Udyoga Parva: Chapter 27

ಉದ್ಯೋಗ ಪರ್ವ: ಸಂಜಯಯಾನ ಪರ್ವ

೨೭

ಯುಧಿಷ್ಠಿರನಿಗೆ ಸಂಜಯನ ಉಪದೇಶ

ಧರ್ಮಮಾರ್ಗವನ್ನು ಬಿಟ್ಟು, ಕೋಪಕ್ಕೆ ಸಿಲುಕಿ, ಜೀವನಾಶಕ್ಕೆ ಕಾರಣನಾಗಬೇಡವೆಂದೂ “ಒಂದುವೇಳೆ ನಿನ್ನ ಅಮಾತ್ಯರ ಬಯಕೆಯನ್ನು ಪೂರೈಸಲು ನೀನು ಈ ತಪ್ಪನ್ನು ಮಾಡಲು ಹೊರಟಿರುವೆಯಾದರೆ ನಿನ್ನಲ್ಲಿರುವ ಎಲ್ಲವನ್ನೂ ಅವರಿಗೆ ಕೊಟ್ಟು ಓಡಿ ಹೋಗು! ದೇವಯಾನದ ನಿನ್ನ ದಾರಿಯನ್ನು ತಪ್ಪಿ ನಡೆಯಬೇಡ!” ಎಂದು ಸಂಜಯನು ಯುಧಿಷ್ಠಿರನಿಗೆ ಉಪದೇಶಿಸುವುದು (೧-೨೭).

05027001 ಸಂಜಯ ಉವಾಚ|

05027001a ಧರ್ಮೇ ನಿತ್ಯಾ ಪಾಂಡವ ತೇ ವಿಚೇಷ್ಟಾ

         ಲೋಕೇ ಶ್ರುತಾ ದೃಶ್ಯತೇ ಚಾಪಿ ಪಾರ್ಥ|

05027001c ಮಹಾಸ್ರಾವಂ ಜೀವಿತಂ ಚಾಪ್ಯನಿತ್ಯಂ

         ಸಂಪಶ್ಯ ತ್ವಂ ಪಾಂಡವ ಮಾ ವಿನೀನಶಃ||

ಸಂಜಯನು ಹೇಳಿದನು: “ಪಾರ್ಥ! ಪಾಂಡವ! ನೀನು ನಿತ್ಯವೂ ಧರ್ಮದಲ್ಲಿಯೇ ನಿರತನಾಗಿದ್ದೀಯೆ ಎಂದು ಲೋಕವು ಹೇಳುತ್ತದೆ. ಕಾಣುತ್ತದೆ ಕೂಡ. ಮಹಾ ಪ್ರವಾಹದ ಈ ಜೀವಿತವು ಅನಿತ್ಯ. ಅದರ ನಾಶವನ್ನು ನೀನು ಕಾಣ ಬಯಸಬೇಡ!

05027002a ನ ಚೇದ್ಭಾಗಂ ಕುರವೋಽನ್ಯತ್ರ ಯುದ್ಧಾತ್

         ಪ್ರಯಚ್ಚಂತೇ ತುಭ್ಯಮಜಾತಶತ್ರೋ|

05027002c ಭೈಕ್ಷಚರ್ಯಾಮಂಧಕವೃಷ್ಣಿರಾಜ್ಯೇ

         ಶ್ರೇಯೋ ಮನ್ಯೇ ನ ತು ಯುದ್ಧೇನ ರಾಜ್ಯಂ||

ಅಜಾತಶತ್ರೋ! ಯುದ್ಧವಿಲ್ಲದೇ ಕುರುಗಳು ನಿನ್ನ ಭಾಗವನ್ನು ಕೊಡದೇ ಇದ್ದರೆ, ನೀನು ಯುದ್ಧದಿಂದ ರಾಜ್ಯವನ್ನು ಪಡೆಯುವುದಕ್ಕಿಂತ ಅಂಧಕ-ವೃಷ್ಣಿ ರಾಜ್ಯದಲ್ಲಿ ಭಿಕ್ಷಾಟನೆಯನ್ನು ಮಾಡಿ ಜೀವುಸುವುದು ಶ್ರೇಯವೆಂದು ನನಗನ್ನಿಸುತ್ತದೆ.

05027003a ಅಲ್ಪಕಾಲಂ ಜೀವಿತಂ ಯನ್ಮನುಷ್ಯೇ

         ಮಹಾಸ್ರಾವಂ ನಿತ್ಯದುಃಖಂ ಚಲಂ ಚ|

05027003c ಭೂಯಶ್ಚ ತದ್ವಯಸೋ ನಾನುರೂಪಂ

         ತಸ್ಮಾತ್ಪಾಪಂ ಪಾಂಡವ ಮಾ ಪ್ರಸಾರ್ಷೀಃ||

ಪಾಂಡವ! ಈ ಮನುಷ್ಯ ಜೀವನವು ಅಲ್ಪಕಾಲದ ಮಹಾಪ್ರವಾಹವು. ನಿತ್ಯವೂ ದುಃಖವನ್ನು ತರುವಂಥಹುದು. ಚಂಚಲವಾದುದು. ಬದುಕಿನ ಆಸೆಯನ್ನು ನೀಗಿಸಲು ಅನುರೂಪವಲ್ಲದ್ದು. ಆದುದರಿಂದ ಪಾಪವನ್ನು ಪಸರಿಸಬೇಡ.

05027004a ಕಾಮಾ ಮನುಷ್ಯಂ ಪ್ರಸಜಂತ ಏವ

         ಧರ್ಮಸ್ಯ ಯೇ ವಿಘ್ನಮೂಲಂ ನರೇಂದ್ರ|

05027004c ಪೂರ್ವಂ ನರಸ್ತಾನ್ಧೃತಿಮಾನ್ವಿನಿಘ್ನಽಲ್

         ಲೋಕೇ ಪ್ರಶಂಸಾಂ ಲಭತೇಽನವದ್ಯಾಂ||

ನರೇಂದ್ರ! ಕಾಮವು ಮನುಷ್ಯನನ್ನು ಅಂಟಿಕೊಂಡಿರುವುದೇ ಧರ್ಮದ ವಿಘ್ನಕ್ಕೆ ಮೂಲ. ಧೃತಿವಂತನಾಗಿ ಅವುಗಳನ್ನು ಮೊದಲೇ ನಾಶಪಡಿಸಿದ ನರನು ಲೋಕದಲ್ಲಿ ಕಳಂಕವಿಲ್ಲದ ಪ್ರಶಂಸೆಯನ್ನು ಪಡೆಯುತ್ತಾನೆ.

05027005a ನಿಬಂಧನೀ ಹ್ಯರ್ಥತೃಷ್ಣೇಹ ಪಾರ್ಥ

         ತಾಮೇಷತೋ ಬಾಧ್ಯತೇ ಧರ್ಮ ಏವ|

05027005c ಧರ್ಮಂ ತು ಯಃ ಪ್ರವೃಣೀತೇ ಸ ಬುದ್ಧಃ

         ಕಾಮೇ ಗೃದ್ಧೋ ಹೀಯತೇಽರ್ಥಾನುರೋಧಾತ್||

ಪಾರ್ಥ! ಧನದ ದಾಹವು ಬಂಧನವಿದ್ದಂತೆ. ಇವನ್ನು ಬಯಸುವವನ ಧರ್ಮವು ಕುಂದಾಗುತ್ತದೆ. ಧರ್ಮವನ್ನೇ ತನ್ನದಾಗಿಸಿಕೊಳ್ಳುವವನು ತಿಳಿದವನು. ಕಾಮವನ್ನು ಹೆಚ್ಚಿಸಿಕೊಂಡವನು ಅರ್ಥವನ್ನು ಆಸೆಪಟ್ಟು ನಾಶಹೊಂದುತ್ತಾನೆ.

05027006a ಧರ್ಮಂ ಕೃತ್ವಾ ಕರ್ಮಣಾಂ ತಾತ ಮುಖ್ಯಂ

         ಮಹಾಪ್ರತಾಪಃ ಸವಿತೇವ ಭಾತಿ|

05027006c ಹಾನೇನ ಧರ್ಮಸ್ಯ ಮಹೀಮಪೀಮಾಂ

         ಲಬ್ಧ್ವಾ ನರಃ ಸೀದತಿ ಪಾಪಬುದ್ಧಿಃ||

ತಾತ! ಧರ್ಮಕರ್ಮಗಳನ್ನು ಮುಖ್ಯವನ್ನಾಗಿ ಮಾಡಿಕೊಂಡವನು ಮಹಾಪ್ರತಾಪಿ ಸೂರ್ಯನಂತೆ ಹೊಳೆಯುತ್ತಾನೆ. ಧರ್ಮದ ಕೊರತೆಯಿರುವ, ಪಾಪ ಬುದ್ಧಿ ನರನು ಈ ಭೂಮಿಯನ್ನೇ ಪಡೆದರೂ ನಾಶಹೊಂದುತ್ತಾನೆ.

05027007a ವೇದೋಽಧೀತಶ್ಚರಿತಂ ಬ್ರಹ್ಮಚರ್ಯಂ

         ಯಜ್ಞೈರಿಷ್ಟಂ ಬ್ರಾಹ್ಮಣೇಭ್ಯಶ್ಚ ದತ್ತಂ|

05027007c ಪರಂ ಸ್ಥಾನಂ ಮನ್ಯಮಾನೇನ ಭೂಯ

         ಆತ್ಮಾ ದತ್ತೋ ವರ್ಷಪೂಗಂ ಸುಖೇಭ್ಯಃ||

ನೀನು ವೇದವನ್ನು ಕಲಿತಿರುವೆ, ಬ್ರಹ್ಮಚರ್ಯವನ್ನು ಆಚರಿಸಿರುವೆ. ಯಜ್ಞ-ಇಷ್ಟಿಗಳಲ್ಲಿ ಬ್ರಾಹ್ಮಣರಿಗೆ ನೀಡಿದ್ದೀಯೆ. ಪರಮ ಸ್ಥಾನವನ್ನು ಮನ್ನಿಸಿ ನೀನು ಹಲವಾರು ವರ್ಷಗಳ ಸುಖವನ್ನು ನಿನಗೆ ನೀನೇ ಒದಗಿಸಿ ಕೊಂಡಿದ್ದೀಯೆ.

05027008a ಸುಖಪ್ರಿಯೇ ಸೇವಮಾನೋಽತಿವೇಲಂ

         ಯೋಗಾಭ್ಯಾಸೇ ಯೋ ನ ಕರೋತಿ ಕರ್ಮ|

05027008c ವಿತ್ತಕ್ಷಯೇ ಹೀನಸುಖೋಽತಿವೇಲಂ

         ದುಃಖಂ ಶೇತೇ ಕಾಮವೇಗಪ್ರಣುನ್ನಃ||

ಸುಖ ಮತ್ತು ಬಯಕೆಗಳ ಸೇವೆಯಲ್ಲಿ ಅತಿಯಾಗಿ ತೊಡಗಿದವನು ಯೋಗಾಭ್ಯಾಸದ ಕೆಲಸವನ್ನು ಮಾಡುವುದಿಲ್ಲ. ಅವನ ವಿತ್ತವು ಕ್ಷಯವಾದಾಗ ಸುಖವೂ ಕಡಿಮೆಯಾಗಿ, ಅತ್ಯಂತ ದುಃಖವನ್ನು ಅನುಭವಿಸುತ್ತಾನೆ.

05027009a ಏವಂ ಪುನರರ್ಥಚರ್ಯಾಪ್ರಸಕ್ತೋ

         ಹಿತ್ವಾ ಧರ್ಮಂ ಯಃ ಪ್ರಕರೋತ್ಯಧರ್ಮಂ|

05027009c ಅಶ್ರದ್ದಧತ್ಪರಲೋಕಾಯ ಮೂಢೋ

         ಹಿತ್ವಾ ದೇಹಂ ತಪ್ಯತೇ ಪ್ರೇತ್ಯ ಮಂದಃ||

ಹಾಗೆಯೇ ಅರ್ಥವನ್ನೇ ಕಾಣದ ಜೀವನವನ್ನು ನಡೆಸುವವನು ಧರ್ಮವನ್ನು ತೊರೆದು ಅಧರ್ಮದಲ್ಲಿ ನಿರತನಾಗಿರುತ್ತಾನೆ. ಆ ಮೂಢನು ಪರಲೋಕದಲ್ಲಿ ಶ್ರದ್ಧೆಯನ್ನಿಟ್ಟುಕೊಳ್ಳುವುದಿಲ್ಲ. ಆ ಮಂದಬುದ್ಧಿಯು ದೇಹವನ್ನು ತೊರೆದ ನಂತರವೂ ತಪಿಸುತ್ತಾನೆ.

05027010a ನ ಕರ್ಮಣಾಂ ವಿಪ್ರಣಾಶೋಽಸ್ತ್ಯಮುತ್ರ

         ಪುಣ್ಯಾನಾಂ ವಾಪ್ಯಥ ವಾ ಪಾಪಕಾನಾಂ|

05027010c ಪೂರ್ವಂ ಕರ್ತುರ್ಗಚ್ಚತಿ ಪುಣ್ಯಪಾಪಂ

         ಪಶ್ಚಾತ್ತ್ವೇತದನುಯಾತ್ಯೇವ ಕರ್ತಾ||

ಇದರ ನಂತರದ ಲೋಕದಲ್ಲಿ ಪುಣ್ಯಗಳಿರಲಿ ಅಥವಾ ಪಾಪಗಳಿರಲಿ ನಾಶವಾಗುವುದಿಲ್ಲ. ಕರ್ತುವಿನ ಮೊದಲೇ ಪುಣ್ಯಪಾಪಗಳು ಹೋಗುತ್ತವೆ. ಅವುಗಳ ನಂತರ ಕರ್ತನು ಹಿಂಬಾಲಿಸುತ್ತಾನೆ.

05027011a ನ್ಯಾಯೋಪೇತಂ ಬ್ರಾಹ್ಮಣೇಭ್ಯೋ ಯದನ್ನಂ

         ಶ್ರದ್ಧಾಪೂತಂ ಗಂಧರಸೋಪಪನ್ನಂ|

05027011c ಅನ್ವಾಹಾರ್ಯೇಷೂತ್ತಮದಕ್ಷಿಣೇಷು

         ತಥಾರೂಪಂ ಕರ್ಮ ವಿಖ್ಯಾಯತೇ ತೇ||

ನಿನ್ನ ಕರ್ಮವು ನ್ಯಾಯೋಪೇತವಾಗಿ ಬ್ರಾಹ್ಮಣರಿಗೆ ಕೊಡುವ ಶ್ರದ್ಧಾಪೂರಿತ ಅನ್ನ, ಗಂಧ, ರಸ ಉಪಪನ್ನಗಳಂತೆ ಮತ್ತು ಉತ್ತಮ ದಕ್ಷಿಣೆಗಳನ್ನಿತ್ತು ನಡೆಸುವ ದೇವತಾಕಾರ್ಯಗಳಂತೆ ಎಂದು ಹೇಳಬಹುದು.

05027012a ಇಹ ಕ್ಷೇತ್ರೇ ಕ್ರಿಯತೇ ಪಾರ್ಥ ಕಾರ್ಯಂ

         ನ ವೈ ಕಿಂ ಚಿದ್ವಿದ್ಯತೇ ಪ್ರೇತ್ಯ ಕಾರ್ಯಂ|

05027012c ಕೃತಂ ತ್ವಯಾ ಪಾರಲೋಕ್ಯಂ ಚ ಕಾರ್ಯಂ

         ಪುಣ್ಯಂ ಮಹತ್ಸದ್ಭಿರನುಪ್ರಶಸ್ತಂ||

ಪಾರ್ಥ! ಈ ದೇಹವಿರುವವರೆಗೆ ಕಾರ್ಯಗಳನ್ನು ಮಾಡುತ್ತೇವೆ. ಮರಣದ ನಂತರ ಮಾಡಬೇಕಾದುದು ಏನೂ ಇಲ್ಲ. ನೀನು ಪರಲೋಕಕ್ಕೆ ಬೇಕಾಗುವ ಕಾರ್ಯಗಳನ್ನು ಮಾಡಿದ್ದೀಯೆ. ಮಹಾ ಪುಣ್ಯವನ್ನೂ ಜನರ ಪ್ರಶಸ್ತಿಯನ್ನೂ ಪಡೆದಿರುವೆ.

05027013a ಜಹಾತಿ ಮೃತ್ಯುಂ ಚ ಜರಾಂ ಭಯಂ ಚ

         ನ ಕ್ಷುತ್ಪಿಪಾಸೇ ಮನಸಶ್ಚಾಪ್ರಿಯಾಣಿ|

05027013c ನ ಕರ್ತವ್ಯಂ ವಿದ್ಯತೇ ತತ್ರ ಕಿಂ ಚಿದ್

         ಅನ್ಯತ್ರ ವೈ ಇಂದ್ರಿಯಪ್ರೀಣನಾರ್ಥಾತ್||

ಪರಲೋಕದಲ್ಲಿ ಮೃತ್ಯುವಿನಿಂದ ಸ್ವತಂತ್ರವಿದೆ, ಮುಪ್ಪಿನ ಭಯವಿಲ್ಲ, ಮನಸ್ಸಿಗೆ ಅಪ್ರಿಯವಾದ ಹಸಿವು ಬಾಯಾರಿಕೆಗಳಿಲ್ಲ. ಇಂದ್ರಿಯಗಳನ್ನು ತೃಪ್ತಿಪಡಿಸುವ ಹೊರತಾಗಿ ಬೇರೆ ಏನೂ ಅಲ್ಲಿ ಇರುವುದಿಲ್ಲ.

05027014a ಏವಂರೂಪಂ ಕರ್ಮಫಲಂ ನರೇಂದ್ರ

         ಮಾತ್ರಾವತಾ ಹೃದಯಸ್ಯ ಪ್ರಿಯೇಣ|

05027014c ಸ ಕ್ರೋಧಜಂ ಪಾಂಡವ ಹರ್ಷಜಂ ಚ

         ಲೋಕಾವುಭೌ ಮಾ ಪ್ರಹಾಸೀಶ್ಚಿರಾಯ||

ನರೇಂದ್ರ! ಕರ್ಮಫಲವು ಈ ರೂಪದ್ದು. ಆದುದರಿಂದ ಹೃದಯಕ್ಕೆ ಪ್ರಿಯವಾದುದರಂತೆ ಮಾತ್ರ ನಡೆದುಕೊಳ್ಳಬೇಡ. ಪಾಂಡವ! ಈ ಲೋಕದಲ್ಲಿ ಕ್ರೋಧ ಮತ್ತು ಹರ್ಷ ಇವೆರಡನ್ನೂ ನೀಡುವಂಥಹುದನ್ನು ಮಾಡಬೇಡ.

05027015a ಅಂತಂ ಗತ್ವಾ ಕರ್ಮಣಾಂ ಯಾ ಪ್ರಶಂಸಾ

         ಸತ್ಯಂ ದಮಶ್ಚಾರ್ಜವಮಾನೃಶಂಸ್ಯಂ|

05027015c ಅಶ್ವಮೇಧೋ ರಾಜಸೂಯಸ್ತಥೇಷ್ಟಃ

         ಪಾಪಸ್ಯಾಂತಂ ಕರ್ಮಣೋ ಮಾ ಪುನರ್ಗಾಃ||

ಕರ್ಮಗಳ ಅಂತ್ಯದಲ್ಲಿ ಪ್ರಶಂಸೆಯಿದೆ - ಸತ್ಯ, ಆತ್ಮನಿಗ್ರಹ, ಪ್ರಾಮಾಣಿಕತೆ, ಮೃದುತ್ವ, ಅಶ್ವಮೇಧ, ರಾಜಸೂಯಗಳು, ಇಷ್ಟಿಗಳು ಇವೆ. ಆದರೆ ಪಾಪಕರ್ಮಗಳ ಕೊನೆಯನ್ನು ಅರಸಿ ಹೋಗಬೇಡ!

05027016a ತಚ್ಚೇದೇವಂ ದೇಶರೂಪೇಣ ಪಾರ್ಥಾಃ

         ಕರಿಷ್ಯಧ್ವಂ ಕರ್ಮ ಪಾಪಂ ಚಿರಾಯ|

05027016c ನಿವಸಧ್ವಂ ವರ್ಷಪೂಗಾನ್ವನೇಷು

         ದುಃಖಂ ವಾಸಂ ಪಾಂಡವಾ ಧರ್ಮಹೇತೋಃ||

ಇಷ್ಟೊಂದು ಸಮಯದ ನಂತರ ಪಾಂಡವರು ಪದ್ಧತಿಯನ್ನು ಅನುಸರಿಸಿ ಪಾಪ ಕರ್ಮವನ್ನೇ ಮಾಡಬೇಕಾದರೆ ಧರ್ಮಹೇತುಗಳಾದ ಪಾಂಡವರು ಬಹು ವರ್ಷಗಳು ವನದಲ್ಲಿ ಏಕೆ ದುಃಖದ ವಾಸವನ್ನು ವಾಸಿಸಿದರು?

05027017a ಅಪ್ರವ್ರಜ್ಯೇ ಯೋಜಯಿತ್ವಾ ಪುರಸ್ತಾದ್

         ಆತ್ಮಾಧೀನಂ ಯದ್ಬಲಂ ತೇ ತದಾಸೀತ್|

05027017c ನಿತ್ಯಂ ಪಾಂಚಾಲಾಃ ಸಚಿವಾಸ್ತವೇಮೇ

         ಜನಾರ್ದನೋ ಯುಯುಧಾನಶ್ಚ ವೀರಃ||

ಹೊರಹಾಕಲ್ಪಡದೇ ನೀವು ಮೊದಲೇ ನಿಮ್ಮದಾಗಿದ್ದ ಸೇನೆಯನ್ನು ಕೂಡಿಸಬಹುದಾಗಿತ್ತು ಪಾಂಚಾಲರು, ಜನಾರ್ದನ ಮತ್ತು ವೀರ ಯುಯುಧಾನರು ನಿತ್ಯವೂ ನಿಮ್ಮ ಸಚಿವರಾಗಿದ್ದವರು.

05027018a ಮತ್ಸ್ಯೋ ರಾಜಾ ರುಕ್ಮರಥಃ ಸಪುತ್ರಃ

         ಪ್ರಹಾರಿಭಿಃ ಸಹ ಪುತ್ರೈರ್ವಿರಾಟಃ|

05027018c ರಾಜಾನಶ್ಚ ಯೇ ವಿಜಿತಾಃ ಪುರಸ್ತಾತ್

         ತ್ವಾಮೇವ ತೇ ಸಂಶ್ರಯೇಯುಃ ಸಮಸ್ತಾಃ||

ಪುತ್ರನೊಡನೆ ರಾಜಾ ಮತ್ಸ್ಯ ವಿರಾಟನು ಬಂಗಾರದ ರಥದಲ್ಲಿ, ಪ್ರಹಾರಿ ಪುತ್ರರೊಂದಿಗೆ, ಮತ್ತು ಹಿಂದೆ ನೀವು ಸೋಲಿಸಿದ್ದ ರಾಜರು ಎಲ್ಲರೂ ನಿಮ್ಮಕಡೆಯೇ ಸೇರುತ್ತಿದ್ದರು.

05027019a ಮಹಾಸಹಾಯಃ ಪ್ರತಪನ್ಬಲಸ್ಥಃ

         ಪುರಸ್ಕೃತೋ ವಾಸುದೇವಾರ್ಜುನಾಭ್ಯಾಂ|

05027019c ವರಾನ್ ಹನಿಷ್ಯನ್ದ್ವಿಷತೋ ರಂಗಮಧ್ಯೇ

         ವ್ಯನೇಷ್ಯಥಾ ಧಾರ್ತರಾಷ್ಟ್ರಸ್ಯ ದರ್ಪಂ||

ಎಲ್ಲರನ್ನೂ ಸುಡುವ ಮಹಾಸೇನೆಯ ಬಲವನ್ನು ಪಡೆದು ವಾಸುದೇವ-ಅರ್ಜುನರನ್ನು ಮುಂದಿಟ್ಟುಕೊಂಡು, ರಣಮಧ್ಯದಲ್ಲಿ ಶ್ರೇಷ್ಠ ದ್ವೇಷಿಗಳನ್ನು ಸಂಹರಿಸಿ ಧಾರ್ತರಾಷ್ಟ್ರರ ದರ್ಪವನ್ನು ಕೆಳಗಿಳಿಸಬಹುದಾಗಿತ್ತು!

05027020a ಬಲಂ ಕಸ್ಮಾದ್ವರ್ಧಯಿತ್ವಾ ಪರಸ್ಯ

         ನಿಜಾನ್ಕಸ್ಮಾತ್ಕರ್ಶಯಿತ್ವಾ ಸಹಾಯಾನ್|

05027020c ನಿರುಷ್ಯ ಕಸ್ಮಾದ್ವರ್ಷಪೂಗಾನ್ವನೇಷು

         ಯುಯುತ್ಸಸೇ ಪಾಂಡವ ಹೀನಕಾಲಂ||

ಪಾಂಡವ! ಕಾಲವನ್ನು ಮೀರಿ ಯುದ್ಧಮಾಡಲಿಚ್ಛಿಸುವ ನೀನು ಏಕೆ ನಿನ್ನ ವೈರಿಗಳ ಬಲವನ್ನು ಹೆಚ್ಚುಗೊಳಿಸಲು ಅವಕಾಶ ನೀಡಿದೆ? ಏಕೆ ನಿನ್ನ ಬಲವನ್ನು ಕಡಿಮೆಮಾಡಿಕೊಂಡೆ? ಏಕೆ ಬಹುವರ್ಷಗಳು ವನಗಳಲ್ಲಿ ಕಳೆದೆ?

05027021a ಅಪ್ರಜ್ಞೋ ವಾ ಪಾಂಡವ ಯುಧ್ಯಮಾನೋ

         ಅಧರ್ಮಜ್ಞೋ ವಾ ಭೂತಿಪಥಾದ್ವ್ಯಪೈತಿ|

05027021c ಪ್ರಜ್ಞಾವಾನ್ವಾ ಬುಧ್ಯಮಾನೋಽಪಿ ಧರ್ಮಂ

         ಸಂರಂಭಾದ್ವಾ ಸೋಽಪಿ ಭೂತೇರಪೈತಿ||

ಪಾಂಡವ! ತಿಳುವಳಿಕೆಯಿಲ್ಲದವನು ಯುದ್ಧಮಾಡುತ್ತಾನೆ. ಅಥವಾ ಧರ್ಮವನ್ನು ತಿಳಿಯದೇ ಇರುವವನು ಒಳಿತಿನ ದಾರಿಯನ್ನು ಬಿಡುತ್ತಾನೆ. ಅಥವಾ ಪ್ರಜ್ಞಾವಂತನಾಗಿದ್ದರೂ, ಬುದ್ಧಿವಂತನಾಗಿದ್ದರೂ ಕೂಡ ಕೋಪದಿಂದ ಧರ್ಮದ ದಾರಿಯನ್ನು ಬಿಡಬಹುದು.

05027022a ನಾಧರ್ಮೇ ತೇ ಧೀಯತೇ ಪಾರ್ಥ ಬುದ್ಧಿಃ

         ನ ಸಂರಂಭಾತ್ಕರ್ಮ ಚಕರ್ಥ ಪಾಪಂ|

05027022c ಅದ್ಧಾ ಕಿಂ ತತ್ಕಾರಣಂ ಯಸ್ಯ ಹೇತೋಃ

         ಪ್ರಜ್ಞಾವಿರುದ್ಧಂ ಕರ್ಮ ಚಿಕೀರ್ಷಸೀದಂ||

ಪಾರ್ಥ! ಆದರೆ ನಿನ್ನ ಬುದ್ಧಿಯು ಅಧರ್ಮವನ್ನು ಯೋಚಿಸುವುದಿಲ್ಲ. ನೀನು ಕೋಪಗೊಂಡು ಪಾಪ ಕರ್ಮವನ್ನು ಮಾಡುವವನಲ್ಲ. ಹಾಗಿದ್ದಾಗ ಯಾವ ಕಾರಣಕ್ಕಾಗಿ ಯಾವುದನ್ನು ಬಯಸಿ ಪ್ರಜ್ಞಾವಿರುದ್ಧವಾದ ಕರ್ಮವನ್ನು ಮಾಡಲು ಹೊರಟಿರುವೆ?

05027023a ಅವ್ಯಾಧಿಜಂ ಕಟುಕಂ ಶೀರ್ಷರೋಗಂ

         ಯಶೋಮುಷಂ ಪಾಪಫಲೋದಯಂ ಚ|

05027023c ಸತಾಂ ಪೇಯಂ ಯನ್ನ ಪಿಬಂತ್ಯಸಂತೋ

         ಮನ್ಯುಂ ಮಹಾರಾಜ ಪಿಬ ಪ್ರಶಾಮ್ಯ||

ಮಹಾರಾಜ! ಸಂತರು ಕುಡಿದುಬಿಡುವ, ಅಸಂತರು ಕುಡಿಯದೇ ಇರುವ, ವ್ಯಾಧಿಯಿಂದ ಹುಟ್ಟದ, ಕಹಿಯಾದ ತಲೆನೋವನ್ನು ಕೊಡುವ, ಯಶಸ್ಸನ್ನು ಕ್ಷೀಣಗೊಳಿಸುವ, ಪಾಪಫಲವನ್ನು ನೀಡುವ ಸಿಟ್ಟನ್ನು ಕುಡಿದು ಶಾಂತಗೊಳಿಸು.

05027024a ಪಾಪಾನುಬಂಧಂ ಕೋ ನು ತಂ ಕಾಮಯೇತ

         ಕ್ಷಮೈವ ತೇ ಜ್ಯಾಯಸೀ ನೋತ ಭೋಗಾಃ|

05027024c ಯತ್ರ ಭೀಷ್ಮಃ ಶಾಂತನವೋ ಹತಃ ಸ್ಯಾದ್

         ಯತ್ರ ದ್ರೋಣಃ ಸಹಪುತ್ರೋ ಹತಃ ಸ್ಯಾತ್||

05027025a ಕೃಪಃ ಶಲ್ಯಃ ಸೌಮದತ್ತಿರ್ವಿಕರ್ಣೋ

         ವಿವಿಂಶತಿಃ ಕರ್ಣದುರ್ಯೋಧನೌ ಚ|

ಎಲ್ಲಿ ಶಾಂತನವ ಭೀಷ್ಮನು ಹತನಾಗಬಲ್ಲನೋ, ಎಲ್ಲಿ ಪುತ್ರನೊಂದಿಗೆ ದ್ರೋಣನು ಹತನಾಗುವನೋ, ಕೃಪ, ಶಲ್ಯ, ಸೌಮದತ್ತಿ, ವಿಕರ್ಣ, ವಿವಿಂಶತಿ ಮತ್ತು ಕರ್ಣ-ದುರ್ಯೋಧನರು ಹತರಾಗುವರೋ ಆ ಪಾಪವನ್ನು ತಂದು ಕಟ್ಟಿಸುವುದನ್ನು ಯಾರುತಾನೇ ಬಯಸುತ್ತಾರೆ? ಭೋಗಗಳ ಹಿಂದೆ ಹೋಗುವುದಕ್ಕಿಂತ ನಿನಗೆ ಕ್ಷಮೆಯೇ ಒಳ್ಳೆಯದು.

05027025c ಏತಾನ್ ಹತ್ವಾ ಕೀದೃಶಂ ತತ್ಸುಖಂ ಸ್ಯಾದ್

         ಯದ್ವಿಂದೇಥಾಸ್ತದನುಬ್ರೂಹಿ ಪಾರ್ಥ||

05027026a ಲಬ್ಧ್ವಾಪೀಮಾಂ ಪೃಥಿವೀಂ ಸಾಗರಾಂತಾಂ

         ಜರಾಮೃತ್ಯೂ ನೈವ ಹಿ ತ್ವಂ ಪ್ರಜಹ್ಯಾಃ|

05027026c ಪ್ರಿಯಾಪ್ರಿಯೇ ಸುಖದುಃಖೇ ಚ ರಾಜನ್ನ

         ಏವಂ ವಿದ್ವಾನ್ನೈವ ಯುದ್ಧಂ ಕುರುಷ್ವ||

ಪಾರ್ಥ! ಇವರನ್ನೆಲ್ಲಾ ಕೊಂದು ಅದರಲ್ಲಿ ನಿನಗೆ ಯಾವ ಸುಖವು ಸಿಗುತ್ತದೆ ಎನ್ನುವುದನ್ನು ಹೇಳು. ಸಾಗರಗಳೇ ಅಂಚಾಗಿರುವ ಈ ಭೂಮಿಯನ್ನು ಪಡೆದರೂ ನೀನು ಮುಪ್ಪು-ಮೃತ್ಯುಗಳಿಂದ, ಪ್ರಿಯ-ಅಪ್ರಿಯಗಳಿಂದ, ಮತ್ತು ಸುಖ-ದುಃಖಗಳಿಂದ ತಪ್ಪಿಸಿಕೊಳ್ಳಲಾರೆ. ರಾಜನ್! ಇವನ್ನು ತಿಳಿದೂ ಯುದ್ಧಮಾಡಬೇಡ!

05027027a ಅಮಾತ್ಯಾನಾಂ ಯದಿ ಕಾಮಸ್ಯ ಹೇತೋಃ

         ಏವಮ್ಯುಕ್ತಂ ಕರ್ಮ ಚಿಕೀರ್ಷಸಿ ತ್ವಂ|

05027027c ಅಪಾಕ್ರಮೇಃ ಸಂಪ್ರದಾಯ ಸ್ವಮೇಭ್ಯೋ

         ಮಾ ಗಾಸ್ತ್ವಂ ವೈ ದೇವಯಾನಾತ್ಪಥೋಽದ್ಯ||

ಒಂದುವೇಳೆ ನಿನ್ನ ಅಮಾತ್ಯರ ಬಯಕೆಯನ್ನು ಪೂರೈಸಲು ನೀನು ಈ ತಪ್ಪನ್ನು ಮಾಡಲು ಹೊರಟಿರುವೆಯಾದರೆ ನಿನ್ನಲ್ಲಿರುವ ಎಲ್ಲವನ್ನೂ ಅವರಿಗೆ ಕೊಟ್ಟು ಓಡಿ ಹೋಗು! ದೇವಯಾನದ ನಿನ್ನ ದಾರಿಯನ್ನು ತಪ್ಪಿ ನಡೆಯಬೇಡ!”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಸಂಜಯವಾಕ್ಯೇ ಸಪ್ತವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಇಪ್ಪತ್ತೇಳನೆಯ ಅಧ್ಯಾಯವು.

Related image

Comments are closed.