Udyoga Parva: Chapter 192

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೯೨

ಶಿಖಂಡಿಯು ಯಕ್ಷ ಸ್ಥೂಣಾಕರ್ಣನನ್ನು ಸಂದರ್ಶಿಸಿದುದು

ಶೋಕಪರಾಯಣರಾದ ತಂದೆ-ತಾಯಿಯರು ದೈವದ ಮೊರೆಹೊಗಲು ಶಿಖಂಡಿಯು ದುಃಖಿತಳಾಗಿ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಜನ ಗಹನ ವನಕ್ಕೆ ಹೋದುದು (೧-೧೯). ಆ ಪ್ರದೇಶವನ್ನು ಪಾಲಿಸುತ್ತಿದ್ದ ಸ್ಥೂಲಕರ್ಣನೆಂಬ ಯಕ್ಷನು ಶಿಖಂಡಿಯನ್ನು ಕೇಳಲು ಅವಳು ನಡೆದುದೆಲ್ಲವನ್ನೂ ಹೇಳಿದುದು (೨೦-೩೦).

05192001 ಭೀಷ್ಮ ಉವಾಚ|

05192001a ತತಃ ಶಿಖಂಡಿನೋ ಮಾತಾ ಯಥಾತತ್ತ್ವಂ ನರಾಧಿಪ|

05192001c ಆಚಚಕ್ಷೇ ಮಹಾಬಾಹೋ ಭರ್ತ್ರೇ ಕನ್ಯಾಂ ಶಿಖಂಡಿನೀಂ||

ಭೀಷ್ಮನು ಹೇಳಿದನು: “ಮಹಾಬಾಹೋ! ಆಗ ಶಿಖಂಡಿನಿಯ ಮಾತೆಯು ಕನ್ಯೆ ಶಿಖಂಡಿನಿಯ ಕುರಿತು ಇದ್ದಹಾಗೆ ನರಾಧಿಪ ಪತಿಗೆ ಹೇಳಿದಳು:

05192002a ಅಪುತ್ರಯಾ ಮಯಾ ರಾಜನ್ಸಪತ್ನೀನಾಂ ಭಯಾದಿದಂ|

05192002c ಕನ್ಯಾ ಶಿಖಂಡಿನೀ ಜಾತಾ ಪುರುಷೋ ವೈ ನಿವೇದಿತಃ||

“ರಾಜನ್! ಪುತ್ರನಿಲ್ಲದಿರುವ ನಾನು ಸವತಿಯರ ಭಯದಿಂದ ಕನ್ಯೆ ಶಿಖಂಡಿನಿಯು ಗಂಡೆಂದು ಅವಳು ಹುಟ್ಟಿದಾಗಿನಿಂದ ಹೇಳಿಕೊಂಡು ಬಂದಿದ್ದೇನೆ.

05192003a ತ್ವಯಾ ಚೈವ ನರಶ್ರೇಷ್ಠ ತನ್ಮೇ ಪ್ರೀತ್ಯಾನುಮೋದಿತಂ|

05192003c ಪುತ್ರಕರ್ಮ ಕೃತಂ ಚೈವ ಕನ್ಯಾಯಾಃ ಪಾರ್ಥಿವರ್ಷಭ|

05192003e ಭಾರ್ಯಾ ಚೋಢಾ ತ್ವಯಾ ರಾಜನ್ದಶಾರ್ಣಾಧಿಪತೇಃ ಸುತಾ||

ನರಶ್ರೇಷ್ಠ! ಪಾರ್ಥಿವರ್ಷಭ! ನೀನು ನನ್ನ ಮೇಲಿನ ಪ್ರೀತಿಯಿಂದ ಈ ಕನ್ಯೆಗೆ ಪುತ್ರನಿಗಾಗಬೇಕಾದ ಕರ್ಮಗಳನ್ನು ಮಾಡಿದೆ. ರಾಜನ್! ದಶಾರ್ಣಾಧಿಪತಿಯ ಮಗಳನ್ನು ಅವನಿಗೆ ಪತ್ನಿಯನ್ನಾಗಿ ಮಾಡಿದೆ.

05192004a ತ್ವಯಾ ಚ ಪ್ರಾಗಭಿಹಿತಂ ದೇವವಾಕ್ಯಾರ್ಥದರ್ಶನಾತ್|

05192004c ಕನ್ಯಾ ಭೂತ್ವಾ ಪುಮಾನ್ಭಾವೀತ್ಯೇವಂ ಚೈತದುಪೇಕ್ಷಿತಂ||

ಇವಳು ಕನ್ಯೆಯಾಗಿ ನಂತರ ಗಂಡಾಗುತ್ತಾಳೆಂದು ಹಿಂದೆ ದೇವವಾಕ್ಯವು ಹೇಳಿದುದರಿಂದ ಇದನ್ನು ನೀನು ಉಪೇಕ್ಷಿಸಿದೆ.”

05192005a ಏತಚ್ಚ್ರುತ್ವಾ ದ್ರುಪದೋ ಯಜ್ಞಾಸೇನಃ

         ಸರ್ವಂ ತತ್ತ್ವಂ ಮಂತ್ರವಿದ್ಭ್ಯೋ ನಿವೇದ್ಯ|

05192005c ಮಂತ್ರಂ ರಾಜಾ ಮಂತ್ರಯಾಮಾಸ ರಾಜನ್

         ಯದ್ಯದ್ಯುಕ್ತಂ ರಕ್ಷಣೇ ವೈ ಪ್ರಜಾನಾಂ||

ಇದನ್ನು ಕೇಳಿ ಯಜ್ಞಸೇನ ದ್ರುಪದನು ಎಲ್ಲ ಸತ್ಯವನ್ನೂ ತನ್ನ ಮಂತ್ರಿಗಳಿಗೆ ನಿವೇದಿಸಿದನು. ರಾಜನ್! ಆಗ ರಾಜನು ಮಂತ್ರಿಗಳೊಂದಿಗೆ ಪ್ರಜೆಗಳ ರಕ್ಷಣೆಗೆ ಏನು ಮಾಡಬೇಕೆಂದು ಮಂತ್ರಾಲೋಚನೆ ಮಾಡಿದನು.

05192006a ಸಂಬಂಧಕಂ ಚೈವ ಸಮರ್ಥ್ಯ ತಸ್ಮಿನ್

         ದಾಶಾರ್ಣಕೇ ವೈ ನೃಪತೌ ನರೇಂದ್ರ|

05192006c ಸ್ವಯಂ ಕೃತ್ವಾ ವಿಪ್ರಲಂಭಂ ಯಥಾವನ್

         ಮಂತ್ರೈಕಾಗ್ರೋ ನಿಶ್ಚಯಂ ವೈ ಜಗಾಮ||

ನರೇಂದ್ರ! ದಾಶಾರ್ಣಕನೊಂದಿಗೆ ಇನ್ನೂ ಸಂಬಂಧವಿದೆ ಎಂದು ತಿಳಿದು ತಾನೇ ಮೋಸವನ್ನು ಮಾಡಿದ್ದೇನೆಂದು ಸ್ವೀಕರಿಸಿ ಮಂತ್ರಿಗಳೊಂದಿಗೆ ಒಂದು ನಿಶ್ಚಯಕ್ಕೆ ಬಂದನು.

05192007a ಸ್ವಭಾವಗುಪ್ತಂ ನಗರಮಾಪತ್ಕಾಲೇ ತು ಭಾರತ|

05192007c ಗೋಪಯಾಮಾಸ ರಾಜೇಂದ್ರ ಸರ್ವತಃ ಸಮಲಂಕೃತಂ||

ಭಾರತ! ರಾಜೇಂದ್ರ! ಸ್ವಭಾವತಃ ಸುರಕ್ಷಿತವಾಗಿದ್ದ ನಗರವನ್ನು ಆಪತ್ಕಾಲದಲ್ಲಿ ಇನ್ನೂ ಹೆಚ್ಚಿನ ರಕ್ಷಣೆಯನ್ನು ಎಲ್ಲ ಕಡೆಯಲ್ಲಿ ಎಲ್ಲವನ್ನೂ ಮಾಡಿ ನೀಡಿದನು.

05192008a ಆರ್ತಿಂ ಚ ಪರಮಾಂ ರಾಜಾ ಜಗಾಮ ಸಹ ಭಾರ್ಯಯಾ|

05192008c ದಶಾರ್ಣಪತಿನಾ ಸಾರ್ಧಂ ವಿರೋಧೇ ಭರತರ್ಷಭ||

ಭರತರ್ಷಭ! ದಶಾರ್ಣಪತಿಯೊಡನೆ ವಿರೋಧವನ್ನು ತಂದುಕೊಂಡು ರಾಜನು ಪತ್ನಿಯೊಂದಿಗೆ ಪರಮ ಆರ್ತನಾದನು.

05192009a ಕಥಂ ಸಂಬಂಧಿನಾ ಸಾರ್ಧಂ ನ ಮೇ ಸ್ಯಾದ್ವಿಗ್ರಹೋ ಮಹಾನ್|

05192009c ಇತಿ ಸಂಚಿಂತ್ಯ ಮನಸಾ ದೈವತಾನ್ಯರ್ಚಯತ್ತದಾ||

“ಸಂಬಂಧಿಯೊಂದಿಗೆ ನಾನು ಹೇಗೆ ಈ ಮಹಾ ಯುದ್ಧವನ್ನು ಮಾಡಬಲ್ಲೆ?” ಎಂದು ಚಿಂತಿಸಿ ಮನಸ್ಸಿನಲ್ಲಿಯೇ ದೈವವನ್ನು ಅರ್ಚಿಸಿದನು.

05192010a ತಂ ತು ದೃಷ್ಟ್ವಾ ತದಾ ರಾಜನ್ದೇವೀ ದೇವಪರಂ ತಥಾ|

05192010c ಅರ್ಚಾಂ ಪ್ರಯುಂಜಾನಮಥೋ ಭಾರ್ಯಾ ವಚನಮಬ್ರವೀತ್||

ರಾಜನ್! ಅವನು ದೇವಪರನಾಗಿದ್ದು ಅರ್ಚನೆಗಳನ್ನು ಮಾಡುತ್ತಿರುವುದನ್ನು ನೋಡಿ ದೇವಿ ಭಾರ್ಯೆಯು ಅವನಿಗೆ ಹೇಳಿದಳು.

05192011a ದೇವಾನಾಂ ಪ್ರತಿಪತ್ತಿಶ್ಚ ಸತ್ಯಾ ಸಾಧುಮತಾ ಸದಾ|

05192011c ಸಾ ತು ದುಃಖಾರ್ಣವಂ ಪ್ರಾಪ್ಯ ನಃ ಸ್ಯಾದರ್ಚಯತಾಂ ಭೃಶಂ||

“ದೇವತೆಗಳಿಗೆ ಶರಣುಹೋಗುವುದನ್ನು ಸದಾ ಸತ್ಯವೆಂದು ಸಾಧುಗಳು ಅಭಿಪ್ರಾಯ ಪಡುತ್ತಾರೆ. ಅದರಲ್ಲೂ ನಾವು ದುಃಖದ ಸಾಗರವನ್ನು ಸೇರಿ ತುಂಬಾ ಅರ್ಚಿಸುತ್ತಿದ್ದೇವೆ.

05192012a ದೈವತಾನಿ ಚ ಸರ್ವಾಣಿ ಪೂಜ್ಯಂತಾಂ ಭೂರಿದಕ್ಷಿಣೈಃ|

05192012c ಅಗ್ನಯಶ್ಚಾಪಿ ಹೂಯಂತಾಂ ದಾಶಾರ್ಣಪ್ರತಿಷೇಧನೇ||

ಭೂರಿದಕ್ಷಿಣೆಗಳನ್ನಿತ್ತು ಸರ್ವ ದೇವತೆಗಳ ಪೂಜೆಗಳು ನಡೆಯಲಿ. ದಾಶಾರ್ಣನನ್ನು ತಡೆಯಲು ಅಗ್ನಿಗಳಲ್ಲಿ ಹೋಮಗಳೂ ನಡೆಯಲಿ.

05192013a ಅಯುದ್ಧೇನ ನಿವೃತ್ತಿಂ ಚ ಮನಸಾ ಚಿಂತಯಾಭಿಭೋ|

05192013c ದೇವತಾನಾಂ ಪ್ರಸಾದೇನ ಸರ್ವಮೇತದ್ಭವಿಷ್ಯತಿ||

ಸ್ವಾಮೀ! ಯುದ್ಧಮಾಡದೇ ಇವನನ್ನು ಹೇಗೆ ಹಿಂದೆ ಕಳುಹಿಸಬಹುದು ಎನ್ನುವುದರ ಕುರಿತು ಚಿಂತಿಸು. ದೇವತೆಗಳ ಪ್ರಸಾದದಿಂದ ಎಲ್ಲವೂ ಆಗುತ್ತದೆ.

05192014a ಮಂತ್ರಿಭಿರ್ಮಂತ್ರಿತಂ ಸಾರ್ಧಂ ತ್ವಯಾ ಯತ್ಪೃಥುಲೋಚನ|

05192014c ಪುರಸ್ಯಾಸ್ಯಾವಿನಾಶಾಯ ತಚ್ಚ ರಾಜಂಸ್ತಥಾ ಕುರು||

ಪೃಥುಲೋಚನ! ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ನಿರ್ಧರಿಸಿದಂತೆ ಪುರದ ಅವಿನಾಶಕ್ಕೆ ಏನು ಬೇಕೋ ಅದನ್ನು ಮಾಡು.

05192015a ದೈವಂ ಹಿ ಮಾನುಷೋಪೇತಂ ಭೃಶಂ ಸಿಧ್ಯತಿ ಪಾರ್ಥಿವ|

05192015c ಪರಸ್ಪರವಿರೋಧಾತ್ತು ನಾನಯೋಃ ಸಿದ್ಧಿರಸ್ತಿ ವೈ||

ಪಾರ್ಥಿವ! ದೈವವು ನಿಶ್ಚಯಿಸಿದ್ದುದು ಮನುಷ್ಯನ ಪ್ರಯತ್ನದಿಂದ ಚೆನ್ನಾಗಿ ಸಿದ್ಧಿಯಾಗುತ್ತದೆ. ಪರಸ್ಪರ ವಿರೋಧವಾಗಿದ್ದರೆ ಯಾವುದೂ ಸಿದ್ಧಿಯಾಗುವುದಿಲ್ಲ.

05192016a ತಸ್ಮಾದ್ವಿಧಾಯ ನಗರೇ ವಿಧಾನಂ ಸಚಿವೈಃ ಸಹ|

05192016c ಅರ್ಚಯಸ್ವ ಯಥಾಕಾಮಂ ದೈವತಾನಿ ವಿಶಾಂ ಪತೇ||

ವಿಶಾಂಪತೇ! ಆದುದರಿಂದ ಸಚಿವರೊಂದಿಗೆ ನಗರಕ್ಕೆ ಬೇಕಾದುದನ್ನು ಮಾಡು. ಇಷ್ಟವಾದಂತೆ ದೇವತೆಗಳ ಅರ್ಚನೆಯನ್ನೂ ಮಾಡು.”

05192017a ಏವಂ ಸಂಭಾಷಮಾಣೌ ತೌ ದೃಷ್ಟ್ವಾ ಶೋಕಪರಾಯಣೌ|

05192017c ಶಿಖಂಡಿನೀ ತದಾ ಕನ್ಯಾ ವ್ರೀಡಿತೇವ ಮನಸ್ವಿನೀ||

ಅವರಿಬ್ಬರೂ ಶೋಕಪರಾಯಣರಾಗಿ ಹೀಗೆ ಮಾತನಾಡಿಕೊಳ್ಳುತ್ತಿರುವುದನ್ನು ನೋಡಿ ಆ ಮನಸ್ವಿನೀ ಕನ್ಯೆ ಶಿಖಂಡಿನಿಯು ನಾಚಿಕೊಂಡಳು.

05192018a ತತಃ ಸಾ ಚಿಂತಯಾಮಾಸ ಮತ್ಕೃತೇ ದುಃಖಿತಾವುಭೌ|

05192018c ಇಮಾವಿತಿ ತತಶ್ಚಕ್ರೇ ಮತಿಂ ಪ್ರಾಣವಿನಾಶನೇ||

“ನನ್ನಿಂದಾಗಿ ಇವರಿಬ್ಬರೂ ದುಃಖಿತರಾಗಿದ್ದಾರೆ!” ಎಂದು ಅವಳು ಚಿಂತಿಸಿದಳು. ಹೀಗೆ ಯೋಚಿಸಿ ಅವಳು ಪ್ರಾಣವನ್ನು ಕಳೆದುಕೊಳ್ಳಲು ನಿಶ್ಚಯಿಸಿದಳು.

05192019a ಏವಂ ಸಾ ನಿಶ್ಚಯಂ ಕೃತ್ವಾ ಭೃಶಂ ಶೋಕಪರಾಯಣಾ|

05192019c ಜಗಾಮ ಭವನಂ ತ್ಯಕ್ತ್ವಾ ಗಹನಂ ನಿರ್ಜನಂ ವನಂ||

ತುಂಬಾ ಶೋಕಪರಾಯಣಳಾದ ಅವಳು ಹೀಗೆ ನಿಶ್ಚಯಿಸಿ ಭವನವನ್ನು ತೊರೆದು ಗಹನ ನಿರ್ಜನ ವನಕ್ಕೆ ತೆರಳಿದಳು.

05192020a ಯಕ್ಷೇಣರ್ದ್ಧಿಮತಾ ರಾಜನ್ ಸ್ಥೂಣಾಕರ್ಣೇನ ಪಾಲಿತಂ|

05192020c ತದ್ಭಯಾದೇವ ಚ ಜನೋ ವಿಸರ್ಜಯತಿ ತದ್ವನಂ||

ರಾಜನ್! ಆ ಸ್ಥಳವನ್ನು ಯಕ್ಷ ಸ್ಥೂಣಾಕರ್ಣನು ಪಾಲಿಸುತ್ತಿದ್ದನು. ಅವನ ಭಯದಿಂದ ಜನರು ಆ ವನವನ್ನು ವಿಸರ್ಜಿಸಿದ್ದರು.

05192021a ತತ್ರ ಸ್ಥೂಣಸ್ಯ ಭವನಂ ಸುಧಾಮೃತ್ತಿಕಲೇಪನಂ|

05192021c ಲಾಜೋಲ್ಲಾಪಿಕಧೂಮಾಢ್ಯಮುಚ್ಚಪ್ರಾಕಾರತೋರಣಂ||

ಸ್ಥೂಣನು ಅಲ್ಲಿ ಲಾಜದ ಹೊಗೆಯಿಂದ ಕೂಡಿದ, ಎತ್ತರ ಗೋಡೆಗಳು ಮತ್ತು ತೋರಣಗಳಿದ್ದ, ಸುಣ್ಣವನ್ನು ಬಳಿದ ಇಟ್ಟಿಗೆಯ ಮನೆಯನ್ನು ಹೊಂದಿದ್ದನು.

05192022a ತತ್ಪ್ರವಿಶ್ಯ ಶಿಖಂಡೀ ಸಾ ದ್ರುಪದಸ್ಯಾತ್ಮಜಾ ನೃಪ|

05192022c ಅನಶ್ನತೀ ಬಹುತಿಥಂ ಶರೀರಮುಪಶೋಷಯತ್||

ನೃಪ! ಅದನ್ನು ಪ್ರವೇಶಿಸಿ ದ್ರುಪದನ ಮಗಳು ಶಿಖಂಡಿನಿಯು ಬಹುದಿನಗಳು ಊಟಮಾಡದೇ ಶರೀರವನ್ನು ಒಣಗಿಸಿದಳು.

05192023a ದರ್ಶಯಾಮಾಸ ತಾಂ ಯಕ್ಷಃ ಸ್ಥೂಣೋ ಮಧ್ವಕ್ಷಸಮ್ಯುತಃ|

05192023c ಕಿಮರ್ಥೋಽಯಂ ತವಾರಂಭಃ ಕರಿಷ್ಯೇ ಬ್ರೂಹಿ ಮಾಚಿರಂ||

ಜೇನಿನ ಬಣ್ಣದ ಕಣ್ಣುಗಳ ಯಕ್ಷ ಸ್ಥೂಣನು ಅವಳಿಗೆ ಕಾಣಿಸಿಕೊಂಡನು. “ಏನನ್ನು ಮಾಡಲು ಹೊರಟಿರುವೆ? ಬೇಗನೆ ಹೇಳು. ಅದನ್ನು ನಾನು ಮಾಡುತ್ತೇನೆ.

05192024a ಅಶಕ್ಯಮಿತಿ ಸಾ ಯಕ್ಷಂ ಪುನಃ ಪುನರುವಾಚ ಹ|

05192024c ಕರಿಷ್ಯಾಮೀತಿ ಚೈನಾಂ ಸ ಪ್ರತ್ಯುವಾಚಾಥ ಗುಹ್ಯಕಃ||

ಅದು ಅಶಕ್ಯವೆಂದು ಅವಳು ಯಕ್ಷನಿಗೆ ಪುನಃ ಪುನಃ ಹೇಳಿದಳು. ಗುಹ್ಯಕನು ಅವಳಿಗೆ ಮಾಡುತ್ತೇನೆ ಎಂದು ಉತ್ತರಿಸಿದನು.

05192025a ಧನೇಶ್ವರಸ್ಯಾನುಚರೋ ವರದೋಽಸ್ಮಿ ನೃಪಾತ್ಮಜೇ|

05192025c ಅದೇಯಮಪಿ ದಾಸ್ಯಾಮಿ ಬ್ರೂಹಿ ಯತ್ತೇ ವಿವಕ್ಷಿತಂ||

“ನೃಪಾತ್ಮಜೇ! ಧನೇಶ್ವರನ ಅನುಚರನು ನಾನು. ವರಗಳನ್ನು ನೀಡುತ್ತೇನೆ. ಕೊಡಲಾಗದಂತಿದ್ದರೂ ಕೊಡುತ್ತೇನೆ. ಏನನ್ನು ಹುಡುಕುತ್ತಿದ್ದೀಯೋ ಅದನ್ನು ಹೇಳು.”

05192026a ತತಃ ಶಿಖಂಡೀ ತತ್ಸರ್ವಮಖಿಲೇನ ನ್ಯವೇದಯತ್|

05192026c ತಸ್ಮೈ ಯಕ್ಷಪ್ರಧಾನಾಯ ಸ್ಥೂಣಾಕರ್ಣಾಯ ಭಾರತ||

ಭಾರತ! ಆಗ ಶಿಖಂಡಿನಿಯು ಆ ಯಕ್ಷಪ್ರಧಾನ ಸ್ಥೂಣಾಕರ್ಣನಿಗೆ ಎಲ್ಲವನ್ನೂ ನಿವೇದಿಸಿದಳು.

05192027a ಆಪನ್ನೋ ಮೇ ಪಿತಾ ಯಕ್ಷ ನಚಿರಾದ್ವಿನಶಿಷ್ಯತಿ|

05192027c ಅಭಿಯಾಸ್ಯತಿ ಸಂಕ್ರುದ್ಧೋ ದಶಾರ್ಣಾಧಿಪತಿರ್ಹಿ ತಂ||

“ಯಕ್ಷ! ನನ್ನ ತಂದೆಯು ತೊಂದರೆಯಲ್ಲಿದ್ದಾನೆ ಮತ್ತು ಬೇಗನೇ ವಿನಾಶ ಹೊಂದುತ್ತಾನೆ. ಸಂಕ್ರುದ್ಧನಾದ ದಶಾರ್ಣಾಧಿಪತಿಯು ಅವನ ಮೇಲೆ ಧಾಳಿಯಿಡುತ್ತಿದ್ದಾನೆ.

05192028a ಮಹಾಬಲೋ ಮಹೋತ್ಸಾಹಃ ಸ ಹೇಮಕವಚೋ ನೃಪಃ|

05192028c ತಸ್ಮಾದ್ರಕ್ಷಸ್ವ ಮಾಂ ಯಕ್ಷ ಪಿತರಂ ಮಾತರಂ ಚ ಮೇ||

ಆ ನೃಪ ಹೇಮಕವಚನು ಮಹಾಬಲಶಾಲಿ ಮತ್ತು ಮಹೋತ್ಸಾಹೀ. ಆದುದರಿಂದ ಯಕ್ಷ! ನನ್ನನ್ನೂ, ನನ್ನ ಮಾತಾಪಿತೃಗಳನ್ನೂ ರಕ್ಷಿಸು.

05192029a ಪ್ರತಿಜ್ಞಾತೋ ಹಿ ಭವತಾ ದುಃಖಪ್ರತಿನಯೋ ಮಮ|

05192029c ಭವೇಯಂ ಪುರುಷೋ ಯಕ್ಷ ತ್ವತ್ಪ್ರಸಾದಾದನಿಂದಿತಃ||

ನನ್ನ ದುಃಖವನ್ನು ಕಳೆಯುತ್ತೀಯೆಂದು ನೀನು ಪ್ರತಿಜ್ಞೆಯನ್ನು ಮಾಡಿರುವೆ. ಯಕ್ಷ! ನಿನ್ನ ಪ್ರಸಾದದಿಂದ ನಾನು ಅನಿಂದಿತ ಪುರುಷನಾಗಲಿ.

05192030a ಯಾವದೇವ ಸ ರಾಜಾ ವೈ ನೋಪಯಾತಿ ಪುರಂ ಮಮ|

05192030c ತಾವದೇವ ಮಹಾಯಕ್ಷ ಪ್ರಸಾದಂ ಕುರು ಗುಹ್ಯಕ||

ಗುಹ್ಯಕ! ಮಹಾಯಕ್ಷ! ಆ ರಾಜನು ನನ್ನ ಪುರಕ್ಕೆ ಬರುವುದರೊಳಗೆ ನೀನು ನನ್ನ ಮೇಲೆ ಕರುಣೆಯನ್ನು ತೋರಿಸು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಸ್ಥೂಣಾಕರ್ಣಸಮಾಗಮೇ ದ್ವಿನವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಸ್ಥೂಣಾಕರ್ಣಸಮಾಗಮದಲ್ಲಿ ನೂರಾತೊಂಭತ್ತೆರಡನೆಯ ಅಧ್ಯಾಯವು.

Image result for indian motifs

Comments are closed.