Udyoga Parva: Chapter 32

ಉದ್ಯೋಗ ಪರ್ವ: ಸಂಜಯಯಾನ ಪರ್ವ

೩೨

ಸಂಜಯನು ಹಸ್ತಿನಾಪುರಕ್ಕೆ ಹಿಂದಿರುಗಿದ ರಾತ್ರಿಯೇ ಧೃತರಾಷ್ಟ್ರನನ್ನು ಭೇಟಿಮಾಡಿದುದು

ಹಸ್ತಿನಾಪುರಕ್ಕೆ ಹಿಂದಿರುಗಿದ ರಾತ್ರಿಯೇ ಸಂಜಯನು ಅಪ್ಪಣೆಯನ್ನು ಪಡೆದು ಧೃತರಾಷ್ಟ್ರನನ್ನು ಭೇಟಿಯಾದುದು (೧-೬). ಯುಧಿಷ್ಠಿರನು ಧರ್ಮದಿಂದ ಹೊಳೆಯುತ್ತಿದ್ದರೆ ಧೃತರಾಷ್ಟ್ರನು ಪಾಪಕೃತ್ಯಗಳಿಂದ ಮಂಕಾಗಿದ್ದಾನೆಂದೂ, ಪ್ರಯಾಣದಿಂದ ಬಳಲಿರುವುದರಿಂದ ಬೆಳಿಗ್ಗೆ ಸಭೆಯಲ್ಲಿ ಯುಧಿಷ್ಠಿರನ ಸಂದೇಶವನ್ನು ತಿಳಿಸುತ್ತೇನೆಂದೂ ಹೇಳಿ ಸಂಜಯನು ಹೊರಟು ಹೋದುದು (೭-೩೦).

05032001 ವೈಶಂಪಾಯನ ಉವಾಚ|

05032001a ಅನುಜ್ಞಾತಃ ಪಾಂಡವೇನ ಪ್ರಯಯೌ ಸಂಜಯಸ್ತದಾ|

05032001c ಶಾಸನಂ ಧೃತರಾಷ್ಟ್ರಸ್ಯ ಸರ್ವಂ ಕೃತ್ವಾ ಮಹಾತ್ಮನಃ||

ವೈಶಂಪಾಯನನು ಹೇಳಿದನು: “ಆಗ ಮಹಾತ್ಮ ಧೃತರಾಷ್ಟ್ರನು ವಿಧಿಸಿದ ಎಲ್ಲ ಕೆಲಸಗಳನ್ನೂ ಪೂರೈಸಿ, ಸಂಜಯನು ಪಾಂಡವರಿಂದ ಅನುಜ್ಞೆಯನ್ನು ಪಡೆದು ಹೊರಟನು.

05032002a ಸಂಪ್ರಾಪ್ಯ ಹಾಸ್ತಿನಪುರಂ ಶೀಘ್ರಂ ಚ ಪ್ರವಿವೇಶ ಹ|

05032002c ಅಂತಃಪುರಮುಪಸ್ಥಾಯ ದ್ವಾಃಸ್ಥಂ ವಚನಮಬ್ರವೀತ್||

ಹಾಸ್ತಿನಪುರವು ಹತ್ತಿರವಾದ ಕೂಡಲೇ ಶೀಘ್ರವಾಗಿ ಪ್ರವೇಶಿಸಿ, ಅಂತಃಪುರವನ್ನು ತಲುಪಿ, ದ್ವಾರದಲ್ಲಿ ನಿಂತಿರುವವನಿಗೆ ಹೇಳಿದನು:

05032003a ಆಚಕ್ಷ್ವ ಮಾಂ ಧೃತರಾಷ್ಟ್ರಾಯ ದ್ವಾಃಸ್ಥ

         ಉಪಾಗತಂ ಪಾಂಡವಾನಾಂ ಸಕಾಶಾತ್|

05032003c ಜಾಗರ್ತಿ ಚೇದಭಿವದೇಸ್ತ್ವಂ ಹಿ ಕ್ಷತ್ತಃ

         ಪ್ರವಿಶೇಯಂ ವಿದಿತೋ ಭೂಮಿಪಸ್ಯ||

“ಧ್ವಾರಪಾಲಕನೇ! ನಾನು ಪಾಂಡವರ ಬಳಿಯಿಂದ ಬಂದಿದ್ದೇನೆ ಎಂದು ಧೃತರಾಷ್ಟ್ರನಿಗೆ ಹೇಳು. ರಾಜನು ಎಚ್ಚರವಾಗಿದ್ದರೆ ಮಾತ್ರ, ನಾನು ಒಳಬರಲು ಬಯಸುತ್ತೇನೆ ಎಂದು ಹೇಳಬೇಕು.”

05032004 ದ್ವಾಃಸ್ಥ ಉವಾಚ|

05032004a ಸಂಜಯೋಽಯಂ ಭೂಮಿಪತೇ ನಮಸ್ತೇ

         ದಿದೃಕ್ಷಯಾ ದ್ವಾರಮುಪಾಗತಸ್ತೇ|

05032004c ಪ್ರಾಪ್ತೋ ದೂತಃ ಪಾಂಡವಾನಾಂ ಸಕಾಶಾತ್

         ಪ್ರಶಾಧಿ ರಾಜನ್ಕಿಮಯಂ ಕರೋತು||

ದ್ವಾರಪಾಲಕನು ಹೇಳಿದನು: “ಭೂಮಿಪತಿಗೆ ನಮಸ್ಕಾರ! ನಿನ್ನನ್ನು ಕಾಣಲು ಸಂಜಯನು ದ್ವಾರದಲ್ಲಿ ನಿಂತಿದ್ದಾನೆ. ಪಾಂಡವರ ಕಡೆಯಿಂದ ಸಂದೇಶವನ್ನು ತೆಗೆದುಕೊಂಡು ಬಂದಿದ್ದಾನೆ. ರಾಜನ್! ನಾನೇನು ಮಾಡಬೇಕೆಂದು ಆಜ್ಞಾಪಿಸು.”

05032005 ಧೃತರಾಷ್ಟ್ರ ಉವಾಚ|

05032005a ಆಚಕ್ಷ್ವ ಮಾಂ ಸುಖಿನಂ ಕಾಲ್ಯಮಸ್ಮೈ

         ಪ್ರವೇಶ್ಯತಾಂ ಸ್ವಾಗತಂ ಸಂಜಯಾಯ|

05032005c ನ ಚಾಹಮೇತಸ್ಯ ಭವಾಮ್ಯಕಾಲ್ಯಃ

         ಸ ಮೇ ಕಸ್ಮಾದ್ದ್ವಾರಿ ತಿಷ್ಠೇತ ಕ್ಷತ್ತಃ||

ಧೃತರಾಷ್ಟ್ರನು ಹೇಳಿದನು: “ಅವನಿಗೆ ಹೇಳು - ನಾನು ಸುಖಿಯಾಗಿದ್ದೇನೆ ಮತ್ತು ಈಗ ಸಮಯವಿದೆ. ಅವನು ಪ್ರವೇಶಿಸಲಿ. ಸಂಜಯನಿಗೆ ಸ್ವಾಗತ. ನಿನ್ನನ್ನು ಯಾವ ಸಮಯದಲ್ಲಿಯೂ ಕಾಣಬಯಸುತ್ತೇನೆ. ಪ್ರವೇಶವು ಎಂದೂ ನಿಷೇದವಾಗಿರದ ಅವನು ಏಕೆ ಹೊರಗೆ ನಿಂತಿದ್ದಾನೆ?””

05032006 ವೈಶಂಪಾಯನ ಉವಾಚ|

05032006a ತತಃ ಪ್ರವಿಶ್ಯಾನುಮತೇ ನೃಪಸ್ಯ

         ಮಹದ್ವೇಶ್ಮ ಪ್ರಾಜ್ಞಾಶೂರಾರ್ಯಗುಪ್ತಂ|

05032006c ಸಿಂಹಾಸನಸ್ಥಂ ಪಾರ್ಥಿವಮಾಸಸಾದ

         ವೈಚಿತ್ರವೀರ್ಯಂ ಪ್ರಾಂಜಲಿಃ ಸೂತಪುತ್ರಃ||

ವೈಶಂಪಾಯುನನು ಹೇಳಿದನು: “ಆಗ ನೃಪನ ಅನುಮತಿಯಂತೆ ಸೂತಪುತ್ರನು ವಿಶಾಲ ಅರಮನೆಯನ್ನು ಪ್ರವೇಶಿಸಿ, ಪ್ರಾಜ್ಞರೂ, ಶೂರರೂ ಮತ್ತು ಆರ್ಯರಿಂದ ರಕ್ಷಿಸಲ್ಪಟ್ಟ ಸಿಂಹಾಸನಸ್ಥ ವೈಚಿತ್ರವೀರ್ಯ ಪಾರ್ಥಿವನ ಬಳಿಸಾರಿ ಕೈಮುಗಿದನು.

05032007 ಸಂಜಯ ಉವಾಚ|

05032007a ಸಂಜಯೋಽಹಂ ಭೂಮಿಪತೇ ನಮಸ್ತೇ

         ಪ್ರಾಪ್ತೋಽಸ್ಮಿ ಗತ್ವಾ ನರದೇವ ಪಾಂಡವಾನ್|

05032007c ಅಭಿವಾದ್ಯ ತ್ವಾಂ ಪಾಂಡುಪುತ್ರೋ ಮನಸ್ವೀ

         ಯುಧಿಷ್ಠಿರಃ ಕುಶಲಂ ಚಾನ್ವಪೃಚ್ಚತ್||

ಸಂಜಯನು ಹೇಳಿದನು: “ಭೂಮಿಪತೇ ನಮಸ್ಕಾರ! ನಾನು ಸಂಜಯ! ನರದೇವ! ಪಾಂಡವರಲ್ಲಿಗೆ ಹೋಗಿ ಬಂದಿದ್ದೇನೆ. ನಿನಗೆ ಅಭಿವಂದಿಸಿ ಮನಸ್ವೀ ಪಾಂಡುಪುತ್ರ ಯುಧಿಷ್ಠಿರನು ಕುಶಲವನ್ನೂ ಕೇಳಿದ್ದಾನೆ.

05032008a ಸ ತೇ ಪುತ್ರಾನ್ಪೃಚ್ಚತಿ ಪ್ರೀಯಮಾಣಃ

         ಕಚ್ಚಿತ್ಪುತ್ರೈಃ ಪ್ರೀಯಸೇ ನಪ್ತೃಭಿಶ್ಚ|

05032008c ತಥಾ ಸುಹೃದ್ಭಿಃ ಸಚಿವೈಶ್ಚ ರಾಜನ್

         ಯೇ ಚಾಪಿ ತ್ವಾಮುಪಜೀವಂತಿ ತೈಶ್ಚ||

ಅವನು ಪ್ರೀತಿಯಿಂದ ನಿನ್ನ ಮಕ್ಕಳನ್ನು ಕೇಳಿದ್ದಾನೆ. ಮತ್ತು ರಾಜನ್! ನೀನು ನಿನ್ನ ಮಕ್ಕಳು, ಮೊಮ್ಮಕ್ಕಳು, ಆಪ್ತರು, ಸ್ನೇಹಿತರು, ಸಚಿವರು ಮತ್ತು ನಿನ್ನನ್ನು ಅವಲಂಬಿಸಿರುವ ಎಲ್ಲರೊಡನೆ ಸಂತೋಷದಿಂದಿರುವೆಯಾ ಎಂದೂ ಕೇಳಿದ್ದಾನೆ.”

05032009 ಧೃತರಾಷ್ಟ್ರ ಉವಾಚ|

05032009a ಅಭ್ಯೇತ್ಯ ತ್ವಾಂ ತಾತ ವದಾಮಿ ಸಂಜಯ

         ಅಜಾತಶತ್ರುಂ ಚ ಸುಖೇನ ಪಾರ್ಥಂ|

05032009c ಕಚ್ಚಿತ್ಸ ರಾಜಾ ಕುಶಲೀ ಸಪುತ್ರಃ

         ಸಹಾಮಾತ್ಯಃ ಸಾನುಜಃ ಕೌರವಾಣಾಂ||

ಧೃತರಾಷ್ಟ್ರನು ಹೇಳಿದನು: “ಮಗೂ ಸಂಜಯ! ನಾನು ನಿನ್ನಲ್ಲಿ ಕೇಳುತ್ತಿದ್ದೇನೆ - ಅಜಾತಶತ್ರು ಪಾರ್ಥನು ಸುಖದಿಂದ ಇದ್ದಾನೆಯೇ? ರಾಜನು ಪುತ್ರರೊಂದಿಗೆ, ಅಮಾತ್ಯರೊಂದಿಗೆ, ಕೌರವರ ಅನುಜರೊಂದಿಗೆ ಕುಶಲನಾಗಿದ್ದಾನೆ ತಾನೇ?”

05032010 ಸಂಜಯ ಉವಾಚ|

05032010a ಸಹಾಮಾತ್ಯಃ ಕುಶಲೀ ಪಾಂಡುಪುತ್ರೋ

         ಭೂಯಶ್ಚಾತೋ ಯಚ್ಚ ತೇಽಗ್ರೇ ಮನೋಽಭೂತ್|

05032010c ನಿರ್ಣಿಕ್ತಧರ್ಮಾರ್ಥಕರೋ ಮನಸ್ವೀ

         ಬಹುಶ್ರುತೋ ದೃಷ್ಟಿಮಾಂ ಶೀಲವಾಂಶ್ಚ||

ಸಂಜಯನು ಹೇಳಿದನು: “ಅಮಾತ್ಯರೊಂದಿಗೆ ಪಾಂಡುಪುತ್ರನು ಕುಶಲನಾಗಿದ್ದಾನೆ. ಹಿಂದೆ ತನ್ನದಾಗಿಸಿಕೊಂಡಿದ್ದುದನ್ನು ಪಡೆಯಲು ಬಯಸುತ್ತಾನೆ. ಕೆಟ್ಟದ್ದನ್ನು ಏನನ್ನೂ ಮಾಡದೆಯೇ ಅವನು ಧರ್ಮ ಮತ್ತು ಅರ್ಥಗಳನ್ನು ಅರಸುತ್ತಾನೆ. ಅವನು ಮನಸ್ವೀ, ಬಹುಶ್ರುತ, ದೃಷ್ಟಿವಂತ ಮತ್ತು ಶೀಲವಂತ.

05032011a ಪರಂ ಧರ್ಮಾತ್ಪಾಂಡವಸ್ಯಾನೃಶಂಸ್ಯಂ

         ಧರ್ಮಃ ಪರೋ ವಿತ್ತಚಯಾನ್ಮತೋಽಸ್ಯ|

05032011c ಸುಖಪ್ರಿಯೇ ಧರ್ಮಹೀನೇ ನ ಪಾರ್ಥೋ

         ಽನುರುಧ್ಯತೇ ಭಾರತ ತಸ್ಯ ವಿದ್ಧಿ||

ಆ ಪಾಂಡವನಿಗೆ ಅಹಿಂಸೆಯು ಪರಮ ಧರ್ಮ. ವಿತ್ತವನ್ನು ಒಟ್ಟುಮಾಡುವುದಕ್ಕಿಂತಲೂ ಅದು ಪರಮ ಧರ್ಮವೆಂದು ಅವನ ಮತ. ಪಾರ್ಥನು ಸುಖಪ್ರಿಯನಲ್ಲ, ಧರ್ಮಹೀನನಲ್ಲ. ಭಾರತ! ಅವನ ಬುದ್ಧಿಯು ಏಳಿಗೆಯ ಮುಖವಾಗಿದೆ.

05032012a ಪರಪ್ರಯುಕ್ತಃ ಪುರುಷೋ ವಿಚೇಷ್ಟತೇ

         ಸೂತ್ರಪ್ರೋತಾ ದಾರುಮಯೀವ ಯೋಷಾ|

05032012c ಇಮಂ ದೃಷ್ಟ್ವಾ ನಿಯಮಂ ಪಾಂಡವಸ್ಯ

         ಮನ್ಯೇ ಪರಂ ಕರ್ಮ ದೈವಂ ಮನುಷ್ಯಾತ್||

ದಾರಕ್ಕೆ ಕಟ್ಟಲ್ಪಟ್ಟ ಮರದ ಗೊಂಬೆಯಂತೆ ಪುರುಷನು ಇನ್ನೊಂದರ ಕೈಯಲ್ಲಿರುತ್ತಾನೆ. ಪಾಂಡವನ ಈ ಕಷ್ಟಗಳನ್ನು ನೋಡಿ ಕರ್ಮವು ಮನುಷ್ಯನಿಗಿಂತಲೂ ದೊಡ್ಡದಾದ ದೈವ ಎಂದೆನಿಸುತ್ತದೆ.

05032013a ಇಮಂ ಚ ದೃಷ್ಟ್ವಾ ತವ ಕರ್ಮದೋಷಂ

         ಪಾದೋದರ್ಕಂ ಘೋರಮವರ್ಣರೂಪಂ|

05032013c ಯಾವನ್ನರಃ ಕಾಮಯತೇಽತಿಕಾಲ್ಯಂ

         ತಾವನ್ನರೋಽಯಂ ಲಭತೇ ಪ್ರಶಂಸಾಂ||

ನಿನ್ನ ಈ ಅತಿ ಪಾಪವನ್ನು ತರುವ, ಹೇಳಲಸಾಧ್ಯ ಘೋರರೂಪಿನ ಕರ್ಮದೋಷವನ್ನು ನೋಡಿದರೆ ಎಲ್ಲಿಯವರೆಗೆ ಮನುಷ್ಯನು ತೋರುವಿಕೆಗೆ ಇರುವುದನ್ನು ಬಯಸುತ್ತಾನೋ ಅಲ್ಲಿಯ ವರೆಗೆ ಅವನಿಗೆ ಪ್ರಶಂಸೆಯು ದೊರೆಯುತ್ತದೆ.

05032014a ಅಜಾತಶತ್ರುಸ್ತು ವಿಹಾಯ ಪಾಪಂ

         ಜೀರ್ಣಾಂ ತ್ವಚಂ ಸರ್ಪ ಇವಾಸಮರ್ಥಾಂ|

05032014c ವಿರೋಚತೇಽಹಾರ್ಯವೃತ್ತೇನ ಧೀರೋ

         ಯುಧಿಷ್ಠಿರಸ್ತ್ವಯಿ ಪಾಪಂ ವಿಸೃಜ್ಯ||

ಅಜೀರ್ಣವಾದ ಅಸಮರ್ಥವಾದ ಚರ್ಮವನ್ನು ಸರ್ಪವು ತೊರೆಯುವಂತೆ ಆ ಧೀರ ಅಜಾತಶತ್ರುವಾದರೋ ಪಾಪವನ್ನು ತೊರೆದು ಹೊಳೆಯುತ್ತಿದ್ದಾನೆ. ಯುಧಿಷ್ಠಿರನು ಪಾಪವನ್ನು ನಿನಗೆ ಬಿಟ್ಟಿದ್ದಾನೆ.

05032015a ಅಂಗಾತ್ಮನಃ ಕರ್ಮ ನಿಬೋಧ ರಾಜನ್

         ಧರ್ಮಾರ್ಥಯುಕ್ತಾದಾರ್ಯವೃತ್ತಾದಪೇತಂ|

05032015c ಉಪಕ್ರೋಶಂ ಚೇಹ ಗತೋಽಸಿ ರಾಜನ್

         ನೋಹೇಶ್ಚ ಪಾಪಂ ಪ್ರಸಜೇದಮುತ್ರ||

ರಾಜನ್! ಧರ್ಮಾರ್ಥಯುಕ್ತವಲ್ಲದ, ಆರ್ಯರ ನಡತೆಗೆ ವಿರೋಧವಾಗಿರುವ ನಿನ್ನ ಕೆಲಸವನ್ನು ನೀನೇ ತಿಳಿದುಕೋ. ರಾಜನ್! ಕೇವಲ ಕೆಟ್ಟ ಹೆಸರನ್ನು ನೀನು ಗಳಿಸಿದ್ದೀಯೆ. ಇದನ್ನು ನೀನು ಅಳಿಸಲಾರೆ. ಇದು ನಿನ್ನೊಡನೆಯೇ ಬರುತ್ತದೆ.

05032016a ಸ ತ್ವಮರ್ಥಂ ಸಂಶಯಿತಂ ವಿನಾ ತೈಃ

         ಆಶಂಸಸೇ ಪುತ್ರವಶಾನುಗೋಽದ್ಯ|

05032016c ಅಧರ್ಮಶಬ್ದಶ್ಚ ಮಹಾನ್ಪೃಥಿವ್ಯಾಂ

         ನೇದಂ ಕರ್ಮ ತ್ವತ್ಸಮಂ ಭಾರತಾಗ್ರ್ಯ||

ಇಂದು ನೀನು ಪುತ್ರರ ವಶಕ್ಕೆ ಬಂದು ಅವರ ವಿನಾ ಈ ಸಂಶಯಯುಕ್ತವಾದ ಸಂಪತ್ತನ್ನು ಭೋಗಿಸಲು ಆಶಿಸುತ್ತಿರುವೆ. ನಿನ್ನ ಈ ಅಧರ್ಮದ ವಿಷಯವು ಮಹಾ ಪೃಥ್ವಿಯೆಲ್ಲೆಲ್ಲಾ ಹರಡಿದೆ. ಭಾರತಾಗ್ರ್ಯ! ಇದು ನಿನಗೆ ಸಮನಾದುದಲ್ಲ.

05032017a ಹೀನಪ್ರಜ್ಞೋ ದೌಷ್ಕುಲೇಯೋ ನೃಶಂಸೋ

         ದೀರ್ಘವೈರೀ ಕ್ಷತ್ರವಿದ್ಯಾಸ್ವಧೀರಃ|

05032017c ಏವಂಧರ್ಮಾ ನಾಪದಃ ಸಂತಿತೀರ್ಷೇದ್

         ಧೀನವೀರ್ಯೋ ಯಶ್ಚ ಭವೇದಶಿಷ್ಟಃ||

ತಿಳುವಳಿಕೆ ಇಲ್ಲದಿರುವವನಿಗೆ, ಕೆಟ್ಟ ಕುಲದಲ್ಲಿ ಹುಟ್ಟಿದವನಿಗೆ, ಕ್ರೂರನಾದವನಿಗೆ, ಬಹುಕಾಲ ವೈರವನ್ನು ಪ್ರತಿಪಾದಿಸುವವನಿಗೆ, ಕ್ಷತ್ರಿಯ ವಿದ್ಯೆಗಳಲ್ಲಿ ಅಧೀರನಾದವನಿಗೆ, ಈ ಗುರುತುಗಳಿರುವವನಿಗೆ ಮತ್ತು ಬುದ್ಧಿಯಿಲ್ಲದಿರುವ ಅವೀರ್ಯ ಅಶಿಕ್ಷಿತನಿಗೆ ಕಷ್ಟಗಳನ್ನು ಎದುರಿಸಲು ಸಾಧ್ಯವಾಗಲಾರದು.

05032018a ಕುಲೇ ಜಾತೋ ಧರ್ಮವಾನ್ಯೋ ಯಶಸ್ವೀ

         ಬಹುಶ್ರುತಃ ಸುಖಜೀವೀ ಯತಾತ್ಮಾ|

05032018c ಧರ್ಮಾರ್ಥಯೋರ್ಗ್ರಥಿತಯೋರ್ಬಿಭರ್ತಿ

         ನಾನ್ಯತ್ರ ದಿಷ್ಟಸ್ಯ ವಶಾದುಪೈತಿ||

ಉತ್ತಮ ಕುಲದಲ್ಲಿ ಹುಟ್ಟುವುದು, ಧರ್ಮವಂತನಾಗಿರುವುದು, ಯಶಸ್ವಿಯಾಗುವುದು, ಪ್ರಸಿದ್ಧನಾಗುವುದು, ಸುಖಜೀವಿಯಾಗಿರುವುದು, ಯತಾತ್ಮನಾಗಿರುವುದು, ಧರ್ಮ-ಅರ್ಥಗಳಲ್ಲಿ ಸಿಲುಕಿಕೊಂಡಿರುವವನ್ನು ಬಿಡಿಸಿಕೊಳ್ಳುವುದು - ಇವೆಲ್ಲವುಗಳಲ್ಲಿ ಅದೃಷ್ಟವಲ್ಲದೆ ಬೇರೆ ಯಾವುದರ ಕೈವಾಡವಿದೆ?

05032019a ಕಥಂ ಹಿ ಮಂತ್ರಾಗ್ರ್ಯಧರೋ ಮನೀಷೀ

         ಧರ್ಮಾರ್ಥಯೋರಾಪದಿ ಸಂಪ್ರಣೇತಾ|

05032019c ಏವಮ್ಯುಕ್ತಃ ಸರ್ವಮಂತ್ರೈರಹೀನೋ

         ಅನಾನೃಶಂಸ್ಯಂ ಕರ್ಮ ಕುರ್ಯಾದಮೂಢಃ||

ಬುದ್ಧಿವಂತರಾದ ಹಿರಿಯರಿಂದ ಸಲಹೆಗಳನ್ನು ಪಡೆದ, ಧರ್ಮ-ಅರ್ಥಗಳಲ್ಲಿ ಪ್ರಣೀತನಾದ, ಸರ್ವಮಂತ್ರಗಳಿಂದಲೂ ರಹಿತನಾಗಿರದ, ಅಮೂಢನು ಹೇಗೆ ತಾನೇ ಕ್ರೂರ ಕೃತ್ಯವನ್ನು ಮಾಡಬಹುದು?

05032020a ತವಾಪೀಮೇ ಮಂತ್ರವಿದಃ ಸಮೇತ್ಯ

         ಸಮಾಸತೇ ಕರ್ಮಸು ನಿತ್ಯಯುಕ್ತಾಃ|

05032020c ತೇಷಾಮಯಂ ಬಲವಾನ್ನಿಶ್ಚಯಶ್ಚ

         ಕುರುಕ್ಷಯಾರ್ಥೇ ನಿರಯೋ ವ್ಯಪಾದಿ||

ಇಲ್ಲಿ ಸೇರಿರುವ ಮಂತ್ರವಿದರು ನಿನ್ನನ್ನೇ ಬೆಂಬಲಿಸುತ್ತಿದ್ದಾರೆ ಮತ್ತು ನಿನ್ನ ಕೆಲಸದಲ್ಲಿಯೇ ನಿತ್ಯವೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಈ ಬಲವಾದ ನಿಶ್ಚಯದಿಂದ ಕುರುಕ್ಷಯವು ನಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

05032021a ಅಕಾಲಿಕಂ ಕುರವೋ ನಾಭವಿಷ್ಯನ್

         ಪಾಪೇನ ಚೇತ್ಪಾಪಮಜಾತಶತ್ರುಃ|

05032021c ಇಚ್ಚೇಜ್ಜಾತು ತ್ವಯಿ ಪಾಪಂ ವಿಸೃಜ್ಯ

         ನಿಂದಾ ಚೇಯಂ ತವ ಲೋಕೇಽಭವಿಷ್ಯತ್||

ಅಜಾತಶತ್ರುವು ಪಾಪದಿಂದ ಪಾಪವನ್ನು ಗೆಲ್ಲಲು ಅಕಾಲಿಕವಾಗಿ ಕುರುಗಳನ್ನು ನಾಶಪಡಿಸಬೇಕಾಗುವುದು. ನಿನಗೆ ಪಾಪವನ್ನೆಲ್ಲ ಬಿಟ್ಟುಕೊಟ್ಟು ಲೋಕದಲ್ಲಿ ನಿನ್ನ ನಿಂದೆಯೇ ನಡೆಯುವಂತೆ ಆಗುತ್ತದೆ.

05032022a ಕಿಮನ್ಯತ್ರ ವಿಷಯಾದೀಶ್ವರಾಣಾಂ

         ಯತ್ರ ಪಾರ್ಥಃ ಪರಲೋಕಂ ದದರ್ಶ|

05032022c ಅತ್ಯಕ್ರಾಮತ್ಸ ತಥಾ ಸಮ್ಮತಃ ಸ್ಯಾನ್

         ನ ಸಂಶಯೋ ನಾಸ್ತಿ ಮನುಷ್ಯಕಾರಃ||

ದೇವತೆಗಳು ಪಾರ್ಥನನ್ನು ಪರಲೋಕಕ್ಕೆ ಕರೆಯಿಸಿಕೊಂಡು ತೋರಿಸಿ ಸನ್ಮಾನಿಸಿದರು ಎನ್ನುವುದಕ್ಕೆ ಬೇರೆ ಏನಾದರೂ ಅರ್ಥವಿದೆಯೇ? ಅದು ಮನುಷ್ಯನು ಮಾಡಿದುದಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ.

05032023a ಏತಾನ್ಗುಣಾನ್ಕರ್ಮಕೃತಾನವೇಕ್ಷ್ಯ

         ಭಾವಾಭಾವೌ ವರ್ತಮಾನಾವನಿತ್ಯೌ|

05032023c ಬಲಿರ್ಹಿ ರಾಜಾ ಪಾರಮವಿಂದಮಾನೋ

         ನಾನ್ಯತ್ಕಾಲಾತ್ಕಾರಣಂ ತತ್ರ ಮೇನೇ||

ಕರ್ಮ ಮತ್ತು ಕೃತನ ಈ ಗುಣಗಳನ್ನು, ಭಾವಾಭಾವಗಳನ್ನು, ವರ್ತಮಾನ ಮತ್ತು ಹಿಂದೆ ನಡೆದವುಗಳನ್ನು ನೋಡಿಯೇ ರಾಜಾ ಬಲಿಯು ಆದಿ ಅಂತ್ಯಗಳನ್ನು ತಿಳಿಯಲಾರದೇ ಇವಕ್ಕೆ ಕಾಲವಲ್ಲದೇ ಬೇರೆ ಏನೂ ಅಲ್ಲ ಎಂದು ಅಭಿಪ್ರಾಯಪಟ್ಟನು.

05032024a ಚಕ್ಷುಃ ಶ್ರೋತ್ರೇ ನಾಸಿಕಾ ತ್ವಕ್ಚ ಜಿಹ್ವಾ

         ಜ್ಞಾನಸ್ಯೈತಾನ್ಯಾಯತನಾನಿ ಜಂತೋಃ|

05032024c ತಾನಿ ಪ್ರೀತಾನ್ಯೇವ ತೃಷ್ಣಾಕ್ಷಯಾಂತೇ

         ತಾನ್ಯವ್ಯಥೋ ದುಃಖಹೀನಃ ಪ್ರಣುದ್ಯಾತ್||

ಕಣ್ಣು, ಕಿವಿ, ಮೂಗು, ಚರ್ಮ ಮತ್ತು ನಾಲಿಗೆಗಳು ಜಂತುವಿನ ಜ್ಞಾನದ ಬಾಗಿಲುಗಳು. ಆಸೆಗಳು ಕ್ಷಯವಾಗಲು ಇವು ತಮ್ಮಷ್ಟಕ್ಕೆ ತಾವೇ ಸುಖದಿಂದ ಇರುತ್ತವೆ. ಆದುದರಿಂದ ಇವುಗಳನ್ನು ವ್ಯಥೆಯಿಲ್ಲದೇ ದುಃಖಪಡದೇ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

05032025a ನ ತ್ವೇವ ಮನ್ಯೇ ಪುರುಷಸ್ಯ ಕರ್ಮ

         ಸಂವರ್ತತೇ ಸುಪ್ರಯುಕ್ತಂ ಯಥಾವತ್|

05032025c ಮಾತುಃ ಪಿತುಃ ಕರ್ಮಣಾಭಿಪ್ರಸೂತಃ

         ಸಂವರ್ಧತೇ ವಿಧಿವದ್ಭೋಜನೇನ||

ಪುರುಷನು ಕರ್ಮಗಳನ್ನು ಸರಿಯಾಗಿ ಮಾಡಿದರೆ ಬೇಕಾದ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳುತ್ತಾರೆ. ತಂದೆ-ತಾಯಿಗಳ ಕರ್ಮದಿಂದ ಹುಟ್ಟಿದವನು ವಿಧಿವತ್ತಾದ ಆಹಾರಸೇವನೆಯಿಂದ ಬೆಳೆಯುತ್ತಾನೆ.

05032026a ಪ್ರಿಯಾಪ್ರಿಯೇ ಸುಖದುಃಖೇ ಚ ರಾಜನ್

         ನಿಂದಾಪ್ರಶಂಸೇ ಚ ಭಜೇತ ಏನಂ|

05032026c ಪರಸ್ತ್ವೇನಂ ಗರ್ಹಯತೇಽಪರಾಧೇ

         ಪ್ರಶಂಸತೇ ಸಾಧುವೃತ್ತಂ ತಮೇವ||

ರಾಜನ್! ಪ್ರಿಯವಾದುದು, ಅಪ್ರಿಯವಾದುದು, ಸುಖ, ದುಃಖ, ನಿಂದನೆ ಮತ್ತು ಪ್ರಶಂಸೆಗಳು ಇವನನ್ನು ಹಿಂಬಾಲಿಸುತ್ತವೆ. ಅಪರಾಧಮಾಡಿದಾಗ ಇತರರು ಇವನನ್ನು ಝರಿಯುತ್ತಾರೆ. ಒಳ್ಳೆಯದಾಗಿ ನಡೆದುಕೊಂಡರೆ ಅವನನ್ನೇ ಜನರು ಪ್ರಶಂಸಿಸುತ್ತಾರೆ.

05032027a ಸ ತ್ವಾ ಗರ್ಹೇ ಭಾರತಾನಾಂ ವಿರೋಧಾದ್

         ಅಂತೋ ನೂನಂ ಭವಿತಾಯಂ ಪ್ರಜಾನಾಂ|

05032027c ನೋ ಚೇದಿದಂ ತವ ಕರ್ಮಾಪರಾಧಾತ್

         ಕುರೂನ್ದಹೇತ್ಕೃಷ್ಣವರ್ತ್ಮೇವ ಕಕ್ಷಂ||

ಭಾರತರಲ್ಲಿನ ಮನಸ್ತಾಪಕ್ಕೆ ನಾನು ನಿನ್ನನ್ನೇ ಬೈಯ್ಯುತ್ತೇನೆ. ಇದು ನಿಜವಾಗಿಯೂ ನಿನ್ನ ಮಕ್ಕಳ ಅಂತ್ಯವೆನಿಸಿಕೊಳ್ಳುತ್ತದೆ. ನಿನ್ನ ಕರ್ಮಾಪರಾಧದಿಂದ ಒಣಕರಡದಂತೆ ಕುರುಗಳು ಸುಟ್ಟುಹೋಗದೇ ಇರಲಿ.

05032028a ತ್ವಮೇವೈಕೋ ಜಾತಪುತ್ರೇಷು ರಾಜನ್

         ವಶಂ ಗಂತಾ ಸರ್ವಲೋಕೇ ನರೇಂದ್ರ|

05032028c ಕಾಮಾತ್ಮನಾಂ ಶ್ಲಾಘಸೇ ದ್ಯೂತಕಾಲೇ

         ನಾನ್ಯಚ್ಚಮಾತ್ಪಶ್ಯ ವಿಪಾಕಮಸ್ಯ||

ರಾಜನ್! ನರೇಂದ್ರ! ಈ ಸರ್ವಲೋಕದಲ್ಲಿ ನೀನೊಬ್ಬನೇ ಹುಟ್ಟಿದ ಮಕ್ಕಳ ವಶನಾಗಿ ಹೋಗಿದ್ದೀಯೆ. ದ್ಯೂತಕಾಲದಲ್ಲಿ ನೀನು ಕಾಮಾತ್ಮನನ್ನು ಪ್ರಶಂಸಿಸಿದೆ. ಶಾಂತಿಯ ಹೊರತಾಗಿ ಬೇರೆ ಏನೂ ಇದರಿಂದ ಬಿಡುಗಡೆಯು ಕಾಣುವುದಿಲ್ಲ.

05032029a ಅನಾಪ್ತಾನಾಂ ಪ್ರಗ್ರಹಾತ್ತ್ವಂ ನರೇಂದ್ರ

         ತಥಾಪ್ತಾನಾಂ ನಿಗ್ರಹಾಚ್ಚೈವ ರಾಜನ್|

05032029c ಭೂಮಿಂ ಸ್ಫೀತಾಂ ದುರ್ಬಲತ್ವಾದನಂತಾಂ

         ನ ಶಕ್ತಸ್ತ್ವಂ ರಕ್ಷಿತುಂ ಕೌರವೇಯ||

ನರೇಂದ್ರ! ರಾಜನ್! ಕೌರವೇಯ! ಅನಾಪ್ತರನ್ನು ಸ್ವೀಕರಿಸಿ ಮತ್ತು ಹಾಗೆಯೇ ಆಪ್ತರನ್ನು ದೂರವಿಡಿಸಿ ದುರ್ಬಲನಾಗಿ ನೀನು ಈ ಅಪಾರ ಸಮೃದ್ಧ ಭೂಮಿಯನ್ನು ರಕ್ಷಿಸಲು ಅಸಮರ್ಥನಾಗಿದ್ದೀಯೆ.

05032030a ಅನುಜ್ಞಾತೋ ರಥವೇಗಾವಧೂತಃ

         ಶ್ರಾಂತೋ ನಿಪದ್ಯೇ ಶಯನಂ ನೃಸಿಂಹ|

05032030c ಪ್ರಾತಃ ಶ್ರೋತಾರಃ ಕುರವಃ ಸಭಾಯಾಂ

         ಅಜಾತಶತ್ರೋರ್ವಚನಂ ಸಮೇತಾಃ||

ನರಸಿಂಹ! ರಥವೇಗದಿಂದ ತುಂಬಾ ಬಳಲಿದ್ದೇನೆ. ಮಲಗಿಕೊಳ್ಳಲು ನಿನ್ನ ಅನುಮತಿಯನ್ನು ಕೇಳುತ್ತಿದ್ದೇನೆ. ಬೆಳಿಗ್ಗೆ ಸಭೆಯಲ್ಲಿ ಕುರುಗಳು ಒಟ್ಟಿಗೇ ಅಜಾತಶತ್ರುವಿನ ಮಾತನ್ನು ಕೇಳುವರು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಧೃತರಾಷ್ಟ್ರಸಂಜಯಸಂವಾದೇ ದ್ವಾತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಧೃತರಾಷ್ಟ್ರಸಂಜಯಸಂವಾದದಲ್ಲಿ ಮೂವತ್ತೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೦/೧೦೦, ಅಧ್ಯಾಯಗಳು-೬೯೫/೧೯೯೫, ಶ್ಲೋಕಗಳು-೨೨೫೯೭/೭೩೭೮೪

Related image

Comments are closed.