Udyoga Parva: Chapter 177

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೭

ಪರಶುರಾಮನು ಅಂಬೆಯೊಂದಿಗೆ ಭೀಷ್ಮನಲ್ಲಿಗೆ ಹೊರಟಿದುದು

“ಒಂದುವೇಳೆ ರಣಶ್ಲಾಘೀ ಭೀಷ್ಮನು ನನ್ನ ಮಾತಿನಂತೆ ಮಾಡದಿದ್ದರೆ ಆ ಉದ್ರಿಕ್ತನನ್ನು ಕೊಲ್ಲುತ್ತೇನೆ.” ಎಂದು ಹೇಳಿ ಪರಶುರಾಮನು ಅಂಬೆಯನ್ನೊಡಗೂಡಿ ತನ್ನ ಶಿಷ್ಯರು ಮಿತ್ರರೊಂದಿಗೆ ಕುರುಕ್ಷೇತ್ರದಲ್ಲಿ ಬೀಡು ಬಿಟ್ಟಿದುದು (೧-೨೪).

05177001 ಭೀಷ್ಮ ಉವಾಚ|

05177001a ಏವಮುಕ್ತಸ್ತದಾ ರಾಮೋ ಜಹಿ ಭೀಷ್ಮಮಿತಿ ಪ್ರಭೋ|

05177001c ಉವಾಚ ರುದತೀಂ ಕನ್ಯಾಂ ಚೋದಯಂತೀಂ ಪುನಃ ಪುನಃ||

ಭೀಷ್ಮನು ಹೇಳಿದನು: “ಪ್ರಭೋ! ಹೀಗೆ ಭೀಷ್ಮನನ್ನು ಕೊಲ್ಲು! ಎಂದು ಅವಳು ಹೇಳಲು ರಾಮನು ರೋದಿಸುತ್ತಿರುವ ಆ ಕನ್ಯೆಯನ್ನು ಒತ್ತಾಯಿಸುತ್ತಾ ಪುನಃ ಪುನಃ ಹೇಳಿದನು:

05177002a ಕಾಶ್ಯೇ ಕಾಮಂ ನ ಗೃಹ್ಣಾಮಿ ಶಸ್ತ್ರಂ ವೈ ವರವರ್ಣಿನಿ|

05177002c ಋತೇ ಬ್ರಹ್ಮವಿದಾಂ ಹೇತೋಃ ಕಿಮನ್ಯತ್ಕರವಾಣಿ ತೇ||

“ಕಾಶ್ಯೇ! ವರವರ್ಣಿನೀ! ಬ್ರಹ್ಮವಿದರ ಕಾರಣಕ್ಕಲ್ಲದೇ ನಾನು ಇಷ್ಟಪಟ್ಟು ಶಸ್ತ್ರಗಳನ್ನು ಹಿಡಿಯುವುದಿಲ್ಲ. ನಾನು ನಿನಗಾಗಿ ಇನ್ನೇನು ಮಾಡಬೇಕು?

05177003a ವಾಚಾ ಭೀಷ್ಮಶ್ಚ ಶಾಲ್ವಶ್ಚ ಮಮ ರಾಜ್ಞೈ ವಶಾನುಗೌ|

05177003c ಭವಿಷ್ಯತೋಽನವದ್ಯಾಂಗಿ ತತ್ಕರಿಷ್ಯಾಮಿ ಮಾ ಶುಚಃ||

ಅನವದ್ಯಾಂಗೀ! ಭೀಷ್ಮ ಮತ್ತು ಶಾಲ್ವ ಇಬ್ಬರು ರಾಜರೂ ನನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಅದನ್ನು ನಾನು ಮಾಡುತ್ತೇನೆ. ಶೋಕಿಸಬೇಡ!

05177004a ನ ತು ಶಸ್ತ್ರಂ ಗ್ರಹೀಷ್ಯಾಮಿ ಕಥಂ ಚಿದಪಿ ಭಾಮಿನಿ|

05177004c ಋತೇ ನಿಯೋಗಾದ್ವಿಪ್ರಾಣಾಮೇಷ ಮೇ ಸಮಯಃ ಕೃತಃ||

ಭಾಮಿನಿ! ಆದರೆ ಬ್ರಾಹ್ಮಣರ ನಿಯೋಗವಿಲ್ಲದೇ ಶಸ್ತ್ರಗಳನ್ನು ಎಂದೂ ಹಿಡಿಯುವುದಿಲ್ಲ. ಅದು ನಾನು ಮಾಡಿದ ಪ್ರತಿಜ್ಞೆ.”

05177005 ಅಂಬೋವಾಚ|

05177005a ಮಮ ದುಃಖಂ ಭಗವತಾ ವ್ಯಪನೇಯಂ ಯತಸ್ತತಃ|

05177005c ತತ್ತು ಭೀಷ್ಮಪ್ರಸೂತಂ ಮೇ ತಂ ಜಹೀಶ್ವರ ಮಾಚಿರಂ||

ಅಂಬೆಯು ಹೇಳಿದಳು: “ಹೇಗಾದರೂ ಮಾಡಿ ಭೀಷ್ಮನಿಂದುಂಟಾದ ನನ್ನ ಈ ದುಃಖವನ್ನು ಹೋಗಲಾಡಿಸು. ಈಶ್ವರ! ಬೇಗನೇ ಅವನನ್ನು ಕೊಲ್ಲು!”

05177006 ರಾಮ ಉವಾಚ|

05177006a ಕಾಶಿಕನ್ಯೇ ಪುನರ್ಬ್ರೂಹಿ ಭೀಷ್ಮಸ್ತೇ ಚರಣಾವುಭೌ|

05177006c ಶಿರಸಾ ವಂದನಾರ್ಹೋಽಪಿ ಗ್ರಹೀಷ್ಯತಿ ಗಿರಾ ಮಮ||

ರಾಮನು ಹೇಳಿದನು: “ಕಾಶಿಕನ್ಯೇ! ಇನ್ನೊಮ್ಮೆ ಹೇಳು. ಬೇಕಾದರೆ ಭೀಷ್ಮನು ನಿನ್ನ ಚರಣಗಳಿಗೆ ಶಿರಸಾ ವಂದಿಸಿಯಾನು. ಅವನು ನನ್ನ ಮಾತನ್ನು ಸ್ವೀಕರಿಸುತ್ತಾನೆ.”

05177007 ಅಂಬೋವಾಚ|

05177007a ಜಹಿ ಭೀಷ್ಮಂ ರಣೇ ರಾಮ ಮಮ ಚೇದಿಚ್ಚಸಿ ಪ್ರಿಯಂ|

05177007c ಪ್ರತಿಶ್ರುತಂ ಚ ಯದಿ ತತ್ಸತ್ಯಂ ಕರ್ತುಮಿಹಾರ್ಹಸಿ||

ಅಂಬೆಯು ಹೇಳಿದಳು: “ರಾಮ! ನನಗೆ ಪ್ರಿಯವಾದುದನ್ನು ಮಾಡಲು ಬಯಸುವೆಯಾದರೆ ರಣದಲ್ಲಿ ಭೀಷ್ಮನನ್ನು ಸಂಹರಿಸು. ನೀನು ಭರವಸೆಯಿತ್ತುದನ್ನು ಸತ್ಯವಾಗಿಸಬೇಕು!””

05177008 ಭೀಷ್ಮ ಉವಾಚ|

05177008a ತಯೋಃ ಸಂವದತೋರೇವಂ ರಾಜನ್ರಾಮಾಂಬಯೋಸ್ತದಾ|

05177008c ಅಕೃತವ್ರಣೋ ಜಾಮದಗ್ನ್ಯಮಿದಂ ವಚನಮಬ್ರವೀತ್||

ಭೀಷ್ಮನು ಹೇಳಿದನು: “ರಾಜನ್! ರಾಮ ಮತ್ತು ಅಂಬೆಯರು ಈ ರೀತಿ ಮಾತನಾಡಿಕೊಳ್ಳುತ್ತಿರಲು ಅಕೃತವ್ರಣನು ಜಾಮದಗ್ನಿಗೆ ಈ ಮಾತನ್ನಾಡಿದನು:

05177009a ಶರಣಾಗತಾಂ ಮಹಾಬಾಹೋ ಕನ್ಯಾಂ ನ ತ್ಯಕ್ತುಮರ್ಹಸಿ|

05177009c ಜಹಿ ಭೀಷ್ಮಂ ರಣೇ ರಾಮ ಗರ್ಜಂತಮಸುರಂ ಯಥಾ||

“ಮಹಾಬಾಹೋ! ಶರಣಾಗತಳಾಗಿರುವ ಕನ್ಯೆಯನ್ನು ತ್ಯಜಿಸಬಾರದು. ರಾಮ! ಅಸುರನಂತೆ ಗರ್ಜಿಸುತ್ತಿರುವ ಭೀಷ್ಮನನ್ನು ರಣದಲ್ಲಿ ಕೊಲ್ಲು.

05177010a ಯದಿ ಭೀಷ್ಮಸ್ತ್ವಯಾಹೂತೋ ರಣೇ ರಾಮ ಮಹಾಮುನೇ|

05177010c ನಿರ್ಜಿತೋಽಸ್ಮೀತಿ ವಾ ಬ್ರೂಯಾತ್ಕುರ್ಯಾದ್ವಾ ವಚನಂ ತವ||

ರಾಮ! ಮಹಾಮುನೇ! ಒಂದುವೇಳೆ ನೀನು ಭೀಷ್ಮನನ್ನು ರಣಕ್ಕೆ ಕರೆದರೆ ಅವನು ಸೋತಿದ್ದೇನೆಂದು ಅಥವಾ ನಿನ್ನ ಮಾತಿನಂತೆ ಮಾಡುತ್ತೇನೆ ಎಂದು ಹೇಳುತ್ತಾನೆ.

05177011a ಕೃತಮಸ್ಯಾ ಭವೇತ್ಕಾರ್ಯಂ ಕನ್ಯಾಯಾ ಭೃಗುನಂದನ|

05177011c ವಾಕ್ಯಂ ಸತ್ಯಂ ಚ ತೇ ವೀರ ಭವಿಷ್ಯತಿ ಕೃತಂ ವಿಭೋ||

ಭೃಗುನಂದನ! ಆಗ ಈ ಕನ್ಯೆಯ ಕಾರ್ಯವನ್ನು ಮಾಡಿಕೊಟ್ಟಾದ ಹಾಗಾಗುತ್ತದೆ ಮತ್ತು ವೀರ! ವಿಭೋ! ನಿನ್ನ ಮಾತನ್ನೂ ಸತ್ಯವಾಗಿಸಿದಂತಾಗುತ್ತದೆ.

05177012a ಇಯಂ ಚಾಪಿ ಪ್ರತಿಜ್ಞಾ ತೇ ತದಾ ರಾಮ ಮಹಾಮುನೇ|

05177012c ಜಿತ್ವಾ ವೈ ಕ್ಷತ್ರಿಯಾನ್ಸರ್ವಾನ್ಬ್ರಾಹ್ಮಣೇಷು ಪ್ರತಿಶ್ರುತಂ||

ರಾಮ! ಮಹಾಮುನೇ! ಕ್ಷತ್ರಿಯರೆಲ್ಲರನ್ನೂ ಗೆದ್ದು ನೀನು ಬ್ರಾಹ್ಮಣರಿಗೆ ಕೇಳಿಸುವಂತೆ ಈ ಪ್ರತಿಜ್ಞೆಯನ್ನೂ ಮಾಡಿದ್ದೆ.

05177013a ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರಶ್ಚೈವ ರಣೇ ಯದಿ|

05177013c ಬ್ರಹ್ಮದ್ವಿಡ್ಭವಿತಾ ತಂ ವೈ ಹನಿಷ್ಯಾಮೀತಿ ಭಾರ್ಗವ||

ಭಾರ್ಗವ! ರಣದಲ್ಲಿ ಬ್ರಾಹ್ಮಣನಾಗಲೀ, ಕ್ಷತ್ರಿಯನಾಗಲೀ, ವೈಶ್ಯನಾಗಲೀ, ಶೂದ್ರನಾಗಲೀ ಬ್ರಹ್ಮದ ವಿರುದ್ಧರಾದವರನ್ನು ಕೊಲ್ಲುತ್ತೇನೆ ಎಂದು.

05177014a ಶರಣಂ ಹಿ ಪ್ರಪನ್ನಾನಾಂ ಭೀತಾನಾಂ ಜೀವಿತಾರ್ಥಿನಾಂ|

05177014c ನ ಶಕ್ಷ್ಯಾಮಿ ಪರಿತ್ಯಾಗಂ ಕರ್ತುಂ ಜೀವನ್ಕಥಂ ಚನ||

ಜೀವದ ಆಸೆಯಿಂದ ಭೀತರಾಗಿ ಶರಣು ಬಂದ ಪ್ರಪನ್ನರನ್ನು ನಾನು ಜೀವಂತವಿರುವಾಗ ಎಂದೂ ಪರಿತ್ಯಜಿಸಲಾರೆ.

05177015a ಯಶ್ಚ ಕ್ಷತ್ರಂ ರಣೇ ಕೃತ್ಸ್ನಂ ವಿಜೇಷ್ಯತಿ ಸಮಾಗತಂ|

05177015c ದೃಪ್ತಾತ್ಮಾನಮಹಂ ತಂ ಚ ಹನಿಷ್ಯಾಮೀತಿ ಭಾರ್ಗವ||

ಭಾರ್ಗವ! ಯಾರಾದರೂ ರಣದಲ್ಲಿ ಸೇರಿರುವ ಎಲ್ಲ ಕ್ಷತ್ರಿಯರನ್ನು ಜಯಿಸಿದರೂ ಆ ಸೊಕ್ಕಿನವನನ್ನು ನಾನು ಕೊಲ್ಲುತ್ತೇನೆ ಎಂದು.

05177016a ಸ ಏವಂ ವಿಜಯೀ ರಾಮ ಭೀಷ್ಮಃ ಕುರುಕುಲೋದ್ವಹಃ|

05177016c ತೇನ ಯುಧ್ಯಸ್ವ ಸಂಗ್ರಾಮೇ ಸಮೇತ್ಯ ಭೃಗುನಂದನ||

ರಾಮ! ಇದೇ ರೀತಿ ಕುರುಕುಲೋದ್ವಹ ಭೀಷ್ಮನು ವಿಜಯವನ್ನು ಸಾಧಿಸಿದ್ದಾನೆ. ಭೃಗುನಂದನ! ಸಂಗ್ರಾಮದಲ್ಲಿ ಅವನನ್ನು ಎದುರಿಸಿ ಯುದ್ಧ ಮಾಡು!”

05177017 ರಾಮ ಉವಾಚ|

05177017a ಸ್ಮರಾಮ್ಯಹಂ ಪೂರ್ವಕೃತಾಂ ಪ್ರತಿಜ್ಞಾಮೃಷಿಸತ್ತಮ|

05177017c ತಥೈವ ಚ ಕರಿಷ್ಯಾಮಿ ಯಥಾ ಸಾಮ್ನೈವ ಲಪ್ಸ್ಯತೇ||

ರಾಮನು ಹೇಳಿದನು: “ಋಷಿಸತ್ತಮ! ಹಿಂದೆ ಮಾಡಿದ ಪ್ರತಿಜ್ಞೆಯನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಸಾಮದಿಂದ ಏನು ದೊರೆಯುತ್ತದೆಯೋ ಅದನ್ನು ಮಾಡುತ್ತೇನೆ.

05177018a ಕಾರ್ಯಮೇತನ್ಮಹದ್ಬ್ರಹ್ಮನ್ಕಾಶಿಕನ್ಯಾಮನೋಗತಂ|

05177018c ಗಮಿಷ್ಯಾಮಿ ಸ್ವಯಂ ತತ್ರ ಕನ್ಯಾಮಾದಾಯ ಯತ್ರ ಸಃ||

ಬ್ರಹ್ಮನ್! ಕಾಶಿಕನ್ಯೆಯ ಮನಸ್ಸಿನಲ್ಲಿರುವುದು ಮಹಾ ಕಾರ್ಯವು. ಕನ್ಯೆಯನ್ನು ಕರೆದುಕೊಂಡು ಸ್ವಯಂ ನಾನೇ ಅವನಿರುವಲ್ಲಿಗೆ ಹೋಗುತ್ತೇನೆ.

05177019a ಯದಿ ಭೀಷ್ಮೋ ರಣಶ್ಲಾಘೀ ನ ಕರಿಷ್ಯತಿ ಮೇ ವಚಃ|

05177019c ಹನಿಷ್ಯಾಮ್ಯೇನಮುದ್ರಿಕ್ತಮಿತಿ ಮೇ ನಿಶ್ಚಿತಾ ಮತಿಃ||

ಒಂದುವೇಳೆ ರಣಶ್ಲಾಘೀ ಭೀಷ್ಮನು ನನ್ನ ಮಾತಿನಂತೆ ಮಾಡದಿದ್ದರೆ ಆ ಉದ್ರಿಕ್ತನನ್ನು ಕೊಲ್ಲುತ್ತೇನೆ. ಇದು ನನ್ನ ನಿಶ್ಚಯ.

05177020a ನ ಹಿ ಬಾಣಾ ಮಯೋತ್ಸೃಷ್ಟಾಃ ಸಜ್ಜಂತೀಹ ಶರೀರಿಣಾಂ|

05177020c ಕಾಯೇಷು ವಿದಿತಂ ತುಭ್ಯಂ ಪುರಾ ಕ್ಷತ್ರಿಯಸಂಗರೇ||

ಏಕೆಂದರೆ ನಾನು ಬಿಟ್ಟ ಬಾಣಗಳು ಶರೀರಿಗಳ ದೇಹವನ್ನು ಹೊಗುವುದಿಲ್ಲ. ಇದನ್ನು ನೀನು ಹಿಂದೆ ಕ್ಷತ್ರಿಯರೊಂದಿಗಿನ ಸಂಗರದಲ್ಲಿ ತಿಳಿದುಕೊಂಡಿದ್ದೀಯೆ.””

05177021 ಭೀಷ್ಮ ಉವಾಚ|

05177021a ಏವಮುಕ್ತ್ವಾ ತತೋ ರಾಮಃ ಸಹ ತೈರ್ಬ್ರಹ್ಮವಾದಿಭಿಃ|

05177021c ಪ್ರಯಾಣಾಯ ಮತಿಂ ಕೃತ್ವಾ ಸಮುತ್ತಸ್ಥೌ ಮಹಾಮನಾಃ||

ಭೀಷ್ಮನು ಹೇಳಿದನು: “ಹೀಗೆ ಹೇಳಿ ರಾಮನು ಮಹಾಮನಸ್ವಿ ಬ್ರಹ್ಮವಾದಿಗಳೊಂದಿಗೆ ಪ್ರಯಾಣದ ಮನಸ್ಸು ಮಾಡಿ ಮೇಲೆದ್ದನು.

05177022a ತತಸ್ತೇ ತಾಮುಷಿತ್ವಾ ತು ರಜನೀಂ ತತ್ರ ತಾಪಸಾಃ|

05177022c ಹುತಾಗ್ನಯೋ ಜಪ್ತಜಪ್ಯಾಃ ಪ್ರತಸ್ಥುರ್ಮಜ್ಜಿಘಾಂಸಯಾ||

ರಾತ್ರಿಯನ್ನು ಅಲ್ಲಿಯೇ ಕಳೆದು, ತಾಪಸರು ಅಗ್ನಿಗಳಲ್ಲಿ ಆಹುತಿಗಳನ್ನಿತ್ತು, ಜಪಗಳನ್ನು ಜಪಿಸಿ, ನನ್ನನ್ನು ಕೊಲ್ಲಲೋಸುಗ ಹೊರಟರು.

05177023a ಅಭ್ಯಗಚ್ಚತ್ತತೋ ರಾಮಃ ಸಹ ತೈರ್ಬ್ರಾಹ್ಮಣರ್ಷಭೈಃ|

05177023c ಕುರುಕ್ಷೇತ್ರಂ ಮಹಾರಾಜ ಕನ್ಯಯಾ ಸಹ ಭಾರತ||

ಮಹಾರಾಜ! ಭಾರತ! ಆಗ ರಾಮನು ಆ ಬ್ರಾಹ್ಮಣರ್ಷಭರೊಂದಿಗೆ ಮತ್ತು ಕನ್ಯೆಯೊಂದಿಗೆ ಕುರುಕ್ಷೇತ್ರಕ್ಕೆ ಆಗಮಿಸಿದನು.

05177024a ನ್ಯವಿಶಂತ ತತಃ ಸರ್ವೇ ಪರಿಗೃಹ್ಯ ಸರಸ್ವತೀಂ|

05177024c ತಾಪಸಾಸ್ತೇ ಮಹಾತ್ಮಾನೋ ಭೃಗುಶ್ರೇಷ್ಠಪುರಸ್ಕೃತಾಃ||

ಮಹಾತ್ಮ ಭೃಗುಶ್ರೇಷ್ಠನ ನಾಯಕತ್ವದಲ್ಲಿ ಎಲ್ಲ ತಾಪಸರೂ ಸರಸ್ವತೀ ತೀರದಲ್ಲಿ ಬೀಡುಬಿಟ್ಟರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪರಶುರಾಮಭೀಷ್ಮಯೋಃ ಕುರುಕ್ಷೇತ್ರಾವತರಣೇ ಸಪ್ತಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪರಶುರಾಮಭೀಷ್ಮರ ಕುರುಕ್ಷೇತ್ರಾವತರಣದಲ್ಲಿ ನೂರಾಎಪ್ಪತ್ತೇಳನೆಯ ಅಧ್ಯಾಯವು.

Image result for indian motifs

Comments are closed.