Udyoga Parva: Chapter 60

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೦

ದುರ್ಯೋಧನನು ತನ್ನ ಮಂತ್ರಸಿದ್ಧಿಗಳ ಕುರಿತು ಹೇಳಿಕೊಂಡಿದುದು

ದೇವತೆಗಳ ಸಹಾಯವಿರುವ ಪಾರ್ಥರನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎನ್ನುವ ಧೃತರಾಷ್ಟ್ರನ ಭಯವನ್ನು ಆಕ್ಷೇಪಿಸುತ್ತಾ ದುರ್ಯೋಧನನು ದೇವತೆಗಳು ಮನುಷ್ಯರ ವ್ಯವಹಾರಗಳಲ್ಲಿ ತಲೆಹಾಕುವವರಲ್ಲವೆಂದೂ, ಪಾಂಡವರು ಪಡುತ್ತಿರುವ ಕಷ್ಟಗಳನ್ನು ನೋಡಿದರೆ ಅವರಿಗೆ ಯಾವ ದೇವತೆಗಳ ಸಹಾಯವೂ ಇಲ್ಲವೆಂದೂ, ಒಂದು ವೇಳೆ ಅವರಿಗೆ ದೇವತೆಗಳು ಸಹಾಯಮಾಡುತ್ತಿದ್ದರೆ ತನ್ನ ತೇಜಸ್ಸು ದೇವತೆಗಳಲ್ಲಿದ್ದುದಕ್ಕಿಂತಲೂ ಹೆಚ್ಚಿನದು ಎಂದು ಹೇಳಿ (೧-೧೦) ತನ್ನ ಮಂತ್ರಸಿದ್ಧಿಗಳ ಕುರಿತು ಹೇಳಿಕೊಂಡಿದುದು (೧೧-೨೯).

05060001 ವೈಶಂಪಾಯನ ಉವಾಚ|

05060001a ಪಿತುರೇತದ್ವಚಃ ಶ್ರುತ್ವಾ ಧಾರ್ತರಾಷ್ಟ್ರೋಽತ್ಯಮರ್ಷಣಃ|

05060001c ಆಧಾಯ ವಿಪುಲಂ ಕ್ರೋಧಂ ಪುನರೇವೇದಮಬ್ರವೀತ್||

ವೈಶಂಪಾಯನನು ಹೇಳಿದನು: “ತಂದೆಯ ಮಾತುಗಳನ್ನು ಕೇಳಿ ಅತಿ ಅಮರ್ಷಣ ಧಾರ್ತರಾಷ್ಟ್ರನು ತುಂಬಾ ಕೋಪಗೊಂಡು ಪುನಃ ಇದನ್ನು ಹೇಳಿದನು:

05060002a ಅಶಕ್ಯಾ ದೇವಸಚಿವಾಃ ಪಾರ್ಥಾಃ ಸ್ಯುರಿತಿ ಯದ್ಭವಾನ್|

05060002c ಮನ್ಯತೇ ತದ್ಭಯಂ ವ್ಯೇತು ಭವತೋ ರಾಜಸತ್ತಮ||

“ರಾಜಸತ್ತಮ! ದೇವತೆಗಳ ಸಹಾಯವಿರುವ ಪಾರ್ಥರನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎಂದು ನಿನಗನಿಸಿದರೆ ಆ ಭಯವನ್ನು ನೀನು ಕಿತ್ತೊಗೆಯಬೇಕು.

05060003a ಅಕಾಮದ್ವೇಷಸಂಯೋಗಾದ್ದ್ರೋಹಾಲ್ಲೋಭಾಚ್ಚ ಭಾರತ|

05060003c ಉಪೇಕ್ಷಯಾ ಚ ಭಾವಾನಾಂ ದೇವಾ ದೇವತ್ವಮಾಪ್ನುವನ್||

ಭಾರತ! ಕಾಮ-ದ್ವೇಷ-ಸಂಯೋಗ-ದ್ರೋಹ-ಲೋಭಗಳಿಲ್ಲವೆಂತಲೇ ದೇವತೆಗಳು ದೇವತ್ವ ಭಾವವನ್ನು ಪಡೆದರು.

05060004a ಇತಿ ದ್ವೈಪಾಯನೋ ವ್ಯಾಸೋ ನಾರದಶ್ಚ ಮಹಾತಪಾಃ|

05060004c ಜಾಮದಗ್ನ್ಯಶ್ಚ ರಾಮೋ ನಃ ಕಥಾಮಕಥಯತ್ಪುರಾ||

ಇದನ್ನು ನಮಗೆ ದ್ವೈಪಾಯನ ವ್ಯಾಸ, ಮಹಾತಪಸ್ವಿ ನಾರದ, ರಾಮ ಜಾಮದಗ್ನಿ ಇವರು ಹಿಂದೆ ಹೇಳಿದ್ದರು.

05060005a ನೈವ ಮಾನುಷವದ್ದೇವಾಃ ಪ್ರವರ್ತಂತೇ ಕದಾ ಚನ|

05060005c ಕಾಮಾಲ್ಲೋಭಾದನುಕ್ರೋಶಾದ್ದ್ವೇಷಾಚ್ಚ ಭರತರ್ಷಭ||

ಭರತರ್ಷಭ! ದೇವತೆಗಳು ಎಂದೂ ಕಾಮ, ಲೋಭ, ಅನುಕ್ರೋಶ, ದ್ವೇಷಗಳನ್ನು ಹೊಂದಿದ ಮನುಷ್ಯರಂತೆ ನಡೆದುಕೊಳ್ಳುವುದಿಲ್ಲ.

05060006a ಯದಿ ಹ್ಯಗ್ನಿಶ್ಚ ವಾಯುಶ್ಚ ಧರ್ಮ ಇಂದ್ರೋಽಶ್ವಿನಾವಪಿ|

05060006c ಕಾಮಯೋಗಾತ್ಪ್ರವರ್ತೇರನ್ನ ಪಾರ್ಥಾ ದುಃಖಮಾಪ್ನುಯುಃ||

ಒಂದುವೇಳೆ ಅಗ್ನಿ, ವಾಯು, ಧರ್ಮ, ಇಂದ್ರ ಮತ್ತು ಅಶ್ವಿನಿಯರು ಕಾಮ ಹೊಂದಿದವರಂತೆ ನಡೆದುಕೊಂಡರೂ ಪಾರ್ಥರು ದುಃಖವನ್ನು ಪಡೆಯಬಾರದಾಗಿತ್ತು.

05060007a ತಸ್ಮಾನ್ನ ಭವತಾ ಚಿಂತಾ ಕಾರ್ಯೈಷಾ ಸ್ಯಾತ್ಕದಾ ಚನ|

05060007c ದೈವೇಷ್ವಪೇಕ್ಷಕಾ ಹ್ಯೇತೇ ಶಶ್ವದ್ಭಾವೇಷು ಭಾರತ||

ಆದುದರಿಂದ ಭಾರತ! ನೀನು ಎಂದೂ ಅದರ ಕುರಿತು ಚಿಂತಿಸಬಾರದು. ಏಕೆಂದರೆ ದೇವತೆಗಳು ತಮಗೆ ತಕ್ಕುದಾದ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ.

05060008a ಅಥ ಚೇತ್ಕಾಮಸಮ್ಯೋಗಾದ್ದ್ವೇಷಾಲ್ಲೋಭಾಚ್ಚ ಲಕ್ಷ್ಯತೇ|

05060008c ದೇವೇಷು ದೇವಪ್ರಾಮಾಣ್ಯಂ ನೈವ ತದ್ವಿಕ್ರಮಿಷ್ಯತಿ||

ಒಂದು ವೇಳೆ ದೇವತೆಗಳಲ್ಲಿ ಕಾಮ, ಸಂಯೋಗ, ದ್ವೇಷ, ಲೋಭಗಳಿರುವಂತೆ ಕಂಡರೂ, ದೇವ ಪ್ರಮಾಣದಿಂದ ಅವು ಹರಡುವುದಿಲ್ಲ.

05060009a ಮಯಾಭಿಮಂತ್ರಿತಃ ಶಶ್ವಜ್ಜಾತವೇದಾಃ ಪ್ರಶಂಸತಿ|

05060009c ದಿಧಕ್ಷುಃ ಸಕಲಾಽಲ್ಲೋಕಾನ್ಪರಿಕ್ಷಿಪ್ಯ ಸಮಂತತಃ||

ನಾನು ಅಭಿಮಂತ್ರಿಸಿದರೆ ಜಾತವೇದಸನು, ಸಕಲ ಲೋಕಗಳನ್ನು ಎಲ್ಲಕಡೆಯಿಂದ ಸುಡುತ್ತಿರುವಂತೆ ಕಂಡುಬಂದರೂ ನಂದಿಹೋಗುತ್ತಾನೆ.

05060010a ಯದ್ವಾ ಪರಮಕಂ ತೇಜೋ ಯೇನ ಯುಕ್ತಾ ದಿವೌಕಸಃ|

05060010c ಮಮಾಪ್ಯನುಪಮಂ ಭೂಯೋ ದೇವೇಭ್ಯೋ ವಿದ್ಧಿ ಭಾರತ||

ಭಾರತ! ದಿವೌಕಸರು ಪರಮ ತೇಜಸ್ಸಿನಿಂದ ಕೂಡಿದವರು ಎಂದು ತಿಳಿದಿದೆ. ಆದರೆ ನನ್ನ ತೇಜಸ್ಸು ದೇವತೆಗಳಲ್ಲಿದ್ದುದಕ್ಕಿಂತಲೂ ಇನ್ನೂ ಹೆಚ್ಚಿನದು ಎಂದು ತಿಳಿದುಕೋ.

05060011a ಪ್ರದೀರ್ಯಮಾಣಾಂ ವಸುಧಾಂ ಗಿರೀಣಾಂ ಶಿಖರಾಣಿ ಚ|

05060011c ಲೋಕಸ್ಯ ಪಶ್ಯತೋ ರಾಜನ್ ಸ್ಥಾಪಯಾಮ್ಯಭಿಮಂತ್ರಣಾತ್||

ರಾಜನ್! ವಸುಧೆಯು ಸೀಳಿಹೋದರೂ, ಗಿರಿ-ಶಿಖರಗಳು ತುಂಡಾದರೂ ನಾನು ಅವುಗಳನ್ನು ಅಭಿಮಂತ್ರಿಸಿ ಎಲ್ಲರೂ ನೋಡುತ್ತಿದ್ದಂತೆ ಜೋಡಿಸಬಲ್ಲೆ.

05060012a ಚೇತನಾಚೇತನಸ್ಯಾಸ್ಯ ಜಂಗಮಸ್ಥಾವರಸ್ಯ ಚ|

05060012c ವಿನಾಶಾಯ ಸಮುತ್ಪನ್ನಂ ಮಹಾಘೋರಂ ಮಹಾಸ್ವನಂ||

05060013a ಅಶ್ಮವರ್ಷಂ ಚ ವಾಯುಂ ಚ ಶಮಯಾಮೀಹ ನಿತ್ಯಶಃ|

05060013c ಜಗತಃ ಪಶ್ಯತೋಽಭೀಕ್ಷ್ಣಂ ಭೂತಾನಾಮನುಕಂಪಯಾ||

ಚೇತನವಿರುವ, ಚೇತನವಿಲ್ಲದಿರುವ, ಜಂಗಮ ಸ್ಥಾವರಗಳ ವಿನಾಶಕ್ಕಾಗಿ ಮೇಲೆದ್ದ ಮಹಾಘೋರ ಮಹಾಸ್ವನ, ಕಲ್ಲುಗಳನ್ನು ಸುರಿಸುವ ಚಂಡಮಾರುತವನ್ನು ಕೂಡ ನಾನು ಇರುವವುಗಳಿಗೆ ಅನುಕಂಪವನ್ನು ತೋರಿ ಜಗತ್ತು ಗಾಭರಿಯಾಗಿ ನೋಡುತ್ತಿದ್ದಂತೆ ನಿಲ್ಲಿಸಬಲ್ಲೆ.

05060014a ಸ್ತಂಭಿತಾಸ್ವಪ್ಸು ಗಚ್ಚಂತಿ ಮಯಾ ರಥಪದಾತಯಃ|

05060014c ದೇವಾಸುರಾಣಾಂ ಭಾವಾನಾಮಹಮೇಕಃ ಪ್ರವರ್ತಿತಾ||

ನಾನು ನೀರನ್ನು ಹೆಪ್ಪುಗಟ್ಟಿಸಿದಾಗ ರಥ-ಪದಾತಿಗಳು ಅದರ ಮೇಲೆ ಹೋಗಬಲ್ಲವು. ದೇವಾಸುರರ ಭಾವಗಳನ್ನು ನಾನೊಬ್ಬನೇ ಪರಿವರ್ತಿಸಬಲ್ಲೆ.

05060015a ಅಕ್ಷೌಹಿಣೀಭಿರ್ಯಾನ್ದೇಶಾನ್ಯಾಮಿ ಕಾರ್ಯೇಣ ಕೇನ ಚಿತ್|

05060015c ತತ್ರಾಪೋ ಮೇ ಪ್ರವರ್ತಂತೇ ಯತ್ರ ಯತ್ರಾಭಿಕಾಮಯೇ||

ಯಾವುದೇ ದೇಶಗಳಿಗೆ ನನ್ನ ಅಕ್ಷೌಹಿಣಿಯು ಯಾವುದೇ ಕಾರ್ಯಕ್ಕೆಂದು ಹೋದರೂ, ಎಲ್ಲಿ ಹೋದರೂ ನೀರು ನನ್ನ ಪ್ರಕಾರ ನಡೆದುಕೊಳ್ಳುತ್ತದೆ ಮತ್ತು ಬೇಕಾದಲ್ಲಿ ಹೋಗುತ್ತದೆ.

05060016a ಭಯಾನಿ ವಿಷಯೇ ರಾಜನ್ವ್ಯಾಲಾದೀನಿ ನ ಸಂತಿ ಮೇ|

05060016c ಮತ್ತಃ ಸುಪ್ತಾನಿ ಭೂತಾನಿ ನ ಹಿಂಸಂತಿ ಭಯಂಕರಾಃ||

ರಾಜನ್! ನಾನಿರುವ ಪ್ರದೇಶದಲ್ಲಿ ಹಾವು ಮೊದಲಾದವುಗಳ ಭಯವು ನನಗಿರುವುದಿಲ್ಲ. ಅಲ್ಲಿರುವ ಭೂತಗಳು ಮತ್ತರಾಗಿ ಮಲಗುತ್ತಾರೆ ಮತ್ತು ಭಯಂಕರ ಭೂತಗಳು ಹಿಂಸಿಸುವುದಿಲ್ಲ.

05060017a ನಿಕಾಮವರ್ಷೀ ಪರ್ಜನ್ಯೋ ರಾಜನ್ವಿಷಯವಾಸಿನಾಂ|

05060017c ಧರ್ಮಿಷ್ಠಾಶ್ಚ ಪ್ರಜಾಃ ಸರ್ವಾ ಈತಯಶ್ಚ ನ ಸಂತಿ ಮೇ||

ರಾಜನ್! ನನ್ನ ರಾಜ್ಯದಲ್ಲಿ ವಾಸಿಸುವವರ ಇಷ್ಟದಂತೆ ಮೋಡಗಳು ಮಳೆಸುರಿಸುತ್ತವೆ. ನನ್ನ ಪ್ರಜೆಗಳೆಲ್ಲರೂ ಧರ್ಮಿಷ್ಠರು ಮತ್ತು ಅವರು ದುರಂತಗಳನ್ನು ಅನುಭವಿಸುವುದಿಲ್ಲ.

05060018a ಅಶ್ವಿನಾವಥ ವಾಯ್ವಗ್ನೀ ಮರುದ್ಭಿಃ ಸಹ ವೃತ್ರಹಾ|

05060018c ಧರ್ಮಶ್ಚೈವ ಮಯಾ ದ್ವಿಷ್ಟಾನ್ನೋತ್ಸಹಂತೇಽಭಿರಕ್ಷಿತುಂ||

ಅಶ್ವಿನಿಯರು, ವಾಯು, ಅಗ್ನಿ, ಮರುತ್ತುಗಳ ಸಹಿತ ವೃತ್ರಹ ಮತ್ತು ಧರ್ಮನೂ ಕೂಡ ನನ್ನ ಶತ್ರುಗಳನ್ನು ರಕ್ಷಿಸಲು ಮುಂದುವರೆಯುವುದಿಲ್ಲ.

05060019a ಯದಿ ಹ್ಯೇತೇ ಸಮರ್ಥಾಃ ಸ್ಯುರ್ಮದ್ದ್ವಿಷಸ್ತ್ರಾತುಂ ಓಜಸಾ|

05060019c ನ ಸ್ಮ ತ್ರಯೋದಶ ಸಮಾಃ ಪಾರ್ಥಾ ದುಃಖಮವಾಪ್ನುಯುಃ||

ಒಂದುವೇಳೆ ಅವರು ತಮ್ಮ ಓಜಸ್ಸಿನಿಂದ ನನ್ನ ವೈರಿಗಳನ್ನು ರಕ್ಷಿಸಲು ಸಮರ್ಥರಾಗಿದ್ದರೆ ಪಾರ್ಥರು ಹದಿಮೂರು ವರ್ಷಗಳು ದುಃಖವನ್ನು ಅನುಭವಿಸುತ್ತಿರಲಿಲ್ಲ.

05060020a ನೈವ ದೇವಾ ನ ಗಂಧರ್ವಾ ನಾಸುರಾ ನ ಚ ರಾಕ್ಷಸಾಃ|

05060020c ಶಕ್ತಾಸ್ತ್ರಾತುಂ ಮಯಾ ದ್ವಿಷ್ಟಂ ಸತ್ಯಮೇತದ್ಬ್ರವೀಮಿ ತೇ||

ನಾನು ದ್ವೇಷಿಸುವವರನ್ನು ದೇವತೆಗಳ, ಗಂಧರ್ವರ, ಅಸುರರ, ಮತ್ತು ರಾಕ್ಷಸರ ಶಕ್ತಿಗಳು ರಕ್ಷಿಸಲು ಅಸಮರ್ಥರು. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

05060021a ಯದಭಿಧ್ಯಾಮ್ಯಹಂ ಶಶ್ವಚ್ಚುಭಂ ವಾ ಯದಿ ವಾಶುಭಂ|

05060021c ನೈತದ್ವಿಪನ್ನಪೂರ್ವಂ ಮೇ ಮಿತ್ರೇಷ್ವರಿಷು ಚೋಭಯೋಃ||

ನನ್ನ ಮಿತ್ರರು ಮತ್ತು ವೈರಿಗಳಲ್ಲಿ ಯಾರಿಗೆ ಶಿಕ್ಷೆ ಕೊಡಬೇಕು ಯಾರಿಗೆ ಪ್ರೋತ್ಸಾಹಿಸಬೇಕು ಎಂಬ ಕುರಿತು ಇದೂವರೆಗೆ ನನಗೆ ದ್ವಂದ್ವಗಳಿಲ್ಲ.

05060022a ಭವಿಷ್ಯತೀದಮಿತಿ ವಾ ಯದ್ಬ್ರವೀಮಿ ಪರಂತಪ|

05060022c ನಾನ್ಯಥಾ ಭೂತಪೂರ್ವಂ ತತ್ಸತ್ಯವಾಗಿತಿ ಮಾಂ ವಿದುಃ||

ಪರಂತಪ! ಇದೂವರೆಗೆ ಮುಂದೆ ಇದು ಆಗುತ್ತದೆ ಎಂದು ನಾನು ಹೇಳಿದುದು ಬೇರೆಯಾಗಿಲ್ಲ. ಸತ್ಯವಾಗುವುದನ್ನೇ ಹೇಳುವವನು ಎಂದು ನನ್ನನ್ನು ತಿಳಿ.

05060023a ಲೋಕಸಾಕ್ಷಿಕಮೇತನ್ಮೇ ಮಾಹಾತ್ಮ್ಯಂ ದಿಕ್ಷು ವಿಶ್ರುತಂ|

05060023c ಆಶ್ವಾಸನಾರ್ಥಂ ಭವತಃ ಪ್ರೋಕ್ತಂ ನ ಶ್ಲಾಘಯಾ ನೃಪ||

ನೃಪ! ನನ್ನ ಈ ಮಹಾತ್ಮೆಯನ್ನು ಜನರು ಸಾಕ್ಷಾತ್ ನೋಡಿದ್ದಾರೆ ಮತ್ತು ದಿಕ್ಕುಗಳಲ್ಲಿ ಕೇಳಿಬಂದಿದೆ. ಇದನ್ನು ನಿನಗೆ ಅಶ್ವಾಸನೆಯನ್ನು ನೀಡಲು ಹೇಳುತ್ತಿದ್ದೇನೆಯೇ ಹೊರತು ಹೊಗಳಿಕೊಳ್ಳಲು ಅಲ್ಲ.

05060024a ನ ಹ್ಯಹಂ ಶ್ಲಾಘನೋ ರಾಜನ್ಭೂತಪೂರ್ವಃ ಕದಾ ಚನ|

05060024c ಅಸದಾಚರಿತಂ ಹ್ಯೇತದ್ಯದಾತ್ಮಾನಂ ಪ್ರಶಂಸತಿ||

ರಾಜನ್! ಈ ಹಿಂದೆ ನಾನು ಎಂದೂ ಆತ್ಮಶ್ಲಾಘನೆಯನ್ನು ಮಾಡಲಿಲ್ಲ. ತನ್ನನ್ನು ತಾನೇ ಪ್ರಶಂಸಿಸಿಕೊಳ್ಳುವುದು ಸದಾಚಾರವಲ್ಲ.

05060025a ಪಾಂಡವಾಂಶ್ಚೈವ ಮತ್ಸ್ಯಾಂಶ್ಚ ಪಾಂಚಾಲಾನ್ಕೇಕಯೈಃ ಸಹ|

05060025c ಸಾತ್ಯಕಿಂ ವಾಸುದೇವಂ ಚ ಶ್ರೋತಾಸಿ ವಿಜಿತಾನ್ಮಯಾ||

ಪಾಂಡವರು, ಮತ್ಸ್ಯರು, ಪಾಂಚಾಲರು, ಕೇಕಯರು, ಸಾತ್ಯಕಿ ಮತ್ತು ವಾಸುದೇವನು ಕೂಡ ನನ್ನಿಂದ ಗೆಲ್ಲಲ್ಪಟ್ಟಿದ್ದುದನ್ನು ನೀನು ಕೇಳುವೆಯಂತೆ.

05060026a ಸರಿತಃ ಸಾಗರಂ ಪ್ರಾಪ್ಯ ಯಥಾ ನಶ್ಯಂತಿ ಸರ್ವಶಃ|

05060026c ತಥೈವ ತೇ ವಿನಂಕ್ಷ್ಯಂತಿ ಮಾಮಾಸಾದ್ಯ ಸಹಾನ್ವಯಾಃ||

ನದಿಗಳು ಸಾಗರವನ್ನು ಸೇರಿ ಹೇಗೆ ಸಂಪೂರ್ಣವಾಗಿ ನಾಶವಾಗುವವೋ ಹಾಗೆ ಅನುಯಾಯಿಗಳೊಂದಿಗೆ ಅವರು ನನ್ನ ಬಳಿಸಾರಿ ವಿನಾಶಗೊಳ್ಳುತ್ತಾರೆ.

05060027a ಪರಾ ಬುದ್ಧಿಃ ಪರಂ ತೇಜೋ ವೀರ್ಯಂ ಚ ಪರಮಂ ಮಯಿ|

05060027c ಪರಾ ವಿದ್ಯಾ ಪರೋ ಯೋಗೋ ಮಮ ತೇಭ್ಯೋ ವಿಶಿಷ್ಯತೇ||

ನನ್ನ ಬುದ್ಧಿಯು ಹೆಚ್ಚಿನದು, ತೇಜಸ್ಸು ಹೆಚ್ಚಿನದು ಮತ್ತು ನನ್ನ ವೀರ್ಯವೂ ಹೆಚ್ಚಿನದು. ವಿದ್ಯೆಯು ಹೆಚ್ಚಿನದು, ಯೋಗವು ಹೆಚ್ಚಿನದು. ಇವೆರಡೂ ಅವರಿಗಿಂತ ನನ್ನಲ್ಲಿ ವಿಶೇಷವಾಗಿವೆ.

05060028a ಪಿತಾಮಹಶ್ಚ ದ್ರೋಣಶ್ಚ ಕೃಪಃ ಶಲ್ಯಃ ಶಲಸ್ತಥಾ|

05060028c ಅಸ್ತ್ರೇಷು ಯತ್ಪ್ರಜಾನಂತಿ ಸರ್ವಂ ತನ್ಮಯಿ ವಿದ್ಯತೇ||

ಪಿತಾಮಹ, ದ್ರೋಣ, ಕೃಪ, ಶಲ್ಯ, ಮತ್ತು ಶಲ ಇವರುಗಳು ಅಸ್ತ್ರಗಳ ಕುರಿತು ಏನನ್ನು ತಿಳಿದಿದ್ದಾರೋ ಅವು ನನ್ನಲ್ಲಿಯೂ ಇವೆ.”

05060029a ಇತ್ಯುಕ್ತ್ವಾ ಸಂಜಯಂ ಭೂಯಃ ಪರ್ಯಪೃಚ್ಚತ ಭಾರತ|

05060029c ಜ್ಞಾತ್ವಾ ಯುಯುತ್ಸುಃ ಕಾರ್ಯಾಣಿ ಪ್ರಾಪ್ತಕಾಲಮರಿಂದಮ||

ಭಾರತ! ಇದನ್ನು ಹೇಳಿ ಆ ಅರಿಂದಮನು ಯುದ್ಧಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು ಇನ್ನೂ ತಿಳಿದುಕೊಳ್ಳಲು ಸಂಜಯನನ್ನು ಪುನಃ ಪ್ರಶ್ನಿಸಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ದುರ್ಯೋಧನವಾಕ್ಯೇ ಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ಅರವತ್ತನೆಯ ಅಧ್ಯಾಯವು.

Related image

Comments are closed.