Virata Parva: Chapter 53

ವಿರಾಟ ಪರ್ವ: ಗೋಹರಣ ಪರ್ವ

೫೩

ದ್ರೋಣಾರ್ಜುನರ ಯುದ್ಧ

ಅರ್ಜುನನು ದ್ರೋಣನನ್ನು ಎದುರಿಸಿದುದು (೧-೯). ಅರ್ಜುನನ ಬಾಣಗಳಿಂದ ಕವಚ ಮತ್ತು ಧ್ವಜಗಳು ಹರಿದು ಹೋಗಿ ಗಾಯಗೊಂಡಿದ್ದ ದ್ರೋಣನು ಯುದ್ಧಬಿಟ್ಟು ಹೊರಟು ಹೋದುದು (೧೦-೬೯).

04053001 ಅರ್ಜುನ ಉವಾಚ|

04053001a ಯತ್ರೈಷಾ ಕಾಂಚನೀ ವೇದೀ ಪ್ರದೀಪ್ತಾಗ್ನಿಶಿಖೋಪಮಾ|

04053001c ಉಚ್ಛ್ರಿತಾ ಕಾಂಚನೇ ದಂಡೇ ಪತಾಕಾಭಿರಲಂಕೃತಾ|

04053001e ತತ್ರ ಮಾಂ ವಹ ಭದ್ರಂ ತೇ ದ್ರೋಣಾನೀಕಾಯ ಮಾರಿಷ||

ಅರ್ಜುನನು ಹೇಳಿದನು: “ಮಿತ್ರ! ಉರಿಯುತ್ತಿರುವ ಅಗ್ನಿಜ್ವಾಲೆಗೆ ಸಮಾನ ಚಿನ್ನದ ವೇದಿಕೆಯನ್ನುಳ್ಳ, ಎತ್ತರವಾದ ಚಿನ್ನದ ದಂಡದ ತುದಿಗೆ ಬಿಗಿದಿರುವ ಬಾವುಟಗಳಿಂದ ಅಲಂಕೃತವಾದ ದ್ರೋಣಸೈನ್ಯದೆಡೆಗೆ ನನ್ನನ್ನು ಕರೆದೊಯ್ಯಿ. ನಿನಗೆ ಮಂಗಳವಾಗಲಿ.

04053002a ಅಶ್ವಾಃ ಶೋಣಾಃ ಪ್ರಕಾಶಂತೇ ಬೃಹಂತಶ್ಚಾರುವಾಹಿನಃ|

04053002c ಸ್ನಿಗ್ಧವಿದ್ರುಮಸಂಕಾಶಾಸ್ತಾಮ್ರಾಸ್ಯಾಃ ಪ್ರಿಯದರ್ಶನಾಃ|

04053002e ಯುಕ್ತಾ ರಥವರೇ ಯಸ್ಯ ಸರ್ವಶಿಕ್ಷಾವಿಶಾರದಾಃ||

ದ್ರೋಣನ ಶ್ರೇಷ್ಠ ರಥಕ್ಕೆ ಹೂಡಿದ ಕುದುರೆಗಳು ಕೆಂಪಗೆ ಹೊಳೆಯುತ್ತಿವೆ. ಅವು ದೊಡ್ಡವು, ಸುಂದರವಾದವು. ಮಿರುಗುವ ಹರಣಕ್ಕೆ ಸಮನಾದವು. ತಾಮ್ರವರ್ಣದ ಮುಖವುಳ್ಳವು. ನೋಡುವುದಕ್ಕೆ ಅಂದವಾದವು ಮತ್ತು ಎಲ್ಲ ತರಬೇತಿಯನ್ನೂ ಪಡೆದವು.

04053003a ದೀರ್ಘಬಾಹುರ್ಮಹಾತೇಜಾ ಬಲರೂಪಸಮನ್ವಿತಃ|

04053003c ಸರ್ವಲೋಕೇಷು ವಿಖ್ಯಾತೋ ಭಾರದ್ವಾಜಃ ಪ್ರತಾಪವಾನ್||

ದ್ರೋಣನು ಉದ್ದ ತೋಳುಗಳುಳ್ಳವನು. ಮಹಾತೇಜಸ್ವಿ. ಬಲ ಮತ್ತು ರೂಪವುಳ್ಳವನು. ಪ್ರತಾಪಶಾಲಿ ಮತ್ತು ಸರ್ವಲೋಕಗಳಲ್ಲಿಯೂ ಪ್ರಸಿದ್ಧ.

04053004a ಬುದ್ಧ್ಯಾ ತುಲ್ಯೋ ಹ್ಯುಶನಸಾ ಬೃಹಸ್ಪತಿಸಮೋ ನಯೇ|

04053004c ವೇದಾಸ್ತಥೈವ ಚತ್ವಾರೋ ಬ್ರಹ್ಮಚರ್ಯಂ ತಥೈವ ಚ||

04053005a ಸಸಂಹಾರಾಣಿ ದಿವ್ಯಾನಿ ಸರ್ವಾಣ್ಯಸ್ತ್ರಾಣಿ ಮಾರಿಷ|

04053005c ಧನುರ್ವೇದಶ್ಚ ಕಾರ್ತ್ಸ್ನ್ಯೆನ ಯಸ್ಮಿನ್ನಿತ್ಯಂ ಪ್ರತಿಷ್ಠಿತಃ||

ಅವನು ಬುದ್ಧಿಯಲ್ಲಿ ಶುಕ್ರನಿಗೂ, ನೀತಿಯಲ್ಲಿ ಬೃಹಸ್ಪತಿಗೂ ಸಮಾನ. ಮಿತ್ರ! ನಾಲ್ಕುವೇದಗಳೂ, ಅಂತೆಯೇ ಬ್ರಹ್ಮಚರ್ಯವೂ, ಉಪಸಂಹಾರ ವಿಧಿಸಹಿತವಾದ ಸಕಲ ದಿವ್ಯಾಸ್ತ್ರಗಳೂ, ಧನುರ್ವೇದವೂ, ಸಂಪೂರ್ಣವಾಗಿ ಸದಾ ಅವನಲ್ಲಿ ನೆಲೆಸಿವೆ.

04053006a ಕ್ಷಮಾ ದಮಶ್ಚ ಸತ್ಯಂ ಚ ಆನೃಶಂಸ್ಯಮಥಾರ್ಜವಂ|

04053006c ಏತೇ ಚಾನ್ಯೇ ಚ ಬಹವೋ ಗುಣಾ ಯಸ್ಮಿನ್ದ್ವಿಜೋತ್ತಮೇ||

ಆ ಬ್ರಾಹ್ಮಣೋತ್ತಮನಲ್ಲಿ ಕ್ಷಮೆ, ದಮೆ, ಸತ್ಯ, ದಯೆ, ಪ್ರಾಮಾಣಿಕತೆ - ಇವೂ, ಇತರ ಹಲವಾರು ಗುಣಗಳೂ, ನೆಲೆಸಿವೆ.

04053007a ತೇನಾಹಂ ಯೋದ್ಧುಮಿಚ್ಛಾಮಿ ಮಹಾಭಾಗೇನ ಸಂಯುಗೇ|

04053007c ತಸ್ಮಾತ್ತ್ವಂ ಪ್ರಾಪಯಾಚಾರ್ಯಂ ಕ್ಷಿಪ್ರಮುತ್ತರ ವಾಹಯ||

ಆ ಮಹಾಭಾಗ್ಯಶಾಲಿಯೊಡನೆ ನಾನು ಯುದ್ಧದಲ್ಲಿ ಹೋರಾಡ ಬಯಸುತ್ತೇನೆ. ಆದ್ದರಿಂದ, ಉತ್ತರ! ನನ್ನನ್ನು ಆಚಾರ್ಯನೆಡೆಗೆ ಬೇಗನೆ ಕರೆದೊಯ್ಯಿ.””

04053008 ವೈಶಂಪಾಯನ ಉವಾಚ|

04053008a ಅರ್ಜುನೇನೈವಮುಕ್ತಸ್ತು ವೈರಾಟಿರ್ಹೇಮಭೂಷಿತಾನ್|

04053008c ಚೋದಯಾಮಾಸ ತಾನಶ್ವಾನ್ಭಾರದ್ವಾಜರಥಂ ಪ್ರತಿ||

ವೈಶಂಪಾಯನನು ಹೇಳಿದನು: “ಅರ್ಜುನನು ಹೀಗೆ ಹೇಳಲು ಉತ್ತರನು ಚಿನ್ನದಿಂದ ಅಲಂಕೃತವಾದ ಆ ಕುದುರೆಗಳನ್ನು ದ್ರೋಣದ ರಥಕ್ಕೆ ಎದುರಾಗಿ ನಡೆಸಿದನು.

04053009a ತಮಾಪತಂತಂ ವೇಗೇನ ಪಾಂಡವಂ ರಥಿನಾಂ ವರಂ|

04053009c ದ್ರೋಣಃ ಪ್ರತ್ಯುದ್ಯಯೌ ಪಾರ್ಥಂ ಮತ್ತೋ ಮತ್ತಮಿವ ದ್ವಿಪಂ||

ವೇಗವಾಗಿ ನುಗ್ಗಿ ಬರುತ್ತಿದ್ದ ಆ ರಥಿಕಶ್ರೇಷ್ಠ ಪಾಂಡುಪುತ್ರ ಪಾರ್ಥನನ್ನು ದ್ರೋಣನು ಮದ್ದಾನೆಯು ಮದ್ದಾನೆಯನ್ನು ಎದುರಿಸುವಂತೆ ಎದುರಿಸಿದನು.

04053010a ತತಃ ಪ್ರಾಧ್ಮಾಪಯಚ್ಚಂಖಂ ಭೇರೀಶತನಿನಾದಿತಂ|

04053010c ಪ್ರಚುಕ್ಷುಭೇ ಬಲಂ ಸರ್ವಮುದ್ಧೂತ ಇವ ಸಾಗರಃ||

ಅನಂತರ ದ್ರೋಣನು ನೂರು ಭೇರಿಗಳಂತೆ ಶಬ್ಧಮಾಡುವ ಶಂಖವನ್ನು ಊದಿದನು. ಆಗ ಸೈನ್ಯವೆಲ್ಲವೂ ಅಲ್ಲೋಲಕಲ್ಲೋಲ ಸಮುದ್ರದಂತೆ ಪ್ರಕ್ಷುಬ್ದವಾಯಿತು.

04053011a ಅಥ ಶೋಣಾನ್ಸದಶ್ವಾಂಸ್ತಾನ್ ಹಂಸವರ್ಣೈರ್ಮನೋಜವೈಃ|

04053011c ಮಿಶ್ರಿತಾನ್ಸಮರೇ ದೃಷ್ಟ್ವಾ ವ್ಯಸ್ಮಯಂತ ರಣೇ ಜನಾಃ|

ಆಗ ಯುದ್ಧದಲ್ಲಿ ಅರ್ಜುನನ ಮನೋವೇಗದ ಮತ್ತು ಹಂಸವರ್ಣದ ಕುದುರೆಗಳೊಡನೆ ಕೂಡಿದ ದ್ರೋಣನ ಕೆಂಪು ಕುದುರೆಗಳನ್ನು ನೋಡಿ ರಣರಂಗದಲ್ಲಿದ್ದವರು ವಿಸ್ಮಯಗೊಂಡರು.

04053012a ತೌ ರಥೌ ವೀರ್ಯಸಂಪನ್ನೌ ದೃಷ್ಟ್ವಾ ಸಂಗ್ರಾಮಮೂರ್ಧನಿ|

04053012c ಆಚಾರ್ಯಶಿಷ್ಯಾವಜಿತೌ ಕೃತವಿದ್ಯೌ ಮನಸ್ವಿನೌ||

04053013a ಸಮಾಶ್ಲಿಷ್ಟೌ ತದಾನ್ಯೋನ್ಯಂ ದ್ರೋಣಪಾರ್ಥೌ ಮಹಾಬಲೌ|

04053013c ದೃಷ್ಟ್ವಾ ಪ್ರಾಕಂಪತ ಮುಹುರ್ಭರತಾನಾಂ ಮಹದ್ಬಲಂ||

ವೀರ್ಯಸಂಪನ್ನರೂ, ಗುರು-ಶಿಷ್ಯರೂ, ಸೋಲದವರೂ, ವಿದ್ಯಾಪಾರಂಗತರೂ, ಉದಾತ್ತರೂ, ಮಹಾಬಲರೂ ಆದ ಆ ರಥಿಕ ದ್ರೋಣ-ಪಾರ್ಥರು ಯುದ್ಧರಂಗದಲ್ಲಿ ಪರಸ್ಪರ ಮಿಳಿತರಾಗಿರುವುದನ್ನು ಕಂಡು ಭಾರತರ ಮಹಾಸೈನ್ಯವು ಮತ್ತೆ ಮತ್ತೆ ಕಂಪಿಸಿತು.

04053014a ಹರ್ಷಯುಕ್ತಸ್ತಥಾ ಪಾರ್ಥಃ ಪ್ರಹಸನ್ನಿವ ವೀರ್ಯವಾನ್|

04053014c ರಥಂ ರಥೇನ ದ್ರೋಣಸ್ಯ ಸಮಾಸಾದ್ಯ ಮಹಾರಥಃ||

ಆಮೇಲೆ ವೀರ್ಯಶಾಲಿ ಮಹಾರಥ ಪಾರ್ಥನು ಹರ್ಷಗೊಂಡು ನಗುತ್ತ ತನ್ನ ರಥವನ್ನು ದ್ರೋಣನ ರಥದ ಸಮೀಪ ತಂದನು.

04053015a ಅಭಿವಾದ್ಯ ಮಹಾಬಾಹುಃ ಸಾಂತ್ವಪೂರ್ವಮಿದಂ ವಚಃ|

04053015c ಉವಾಚ ಶ್ಲಕ್ಷ್ಣಯಾ ವಾಚಾ ಕೌಂತೇಯಃ ಪರವೀರಹಾ||

ಆ ಮಹಾಬಾಹು ಶತ್ರುನಾಶಕ ಅರ್ಜುನನು ದ್ರೋಣನಿಗೆ ವಂದಿಸಿ ವಿನಯಪೂರ್ವಕ ಮಧುರ ಈ ಮಾತುಗಳನ್ನಾಡಿದನು:

04053016a ಉಷಿತಾಃ ಸ್ಮ ವನೇ ವಾಸಂ ಪ್ರತಿಕರ್ಮ ಚಿಕೀರ್ಷವಃ|

04053016c ಕೋಪಂ ನಾರ್ಹಸಿ ನಃ ಕರ್ತುಂ ಸದಾ ಸಮರದುರ್ಜಯ||

“ಯುದ್ಧದಲ್ಲಿ ಸದಾ ಅಜೇಯನಾದವನೇ! ವನವಾಸಮಾಡಿದ ನಾವು ಈಗ ಪ್ರತೀಕಾರ ಮಾಡಬಯಸುತ್ತೇವೆ. ನೀನು ನಮ್ಮ ವಿಷಯದಲ್ಲಿ ಕೋಪಿಸಿಕೊಳ್ಳಬಾರದು.

04053017a ಅಹಂ ತು ಪ್ರಹೃತೇ ಪೂರ್ವಂ ಪ್ರಹರಿಷ್ಯಾಮಿ ತೇಽನಘ|

04053017c ಇತಿ ಮೇ ವರ್ತತೇ ಬುದ್ಧಿಸ್ತದ್ಭವಾನ್ಕರ್ತುಮರ್ಹತಿ||

ಪಾಪರಹಿತನೇ! ನೀನು ನನ್ನನ್ನು ಮೊದಲು ಹೊಡೆದ ನಂತರ ಮಾತ್ರ ನಾನು ನಿನ್ನನ್ನು ಹೊಡೆಯುತ್ತೇನೆ ಎಂಬುದು ನನ್ನ ನಿಶ್ಚಯ. ಆದರಿಂದ ನೀನು ಹಾಗೆ ಮಾಡಬೇಕು.”

04053018a ತತೋಽಸ್ಮೈ ಪ್ರಾಹಿಣೋದ್ದ್ರೋಣಃ ಶರಾನಧಿಕವಿಂಶತಿಂ|

04053018c ಅಪ್ರಾಪ್ತಾಂಶ್ಚೈವ ತಾನ್ ಪಾರ್ಥಶ್ಚಿಚ್ಛೇದ ಕೃತಹಸ್ತವತ್||

ಅನಂತರ ದ್ರೋಣನು ಅರ್ಜುನನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಬಾಣಗಳನ್ನು ಬಿಟ್ಟನು. ಅವು ಮುಟ್ಟುವುದಕ್ಕೆ ಮುನ್ನವೇ ಕೈಚಳಕದಿಂದ ಪಾರ್ಥಗಳನ್ನು ಅವುಗಳನ್ನು ಕತ್ತರಿಸಿದನು.

04053019a ತತಃ ಶರಸಹಸ್ರೇಣ ರಥಂ ಪಾರ್ಥಸ್ಯ ವೀರ್ಯವಾನ್|

04053019c ಅವಾಕಿರತ್ತತೋ ದ್ರೋಣಃ ಶೀಘ್ರಮಸ್ತ್ರಂ ವಿದರ್ಶಯನ್||

ಆಮೇಲೆ ವೀರ್ಯಶಾಲಿ ದ್ರೋಣನು ಅಸ್ತ್ರಕೌಶಲವನ್ನು ಬೇಗ ತೋರಿಸುತ್ತಾ ಸಾವಿರ ಬಾಣಗಳಿಂದ ಅರ್ಜುನನ ರಥವನ್ನು ಮುಚ್ಚಿದನು.

04053020a ಏವಂ ಪ್ರವವೃತೇ ಯುದ್ಧಂ ಭಾರದ್ವಾಜಕಿರೀಟಿನೋಃ|

04053020c ಸಮಂ ವಿಮುಂಚತೋಃ ಸಂಖ್ಯೇ ವಿಶಿಖಾನ್ದೀಪ್ತತೇಜಸಃ||

ದ್ರೋಣ ಮತ್ತು ಅರ್ಜುನರಿಗೆ ಹೀಗೆ ಯುದ್ಧ ಮೊದಲಾಯಿತು. ಯುದ್ಧದಲ್ಲಿ ಉರಿಯುವ ತೇಜಸ್ಸನ್ನುಳ್ಳ ಬಾಣಗಳನ್ನು ಇಬ್ಬರೂ ಸಮನಾಗಿ ಪ್ರಯೋಗಿಸುತ್ತಿದ್ದರು.

04053021a ತಾವುಭೌ ಖ್ಯಾತಕರ್ಮಾಣಾವುಭೌ ವಾಯುಸಮೌ ಜವೇ|

04053021c ಉಭೌ ದಿವ್ಯಾಸ್ತ್ರವಿದುಷಾವುಭಾವುತ್ತಮತೇಜಸೌ|

04053021e ಕ್ಷಿಪಂತೌ ಶರಜಾಲಾನಿ ಮೋಹಯಾಮಾಸತುರ್ನೃಪಾನ್||

ಇಬ್ಬರೂ ಖ್ಯಾತಕಾರ್ಯಗಳನ್ನು ಮಾಡಿದವರು. ಇಬ್ಬರೂ ವಾಯುಸಮಾನ ವೇಗವುಳ್ಳವರು. ಇಬ್ಬರೂ ದಿವ್ಯಾಸ್ತ್ರಗಳನ್ನು ಬಲ್ಲವರು. ಇಬ್ಬರೂ ಉತ್ತಮ ತೇಜಸ್ಸನ್ನುಳ್ಳವರು. ಅವರು ಬಾಣ ಸಮೂಹಗಳನ್ನು ಪ್ರಯೋಗಿಸುತ್ತಾ ದೊರೆಗಳನ್ನು ಬೆರಗುಗೊಳಿಸಿದರು.

04053022a ವ್ಯಸ್ಮಯಂತ ತತೋ ಯೋಧಾಃ ಸರ್ವೇ ತತ್ರ ಸಮಾಗತಾಃ|

04053022c ಶರಾನ್ವಿಸೃಜತೋಸ್ತೂರ್ಣಂ ಸಾಧು ಸಾಧ್ವಿತಿ ಪೂಜಯನ್||

ಆಗ ಅಲ್ಲಿ ಸೇರಿದ್ದ ಯೋದ್ಧರೆಲ್ಲರೂ ವಿಸ್ಮಿತರಾಗಿ ಶೀಘ್ರವಾಗಿ ಬಾಣಪ್ರಯೋಗ ಮಾಡುತ್ತಿದ್ದ ಅವರನ್ನು “ಲೇಸು! ಲೇಸು!” ಎಂದು ಹೊಗಳಿದರು.

04053023a ದ್ರೋಣಂ ಹಿ ಸಮರೇ ಕೋಽನ್ಯೋ ಯೋದ್ಧುಮರ್ಹತಿ ಫಲ್ಗುನಾತ್|

04053023c ರೌದ್ರಃ ಕ್ಷತ್ರಿಯಧರ್ಮೋಽಯಂ ಗುರುಣಾ ಯದಯುಧ್ಯತ|

04053023e ಇತ್ಯಬ್ರುವಂ ಜನಾಸ್ತತ್ರ ಸಂಗ್ರಾಮಶಿರಸಿ ಸ್ಥಿತಾಃ||

“ಅರ್ಜುನನ ವಿನಾ ಯುದ್ಧದಲ್ಲಿ ದ್ರೋಣನೊಡನೆ ಹೋರಾಡಬಲ್ಲವರು ಬೇರೆ ಯಾರು? ಈ ಕ್ಷತ್ರಿಯ ಧರ್ಮ ಭಯಂಕರವಾದುದು. ಏಕೆಂದರೆ ಗುರುವಿನೊಡನೆಯೂ ಇವನು ಯುದ್ಧಮಾಡುತ್ತಿದ್ದಾನೆ!” ಎಂದು ಆ ಯುದ್ಧರಂಗದಲ್ಲಿದ್ದ ಜನರು ಮಾತನಾಡಿಕೊಳ್ಳುತ್ತಿದ್ದರು.

04053024a ವೀರೌ ತಾವಪಿ ಸಂರಬ್ಧೌ ಸಂನಿಕೃಷ್ಟೌ ಮಹಾರಥೌ|

04053024c ಚಾದಯೇತಾಂ ಶರವ್ರಾತೈರನ್ಯೋನ್ಯಮಪರಾಜಿತೌ||

ಹತ್ತಿರದಲ್ಲಿದ್ದ, ಮಹಾರಥರಾದ, ಸೋಲದ ಆ ವೀರರಿಬ್ಬರೂ ಕೋಪಾವಿಷ್ಟರಾಗಿ ಬಾಣಗಳ ಸಮೂಹದಿಂದ ಒಬ್ಬರನ್ನೊಬ್ಬರು ಮುಚ್ಚಿಬಿಟ್ಟರು.

04053025a ವಿಸ್ಫಾರ್ಯ ಸುಮಹಚ್ಚಾಪಂ ಹೇಮಪೃಷ್ಠಂ ದುರಾಸದಂ|

04053025c ಸಂರಬ್ಧೋಽಥ ಭರದ್ವಾಜಃ ಫಲ್ಗುನಂ ಪ್ರತ್ಯಯುಧ್ಯತ||

ಆಗ ದ್ರೋಣನು ಕೃದ್ಧನಾಗಿ ಚಿನ್ನದ ಬದಿಯನ್ನುಳ್ಳ ದೊಡ್ಡ ಅಜೇಯ ಬಿಲ್ಲನ್ನು ಮಿಡಿದು ಅರ್ಜುನನೊಡನೆ ಯುದ್ಧಮಾಡಿದನು.

04053026a ಸ ಸಾಯಕಮಯೈರ್ಜಾಲೈರರ್ಜುನಸ್ಯ ರಥಂ ಪ್ರತಿ|

04053026c ಭಾನುಮದ್ಭಿಃ ಶಿಲಾಧೌತೈರ್ಭಾನೋಃ ಪ್ರಚ್ಛಾದಯತ್ಪ್ರಭಾಂ||

ಅವನು ಸಾಣೆಕಲ್ಲಿನಿಂದ ಹರಿತಗೊಳಿಸಿ ಹೊಳೆಯುವ ಬಾಣಗಳ ಜಾಲವನ್ನು ಅರ್ಜುನನ ರಥದ ಮೇಲೆ ಪ್ರಯೋಗಿಸಿ ಸೂರ್ಯನ ಪ್ರಭೆಯನ್ನು ಮುಸುಕಿಬಿಟ್ಟನು.

04053027a ಪಾರ್ಥಂ ಚ ಸ ಮಹಾಬಾಹುರ್ಮಹಾವೇಗೈರ್ಮಹಾರಥಃ|

04053027c ವಿವ್ಯಾಧ ನಿಶಿತೈರ್ಬಾಣೈರ್ಮೇಘೋ ವೃಷ್ಟ್ಯೇವ ಪರ್ವತಂ||

ಆ ಮಹಾಬಾಹು ಮಹಾರಥಿ ದ್ರೋಣನು ಮೋಡವು ಮಳೆಯಿಂದ ಪರ್ವತವನ್ನು ಹೊಡೆಯುವಂತೆ ಮಹಾವೇಗವುಳ್ಳ ಹರಿತ ಬಾಣಗಳಿಂದ ಪಾರ್ಥನನ್ನು ಹೊಡೆದನು.

04053028a ತಥೈವ ದಿವ್ಯಂ ಗಾಂಡೀವಂ ಧನುರಾದಾಯ ಪಾಂಡವಃ|

04053028c ಶತ್ರುಘ್ನಂ ವೇಗವದ್ಧೃಷ್ಟೋ ಭಾರಸಾಧನಮುತ್ತಮಂ|

04053028e ವಿಸಸರ್ಜ ಶರಾಂಶ್ಚಿತ್ರಾನ್ಸುವರ್ಣವಿಕೃತಾನ್ಬಹೂನ್||

ಅಂತೆಯೇ ಧೈರ್ಯಶಾಲಿ ಅರ್ಜುನನು ಆ ದಿವ್ಯ, ವೇಗಶಾಲಿ, ಶತ್ರುನಾಶಕ, ಮಹತ್ಕಾರ್ಯಸಾಧಕ, ಉತ್ತಮ ಗಾಂಡೀವ ಧನುಸ್ಸನ್ನು ತೆಗೆದುಕೊಂಡು ಬಹಳ ವಿಚಿತ್ರ ಸುವರ್ಣಖಚಿತ ಬಾಣಗಳನ್ನು ಬಿಟ್ಟನು.

04053029a ನಾಶಯಂ ಶರವರ್ಷಾಣಿ ಭಾರದ್ವಾಜಸ್ಯ ವೀರ್ಯವಾನ್|

04053029c ತೂರ್ಣಂ ಚಾಪವಿನಿರ್ಮುಕ್ತೈಸ್ತದದ್ಭುತಮಿವಾಭವತ್||

ಆ ವೀರ್ಯಶಾಲಿಯು ಬಿಲ್ಲಿನಿಂದ ಬಿಟ್ಟ ಬಾಣಗಳಿಂದ ದ್ರೋಣನ ಬಾಣಗಳ ಮಳೆಯನ್ನು ಬೇಗ ನಾಶಗೊಳಿಸಿದನು. ಅದು ಅದ್ಭುತವಾಗಿತ್ತು.

04053030a ಸ ರಥೇನ ಚರನ್ಪಾರ್ಥಃ ಪ್ರೇಕ್ಷಣೀಯೋ ಧನಂಜಯಃ|

04053030c ಯುಗಪದ್ದಿಕ್ಷು ಸರ್ವಾಸು ಸರ್ವಶಸ್ತ್ರಾಣ್ಯದರ್ಶಯತ್||

ಆ ಸುಂದರ, ಕುಂತೀಪುತ್ರ ಧನಂಜಯನು ರಥದಲ್ಲಿ ಸಂಚರಿಸುತ್ತ ಏಕ ಕಾಲದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ತನ್ನ ಶಸ್ತ್ರಕೌಶಲವನ್ನು ತೋರಿಸಿದನು.

04053031a ಏಕಚ್ಛಾಯಮಿವಾಕಾಶಂ ಬಾಣೈಶ್ಚಕ್ರೇ ಸಮಂತತಃ|

04053031c ನಾದೃಶ್ಯತ ತದಾ ದ್ರೋಣೋ ನೀಹಾರೇಣೇವ ಸಂವೃತಃ||

ಅವನು ಆಕಾಶವನ್ನು ಎಲ್ಲೆಡೆಯಲ್ಲಿಯೂ ಬಾಣಗಳಿಂದ ಮುಚ್ಚಿ ಒಂದೇ ಸಮನೆ ಕತ್ತಲಾಗುವಂತೆ ಮಾಡಿದನು. ಆಗ ದ್ರೋಣನು ಮಂಜಿನಿಂದ ಆವೃತನಾಗಿ ಕಾಣದಂತಾದನು.

04053032a ತಸ್ಯಾಭವತ್ತದಾ ರೂಪಂ ಸಂವೃತಸ್ಯ ಶರೋತ್ತಮೈಃ|

04053032c ಜಾಜ್ವಲ್ಯಮಾನಸ್ಯ ಯಥಾ ಪರ್ವತಸ್ಯೇವ ಸರ್ವತಃ||

ಆಗ ಸುತ್ತಲೂ ಉತ್ತಮ ಬಾಣಗಳು ಕವಿದ ಅವನ ರೂಪವು ಎಲ್ಲ ಕಡೆಯೂ ಉರಿಯುತ್ತಿರುವ ಪರ್ವತದಂತಾಯಿತು.

04053033a ದೃಷ್ಟ್ವಾ ತು ಪಾರ್ಥಸ್ಯ ರಣೇ ಶರೈಃ ಸ್ವರಥಮಾವೃತಂ|

04053033c ಸ ವಿಸ್ಫಾರ್ಯ ಧನುಶ್ಚಿತ್ರಂ ಮೇಘಸ್ತನಿತನಿಸ್ವನಂ||

ಯುದ್ಧದಲ್ಲಿ ತನ್ನ ರಥವು ಪಾರ್ಥನ ಬಾಣಗಳಿಂದ ಆವೃತವಾದುದನ್ನು ಕಂಡು ಆ ದ್ರೋಣನು ಮೋಡದ ಮೊಳಗಿನಂತೆ ಶಬ್ಧ ಮಾಡುವ ವಿಚಿತ್ರ ಬಿಲ್ಲನ್ನು ಮಿಡಿದನು.

04053034a ಅಗ್ನಿಚಕ್ರೋಪಮಂ ಘೋರಂ ವಿಕರ್ಷನ್ಪರಮಾಯುಧಂ|

04053034c ವ್ಯಶಾತಯಚ್ಚರಾಂಸ್ತಾಂಸ್ತು ದ್ರೋಣಃ ಸಮಿತಿಶೋಭನಃ|

04053034e ಮಹಾನಭೂತ್ತತಃ ಶಬ್ದೋ ವಂಶಾನಾಮಿವ ದಃಯತಾಂ||

ಯುದ್ಧಕ್ಕೆ ಭೂಷಣಪ್ರಾಯ ದ್ರೊಣನು ಅಗ್ನಿಚಕ್ರ ಸದೃಶ, ಘೋರ, ಶ್ರೇಷ್ಠ ಆಯುಧವನ್ನು ಸೆಳೆದು ಆ ಬಾಣಗಳನ್ನು ಕತ್ತರಿಸಿದನು. ಆಗ ಸುಟ್ಟುಹೋಗುವ ಬಿದಿರಿನ ಶಬ್ಧದಂಥಹ ಮಹಾಶಬ್ಧವುಂಟಾಯಿತು.

04053035a ಜಾಂಬೂನದಮಯೈಃ ಪುಂಖೈಶ್ಚಿತ್ರಚಾಪವರಾತಿಗೈಃ|

04053035c ಪ್ರಾಚ್ಛಾದಯದಮೇಯಾತ್ಮಾ ದಿಶಃ ಸೂರ್ಯಸ್ಯ ಚ ಪ್ರಭಾಂ||

ಆ ಅಮಿತಾತ್ಮನು ಶ್ರೇಷ್ಠ ವಿಚಿತ್ರ ಬಿಲ್ಲಿನಿಂದ ಬಿಟ್ಟ ಚಿನ್ನದ ಗರಿಗಳ ಬಾಣಗಳಿಂದ ದಿಕ್ಕುಗಳನ್ನೂ ಸೂರ್ಯನ ಕಾಂತಿಯನ್ನೂ ಮುಚ್ಚಿದನು.

04053036a ತತಃ ಕನಕಪುಂಖಾನಾಂ ಶರಾಣಾಂ ನತಪರ್ವಣಾಂ|

04053036c ವಿಯಚ್ಚರಾಣಾಂ ವಿಯತಿ ದೃಶ್ಯಂತೇ ಬಹುಶಃ ಪ್ರಜಾಃ||

ಆಗ ಚಿನ್ನದ ಗರಿಗಳ, ನೇರ್ಪಡಿಸಿದ ಗಿಣ್ಣುಗಳ, ಆಕಾಶಗಾಮಿ ಬಾಣಗಳಿಂದ ಆಗಸದಲ್ಲಿ ಬಹಳ ಬಾಣಗಳ ಸಂತತಿಯೇ ಗೋಚರಿಸಿತು.

04053037a ದ್ರೋಣಸ್ಯ ಪುಂಖಸಕ್ತಾಶ್ಚ ಪ್ರಭವಂತಃ ಶರಾಸನಾತ್|

04053037c ಏಕೋ ದೀರ್ಘ ಇವಾದೃಶ್ಯದಾಕಾಶೇ ಸಂಹತಃ ಶರಃ||

ದ್ರೋಣನ ಬಿಲ್ಲಿನಿಂದ ಪುಂಖಾನುಪುಂಖವಾಗಿ ಹೊಮ್ಮಿದ ಬಾಣಗಳು ಆಕಾಶದಲ್ಲಿ ಒಟ್ಟಿಗೆ ಸೇರಿ ಒಂದೇ ದೀರ್ಘ ಬಾಣದಂತೆ ತೋರಿದವು.

04053038a ಏವಂ ತೌ ಸ್ವರ್ಣವಿಕೃತಾನ್ವಿಮುಂಚಂತೌ ಮಹಾಶರಾನ್|

04053038c ಆಕಾಶಂ ಸಂವೃತಂ ವೀರಾವುಲ್ಕಾಭಿರಿವ ಚಕ್ರತುಃ||

ಹೀಗೆ ಆ ವೀರರಿಬ್ಬರೂ ಚಿನ್ನದಿಂದ ಮಾಡಿದ ಮಹಾಬಾಣಗಳನ್ನು ಬಿಡುತ್ತಾ ಆಕಾಶವು ಉಲ್ಕೆಗಳಿಂದ ಮುಚ್ಚಿ ಹೋಯಿತೆಂಬಂತೆ ಮಾಡಿದರು.

04053039a ಶರಾಸ್ತಯೋಶ್ಚ ವಿಬಭುಃ ಕಂಕಬರ್ಹಿಣವಾಸಸಃ|

04053039c ಪಂಕ್ತ್ಯಃ ಶರದಿ ಖಸ್ಥಾನಾಂ ಹಂಸಾನಾಂ ಚರತಾಮಿವ||

ಕಂಕಪಕ್ಷಿಗಳ ಹೊದಿಕೆಯ ಗರಿಗಳಿಂದ ಕೂಡಿದ ಅವರ ಆ ಬಾಣಗಳು ಶರತ್ಕಾಲದ ಆಕಾಶದಲ್ಲಿ ಸಂಚರಿಸುವ ಹಂಸಗಳ ಸಾಲುಗಳಂತೆ ಗೋಚರಿಸಿದವು.

04053040a ಯುದ್ಧಂ ಸಮಭವತ್ತತ್ರ ಸುಸಂರಬ್ಧಂ ಮಹಾತ್ಮನೋಃ|

04053040c ದ್ರೋಣಪಾಂಡವಯೋರ್ಘೋರಂ ವೃತ್ರವಾಸವಯೋರಿವ||

ಆ ಮಹಾತ್ಮ ದ್ರೋಣಾರ್ಜುನರ ನಡುವಿನ ಯುದ್ಧವು ವೃತ್ರ ಮತ್ತು ಇಂದ್ರರ ನಡುವೆ ನಡೆದ ಯುದ್ಧದಂತೆ ಪ್ರಕ್ಷುಬ್ಧವೂ ಘೋರವೂ ಆಗಿತ್ತು.

04053041a ತೌ ಗಜಾವಿವ ಚಾಸಾದ್ಯ ವಿಷಾಣಾಗ್ರೈಃ ಪರಸ್ಪರಂ|

04053041c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ||

ದಂತಗಳಿಂದ ಪರಸ್ಪರ ಸೆಣೆಯುವ ಆನೆಗಳಂತೆ ಅವರು ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಒಬ್ಬರನ್ನೊಬ್ಬರು ಹೊಡೆದರು.

04053042a ತೌ ವ್ಯವಾಹರತಾಂ ಶೂರೌ ಸಂರಬ್ಧೌ ರಣಶೋಭಿನೌ|

04053042c ಉದೀರಯಂತೌ ಸಮರೇ ದಿವ್ಯಾನ್ಯಸ್ತ್ರಾಣಿ ಭಾಗಶಃ||

ಕೃದ್ಧರೂ, ರಣರಂಗಕ್ಕೆ ಭೂಷಣಪ್ರಾಯರೂ ಆದ ಆ ವೀರರು ಒಂದೆಡೆಯಿಂದ ಮತ್ತೊಂದೆಡೆಗೆ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ನಿಯಮಾನುಸಾರವಾಗಿ ಯುದ್ಧದಲ್ಲಿ ಹೋರಾಡಿದರು.

04053043a ಅಥ ತ್ವಾಚಾರ್ಯಮುಖ್ಯೇನ ಶರಾನ್ಸೃಷ್ಟಾಂ ಶಿಲಾಶಿತಾನ್|

04053043c ನ್ಯವಾರಯಚ್ಚಿತೈರ್ಬಾಣೈರರ್ಜುನೋ ಜಯತಾಂ ವರಃ||

ಆಗ ಆಚಾರ್ಯಮುಖ್ಯನು ಬಿಟ್ಟ ಸಾಣೆಕಲ್ಲಿನಿಂದ ಮಸೆದ ಬಾಣಗಳನ್ನು ವಿಜಯಿಗಳಲ್ಲಿ ಶ್ರೇಷ್ಠ ಅರ್ಜುನನು ಹರಿತ ಬಾಣಗಳಿಂದ ನಿವಾರಿಸಿದನು.

04053044a ದರ್ಶಯನ್ನೈಂದ್ರಿರಾತ್ಮಾನಮುಗ್ರಮುಗ್ರಪರಾಕ್ರಮಃ|

04053044c ಇಷುಭಿಸ್ತೂರ್ಣಮಾಕಾಶಂ ಬಹುಭಿಶ್ಚ ಸಮಾವೃಣೋತ್||

ಉಗ್ರಪರಾಕ್ರಮಿ ಅರ್ಜುನನು ತನ್ನ ಉಗ್ರತೆಯನ್ನು ಪ್ರದರ್ಶಿಸುತ್ತಾ ಬಹಳ ಬಾಣಗಳಿಂದ ಬೇಗ ಆಕಾಶವನ್ನು ಮುಚ್ಚಿಬಿಟ್ಟನು.

04053045a ಜಿಘಾಂಸಂತಂ ನರವ್ಯಾಘ್ರಮರ್ಜುನಂ ತಿಗ್ಮತೇಜಸಂ|

04053045c ಆಚಾರ್ಯಮುಖ್ಯಃ ಸಮರೇ ದ್ರೋಣಃ ಶಸ್ತ್ರಭೃತಾಂ ವರಃ|

04053045e ಅರ್ಜುನೇನ ಸಹಾಕ್ರೀಡಚ್ಚರೈಃ ಸಂನತಪರ್ವಭಿಃ||

ಯುದ್ಧದಲ್ಲಿ ತನ್ನನ್ನು ಹೊಡೆಯುತ್ತಿದ್ದ ನರಶ್ರೇಷ್ಠ, ತೀವ್ರತೇಜಸ್ವಿ ಅರ್ಜುನನೊಡನೆ ಆಚಾರ್ಯಮುಖ್ಯ, ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನು ನೇರ್ಪಡಿಸಿದ ಗಿಣ್ಣುಗಳ ಬಾಣಗಳಿಂದ ಆಟವಾಡುತ್ತಿದ್ದನು.

04053046a ದಿವ್ಯಾನ್ಯಸ್ತ್ರಾಣಿ ಮುಂಚಂತಂ ಭಾರದ್ವಾಜಂ ಮಹಾರಣೇ|

04053046c ಅಸ್ತ್ರೈರಸ್ತ್ರಾಣಿ ಸಂವಾರ್ಯ ಫಲ್ಗುನಃ ಸಮಯೋಧಯತ್||

ಆ ಮಹಾಯುದ್ಧದಲ್ಲಿ ದ್ರೋಣನು ದಿವಾಸ್ತ್ರಗಳನ್ನು ಬಿಡುತ್ತಿರಲು, ಅರ್ಜುನನು ಆ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ನಿವಾರಿಸಿ ಹೋರಾಡುತ್ತಿದ್ದನು.

04053047a ತಯೋರಾಸೀತ್ಸಂಪ್ರಹಾರಃ ಕ್ರುದ್ಧಯೋರ್ನರಸಿಂಹಯೋಃ|

04053047c ಅಮರ್ಷಿಣೋಸ್ತದಾನ್ಯೋನ್ಯಂ ದೇವದಾನವಯೋರಿವ||

ಕುಪಿತರೂ ಅಸಹಿಷ್ಣುಗಳೂ ಆಗಿದ್ದ ಆ ನರಶ್ರೇಷ್ಠರ ನಡುವೆ ದೇವದಾನವರ ನಡುವಿನಂತೆ ಪರಸ್ಪರ ಯುದ್ಧವು ನಡೆಯಿತು.

04053048a ಐಂದ್ರಂ ವಾಯವ್ಯಮಾಗ್ನೇಯಮಸ್ತ್ರಮಸ್ತ್ರೇಣ ಪಾಂಡವಃ|

04053048c ದ್ರೋಣೇನ ಮುಕ್ತಂ ಮುಕ್ತಂ ತು ಗ್ರಸತೇ ಸ್ಮ ಪುನಃ ಪುನಃ||

ದ್ರೋಣನು ಐಂದ್ರಾಸ್ತ್ರ, ವಾಯುವ್ಯಾಸ್ತ್ರ, ಅಗ್ನೇಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಂತೆಲ್ಲ ಅರ್ಜುನನು ಅವುಗಳನ್ನು ಅಸ್ತ್ರಗಳಿಂದ ಪುನಃ ಪುನಃ ನುಂಗಿಹಾಕುತ್ತಿದ್ದನು.

04053049a ಏವಂ ಶೂರೌ ಮಹೇಷ್ವಾಸೌ ವಿಸೃಜಂತೌ ಶಿತಾಂ ಶರಾನ್|

04053049c ಏಕಚ್ಛಾಯಂ ಚಕ್ರತುಸ್ತಾವಾಕಾಶಂ ಶರವೃಷ್ಟಿಭಿಃ||

ಹೀಗೆ ದೊಡ್ಡ ಬಿಲ್ಗಾರರಾದ ಆ ಶೂರರು ಹರಿತ ಬಾಣಗಳನ್ನು ಬಿಡುತ್ತಾ ಬಾಣಗಳ ಮಳೆಯಿಂದ ಆಕಾಶವನ್ನು ಒಂದೇಸಮನೆ ಮುಚ್ಚಿಬಿಟ್ಟರು.

04053050a ತತೋಽರ್ಜುನೇನ ಮುಕ್ತಾನಾಂ ಪತತಾಂ ಚ ಶರೀರಿಷು|

04053050c ಪರ್ವತೇಷ್ವಿವ ವಜ್ರಾಣಾಂ ಶರಾಣಾಂ ಶ್ರೂಯತೇ ಸ್ವನಃ||

ಶತ್ರು ಶರೀರಗಳ ಮೇಲೆ ಬೀಳುತ್ತಿದ್ದ ಅರ್ಜುನನ ಬಾಣಗಳ ಶಬ್ಧವು ಪರ್ವತಗಳ ಮೇಲೆ ಬಿದ್ದ ಸಿಡಿಲುಗಳ ಶಬ್ಧದಂತೆ ಕೇಳಿಬರುತ್ತಿತ್ತು.

04053051a ತತೋ ನಾಗಾ ರಥಾಶ್ಚೈವ ಸಾದಿನಶ್ಚ ವಿಶಾಂ ಪತೇ|

04053051c ಶೋಣಿತಾಕ್ತಾ ವ್ಯದೃಶ್ಯಂತ ಪುಷ್ಪಿತಾ ಇವ ಕಿಂಶುಕಾಃ||

ರಾಜನ್! ಆಗ ರಕ್ತದಿಂದ ತೊಯ್ದ ಆನೆಗಳೂ, ರಥಿಕರೂ, ಮತ್ತು ಮಾವುತರೂ ಹೂಬಿಟ್ಟ ಮುತ್ತುಗದ ಮರಗಳಂತೆ ತೋರುತ್ತಿದ್ದರು.

04053052a ಬಾಹುಭಿಶ್ಚ ಸಕೇಯೂರೈರ್ವಿಚಿತ್ರೈಶ್ಚ ಮಹಾರಥೈಃ|

04053052c ಸುವರ್ಣಚಿತ್ರೈಃ ಕವಚೈರ್ಧ್ವಜೈಶ್ಚ ವಿನಿಪಾತಿತೈಃ||

04053053a ಯೋಧೈಶ್ಚ ನಿಹತೈಸ್ತತ್ರ ಪಾರ್ಥಬಾಣಪ್ರಪೀಡಿತೈಃ|

04053053c ಬಲಮಾಸೀತ್ಸಮುದ್ಭ್ರಾಂತಂ ದ್ರೋಣಾರ್ಜುನಸಮಾಗಮೇ||

ಆ ದ್ರೋಣಾರ್ಜುನರ ಯುದ್ಧದಲ್ಲಿ ಪಾರ್ಥನ ಬಾಣಗಳಿಂದ ಕತ್ತರಿಸಲ್ಪಟ್ಟ ಕೇಯೂರಗಳ ತೋಳುಗಳಿಂದಲೂ, ಬಣ್ಣ್ನಬಣ್ಣದ ಮಹಾರಥರಿಂದಲೂ, ಸ್ವರ್ಣಖಚಿತ ಕವಚಗಳಿಂದಲೂ, ಬಿದ್ದ ಬಾವುಟಗಳಿಂದಲೂ, ಹತರಾದ ಯೋಧರಿಂದಲೂ, ಕುರುಸೈನ್ಯವು ದಿಗ್ಭ್ರಾಂತವಾಯಿತು.

04053054a ವಿಧುನ್ವಾನೌ ತು ತೌ ವೀರೌ ಧನುಷೀ ಭಾರಸಾಧನೇ|

04053054c ಆಚ್ಛಾದಯೇತಾಮನ್ಯೋನ್ಯಂ ತಿತಕ್ಷಂತೌ ರಣೇಷುಭಿಃ||

ಒತ್ತಡವನ್ನು ತಡೆಯಬಲ್ಲ ಬಿಲ್ಲುಗಳನ್ನು ಮಿಡಿಯುತ್ತ ಆ ವೀರರು ತಾಗುಬಾಣಗಳಿಂದ ತಡೆದುಕೊಳ್ಳಬಯಸಿ ಒಬ್ಬರನ್ನೊಬ್ಬರು ಮುಸುಕಿದರು.

04053055a ಅಥಾಂತರಿಕ್ಷೇ ನಾದೋಽಭೂದ್ದ್ರೋಣಂ ತತ್ರ ಪ್ರಶಂಸತಾಂ|

04053055c ದುಷ್ಕರಂ ಕೃತವಾನ್ದ್ರೋಣೋ ಯದರ್ಜುನಮಯೋಧಯತ್||

04053056a ಪ್ರಮಾಥಿನಂ ಮಹಾವೀರ್ಯಂ ದೃಢಮುಷ್ಟಿಂ ದುರಾಸದಂ|

04053056c ಜೇತಾರಂ ದೇವದೈತ್ಯಾನಾಂ ಸರ್ಪಾಣಾಂ ಚ ಮಹಾರಥಂ||

ಅನಂತರ ಆಕಾಶದಲ್ಲಿ ದ್ರೋಣನನ್ನು ಹೊಗಳುವವರ ದನಿಯೊಂದು ಕೇಳಿಬಂದಿತು: “ಶತ್ರುನಾಶಕ, ಮಹಾವೀರ್ಯಶಾಲಿ, ದೃಢಮುಷ್ಟಿಯುಳ್ಳ, ಎದುರಿಸಲಾಗದ, ದೇವದೈತ್ಯಸರ್ಪರನ್ನು ಗೆದ್ದ, ಮಹಾರಥಿ ಅರ್ಜುನನೊಡನೆ ಯುದ್ಧಮಾಡಿದ ದ್ರೋಣನು ದುಷ್ಕರವಾದುದನ್ನೇ ಮಾಡಿದ್ದಾನೆ.”

04053057a ಅವಿಶ್ರಮಂ ಚ ಶಿಕ್ಷಾಂ ಚ ಲಾಘವಂ ದೂರಪಾತಿತಾಂ|

04053057c ಪಾರ್ಥಸ್ಯ ಸಮರೇ ದೃಷ್ಟ್ವಾ ದ್ರೋಣಸ್ಯಾಭೂಚ್ಚ ವಿಸ್ಮಯಃ||

ಯುದ್ಧದಲ್ಲಿ ಪಾರ್ಥನ ಅನಾಯಾಸವನ್ನೂ, ಶಿಕ್ಷಣವನ್ನೂ, ಕೈಚಳಕವನ್ನೂ, ಬಾಣಗಳ ದೂರಪ್ರಯೋಗವನ್ನೂ ನೋಡಿ ದ್ರೋಣನಿಗೆ ವಿಸ್ಮಯವಾಯಿತು.

04053058a ಅಥ ಗಾಂಡೀವಮುದ್ಯಮ್ಯ ದಿವ್ಯಂ ಧನುರಮರ್ಷಣಃ|

04053058c ವಿಚಕರ್ಷ ರಣೇ ಪಾರ್ಥೋ ಬಾಹುಭ್ಯಾಂ ಭರತರ್ಷಭ||

ಭರತರ್ಷಭ! ಆಮೇಲೆ ರಣದಲ್ಲಿ ಪಾರ್ಥನು ಕೋಪಗೊಂಡು ದಿವ್ಯ ಗಾಂಡೀವ ಧನುವನ್ನೆತ್ತಿ ತೋಳುಗಳಿಂದ ಸೆಳೆದನು.

04053059a ತಸ್ಯ ಬಾಣಮಯಂ ವರ್ಷಂ ಶಲಭಾನಾಮಿವಾಯತಂ|

04053059c ನ ಚ ಬಾಣಾಂತರೇ ವಾಯುರಸ್ಯ ಶಕ್ನೋತಿ ಸರ್ಪಿತುಂ||

ಅವನ ಬಾಣಗಳ ಮಳೆ ಮಿಡಿತೆಗಳ ಸಮೂಹದಂತೆ ವಿಸ್ತಾರವಾಗಿತ್ತು. ಅವನ ಬಾಣಗಳ ನಡುವೆ ಗಾಳಿಯೂ ಚಲಿಸಲಾಗಲಿಲ್ಲ.

04053060a ಅನಿಶಂ ಸಂದಧಾನಸ್ಯ ಶರಾನುತ್ಸೃಜತಸ್ತದಾ|

04053060c ದದೃಶೇ ನಾಂತರಂ ಕಿಂ ಚಿತ್ಪಾರ್ಥಸ್ಯಾದದತೋಽಪಿ ಚ||

ಆಗ ಪಾರ್ಥನು ನಿರಂತರವಾಗಿ ಬಾಣಗಳನ್ನು ತೆಗೆದು ಹೂಡಿ ಬಿಡುತ್ತಿರಲಾಗಿ ನಡುವೆ ಸ್ವಲ್ಪವೂ ಅಂತರವು ಕಾಣುತ್ತಿರಲಿಲ್ಲ.

04053061a ತಥಾ ಶೀಘ್ರಾಸ್ತ್ರಯುದ್ಧೇ ತು ವರ್ತಮಾನೇ ಸುದಾರುಣೇ|

04053061c ಶೀಘ್ರಾಚ್ಚೀಘ್ರತರಂ ಪಾರ್ಥಃ ಶರಾನನ್ಯಾನುದೀರಯತ್||

ಅನಂತರ ಭಯಂಕರ ಶೀಘ್ರಾಸ್ತ್ರಯುದ್ಧವು ನಡೆಯುತ್ತಿರಲು ಪಾರ್ಥನು ಮೊದಲಿಗಿಂತಲೂ ಶೀಘ್ರವಾಗಿ ಬೇರೆ ಬಾಣಗಳನ್ನು ಪ್ರಯೋಗಿಸಿದನು.

04053062a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಂ|

04053062c ಯುಗಪತ್ಪ್ರಾಪತಂಸ್ತತ್ರ ದ್ರೋಣಸ್ಯ ರಥಮಂತಿಕಾತ್||

ಬಳಿಕ ನೇರಗೊಳಿಸಿದ ಗಿಣ್ಣುಗಳನ್ನುಳ್ಳ ಲಕ್ಷಾಂತರ ಬಾಣಗಳು ಒಟ್ಟಿಗೇ ದ್ರೋಣನ ರಥದ ಸಮೀಪದಲ್ಲಿ ಬಿದ್ದವು.

04053063a ಅವಕೀರ್ಯಮಾಣೇ ದ್ರೋಣೇ ತು ಶರೈರ್ಗಾಂಡೀವಧನ್ವನಾ|

04053063c ಹಾಹಾಕಾರೋ ಮಹಾನಾಸೀತ್ಸೈನ್ಯಾನಾಂ ಭರತರ್ಷಭ||

ಭರತರ್ಷಭ! ಗಾಂಡೀವಧನುರ್ಧರನು ಬಾಣಗಳಿಂದ ದ್ರೋಣನನ್ನು ಮುಚ್ಚಿಹಾಕಲು ಸೈನ್ಯದಲ್ಲಿ ದೊಡ್ಡ ಹಾಹಾಕಾರವುಂಟಾಯಿತು.

04053064a ಪಾಂಡವಸ್ಯ ತು ಶೀಘ್ರಾಸ್ತ್ರಂ ಮಘವಾನ್ಸಮಪೂಜಯತ್|

04053064c ಗಂಧರ್ವಾಪ್ಸರಸಶ್ಚೈವ ಯೇ ಚ ತತ್ರ ಸಮಾಗತಾಃ||

ಇಂದ್ರನೂ ಮತ್ತು ಅಲ್ಲಿ ಬಂದು ಸೇರಿದ ಗಂಧರ್ವಾಪ್ಸರೆಯರೂ ಅರ್ಜುನನ ಶೀಘ್ರಾಸ್ತ್ರ ಪ್ರಯೋಗವನ್ನು ಹೊಗಳಿದರು.

04053065a ತತೋ ವೃಂದೇನ ಮಹತಾ ರಥಾನಾಂ ರಥಯೂಥಪಃ|

04053065c ಆಚಾರ್ಯಪುತ್ರಃ ಸಹಸಾ ಪಾಂಡವಂ ಪ್ರತ್ಯವಾರಯತ್||

ಆಮೇಲೆ, ರಥಸೈನ್ಯಕ್ಕೆ ಅಧಿಪತಿಯಾದ ಆಚಾರ್ಯಪುತ್ರನು ದೊಡ್ಡ ರಥಸಮೂಹದಿಂದ ಅರ್ಜುನನನ್ನು ಇದ್ದಕ್ಕಿದ್ದಂತೆ ತಡೆದನು.

04053066a ಅಶ್ವತ್ಥಾಮಾ ತು ತತ್ಕರ್ಮ ಹೃದಯೇನ ಮಹಾತ್ಮನಃ|

04053066c ಪೂಜಯಾಮಾಸ ಪಾರ್ಥಸ್ಯ ಕೋಪಂ ಚಾಸ್ಯಾಕರೋದ್ಭೃಶಂ||

ಅಶ್ವತ್ಥಾಮನು ಮಹಾತ್ಮ ಪಾರ್ಥನ ಕಾರ್ಯವನ್ನು ಮನಸ್ಸಿನಲ್ಲಿ ಹೊಗಳಿದರೂ ಅವನ ಮೇಲೆ ಬಹಳ ಕೋಪಮಾಡಿಕೊಂಡನು.

04053067a ಸ ಮನ್ಯುವಶಮಾಪನ್ನಃ ಪಾರ್ಥಮಭ್ಯದ್ರವದ್ರಣೇ|

04053067c ಕಿರಂ ಶರಸಹಸ್ರಾಣಿ ಪರ್ಜನ್ಯ ಇವ ವೃಷ್ಟಿಮಾನ್||

ಯುದ್ಧದಲ್ಲಿ ಅವನು ಕೋಪವಶನಾಗಿ ಮಳೆಗರೆಯುವ ಮೋಡದಂತೆ ಪಾರ್ಥನನ್ನು ಸಾವಿರ ಬಾಣಗಳಿಂದ ಮುಚ್ಚಿ ಅವನತ್ತ ನುಗ್ಗಿದನು.

04053068a ಆವೃತ್ಯ ತು ಮಹಾಬಾಹುರ್ಯತೋ ದ್ರೌಣಿಸ್ತತೋ ಹಯಾನ್|

04053068c ಅಂತರಂ ಪ್ರದದೌ ಪಾರ್ಥೋ ದ್ರೋಣಸ್ಯ ವ್ಯಪಸರ್ಪಿತುಂ||

ಮಹಾಬಾಹು ಪಾರ್ಥನು ದ್ರೋಣಪುತ್ರನಿದ್ದೆಡೆಗೆ ತನ್ನ ಕುದುರೆಗಳನ್ನು ತಿರುಗಿಸಿ, ದ್ರೋಣನು ಜಾರಿಕೊಳ್ಳಲು ಅವಕಾಶ ಮಾಡಿಕೊಟ್ಟನು.

04053069a ಸ ತು ಲಬ್ಧ್ವಾಂತರಂ ತೂರ್ಣಮಪಾಯಾಜ್ಜವನೈರ್ಹಯೈಃ|

04053069c ಚಿನ್ನವರ್ಮಧ್ವಜಃ ಶೂರೋ ನಿಕೃತ್ತಃ ಪರಮೇಷುಭಿಃ||

ಅರ್ಜುನನ ಶ್ರೇಷ್ಠ ಬಾಣಗಳಿಂದ ಕವಚ ಮತ್ತು ಧ್ವಜಗಳು ಹರಿದು ಹೋಗಿ ಗಾಯಗೊಂಡಿದ್ದ ಆ ಶೂರ ದ್ರೋಣನು ಆ ಅವಕಾಶವನ್ನು ಬಳಸಿಕೊಂಡು ವೇಗಗಾಮಿ ಕುದುರೆಗಳ ನೆರವಿನಿಂದ ಬೇಗ ಹೊರಟುಹೋದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದ್ರೋಣಾಪಯಾನೇ ತ್ರಿಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದ್ರೋಣಾಪಯಾನದಲ್ಲಿ ಐವತ್ಮೂರನೆಯ ಅಧ್ಯಾಯವು.

Related image

Comments are closed.