Udyoga Parva: Chapter 80

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೮೦

ಕೃಷ್ಣ ರಾಯಭಾರಕ್ಕೆ ದ್ರೌಪದಿಯ ಸಂದೇಶ

ಆಗ ದ್ರೌಪದಿಯು ರೋದಿಸುತ್ತಾ “ನಿನಗೆ ನನ್ನ ಮೇಲೆ ಅನುಗ್ರಹವಿದೆಯೆಂದಾದರೆ, ನನ್ನ ಮೇಲೆ ಕೃಪೆಯಿದೆ ಎಂದಾದರೆ ನಿನ್ನ ಎಲ್ಲ ಕೋಪವನ್ನೂ ಧಾರ್ತರಾಷ್ಟ್ರರ ಮೇಲೆ ತಿರುಗಿಸು!” ಎಂದು ಕೃಷ್ಣನಲ್ಲಿ ಬೇಡಿಕೊಳ್ಳಲು (೧-೪೩), ಕೃಷ್ಣನು “ಬೇಗನೇ ನೀನು ಭರತಸ್ತ್ರೀಯರು ರೋದಿಸುವುದನ್ನು ನೋಡುವಿಯಂತೆ” ಎಂದು ಅವಳಿಗೆ ಆಶ್ವಾಸನೆ ನೀಡಿದುದು (೪೪-೪೯).

05080001 ವೈಶಂಪಾಯನ ಉವಾಚ|

05080001a ರಾಜ್ಞಾಸ್ತು ವಚನಂ ಶ್ರುತ್ವಾ ಧರ್ಮಾರ್ಥಸಹಿತಂ ಹಿತಂ|

05080001c ಕೃಷ್ಣಾ ದಾಶಾರ್ಹಮಾಸೀನಮಬ್ರವೀಚ್ಚೋಕಕರ್ಷಿತಾ||

ವೈಶಂಪಾಯನನು ಹೇಳಿದನು: “ಧರ್ಮಾರ್ಥಸಹಿತವೂ ಹಿತವೂ ಆದ ರಾಜನ ಮಾತುಗಳನ್ನು ಕೇಳಿ ಶೋಕಕರ್ಶಿತಳಾಗಿ ಕುಳಿತುಕೊಂಡಿದ್ದ ಕೃಷ್ಣೆಯು ದಾಶಾರ್ಹನಿಗೆ ಹೇಳಿದಳು.

05080002a ಸುತಾ ದ್ರುಪದರಾಜಸ್ಯ ಸ್ವಸಿತಾಯತಮೂರ್ಧಜಾ|

05080002c ಸಂಪೂಜ್ಯ ಸಹದೇವಂ ಚ ಸಾತ್ಯಕಿಂ ಚ ಮಹಾರಥಂ||

05080003a ಭೀಮಸೇನಂ ಚ ಸಂಶಾಂತಂ ದೃಷ್ಟ್ವಾ ಪರಮದುರ್ಮನಾಃ|

05080003c ಅಶ್ರುಪೂರ್ಣೇಕ್ಷಣಾ ವಾಕ್ಯಮುವಾಚೇದಂ ಮನಸ್ವಿನೀ||

ಕಪ್ಪು ನೀಳ ಕೂದಲಿನ ಆ ದೃಪದರಾಜನ ಮಗಳು ಮನಸ್ವಿನಿಯು ಮಹಾರಥಿ ಸಹದೇವ ಮತ್ತು ಸಾತ್ಯಕಿಯರನ್ನು ಹೊಗಳುತ್ತಾ, ಭೀಮಸೇನನೂ ಕೂಡ ಶಾಂತಿಯ ಪರವಾಗಿದ್ದುದನ್ನು ನೋಡಿ ಪರಮ ದುಃಖಿತಳಾಗಿ ಕಣ್ಣಿನಲ್ಲಿ ಕಣ್ಣೀರನ್ನು ತುಂಬಿಸಿ ಈ ಮಾತುಗಳನ್ನಾಡಿದಳು:

05080004a ವಿದಿತಂ ತೇ ಮಹಾಬಾಹೋ ಧರ್ಮಜ್ಞಾ ಮಧುಸೂದನ|

05080004c ಯಥಾ ನಿಕೃತಿಮಾಸ್ಥಾಯ ಭ್ರಂಶಿತಾಃ ಪಾಂಡವಾಃ ಸುಖಾತ್||

05080005a ಧೃತರಾಷ್ಟ್ರಸ್ಯ ಪುತ್ರೇಣ ಸಾಮಾತ್ಯೇನ ಜನಾರ್ದನ|

05080005c ಯಥಾ ಚ ಸಂಜಯೋ ರಾಜ್ಞಾ ಮಂತ್ರಂ ರಹಸಿ ಶ್ರಾವಿತಃ||

“ಮಹಾಬಾಹೋ! ಧರ್ಮಜ್ಞ! ಮಧುಸೂದನ! ಜನಾರ್ದನ! ಹೇಗೆ ಧೃತರಾಷ್ಟ್ರನ ಮಕ್ಕಳು ಅವರ ಅಮಾತ್ಯರಿಂದೊಡಗೂಡಿ ಮೋಸದಿಂದ ಪಾಂಡವರನ್ನು ಸುಖದಿಂದ ಪಲ್ಲಟಗೊಳಿಸಿದರೆಂದು ನಿನಗೆ ತಿಳಿದಿದೆ. ಮತ್ತು ರಾಜನು ಸಂಜಯನಿಗೆ ರಹಸ್ಯದಲ್ಲಿ ಏನನ್ನು ಹೇಳಿ ಕಳುಹಿಸಿದನೆನ್ನುವುದನ್ನೂ ನೀನು ಕೇಳಿದ್ದೀಯೆ.

05080006a ಯುಧಿಷ್ಠಿರೇಣ ದಾಶಾರ್ಹ ತಚ್ಚಾಪಿ ವಿದಿತಂ ತವ|

05080006c ಯಥೋಕ್ತಃ ಸಂಜಯಶ್ಚೈವ ತಚ್ಚ ಸರ್ವಂ ಶ್ರುತಂ ತ್ವಯಾ||

ದಾಶಾರ್ಹ! ಯುಧಿಷ್ಠಿರನು ಸಂಜಯನಿಗೆ ಏನನ್ನು ಹೇಳಿದನೆನ್ನುವುದೆಲ್ಲವನ್ನೂ ನೀನು ಕೇಳಿದ್ದೀಯೆ, ತಿಳಿದಿದ್ದೀಯೆ.

05080007a ಪಂಚ ನಸ್ತಾತ ದೀಯಂತಾಂ ಗ್ರಾಮಾ ಇತಿ ಮಹಾದ್ಯುತೇ|

05080007c ಕುಶಸ್ಥಲಂ ವೃಕಸ್ಥಲಮಾಸಂದೀ ವಾರಣಾವತಂ||

05080008a ಅವಸಾನಂ ಮಹಾಬಾಹೋ ಕಿಂ ಚಿದೇವ ತು ಪಂಚಮಂ|

05080008c ಇತಿ ದುರ್ಯೋಧನೋ ವಾಚ್ಯಃ ಸುಹೃದಶ್ಚಾಸ್ಯ ಕೇಶವ||

“ತಂದೇ! ಐದು ಗ್ರಾಮಗಳನ್ನಾದರೂ ನಮಗೆ ಕೊಡಬೇಕು - ಕುಶಸ್ಥಲ, ವೃಕಸ್ಥಲ, ಆಸಂದೀ, ವಾರಣಾವತ, ಮತ್ತು ಮಹಾಬಾಹೋ! ಐದನೆಯ ಮತ್ತು ಕೊನೆಯದಾಗಿ ಯಾವುದಾದರೂ ನಿನಗಿಷ್ಟವಾದುದು” ಎಂದು ದುರ್ಯೋಧನನಿಗೂ ಅವನ ಸ್ನೇಹಿತರಿಗೂ ಹೇಳಿದ್ದನು, ಕೇಶವ!

05080009a ತಚ್ಚಾಪಿ ನಾಕರೋದ್ವಾಕ್ಯಂ ಶ್ರುತ್ವಾ ಕೃಷ್ಣ ಸುಯೋಧನಃ|

05080009c ಯುಧಿಷ್ಠಿರಸ್ಯ ದಾಶಾರ್ಹ ಹ್ರೀಮತಃ ಸಂಧಿಮಿಚ್ಚತಃ||

ದಾಶಾರ್ಹ! ಕೃಷ್ಣ! ಮಾನವಂತ ಯುಧಿಷ್ಠಿರನು ಸಂಧಿಯನ್ನು ಬಯಸಿದರೂ ಸುಯೋಧನನು ಆ ಮಾತನ್ನು ಕೇಳಿಯೂ ಏನನ್ನೂ ಮಾಡಲಿಲ್ಲ.

05080010a ಅಪ್ರದಾನೇನ ರಾಜ್ಯಸ್ಯ ಯದಿ ಕೃಷ್ಣ ಸುಯೋಧನಃ|

05080010c ಸಂಧಿಮಿಚ್ಚೇನ್ನ ಕರ್ತವ್ಯಸ್ತತ್ರ ಗತ್ವಾ ಕಥಂ ಚನ||

ಕೃಷ್ಣ! ಒಂದು ವೇಳೆ ಸುಯೋಧನನು ರಾಜ್ಯವನ್ನು ಕೊಡದೇ ಸಂಧಿಯನ್ನು ಬಯಸಿದರೆ ಅಲ್ಲಿಗೆ ಹೋಗುವ ಕೆಲಸವು ಎಂದೂ ಪ್ರಯೋಜನಕಾರಿಯಾಗುವುದಿಲ್ಲ.

05080011a ಶಕ್ಷ್ಯಂತಿ ಹಿ ಮಹಾಬಾಹೋ ಪಾಂಡವಾಃ ಸೃಂಜಯೈಃ ಸಹ|

05080011c ಧಾರ್ತರಾಷ್ಟ್ರಬಲಂ ಘೋರಂ ಕ್ರುದ್ಧಂ ಪ್ರತಿಸಮಾಸಿತುಂ||

ಮಹಾಬಾಹೋ! ಸೃಂಜಯರೊಂದಿಗೆ ಪಾಂಡವರು ಧಾರ್ತರಾಷ್ಟ್ರನ ಘೋರ ಕೃದ್ಧ ಸೇನೆಯನ್ನು ಎದುರಿಸಲು ಶಕ್ಯರಿದ್ದಾರೆ.

05080012a ನ ಹಿ ಸಾಮ್ನಾ ನ ದಾನೇನ ಶಕ್ಯೋಽರ್ಥಸ್ತೇಷು ಕಶ್ಚನ|

05080012c ತಸ್ಮಾತ್ತೇಷು ನ ಕರ್ತವ್ಯಾ ಕೃಪಾ ತೇ ಮಧುಸೂದನ||

ಮಧುಸೂದನ! ಅವರೊಂದಿಗೆ ಸಾಮ ಮತ್ತು ದಾನಗಳ ಮೂಲಕ ಏನನ್ನು ಸಾಧಿಸಲೂ ಸಾಧ್ಯವಿಲ್ಲದಾಗ, ಅಂಥವರಿಗೆ ನಿನ್ನ ಕೃಪೆಯನ್ನು ತೋರಿಸುವ ಕರ್ತವ್ಯವನ್ನು ಮಾಡಬಾರದು.

05080013a ಸಾಮ್ನಾ ದಾನೇನ ವಾ ಕೃಷ್ಣ ಯೇ ನ ಶಾಮ್ಯಂತಿ ಶತ್ರವಃ|

05080013c ಮೋಕ್ತವ್ಯಸ್ತೇಷು ದಂಡಃ ಸ್ಯಾಜ್ಜೀವಿತಂ ಪರಿರಕ್ಷತಾ||

ಕೃಷ್ಣ! ಜೀವವನ್ನು ರಕ್ಷಿಸಿಕೊಳ್ಳಬೇಕಾದರೆ ಸಾಮ ಅಥವಾ ದಾನಗಳಿಂದ ಶಾಂತಗೊಳ್ಳದ ಶತ್ರುಗಳಿಗೆ ದಂಡವನ್ನು ತೋರಿಸಬೇಕು.

05080014a ತಸ್ಮಾತ್ತೇಷು ಮಹಾದಂಡಃ ಕ್ಷೇಪ್ತವ್ಯಃ ಕ್ಷಿಪ್ರಮಚ್ಯುತ|

05080014c ತ್ವಯಾ ಚೈವ ಮಹಾಬಾಹೋ ಪಾಂಡವೈಃ ಸಹ ಸೃಂಜಯೈಃ||

ಆದುದರಿಂದ ಅಚ್ಯುತ! ಮಹಾಬಾಹೋ! ಅವರ ಮೇಲೆ ಬೇಗನೇ ಸೃಂಜಯ ಪಾಂಡವರೊಡನೆ ನೀನು ಮಹಾದಂಡವನ್ನು ಎಸೆ!

05080015a ಏತತ್ಸಮರ್ಥಂ ಪಾರ್ಥಾನಾಂ ತವ ಚೈವ ಯಶಸ್ಕರಂ|

05080015c ಕ್ರಿಯಮಾಣಂ ಭವೇತ್ಕೃಷ್ಣ ಕ್ಷತ್ರಸ್ಯ ಚ ಸುಖಾವಹಂ||

ಕೃಷ್ಣ! ಹೀಗೆ ಮಾಡುವುದರಿಂದ ಪಾರ್ಥರನ್ನು ಸಮರ್ಥಿಸಿದಂತಾಗುತ್ತದೆ, ನಿನಗೆ ಯಶಸ್ಸುಂಟಾಗುತ್ತದೆ, ಮತ್ತು ಕ್ಷತ್ರಿಯರಿಗೆ ಸುಖವಾಗುತ್ತದೆ.

05080016a ಕ್ಷತ್ರಿಯೇಣ ಹಿ ಹಂತವ್ಯಃ ಕ್ಷತ್ರಿಯೋ ಲೋಭಮಾಸ್ಥಿತಃ|

05080016c ಅಕ್ಷತ್ರಿಯೋ ವಾ ದಾಶಾರ್ಹ ಸ್ವಧರ್ಮಮನುತಿಷ್ಠತಾ||

05080017a ಅನ್ಯತ್ರ ಬ್ರಾಹ್ಮಣಾತ್ತಾತ ಸರ್ವಪಾಪೇಷ್ವವಸ್ಥಿತಾತ್|

05080017c ಗುರುರ್ಹಿ ಸರ್ವವರ್ಣಾನಾಂ ಬ್ರಾಹ್ಮಣಃ ಪ್ರಸೃತಾಗ್ರಭುಕ್||

ದಾಶಾರ್ಹ! ಸ್ವಧರ್ಮವನ್ನು ಪಾಲಿಸುವ ಕ್ಷತ್ರಿಯನು ಲೋಭಿಯಾಗಿರುವ ಇನ್ನೊಬ್ಬ ಕ್ಷತ್ರಿಯನನ್ನು ಅಥವಾ ಎಲ್ಲ ಪಾಪಗಳಲ್ಲಿಯೂ ನಿರತನಾಗಿರುವ ಬ್ರಾಹ್ಮಣನನ್ನು ಬಿಟ್ಟು ಕ್ಷತ್ರಿಯರಲ್ಲದ ಇತರರನ್ನೂ ಕೊಲ್ಲಬೇಕು. ಬ್ರಾಹ್ಮಣನು ಸರ್ವವರ್ಣದವರಲ್ಲಿ ಹಿರಿಯ ಮತ್ತು ಉತ್ತಮ ಫಲವನ್ನು ಅನುಭವಿಸುವವನು.

05080018a ಯಥಾವಧ್ಯೇ ಭವೇದ್ದೋಷೋ ವಧ್ಯಮಾನೇ ಜನಾರ್ದನ|

05080018c ಸ ವಧ್ಯಸ್ಯಾವಧೇ ದೃಷ್ಟ ಇತಿ ಧರ್ಮವಿದೋ ವಿದುಃ||

ಜನಾರ್ದನ! ಅವಧ್ಯನಾಗಿರುವವನನ್ನು ಕೊಲ್ಲುವುದು ಹೇಗೆ ದೋಷವೆನಿಸುತ್ತದೆಯೋ ಹಾಗೆಯೇ ವಧೆಗೆ ಅರ್ಹರಾದವರನ್ನು ವಧಿಸದೇ ಇರುವುದೂ ದೋಷವೆಂದು ಧರ್ಮವಿದರು ತಿಳಿದುಕೊಂಡಿದ್ದಾರೆ.

05080019a ಯಥಾ ತ್ವಾಂ ನ ಸ್ಪೃಶೇದೇಷ ದೋಷಃ ಕೃಷ್ಣ ತಥಾ ಕುರು|

05080019c ಪಾಂಡವೈಃ ಸಹ ದಾಶಾರ್ಹ ಸೃಂಜಯೈಶ್ಚ ಸಸೈನಿಕೈಃ||

ಕೃಷ್ಣ! ದಾಶಾರ್ಹ! ಈ ದೋಷವು ಸೈನಿಕರೊಂದಿಗೆ ಪಾಂಡವ- ಸೃಂಜಯರಿಗೆ ತಾಗದಂತೆ ಮಾಡು.

05080020a ಪುನರುಕ್ತಂ ಚ ವಕ್ಷ್ಯಾಮಿ ವಿಶ್ರಂಭೇಣ ಜನಾರ್ದನ|

05080020c ಕಾ ನು ಸೀಮಂತಿನೀ ಮಾದೃಕ್ಪೃಥಿವ್ಯಾಮಸ್ತಿ ಕೇಶವ||

ಆದಷ್ಟು ಬಾರಿ ಇದನ್ನು ಹೇಳಿದ್ದಾಗಿದೆ ಜನಾರ್ದನ! ಆದರೂ ವಿಶ್ವಾಸವಿಟ್ಟು ಕೇಳುತ್ತಿದ್ದೇನೆ - ಕೇಶವ! ನನ್ನಂಥಹ ಸ್ತ್ರೀಯು ಭೂಮಿಯಲ್ಲಿದ್ದಾಳೆಯೇ?

05080021a ಸುತಾ ದ್ರುಪದರಾಜಸ್ಯ ವೇದಿಮಧ್ಯಾತ್ಸಮುತ್ಥಿತಾ|

05080021c ಧೃಷ್ಟದ್ಯುಮ್ನಸ್ಯ ಭಗಿನೀ ತವ ಕೃಷ್ಣ ಪ್ರಿಯಾ ಸಖೀ||

05080022a ಆಜಮೀಢಕುಲಂ ಪ್ರಾಪ್ತಾ ಸ್ನುಷಾ ಪಾಂಡೋರ್ಮಹಾತ್ಮನಃ|

05080022c ಮಹಿಷೀ ಪಾಂಡುಪುತ್ರಾಣಾಂ ಪಂಚೇಂದ್ರಸಮವರ್ಚಸಾಂ||

05080023a ಸುತಾ ಮೇ ಪಂಚಭಿರ್ವೀರೈಃ ಪಂಚ ಜಾತಾ ಮಹಾರಥಾಃ|

05080023c ಅಭಿಮನ್ಯುರ್ಯಥಾ ಕೃಷ್ಣ ತಥಾ ತೇ ತವ ಧರ್ಮತಃ||

ದ್ರುಪದರಾಜನ ಮಗಳು, ವೇದಿಮಧ್ಯದಿಂದ ಎದ್ದುಬಂದವಳು, ಧೃಷ್ಟದ್ಯುಮ್ನನ ತಂಗಿ, ಕೃಷ್ಣ! ನಿನ್ನ ಪ್ರಿಯ ಸಖೀ, ಅಜಮೀಢಕುಲಕ್ಕೆ ಬಂದ ಮಹಾತ್ಮ ಪಾಂಡುವಿನ ಸೊಸೆ, ಇಂದ್ರಸಮಾನ ವರ್ಚಸರಾದ ಐವರು ಪಾಂಡುಪುತ್ರರ ರಾಣಿ, ಕೃಷ್ಣ! ಈ ಐವರು ವೀರರಿಂದ ಹುಟ್ಟಿದ ಐವರು ಮಹಾರಥಿಗಳು ನನ್ನ ಮಕ್ಕಳು, ಧರ್ಮದಂತೆ ನಿನಗೆ ಅಭಿಮನ್ಯುವಿನಂತಿರುವವರು.

05080024a ಸಾಹಂ ಕೇಶಗ್ರಹಂ ಪ್ರಾಪ್ತಾ ಪರಿಕ್ಲಿಷ್ಟಾ ಸಭಾಂ ಗತಾ|

05080024c ಪಶ್ಯತಾಂ ಪಾಂಡುಪುತ್ರಾಣಾಂ ತ್ವಯಿ ಜೀವತಿ ಕೇಶವ||

ಕೇಶವ! ಅಂಥಹ ನನ್ನನ್ನು, ಪಾಂಡುಪುತ್ರರು ನೋಡುತ್ತಿದ್ದಂತೆ ಮತ್ತು ನೀನು ಜೀವಿತವಾಗಿರುವಾಗಲೇ, ಕೂದಲನ್ನು ಹಿಡಿದೆಳೆದು ಸಭೆಗೆ ತಂದು ಅಪಮಾನಿಸಲಾಯಿತು.

05080025a ಜೀವತ್ಸು ಕೌರವೇಯೇಷು ಪಾಂಚಾಲೇಷ್ವಥ ವೃಷ್ಣಿಷು|

05080025c ದಾಸೀಭೂತಾಸ್ಮಿ ಪಾಪಾನಾಂ ಸಭಾಮಧ್ಯೇ ವ್ಯವಸ್ಥಿತಾ||

ಕೌರವರು, ಪಾಂಚಾಲರು ಮತ್ತು ವೃಷ್ಣಿಯರು ಜೀವಿತರಾಗಿರುವಾಗಲೇ ನನ್ನನ್ನು ಸಭಾಮಧ್ಯದಲ್ಲಿ ನಿಲ್ಲಿಸಿ ಪಾಪಿಗಳ ದಾಸಿಯನ್ನಾಗಿ ಮಾಡಿದರು.

05080026a ನಿರಾಮರ್ಷೇಷ್ವಚೇಷ್ಟೇಷು ಪ್ರೇಕ್ಷಮಾಣೇಷು ಪಾಂಡುಷು|

05080026c ತ್ರಾಹಿ ಮಾಮಿತಿ ಗೋವಿಂದ ಮನಸಾ ಕಾಂಕ್ಷಿತೋಽಸಿ ಮೇ||

ಪಾಂಡವರು ಏನನ್ನೂ ಮಾಡದೇ, ಸಿಟ್ಟನ್ನೂ ಪ್ರಕಟಗೊಳಿಸದೇ ಸುಮ್ಮನೇ ಅದನ್ನು ನೋಡಿದರು. ಕಾಪಾಡು ಗೋವಿಂದ! ಎಂದು ನಾನು ನಿನ್ನನ್ನೇ ಮನಸ್ಸಿನಲ್ಲಿ ಬೇಡಿಕೊಂಡೆ.

05080027a ಯತ್ರ ಮಾಂ ಭಗವಾನ್ರಾಜಾ ಶ್ವಶುರೋ ವಾಕ್ಯಮಬ್ರವೀತ್|

05080027c ವರಂ ವೃಣೀಷ್ವ ಪಾಂಚಾಲಿ ವರಾರ್ಹಾಸಿ ಮತಾಸಿ ಮೇ||

05080028a ಅದಾಸಾಃ ಪಾಂಡವಾಃ ಸಂತು ಸರಥಾಃ ಸಾಯುಧಾ ಇತಿ|

05080028c ಮಯೋಕ್ತೇ ಯತ್ರ ನಿರ್ಮುಕ್ತಾ ವನವಾಸಾಯ ಕೇಶವ||

ಭಗವಾನ್ ರಾಜಾ ಮಾವನು ಯಾವಾಗ ನನಗೆ “ಪಾಂಚಾಲೀ! ವರವನ್ನು ಕೇಳಿಕೋ! ನೀನು ವರಕ್ಕೆ ಅರ್ಹಳಾಗಿರುವೆ ಎಂದು ನನಗನ್ನಿಸುತ್ತಿದೆ” ಎಂಬ ಮಾತನ್ನು ಹೇಳಿದನೋ ಆಗ ಕೇಶವ! ಪಾಂಡವರು ಅದಾಸರಾಗಲಿ ಮತ್ತು ರಥ-ಆಯುಧಗಳನ್ನು ಹೊಂದಲಿ ಎಂದು ನಾನು ಕೇಳಿಕೊಂಡಾಗ ಅವರು ನಿರ್ಮುಕ್ತರಾದರು ವನವಾಸಕ್ಕೆ.

05080029a ಏವಂವಿಧಾನಾಂ ದುಃಖಾನಾಮಭಿಜ್ಞೋಽಸಿ ಜನಾರ್ದನ|

05080029c ತ್ರಾಹಿ ಮಾಂ ಪುಂಡರೀಕಾಕ್ಷ ಸಭರ್ತೃಜ್ಞಾತಿಬಾಂಧವಾಂ||

ಜನಾರ್ದನ! ಈ ವಿಧದ ದುಃಖಗಳನ್ನು ನೀನು ತಿಳಿದಿದ್ದೀಯೆ. ಪುಂಡರೀಕಾಕ್ಷ! ಗಂಡಂದಿರು ಮತ್ತು ಜ್ಞಾತಿಬಾಂಧವರೊಂದಿಗೆ ನನ್ನನ್ನು ಕಾಪಾಡು!

05080030a ನನ್ವಹಂ ಕೃಷ್ಣ ಭೀಷ್ಮಸ್ಯ ಧೃತರಾಷ್ಟ್ರಸ್ಯ ಚೋಭಯೋಃ|

05080030c ಸ್ನುಷಾ ಭವಾಮಿ ಧರ್ಮೇಣ ಸಾಹಂ ದಾಸೀಕೃತಾಭವಂ||

ಕೃಷ್ಣ! ಧರ್ಮದಂತೆ ನಾನು ಭೀಷ್ಮ ಮತ್ತು ಧೃತರಾಷ್ಟ್ರ ಇಬ್ಬರ ಸೊಸೆಯೂ ಅಲ್ಲವೇ? ಆದರೂ ನನ್ನನ್ನು ದಾಸಿಯನ್ನಾಗಿ ಮಾಡಿದರು.

05080031a ಧಿಗ್ಬಲಂ ಭೀಮಸೇನಸ್ಯ ಧಿಕ್ಪಾರ್ಥಸ್ಯ ಧನುಷ್ಮತಾಂ|

05080031c ಯತ್ರ ದುರ್ಯೋಧನಃ ಕೃಷ್ಣ ಮುಹೂರ್ತಮಪಿ ಜೀವತಿ||

ಕೃಷ್ಣ! ಇನ್ನು ಒಂದು ಕ್ಷಣವೂ ದುರ್ಯೋಧನನು ಜೀವಂತವಿದ್ದಾನೆ ಎಂದಾದರೆ ಭೀಮಸೇನನ ಬಲಕ್ಕೆ ಧಿಕ್ಕಾರ! ಪಾರ್ಥನ ಬಿಲ್ಗಾರಿಕೆಗೆ ಧಿಕ್ಕಾರ!

05080032a ಯದಿ ತೇಽಹಮನುಗ್ರಾಹ್ಯಾ ಯದಿ ತೇಽಸ್ತಿ ಕೃಪಾ ಮಯಿ|

05080032c ಧಾರ್ತರಾಷ್ಟ್ರೇಷು ವೈ ಕೋಪಃ ಸರ್ವಃ ಕೃಷ್ಣ ವಿಧೀಯತಾಂ||

ಕೃಷ್ಣ! ನಿನಗೆ ನನ್ನ ಮೇಲೆ ಅನುಗ್ರಹವಿದೆಯೆಂದಾದರೆ, ನನ್ನ ಮೇಲೆ ಕೃಪೆಯಿದೆ ಎಂದಾದರೆ ನಿನ್ನ ಎಲ್ಲ ಕೋಪವನ್ನೂ ಧಾರ್ತರಾಷ್ಟ್ರರ ಮೇಲೆ ತಿರುಗಿಸು!”

05080033a ಇತ್ಯುಕ್ತ್ವಾ ಮೃದುಸಂಹಾರಂ ವೃಜಿನಾಗ್ರಂ ಸುದರ್ಶನಂ|

05080033c ಸುನೀಲಮಸಿತಾಪಾಂಗೀ ಪುಣ್ಯಗಂಧಾಧಿವಾಸಿತಂ||

05080034a ಸರ್ವಲಕ್ಷಣಸಂಪನ್ನಂ ಮಹಾಭುಜಗವರ್ಚಸಂ|

05080034c ಕೇಶಪಕ್ಷಂ ವರಾರೋಹಾ ಗೃಹ್ಯ ಸವ್ಯೇನ ಪಾಣಿನಾ||

05080035a ಪದ್ಮಾಕ್ಷೀ ಪುಂಡರೀಕಾಕ್ಷಮುಪೇತ್ಯ ಗಜಗಾಮಿನೀ|

05080035c ಅಶ್ರುಪೂರ್ಣೇಕ್ಷಣಾ ಕೃಷ್ಣಾ ಕೃಷ್ಣಂ ವಚನಮಬ್ರವೀತ್||

ಹೀಗೆ ಹೇಳಿ ಆ ಕಪ್ಪು ಕಣ್ಣಿನ, ಪದ್ಮಾಕ್ಷೀ ವರಾರೋಹೆಯು, ತನ್ನ ಎಡಗೈಯಿಂದ ಮೃದುವಾದ, ತುದಿಯಲ್ಲಿ ಗುಂಗುರಾಗಿದ್ದ, ನೋಡಲು ಸುಂದರವಾಗಿದ್ದ, ಕಪ್ಪಾಗಿದ್ದ, ಪುಣ್ಯಗಂಧವನ್ನು ಸೂಸುತ್ತಿದ್ದ, ಸರ್ವಲಕ್ಷಣ ಸಂಪನ್ನವಾದ, ಮಹಾಸರ್ಪದಂತೆ ತೋರುತ್ತಿದ್ದ ತಲೆಗೂದಲನ್ನು ಎತ್ತಿಕೊಂಡು ಪುಂಡರೀಕಾಕ್ಷನಲ್ಲಿಗೆ ಆನೆಯಂತೆ ನಡೆದುಬಂದು, ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಸಿಕೊಂಡು, ಕೃಷ್ಣೆಯು ಕೃಷ್ಣನಿಗೆ ಹೇಳಿದಳು.

05080036a ಅಯಂ ತೇ ಪುಂಡರೀಕಾಕ್ಷ ದುಃಶಾಸನಕರೋದ್ಧೃತಃ|

05080036c ಸ್ಮರ್ತವ್ಯಃ ಸರ್ವಕಾಲೇಷು ಪರೇಷಾಂ ಸಂಧಿಮಿಚ್ಚತಾ||

“ಪುಂಡರೀಕಾಕ್ಷ! ಇದನ್ನೇ ಆ ದುಃಶಾಸನನು ಕೈಯಿಕ್ಕಿ ಎಳೆದುದು! ಅವರೊಂದಿಗೆ ಸಂಧಿಯನ್ನು ಬಯಸುವಾಗ ಸರ್ವಕಾಲಗಳಲ್ಲಿ ಇದನ್ನು ನೆನಪಿಸಿಕೊಳ್ಳುತ್ತಿರು!

05080037a ಯದಿ ಭೀಮಾರ್ಜುನೌ ಕೃಷ್ಣ ಕೃಪಣೌ ಸಂಧಿಕಾಮುಕೌ|

05080037c ಪಿತಾ ಮೇ ಯೋತ್ಸ್ಯತೇ ವೃದ್ಧಃ ಸಹ ಪುತ್ರೈರ್ಮಹಾರಥೈಃ||

ಕೃಷ್ಣ! ಒಂದು ವೇಳೆ ಭೀಮಾರ್ಜುನರು ಕೃಪಣರಾಗಿ ಸಂಧಿಯನ್ನು ಬಯಸಿದರೆ, ನನ್ನ ಈ ವೃದ್ಧ ತಂದೆಯು ಮಹಾರಥಿ ಮಕ್ಕಳನ್ನೊಡಗೂಡಿ ಹೋರಾಡುತ್ತಾನೆ!

05080038a ಪಂಚ ಚೈವ ಮಹಾವೀರ್ಯಾಃ ಪುತ್ರಾ ಮೇ ಮಧುಸೂದನ|

05080038c ಅಭಿಮನ್ಯುಂ ಪುರಸ್ಕೃತ್ಯ ಯೋತ್ಸ್ಯಂತಿ ಕುರುಭಿಃ ಸಹ||

ಮಧುಸೂದನ! ಅಭಿಮನ್ಯುವನ್ನು ಮುಂದಿಟ್ಟುಕೊಂಡು ನನ್ನ ಐವರು ಮಹಾವೀರ ಪುತ್ರರು ಕುರುಗಳೊಂದಿಗೆ ಯುದ್ಧ ಮಾಡುತ್ತಾರೆ.

05080039a ದುಃಶಾನಭುಜಂ ಶ್ಯಾಮಂ ಸಂಚಿನ್ನಂ ಪಾಂಸುಗುಂಠಿತಂ|

05080039c ಯದ್ಯಹಂ ತಂ ನ ಪಶ್ಯಾಮಿ ಕಾ ಶಾಂತಿರ್ಹೃದಯಸ್ಯ ಮೇ||

ಯಾವಾಗ ದುಃಶಾಸನನ ಆ ಕಪ್ಪು ಭುಜಗಳನ್ನು ಕತ್ತರಿಸಿ ಧೂಳು ಮುಕ್ಕುವುದನ್ನು ನೋಡುತ್ತೇನೋ ಅಲ್ಲಿಯವರೆಗೆ ನನ್ನ ಹೃದಯಕ್ಕೆ ಶಾಂತಿಯೆಲ್ಲಿದೆ?

05080040a ತ್ರಯೋದಶ ಹಿ ವರ್ಷಾಣಿ ಪ್ರತೀಕ್ಷಂತ್ಯಾ ಗತಾನಿ ಮೇ|

05080040c ನಿಧಾಯ ಹೃದಯೇ ಮನ್ಯುಂ ಪ್ರದೀಪ್ತಮಿವ ಪಾವಕಂ||

ಉರಿಯುತ್ತಿರುವ ಬೆಂಕಿಯಂತಿದ್ದ ಈ ಕೋಪವನ್ನು ಹೃದಯಲ್ಲಿಟ್ಟುಕೊಂಡು ಕಾಯುತ್ತಾ ಹದಿಮೂರು ವರ್ಷಗಳು ಕಳೆದುಹೋದವು.

05080041a ವಿದೀರ್ಯತೇ ಮೇ ಹೃದಯಂ ಭೀಮವಾಕ್ಶಲ್ಯಪೀಡಿತಂ|

05080041c ಯೋಽಯಮದ್ಯ ಮಹಾಬಾಹುರ್ಧರ್ಮಂ ಸಮನುಪಶ್ಯತಿ||

ಇಂದು ಧರ್ಮವನ್ನು ಮಾತ್ರ ಕಾಣುವ ಆ ಮಹಾಬಾಹು ಭೀಮನ ವಾಕ್ಯದ ಮುಳ್ಳಿನಿಂದ ಪೀಡಿತನಾದ ನನ್ನ ಹೃದಯವು ಒಡೆಯುತ್ತಿದೆ.”

05080042a ಇತ್ಯುಕ್ತ್ವಾ ಬಾಷ್ಪಸನ್ನೇನ ಕಂಠೇನಾಯತಲೋಚನಾ|

05080042c ರುರೋದ ಕೃಷ್ಣಾ ಸೋತ್ಕಂಪಂ ಸಸ್ವರಂ ಬಾಷ್ಪಗದ್ಗದಂ||

05080043a ಸ್ತನೌ ಪೀನಾಯತಶ್ರೋಣೀ ಸಹಿತಾವಭಿವರ್ಷತೀ|

05080043c ದ್ರವೀಭೂತಮಿವಾತ್ಯುಷ್ಣಮುತ್ಸೃಜದ್ವಾರಿ ನೇತ್ರಜಂ||

ಆ ಆಯತಲೋಚನೆ ಕೃಷ್ಣೆಯು ಕಣ್ಣೀರಿನಿಂದ ಕಟ್ಟಿದ ಕಂಠದಲ್ಲಿ ಹೀಗೆ ಹೇಳಿ ನಡುಗುತ್ತಾ ಗದ್ಗದ ಕಂಠದಲ್ಲಿ ಜೋರಾಗಿ ಅತ್ತಳು. ಅವಳ ಮೇಲುಬ್ಬಿದ ಮೊಲೆಗಳು ಕಣ್ಣೀರಿನಿಂದ ಒದ್ದೆಯಾದವು. ನೀರಾದ ಬೆಂಕಿಯಂತಿರುವ ಕಣ್ಣೀರನ್ನು ಒಂದೇ ಸಮನೆ ಸುರಿಸಿದಳು.

05080044a ತಾಮುವಾಚ ಮಹಾಬಾಹುಃ ಕೇಶವಃ ಪರಿಸಾಂತ್ವಯನ್|

05080044c ಅಚಿರಾದ್ದ್ರಕ್ಷ್ಯಸೇ ಕೃಷ್ಣೇ ರುದತೀರ್ಭರತಸ್ತ್ರಿಯಃ||

ಮಹಾಬಾಹು ಕೇಶವನು ಅವಳನ್ನು ಸಂತವಿಸುತ್ತಾ ಹೇಳಿದನು: “ಕೃಷ್ಣೇ! ಬೇಗನೇ ನೀನು ಭರತಸ್ತ್ರೀಯರು ರೋದಿಸುವುದನ್ನು ನೋಡುವಿಯಂತೆ.

05080045a ಏವಂ ತಾ ಭೀರು ರೋತ್ಸ್ಯಂತಿ ನಿಹತಜ್ಞಾತಿಬಾಂಧವಾಃ|

05080045c ಹತಮಿತ್ರಾ ಹತಬಲಾ ಯೇಷಾಂ ಕ್ರುದ್ಧಾಸಿ ಭಾಮಿನಿ||

ಭೀರು! ಭಾಮಿನೀ! ಅವರೂ ಕೂಡ ಹೀಗೆಯೇ ಜ್ಞಾತಿಬಾಂಧವರನ್ನು ಕಳೆದುಕೊಂಡು ರೋದಿಸುವರು. ಯಾರಮೇಲೆ ನೀನು ಸಿಟ್ಟಾಗಿದ್ದೀಯೋ ಅವರ ಮಿತ್ರರು ಮತ್ತು ಸೇನೆಯು ಈಗಾಗಲೇ ಹತರಾಗಿಬಿಟ್ಟಿದ್ದಾರೆ.

05080046a ಅಹಂ ಚ ತತ್ಕರಿಷ್ಯಾಮಿ ಭೀಮಾರ್ಜುನಯಮೈಃ ಸಹ|

05080046c ಯುಧಿಷ್ಠಿರನಿಯೋಗೇನ ದೈವಾಚ್ಚ ವಿಧಿನಿರ್ಮಿತಾತ್||

ನಾನು, ಭೀಮಾರ್ಜುನರು ಮತ್ತು ಯಮಳರು ಯುಧಿಷ್ಠಿರನ ಮಾತಿನಂತೆ ಮಾಡುತ್ತೇವೆ. ದೈವವು ವಿಧಿನಿರ್ಮಿತ ಕೆಲಸವನ್ನು ಮಾಡುತ್ತದೆ.

05080047a ಧಾರ್ತರಾಷ್ಟ್ರಾಃ ಕಾಲಪಕ್ವಾ ನ ಚೇಚ್ಚೃಣ್ವಂತಿ ಮೇ ವಚಃ|

05080047c ಶೇಷ್ಯಂತೇ ನಿಹತಾ ಭೂಮೌ ಶ್ವಶೃಗಾಲಾದನೀಕೃತಾಃ||

ಕಾಲದಲ್ಲಿ ಬೆಂದುಹೋಗಿರುವ ಧಾರ್ತರಾಷ್ಟ್ರರು ನನ್ನ ಮಾತುಗಳನ್ನು ಕೇಳದೇ ಇದ್ದರೆ ಅವರು ಹತರಾಗಿ ಭೂಮಿಯ ಮೇಲೆ ನಾಯಿ-ನರಿಗಳಿಗೆ ಆಹಾರವಾಗಿ ಬೀಳುತ್ತಾರೆ.

05080048a ಚಲೇದ್ಧಿ ಹಿಮವಾಂ ಶೈಲೋ ಮೇದಿನೀ ಶತಧಾ ಭವೇತ್|

05080048c ದ್ಯೌಃ ಪತೇಚ್ಚ ಸನಕ್ಷತ್ರಾ ನ ಮೇ ಮೋಘಂ ವಚೋ ಭವೇತ್||

ಹಿಮವತ್ ಪರ್ವತವು ಚಲಿಸಬಹುದು, ಭೂಮಿಯು ಚೂರಾಗಬಹುದು, ನಕ್ಷತ್ರಗಳೊಂದಿಗೆ ಆಕಾಶವು ಬೀಳಬಹುದು, ಆದರೆ ನನ್ನ ಮಾತು ಹುಸಿಯಾಗುವುದಿಲ್ಲ!

05080049a ಸತ್ಯಂ ತೇ ಪ್ರತಿಜಾನಾಮಿ ಕೃಷ್ಣೇ ಬಾಷ್ಪೋ ನಿಗೃಹ್ಯತಾಂ|

05080049c ಹತಾಮಿತ್ರಾಂ ಶ್ರಿಯಾ ಯುಕ್ತಾನಚಿರಾದ್ದ್ರಕ್ಷ್ಯಸೇ ಪತೀನ್||

ಕೃಷ್ಣೇ! ನಿನಗೆ ಸತ್ಯವನ್ನು ತಿಳಿಸುತ್ತಿದ್ದೇನೆ. ಕಣ್ಣೀರು ಸುರಿಸುವುದನ್ನು ನಿಲ್ಲಿಸು! ಬೇಗನೇ ನಿನ್ನ ಪತಿಯಂದಿರು ಶತ್ರುಗಳನ್ನು ಸಂಹರಿಸಿ ಶ್ರೀಯನ್ನು ಹೊಂದುತ್ತಾರೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ದ್ರೌಪದೀಕೃಷ್ಣಸಂವಾದೇ ಅಶೀತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ದ್ರೌಪದೀಕೃಷ್ಣಸಂವಾದ ಎನ್ನುವ ಎಂಭತ್ತನೆಯ ಅಧ್ಯಾಯವು.

Related image

Comments are closed.