Udyoga Parva: Chapter 58

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೮

ವಾಸುದೇವ ಕೃಷ್ಣನ ಸಂದೇಶ

ಕೃಷ್ಣಾರ್ಜುನರ ಸಂದೇಶವೇನೆಂದು ಧೃತರಾಷ್ಟ್ರನು ಸಂಜಯನನ್ನು ಕೇಳಲು ಸಂಜಯನು ಅವನಿಗೆ ಅವರ ಸಂದೇಶಗಳನ್ನು ಹೇಳಿದುದು (೧-೩೦).

05058001 ಧೃತರಾಷ್ಟ್ರ ಉವಾಚ|

05058001a ಯದಬ್ರೂತಾಂ ಮಹಾತ್ಮಾನೌ ವಾಸುದೇವಧನಂಜಯೌ|

05058001c ತನ್ಮೇ ಬ್ರೂಹಿ ಮಹಾಪ್ರಾಜ್ಞಾ ಶುಶ್ರೂಷೇ ವಚನಂ ತವ||

ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಮಹಾತ್ಮರಾದ ವಾಸುದೇವ-ಧನಂಜಯರು ಏನು ಹೇಳಿದರೆಂಬುದನ್ನು ನನಗೆ ಹೇಳು. ಅದನ್ನು ಕೇಳಲು ತವಕವಿದೆ.”

05058002 ಸಂಜಯ ಉವಾಚ|

05058002a ಶೃಣು ರಾಜನ್ಯಥಾ ದೃಷ್ಟೌ ಮಯಾ ಕೃಷ್ಣಧನಂಜಯೌ|

05058002c ಊಚತುಶ್ಚಾಪಿ ಯದ್ವೀರೌ ತತ್ತೇ ವಕ್ಷ್ಯಾಮಿ ಭಾರತ||

ಸಂಜಯನು ಹೇಳಿದನು: “ರಾಜನ್! ಭಾರತ! ನಾನು ಕೃಷ್ಣ-ಧನಂಜಯರನ್ನು ಹೇಗಿದ್ದಾಗ ನೋಡಿದೆನೆನ್ನುವುದನ್ನೂ, ಆ ವೀರರಿಬ್ಬರೂ ನನಗೆ ಏನು ಹೇಳಿ ಕಳುಹಿಸಿದ್ದಾರೆನ್ನುವುದನ್ನೂ ನಿನಗೆ ಹೇಳುತ್ತೇನೆ.

05058003a ಪಾದಾಂಗುಲೀರಭಿಪ್ರೇಕ್ಷನ್ಪ್ರಯತೋಽಹಂ ಕೃತಾಂಜಲಿಃ|

05058003c ಶುದ್ಧಾಂತಂ ಪ್ರಾವಿಶಂ ರಾಜನ್ನಾಖ್ಯಾತುಂ ನರದೇವಯೋಃ||

ರಾಜನ್! ಕಾಲಿನ ಬೆರಳುಗಳನ್ನು ನೋಡುತ್ತಾ, ತಲೆಬಾಗಿ, ಕೈಮುಗಿದು ಶುದ್ಧನಾಗಿ ಅವರಿಗೆ ಹೇಳಲು ನಾನು ಆ ನರದೇವರ ಅಂತಃಪುರವನ್ನು ಪ್ರವೇಶಿಸಿದೆ.

05058004a ನೈವಾಭಿಮನ್ಯುರ್ನ ಯಮೌ ತಂ ದೇಶಮಭಿಯಾಂತಿ ವೈ|

05058004c ಯತ್ರ ಕೃಷ್ಣೌ ಚ ಕೃಷ್ಣಾ ಚ ಸತ್ಯಭಾಮಾ ಚ ಭಾಮಿನೀ||

ಕೃಷ್ಣರಿಬ್ಬರೂ, ಕೃಷ್ಣೆ ಮತ್ತು ಭಾಮಿನೀ ಸತ್ಯಭಾಮೆಯರಿರುವ ಆ ಪ್ರದೇಶವನ್ನು ಅಭಿಮನ್ಯುವಾಗಲೀ ಯಮಳರಾಗಲೀ ಹೋಗಲಾರರು.

05058005a ಉಭೌ ಮಧ್ವಾಸವಕ್ಷೀಬಾವುಭೌ ಚಂದನರೂಷಿತೌ|

05058005c ಸ್ರಗ್ವಿಣೌ ವರವಸ್ತ್ರೌ ತೌ ದಿವ್ಯಾಭರಣಭೂಷಿತೌ||

ಇಬ್ಬರೂ ಹಾರಗಳನ್ನು ಹಾಕಿಕೊಂಡು, ವರವಸ್ತ್ರಗಳನ್ನು ಧರಿಸಿ, ದಿವ್ಯಾಭರಣ ಭೂಷಿತರಾಗಿ, ಚಂದನಲೇಪಿತರಾಗಿ, ಮಧುವನ್ನು ಸೇವಿಸುತ್ತಾ ಕುಳಿತಿದ್ದರು.

05058006a ನೈಕರತ್ನವಿಚಿತ್ರಂ ತು ಕಾಂಚನಂ ಮಹದಾಸನಂ|

05058006c ವಿವಿಧಾಸ್ತರಣಾಸ್ತೀರ್ಣಂ ಯತ್ರಾಸಾತಾಮರಿಂದಮೌ||

ಅನೇಕ ವಿಚಿತ್ರ ರತ್ನಗಳಿಂದ ಕೂಡಿದ ಕಾಂಚನದ ಮಹದಾಸನದ ಮೇಲೆ, ವಿವಿಧ ನೆಲಗಂಬಳಿಗಳನ್ನು ಹಾಸಿದ್ದಲ್ಲಿ ಆ ಅರಿಂದಮರಿಬ್ಬರೂ ಕುಳಿತುಕೊಂಡಿದ್ದರು.

05058007a ಅರ್ಜುನೋತ್ಸಂಗಗೌ ಪಾದೌ ಕೇಶವಸ್ಯೋಪಲಕ್ಷಯೇ|

05058007c ಅರ್ಜುನಸ್ಯ ಚ ಕೃಷ್ಣಾಯಾಂ ಸತ್ಯಾಯಾಂ ಚ ಮಹಾತ್ಮನಃ||

ಕೇಶವನ ಪಾದಗಳು ಅರ್ಜುನನ ತೊಡೆಯಮೇಲಿದ್ದುದನ್ನು, ಮತ್ತು ಮಹಾತ್ಮ ಅರ್ಜುನನ ಪಾದಗಳು ಕೃಷ್ಣೆ ಮತ್ತು ಸತ್ಯಭಾಮೆಯರ ತೊಡೆಯಮೇಲಿರುವುದನ್ನು ನೋಡಿದೆನು.

05058008a ಕಾಂಚನಂ ಪಾದಪೀಠಂ ತು ಪಾರ್ಥೋ ಮೇ ಪ್ರಾದಿಶತ್ತದಾ|

05058008c ತದಹಂ ಪಾಣಿನಾ ಸ್ಪೃಷ್ಟ್ವಾ ತತೋ ಭೂಮಾವುಪಾವಿಶಂ||

ಪಾರ್ಥನು ನನಗೆ ಕಾಂಚನದ ಪಾದಪೀಠವೊಂದನ್ನು ತೋರಿಸಿದನು. ಅದನ್ನು ನಾನು ಕೈಯಲ್ಲಿ ಮುಟ್ಟಿ ನೆಲದ ಮೇಲೆ ಕುಳಿತುಕೊಂಡೆನು.

05058009a ಊರ್ಧ್ವರೇಖತಲೌ ಪಾದೌ ಪಾರ್ಥಸ್ಯ ಶುಭಲಕ್ಷಣೌ|

05058009c ಪಾದಪೀಠಾದಪಹೃತೌ ತತ್ರಾಪಶ್ಯಮಹಂ ಶುಭೌ||

ಪಾದಪೀಠದಿಂದ ಕಾಲನ್ನು ಹಿಂದೆ ತೆಗೆದುಕೊಳ್ಳುವಾಗ ನಾನು ಪಾರ್ಥನ ಆ ಪಾದಗಳಲ್ಲಿರುವ ಶುಭಲಕ್ಷಣ ಊರ್ಧ್ವರೇಖೆಗಳಿರುವ ತಲವನ್ನು ನೋಡಿದೆನು.

05058010a ಶ್ಯಾಮೌ ಬೃಹಂತೌ ತರುಣೌ ಶಾಲಸ್ಕಂಧಾವಿವೋದ್ಗತೌ|

05058010c ಏಕಾಸನಗತೌ ದೃಷ್ಟ್ವಾ ಭಯಂ ಮಾಂ ಮಹದಾವಿಶತ್||

ಶ್ಯಾಮವರ್ಣದ, ದೊಡ್ಡದೇಹದ, ತರುಣರಾದ, ಶಾಲಸ್ಕಂಧದಂತೆ ಎತ್ತರವಾಗಿರುವ ಅವರಿಬ್ಬರೂ ಒಂದೇ ಆಸನದಲ್ಲಿ ಕುಳಿತಿರುವುದನ್ನು ನೋಡಿ ನನಗೆ ಮಹಾ ಭಯವು ಆವರಿಸಿತು.

05058011a ಇಂದ್ರವಿಷ್ಣುಸಮಾವೇತೌ ಮಂದಾತ್ಮಾ ನಾವಬುಧ್ಯತೇ|

05058011c ಸಂಶ್ರಯಾದ್ದ್ರೋಣಭೀಷ್ಮಾಭ್ಯಾಂ ಕರ್ಣಸ್ಯ ಚ ವಿಕತ್ಥನಾತ್||

ಇಂದ್ರ-ವಿಷ್ಣು ಇಬ್ಬರೂ ಸೇರಿರುವುದು ದ್ರೋಣ, ಭೀಷ್ಮ ಮತ್ತು ತನ್ನನ್ನು ತಾನು ಹೊಗಳಿಕೊಳ್ಳುವ ಕರ್ಣನನ್ನು ಸಂಶ್ರಯಿಸಿರುವ ಮಂದಾತ್ಮನಿಗೆ ತಿಳಿದಿಲ್ಲ.

05058012a ನಿದೇಶಸ್ಥಾವಿಮೌ ಯಸ್ಯ ಮಾನಸಸ್ತಸ್ಯ ಸೇತ್ಸ್ಯತೇ|

05058012c ಸಂಕಲ್ಪೋ ಧರ್ಮರಾಜಸ್ಯ ನಿಶ್ಚಯೋ ಮೇ ತದಾಭವತ್||

ಆ ಕ್ಷಣದಲ್ಲಿ ನನಗೆ ನಿಶ್ಚಯವಾಯಿತು - ಯಾರ ನಿರ್ದೇಶನದಂತೆ ಅವರಿಬ್ಬರು ನಡೆದುಕೊಳ್ಳುತ್ತಾರೋ ಯಾರ ಮನಸ್ಸನ್ನು ಅವರು ಸೇವಿಸುತ್ತಾರೋ ಆ ಧರ್ಮರಾಜನ ಸಂಕಲ್ಪದಂತೆಯೇ ಆಗುತ್ತದೆ.

05058013a ಸತ್ಕೃತಶ್ಚಾನ್ನಪಾನಾಭ್ಯಾಮಾಚ್ಚನ್ನೋ ಲಬ್ಧಸತ್ಕ್ರಿಯಃ|

05058013c ಅಂಜಲಿಂ ಮೂರ್ಧ್ನಿ ಸಂಧಾಯ ತೌ ಸಂದೇಶಮಚೋದಯಂ||

ಅನ್ನ ಪಾನಗಳಿಂದ ಸತ್ಕೃತನಾಗಿ ಮತ್ತು ಇತರ ಸತ್ಕ್ರಿಯೆಗಳಿಂದ ಸಮ್ಮಾನಿತನಾಗಿ ತಲೆಯ ಮೇಲೆ ಕೈಗಳನ್ನು ಮುಗಿದು ನಿನ್ನ ಸಂದೇಶವನ್ನು ಅವರಿಗೆ ಹೇಳಿದೆ.

05058014a ಧನುರ್ಬಾಣೋಚಿತೇನೈಕಪಾಣಿನಾ ಶುಭಲಕ್ಷಣಂ|

05058014c ಪಾದಮಾನಮಯನ್ಪಾರ್ಥಃ ಕೇಶವಂ ಸಮಚೋದಯತ್|

ಆಗ ಪಾರ್ಥನು ಧನುರ್ಬಾಣಗಳನ್ನು ಹಿಡಿಯುವ ಕೈಯಿಂದ ಕೇಶವನ ಶುಭಲಕ್ಷಣಯುತ ಕಾಲನ್ನು ಸರಿಸಿ, ಅವನಿಗೆ ಮಾತನಾಡಲು ಒತ್ತಾಯಿಸಿದನು.

05058015a ಇಂದ್ರಕೇತುರಿವೋತ್ಥಾಯ ಸರ್ವಾಭರಣಭೂಷಿತಃ|

05058015c ಇಂದ್ರವೀರ್ಯೋಪಮಃ ಕೃಷ್ಣಃ ಸಂವಿಷ್ಟೋ ಮಾಭ್ಯಭಾಷತ||

ಸರ್ವಾಭರಣಭೂಷಿತ ಇಂದ್ರವೀರ್ಯೋಪಮ ಕೃಷ್ಣನು ಇಂದ್ರಧ್ವಜದಂತೆ ಮೇಲೆದ್ದು ನನ್ನನ್ನು ಉದ್ದೇಶಿಸಿ ಹೇಳಿದನು:

05058016a ವಾಚಂ ಸ ವದತಾಂ ಶ್ರೇಷ್ಠೋ ಹ್ಲಾದಿನೀಂ ವಚನಕ್ಷಮಾಂ|

05058016c ತ್ರಾಸನೀಂ ಧಾರ್ತರಾಷ್ಟ್ರಾಣಾಂ ಮೃದುಪೂರ್ವಾಂ ಸುದಾರುಣಾಂ||

ಆ ಮಾತುನಾಡುವವರಲ್ಲಿ ಶ್ರೇಷ್ಠನ ಮಾತುಗಳು ದಾರುಣವಾಗಿದ್ದು ಧಾರ್ತರಾಷ್ಟ್ರರನ್ನು ಕಾಡುವಂತಿದ್ದರೂ, ಆನಂದದಾಯಕವಾಗಿದ್ದವು, ಮನಸೆಳೆಯುವಂತಿದ್ದವು ಮತ್ತು ಮೃದುಪೂರ್ವಕವಾಗಿದ್ದವು.

05058017a ವಾಚಂ ತಾಂ ವಚನಾರ್ಹಸ್ಯ ಶಿಕ್ಷಾಕ್ಷರಸಮನ್ವಿತಾಂ|

05058017c ಅಶ್ರೌಷಮಹಮಿಷ್ಟಾರ್ಥಾಂ ಪಶ್ಚಾದ್ಧೃದಯಶೋಷಿಣೀಂ|

ಆ ಮಾತುಗಳನ್ನಾಡಲು ಅವನೋರ್ವನೇ ಅರ್ಹನಾಗಿದ್ದನು. ಅವು ಶಿಕ್ಷಾಕ್ಷರ ಸಮನ್ವಿತವಾಗಿತ್ತು. ಅರ್ಥಗರ್ಭಿತವಾಗಿತ್ತು. ಆದರೂ ಕೊನೆಯಲ್ಲಿ ಅದು ಹೃದಯವನ್ನು ಶೋಷಿಸುವಂತಿತ್ತು.

05058018 ವಾಸುದೇವ ಉವಾಚ|

05058018a ಸಂಜಯೇದಂ ವಚೋ ಬ್ರೂಯಾ ಧೃತರಾಷ್ಟ್ರಂ ಮನೀಷಿಣಂ|

05058018c ಶೃಣ್ವತಃ ಕುರುಮುಖ್ಯಸ್ಯ ದ್ರೋಣಸ್ಯಾಪಿ ಚ ಶೃಣ್ವತಃ||

ವಾಸುದೇವನು ಹೇಳಿದನು: “ಸಂಜಯ! ಮನೀಷಿ ಧೃತರಾಷ್ಟ್ರನಿಗೆ ಈ ಮಾತುಗಳನ್ನು ಹೇಳು. ಕುರುಮುಖ್ಯರಿಗೂ ಕೇಳಿಸು ಮತ್ತು ದ್ರೋಣನಿಗೂ ಕೇಳಿಸು.

05058019a ಯಜಧ್ವಂ ವಿಪುಲೈರ್ಯಜ್ಞೈರ್ವಿಪ್ರೇಭ್ಯೋ ದತ್ತ ದಕ್ಷಿಣಾಃ|

05058019c ಪುತ್ರೈರ್ದಾರೈಶ್ಚ ಮೋದಧ್ವಂ ಮಹದ್ವೋ ಭಯಮಾಗತಂ||

ವಿಪ್ರರಿಗೆ ವಿಪುಲ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಯಾಜಿಸಿರಿ. ಹೆಂಡತಿ ಮಕ್ಕಳೊಂದಿಗೆ ಆನಂದಿಸಿಕೊಳ್ಳಿ. ಮಹಾಭಯವು ಬಂದೊದಗಿದೆ.

05058020a ಅರ್ಥಾಂಸ್ತ್ಯಜತ ಪಾತ್ರೇಭ್ಯಃ ಸುತಾನ್ಪ್ರಾಪ್ನುತ ಕಾಮಜಾನ್|

05058020c ಪ್ರಿಯಂ ಪ್ರಿಯೇಭ್ಯಶ್ಚರತ ರಾಜಾ ಹಿ ತ್ವರತೇ ಜಯೇ||

ಸಂಪತ್ತನ್ನು ಪಾತ್ರರಲ್ಲಿ ಹಂಚಿ. ಬೇಕಾದ ಸುತರನ್ನು ಪಡೆಯಿರಿ. ಪ್ರಿಯರೊಡನೆ ಪ್ರೀತಿಯಿಂದ ನಡೆದುಕೊಳ್ಳಿ. ಏಕೆಂದರೆ ರಾಜಾ ಯುಧಿಷ್ಠಿರನು ಜಯಕ್ಕೆ ಕಾತರನಾಗಿದ್ದಾನೆ.

05058021a ಋಣಮೇತತ್ಪ್ರವೃದ್ಧಂ ಮೇ ಹೃದಯಾನ್ನಾಪಸರ್ಪತಿ|

05058021c ಯದ್ಗೋವಿಂದೇತಿ ಚುಕ್ರೋಶ ಕೃಷ್ಣಾ ಮಾಂ ದೂರವಾಸಿನಂ||

05058022a ತೇಜೋಮಯಂ ದುರಾಧರ್ಷಂ ಗಾಂಡೀವಂ ಯಸ್ಯ ಕಾರ್ಮುಕಂ|

05058022c ಮದ್ದ್ವಿತೀಯೇನ ತೇನೇಹ ವೈರಂ ವಃ ಸವ್ಯಸಾಚಿನಾ||

ನಾನು ದೂರದಲ್ಲಿರುವಾಗ ಕೃಷ್ಣೆಯು “ಗೋವಿಂದ!” ಎಂದು ಶೋಕದಿಂದ ಕೂಗಿ ಕರೆದಿದ್ದುದರ, ಯಾರ ಕಾರ್ಮುಕವು ತೇಜೋಮಯ, ದುರಾಧರ್ಷ ಗಾಂಡೀವವೋ ಆ ಸವ್ಯಸಾಚಿ ನನ್ನ ಎರಡನೆಯವನೊಡನೆ ನೀವೇನು ವೈರ ಸಾಧಿಸಿದ್ದೀರೋ ಅವುಗಳ ಋಣವು ಬೆಳೆದು ನನ್ನ ಹೃದಯವನ್ನು ಆವರಿಸಿದೆ.

05058023a ಮದ್ದ್ವಿತೀಯಂ ಪುನಃ ಪಾರ್ಥಂ ಕಃ ಪ್ರಾರ್ಥಯಿತುಮಿಚ್ಚತಿ|

05058023c ಯೋ ನ ಕಾಲಪರೀತೋ ವಾಪ್ಯಪಿ ಸಾಕ್ಷಾತ್ಪುರಂದರಃ||

ನನಗೆ ಎರಡನೆಯವನಾದ ಪಾರ್ಥನನ್ನು ಯಾರುತಾನೇ - ಅವನು ಸಾಕ್ಷಾತ್ ಪುರಂದರನೇ ಆಗಿದ್ದರೂ - ಅವನ ಕಾಲವು ಮುಗಿದಿಲ್ಲವಾಗಿದ್ದರೆ ಎದುರಿಸಲು ಬಯಸುತ್ತಾನೆ?

05058024a ಬಾಹುಭ್ಯಾಮುದ್ವಹೇದ್ಭೂಮಿಂ ದಹೇತ್ಕ್ರುದ್ಧ ಇಮಾಃ ಪ್ರಜಾಃ|

05058024c ಪಾತಯೇತ್ತ್ರಿದಿವಾದ್ದೇವಾನ್ಯೋಽರ್ಜುನಂ ಸಮರೇ ಜಯೇತ್||

ಅರ್ಜುನನನ್ನು ಸಮರದಲ್ಲಿ ಯಾರು ಗೆಲ್ಲುತ್ತಾನೋ ಅವನು ಎರಡೂ ಬಾಹುಗಳಿಂದ ಭೂಮಿಯನ್ನು ಎತ್ತಿ ಹಿಡಿಯಬಹುದು, ಕೃದ್ಧನಾಗಿ ಈ ಪ್ರಜೆಗಳನ್ನು ಸುಟ್ಟುಬಿಡಬಲ್ಲನು, ಮತ್ತು ದೇವತೆಗಳೊಂದಿಗೆ ದಿವಿಯನ್ನು ಕೆಳಗೆ ಬೀಳಿಸಿಯಾನು.

05058025a ದೇವಾಸುರಮನುಷ್ಯೇಷು ಯಕ್ಷಗಂಧರ್ವಭೋಗಿಷು|

05058025c ನ ತಂ ಪಶ್ಯಾಮ್ಯಹಂ ಯುದ್ಧೇ ಪಾಂಡವಂ ಯೋಽಭ್ಯಯಾದ್ರಣೇ||

ರಣದಲ್ಲಿ ಪಾಂಡವನೊಂದಿಗೆ ಯುದ್ಧಮಾಡಿ ಎದುರಿಸುವವನನ್ನು ದೇವಾಸುರಮನುಷ್ಯರಲ್ಲಿ, ಯಕ್ಷ-ಗಂಧರ್ವ-ನಾಗರಲ್ಲಿ ನಾನು ಕಾಣಲಾರೆ.

05058026a ಯತ್ತದ್ವಿರಾಟನಗರೇ ಶ್ರೂಯತೇ ಮಹದದ್ಭುತಂ|

05058026c ಏಕಸ್ಯ ಚ ಬಹೂನಾಂ ಚ ಪರ್ಯಾಪ್ತಂ ತನ್ನಿದರ್ಶನಂ||

ವಿರಾಟನಗರದಲ್ಲಿ ನಡೆದ ಮಹಾ ಅದ್ಭುತದ ಕುರಿತು ಏನು ಕೇಳಿದ್ದೇವೋ - ಓರ್ವನೇ ಬಹುಯೋಧರನ್ನು ಎದುರಿಸಿದುದು - ಅದೇ ಇದಕ್ಕೆ ನಿದರ್ಶನವು.

05058027a ಏಕೇನ ಪಾಂಡುಪುತ್ರೇಣ ವಿರಾಟನಗರೇ ಯದಾ|

05058027c ಭಗ್ನಾಃ ಪಲಾಯಂತ ದಿಶಃ ಪರ್ಯಾಪ್ತಂ ತನ್ನಿದರ್ಶನಂ||

ವಿರಾಟನಗರದಲ್ಲಿ ಪಾಂಡುಪುತ್ರನೊಬ್ಬನಿಂದಲೇ ಎದುರಿಸಲ್ಪಟ್ಟಾಗ, ಭಗ್ನರಾಗಿ ದಿಕ್ಕುಗಳಲ್ಲಿ ಪಲಾಯನ ಮಾಡಿದುದೇ ಅದಕ್ಕೆ ನಿದರ್ಶನವು.

05058028a ಬಲಂ ವೀರ್ಯಂ ಚ ತೇಜಶ್ಚ ಶೀಘ್ರತಾ ಲಘುಹಸ್ತತಾ|

05058028c ಅವಿಷಾದಶ್ಚ ಧೈರ್ಯಂ ಚ ಪಾರ್ಥಾನ್ನಾನ್ಯತ್ರ ವಿದ್ಯತೇ||

ಪಾರ್ಥನಲ್ಲಿರುವ ಬಲ, ವೀರ್ಯ, ತೇಜಸ್ಸು, ಶೀಘ್ರತೆ, ಕೈಚಳಕ, ಆಯಾಸಗೊಳ್ಳದಿರುವಿಕೆ, ಮತ್ತು ಧೈರ್ಯವು ಬೇರೆ ಯಾರಲ್ಲಿಯೂ ಇದ್ದುದು ಗೊತ್ತಿಲ್ಲ.””

05058029 ಸಂಜಯ ಉವಾಚ|

05058029a ಇತ್ಯಬ್ರವೀದ್ಧೃಷೀಕೇಶಃ ಪಾರ್ಥಮುದ್ಧರ್ಷಯನ್ಗಿರಾ|

05058029c ಗರ್ಜನ್ಸಮಯವರ್ಷೀವ ಗಗನೇ ಪಾಕಶಾಸನಃ||

ಸಂಜಯನು ಹೇಳಿದನು: “ಹೀಗೆ ಗಗನದಲ್ಲಿ ಪಾಕಶಾಸನನು ಮಳೆಸುರಿಸುವಾಗ ಕೇಳಿಬರುವ ಗುಡುಗಿನ ಧ್ವನಿಯಲ್ಲಿ ಪಾರ್ಥನನ್ನು ಉತ್ತೇಜಿಸುವ ಈ ಮಾತುಗಳನ್ನಾಡಿದನು.

05058030a ಕೇಶವಸ್ಯ ವಚಃ ಶ್ರುತ್ವಾ ಕಿರೀಟೀ ಶ್ವೇತವಾಹನಃ|

05058030c ಅರ್ಜುನಸ್ತನ್ಮಹದ್ವಾಕ್ಯಮಬ್ರವೀಲ್ಲೋಮಹರ್ಷಣ||

ಕೇಶವನ ಮಾತುಗಳನ್ನು ಕೇಳಿ ಶ್ವೇತವಾಹನ ಕಿರೀಟಿ ಅರ್ಜುನನು ಆ ಲೋಮಹರ್ಷಣ ಮಹಾಮಾತನ್ನು ಆಡಿದನು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಶ್ರೀಕೃಷ್ಣವಾಕ್ಯಕಥನೇ ಅಷ್ಟಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಶ್ರೀಕೃಷ್ಣವಾಕ್ಯಕಥನದಲ್ಲಿ ಐವತ್ತೆಂಟನೆಯ ಅಧ್ಯಾಯವು.

Related image

Comments are closed.