Virata Parva: Chapter 61

ವಿರಾಟ ಪರ್ವ: ಗೋಹರಣ ಪರ್ವ

೬೧

ಪಾರ್ಥನಿಂದ ಸಮ್ಮೋಹನಾಸ್ತ್ರ ಪ್ರಯೋಗ

ತನ್ನ ಮೇಲೆ ತಿರುಗಿ ಬಿದ್ದ ಕೌರವ ಸೇನೆಯ ಮೇಲೆ ಅರ್ಜುನನು ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ, ಶಂಖವನ್ನೂದಿ, ಸರ್ವ ಸೇನೆಗಳನ್ನೂ ಮೂರ್ಛೆಗೊಳಿಸಿದುದು (೧-೧೧). ಮೂರ್ಛಿತರಾದ ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ರಥವನ್ನೇರಿ ರಣದಿಂದಾಚೆಗೆ ಅರ್ಜುನ-ಉತ್ತರರು ಹೋದುದು (೧೨-೧೬). ಹಾಗೆ ಹೋಗುತ್ತಿದ್ದ ಅರ್ಜುನನನ್ನು ಭೀಷ್ಮನು ಬಾಣಗಳಿಂದ ಹೊಡೆಯಲು ಅರ್ಜುನನು ಅವನ ಕುದುರೆಗಳನ್ನು ಕೊಂದು ಪಕ್ಕೆಗಳಿಗೆ ಹೊಡೆದು ಮುಂದುವರೆದಿದು (೧೭-೧೮). ಎಚ್ಚೆತ್ತ ದುರ್ಯೋಧನನು ಅರ್ಜುನನನ್ನು ಹಿಡಿಯಲು ಬಯಸಿದರೂ ಭೀಷ್ಮನ ಹಿತವಚನದಿಂದ ಸುಮ್ಮನಾಗಿ ಎಲ್ಲರೂ ಮರಳಲು ನಿರ್ಧರಿಸಿದುದು (೧೯-೨೪). ಹಿಂದಿರುಗುತ್ತಿದ್ದ ಹಿರಿಯರನ್ನು ಅರ್ಜುನನು ಗೌರವಿಸಿದುದು ಮತ್ತು ದುರ್ಯೋಧನನನ್ನು ಕಿರೀಟ ತುಂಡರಿಸಿ ಅಪಮಾನಿಸಿದುದು (೨೫-೨೯).

04061001 ವೈಶಂಪಾಯನ ಉವಾಚ|

04061001a ಆಹೂಯಮಾನಸ್ತು ಸ ತೇನ ಸಂಖ್ಯೇ|

         ಮಹಾಮನಾ ಧೃತರಾಷ್ಟ್ರಸ್ಯ ಪುತ್ರಃ|

04061001c ನಿವರ್ತಿತಸ್ತಸ್ಯ ಗಿರಾಮ್ಕುಶೇನ|

         ಗಜೋ ಯಥಾ ಮತ್ತ ಇವಾಂಕುಶೇನ||

ವೈಶಂಪಾಯನನು ಹೇಳಿದನು: “ಅವನಿಂದ ಯುದ್ಧಕ್ಕೆ ಆಹ್ವಾನಿತನಾದ ಮಹಾತ್ಮ ದುರ್ಯೋಧನನು ಅಂಕುಶದಿಂದ ತಿವಿತಗೊಂಡ ಮದಗಜವು ಹಿಂದಕ್ಕೆ ತಿರುಗುವಂತೆ ಅವನ ಮಾತಿನ ಅಂಕುಶದಿಂದ ತಿವಿತಗೊಂಡು ಹಿಂದಿರುಗಿದನು.

04061002a ಸೋಽಮೃಷ್ಯಮಾಣೋ ವಚಸಾಭಿಮೃಷ್ಟೋ|

         ಮಹಾರಥೇನಾತಿರಥಸ್ತರಸ್ವೀ|

04061002c ಪರ್ಯಾವವರ್ತಾಥ ರಥೇನ ವೀರೋ|

         ಭೋಗೀ ಯಥಾ ಪಾದತಲಾಭಿಮೃಷ್ಟಃ||

ಆ ಅತಿರಥ, ಶೀಘ್ರತೆಯುಳ್ಳ ವೀರನು ಕಾಲಿನಿಂದ ತುಳಿದ ಸರ್ಪದಂತೆ ಮಹಾರಥಿ ಅರ್ಜುನನ ಮಾತಿನಿಂದ ಪೆಟ್ಟುಗೊಂಡು ಅದನ್ನು ಸೈರಿಸಲಾರದೇ ರಥದಲ್ಲಿ ಹಿಂದಿರುಗಿದನು.

04061003a ತಂ ಪ್ರೇಕ್ಷ್ಯ ಕರ್ಣಃ ಪರಿವರ್ತಮಾನಂ|

         ನಿವರ್ತ್ಯ ಸಂಸ್ತಭ್ಯ ಚ ವಿದ್ಧಗಾತ್ರಃ|

04061003c ದುರ್ಯೋಧನಂ ದಕ್ಷಿಣತೋಽಭ್ಯಗಚ್ಛತ್|

         ಪಾರ್ಥಂ ನೃವೀರೋ ಯುಧಿ ಹೇಮಮಾಲೀ||

ಹಿಂದಕ್ಕೆ ಬರುತ್ತಿದ್ದ ಆ ದುರ್ಯೋಧನನ್ನು ನೋಡಿ ಯುದ್ಧದಲ್ಲಿ ಶರೀರ ಗಾಯಗೊಂಡ, ಸುವರ್ಣಮಾಲೆಯನ್ನು ಧರಿಸಿದ ವೀರ ಕರ್ಣನು ಅವನನ್ನು ತಡೆದು ದುರ್ಯೋಧನನ ಬಲಗಡೆಯಿದ ಪಾರ್ಥನಿದ್ದೆಡಗೆ ಹೋದನು.

04061004a ಭೀಷ್ಮಸ್ತತಃ ಶಾಂತನವೋ ನಿವೃತ್ಯ|

         ಹಿರಣ್ಯಕಕ್ಷ್ಯಾಂಸ್ತ್ವರಯಂಸ್ತುರಂಗಾನ್|

04061004c ದುರ್ಯೋಧನಂ ಪಶ್ಚಿಮತೋಽಭ್ಯರಕ್ಷತ್|

         ಪಾರ್ಥಾನ್ಮಹಾಬಾಹುರಧಿಜ್ಯಧನ್ವಾ||

ಬಳಿಕ ಮಹಾಬಾಹು ಶಂತನುಪುತ್ರ ಭೀಷ್ಮನು ಚಿನ್ನದ ಜೀನುಗಳನ್ನುಳ್ಳ ಕುದುರೆಗಳನ್ನು ತ್ವರೆಗೊಳಿಸಿ ಹಿಂದಕ್ಕೆ ತಿರುಗಿಸಿ, ಬಿಲ್ಲನ್ನು ಮಿಡಿಯುತ್ತ ಹಿಂದಿನಿಂದ ದುರ್ಯೋಧನನನ್ನು ಪಾರ್ಥನಿಂದ ರಕ್ಷಿಸಿದನು.

04061005a ದ್ರೋಣಃ ಕೃಪಶ್ಚೈವ ವಿವಿಂಶತಿಶ್ಚ|

         ದುಃಶಾಸನಶ್ಚೈವ ನಿವೃತ್ಯ ಶೀಘ್ರಂ|

04061005c ಸರ್ವೇ ಪುರಸ್ತಾದ್ವಿತತೇಷುಚಾಪಾ|

         ದುರ್ಯೋಧನಾರ್ಥಂ ತ್ವರಿತಾಭ್ಯುಪೇಯುಃ||

ದ್ರೋಣ, ಕೃಪ, ವಿವಿಂಶತಿ, ದುಃಶಾಸನ - ಎಲ್ಲರೂ ಬೇಗ ಹಿಂದಿರುಗಿ, ಬಾಣಹೂಡಿದ ಬಿಲ್ಲುಗಳನ್ನೆಳೆದು ದುರ್ಯೋಧನನ ರಕ್ಷಣೆಗಾಗಿ ಮುನ್ನುಗ್ಗಿದರು.

04061006a ಸ ತಾನ್ಯನೀಕಾನಿ ನಿವರ್ತಮಾನಾನ್ಯ್|

         ಆಲೋಕ್ಯ ಪೂರ್ಣೌಘನಿಭಾನಿ ಪಾರ್ಥಃ|

04061006c ಹಂಸೋ ಯಥಾ ಮೇಘಮಿವಾಪತಂತಂ|

         ಧನಂಜಯಃ ಪ್ರತ್ಯಪತತ್ತರಸ್ವೀ||

ಹಿಂದಿರುಗಿ ಪೂರ್ಣಪ್ರವಾಹಸದೃಶ ಆ ಸೈನ್ಯಗಳನ್ನು ನೋಡಿದ ಕುಂತೀಪುತ್ರ ವೇಗಶಾಲಿ ಧನಂಜಯನು ಥಟ್ಟನೆ ಎದುರಾದ ಮೋಡಕ್ಕೆರಗುವ ಹಂಸದಂತೆ ಅವುಗಳ ಮೇಲೆ ಬಿದ್ದನು.

04061007a ತೇ ಸರ್ವತಃ ಸಂಪರಿವಾರ್ಯ ಪಾರ್ಥಂ|

         ಅಸ್ತ್ರಾಣಿ ದಿವ್ಯಾನಿ ಸಮಾದದಾನಾಃ|

04061007c ವವರ್ಷುರಭ್ಯೇತ್ಯ ಶರೈಃ ಸಮಂತಾನ್|

         ಮೇಘಾ ಯಥಾ ಭೂಧರಮಂಬುವೇಗೈಃ||

ಅವರು ದಿವ್ಯಾಸ್ತ್ರಗಳನ್ನು ಹಿಡಿದು ಪಾರ್ಥನನ್ನು ಎಲ್ಲ ಕಡೆಗಳಿಂದಲೂ ಮುತ್ತಿ ಮೋಡಗಳು ಪರ್ವತದ ಮೇಲೆ ಜಲಧಾರೆಯನ್ನು ಸುರಿಸುವಂತೆ ಅವನ ಮೇಲೆ ಬಿದ್ದು ಸುತ್ತಲೂ ಬಾಣಗಳನ್ನು ಸುರಿಸಿದರು.

04061008a ತತೋಽಸ್ತ್ರಮಸ್ತ್ರೇಣ ನಿವಾರ್ಯ ತೇಷಾಂ|

         ಗಾಂಡೀವಧನ್ವಾ ಕುರುಪುಂಗವಾನಾಂ|

04061008c ಸಮ್ಮೋಹನಂ ಶತ್ರುಸಹೋಽನ್ಯದಸ್ತ್ರಂ|

         ಪ್ರಾದುಶ್ಚಕಾರೈಂದ್ರಿರಪಾರಣೀಯಂ||

ಆಗ ಶತ್ರುಗಳನ್ನು ಎದುರಿಸಬಲ್ಲ ಇಂದ್ರಪುತ್ರ ಗಾಂಡೀವಿಯು ಆ ಕೌರವಶ್ರೇಷ್ಠರ ಅಸ್ತ್ರಗಳನ್ನು ಅಸ್ತ್ರದಿಂದ ನಿವಾರಿಸಿ, ಸಮ್ಮೋಹನವೆಂಬ ಮತ್ತೊಂದು ಅಜೇಯ ಅಸ್ತ್ರವನ್ನು ಹೊರತೆಗೆದನು.

04061009a ತತೋ ದಿಶಶ್ಚಾನುದಿಶೋ ವಿವೃತ್ಯ|

         ಶರೈಃ ಸುಧಾರೈರ್ನಿಶಿತೈಃ ಸುಪುಂಖೈಃ|

04061009c ಗಾಂಡೀವಘೋಷೇಣ ಮನಾಂಸಿ ತೇಷಾಂ|

         ಮಹಾಬಲಃ ಪ್ರವ್ಯಥಯಾಂ ಚಕಾರ||

ಆ ಬಲಶಾಲಿಯು ಹರಿತ ಅಲಗುಗಳಿಂದಲೂ, ಅಂದದ ಗರಿಗಳಿಂದಲೂ ಕೂಡಿದ ಬಾಣಗಳಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ ಗಾಂಡೀವ ಘೋಷದಿಂದ ಅವರ ಮನಸ್ಸುಗಳಿಗೆ ವ್ಯಥೆಯನ್ನುಂಟುಮಾಡಿದನು.

04061010a ತತಃ ಪುನರ್ಭೀಮರವಂ ಪ್ರಗೃಹ್ಯ|

         ದೋರ್ಭ್ಯಾಂ ಮಹಾಶಂಖಮುದಾರಘೋಷಂ|

04061010c ವ್ಯನಾದಯತ್ಸ ಪ್ರದಿಶೋ ದಿಶಃ ಖಂ|

         ಭುವಂ ಚ ಪಾರ್ಥೋ ದ್ವಿಷತಾಂ ನಿಹಂತಾ||

ಆಗ ಶತ್ರುನಾಶಕ ಪಾರ್ಥನು ಭಯಂಕರ ಧ್ವನಿಯ, ಮಹಾಘೋಷವನ್ನುಳ್ಳ, ಮಹಾಶಂಖವನ್ನು ಎರಡು ಕೈಗಳಿಂದಲೂ ಹಿಡಿದು ಊದಿ ದಿಕ್ಕುದಿಕ್ಕುಗಳನ್ನೂ ಭೂಮ್ಯಾಕಾಶಗಳನ್ನೂ ಮೊಳಗಿಸಿದನು.

04061011a ತೇ ಶಂಖನಾದೇನ ಕುರುಪ್ರವೀರಾಃ|

         ಸಮ್ಮೋಹಿತಾಃ ಪಾರ್ಥಸಮೀರಿತೇನ|

04061011c ಉತ್ಸೃಜ್ಯ ಚಾಪಾನಿ ದುರಾಸದಾನಿ|

         ಸರ್ವೇ ತದಾ ಶಾಂತಿಪರಾ ಬಭೂವುಃ||

ಪಾರ್ಥನು ಊದಿದ ಆ ಶಂಖದ ಶಬ್ಧದಿಂದ ಕೌರವವೀರರೆಲ್ಲ ಮೂರ್ಛಿತರಾಗಿ ಎದುರಿಸಲು ಅಶಕ್ಯವಾಗಿದ್ದ ತಮ್ಮ ಬಿಲ್ಲುಗಳನ್ನು ತ್ಯಜಿಸಿ ಸ್ತಬ್ಧರಾದರು.

04061012a ತಥಾ ವಿಸಂಜ್ಞೇಷು ಪರೇಷು ಪಾರ್ಥಃ|

         ಸ್ಮೃತ್ವಾ ತು ವಾಕ್ಯಾನಿ ತಥೋತ್ತರಾಯಾಃ|

04061012c ನಿರ್ಯಾಹಿ ಮಧ್ಯಾದಿತಿ ಮತ್ಸ್ಯಪುತ್ರಂ|

         ಉವಾಚ ಯಾವತ್ಕುರವೋ ವಿಸಂಜ್ಞಾಃ||

ಹಾಗೆ ಶತ್ರುಗಳು ಪ್ರಜ್ಞಾಹೀನರಾಗಿರಲು ಪಾರ್ಥನು ಉತ್ತರೆಯ ಮಾತುಗಳನ್ನು ಜ್ಞಾಪಿಸಿಕೊಂಡು ವಿರಾಟಪುತ್ರನಿಗೆ ಹೇಳಿದನು: “ಕೌರವರು ಪ್ರಜ್ಞಾಶೀಲರಾಗುವುದರೊಳಗೇ ಅವರ ನಡುವೆ ಹೋಗು.

04061013a ಆಚಾರ್ಯ ಶಾರದ್ವತಯೋಃ ಸುಶುಕ್ಲೇ|

         ಕರ್ಣಸ್ಯ ಪೀತಂ ರುಚಿರಂ ಚ ವಸ್ತ್ರಂ|

04061013c ದ್ರೌಣೇಶ್ಚ ರಾಜ್ಞಶ್ಚ ತಥೈವ ನೀಲೇ|

         ವಸ್ತ್ರೇ ಸಮಾದತ್ಸ್ವ ನರಪ್ರವೀರ||

ವೀರಶ್ರೇಷ್ಠ! ಆಚಾರ್ಯ ದ್ರೋಣನ ಮತ್ತು ಕೃಪನ ಬಿಳಿಯ ವಸ್ತ್ರಗಳನ್ನೂ, ಕರ್ಣನ ಸುಂದರ ಹಳದಿ ವಸ್ತ್ರವನ್ನೂ, ಅಶ್ವತ್ಥಾಮನ ಹಾಗೂ ರಾಜ ದುರ್ಯೊಧನನ ನೀಲಿ ವಸ್ತ್ರವನ್ನೂ ತೆಗೆದುಕೊಂಡು ಬಾ.

04061014a ಭೀಷ್ಮಸ್ಯ ಸಂಜ್ಞಾಂ ತು ತಥೈವ ಮನ್ಯೇ|

         ಜಾನಾತಿ ಮೇಽಸ್ತ್ರಪ್ರತಿಘಾತಮೇಷಃ|

04061014c ಏತಸ್ಯ ವಾಹಾನ್ಕುರು ಸವ್ಯತಸ್ತ್ವಂ|

         ಏವಂ ಹಿ ಯಾತವ್ಯಮಮೂಢಸಂಜ್ಞೈಃ||

ಭೀಷ್ಮನು ಎಚ್ಚರವಾಗಿದ್ದಾನೆಂದು ಭಾವಿಸುತ್ತೇನೆ. ನನ್ನ ಅಸ್ತ್ರಕ್ಕೆ ಪ್ರತೀಕಾರವನ್ನು ಅವನು ಬಲ್ಲ. ಅವನ ಕುದುರೆಗಳನ್ನು ಎಡಕ್ಕಿಟ್ಟುಕೊಂಡು ಹೋಗು. ಪ್ರಜ್ಞೆತಪ್ಪದಿರುವವರ ಬಳಿಗೆ ಹೀಗೆಯೇ ಹೋಗಬೇಕು.”

04061015a ರಶ್ಮೀನ್ಸಮುತ್ಸೃಜ್ಯ ತತೋ ಮಹಾತ್ಮಾ|

         ರಥಾದವಪ್ಲುತ್ಯ ವಿರಾಟಪುತ್ರಃ|

04061015c ವಸ್ತ್ರಾಣ್ಯುಪಾದಾಯ ಮಹಾರಥಾನಾಂ|

         ತೂರ್ಣಂ ಪುನಃ ಸ್ವಂ ರಥಮಾರುರೋಹ||

ಆಗ ಮಹಾಸತ್ವ ವಿರಾಟಪುತ್ರನು ಕಡಿವಾಣಗಳನ್ನು ಬಿಟ್ಟು, ರಥದಿಂದ ಧುಮುಕಿ, ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ಶೀಘ್ರವಾಗಿ ಮತ್ತೆ ರಥವನ್ನೇರಿದನು.

04061016a ತತೋಽನ್ವಶಾಸಚ್ಚತುರಃ ಸದಶ್ವಾನ್|

         ಪುತ್ರೋ ವಿರಾಟಸ್ಯ ಹಿರಣ್ಯಕಕ್ಷ್ಯಾನ್|

04061016c ತೇ ತದ್ವ್ಯತೀಯುರ್ಧ್ವಜಿನಾಮನೀಕಂ|

         ಶ್ವೇತಾ ವಹಂತೋಽರ್ಜುನಮಾಜಿಮಧ್ಯಾತ್||

ವಿರಾಟಪುತ್ರನು ಚಿನ್ನದ ಜೀನುಗಳನ್ನುಳ್ಳ ನಾಲ್ಕು ಉತ್ತಮ ಕುದುರೆಗಳನ್ನು ಮುನ್ನಡೆಸಿದನು. ಆ ಬಿಳಿಯ ಕುದುರೆಗಳು ಅರ್ಜುನನನ್ನು ರಣರಂಗದ ಮಧ್ಯದಿಂದ ರಣದಿಂದಾದಾಚೆಗೆ ಕೊಂಡೊಯ್ದವು.

04061017a ತಥಾ ತು ಯಾಂತಂ ಪುರುಷಪ್ರವೀರಂ|

         ಭೀಷ್ಮಃ ಶರೈರಭ್ಯಹನತ್ತರಸ್ವೀ|

04061017c ಸ ಚಾಪಿ ಭೀಷ್ಮಸ್ಯ ಹಯಾನ್ನಿಹತ್ಯ|

         ವಿವ್ಯಾಧ ಪಾರ್ಶ್ವೇ ದಶಭಿಃ ಪೃಷತ್ಕೈಃ||

ಹಾಗೆ ಹೋಗುತ್ತಿದ್ದ ವೀರಪುರುಷ ಅರ್ಜುನನನ್ನು ಚುರುಕಿನಿಂದ ಕೂಡಿದ ಭೀಷ್ಮನು ಬಾಣಗಳಿಂದ ಹೊಡೆದನು. ಅವನಾದರೋ ಭೀಷ್ಮನ ಕುದುರೆಗಳನ್ನು ಕೊಂದು ಹತ್ತು ಬಾಣಗಳಿಂದ ಅವನ ಪಕ್ಕೆಗೆ ಹೊಡೆದನು.

04061018a ತತೋಽರ್ಜುನೋ ಭೀಷ್ಮಮಪಾಸ್ಯ ಯುದ್ಧೇ|

         ವಿದ್ಧ್ವಾಸ್ಯ ಯಂತಾರಮರಿಷ್ಟಧನ್ವಾ|

04061018c ತಸ್ಥೌ ವಿಮುಕ್ತೋ ರಥವೃಂದಮಧ್ಯಾದ್|

         ರಾಹುಂ ವಿದಾರ್ಯೇವ ಸಹಸ್ರರಶ್ಮಿಃ||

ಬಳಿಕ ಅಜೇಯ ಬಿಲ್ಲನ್ನುಳ್ಳ ಅರ್ಜುನನನು ಭೀಷ್ಮನನ್ನು ಯುದ್ಧರಂಗದಲ್ಲಿ ಬಿಟ್ಟು ಅವನ ಸಾರಥಿಯನ್ನು ಹೊಡೆದು ರಾಹುವನ್ನು ಸೀಳಿಕೊಂಡು ಸೂರ್ಯನು ಹೊರಬರುವಂತೆ ರಥಸಮೂಹದ ಮಧ್ಯದಿಂದ ಹೊರಬಂದು ನಿಂತನು.

04061019a ಲಬ್ಧ್ವಾ ತು ಸಂಜ್ಞಾಂ ಚ ಕುರುಪ್ರವೀರಃ|

         ಪಾರ್ಥಂ ಸಮೀಕ್ಷ್ಯಾಥ ಮಹೇಂದ್ರಕಲ್ಪಂ|

04061019c ರಣಾದ್ವಿಮುಕ್ತಂ ಸ್ಥಿತಮೇಕಮಾಜೌ|

         ಸ ಧಾರ್ತರಾಷ್ಟ್ರಸ್ತ್ವರಿತೋ ಬಭಾಷೇ||

ರಣದಿಂದ ಹೊರಬಂದು ಯುದ್ಧರಂಗದಲ್ಲಿ ಏಕಾಂಗಿಯಾಗಿ ನಿಂತಿದ್ದ ಮಹೇಂದ್ರಸಮ ಪಾರ್ಥನನ್ನು ಪ್ರಜ್ಞೆಬಂದ ಕುರುವೀರ ದುರ್ಯೋಧನನು ಕಂಡು ಭೀಷ್ಮನಿಗೆ ನುಡಿದನು:

04061020a ಅಯಂ ಕಥಂ ಸ್ವಿದ್ಭವತಾಂ ವಿಮುಕ್ತಸ್|

         ತಂ ವೈ ಪ್ರಬಧ್ನೀತ ಯಥಾ ನ ಮುಚ್ಯೇತ್|

04061020c ತಮಬ್ರವೀಚ್ಚಾಂತನವಃ ಪ್ರಹಸ್ಯ|

         ಕ್ವ ತೇ ಗತಾ ಬುದ್ಧಿರಭೂತ್ಕ್ವ ವೀರ್ಯಂ||

“ಇವನು ಹೇಗೆ ನಮ್ಮಿಂದ ತಪ್ಪಿಸಿಕೊಂಡ? ತಪ್ಪಿಸಿಕೊಳ್ಳದಂತೆ ಇವನನ್ನು ಕಟ್ಟಿಹಾಕಿ!” ಭೀಷ್ಮನು ನಕ್ಕು ಅವನಿಗೆ ಹೇಳಿದನು: “ನಿನ್ನ ಬುದ್ಧಿ ಎಲ್ಲಿ ಹೋಗಿತ್ತು? ನಿನ್ನ ಶೌರ್ಯ ಎಲ್ಲಿ ಹೋಗಿತ್ತು?

04061021a ಶಾಂತಿಂ ಪರಾಶ್ವಸ್ಯ ಯಥಾ ಸ್ಥಿತೋಽಭೂರ್|

         ಉತ್ಸೃಜ್ಯ ಬಾಣಾಂಶ್ಚ ಧನುಶ್ಚ ಚಿತ್ರಂ|

04061021c ನ ತ್ವೇವ ಬೀಭತ್ಸುರಲಂ ನೃಶಂಸಂ|

         ಕರ್ತುಂ ನ ಪಾಪೇಽಸ್ಯ ಮನೋ ನಿವಿಷ್ಟಂ||

ಬಾಣಗಳನ್ನೂ ಸುಂದರ ಬಿಲ್ಲನ್ನೂ ತ್ಯಜಿಸಿ ತೆಪ್ಪಗೆ ಸ್ತಬ್ಧನಾಗಿದ್ದೆಯಲ್ಲ? ಅರ್ಜುನನು ಕ್ರೂರಕಾರ್ಯವನ್ನು ಮಾಡುವವನಲ್ಲ. ಅವನ ಮನಸ್ಸು ಪಾಪದಲ್ಲಿ ಆಸಕ್ತವಾಗಿಲ್ಲ.

04061022a ತ್ರೈಲೋಕ್ಯಹೇತೋರ್ನ ಜಹೇತ್ಸ್ವಧರ್ಮಂ|

         ತಸ್ಮಾನ್ನ ಸರ್ವೇ ನಿಹತಾ ರಣೇಽಸ್ಮಿನ್|

04061022c ಕ್ಷಿಪ್ರಂ ಕುರೂನ್ಯಾಹಿ ಕುರುಪ್ರವೀರ|

         ವಿಜಿತ್ಯ ಗಾಶ್ಚ ಪ್ರತಿಯಾತು ಪಾರ್ಥಃ||

ಮೂರುಲೋಕಗಳಿಗಾಗಿಯಾದರೂ ಅವನು ಸ್ವಧರ್ಮವನ್ನು ಬಿಡುವುದಿಲ್ಲ. ಆದ್ದರಿಂದಲೇ ಈ ಯುದ್ಧದಲ್ಲಿ ಎಲ್ಲರೂ ಹತರಾಗಿಲ್ಲ. ಕುರುವೀರ! ಬೇಗ ಕುರುದೇಶಕ್ಕೆ ಹೋಗಿಬಿಡು. ಪಾರ್ಥನು ಗೋವುಗಳನ್ನು ಗೆದ್ದುಕೊಂಡು ಹಿಂದಿರುಗಲಿ.”

04061023a ದುರ್ಯೋಧನಸ್ತಸ್ಯ ತು ತನ್ನಿಶಮ್ಯ|

         ಪಿತಾಮಹಸ್ಯಾತ್ಮಹಿತಂ ವಚೋಽಥ|

04061023c ಅತೀತಕಾಮೋ ಯುಧಿ ಸೋಽತ್ಯಮರ್ಷೀ|

         ರಾಜಾ ವಿನಿಃಶ್ವಸ್ಯ ಬಭೂವ ತೂಷ್ಣೀಂ||

ಆಗ ರಾಜ ದುರ್ಯೋಧನನು ತನಗೆ ಹಿತಕರವಾದ ಪಿತಾಮಹನ ಮಾತನ್ನು ಕೇಳಿ ಯುದ್ಧದ ಆಸೆಯನ್ನು ಬಿಟ್ಟು ಬಹಳ ಕೋಪದಿಂದ ನಿಡುಸುಯ್ದು ಸುಮ್ಮನಾದನು.

04061024a ತದ್ಭೀಷ್ಮವಾಕ್ಯಂ ಹಿತಮೀಕ್ಷ್ಯ ಸರ್ವೇ|

         ಧನಂಜಯಾಗ್ನಿಂ ಚ ವಿವರ್ಧಮಾನಂ|

04061024c ನಿವರ್ತನಾಯೈವ ಮನೋ ನಿದಧ್ಯುರ್|

         ದುರ್ಯೋಧನಂ ತೇ ಪರಿರಕ್ಷಮಾಣಾಃ||

ಭೀಷ್ಮನ ಆ ಹಿತಕರ ಮಾತನ್ನು ಪರಿಭಾವಿಸಿ ಹೆಚ್ಚುತ್ತಿರುವ ಧನಂಜಯಾಗ್ನಿಯನ್ನು ನೋಡಿ ದುರ್ಯೊಧನನನ್ನು ರಕ್ಷಿಸುತ್ತಾ ಹಿಂದಿರುಗಲು ಅವರೆಲ್ಲರೂ ಮನಸ್ಸು ಮಾಡಿದರು.

04061025a ತಾನ್ಪ್ರಸ್ಥಿತಾನ್ಪ್ರೀತಮನಾಃ ಸ ಪಾರ್ಥೋ|

         ಧನಂಜಯಃ ಪ್ರೇಕ್ಷ್ಯ ಕುರುಪ್ರವೀರಾನ್|

04061025c ಆಭಾಷಮಾಣೋಽನುಯಯೌ ಮುಹೂರ್ತಂ|

         ಸಂಪೂಜಯಂಸ್ತತ್ರ ಗುರೂನ್ಮಹಾತ್ಮಾ||

ಕುಂತೀಪುತ್ರ ಮಹಾತ್ಮ ಧನಂಜಯನು ಕೌರವವೀರರು ಹೊರಡುತ್ತಿರುವುದನ್ನು ಕಂಡು ಸಂತೋಷಚಿತ್ತನಾಗಿ ಹಿರಿಯರೊಡನೆ ಮಾತನಾಡುತ್ತಾ ಅವರನ್ನು ಆದರಿಸಿ ತುಸುಹೊತ್ತು ಹಿಂಬಾಲಿಸಿದನು.

04061026a ಪಿತಾಮಹಂ ಶಾಂತನವಂ ಸ ವೃದ್ಧಂ|

         ದ್ರೋಣಂ ಗುರುಂ ಚ ಪ್ರತಿಪೂಜ್ಯ ಮೂರ್ಧ್ನಾ|

04061026c ದ್ರೌಣಿಂ ಕೃಪಂ ಚೈವ ಗುರೂಂಶ್ಚ ಸರ್ವಾಂ|

         ಶರೈರ್ವಿಚಿತ್ರೈರಭಿವಾದ್ಯ ಚೈವ||

ಅವನು ವೃದ್ಧ ಪಿತಾಮಹ ಶಾಂತನವನನ್ನೂ ಗುರುದ್ರೋಣನನ್ನೂ ತಲೆಬಾಗಿ ಗೌರವಿಸಿ ಅಶ್ವತ್ಥಾಮನನ್ನೂ ಕೃಪನನ್ನೂ ಇತರ ಎಲ್ಲ ಹಿರಿಯರನ್ನೂ ಸುಂದರ ಬಾಣಗಳಿಂದ ವಂದಿಸಿದನು.

04061027a ದುರ್ಯೋಧನಸ್ಯೋತ್ತಮರತ್ನಚಿತ್ರಂ|

         ಚಿಚ್ಛೇದ ಪಾರ್ಥೋ ಮುಕುಟಂ ಶರೇಣ|

04061027c ಆಮಂತ್ರ್ಯ ವೀರಾಂಶ್ಚ ತಥೈವ ಮಾನ್ಯಾನ್|

         ಗಾಂಡೀವಘೋಷೇಣ ವಿನಾದ್ಯ ಲೋಕಾನ್||

ಪಾರ್ಥನು ಶ್ರೇಷ್ಠ ರತ್ನಗಳಿಂದ ಸುಂದರವಾಗಿದ್ದ ದುರ್ಯೋಧನನ ಕಿರೀಟವನ್ನು ಬಾಣದಿಂದ ತುಂಡರಿಸಿದನು. ಅಂತೆಯೇ ಗಾಂಡೀವಘೋಷದಿಂದ ಲೋಕಗಳನ್ನು ಮೊಳಗಿಸುತ್ತಾ ಮಾನ್ಯ ವೀರರನ್ನು ಕರೆದು ಆದರಿಸಿದನು.

04061028a ಸ ದೇವದತ್ತಂ ಸಹಸಾ ವಿನಾದ್ಯ|

         ವಿದಾರ್ಯ ವೀರೋ ದ್ವಿಷತಾಂ ಮನಾಂಸಿ|

04061028c ಧ್ವಜೇನ ಸರ್ವಾನಭಿಭೂಯ ಶತ್ರೂನ್|

         ಸ ಹೇಮಜಾಲೇನ ವಿರಾಜಮಾನಃ||

ಆ ವೀರನು ಇದ್ದಕ್ಕಿದ್ದಂತೆ ದೇವದತ್ತವನ್ನು ಮೊಳಗಿಸಿ ಶತ್ರುಗಳ ಮನಸ್ಸನ್ನು ಭೇದಿಸಿದನು. ವೈರಿಗಳನ್ನೆಲ್ಲ ಸೋಲಿಸಿ ಚಿನ್ನದ ಸರಿಗೆಯುಳ್ಳ ಧ್ವಜದಿಂದ ಶೋಭಿಸಿದನು.

04061029a ದೃಷ್ಟ್ವಾ ಪ್ರಯಾತಾಂಸ್ತು ಕುರೂನ್ಕಿರೀಟೀ|

         ಹೃಷ್ಟೋಽಬ್ರವೀತ್ತತ್ರ ಸ ಮತ್ಸ್ಯಪುತ್ರಂ|

04061029c ಆವರ್ತಯಾಶ್ವಾನ್ಪಶವೋ ಜಿತಾಸ್ತೇ|

         ಯಾತಾಃ ಪರೇ ಯಾಹಿ ಪುರಂ ಪ್ರಹೃಷ್ಟಃ||

ಕೌರವರು ಹೋದುದನ್ನು ನೋಡಿದ ಅರ್ಜುನನನು ಹರ್ಷಗೊಂಡು “ಕುದುರೆಗಳನ್ನು ತಿರುಗಿಸು. ನಿನ್ನ ಹಸುಗಳನ್ನು ಗೆದ್ದುದ್ದಾಯಿತು. ಶತ್ರುಗಳು ತೊಲಗಿದರು. ಸಂತೋಷದಿಂದ ನಗರಕ್ಕೆ ನಡೆ!” ಎಂದು ಉತ್ತರನಿಗೆ ಹೇಳಿದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಸಮಸ್ತಕೌರವಪಲಾಯನೇ ಏಕಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಸಮಸ್ತಕೌರವಪಲಾಯನದಲ್ಲಿ ಅರವತ್ತೊಂದನೆಯ ಅಧ್ಯಾಯವು.

Related image

Comments are closed.