Udyoga Parva: Chapter 95

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೯೫

ಮಾತಲಿ ವರಾನ್ವೇಷಣೆ

ಋಷಿ ಕಣ್ವನು ದುರ್ಯೋಧನನಿಗೆ ವಿಷ್ಣುವಿನ ಮಹಾತ್ಮೆಯನ್ನು ವರ್ಣಿಸುತ್ತಾ “‘ನಾನೇ ಬಲಶಾಲಿ!’ ಎಂದು ತಿಳಿದುಕೊಳ್ಳಬೇಡ. ಬಲಶಾಲಿಗಳಿಗಿಂತ ಬಲಶಾಲಿಗಳು ಕಂಡುಬರುತ್ತಾರೆ. ಬಲಶಾಲಿಗಳಲ್ಲಿ ಕೇವಲ ದೇಹಬಲವೇ ಬಲವೆನಿಸಿಕೊಳ್ಳುವುದಿಲ್ಲ. ದೇವತೆಗಳ ವಿಕ್ರಮವನ್ನು ಪಡೆದಿರುವ ಪಾಂಡವರೆಲ್ಲರೂ ನಿನಗಿಂತ ಬಲವಂತರು” ಎಂದು ಹೇಳಿ ಮಾತಲಿಯ ವರಾನ್ವೇಷಣೆಯ ಕಥೆಯನ್ನು ಪ್ರಾರಂಭಿಸಿದುದು (೧-೧೧). ಇಂದ್ರನ ಸಾರಥಿ ಮಾತಲಿಯು ಮಗಳು ಗುಣಕೇಶಿಗೆ ದೇವಮಾನುಷ ಲೋಕಗಳಲ್ಲಿ ಅನುರೂಪ ವರನು ಯಾರೂ ಕಾಣುತ್ತಿಲ್ಲವೆಂದು ವರನನ್ನು ಹುಡುಕಲು ನಾಗಲೋಕಕ್ಕೆ ಹೊರಡುವುದು (೧೨-೨೧).

05095001 ವೈಶಂಪಾಯನ ಉವಾಚ|

05095001a ಜಾಮದಗ್ನ್ಯವಚಃ ಶ್ರುತ್ವಾ ಕಣ್ವೋಽಪಿ ಭಗವಾನೃಷಿಃ|

05095001c ದುರ್ಯೋಧನಮಿದಂ ವಾಕ್ಯಮಬ್ರವೀತ್ಕುರುಸಂಸದಿ||

ವೈಶಂಪಾಯನನು ಹೇಳಿದನು: “ಜಾಮದಗ್ನಿಯ ವಚನವನ್ನು ಕೇಳಿ ಭಗವಾನ್ ಋಷಿ ಕಣ್ವನೂ ಕೂಡ ಕುರುಸಂಸದಿಯಲ್ಲಿ ದುರ್ಯೋಧನನಿಗೆ ಈ ಮಾತನ್ನಾಡಿದನು.

05095002a ಅಕ್ಷಯಶ್ಚಾವ್ಯಯಶ್ಚೈವ ಬ್ರಹ್ಮಾ ಲೋಕಪಿತಾಮಹಃ|

05095002c ತಥೈವ ಭಗವಂತೌ ತೌ ನರನಾರಾಯಣಾವೃಷೀ||

“ಲೋಕಪಿತಾಮಹ ಬ್ರಹ್ಮನು ಅಕ್ಷಯ ಮತ್ತು ಅವ್ಯಯ. ಹಾಗೆಯೇ ಭಗವಂತರಾದ ಆ ನರ-ನಾರಯಣ ಋಷಿಗಳೂ ಕೂಡ.

05095003a ಆದಿತ್ಯಾನಾಂ ಹಿ ಸರ್ವೇಷಾಂ ವಿಷ್ಣುರೇಕಃ ಸನಾತನಃ|

05095003c ಅಜಯ್ಯಶ್ಚಾವ್ಯಯಶ್ಚೈವ ಶಾಶ್ವತಃ ಪ್ರಭುರೀಶ್ವರಃ||

ಆದಿತ್ಯರೆಲ್ಲರಲ್ಲಿ ವಿಷ್ಣುವೊಬ್ಬನೇ ಸನಾತನನು, ಅಜೇಯನು, ಅವ್ಯಯನು, ಶಾಶ್ವತನು ಮತ್ತು ಪ್ರಭು ಈಶ್ವರನು.

05095004a ನಿಮಿತ್ತಮರಣಾಸ್ತ್ವನ್ಯೇ ಚಂದ್ರಸೂರ್ಯೌ ಮಹೀ ಜಲಂ|

05095004c ವಾಯುರಗ್ನಿಸ್ತಥಾಕಾಶಂ ಗ್ರಹಾಸ್ತಾರಾಗಣಾಸ್ತಥಾ||

ಇತರರು - ಚಂದ್ರ-ಸೂರ್ಯರು, ಭೂಮಿ, ನೀರು, ವಾಯು, ಅಗ್ನಿ, ಆಕಾಶ, ಗ್ರಹ, ತಾರಗಣಗಳು ನಿಮಿತ್ತವಾದವುಗಳು ಮತ್ತು ನಾಶಹೊಂದುವವು.

05095005a ತೇ ಚ ಕ್ಷಯಾಂತೇ ಜಗತೋ ಹಿತ್ವಾ ಲೋಕತ್ರಯಂ ಸದಾ|

05095005c ಕ್ಷಯಂ ಗಚ್ಚಂತಿ ವೈ ಸರ್ವೇ ಸೃಜ್ಯಂತೇ ಚ ಪುನಃ ಪುನಃ||

ಅವು ಜಗತ್ತಿನ ಕ್ಷಯವಾಗುವಾಗ ಲೋಕತ್ರಯಗಳನ್ನು ತೊರೆಯುತ್ತವೆ. ಅವೆಲ್ಲವೂ ಕ್ಷಯವಾಗಿ ಹೋಗುತ್ತವೆ ಮತ್ತು ಪುನಃ ಪುನಃ ಸೃಷ್ಟಿಯಾಗುತ್ತವೆ.

05095006a ಮುಹೂರ್ತಮರಣಾಸ್ತ್ವನ್ಯೇ ಮಾನುಷಾ ಮೃಗಪಕ್ಷಿಣಃ|

05095006c ತಿರ್ಯಗ್ಯೋನ್ಯಶ್ಚ ಯೇ ಚಾನ್ಯೇ ಜೀವಲೋಕಚರಾಃ ಸ್ಮೃತಾಃ||

ಅನ್ಯ ಮನುಷ್ಯರು, ಮೃಗ-ಪಕ್ಷಿಗಳು, ತಿರ್ಯಗ್ಯೋನಿಗಳಲ್ಲಿ ಜನಿಸಿದ ಇತರ ಜೀವಲೋಕಚರಗಳು ಅಲ್ಪವೇ ಸಮಯದಲ್ಲಿ ಮರಣ ಹೊಂದುತ್ತವೆ.

05095007a ಭೂಯಿಷ್ಠೇನ ತು ರಾಜಾನಃ ಶ್ರಿಯಂ ಭುಕ್ತ್ವಾಯುಷಃ ಕ್ಷಯೇ|

05095007c ಮರಣಂ ಪ್ರತಿಗಚ್ಚಂತಿ ಭೋಕ್ತುಂ ಸುಕೃತದುಷ್ಕೃತಂ||

ಹಾಗೆಯೇ ರಾಜರು ಸಂಪತ್ತನ್ನು ಭೋಗಿಸಿ ಆಯುಷ್ಯವು ಕ್ಷಯವಾಗಲು ಮರಣ ಹೊಂದುತ್ತಾರೆ ಮತ್ತು ಸುಕೃತ-ದುಷ್ಕೃತಗಳನ್ನು ಭೋಗಿಸಲು ಪುನಃ ಜೀವತಳೆಯುತ್ತಾರೆ.

05095008a ಸ ಭವಾನ್ಧರ್ಮಪುತ್ರೇಣ ಶಮಂ ಕರ್ತುಮಿಹಾರ್ಹತಿ|

05095008c ಪಾಂಡವಾಃ ಕುರವಶ್ಚೈವ ಪಾಲಯಂತು ವಸುಂಧರಾಂ||

ನೀನು ಆ ಧರ್ಮಪುತ್ರನೊಂದಿಗೆ ಶಾಂತಿ ಮಾಡಿಕೊಳ್ಳಬೇಕು. ಪಾಂಡವರು ಮತ್ತು ಕೌರವರು ಭೂಮಿಯನ್ನು ಪಾಲಿಸಲಿ.

05095009a ಬಲವಾನಹಮಿತ್ಯೇವ ನ ಮಂತವ್ಯಂ ಸುಯೋಧನ|

05095009c ಬಲವಂತೋ ಹಿ ಬಲಿಭಿರ್ದೃಶ್ಯಂತೇ ಪುರುಷರ್ಷಭ|

ಸುಯೋಧನ! “ನಾನೇ ಬಲಶಾಲಿ!” ಎಂದು ತಿಳಿದುಕೊಳ್ಳಬೇಡ. ಪುರುಷರ್ಷಭ! ಬಲಶಾಲಿಗಳಿಗಿಂತ ಬಲಶಾಲಿಗಳು ಕಂಡುಬರುತ್ತಾರೆ.

05095010a ನ ಬಲಂ ಬಲಿನಾಂ ಮಧ್ಯೇ ಬಲಂ ಭವತಿ ಕೌರವ|

05095010c ಬಲವಂತೋ ಹಿ ತೇ ಸರ್ವೇ ಪಾಂಡವಾ ದೇವವಿಕ್ರಮಾಃ||

ಕೌರವ! ಬಲಶಾಲಿಗಳಲ್ಲಿ ಕೇವಲ ದೇಹಬಲವೇ ಬಲವೆನಿಸಿಕೊಳ್ಳುವುದಿಲ್ಲ. ದೇವತೆಗಳ ವಿಕ್ರಮವನ್ನು ಪಡೆದಿರುವ ಪಾಂಡವರೆಲ್ಲರೂ ನಿನಗಿಂತ ಬಲವಂತರು.

05095011a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ|

05095011c ಮಾತಲೇರ್ದಾತುಕಾಮಸ್ಯ ಕನ್ಯಾಂ ಮೃಗಯತೋ ವರಂ||

ಇದರ ಕುರಿತಾಗಿ, ಉದಾಹರಣೆಯಾಗಿ, ಮಾತಲಿಯು ಮಗಳನ್ನು ಕೊಡಲು ವರನನ್ನು ಹುಡುಕಿದ ಈ ಪುರಾತನ ಇತಿಹಾಸವೊಂದಿದೆ.

05095012a ಮತಸ್ತ್ರೈಲೋಕ್ಯರಾಜಸ್ಯ ಮಾತಲಿರ್ನಾಮ ಸಾರಥಿಃ|

05095012c ತಸ್ಯೈಕೈವ ಕುಲೇ ಕನ್ಯಾ ರೂಪತೋ ಲೋಕವಿಶ್ರುತಾ||

ತ್ರೈಲೋಕ್ಯರಾಜನ ಸಾರಥಿಯ ಹೆಸರು ಮಾತಲಿ. ಅವನ ಕುಲದಲ್ಲಿ ರೂಪದಲ್ಲಿ ಲೋಕವಿಶ್ರುತ ಒಬ್ಬಳೇ ಕನ್ಯೆಯಿದ್ದಳು.

05095013a ಗುಣಕೇಶೀತಿ ವಿಖ್ಯಾತಾ ನಾಮ್ನಾ ಸಾ ದೇವರೂಪಿಣೀ|

05095013c ಶ್ರಿಯಾ ಚ ವಪುಷಾ ಚೈವ ಸ್ತ್ರಿಯೋಽನ್ಯಾಃ ಸಾತಿರಿಚ್ಯತೇ||

ಗುಣಕೇಶೀ ಎಂಬ ಹೆಸರಿನಿಂದ ವಿಖ್ಯಾತಳಾಗಿ ಆ ದೇವರೂಪಿಣಿಯು ಕಾಂತಿ-ಸೌಂದರ್ಯಗಳಲ್ಲಿ ಇತರ ಸ್ತ್ರೀಯರನ್ನು ಮೀರಿಸಿದ್ದಳು.

05095014a ತಸ್ಯಾಃ ಪ್ರದಾನಸಮಯಂ ಮಾತಲಿಃ ಸಹ ಭಾರ್ಯಯಾ|

05095014c ಜ್ಞಾತ್ವಾ ವಿಮಮೃಶೇ ರಾಜಂಸ್ತತ್ಪರಃ ಪರಿಚಿಂತಯನ್||

ಅವಳನ್ನು ಕೊಡುವ ಸಮಯವು ಬಂದಿದೆಯೆಂದು ತಿಳಿದ ಮಾತಲಿಯು ಭಾರ್ಯೆಯೊಂದಿಗೆ ಚಿಂತೆಗೊಳಗಾಗಿ ಮುಂದೆ ಏನು ಮಾಡಬೇಕೆಂದು ಯೋಚಿಸಿದನು.

05095015a ಧಿಕ್ಖಲ್ವಲಘುಶೀಲಾನಾಮುಚ್ಚ್ರಿತಾನಾಂ ಯಶಸ್ವಿನಾಂ|

05095015c ನರಾಣಾಮೃದ್ಧಸತ್ತ್ವಾನಾಂ ಕುಲೇ ಕನ್ಯಾಪ್ರರೋಹಣಂ||

“ಉತ್ತಮ ಶೀಲವುಳ್ಳ, ಯಶಸ್ವಿಗಳ, ಸತ್ವಯುತವಾದ ಉಚ್ಛಕುಲದಲ್ಲಿ ಕನ್ಯೆಯು ಜನಿಸಿದರೇ ಸಮಸ್ಯೆಯಲ್ಲವೇ?

05095016a ಮಾತುಃ ಕುಲಂ ಪಿತೃಕುಲಂ ಯತ್ರ ಚೈವ ಪ್ರದೀಯತೇ|

05095016c ಕುಲತ್ರಯಂ ಸಂಶಯಿತಂ ಕುರುತೇ ಕನ್ಯಕಾ ಸತಾಂ||

ಗೌರಾವಾನ್ವಿತ ಕುಲದಲ್ಲಿ ಜನಿಸಿದ ಕನ್ಯೆಯು ಮೂರು ಕುಲಗಳ ಗೌರವಕ್ಕೆ ಧಕ್ಕೆ ತರಬಹುದು - ತಾಯಿಯ ಕುಲ, ತಂದೆಯ ಕುಲ ಮತ್ತು ಅವಳನ್ನು ತೆಗೆದುಕೊಂಡವರ ಕುಲ.

05095017a ದೇವಮಾನುಷಲೋಕೌ ದ್ವೌ ಮಾನಸೇನೈವ ಚಕ್ಷುಷಾ|

05095017c ಅವಗಾಹ್ಯೈವ ವಿಚಿತೌ ನ ಚ ಮೇ ರೋಚತೇ ವರಃ||

ನನ್ನ ಮನಸ್ಸಿನ ಕಣ್ಣಿನಿಂದ ದೇವ-ಮಾನುಷ ಲೋಕಗಳೆರಡನ್ನೂ ನೋಡಿದರೆ ಅಲ್ಲಿ ನನಗೆ ಇಷ್ಟವಾದ ವರನು ಕಾಣಿಸುತ್ತಿಲ್ಲ.”

05095018a ನ ದೇವಾನ್ನೈವ ದಿತಿಜಾನ್ನ ಗಂಧರ್ವಾನ್ನ ಮಾನುಷಾನ್|

05095018c ಅರೋಚಯಂ ವರಕೃತೇ ತಥೈವ ಬಹುಲಾನೃಷೀನ್||

ದೇವತೆಗಳಲ್ಲಿ, ದೈತ್ಯರಲ್ಲಿ, ಗಂಧರ್ವರಲ್ಲಿ, ಮನುಷ್ಯರಲ್ಲಿ ಮತ್ತು ಹಾಗೆಯೇ ಬಹುಸಂಖ್ಯೆಯ ಋಷಿಗಳಲ್ಲಿಯೂ ಅವನಿಗೆ ಅಳಿಯನನ್ನಾಗಿ ಮಾಡಿಕೊಳ್ಳಲು ಯಾರೂ ಇಷ್ಟವಾಗಲಿಲ್ಲ.

05095019a ಭಾರ್ಯಯಾ ತು ಸ ಸಂಮಂತ್ರ್ಯ ಸಹ ರಾತ್ರೌ ಸುಧರ್ಮಯಾ|

05095019c ಮಾತಲಿರ್ನಾಗಲೋಕಾಯ ಚಕಾರ ಗಮನೇ ಮತಿಂ||

ಅನಂತರ ಮಾತಲಿಯು ತನ್ನ ಪತ್ನಿ ಸುಧರ್ಮೆಯೊಡನೆ ರಾತ್ರಿ ಸಮಾಲೋಚನೆ ಮಾಡಿ, ನಾಕಲೋಕಕ್ಕೆ ಹೋಗಲು ಮನಸ್ಸುಮಾಡಿದನು.

05095020a ನ ಮೇ ದೇವಮನುಷ್ಯೇಷು ಗುಣಕೇಶ್ಯಾಃ ಸಮೋ ವರಃ|

05095020c ರೂಪತೋ ದೃಶ್ಯತೇ ಕಶ್ಚಿನ್ನಾಗೇಷು ಭವಿತಾ ಧ್ರುವಂ||

“ದೇವ-ಮನುಷ್ಯರಲ್ಲಿ ನನಗೆ ರೂಪದಲ್ಲಿ ಗುಣಕೇಶಿಯ ಸಮನಾದ ವರನು ಕಾಣುವುದಿಲ್ಲ. ಒಂದುವೇಳೆ ನಾಗರಲ್ಲಿ ಇದ್ದರೂ ಇರಬಹುದು!”

05095021a ಇತ್ಯಾಮಂತ್ರ್ಯ ಸುಧರ್ಮಾಂ ಸ ಕೃತ್ವಾ ಚಾಭಿಪ್ರದಕ್ಷಿಣಂ|

05095021c ಕನ್ಯಾಂ ಶಿರಸ್ಯುಪಾಘ್ರಾಯ ಪ್ರವಿವೇಶ ಮಹೀತಲಂ||

ಹೀಗೆ ಯೋಚಿಸಿ, ಸುಧರ್ಮೆಗೆ ಪ್ರದಕ್ಷಿಣೆ ಮಾಡಿ, ಕನ್ಯೆಯ ಶಿರವನ್ನು ಆಘ್ರಾಣಿಸಿ ಮಹೀತಲವನ್ನು ಪ್ರವೇಶಿಸಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಪಂಚನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತೈದನೆಯ ಅಧ್ಯಾಯವು.

Related image

Comments are closed.