Virata Parva: Chapter 66

ವಿರಾಟ ಪರ್ವ: ವೈವಾಹಿಕ ಪರ್ವ

೬೬

ವಿರಾಟನು ಉತ್ತರೆ-ಅರ್ಜುನರ ವಿವಾಹವನ್ನು ಪ್ರಸ್ತಾವಿಸಿದುದು

ಯುಧಿಷ್ಠಿರನ ಸಹೋದರರೆಲ್ಲೆಂದು ವಿರಾಟನು ಕೇಳಲು ಅರ್ಜುನನು ಇತರರನ್ನೂ ವಿರಾಟನಿಗೆ ಪರಿಚಯಿಸುವುದು (೧-೧೦). ಉತ್ತರನು ಅರ್ಜುನನ ಪರಾಕ್ರಮವನ್ನು ವರ್ಣಿಸಿದುದು (೧೧-೨೦). ವಿರಾಟನು ಪಾಂಡವರನ್ನು ಗೌರವಿಸಿ, ಮಗಳು ಉತ್ತರೆಯನ್ನು ಅರ್ಜುನನು ಪತ್ನಿಯನ್ನಾಗಿ ಸ್ವೀಕರಿಸಬೇಕೆಂದು ಕೇಳಿಕೊಳ್ಳಲು ಅರ್ಜುನನು ಅವಳನ್ನು ತನ್ನ ಸೊಸೆಯನ್ನಾಗಿ ಸ್ವೀಕರಿಸುವೆನೆಂದು ಹೇಳಿದುದು (೨೧-೨೯).

04066001 ವಿರಾಟ ಉವಾಚ|

04066001a ಯದ್ಯೇಷ ರಾಜಾ ಕೌರವ್ಯಃ ಕುಂತೀಪುತ್ರೋ ಯುಧಿಷ್ಠಿರಃ|

04066001c ಕತಮೋಽಸ್ಯಾರ್ಜುನೋ ಭ್ರಾತಾ ಭೀಮಶ್ಚ ಕತಮೋ ಬಲೀ||

ವಿರಾಟನು ಹೇಳಿದನು: “ಇವನು ಕುರುವಂಶಕ್ಕೆ ಸೇರಿದ ಕುಂತೀಪುತ್ರ ಯುಧಿಷ್ಠಿರ ರಾಜನಾಗಿದ್ದರೆ ಇವನ ಸೋದರ ಅರ್ಜುನನೆಲ್ಲಿ? ಬಲಶಾಲಿ ಭೀಮನೆಲ್ಲಿ?

04066002a ನಕುಲಃ ಸಹದೇವೋ ವಾ ದ್ರೌಪದೀ ವಾ ಯಶಸ್ವಿನೀ|

04066002c ಯದಾ ದ್ಯೂತೇ ಜಿತಾಃ ಪಾರ್ಥಾ ನ ಪ್ರಾಜ್ಞಾಯಂತ ತೇ ಕ್ವ ಚಿತ್||

ನಕುಲ ಸಹದೇವರೆಲ್ಲಿ? ಯಶಸ್ವಿನಿ ದ್ರೌಪದಿಯೆಲ್ಲಿ? ಜೂಜಿನಲ್ಲಿ ಸೋತಮೇಲೆ ಆ ಕುಂತೀಪುತ್ರರ ವಿಷಯವನ್ನು ಯಾರೂ ಎಲ್ಲೂ ಅರಿಯರು.”

04066003 ಅರ್ಜುನ ಉವಾಚ|

04066003a ಯ ಏಷ ಬಲ್ಲವೋ ಬ್ರೂತೇ ಸೂದಸ್ತವ ನರಾಧಿಪ|

04066003c ಏಷ ಭೀಮೋ ಮಹಾಬಾಹುರ್ಭೀಮವೇಗಪರಾಕ್ರಮಃ||

ಅರ್ಜುನನು ಹೇಳಿದನು: “ರಾಜನ್! ನಿನ್ನ ಅಡುಗೆಯವನೆಂದು ಹೇಳಲಾಗಿರುವ ಬಲ್ಲವನೆಂಬುವವನೇ ಮಹಾಬಾಹು, ಭಯಂಕರ ವೇಗ-ಪರಾಕ್ರಮಗಳನ್ನುಳ್ಳ ಭೀಮ.

04066004a ಏಷ ಕ್ರೋಧವಶಾನ್ ಹತ್ವಾ ಪರ್ವತೇ ಗಂಧಮಾದನೇ|

04066004c ಸೌಗಂಧಿಕಾನಿ ದಿವ್ಯಾನಿ ಕೃಷ್ಣಾರ್ಥೇ ಸಮುಪಾಹರತ್||

ಗಂಧಮಾದನ ಪರ್ವತದಲ್ಲಿ ಕೋಪವಶನಾಗಿ ರಾಕ್ಷಸರನ್ನು ಕೊಂದು ದ್ರೌಪದಿಗಾಗಿ ದಿವ್ಯ ಸೌಗಂಧಿಕ ಪುಷ್ಪಗಳನ್ನು ತಂದವನು ಇವನೇ.

04066005a ಗಂಧರ್ವ ಏಷ ವೈ ಹಂತಾ ಕೀಚಕಾನಾಂ ದುರಾತ್ಮನಾಂ|

04066005c ವ್ಯಾಘ್ರಾನೃಕ್ಷಾನ್ವರಾಹಾಂಶ್ಚ ಹತವಾನ್ ಸ್ತ್ರೀಪುರೇ ತವ||

ದುರಾತ್ಮ ಕೀಚಕನನ್ನು ಕೊಂದ ಗಂಧರ್ವನು ಇವನೇ. ನಿನ್ನ ಅಂತಃಪುರದಲ್ಲಿ ಹುಲಿ, ಕರಡಿ, ಹಂದಿಗಳನ್ನು ಕೊಂದವನೂ ಇವನೇ.

04066006a ಯಶ್ಚಾಸೀದಶ್ವಬಂಧಸ್ತೇ ನಕುಲೋಽಯಂ ಪರಂತಪಃ|

04066006c ಗೋಸಂಖ್ಯಃ ಸಹದೇವಶ್ಚ ಮಾದ್ರೀಪುತ್ರೌ ಮಹಾರಥೌ||

ನಿನ್ನ ಅಶ್ವಪಾಲಕನಾಗಿದ್ದವನು ಈ ಶತ್ರುನಾಶಕ ನಕುಲ. ಗೋಪಾಲಕನಾಗಿದ್ದವನು ಸಹದೇವ. ಈ ಮಾದ್ರಿ ಪುತ್ರರು ಮಹಾಥರು.

04066007a ಶೃಂಗಾರವೇಷಾಭರಣೌ ರೂಪವಂತೌ ಯಶಸ್ವಿನೌ|

04066007c ನಾನಾರಥಸಹಸ್ರಾಣಾಂ ಸಮರ್ಥೌ ಪುರುಷರ್ಷಭೌ||

ಈ ಪುರುಷಶ್ರೇಷ್ಠರಿಬ್ಬರೂ ವಸ್ತ್ರಾಭರಣಗಳಿಂದ ಅಲಂಕೃತರು. ರೂಪವಂತರು. ಯುಶಸ್ವಿಗಳು. ಸಾವಿರಾರು ಮಂದಿ ರಥಿಕರ ಸಮಾನ ಶಕ್ತಿಯುಳ್ಳವರು.

04066008a ಏಷಾ ಪದ್ಮಪಲಾಶಾಕ್ಷೀ ಸುಮಧ್ಯಾ ಚಾರುಹಾಸಿನೀ|

04066008c ಸೈರಂಧ್ರೀ ದ್ರೌಪದೀ ರಾಜನ್ಯತ್ಕೃತೇ ಕೀಚಕಾ ಹತಾಃ||

ರಾಜನ್! ಕಮಲದ ಎಸಳುಗಳಂತೆ ಕಣ್ಣುಳ್ಳವಳೂ, ಸುಂದರ ನಡುವುಳ್ಳವಳೂ, ಮಧುರ ಮುಗುಳ್ನಗೆಯುಳ್ಳವಳೂ ಆದ ಈ ಸೈರಂಧ್ರಿಯೇ ದ್ರೌಪದಿ. ಇವಳಿಗಾಗಿಯೇ ಕೀಚಕರು ಹತರಾದರು.

04066009a ಅರ್ಜುನೋಽಹಂ ಮಹಾರಾಜ ವ್ಯಕ್ತಂ ತೇ ಶ್ರೋತ್ರಮಾಗತಃ|

04066009c ಭೀಮಾದವರಜಃ ಪಾರ್ಥೋ ಯಮಾಭ್ಯಾಂ ಚಾಪಿ ಪೂರ್ವಜಃ||

ಮಹಾರಾಜ! ನಾನೇ ಅರ್ಜುನ. ನನ್ನ ವಿಷಯ ಈಗಾಗಲೇ ನಿನ್ನ ಕಿವಿಗೆ ಬಿದ್ದಿದೆಯಷ್ಟೇ? ನಾನು ಭೀಮನಿಗೆ ಕಿರಿಯನಾದ ಪಾರ್ಥ. ಯಮಳರಿಗೆ ಹಿರಿಯನು.

04066010a ಉಷಿತಾಃ ಸ್ಮ ಮಹಾರಾಜ ಸುಖಂ ತವ ನಿವೇಶನೇ|

04066010c ಅಜ್ಞಾತವಾಸಮುಷಿತಾ ಗರ್ಭವಾಸ ಇವ ಪ್ರಜಾಃ||

ಮಹಾರಾಜ! ಮಕ್ಕಳು ಗರ್ಭವಾಸವನ್ನು ಕಳೆಯುವಂತೆ ನಾವು ನಿನ್ನ ಅರಮನೆಯಲ್ಲಿ ಸುಖವಾಗಿ ಅಜ್ಞಾತವಾಸವನ್ನು ಕಳೆದೆವು.””

04066011 ವೈಶಂಪಾಯನ ಉವಾಚ|

04066011a ಯದಾರ್ಜುನೇನ ತೇ ವೀರಾಃ ಕಥಿತಾಃ ಪಂಚ ಪಾಂಡವಾಃ|

04066011c ತದಾರ್ಜುನಸ್ಯ ವೈರಾಟಿಃ ಕಥಯಾಮಾಸ ವಿಕ್ರಮಂ||

ವೈಶಂಪಾಯನನು ಹೇಳಿದನು: “ಆ ವೀರರು ಪಂಚ ಪಾಂಡವರೆಂದು ಅರ್ಜುನನು ವಿವರಿಸಿದ ನಂತರ ವಿರಾಟಪುತ್ರನು ಅರ್ಜುನನ ಪರಾಕ್ರಮವನ್ನು ವರ್ಣಿಸಿದನು.

04066012a ಅಯಂ ಸ ದ್ವಿಷತಾಂ ಮಧ್ಯೇ ಮೃಗಾಣಾಮಿವ ಕೇಸರೀ|

04066012c ಅಚರದ್ರಥವೃಂದೇಷು ನಿಘ್ನಂಸ್ತೇಷಾಂ ವರಾನ್ವರಾನ್||

“ಇವನು ಜಿಂಕೆಗಳ ನಡುವೆ ಸಿಂಹದಂತೆ ಅವರಲ್ಲಿ ಮುಖ್ಯ ಮುಖ್ಯರಾದವರನ್ನೆಲ್ಲ ಕೊಲ್ಲುತ್ತ ವೈರಿಗಳ ರಥಸಮೂಹಗಳ ನಡುವೆ ಸಂಚರಿದನು.

04066013a ಅನೇನ ವಿದ್ಧೋ ಮಾತಂಗೋ ಮಹಾನೇಕೇಷುಣಾ ಹತಃ|

04066013c ಹಿರಣ್ಯಕಕ್ಷ್ಯಃ ಸಂಗ್ರಾಮೇ ದಂತಾಭ್ಯಾಮಗಮನ್ಮಹೀಂ||

ಇವನು ದೊಡ್ಡ ಆನೆಯೊಂದನ್ನು ಯುದ್ಧದಲ್ಲಿ ಒಂದೇ ಬಾಣದಿಂದ ಹೊಡೆದು ಕೊಂದನು. ಸುವರ್ಣಾಲಂಕೃತ ಗವಸಣಿಗೆಗಳಿಂದ ಕೂಡಿದ ಆ ಅನೆಯು ದಂತಗಳನ್ನೂರಿ ನೆಲಕ್ಕೊರಗಿತು.

04066014a ಅನೇನ ವಿಜಿತಾ ಗಾವೋ ಜಿತಾಶ್ಚ ಕುರವೋ ಯುಧಿ|

04066014c ಅಸ್ಯ ಶಂಖಪ್ರಣಾದೇನ ಕರ್ಣೌ ಮೇ ಬಧಿರೀಕೃತೌ||

ಇವನು ಹಸುಗಳನ್ನು ಗೆದ್ದನು. ಯುದ್ಧದಲ್ಲಿ ಕೌರವರನ್ನು ಗೆದ್ದನು. ಇವನ ಶಂಖಧ್ವನಿಯಿಂದ ನನ್ನ ಕಿವಿಗಳು ಕಿವುಡಾಗಿಹೋದವು.”

04066015a ತಸ್ಯ ತದ್ವಚನಂ ಶ್ರುತ್ವಾ ಮತ್ಸ್ಯರಾಜಃ ಪ್ರತಾಪವಾನ್|

04066015c ಉತ್ತರಂ ಪ್ರತ್ಯುವಾಚೇದಮಭಿಪನ್ನೋ ಯುಧಿಷ್ಠಿರೇ||

ಅವನ ಆ ಮಾತನ್ನು ಕೇಳಿ ಯುಧಿಷ್ಠಿರನ ವಿಷಯದಲ್ಲಿ ತಪ್ಪುಮಾಡಿದ ಪ್ರತಾಪಶಾಲಿ ಮತ್ಸ್ಯರಾಜನು ಉತ್ತರನಿಗೆ ಮರುನುಡಿದನು.

04066016a ಪ್ರಸಾದನಂ ಪಾಂಡವಸ್ಯ ಪ್ರಾಪ್ತಕಾಲಂ ಹಿ ರೋಚಯೇ|

04066016c ಉತ್ತರಾಂ ಚ ಪ್ರಯಚ್ಛಾಮಿ ಪಾರ್ಥಾಯ ಯದಿ ತೇ ಮತಂ||

“ಪಾಂಡುಪುತ್ರನನ್ನು ಪ್ರಸನ್ನನಾಗಿಸಲು ಸಮಯ ಒದಗಿದೆಯೆಂದು ಭಾವಿಸುತ್ತೇನೆ. ನಿನಗೆ ಒಪ್ಪಿಗೆಯಾದರೆ ಪಾರ್ಥನಿಗೆ ಉತ್ತರೆಯನ್ನು ಕೊಡುತ್ತೇನೆ.”

04066017 ಉತ್ತರ ಉವಾಚ|

04066017a ಅರ್ಚ್ಯಾಃ ಪೂಜ್ಯಾಶ್ಚ ಮಾನ್ಯಾಶ್ಚ ಪ್ರಾಪ್ತಕಾಲಂ ಚ ಮೇ ಮತಂ|

04066017c ಪೂಜ್ಯಂತಾಂ ಪೂಜನಾರ್ಹಾಶ್ಚ ಮಹಾಭಾಗಾಶ್ಚ ಪಾಂಡವಾಃ||

ಉತ್ತರನು ಹೇಳಿದನು: “ಪಾಂಡವರು ಪೂಜ್ಯರು. ಮಾನ್ಯರು. ಅವರನ್ನು ಗೌರವಿಸುವ ಕಾಲ ಒದಗಿಬಂದಿದೆಯೆಂದು ನನ್ನ ಅಭಿಪ್ರಾಯ. ಪೂಜಾಯೋಗ್ಯರೂ ಮಹಾಭಾಗ್ಯಶಾಲಿಗಳೂ ಆದ ಪಾಂಡವರು ಸತ್ಕಾರಗೊಳ್ಳಲಿ.”

04066018 ವಿರಾಟ ಉವಾಚ|

04066018a ಅಹಂ ಖಲ್ವಪಿ ಸಂಗ್ರಾಮೇ ಶತ್ರೂಣಾಂ ವಶಮಾಗತಃ|

04066018c ಮೋಕ್ಷಿತೋ ಭೀಮಸೇನೇನ ಗಾವಶ್ಚ ವಿಜಿತಾಸ್ತಥಾ||

ವಿರಾಟನು ಹೇಳಿದನು: “ಯುದ್ಧದಲ್ಲಿ ಶತ್ರುಗಳಿಗೆ ವಶನಾದ ನನ್ನನ್ನು ಭೀಮಸೇನನು ಬಿಡಿಸಿದನು. ಅಂತೆಯೇ ಹಸುಗಳನ್ನು ಗೆದ್ದನು.

04066019a ಏತೇಷಾಂ ಬಾಹುವೀರ್ಯೇಣ ಯದಸ್ಮಾಕಂ ಜಯೋ ಮೃಧೇ|

04066019c ವಯಂ ಸರ್ವೇ ಸಹಾಮಾತ್ಯಾಃ ಕುಂತೀಪುತ್ರಂ ಯುಧಿಷ್ಠಿರಂ|

04066019e ಪ್ರಸಾದಯಾಮೋ ಭದ್ರಂ ತೇ ಸಾನುಜಂ ಪಾಂಡವರ್ಷಭಂ||

ಇವನ ಬಾಹುಬಲದಿಂದ ನಮಗೆ ಯುದ್ಧದಲ್ಲಿ ಜಯವುಂಟಾಗಿದೆ. ನಾವೆಲ್ಲರೂ ಸಚಿವರೊಡನೆ ತಮ್ಮಂದಿರೊಡಗೂಡಿದ ಕುಂತೀಪುತ್ರ ಪಾಂಡವಶ್ರೇಷ್ಠ ಯುಧಿಷ್ಠಿರನನ್ನು ಪ್ರಸನ್ನಗೊಳಿಸೋಣ.

04066020a ಯದಸ್ಮಾಭಿರಜಾನದ್ಭಿಃ ಕಿಂ ಚಿದುಕ್ತೋ ನರಾಧಿಪಃ|

04066020c ಕ್ಷಂತುಮರ್ಹತಿ ತತ್ಸರ್ವಂ ಧರ್ಮಾತ್ಮಾ ಹ್ಯೇಷ ಪಾಂಡವಃ||

ನಾವು ತಿಳಿಯದಂತೆ ಏನನ್ನಾದರೂ ಆಡಿದ್ದರೆ ಈ ರಾಜನು ಅವೆಲ್ಲವನ್ನೂ ಕ್ಷಮಿಸಬೇಕು. ಏಕೆಂದರೆ ಪಾಂಡುಪುತ್ರನು ಧರ್ಮಾತ್ಮನು.””

04066021 ವೈಶಂಪಾಯನ ಉವಾಚ|

04066021a ತತೋ ವಿರಾಟಃ ಪರಮಾಭಿತುಷ್ಟಃ|

         ಸಮೇತ್ಯ ರಾಜ್ಞಾ ಸಮಯಂ ಚಕಾರ|

04066021c ರಾಜ್ಯಂ ಚ ಸರ್ವಂ ವಿಸಸರ್ಜ ತಸ್ಮೈ|

         ಸದಂಡಕೋಶಂ ಸಪುರಂ ಮಹಾತ್ಮಾ||

ವೈಶಂಪಾಯನನು ಹೇಳಿದನು: “ಅನಂತರ ವಿರಾಟನು ಬಹಳ ಸಂತೋಷಗೊಂಡು ಆ ರಾಜನ ಬಳಿ ಹೋಗಿ ಒಪ್ಪಂದ ಮಾಡಿಕೊಂಡನು. ಸೇನೆ, ಕೋಶ, ಪುರಸಹಿತವಾಗಿ ರಾಜ್ಯವನ್ನೆಲ್ಲ ಆ ಮಹಾತ್ಮನು ಯುಧಿಷ್ಠಿರನಿಗೆ ಬಿಟ್ಟುಕೊಟ್ಟನು.

04066022a ಪಾಂಡವಾಂಶ್ಚ ತತಃ ಸರ್ವಾನ್ಮತ್ಸ್ಯರಾಜಃ ಪ್ರತಾಪವಾನ್|

04066022c ಧನಂಜಯಂ ಪುರಸ್ಕೃತ್ಯ ದಿಷ್ಟ್ಯಾ ದಿಷ್ಟ್ಯೇತಿ ಚಾಬ್ರವೀತ್||

ಆಗ ಆ ಪ್ರತಾಪಶಾಲಿ ಮತ್ಸ್ಯರಾಜನು ಧನಂಜಯನನ್ನು ವಿಶೇಷವಾಗಿ ಪುರಸ್ಕರಿಸುತ್ತಾ ಎಲ್ಲ ಪಾಂಡವರಿಗೆ “ನನ್ನ ಅದೃಷ್ಟ! ಅದೃಷ್ಟ!” ಎಂದನು.

04066023a ಸಮುಪಾಘ್ರಾಯ ಮೂರ್ಧಾನಂ ಸಂಶ್ಲಿಷ್ಯ ಚ ಪುನಃ ಪುನಃ|

04066023c ಯುಧಿಷ್ಠಿರಂ ಚ ಭೀಮಂ ಚ ಮಾದ್ರೀಪುತ್ರೌ ಚ ಪಾಂಡವೌ||

ಅವನು ಯುಧಿಷ್ಠಿರ, ಭೀಮ, ಮತ್ತು ಪಾಂಡವ ಮಾದ್ರೀಪುತ್ರರ ನೆತ್ತಿಯನ್ನು ಮೂಸಿ ಮತ್ತೆ ಮತ್ತೆ ಆಲಂಗಿಸಿದನು.

04066024a ನಾತೃಪ್ಯದ್ದರ್ಶನೇ ತೇಷಾಂ ವಿರಾಟೋ ವಾಹಿನೀಪತಿಃ|

04066024c ಸಂಪ್ರೀಯಮಾಣೋ ರಾಜಾನಂ ಯುಧಿಷ್ಠಿರಮಥಾಬ್ರವೀತ್||

ಸೇನಾಪತಿ ವಿರಾಟನು ಅವರ ದರ್ಶನದಿಂದ ತೃಪ್ತನಾಗದೇ ಪ್ರೀತಿಯಿಂದ ರಾಜ ಯುಧಿಷ್ಠಿರನಿಗೆ ನುಡಿದನು:

04066025a ದಿಷ್ಟ್ಯಾ ಭವಂತಃ ಸಂಪ್ರಾಪ್ತಾಃ ಸರ್ವೇ ಕುಶಲಿನೋ ವನಾತ್|

04066025c ದಿಷ್ಟ್ಯಾ ಚ ಪಾರಿತಂ ಕೃಚ್ಛ್ರಮಜ್ಞಾತಂ ವೈ ದುರಾತ್ಮಭಿಃ||

“ನೀವೆಲ್ಲರೂ ದೈವವಶಾತ್ ಕಾಡಿನಿಂದ ಕ್ಷೇಮವಾಗಿ ಬಂದಿರಿ. ಆ ದುರಾತ್ಮರಿಗೆ ಗೊತ್ತಾಗದಂತೆ ಭಾಗ್ಯವಶಾತ್ ಕಷ್ಟಕರ ಅಜ್ಞಾತವಾಸವನ್ನು ಕಳೆದಿರಿ.

04066026a ಇದಂ ಚ ರಾಜ್ಯಂ ನಃ ಪಾರ್ಥಾ ಯಚ್ಚಾನ್ಯದ್ವಸು ಕಿಂ ಚನ|

04066026c ಪ್ರತಿಗೃಹ್ಣಂತು ತತ್ಸರ್ವಂ ಕೌಂತೇಯಾ ಅವಿಶಂಕಯಾ||

ಪಾಂಡವರೇ! ನನ್ನ ರಾಜ್ಯ ಮತ್ತು ಇತರ ಐಶ್ವರ್ಯವೆಲ್ಲವನ್ನೂ ನೀವು ಯಾವುದೇ ಶಂಕೆಯಿಲ್ಲದೇ ಸ್ವೀಕರಿಸಿ.

04066027a ಉತ್ತರಾಂ ಪ್ರತಿಗೃಹ್ಣಾತು ಸವ್ಯಸಾಚೀ ಧನಂಜಯಃ|

04066027c ಅಯಂ ಹ್ಯೌಪಯಿಕೋ ಭರ್ತಾ ತಸ್ಯಾಃ ಪುರುಷಸತ್ತಮಃ||

ಸವ್ಯಸಾಚೀ ಧನಂಜಯನು ಉತ್ತರೆಯನ್ನು ಸ್ವೀಕರಿಸಲಿ. ಆ ಪುರುಷಶ್ರೇಷ್ಠನು ಅವಳಿಗೆ ಪತಿಯಾಗಲು ತಕ್ಕವನು.”

04066028a ಏವಮುಕ್ತೋ ಧರ್ಮರಾಜಃ ಪಾರ್ಥಮೈಕ್ಷದ್ಧನಂಜಯಂ|

04066028c ಈಕ್ಷಿತಶ್ಚಾರ್ಜುನೋ ಭ್ರಾತ್ರಾ ಮತ್ಸ್ಯಂ ವಚನಮಬ್ರವೀತ್||

ವಿರಾಟನು ಹೀಗೆ ಹೇಳಲು ಧರ್ಮರಾಜನು ಕುಂತೀಪುತ್ರ ಧನಂಜಯನನ್ನು ನೋಡಿದನು. ಅಣ್ಣನು ನೋಡಿದಾಗ ಅರ್ಜುನನು ಮತ್ಸ್ಯರಾಜನಿಗೆ ಹೇಳಿದನು:

04066029a ಪ್ರತಿಗೃಹ್ಣಾಮ್ಯಹಂ ರಾಜನ್ ಸ್ನುಷಾಂ ದುಹಿತರಂ ತವ|

04066029c ಯುಕ್ತಶ್ಚಾವಾಂ ಹಿ ಸಂಬಂಧೋ ಮತ್ಸ್ಯಭಾರತಸತ್ತಮೌ||

“ರಾಜನ್! ನಿನ್ನ ಮಗಳನ್ನು ಸೊಸೆಯನ್ನಾಗಿ ನಾನು ಸ್ವೀಕರಿಸುತ್ತೇನೆ. ಭಾರತವಂಶದ ಶ್ರೇಷ್ಠರಾದ ನಮಗೆ ಮತ್ಸ್ಯವಂಶದ ಈ ಸಂಬಂಧವು ಉಚಿತವೇ ಸರಿ.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ಉತ್ತರಾವಿವಾಹಪ್ರಸ್ತಾನೇ ಷಟ್‌ಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ಉತ್ತರಾವಿವಾಹಪ್ರಸ್ತಾನದಲ್ಲಿ ಅರವತ್ತಾರನೆಯ ಅಧ್ಯಾಯವು.

Related image

Comments are closed.