Virata Parva: Chapter 5

ವಿರಾಟ ಪರ್ವ: ವೈರಾಟ ಪರ್ವ 

ಅಸ್ತ್ರಗಳನ್ನು ಮುಚ್ಚಿಟ್ಟಿದುದು

ಪಾಂಡವರು ವಿರಾಟನಗರದ ಬಳಿ ತಲುಪಿದುದು (೧-೮). ತಮ್ಮ ತಮ್ಮ ಆಯುಧಗಳನ್ನು ಇಳಿಸಿ, ಒಟ್ಟಿಗೇ ಕಟ್ಟಿ, ನಗರದ ಹೊರಗಿನ ಶ್ಮಶಾನದ ಸಮೀಪದಲ್ಲಿದ್ದ ಶಮೀವೃಕ್ಷದ ಮೇಲಿರಿಸಿ, ಮರದ ರೆಂಬೆಗೆ ಒಂದು ಶವವನ್ನು ನೇತುಹಾಕಿಸಿ ಪಾಂಡವರು ವಿರಾಟನಗರವನ್ನು ಪ್ರವೇಶಿಸಿದುದು (೯-೩೧).

04005001 ವೈಶಂಪಾಯನ ಉವಾಚ|

04005001a ತೇ ವೀರಾ ಬದ್ಧನಿಸ್ತ್ರಿಂಶಾಸ್ತತಾಯುಧಕಲಾಪಿನಃ|

04005001c ಬದ್ಧಗೋಧಾಂಗುಲಿತ್ರಾಣಾಃ ಕಾಲಿಂದೀಮಭಿತೋ ಯಯುಃ||

ವೈಶಂಪಾಯನನು ಹೇಳಿದನು: “ಆ ವೀರರು ಖಡ್ಗಗಳನ್ನು ಬಿಗಿದು, ಆಯುಧಧಾರಿಗಳಾಗಿ, ತೋಳ್ಬಂದಿ ಮತ್ತು ಬೆರಳು ಬಂದಿಗಳನ್ನು ಕಟ್ಟಿಕೊಂಡು ಕಾಲಿಂದೀ ನದಿಯೆಡೆಗೆ ನಡೆದರು.

04005002a ತತಸ್ತೇ ದಕ್ಷಿಣಂ ತೀರಮನ್ವಗಚ್ಛನ್ಪದಾತಯಃ|

04005002c ವಸಂತೋ ಗಿರಿದುರ್ಗೇಷು ವನದುರ್ಗೇಷು ಧನ್ವಿನಃ||

ನಂತರ ಆ ಧನ್ವಿಗಳು ಗಿರಿದುರ್ಗ ವನದುರ್ಗಗಳಲ್ಲಿ ತಂಗುತ್ತಾ ಕಾಲ್ನಡುಗೆಯಲ್ಲಿ ದಕ್ಷಿಣ ತೀರಕ್ಕೆ ಸಾಗಿದರು.

04005003a ವಿಧ್ಯಂತೋ ಮೃಗಜಾತಾನಿ ಮಹೇಷ್ವಾಸಾ ಮಹಾಬಲಾಃ|

04005003c ಉತ್ತರೇಣ ದಶಾರ್ಣಾಂಸ್ತೇ ಪಾಂಚಾಲಾನ್ದಕ್ಷಿಣೇನ ತು||

04005004a ಅಂತರೇಣ ಯಕೃಲ್ಲೋಮಾಂ ಶೂರಸೇನಾಂಶ್ಚ ಪಾಂಡವಾಃ|

04005004c ಲುಬ್ಧಾ ಬ್ರುವಾಣಾ ಮತ್ಸ್ಯಸ್ಯ ವಿಷಯಂ ಪ್ರಾವಿಶನ್ವನಾತ್||

ಆ ಮಹೇಷ್ವಾಸ ಮಹಾಬಲ ಪಾಂಡವರು ಮೃಗಗಳನ್ನು ಬೇಟೆಯಾಡುತ್ತಾ ಉತ್ತರದಲ್ಲಿ ದಶಾರ್ಣ ಮತ್ತು ದಕ್ಷಿಣದಲ್ಲಿ ಪಾಂಚಾಲಗಳ ಮಧ್ಯೆ ಯಕೃಲ್ಲೋಮ ಶೂರಸೇನಗಳ ಮೂಲಕ, ಬೇಡರೆಂದು ಹೇಳಿಕೊಳ್ಳುತ್ತಾ, ಕಾಡಿನ ಕಡೆಯಿಂದ ಮತ್ಸ್ಯದೇಶವನ್ನು ಪ್ರವೇಶಿಸಿದರು. 

04005005a ತತೋ ಜನಪದಂ ಪ್ರಾಪ್ಯ ಕೃಷ್ಣಾ ರಾಜಾನಮಬ್ರವೀತ್|

04005005c ಪಶ್ಯೈಕಪದ್ಯೋ ದೃಶ್ಯಂತೇ ಕ್ಷೇತ್ರಾಣಿ ವಿವಿಧಾನಿ ಚ||

ಜನಪದವನ್ನು ಸೇರಿದ ನಂತರ ಕೃಷ್ಣೆಯು ರಾಜನಿಗೆ ಹೇಳಿದಳು: “ಒಂದು ಕಾಲುದಾರಿಯೂ ಹಲವಾರು ಹೊಲಗದ್ದೆಗಳೂ ಕಾಣುತ್ತಿವೆ. ನೋಡು!

04005006a ವ್ಯಕ್ತಂ ದೂರೇ ವಿರಾಟಸ್ಯ ರಾಜಧಾನೀ ಭವಿಷ್ಯತಿ|

04005006c ವಸಾಮೇಹ ಪರಾಂ ರಾತ್ರಿಂ ಬಲವಾನ್ಮೇ ಪರಿಶ್ರಮಃ||

ವಿರಾಟನ ರಾಜಧಾನಿಯು ಇನ್ನೂ ದೂರದಲ್ಲಿದೆ ಎಂದು ತೋರುತ್ತದೆ. ಬಲವಾನ್! ಇನ್ನೊಂದು ರಾತ್ರಿಯನ್ನು ಇಲ್ಲಿಯೇ ಕಳೆಯೋಣ. ನನಗೆ ಆಯಾಸವಾಗುತ್ತಿದೆ.

04005007 ಯುಧಿಷ್ಠಿರ ಉವಾಚ|

04005007a ಧನಂಜಯ ಸಮುದ್ಯಮ್ಯ ಪಾಂಚಾಲೀಂ ವಹ ಭಾರತ|

04005007c ರಾಜಧಾನ್ಯಾಂ ನಿವತ್ಸ್ಯಾಮೋ ವಿಮುಕ್ತಾಶ್ಚ ವನಾದಿತಃ||

ಯುಧಿಷ್ಠಿರನು ಹೇಳಿದನು: “ಭಾರತ! ಧನಂಜಯ! ಪಾಂಚಾಲಿಯನ್ನು ಎತ್ತಿಕೊಂಡು ನಡೆ! ಕಾಡನ್ನು ದಾಟಿ ರಾಜಧಾನಿಯಲ್ಲಿಯೇ ತಂಗೋಣ!””

04005008 ವೈಶಂಪಾಯನ ಉವಾಚ|

04005008a ತಾಮಾದಾಯಾರ್ಜುನಸ್ತೂರ್ಣಂ ದ್ರೌಪದೀಂ ಗಜರಾಡಿವ|

04005008c ಸಂಪ್ರಾಪ್ಯ ನಗರಾಭ್ಯಾಶಮವತಾರಯದರ್ಜುನಃ||

ವೈಶಂಪಾಯನನು ಹೇಳಿದನು: “ಅರ್ಜುನನು ಗಜರಾಜನಂತೆ ದ್ರೌಪದಿಯನ್ನು ಎತ್ತಿಕೊಂಡು ನಗರವನ್ನು ತಲುಪಿ ಅವಳನ್ನು ಕೆಳಗಿಳಿಸಿದನು.

04005009a ಸ ರಾಜಧಾನೀಂ ಸಂಪ್ರಾಪ್ಯ ಕೌಂತೇಯೋಽರ್ಜುನಮಬ್ರವೀತ್|

04005009c ಕ್ವಾಯುಧಾನಿ ಸಮಾಸಜ್ಯ ಪ್ರವೇಕ್ಷ್ಯಾಮಃ ಪುರಂ ವಯಂ||

ರಾಜಧಾನಿಯನ್ನು ತಲುಪಿ ಕೌಂತೇಯನು ಅರ್ಜುನನಿಗೆ ಹೇಳಿದನು: “ಆಯುಧಗಳನ್ನು ನಾವು ಎಲ್ಲಿರಿಸಿ ಪುರವನ್ನು ಪ್ರವೇಶಿಸೋಣ?

04005010a ಸಾಯುಧಾಶ್ಚ ವಯಂ ತಾತ ಪ್ರವೇಕ್ಷ್ಯಾಮಃ ಪುರಂ ಯದಿ|

04005010c ಸಮುದ್ವೇಗಂ ಜನಸ್ಯಾಸ್ಯ ಕರಿಷ್ಯಾಮೋ ನ ಸಂಶಯಃ||

ಮಗೂ! ಆಯುಧಗಳೊಂದಿಗೆ ನಾವು ಪುರವನ್ನು ಪ್ರವೇಶಿಸಿದರೆ ಜನರಲ್ಲಿ ಉದ್ವೇಗವನ್ನುಂಟುಮಾಡುತ್ತೇವೆ ಎನ್ನುವುದರಲ್ಲಿ ಸಂಶಯವಿಲ್ಲ.

04005011a ತತೋ ದ್ವಾದಶ ವರ್ಷಾಣಿ ಪ್ರವೇಷ್ಟವ್ಯಂ ವನಂ ಪುನಃ|

04005011c ಏಕಸ್ಮಿನ್ನಪಿ ವಿಜ್ಞಾತೇ ಪ್ರತಿಜ್ಞಾತಂ ಹಿ ನಸ್ತಥಾ||

ನಮ್ಮವರಲ್ಲಿ ಒಬ್ಬರಾದರೂ ಗುರುತಿಸಲ್ಪಟ್ಟರು ಎಂದರೆ ಪುನಃ ಹನ್ನೆರಡು ವರ್ಷಗಳ ವನವಾಸವನ್ನು ಪ್ರವೇಶಿಸುತ್ತೇವೆ ಎಂದು ಪ್ರತಿಜ್ಞೆಯನ್ನೇ ಮಾಡಿಲ್ಲವೇ?”

04005012 ಅರ್ಜುನ ಉವಾಚ|

04005012a ಇಯಂ ಕೂಟೇ ಮನುಷ್ಯೇಂದ್ರ ಗಹನಾ ಮಹತೀ ಶಮೀ|

04005012c ಭೀಮಶಾಖಾ ದುರಾರೋಹಾ ಶ್ಮಶಾನಸ್ಯ ಸಮೀಪತಃ||

ಅರ್ಜುನನು ಹೇಳಿದನು: “ಮನುಷ್ಯೇಂದ್ರ! ಈ ದುರಾರೋಹ ಶ್ಮಶಾನದ ಸಮೀಪದಲ್ಲಿಯೇ ಗುಡ್ಡದ ಮೇಲೆ ದಟ್ಟವಾದ ವಿಶಾಲ ರೆಂಭೆಗಳನ್ನುಳ್ಳ ದೊಡ್ಡ ಶಮೀ ವೃಕ್ಷವಿದೆ.

04005013a ನ ಚಾಪಿ ವಿದ್ಯತೇ ಕಶ್ಚಿನ್ಮನುಷ್ಯ ಇಹ ಪಾರ್ಥಿವ|

04005013c ಉತ್ಪಥೇ ಹಿ ವನೇ ಜಾತಾ ಮೃಗವ್ಯಾಲನಿಷೇವಿತೇ||

ಪಾರ್ಥಿವ! ಮೃಗಸರ್ಪಗಳಿಂದ ಕೂಡಿದ ಕಾಡಿನ ದಾರಿಯಲ್ಲಿರುವ ಈ ಮರದ ಬಳಿ ಯಾವ ಮನುಷ್ಯರ ಸುಳಿಯೂ ಕಾಣುತ್ತಿಲ್ಲ.

04005014a ಸಮಾಸಜ್ಯಾಯುಧಾನ್ಯಸ್ಯಾಂ ಗಚ್ಛಾಮೋ ನಗರಂ ಪ್ರತಿ|

04005014c ಏವಮತ್ರ ಯಥಾಜೋಷಂ ವಿಹರಿಷ್ಯಾಮ ಭಾರತ||

ಭಾರತ! ಆಯುಧಗಳನ್ನು ಇದರಲ್ಲಿ ಕಟ್ಟಿಟ್ಟು ನಾವು ನಗರಕ್ಕೆ ಹೋಗೋಣ. ಅಲ್ಲಿ ನಾವು ಬೇಕಾದಷ್ಟು ಸಮಯ ಇರಬಹುದು.””

04005015 ವೈಶಂಪಾಯನ ಉವಾಚ|

04005015a ಏವಮುಕ್ತ್ವಾ ಸ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ|

04005015c ಪ್ರಚಕ್ರಮೇ ನಿಧಾನಾಯ ಶಸ್ತ್ರಾಣಾಂ ಭರತರ್ಷಭ||

ವೈಶಂಪಾಯನನು ಹೇಳಿದನು: “ಭರತರ್ಷಭ! ಧರ್ಮಾತ್ಮ ಯುಧಿಷ್ಠಿರನಿಗೆ ಈ ರೀತಿ ಹೇಳಿ ಅವನು ಶಸ್ತ್ರಗಳನ್ನು ಇರಿಸಲು ಹೊರಟನು.

04005016a ಯೇನ ದೇವಾನ್ಮನುಷ್ಯಾಂಶ್ಚ ಸರ್ಪಾಂಶ್ಚೈಕರಥೋಽಜಯತ್|

04005016c ಸ್ಫೀತಾಂಜನಪದಾಂಶ್ಚಾನ್ಯಾನಜಯತ್ಕುರುನಂದನಃ||

04005017a ತದುದಾರಂ ಮಹಾಘೋಷಂ ಸಪತ್ನಗಣಸೂದನಂ|

04005017c ಅಪಜ್ಯಮಕರೋತ್ಪಾರ್ಥೋ ಗಾಂಡೀವಮಭಯಂಕರಂ||

ಯಾವುದರಿಂದ ದೇವ-ಮನುಷ್ಯ-ಸರ್ಪಗಳನ್ನೂ, ಅನೇಕ ಜನಪದಗಳನ್ನೂ ಏಕರಥನಾಗಿ ಜಯಿಸಿದನೋ ಆ ಉದಾರ ಮಹಾಘೋಷವನ್ನುಂಟುಮಾಡುವ, ಶತ್ರುಗಣಗಳನ್ನು ಸಂಹರಿಸುವ ಆ ಭಯಂಕರ ಗಾಂಡೀವದ ಹೆದೆಯನ್ನು ಕುರುನಂದನನು ಸಡಿಲಿಸಿದನು.

04005018a ಯೇನ ವೀರಃ ಕುರುಕ್ಷೇತ್ರಮಭ್ಯರಕ್ಷತ್ಪರಂತಪಃ|

04005018c ಅಮುಂಚದ್ಧನುಷಸ್ತಸ್ಯ ಜ್ಯಾಮಕ್ಷಯ್ಯಾಂ ಯುಧಿಷ್ಠಿರಃ||

ಪರಂತಪ ವೀರ ಯುಧಿಷ್ಠಿರನು ಯಾವುದರಿಂದ ಕುರುಕ್ಷೇತ್ರವನ್ನು ರಕ್ಷಿಸಿದನೋ ಆ ಸವೆಯದ ಧನುಸ್ಸಿನ ಹೆದೆಯನ್ನು ಬಿಚ್ಚಿದನು.

04005019a ಪಾಂಚಾಲಾನ್ಯೇನ ಸಂಗ್ರಾಮೇ ಭೀಮಸೇನೋಽಜಯತ್ಪ್ರಭುಃ|

04005019c ಪ್ರತ್ಯಷೇಧದ್ಬಹೂನೇಕಃ ಸಪತ್ನಾಂಶ್ಚೈವ ದಿಗ್ಜಯೇ||

04005020a ನಿಶಮ್ಯ ಯಸ್ಯ ವಿಸ್ಫಾರಂ ವ್ಯದ್ರವಂತ ರಣೇ ಪರೇ|

04005020c ಪರ್ವತಸ್ಯೇವ ದೀರ್ಣಸ್ಯ ವಿಸ್ಫೋಟಮಶನೇರಿವ||

04005021a ಸೈಂಧವಂ ಯೇನ ರಾಜಾನಂ ಪರಾಮೃಷತ ಚಾನಘ|

04005021c ಜ್ಯಾಪಾಶಂ ಧನುಷಸ್ತಸ್ಯ ಭೀಮಸೇನೋಽವತಾರಯತ್||

ಅನಘ ! ಯಾವುದರಿಂದ ಪ್ರಭು ಭೀಮಸೇನನು ಸಂಗ್ರಾಮದಲ್ಲಿ ಪಾಂಚಾಲರನ್ನು ಜಯಿಸಿದ್ದನೋ, ದಿಗ್ವಿಜಯದಲ್ಲಿ ಬಹುಶತ್ರುಗಳನ್ನು ಏಕಾಂಗಿಯಾಗಿ ತಡೆಡಿದ್ದನೋ, ಛೇದಿತ ಪರ್ವತದ ಅಥವಾ ಸಿಡಿಲಿನ ಸ್ಫೋಟದಂತಿದ್ದ ಯಾವುದರ ಠೇಂಕಾರವನ್ನು ಕೇಳಿ ಶತ್ರುಗಳು ರಣದಿಂದ ಓಡಿಹೋಗುತ್ತಿದ್ದರೋ, ಯಾವುದರಿಂದ ರಾಜ ಸೈಂಧವನನ್ನು ಸದೆಬಡಿದಿದ್ದನೋ, ಆ ಬಿಲ್ಲಿನ ಹೆದೆಯನ್ನು ಭೀಮಸೇನನು ಇಳಿಸಿದನು.

04005022a ಅಜಯತ್ಪಶ್ಚಿಮಾಮಾಶಾಂ ಧನುಷಾ ಯೇನ ಪಾಂಡವಃ|

04005022c ತಸ್ಯ ಮೌರ್ವೀಮಪಾಕರ್ಷಚ್ಚೂರಃ ಸಂಕ್ರಂದನೋ ಯುಧಿ||

ಯಾವುದರಿಂದ ಪಶ್ಚಿಮ ದಿಕ್ಕನ್ನು ಗೆದ್ದಿದ್ದನೋ, ಯಾವುದನ್ನು ಎಳೆದು ಯುದ್ಧದಲ್ಲಿ ಅರಿಗಳನ್ನು ಗೋಳಾಡಿಸಿದ್ದನೋ ಆ ಬಿಲ್ಲಿನ ಹೆದೆಯನ್ನು ಪಾಂಡವನು ಸಡಿಸಿಲಿದನು.

04005023a ದಕ್ಷಿಣಾಂ ದಕ್ಷಿಣಾಚಾರೋ ದಿಶಂ ಯೇನಾಜಯತ್ಪ್ರಭುಃ|

04005023c ಅಪಜ್ಯಮಕರೋದ್ವೀರಃ ಸಹದೇವಸ್ತದಾಯುಧಂ||

ವೀರ, ದಾಕ್ಷಿಣ್ಯಶೀಲ ಪ್ರಭು ಸಹದೇವನು ದಕ್ಷಿಣ ದಿಕ್ಕನ್ನು ಜಯಿಸಿದ ಆಯುಧದ ಹೆದೆಯನ್ನು ಬಿಚ್ಚಿದನು.

04005024a ಖಡ್ಗಾಂಶ್ಚ ಪೀತಾನ್ದೀರ್ಘಾಂಶ್ಚ ಕಲಾಪಾಂಶ್ಚ ಮಹಾಧನಾನ್|

04005024c ವಿಪಾಠಾನ್ ಕ್ಷುರಧಾರಾಂಶ್ಚ ಧನುರ್ಭಿರ್ನಿದಧುಃ ಸಹ||

ಹೊಂಬಣ್ಣದ ನೀಳ ಖಡ್ಗಗಳನ್ನೂ, ಬಹುಬೆಲೆಯ ಭತ್ತಳಿಕೆಗಳನ್ನೂ, ಚೂಪಾದ ಮೊನೆಯ ಬಾಣಗಳನ್ನೂ, ಬಿಲ್ಲುಗಳೊಡನೆ ಇರಿಸಿದರು.

04005025a ತಾಮುಪಾರುಹ್ಯ ನಕುಲೋ ಧನೂಂಷಿ ನಿದಧತ್ಸ್ವಯಂ|

04005025c ಯಾನಿ ತಸ್ಯಾವಕಾಶಾನಿ ದೃಢರೂಪಾಣ್ಯಮನ್ಯತ||

ಸ್ವತಃ ನಕುಲನೇ ಆ ಮರವನ್ನು ಹತ್ತಿ ಸುರಕ್ಷಿತವಾಗಿರಲೆಂದು ತಾನು ತಿಳಿದೆಡೆಗಳಲ್ಲಿ ಬಿಲ್ಲುಗಳನ್ನು ಇರಿಸಿದನು.

04005026a ಯತ್ರ ಚಾಪಶ್ಯತ ಸ ವೈ ತಿರೋ ವರ್ಷಾಣಿ ವರ್ಷತಿ|

04005026c ತತ್ರ ತಾನಿ ದೃಢೈಃ ಪಾಶೈಃ ಸುಗಾಢಂ ಪರ್ಯಬಂಧತ||

ಮಳೆಯ ನೀರಿನಿಂದ ತೋಯುತ್ತದೆಯೆಂದು ಕಂಡುಬಂದಲ್ಲೆಲ್ಲಾ ಅವುಗಳನ್ನು ಗಟ್ಟಿ ಹಗ್ಗಗಳಿಂದ ಬಿಗಿಯಾಗಿ ಕಟ್ಟಿದನು.

04005027a ಶರೀರಂ ಚ ಮೃತಸ್ಯೈಕಂ ಸಮಬಧ್ನಂತ ಪಾಂಡವಾಃ|

04005027c ವಿವರ್ಜಯಿಷ್ಯಂತಿ ನರಾ ದೂರಾದೇವ ಶಮೀಮಿಮಾಂ||

04005027e ಆಬದ್ಧಂ ಶವಮತ್ರೇತಿ ಗಂಧಮಾಘ್ರಾಯ ಪೂತಿಕಂ||

ದೂರದಿಂದಲೇ ದುರ್ಗಂಧವನ್ನು ಮೂಸಿ ಇಲ್ಲಿ ಶವವನ್ನು ಕಟ್ಟಿದೆಯೆಂದು ತಿಳಿದು ಮನುಷ್ಯರು ಈ ಶಮೀ ವೃಕ್ಷವನ್ನು ವರ್ಜಿಸುವರೆಂದು ಪಾಂಡವರು ಮೃತಶರೀರವೊಂದನ್ನು ಅದಕ್ಕೆ ಕಟ್ಟಿದರು.

04005028a ಅಶೀತಿಶತವರ್ಷೇಯಂ ಮಾತಾ ನ ಇತಿ ವಾದಿನಃ|

04005028c ಕುಲಧರ್ಮೋಽಯಮಸ್ಮಾಕಂ ಪೂರ್ವೈರಾಚರಿತೋಽಪಿ ಚ||

04005028e ಸಮಾಸಜಾನಾ ವೃಕ್ಷೇಽಸ್ಮಿನ್ನಿತಿ ವೈ ವ್ಯಾಹರಂತಿ ತೇ||

04005029a ಆ ಗೋಪಾಲಾವಿಪಾಲೇಭ್ಯ ಆಚಕ್ಷಾಣಾಃ ಪರಂತಪಾಃ|

04005029c ಆಜಗ್ಮುರ್ನಗರಾಭ್ಯಾಶಂ ಪಾರ್ಥಾಃ ಶತ್ರುನಿಬರ್ಹಣಾಃ||

ದನಕಾಯುವವರು ಮತ್ತು ಕುರಿಕಾಯುವವರು ಕೇಳಿದರೆ “ಇವಳು ನೋರೆಂಭತ್ತು ವರ್ಷಗಳ ನಮ್ಮ ತಾಯಿ. ನಮ್ಮು ಪೂರ್ವಜರು ನಡೆಸಿಕೊಂಡು ಬಂದ ಕುಲಧರ್ಮದಂತೆ ನಾವು ಅವಳ ಶರೀರವನ್ನು ಮರಕ್ಕೆ ತಗುಲಿಹಾಕಿದ್ದೇವೆ” ಎಂದು ಹೇಳುತ್ತಾ, ಆ ಪರಂತಪ, ಶತ್ರುನಾಶಕ ಪಾಂಡವರು ನಗರವನ್ನು ಪ್ರವೇಶಿಸಿದರು.

04005030a ಜಯೋ ಜಯಂತೋ ವಿಜಯೋ ಜಯತ್ಸೇನೋ ಜಯದ್ಬಲಃ|

04005030c ಇತಿ ಗುಹ್ಯಾನಿ ನಾಮಾನಿ ಚಕ್ರೇ ತೇಷಾಂ ಯುಧಿಷ್ಠಿರಃ||

ಯುಧಿಷ್ಠಿರನು ತಮಗೆ ಜಯ, ಜಯಂತ, ವಿಜಯ, ಜಯತ್ಸೇನ ಮತ್ತು ಜಯದ್ಬಲ ಎಂದು ಗುಪ್ತನಾಮಗಳನ್ನು ಇಟ್ಟುಕೊಂಡನು.

04005031a ತತೋ ಯಥಾಪ್ರತಿಜ್ಞಾಭಿಃ ಪ್ರಾವಿಶನ್ನಗರಂ ಮಹತ್|

04005031c ಅಜ್ಞಾತಚರ್ಯಾಂ ವತ್ಸ್ಯಂತೋ ರಾಷ್ಟ್ರೇ ವರ್ಷಂ ತ್ರಯೋದಶಂ||

ನಂತರ ಪ್ರತಿಜ್ಞೆಯಂತೆ ಹದಿಮೂರನೆಯ ವರ್ಷದಲ್ಲಿ ಜನರಮಧ್ಯೆ ವೇಷ ಮರೆಯಿಸಿಕೊಂಡು ವಾಸಿಸಲು ಆ ಮಹಾನಗರವನ್ನು ಪ್ರವೇಶಿಸಿದರು.”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಅಸ್ತ್ರಸಂಸ್ಥಾಪನೇ ಪಂಚಮೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಅಸ್ತ್ರಸಂಸ್ಥಾಪನೆಯೆನ್ನುವ ಐದನೆಯ ಅಧ್ಯಾಯವು.

Image result for indian motifs

Comments are closed.