದು ಹೇಳಿದ್ದೆ! ಸಮರದಲ್ಲಿ ಸರ್ವಶಸ್ತ್ರಭೃತ ಶ್ರೇಷ್ಠ ಭೀಷ್ಮನು ಯುದ್ಧಮಾಡದೇ ಇದ್ದಾಗ ಅವನನ್ನು ಶಿಖಂಡಿಯು ಉತ್ತಮ ಸಾಯಕಗಳಿಂದ ಕೆಳಗುರುಳಿಸಿದನು. ಹಾಗೆಯೇ ಯುದ್ಧದಲ್ಲಿ ಮಹೇಷ್ವಾಸ ದ್ರೋಣನು ಅನೇಕ ಶರಗಳಿಂದ ಗಾಯಗೊಂಡು ಸರ್ವಾಯುಧಗಳನ್ನೂ ಕೆಳಗಿಟ್ಟು ಯೋಗಯುಕ್ತನಾಗಿದ್ದಾಗ ದ್ರೌಪದಿ ಧೃಷ್ಟದ್ಯುಮ್ನನು ಖಡ್ಗವನ್ನು ಮೇಲೆತ್ತಿ ಅವನನ್ನು ಸಂಹರಿಸಿದನು! ವಿಶೇಷ ದುರ್ಬಲರಾಗಿದ್ದಾಗ ಚಲದಿಂದ ಭೀಷ್ಮ-ದ್ರೋಣರು ಕೆಳಗುರುಳಿಸಲ್ಪಟ್ಟರು ಎಂದು ನನಗೆ ನೀನು ಹೇಳಿದ್ದೆ. ಏಕೆಂದರೆ ಸಮರದಲ್ಲಿ ಯುದ್ಧಮಾಡುತ್ತಿದ್ದ ಭೀಷ್ಮ-ದ್ರೋಣರನ್ನು ಸ್ವಯಂ ವಜ್ರಭೃತನೇ ನ್ಯಾಯಮಾರ್ಗದಲ್ಲಿ ಸಂಹರಿಸಲಾರ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಯುದ್ಧದಲ್ಲಿ ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಇಂದ್ರೋಪಮ ವೀರ ಕರ್ಣನನ್ನು ಮೃತ್ಯುವು ಹೇಗೆ ಮುಟ್ಟಿತು? ಯಾರ ಕುಂಡಲಗಳನ್ನು ಸ್ವೀಕರಿಸಿ ಪುರಂದರನು ಪ್ರತಿಯಾಗಿ ಕನಕಭೂಷಣ ವಿದ್ಯುತ್ಪಭೆಯ ದಿವ್ಯ ಶಕ್ತಿಯನ್ನು ನೀಡಿದ್ದನೋ, ಯಾರಲ್ಲಿ ಕನಕಭೂಷಣ ರೆಕ್ಕೆಯುಳ್ಳ ಸರ್ಪಮುಖದ ದಿವ್ಯ ಶರವಿದ್ದಿತೋ ಆ ಶತ್ರುಹಂತಕ ಅರಿಸೂದನನು ಹೇಗೆ ಹತನಾದನು? ಜಾಮದಗ್ನಿಯಿಂದ ಮಹಾಘೋರ ಬ್ರಹ್ಮಾಸ್ತ್ರವನ್ನು ಕಲಿತುಕೊಂಡು ಭೀಷ್ಮ-ದ್ರೋಣರೇ ಮೊದಲಾದ ಮಹಾರಥ ವೀರರನ್ನು ಕೀಳಾಗಿ ಕಾಣುತ್ತಿದ್ದ, ಶರಪೀಡಿತ ದ್ರೋಣಮುಖ್ಯರು ವಿಮುಖರಾಗುತ್ತಿದ್ದುದನ್ನು ನೋಡಿ ಮಹಾಬಾಹು ಸೌಭದ್ರನ ಕಾರ್ಮುಕವನ್ನು ಶರಗಳಿಂದ ತುಂಡರಿಸಿದ, ಸಾವಿರ ಆನೆಗಳ ಪ್ರಾಣವುಳ್ಳ, ವಾಯುವಿನಂತೆ ವೇಗವುಳ್ಳ, ಅಚ್ಯುತ. ಸಹೋದರ ಭೀಮನನನ್ನು ವಿರಥನನ್ನಾಗಿಸಿ ಅಪಹಾಸ್ಯಮಾಡಿದ, ಸಹದೇವನನ್ನು ಸನ್ನತಪರ್ವ ಶರಗಳಿಂದ ಸೋಲಿಸಿ ವಿರಥನನ್ನಾಗಿ ಮಾಡಿ ಧರ್ಮವನ್ನು ತಿಳಿದು ಕೃಪೆಯಿಂದ ಸಂಹರಿಸದಿದ್ದ, ಸಹಸ್ರ ಮಾಯೆಗಳನ್ನು ಧ್ವಂಸಿಸಿ ರಣೋತ್ಕಟ ರಾಕ್ಷಸೇಂದ್ರ ಘಟೋತ್ಕಚನನ್ನು ಶಕ್ರನಿತ್ತ ಶಕ್ತಿಯಿಂದ ಸಂಹರಿಸಿದ, ಯಾರಿಗೆ ಹೆದರಿ ಧನಂಜಯನು ಇಷ್ಟು ದಿವಸಗಳು ದ್ವೈರಥಯುದ್ಧಕ್ಕೆ ಬಂದಿರಲಿಲ್ಲವೋ ಅಂತಹ ಮಹಾವೀರನು ಹೇಗೆ ರಣದಲ್ಲಿ ಹತನಾದನು? ಅವನ ರಥವು ತುಂಡಾಗಿರದಿದ್ದರೆ, ಧನುಸ್ಸು ತುಂಡಾಗಿರದಿದ್ದರೆ, ಅಥವಾ ಅಸ್ತ್ರಗಳೇನಾದರೂ ಹಾಳಾಗಿರದಿದ್ದರೆ ಅವನು ಹೇಗೆ ತಾನೆ ಶತ್ರುಗಳಿಂದ ಹತನಾಗುತ್ತಿದ್ದನು? ಮಹಾಧನುಸ್ಸನ್ನು ಟೇಂಕರಿಸುವ, ಘೋರಶರಗಳನ್ನೂ ದಿವ್ಯಾಸ್ತ್ರಗಳನ್ನೂ ಯುದ್ಧದಲ್ಲಿ ಪ್ರಯೋಗಿಸುವ, ಶಾರ್ದೂಲದಂತಹ ವೇಗವುಳ್ಳ ಆ ಪುರುಷಶಾರ್ದೂಲ ಕರ್ಣನನ್ನು ರಣದಲ್ಲಿ ಗೆಲ್ಲಲು ಯಾರುತಾನೆ ಶಕ್ಯರು? ಅವನು ಹತನಾದನೆಂದು ನೀನು ನನಗೆ ಹೇಳುತ್ತಿರುವೆ! ನಿಶ್ಚಯವಾಗಿಯೂ ಅವನ ಧನುಸ್ಸು ತುಂಡಾಗಿದ್ದಿರಬೇಕು ಅಥವಾ ರಥವು ನೆಲದಲ್ಲಿ ಹುಗಿದಿದ್ದಿರಬೇಕು ಅಥವಾ ಅವನ ಅಸ್ತ್ರಗಳು ನಷ್ಟವಾಗಿದ್ದಿರಬಹುದು. ಇವುಗಳಲ್ಲದೇ ಅವನ ನಾಶಕ್ಕೆ ಬೇರೆ ಕಾರಣಗಳನ್ನು ನಾನು ಕಾಣುತ್ತಿಲ್ಲ! ಸಂಜಯ! ಅರ್ಜುನನನ್ನು ಕೊಲ್ಲದೆಯೇ ಪಾದಗಳನ್ನು ತೊಳೆಯಿಸಿಕೊಳ್ಳುವುದಿಲ್ಲವೆಂಬ ಮಹಾಘೋರವ್ರತವು ಯಾವ ಮಹಾತ್ಮನದ್ದಾಗಿತ್ತೋ, ಯಾರ ಭೀತಿಯಿಂದ ಪುರುಷರ್ಷಭ ಧರ್ಮರಾಜ ಯುಧಿಷ್ಠಿರನು ವನದಲ್ಲಿ ಹದಿಮೂರುವರ್ಷಗಳಲ್ಲಿ ನಿತ್ಯವೂ ನಿದ್ದೆಯನ್ನು ಪಡೆದಿರಲಿಲ್ಲವೋ, ಯಾವ ಮಹಾತ್ಮ ವೀರ್ಯವಂತನ ವೀರ್ಯವನ್ನು ಸಮಾಶ್ರಯಿಸಿ ನನ್ನ ಪುತ್ರನು ಪಾಂಡವರ ಭಾರ್ಯೆಯನ್ನು ಬಲಾತ್ಕಾರವಾಗಿ ಸಭೆಗೆ ಎಳೆದು ತಂದನೋ, ಕುರುಸಂಸದಿಯ ಸಭಾಮಧ್ಯದಲ್ಲಿ ಪಾಂಡವರೂ ಕೂಡ ನೋಡುತ್ತಿದ್ದಂತೆ ಪಾಂಚಾಲಿಯನ್ನು ದಾಸಭಾರ್ಯೆಯೆಂದು ಯಾರು ಕರೆದನೋ, ಗಾಂಡೀವದಿಂದ ಹೊರಡುವ ಉಗ್ರ ಶರಗಳ ಸ್ಪರ್ಶಗಳ ಕುರಿತೂ ಯೋಚಿಸದೇ ಯಾರು ಪಾರ್ಥರು ನೋಡುತ್ತಿದ್ದಂತೆಯೇ “ಕೃಷ್ಣೇ! ನೀನೀಗ ಪತಿಗಳಿಲ್ಲದವಳಾಗಿರುವೆ!” ಎಂದು ಹೇಳಿದ್ದನೋ, ಸ್ವಬಾಹುಬಲವನ್ನು ಆಶ್ರಯಿಸಿದ ಯಾರಿಗೆ ಪುತ್ರ-ಜನಾರ್ದನರೊಡನಿರುವ ಪಾರ್ಥನಮೇಲೆ ಮುಹೂರ್ತಕಾಲವೂ ಭಯವಿದ್ದಿರಲಿಲ್ಲವೋ, ಅಂಥವನನ್ನು ವಾಸವನೊಂದಿಗೆ ದೇವತೆಗಳೂ ವಧಿಸಲಾರರೆಂದು ನನಗನ್ನಿಸಿತ್ತು. ಅಂಥವನು ಪಾಂಡವರಿಂದ ಹೇಗೆ ವಧಿಸಲ್ಪಟ್ಟನು? ಆಧಿರಥನು ಮೌರ್ವಿಯನ್ನು ಮುಟ್ಟುತ್ತಿದ್ದಾಗ ಮತ್ತು ಕೈಚೀಲವನ್ನು ಕಟ್ಟಿಕೊಳ್ಳುತ್ತಿದ್ದಾಗ ಯಾವ ಪುರುಷನೂ ಅವನ ಎದಿರು ನಿಲ್ಲುವ ಧೈರ್ಯಮಾಡುತ್ತಿರಲಿಲ್ಲ. ಈ ಮೇದಿನಿಯು ಸೋಮಸೂರ್ಯರ ಪ್ರಭೆಗಳಿಂದ ಹೀನವಾಗಬಹುದು. ಆದರೆ ಸಮರದಲ್ಲಿ ಪಲಾಯನಮಾಡದಿದ್ದ ಆ ಪುರುಷೇಂದ್ರನ ವಧೆಯು ಅಸಂಭವವು. ಮಂದ ದುರ್ಬುದ್ಧಿ ಪುತ್ರಕ ದುರ್ಯೋಧನನು ಭ್ರಾತ ದುಃಶಾಸನನ ಸಹಾಯದಿಂದ ವಾಸುದೇವನಾಡಿದುದನ್ನು ಸ್ವೀಕರಿಸದೇ ಈಗ ವೃಷಭಸ್ಕಂದ ಕರ್ಣನು ಕೆಳಗುರುಳಿದುದನ್ನು ಮತ್ತು ದುಃಶಾಸನನು ಹತನಾಗಿದುದನ್ನು ನೋಡಿ ಶೋಕಿಸುತ್ತಿರಬಹುದಲ್ಲವೇ? ವೈಕರ್ತನನು ಸವ್ಯಸಾಚಿಯಿಂದ ದ್ವೈರಥದಲ್ಲಿ ಹತನಾದುದನ್ನು ಕೇಳಿ ಮತ್ತು ವಿಜಯಿ ಪಾಂಡವರನ್ನು ನೋಡಿ ದುರ್ಯೋಧನನು ಏನನ್ನಾದರೂ ಹೇಳಿದನೇ? ಸಂಯುಗದಲ್ಲಿ ದುರ್ಮರ್ಷಣ ಮತ್ತು ವೃಷಸೇನರು ಹತರಾದುದನ್ನು ಕೇಳಿ, ಮಹಾರಥರಿಂದ ವಧಿಸಲ್ಪಡುತ್ತಿದ್ದ ಸೇನೆಯು ಭಗ್ನವಾದುದನ್ನು ನೋಡಿ, ಪಲಾಯನಪರಾಯಣ ರಾಜ ರಥಿಗಳು ಪರಾಙ್ಮುಖರಾಗಿ ಓಡಿ ಹೋಗುತ್ತಿರುವುದನ್ನು ನೋಡಿ ನನ್ನ ಮಗನು ಶೋಕಿಸುತ್ತಿರಬಹುದಲ್ಲವೇ?
“ಯಾರ ಮಾತನ್ನೂ ಕೇಳದ, ಅಭಿಮಾನಿಯಾದ, ಬಾಲಬುದ್ಧಿ ಮತ್ತು ಅಸಹನಶೀಲ ದುರ್ಯೋಧನನು ತನ್ನ ಸೇನೆಯು ಉತ್ಸಾಹಹೀನವಾಗಿರುವುದನ್ನು ನೋಡಿ ಏನನ್ನಾದರೂ ಹೇಳಿದನೇ? ಸಂಯುಗದಲ್ಲಿ ಭೀಮಸೇನನು ಭ್ರಾತರನನ್ನು ಕೊಂದು ರಕ್ತವನ್ನು ಕುಡಿಯುತ್ತಿದ್ದಾಗ ದುರ್ಯೋಧನನು ಏನನ್ನಾದರೂ ಹೇಳಿದನೇ? ಸಭೆಯಲ್ಲಿ “ಕರ್ಣನು ರಣದಲ್ಲಿ ಅರ್ಜುನನನ್ನು ಕೊಲ್ಲುತ್ತಾನೆ” ಎಂದು ಗಾಂಧಾರರಾಜನಿಗೆ ಹೇಳಿದ್ದ ಅವನು, ಕರ್ಣನೇ ಹತನಾಗಲು ಏನು ಹೇಳಿದನು? ಹಿಂದೆ ದ್ಯೂತದಲ್ಲಿ ಪಾಂಡವರನ್ನು ವಂಚಿಸಿ ಹೃಷ್ಟನಾಗಿದ್ದ ಸೌಬಲ ಶಕುನಿಯು ಕರ್ಣನು ಹತನಾದಾಗ ಏನು ಹೇಳಿದನು? ಕರ್ಣನು ಹತನಾದುದನ್ನು ನೋಡಿ ಮಹೇಷ್ವಾಸ ಸಾತ್ವತರ ಮಹಾರಥ ಹಾರ್ದಿಕ್ಯ ಕೃತವರ್ಮನು ಏನು ಹೇಳಿದನು? ಬ್ರಾಹ್ಮಣ-ಕ್ಷತ್ರಿಯ-ವೈಶ್ಯರು ಯಾರಿಂದ ಧನುರ್ವೇದದ ಶಿಕ್ಷಣವನ್ನು ಪಡೆಯಲು ಬಯಸುತ್ತಾರೋ ಆ ಧೀಮತ ಯುವಕ ರೂಪಸಂಪನ್ನ ಸುಂದರ ಮಹಾಯಶಸ್ವಿ ದ್ರೋಣಪುತ್ರ ಅಶ್ವತ್ಥಾಮನು ಕರ್ಣನು ಹತನಾದಾಗ ಏನು ಹೇಳಿದನು? ಕರ್ಣನು ಹತನಾಗಲು ಧನುರ್ವೇದದಲ್ಲಿ ಆಚಾರ್ಯತ್ವವನ್ನು ಪಡೆದಿರುವ ಪರಮತತ್ವವಿದು ಶಾರದ್ವತ ಕೃಪನು ಏನು ಹೇಳಿದನು? ಮದ್ರರಾಜ ಮಹೇಷ್ವಾಸ ಸಮಿತಿಶೋಭನ ಶಲ್ಯನು ಕರ್ಣನು ಕೆಳಗುರುಳಿದುದೆಲ್ಲವನ್ನೂ ನೋಡಿದ್ದನು. ಅವನು ಮತ್ತು ಯುದ್ಧಮಾಡಲು ಆಗಮಿಸಿದ್ದ ಪೃಥ್ವಿಯ ರಾಜರು ವೈಕರ್ತನನು ಹತನಾದುದನ್ನು ನೋಡಿ ಏನು ಹೇಳಿದರು? ರಥವ್ಯಾಗ್ರ, ನರರ್ಷಭ ಕರ್ಣನು ಹತನಾಗಲು ಉಳಿದ ಸೇನೆಯ ಮುಖದಲ್ಲಿ ಯಾರಿದ್ದರು? ರಥಿಗಳಲ್ಲಿ ಶ್ರೇಷ್ಠ ಮದ್ರರಾಜ ಶಲ್ಯನು ವೈಕರ್ತನನ ಸಾರಥ್ಯವನ್ನು ಹೇಗೆ ಸ್ವೀಕರಿಸಿದನು ಎನ್ನುವುದನ್ನು ನನಗೆ ಹೇಳು. ಸಂಯುಗದಲ್ಲಿ ಸೂತಪುತ್ರ ಕರ್ಣನ ಬಲಚಕ್ರವನ್ನು ಯಾರು ರಕ್ಷಿಸುತ್ತಿದ್ದರು? ಎಡಚಕ್ರವನ್ನು ಮತ್ತು ಆ ವೀರನ ಎದುರು ಯಾರು ರಕ್ಷಿಸುತ್ತಿದ್ದರು? ಯಾವ ಶೂರರು ಕರ್ಣನನ್ನು ಕೂಡಿಕೊಂಡು ಯುದ್ಧಮಾಡಿದರು? ಯಾವ ಕ್ಷುದ್ರರು ಭಯದಿಂದ ಓಡಿಹೋದರು? ನೀವೆಲ್ಲರೂ ಒಟ್ಟಿಗೇ ಇರುವಾಗ ಮಹಾರಥ ಕರ್ಣನು ಹತನಾದುದು ಹೇಗೆ? ಪಾಂಡವ ಶೂರರು ಹೇಗೆ ಮಳೆಸುರಿಸುವ ಮೋಡಗಳಂತೆ ಶರವರ್ಷಗಳನ್ನುಂಟುಮಾಡುತ್ತಾ ಆ ಮಹಾರಥನನ್ನು ಎದುರಿಸಿದರು? ಬಾಣಗಳಲ್ಲಿ ಮಹತ್ತರವಾದುದೆಂದು ಪ್ರಸಿದ್ಧವಾಗಿದ್ದ ಆ ಸರ್ಪಮುಖದ ದಿವ್ಯ ಬಾಣವು ಹೇಗೆ ವ್ಯರ್ಥವಾಯಿತು ಎನ್ನುವುದನ್ನು ನನಗೆ ಹೇಳು. ನಮ್ಮವರ ಸೇನೆಗಳ ಮುಖ್ಯಯೋಧನೇ ಹತನಾದನೆಂದರೆ ಏನೂ ಉಳಿಯಲಿಲ್ಲವೆಂದು ನನಗನ್ನಿಸುತ್ತಿದೆ. ನನಗೋಸ್ಕರವಾಗಿ ತಮ್ಮ ಜೀವಗಳನ್ನೇ ಒತ್ತೆಯಿಟ್ಟೂ ಯುದ್ಧಮಾಡುತ್ತಿದ್ದ ಕುರುಸತ್ತಮ ವೀರ ಮಹೇಷ್ವಾಸ ಭೀಷ್ಮ-ದ್ರೋಣರು ಹತರಾದರೆಂದು ಕೇಳಿದಾಗಲೇ ನನ್ನ ಜೀವಿತಕ್ಕೆ ಅರ್ಥವಿರಲಿಲ್ಲ. ಯಾರ ಬಾಹುಬಲವು ಸಾವಿರ ಆನೆಗಳಿಗೆ ಸಮನಾಗಿತ್ತೋ ಆ ಆಹವಶೋಭೀ ರಾಧೇಯನು ಹತನಾದುದನ್ನು ನಾನು ಸಹಿಸಿಕೊಳ್ಳಲಾರೆ! ದ್ರೋಣನು ಹತನಾಗಲು ಕೌರವರು ಮತ್ತು ಶತ್ರುಗಳ ನಡುವೆ ನರವೀರರ ಸಂಗ್ರಾಮವು ಹೇಗೆ ನಡೆಯಿತು ಎನ್ನುವುದನ್ನು ನನಗೆ ಹೇಳು. ಕೌಂತೇಯರೊಡನೆ ಕರ್ಣನು ಯಾವರೀತಿಯ ಯುದ್ಧವನ್ನು ಆಯೋಜಿಸಿದನು? ಅವನು ರಣದಲ್ಲಿ ಹೇಗೆ ಹತನಾಗಿ ಶಾಂತನಾದನು ಎನ್ನುವುದನ್ನು ಹೇಳಬೇಕು.”
ಆಗ ಸಂಜಯನು ಧೃತರಾಷ್ಟ್ರನಿಗೆ ಹದಿನಾರು ಮತ್ತು ಹದಿನೇಳನೇ ದಿನಗಳ ಯುದ್ಧದ ಕುರಿತು ಹೇಳತೊಡಗಿದನು.