Virata Parva: Chapter 36

ವಿರಾಟ ಪರ್ವ: ಗೋಹರಣ ಪರ್ವ

೩೬

ಕುರುಸೇನೆಯನ್ನು ಎದುರಿಸದೆ ಪಲಾಯನ ಮಾಡುತ್ತಿದ್ದ ಉತ್ತರನನ್ನು ಅರ್ಜುನನು ಪುನಃ ರಥವನ್ನೇರಿಸಿದುದು

ಉತ್ತರನು ಕೌರವಸೇನೆಯನ್ನು ನೋಡಿದುದು (೧-೮). ಯುದ್ಧ ಮಾಡಲು ಹೆದರಿ, ಬೃಹನ್ನಡೆಯು ತಡೆದರೂ, ಉತ್ತರನು ರಥದಿಂದಿಳಿದು ಪಲಾಯನ ಮಾಡಿದುದು (೯-೨೫). ರಾಜಕುಮಾರನನ್ನು ಬೆನ್ನಟ್ಟಿ ಹೋಗುತ್ತಿದ್ದ ಬೃಹನ್ನಡೆಯನ್ನು ನೋಡಿ ಅವನು ವೇಷಮರೆಸಿಕೊಂಡಿರುವ ಅರ್ಜುನನಿರಬಹುದೇ ಎಂದು ಕೌರವ ಸೇನೆಯು ಶಂಕಿಸುವುದು (೨೬-೩೬). ಓಡಿಹೋಗುತ್ತಿದ್ದ ಉತ್ತರನನ್ನು ಹಿಡಿದು ರಥದ ಬಳಿ ಎಳೆತಂದು ಅರ್ಜುನನು ಅವನಿಗೆ ತನ್ನ ಸಾರಥಿಯಾಗೆಂದೂ ತಾನು ಯುದ್ಧಮಾಡಿ ಗೋವುಗಳನ್ನು ಬಿಡಿಸಿಕೊಡುತ್ತೇನೆಂದೂ ಹೇಳಿ, ಉತ್ತರನನ್ನು ಸಾರಥಿಯನ್ನಾಗಿ ನಿಯೋಜಿಸುವುದು (೩೭-೪೭).

04036001 ವೈಶಂಪಾಯನ ಉವಾಚ|

04036001a ಸ ರಾಜಧಾನ್ಯಾ ನಿರ್ಯಾಯ ವೈರಾಟಿಃ ಪೃಥಿವೀಂಜಯಃ|

04036001c ಪ್ರಯಾಹೀತ್ಯಬ್ರವೀತ್ಸೂತಂ ಯತ್ರ ತೇ ಕುರವೋ ಗತಾಃ||

ವೈಶಂಪಾಯನನು ಹೇಳಿದನು: “ಆ ವಿರಾಟಪುತ್ರ ಭೂಮಿಂಜಯನು ರಾಜಧಾನಿಯಿಂದ ಹೊರಟು, “ಕೌರವರು ಹೋಗಿರುವ ಕಡೆ ನಡೆ!” ಎಂದು ಸೂತನಿಗೆ ಹೇಳಿದನು.

04036002a ಸಮವೇತಾನ್ಕುರೂನ್ಯಾವಜ್ಜಿಗೀಷೂನವಜಿತ್ಯ ವೈ|

04036002c ಗಾಶ್ಚೈಷಾಂ ಕ್ಷಿಪ್ರಮಾದಾಯ ಪುನರಾಯಾಮಿ ಸ್ವಂ ಪುರಂ||

“ಜಯಾಕಾಂಕ್ಷೆಯಿಂದ ನೆರೆದಿರುವ ಕೌರವರನ್ನು ಗೆದ್ದು ಗೋವುಗಳನ್ನು ತೆಗೆದುಕೊಂಡು ಬೇಗನೆ ಪಟ್ಟಣಕ್ಕೆ ಹಿಂದಿರುಗುತ್ತೇನೆ.”

04036003a ತತಸ್ತಾಂಶ್ಚೋದಯಾಮಾಸ ಸದಶ್ವಾನ್ಪಾಂಡುನಂದನಃ|

04036003c ತೇ ಹಯಾ ನರಸಿಂಹೇನ ಚೋದಿತಾ ವಾತರಂಹಸಃ|

04036003e ಆಲಿಖಂತ ಇವಾಕಾಶಮೂಹುಃ ಕಾಂಚನಮಾಲಿನಃ||

ಬಳಿಕ ಅರ್ಜುನನು ಆ ಉತ್ತಮ ಕುದುರೆಗಳನ್ನು ಪ್ರಚೋದಿಸಿದನು. ಕಾಂಚನಮಾಲೆಗಳನ್ನು ಧರಿಸಿದ್ದ ವಾಯುವೇಗದ ಕುದುರೆಗಳು ಆ ನರಶ್ರೇಷ್ಠನಿಂದ ಪ್ರಚೋದಿತಗೊಂಡು ಆಕಾಶವನ್ನು ತೀಡುತ್ತಾ ಅವರನ್ನು ಹೊತ್ತೊಯ್ದವು.

04036004a ನಾತಿದೂರಮಥೋ ಯಾತ್ವಾ ಮತ್ಸ್ಯಪುತ್ರಧನಂಜಯೌ|

04036004c ಅವೇಕ್ಷೇತಾಮಮಿತ್ರಘ್ನೌ ಕುರೂಣಾಂ ಬಲಿನಾಂ ಬಲಂ|

04036004e ಶ್ಮಶಾನಮಭಿತೋ ಗತ್ವಾ ಆಸಸಾದ ಕುರೂನಥ||

ಅನಂತರ ಶತ್ರುನಾಶಕರಾದ ಉತ್ತರ-ಧನಂಜಯರು ಸ್ವಲ್ಪ ದೂರ ಹೋಗಿ ಬಲಶಾಲಿ ಕುರುಸೇನೆಯನ್ನು ಕಂಡರು. ಆಮೇಲೆ, ಶ್ಮಶಾನಾಭಿಮುಖವಾಗಿ ಸಾಗಿ ಕುರುಗಳನ್ನು ಸಮೀಪಿಸಿದರು.

04036005a ತದನೀಕಂ ಮಹತ್ತೇಷಾಂ ವಿಬಭೌ ಸಾಗರಸ್ವನಂ|

04036005c ಸರ್ಪಮಾಣಮಿವಾಕಾಶೇ ವನಂ ಬಹುಲಪಾದಪಂ||

ಸಾಗರ ಘೋಷವುಳ್ಳ ಅವರ ಆ ಮಹಾಸೇನೆಯು ಆಕಾಶದಲ್ಲಿ ಚಲಿಸುವ ವೃಕ್ಷಸಮೃದ್ಧ ವನದಂತೆ ಶೋಭಿಸುತ್ತಿತ್ತು.

04036006a ದದೃಶೇ ಪಾರ್ಥಿವೋ ರೇಣುರ್ಜನಿತಸ್ತೇನ ಸರ್ಪತಾ|

04036006c ದೃಷ್ಟಿಪ್ರಣಾಶೋ ಭೂತಾನಾಂ ದಿವಸ್ಪೃಂ ನರಸತ್ತಮ||

ನರಶ್ರೇಷ್ಠ! ಅದರ ಚಲನೆಯಿಂದುಂಟಾದ ನೆಲದ ಧೂಳು ಪ್ರಾಣಿಗಳ ಕಣ್ಣನ್ನು ಕುರುಡು ಮಾಡಿ ಮೇಲೆದ್ದು ಆಕಾಶವನ್ನು ಮುಟ್ಟುವಂತೆ ಕಂಡಿತು.

04036007a ತದನೀಕಂ ಮಹದ್ದೃಷ್ಟ್ವಾ ಗಜಾಶ್ವರಥಸಂಕುಲಂ|

04036007c ಕರ್ಣದುರ್ಯೋಧನಕೃಪೈರ್ಗುಪ್ತಂ ಶಾಂತನವೇನ ಚ||

04036008a ದ್ರೋಣೇನ ಚ ಸಪುತ್ರೇಣ ಮಹೇಷ್ವಾಸೇನ ಧೀಮತಾ|

04036008c ಹೃಷ್ಟರೋಮಾ ಭಯೋದ್ವಿಗ್ನಃ ಪಾರ್ಥಂ ವೈರಾಟಿರಬ್ರವೀತ್||

ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಕರ್ಣ, ದುರ್ಯೋಧನ, ಕೃಪ, ಭೀಷ್ಮರಿಂದಲೂ, ಪುತ್ರಸಹಿತನಾಗಿದ್ದ ಮಹಾಧನುರ್ಧರ ಧೀಮಂತ ದ್ರೋಣನಿಂದಲೂ ರಕ್ಷಿತವಾದ ಆ ಮಹಾಸೈನ್ಯವನ್ನು ಕಂಡು ಉತ್ತರನು ರೋಮಾಂಚಿತನೂ ಭಯೋದ್ವಿಗ್ನನೂ ಆಗಿ ಪಾರ್ಥನಿಗೆ ಹೇಳಿದನು:

04036009a ನೋತ್ಸಹೇ ಕುರುಭಿರ್ಯೋದ್ಧುಂ ರೋಮಹರ್ಷಂ ಹಿ ಪಶ್ಯ ಮೇ|

04036009c ಬಹುಪ್ರವೀರಮತ್ಯುಗ್ರಂ ದೇವೈರಪಿ ದುರಾಸದಂ|

04036009e ಪ್ರತಿಯೋದ್ಧುಂ ನ ಶಕ್ಷ್ಯಾಮಿ ಕುರುಸೈನ್ಯಮನಂತಕಂ||

“ಕುರುಗಳೊಡನೆ ನಾನು ಕಾದಲಾರೆ! ನನ್ನ ಶರೀರದ ರೋಮಾಂಚನವನ್ನು ನೋಡು. ಬಹುವೀರರಿಂದ ಕೂಡಿದ, ದೇವತೆಗಳಿಗೂ ಎದುರಿಸಲಾಗದ ಈ ಅತ್ಯುಗ್ರ ಅನಂತ ಕುರುಸೇನೆಯೊಂದಿಗೆ ನಾನು ಹೋರಾಡಲಾರೆ!

04036010a ನಾಶಂಸೇ ಭಾರತೀಂ ಸೇನಾಂ ಪ್ರವೇಷ್ಟುಂ ಭೀಮಕಾರ್ಮುಕಾಂ|

04036010c ರಥನಾಗಾಶ್ವಕಲಿಲಾಂ ಪತ್ತಿಧ್ವಜಸಮಾಕುಲಾಂ|

04036010e ದೃಷ್ಟ್ವೈವ ಹಿ ಪರಾನಾಜಾವಾತ್ಮಾ ಪ್ರವ್ಯಥತೀವ ಮೇ||

ಭಯಂಕರ ಬಿಲ್ಲುಗಳನ್ನು ಹಿಡಿದ, ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಪದಾತಿ ಮತ್ತು ಧ್ವಜಗಳಿಂದ ಕೂಡಿದ ಭಾರತಸೇನೆಯನ್ನು ನಾನು ಪ್ರವೇಶಿಸಲಾರೆ. ಯುದ್ಧರಂಗದಲ್ಲಿ ವೈರಿಗಳನ್ನು ನೋಡಿಯೇ ನನ್ನ ಜೀವ ನಡುಗುತ್ತಿದೆ.

04036011a ಯತ್ರ ದ್ರೋಣಶ್ಚ ಭೀಷ್ಮಶ್ಚ ಕೃಪಃ ಕರ್ಣೋ ವಿವಿಂಶತಿಃ|

04036011c ಅಶ್ವತ್ಥಾಮಾ ವಿಕರ್ಣಶ್ಚ ಸೋಮದತ್ತೋಽಥ ಬಾಹ್ಲಿಕಃ||

04036012a ದುರ್ಯೋಧನಸ್ತಥಾ ವೀರೋ ರಾಜಾ ಚ ರಥಿನಾಂ ವರಃ|

04036012c ದ್ಯುತಿಮಂತೋ ಮಹೇಷ್ವಾಸಾಃ ಸರ್ವೇ ಯುದ್ಧವಿಶಾರದಾಃ||

ಅಲ್ಲಿರುವ ದ್ರೋಣ, ಭೀಷ್ಮ, ಕೃಪ, ಕರ್ಣ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಬಾಹ್ಲೀಕ, ರಥಿಕಶ್ರೇಷ್ಠ ವೀರರಾಜ ದುರ್ಯೋಧನ - ಈ ಎಲ್ಲರೂ ಹೊಳೆಯುವ ಮಹಾಧನುರ್ಧರರು ಮತ್ತು ಯುದ್ಧ ವಿಶಾರದರು.

04036013a ದೃಷ್ಟ್ವೈವ ಹಿ ಕುರೂನೇತಾನ್ವ್ಯೂಢಾನೀಕಾನ್ಪ್ರಪ್ರಹಾರಿಣಃ|

04036013c ಹೃಷಿತಾನಿ ಚ ರೋಮಾಣಿ ಕಶ್ಮಲಂ ಚಾಗತಂ ಮಮ||

ಯುದ್ಧಸನ್ನದ್ಧರಾದ ಈ ಕುರುಯೋಧರನ್ನು ನೋಡಿಯೇ ನನಗೆ ರೋಮಾಂಚನವಾಗಿದೆ. ನನಗೆ ಮೂರ್ಛೆ ಬಂದಂತೆ ಆಗುತ್ತಿದೆ.””

04036014 ವೈಶಂಪಾಯನ ಉವಾಚ|

04036014a ಅವಿಯಾತೋ ವಿಯಾತಸ್ಯ ಮೌರ್ಖ್ಯಾದ್ಧೂರ್ತಸ್ಯ ಪಶ್ಯತಃ|

04036014c ಪರಿದೇವಯತೇ ಮಂದಃ ಸಕಾಶೇ ಸವ್ಯಸಾಚಿನಃ||

ವೈಶಂಪಾಯನನು ಹೇಳಿದನು: “ಆ ಹೇಡಿ ಮಂದಬುದ್ಧಿ ಉತ್ತರನು ಧೃಷ್ಟ ಧೈರ್ಯಶಾಲಿ ಸವ್ಯಸಾಚಿಯ ಎದಿರು ಮೂರ್ಖತನದಿಂದ ಪ್ರಲಾಪಿಸತೊಡಗಿದನು.

04036015a ತ್ರಿಗರ್ತಾನ್ಮೇ ಪಿತಾ ಯಾತಃ ಶೂನ್ಯೇ ಸಂಪ್ರಣಿಧಾಯ ಮಾಂ|

04036015c ಸರ್ವಾಂ ಸೇನಾಮುಪಾದಾಯ ನ ಮೇ ಸಂತೀಹ ಸೈನಿಕಾಃ||

“ನನ್ನ ತಂದೆಯು ಸೇನೆಯನ್ನು ತೆಗೆದುಕೊಂಡು ಶೂನ್ಯ ನಗರದಲ್ಲಿ ನನ್ನನ್ನಿರಿಸಿ ತ್ರಿಗರ್ತರನ್ನು ಎದುರಿಸಲು ಹೊರಟುಹೋದನು. ನನಗಿಲ್ಲಿ ಸೈನಿಕರಿಲ್ಲ.

04036016a ಸೋಽಹಮೇಕೋ ಬಹೂನ್ಬಾಲಃ ಕೃತಾಸ್ತ್ರಾನಕೃತಶ್ರಮಃ|

04036016c ಪ್ರತಿಯೋದ್ಧುಂ ನ ಶಕ್ಷ್ಯಾಮಿ ನಿವರ್ತಸ್ವ ಬೃಹನ್ನಡೇ||

ಬೃಹನ್ನಡೇ! ಏಕಾಂಗಿಯೂ ಅಸ್ತ್ರಪರಿಶ್ರಮವಿಲ್ಲದ ಬಾಲಕನೂ ಆದ ನಾನು ಅಸ್ತ್ರವಿಶಾರದ ಬಹುಯೋಧರೊಡನೆ ಕಾದಲಾರೆ. ಆದ್ದರಿಂದ ರಥವನ್ನು ಹಿಂದಿರುಗಿಸು.”

04036017 ಅರ್ಜುನ ಉವಾಚ|

04036017a ಭಯೇನ ದೀನರೂಪೋಽಸಿ ದ್ವಿಷತಾಂ ಹರ್ಷವರ್ಧನಃ|

04036017c ನ ಚ ತಾವತ್ಕೃತಂ ಕಿಂ ಚಿತ್ಪರೈಃ ಕರ್ಮ ರಣಾಜಿರೇ||

ಅರ್ಜುನನು ಹೇಳಿದನು: “ಭಯದಿಂದ ದೀನರೂಪಿಯಾಗಿ ಶತ್ರುಗಳ ಹರ್ಷವನ್ನು ಹೆಚ್ಚಿಸುತ್ತಿರುವೆ. ರಣರಂಗದಲ್ಲಿ ಶತ್ರುಗಳು ಇನ್ನೂ ಏನನ್ನೂ ಮಾಡಿಯೇ ಇಲ್ಲ.

04036018a ಸ್ವಯಮೇವ ಚ ಮಾಮಾತ್ಥ ವಹ ಮಾಂ ಕೌರವಾನ್ಪ್ರತಿ|

04036018c ಸೋಽಹಂ ತ್ವಾಂ ತತ್ರ ನೇಷ್ಯಾಮಿ ಯತ್ರೈತೇ ಬಹುಲಾ ಧ್ವಜಾಃ||

ನನ್ನನ್ನು ಕೌರವರೆಡೆಗೆ ಕರೆದುಕೊಂಡು ಹೋಗು ಎಂದು ನನಗೆ ಹೇಳಿದವನು ನೀನೆ. ಅಸಂಖ್ಯ ಧ್ವಜಗಳಿರುವಡೆಗೆ ನಾನು ನಿನ್ನನ್ನು ಒಯ್ಯುವೆನು.

04036019a ಮಧ್ಯಮಾಮಿಷಗೃಧ್ರಾಣಾಂ ಕುರೂಣಾಮಾತತಾಯಿನಾಂ|

04036019c ನೇಷ್ಯಾಮಿ ತ್ವಾಂ ಮಹಾಬಾಹೋ ಪೃಥಿವ್ಯಾಮಪಿ ಯುಧ್ಯತಾಂ||

ಮಹಾಬಾಹೋ! ಮಾಂಸಕ್ಕಾಗಿ ಬಾಯಿಬಿಡುವ ಹದ್ದುಗಳಾಗಿ ಭೂಮಿಯಲ್ಲಿ ನಿಂತು ಯುದ್ಧಮಾಡುತ್ತಿರುವ ಪಾಪಿಷ್ಟ ಕೌರವರ ನಡುವೆ ನಿನ್ನನ್ನು ಒಯ್ಯುವೆನು.

04036020a ತಥಾ ಸ್ತ್ರೀಷು ಪ್ರತಿಶ್ರುತ್ಯ ಪೌರುಷಂ ಪುರುಷೇಷು ಚ|

04036020c ಕತ್ಥಮಾನೋಽಭಿನಿರ್ಯಾಯ ಕಿಮರ್ಥಂ ನ ಯುಯುತ್ಸಸೇ||

ಹಾಗೆ ಸ್ತ್ರೀಯರ ಮುಂದೆ ಪ್ರತಿಜ್ಞೆಮಾಡಿ ಪುರುಷರ ಮುಂದೆ ಪೌರುಷವನ್ನು ಕೊಚ್ಚಿಕೊಂಡು ಹೊರಟುಬಂದು ಈಗ ನೀನು ಏಕೆ ಯುದ್ಧಮಾಡಬಯಸದಿರುವೆ?

04036021a ನ ಚೇದ್ವಿಜಿತ್ಯ ಗಾಸ್ತಾಸ್ತ್ವಂ ಗೃಹಾನ್ವೈ ಪ್ರತಿಯಾಸ್ಯಸಿ|

04036021c ಪ್ರಹಸಿಷ್ಯಂತಿ ವೀರ ತ್ವಾಂ ನರಾ ನಾರ್ಯಶ್ಚ ಸಂಗತಾಃ||

ವೀರ! ಆ ಗೋವುಗಳನ್ನು ಗೆಲ್ಲದೇ ನೀನು ಮನೆಗೆ ಮರಳಿದರೆ ಸ್ತ್ರೀಯರೂ ಪುರುಷರೂ ಒಟ್ಟುಗೂಡಿ ನಿನ್ನನ್ನು ಅಪಹಾಸ್ಯಮಾಡುತ್ತಾರೆ.

04036022a ಅಹಮಪ್ಯತ್ರ ಸೈರಂಧ್ರ್ಯಾ ಸ್ತುತಃ ಸಾರಥ್ಯಕರ್ಮಣಿ|

04036022c ನ ಹಿ ಶಕ್ಷ್ಯಾಮ್ಯನಿರ್ಜಿತ್ಯ ಗಾಃ ಪ್ರಯಾತುಂ ಪುರಂ ಪ್ರತಿ||

ಸಾರಥ್ಯಕಾರ್ಯದಲ್ಲಿ ಸೈರಂಧ್ರಿಯಿಂದ ಹೊಗಳಿಸಿಕೊಂಡ ಈ ನಾನು ಕೂಡ ಗೋವುಗಳನ್ನು ಗೆದ್ದುಕೊಳ್ಳದೆ ಪುರಕ್ಕೆ ಹಿಂದಿರುಗಲಾರೆ.

04036023a ಸ್ತೋತ್ರೇಣ ಚೈವ ಸೈರಂಧ್ರ್ಯಾಸ್ತವ ವಾಕ್ಯೇನ ತೇನ ಚ|

04036023c ಕಥಂ ನ ಯುಧ್ಯೇಯಮಹಂ ಕುರೂನ್ಸರ್ವಾನ್ಸ್ಥಿರೋ ಭವ||

ಸೈರಂಧ್ರಿಯ ಸ್ತುತಿಯಿಂದ ಮತ್ತು ನಿನ್ನ ಆ ಮಾತಿನಿಂದ ಪ್ರೇರಿತನಾಗಿರುವ ನಾನು ಎಲ್ಲ ಕುರುಗಳೊಡನೆ ಹೇಗೆ ಹೋರಾಡದಿರಲಿ? ನೀನು ಸ್ಥಿರನಾಗು.”

04036024 ಉತ್ತರ ಉವಾಚ|

04036024a ಕಾಮಂ ಹರಂತು ಮತ್ಸ್ಯಾನಾಂ ಭೂಯಾಂಸಂ ಕುರವೋ ಧನಂ|

04036024c ಪ್ರಹಸಂತು ಚ ಮಾಂ ನಾರ್ಯೋ ನರಾ ವಾಪಿ ಬೃಹನ್ನಡೇ||

ಉತ್ತರನು ಹೇಳಿದನು: “ಬೃಹನ್ನಡೇ! ಬೇಕಾದರೆ ಕುರುಗಳು ಮತ್ಸ್ಯರ ವಿಪುಲ ಧನವನ್ನು ಒಯ್ಯಲಿ. ನನ್ನನ್ನು ಕುರಿತು ಸ್ತ್ರೀಯರು ಅಥವಾ ಪುರುಷರು ನಗಲಿ.””

04036025 ವೈಶಂಪಾಯನ ಉವಾಚ|

04036025a ಇತ್ಯುಕ್ತ್ವಾ ಪ್ರಾದ್ರವದ್ಭೀತೋ ರಥಾತ್ಪ್ರಸ್ಕಂದ್ಯ ಕುಂಡಲೀ|

04036025c ತ್ಯಕ್ತ್ವಾ ಮಾನಂ ಸ ಮಂದಾತ್ಮಾ ವಿಸೃಜ್ಯ ಸಶರಂ ಧನುಃ||

ವೈಶಂಪಾಯನನು ಹೇಳಿದನು: “ಭೀತನೂ ಮಂದಾತ್ಮನೂ ಆದ ಅ ಕುಂಡಲಧಾರಿಯು ಹೀಗೆ ಹೇಳಿ, ಮಾನವನ್ನು ತೊರೆದು, ಬಾಣಸಹಿತ ಬಿಲ್ಲನ್ನು ಬಿಸುಟು, ರಥದಿಂದ ಧುಮುಕಿ ಓಡತೊಡಗಿದನು.

04036026 ಬೃಹನ್ನಡೋವಾಚ|

04036026a ನೈಷ ಪೂರ್ವೈಃ ಸ್ಮೃತೋ ಧರ್ಮಃ ಕ್ಷತ್ರಿಯಸ್ಯ ಪಲಾಯನಂ|

04036026c ಶ್ರೇಯಸ್ತೇ ಮರಣಂ ಯುದ್ಧೇ ನ ಭೀತಸ್ಯ ಪಲಾಯನಂ||

ಬ್ರಹನ್ನಡೆಯು ಹೇಳಿದಳು: “ಪಲಾಯನವು ಕ್ಷತ್ರಿಯನ ಧರ್ಮವೆಂದು ಹಿಂದಿನವರು ವಿಧಿಸಿಲ್ಲ. ಯುದ್ಧದಲ್ಲಿ ಮರಣಹೊಂದುವುದು ನಿನಗೆ ಶ್ರೇಯಸ್ಕರ; ಭೀತಿಯಿಂದ ಪಲಾಯನಮಾಡುವುದಲ್ಲ!””

04036027 ವೈಶಂಪಾಯನ ಉವಾಚ|

04036027a ಏವಮುಕ್ತ್ವಾ ತು ಕೌಂತೇಯಃ ಸೋಽವಪ್ಲುತ್ಯ ರಥೋತ್ತಮಾತ್|

04036027c ತಮನ್ವಧಾವದ್ಧಾವಂತಂ ರಾಜಪುತ್ರಂ ಧನಂಜಯಃ|

04036027e ದೀರ್ಘಾಂ ವೇಣೀಂ ವಿಧುನ್ವಾನಃ ಸಾಧು ರಕ್ತೇ ಚ ವಾಸಸೀ||

ವೈಶಂಪಾಯನನು ಹೇಳಿದನು: “ಕೌಂತೇಯ ಧನಂಜಯನು ಹೀಗೆ ನುಡಿದು ತನ್ನ ನೀಳ ಜಡೆಯೂ ಕೆಂಪುವಸ್ತ್ರಗಳೂ ಹಾರಾಡುತ್ತಿರಲು, ಉತ್ತಮ ರಥದಿಂದ ನೆಗೆದು ಓಡಿಹೋಗುತ್ತಿದ್ದ ಆ ರಾಜಕುಮಾರನನ್ನು ಬೆನ್ನಟ್ಟಿದನು.

04036028a ವಿಧೂಯ ವೇಣೀಂ ಧಾವಂತಮಜಾನಂತೋಽರ್ಜುನಂ ತದಾ|

04036028c ಸೈನಿಕಾಃ ಪ್ರಾಹಸನ್ಕೇ ಚಿತ್ತಥಾರೂಪಮವೇಕ್ಷ್ಯ ತಂ||

ಜಡೆಯನ್ನು ಹಾರಾಡಿಸಿಕೊಂಡು ಹೋಗುತ್ತಿದ್ದ ಅರ್ಜುನನನ್ನು ಗುರುತುಹಿಡಿಯಲಾರದೇ ಕೆಲವು ಸೈನಿಕರು ಅವನ ಅಂತಹ ರೂಪವನ್ನು ನೋಡಿ ನಕ್ಕರು.

04036029a ತಂ ಶೀಘ್ರಮಭಿಧಾವಂತಂ ಸಂಪ್ರೇಕ್ಷ್ಯ ಕುರವೋಽಬ್ರುವನ್|

04036029c ಕ ಏಷ ವೇಷಪ್ರಚ್ಛನ್ನೋ ಭಸ್ಮನೇವ ಹುತಾಶನಃ||

ವೇಗವಾಗಿ ಹಾಗೆ ಓಡುತ್ತಿದ್ದ ಅವನನ್ನು ನೋಡಿ ಕುರುಗಳು ಮಾತನಾಡಿಕೊಂಡರು: “ಬೂದಿ ಮುಚ್ಚಿರುವ ಬೆಂಕಿಯಂತೆ ವೇಷಮರೆಸಿಕೊಂಡಿರುವ ಈತನಾರು?

04036030a ಕಿಂ ಚಿದಸ್ಯ ಯಥಾ ಪುಂಸಃ ಕಿಂ ಚಿದಸ್ಯ ಯಥಾ ಸ್ತ್ರಿಯಃ|

04036030c ಸಾರೂಪ್ಯಮರ್ಜುನಸ್ಯೇವ ಕ್ಲೀಬರೂಪಂ ಬಿಭರ್ತಿ ಚ||

ಇವನ ರೂಪ ಸ್ವಲ್ಪಮಟ್ಟಿಗೆ ಗಂಡಸಿನಂತೆ, ಸ್ವಲ್ಪಮಟ್ಟಿಗೆ ಹೆಂಗಸಿನಂತೆ. ರೂಪ ಅರ್ಜುನನಂತೆಯೇ ಇದೆ. ಆದರೆ ನಪುಂಸಕರೂಪವನ್ನು ಧರಿಸಿದ್ದಾನೆ.

04036031a ತದೇವೈತಚ್ಚಿರೋಗ್ರೀವಂ ತೌ ಬಾಹೂ ಪರಿಘೋಪಮೌ|

04036031c ತದ್ವದೇವಾಸ್ಯ ವಿಕ್ರಾಂತಂ ನಾಯಮನ್ಯೋ ಧನಂಜಯಾತ್||

ಅದೇ ತಲೆ, ಅದೇ ಕೊರಳು, ಲಾಳಮುಂಡಿಗೆಯಂತಹ ಅವೇ ತೋಳುಗಳು, ಅಂಥದೇ ನಡುಗೆ ಇವನವು. ಇವನು ಧನಂಜಯನಲ್ಲದೇ ಬೇರೆಯವನಲ್ಲ.

04036032a ಅಮರೇಷ್ವಿವ ದೇವೇಂದ್ರೋ ಮಾನುಷೇಷು ಧನಂಜಯಃ|

04036032c ಏಕಃ ಕೋಽಸ್ಮಾನುಪಾಯಾಯಾದನ್ಯೋ ಲೋಕೇ ಧನಂಜಯಾತ್||

ದೇವತೆಗಳಲ್ಲಿ ದೇವೇಂದ್ರನಂತೆ ಮಾನವರಲ್ಲಿ ಧನಂಜಯ. ಲೋಕದಲ್ಲಿ ಧನಂಜಯನಲ್ಲದೆ ಮತ್ತಾವನು ಒಂಟಿಯಾಗಿ ನಮ್ಮನ್ನು ಎದುರಿಸುತ್ತಾನೆ?

04036033a ಏಕಃ ಪುತ್ರೋ ವಿರಾಟಸ್ಯ ಶೂನ್ಯೇ ಸನ್ನಿಹಿತಃ ಪುರೇ|

04036033c ಸ ಏಷ ಕಿಲ ನಿರ್ಯಾತೋ ಬಾಲಭಾವಾನ್ನ ಪೌರುಷಾತ್||

ವಿರಾಟನ ಒಬ್ಬನೇ ಮಗನನ್ನು ನಿರ್ಜನ ಪಟ್ಟಣದಲ್ಲಿ ಇರಿಸಲಾಯಿತು. ಅವನು ಹುಡುಗತನದಿಂದ ಹೊರಬಂದಿದ್ದಾನೆ. ಪೌರುಷದಿಂದಲ್ಲ.

04036034a ಸತ್ರೇಣ ನೂನಂ ಚನ್ನಂ ಹಿ ಚರಂತಂ ಪಾರ್ಥಮರ್ಜುನಂ|

04036034c ಉತ್ತರಃ ಸಾರಥಿಂ ಕೃತ್ವಾ ನಿರ್ಯಾತೋ ನಗರಾದ್ಬಹಿಃ||

ಆ ಉತ್ತರನು ನಿಶ್ಚಿತವಾಗಿಯೂ ಗುಪ್ತವೇಷದಲ್ಲಿ ಚರಿಸುತ್ತಿರುವ ಕುಂತೀಪುತ್ರ ಅರ್ಜುನನನ್ನು ಸಾರಥಿಯನ್ನಾಗಿಸಿಕೊಂಡು ನಗರದಿಂದ ಹೊರಬಿದ್ದಿದ್ದಾನೆ.

04036035a ಸ ನೋ ಮನ್ಯೇ ಧ್ವಜಾನ್ದೃಷ್ಟ್ವಾ ಭೀತ ಏಷ ಪಲಾಯತಿ|

04036035c ತಂ ನೂನಮೇಷ ಧಾವಂತಂ ಜಿಘೃಕ್ಷತಿ ಧನಂಜಯಃ||

ನಮ್ಮ ಬಾವುಟಗಳನ್ನು ನೋಡಿ ಹೆದರಿ ಇಗೋ ಪಲಾಯನ ಮಾಡುತ್ತಿದ್ದಾನೆಂದು ತೋರುತ್ತದೆ. ಓಡುತ್ತಿರುವ ಅವನನ್ನು ಹಿಡಿಯಲು ಈ ಧನಂಜಯನು ಇಚ್ಛಿಸುತ್ತಿರುವುದು ಖಂಡಿತ.”

04036036a ಇತಿ ಸ್ಮ ಕುರವಃ ಸರ್ವೇ ವಿಮೃಶಂತಃ ಪೃಥಕ್ ಪೃಥಕ್|

04036036c ನ ಚ ವ್ಯವಸಿತುಂ ಕಿಂ ಚಿದುತ್ತರಂ ಶಕ್ನುವಂತಿ ತೇ|

04036036e ಚನ್ನಂ ತಥಾ ತಂ ಸತ್ರೇಣ ಪಾಂಡವಂ ಪ್ರೇಕ್ಷ್ಯ ಭಾರತ||

ಭಾರತ! ಮಾರುವೇಷದಲ್ಲಿದ್ದ ಆ ಪಾಂಡವನನ್ನು ಕಂಡು ಕುರುಗಳೆಲ್ಲರೂ ಹೀಗೆ ಬೇರೆಬೇರೆಯಾಗಿ ಆಲೋಚಿಸಿದರು. ಆದರೆ ಅವರು ಯಾವುದೇ ನಿರ್ಣಯಕ್ಕೆ ಬರಲು ಸಮರ್ಥರಾಗಲಿಲ್ಲ.

04036037a ಉತ್ತರಂ ತು ಪ್ರಧಾವಂತಮನುದ್ರುತ್ಯ ಧನಂಜಯಃ|

04036037c ಗತ್ವಾ ಪದಶತಂ ತೂರ್ಣಂ ಕೇಶಪಕ್ಷೇ ಪರಾಮೃಶತ್||

ಧನಂಜಯನು ಓಡಿಹೋಗುತ್ತಿದ್ದ ಉತ್ತರನನ್ನು ಬೆನ್ನುಹತ್ತಿ ನೂರು ಹೆಜ್ಜೆ ಹೋಗಿ ಅವನ ಜುಟ್ಟನ್ನು ಹಿಡಿದುಕೊಂಡನು.

04036038a ಸೋಽರ್ಜುನೇನ ಪರಾಮೃಷ್ಟಃ ಪರ್ಯದೇವಯದಾರ್ತವತ್|

04036038c ಬಹುಲಂ ಕೃಪಣಂ ಚೈವ ವಿರಾಟಸ್ಯ ಸುತಸ್ತದಾ||

ಅರ್ಜುನನು ಹಿಡಿದ ಉತ್ತರನು ಆಗ ಆರ್ತನಂತೆ ದೀನನಾಗಿ ಬಹುವಾಗಿ ಪ್ರಲಾಪಿಸತೊಡಗಿದನು.

04036039a ಶಾತಕುಂಭಸ್ಯ ಶುದ್ಧಸ್ಯ ಶತಂ ನಿಷ್ಕಾನ್ದದಾಮಿ ತೇ|

04036039c ಮಣೀನಷ್ಟೌ ಚ ವೈಡೂರ್ಯಾನ್ ಹೇಮಬದ್ಧಾನ್ಮಹಾಪ್ರಭಾನ್||

04036040a ಹೇಮದಂಡಪ್ರತಿಚ್ಛನ್ನಂ ರಥಂ ಯುಕ್ತಂ ಚ ಸುವ್ರಜೈಃ|

04036040c ಮತ್ತಾಂಶ್ಚ ದಶ ಮಾತಂಗಾನ್ಮುಂಚ ಮಾಂ ತ್ವಂ ಬೃಹನ್ನಡೇ||

“ಶುದ್ಧ ಚಿನ್ನದ ನೂರು ನಾಣ್ಯಗಳನ್ನೂ, ಸುವರ್ಣಖಚಿತ ಮಹಾಪ್ರಕಾಶದ ಎಂಟು ವೈಢೂರ್ಯ ಮಣಿಗಳನ್ನೂ, ಚಿನ್ನದ ದಂಡವುಳ್ಳ ವೇಗದ ಕುದುರೆಗಳನ್ನು ಹೂಡಿದ ರಥವನ್ನೂ, ಹತ್ತು ಮದಗಜಗಳನ್ನೂ ನಿನಗೆ ಕೊಡುತ್ತೇನೆ. ನನ್ನನ್ನು ಬಿಟ್ಟುಬಿಡು ಬೃಹನ್ನಡೇ!””

04036041 ವೈಶಂಪಾಯನ ಉವಾಚ|

04036041a ಏವಮಾದೀನಿ ವಾಕ್ಯಾನಿ ವಿಲಪಂತಮಚೇತಸಂ|

04036041c ಪ್ರಹಸ್ಯ ಪುರುಷವ್ಯಾಘ್ರೋ ರಥಸ್ಯಾಂತಿಕಮಾನಯತ್||

ವೈಶಂಪಾಯನನು ಹೇಳಿದನು: “ಇವೇ ಮುಂತಾದ ಮಾತುಗಳನ್ನು ಎಚ್ಚರತಪ್ಪಿ ಆಡುತ್ತಿದ್ದ ಆ ಉತ್ತರನನ್ನು ಆ ಪುರುಷಶ್ರೇಷ್ಠನು ನಗುತ್ತಾ ರಥದ ಬಳಿಗೆ ತಂದನು.

04036042a ಅಥೈನಮಬ್ರವೀತ್ಪಾರ್ಥೋ ಭಯಾರ್ತಂ ನಷ್ಟಚೇತಸಂ|

04036042c ಯದಿ ನೋತ್ಸಹಸೇ ಯೋದ್ಧುಂ ಶತ್ರುಭಿಃ ಶತ್ರುಕರ್ಶನ|

04036042e ಏಹಿ ಮೇ ತ್ವಂ ಹಯಾನ್ಯಚ್ಛ ಯುಧ್ಯಮಾನಸ್ಯ ಶತ್ರುಭಿಃ||

ಬಳಿಕ ಪಾರ್ಥನು ಭಯಾರ್ತನೂ ಪ್ರಜ್ಞಾಹೀನನೂ ಆದ ಉತ್ತರನಿಗೆ ಹೀಗೆಂದನು: “ಶತ್ರುನಾಶಕ! ಶತ್ರುಗಳೊಡನೆ ನೀನು ಕಾದಲಾರೆಯಾದರೆ ಬಾ. ನನ್ನ ಕುದುರೆಗಳನ್ನು ನಡೆಸು. ಶತ್ರುಗಳೊಡನೆ ನಾನು ಹೋರಾಡುತ್ತೇನೆ.

04036043a ಪ್ರಯಾಹ್ಯೇತದ್ರಥಾನೀಕಂ ಮದ್ಬಾಹುಬಲರಕ್ಷಿತಃ|

04036043c ಅಪ್ರಧೃಷ್ಯತಮಂ ಘೋರಂ ಗುಪ್ತಂ ವೀರೈರ್ಮಹಾರಥೈಃ||

ನನ್ನ ಬಾಹುಬಲದ ರಕ್ಷಣೆಯನ್ನು ಪಡೆದು ಅತ್ಯಂತ ಅದಮ್ಯವೂ ಘೋರವೂ ಮಹಾರಥಿ ವೀರರಿಂದ ರಕ್ಷಿತವೂ ಆದ ಈ ರಥಸೇನೆಯೊಳಗೆ ನುಗ್ಗು!

04036044a ಮಾ ಭೈಸ್ತ್ವಂ ರಾಜಪುತ್ರಾಗ್ರ್ಯ ಕ್ಷತ್ರಿಯೋಽಸಿ ಪರಂತಪ|

04036044c ಅಹಂ ವೈ ಕುರುಭಿರ್ಯೋತ್ಸ್ಯಾಮ್ಯವಜೇಷ್ಯಾಮಿ ತೇ ಪಶೂನ್||

ಶತ್ರುನಾಶಕ! ರಾಜಪುತ್ರ! ಶ್ರೇಷ್ಠ! ಹೆದರಬೇಡ! ನೀನು ಕ್ಷತ್ರಿಯನಾಗಿರುವೆ. ನಾನು ಕುರುಗಳೊಡನೆ ಯುದ್ಧಮಾಡಿ ನಿನ್ನ ಹಸುಗಳನ್ನು ಗೆದ್ದುಕೊಡುವೆನು.

04036045a ಪ್ರವಿಶ್ಯೈತದ್ರಥಾನೀಕಮಪ್ರಧೃಷ್ಯಂ ದುರಾಸದಂ|

04036045c ಯಂತಾ ಭೂಸ್ತ್ವಂ ನರಶ್ರೇಷ್ಠ ಯೋತ್ಸ್ಯೇಽಹಂ ಕುರುಭಿಃ ಸಹ||

ಈ ಅಜೇಯ ಅಸಾಧ್ಯ ರಥಸೈನ್ಯವನ್ನು ಹೊಕ್ಕು ನಾನು ಕುರುಗಳೊಡನೆ ಕಾದುತ್ತೇನೆ. ನರಶ್ರೇಷ್ಠ! ನೀನು ನನಗೆ ಸಾರಥಿಯಾಗು!”

04036046a ಏವಂ ಬ್ರುವಾಣೋ ಬೀಭತ್ಸುರ್ವೈರಾಟಿಮಪರಾಜಿತಃ|

04036046c ಸಮಾಶ್ವಾಸ್ಯ ಮುಹೂರ್ತಂ ತಮುತ್ತರಂ ಭರತರ್ಷಭ||

04036047a ತತ ಏನಂ ವಿಚೇಷ್ಟಂತಮಕಾಮಂ ಭಯಪೀಡಿತಂ|

04036047c ರಥಮಾರೋಪಯಾಮಾಸ ಪಾರ್ಥಃ ಪ್ರಹರತಾಂ ವರಃ||

ಭರತಶ್ರೇಷ್ಠ! ಆ ಅಪರಾಜಿತ ಯೋಧಶ್ರೇಷ್ಠ ಕುಂತೀಪುತ್ರ ಅರ್ಜುನನು ವಿರಾಟಪುತ್ರ ಉತ್ತರನಿಗೆ ಹೀಗೆ ನುಡಿಯುತ್ತ ಅವನನ್ನು ಮುಹೂರ್ತಕಾಲದಲ್ಲಿ ಸಮಾಧಾನಪಡಿಸಿ ಭಯಪೀಡಿತನಾಗಿ, ಯುದ್ಧದ ಆಸೆಯಿಲ್ಲದೇ ಪರದಾಡುತ್ತಿದ್ದ ಅವನನ್ನು ಎತ್ತಿ ರಥದಲ್ಲೇರಿಸಿದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಉತ್ತರಾಶ್ವಾಸನೇ ಷಟ್‌ತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಉತ್ತರಾಶ್ವಾಸನದಲ್ಲಿ ಮೂವತ್ತಾರನೆಯ ಅಧ್ಯಾಯವು.

Related image

Comments are closed.