Udyoga Parva: Chapter 188

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೮

ಅಂಬೆಯ ಅಗ್ನಿಪ್ರವೇಶ

ಶಿವನು ಅಂಬೆಗೆ ಭೀಷ್ಮನನ್ನು ವಧಿಸುತ್ತೀಯೆ ಎಂದು ಹೇಳಿ “ಪುರುಷತ್ವವನ್ನೂ ಪಡೆಯುತ್ತೀಯೆ. ಅನ್ಯ ದೇಹಕ್ಕೆ ಹೋದಾಗಲೂ ಕೂಡ ಇವೆಲ್ಲವನ್ನೂ ನೆನಪಿಸಿಕೊಳ್ಳುತ್ತೀಯೆ” ಎಂದು ವರವನ್ನಿತ್ತುದುದು (೧-೧೫). ಅನಂತರ ಅಂಬೆಯು ಅಗ್ನಿಪ್ರವೇಶ ಮಾಡಿದುದು (೧೬-೧೮).

05188001 ಭೀಷ್ಮ ಉವಾಚ|

05188001a ತತಸ್ತೇ ತಾಪಸಾಃ ಸರ್ವೇ ತಪಸೇ ಧೃತನಿಶ್ಚಯಾಂ|

05188001c ದೃಷ್ಟ್ವಾ ನ್ಯವರ್ತಯಂಸ್ತಾತ ಕಿಂ ಕಾರ್ಯಮಿತಿ ಚಾಬ್ರುವನ್||

ಭೀಷ್ಮನು ಹೇಳಿದನು: “ಮಗೂ! ಆಗ ಅಲ್ಲಿದ್ದ ತಾಪಸರೆಲ್ಲ ತಪಸ್ಸಿನಲ್ಲಿ ಧೃತನಿಶ್ಚಯಳಾದ ಅವಳು ಹಿಂದಿರುಗದೇ ಇದ್ದುದನ್ನು ನೋಡಿ “ಏನು ಕಾರ್ಯ?” ಎಂದು ಅವಳನ್ನು ಪ್ರಶ್ನಿಸಿದರು.

05188002a ತಾನುವಾಚ ತತಃ ಕನ್ಯಾ ತಪೋವೃದ್ಧಾನೃಷೀಂಸ್ತದಾ|

05188002c ನಿರಾಕೃತಾಸ್ಮಿ ಭೀಷ್ಮೇಣ ಭ್ರಂಶಿತಾ ಪತಿಧರ್ಮತಃ||

ಆಗ ಆ ಕನ್ಯೆಯು ತಪೋವೃದ್ಧ ಋಷಿಗಳಿಗೆ ಹೇಳಿದಳು: “ಭೀಷ್ಮನಿಂದ ನಿರಾಕೃತಳಾಗಿ ಪತಿಧರ್ಮದಿಂದ ವಂಚಿತಳಾಗಿದ್ದೇನೆ.

05188003a ವಧಾರ್ಥಂ ತಸ್ಯ ದೀಕ್ಷಾ ಮೇ ನ ಲೋಕಾರ್ಥಂ ತಪೋಧನಾಃ|

05188003c ನಿಹತ್ಯ ಭೀಷ್ಮಂ ಗಚ್ಚೇಯಂ ಶಾಂತಿಮಿತ್ಯೇವ ನಿಶ್ಚಯಃ||

ತಪೋಧನರೇ! ಅವನ ವಧೆಗೋಸ್ಕರ ದೀಕ್ಷಿತಳಾಗಿದ್ದೇನೆಯೇ ಹೊರತು ಉತ್ತಮ ಲೋಕಗಳಿಗಲ್ಲ. ಭೀಷ್ಮನನ್ನು ಕೊಂದು ಶಾಂತಿಯು ದೊರೆಯುತ್ತದೆ ಎಂದು ನಿಶ್ಚಯಿಸಿದ್ದೇನೆ.

05188004a ಯತ್ಕೃತೇ ದುಃಖವಸತಿಮಿಮಾಂ ಪ್ರಾಪ್ತಾಸ್ಮಿ ಶಾಶ್ವತೀಂ|

05188004c ಪತಿಲೋಕಾದ್ವಿಹೀನಾ ಚ ನೈವ ಸ್ತ್ರೀ ನ ಪುಮಾನಿಹ||

05188005a ನಾಹತ್ವಾ ಯುಧಿ ಗಾಂಗೇಯಂ ನಿವರ್ತೇಯಂ ತಪೋಧನಾಃ|

05188005c ಏಷ ಮೇ ಹೃದಿ ಸಂಕಲ್ಪೋ ಯದರ್ಥಮಿದಮುದ್ಯತಂ||

ಯಾರಿಂದಾಗಿ ನಾನು ಈ ನಿರಂತರ ದುಃಖವನ್ನು ಅನುಭವಿಸುತ್ತಿರುವೆನೋ, ಯಾರಿಂದಾಗಿ ಶಾಶ್ವತವಾಗಿ ಪತಿಲೋಕವನ್ನು ಕಳೆದುಕೊಂಡಿದ್ದೇನೋ, ಯಾರಿಂದಾಗಿ ನಾನು ಹೆಣ್ಣೂ ಅಲ್ಲದ ಪುರುಷನೂ ಅಲ್ಲದ ಜೀವನವನ್ನು ನಡೆಸುತ್ತಿದ್ದೇನೋ ಆ ಗಾಂಗೇಯನನ್ನು ಯುದ್ಧದಲ್ಲಿ ಸಂಹರಿಸಿ ನಾನು ಹಿಂದೆ ಸರಿಯುತ್ತೇನೆ. ತಪೋಧನರೇ! ಇದು ನನ್ನ ಹೃದಯದ ಸಂಕಲ್ಪ. ಇದರ ಹೊರತಾದ ಉದ್ದೇಶವಿಲ್ಲ.

05188006a ಸ್ತ್ರೀಭಾವೇ ಪರಿನಿರ್ವಿಣ್ಣಾ ಪುಂಸ್ತ್ವಾರ್ಥೇ ಕೃತನಿಶ್ಚಯಾ|

05188006c ಭೀಷ್ಮೇ ಪ್ರತಿಚಿಕೀರ್ಷಾಮಿ ನಾಸ್ಮಿ ವಾರ್ಯೇತಿ ವೈ ಪುನಃ||

ಸ್ತ್ರೀಯಾಗಿದ್ದುಕೊಂಡು ನನಗೆ ಮಾಡಬೇಕಾದುದು ಏನೂ ಇಲ್ಲ. ಪುರುಷನಾಗಲು ನಿಶ್ಚಯಿಸಿದ್ದೇನೆ. ಇದರಿಂದ ಭೀಷ್ಮನಿಗೆ ಪ್ರತೀಕಾರ ಮಾಡಬಲ್ಲೆ. ನನ್ನನ್ನು ಪುನಃ ತಡೆಯಬೇಡಿ.”

05188007a ತಾಂ ದೇವೋ ದರ್ಶಯಾಮಾಸ ಶೂಲಪಾಣಿರುಮಾಪತಿಃ|

05188007c ಮಧ್ಯೇ ತೇಷಾಂ ಮಹರ್ಷೀಣಾಂ ಸ್ವೇನ ರೂಪೇಣ ಭಾಮಿನೀಂ||

ಆಗ ಆ ಮಹರ್ಷಿಗಳ ಮಧ್ಯದಲ್ಲಿಯೇ ತನ್ನದೇ ರೂಪದಲ್ಲಿ ಶೂಲಪಾಣಿ ದೇವ ಉಮಾಪತಿಯು ಆ ಭಾಮಿನಿಗೆ ಕಾಣಿಸಿಕೊಂಡನು.

05188008a ಚಂದ್ಯಮಾನಾ ವರೇಣಾಥ ಸಾ ವವ್ರೇ ಮತ್ಪರಾಜಯಂ|

05188008c ವಧಿಷ್ಯಸೀತಿ ತಾಂ ದೇವಃ ಪ್ರತ್ಯುವಾಚ ಮನಸ್ವಿನೀಂ||

ವರವೇನನ್ನು ಕೊಡಲೆಂದು ಕೇಳಲು ಅವಳು ನನ್ನ ಪರಾಜಯವನ್ನು ಕೇಳಿಕೊಂಡಳು. “ವಧಿಸುತ್ತೀಯೆ!” ಎಂದು ದೇವನು ಆ ಮನಸ್ವಿನಿಗೆ ಉತ್ತರಿಸಿದನು.

05188009a ತತಃ ಸಾ ಪುನರೇವಾಥ ಕನ್ಯಾ ರುದ್ರಮುವಾಚ ಹ|

05188009c ಉಪಪದ್ಯೇತ್ಕಥಂ ದೇವ ಸ್ತ್ರಿಯೋ ಮಮ ಜಯೋ ಯುಧಿ|

05188009e ಸ್ತ್ರೀಭಾವೇನ ಚ ಮೇ ಗಾಢಂ ಮನಃ ಶಾಂತಮುಮಾಪತೇ||

ಆಗ ಪುನಃ ಆ ಕನ್ಯೆಯು ರುದ್ರನನ್ನು ಕೇಳಿದಳು: “ದೇವ! ಸ್ತ್ರೀಯಾಗಿರುವ ನಾನು ಯುದ್ಧದಲ್ಲಿ ಜಯವನ್ನು ಪಡೆಯಲು ಹೇಗೆ ಸಾಧ್ಯ? ಉಮಾಪತೇ! ಸ್ತ್ರೀಭಾವದಿಂದ ನನ್ನ ಮನಸ್ಸಿನಲ್ಲಿ ಅತ್ಯಂತ ಶಾಂತಿಯಿದೆ!

05188010a ಪ್ರತಿಶ್ರುತಶ್ಚ ಭೂತೇಶ ತ್ವಯಾ ಭೀಷ್ಮಪರಾಜಯಃ|

05188010c ಯಥಾ ಸ ಸತ್ಯೋ ಭವತಿ ತಥಾ ಕುರು ವೃಷಧ್ವಜ|

05188010e ಯಥಾ ಹನ್ಯಾಂ ಸಮಾಗಮ್ಯ ಭೀಷ್ಮಂ ಶಾಂತನವಂ ಯುಧಿ||

ಭೂತೇಶ! ನೀನು ಭೀಷ್ಮಪರಾಜಯವನ್ನು ಕೇಳಿಸಿದ್ದೀಯೆ. ವೃಷಧ್ವಜ! ಅದು ಹೇಗೆ ಸತ್ಯವಾಗಿಸಬಹುದೋ, ಹೇಗೆ ನಾನು ಭೀಷ್ಮ ಶಾಂತನವನನ್ನು ಯುದ್ಧದಲ್ಲಿ ಎದುರಿಸಿ ಕೊಲ್ಲಬಲ್ಲೆನೋ, ಹಾಗೆ ಮಾಡು.”

05188011a ತಾಮುವಾಚ ಮಹಾದೇವಃ ಕನ್ಯಾಂ ಕಿಲ ವೃಷಧ್ವಜಃ|

05188011c ನ ಮೇ ವಾಗನೃತಂ ಭದ್ರೇ ಪ್ರಾಹ ಸತ್ಯಂ ಭವಿಷ್ಯತಿ||

ಮಹಾದೇವ ವೃಷಧ್ವಜನು ಆ ಕನ್ಯೆಗೆ ಹೇಳಿದನು: “ಭದ್ರೇ! ನನ್ನ ಮಾತು ಸುಳ್ಳಾಗುವುದಿಲ್ಲ. ಹೇಳಿದುದು ಸತ್ಯವಾಗುತ್ತದೆ.

05188012a ವಧಿಷ್ಯಸಿ ರಣೇ ಭೀಷ್ಮಂ ಪುರುಷತ್ವಂ ಚ ಲಪ್ಸ್ಯಸೇ|

05188012c ಸ್ಮರಿಷ್ಯಸಿ ಚ ತತ್ಸರ್ವಂ ದೇಹಮನ್ಯಂ ಗತಾ ಸತೀ||

ಸತೀ! ರಣದಲ್ಲಿ ಭೀಷ್ಮನನ್ನು ವಧಿಸುತ್ತೀಯೆ. ಮತ್ತು ಪುರುಷತ್ವವನ್ನೂ ಪಡೆಯುತ್ತೀಯೆ. ಅನ್ಯ ದೇಹಕ್ಕೆ ಹೋದಾಗಲೂ ಕೂಡ ಇವೆಲ್ಲವನ್ನೂ ನೆನಪಿಸಿಕೊಳ್ಳುತ್ತೀಯೆ.

05188013a ದ್ರುಪದಸ್ಯ ಕುಲೇ ಜಾತಾ ಭವಿಷ್ಯಸಿ ಮಹಾರಥಃ|

05188013c ಶೀಘ್ರಾಸ್ತ್ರಶ್ಚಿತ್ರಯೋಧೀ ಚ ಭವಿಷ್ಯಸಿ ಸುಸಮ್ಮತಃ||

ಮಹಾರಥಿ ದ್ರುಪದನ ಕುಲದಲ್ಲಿ ಹುಟ್ಟಿ ಸುಸಮ್ಮತನಾದ ಶೀಘ್ರಾಸ್ತ್ರನೂ ಚಿತ್ರಯೋಧಿಯೂ ಆಗುತ್ತೀಯೆ.

05188014a ಯಥೋಕ್ತಮೇವ ಕಲ್ಯಾಣಿ ಸರ್ವಮೇತದ್ಭವಿಷ್ಯತಿ|

05188014c ಭವಿಷ್ಯಸಿ ಪುಮಾನ್ಪಶ್ಚಾತ್ಕಸ್ಮಾಚ್ಚಿತ್ಕಾಲಪರ್ಯಯಾತ್||

ಕಲ್ಯಾಣೀ! ಏನು ಹೇಳಿದೆನೋ ಅವೆಲ್ಲವೂ ನಡೆಯುತ್ತವೆ. ಕಾಲಬಂದಾಗ ನಂತರ ಹೇಗೋ ನೀನು ಪುರುಷನಾಗುತ್ತೀಯೆ.”

05188015a ಏವಮುಕ್ತ್ವಾ ಮಹಾತೇಜಾಃ ಕಪರ್ದೀ ವೃಷಭಧ್ವಜಃ|

05188015c ಪಶ್ಯತಾಮೇವ ವಿಪ್ರಾಣಾಂ ತತ್ರೈವಾಂತರಧೀಯತ||

ಹೀಗೆ ಹೇಳಿ ಆ ವಿಪ್ರರು ನೋಡುತ್ತಿದ್ದಂತೆಯೇ ಮಹಾತೇಜಸ್ವಿ ಕಪರ್ದೀ ವೃಷಭಧ್ವಜನು ಅಲ್ಲಿಯೇ ಅಂತರ್ಧಾನನಾದನು.

05188016a ತತಃ ಸಾ ಪಶ್ಯತಾಂ ತೇಷಾಂ ಮಹರ್ಷೀಣಾಮನಿಂದಿತಾ|

05188016c ಸಮಾಹೃತ್ಯ ವನಾತ್ತಸ್ಮಾತ್ಕಾಷ್ಠಾನಿ ವರವರ್ಣಿನೀ||

ಆಗ ಆ ಅನಿಂದಿತೆ ವರವರ್ಣಿನಿಯು ಆ ಮಹರ್ಷಿಗಳು ನೋಡುತ್ತಿದ್ದಂತೆಯೇ ವನದಲ್ಲಿದ್ದ ಕಟ್ಟಿಗೆಗಳನ್ನು ಒಟ್ಟುಹಾಕಿದಳು.

05188017a ಚಿತಾಂ ಕೃತ್ವಾ ಸುಮಹತೀಂ ಪ್ರದಾಯ ಚ ಹುತಾಶನಂ|

05188017c ಪ್ರದೀಪ್ತೇಽಗ್ನೌ ಮಹಾರಾಜ ರೋಷದೀಪ್ತೇನ ಚೇತಸಾ||

05188018a ಉಕ್ತ್ವಾ ಭೀಷ್ಮವಧಾಯೇತಿ ಪ್ರವಿವೇಶ ಹುತಾಶನಂ|

05188018c ಜ್ಯೇಷ್ಠಾ ಕಾಶಿಸುತಾ ರಾಜನ್ಯಮುನಾಮಭಿತೋ ನದೀಂ||

ಮಹಾರಾಜ! ರಾಜನ್! ಹಿರಿಯ ಕಾಶಿಸುತೆಯು ಯಮುನಾನದಿಯ ತೀರದಲ್ಲಿ ಅತಿದೊಡ್ಡ ಚಿತೆಯನ್ನು ಮಾಡಿ, ಹುತಾಶನನನ್ನು ಹಚ್ಚಿ, ಉರಿಯುತ್ತಿರುವ ಅಗ್ನಿಯಲ್ಲಿ ರೋಷದಿಂದ ಉರಿಯುವ ಚೇತನದಿಂದ “ಭೀಷ್ಮವಧಾಯ” ಎಂದು ಹೇಳಿ ಹುತಾಶನನನ್ನು ಪ್ರವೇಶಿಸಿದಳು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಂಬಾಹುತಾಶನಪ್ರವೇಶೇ ಅಷ್ಟಾಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಂಬಾಹುತಾಶನಪ್ರವೇಶದಲ್ಲಿ ನೂರಾಎಂಭತ್ತೆಂಟನೆಯ ಅಧ್ಯಾಯವು.

Image result for flowers against white background"

Comments are closed.