Udyoga Parva: Chapter 77

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೭

“ಮಾತು ಮತ್ತು ಕರ್ಮಗಳಿಂದ ಏನೆಲ್ಲ ಮಾಡಲಿಕ್ಕೆ ಸಾಧ್ಯವಿದೆಯೋ ಅವೆಲ್ಲವನ್ನೂ ಮಾಡುತ್ತೇನೆ. ಆದರೆ ಅವರೊಂದಿಗೆ ಶಾಂತಿಯಾಗುತ್ತದೆ ಎಂದು ನನಗನ್ನಿಸುವುದಿಲ್ಲ” ಎಂದು ಕೃಷ್ಣನು ಅರ್ಜುನನಿಗೆ ಉತ್ತರಿಸಿದುದು (೧-೨೧).

05077001 ಭಗವಾನುವಾಚ|

05077001a ಏವಮೇತನ್ಮಹಾಬಾಹೋ ಯಥಾ ವದಸಿ ಪಾಂಡವ|

05077001c ಸರ್ವಂ ತ್ವಿದಂ ಸಮಾಯತ್ತಂ ಬೀಭತ್ಸೋ ಕರ್ಮಣೋರ್ದ್ವಯೋಃ||

ಭಗವಂತನು ಹೇಳಿದನು: “ಮಹಾಬಾಹೋ! ಪಾಂಡವ! ಇದು ನೀನು ಹೇಳಿದಂತೆಯೇ! ಬೀಭತ್ಸೋ! ಆದರೂ ಇವೆಲ್ಲವೂ ಎರಡು ರೀತಿಯ ಕರ್ಮಗಳ ಮೇಲೆ ಅವಲಂಬಿಸಿವೆ.

05077002a ಕ್ಷೇತ್ರಂ ಹಿ ರಸವಚ್ಚುದ್ಧಂ ಕರ್ಷಕೇಣೋಪಪಾದಿತಂ|

05077002c ಋತೇ ವರ್ಷಂ ನ ಕೌಂತೇಯ ಜಾತು ನಿರ್ವರ್ತಯೇತ್ಫಲಂ||

ರಸವತ್ತಾದ ಶುದ್ಧ ಭೂಮಿಯನ್ನು ಕೃಷಿಕನು ಸಿದ್ಧಗೊಳಿಸಬಹುದು. ಆದರೆ, ಕೌಂತೇಯ! ಅಲ್ಲಿ ಮಳೆಯೇ ಬೀಳದಿದ್ದರೆ ಬೆಳೆಯನ್ನು ತೆಗೆಯಲು ಸೋಲುತ್ತಾನೆ.

05077003a ತತ್ರ ವೈ ಪೌರುಷಂ ಬ್ರೂಯುರಾಸೇಕಂ ಯತ್ನಕಾರಿತಂ|

05077003c ತತ್ರ ಚಾಪಿ ಧ್ರುವಂ ಪಶ್ಯೇಚ್ಚೋಷಣಂ ದೈವಕಾರಿತಂ||

ಅಲ್ಲಿ ಪುರುಷನ ಪ್ರಯತ್ನದಿಂದ ಏರ್ಪಡಿಸಿದ ನೀರಾವರಿಯ ವ್ಯವಸ್ಥೆಯು ಬೆಳೆಯನ್ನು ತೆಗೆಯಲು ಸಾಧ್ಯಮಾಡುತ್ತದೆ ಎಂದು ಹೇಳುತ್ತಾರೆ. ಆದರೆ ಅಲ್ಲಿಯೂ ಕೂಡ ದೈವವು ಮಾಡಿಟ್ಟಂತೆ ಒಣಗಿ ಹೋಗುವುದನ್ನು ಖಂಡಿತವಾಗಿ ಕಾಣಬಹುದು.

05077004a ತದಿದಂ ನಿಶ್ಚಿತಂ ಬುದ್ಧ್ಯಾ ಪೂರ್ವೈರಪಿ ಮಹಾತ್ಮಭಿಃ|

05077004c ದೈವೇ ಚ ಮಾನುಷೇ ಚೈವ ಸಮ್ಯುಕ್ತಂ ಲೋಕಕಾರಣಂ||

ನಮ್ಮ ಮಹಾತ್ಮ ಪೂರ್ವಜರು ತಮ್ಮ ಬುದ್ಧಿಯಿಂದ ಇದರ ಕುರಿತು ನಿಶ್ಚಯವನ್ನು ಕೊಟ್ಟಿದ್ದಾರೆ: ಲೋಕದ ಆಗುಹೋಗುಗಳು ದೈವ ಮತ್ತು ಮಾನುಷ ಕಾರಣಗಳೆರಡರ ಮೇಲೂ ನಿಂತಿದೆ.

05077005a ಅಹಂ ಹಿ ತತ್ಕರಿಷ್ಯಾಮಿ ಪರಂ ಪುರುಷಕಾರತಃ|

05077005c ದೈವಂ ತು ನ ಮಯಾ ಶಕ್ಯಂ ಕರ್ಮ ಕರ್ತುಂ ಕಥಂ ಚನ||

ನಾನಾದರೋ ಪುರುಷನು ಕೊನೆಯದಾಗಿ ಏನನ್ನು ಮಾಡಬಲ್ಲನೋ ಅದನ್ನು ಮಾತ್ರ ಮಾಡುತ್ತೇನೆ. ಆದರೆ ದೈವದ ಕೆಲಸವನ್ನು ಮಾಡಲು ನಾನು ಎಂದೂ ಶಕ್ಯನಿಲ್ಲ.

05077006a ಸ ಹಿ ಧರ್ಮಂ ಚ ಸತ್ಯಂ ಚ ತ್ಯಕ್ತ್ವಾ ಚರತಿ ದುರ್ಮತಿಃ|

05077006c ನ ಹಿ ಸಂತಪ್ಯತೇ ತೇನ ತಥಾರೂಪೇಣ ಕರ್ಮಣಾ||

ಆ ದುರ್ಮತಿಯಾದರೋ ಸತ್ಯ ಧರ್ಮಗಳನ್ನು ಬಿಸುಟು ನಡೆದುಕೊಳ್ಳುತ್ತಿದ್ದಾನೆ. ಆ ರೀತಿಯ ಕರ್ಮವು ಅವನನ್ನು ಸುಡುತ್ತಲೂ ಇಲ್ಲ.

05077007a ತಾಂ ಚಾಪಿ ಬುದ್ಧಿಂ ಪಾಪಿಷ್ಠಾಂ ವರ್ಧಯಂತ್ಯಸ್ಯ ಮಂತ್ರಿಣಃ|

05077007c ಶಕುನಿಃ ಸೂತಪುತ್ರಶ್ಚ ಭ್ರಾತಾ ದುಃಶಾಸನಸ್ತಥಾ||

ಅವನ ಪಾಪಿಷ್ಠ ಬುದ್ಧಿಯನ್ನು ಅವನ ಮಂತ್ರಿಗಳಾದ ಶಕುನಿ, ಸೂತಪುತ್ರ, ಮತ್ತು ಸಹೋದರ ದುಃಶಾಸನರು ಬೆಳೆಸುತ್ತಿದ್ದಾರೆ.

05077008a ಸ ಹಿ ತ್ಯಾಗೇನ ರಾಜ್ಯಸ್ಯ ನ ಶಮಂ ಸಮುಪೇಷ್ಯತಿ|

05077008c ಅಂತರೇಣ ವಧಾತ್ಪಾರ್ಥ ಸಾನುಬಂಧಃ ಸುಯೋಧನಃ||

ಪಾರ್ಥ! ಅವನು ರಾಜ್ಯವನ್ನು ಕೊಡುವುದರ ಮೂಲಕ ಶಾಂತಿಯನ್ನು ಬಯಸುವುದಿಲ್ಲ. ಅದಕ್ಕೆ ಮೊದಲು ಅನುಯಾಯಿಗಳೊಂದಿಗೆ ಸುಯೋಧನನನ್ನು ವಧಿಸಬೇಕಾಗುತ್ತದೆ.

05077009a ನ ಚಾಪಿ ಪ್ರಣಿಪಾತೇನ ತ್ಯಕ್ತುಮಿಚ್ಚತಿ ಧರ್ಮರಾಟ್|

05077009c ಯಾಚ್ಯಮಾನಸ್ತು ರಾಜ್ಯಂ ಸ ನ ಪ್ರದಾಸ್ಯತಿ ದುರ್ಮತಿಃ||

ಶರಣು ಹೋಗುವುದರ ಮೂಲಕವೂ ಧರ್ಮರಾಜನು ರಾಜ್ಯವನ್ನು ತ್ಯಜಿಸಲು ಬಯಸುವುದಿಲ್ಲ. ಆ ದುರ್ಮತಿಯು ಕೇಳುವುದರಿಂದ ರಾಜ್ಯವನ್ನು ಕೊಡುವುದಿಲ್ಲ.

05077010a ನ ತು ಮನ್ಯೇ ಸ ತದ್ವಾಚ್ಯೋ ಯದ್ಯುಧಿಷ್ಠಿರಶಾಸನಂ|

05077010c ಉಕ್ತಂ ಪ್ರಯೋಜನಂ ತತ್ರ ಧರ್ಮರಾಜೇನ ಭಾರತ||

ಭಾರತ! ಅಲ್ಲಿ ಧರ್ಮರಾಜನು ಹೇಳಿದ ಯುಧಿಷ್ಠಿರನ ಶಾಸನವನ್ನು ಹೇಳುವುದರಿಂದ ಏನಾದರೂ ಪ್ರಯೋಜನವಿದೆಯೆಂದು ನನಗನ್ನಿಸುವುದಿಲ್ಲ.

05077011a ತಥಾ ಪಾಪಸ್ತು ತತ್ಸರ್ವಂ ನ ಕರಿಷ್ಯತಿ ಕೌರವಃ|

05077011c ತಸ್ಮಿಂಶ್ಚಾಕ್ರಿಯಮಾಣೇಽಸೌ ಲೋಕವಧ್ಯೋ ಭವಿಷ್ಯತಿ||

ಆ ಪಾಪಿ ಕೌರವನು ಹೇಳಿದಂತೆ ಏನನ್ನೂ ಮಾಡುವವನಲ್ಲ. ಹಾಗೆ ಮಾಡದೇ ಇದ್ದಲ್ಲಿ ಅವನು ಲೋಕದಲ್ಲಿ ಯಾರಿಂದಲೂ ವಧಿಸಲ್ಪಡಲು ಅರ್ಹ.

05077012a ಮಮ ಚಾಪಿ ಸ ವಧ್ಯೋ ವೈ ಜಗತಶ್ಚಾಪಿ ಭಾರತ|

05077012c ಯೇನ ಕೌಮಾರಕೇ ಯೂಯಂ ಸರ್ವೇ ವಿಪ್ರಕೃತಾಸ್ತಥಾ||

ಭಾರತ! ಕುಮಾರರಾಗಿರುವಾಗಲೇ ನಿಮ್ಮೆಲ್ಲರನ್ನೂ ಮೋಸದಿಂದ ಕಾಡಿದ ಅವನನ್ನು ನಾನೂ, ಜಗತ್ತೂ, ಕೊಲ್ಲಬಹುದು.

05077013a ವಿಪ್ರಲುಪ್ತಂ ಚ ವೋ ರಾಜ್ಯಂ ನೃಶಂಸೇನ ದುರಾತ್ಮನಾ|

05077013c ನ ಚೋಪಶಾಮ್ಯತೇ ಪಾಪಃ ಶ್ರಿಯಂ ದೃಷ್ಟ್ವಾ ಯುಧಿಷ್ಠಿರೇ||

ಯುಧಿಷ್ಠಿರನಲ್ಲಿದ್ದ ಐಶ್ವರ್ಯವನ್ನು ನೋಡಿದ ನಂತರ ಶಾಂತಿಯನ್ನು ಕಾಣದ ಆ ದುರಾತ್ಮ ಪಾಪಿಯು ನಿಮ್ಮಿಂದ ರಾಜ್ಯವನ್ನು ಮೋಸದಿಂದ ಅಪಹರಿಸಿದನು.

05077014a ಅಸಕೃಚ್ಚಾಪ್ಯಹಂ ತೇನ ತ್ವತ್ಕೃತೇ ಪಾರ್ಥ ಭೇದಿತಃ|

05077014c ನ ಮಯಾ ತದ್ಗೃಹೀತಂ ಚ ಪಾಪಂ ತಸ್ಯ ಚಿಕೀರ್ಷಿತಂ||

ಪಾರ್ಥ! ನನ್ನ ಮತ್ತು ನಿಮ್ಮ ನಡುವೆ ಭೇದವನ್ನು ತರಲು ಅವನು ಬಹುಬಾರಿ ಪ್ರಯತ್ನಿಸಿದ್ದಾನೆ. ಆದರೆ ನಾನು ಅವನ ಪಾಪ ಬುದ್ಧಿಯನ್ನು ಸ್ವೀಕರಿಸಲಿಲ್ಲ.

05077015a ಜಾನಾಸಿ ಹಿ ಮಹಾಬಾಹೋ ತ್ವಮಪ್ಯಸ್ಯ ಪರಂ ಮತಂ|

05077015c ಪ್ರಿಯಂ ಚಿಕೀರ್ಷಮಾಣಂ ಚ ಧರ್ಮರಾಜಸ್ಯ ಮಾಮಪಿ||

ಮಹಾಬಾಹೋ! ಅವನ ಪರಮ ಮತವೇನೆಂದು ಮತ್ತು ನಾನು ಧರ್ಮರಾಜನಿಗೆ ಪ್ರಿಯವಾದುದನ್ನು ಮಾಡಲು ಹೊರಟಿರುವೆನೆಂದು ನಿನಗೆ ತಿಳಿದಿದೆ.

05077016a ಸ ಜಾನಂಸ್ತಸ್ಯ ಚಾತ್ಮಾನಂ ಮಮ ಚೈವ ಪರಂ ಮತಂ|

05077016c ಅಜಾನನ್ನಿವ ಚಾಕಸ್ಮಾದರ್ಜುನಾದ್ಯಾಭಿಶಂಕಸೇ||

ಅರ್ಜುನ! ಅವನ ಮತ್ತು ನನ್ನ ಪರಮ ಮತವನ್ನೂ ತಿಳಿದಿದ್ದೀಯೆ. ಆದರೂ ಏನನ್ನೂ ತಿಳಿದಿಲ್ಲದವನಂತೆ ನಮ್ಮನ್ನು ಶಂಕಿಸುತ್ತಿದ್ದೀಯೆ.

05077017a ಯಚ್ಚಾಪಿ ಪರಮಂ ದಿವ್ಯಂ ತಚ್ಚಾಪ್ಯವಗತಂ ತ್ವಯಾ|

05077017c ವಿಧಾನವಿಹಿತಂ ಪಾರ್ಥ ಕಥಂ ಶರ್ಮ ಭವೇತ್ಪರೈಃ||

ಪಾರ್ಥ! ಪರಮ ದೈವವು ಏನನ್ನು ನಿರ್ಧರಿಸಿದೆಯೋ ಅದೂ ನಿನಗೆ ತಿಳಿದಿದೆ. ಹೀಗಿರುವಾಗ ಅವರೊಂದಿಗೆ ಶಾಂತಿಯು ಹೇಗಾಗುತ್ತದೆ?

05077018a ಯತ್ತು ವಾಚಾ ಮಯಾ ಶಕ್ಯಂ ಕರ್ಮಣಾ ಚಾಪಿ ಪಾಂಡವ|

05077018c ಕರಿಷ್ಯೇ ತದಹಂ ಪಾರ್ಥ ನ ತ್ವಾಶಂಸೇ ಶಮಂ ಪರೈಃ||

ಪಾಂಡವ! ಪಾರ್ಥ! ಮಾತು ಮತ್ತು ಕರ್ಮಗಳಿಂದ ಏನೆಲ್ಲ ಮಾಡಲಿಕ್ಕೆ ಸಾಧ್ಯವಿದೆಯೋ ಅವೆಲ್ಲವನ್ನೂ ಮಾಡುತ್ತೇನೆ. ಆದರೆ ಅವರೊಂದಿಗೆ ಶಾಂತಿಯಾಗುತ್ತದೆ ಎಂದು ನನಗನ್ನಿಸುವುದಿಲ್ಲ.

05077019a ಕಥಂ ಗೋಹರಣೇ ಬ್ರೂಯಾದಿಚ್ಚಂ ಶರ್ಮ ತಥಾವಿಧಂ|

05077019c ಯಾಚ್ಯಮಾನೋಽಪಿ ಭೀಷ್ಮೇಣ ಸಂವತ್ಸರಗತೇಽಧ್ವನಿ||

ಕಳೆದ ವರ್ಷ ಗೋಹರಣದ ಸಮಯದಲ್ಲಿ ಭೀಷ್ಮನು ಕೇಳಿಕೊಂಡರೂ ಅವನು ಶಾಂತಿಯನ್ನು ನೀಡಿದನೇ?

05077020a ತದೈವ ತೇ ಪರಾಭೂತಾ ಯದಾ ಸಂಕಲ್ಪಿತಾಸ್ತ್ವಯಾ|

05077020c ಲವಶಃ ಕ್ಷಣಶಶ್ಚಾಪಿ ನ ಚ ತುಷ್ಟಃ ಸುಯೋಧನಃ||

ಅದೇ ದಿವಸ ನೀನು ಸಂಕಲ್ಪಿಸಿದಂತೆ ಅವರನ್ನು ಪರಾಜಯಗೊಳಿಸಿದೆ. ಸುಯೋಧನನು ಸ್ವಲ್ಪವನ್ನೂ ಸ್ವಲ್ಪಸಮಯಕ್ಕಾಗಿಯೂ ಕೊಡಲು ಬಯಸುವುದಿಲ್ಲ.

05077021a ಸರ್ವಥಾ ತು ಮಯಾ ಕಾರ್ಯಂ ಧರ್ಮರಾಜಸ್ಯ ಶಾಸನಂ|

05077021c ವಿಭಾವ್ಯಂ ತಸ್ಯ ಭೂಯಶ್ಚ ಕರ್ಮ ಪಾಪಂ ದುರಾತ್ಮನಃ||

ಹೇಗಿದ್ದರೂ ನಾನು ಧರ್ಮರಾಜನ ಶಾಸನವನ್ನು ಕಾರ್ಯಗತಗೊಳಿಸಬೇಕು. ಆ ದುರಾತ್ಮನ ಪಾಪ ಕರ್ಮಗಳನ್ನು ಇನ್ನೊಮ್ಮೆ ಮನಸ್ಸಿಗೆ ತೆಗೆದುಕೊಳ್ಳಬಾರದು!”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣವಾಕ್ಯೇ ಸಪ್ತಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣವಾಕ್ಯ ಎನ್ನುವ ಎಪ್ಪತ್ತೇಳನೆಯ ಅಧ್ಯಾಯವು.

Related image

Comments are closed.