Udyoga Parva: Chapter 26

ಉದ್ಯೋಗ ಪರ್ವ: ಸಂಜಯಯಾನ ಪರ್ವ

೨೬

ಯುಧಿಷ್ಠಿರ ವಾಕ್ಯ

ತಾನಾಡಿದ ಯಾವ ಮಾತನ್ನು ಕೇಳಿ ತಾವು ಯುದ್ಧವನ್ನು ಬಯಸುತ್ತೇವೆ ಎಂದು ತಿಳಿಯಲಾಗಿದೆ? ಬೇರೆ ದಾರಿಗಳಿರುವಾಗ ಯುದ್ಧವನ್ನು ಯಾರುತಾನೇ ಆರಿಸಿಕೊಳ್ಳುವರು? ಯಾರೊಡನೆ ಅಧರ್ಮದಿಂದ ನಡೆದುಕೊಂಡಿದ್ದಾರೋ ಅವರು ಧರ್ಮದಿಂದ ನಡೆದುಕೊಳ್ಳಲಿ ಎಂದು ಅಪೇಕ್ಷಿಸುವುದು ಸರಿಯಲ್ಲ. ರಾಜ್ಯವನ್ನೆಲ್ಲಾ ತಾನೊಬ್ಬನೇ ಭೋಗಿಸಬೇಕೆಂದರೆ ಅವನಿಗೆ ಶಾಂತಿಸಿಗುವುದಿಲ್ಲ, ಬದಲಾಗಿ ಭೀಮಾರ್ಜುನರ ಕೋಪದಿಂದ ಯುದ್ಧದಲ್ಲಿ ನಾಶಹೊಂದುತ್ತಾರೆ ಎಂದು ಹೇಳಿ ಯುಧಿಷ್ಠಿರನು ತಾನೂ ಕೂಡ ಶಾಂತಿಯನ್ನೇ ಕೇಳುತ್ತಿದ್ದೇನೆ - ಸುಯೋಧನನು ಇಂದ್ರಪ್ರಸ್ಥ ರಾಜ್ಯವನ್ನು ಕೊಡಲಿ ಎನ್ನುವುದು (೧-೨೮).

05026001 ಯುಧಿಷ್ಠಿರ ಉವಾಚ|

05026001a ಕಾಂ ನು ವಾಚಂ ಸಂಜಯ ಮೇ ಶೃಣೋಷಿ

         ಯುದ್ಧೈಷಿಣೀಂ ಯೇನ ಯುದ್ಧಾದ್ಬಿಭೇಷಿ|

05026001c ಅಯುದ್ಧಂ ವೈ ತಾತ ಯುದ್ಧಾದ್ಗರೀಯಃ

         ಕಸ್ತಲ್ಲಬ್ಧ್ವಾ ಜಾತು ಯುಧ್ಯೇತ ಸೂತ||

ಯುಧಿಷ್ಠಿರನು ಹೇಳಿದನು: “ಸಂಜಯ! ನಾನಾಡಿದ ಯಾವ ಮಾತನ್ನು ಕೇಳಿ ನಾವು ಯುದ್ಧವನ್ನು ಬಯಸುತ್ತೇವೆ ಎಂದು ತಿಳಿದು ಯುದ್ಧದ ಭಯವಾಗಿದೆ? ತಾತ! ಯುದ್ಧಕ್ಕಿಂತ ಅಯುದ್ಧವು ದೊಡ್ಡದು. ಸೂತ! ಬೇರೆ ದಾರಿಗಳಿರುವಾಗ ಯುದ್ಧವನ್ನು ಯಾರುತಾನೇ ಆರಿಸಿಕೊಳ್ಳುವರು?

05026002a ಅಕುರ್ವತಶ್ಚೇತ್ಪುರುಷಸ್ಯ ಸಂಜಯ

         ಸಿಧ್ಯೇತ್ಸಂಕಲ್ಪೋ ಮನಸಾ ಯಂ ಯಮಿಚ್ಚೇತ್|

05026002c ನ ಕರ್ಮ ಕುರ್ಯಾದ್ವಿದಿತಂ ಮಮೈತದ್

         ಅನ್ಯತ್ರ ಯುದ್ಧಾದ್ಬಹು ಯಲ್ಲಘೀಯಃ||

ಸಂಜಯ! ಮನಸ್ಸಿನಲ್ಲಿ ಸಂಕಲ್ಪಿಸಿದುದು ಮತ್ತು ಬಯಸಿದುದೆಲ್ಲಾ ಏನನ್ನೂ ಮಾಡದೇ ಸಿದ್ಧಿಗಳಾಗುತ್ತವೆ ಎಂದಾದರೆ ಪುರುಷನು ಎಷ್ಟೇ ಲಘುವಾಗಿರಲಿ ಕರ್ಮಗಳನ್ನೇ ಮಾಡುವುದಿಲ್ಲ. ಇನ್ನು ಯುದ್ಧ ಮಾಡುವುದು ದೂರದ ಮಾತು ಎಂದು ನನಗೆ ತಿಳಿದಿದೆ.

05026003a ಕುತೋ ಯುದ್ಧಂ ಜಾತು ನರಃ ಪ್ರಜಾನನ್

         ಕೋ ದೈವಶಪ್ತೋಽಭಿವೃಣೀತ ಯುದ್ಧಂ|

05026003c ಸುಖೈಷಿಣಃ ಕರ್ಮ ಕುರ್ವಂತಿ ಪಾರ್ಥಾ

         ಧರ್ಮಾದಹೀನಂ ಯಚ್ಚ ಲೋಕಸ್ಯ ಪಥ್ಯಂ||

ಮನುಷ್ಯನು ಏಕೆ ತಾನೇ ಯುದ್ಧಕ್ಕೆ ಹೋಗುತ್ತಾನೆ? ದೇವತೆಗಳಿಂದ ಶಪಿಸಲ್ಪಟ್ಟವನು ಮಾತ್ರ ಯುದ್ಧಕ್ಕೆ ಹೋಗುತ್ತಾನೆಯೇ? ಸುಖವನ್ನು ಬಯಸಿ ಪಾರ್ಥರು, ಧರ್ಮಯುಕ್ತವಾದ, ಲೋಕಕ್ಕೆ ಒಳಿತಾಗುವ ಕರ್ಮಗಳನ್ನು ಮಾಡುತ್ತಾರೆ.

05026004a ಕರ್ಮೋದಯಂ ಸುಖಮಾಶಂಸಮಾನಃ

         ಕೃಚ್ಚ್ರೋಪಾಯಂ ತತ್ತ್ವತಃ ಕರ್ಮ ದುಃಖಂ|

05026004c ಸುಖಪ್ರೇಪ್ಸುರ್ವಿಜಿಘಾಂಸುಶ್ಚ ದುಃಖಂ

         ಯ ಇಂದ್ರಿಯಾಣಾಂ ಪ್ರೀತಿವಶಾನುಗಾಮೀ||

ಪ್ರಶಂಸಮಾನ ಕರ್ಮಗಳಿಂದ ದೊರಕುವ ಸುಖವನ್ನು ಮಾತ್ರ ಬಯಸುತ್ತಾರೆ. ಸುಖವನ್ನರಸಿ ಮತ್ತು ದುಃಖವನ್ನು ದೂರವಿಡಲು ಇಂದ್ರಿಯಗಳ ಸುಖವನ್ನು ಹಿಂಬಾಲಿಸಿ ಹೋಗುವವನು ನಿಜವಾಗಿಯೂ ದುಃಖವಲ್ಲದೆ ಬೇರೆ ಏನನ್ನೂ ಕೊಡದ ಕರ್ಮದಲ್ಲಿ ತೊಡಗುತ್ತಾನೆ.

05026004e ಕಾಮಾಭಿಧ್ಯಾ ಸ್ವಶರೀರಂ ದುನೋತಿ

         ಯಯಾ ಪ್ರಯುಕ್ತೋಽನುಕರೋತಿ ದುಃಖಂ||

05026005a ಯಥೇಧ್ಯಮಾನಸ್ಯ ಸಮಿದ್ಧತೇಜಸೋ

         ಭೂಯೋ ಬಲಂ ವರ್ಧತೇ ಪಾವಕಸ್ಯ|

05026005c ಕಾಮಾರ್ಥಲಾಭೇನ ತಥೈವ ಭೂಯೋ

         ನ ತೃಪ್ಯತೇ ಸರ್ಪಿಷೇವಾಗ್ನಿರಿದ್ಧಃ|

05026005e ಸಂಪಶ್ಯೇಮಂ ಭೋಗಚಯಂ ಮಹಾಂತಂ

         ಸಹಾಸ್ಮಾಭಿರ್ಧೃತರಾಷ್ಟ್ರಸ್ಯ ರಾಜ್ಞಾಃ||

ಕಾಮವನ್ನರಸಿ ಹೋಗುವವನು ಸ್ವಶರೀರವನ್ನು ದುಃಖಿಸುತ್ತಾನೆ. ಅದರಂತೆ ಮಾಡದವನು ದುಃಖವೇನೆಂಬುದನ್ನೇ ಅರಿಯನು. ಉರಿಯತ್ತಿರುವ ಬೆಂಕಿಯ ತೇಜಸ್ಸು ಸಮಿದ್ಧೆಗಳಿಂದ ಹೇಗೆ ಬಲಗೊಳ್ಳುತ್ತದೆಯೋ ಹಾಗೆ ಅರ್ಥಲಾಭದಿಂದ ಕಾಮವು ತುಪ್ಪವನ್ನು ಸುರಿದ ಬೆಂಕಿಯಂತೆ ಹೆಚ್ಚಾಗುತ್ತದೆಯೇ ಹೊರತು ತೃಪ್ತಿಗೊಳ್ಳುವುದಿಲ್ಲ. ರಾಜಾ ಧೃತರಾಷ್ಟ್ರನ ಮಹಾ ಭೋಗವಸ್ತು ಸಂಗ್ರಹಗಳನ್ನು ನಮ್ಮಲ್ಲಿರುವುದಕ್ಕೆ ಹೋಲಿಸಿ ನೋಡು!

05026006a ನಾಶ್ರೇಯಸಾಮೀಶ್ವರೋ ವಿಗ್ರಹಾಣಾಂ

         ನಾಶ್ರೇಯಸಾಂ ಗೀತಶಬ್ದಂ ಶೃಣೋತಿ|

05026006c ನಾಶ್ರೇಯಸಃ ಸೇವತೇ ಮಾಲ್ಯಗಂಧಾನ್

         ನ ಚಾಪ್ಯಶ್ರೇಯಾಂಸ್ಯನುಲೇಪನಾನಿ||

ಅಶ್ರೇಯಸನು ಯುದ್ಧಗಳನ್ನು ಗೆಲ್ಲುವುದಿಲ್ಲ. ಅಶ್ರೇಯಸನು ಗೀತಶಬ್ಧಗಳನ್ನು ಕೇಳುವುದಿಲ್ಲ. ಅಶ್ರೇಯಸನು ಮಾಲೆ ಗಂಧಗಳನ್ನು ಸೇವಿಸುವುದಿಲ್ಲ. ಅಶ್ರೇಯಸನು ಲೇಪನಾದಿಗಳನ್ನೂ ಬಳಸುವುದಿಲ್ಲ[1].

05026007a ನಾಶ್ರೇಯಸಃ ಪ್ರಾವರಾನಧ್ಯವಸ್ತೇ

         ಕಥಂ ತ್ವಸ್ಮಾನ್ಸಂಪ್ರಣುದೇತ್ಕುರುಭ್ಯಃ|

05026007c ಅತ್ರೈವ ಚ ಸ್ಯಾದವಧೂಯ ಏಷ

         ಕಾಮಃ ಶರೀರೇ ಹೃದಯಂ ದುನೋತಿ||

ಅವನು ಉತ್ತಮವಲ್ಲದ ವಸ್ತ್ರಗಳನ್ನೂ ಉಡುವುದಿಲ್ಲ. ಹಾಗಿದ್ದರೆ ಅವನು ನಮ್ಮನ್ನು ಏಕೆ ಕುರುಗಳಿಂದ ಹೊರಗಟ್ಟಿದ? ನಮ್ಮನ್ನು ಆಗಾಗ ಕಷ್ಟಗಳಿಗೊಳಪಡಿಸಿದರೂ ಅವನ ಶರೀರದ ಹೃದಯವು ಕಾಮದಿಂದ ಸುಡುತ್ತಿದೆ.

05026008a ಸ್ವಯಂ ರಾಜಾ ವಿಷಮಸ್ಥಃ ಪರೇಷು

         ಸಾಮಸ್ಥ್ಯಮನ್ವಿಚ್ಚತಿ ತನ್ನ ಸಾಧು|

05026008c ಯಥಾತ್ಮನಃ ಪಶ್ಯತಿ ವೃತ್ತಮೇವ

         ತಥಾ ಪರೇಷಾಮಪಿ ಸೋಽಭ್ಯುಪೈತಿ||

ಸ್ವಯಂ ವಿಷಮಸ್ಥನಾಗಿರುವ ರಾಜನು ಇತರರಿಂದ ಸಾಮಸ್ಥವನ್ನು ಇಚ್ಛಿಸುವುದು ಸಾಧುವಲ್ಲ. ಅವರೊಂದಿಗೆ ತಾನು ನಡೆದುಕೊಳ್ಳುವುದನ್ನು ಹೇಗೆ ನೋಡುತ್ತಾನೋ ಹಾಗೆಯೇ ಇತರರಿಂದಲೂ ಪಡೆಯುತ್ತಾನೆ.

05026009a ಆಸನ್ನಮಗ್ನಿಂ ತು ನಿದಾಘಕಾಲೇ

         ಗಂಭೀರಕಕ್ಷೇ ಗಹನೇ ವಿಸೃಜ್ಯ|

05026009c ಯಥಾ ವೃದ್ಧಂ ವಾಯುವಶೇನ ಶೋಚೇತ್

         ಕ್ಷೇಮಂ ಮುಮುಕ್ಷುಃ ಶಿಶಿರವ್ಯಪಾಯೇ||

ಛಳಿಗಾಲದ ಕೊನೆಯಲ್ಲಿ, ಬೇಸಗೆಯ ಬಿಸಿಲಿನಲ್ಲಿ ಹತ್ತಿರದ ಒಣಗಿದ ಮರಗಳ ದಟ್ಟಾರಣ್ಯಕ್ಕೆ ಬೆಂಕಿಯನ್ನು ಹಚ್ಚಿಸಿ, ಗಾಳಿಯಲ್ಲಿ ಅದು ಜೋರಾಗಿ ಉರಿಯಲು ಅದರಿಂದ ತಪ್ಪಿಸಿಕೊಳ್ಳುವಾಗ ಖಂಡಿತವಾಗಿಯೂ ದುಃಖವನ್ನು ಅನುಭವಿಸುತ್ತಾನೆ.

05026010a ಪ್ರಾಪ್ತೈಶ್ವರ್ಯೋ ಧೃತರಾಷ್ಟ್ರೋಽದ್ಯ ರಾಜಾ

         ಲಾಲಪ್ಯತೇ ಸಂಜಯ ಕಸ್ಯ ಹೇತೋಃ|

05026010c ಪ್ರಗೃಹ್ಯ ದುರ್ಬುದ್ಧಿಮನಾರ್ಜವೇ ರತಂ

         ಪುತ್ರಂ ಮಂದಂ ಮೂಢಮಮಂತ್ರಿಣಂ ತು||

ಸಂಜಯ! ಐಶ್ವರ್ಯವನ್ನು ಪಡೆದಿರುವ ರಾಜಾ ಧೃತರಾಷ್ಟ್ರನು ಇಂದು ವಿಲಪಿಸುತ್ತಿದ್ದಾನೆ - ಯಾವ ಕಾರಣಕ್ಕಾಗಿ? ಮೋಸದಲ್ಲಿ ನಿರತನಾಗಿರುವ ಆ ದುರ್ಬುದ್ಧಿ, ಮಂದ ಮಗನ ಮೂಢ ಸಲಹೆಯನ್ನು ತೆಗೆದುಕೊಂಡಿದ್ದುದಕ್ಕೆ ಅಲ್ಲವೇ?

05026011a ಅನಾಪ್ತಃ ಸನ್ನಾಪ್ತತಮಸ್ಯ ವಾಚಂ

         ಸುಯೋಧನೋ ವಿದುರಸ್ಯಾವಮನ್ಯ|

05026011c ಸುತಸ್ಯ ರಾಜಾ ಧೃತರಾಷ್ಟ್ರಃ ಪ್ರಿಯೈಷೀ

         ಸಂಬುಧ್ಯಮಾನೋ ವಿಶತ್ತೇಽಧರ್ಮಮೇವ|

ಸುಯೋಧನನು ಆಪ್ತರಲ್ಲಿಯೇ ಅತ್ಯುತ್ತಮನಾದ ವಿದುರನ ಮಾತನ್ನು ಅನಾಪ್ತವೆಂದು ಸ್ವೀಕರಿಸಲಿಲ್ಲ. ಮಗನ ಪ್ರಿಯೈಷಿಯಾದ ರಾಜಾ ಧೃತರಾಷ್ಟ್ರನು, ತಿಳಿದೂ ಅಧರ್ಮದ ಜೊತೆಗೇ ಹೋದನು.

05026012a ಮೇಧಾವಿನಂ ಹ್ಯರ್ಥಕಾಮಂ ಕುರೂಣಾಂ

         ಬಹುಶ್ರುತಂ ವಾಗ್ಮಿನಂ ಶೀಲವಂತಂ|

05026012c ಸೂತ ರಾಜಾ ಧೃತರಾಷ್ಟ್ರಃ ಕುರುಭ್ಯೋ

         ನ ಸೋಽಸ್ಮರದ್ವಿದುರಂ ಪುತ್ರಕಾಮ್ಯಾತ್||

ಸೂತ! ಪುತ್ರಕಾಮದಿಂದ ರಾಜಾ ಧೃತರಾಷ್ಟ್ರನು ಕುರುಗಳಲ್ಲಿಯೇ ಮೇಧಾವಿಯಾದ, ಕುರುಗಳ ಒಳಿತನ್ನೇ ಬಯಸುವ, ಬಹುಶ್ರುತ, ವಾಗ್ಮಿ ಶೀಲವಂತ ವಿದುರನ ಮಾತನ್ನು ನೆನಪಿಸಿಕೊಳ್ಳಲಿಲ್ಲ.

05026013a ಮಾನಘ್ನಸ್ಯ ಆತ್ಮಕಾಮಸ್ಯ ಚೇರ್ಷ್ಯೋಃ

         ಸಮ್ರಂಭಿಣಶ್ಚಾರ್ಥಧರ್ಮಾತಿಗಸ್ಯ|

05026013c ದುರ್ಭಾಷಿಣೋ ಮನ್ಯುವಶಾನುಗಸ್ಯ

         ಕಾಮಾತ್ಮನೋ ದುರ್ಹೃದೋ ಭಾವನಸ್ಯ||

05026014a ಅನೇಯಸ್ಯಾಶ್ರೇಯಸೋ ದೀರ್ಘಮನ್ಯೋಃ

         ಮಿತ್ರದ್ರುಹಃ ಸಂಜಯ ಪಾಪಬುದ್ಧೇಃ|

05026014c ಸುತಸ್ಯ ರಾಜಾ ಧೃತರಾಷ್ಟ್ರಃ ಪ್ರಿಯೈಷೀ

         ಪ್ರಪಶ್ಯಮಾನಃ ಪ್ರಜಹಾದ್ಧರ್ಮಕಾಮೌ||

ಮಾನಘ್ನ, ಆತ್ಮಕಾಮಿ, ಹೊಟ್ಟೆಕಿಚ್ಚಿನ, ದುಗುಡುಸ್ವಭಾವದ, ಅರ್ಥ-ಧರ್ಮಗಳನ್ನು ಮೀರಿ ನಡೆಯುವ, ದುರ್ಭಾಷಿಣೀ, ಸಿಟ್ಟಿಗೆ ವಶನಾಗುವ, ಕಾಮಾತ್ಮ, ಹೃದಯದಲ್ಲಿ ಕೆಟ್ಟ ಭಾವನೆಯನ್ನಿಟ್ಟುಕೊಳ್ಳುವ, ಅನೇಯ, ಅಶ್ರೇಯಸ, ದೀರ್ಘಕಾಲದವರೆಗೆ ಸಿಟ್ಟನ್ನು ಇಟ್ಟುಕೊಳ್ಳುವ, ಮಿತ್ರದ್ರೋಹಿ, ಪಾಪಬುದ್ಧಿ ಮಗನ ಪ್ರಿಯೈಷಿಯಾದ ರಾಜಾ ಧೃತರಾಷ್ಟ್ರನು ಕಾಣುತ್ತಿದ್ದರೂ ಧರ್ಮಕಾಮಗಳನ್ನು ಬಿಸಾಡಿದನು.

05026015a ತದೈವ ಮೇ ಸಂಜಯ ದೀವ್ಯತೋಽಭೂನ್

         ನೋ ಚೇತ್ಕುರೂನಾಗತಃ ಸ್ಯಾದಭಾವಃ|

05026015c ಕಾವ್ಯಾಂ ವಾಚಂ ವಿದುರೋ ಭಾಷಮಾಣೋ

         ನ ವಿಂದತೇ ಧೃತರಾಷ್ಟ್ರಾತ್ಪ್ರಶಂಽಸಾಂ|

ಸಂಜಯ! ಜೂಜನ್ನು ಆಡುವಾಗಲೇ ನಾನು ಕುರುಗಳಿಗೆ ಬರಬಾರದ ಆಪತ್ತು ಬರದಿರಲಿ ಎಂದು ಬಯಸಿದ್ದೆ. ವಿದುರನು ಆ ಋಷಿಗಳ ಮಾತುಗಳನ್ನಾಡುವಾಗ ಧೃತರಾಷ್ಟ್ರನಿಂದ ಪ್ರಶಂಸೆಯನ್ನು ಪಡೆಯಲಿಲ್ಲ.

05026016a ಕ್ಷತ್ತುರ್ಯದಾ ಅನ್ವವರ್ತಂತ ಬುದ್ಧಿಂ

         ಕೃಚ್ಚ್ರಂ ಕುರೂನ್ನ ತದಾಭ್ಯಾಜಗಾಮ|

05026016c ಯಾವತ್ಪ್ರಜ್ಞಾಮನ್ವವರ್ತಂತ ತಸ್ಯ

         ತಾವತ್ತೇಷಾಂ ರಾಷ್ಟ್ರವೃದ್ಧಿರ್ಬಭೂವ||

ಯಾವಾಗ ಕ್ಷತ್ತನ ಬುದ್ಧಿಯನ್ನು ಅನುಸರಿಸಲಿಲ್ಲವೋ ಆಗ ಕಷ್ಟಗಳು ಕುರುಗಳನ್ನು ಮೀರಿಸಿದವು. ಯಾವಾಗ ಅವನ ಪ್ರಜ್ಞೆಯನ್ನು ಅನುಸರಿಸುತ್ತಿದ್ದರೋ ಆಗ ರಾಷ್ಟ್ರವು ಅಭಿವೃದ್ಧಿಯನ್ನು ಹೊಂದಿತ್ತು.

05026017a ತದರ್ಥಲುಬ್ಧಸ್ಯ ನಿಬೋಧ ಮೇಽದ್ಯ

         ಯೇ ಮಂತ್ರಿಣೋ ಧಾರ್ತರಾಷ್ಟ್ರಸ್ಯ ಸೂತ|

05026017c ದುಃಶಾಸನಃ ಶಕುನಿಃ ಸೂತಪುತ್ರೋ

         ಗಾವಲ್ಗಣೇ ಪಶ್ಯ ಸಮ್ಮೋಹಮಸ್ಯ||

ಸೂತ! ಆ ಅರ್ಥಲುಬ್ಧ ಧಾರ್ತರಾಷ್ಟ್ರನ ಮಂತ್ರಿಗಳ್ಯಾರೆಂದು ನನ್ನಿಂದ ಕೇಳು: ದುಃಶಾಸನ, ಶಕುನಿ, ಮತ್ತು ಸೂತಪುತ್ರ. ಗಾವಲ್ಗಣೇ! ಈ ಸಮ್ಮೋಹವನ್ನು ನೋಡು!

05026018a ಸೋಽಹಂ ನ ಪಶ್ಯಾಮಿ ಪರೀಕ್ಷಮಾಣಃ

         ಕಥಂ ಸ್ವಸ್ತಿ ಸ್ಯಾತ್ಕುರುಸೃಂಜಯಾನಾಂ|

05026018c ಆತ್ತೈಶ್ವರ್ಯೋ ಧೃತರಾಷ್ಟ್ರಃ ಪರೇಭ್ಯಃ

         ಪ್ರವ್ರಾಜಿತೇ ವಿದುರೇ ದೀರ್ಘದೃಷ್ಟೌ|

ಇನ್ನೊಬ್ಬರ ಐಶ್ವರ್ಯವನ್ನು ಧೃತರಾಷ್ಟ್ರನು ತನ್ನದಾಗಿಸಿಕೊಂಡಿರುವಾಗ ಮತ್ತು ದೀರ್ಘದೃಷ್ಟಿ ವಿದುರನನ್ನು ದೂರವಿಟ್ಟಿರುವಾಗ ಕುರು ಮತ್ತು ಸೃಂಜಯರಿಗೆ ಹೇಗೆ ಒಳ್ಳೆಯದಾಗುತ್ತದೆ ಎನ್ನುವುದು ಪರೀಕ್ಷಿಸಿದರೂ ನನಗೆ ಕಾಣುವುದಿಲ್ಲ.

05026019a ಆಶಂಸತೇ ವೈ ಧೃತರಾಷ್ಟ್ರಃ ಸಪುತ್ರೋ

         ಮಹಾರಾಜ್ಯಮಸಪತ್ನಂ ಪೃಥಿವ್ಯಾಂ|

05026019c ತಸ್ಮಿಂ ಶಮಃ ಕೇವಲಂ ನೋಪಲಭ್ಯೋ

         ಅತ್ಯಾಸನ್ನಂ ಮದ್ಗತಂ ಮನ್ಯತೇಽರ್ಥಂ||

ಮಗನೊಂದಿಗೆ ಧೃತರಾಷ್ಟ್ರನು ಭೂಮಿಯಲ್ಲಿಯೇ ಎದುರಾಳಿಗಳಿಲ್ಲದ ಮಹಾರಾಜ್ಯವನ್ನು ಬಯಸುತ್ತಿದ್ದಾನೆ. ಆದುದರಿಂದ ಕೇವಲ ಶಾಂತಿಯು ದೊರೆಯುವುದಿಲ್ಲ. ಅವನಲ್ಲಿರುವುದೆಲ್ಲವೂ ತನ್ನದೇ ಎಂದು ತಿಳಿದುಕೊಂಡಿದ್ದಾನೆ.

05026020a ಯತ್ತತ್ಕರ್ಣೋ ಮನ್ಯತೇ ಪಾರಣೀಯಂ

         ಯುದ್ಧೇ ಗೃಹೀತಾಯುಧಮರ್ಜುನೇನ|

05026020c ಆಸಂಶ್ಚ ಯುದ್ಧಾನಿ ಪುರಾ ಮಹಾಂತಿ

         ಕಥಂ ಕರ್ಣೋ ನಾಭವದ್ದ್ವೀಪ ಏಷೌಂ|

ಅಯುಧಗಳನ್ನು ಹಿಡಿದ ಅರ್ಜುನನನ್ನು ಯುದ್ಧದಲ್ಲಿ ಮೀರಿಸಬಲ್ಲೆ ಎಂದು ಕರ್ಣನು ತಿಳಿದುಕೊಂಡಿದ್ದರೆ, ಇದಕ್ಕೂ ಮೊದಲು ಯುದ್ಧಗಳಾದಾಗ ಅವರಿಗೆ ಕರ್ಣನು ಹೇಗೆ ಪ್ರಯೋಜನಕ್ಕೆ ಬರಲಿಲ್ಲ?

05026021a ಕರ್ಣಶ್ಚ ಜಾನಾತಿ ಸುಯೋಧನಶ್ಚ

         ದ್ರೋಣಶ್ಚ ಜಾನಾತಿ ಪಿತಾಮಹಶ್ಚ|

05026021c ಅನ್ಯೇ ಚ ಯೇ ಕುರವಸ್ತತ್ರ ಸಂತಿ

         ಯಥಾರ್ಜುನಾನ್ನಾಸ್ತ್ಯಪರೋ ಧನುರ್ಧರಃ||

ಅರ್ಜುನನ ಸರಿಸಾಟಿಯಾದ ಅನ್ಯ ಧನುರ್ಧರನು ಯಾರೂ ಇಲ್ಲ ಎಂದು ಕರ್ಣ ಮತ್ತು ಸುಯೋಧನರಿಗೆ ಗೊತ್ತು. ದ್ರೋಣ ಪಿತಾಮಹರಿಗೆ ಗೊತ್ತು. ಮತ್ತು ಅಲ್ಲಿರುವ ಇತರ ಕುರುಗಳಿಗೂ ಗೊತ್ತು.

05026022a ಜಾನಂತ್ಯೇತೇ ಕುರವಃ ಸರ್ವ ಏವ

         ಯೇ ಚಾಪ್ಯನ್ಯೇ ಭೂಮಿಪಾಲಾಃ ಸಮೇತಾಃ|

05026022c ದುರ್ಯೋಧನಂ ಚಾಪರಾಧೇ ಚರಂತಂ

         ಅರಿಂದಮೇ ಫಲ್ಗುನೇಽವಿದ್ಯಮಾನೇ||

ಅರಿಂದಮ ಅರ್ಜುನನು ಇಲ್ಲದಿದ್ದರೆ ಮಾತ್ರ ದುರ್ಯೋಧನನು ತನ್ನ ಅಪರಾಧಗಳನ್ನು ಮಾಡಬಲ್ಲ ಎಂದು ಕುರುಗಳೆಲ್ಲರಿಗೂ ಮತ್ತು ಸೇರಿರುವ ಅನ್ಯ ಭೂಮಿಪಾಲರಿಗೂ ತಿಳಿದಿದೆ.

05026023a ತೇನಾರ್ಥಬದ್ಧಂ ಮನ್ಯತೇ ಧಾರ್ತರಾಷ್ಟ್ರಃ

         ಶಕ್ಯಂ ಹರ್ತುಂ ಪಾಂಡವಾನಾಂ ಮಮತ್ವಂ|

05026023c ಕಿರೀಟಿನಾ ತಾಲಮಾತ್ರಾಯುಧೇನ

         ತದ್ವೇದಿನಾ ಸಮ್ಯುಗಂ ತತ್ರ ಗತ್ವಾ||

ನನ್ನಿಂದ ಪಾಂಡವರು ಕೂಡಿಟ್ಟ ಸಂಪತ್ತನ್ನು ಅಪಹರಿಸಲು ಶಕ್ಯನೆಂದು ಧಾರ್ತರಾಷ್ಟ್ರನ ಅಭಿಪ್ರಾಯ. ಅವನನ್ನು ತಿಳಿದ ಕಿರೀಟಿಯು ತನ್ನ ಒಂಭತ್ತು ಮೊಳದ ಬಿಲ್ಲನ್ನು ಹಿಡಿದು ಯುದ್ಧಕ್ಕೆ ಅಲ್ಲಿಗೆ ಬರುತ್ತಾನೆ!

05026024a ಗಾಂಡೀವವಿಸ್ಫಾರಿತಶಬ್ದಮಾಜಾವ್

         ಅಶೃಣ್ವಾನಾ ಧಾರ್ತರಾಷ್ಟ್ರಾ ಧ್ರಿಯಂತೇ|

05026024c ಕ್ರುದ್ಧಸ್ಯ ಚೇದ್ಭೀಮಸೇನಸ್ಯ ವೇಗಾತ್

         ಸುಯೋಧನೋ ಮನ್ಯತೇ ಸಿದ್ಧಮರ್ಥಂ||

ಎಳೆದ ಗಾಂಡೀವದ ಧ್ವನಿಯನ್ನು ಕೇಳದ ಧಾರ್ತರಾಷ್ಟ್ರರು ಇನ್ನೂ ಉಳಿದುಕೊಂಡಿದ್ದಾರೆ. ಕ್ರುದ್ಧನಾದ ಭೀಮಸೇನನ ವೇಗವನ್ನು ಅರಿಯದ ಸುಯೋಧನನು ತನ್ನ ಕಾರ್ಯವು ಸಿದ್ಧಿಯಾಯಿತೆಂದು ಭಾವಿಸಿದ್ದಾನೆ.

05026025a ಇಂದ್ರೋಽಪ್ಯೇತನ್ನೋತ್ಸಹೇತ್ತಾತ ಹರ್ತುಂ

         ಐಶ್ವರ್ಯಂ ನೋ ಜೀವತಿ ಭೀಮಸೇನೇ|

05026025c ಧನಂಜಯೇ ನಕುಲೇ ಚೈವ ಸೂತ

         ತಥಾ ವೀರೇ ಸಹದೇವೇ ಮದೀಯೇ||

ತಾತ! ಸೂತ! ಭೀಮಸೇನ, ಧನಂಜಯ, ನಕುಲ ಮತ್ತು ವೀರ ಸಹದೇವರು ನನ್ನಲ್ಲಿ ಜೀವಿಸಿರುವಾಗ ಇಂದ್ರನೂ ಕೂಡ ನನ್ನಿಂದ ಐಶ್ವರ್ಯವನ್ನು ಅಪಹರಿಸಲು ಸಾಧ್ಯವಿಲ್ಲ.

05026026a ಸ ಚೇದೇತಾಂ ಪ್ರತಿಪದ್ಯೇತ ಬುದ್ಧಿಂ

         ವೃದ್ಧೋ ರಾಜಾ ಸಹ ಪುತ್ರೇಣ ಸೂತ|

05026026c ಏವಂ ರಣೇ ಪಾಂಡವಕೋಪದಗ್ಧಾ

         ನ ನಶ್ಯೇಯುಃ ಸಂಜಯ ಧಾರ್ತರಾಷ್ಟ್ರಾಃ||

ಸಂಜಯ! ಸೂತ! ರಣದಲ್ಲಿ ಪಾಂಡವರ ಕೋಪದಿಂದ ಧಾರ್ತರಾಷ್ಟ್ರರು ಸುಟ್ಟು ನಾಶವಾಗುವುದಿಲ್ಲ ಎಂದು ಈಗಲೂ ಆ ವೃದ್ಧ ರಾಜನು ಪುತ್ರರೊಂದಿಗೆ ಯೋಚಿಸುತ್ತಾನೆ.

05026027a ಜಾನಾಸಿ ತ್ವಂ ಕ್ಲೇಶಮಸ್ಮಾಸು ವೃತ್ತಂ

         ತ್ವಾಂ ಪೂಜಯನ್ಸಂಜಯಾಹಂ ಕ್ಷಮೇಯಂ|

05026027c ಯಚ್ಚಾಸ್ಮಾಕಂ ಕೌರವೈರ್ಭೂತಪೂರ್ವಂ

         ಯಾ ನೋ ವೃತ್ತಿರ್ಧಾರ್ತರಾಷ್ಟ್ರೇ ತದಾಸೀತ್||

ಸಂಜಯ! ನಾವು ಅನುಭವಿಸಿದ ಕಷ್ಟಗಳು ನಿನಗೆ ತಿಳಿದೇ ಇವೆ. ನಿನ್ನನ್ನು ಗೌರವಿಸಿ ಅವರೆಲ್ಲರನ್ನೂ ಕ್ಷಮಿಸುತ್ತೇನೆ. ನಾವು ಹಿಂದೆ ಕೌರವರಿಂದ ಏನನ್ನು ಪಡೆದುಕೊಂಡೆವು ಮತ್ತು ನಂತರ ನಾವು ಧಾರ್ತರಾಷ್ಟ್ರರಲ್ಲಿ ಹೇಗೆ ನಡೆದುಕೊಂಡೆವು ಎನ್ನುವುದು ನಿನಗೆ ತಿಳಿದೇ ಇದೆ.

05026028a ಅದ್ಯಾಪಿ ತತ್ತತ್ರ ತಥೈವ ವರ್ತತಾಂ

         ಶಾಂತಿಂ ಗಮಿಷ್ಯಾಮಿ ಯಥಾ ತ್ವಮಾತ್ಥ|

05026028c ಇಂದ್ರಪ್ರಸ್ಥೇ ಭವತು ಮಮೈವ ರಾಜ್ಯಂ

         ಸುಯೋಧನೋ ಯಚ್ಚತು ಭಾರತಾಗ್ರ್ಯಃ||

ನೀನು ಕೇಳುತ್ತಿರುವಂತೆ ನಾನೂ ಶಾಂತಿಯನ್ನೇ ಕೇಳುತ್ತೇನೆ. ಇಂದೂ ಕೂಡ ನಾವು ಮೊದಲಿನಂತೆಯೇ ನಡೆದುಕೊಳ್ಳುತ್ತೇವೆ. ಆದರೆ ಇಂದ್ರಪ್ರಸ್ಥದಲ್ಲಿ ನನ್ನದೇ ರಾಜ್ಯವಿರಬೇಕು. ಭಾರತಾಗ್ರ್ಯ ಸುಯೋಧನನು ಅದನ್ನು ನೀಡಲಿ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರವಾಕ್ಯೇ ಷಡ್‌ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರವಾಕ್ಯದಲ್ಲಿ ಇಪ್ಪತ್ತಾರನೆಯ ಅಧ್ಯಾಯವು.

Image result for indian motifs

[1] ಅವನು ಕೀಳು ಜನರ ಈಶ್ವರನಲ್ಲ! ಅವನು ಉತ್ತಮವಲ್ಲದ ಗೀತ ಶಬ್ಧಗಳನ್ನು ಕೇಳುವುದಿಲ್ಲ. ಉತ್ತಮವಲ್ಲದ ಮಾಲೆ-ಗಂಧಗಳನ್ನು ಸೇವಿಸುವುದಿಲ್ಲ. ಉತ್ತಮವಲದ ಲೇಪನಾದಿಗಳನ್ನೂ ಬಳಸುವುದಿಲ್ಲ.

Comments are closed.