Udyoga Parva: Chapter 18

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೮

ಇಂದ್ರನು ದೇವರಾಜತ್ವವನ್ನು ಪುನಃ ಪಡೆದುದನ್ನು ಹೇಳಿ ಶಲ್ಯನು ಇಂದ್ರೋಪಾಖ್ಯಾನವನ್ನು ಸಮಾಪ್ತಿಗೊಳಿಸಿದುದು (೧-೧೦). ಇಂದ್ರನಂತೆ ನೀನೂ ಕಷ್ಟಗಳನ್ನು ಕಳೆದು ರಾಜ್ಯವನ್ನು ಗಳಿಸುತ್ತೀಯೆ ಎಂದು ಯುಧಿಷ್ಠಿರನಿಗೆ ಹೇಳಿ ಶಲ್ಯನು ಬೀಳ್ಕೊಂಡಿದುದು (೧೧-೨೫).

05018001 ಶಲ್ಯ ಉವಾಚ|

05018001a ತತಃ ಶಕ್ರಃ ಸ್ತೂಯಮಾನೋ ಗಂಧರ್ವಾಪ್ಸರಸಾಂ ಗಣೈಃ|

05018001c ಐರಾವತಂ ಸಮಾರುಹ್ಯ ದ್ವಿಪೇಂದ್ರಂ ಲಕ್ಷಣೈರ್ಯುತಂ||

ಶಲ್ಯನು ಹೇಳಿದನು: “ಆಗ ಗಂಧರ್ವಾಪ್ಸರ ಗಣಗಳಿಂದ ಸ್ತುತಿಸಲ್ಪಟ್ಟ ಇಂದ್ರ ಶಕ್ರನು ಲಕ್ಷಣಗಳಿಂದ ಕೂಡಿದ ಐರಾವತವನ್ನು ಏರಿದನು.

05018002a ಪಾವಕಶ್ಚ ಮಹಾತೇಜಾ ಮಹರ್ಷಿಶ್ಚ ಬೃಹಸ್ಪತಿಃ|

05018002c ಯಮಶ್ಚ ವರುಣಶ್ಚೈವ ಕುಬೇರಶ್ಚ ಧನೇಶ್ವರಃ||

ಮಹಾತೇಜಸ್ವಿ ಅಗ್ನಿ, ಮಹರ್ಷಿ ಬೃಹಸ್ಪತಿ ಮತ್ತು ಯಮ, ವರುಣ ಮತ್ತು ಧನೇಶ್ವರ ಕುಬೇರರು ಒಡಗೂಡಿದರು.

05018003a ಸರ್ವೈರ್ದೇವೈಃ ಪರಿವೃತಃ ಶಕ್ರೋ ವೃತ್ರನಿಷೂದನಃ|

05018003c ಗಂಧರ್ವೈರಪ್ಸರೋಭಿಶ್ಚ ಯಾತಸ್ತ್ರಿಭುವನಂ ಪ್ರಭುಃ||

ವೃತ್ರ ನಿಷೂದನ ಪ್ರಭು ಶಕ್ರನು ಸರ್ವ ದೇವತೆಗಳಿಂದ ಗಂಧರ್ವ, ಅಪ್ಸರೆಯರಿಂದ ಪರಿವೃತನಾಗಿ ತ್ರಿಭುವನಕ್ಕೆ ಪ್ರಯಾಣಿಸಿದನು.

05018004a ಸ ಸಮೇತ್ಯ ಮಹೇಂದ್ರಾಣ್ಯಾ ದೇವರಾಜಃ ಶತಕ್ರತುಃ|

05018004c ಮುದಾ ಪರಮಯಾ ಯುಕ್ತಃ ಪಾಲಯಾಮಾಸ ದೇವರಾಟ್||

ಆ ಶತಕ್ರತು ದೇವರಾಜನು ಮಹೇಂದ್ರಾಣಿಯನ್ನು ಸೇರಿ ಪರಮ ಸಂತೋಷದಿಂದ ದೇವರಾಜ್ಯವನ್ನು ಪಾಲಿಸಿದನು.

05018005a ತತಃ ಸ ಭಗವಾಂಸ್ತತ್ರ ಅಂಗಿರಾಃ ಸಮದೃಶ್ಯತ|

05018005c ಅಥರ್ವವೇದಮಂತ್ರೈಶ್ಚ ದೇವೇಂದ್ರಂ ಸಮಪೂಜಯತ್||

ಆಗ ಅಲ್ಲಿಗೆ ಭಗವಾನ್ ಅಂಗಿರಸನು ಕಾಣಿಸಿಕೊಂಡನು. ಅವನು ದೇವೇಂದ್ರನನ್ನು ಅಥರ್ವ ವೇದ ಮಂತ್ರಗಳಿಂದ ಪೂಜಿಸಿದನು.

05018006a ತತಸ್ತು ಭಗವಾನಿಂದ್ರಃ ಪ್ರಹೃಷ್ಟಃ ಸಮಪದ್ಯತ|

05018006c ವರಂ ಚ ಪ್ರದದೌ ತಸ್ಮೈ ಅಥರ್ವಾಂಗಿರಸೇ ತದಾ||

ಆಗ ಭಗವಾನ್ ಇಂದ್ರನು ಸಂತೋಷಗೊಂಡು ಅಥರ್ವಾಂಗಿರಸನಿಗೆ ವರವನ್ನು ನೀಡಿದನು.

05018007a ಅಥರ್ವಾಂಗಿರಸಂ ನಾಮ ಅಸ್ಮಿನ್ವೇದೇ ಭವಿಷ್ಯತಿ|

05018007c ಉದಾಹರಣಮೇತದ್ಧಿ ಯಜ್ಞಾಭಾಗಂ ಚ ಲಪ್ಸ್ಯಸೇ||

“ಈ ವೇದವು ಅಥರ್ವಾಂಗಿರಸ ಎಂಬ ಹೆಸರನ್ನು ಹೊಂದುತ್ತದೆ. ಉದಾಹರಣೆಗೆ ಇದಕ್ಕೆ ಯಜ್ಞದ ಭಾಗವೂ ದೊರೆಯುತ್ತದೆ.”

05018008a ಏವಂ ಸಂಪೂಜ್ಯ ಭಗವಾನಥರ್ವಾಂಗಿರಸಂ ತದಾ|

05018008c ವ್ಯಸರ್ಜಯನ್ಮಹಾರಾಜ ದೇವರಾಜಃ ಶತಕ್ರತುಃ||

ಈ ರೀತಿ ಅಥರ್ವಾಂಗಿರಸನನ್ನು ಸಂಪೂಜಿಸಿ ಭಗವಾನ್ ಮಹಾರಾಜ ದೇವರಾಜ ಶತುಕ್ರತುವು ಕಳುಹಿಸಿಕೊಟ್ಟನು.

05018009a ಸಂಪೂಜ್ಯ ಸರ್ವಾಂಸ್ತ್ರಿದಶಾನೃಷೀಂಶ್ಚಾಪಿ ತಪೋಧನಾನ್|

05018009c ಇಂದ್ರಃ ಪ್ರಮುದಿತೋ ರಾಜನ್ಧರ್ಮೇಣಾಪಾಲಯತ್ಪ್ರಜಾಃ||

ರಾಜನ್! ಸರ್ವ ತ್ರಿದಶರನ್ನೂ ತಪೋಧನ ಋಷಿಗಳನ್ನು ಸಂಪೂಜಿಸಿ ಇಂದ್ರನು ಸಂತೋಷಗೊಂಡು ಪ್ರಜೆಗಳನ್ನು ಧರ್ಮದಿಂದ ಪಾಲಿಸಿದನು.

05018010a ಏವಂ ದುಃಖಮನುಪ್ರಾಪ್ತಮಿಂದ್ರೇಣ ಸಹ ಭಾರ್ಯಯಾ|

05018010c ಅಜ್ಞಾತವಾಸಶ್ಚ ಕೃತಃ ಶತ್ರೂಣಾಂ ವಧಕಾಂಕ್ಷಯಾ||

ಹೀಗೆ ಭಾರ್ಯೆಯೊಂದಿಗೆ ಇಂದ್ರನು ದುಃಖವನ್ನು ಹೊಂದಿ ಶತ್ರುಗಳ ವಧೆಯನ್ನು ಬಯಸಿ ಅಜ್ಞಾತವಾಸವನ್ನು ಮಾಡಿದನು.

05018011a ನಾತ್ರ ಮನ್ಯುಸ್ತ್ವಯಾ ಕಾರ್ಯೋ ಯತ್ಕ್ಲಿಷ್ಟೋಽಸಿ ಮಹಾವನೇ|

05018011c ದ್ರೌಪದ್ಯಾ ಸಹ ರಾಜೇಂದ್ರ ಭ್ರಾತೃಭಿಶ್ಚ ಮಹಾತ್ಮಭಿಃ||

ರಾಜೇಂದ್ರ! ದ್ರೌಪದಿಯೊಂದಿಗೆ ಮತ್ತು ಮಹಾತ್ಮ ಸಹೋದರರೊಂದಿಗೆ ಮಹಾವನದಲ್ಲಿ ಕ್ಲಿಷ್ಟಗಳನ್ನು ಅನುಭವಿಸಿದುದನ್ನು ನಿನ್ನ ಹೃದಯಕ್ಕೆ ತೆಗೆದುಕೊಳ್ಳಬೇಡ.

05018012a ಏವಂ ತ್ವಮಪಿ ರಾಜೇಂದ್ರ ರಾಜ್ಯಂ ಪ್ರಾಪ್ಸ್ಯಸಿ ಭಾರತ|

05018012c ವೃತ್ರಂ ಹತ್ವಾ ಯಥಾ ಪ್ರಾಪ್ತಃ ಶಕ್ರಃ ಕೌರವನಂದನ||

ರಾಜೇಂದ್ರ! ಭಾರತ! ಕೌರವನಂದನ! ಹೇಗೆ ಶಕ್ರನು ವೃತ್ರನನ್ನು ಕೊಂದು ಪಡೆದನೋ ಹಾಗೆ ನೀನೂ ಕೂಡ ರಾಜ್ಯವನ್ನು ಪಡೆಯುತ್ತೀಯೆ.

05018013a ದುರಾಚಾರಶ್ಚ ನಹುಷೋ ಬ್ರಹ್ಮದ್ವಿಟ್ಪಾಪಚೇತನಃ|

05018013c ಅಗಸ್ತ್ಯಶಾಪಾಭಿಹತೋ ವಿನಷ್ಟಃ ಶಾಶ್ವತೀಃ ಸಮಾಃ||

ದುರಾಚಾರಿ, ಪಾಪಚೇತನ, ಬ್ರಹ್ಮದ್ವೇಷೀ ನಹುಷನೂ ಕೂಡ ಅಗಸ್ತ್ಯನ ಶಾಪದಿಂದ ಹತನಾಗಿ ಶಾಶ್ವತ ಸಮಯದವರೆಗೆ ವಿನಿಷ್ಟನಾದನು[1].

05018014a ಏವಂ ತವ ದುರಾತ್ಮಾನಃ ಶತ್ರವಃ ಶತ್ರುಸೂದನ|

05018014c ಕ್ಷಿಪ್ರಂ ನಾಶಂ ಗಮಿಷ್ಯಂತಿ ಕರ್ಣದುರ್ಯೋಧನಾದಯಃ||

ಶತ್ರುಸೂದನ! ಹಾಗೆ ದುರಾತ್ಮರಾದ ಕರ್ಣ-ದುರ್ಯೋಧನರೇ ಮೊದಲಾದ ನಿನ್ನ ಶತ್ರುಗಳು ಕ್ಷಿಪ್ರವಾಗಿ ನಾಶವನ್ನು ಹೊಂದುತ್ತಾರೆ.

05018015a ತತಃ ಸಾಗರಪರ್ಯಂತಾಂ ಭೋಕ್ಷ್ಯಸೇ ಮೇದಿನೀಮಿಮಾಂ|

05018015c ಭ್ರಾತೃಭಿಃ ಸಹಿತೋ ವೀರ ದ್ರೌಪದ್ಯಾ ಚ ಸಹಾಭಿಭೋ||

ಆಗ ವಿಭೋ! ವೀರ! ಸಾಗರಪರ್ಯಂತವಾದ ಈ ಮೇದಿನಿಯನ್ನು ಭ್ರಾತೃಗಳ ಸಹಿತ ಮತ್ತು ದ್ರೌಪದಿಯ ಸಹಿತ ಭೋಗಿಸುತ್ತೀಯೆ.

05018016a ಉಪಾಖ್ಯಾನಮಿದಂ ಶಕ್ರವಿಜಯಂ ವೇದಸಮ್ಮಿತಂ|

05018016c ರಾಜ್ಞೋ ವ್ಯೂಢೇಷ್ವನೀಕೇಷು ಶ್ರೋತವ್ಯಂ ಜಯಮಿಚ್ಚತಾ||

ವೇದಸಮ್ಮಿತವಾದ ಶಕ್ರವಿಜಯದ ಈ ಆಖ್ಯಾನವನ್ನು ಜಯವನ್ನು ಬಯಸುವ ರಾಜನು ವ್ಯೂಢವನ್ನು ರಚಿಸುವಾಗ ಕೇಳಬೇಕು.

05018017a ತಸ್ಮಾತ್ಸಂಶ್ರಾವಯಾಮಿ ತ್ವಾಂ ವಿಜಯಂ ಜಯತಾಂ ವರ|

05018017c ಸಂಸ್ತೂಯಮಾನಾ ವರ್ಧಂತೇ ಮಹಾತ್ಮಾನೋ ಯುಧಿಷ್ಠಿರ||

ಯುಧಿಷ್ಠಿರ! ವಿಜಯಿಗಳಲ್ಲಿ ಶ್ರೇಷ್ಠ! ಆದುದರಿಂದ ನಿನ್ನ ವಿಜಯಕ್ಕಾಗಿ ಇದನ್ನು ಹೇಳುತ್ತಿದ್ದೇನೆ. ಮಹಾತ್ಮರು ಸ್ತುತಿಸಲ್ಪಟ್ಟಾಗ ವೃದ್ಧಿ ಹೊಂದುತ್ತಾರೆ.

05018018a ಕ್ಷತ್ರಿಯಾಣಾಮಭಾವೋಽಯಂ ಯುಧಿಷ್ಠಿರ ಮಹಾತ್ಮನಾಂ|

05018018c ದುರ್ಯೋಧನಾಪರಾಧೇನ ಭೀಮಾರ್ಜುನಬಲೇನ ಚ||

ಯುಧಿಷ್ಠಿರ! ದುರ್ಯೋಧನನ ಅಪರಾಧದಿಂದ ಮತ್ತು ಭೀಮಾರ್ಜುನರ ಬಲದಿಂದ ಮಹಾತ್ಮ ಕ್ಷತ್ರಿಯರ ನಾಶವಾಗಲಿದೆ.

05018019a ಆಖ್ಯಾನಮಿಂದ್ರವಿಜಯಂ ಯ ಇದಂ ನಿಯತಃ ಪಠೇತ್|

05018019c ಧೂತಪಾಪ್ಮಾ ಜಿತಸ್ವರ್ಗಃ ಸ ಪ್ರೇತ್ಯೇಹ ಚ ಮೋದತೇ||

ಇಂದ್ರವಿಜಯದ ಈ ಆಖ್ಯಾನವನ್ನು ಯಾರು ನಿಯತನಾಗಿ ಓದುತ್ತಾನೋ ಅವನು ಪಾಪವನ್ನು ಕಳೆದುಕೊಂಡು ಸ್ವರ್ಗವನ್ನು ಗೆದ್ದು ಇಲ್ಲಿ ಮತ್ತು ನಂತರದಲ್ಲಿ ಸಂತೋಷದಲ್ಲಿರುತ್ತಾನೆ.

05018020a ನ ಚಾರಿಜಂ ಭಯಂ ತಸ್ಯ ನ ಚಾಪುತ್ರೋ ಭವೇನ್ನರಃ|

05018020c ನಾಪದಂ ಪ್ರಾಪ್ನುಯಾತ್ಕಾಂ ಚಿದ್ದೀರ್ಘಮಾಯುಶ್ಚ ವಿಂದತಿ|

05018020e ಸರ್ವತ್ರ ಜಯಮಾಪ್ನೋತಿ ನ ಕದಾ ಚಿತ್ಪರಾಜಯಂ||

ಅವನಿಗೆ ಶತ್ರುಗಳ ಭಯವಿರುವುದಿಲ್ಲ. ಅಂಥವನು ಅಪುತ್ರನಾಗುವುದಿಲ್ಲ. ಆಪತ್ತನ್ನು ಪಡೆಯುವುದಿಲ್ಲ ಮತ್ತು ದೀರ್ಘಾಯುಷಿಯಾಗುತ್ತಾನೆ. ಎಲ್ಲೆಡೆಯೂ ಜಯವನ್ನು ಹೊಂದುತ್ತಾನೆ ಮತ್ತು ಎಂದೂ ಪರಾಜಯುವನ್ನು ಪಡೆಯುವುದಿಲ್ಲ.””

05018021 ವೈಶಂಪಾಯನ ಉವಾಚ|

05018021a ಏವಮಾಶ್ವಾಸಿತೋ ರಾಜಾ ಶಲ್ಯೇನ ಭರತರ್ಷಭ|

05018021c ಪೂಜಯಾಮಾಸ ವಿಧಿವಚ್ಚಲ್ಯಂ ಧರ್ಮಭೃತಾಂ ವರಃ||

ವೈಶಂಪಾಯನನು ಹೇಳಿದನು: “ಭರತರ್ಷಭ! ಶಲ್ಯನು ಹೀಗೆ ಆಶ್ವಾಸನೆಯನ್ನು ನೀಡಲು ಧರ್ಮಭೃತರಲ್ಲಿ ಶ್ರೇಷ್ಠ ರಾಜನು ಶಲ್ಯನನ್ನು ವಿಧಿವತ್ತಾಗಿ ಪೂಜಿಸಿದನು.

05018022a ಶ್ರುತ್ವಾ ಶಲ್ಯಸ್ಯ ವಚನಂ ಕುಂತೀಪುತ್ರೋ ಯುಧಿಷ್ಠಿರಃ|

05018022c ಪ್ರತ್ಯುವಾಚ ಮಹಾಬಾಹುರ್ಮದ್ರರಾಜಮಿದಂ ವಚಃ||

ಶಲ್ಯನ ಮಾತನ್ನು ಕೇಳಿದ ಮಹಾಬಾಹು ಕುಂತೀಪುತ್ರ ಯುಧಿಷ್ಠಿರನು ಮದ್ರರಾಜನಿಗೆ ಉತ್ತರಿಸಿದನು:

05018023a ಭವಾನ್ಕರ್ಣಸ್ಯ ಸಾರಥ್ಯಂ ಕರಿಷ್ಯತಿ ನ ಸಂಶಯಃ|

05018023c ತತ್ರ ತೇಜೋವಧಃ ಕಾರ್ಯಃ ಕರ್ಣಸ್ಯ ಮಮ ಸಂಸ್ತವೈಃ||

“ನೀನು ಕರ್ಣನ ಸಾರಥ್ಯವನ್ನು ಮಾಡುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಅಲ್ಲಿ ನನ್ನನ್ನು ಸ್ತುತಿಸಿ ಕರ್ಣನ ತೇಜೋವಧೆಯನ್ನು ಮಾಡಬೇಕು.”

05018024 ಶಲ್ಯ ಉವಾಚ|

05018024a ಏವಮೇತತ್ಕರಿಷ್ಯಾಮಿ ಯಥಾ ಮಾಂ ಸಂಪ್ರಭಾಷಸೇ|

05018024c ಯಚ್ಚಾನ್ಯದಪಿ ಶಕ್ಷ್ಯಾಮಿ ತತ್ಕರಿಷ್ಯಾಮ್ಯಹಂ ತವ||

ಶಲ್ಯನು ಹೇಳಿದನು: “ನಾನು ಮಾತುಕೊಟ್ಟಂತೆ ಮಾಡುತ್ತೇನೆ. ಇನ್ನೂ ಏನನ್ನು ಮಾಡಲಿಕ್ಕಾಗುತ್ತದೆಯೋ ಅದನ್ನೂ ನಿನಗಾಗಿ ಮಾಡುತ್ತೇನೆ.””

05018025 ವೈಶಂಪಾಯನ ಉವಾಚ|

05018025a ತತ ಆಮಂತ್ರ್ಯ ಕೌಂತೇಯಾಂ ಶಲ್ಯೋ ಮದ್ರಾಧಿಪಸ್ತದಾ|

05018025c ಜಗಾಮ ಸಬಲಃ ಶ್ರೀಮಾನ್ದುರ್ಯೋಧನಮರಿಂದಮಃ||

ವೈಶಂಪಾಯನನು ಹೇಳಿದನು: “ನಂತರ ಮದ್ರಾಧಿಪನು ಕೌಂತೇಯನನ್ನು ಬೀಳ್ಕೊಂಡು ಸೇನೆಯೊಂದಿಗೆ ಶ್ರೀಮಾನ್ ಅರಿಂದಮ ದುರ್ಯೋಧನನ ಬಳಿಗೆ ಹೋದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಶಲ್ಯಗಮನೇ ಅಷ್ಟಾದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಶಲ್ಯಗಮನದಲ್ಲಿ ಹದಿನೆಂಟನೆಯ ಅಧ್ಯಾಯವು|

Image result for flowers against white background

[1] ಅರಣ್ಯದಲ್ಲಿ ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪದಿಂದ ವಿಮೋಚನಗೊಳಿಸಿದ ವಿಷಯವನ್ನು ಶಲ್ಯನು ಇಲ್ಲಿ ಸೂಚಿಸುವುದಿಲ್ಲ!

Comments are closed.