Udyoga Parva: Chapter 179

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೯

ಪರಶುರಾಮ-ಭೀಷ್ಮರು ಕುರುಕ್ಷೇತ್ರದಲ್ಲಿ ಯುದ್ಧಕ್ಕೆ ಅಣಿಯಾದುದು

ನಡೆಯಲಿರುವ ಯುದ್ಧವನ್ನು ತಡೆಗಟ್ಟಲು ಗಂಗೆಯು ಪ್ರಯತ್ನಿಸಿ ಸೋತುದು (೧-೩೧).

05179001 ಭೀಷ್ಮ ಉವಾಚ|

05179001a ತತೋ ಮಾಮಬ್ರವೀದ್ರಾಮಃ ಪ್ರಹಸನ್ನಿವ ಭಾರತ|

05179001c ದಿಷ್ಟ್ಯಾ ಭೀಷ್ಮ ಮಯಾ ಸಾರ್ಧಂ ಯೋದ್ಧುಮಿಚ್ಚಸಿ ಸಂಗರೇ|

ಭೀಷ್ಮನು ಹೇಳಿದನು: “ಭಾರತ! ಆಗ ರಾಮನು ನಗುತ್ತಾ ನನಗೆ ಹೇಳಿದನು: “ಭೀಷ್ಮ! ಒಳ್ಳೆಯದಾಯಿತು! ನನ್ನೊಡನೆ ಸಂಗರದಲ್ಲಿ ಯುದ್ಧಮಾಡಲು ಇಚ್ಛಿಸುತ್ತಿದ್ದೀಯೆ.

05179002a ಅಯಂ ಗಚ್ಚಾಮಿ ಕೌರವ್ಯ ಕುರುಕ್ಷೇತ್ರಂ ತ್ವಯಾ ಸಹ|

05179002c ಭಾಷಿತಂ ತತ್ಕರಿಷ್ಯಾಮಿ ತತ್ರಾಗಚ್ಚೇಃ ಪರಂತಪ||

ಕೌರವ್ಯ! ನಾನು ನಿನ್ನೊಂದಿಗೆ ಕುರುಕ್ಷೇತ್ರಕ್ಕೆ ಹೋಗುತ್ತೇನೆ. ಹೇಳಿದಂತೆ ಮಾಡುತ್ತೇನೆ. ಪರಂತಪ! ನೀನೂ ಕೂಡ ಅಲ್ಲಿಗೆ ಹೋಗು!

05179003a ತತ್ರ ತ್ವಾಂ ನಿಹತಂ ಮಾತಾ ಮಯಾ ಶರಶತಾಚಿತಂ|

05179003c ಜಾಹ್ನವೀ ಪಶ್ಯತಾಂ ಭೀಷ್ಮ ಗೃಧ್ರಕಂಕಬಡಾಶನಂ||

ಭೀಷ್ಮ! ಅಲ್ಲಿ ನನ್ನ ನೂರಾರು ಶರಗಳ ಚಿತೆಯ ಮೇಲೆ ನೀನು ನನ್ನಿಂದ ಕೊಲ್ಲಲ್ಪಟ್ಟು ಹದ್ದು, ಬಕ ಮತ್ತು ಕಾಗೆಗಳಿಗೆ ಆಹಾರವಾಗುವುದನ್ನು ನಿನ್ನ ತಾಯಿ ಜಾಹ್ನವಿಯು ನೋಡಲಿ!

05179004a ಕೃಪಣಂ ತ್ವಾಮಭಿಪ್ರೇಕ್ಷ್ಯ ಸಿದ್ಧಚಾರಣಸೇವಿತಾ|

05179004c ಮಯಾ ವಿನಿಹತಂ ದೇವೀ ರೋದತಾಮದ್ಯ ಪಾರ್ಥಿವ||

ಪಾರ್ಥಿವ! ನನ್ನಿಂದ ಕೊಲ್ಲಲ್ಪಟ್ಟು ಕೃಪಣನಾಗಿರುವ ನಿನ್ನನ್ನು ನೋಡಿ ಸಿದ್ಧಚಾರಣಸೇವಿತೆ ದೇವಿಯು ಇಂದು ರೋದಿಸಲಿ!

05179005a ಅತದರ್ಹಾ ಮಹಾಭಾಗಾ ಭಗೀರಥಸುತಾ ನದೀ|

05179005c ಯಾ ತ್ವಾಮಜೀಜನನ್ಮಂದಂ ಯುದ್ಧಕಾಮುಕಮಾತುರಂ|

ಯುದ್ಧಕಾಮುಕನಾದ, ಆತುರನಾದ, ಬುದ್ಧಿಯಿಲ್ಲದ ನಿನ್ನಂತವನನ್ನು ಜೀವಂತ ನೋಡಲು ಮಹಾಭಾಗೆ ನದೀ ಭಗೀರಥಸುತೆಯು ಅರ್ಹಳಲ್ಲ.

05179006a ಏಹಿ ಗಚ್ಚ ಮಯಾ ಭೀಷ್ಮ ಯುದ್ಧಮದ್ಯೈವ ವರ್ತತಾಂ|

05179006c ಗೃಹಾಣ ಸರ್ವಂ ಕೌರವ್ಯ ರಥಾದಿ ಭರತರ್ಷಭ||

ಭೀಷ್ಮ! ಭರತರ್ಷಭ! ಬಾ! ನನ್ನೊಂದಿಗೆ ನಡೆ! ಇಂದೇ ಆ ಯುದ್ಧವು ನಡೆಯಲಿ! ಕೌರವ್ಯ! ರಥಾದಿ ಸರ್ವವನ್ನೂ ತೆಗೆದುಕೊಂಡು ಬಾ!”

05179007a ಇತಿ ಬ್ರುವಾಣಂ ತಮಹಂ ರಾಮಂ ಪರಪುರಂಜಯಂ|

05179007c ಪ್ರಣಮ್ಯ ಶಿರಸಾ ರಾಜನ್ನೇವಮಸ್ತ್ವಿತ್ಯಥಾಬ್ರುವಂ||

ರಾಜನ್! ಹೀಗೆ ಹೇಳಲು ನಾನು ಪರಪುರಂಜಯ ರಾಮನಿಗೆ ಶಿರಸಾ ನಮಸ್ಕರಿಸಿ ಹಾಗೆಯೇ ಆಗಲಿ ಎಂದೆನು.

05179008a ಏವಮುಕ್ತ್ವಾ ಯಯೌ ರಾಮಃ ಕುರುಕ್ಷೇತ್ರಂ ಯುಯುತ್ಸಯಾ|

05179008c ಪ್ರವಿಶ್ಯ ನಗರಂ ಚಾಹಂ ಸತ್ಯವತ್ಯೈ ನ್ಯವೇದಯಂ||

ಹೀಗೆ ಹೇಳಿ ರಾಮನು ಯುದ್ಧೋತ್ಸುಕನಾಗಿ ಕುರುಕ್ಷೇತ್ರಕ್ಕೆ ಹೋದನು. ನಾನು ನಗರವನ್ನು ಪ್ರವೇಶಿಸಿ ಸತ್ಯವತಿಗೆ ನಿವೇದಿಸಿದೆನು.

05179009a ತತಃ ಕೃತಸ್ವಸ್ತ್ಯಯನೋ ಮಾತ್ರಾ ಪ್ರತ್ಯಭಿನಂದಿತಃ|

05179009c ದ್ವಿಜಾತೀನ್ವಾಚ್ಯ ಪುಣ್ಯಾಹಂ ಸ್ವಸ್ತಿ ಚೈವ ಮಹಾದ್ಯುತೇ||

ಆಗ ಮಹಾದ್ಯುತೇ! ತಾಯಿಯನ್ನು ನಮಸ್ಕರಿಸಿದೆನು. ಸ್ವಸ್ತಿ ಅಯನಗಳನ್ನು ಪೂರೈಸಿದೆನು. ದ್ವಿಜಾತಿಯವರು ಪುಣ್ಯಾಹ ಸ್ವಸ್ತಿಗಳನ್ನು ವಾಚಿಸಿದರು.

05179010a ರಥಮಾಸ್ಥಾಯ ರುಚಿರಂ ರಾಜತಂ ಪಾಂಡುರೈರ್ಹಯೈಃ|

05179010c ಸೂಪಸ್ಕರಂ ಸ್ವಧಿಷ್ಠಾನಂ ವೈಯಾಘ್ರಪರಿವಾರಣಂ||

05179011a ಉಪಪನ್ನಂ ಮಹಾಶಸ್ತ್ರೈಃ ಸರ್ವೋಪಕರಣಾನ್ವಿತಂ|

ಬಿಳಿಯ ಕುದುರೆಗಳನ್ನು ಕಟ್ಟಿದ್ದ, ಎಲ್ಲ ಅನುಕೂಲಗಳನ್ನು ಹೊಂದಿದ್ದ, ದೃಢವಾಗಿ ಕಟ್ಟಲ್ಪಟ್ಟಿದ್ದ, ಹುಲಿಯ ಚರ್ಮವನ್ನು ಹೊದಿಸಿದ್ದ, ಮಹಾಶಸ್ತ್ರಗಳು ಮತ್ತು ಸರ್ವ ಉಪಕರಣಗಳಿಂದ ಕೂಡಿದ್ದ, ಸುಂದರ ಬೆಳ್ಳಿಯ ರಥವನ್ನೇರಿದೆನು.

05179011c ತತ್ಕುಲೀನೇನ ವೀರೇಣ ಹಯಶಾಸ್ತ್ರವಿದಾ ನೃಪ||

05179012a ಯುಕ್ತಂ ಸೂತೇನ ಶಿಷ್ಟೇನ ಬಹುಶೋ ದೃಷ್ಟಕರ್ಮಣಾ|

ನೃಪ! ಅದನ್ನು ವೀರ, ಕುಲೀನ, ಹಯಶಾಸ್ತ್ರವಿಶಾರದನಾದ, ಶಿಷ್ಟ, ಬಹಳಷ್ಟು ಯುದ್ಧಗಳನ್ನು ನೋಡಿದ್ದ ಸೂತನು ನಡೆಸುತ್ತಿದ್ದನು.

05179012c ದಂಶಿತಃ ಪಾಂಡುರೇಣಾಹಂ ಕವಚೇನ ವಪುಷ್ಮತಾ||

05179013a ಪಾಂಡುರಂ ಕಾರ್ಮುಕಂ ಗೃಹ್ಯ ಪ್ರಾಯಾಂ ಭರತಸತ್ತಮ|

05179013c ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ||

05179014a ಪಾಂಡುರೈಶ್ಚಾಮರೈಶ್ಚಾಪಿ ವೀಜ್ಯಮಾನೋ ನರಾಧಿಪ|

05179014c ಶುಕ್ಲವಾಸಾಃ ಸಿತೋಷ್ಣೀಷಃ ಸರ್ವಶುಕ್ಲವಿಭೂಷಣಃ||

ಬಿಳಿಯ ಬಂಗಾರದ ಕವಚವನ್ನು ಧರಿಸಿದ್ದೆನು. ಭರತಸತ್ತಮ! ಬಿಳಿಯ ಧನುಸ್ಸನ್ನೂ ಹಿಡಿದು ಹೊರಟೆನು. ಬಿಳಿಯ ಕೊಡೆಯನ್ನು ನನ್ನ ನೆತ್ತಿಯ ಮೇಲೆ ಹಿಡಿಯಲಾಗಿತ್ತು. ನರಾಧಿಪ! ಬಿಳಿಯ ಚಾಮರಗಳನ್ನೂ ಬೀಸುತ್ತಿದ್ದರು. ನನ್ನ ಬಟ್ಟೆ ಬಿಳಿಯಾಗಿತ್ತು, ಕಿರೀಟವು ಬಿಳಿಯಾಗಿತ್ತು ಮತ್ತು ಸರ್ವ ಆಭರಣಗಳು ಬಿಳಿಯವಾಗಿತ್ತು.

05179015a ಸ್ತೂಯಮಾನೋ ಜಯಾಶೀರ್ಭಿರ್ನಿಷ್ಕ್ರಮ್ಯ ಗಜಸಾಹ್ವಯಾತ್|

05179015c ಕುರುಕ್ಷೇತ್ರಂ ರಣಕ್ಷೇತ್ರಮುಪಾಯಾಂ ಭರತರ್ಷಭ||

ಭರತರ್ಷಭ! ಜಯದ ಕುರಿತು ಆಶೀರ್ವಚನಗಳನ್ನು ಸ್ತುತಿಸುತ್ತಿರಲು ಗಜಸಾಹ್ವಯದಿಂದ ಹೊರಟು ರಣಕ್ಷೇತ್ರ ಕುರುಕ್ಷೇತ್ರಕ್ಕೆ ಬಂದೆನು.

05179016a ತೇ ಹಯಾಶ್ಚೋದಿತಾಸ್ತೇನ ಸೂತೇನ ಪರಮಾಹವೇ|

05179016c ಅವಹನ್ಮಾಂ ಭೃಶಂ ರಾಜನ್ಮನೋಮಾರುತರಂಹಸಃ||

ರಾಜನ್! ಮನಸ್ಸು ಮಾರುತಗಳ ವೇಗವನ್ನು ಹೊಂದಿದ್ದ ಆ ಕುದುರೆಗಳು ಸೂತನಿಂದ ಚೋದಿತಗೊಂಡು ನನ್ನನ್ನು ಆ ಪರಮ ಯುದ್ಧಕ್ಕೆ ಕರೆತಂದವು.

05179017a ಗತ್ವಾಹಂ ತತ್ಕುರುಕ್ಷೇತ್ರಂ ಸ ಚ ರಾಮಃ ಪ್ರತಾಪವಾನ್|

05179017c ಯುದ್ಧಾಯ ಸಹಸಾ ರಾಜನ್ಪರಾಕ್ರಾಂತೌ ಪರಸ್ಪರಂ||

ಆಗ ನಾನು ಮತ್ತು ಪ್ರತಾಪವಾನ್ ರಾಮ ಇಬ್ಬರೂ ಪರಸ್ಪರರ ಪರಾಕ್ರಾಂತರಾಗಿ ಯುದ್ಧಕ್ಕೆ ಕಾತರರಾಗಿ ಕುರುಕ್ಷೇತ್ರಕ್ಕೆ ಬಂದೆವು.

05179018a ತತಃ ಸಂದರ್ಶನೇಽತಿಷ್ಠಂ ರಾಮಸ್ಯಾತಿತಪಸ್ವಿನಃ|

05179018c ಪ್ರಗೃಹ್ಯ ಶಂಖಪ್ರವರಂ ತತಃ ಪ್ರಾಧಮಮುತ್ತಮಂ||

ಆ ಅತಿತಪಸ್ವಿನಿ ರಾಮನನ್ನು ನೋಡಿದಾಗ ನಾನು ನನ್ನ ಶಂಖಪ್ರವರವನ್ನು ಹಿಡಿದು ಜೋರಾಗಿ ಊದಿದೆನು.

05179019a ತತಸ್ತತ್ರ ದ್ವಿಜಾ ರಾಜಂಸ್ತಾಪಸಾಶ್ಚ ವನೌಕಸಃ|

05179019c ಅಪಶ್ಯಂತ ರಣಂ ದಿವ್ಯಂ ದೇವಾಃ ಸರ್ಷಿಗಣಾಸ್ತದಾ||

ರಾಜನ್! ಆಗ ಅಲ್ಲಿ ರಣದಲ್ಲಿ ದ್ವಿಜರು, ತಾಪಸರು, ವನೌಕಸರು ಮತ್ತು ಆಕಾಶದಲ್ಲಿ ಋಷಿಗಣಗಳೊಂದಿಗೆ ದೇವತೆಗಳು ಕಂಡುಬಂದರು.

05179020a ತತೋ ದಿವ್ಯಾನಿ ಮಾಲ್ಯಾನಿ ಪ್ರಾದುರಾಸನ್ಮುಹುರ್ಮುಹುಃ|

05179020c ವಾದಿತ್ರಾಣಿ ಚ ದಿವ್ಯಾನಿ ಮೇಘವೃಂದಾನಿ ಚೈವ ಹ||

ಹಾಗೆಯೇ ದಿವ್ಯ ಮಾಲೆಗಳೂ, ದಿವ್ಯವಾದ್ಯಗಳು, ಮೇಘವೃಂದಗಳು ಮತ್ತೆ ಮತ್ತೆ ಕೇಳಿಬಂದವು.

05179021a ತತಸ್ತೇ ತಾಪಸಾಃ ಸರ್ವೇ ಭಾರ್ಗವಸ್ಯಾನುಯಾಯಿನಃ|

05179021c ಪ್ರೇಕ್ಷಕಾಃ ಸಮಪದ್ಯಂತ ಪರಿವಾರ್ಯ ರಣಾಜಿರಂ||

ಆಗ ಭಾರ್ಗವನನ್ನು ಹಿಂಬಾಲಿಸಿ ಬಂದಿದ್ದ ತಾಪಸರೆಲ್ಲರೂ ರಣವನ್ನು ಸುತ್ತುವರೆದು ಪ್ರೇಕ್ಷಕರಾದರು.

05179022a ತತೋ ಮಾಮಬ್ರವೀದ್ದೇವೀ ಸರ್ವಭೂತಹಿತೈಷಿಣೀ|

05179022c ಮಾತಾ ಸ್ವರೂಪಿಣೀ ರಾಜನ್ಕಿಮಿದಂ ತೇ ಚಿಕೀರ್ಷಿತಂ||

ಆಗ ಸರ್ವಭೂತಹಿತೈಷಿಣೀ ಮಾತಾ ದೇವಿಯು ಕಾಣಿಸಿಕೊಂಡು ನನಗೆ ಹೇಳಿದಳು: “ರಾಜನ್! ಇದೇನು ಮಾಡುತ್ತಿರುವೆ?

05179023a ಗತ್ವಾಹಂ ಜಾಮದಗ್ನ್ಯಂ ತಂ ಪ್ರಯಾಚಿಷ್ಯೇ ಕುರೂದ್ವಹ|

05179023c ಭೀಷ್ಮೇಣ ಸಹ ಮಾ ಯೋತ್ಸೀಃ ಶಿಷ್ಯೇಣೇತಿ ಪುನಃ ಪುನಃ||

ಕುರೂದ್ವಹ! ನಾನು ಜಾಮದಗ್ನಿಗೆ ಹೋಗಿ ಪುನಃ ಪುನಃ ಕೇಳಿಕೊಳ್ಳುತ್ತೇನೆ - ಭೀಷ್ಮನೊಂದಿಗೆ ಯುದ್ಧಮಾಡಬೇಡ! ಅವನು ನಿನ್ನ ಶಿಷ್ಯ” ಎಂದು.

05179024a ಮಾ ಮೈವಂ ಪುತ್ರ ನಿರ್ಬಂಧಂ ಕುರು ವಿಪ್ರೇಣ ಪಾರ್ಥಿವ|

05179024c ಜಾಮದಗ್ನ್ಯೇನ ಸಮರೇ ಯೋದ್ಧುಮಿತ್ಯವಭರ್ತ್ಸಯತ್||

“ಪುತ್ರ! ಪಾರ್ಥಿವ! ವಿಪ್ರನಿಗೆ ನಿರ್ಬಂಧಗಳನ್ನು ಮಾಡಬೇಡ. ಜಾಮದಗ್ನಿಯೊಡನೆ ಸಮರದಲ್ಲಿ ಯುದ್ಧಮಾಡಬೇಡ!” ಎಂದು ನನ್ನನ್ನು ಬೈದಳು.

05179025a ಕಿಂ ನ ವೈ ಕ್ಷತ್ರಿಯಹರೋ ಹರತುಲ್ಯಪರಾಕ್ರಮಃ|

05179025c ವಿದಿತಃ ಪುತ್ರ ರಾಮಸ್ತೇ ಯತಸ್ತ್ವಂ ಯೋದ್ಧುಮಿಚ್ಚಸಿ||

“ಈ ಕ್ಷತ್ರಿಯಹರನು ಹರತುಲ್ಯಪರಾಕ್ರಮಿಯೆಂದು ನಿನಗೆ ತಿಳಿದಿಲ್ಲವೇ? ಅಂತಹ ರಾಮನೊಂದಿಗೆ ನೀನು ಯುದ್ಧಮಾಡಲು ಇಚ್ಛಿಸುತ್ತಿರುವೆಯಲ್ಲ?”

05179026a ತತೋಽಹಮಬ್ರುವಂ ದೇವೀಮಭಿವಾದ್ಯ ಕೃತಾಂಜಲಿಃ|

05179026c ಸರ್ವಂ ತದ್ಭರತಶ್ರೇಷ್ಠ ಯಥಾವೃತ್ತಂ ಸ್ವಯಂವರೇ||

05179027a ಯಥಾ ಚ ರಾಮೋ ರಾಜೇಂದ್ರ ಮಯಾ ಪೂರ್ವಂ ಪ್ರಸಾದಿತಃ|

05179027c ಕಾಶಿರಾಜಸುತಾಯಾಶ್ಚ ಯಥಾ ಕಾಮಃ ಪುರಾತನಃ||

ರಾಜೇಂದ್ರ! ಆಗ ನಾನು ಕೈಮುಗಿದು ನಮಸ್ಕರಿಸಿ ದೇವಿಗೆ ಸ್ವಯಂವರದಲ್ಲಿ ನಡೆದುದೆಲ್ಲವನ್ನೂ ಮತ್ತು ಹೇಗೆ ನಾನು ಮೊದಲು ರಾಮನ ಕರುಣೆಯನ್ನು ಯಾಚಿಸಿದ್ದೆ ಎನ್ನುವುದನ್ನೂ, ಹಿಂದೆ ಕಾಶಿರಾಜಸುತೆಯು ಮಾಡಿದುದೆಲ್ಲವನ್ನೂ ಹೇಳಿದೆನು.

05179028a ತತಃ ಸಾ ರಾಮಮಭ್ಯೇತ್ಯ ಜನನೀ ಮೇ ಮಹಾನದೀ|

05179028c ಮದರ್ಥಂ ತಮೃಷಿಂ ದೇವೀ ಕ್ಷಮಯಾಮಾಸ ಭಾರ್ಗವಂ|

05179028e ಭೀಷ್ಮೇಣ ಸಹ ಮಾ ಯೋತ್ಸೀಃ ಶಿಷ್ಯೇಣೇತಿ ವಚೋಽಬ್ರವೀತ್||

ಆಗ ನನ್ನ ಜನನಿ ಮಹಾನದಿಯು ರಾಮನ ಬಳಿ ಹೋದಳು. ಆ ದೇವಿಯು ನನಗೋಸ್ಕರವಾಗಿ ಆ ಋಷಿ ಭಾರ್ಗವನಲ್ಲಿ ಕ್ಷಮೆಯನ್ನು ಕೇಳಿಕೊಂಡಳು. “ಶಿಷ್ಯನಾದ ಭೀಷ್ಮನೊಂದಿಗೆ ಯುದ್ಧಮಾಡಬೇಡ” ಎಂದೂ ಹೇಳಿದಳು.

05179029a ಸ ಚ ತಾಮಾಹ ಯಾಚಂತೀಂ ಭೀಷ್ಮಮೇವ ನಿವರ್ತಯ|

05179029c ನ ಹಿ ಮೇ ಕುರುತೇ ಕಾಮಮಿತ್ಯಹಂ ತಮುಪಾಗಮಂ||

ಆಗ ಅವನು ಯಾಚಿಸುತ್ತಿರುವ ಅವಳಿಗೆ ಹೇಳಿದನು: “ಭೀಷ್ಮನನ್ನೇ ಹಿಂದಿರುಗುವಂತೆ ಮಾಡು! ನನಗೆ ಬೇಕಾದುದನ್ನು ಅವನು ಮಾಡುತ್ತಿಲ್ಲ! ಆದುದರಿಂದಲೇ ಇಲ್ಲಿಗೆ ಬಂದಿದ್ದೇವೆ.””

05179030 ಸಂಜಯ ಉವಾಚ|

05179030a ತತೋ ಗಂಗಾ ಸುತಸ್ನೇಹಾದ್ಭೀಷ್ಮಂ ಪುನರುಪಾಗಮತ್|

05179030c ನ ಚಾಸ್ಯಾಃ ಸೋಽಕರೋದ್ವಾಕ್ಯಂ ಕ್ರೋಧಪರ್ಯಾಕುಲೇಕ್ಷಣಃ||

ಸಂಜಯನು ಹೇಳಿದನು: “ಆಗ ಗಂಗೆಯು ಮಗನ ಮೇಲಿನ ಪ್ರೀತಿಯಿಂದ ಪುನಃ ಭೀಷ್ಮನಲ್ಲಿಗೆ ಬಂದಳು. ಆಗ ಅವನು ಕ್ರೋಧದಿಂದ ಕಣ್ಣುಗಳನ್ನು ತಿರುಗಿಸಿ ಅವಳ ಮಾತಿನಂತೆ ಮಾಡಲಿಲ್ಲ.

05179031a ಅಥಾದೃಶ್ಯತ ಧರ್ಮಾತ್ಮಾ ಭೃಗುಶ್ರೇಷ್ಠೋ ಮಹಾತಪಾಃ|

05179031c ಆಹ್ವಯಾಮಾಸ ಚ ಪುನರ್ಯುದ್ಧಾಯ ದ್ವಿಜಸತ್ತಮಃ||

ಆಗ ಧರ್ಮಾತ್ಮ ಭೃಗುಶ್ರೇಷ್ಠ ಮಹಾತಪಸ್ವಿ ದ್ವಿಜಸತ್ತಮನು ಕಾಣಿಸಿಕೊಂಡು ಪುನಃ ಯುದ್ಧಕ್ಕೆ ಆಹ್ವಾನಿಸಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪರಶುರಾಮಭೀಷ್ಮಯೋಃ ಕುರುಕ್ಷೇತ್ರಾವತರಣೇ ಏಕೋನಾಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪರಶುರಾಮಭೀಷ್ಮರ ಕುರುಕ್ಷೇತ್ರಾವತರಣದಲ್ಲಿ ನೂರಾಎಪ್ಪತ್ತೊಂಭತ್ತನೆಯ ಅಧ್ಯಾಯವು.

Image result for indian motifs

Comments are closed.