Udyoga Parva: Chapter 89

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೮೯

ಶ್ರೀಕೃಷ್ಣನು ದುರ್ಯೋಧನನ ಮನೆಗೆ ಹೋದುದು-ಭೋಜನವನ್ನು ತಿರಸ್ಕರಿಸಿದ್ದುದು

ದುರ್ಯೋಧನನು ಭೋಜನಕ್ಕೆ ಕರೆದಾಗ ಕೃಷ್ಣನು ಆಮಂತ್ರಣವನ್ನು ಸ್ವೀಕರಿಸದೇ ಇದ್ದುದು (೧-೧೧). ದುರ್ಯೋಧನನು ಕಾರಣವನ್ನು ಕೇಳಲು ಕೃಷ್ಣನು “ದೂತರು ಬಂದ ಕೆಲಸವು ಯಶಸ್ವಿಯಾದರೆ ಊಟಮಾಡುತ್ತಾರೆ ಮತ್ತು ಸತ್ಕಾರವನ್ನು ಸ್ವೀಕರಿಸುತ್ತಾರೆ. ನಾನು ಯಶಸ್ವಿಯಾದರೆ ನೀನು ಅಮಾತ್ಯರೊಂದಿಗೆ ನನ್ನನ್ನು ಸತ್ಕರಿಸಬಲ್ಲೆ” ಎನ್ನುವುದು (೧೨-೧೮). ದೂತನಾಗಿ ಅಲ್ಲ ಸಂಬಂಧಿಯಾಗಿ ನಿನ್ನನ್ನು ಸತ್ಕರಿಸಲು ಬಯಸುತ್ತೇನೆಂದು ದುರ್ಯೋದನನು ಪುನಃ ಕಾರಣವನ್ನು ಕೇಳಲು ಕೃಷ್ಣನು “ಪ್ರೀತಿಯಿಂದ ಅಥವಾ ಆಪತ್ತಿನಲ್ಲಿರುವಾಗ ಇನ್ನೊಬ್ಬರಲ್ಲಿ ಊಟಮಾಡುತ್ತಾರೆ. ಆದರೆ ನೀನು ನನಗೆ ಪ್ರೀತಿಪಾತ್ರನಲ್ಲ ಮತ್ತು ನಾವು ಆಪತ್ತಿನಲ್ಲಿಲ್ಲ...ದುಷ್ಟತನದಿಂದ ಕಲುಷಿತವಾಗಿರುವ ಈ ಎಲ್ಲ ಅನ್ನವೂ ನನಗೆ ಅಭೋಜ್ಯವಾಗಿದೆ” ಎಂದು ಹೇಳಿ ವಿದುರನ ಮನೆಗೆ ತೆರಳಿದುದು (೧೯-೩೪). ಇತರ ಕುರುಗಳು ಅವನನ್ನು ತಮ್ಮ ಮನೆಗಳಿಗೆ ಕರೆದರೂ ಇಲ್ಲವೆಂದು ಕಳುಹಿಸಿ ಕೃಷ್ಣನು ವಿದುರನ ಮನೆಯಲ್ಲಿಯೇ ಊಟಮಾಡಿದುದು (೩೫-೪೧).

05089001 ವೈಶಂಪಾಯನ ಉವಾಚ|

05089001a ಪೃಥಾಮಾಮಂತ್ರ್ಯ ಗೋವಿಂದಃ ಕೃತ್ವಾ ಚಾಪಿ ಪ್ರದಕ್ಷಿಣಂ|

05089001c ದುರ್ಯೋಧನಗೃಹಂ ಶೌರಿರಭ್ಯಗಚ್ಚದರಿಂದಮಃ||

ವೈಶಂಪಾಯನನು ಹೇಳಿದನು: “ಪ್ರದಕ್ಷಿಣೆ ಮಾಡಿ ಪೃಥೆಯನ್ನು ಬೀಳ್ಕೊಂಡು ಗೋವಿಂದ, ಶೌರಿ, ಅರಿಂದಮನು ದುರ್ಯೋಧನನ ಮನೆಗೆ ಹೋದನು.

05089002a ಲಕ್ಷ್ಮ್ಯಾ ಪರಮಯಾ ಯುಕ್ತಂ ಪುರಂದರಗೃಹೋಪಮಂ|

05089002c ತಸ್ಯ ಕಕ್ಷ್ಯಾ ವ್ಯತಿಕ್ರಮ್ಯ ತಿಸ್ರೋ ದ್ವಾಃಸ್ಥೈರವಾರಿತಃ||

05089003a ತತೋಽಭ್ರಘನಸಂಕಾಶಂ ಗಿರಿಕೂಟಮಿವೋಚ್ಚ್ರಿತಂ|

05089003c ಶ್ರಿಯಾ ಜ್ವಲಂತಂ ಪ್ರಾಸಾದಮಾರುರೋಹ ಮಹಾಯಶಾಃ||

ಪುರಂದರನ ಮನೆಯಂತೆ ಪರಮಸಂಪತ್ತಿನಿಂದ ಕೂಡಿದ್ದ, ಆಕಾಶದಲ್ಲಿ ಮೋಡದಂತಿರುವ ಮನೆಯ ಮೂರು ಕಕ್ಷೆಗಳನ್ನು ದ್ವಾರಪಾಲಕರಿಂದ ತಡೆಯಲ್ಪಡದೇ ಆ ಗಿರಿಕೂಟದಂತೆ ಎತ್ತರವಾಗಿರುವ, ಐಶ್ವರ್ಯದಿಂದ ಬೆಳಗುತ್ತಿರುವ, ಮಹಾಯಶಸ್ವಿ ಪ್ರಾಸಾದಗಳನ್ನು ಏರಿ ಹೋದನು.

05089004a ತತ್ರ ರಾಜಸಹಸ್ರೈಶ್ಚ ಕುರುಭಿಶ್ಚಾಭಿಸಂವೃತಂ|

05089004c ಧಾರ್ತರಾಷ್ಟ್ರಂ ಮಹಾಬಾಹುಂ ದದರ್ಶಾಸೀನಮಾಸನೇ||

ಅಲ್ಲಿ ಸಹಸ್ರಾರು ರಾಜರುಗಳಿಂದ ಮತ್ತು ಕುರುಗಳಿಂದ ಪರಿವೃತನಾಗಿ ಆಸನದಲ್ಲಿ ಕುಳಿತಿದ್ದ ಮಹಾಬಾಹು ಧಾರ್ತರಾಷ್ಟ್ರನನ್ನು ಕಂಡನು.

05089005a ದುಃಶಾಸನಂ ಚ ಕರ್ಣಂ ಚ ಶಕುನಿಂ ಚಾಪಿ ಸೌಬಲಂ|

05089005c ದುರ್ಯೋಧನಸಮೀಪೇ ತಾನಾಸನಸ್ಥಾನ್ದದರ್ಶ ಸಃ||

ದುರ್ಯೋಧನನ ಸಮೀಪದಲ್ಲಿ ತಮ್ಮ ತಮ್ಮ ಆಸನಗಳಲ್ಲಿದ್ದ ದುಃಶಾಸನ, ಕರ್ಣ, ಸೌಬಲ ಶಕುನಿಯರನ್ನೂ ಅವನು ನೋಡಿದನು.

05089006a ಅಭ್ಯಾಗಚ್ಚತಿ ದಾಶಾರ್ಹೇ ಧಾರ್ತರಾಷ್ಟ್ರೋ ಮಹಾಯಶಾಃ|

05089006c ಉದತಿಷ್ಠತ್ಸಹಾಮಾತ್ಯಃ ಪೂಜಯನ್ಮಧುಸೂದನಂ||

ದಾಶಾರ್ಹನು ಹತ್ತಿರ ಬರಲು ಮಹಾಯಶಸ್ವಿ ಧಾರ್ತರಾಷ್ಟ್ರನು ಅಮಾತ್ಯರೊಂದಿಗೆ ಎದ್ದು ಮಧುಸೂದನನನ್ನು ಪೂಜಿಸಿದನು.

05089007a ಸಮೇತ್ಯ ಧಾರ್ತರಾಷ್ಟ್ರೇಣ ಸಹಾಮಾತ್ಯೇನ ಕೇಶವಃ|

05089007c ರಾಜಭಿಸ್ತತ್ರ ವಾರ್ಷ್ಣೇಯಃ ಸಮಾಗಚ್ಚದ್ಯಥಾವಯಃ||

ವಾರ್ಷ್ಣೇಯ ಕೇಶವನು ಅಮಾತ್ಯರೊಂದಿಗೆ ಧಾರ್ತರಾಷ್ಟ್ರರನ್ನೂ ಭೇಟಿಮಾಡಿ ಅಲ್ಲಿದ್ದ ರಾಜರನ್ನೂ ಕೂಡ ವಯಸ್ಸಿಗೆ ತಕ್ಕುದಾಗಿ ಭೇಟಿ ಮಾಡಿದನು.

05089008a ತತ್ರ ಜಾಂಬೂನದಮಯಂ ಪರ್ಯಂಕಂ ಸುಪರಿಷ್ಕೃತಂ|

05089008c ವಿವಿಧಾಸ್ತರಣಾಸ್ತೀರ್ಣಮಭ್ಯುಪಾವಿಶದಚ್ಯುತಃ||

ಅಲ್ಲಿ ಅಚ್ಯುತನು ವಿವಿಧ ರತ್ನಗಳಿಂದ ಅಲಂಕರಿಸಲ್ಪಟ್ಟ ಬಂಗಾರದ ಪರ್ಯಂಕದ ಮೇಲೆ ಕುಳಿತುಕೊಂಡನು.

05089009a ತಸ್ಮಿನ್ಗಾಂ ಮಧುಪರ್ಕಂ ಚ ಉಪಹೃತ್ಯ ಜನಾರ್ದನೇ|

05089009c ನಿವೇದಯಾಮಾಸ ತದಾ ಗೃಹಾನ್ರಾಜ್ಯಂ ಚ ಕೌರವಃ||

ಆಗ ಕೌರವನು ಜನಾರ್ದನನಿಗೆ ಗೋವು ಮಧುಪರ್ಕಗಳನ್ನಿತ್ತು ಮನೆಗಳನ್ನೂ ರಾಜ್ಯವನ್ನೂ ಅವನಿಗೆ ನಿವೇದಿಸಿದನು.

05089010a ತತ್ರ ಗೋವಿಂದಮಾಸೀನಂ ಪ್ರಸನ್ನಾದಿತ್ಯವರ್ಚಸಂ|

05089010c ಉಪಾಸಾಂ ಚಕ್ರಿರೇ ಸರ್ವೇ ಕುರವೋ ರಾಜಭಿಃ ಸಹ||

ಅಲ್ಲಿ ಕುಳಿತಿದ್ದ ಪ್ರಸನ್ನಾದಿತ್ಯವರ್ಚಸ ಗೋವಿಂದನನ್ನು ಕುರುಗಳು ರಾಜರೊಂದಿಗೆ ಉಪಾಸಿಸಿದರು.

05089011a ತತೋ ದುರ್ಯೋಧನೋ ರಾಜಾ ವಾರ್ಷ್ಣೇಯಂ ಜಯತಾಂ ವರಂ|

05089011c ನ್ಯಮಂತ್ರಯದ್ಭೋಜನೇನ ನಾಭ್ಯನಂದಚ್ಚ ಕೇಶವಃ||

ಆಗ ರಾಜಾ ದುರ್ಯೋಧನನು ಜಯಂತರಲ್ಲಿ ಶ್ರೇಷ್ಠನಾದ ವಾರ್ಷ್ಣೇಯನನ್ನು ಭೋಜನಕ್ಕೆ ಆಮಂತ್ರಿಸಿದನು. ಆದರೆ ಕೇಶವನು ಆಮಂತ್ರಣವನ್ನು ಸ್ವೀಕರಿಸಲಿಲ್ಲ.

05089012a ತತೋ ದುರ್ಯೋಧನಃ ಕೃಷ್ಣಮಬ್ರವೀದ್ರಾಜಸಂಸದಿ|

05089012c ಮೃದುಪೂರ್ವಂ ಶಠೋದರ್ಕಂ ಕರ್ಣಮಾಭಾಷ್ಯ ಕೌರವಃ||

ಆಗ ರಾಜಸಂಸದಿಯಲ್ಲಿ ದುರ್ಯೊಧನನು ಮೃದುವಾದ ಆದರೆ ವ್ಯಂಗ್ಯದ ದಾಟಿಯಲ್ಲಿ, ಕರ್ಣನನ್ನು ನೋಡುತ್ತಾ, ಕೃಷ್ಣನಿಗೆ ಹೇಳಿದನು:

05089013a ಕಸ್ಮಾದನ್ನಾನಿ ಪಾನಾನಿ ವಾಸಾಂಸಿ ಶಯನಾನಿ ಚ|

05089013c ತ್ವದರ್ಥಮುಪನೀತಾನಿ ನಾಗ್ರಹೀಸ್ತ್ವಂ ಜನಾರ್ದನ||

“ಜನಾರ್ದನ! ಏಕೆ ನೀನು ನಿನಗಾಗಿ ತಯಾರಿಸಿದ ಅನ್ನ-ಪಾನೀಯಗಳನ್ನು, ವಸ್ತ್ರ-ಹಾಸಿಗೆಗಳನ್ನು ಸ್ವೀಕರಿಸುತ್ತಿಲ್ಲ?

05089014a ಉಭಯೋಶ್ಚಾದದಃ ಸಾಹ್ಯಮುಭಯೋಶ್ಚ ಹಿತೇ ರತಃ|

05089014c ಸಂಬಂಧೀ ದಯಿತಶ್ಚಾಸಿ ಧೃತರಾಷ್ಟ್ರಸ್ಯ ಮಾಧವ||

ಮಾಧವ! ಎರಡೂ ಪಕ್ಷದವರಿಗೆ ನೀನು ಸಹಾಯಮಾಡುತ್ತಿದ್ದೀಯೆ. ಇಬ್ಬರ ಹಿತದಲ್ಲಿಯೂ ಇರುವೆ. ಧೃತರಾಷ್ಟ್ರನ ಸಂಬಂಧಿಯೂ ಪ್ರೀತಿಪಾತ್ರನೂ ಆಗಿದ್ದೀಯೆ.

05089015a ತ್ವಂ ಹಿ ಗೋವಿಂದ ಧರ್ಮಾರ್ಥೌ ವೇತ್ಥ ತತ್ತ್ವೇನ ಸರ್ವಶಃ|

05089015c ತತ್ರ ಕಾರಣಮಿಚ್ಚಾಮಿ ಶ್ರೋತುಂ ಚಕ್ರಗದಾಧರ||

ಗೋವಿಂದ! ಚಕ್ರಗದಾಧರ! ನೀನು ಧರ್ಮ-ಅರ್ಥಗಳೆರಡನ್ನೂ ಎಲ್ಲ ತತ್ವಗಳನ್ನೂ ತಿಳಿದಿದ್ದೀಯೆ. ಇದರ ಕಾರಣವನ್ನು ಕೇಳಲು ಬಯಸುತ್ತೇನೆ.”

05089016a ಸ ಏವಮುಕ್ತೋ ಗೋವಿಂದಃ ಪ್ರತ್ಯುವಾಚ ಮಹಾಮನಾಃ|

05089016c ಓಘಮೇಘಸ್ವನಃ ಕಾಲೇ ಪ್ರಗೃಹ್ಯ ವಿಪುಲಂ ಭುಜಂ||

05089017a ಅನಂಬೂಕೃತಮಗ್ರಸ್ತಮನಿರಸ್ತಮಸಂಕುಲಂ|

05089017c ರಾಜೀವನೇತ್ರೋ ರಾಜಾನಂ ಹೇತುಮದ್ವಾಕ್ಯಮುತ್ತಮಂ||

ಆಗ ಗೋವಿಂದ, ಮಹಾಮನಸ್ವಿ, ರಾಜೀವನೇತ್ರನು ತನ್ನ ವಿಪುಲ ಭುಜವನ್ನು ಹಿಡಿದು ಗುಡುಗಿನಂಥಹ ಸ್ವರದಲ್ಲಿ, ಸ್ಪಷ್ಟವಾದ, ಉತ್ತಮವಾಗಿ ರಚಿಸಲ್ಪಟ್ಟ, ಮುಚ್ಚುಮರೆಯಿಲ್ಲದ, ನೀರಸವಲ್ಲದ, ಯಾವ ಶಬ್ಧವನ್ನೂ ನುಂಗದೇ ರಾಜನಿಗೆ ಕಾರಣದ ಕುರಿತು ಉತ್ತರಿಸಿದನು:

05089018a ಕೃತಾರ್ಥಾ ಭುಂಜತೇ ದೂತಾಃ ಪೂಜಾಂ ಗೃಹ್ಣತಿ ಚೈವ ಹಿ|

05089018c ಕೃತಾರ್ಥಂ ಮಾಂ ಸಹಾಮಾತ್ಯಸ್ತ್ವಮರ್ಚಿಷ್ಯಸಿ ಭಾರತ||

“ಭಾರತ! ದೂತರು ಬಂದ ಕೆಲಸವು ಯಶಸ್ವಿಯಾದರೆ ಊಟಮಾಡುತ್ತಾರೆ ಮತ್ತು ಸತ್ಕಾರವನ್ನು ಸ್ವೀಕರಿಸುತ್ತಾರೆ. ನಾನು ಯಶಸ್ವಿಯಾದರೆ ನೀನು ಅಮಾತ್ಯರೊಂದಿಗೆ ನನ್ನನ್ನು ಸತ್ಕರಿಸಬಲ್ಲೆ!”

05089019a ಏವಮುಕ್ತಃ ಪ್ರತ್ಯುವಾಚ ಧಾರ್ತರಾಷ್ಟ್ರೋ ಜನಾರ್ದನಂ|

05089019c ನ ಯುಕ್ತಂ ಭವತಾಸ್ಮಾಸು ಪ್ರತಿಪತ್ತುಮಸಾಂಪ್ರತಂ||

ಹೀಗೆ ಹೇಳಲು ಧಾರ್ತರಾಷ್ಟ್ರನು ಜನಾರ್ದನನಿಗೆ ಹೇಳಿದನು: “ನಮ್ಮೊಡನೆ ಈ ರೀತಿ ವ್ಯವಹರಿಸುವುದು ಸರಿಯಲ್ಲ.

05089020a ಕೃತಾರ್ಥಂ ಚಾಕೃತಾರ್ಥಂ ಚ ತ್ವಾಂ ವಯಂ ಮಧುಸೂದನ|

05089020c ಯತಾಮಹೇ ಪೂಜಯಿತುಂ ಗೋವಿಂದ ನ ಚ ಶಕ್ನುಮಃ||

ಮಧುಸೂದನ! ಗೋವಿಂದ! ನೀನು ನಿನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತೀಯೋ ಅಥವಾ ಇಲ್ಲವೋ, ನಿನಗೆ ನಮ್ಮೊಂದಿಗಿರುವ ಸಂಬಂಧದ ಕಾರಣ ನಾವು ನಿನಗೆ ಪೂಜೆ ಸಲ್ಲಿಸಬಲ್ಲೆವು.

05089021a ನ ಚ ತತ್ಕಾರಣಂ ವಿದ್ಮೋ ಯಸ್ಮಿನ್ನೋ ಮಧುಸೂದನ|

05089021c ಪೂಜಾಂ ಕೃತಾಂ ಪ್ರೀಯಮಾಣೈರ್ನಾಮಂಸ್ಥಾಃ ಪುರುಷೋತ್ತಮ||

ಮಧುಸೂದನ! ಪುರುಷೋತ್ತಮ! ಆದರೂ ಪ್ರೀತಿಯಿಂದ ಮಾಡಿದ ಪೂಜೆಯನ್ನು ನೀನು ಸ್ವೀಕರಿಸದೇ ಇದ್ದುದರ ಕಾರಣವು ನಮಗೆ ತಿಳಿಯಲಿಲ್ಲ.

05089022a ವೈರಂ ನೋ ನಾಸ್ತಿ ಭವತಾ ಗೋವಿಂದ ನ ಚ ವಿಗ್ರಹಃ|

05089022c ಸ ಭವಾನ್ಪ್ರಸಮೀಕ್ಷ್ಯೈತನ್ನೇದೃಶಂ ವಕ್ತುಮರ್ಹತಿ||

ಗೋವಿಂದ! ನಿನ್ನೊಂದಿಗೆ ನಮ್ಮ ವೈರವೂ ಇಲ್ಲ, ಕದನವೂ ಇಲ್ಲ. ಆದುದರಿಂದ ಯೋಚಿಸಿದರೆ ನಿನ್ನ ಈ ಮಾತುಗಳು ನಿನಗೆ ತಕ್ಕುದಲ್ಲ.”

05089023a ಏವಮುಕ್ತಃ ಪ್ರತ್ಯುವಾಚ ಧಾರ್ತರಾಷ್ಟ್ರಂ ಜನಾರ್ದನಃ|

05089023c ಅಭಿವೀಕ್ಷ್ಯ ಸಹಾಮಾತ್ಯಂ ದಾಶಾರ್ಹಃ ಪ್ರಹಸನ್ನಿವ||

ಹೀಗೆ ಹೇಳಲು ಜನಾರ್ದನ ದಾಶಾರ್ಹನು ಅಮಾತ್ಯರೊಂದಿಗಿದ್ದ ಧಾರ್ತರಾಷ್ಟ್ರನನ್ನು ನೋಡಿ ನಗುತ್ತಾ ಉತ್ತರಿಸಿದನು:

05089024a ನಾಹಂ ಕಾಮಾನ್ನ ಸಂರಂಭಾನ್ನ ದ್ವೇಷಾನ್ನಾರ್ಥಕಾರಣಾತ್|

05089024c ನ ಹೇತುವಾದಾಲ್ಲೋಭಾದ್ವಾ ಧರ್ಮಂ ಜಹ್ಯಾಂ ಕಥಂ ಚನ||

“ನಾನು ಕಾಮಕ್ಕಾಗಲೀ, ಅನುಮಾನದಿಂದಾಗಲೀ, ದ್ವೇಷದಿಂದಾಗಲೀ, ಸಂಪತ್ತಿಗಾಗಲೀ, ಲೋಭದ ಕಾರಣದಿಂದಾಗಲೀ ಎಂದೂ ಧರ್ಮವನ್ನು ಬಿಡುವವನಲ್ಲ.

05089025a ಸಂಪ್ರೀತಿಭೋಜ್ಯಾನ್ಯನ್ನಾನಿ ಆಪದ್ಭೋಜ್ಯಾನಿ ವಾ ಪುನಃ|

05089025c ನ ಚ ಸಂಪ್ರೀಯಸೇ ರಾಜನ್ನ ಚಾಪ್ಯಾಪದ್ಗತಾ ವಯಂ||

ಪ್ರೀತಿಯಿಂದ ಅಥವಾ ಆಪತ್ತಿನಲ್ಲಿರುವಾಗ ಇನ್ನೊಬ್ಬರಲ್ಲಿ ಊಟಮಾಡುತ್ತಾರೆ. ರಾಜನ್! ನೀನು ನನಗೆ ಪ್ರೀತಿಪಾತ್ರನಲ್ಲ ಮತ್ತು ನಾವು ಆಪತ್ತಿನಲ್ಲಿಲ್ಲ.

05089026a ಅಕಸ್ಮಾದ್ದ್ವಿಷಸೇ ರಾಜಂ ಜನ್ಮಪ್ರಭೃತಿ ಪಾಂಡವಾನ್|

05089026c ಪ್ರಿಯಾನುವರ್ತಿನೋ ಭ್ರಾತೄನ್ಸರ್ವೈಃ ಸಮುದಿತಾನ್ಗುಣೈಃ||

ರಾಜನ್! ಸರ್ವ ಗುಣಗಳಿಂದ ಸಮುದಿತರಾಗಿರುವ, ನಿನ್ನೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ನಿನ್ನ ಸಹೋದರ ಪಾಂಡವರನ್ನು ನೀನು ಅವರು ಹುಟ್ಟಿದಾಗಲಿಂದಲೂ, ವಿನಾಕಾರಣ, ದ್ವೇಷಿಸಿಕೊಂಡು ಬಂದಿದ್ದೀಯೆ.

05089027a ಅಕಸ್ಮಾಚ್ಚೈವ ಪಾರ್ಥಾನಾಂ ದ್ವೇಷಣಂ ನೋಪಪದ್ಯತೇ|

05089027c ಧರ್ಮೇ ಸ್ಥಿತಾಃ ಪಾಂಡವೇಯಾಃ ಕಸ್ತಾನ್ಕಿಂ ವಕ್ತುಮರ್ಹತಿ||

ಪಾರ್ಥರ ಮೇಲಿರುವ ಈ ಕಾರಣವಿಲ್ಲದ ದ್ವೇಷವು ನಿನಗೆ ಸರಿಯಲ್ಲ. ಧರ್ಮದಲ್ಲಿ ಸ್ಥಿತರಾಗಿರುವ ಪಾಂಡವರಿಗೆ ಯಾರು ತಾನೇ ಕೇಡನ್ನು ಬಯಸಿಯಾರು?

05089028a ಯಸ್ತಾನ್ದ್ವೇಷ್ಟಿ ಸ ಮಾಂ ದ್ವೇಷ್ಟಿ ಯಸ್ತಾನನು ಸ ಮಾಮನು|

05089028c ಐಕಾತ್ಮ್ಯಂ ಮಾಂ ಗತಂ ವಿದ್ಧಿ ಪಾಂಡವೈರ್ಧರ್ಮಚಾರಿಭಿಃ||

ಯಾರು ಅವರನ್ನು ದ್ವೇಷಿಸುತ್ತಾರೋ ಅವರು ನನ್ನನ್ನೂ ದ್ವೇಷಿಸುತ್ತಾರೆ. ಅವರನ್ನು ಪ್ರೀತಿಸುವವರು ನನ್ನನ್ನೂ ಪ್ರೀತಿಸುತ್ತಾರೆ. ಧರ್ಮಚಾರಿಗಳಾದ ಪಾಂಡವರ ಮತ್ತು ನನ್ನ ಆತ್ಮಗಳು ಒಂದೇ ಎನ್ನುವುದನ್ನು ತಿಳಿ.

05089029a ಕಾಮಕ್ರೋಧಾನುವರ್ತೀ ಹಿ ಯೋ ಮೋಹಾದ್ವಿರುರುತ್ಸತೇ|

05089029c ಗುಣವಂತಂ ಚ ಯೋ ದ್ವೇಷ್ಟಿ ತಮಾಹುಃ ಪುರುಷಾಧಮಂ||

ಯಾರು ಕಾಮ-ಕ್ರೋಧಗಳನ್ನು ಅನುಸರಿಸಿ ಮೋಹದಿಂದ ಗುಣವಂತರಾದವರನ್ನು ದ್ವೇಷಿಸುತ್ತಾನೋ ಅವನನ್ನು ಪುರುಷಾಧಮನೆಂದು ಹೇಳುತ್ತಾರೆ.

05089030a ಯಃ ಕಲ್ಯಾಣಗುಣಾಂ ಜ್ಞಾತೀನ್ಮೋಹಾಲ್ಲೋಭಾದ್ದಿದೃಕ್ಷತೇ|

05089030c ಸೋಽಜಿತಾತ್ಮಾಜಿತಕ್ರೋಧೋ ನ ಚಿರಂ ತಿಷ್ಠತಿ ಶ್ರಿಯಂ||

ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದೇ, ಕ್ರೋಧವನ್ನು ಜಯಿಸದೇ ಕಲ್ಯಾಣಗುಣಗಳನ್ನು ಹೊಂದಿದ ಬಾಂಧವರನ್ನು ಮೋಹ-ಲೋಭಗಳಿಂದ ನೋಡುವವನು ತುಂಬಾ ಸಮಯ ಸಂಪತ್ತನ್ನು ಹೊಂದಿರುವುದಿಲ್ಲ.

05089031a ಅಥ ಯೋ ಗುಣಸಂಪನ್ನಾನ್ ಹೃದಯಸ್ಯಾಪ್ರಿಯಾನಪಿ|

05089031c ಪ್ರಿಯೇಣ ಕುರುತೇ ವಶ್ಯಾಂಶ್ಚಿರಂ ಯಶಸಿ ತಿಷ್ಠತಿ||

ಆದರೆ ಹೃದಯದಲ್ಲಿ ಅಪ್ರಿಯತೆಯನ್ನಿಟ್ಟುಕೊಂಡಿದ್ದರೂ ಗುಣಸಂಪನ್ನರಿಗೆ ಪ್ರಿಯವಾದುದನ್ನು ಮಾಡಿ ಅವರನ್ನು ವಶಪಡೆಸಿಕೊಳ್ಳುವವನು ದೀರ್ಘಕಾಲದ ಯಶಸ್ಸನ್ನು ಪಡೆಯುತ್ತಾನೆ.

05089032a ಸರ್ವಮೇತದಭೋಕ್ತವ್ಯಮನ್ನಂ ದುಷ್ಟಾಭಿಸಂಹಿತಂ|

05089032c ಕ್ಷತ್ತುರೇಕಸ್ಯ ಭೋಕ್ತವ್ಯಮಿತಿ ಮೇ ಧೀಯತೇ ಮತಿಃ||

ದುಷ್ಟತನದಿಂದ ಕಲುಷಿತವಾಗಿರುವ ಈ ಎಲ್ಲ ಅನ್ನವೂ ನನಗೆ ಅಭೋಜ್ಯವಾಗಿದೆ. ಕ್ಷತ್ತನು ನೀಡಿದುದು ಮಾತ್ರ ನನಗೆ ಭೋಕ್ತವ್ಯ ಎಂದು ನನ್ನ ಮತಿಗೆ ತಿಳಿದಿದೆ.”

05089033a ಏವಮುಕ್ತ್ವಾ ಮಹಾಬಾಹುರ್ದುರ್ಯೋಧನಮಮರ್ಷಣಂ|

05089033c ನಿಶ್ಚಕ್ರಾಮ ತತಃ ಶುಭ್ರಾದ್ಧಾರ್ತರಾಷ್ಟ್ರನಿವೇಶನಾತ್||

ಹೀಗೆ ಹೇಳಿ ಆ ಮಹಾಬಾಹುವು ದುರ್ಯೋಧನ, ಅಮರ್ಷಣ, ಧಾರ್ತರಾಷ್ಟ್ರನ ಶುಭ್ರನಿವೇಶನದಿಂದ ಹೊರಬಂದನು.

05089034a ನಿರ್ಯಾಯ ಚ ಮಹಾಬಾಹುರ್ವಾಸುದೇವೋ ಮಹಾಮನಾಃ|

05089034c ನಿವೇಶಾಯ ಯಯೌ ವೇಶ್ಮ ವಿದುರಸ್ಯ ಮಹಾತ್ಮನಃ|||

ಹೊರಟುಬಂದು ಮಹಾಬಾಹು ವಾಸುದೇವ ಮಹಾಮನಸ್ವಿಯು ಮಹಾತ್ಮ ವಿದುರನ ಮನೆಗೆ ಬಂದನು.

05089035a ತಮಭ್ಯಗಚ್ಚದ್ದ್ರೋಣಶ್ಚ ಕೃಪೋ ಭೀಷ್ಮೋಽಥ ಬಾಹ್ಲಿಕಃ|

05089035c ಕುರವಶ್ಚ ಮಹಾಬಾಹುಂ ವಿದುರಸ್ಯ ಗೃಹೇ ಸ್ಥಿತಂ||

ಆ ಮಹಾಬಾಹುವು ವಿದುರನ ಮನೆಯಲ್ಲಿದ್ದಾಗ ಅಲ್ಲಿಗೆ ದ್ರೋಣ, ಕೃಪ, ಭೀಷ್ಮ, ಬಾಹ್ಲಿಕ ಮತ್ತು ಇತರ ಕುರುಗಳು ಬಂದರು.

05089036a ತೇಽಭಿಗಮ್ಯಾಬ್ರುವಂಸ್ತತ್ರ ಕುರವೋ ಮಧುಸೂದನಂ|

05089036c ನಿವೇದಯಾಮೋ ವಾರ್ಷ್ಣೇಯ ಸರತ್ನಾಂಸ್ತೇ ಗೃಹಾನ್ವಯಂ||

ಅಲ್ಲಿಗೆ ಬಂದ ಕುರುಗಳು ಮಧುಸೂದನನಿಗೆ “ವಾರ್ಷ್ಣೇಯ! ರತ್ನಗಳನ್ನುಳ್ಳ ನಮ್ಮ ಮನೆಗಳನ್ನು ನಿನಗೆ ಕೊಡುತ್ತೇವೆ” ಎಂದು ಹೇಳಿದರು.

05089037a ತಾನುವಾಚ ಮಹಾತೇಜಾಃ ಕೌರವಾನ್ಮಧುಸೂದನಃ|

05089037c ಸರ್ವೇ ಭವಂತೋ ಗಚ್ಚಂತು ಸರ್ವಾ ಮೇಽಪಚಿತಿಃ ಕೃತಾ||

ಆ ಮಹಾತೇಜಸ್ವಿ ಕೌರವರಿಗೆ ಮಧುಸೂದನನು “ನೀವೆಲ್ಲರೂ ಹೋಗಿ. ನಿಮ್ಮೆಲ್ಲರಿಂದ ನಾನು ಸತ್ಕೃತನಾಗಿದ್ದೇನೆ” ಎಂದನು.

05089038a ಯಾತೇಷು ಕುರುಷು ಕ್ಷತ್ತಾ ದಾಶಾರ್ಹಮಪರಾಜಿತಂ|

05089038c ಅಭ್ಯರ್ಚಯಾಮಾಸ ತದಾ ಸರ್ವಕಾಮೈಃ ಪ್ರಯತ್ನವಾನ್||

ಕುರುಗಳು ಹೊರಟು ಹೋಗಲು ಕ್ಷತ್ತನು ದಾಶಾರ್ಹ, ಅಪರಾಜಿತನನ್ನು ಸರ್ಮ ಕಾಮಗಳಿಂದ ಪ್ರಯತ್ನಪಟ್ಟು ಅರ್ಚಿಸಿದನು.

05089039a ತತಃ ಕ್ಷತ್ತಾನ್ನಪಾನಾನಿ ಶುಚೀನಿ ಗುಣವಂತಿ ಚ|

05089039c ಉಪಾಹರದನೇಕಾನಿ ಕೇಶವಾಯ ಮಹಾತ್ಮನೇ||

ಆಗ ಕ್ಷತ್ತನು ಮಹಾತ್ಮ ಕೇಶವನಿಗೆ ಶುಚಿಯಾದ, ಉತ್ತಮ ಗುಣದ ಅನ್ನ ಪಾನೀಯಗಳನ್ನೂ ಅನೇಕ ಉಪಾಹರಗಳನ್ನು ನೀಡಿದನು.

05089040a ತೈರ್ತರ್ಪಯಿತ್ವಾ ಪ್ರಥಮಂ ಬ್ರಾಹ್ಮಣಾನ್ಮಧುಸೂದನಃ|

05089040c ವೇದವಿದ್ಭ್ಯೋ ದದೌ ಕೃಷ್ಣಃ ಪರಮದ್ರವಿಣಾನ್ಯಪಿ||

ಪ್ರಥಮವಾಗಿ ಬ್ರಾಹ್ಮಣರನ್ನು ತೃಪ್ತಿಪಡಿಸಿ, ಆ ವೇದವಿದರಿಗೆ ಪರಮ ದ್ರವ್ಯಗಳನ್ನೂ ದಾನವಾಗಿತ್ತನು.

05089041a ತತೋಽನುಯಾಯಿಭಿಃ ಸಾರ್ಧಂ ಮರುದ್ಭಿರಿವ ವಾಸವಃ|

05089041c ವಿದುರಾನ್ನಾನಿ ಬುಭುಜೇ ಶುಚೀನಿ ಗುಣವಂತಿ ಚ||

ಅನಂತರ ತನ್ನ ಅನುಯಾಯಿಗಳೊಂದಿಗೆ, ಮರುತರೊಂದಿಗೆ ವಾಸವನು ಹೇಗೋ ಹಾಗೆ, ವಿದುರನ ಶುಚಿಯಾದ ಮತ್ತು ಗುಣವಂತ ಆಹಾರವನ್ನು ಭುಂಜಿಸಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣದುಯೋಧನಸಂವಾದೇ ಏಕೋನನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣದುಯೋಧನಸಂವಾದ ಎನ್ನುವ ಎಂಭತ್ತೊಂಭತ್ತನೆಯ ಅಧ್ಯಾಯವು.

Related image

Comments are closed.