Udyoga Parva: Chapter 53

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೩

ಸಂಜಯ ವಾಕ್ಯ

ಪಾಂಡವರನ್ನು ಮೋಸಗೊಳಿಸಿ ವಧಿಸಲು ಮುಂದಾಗಿರುವ ದುರ್ಯೋಧನ ಮತ್ತು ಅವನ ಅನುಯಾಯಿಗಳನ್ನು ತಡೆಯಬೇಕೆಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು (೧-೧೯).

05053001 ಸಂಜಯ ಉವಾಚ|

05053001a ಏವಮೇತನ್ಮಹಾರಾಜ ಯಥಾ ವದಸಿ ಭಾರತ|

05053001c ಯುದ್ಧೇ ವಿನಾಶಃ ಕ್ಷತ್ರಸ್ಯ ಗಾಂಡೀವೇನ ಪ್ರದೃಶ್ಯತೇ||

ಸಂಜಯನು ಹೇಳಿದನು: “ಮಹಾರಾಜ! ಭಾರತ! ನೀನು ಹೇಳಿದಂತೆಯೇ ಆಗುವುದು. ಯುದ್ಧದಲ್ಲಿ ಗಾಂಡೀವದಿಂದ ಕ್ಷತ್ರಿಯರ ವಿನಾಶವು ಕಾಣುತ್ತಿದೆ.

05053002a ಇದಂ ತು ನಾಭಿಜಾನಾಮಿ ತವ ಧೀರಸ್ಯ ನಿತ್ಯಶಃ|

05053002c ಯತ್ಪುತ್ರವಶಮಾಗಚ್ಚೇಃ ಸತ್ತ್ವಜ್ಞಾಃ ಸವ್ಯಸಾಚಿನಃ||

ಆದರೆ ನಿನ್ನ ಬುದ್ಧಿಯು ನನಗೆ ಅರ್ಥವಾಗುತ್ತಿಲ್ಲ. ಸವ್ಯಸಾಚಿಯ ಸತ್ವವನ್ನು ತಿಳಿದೂ ಕೂಡ ನೀನು ನಿತ್ಯವೂ ನಿನ್ನ ಮಗನ ವಶವಾಗುತ್ತಿದ್ದೀಯೆ.

05053003a ನೈಷ ಕಾಲೋ ಮಹಾರಾಜ ತವ ಶಶ್ವತ್ಕೃತಾಗಸಃ|

05053003c ತ್ವಯಾ ಹ್ಯೇವಾದಿತಃ ಪಾರ್ಥಾ ನಿಕೃತಾ ಭರತರ್ಷಭ||

ಮಹಾರಾಜ! ಭರತರ್ಷಭ! ಮೊದಲಿನಿಂದಲೂ ಪಾರ್ಥರಿಗೆ ನೀನು ಕೆಟ್ಟದ್ದನ್ನೇ ಮಾಡಿದ್ದೀಯೆ. ಈಗ ಅವುಗಳ ಕುರಿತು ಪಶ್ಚಾತ್ತಾಪ ಪಡುವ ಕಾಲವಲ್ಲ.

05053004a ಪಿತಾ ಶ್ರೇಷ್ಠಃ ಸುಹೃದ್ಯಶ್ಚ ಸಮ್ಯಕ್ಪ್ರಣಿಹಿತಾತ್ಮವಾನ್|

05053004c ಆಸ್ಥೇಯಂ ಹಿ ಹಿತಂ ತೇನ ನ ದ್ರೋಗ್ಧಾ ಗುರುರುಚ್ಯತೇ||

ತಂದೆಯ ಸ್ಥಾನದಲ್ಲಿರುವವನು ಯಾವಾಗಲೂ ಸ್ನೇಹಿತನಾಗಿರಬೇಕು, ಮತ್ತು ಒಳ್ಳೆಯದನ್ನೇ ಬಯಸಬೇಕು. ಆದರೆ ಅವರ ಹಿತವನ್ನು ಬಯಸದವನನ್ನು ಹಿರಿಯರ ಸ್ಥಾನದಲ್ಲಿರಬಾರದೆಂದು ಹೇಳುತ್ತಾರೆ.

05053005a ಇದಂ ಜಿತಮಿದಂ ಲಬ್ಧಮಿತಿ ಶ್ರುತ್ವಾ ಪರಾಜಿತಾನ್|

05053005c ದ್ಯೂತಕಾಲೇ ಮಹಾರಾಜ ಸ್ಮಯಸೇ ಸ್ಮ ಕುಮಾರವತ್||

ಮಹಾರಾಜ! ದ್ಯೂತದ ಸಮಯದಲ್ಲಿ ಅವರು ಸೋತುದನ್ನು ಕೇಳಿದಾಗ ನೀನು ಬಾಲಕನಂತೆ ನಗುತ್ತಾ “ಇದನ್ನು ಗೆದ್ದೆವು! ಇದು ದೊರಕಿತು!” ಎಂದು ಹೇಳಿದ್ದೆ.

05053006a ಪರುಷಾಣ್ಯುಚ್ಯಮಾನಾನ್ಸ್ಮ ಪುರಾ ಪಾರ್ಥಾನುಪೇಕ್ಷಸೇ|

05053006c ಕೃತ್ಸ್ನಂ ರಾಜ್ಯಂ ಜಯಂತೀತಿ ಪ್ರಪಾತಂ ನಾನುಪಶ್ಯಸಿ||

ಇಡೀ ರಾಜ್ಯವನ್ನು ಗೆದ್ದರು ಎಂಬ ಸಂತೋಷದಲ್ಲಿ ಪಾರ್ಥರಿಗೆ ಕಠೋರವಾಗಿ ಮಾತನಾಡುತ್ತಿದ್ದಾಗ ನೀನು ಉಪೇಕ್ಷಿಸಲಿಲ್ಲ. ನಿನ್ನ ಮುಂದಿರುವ ಪ್ರಪಾತವು ನಿನಗೆ ಕಾಣಲಿಲ್ಲ.

05053007a ಪಿತ್ರ್ಯಂ ರಾಜ್ಯಂ ಮಹಾರಾಜ ಕುರವಸ್ತೇ ಸಜಾಂಗಲಾಃ|

05053007c ಅಥ ವೀರೈರ್ಜಿತಾಂ ಭೂಮಿಮಖಿಲಾಂ ಪ್ರತ್ಯಪದ್ಯಥಾಃ||

ಮಹಾರಾಜ! ಕುರುಜಂಗಲವು ಮಾತ್ರ ನಿನ್ನ ಪಿತ್ರಾರ್ಜಿತ ರಾಜ್ಯವಾಗಿತ್ತು. ಆ ವೀರರು ಗೆದ್ದನಂತರವೇ ನಿನಗೆ ಈ ಅಖಿಲ ಭೂಮಿಯೂ ದೊರಕಿತು.

05053008a ಬಾಹುವೀರ್ಯಾರ್ಜಿತಾ ಭೂಮಿಸ್ತವ ಪಾರ್ಥೈರ್ನಿವೇದಿತಾ|

05053008c ಮಯೇದಂ ಕೃತಮಿತ್ಯೇವ ಮನ್ಯಸೇ ರಾಜಸತ್ತಮ||

ರಾಜಸತ್ತಮ! ಪಾಂಡವರು ತಮ್ಮ ಬಾಹುವೀರ್ಯದಿಂದ ಗೆದ್ದ ಭೂಮಿಯನ್ನು ನಿನಗೆ ಒಪ್ಪಿಸಿದ್ದಾರೆ. ಆದರೆ ನೀನು ಇವೆಲ್ಲವನ್ನೂ ನಾನೇ ಗೆದ್ದಿದ್ದೇನೆ ಎಂದು ತಿಳಿದುಕೊಂಡಿದ್ದೀಯೆ.

05053009a ಗ್ರಸ್ತಾನ್ಗಂಧರ್ವರಾಜೇನ ಮಜ್ಜತೋ ಹ್ಯಪ್ಲವೇಽಂಭಸಿ|

05053009c ಆನಿನಾಯ ಪುನಃ ಪಾರ್ಥಃ ಪುತ್ರಾಂಸ್ತೇ ರಾಜಸತ್ತಮ||

ರಾಜಸತ್ತಮ! ನಿನ್ನ ಪುತ್ರರು ಗಂಧರ್ವರಾಜನಿಂದ ಸೆರೆಹಿಡಿಯಲ್ಪಟ್ಟು ದೋಣಿಯಿಲ್ಲದೇ ಸಾಗರದಲ್ಲಿ ತೇಲುತ್ತಿರುವಂತಿರುವಾಗ ಪಾರ್ಥನೇ ಅವರನ್ನು ಹಿಂದಿರುಗಿ ಪಡೆದು ತಂದನು.

05053010a ಕುಮಾರವಚ್ಚ ಸ್ಮಯಸೇ ದ್ಯೂತೇ ವಿನಿಕೃತೇಷು ಯತ್|

05053010c ಪಾಂಡವೇಷು ವನಂ ರಾಜನ್ಪ್ರವ್ರಜತ್ಸು ಪುನಃ ಪುನಃ||

ದ್ಯೂತದಲ್ಲಿ ಮೋಸಗೊಂಡು ಪಾಂಡವರು ವನಕ್ಕೆ ಹೊರಡುವಾಗ, ರಾಜನ್! ಬಾಲಕನಂತೆ ನೀನು ಪುನಃ ಪುನಃ ನಗುತ್ತಿದ್ದೆ.

05053011a ಪ್ರವರ್ಷತಃ ಶರವ್ರಾತಾನರ್ಜುನಸ್ಯ ಶಿತಾನ್ಬಹೂನ್|

05053011c ಅಪ್ಯರ್ಣವಾ ವಿಶುಷ್ಯೇಯುಃ ಕಿಂ ಪುನರ್ಮಾಂಸಯೋನಯಃ||

ಅರ್ಜುನನು ಹರಿತ ಬಾಣಗಳ ಭಾರೀ ಮಳೆಯನ್ನು ಸುರಿಸುವಾಗ ಸಾಗರದ ನೀರೂ ಬತ್ತಿಹೋಗುತ್ತದೆ. ಇನ್ನು ಮಾಂಸಯೋನಿಯಲ್ಲಿ ಜನಿಸಿದ ಮನುಷ್ಯರು ಯಾವ ಲೆಖ್ಕಕ್ಕೆ?

05053012a ಅಸ್ಯತಾಂ ಫಲ್ಗುನಃ ಶ್ರೇಷ್ಠೋ ಗಾಂಡೀವಂ ಧನುಷಾಂ ವರಂ|

05053012c ಕೇಶವಃ ಸರ್ವಭೂತಾನಾಂ ಚಕ್ರಾಣಾಂ ಚ ಸುದರ್ಶನಂ||

ಬಿಲ್ಗಾರರಲ್ಲಿ ಫಲ್ಗುನನು ಶ್ರೇಷ್ಠ. ಧನುಸ್ಸುಗಳಲ್ಲಿ ಗಾಂಡೀವವು ಶ್ರೇಷ್ಠ. ಸರ್ವಭೂತಗಳಲ್ಲಿ ಕೇಶವ ಮತ್ತು ಚಕ್ರಗಳಲ್ಲಿ ಸುದರ್ಶನವು ಶ್ರೇಷ್ಠ.

05053013a ವಾನರೋ ರೋಚಮಾನಶ್ಚ ಕೇತುಃ ಕೇತುಮತಾಂ ವರಃ|

05053013c ಏವಮೇತಾನಿ ಸರಥೋ ವಹಂ ಶ್ವೇತಹಯೋ ರಣೇ|

05053013e ಕ್ಷಪಯಿಷ್ಯತಿ ನೋ ರಾಜನ್ಕಾಲಚಕ್ರಮಿವೋದ್ಯತಂ||

ರಾಜನ್! ಧ್ವಜಗಳಲ್ಲಿ ವಾನರನು ಕಾಣುತ್ತಿರುವ ಧ್ವಜವು ಶ್ರೇಷ್ಠ. ಇವೆಲ್ಲವುಗಳನ್ನೂ ಹೊಂದಿರುವ ಶ್ವೇತಹಯಗಳು ಒಯ್ಯುವ ರಥದಿಂದ ರಣದಲ್ಲಿ ಅವನು ಕಾಲಚಕ್ರವು ಉರುಳುವಂತೆ ನಮ್ಮನ್ನು ನಾಶಗೊಳಿಸುತ್ತಾನೆ.

05053014a ತಸ್ಯಾದ್ಯ ವಸುಧಾ ರಾಜನ್ನಿಖಿಲಾ ಭರತರ್ಷಭ|

05053014c ಯಸ್ಯ ಭೀಮಾರ್ಜುನೌ ಯೋಧೌ ಸ ರಾಜಾ ರಾಜಸತ್ತಮ||

ಭರತರ್ಷಭ! ರಾಜಸತ್ತಮ! ಯಾರೊಡನೆ ಭೀಮಾರ್ಜುನರು ಯೋಧರಾಗಿದ್ದಾರೋ ಅವನೇ ರಾಜ. ಅಖಿಲ ವಸುಧೆಯೂ ಅವನದ್ದೇ ಆಗುತ್ತದೆ.

05053015a ತಥಾ ಭೀಮಹತಪ್ರಾಯಾಂ ಮಜ್ಜಂತೀಂ ತವ ವಾಹಿನೀಂ|

05053015c ದುರ್ಯೋಧನಮುಖಾ ದೃಷ್ಟ್ವಾ ಕ್ಷಯಂ ಯಾಸ್ಯಂತಿ ಕೌರವಾಃ||

ನಿನ್ನ ಸೇನೆಯು ಭೀಮನಿಂದ ಪುಡಿಯಾಗಿ ಹತಪ್ರಾಯವಾಗುವುದನ್ನು ನೋಡುತ್ತಾ ದುರ್ಯೋಧನನ ನಾಯಕತ್ವದಲ್ಲಿರುವ ಕೌರವರು ನಾಶ ಹೋಗುತ್ತಾರೆ.

05053016a ನ ಹಿ ಭೀಮಭಯಾದ್ಭೀತಾ ಲಪ್ಸ್ಯಂತೇ ವಿಜಯಂ ವಿಭೋ|

05053016c ತವ ಪುತ್ರಾ ಮಹಾರಾಜ ರಾಜಾನಶ್ಚಾನುಸಾರಿಣಃ||

ಮಹಾರಾಜ! ವಿಭೋ! ನಿನ್ನ ಪುತ್ರರು ಮತ್ತು ಅವರನ್ನು ಅನುಸರಿಸುವ ರಾಜರು ಭೀಮನ ಭಯದಿಂದ ಭೀತರಾಗಿ ವಿಜಯವನ್ನು ಹೊಂದಲಾರರು.

05053017a ಮತ್ಸ್ಯಾಸ್ತ್ವಾಮದ್ಯ ನಾರ್ಚಂತಿ ಪಾಂಚಾಲಾಶ್ಚ ಸಕೇಕಯಾಃ|

05053017c ಶಾಲ್ವೇಯಾಃ ಶೂರಸೇನಾಶ್ಚ ಸರ್ವೇ ತ್ವಾಮವಜಾನತೇ|

05053017e ಪಾರ್ಥಂ ಹ್ಯೇತೇ ಗತಾಃ ಸರ್ವೇ ವೀರ್ಯಜ್ಞಾಸ್ತಸ್ಯ ಧೀಮತಃ||

ಈಗ ಮತ್ಸ್ಯರು, ಪಾಂಚಾಲರು ಮತ್ತು ಜೊತೆಗೆ ಕೇಕಯರು ನಿನ್ನನ್ನು ಗೌರವಿಸುವುದಿಲ್ಲ. ಶಾಲ್ವರು ಮತ್ತು ಶೂರಸೇನರು ಎಲ್ಲರೂ ನಿನ್ನನ್ನು ಕೀಳಾಗಿ ಕಾಣುತ್ತಾರೆ. ಏಕೆಂದರೆ ಅವರೆಲ್ಲರೂ ವೀರ್ಯಜ್ಞ ಧೀಮತ ಪಾರ್ಥನ ಕಡೆ ಹೋಗಿದ್ದಾರೆ.

05053018a ಅನರ್ಹಾನೇವ ತು ವಧೇ ಧರ್ಮಯುಕ್ತಾನ್ವಿಕರ್ಮಣಾ|

05053018c ಸರ್ವೋಪಾಯೈರ್ನಿಯಂತವ್ಯಃ ಸಾನುಗಃ ಪಾಪಪೂರುಷಃ|

05053018e ತವ ಪುತ್ರೋ ಮಹಾರಾಜ ನಾತ್ರ ಶೋಚಿತುಮರ್ಹಸಿ||

ಮಹಾರಾಜ! ಅನರ್ಹರಾದ ಆ ಧರ್ಮಯುಕ್ತರನ್ನು ವಧಿಸಲು ಮತ್ತು ಮೋಸಗೊಳಿಸಲು ಮುಂದುವರೆದಿರುವ ನಿನ್ನ ಪುತ್ರ ಪಾಪಪುರುಷನನ್ನು ಅವನ ಅನುಯಾಯಿಗಳೊಂದಿಗೆ ಸರ್ವೋಪಾಯಗಳನ್ನು ಬಳಸಿ ತಡೆಯಬೇಕಾಗಿದೆ. ಅದರಲ್ಲಿ ಶೋಕಿಸಬಾರದು.

05053019a ದ್ಯೂತಕಾಲೇ ಮಯಾ ಚೋಕ್ತಂ ವಿದುರೇಣ ಚ ಧೀಮತಾ|

05053019c ಯದಿದಂ ತೇ ವಿಲಪಿತಂ ಪಾಂಡವಾನ್ಪ್ರತಿ ಭಾರತ|

05053019e ಅನೀಶೇನೇವ ರಾಜೇಂದ್ರ ಸರ್ವಮೇತನ್ನಿರರ್ಥಕಂ||

ದ್ಯೂತಕಾಲದಲ್ಲಿ ನಾನೂ, ಧೀಮತ ವಿದುರನೂ ಹೇಳಿದ್ದೆವು. ಭಾರತ! ರಾಜೇಂದ್ರ! ಇದಕ್ಕೆಲ್ಲ ನೀನು ಹೊಣೆಗಾರನಲ್ಲ ಎಂದು ಪಾಂಡವರಿಗೋಸ್ಕರ ಈ ರೀತಿ ವಿಲಪಿಸುವುದು ನಿರರ್ಥಕ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ತ್ರಿಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಐವತ್ಮೂರನೆಯ ಅಧ್ಯಾಯವು.

Related image

Comments are closed.