Udyoga Parva: Chapter 51

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೧

ಅರ್ಜುನನ ಕುರಿತು ತನಗಿದ್ದ ಭಯವನ್ನು ಧೃತರಾಷ್ಟ್ರನು ಸಭೆಯಲ್ಲಿ ಹೇಳಿಕೊಂಡಿದುದು (೧-೧೯).

05051001 ಧೃತರಾಷ್ಟ್ರ ಉವಾಚ|

05051001a ಯಸ್ಯ ವೈ ನಾನೃತಾ ವಾಚಃ ಪ್ರವೃತ್ತಾ ಅನುಶುಶ್ರುಮಃ|

05051001c ತ್ರೈಲೋಕ್ಯಮಪಿ ತಸ್ಯ ಸ್ಯಾದ್ಯೋದ್ಧಾ ಯಸ್ಯ ಧನಂಜಯಃ||

ಧೃತರಾಷ್ಟ್ರನು ಹೇಳಿದನು: “ಯಾರ ತುಟಿಗಳಿಂದ ನಾವು ಒಂದಾದರೂ ಸುಳ್ಳು ಮಾತನ್ನು ಕೇಳಿರದ ಮತ್ತು ಯಾರ ಯೋಧನು ಧನಂಜಯನೋ ಅವನು ತ್ರಿಲೋಕಗಳನ್ನೂ ಆಳಬಹುದು.

05051002a ತಸ್ಯೈವ ಚ ನ ಪಶ್ಯಾಮಿ ಯುಧಿ ಗಾಂಡೀವಧನ್ವನಃ|

05051002c ಅನಿಶಂ ಚಿಂತಯಾನೋಽಪಿ ಯಃ ಪ್ರತೀಯಾದ್ರಥೇನ ತಂ||

ಹಗಲೂ ರಾತ್ರಿ ನಾನು ಚಿಂತಿಸಿದರೂ ಯುದ್ಧದಲ್ಲಿ ಆ ಗಾಂಡೀವ ಧನ್ವಿಯನ್ನು ರಥದಲ್ಲಿ ಎದುರಿಸುವ ಯಾರನ್ನೂ ಕಾಣಲಾರೆ!

05051003a ಅಸ್ಯತಃ ಕರ್ಣಿನಾಲೀಕಾನ್ಮಾರ್ಗಣಾನ್ ಹೃದಯಚ್ಚಿದಃ|

05051003c ಪ್ರತ್ಯೇತಾ ನ ಸಮಃ ಕಶ್ಚಿದ್ಯುಧಿ ಗಾಂಡೀವಧನ್ವನಃ||

ಯುದ್ಧದಲ್ಲಿ ಗಾಂಡೀವಧನ್ವಿಯು ಹೃದಯಗಳನ್ನು ಭೇದಿಸುವ ಕರ್ಣಿ-ನಾಲೀಕಗಳನ್ನು ಮತ್ತು ಮಾರ್ಗಣಗಳನ್ನು ಪ್ರತಿದ್ವಂದಿಸುವ ಸರಿಸಮನು ಯಾರೂ ಇಲ್ಲ.

05051004a ದ್ರೋಣಕರ್ಣೌ ಪ್ರತೀಯಾತಾಂ ಯದಿ ವೀರೌ ನರರ್ಷಭೌ|

05051004c ಮಾಹಾತ್ಮ್ಯಾತ್ಸಂಶಯೋ ಲೋಕೇ ನ ತ್ವಸ್ತಿ ವಿಜಯೋ ಮಮ||

ಒಂದುವೇಳೆ ವೀರ ನರರ್ಷಭರಾದ ದ್ರೋಣ-ಕರ್ಣರು ಅವನನ್ನು ಎದುರಿಸಿನಿಂತರೂ ಮಹಾತ್ಮರಾದ ಅವರಿಗೆ ಅಲ್ಪವೇ ಅವಕಾಶವಿರಬಹುದು. ನನಗೆ ವಿಜಯವು ಇಲ್ಲವೆಂಬುದರಲ್ಲಿ ಸಂಶಯವಿಲ್ಲ.

05051005a ಘೃಣೀ ಕರ್ಣಃ ಪ್ರಮಾದೀ ಚ ಆಚಾರ್ಯಃ ಸ್ಥವಿರೋ ಗುರುಃ|

05051005c ಸಮರ್ಥೋ ಬಲವಾನ್ಪಾರ್ಥೋ ದೃಢಧನ್ವಾ ಜಿತಕ್ಲಮಃ|

05051005e ಭವೇತ್ಸುತುಮುಲಂ ಯುದ್ಧಂ ಸರ್ವಶೋಽಪ್ಯಪರಾಜಯಃ||

ಕರ್ಣನು ಕನಿಕರವುಳ್ಳವನು ಮತ್ತು ಪ್ರಮಾದಕ್ಕೊಳಗಾಗುವನು. ಆಚಾರ್ಯನು ವೃದ್ಧ ಮತ್ತು ಗುರು. ಬಲವಾನ್ ಪಾರ್ಥನು ದೃಢಧನ್ವಿ ಮತ್ತು ಇಬ್ಬರನ್ನೂ ಗೆಲ್ಲಲು ಸಮರ್ಥ. ನಡೆಯುವ ತುಮಲ ಯುದ್ಧದಲ್ಲಿ ಎಲ್ಲರಿಗೂ ಪರಾಜಯವೇ ಆಗುತ್ತದೆ.

05051006a ಸರ್ವೇ ಹ್ಯಸ್ತ್ರವಿದಃ ಶೂರಾಃ ಸರ್ವೇ ಪ್ರಾಪ್ತಾ ಮಹದ್ಯಶಃ|

05051006c ಅಪಿ ಸರ್ವಾಮರೈಶ್ವರ್ಯಂ ತ್ಯಜೇಯುರ್ನ ಪುನರ್ಜಯಂ|

05051006e ವಧೇ ನೂನಂ ಭವೇಚ್ಚಾಂತಿಸ್ತಯೋರ್ವಾ ಫಲ್ಗುನಸ್ಯ ವಾ||

ಎಲ್ಲರೂ ಅಸ್ತ್ರವಿದರು, ಶೂರರು ಮತ್ತು ಎಲ್ಲರೂ ಮಹಾ ಯಶಸ್ಸನ್ನು ಪಡೆದಿದ್ದಾರೆ. ಎಲ್ಲರೂ ಅಮರ ಐಶ್ವರ್ಯವನ್ನು ತ್ಯಜಿಸಿಯಾರು ಆದರೆ ಜಯವನ್ನಲ್ಲ. ಇವರಿಬ್ಬರ ಅಥವಾ ಅರ್ಜುನನ ವಧೆಯಾದರೆ ಮಾತ್ರ ಶಾಂತಿಯುಂಟಾಗುತ್ತದೆ.

05051007a ನ ತು ಜೇತಾರ್ಜುನಸ್ಯಾಸ್ತಿ ಹಂತಾ ಚಾಸ್ಯ ನ ವಿದ್ಯತೇ|

05051007c ಮನ್ಯುಸ್ತಸ್ಯ ಕಥಂ ಶಾಮ್ಯೇನ್ಮಂದಾನ್ಪ್ರತಿ ಯ ಉತ್ಥಿತಃ||

ಆದರೂ ಅರ್ಜುನನ್ನು ಗೆಲ್ಲುವವನಾಗಲೀ ಕೊಲ್ಲುವವನಾಗಲೀ ಇಲ್ಲಿರುವುದು ತಿಳಿದಿಲ್ಲ. ನನ್ನ ಮಂದಬುದ್ಧಿಯವರ ಪ್ರತಿ ಹೆಚ್ಚಾಗಿರುವ ಅವನ ಕೋಪವನ್ನು ಹೇಗೆ ತಣಿಸಬಹುದು?

05051008a ಅನ್ಯೇಽಪ್ಯಸ್ತ್ರಾಣಿ ಜಾನಂತಿ ಜೀಯಂತೇ ಚ ಜಯಂತಿ ಚ|

05051008c ಏಕಾಂತವಿಜಯಸ್ತ್ವೇವ ಶ್ರೂಯತೇ ಫಲ್ಗುನಸ್ಯ ಹ||

ಇತರರೂ ಕೂಡ ಅಸ್ತ್ರಗಳನ್ನು ತಿಳಿದಿದ್ದಾರೆ. ಅವರು ಗೆದ್ದಿದ್ದಾರೆ ಮತ್ತು ಸೋತಿದ್ದಾರೆ ಕೂಡ. ಆದರೆ ಫಲ್ಗುನನಿಗೆ ವಿಜಯವೊಂದನ್ನೇ ಕೇಳಿದ್ದೇವೆ.

05051009a ತ್ರಯಸ್ತ್ರಿಂಶತ್ಸಮಾಹೂಯ ಖಾಂಡವೇಽಗ್ನಿಮತರ್ಪಯತ್|

05051009c ಜಿಗಾಯ ಚ ಸುರಾನ್ಸರ್ವಾನ್ನಾಸ್ಯ ವೇದ್ಮಿ ಪರಾಜಯಂ||

ಅವನು ಮೂವತ್ತ್ಮೂರು ದೇವತೆಗಳನ್ನು ಎದುರಿಸಿ ಖಾಂಡವದಲ್ಲಿ ಅಗ್ನಿಯನ್ನು ತೃಪ್ತಪಡಿಸಿದನು. ಅವನು ಸುರರೆಲ್ಲರನ್ನೂ ಗೆದ್ದನು. ಅವನಿಗೆ ಪರಾಜಯವಾದುದು ನನಗೆ ತಿಳಿದಿಲ್ಲ.

05051010a ಯಸ್ಯ ಯಂತಾ ಹೃಷೀಕೇಶಃ ಶೀಲವೃತ್ತಸಮೋ ಯುಧಿ|

05051010c ಧ್ರುವಸ್ತಸ್ಯ ಜಯಸ್ತಾತ ಯಥೇಂದ್ರಸ್ಯ ಜಯಸ್ತಥಾ||

ಅಯ್ಯಾ! ಯುದ್ಧದಲ್ಲಿ ಯಾರ ಸಾರಥಿಯು ಶೀಲ, ನಡತೆಗಳಲ್ಲಿ ಸರಿಸಮನಾಗಿರುವ ಹೃಷೀಕೇಶನೋ ಅವನ ಜಯವು, ಇಂದ್ರನಿಗೆ ಜಯವು ಹೇಗೋ ಹಾಗೆ ನಿಶ್ಚಯವಾದುದು.

05051011a ಕೃಷ್ಣಾವೇಕರಥೇ ಯತ್ತಾವಧಿಜ್ಯಂ ಗಾಂಡಿವಂ ಧನುಃ|

05051011c ಯುಗಪತ್ತ್ರೀಣಿ ತೇಜಾಂಸಿ ಸಮೇತಾನ್ಯನುಶುಶ್ರುಮಃ||

ಕೃಷ್ಣರಿಬ್ಬರು ಮತ್ತು ಗಾಂಡೀವ ಧನುಸ್ಸು ಈ ಮೂರೂ ತೇಜಸ್ಸುಗಳೂ ಒಂದೇ ರಥದಲ್ಲಿ ಸೇರಿಕೊಂಡಿವೆ ಎಂದು ಕೇಳಿದ್ದೇವೆ.

05051012a ನೈವ ನೋಽಸ್ತಿ ಧನುಸ್ತಾದೃಂ ನ ಯೋದ್ಧಾ ನ ಚ ಸಾರಥಿಃ|

05051012c ತಚ್ಚ ಮಂದಾ ನ ಜಾನಂತಿ ದುರ್ಯೋಧನವಶಾನುಗಾಃ||

ಅದರಂಥಹ ಧನುಸ್ಸಾಗಲೀ ಅವರಂಥಹ ಸಾರಥಿಯಾಗಲೀ ಯೋಧನಾಗಲೀ ನಮ್ಮಲ್ಲಿಲ್ಲ. ಇದು ಮಂದಬುದ್ಧಿ ದುರ್ಯೋಧನನಿಗೆ ಮತ್ತು ಅವನ ಅನುಯಾಯಿಗಳಿಗೆ ತಿಳಿದಿಲ್ಲ.

05051013a ಶೇಷಯೇದಶನಿರ್ದೀಪ್ತೋ ನಿಪತನ್ಮೂರ್ಧ್ನಿ ಸಂಜಯ|

05051013c ನ ತು ಶೇಷಂ ಶರಾಃ ಕುರ್ಯುರಸ್ತಾಸ್ತಾತ ಕಿರೀಟಿನಾ||

ಮೇಲಿಂದ ಬಿದ್ದ ಸಿಡಿಲು ತಲೆಯ ಮೇಲೆ ಸ್ವಲ್ಪವನ್ನಾದರೂ ಉಳಿಸೀತು. ಆದರೆ ಸಂಜಯ! ಕಿರೀಟಿಯು ಪ್ರಯೋಗಿಸಿದ ಬಾಣವು ಏನನ್ನೂ ಉಳಿಸುವುದಿಲ್ಲ.

05051014a ಅಪಿ ಚಾಸ್ಯನ್ನಿವಾಭಾತಿ ನಿಘ್ನನ್ನಿವ ಚ ಫಲ್ಗುನಃ|

05051014c ಉದ್ಧರನ್ನಿವ ಕಾಯೇಭ್ಯಃ ಶಿರಾಂಸಿ ಶರವೃಷ್ಟಿಭಿಃ||

ಫಲ್ಗುನನು ಈಗಲೇ ಕೊಲ್ಲುತ್ತಿರುವಂತೆ, ತನ್ನ ಶರವೃಷ್ಟಿಯಿಂದ ಕಾಯಗಳಿಂದ ತಲೆಗಳನ್ನು ಕತ್ತರಿಸುತ್ತಿರುವುದು ಕಂಡುಬರುತ್ತದೆ.

05051015a ಅಪಿ ಬಾಣಮಯಂ ತೇಜಃ ಪ್ರದೀಪ್ತಮಿವ ಸರ್ವತಃ|

05051015c ಗಾಂಡೀವೇದ್ಧಂ ದಹೇತಾಜೌ ಪುತ್ರಾಣಾಂ ಮಮ ವಾಹಿನೀಂ||

ಎಲ್ಲೆಡೆಯೂ ಸುಡುತ್ತಿರುವ ತೇಜಸ್ಸಿನಿಂದ ಉರಿಯುತ್ತಿರುವ ಅವನ ಗಾಂಡೀವದಿಂದ ಹೊರಬಂದ ಬಾಣಗುಂಪುಗಳು ನನ್ನ ಮಕ್ಕಳ ಸೇನೆಯನ್ನು ಸುಡದೆಯೇ ಇರುತ್ತದೆಯೇ?

05051016a ಅಪಿ ಸಾ ರಥಘೋಷೇಣ ಭಯಾರ್ತಾ ಸವ್ಯಸಾಚಿನಃ|

05051016c ವಿತ್ರಸ್ತಾ ಬಹುಲಾ ಸೇನಾ ಭಾರತೀ ಪ್ರತಿಭಾತಿ ಮೇ||

ಆ ಸವ್ಯಸಾಚಿಯ ರಥಘೋಷದಿಂದಲೇ ಭಯಾರ್ತರಾಗಿ ಭಾರತ ಸೇನೆಯು ಬಹುಸಂಖ್ಯೆಗಳಲ್ಲಿ ನಡುಗುತ್ತಿರುವಂತೆ ನನಗೆ ತೋರುತ್ತಿದೆ.

05051017a ಯಥಾ ಕಕ್ಷಂ ದಹತ್ಯಗ್ನಿಃ ಪ್ರವೃದ್ಧಃ ಸರ್ವತಶ್ಚರನ್|

05051017c ಮಹಾರ್ಚಿರನಿಲೋದ್ಧೂತಸ್ತದ್ವದ್ಧಕ್ಷ್ಯತಿ ಮಾಮಕಾನ್||

ಒಣಗಿದ ಮರಗಳನ್ನು ಸುಟ್ಟು ಹೆಚ್ಚಾಗಿ ಎಲ್ಲಕಡೆ ಪಸರಿಸುವಂತೆ, ಗಾಳಿಯಿಂದ ಬೆಂಕಿಯು ಭುಗಿಲೆದ್ದು ಸುಡುವಂತೆ ಅವನು ನನ್ನವರನ್ನು ಸುಟ್ಟು ಹಾಕುತ್ತಾನೆ.

05051018a ಯದೋದ್ವಮನ್ನಿಶಿತಾನ್ಬಾಣಸಂಘಾನ್

         ಸ್ಥಾತಾತತಾಯೀ ಸಮರೇ ಕಿರೀಟೀ|

05051018c ಸೃಷ್ಟೋಽಂತಕಃ ಸರ್ವಹರೋ ವಿಧಾತ್ರಾ

         ಯಥಾ ಭವೇತ್ತದ್ವದವಾರಣೀಯಃ||

ನಿಶಿತ ಬಾಣಸಂಘಗಳನ್ನು ಉಗುಳುತ್ತಾ ಸಮರಕ್ಕೆ ಸನ್ನದ್ಧನಾಗಿ ನಿಂತ ಕಿರೀಟಿಯು, ವಿಧಾತ್ರನು ಸೃಷ್ಟಿಸಿದ, ಸರ್ವವನ್ನೂ ಕಳೆಯುವ ಅಂತಕನಂತೆ ತಪ್ಪಿಸಿಕೊಳ್ಳಲಾರದಂತೆ ಇರುತ್ತಾನೆ.

05051019a ಯದಾ ಹ್ಯಭೀಕ್ಷ್ಣಂ ಸುಬಹೂನ್ಪ್ರಕಾರಾಂ

         ಶ್ರೋತಾಸ್ಮಿ ತಾನಾವಸಥೇ ಕುರೂಣಾಂ|

05051019c ತೇಷಾಂ ಸಮಂತಾಚ್ಚ ತಥಾ ರಣಾಗ್ರೇ

         ಕ್ಷಯಃ ಕಿಲಾಯಂ ಭರತಾನುಪೈತಿ||

ಈಗ ಕುರುಗಳಿರುವಲ್ಲಿ, ಅವರು ಸೇರಿರುವಲ್ಲಿ, ರಣದ ಮೊದಲು ಬಹಳ ಪ್ರಕಾರದ ಕುರುಹಗಳ ಕುರಿತು ಕೇಳಿದಾಗ, ಭರತರ ಕ್ಷಯವು ಬಂದಿದೆ ಎಂದು ನನಗನ್ನಿಸುತ್ತದೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಐವತ್ತೊಂದನೆಯ ಅಧ್ಯಾಯವು.

Related image

Comments are closed.