Udyoga Parva: Chapter 83

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೮೩

ಹಸ್ತಿನಾಪುರದಲ್ಲಿ ಶ್ರೀಕೃಷ್ಣನ ಆಗಮನಕ್ಕೆ ಸಿದ್ಧತೆ

ಕೃಷ್ಣನು ಬರುತ್ತಿದ್ದಾನೆಂದು ದೂತರಿಂದ ತಿಳಿದ ಧೃತರಾಷ್ಟ್ರನು ಅವನನ್ನು ಎದಿರುಗೊಳ್ಳಲು ಸಿದ್ಧತೆಗಳನ್ನು ದುರ್ಯೋಧನನಿಗೆ ಹೇಳಿ ಮಾಡಿಸಿದುದು (೧-೧೮).

05083001 ವೈಶಂಪಾಯನ ಉವಾಚ|

05083001a ತಥಾ ದೂತೈಃ ಸಮಾಜ್ಞಾಯ ಆಯಾಂತಂ ಮಧುಸೂದನಂ|

05083001c ಧೃತರಾಷ್ಟ್ರೋಽಬ್ರವೀದ್ಭೀಷ್ಮಮರ್ಚಯಿತ್ವಾ ಮಹಾಭುಜಂ||

05083002a ದ್ರೋಣಂ ಚ ಸಂಜಯಂ ಚೈವ ವಿದುರಂ ಚ ಮಹಾಮತಿಂ|

05083002c ದುರ್ಯೋಧನಂ ಚ ಸಾಮಾತ್ಯಂ ಹೃಷ್ಟರೋಮಾಬ್ರವೀದಿದಂ||

ವೈಶಂಪಾಯನನು ಹೇಳಿದನು: “ಮಧುಸೂದನನು ಬರುತ್ತಿದ್ದಾನೆ ಎನ್ನುವುದನ್ನು ದೂತರಿಂದ ತಿಳಿದ ಧೃತರಾಷ್ಟ್ರನು ಮಹಾಭುಜ ಭೀಷ್ಮನನ್ನು ಪೂಜಿಸಿ, ದ್ರೋಣ, ಸಂಜಯ, ಮಹಾಮತಿ ವಿದುರ, ಮತ್ತು ಅಮಾತ್ಯರೊಂದಿಗೆ ರೋಮ ಹರ್ಷಿತನಾಗಿ ದುರ್ಯೋಧನನಿಗೆ ಹೇಳಿದನು:

05083003a ಅದ್ಭುತಂ ಮಹದಾಶ್ಚರ್ಯಂ ಶ್ರೂಯತೇ ಕುರುನಂದನ|

05083003c ಸ್ತ್ರಿಯೋ ಬಾಲಾಶ್ಚ ವೃದ್ಧಾಶ್ಚ ಕಥಯಂತಿ ಗೃಹೇ ಗೃಹೇ||

05083004a ಸತ್ಕೃತ್ಯಾಚಕ್ಷತೇ ಚಾನ್ಯೇ ತಥೈವಾನ್ಯೇ ಸಮಾಗತಾಃ|

05083004c ಪೃಥಗ್ವಾದಾಶ್ಚ ವರ್ತಂತೇ ಚತ್ವರೇಷು ಸಭಾಸು ಚ||

“ಕುರುನಂದನ! ಅದ್ಭುತವೂ ಮಹದಾಶ್ಚರ್ಯವೂ ಆದುದು ಕೇಳಿಬರುತ್ತಿದೆ! ಮನೆಮನೆಗಳಲ್ಲಿ ಸ್ತ್ರೀಯರು, ಬಾಲಕರು, ವೃದ್ಧರು ಹೇಳುತ್ತಿದ್ದಾರೆ. ಕೆಲವರು ಭಕ್ತಿಯಿಂದ ಹೇಳುತ್ತಿದ್ದಾರೆ, ಇತರರು ಗುಂಪುಗಳಲ್ಲಿ ಹೇಳುತ್ತಿದ್ದಾರೆ, ಚೌಕಗಳಲ್ಲಿ ಸಭೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವಾರ್ತೆಯು ಕೇಳಿಬರುತ್ತಿದೆ.

05083005a ಉಪಯಾಸ್ಯತಿ ದಾಶಾರ್ಹಃ ಪಾಂಡವಾರ್ಥೇ ಪರಾಕ್ರಮೀ|

05083005c ಸ ನೋ ಮಾನ್ಯಶ್ಚ ಪೂಜ್ಯಶ್ಚ ಸರ್ವಥಾ ಮಧುಸೂದನಃ||

05083006a ತಸ್ಮಿನ್ ಹಿ ಯಾತ್ರಾ ಲೋಕಸ್ಯ ಭೂತಾನಾಮೀಶ್ವರೋ ಹಿ ಸಃ|

05083006c ತಸ್ಮಿನ್ಧೃತಿಶ್ಚ ವೀರ್ಯಂ ಚ ಪ್ರಜ್ಞಾ ಚೌಜಶ್ಚ ಮಾಧವೇ||

ಪಾಂಡವರಿಗಾಗಿ ಪರಾಕ್ರಮಿ ದಾಶಾರ್ಹನು ಬರುತ್ತಿದ್ದಾನೆ. ಆ ಮಧುಸೂದನನನ್ನು ಸರ್ವಥಾ ಗೌರವಿಸಬೇಕು, ಪೂಜಿಸಬೇಕು. ಅವನಲ್ಲಿಯೇ ಲೋಕದ ಯಾತ್ರೆಯು ನಡೆಯುತ್ತದೆ. ಅವನೇ ಭೂತಗಳ ಈಶ್ವರ! ಆ ಮಾಧವನಲ್ಲಿ ಧೃತಿ, ವೀರ್ಯ, ಪ್ರಜ್ಞೆ ಮತ್ತು ಓಜಸ್ಸುಗಳು ನೆಲೆಸಿವೆ.

05083007a ಸ ಮಾನ್ಯತಾಂ ನರಶ್ರೇಷ್ಠಃ ಸ ಹಿ ಧರ್ಮಃ ಸನಾತನಃ|

05083007c ಪೂಜಿತೋ ಹಿ ಸುಖಾಯ ಸ್ಯಾದಸುಖಃ ಸ್ಯಾದಪೂಜಿತಃ||

ಆ ನರಶ್ರೇಷ್ಠನನ್ನು ಮನ್ನಿಸಬೇಕು. ಅವನೇ ಸನಾತನ ಧರ್ಮ. ಪೂಜಿಸಿದರೆ ಸುಖವನ್ನು, ಪೂಜಿಸದಿದ್ದರೆ ಅಸುಖವನ್ನು ತರುತ್ತಾನೆ.

05083008a ಸ ಚೇತ್ತುಷ್ಯತಿ ದಾಶಾರ್ಹ ಉಪಚಾರೈರರಿಂದಮಃ|

05083008c ಕೃತ್ಸ್ನಾನ್ಸರ್ವಾನಭಿಪ್ರಾಯಾನ್ಪ್ರಾಪ್ಸ್ಯಾಮಃ ಸರ್ವರಾಜಸು||

ನಮ್ಮ ಉಪಚಾರಗಳಿಂದ ಅರಿಂದಮ ದಾಶಾರ್ಹನು ತೃಪ್ತನಾದರೆ, ನಮ್ಮೆಲ್ಲ ರಾಜರ ಸರ್ವ ಕಾಮನೆಗಳನ್ನೂ ಪಡೆಯುತ್ತೇವೆ.

05083009a ತಸ್ಯ ಪೂಜಾರ್ಥಮದ್ಯೈವ ಸಂವಿಧತ್ಸ್ವ ಪರಂತಪ|

05083009c ಸಭಾಃ ಪಥಿ ವಿಧೀಯಂತಾಂ ಸರ್ವಕಾಮಸಮಾಹಿತಾಃ||

ಪರಂತಪ! ಇಂದೇ ಅವನ ಪೂಜೆಗೆ ಸಿದ್ಧಗೊಳಿಸು. ದಾರಿಯಲ್ಲಿ ಸರ್ವಕಾಮಗಳನ್ನು ಪೂರೈಸಬಲ್ಲ ಸಭೆಗಳು ನಿರ್ಮಾಣಗೊಳ್ಳಲಿ.

05083010a ಯಥಾ ಪ್ರೀತಿರ್ಮಹಾಬಾಹೋ ತ್ವಯಿ ಜಾಯೇತ ತಸ್ಯ ವೈ|

05083010c ತಥಾ ಕುರುಷ್ವ ಗಾಂಧಾರೇ ಕಥಂ ವಾ ಭೀಷ್ಮ ಮನ್ಯಸೇ||

ಗಾಂಧಾರೇ! ಮಹಾಬಾಹೋ! ಅವನಿಗೆ ನಿನ್ನ ಮೇಲೆ ಪ್ರೀತಿಯುಂಟಾಗುವಂತೆ ಮಾಡು! ಅಥವಾ ಭೀಷ್ಮ! ನಿನಗೇನನ್ನಿಸುತ್ತದೆ?”

05083011a ತತೋ ಭೀಷ್ಮಾದಯಃ ಸರ್ವೇ ಧೃತರಾಷ್ಟ್ರಂ ಜನಾಧಿಪಂ|

05083011c ಊಚುಃ ಪರಮಮಿತ್ಯೇವಂ ಪೂಜಯಂತೋಽಸ್ಯ ತದ್ವಚಃ||

ಆಗ ಭೀಷ್ಮಾದಿಗಳೆಲ್ಲರೂ ಜನಾಧಿಪ ಧೃತರಾಷ್ಟ್ರನಿಗೆ “ಬಹು ಉತ್ತಮ!” ಎಂದು ಹೇಳಿ ಅವನ ಮಾತನ್ನು ಗೌರವಿಸಿದರು.

05083012a ತೇಷಾಮನುಮತಂ ಜ್ಞಾತ್ವಾ ರಾಜಾ ದುರ್ಯೋಧನಸ್ತದಾ|

05083012c ಸಭಾವಾಸ್ತೂನಿ ರಮ್ಯಾಣಿ ಪ್ರದೇಷ್ಟುಮುಪಚಕ್ರಮೇ||

ಅವರ ಅನುಮತವನ್ನು ತಿಳಿದ ರಾಜಾ ದುರ್ಯೋಧನನು ರಮ್ಯ ಸಭಾಭವನಗಳನ್ನು ಕಟ್ಟಿಸಲು ಪ್ರಾರಂಭಿಸಿದನು.

05083013a ತತೋ ದೇಶೇಷು ದೇಶೇಷು ರಮಣೀಯೇಷು ಭಾಗಶಃ|

05083013c ಸರ್ವರತ್ನಸಮಾಕೀರ್ಣಾಃ ಸಭಾಶ್ಚಕ್ರುರನೇಕಶಃ||

05083014a ಆಸನಾನಿ ವಿಚಿತ್ರಾಣಿ ಯುಕ್ತಾನಿ ವಿವಿಧೈರ್ಗುಣೈಃ|

05083014c ಸ್ತ್ರಿಯೋ ಗಂಧಾನಲಂಕಾರಾನ್ಸೂಕ್ಷ್ಮಾಣಿ ವಸನಾನಿ ಚ||

05083015a ಗುಣವಂತ್ಯನ್ನಪಾನಾನಿ ಭೋಜ್ಯಾನಿ ವಿವಿಧಾನಿ ಚ|

05083015c ಮಾಲ್ಯಾನಿ ಚ ಸುಗಂಧೀನಿ ತಾನಿ ರಾಜಾ ದದೌ ತತಃ||

ಆಗ ದೇಶದೇಶಗಳಲ್ಲಿ ರಮಣೀಯ ಭಾಗಗಳಲ್ಲಿ ಅನೇಕ ಸಂಖ್ಯೆಗಳಲ್ಲಿ ಸಭೆಗಳನ್ನು ನಿರ್ಮಿಸಲಾಯಿತು - ಎಲ್ಲವೂ ರತ್ನಗಳನ್ನು ಒಳಗೊಂಡಿದ್ದವು, ಬಣ್ಣಬಣ್ಣದ ವಿವಿಧ ಗುಣಗಳ ಆಸನಗಳನ್ನು ಒಳಗೊಂಡಿದ್ದವು, ಉತ್ತಮ ವಸ್ತ್ರಗಳನ್ನು ಧರಿಸಿದ ಸ್ತ್ರೀಯರು ಗಂಧ ಅಲಂಕಾರಗಳನ್ನು ಹಿಡಿದಿದ್ದರು; ಉತ್ತಮ ಗುಣದ ಅನ್ನ ಪಾನೀಯಗಳು ವಿವಿಧ ಭೋಜನಗಳು, ಮಾಲೆಗಳು, ಸುಂಗಂಧಗಳು ಎಲ್ಲವನ್ನೂ ರಾಜನು ಕೊಟ್ಟಿದ್ದನು.

05083016a ವಿಶೇಷತಶ್ಚ ವಾಸಾರ್ಥಂ ಸಭಾಂ ಗ್ರಾಮೇ ವೃಕಸ್ಥಲೇ|

05083016c ವಿದಧೇ ಕೌರವೋ ರಾಜಾ ಬಹುರತ್ನಾಂ ಮನೋರಮಾಂ||

ವಿಶೇಷವಾಗಿ ವೃಕಸ್ಥಲ ಗ್ರಾಮದಲ್ಲಿ ಉಳಿಯುವುದಕ್ಕೆಂದು ರಾಜಾ ಕೌರವನು ಬಹುರತ್ನಗಳಿಂದ ಮನೋರಮ ಸಭೆಯನ್ನು ನಿರ್ಮಿಸಿದ್ದನು.

05083017a ಏತದ್ವಿಧಾಯ ವೈ ಸರ್ವಂ ದೇವಾರ್ಹಮತಿಮಾನುಷಂ|

05083017c ಆಚಖ್ಯೌ ಧೃತರಾಷ್ಟ್ರಾಯ ರಾಜಾ ದುರ್ಯೋಧನಸ್ತದಾ||

ಈ ರೀತಿ ಎಲ್ಲ ಅತಿಮಾನುಷವಾದ, ದೇವತೆಗಳಿಗೆ ತಕ್ಕುದಾದ ವ್ಯವಸ್ಥೆಗಳನ್ನು ಮಾಡಿಸಿ, ದುರ್ಯೋಧನನು ರಾಜಾ ಧೃತರಾಷ್ಟ್ರನಿಗೆ ವರದಿ ಮಾಡಿದನು.

05083018a ತಾಃ ಸಭಾಃ ಕೇಶವಃ ಸರ್ವಾ ರತ್ನಾನಿ ವಿವಿಧಾನಿ ಚ|

05083018c ಅಸಮೀಕ್ಷ್ಯೈವ ದಾಶಾರ್ಹ ಉಪಾಯಾತ್ಕುರುಸದ್ಮ ತತ್||

ಅದರೆ ವಿವಿಧ ರತ್ನಗಳಿಂದ ಕೂಡಿದ ಆ ಸಭೆಗಳೆಲ್ಲವನ್ನೂ ನಿರ್ಲಕ್ಷಿಸಿ ಕೇಶವ ದಾಶಾರ್ಹನು ಕುರುಗಳ ಸದನಕ್ಕೆ ನಡೆದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾರ್ಗೇ ಸಭಾನಿರ್ಮಾಣೇ ತ್ರ್ಯಶೀತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾರ್ಗದಲ್ಲಿ ಸಭಾನಿರ್ಮಾಣ ಎನ್ನುವ ಎಂಭತ್ಮೂರನೆಯ ಅಧ್ಯಾಯವು.

Related image

Comments are closed.