Virata Parva: Chapter 50

ವಿರಾಟ ಪರ್ವ: ಗೋಹರಣ ಪರ್ವ

೫೦

ಅರ್ಜುನನು ಕುರುಯೋಧರನ್ನು ಉತ್ತರನಿಗೆ ಪರಿಚಯಿಸಿದುದು

ಅರ್ಜುನನು ಉತ್ತರನಿಗೆ ಕುರುಸೇನೆಯಲ್ಲಿರುವ ಷಡ್ರಥರಾದ ಕೃಪ, ದ್ರೋಣ, ಅಶ್ವತ್ಥಾಮ, ದುರ್ಯೋಧನ, ಕರ್ಣ ಮತ್ತು ಭೀಷ್ಮರ ಪರಿಚಯ ಮಾಡಿಕೊಡುವುದು (೧-೨೩).

04050001 ವೈಶಂಪಾಯನ ಉವಾಚ|

04050001a ಅಪಯಾತೇ ತು ರಾಧೇಯೇ ದುರ್ಯೋಧನಪುರೋಗಮಾಃ|

04050001c ಅನೀಕೇನ ಯಥಾಸ್ವೇನ ಶರೈರಾರ್ಚ್ಛಂತ ಪಾಂಡವಂ||

ವೈಶಂಪಾಯನನು ಹೇಳಿದನು: “ಕರ್ಣನು ಹೊರಟುಹೋಗಲು ಉಳಿದವರು ದುರ್ಯೋಧನನನ್ನು ಮುಂದಿಟ್ಟುಕೊಂಡು ತಮ್ಮ ತಮ್ಮ ಸೈನ್ಯದೊಡನೆ ಕೂಡಿ ಅರ್ಜುನನನ್ನು ಬಾಣಗಳಿಂದ ಹೊಡೆದರು.

04050002a ಬಹುಧಾ ತಸ್ಯ ಸೈನ್ಯಸ್ಯ ವ್ಯೂಢಸ್ಯಾಪತತಃ ಶರೈಃ|

04050002c ಅಭಿಯಾನೀಯಮಾಜ್ಞಾಯ ವೈರಾಟಿರಿದಮಬ್ರವೀತ್||

ವ್ಯೂಹಗೊಂಡು ಬಹುಪ್ರಕಾರವಾಗಿ ಬಾಣಗಳಿಂದ ಎರಗುತ್ತಿದ್ದ ಆ ಸೈನ್ಯದ ಮೇಲೆ ಬೀಳಬೇಕೆಂಬ ಅರ್ಜುನನ ಅಭಿಪ್ರಾಯವನ್ನು ತಿಳಿದು ಉತ್ತರನು ಹೀಗೆ ಹೇಳಿದನು:

04050003a ಆಸ್ಥಾಯ ರುಚಿರಂ ಜಿಷ್ಣೋ ರಥಂ ಸಾರಥಿನಾ ಮಯಾ|

04050003c ಕತಮದ್ಯಾಸ್ಯಸೇಽನೀಕಮುಕ್ತೋ ಯಾಸ್ಯಾಮ್ಯಹಂ ತ್ವಯಾ||

“ಅರ್ಜುನ! ಈ ಸುಂದರ ರಥದಲ್ಲಿ ನನ್ನನ್ನು ಸಾರಥಿಯನ್ನಾಗಿ ಮಾಡಿಕೊಂಡು ಕುಳಿತಿರುವ ನೀನು ಈಗ ಯಾವ ಸೈನ್ಯದತ್ತ ಹೋಗಬಯಸುವೆ ಎಂಬುದನ್ನು ಹೇಳಿದರೆ ಅಲ್ಲಿಗೆ ಕರೆದೊಯ್ಯುತ್ತೇನೆ.”

04050004 ಅರ್ಜುನ ಉವಾಚ|

04050004a ಲೋಹಿತಾಕ್ಷಮರಿಷ್ಟಂ ಯಂ ವೈಯಾಘ್ರಮನುಪಶ್ಯಸಿ|

04050004c ನೀಲಾಂ ಪತಾಕಾಮಾಶ್ರಿತ್ಯ ರಥೇ ತಿಷ್ಠಂತಮುತ್ತರ||

ಅರ್ಜುನನು ಹೇಳಿದನು: “ಉತ್ತರ! ಆ ಕೆಂಪುಕಣ್ಣುಳ್ಳ, ಅಜೇಯ, ವ್ಯಾಘ್ರಚರ್ಮವನ್ನು ಧರಿಸಿದ, ನೀಲಿಬಣ್ಣದ ಬಾವುಟದ ರಥದಲ್ಲಿ ಕುಳಿತ, ನಿನಗೆ ಕಾಣಿಸುತ್ತಿರುವ ಅವನಲ್ಲಿಗೆ ಹೋಗಬೇಕು.

04050005a ಕೃಪಸ್ಯೈತದ್ರಥಾನೀಕಂ ಪ್ರಾಪಯಸ್ವೈತದೇವ ಮಾಂ|

04050005c ಏತಸ್ಯ ದರ್ಶಯಿಷ್ಯಾಮಿ ಶೀಘ್ರಾಸ್ತ್ರಂ ದೃಢಧನ್ವಿನಃ||

ಅದು ಕೃಪನ ರಥಸೈನ್ಯ. ಅಲ್ಲಿಗೇ ನನ್ನನ್ನು ಕರೆದೊಯ್ಯಿ. ಆ ದೃಢಧನುರ್ಧರನಿಗೆ ನನ್ನ ಅಸ್ತ್ರವೇಗವನ್ನು ತೋರಿಸುತ್ತೇನೆ.

04050006a ಕಮಂಡಲುರ್ಧ್ವಜೇ ಯಸ್ಯ ಶಾತಕುಂಭಮಯಃ ಶುಭಃ|

04050006c ಆಚಾರ್ಯ ಏಷ ವೈ ದ್ರೋಣಃ ಸರ್ವಶಸ್ತ್ರಭೃತಾಂ ವರಃ||

ಧ್ವಜದಲ್ಲಿ ಸುವರ್ಣಮಯ ಶುಭ ಕಮಂಡಲು ಇರುವ ಈತನೇ ಸರ್ವಶಸ್ತ್ರಧರರಲ್ಲಿ ಶ್ರೇಷ್ಠ ಆಚಾರ್ಯ ದ್ರೋಣ.

04050007a ಸುಪ್ರಸನ್ನಮನಾ ವೀರ ಕುರುಷ್ವೈನಂ ಪ್ರದಕ್ಷಿಣಂ|

04050007c ಅತ್ರೈವ ಚಾವಿರೋಧೇನ ಏಷ ಧರ್ಮಃ ಸನಾತನಃ||

ವೀರ! ಇಲ್ಲಿಯೇ ಸುಪ್ರಸನ್ನಚಿತ್ತದಿಂದ ವಿರೋಧವಿಲ್ಲದೇ ಇವನಿಗೆ ಪ್ರದಕ್ಷಿಣೆ ಹಾಕು. ಇದು ಸನಾತನ ಧರ್ಮ.

04050008a ಯದಿ ಮೇ ಪ್ರಥಮಂ ದ್ರೋಣಃ ಶರೀರೇ ಪ್ರಹರಿಷ್ಯತಿ|

04050008c ತತೋಽಸ್ಯ ಪ್ರಹರಿಷ್ಯಾಮಿ ನಾಸ್ಯ ಕೋಪೋ ಭವಿಷ್ಯತಿ||

ಮೊದಲು ದ್ರೋಣನು ನನಗೆ ಹೊಡೆದನೆಂದರೆ ನಂತರ ನಾನು ಅವನಿಗೆ ಹೊಡೆಯುತ್ತೇನೆ. ಆಗ ಅವನಿಗೆ ಕೋಪ ಬರುವುದಿಲ್ಲ.

04050009a ಅಸ್ಯಾವಿದೂರೇ ತು ಧನುರ್ಧ್ವಜಾಗ್ರೇ ಯಸ್ಯ ದೃಶ್ಯತೇ|

04050009c ಆಚಾರ್ಯಸ್ಯೈಷ ಪುತ್ರೋ ವೈ ಅಶ್ವತ್ಥಾಮಾ ಮಹಾರಥಃ||

ಅವನಿಗೆ ಹತ್ತಿರದಲ್ಲಿ ಕಾಣಿಸುತ್ತಿರುವ, ಧ್ವಜಾಗ್ರದಲ್ಲಿ ಧನುವಿನ ಚಿಹ್ನೆಯನ್ನು ಹೊಂದಿದ ಇವನೇ ಆಚಾರ್ಯಪುತ್ರ ಮಹಾರಥಿ ಅಶ್ವತ್ಥಾಮ.

04050010a ಸದಾ ಮಮೈಷ ಮಾನ್ಯಶ್ಚ ಸರ್ವಶಸ್ತ್ರಭೃತಾಮಪಿ|

04050010c ಏತಸ್ಯ ತ್ವಂ ರಥಂ ಪ್ರಾಪ್ಯ ನಿವರ್ತೇಥಾಃ ಪುನಃ ಪುನಃ||

ಇವನು ಯಾವಾಗಲೂ ನನಗೆ ಮತ್ತು ಎಲ್ಲ ಶಸ್ತ್ರಧರರಿಗೆ ಮಾನ್ಯನಾದವನು. ಇವನ ರಥವನ್ನು ಸಮೀಪಿಸಿದಾಗ ಅಲ್ಲಿಂದ ಮತ್ತೆ ಮತ್ತೆ ಹಿಮ್ಮೆಟ್ಟು.

04050011a ಯ ಏಷ ತು ರಥಾನೀಕೇ ಸುವರ್ಣಕವಚಾವೃತಃ|

04050011c ಸೇನಾಗ್ರ್ಯೇಣ ತೃತೀಯೇನ ವ್ಯವಹಾರ್ಯೇಣ ತಿಷ್ಠತಿ||

04050012a ಯಸ್ಯ ನಾಗೋ ಧ್ವಜಾಗ್ರೇ ವೈ ಹೇಮಕೇತನಸಂಶ್ರಿತಃ|

04050012c ಧೃತರಾಷ್ಟ್ರಾತ್ಮಜಃ ಶ್ರೀಮಾನೇಷ ರಾಜಾ ಸುಯೋಧನಃ||

ರಥಸೈನ್ಯದಲ್ಲಿ ಸುವರ್ಣಕವಚವನ್ನು ಧರಿಸಿ, ಸೇನೆಯ ಶ್ರೇಷ್ಠ ಮೂರನೆಯ ಒಂದು ಭಾಗದಿಂದ ಪರಿವೃತನಾಗಿ, ಧ್ವಜಾಗ್ರದಲ್ಲಿ ಚಿನ್ನದಲ್ಲಿ ಕೆತ್ತಿದ ಆನೆಯುಳ್ಳವನಾಗಿರುವ ಈತನೇ ಧೃತರಾಷ್ಟ್ರಪುತ್ರ ಶ್ರೀಯುತ ರಾಜ ಸುಯೋಧನ.

04050013a ಏತಸ್ಯಾಭಿಮುಖಂ ವೀರ ರಥಂ ಪರರಥಾರುಜಃ|

04050013c ಪ್ರಾಪಯಸ್ವೈಷ ತೇಜೋಭಿಪ್ರಮಾಥೀ ಯುದ್ಧದುರ್ಮದಃ||

ವೀರ! ರಥವನ್ನು ಇವನ ಮುಂದಕ್ಕೆ ಒಯ್ಯಿ. ಇವನು ಶತ್ರುರಥಗಳನ್ನು ಧ್ವಂಸಮಾಡುವವನು, ಶತ್ರುಗಳ ತೇಜಸ್ಸನ್ನು ಕೆಡಿಸುವವನು ಮತ್ತು ಯುದ್ಧದುರ್ಮದವುಳ್ಳವನು.

04050014a ಏಷ ದ್ರೋಣಸ್ಯ ಶಿಷ್ಯಾಣಾಂ ಶೀಘ್ರಾಸ್ತ್ರಃ ಪ್ರಥಮೋ ಮತಃ|

04050014c ಏತಸ್ಯ ದರ್ಶಯಿಷ್ಯಾಮಿ ಶೀಘ್ರಾಸ್ತ್ರಂ ವಿಪುಲಂ ಶರೈಃ||

ಇವನು ದ್ರೋಣನ ಶಿಷ್ಯರಲ್ಲೆಲ್ಲ ಅಸ್ತ್ರವೇಗದಲ್ಲಿ ಮೊದಲಿಗನೆಂದು ತಿಳಿಯಲಾಗಿದೆ. ಇವನಿಗೆ ವಿಪುಲ ಶರಗಳಿಂದ ನನ್ನ ಅಸ್ತ್ರವೇಗವನ್ನು ತೋರಿಸುತ್ತೇನೆ.

04050015a ನಾಗಕಕ್ಷ್ಯಾ ತು ರುಚಿರಾ ಧ್ವಜಾಗ್ರೇ ಯಸ್ಯ ತಿಷ್ಠತಿ|

04050015c ಏಷ ವೈಕರ್ತನಃ ಕರ್ಣೋ ವಿದಿತಃ ಪೂರ್ವಮೇವ ತೇ||

ಧ್ವಜಾಗ್ರದಲ್ಲಿ ಪ್ರಕಾಶಮಾನವಾದ ಆನೆಗೆ ಕಟ್ಟುವ ಹಗ್ಗವನ್ನುಳ್ಳ ಈತನೇ ಸೂರ್ಯಪುತ್ರ ಕರ್ಣ. ಇವನನ್ನು ಹಿಂದೆಯೇ ನೀನು ತಿಳಿದಿರುವೆ.

04050016a ಏತಸ್ಯ ರಥಮಾಸ್ಥಾಯ ರಾಧೇಯಸ್ಯ ದುರಾತ್ಮನಃ|

04050016c ಯತ್ತೋ ಭವೇಥಾಃ ಸಂಗ್ರಾಮೇ ಸ್ಪರ್ಧತ್ಯೇಷ ಮಯಾ ಸದಾ||

ಈ ದುರಾತ್ಮ ಕರ್ಣನ ರಥವನ್ನು ಸಮೀಪಿಸಿದಾಗ ಜಾಗರೂಕನಾಗಿರು. ಇವನು ಯಾವಾಗಲೂ ಯುದ್ಧದಲ್ಲಿ ನನ್ನೊಡನೆ ಸ್ಪರ್ಧಿಸುತ್ತಾನೆ.

04050017a ಯಸ್ತು ನೀಲಾನುಸಾರೇಣ ಪಂಚತಾರೇಣ ಕೇತುನಾ|

04050017c ಹಸ್ತಾವಾಪೀ ಬೃಹದ್ಧನ್ವಾ ರಥೇ ತಿಷ್ಠತಿ ವೀರ್ಯವಾನ್||

ಇವನು ನೀಲಿಬಣ್ಣದ ಐದು ನಕ್ಷತ್ರಗಳ ಬಾವುಟವುಳ್ಳವನು. ದೊಡ್ಡ ಬಿಲ್ಲನ್ನು ಕೈಯಲ್ಲಿ ಹಿಡಿದು ರಥದಲ್ಲಿ ಕುಳಿತ ಪರಾಕ್ರಮಿ.

04050018a ಯಸ್ಯ ತಾರಾರ್ಕಚಿತ್ರೋಽಸೌ ರಥೇ ಧ್ವಜವರಃ ಸ್ಥಿತಃ|

04050018c ಯಸ್ಯೈತತ್ಪಾಂಡುರಂ ಚತ್ರಂ ವಿಮಲಂ ಮೂರ್ಧ್ನಿ ತಿಷ್ಠತಿ||

ಇವನ ರಥದ ಮೇಲೆ ಸೂರ್ಯ ಮತ್ತು ನಕ್ಷತ್ರಗಳ ಚಿತ್ರವುಳ್ಳ ಶ್ರೇಷ್ಠ ಧ್ವಜವಿದೆ. ಇವನ ತಲೆಯ ಮೇಲೆ ವಿಮಲ ಬೆಳ್ಗೊಡೆಯಿದೆ.

04050019a ಮಹತೋ ರಥವಂಶಸ್ಯ ನಾನಾಧ್ವಜಪತಾಕಿನಃ|

04050019c ಬಲಾಹಕಾಗ್ರೇ ಸೂರ್ಯೋ ವಾ ಯ ಏಷ ಪ್ರಮುಖೇ ಸ್ಥಿತಃ||

ಇವನು ಮೋಡಗಳ ಮುಂದೆ ನಿಂತ ಸೂರ್ಯನೆಂಬಂತೆ ನಾನಾ ಧ್ವಜಪತಾಕೆಗಳಿಂದ ಕೂಡಿದ ದೊಡ್ಡ ರಥಸಮೂಹದ ಮುಂದೆ ನಿಂತಿದ್ದಾನೆ.

04050020a ಹೈಮಂ ಚಂದ್ರಾರ್ಕಸಂಕಾಶಂ ಕವಚಂ ಯಸ್ಯ ದೃಶ್ಯತೇ|

04050020c ಜಾತರೂಪಶಿರಸ್ತ್ರಾಣಸ್ತ್ರಾಸಯನ್ನಿವ ಮೇ ಮನಃ||

ಇವನ ಕವಚವು ಸೂರ್ಯ-ಚಂದ್ರರಂತೆ ಹೊಳೆಯುತ್ತಿದೆ. ಇವನು ಚಿನ್ನದ ತಲೆಗಾಪನ್ನುಳ್ಳವನು. ನನ್ನ ಮನಸ್ಸಿಗೆ ಅಂಜಿಕೆಯನ್ನುಂಟುಮಾಡುತ್ತಿದ್ದಾನೆ.

04050021a ಏಷ ಶಾಂತನವೋ ಭೀಷ್ಮಃ ಸರ್ವೇಷಾಂ ನಃ ಪಿತಾಮಹಃ|

04050021c ರಾಜಶ್ರಿಯಾವಬದ್ಧಸ್ತು ದುರ್ಯೋಧನವಶಾನುಗಃ||

ಇವನೇ ಶಂತನುಪುತ್ರ ಭೀಷ್ಮ. ನಮ್ಮೆಲ್ಲರ ಅಜ್ಜ. ರಾಜೈಶ್ವರ್ಯಕ್ಕೆ ಕಟ್ಟುಬಿದ್ದು ದುರ್ಯೋಧನನ ವಶವರ್ತಿಯಾಗಿದ್ದಾನೆ.

04050022a ಪಶ್ಚಾದೇಷ ಪ್ರಯಾತವ್ಯೋ ನ ಮೇ ವಿಘ್ನಕರೋ ಭವೇತ್|

04050022c ಏತೇನ ಯುಧ್ಯಮಾನಸ್ಯ ಯತ್ತಃ ಸಂಯಚ್ಛ ಮೇ ಹಯಾನ್||

ಕಡೆಯಲ್ಲಿ ಇವನ ಬಳಿ ಹೋಗಬೇಕು. ಏಕೆಂದರೆ ಇವನಿಂದ ನನಗೆ ವಿಘ್ನವಾಗಬಾರದು. ಇವನೊಡನೆ ಯುದ್ಧಮಾಡುವಾಗ ನನ್ನ ಕುದುರೆಗಳನ್ನು ಎಚ್ಚರಿಕೆಯಿಂದ ನಡೆಸು.”

04050023a ತತೋಽಭ್ಯವಹದವ್ಯಗ್ರೋ ವೈರಾಟಿಃ ಸವ್ಯಸಾಚಿನಂ|

04050023c ಯತ್ರಾತಿಷ್ಠತ್ಕೃಪೋ ರಾಜನ್ಯೋತ್ಸ್ಯಮಾನೋ ಧನಂಜಯಂ||

ರಾಜ! ಅನಂತರ ಉತ್ತರನು ಉದ್ವೇಗವಿಲ್ಲದೇ ಸವ್ಯಸಾಚಿ ಧನಂಜಯನನ್ನು ಯುದ್ಧಮಾಡಲು ಉತ್ಸುಕನಾಗಿ ನಿಂತಿದ್ದ ಕೃಪನಲ್ಲಿಗೆ ಕರೆದೊಯ್ದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಕೃಪಸಂಗ್ರಾಮೇ ಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಕೃಪಸಂಗ್ರಾಮದಲ್ಲಿ ಐವತ್ತನೆಯ ಅಧ್ಯಾಯವು.

Related image

Comments are closed.