Virata Parva: Chapter 56

ವಿರಾಟ ಪರ್ವ: ಗೋಹರಣ ಪರ್ವ

೫೬

ದುಃಶಾಸನ, ವಿಕರ್ಣ, ದುಃಸ್ಸಹ ಮತ್ತು ವಿವಿಂಶತಿಯರೊಂದಿಗೆ ಅರ್ಜುನನ ಯುದ್ಧ

ಅರ್ಜುನನು ತನ್ನ ಪೌರುಷವನ್ನು ಹೇಳಿಕೊಂಡು ಭೀಷ್ಮನಲ್ಲಿಗೆ ರಥವನ್ನು ಕೊಂಡೊಯ್ಯಲು ಹೇಳುವುದು (೧-೧೫). ಅರ್ಜುನನು ದುಃಶಾಸನನೊಂದಿಗೆ (೧೬-೨೨), ವಿಕರ್ಣನೊಂದಿಗೆ (೨೩-೨೪), ಮತ್ತು ದುಃಸ್ಸಹನೊಂದಿಗೆ ಯುದ್ಧಮಾಡಿ ಸೋಲಿಸಿ ಭೀಷ್ಮನನ್ನು ಸಮೀಪಿಸಿದುದು (೨೫-೨೮).

04056001 ವೈಶಂಪಾಯನ ಉವಾಚ|

04056001a ತತೋ ವೈಕರ್ತನಂ ಜಿತ್ವಾ ಪಾರ್ಥೋ ವೈರಾಟಿಮಬ್ರವೀತ್|

04056001c ಏತನ್ಮಾಂ ಪ್ರಾಪಯಾನೀಕಂ ಯತ್ರ ತಾಲೋ ಹಿರಣ್ಮಯಃ||

ವೈಶಂಪಾಯನನು ಹೇಳಿದನು: “ಕರ್ಣನನ್ನು ಗೆದ್ದ ಪಾರ್ಥನು ಉತ್ತರನಿಗೆ ನುಡಿದನು: “ಇದೋ ಚಿನ್ನದ ತಾಳೆಮರದ ಧ್ವಜಚಿಹ್ನೆಯಿರುವ ಸೈನ್ಯದೆಡೆಗೆ ನನ್ನನ್ನು ಕೊಂಡೊಯ್ಯಿ.

04056002a ಅತ್ರ ಶಾಂತನವೋ ಭೀಷ್ಮೋ ರಥೇಽಸ್ಮಾಕಂ ಪಿತಾಮಹಃ|

04056002c ಕಾಂಕ್ಷಮಾಣೋ ಮಯಾ ಯುದ್ಧಂ ತಿಷ್ಠತ್ಯಮರದರ್ಶನಃ|

04056002e ಆದಾಸ್ಯಾಮ್ಯಹಮೇತಸ್ಯ ಧನುರ್ಜ್ಯಾಮಪಿ ಚಾಹವೇ||

ಅಲ್ಲಿ ಶಂತನುಪುತ್ರ ದೇವಸದೃಶ ನಮ್ಮ ಪಿತಾಮಹ ಭೀಷ್ಮನು ನನ್ನೊಡನೆ ಯುದ್ಧಕಾತುರನಾಗಿ ರಥದಲ್ಲಿದ್ದಾನೆ. ಯುದ್ಧದಲ್ಲಿ ಅವನ ಬಿಲ್ಲನ್ನೂ ಹೆದೆಯನ್ನೂ ಕತ್ತರಿಸುತ್ತೇನೆ.

04056003a ಅಸ್ಯಂತಂ ದಿವ್ಯಮಸ್ತ್ರಂ ಮಾಂ ಚಿತ್ರಮದ್ಯ ನಿಶಾಮಯ|

04056003c ಶತಹ್ರದಾಮಿವಾಯಾಂತೀಂ ಸ್ತನಯಿತ್ನೋರಿವಾಂಬರೇ||

ಆಕಾಶದಲ್ಲಿ ಮೋಡದಿಂದ ನೂರಾರು ಮಿಂಚುಗಳು ಹೊಮ್ಮುವಂತೆ ಇಂದು ದಿವ್ಯಾಸ್ತ್ರಗಳನ್ನು ಅದ್ಭುತವಾಗಿ ಬಿಡುವ ನನ್ನನ್ನು ನೋಡು.

04056004a ಸುವರ್ಣಪೃಷ್ಠಂ ಗಾಂಡೀವಂ ದ್ರಕ್ಷ್ಯಂತಿ ಕುರವೋ ಮಮ|

04056004c ದಕ್ಷಿಣೇನಾಥ ವಾಮೇನ ಕತರೇಣ ಸ್ವಿದಸ್ಯತಿ|

04056004e ಇತಿ ಮಾಂ ಸಂಗತಾಃ ಸರ್ವೇ ತರ್ಕಯಿಷ್ಯಂತಿ ಶತ್ರವಃ||

ಚಿನ್ನದ ಹಿಂಬದಿಯುಳ್ಳ ನನ್ನ ಗಾಂಡೀವವನ್ನು ಕೌರವರು ಇಂದು ಕಾಣುತ್ತಾರೆ. ಶತ್ರುಗಳೆಲ್ಲ ಸೇರಿ ಬಲಗೈಯಿಂದಲೋ ಅಥವಾ ಎಡಗೈಯಿಂದಲೋ? ಯಾವುದರಿಂದ ಬಾಣವನ್ನು ಬಿಡುತ್ತಾನೆ? ಎಂದು ನನ್ನ ವಿಷಯದಲ್ಲಿ ತರ್ಕಿಸುತ್ತಾರೆ.

04056005a ಶೋಣಿತೋದಾಂ ರಥಾವರ್ತಾಂ ನಾಗನಕ್ರಾಂ ದುರತ್ಯಯಾಂ|

04056005c ನದೀಂ ಪ್ರಸ್ಯಂದಯಿಷ್ಯಾಮಿ ಪರಲೋಕಪ್ರವಾಹಿನೀಂ||

ರಕ್ತವೆಂಬ ಜಲವನ್ನೂ, ರಥಗಳೆಂಬ ಸುಳಿಗಳನ್ನೂ, ಆನೆಗಳೆಂಬ ಮೊಸಳೆಗಳನ್ನೂ ಕೂಡಿದ, ದಾಟಲಾಗದ, ಪರಲೋಕದತ್ತ ಹರಿಯುವ ನದಿಯೊಂದನ್ನು ನಾನು ಇಂದು ಹರಿಯಿಸುತ್ತೇನೆ.

04056006a ಪಾಣಿಪಾದಶಿರಃಪೃಷ್ಠಬಾಹುಶಾಖಾನಿರಂತರಂ|

04056006c ವನಂ ಕುರೂಣಾಂ ಚೇತ್ಸ್ಯಾಮಿ ಭಲ್ಲೈಃ ಸಂನತಪರ್ವಭಿಃ||

ಕೈ, ಕಾಲು, ಬೆನ್ನು, ತೋಳುಗಳ ಕೊಂಬೆಗಳನ್ನುಳ್ಳ ದಟ್ಟವಾದ ಕುರುವನವನ್ನು ನೇರ್ಪಡಿಸಿದ ಗಿಣ್ಣಿನ ಭಲ್ಲೆಗಳಿಂದ ಕಡಿದುಹಾಕುತ್ತೇನೆ.

04056007a ಜಯತಃ ಕೌರವೀಂ ಸೇನಾಮೇಕಸ್ಯ ಮಮ ಧನ್ವಿನಃ|

04056007c ಶತಂ ಮಾರ್ಗಾ ಭವಿಷ್ಯಂತಿ ಪಾವಕಸ್ಯೇವ ಕಾನನೇ|

04056007e ಮಯಾ ಚಕ್ರಮಿವಾವಿದ್ಧಂ ಸೈನ್ಯಂ ದ್ರಕ್ಷ್ಯಸಿ ಕೇವಲಂ||

ಬಿಲ್ಲು ಹಿಡಿದು ಕುರು ಸೈನ್ಯವನ್ನು ಒಂಟಿಯಾಗಿ ಗೆಲ್ಲುವ ನನಗೆ ಕಾಡಿನಲ್ಲಿ ಅಗ್ನಿಗೆ ಹೇಗೋ ಹಾಗೆ ನೂರು ಮಾರ್ಗಗಳು ಉಂಟಾಗುತ್ತವೆ. ನನ್ನಿಂದ ಹೊಡೆತ ತಿಂದ ಸೈನ್ಯವೆಲ್ಲ ಚಕ್ರದಂತೆ ಸುತ್ತುವುದನ್ನು ನೀನು ನೋಡುತ್ತೀಯೆ.

04056008a ಅಸಂಭ್ರಾಂತೋ ರಥೇ ತಿಷ್ಠ ಸಮೇಷು ವಿಷಮೇಷು ಚ|

04056008c ದಿವಮಾವೃತ್ಯ ತಿಷ್ಠಂತಂ ಗಿರಿಂ ಭೇತ್ಸ್ಯಾಮಿ ಧಾರಿಭಿಃ||

ನೆಲ ಒಂದೇಸಮನಾಗಿರಲಿ ಅಥವಾ ಹಳ್ಳತಿಟ್ಟುಗಳಿಂದ ಕೂಡಿರಲಿ. ನೀನು ಗಾಬರಿಕೊಳ್ಳದೆ ರಥದಲ್ಲಿ ಕುಳಿತಿರು. ಆಕಾಶವನ್ನು ಆವರಿಸಿ ನಿಂತಿರುವ ಗಿರಿಯನ್ನು ಕೂಡ ನಾನು ಬಾಣಗಳಿಂದ ಭೇದಿಸುತ್ತೇನೆ.

04056009a ಅಹಮಿಂದ್ರಸ್ಯ ವಚನಾತ್ಸಂಗ್ರಾಮೇಽಭ್ಯಹನಂ ಪುರಾ|

04056009c ಪೌಲೋಮಾನ್ಕಾಲಖಂಜಾಂಶ್ಚ ಸಹಸ್ರಾಣಿ ಶತಾನಿ ಚ||

ಹಿಂದೆ ನಾನು ಇಂದ್ರನ ಮಾತಿನಂತೆ ಯುದ್ಧದಲ್ಲಿ ನೂರಾರು ಸಾವಿರಾರು ಮಂದಿ ಪೌಲೋಮ ಕಾಲಖಂಜರನ್ನು ಕೊಂದಿದ್ದೆ.

04056010a ಅಹಮಿಂದ್ರಾದ್ದೃಢಾಂ ಮುಷ್ಟಿಂ ಬ್ರಹ್ಮಣಃ ಕೃತಹಸ್ತತಾಂ|

04056010c ಪ್ರಗಾಢಂ ತುಮುಲಂ ಚಿತ್ರಮತಿವಿದ್ಧಂ ಪ್ರಜಾಪತೇಃ||

ನಾನು ಇಂದ್ರನಿಂದ ದೃಢಮುಷ್ಠಿಯನ್ನೂ, ಬ್ರಹ್ಮನಿಂದ ಕೈಚಳಕವನ್ನೂ, ಪ್ರಜಾಪತಿಯಿಂದ ಗಾಢ, ಭಯಂಕರ ಅದ್ಭುತ ಭೇದಶಕ್ತಿಯನ್ನೂ ಪಡೆದಿದ್ದೇನೆ.

04056011a ಅಹಂ ಪಾರೇ ಸಮುದ್ರಸ್ಯ ಹಿರಣ್ಯಪುರಮಾರುಜಂ|

04056011c ಜಿತ್ವಾ ಷಷ್ಟಿಸಹಸ್ರಾಣಿ ರಥಿನಾಮುಗ್ರಧನ್ವಿನಾಂ||

ನಾನು ಸಮುದ್ರದ ಆಚೆಯಿದ್ದ ಅರವತ್ತು ಸಾವಿರ ಉಗ್ರಧನುರ್ಧಾರಿ ರಥಿಕರನ್ನು ಗೆದ್ದು ಹಿರಣ್ಯಪುರವನ್ನು ನಾಶಮಾಡಿದ್ದೆ.

04056012a ಧ್ವಜವೃಕ್ಷಂ ಪತ್ತಿತೃಣಂ ರಥಸಿಂಹಗಣಾಯುತಂ|

04056012c ವನಮಾದೀಪಯಿಷ್ಯಾಮಿ ಕುರೂಣಾಮಸ್ತ್ರತೇಜಸಾ||

ಬಾವುಟಗಳೆಂಬ ಮರಗಳಿಂದಲೂ, ಪದಾತಿಗಳೆಂಬ ಹುಲ್ಲಿನಿಂದಲೂ, ರಥಗಳೆಂಬ ಸಿಂಹ ಸಮೂಹದಿಂದಲೂ ಕೂಡಿದ ಕುರುವನವನ್ನು ನನ್ನ ಅಸ್ತ್ರಗಳ ತೇಜಸ್ಸಿನಿಂದ ಸುಟ್ಟುಹಾಕುತ್ತೇನೆ.

04056013a ತಾನಹಂ ರಥನೀಡೇಭ್ಯಃ ಶರೈಃ ಸಂನತಪರ್ವಭಿಃ|

04056013c ಏಕಃ ಸಂಕಾಲಯಿಷ್ಯಾಮಿ ವಜ್ರಪಾಣಿರಿವಾಸುರಾನ್||

ದೇವೇಂದ್ರನು ರಾಕ್ಷಸರನ್ನು ಅಟ್ಟಿದಂತೆ ನಾನೊಬ್ಬನೇ ನೇರ್ಪಡಿಸಿದ ಗಿಣ್ಣಿನ ಬಾಣಗಳನ್ನು ಬಿಟ್ಟು ಆ ಶತ್ರುಗಳನ್ನು ರಥಗಳೆಂಬ ಗೂಡುಗಳಿಂದ ಎಳೆದುಹಾಕುತ್ತೇನೆ.

04056014a ರೌದ್ರಂ ರುದ್ರಾದಹಂ ಹ್ಯಸ್ತ್ರಂ ವಾರುಣಂ ವರುಣಾದಪಿ|

04056014c ಅಸ್ತ್ರಮಾಗ್ನೇಯಮಗ್ನೇಶ್ಚ ವಾಯವ್ಯಂ ಮಾತರಿಶ್ವನಃ|

04056014e ವಜ್ರಾದೀನಿ ತಥಾಸ್ತ್ರಾಣಿ ಶಕ್ರಾದಹಮವಾಪ್ತವಾನ್||

ನಾನು ರುದ್ರನಿಂದ ರೌದ್ರಾಸ್ತ್ರವನ್ನೂ, ವರುಣನಿಂದ ವಾರುಣಾಸ್ತ್ರವನ್ನೂ, ಅಗ್ನಿಯಿಂದ ಆಗ್ನೇಯಾಸ್ತ್ರವನ್ನೂ, ವಾಯುವಿನಿಂದ ವಾಯುವ್ಯಾಸ್ತ್ರವನ್ನೂ, ಇಂದ್ರನಿಂದ ವಜ್ರಾಯುಧವೇ ಮುಂತಾದ ಅಸ್ತ್ರಗಳನ್ನು ಪಡೆದುಕೊಂಡಿದ್ದೇನೆ.

04056015a ಧಾರ್ತರಾಷ್ಟ್ರವನಂ ಘೋರಂ ನರಸಿಂಹಾಭಿರಕ್ಷಿತಂ|

04056015c ಅಹಮುತ್ಪಾಟಯಿಷ್ಯಾಮಿ ವೈರಾಟೇ ವ್ಯೇತು ತೇ ಭಯಂ||

ಉತ್ತರ! ನರಶ್ರೇಷ್ಠರಿಂದ ರಕ್ಷಿತವಾದ ಧೃತರಾಷ್ಟ್ರಪುತ್ರರೆಂಬ ಈ ಘೋರ ವನವನ್ನು ನಾನು ಕಿತ್ತುಹಾಕುತ್ತೇನೆ. ನಿನ್ನ ಭಯವು ತೊಲಗಲಿ!

04056016a ಏವಮಾಶ್ವಾಸಿತಸ್ತೇನ ವೈರಾಟಿಃ ಸವ್ಯಸಾಚಿನಾ|

04056016c ವ್ಯಗಾಹತ ರಥಾನೀಕಂ ಭೀಮಂ ಭೀಷ್ಮಸ್ಯ ಧೀಮತಃ||

ಹೀಗೆ ಆ ಸವ್ಯಸಾಚಿಯಿಂದ ಆಶ್ವಾಸನೆಗೊಂಡ ಉತ್ತರನು ಧೀಮಂತ ಭೀಷ್ಮನ ಭಯಂಕರ ರಥಸೈನ್ಯವನ್ನು ಪ್ರವೇಶಿಸಿದನು.

04056017a ತಮಾಯಾಂತಂ ಮಹಾಬಾಹುಂ ಜಿಗೀಷಂತಂ ರಣೇ ಪರಾನ್|

04056017c ಅಭ್ಯವಾರಯದವ್ಯಗ್ರಃ ಕ್ರೂರಕರ್ಮಾ ಧನಂಜಯಂ||

ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲಬಯಸಿದ ಆ ಮಹಾಬಾಹು ಧನಂಜಯನನ್ನು ಕ್ರೂರಕಾರ್ಯಗಳನ್ನು ಮಾಡಿದ ಭೀಷ್ಮನು ಉದ್ವೇಗವಿಲ್ಲದೇ ತಡೆಗಟ್ಟಿದನು.

04056018a ತಂ ಚಿತ್ರಮಾಲ್ಯಾಭರಣಾಃ ಕೃತವಿದ್ಯಾ ಮನಸ್ವಿನಃ|

04056018c ಆಗಚ್ಛನ್ಭೀಮಧನ್ವಾನಂ ಮೌರ್ವೀಂ ಪರ್ಯಸ್ಯ ಬಾಹುಭಿಃ||

ಸುಂದರ ಮಾಲೆಗಳನ್ನೂ, ಆಭರಣಗಳನ್ನೂ ಧರಿಸಿದ್ದ ವಿದ್ಯಾಪರಿಣಿತ ಆ ಚತುರನು ತೋಳುಗಳಿಂದ ಬಿಲ್ಲಿನ ಹೆದೆಯನ್ನು ಮಿಡಿಯುತ್ತ ಭಯಂಕರ ಧನುರ್ಧರನ ಮೇಲೆರಗಿದನು.

04056019a ದುಃಶಾಸನೋ ವಿಕರ್ಣಶ್ಚ ದುಃಸ್ಸಹೋಽಥ ವಿವಿಂಶತಿಃ|

04056019c ಆಗತ್ಯ ಭೀಮಧನ್ವಾನಂ ಬೀಭತ್ಸುಂ ಪರ್ಯವಾರಯನ್||

ದುಃಶಾಸನ, ವಿಕರ್ಣ, ದುಃಸ್ಸಹ ಮತ್ತು ವಿವಿಂಶತಿ ಇವರು ಭಯಂಕರ ಧನುರ್ಧರ ಅರ್ಜುನನತ್ತ ನುಗ್ಗಿ ಸುತ್ತುಗಟ್ಟಿದರು.

04056020a ದುಃಶಾಸನಸ್ತು ಭಲ್ಲೇನ ವಿದ್ಧ್ವಾ ವೈರಾಟಿಮುತ್ತರಂ|

04056020c ದ್ವಿತೀಯೇನಾರ್ಜುನಂ ವೀರಃ ಪ್ರತ್ಯವಿಧ್ಯತ್ಸ್ತನಾಂತರೇ||

ವೀರ ದುಃಶಾಸನನು ಭಲ್ಲೆಯಿಂದ ವಿರಾಟಪುತ್ರ ಉತ್ತರನನ್ನು ಹೊಡೆದು ಇನ್ನೊಂದರಿಂದ ಅರ್ಜುನನ ಎದೆಗೆ ಹೊಡೆದನು.

04056021a ತಸ್ಯ ಜಿಷ್ಣುರುಪಾವೃತ್ಯ ಪೃಥುಧಾರೇಣ ಕಾರ್ಮುಕಂ|

04056021c ಚಕರ್ತ ಗಾರ್ಧ್ರಪತ್ರೇಣ ಜಾತರೂಪಪರಿಷ್ಕೃತಂ||

ತಿರುಗಿ ಅರ್ಜುನನು ಹದ್ದಿನ ಗರಿಯ ವಿಶಾಲ ಅಲಗುಗಳ ಬಾಣಗಳಿಂದ ಅವನ ಸುವರ್ಣಖಚಿತ ಬಿಲ್ಲನ್ನು ಕತ್ತರಿಸಿದನು.

04056022a ಅಥೈನಂ ಪಂಚಭಿಃ ಪಶ್ಚಾತ್ಪ್ರತ್ಯವಿಧ್ಯತ್ಸ್ತನಾಂತರೇ|

04056022c ಸೋಽಪಯಾತೋ ರಣಂ ಹಿತ್ವಾ ಪಾರ್ಥಬಾಣಪ್ರಪೀಡಿತಃ||

ಆಮೇಲೆ ಐದು ಬಾಣಗಳಿಂದ ಅವನ ಎದೆಗೆ ಹೊಡೆದನು. ಪಾರ್ಥನ ಬಾಣಗಳಿಂದ ಭಾದಿತನಾದ ಅವನು ಯುದ್ಧರಂಗವನ್ನು ಬಿಟ್ಟು ಓಡಿ ಹೋದನು.

04056023a ತಂ ವಿಕರ್ಣಃ ಶರೈಸ್ತೀಕ್ಷ್ಣೈರ್ಗಾರ್ಧ್ರಪತ್ರೈರಜಿಹ್ಮಗೈಃ|

04056023c ವಿವ್ಯಾಧ ಪರವೀರಘ್ನಮರ್ಜುನಂ ಧೃತರಾಷ್ಟ್ರಜಃ||

ಧೃತರಾಷ್ಟ್ರಪುತ್ರ ವಿಕರ್ಣನು ಶತ್ರುವೀರರನ್ನು ಕೊಲ್ಲುವ ಅರ್ಜುನನನ್ನು ಹದ್ದಿನ ಗರಿಗಳ, ಹರಿತ ನೇರಗತಿಯ ಬಾಣಗಳಿಂದ ಹೊಡೆದನು.

04056024a ತತಸ್ತಮಪಿ ಕೌಂತೇಯಃ ಶರೇಣಾನತಪರ್ವಣಾ|

04056024c ಲಲಾಟೇಽಭ್ಯಹನತ್ತೂರ್ಣಂ ಸ ವಿದ್ಧಃ ಪ್ರಾಪತದ್ರಥಾತ್||

ಆಗ ಅರ್ಜುನನು ನೇರ್ಪಡಿಸಿದ ಗಿಣ್ಣಿನ ಬಾಣದಿಂದ ಬೇಗ ಅವನ ಹಣೆಗೆ ಹೊಡೆದನು. ಪೆಟ್ಟುತಿಂದ ಅವನು ರಥದಿಂದ ಬಿದ್ದನು.

04056025a ತತಃ ಪಾರ್ಥಮಭಿದ್ರುತ್ಯ ದುಃಸ್ಸಹಃ ಸವಿವಿಂಶತಿಃ|

04056025c ಅವಾಕಿರಚ್ಚರೈಸ್ತೀಕ್ಷ್ಣೈಃ ಪರೀಪ್ಸನ್ಭ್ರಾತರಂ ರಣೇ||

ಅನಂತರ ಯುದ್ಧದಲ್ಲಿ ಸೋದರರನ್ನು ರಕ್ಷಿಸ ಬಯಸಿದ ದುಃಸ್ಸಹನು ವಿವಿಂಶತಿಯೊಡಗೂಡಿ ಪಾರ್ಥನತ್ತ ನುಗ್ಗಿ ತೀಕ್ಷ್ಣಬಾಣಗಳಿಂದ ಅವನನ್ನು ಮುಚ್ಚಿದನು.

04056026a ತಾವುಭೌ ಗಾರ್ಧ್ರಪತ್ರಾಭ್ಯಾಂ ನಿಶಿತಾಭ್ಯಾಂ ಧನಂಜಯಃ|

04056026c ವಿದ್ಧ್ವಾ ಯುಗಪದವ್ಯಗ್ರಸ್ತಯೋರ್ವಾಹಾನಸೂದಯತ್||

ಧನಂಜಯನು ಉದ್ವಿಗ್ನನಾಗದೇ ಹದ್ದಿನ ಗರಿಗಳಿಂದ ಕೂಡಿದ ಹರಿತ ಬಾಣಗಳಿಂದ ಅವರಿಬ್ಬರನ್ನೂ ಏಕಕಾಲದಲ್ಲಿ ಹೊಡೆದು ಅವರ ಕುದುರೆಗಳನ್ನು ಕೊಂದನು.

04056027a ತೌ ಹತಾಶ್ವೌ ವಿವಿದ್ಧಾಂಗೌ ಧೃತರಾಷ್ಟ್ರಾತ್ಮಜಾವುಭೌ|

04056027c ಅಭಿಪತ್ಯ ರಥೈರನ್ಯೈರಪನೀತೌ ಪದಾನುಗೈಃ||

ಕುದುರೆಗಳು ಸತ್ತು, ಅವರ ದೇಹಗಳು ಗಾಯಗೊಳ್ಳಲು ಆ ಧೃತರಾಷ್ಟ್ರಪುತ್ರರಿಬ್ಬರನ್ನೂ ಅವರ ಕಾಲಾಳುಗಳು ಮುನ್ನುಗ್ಗಿ ಬೇರೆ ರಥಗಳಲ್ಲಿ ಕೊಂಡೊಯ್ದರು.

04056028a ಸರ್ವಾ ದಿಶಶ್ಚಾಭ್ಯಪತದ್ಬೀಭತ್ಸುರಪರಾಜಿತಃ|

04056028c ಕಿರೀಟಮಾಲೀ ಕೌಂತೇಯೋ ಲಬ್ಧಲಕ್ಷೋ ಮಹಾಬಲಃ||

ಸೋಲಿಲ್ಲದ, ಕಿರೀಟಧಾರಿ, ಗುರಿತಪ್ಪದ, ಬಹಾಬಲಿ ಅರ್ಜುನನು ಎಲ್ಲ ದಿಕ್ಕುಗಳನ್ನೂ ಆಕ್ರಮಿಸಿದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನದುಃಶಾಸನಾದಿಯುದ್ಧೇ ಷಟ್‌ಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನದುಃಶಾಸನಾದಿಯುದ್ಧದಲ್ಲಿ ಐವತ್ತಾರನೆಯ ಅಧ್ಯಾಯವು.

Related image

Comments are closed.